Wednesday, June 17, 2026

ವಿಷಮ ದಾಂಪತ್ಯ



ಇಡ್ಲಿ-ಚಟ್ನಿ ಅಥವಾ ಇಡ್ಲಿ-ಸಾಂಬಾರ್, ಇಲ್ಲವೇ ಇನ್ನೂ ಹೆಚ್ಚಿನ ರಸಕವಳ ಬೇಕೆಂದರೆ ತುಪ್ಪದ ಜೊತೆ ಇಡ್ಲಿ-ಸಾಂಬಾರ್-ಚಟ್ನಿ ತಿನ್ನುವವರ ಮನೆಯಲ್ಲಿ ಕುಕ್ಕರ್ ಒಳಗೆ ಇಡ್ಲಿಹಿಟ್ಟು ಹಾಕಿಟ್ಟು ಇಡ್ಲಿ ಮಾಡಲು ಇಡುವ ಇಡ್ಲಿ ಸ್ಟ್ಯಾoಡು ಇರುತ್ತವೆ. ಮನೆಯಲ್ಲಿ ವಾಸವಿರುವ ಜನರು ಮತ್ತು ಅವರ ಆಹಾರ ಸೇವನೆಯ ಸಾಮರ್ಥ್ಯ ಅವಲಂಬಿಸಿ ಅದಕ್ಕೆ ಸರಿಯಾದ ಕುಕ್ಕರ್ ಮತ್ತು ಇಡ್ಲಿ ಸ್ಟ್ಯಾಂಡುಗಳನ್ನು ಇಟ್ಟುಕೊಂಡಿರುತ್ತಾರೆ. ಎರಡು ಅಥವಾ ಮೂರು ಮಂದಿ ಇರುವ ಮನೆಯಲ್ಲಿ 3x3=9 ಇಡ್ಲಿ ಮಾಡುವ ಸ್ಟಾಂಡ್ ಇರಬಹುದು. ಮನೆಯಲ್ಲಿ ಹೆಚ್ಚು ಹಸಿವಿರುವ ನಾಲ್ಕು ಮಂದಿ ಇದ್ದರೆ 4x6=24 ಇಡ್ಲಿ ಮಾಡುವ ಸ್ಟಾಂಡ್ ಇರಬಹುದು. ಪಕ್ಕದ ರಸ್ತೆಯಲ್ಲಿರುವ ದರ್ಶಿನಿಯಲ್ಲಿ 6x6=36 ಇಡ್ಲಿ ಮಾಡುವ ಹತ್ತು ಚೌಕಾಕಾರದ ತಟ್ಟೆಗಳ ದೊಡ್ಡ ಇಡ್ಲಿ ಮೇಕರ್ ಇರುತ್ತದೆ. ಒಂದೇ ಸಲ 360 ಇಡ್ಲಿಗಳು! SLV ರೀತಿಯ ಇಡ್ಲಿ ಸ್ಥಳಗಳಲ್ಲಿ ಇವೂ ಸಾಲುವುದಿಲ್ಲ. ಇಂತಹ ಎರಡು-ಮೂರು ಇಟ್ಟುಕೊಂಡು ಸರತಿಯ ಮೇಲೆ ಬಳಸುತ್ತಾರೆ. 

ಚತುರ್ಮುಖ ಬ್ರಹ್ಮದೇವರು ಆದಿ ಸೃಷ್ಟಿಕರ್ತರು. ಅವರೂ ಇದೇ ತತ್ವವನ್ನು ಅನುಸರಿಸಿದ್ದಾರೆ. ವಾಸ್ತವವಾಗಿ ಅವರು ಮೊದಲು ಪ್ರಾರಂಭಿಸಿದ ಮಾದರಿಯನ್ನು ನಾವು ಮುಂದುವರೆಸಿದ್ದೇವೆ ಅನ್ನುವುದು ಹೆಚ್ಚು ಸರಿಯಾದೀತು. ಮಹಾಪ್ರಳಯದ ನಂತರ ಸೃಷ್ಟಿ ಪ್ರಾರಂಭದಲ್ಲಿ ಹೆಚ್ಚು ಜೀವಿಗಳು ಬೇಕಾಗಿದ್ದರಿಂದ ಈ ಕೆಲಸಕ್ಕಾಗಿ ಸಹಾಯಕವಾಗಲು ಅವರು ಮೊದಲಿಗೆ "ಪ್ರಜಾಪತಿ" ಅನ್ನುವವರನ್ನು ತಮ್ಮ ಮಾನಸಪುತ್ರರಾಗಿ ಹೊರತಂದರು. ಈ ಪ್ರಜಾಪತಿಗಳ ಮೂಲಕ ಮುಂದೆ ಸೃಷ್ಟಿ ದೊಡ್ಡದಾಗುತ್ತಾ ಹೋಯಿತು. ಈ ರೀತಿಯ ಪ್ರಜಾಪತಿಗಳ ಹೆಸರಿಗೆ ಉದಾಹರಣೆ ಕೊಡಬೇಕೆಂದರೆ ದಕ್ಷ ಪ್ರಜಾಪತಿ, ಕರ್ದಮ ಪ್ರಜಾಪತಿ, ಮುಂತಾದವರು. ಮರೀಚಿ, ಅಂಗೀರಸ ಮುಂತಾದವರೂ ಪ್ರಜಾಪತಿಗಳೇ. ಆದರೂ ಪ್ರಜಾಪತಿ ಅನ್ನುವ ಪದ ಕೇಳಿದ ತಕ್ಷಣ ನಮ್ಮ ನೆನಪಿಗೆ ಬರುವುದು ದಕ್ಷನ ಹೆಸರೇ ಅಲ್ಲವೇ? 

ಸಂತಾನವಾಗುವುದು ಹೇಗೆ? ಸಂತಾನ ಸೃಷ್ಟಿಯಲ್ಲಿ ಎಷ್ಟು ವಿಧ? ಈ ಪ್ರಶ್ನೆಗಳಿಗೆ ಹಿಂದೊಂದು ಸಂಚಿಕೆಯಲ್ಲಿ ಉತ್ತರ ಹುಡುಕಿದ್ದೇವೆ. ಆಸಕ್ತರು "ಸಂತಾನ ಸೃಷ್ಟಿಯ ವಿಧಗಳು" ಎಂಬ ಶೀರ್ಷಿಕೆಯಲ್ಲಿರುವ ಆ  ಲೇಖನವನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. ಸ್ತ್ರೀ-ಪುರುಷರ ಸಂಸರ್ಗದ ಮೂಲಕ ಮಕ್ಕಳನ್ನು ಪಡೆಯುವ ವ್ಯವಸ್ಥೆಯನ್ನು ಮೊದಲು ತಂದವನು ಈ ದಕ್ಷ ಪ್ರಜಾಪತಿ ಎಂದು ಹೇಳುತ್ತಾರೆ. 

*****

"ನಿನ್ನೆ ಕೃಷ್ಣ ಮೂರ್ತಿ ಬಂದಿದ್ದ" ಎಂದು ಯಾರಾದರೂ ಹೇಳಿದರೆ ತಕ್ಷಣ ಕೇಳುವ ಪ್ರಶ್ನೆ "ಯಾವ ಕೃಷ್ಣ ಮೂರ್ತಿ?" ಎಂದು. ಏಕೆ ಹೀಗೆ? ಅನೇಕ ಕೃಷ್ಣ ಮೂರ್ತಿಗಳು ನಮಗೆ ಗೊತ್ತು. ಅವರಲ್ಲಿ ಯಾರು ಎಂದು ತಿಳಿಯಬೇಕು. "ತರಲೆ ಕೃಷ್ಣಮೂರ್ತಿ ಬಂದಿದ್ದ" ಅಂತ ಹೇಳಿದರೆ ತಕ್ಷಣ ಗೊತ್ತಾಗುತ್ತದೆ. ಅಥವಾ ಒಬ್ಬರ ಕುಟುಂಬದಲ್ಲಿ "ಕಮಲು ಮಗ ಕೃಷ್ಣಮೂರ್ತಿ" ಅನ್ನಬಹುದು. ಇನ್ನೊಬ್ಬರ ಮನೆಯಲ್ಲಿ ರಮಾ ಗಂಡ ಕೃಷ್ಣಮೂರ್ತಿ ಇರಬಹುದು. ಹೀಗೆ. 

ಇದೇ ರೀತಿ ವೈದಿಕ ವಾಗ್ಮಯದಲ್ಲಿಯೂ ಒಂದೇ ಹೆಸರಿನ ಅನೇಕರು ಇದ್ದಾರೆ. "ರಾಮ" ಎಂದರೆ ಯಾರು? ಪರಶುರಾಮ ಇದ್ದಾನೆ. ಬಲರಾಮ ಇದ್ದಾನೆ. ಶ್ರೀರಾಮನೂ ಇದ್ದಾನೆ. ಅದೇ ರೀತಿ ಒಬ್ಬನಿಗೆ ಅನೇಕ ಹೆಸರುಗಳೂ ಉಂಟು. ತ್ರೇತಾಯುಗದ ರಾಮ ಹುಟ್ಟಿದ ಕೂಡಲೇ "ಶ್ರೀರಾಮ". ಕೌಸಲ್ಯೆಯ ಮಡಿಲಲ್ಲಿದ್ದಾಗ "ಕೌಸಲ್ಯಾರಾಮ". ದಶರಥನ ತೊಡೆಯ ಮೇಲೆ ಏರಿದಾಗ "ದಶರಥರಾಮ". ಅಯೋಧ್ಯೆಯಲ್ಲಿ ಓಡಾಡುತ್ತಿದ್ದಾಗ "ಅಯೋಧ್ಯಾರಾಮ". ಸೀತೆಯನ್ನು ಮದುವೆಯಾದಾಗ "ಸೀತಾರಾಮ". (ಅವಳಿಗೂ ಅನೇಕ ಹೆಸರು! ಅದಕ್ಕೇ "ಜಾನಕಿರಾಮ" ಸೇರಿಕೊಂಡಿತು). ಬಿಲ್ಲು ಹಿಡಿದಾಗ "ಕೋದಂಡರಾಮ". ಕಡೆಗೆ ಪಟ್ಟಾಭಿಷಿಕ್ತನಾದಾಗ "ಪಟ್ಟಾಭಿರಾಮ". ಮುಂದೆ ರಾಜ್ಯ ಆಳುವಾಗ "ರಾಜಾರಾಮ". ಈ ರೀತಿ. ಒಂದು ಹೆಸರಿನ ಅನೇಕರು ಮತ್ತು ಅನೇಕ ಹೆಸರಿನ ಒಬ್ಬರು. ಹೀಗೂ ಉಂಟು. ಹಾಗೂ ಉಂಟು. 

ದಕ್ಷನ ಸಂದರ್ಭದಲ್ಲಿಯೂ ಇದೇ ರೀತಿ. ಇಬ್ಬರು ದಕ್ಷರಿದ್ದಾರೆ. ಭಾಗವತ ಹೇಳುವಂತೆ ಸ್ವಾಯಂಭುವ ಮನ್ವಂತರದ ದಕ್ಷ ಒಬ್ಬ. ಚಾಕ್ಷುಷ ಮನ್ವಂತರದ ದಕ್ಷ ಇನ್ನೊಬ್ಬ. ಈ ಚಾಕ್ಷುಷ ಮನ್ವಂತರದ ದಕ್ಷ ಪ್ರಜಾಪತಿಗೆ ಅನೇಕ ಹೆಣ್ಣುಮಕ್ಕಳು. ಅವರಲ್ಲಿ ಒಟ್ಟಿಗೆ ಇಪ್ಪತ್ತೇಳು ಹೆಣ್ಣುಮಕ್ಕಳನ್ನು (ಬೇಕಿದ್ದರೆ ಒಂದು ಬ್ಯಾಚ್ ಅಂದುಕೊಳ್ಳಬಹುದು) ಚಂದ್ರನಿಗೆ ಮದುವೆ ಮಾಡಿಕೊಟ್ಟ. ಅಶ್ವಿನಿ, ಭರಣಿ, ಕೃತ್ತಿಕಾ, ಮುಂತಾಗಿ ಅವರ ಹೆಸರುಗಳು. ಕಡೆಯವಳು ರೇವತಿ. (ರೈವತರಾಜನ ಮಗಳು, ಬಲರಾಮನ ಹೆಂಡತಿ ರೇವತಿ ಬೇರೆ). ಇಪ್ಪತ್ತೇಳು ಅಕ್ಕ-ತಂಗಿಯರ ಮಧ್ಯದಲ್ಲಿ ರೋಹಿಣಿ ಎನ್ನುವ ಹೆಸರಿನ ಒಬ್ಬಳು. ಹೀಗೆ. 

*****

ನಾವು ಶಾಲಾ-ಕಾಲೇಜುಗಳಲ್ಲಿ ಓದುತ್ತಿದ್ದಾಗ ವರುಷಕ್ಕೊಮ್ಮೆ "ವಿಜ್ಞಾನದ ವಸ್ತುಪ್ರದರ್ಶನ" ನಡೆಸುತ್ತಿದ್ದರು. ಈಗ ಇನ್ನೂ ಚೆನ್ನಾಗಿ ನಡೆಸುತ್ತಿರಬಹುದು. ಅದರಲ್ಲಿ ಖಗೋಳದ ಒಂದು ಮಾದರಿ ಇಟ್ಟಿರುತ್ತಿದ್ದರು. ಗ್ರಹಗಳು ತಮ್ಮ ಅಕ್ಷದ ಮೇಲೆ ಸುತ್ತುತ್ತಾ ಸುತ್ತುತ್ತಾ ಹಾಗೆಯೇ ಸೂರ್ಯನ ಸುತ್ತ ಕೂಡ ಸುತ್ತುತ್ತಿದ್ದವು. ಭೂಮಿ ಹೀಗೆ ತನ್ನ ಅಕ್ಷದ ಸುತ್ತ ಸುತ್ತುವುದರಿಂದ ಹಗಲು-ರಾತ್ರಿಗಳೂ, ಸೂರ್ಯನ ಸುತ್ತ ಸುತ್ತುವುದರಿಂದ ಋತುಗಳೂ ಆಗುವುವು ಎಂದು ತಿಳಿಹೇಳುತ್ತಿದ್ದರು. ಹೀಗೆ ಸುತ್ತುವುದರಿಂದ ಅವು 360 ಡಿಗ್ರಿ ಕ್ರಮಿಸುತ್ತವೆ. ಸರಳ ರೇಖೆಯಲ್ಲಿ ಅಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ 360 ಡಿಗ್ರಿ ವರ್ತುಲವನ್ನು ಮೂವತ್ತು ಡಿಗ್ರಿಗಳ 12 ಭಾಗ ಮಾಡಿ ಅವುಗಳನ್ನು "ಹನ್ನೆರಡು ರಾಶಿಗಳು" ಅಂದರು. ಆಯಾ ಭಾಗಗಳಲ್ಲಿರುವ ನಕ್ಷತ್ರಪುಂಜಗಳ ಹೆಸರಿನಲ್ಲಿ ಮೇಷ, ವೃಷಭ, ಮಿಥುನ ಮುಂತಾಗಿ ಹೆಸರಿಟ್ಟರು. ಹನ್ನೆರಡನೇಯದು ಮೀನ ರಾಶಿಯಾಯಿತು. 

ಸರಳ ರೇಖೆಗೆ (Straight Line) ಮೊದಲು ಮತ್ತು ಕೊನೆ ಉಂಟು. ವರ್ತುಲಕ್ಕೆ (Circle) ಕೊನೆಮೊದಲಿಲ್ಲ. ರಾಶಿಚಕ್ರ ನಾವು ನಮ್ಮ ಅನುಕೂಲಕ್ಕೆ ಮಾಡಿಕೊಂಡಿರುವ ವ್ಯವಸ್ಥೆ. ಸೂರ್ಯನು ಏಪ್ರಿಲ್ ಮಧ್ಯದಲ್ಲಿ ಮೇಷ ರಾಶಿಗೆ ಬರುತ್ತಾನೆ. ಆಗ ಸೌರಮಾನ ಲೆಕ್ಕದ  ಹೊಸ ವರ್ಷ. ಜ್ಯೋತಿಷ್ಯದಲ್ಲಿ ಸೂರ್ಯನು ಯಾವ ರಾಶಿಯಲ್ಲಿ ಇದ್ದಾನೋ, ಆ ತಿಂಗಳಿಗೆ ಅದೇ ಹೆಸರು. ಸೂರ್ಯನ ಗತಿಗೆ (ಅಥವಾ ಸೂರ್ಯನ ಸುತ್ತ ಸುತ್ತುವ ಗ್ರಹಗಳ ಗತಿಗೆ) ಕೊನೆ ಮೊದಲಿಲ್ಲ. ಮೀನ ರಾಶಿ ಕಳೆಯಿತು ಎಂದು ಸುಮ್ಮನೆ ಕೂಡುವಂತಿಲ್ಲ. ತಕ್ಷಣ ಮೇಷಕ್ಕೆ. ಹೀಗೆ ಚಲನೆ. ಅದಕ್ಕೆ ರಾಶಿಗಳನ್ನು ಎಣಿಸಿದಾಗ ಮೀನ ಆದನಂತರ ಮೇಷ ಬಂದೇಬಿಟ್ಟಿತು. ಈ ಕಾರಣದಿಂದ "ಮೀನ-ಮೇಷ ಎಣಿಸುವುದು" ಎನ್ನುವ ಗಾದೆ ಬಂದಿತು. "ಎಣಿಸುವುದರಲ್ಲೇ ಕಾಲ ಕಳೆಯಬೇಡ. ಬೇಗ ಕೆಲಸ ಶುರು ಮಾಡು" ಎನ್ನುವ ಅರ್ಥದಲ್ಲಿ. 

ಭೂಮಿ ಸೂರ್ಯನ ಸುತ್ತ ಒಂದು ಸುತ್ತು ಬರುವುದಕ್ಕೆ (360 ಡಿಗ್ರಿ) ಹನ್ನೆರಡು ತಿಂಗಳು ಕಾಲ. ಅಂದರೆ 30 ಡಿಗ್ರಿಗೆ ಒಂದು ತಿಂಗಳು. ಆದರೆ ಚಂದ್ರ ಇಪ್ಪತ್ತೆಂಟು ದಿನಕ್ಕೆ ಒಂದು ಸುತ್ತು ಬರುತ್ತಾನೆ. ಆದ್ದರಿಂದ ಚಾಂದ್ರಮಾನ ತಿಂಗಳಿಗೆ ದಿನ ಕಡಿಮೆಯಾಯಿತು. ಈ ತಿಂಗಳುಗಳಿಗೆ ಚೈತ್ರ, ವೈಶಾಖ, ಮುಂತಾಗಿ ಹೆಸರು. ಈ ಎರಡು ರೀತಿಯ ವರ್ಷಗಳಿಗೆ ವ್ಯತ್ಯಾಸ ಸರಿ ಮಾಡಿ ಸಮಸ್ಥಿತಿಗೆ ತರಲು ಚಂದ್ರಮಾನದಲ್ಲಿ ಆಗಾಗ "ಅಧಿಕ ಮಾಸ" ಬರುತ್ತದೆ. 33 ತಿಂಗಳಿಗೆ ಒಂದು ಅಧಿಕ ಮಾಸ. ಈಗ ತಾನೇ "ಅಧಿಕ ಜ್ಯೇಷ್ಠ ಮಾಸ" ಮುಗಿಯಿತು. 

*****

ಚಂದ್ರನು ಇಪ್ಪತ್ತೇಳು ಅಕ್ಕ-ತಂಗಿಯರನ್ನು ಒಟ್ಟಿಗೆ ಮದುವೆಯೇನೋ ಆದನು. ಆದರೆ ಅವನಿಗೆ ಎಲ್ಲರಿಗಿಂತ ರೋಹಿಣಿ ಮೇಲೆ ಅಧಿಕ ಮನಸ್ಸು. ಅವಳ ಮನೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದನಂತೆ. ಇದರಿಂದ ಅಸೂಯೆಗೊಂಡ ಮಿಕ್ಕ ಇಪ್ಪತ್ತಾರು ಸೋದರಿಯರು ಅಪ್ಪನಾದ ದಕ್ಷನ ಬಳಿ ದೂರು ಹೇಳಿದರು. ದಕ್ಷ ಚಂದ್ರನಿಗೆ ಕ್ಷಯಿಸಿಹೋಗು ಎಂದು ಶಾಪ ಕೊಟ್ಟ. ಕೊನೆಗೆ ಕುಟುಂಬದ ಎಲ್ಲರೂ ಸೇರಿ ನ್ಯಾಯ ತೀರ್ಮಾನ ಆಯಿತು. ಚಂದ್ರನಿಗೆ ಭಾಗಶಃ ವಿಶಾಪ ಆಯಿತು. ನಮ್ಮ ಕೋರ್ಟುಗಳು "Partial Relief" ಕೊಡುವಂತೆ. ಹದಿನೈದು ದಿನ ಕುಗ್ಗುವುದು. ಮತ್ತೆ ಹದಿನೈದು ದಿನ ಹಿಗ್ಗುವುದು. ಹೀಗೆ ಕೃಷ್ಣಪಕ್ಷ-ಶುಕ್ಲಪಕ್ಷ ಆಯಿತು. ಮತ್ತೆ ಅಕ್ಕ-ತಂಗಿಯರ ಗತಿ? ಪ್ರತಿಯೊಬ್ಬರ ಮನೆಯಲ್ಲಿ ಒಂದೊಂದು ದಿನ ಇರುವುದು ಎಂದು ತೀರ್ಮಾನ ಆಯಿತು. ಒಂದು ಸುತ್ತು ಎಲ್ಲರ ಮನೆ ವಾಸ ಮುಗಿಸುವ ಹೊತ್ತಿಗೆ ತಿಂಗಳೂ ಕಳೆಯಿತು. ಮತ್ತೆ ಮುಂದಿನ ಪರ್ಯಾಯ. ಹೀಗೆ ನಡೆಯುತ್ತಿದೆ. ಚಂದ್ರನು ತನ್ನ ವರ್ತುಲದ ದಾರಿಯಲ್ಲಿ ಉದ್ದಕ್ಕೂ ಇಪ್ಪತ್ತೇಳು ಮನೆಗಳು ಕಟ್ಟಿಕೊಟ್ಟು ಈ ಹೆಂಡತಿಯರ ಜೊತೆ ಇರುತ್ತಾನಂತೆ. 

ಈ ಸೂರ್ಯನ ಹನ್ನೆರಡು ಮನೆಗಳಿಗೂ ಚಂದ್ರನ ಇಪ್ಪತ್ತೇಳು ಮನೆಗಳಿಗೂ ತಾಳೆ ಹಾಕುವುದು ಹೇಗೆ? ಚಂದ್ರನ ಇಪ್ಪತ್ತೇಳು ಮನೆಗಳನ್ನು ಹನ್ನೆರಡರಿಂದ ಭಾಗಿಸಿದರೆ (2.25) ಎರಡೂಕಾಲು ಭಾಗ ಬಂತು. ಹೀಗಾಗಿ ಅಶ್ವಿನಿ, ಭರಣಿಯರಿಗೆ ಮೇಷದಲ್ಲಿ ಮನೆ ಸಿಕ್ಕಿತು. ಕೃತ್ತಿಕೆಗೆ ಕಾಲುಭಾಗ ಮೇಷದಲ್ಲಿ ಮತ್ತು ಮೂರು ಭಾಗ ವೃಷಭದಲ್ಲಿ. ರೋಹಿಣಿಗೆ ಪೂರ್ತಿ ವೃಷಭದಲ್ಲಿ. ಮೃಗಶಿರಳಿಗೆ ಅರ್ಧ ವೃಷಭದಲ್ಲಿ ಮತ್ತು ಇನ್ನರ್ಧ ಮಿಥುನದಲ್ಲಿ.  ಹೀಗೆ ನಡೆಯುತ್ತಾ ಹೋಗುತ್ತದೆ. ಒಂದು ನಕ್ಷತ್ರಕ್ಕೆ ನಾಲ್ಕು ಭಾಗ. ಇಪ್ಪತ್ತೇಳು ನಕ್ಷತ್ರಕ್ಕೆ ಒಂದು ನೂರ ಎಂಟು ಭಾಗ. ಹೀಗೆ ಹಂಚಿದ್ದರಿಂದ ಪ್ರತಿಭಾಗವೂ ಒಂದು "ಪಾದ" (Quarter) ಎಂದಾಯಿತು. ಜ್ಯೋತಿಷ್ಯ ಬಲ್ಲವರಿಗೆ ಸೂತ್ರಗಳು (formula) ಗೊತ್ತು. "ಕೃತ್ತಿಕಾ: ಪ್ರಥಮಂ ಮೇಷ:" ಅನ್ನುತ್ತಾರೆ. ಅಂದರೆ ಕೃತ್ತಿಕಾ ನಕ್ಷತ್ರ ಮೊದಲನೇ ಪಾದದವರೆಗೆ ಮೇಷ ರಾಶಿ ಎಂದು. ಹೀಗೆಯೇ ಬೇರೆ ಮನೆಗಳಿಗೂ ಲೆಕ್ಕ. ಜ್ಯೋತಿಷ್ಯವೆಂದರೆ ಬಹುಪಾಲು ಗಣಿತವೇ. Mathematics is the language of Science" ಎಂದು ಹೇಳುತ್ತಾರೆ ತಿಳಿದವರು. ಜ್ಯೋತಿಷ್ಯವೂ ಹಾಗೆಯೇ.

ಹೀಗೆ ಲೆಕ್ಕ ಮಾಡಿದ ಮಾತ್ರಕ್ಕೇ ಅವರ ಮನೆಗಳು ಚೂರು ಚೂರಾಗಿವೆ ಎಂದು ಅರ್ಥವಲ್ಲ. ಅಮೇರಿಕ ಮತ್ತು ಕೆನಡಾ ದೇಶಗಳ ನಡುವೆ ಗಡಿಯಾಗಿ ಹರಿಯುವ ವಿಶಾಲವಾದ ಸೈನ್ಟ್ ಲಾರೆನ್ಸ್ ನದಿಯ ಮಧ್ಯ ಜಲರಾಶಿಯ ಪ್ರದೇಶಗಳಲ್ಲಿ ಬಹಳ ಸುಂದರ, ಅತಿ ಪ್ರೇಕ್ಷಣೀಯ "Thousand Islands" ಅನ್ನುವ ಹೆಸರಿನ ಪ್ರದೇಶವಿದೆ. ಒಟ್ಟು ಸುಮಾರು ಒಂದು ಸಾವಿರದ ಎಂಟು ನೂರು ದ್ವೀಪಗಳು. ಇವುಗಳಲ್ಲಿ ಕೆಲವು ಯು.ಎಸ.ಏ. ದೇಶಕ್ಕೂ, ಮತ್ತೆ ಕೆಲವು ಕೆನಡಾ ದೇಶಕ್ಕೂ ಸೇರುತ್ತವೆ. ಒಂದು ಮನೆಯ ಬಹುಭಾಗ ಕೆನಡಾದಲ್ಲಿ ಇದ್ದರೆ ಸ್ವಲ್ಪ ಭಾಗ ಇನ್ನೊಂದು ದೇಶದಲ್ಲಿ! ಅಡಿಗೆ, ಊಟ, ಟಿ.ವಿ. ನೋಡುವುದು ಕೆನಡಾದಲ್ಲಿ. ಮಲಗುವುದು ಯು.ಎಸ.ಎ. ದೇಶದಲ್ಲಿ. ಮನೆಯ ಮಧ್ಯೆ ಗಡಿ ರೇಖೆ ಹಾದು ಹೋಗುತ್ತದೆ. 

ಒಂದು ಮನೆಯಂತೂ ಎರಡು ಪುಟ್ಟ ದ್ವೀಪಗಳಲ್ಲಿ ಕಟ್ಟಿದ್ದಾರೆ. ಮನೆಯೆಲ್ಲ ಒಂದು ದೊಡ್ಡ ದ್ವೀಪದಲ್ಲಿ (ಎರಡರಲ್ಲಿ ದೊಡ್ಡದು ಅಷ್ಟೇ. ಅದೂ ಪುಟ್ಟ ದ್ವೀಪವೇ!) ಇದೆ. ದೋಣಿ ನಿಲ್ಲಿಸುವ ಗ್ಯಾರೇಜು ಮಾತ್ರ ಇನ್ನೊಂದು ದೇಶದಲ್ಲಿ. ಎರಡರ ಮಧ್ಯೆ ಒಂದು ಸಣ್ಣ ಮರದ ಸೇತುವೆ ಇದೆ. ಪ್ರಾರಂಭದಲ್ಲಿ ಮೇಲೆ ಕೊಟ್ಟಿರುವ ದೊಡ್ಡ ಚಿತ್ರದಲ್ಲಿ ಅದನ್ನು ನೋಡಬಹುದು. (ಚಿತ್ರವನ್ನು ಇನ್ನಷ್ಟು ದೊಡ್ಡದು ಮಾಡಿ ನೋಡಿದರೆ ಸೇತುವೆಯ ಒಂದು ಕಡೆ ಕೆನಡಾ ದೇಶದ ಬಾವುಟ ಮತ್ತು ಇನ್ನೊಂದು ಕಡೆ ಯುಎಸ್ಏ ಬಾವುಟ ನೋಡಬಹುದು). ಇದು ಪ್ರಪಂಚದಲ್ಲಿ ಎರಡು ದೇಶಗಳ ನಡುವೆ ಇರುವ ಅತಿ ಚಿಕ್ಕ ಸೇತುವೆ! "Just Room Enough" ಅನ್ನುವ ಒಂದು ದ್ವೀಪದ ಮನೆ ಪಕ್ಕದ ಚಿತ್ರದಲ್ಲಿ ಕೊಟ್ಟಿದೆ. ಅಲ್ಲಿ ಮನೆಯಿಂದ ಹೊರಗಡೆ ಕಾಲಿಟ್ಟರೆ ನೀರು. ಕಾರಿನಲ್ಲಿ ಓಡಾಟವಿಲ್ಲ. ಎಲ್ಲಾ ದೋಣಿಗಳ (ಬೋಟ್) ಮೇಲೆ ಅವಲಂಬನೆ.  ಈ ರೀತಿ! ಆದರೆ ಜನ ಸಂತೋಷವಾಗಿಯೇ ಇದ್ದಾರೆ. ಈ ಮನೆಗಳೆಲ್ಲಾ ಮಿಲಿಯನ್ ಡಾಲರ್ ಮನೆಗಳು. 

ಚಂದ್ರನ ಕೆಲವು ಹೆಂಡತಿಯರ ಮನೆಗಳೂ ಹೀಗೆಯೇ ಎಂದು ತಿಳಿಯಬೇಕು. 

ಪಂಚಾಂಗಗಳಲ್ಲಿ ಪ್ರತಿದಿನ ಗ್ರಹಗಳು ಯಾವ ಸ್ಥಳದಲ್ಲಿ ಇವೆ ಎಂದು ತೋರಿಸಿರುತ್ತಾರೆ. ಒಂದು ವ್ಯಕ್ತಿ ಹುಟ್ಟಿದ ದಿನ, ಸಮಯದಲ್ಲಿ ಚಂದ್ರ ಇರುವ ನಕ್ಷತ್ರ, ಅದರ ಪಾದ ನೋಡುತ್ತಾರೆ. ಅದೇ ಜನ್ಮ (ಹುಟ್ಟಿದ) ನಕ್ಷತ್ರ. ಉದಾಹರಣೆಗೆ ಅನುರಾಧ ಎರಡನೇ ಪಾದ ಅಂದಂತೆ. ಅದಕ್ಕೆ ಸರಿಯಾದ ರಾಶಿಯೇ  ಜನ್ಮ ರಾಶಿ. ಈ ರೀತಿ ಲೆಕ್ಕ ಹಾಕಿ ಕುಂಡಲಿ ಬರೆಯುತ್ತಾರೆ. ಚಂದ್ರನಿಗೆ ಅಷ್ಟು ಮಹತ್ವ.

ಈ ಲೆಕ್ಕ ಮೊದಲಿಗೆ ಸ್ವಲ್ಪ ಕಷ್ಟ. ಗೊತ್ತಾಗದಿದ್ದರೆ ನಷ್ಟವಿಲ್ಲ. ಪಂಚಾಂಗದಲ್ಲಿ ಸುಲಭವಾಗಿ ನೋಡಬಹುದು. ಇಲ್ಲದಿದ್ದರೆ ಜ್ಯೋತಿಷ್ಕರನ್ನು ಕೇಳಬಹುದು. ಜ್ಯೋತಿಷ್ಯ ನಂಬದಿದ್ದರೆ ಎರಡೂ ಬೇಕಿಲ್ಲದೆ ನಿರಾಳವಾಗಿ ಇರಬಹುದು. 
*****

ಕಳೆದ ತಿಂಗಳು "ಅನುಕೂಲ ದಾಂಪತ್ಯ" ಅನ್ನುವ ಒಂದು ಸಂಚಿಕೆಯಲ್ಲಿ ಗಂಡ-ಹೆಂಡಿರ ಸಹಜೀವನದ ಬಗ್ಗೆ ವಿಚಾರ ಮಾಡುತ್ತಾ "ಅನುರೂಪ ದಾಂಪತ್ಯ" ಮತ್ತು "ಅನುಕೂಲ ದಾಂಪತ್ಯ" ಅನ್ನುವ ಬಗ್ಗೆ ಸ್ವಲ್ಪ ಯೋಚಿಸಿದ್ದೆವು. "ಅನುಕೂಲ ದಾಂಪತ್ಯ" ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಇವೆರಡು ರೀತಿಯ (ಅನುರೂಪ ಮತ್ತು ಅನುಕೂಲ) ದಾಂಪತ್ಯಗಳ ಜೊತೆಯಲ್ಲಿ "ವಿಷಮ ದಾಂಪತ್ಯ" ಅಂತ ಕೂಡ ಒಂದು ಉಂಟು. ಇದು ಕಷ್ಟದ ದಾಂಪತ್ಯ. ಹೆಣಗಾಡಿಕೊಂಡು ಜೊತೆಯಲ್ಲಿ ಬದುಕುವುದು! "ನವಜೀವನ" ಕನ್ನಡ ಚಲನಚಿತ್ರದ "ಹೆಣಗಾಟದೀ ಜನ್ಮ ಏಕೆ ಕೊಟ್ಟನೋ ಆ ಬ್ರಹ್ಮ" ಅನ್ನುವ ಹಾಡಿನಂತೆ. (ಬಾಮಾ-ಭಾಮಾ, ನಾನರಿಯೆ ಮನದ ಮರ್ಮ...... ಅನ್ನುವ ಹಾಡು).

ಅರವತ್ತು-ಎಪ್ಪತ್ತು ವರುಷಗಳ ಹಿಂದೆ ವಿವಾಹ ಮಾಡುವ ಮುನ್ನ ವಧು ಮತ್ತು ವರರ ಜಾತಕ ಪರಿಶೀಲಿಸಿ ತಾಳೆ ಹಾಕುತ್ತಿದ್ದರು. ಕೆಲವು "ಕೂಟ" ನೋಡುತ್ತಿದ್ದರು. ರಾಶಿ ಕೂಟ, ಗ್ರಹಮೈತ್ರ ಕೂಟ, ರಜ್ಜು ಕೂಟ, ಯೋನಿ ಕೂಟ, ಹೀಗೆ ಹೆಸರುಗಳು. ಪರೀಕ್ಷೆಯಲ್ಲಿ ಅಂಕಗಳನ್ನು ಕೊಟ್ಟಂತೆ ಲೆಕ್ಕ ಮಾಡಿ ಸರಿಹೊಂದಿದರೆ ಮದುವೆಗೆ ಒಪ್ಪಿಗೆ ಕೊಡುತ್ತಿದ್ದರು. ಎಲ್ಲಾ ಕೂಟಗಳು "ಅತ್ಯುತ್ತಮ" ಆಗಿದ್ದರೆ ಗರಿಷ್ಟ (Maximum) 36 ಮಾರ್ಕ್ಸ್. ಕನಿಷ್ಠ (Minimum) 18 ಬರಬೇಕು. ಇಲ್ಲದಿದ್ದರೆ ಒಪ್ಪುತ್ತಿರಲಿಲ್ಲ. ಕೆಲವರು ಮೊದಲು ರಾಶಿಕೂಟ ಮತ್ತು ಗ್ರಹಮೈತ್ರ ಕೂಟಗಳನ್ನು ನೋಡುತ್ತಿದ್ದರು. ಇವು ಕೂಡಲಿಲ್ಲ ಅಂದರೆ ಹದಿನೆಂಟಕ್ಕಿಂತಲೂ ಹೆಚ್ಚು ನಂಬರು ಬಂದರೂ ಮದುವೆಯಿಲ್ಲ. ಪರೀಕ್ಷೆಯಲ್ಲಿ compulsory paper ಇದ್ದಂತೆ. ಬೇರೆಲ್ಲ ಪೇಪರ್ ಮೊದಲ ದರ್ಜೆಯಲ್ಲಿ ಪಾಸಾದರೂ ಇದು ಆಗಲಿಲ್ಲ ಅಂದರೆ ಫೇಲ್ ಅಂದಂತೆ. ಅನೇಕರಿಗೆ ಹುಡುಗ ಅಥವಾ ಹುಡುಗಿ ಒಪ್ಪಿಗೆಯಾಗದಿದ್ದರೆ "ಬೇಡ" ಅನ್ನುವುದಕ್ಕೆ "ಜಾತಕ ಹೊಂದಲಿಲ್ಲ" ಅನ್ನುವುದು ಸುಲಭ ಕಾರಣ ಆಗುತ್ತಿತ್ತು. 

ಕೆಲವರು "ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು" ಅನ್ನುವ ಗಾದೆಯನ್ನು ಮನೆದೇವರಂತೆ ಪ್ರೀತಿಸುತ್ತಿದ್ದರು. ಸುಳ್ಳು ಜಾತಕ ಬರೆಸುವುದೂ ನಡೆಯುತ್ತಿತ್ತು. ಈ ಕಾರಣಕ್ಕೆ ಕೆಲವರು ಉಪಾಯವಾಗಿ ಹುಟ್ಟಿದ ದಿನ ಅಕ್ಕ-ಪಕ್ಕದ ಮನೆಯವರಿಂದ ತಿಳಿದುಕೊಂಡು ತಾವೇ ಜಾತಕ ಬರೆಸಿ ತಾಳೆ ನೋಡುತ್ತಿದ್ದರು. ರಾಜಕುಮಾರ್-ಮಾಧವಿ-ಗೀತಾ ನಟಿಸಿರುವ ಕನ್ನಡ ಚಲನಚಿತ್ರ "ಶ್ರುತಿ ಸೇರಿದಾಗ" ಹೀಗೆ ಜಾತಕದ ಕಾರಣ ಮದುವೆಯೊಂದು ನಿಂತು ಹೋದ ಕಥೆಯದ್ದು. 

ಒಂದು ಹುಡುಗ ಇದ್ದಾನೆ. ಅವನ ಜಾತಕದಲ್ಲಿ ಚಂದ್ರ ಮೇಷ ರಾಶಿಯಲ್ಲಿದ್ದಾನೆ. ಮದುವೆಗೆ ಒಂದು ಹುಡುಗಿಯ ಜಾತಕ ಬಂದಿದೆ. ಅವಳ ಜಾತಕದಲ್ಲಿ ಚಂದ್ರ ಕನ್ಯಾ ರಾಶಿಯಲ್ಲಿದ್ದಾನೆ. ಲೆಕ್ಕ ಮಾಡಿದರೆ ವರನ ಕಡೆಯಿಂದ ವಧುವಿನದು ಆರನೆಯ ಮನೆ. ವಧುವಿನ ಕಡೆಯಿಂದ ವರನದು ಎಂಟನೆಯ ಮನೆ. ಇದು ಆರು-ಎಂಟರ ನಂಟು. ಸಂಸ್ಕೃತದಲ್ಲಿ ಇದನ್ನು "ಷಷ್ಟಾಷ್ಟಕ" ಅನ್ನುತ್ತಾರೆ. ಇಂತಹವರ ದಾಂಪತ್ಯ ಹೇಗೆ? 

ವಿಷಮ ದಾಂಪತ್ಯಕ್ಕೆ ಅನೇಕ ಕಾರಣಗಳು ಇರುತ್ತವೆ. ಈ ಆರು-ಎಂಟರ ನಂಟು ಒಂದು ಕಾರಣ ಅನ್ನುತ್ತಾರೆ ಜ್ಯೋತಿಷ್ಕರು. ಗಂಡ "ಆರು" ಎಂದರೆ ಹೆಂಡತಿ "ಇಲ್ಲ, ಎಂಟು" ಅನ್ನುವಂತೆ. "ಹೋಗಲಿ, ಏಳಕ್ಕೆ ಒಪ್ಪಿಕೊಳ್ಳೋಣ" ಅನ್ನಲು ಇಬ್ಬರೂ ತಯಾರಿಲ್ಲ. ಇಂತಹ ದಂಪತಿಗಳಲ್ಲಿ ತಾಳ-ಮೇಳ ಇರುವುದಿಲ್ಲ ಎಂದು ಕೆಲವರ ನಂಬಿಕೆ. "ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು" ಅನ್ನುವ ಗಾದೆ ಇಂತಹ ಜೋಡಿಗೇ ಹೇಳಿ ಮಾಡಿಸಿದ್ದು. ಜಾತಕ ನಂಬುವವರು ಈ ರೀತಿಯ ಮದುವೆಗಳನ್ನು ಒಪ್ಪುವುದಿಲ್ಲ. ಇದು ಅವರವರ ಜೀವನದ ದೃಷ್ಟಿಕೋನಕ್ಕೆ, ನಂಬಿಕೆಗಳಿಗೆ ಸಂಬಂಧಿಸಿದ್ದು. 

*****

ಮುಂದಿನ ಸಂಚಿಕೆಯಲ್ಲಿ ಇದರ ಬಗ್ಗೆ ಇನ್ನಷ್ಟು ವಿವರಣೆ ನೋಡೋಣ. ಹಾಗೆಯೇ "ಸಾವಿರ ದ್ವೀಪಗಳು" (Thousand Islands) ಬಗೆಗೂ ಬೇರೊಂದು ಸಂಚಿಕೆಯಲ್ಲಿ ತಿಳಿಯೋಣ.

1 comment: