Showing posts with label Seete. Show all posts
Showing posts with label Seete. Show all posts

Tuesday, November 3, 2026

ಏಕಪಾತ್ರಾಭಿನಯ


ಶಾಲಾ-ಕಾಲೇಜುಗಳಲ್ಲಿ, ವಿಶೇಷವಾಗಿ ಮಕ್ಕಳ ಶಿಕ್ಷಣ ಕಾಲದ ಪ್ರಾರಂಭದ ದಿನಗಳಲ್ಲಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಮಾಡುವ ದೃಷ್ಟಿಯಿಂದ ಅಧ್ಯಾಪಕರು ಅನೇಕ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸುವುದು ಬಹಳ ಹಿಂದಿನಿಂದಲೂ ನಡೆದು ಬಂದಿದೆ. ಎಲ್ಲ ಮಕ್ಕಳ ಪ್ರತಿಭೆಯೂ ಒಂದೇ ತೆರನಾಗಿರುವುದಿಲ್ಲ. ಅನೇಕ ಸ್ಪರ್ಧೆಗಳ ನಡಾವಳಿಯಿಂದ ಎಲ್ಲರಿಗೂ ತಮ್ಮಲ್ಲಿ ಹುದುಗಿರುವ ವಿಶೇಷ ಕೌಶಲ್ಯ ಮತ್ತು ಗುಣಗಳನ್ನು ಹೊರತೋರಲು ಅವಕಾಶ ಸಿಗುತ್ತದೆ. ಕ್ರೀಡೆಯಲ್ಲಿಯೂ ಹೀಗೆ. ಒಟ್ಟಿನಲ್ಲಿ ಕ್ರಿಯಾಶಕ್ತಿಯನ್ನು ಚುರುಕುಗೊಳಿಸುವುದು ಇವುಗಳ ಹಿಂದಿನ ಮೂಲ ಉದ್ದೇಶ್ಯ. 

ಇಂತಹ ಸ್ಪರ್ಧೆಗಲ್ಲಿ ಎರಡು ವಿಧ. ಎಲ್ಲರಿಗೂ ಒಂದೇ ಮೂಲವಿಷಯ ಕೊಟ್ಟು ಅದರ ಮೇಲೆ ವಾಚನ, ಗಾಯನ, ಚರ್ಚೆ ಮುಂತಾದುವುಗಳನ್ನು ನಡೆಸುವುದು ಮೊದಲ ರೀತಿ. ಒಂದು ದೊಡ್ಡ ಚೌಕಟ್ಟು ನೀಡಿ ಅದರೊಳಗೆ ವಿದ್ಯಾರ್ಥಿಗಳೇ ತಮ್ಮ ಆಯ್ಕೆಯಂತೆ ವಿಷಯ ಕಂಡುಕೊಂಡು ಸ್ಪರ್ಧಿಸುವುದು ಎರಡನೇ ರೀತಿ. "ಏಕಪಾತ್ರಾಭಿನಯ" ಈ ಎರಡನೆಯ ರೀತಿಗೆ ಸೇರಿದ ಸ್ಪರ್ಧೆ.

ತಾನು ಆರಿಸಿಕೊಂಡ ಒಂದು ದೊಡ್ಡ ಕಥಾವಸ್ತುವಿನ ಯಾವುದೋ ಒಂದು ಭಾಗವನ್ನು (ಬಹುತೇಕ ನಾಟಕಗಳಿಂದ ಆಯ್ದುಕೊಂಡ ದೃಶ್ಯ) ಒಂದು ಪಾತ್ರದ ಮೂಲಕ ಅಭಿನಯಿಸಿ ತೋರಿಸುವುದು ಈ ಏಕಪಾತ್ರಾಭಿನಯದ ವಿಶೇಷ. ತನಗೆ ಅನುಕೂಲ ಇರುವ ವೇಷ-ಭೂಷಣ, ಸಂಭಾಷಣೆ ಮುಂತಾದುವುಗಳ ಮೂಲಕ ಅಭಿವ್ಯಕ್ತಿಗೆ ಇಲ್ಲಿ ಸ್ವಾತಂತ್ರ್ಯ ಉಂಟು. ಆರಿಸಿಕೊಂಡ ಪಾತ್ರದಲ್ಲಿ ಲೀನವಾಗಿ, ಅಂತೆಯೇ ಅಭಿನಯ ಮತ್ತು ಮಾತುಗಾರಿಕೆಯ ಮೂಲಕ ತನ್ನ ಕಲ್ಪನೆಯ, ಅಥವಾ ಈ ಹಿಂದೆ ಯಾರೋ ನಟಿಸಿ ಎಲ್ಲರಿಗೂ ಪರಿಚಯ ಇರುವ ಒಂದು ಪಾತ್ರದ ಮೂಲಕ, ಪ್ರತಿಭಾ ಪ್ರದರ್ಶನಕ್ಕೆ ಇದೊಂದು ಒಳ್ಳೆಯ ಅವಕಾಶ. ಹೀಗೆ ಪ್ರಾರಂಭಿಸಿ, ತದನಂತರ ಅದನ್ನೇ ಮುಂದುವರೆಸಿ, ಕಲಾಸೇವೆ ಮಾಡಿ ಹೆಸರಾಂತ ನಟ-ನಟಿಯರಾದವರು ಅನೇಕರುಂಟು.  

ನಟಸಾರ್ವಭೌಮ ಡಾ. ರಾಜಕುಮಾರ್ ಅನೇಕ ಚಿತ್ರಗಳಲ್ಲಿ ನಟಿಸಿದ್ದರೂ, ಅವುಗಳಲ್ಲಿ ಅನೇಕ ಚಿತ್ರಗಳನ್ನು ತೆರೆಯಮೇಲೆ ನೋಡಿದ್ದರೂ, ಪ್ರೇಕ್ಷಕರು ರಂಗದ ಮೇಲೆ ಅವರ "ಎಚ್ಚೆಮ ನಾಯಕ" ನಾಟಕದ ಒಂದು ಭಾಗದ "ಏಕಪಾತ್ರಾಭಿನಯ" ನೋಡಲು ಕಾತರಿಸುತ್ತಿದ್ದರು. ರಾಜಕುಮಾರ್ ಅವರು ರಸಪೋಷಣೆಗಾಗಿ ಈ ಭಾಗವನ್ನು ರಂಗಮಂಚದ ಮೇಲೆ ಅಭಿನಯಿಸುವಾಗ "ತಿರುವೆಂಕಟ ನಾಯಕ" ಎಂಬ ಇನ್ನೊಂದು ಸಹಾಯಕ ಪಾತ್ರವನ್ನು ಜೊತೆಯಲ್ಲಿ ಇಟ್ಟುಕೊಳ್ಳುತ್ತಿದ್ದರು. ರಂಗದ ಮೇಲೆ ಇಬ್ಬರಿದ್ದರೂ ಎಲ್ಲ ಪ್ರೇಕ್ಷಕರ ಕಣ್ಣುಗಳು ರಾಜಕುಮಾರ್ ಅವರ ಮೇಲೆಯೇ ಇರುತ್ತಿದ್ದವು ಎನ್ನುವುದನ್ನು ಈ ಅಭಿನಯ ನೋಡಿದವರೆಲ್ಲ ಬಲ್ಲರು.

ಅದನ್ನು ರಂಗದ ಮೇಲೆ ನೋಡಲು ಅವಕಾಶ ಇರದಿದ್ದ ಕನ್ನಡಿಗರು ಈಗಲೂ ಯೂಟ್ಯೂಬಿನಲ್ಲಿ ಲಭ್ಯವಿರುವ 1970ನೆಯ ಇಸವಿ "ಭಲೇ ಜೋಡಿ" ಚಲನಚಿತ್ರದ ಪ್ರಾರಂಭದ ಹತ್ತು ನಿಮಿಷಗಳಲ್ಲಿರುವ ಈ ದೃಶ್ಯವನ್ನು ನೋಡಬಹುದು.

******

ಕನ್ನಡದ ಅನೇಕ ಹೆಸರಾಂತ ಸಾಹಿತಿಗಳಲ್ಲಿ ದಿವಂಗತ ಟಿ. ಕೆ. ರಾಮರಾವ್ ಸಹ ಒಬ್ಬರು. ಅವರ ಕತೆ-ಕಾದಂಬರಿಗಳು ಸಾಹಿತ್ಯಾಸಕ್ತರಿಗೆ ಚಿರಪರಿಚಿತ. ಅವರ ಪತ್ತೇದಾರಿ ಕತೆಗಳು ಒಂದು ಕಾಲದಲ್ಲಿ ಬಹಳ ಜನಪ್ರಿಯವಾಗಿದ್ದವು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಸನ್ಮಾನಗಳಿಗೆ ಪಾತ್ರರಾಗಿದ್ದ ಹೆಗ್ಗಳಿಕೆ ಅವರದು. ಕೇವಲ 59ನೆಯ ವಯಸ್ಸಿನಲ್ಲಿ, ಒಂದು ಸಮಾರಂಭದಲ್ಲಿ ಗೌರವ ಸ್ವೀಕಾರ ಮಾಡಿ ಮನೆಗೆ ಮರಳುತ್ತಿದ್ದಾಗ ಹೃದಯಾಘಾತದಿಂದ ನಿಧನರಾದರು. ಅವರಿಂದ ಮುಂದೆ ಬರಬಹುದಿದ್ದಾದ ಕುತೂಹಲ ಕೆರಳಿಸುವ ಕೃತಿಗಳಿಂದ ನಾವು ವಂಚಿತರಾದೆವು.

ಕನ್ನಡ ಸಿನಿಮಾ ಜಗತ್ತಿಗೂ ಶ್ರೀ ಟಿ.ಕೆ. ರಾಮರಾವ್ ಅವರಿಗೂ ಬಲು ಹತ್ತಿರದ ನಂಟು. ಅವರ ಒಂಭತ್ತು ಕಾದಂಬರಿಗಳು ಚಲನಚಿತ್ರಗಳಾದ ವಿಶೇಷತೆ ಅವರಿಗುಂಟು. ಅವರ "ಹಾವಿಲ್ಲದ ಹುತ್ತ" ಕಾದಂಬರಿಯಿಂದ ಪ್ರೇರಿತವಾಗಿ ಎರಡು ಚಿತ್ರಗಳು ತಯಾರಾದವು.  ಹೀಗೆ ಬಂದ ಚಲನಚಿತ್ರಗಳಲ್ಲಿ "ಬಂಗಾರದ ಮನುಷ್ಯ" ಒಂದು ಮರೆಯಲಾಗದ ಕಲಾಕೃತಿ. ಸತತ ಒಂದು ವರ್ಷ ಕಾಲ ಪ್ರದರ್ಶನ ಕಂಡ ಮೊದಲ ಕನ್ನಡ ಚಲನಚಿತ್ರ ಅದು. ಈ ಚಿತ್ರದಲ್ಲಿ ನಾಯಕ ರಾಜೀವ ಎನ್ನುವ ಪಾತ್ರದಲ್ಲಿ ಡಾ. ರಾಜಕುಮಾರ್ ಅಭಿನಯ ಅವರಿಗೆ ಬಹಳ ಕೀರ್ತಿ ತಂದುಕೊಟ್ಟದ್ದಲ್ಲದೇ ಅವರಿಗೆ "ಬಂಗಾರದ ಮನುಷ್ಯ" ಎನ್ನುವ ಅನ್ವರ್ಥನಾಮವನ್ನೂ ನೀಡಿತು.

ಈ "ಬಂಗಾರದ ಮನುಷ್ಯ" ಚಲನ ಚಿತ್ರದ ಪ್ರಾರಂಭದಲ್ಲಿ ಒಂದು ಹಾಡುಂಟು. ಈಗಲೂ ಜನಪ್ರಿಯವಾಗಿರುವ ಹಾಡು ಅದು. "ನಗುನಗುತಾ ನಲಿ ನಲಿ, ಏನೇ ಆಗಲಿ" ಎಂದು ಪರಿಚಿತವಾದ ಈ ಹಾಡು ಒಬ್ಬ ಮನುಷ್ಯನ ಇಡೀ ಜೀವಮಾನದಲ್ಲಿ ನಡೆಯುವ ಘಟನೆಗಳ ಸಾರಾಂಶ ಅದು. ಜೀವನವು "ಹುಟ್ಟಿನಿಂದ ಸಾವಿನವರೆಗೆ ಒಂದು ಪಯಣ" ಅನ್ನುವ ತತ್ವದ ಆಧಾರಲ್ಲಿ ಬರೆದಿರುವ ಗೀತೆ. ಖ್ಯಾತ ಚಿತ್ರ ಸಾಹಿತಿ ಶ್ರೀ ಹುಣಸೂರು ಕೃಷ್ಣಮೂರ್ತಿ ಅವರ ರಚನೆ. ಅದರಲ್ಲಿ ಒಂದು ಸಾಲು ಹೀಗುಂಟು:

"ಸಾಗಿ ಮಾಗಿ ಹಿರಿತನ, ತಂದಿತಯ್ಯ ಮುದಿತನ, ಅದರಲ್ಲಿ ಹೊಸದಾದ ಹುದುಗಿದೆ ಸವಿಮೋದ" 

"ಕಾಲವನ್ನು ಹಿಡಿದೋರು ಯಾರೂ ಇಲ್ಲ...." ಎಂದೂ ಒಂದು ಹಾಡಿದೆ. ನಮಗೆ ಬೇಕೋ ಬೇಡವೋ, ವಯಸ್ಸಾಗುವುದು ತಪ್ಪದು. ಆದರೆ ಅದರಲ್ಲಿಯೂ ಸಂತೋಷ ಕಾಣಬೇಕು. ಜೀವನದಲ್ಲಿ ಮೊಮ್ಮಕ್ಕಳು ಬರುವುದು ಇದಕ್ಕೇ ಇರಬೇಕು! ಅವರೊಡನೆ ಕಳೆಯುವ ಸಮಯ ಅದೊಂದು ಆನಂದವೇ!
******

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಹೊಸ ಸರ್ಕಾರದ ಮುಂದಿದ್ದ ಮೊದಲ ಸಮಸ್ಯೆ ಎಂದರೆ ಆಹಾರ ಸಮಸ್ಯೆ. ಈ ಸಮಸ್ಯೆಯ ಮೂಲ ಇದ್ದದ್ದು ಜನಸಂಖ್ಯಾ ಸ್ಫೋಟ ಎನ್ನುವ ಕಾರಣ. ಸರ್ಕಾರ ಈ ಎರಡು ಸಮಸ್ಯೆಗಳಿಗೆ ಎರಡು ಪರಿಹಾರ ಸೂಚಿಸಿತು. ಆಹಾರ ಉತ್ಪಾದನೆ ಹೆಚ್ಚಳ ಮಾಡಲು ರಾಸಾಯನಿಕ ಗೊಬ್ಬರಗಳ ಬಳಕೆ. ಜನಸಂಖ್ಯೆ ನಿಯಂತ್ರಿಸಲು ಮಿತ ಸಂತಾನ. ಎರಡೂ ಯಶಸ್ವಿಯಾದವು. ಆದರೆ ಐವತ್ತು ವರುಷಗಳ ನಂತರ ಹೊಸದೆರಡು ಸಮಸ್ಯೆ ತಂದೊಡ್ಡಿವೆ.

ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಭೂಮಿಯ ಸಾರ ಬರಿದಾಗಿ ಒಂದು ಸಮಸ್ಯೆ. ಮಿತಸಂತಾನದಿಂದ ಸಮಾಜದಲ್ಲಿ ವಯಸ್ಸಾದವರು ಹೆಚ್ಚಾಗಿ ದುಡಿಯುವ ಕೈಗಳು ಕಡಿಮೆಯಾಗುತ್ತಿರುವುದು ಇನ್ನೊಂದು ಸಮಸ್ಯೆ. ಮೊದಲ ಸಮಸ್ಯೆಗೆ ಪರಿಹಾರ "ಆರ್ಗ್ಯಾನಿಕ್" ಬೆಳೆ ಬೆಳೆಯುವುದು. ಈ ಕಾರಣದಿಂದ ಇಡೀ ಬಾಲ್ಯದಲ್ಲಿ ಸಾವಯವ ಗೊಬ್ಬರದ ಬೆಳೆಯಿಂದ ಬದುಕಿದ ನಮ್ಮಂತಹವರು ಈಗ ಅದನ್ನೇ ದುಬಾರಿ ಬೆಲೆ ತೆತ್ತು ಕೊಳ್ಳುವಂತೆ ಆಗಿದೆ. ಪದಾರ್ಥದ ಮೇಲೆ "ಆರ್ಗ್ಯಾನಿಕ್" ಎಂದು ಬರೆದಿದ್ದರೆ ಸಾಕು. ಹಿಂದೆ-ಮುಂದೆ ನೋಡದೆ ಕೇಳಿದ ಬೆಲೆ ಕೊಡಲು ನಾವು ತಯಾರು,

ಮಿತಸಂತಾನ ಇನ್ನೊಂದು ಕಥೆ. ಮಕ್ಕಳು "ಎರಡು ಬೇಕು; ಮೂರು ಸಾಕು" ಎಂದು ಪ್ರಾರಂಭವಾಗಿ, "ಆರುತಿ-ಕೀರುತಿ" ರೀತಿಯ ಎರಡು ದಾಟಿ, ಒಂದಕ್ಕೆ ಬಂದು, ಕಡೆಗೆ "ಇದ್ದರೆ ಉಂಟು; ಇಲ್ಲದಿದ್ದರೆ ಇಲ್ಲ" ಎನ್ನುವಲ್ಲಿ ನಿಂತಿದೆ. ಈ ಕಾರಣದಿಂದ ಮನೆಯಲ್ಲಿ ಜೂಟಾಟ ಆಡುವ ಮೊಮ್ಮಕ್ಕಳು ಕಂಭಕ್ಕೊಂದರ ಬದಲು ಎಲ್ಲ ಕಡೆ ಇಡೀ ಬೀದಿಗೆರಡು ಆಗಿವೆ. ಮೇಲೆ ಹೇಳಿದಂತೆ ಮೊಮ್ಮಕ್ಕಳ ಜೊತೆ ಸಮಯ ಕಳೆಯುವ ಸಂತೋಷ ಈಗ ಸುಲಭವಲ್ಲ. "ಒಂದಿದ್ದರೆ ಪುಣ್ಯ; ಎರಡಿದ್ದರೆ ಭಾಗ್ಯ". ಹೀಗೆ ನಡೆದಿದೆ. ಅನೇಕ ಮನೆಗಳಲ್ಲಿ ಮಕ್ಕಳೇ ಇಲ್ಲದುದರಿಂದ "ಎಲ್ಲ ಮಕ್ಕಳನ್ನೂ ನಮ್ಮ ಮಕ್ಕಳಂತೆ ಕಾಣಬೇಕು" ಎನ್ನುವುದಕ್ಕೆ ನಿಜವಾದ ಅರ್ಥ ಬಂದಿದೆ!

*******

ಕೆಲವು ಮಂದಿ ಬಡ್ಡಿ ವ್ಯವಹಾರ ಮಾಡುತ್ತಾರೆ. ಅವರಿಗೆ ಅಸಲು ತೀರುವ ಕಂತು ಸ್ವಲ್ಪ ತಡ ಆದರೂ ಪರವಾಗಿಲ್ಲ. ಬಡ್ಡಿ ಮಾತ್ರ ಸಮಯಕ್ಕೆ ಸರಿಯಾಗಿ ಬಂದುಬಿಡಬೇಕು. ಅಂತಹವರನ್ನು ಕಂಡು "ಅಸಲಿಗಿಂತ ಬಡ್ಡಿಯಮೇಲೆ ಪ್ರೀತಿ ಜಾಸ್ತಿ" ಎಂದು ತಮಾಷೆ ಮಾಡುತ್ತಿದ್ದರು. ಮೊಮ್ಮಕ್ಕಳ ವಿಷಯದಲ್ಲಿಯೂ ಹೀಗೆಯೇ. ಮಕ್ಕಳು ಸಾಕುವಾಗ ತಲೆಯ ಮೇಲೆ ಅನೇಕ ಜವಾಬ್ದಾರಿಗಳು. ಪುರಸೊತ್ತು ಕಡಿಮೆ. ಜೊತೆಗೆ ಮಕ್ಕಳನ್ನು ಅತಿ ಮುದ್ದು ಮಾಡಿ ಕೆಡಿಸಬಾರದು ಎಂದು ಮನಸ್ಸಿನ ಮೂಲೆಯಲ್ಲಿ ಒಂದು ಎಚ್ಚರಿಕೆಯ ಗಂಟೆ. ಮೊಮ್ಮಕ್ಕಳು ಬರುವ ಕಾಲಕ್ಕೆ ಜವಾಬ್ದಾರಿ ಇಲ್ಲ. (ಇವರೇ ಇನ್ನೊಬ್ಬರ ಜವಾಬ್ದಾರಿ ಆಗುವ ಸ್ಥಿತಿ!). ಕಾಲ ಹೇಗೆ ಕಳೆಯುವುದು ಎಂದು ಚಿಂತಿಸುವಷ್ಟು ಬಿಡುವಿನ ವೇಳೆ. ಮಕ್ಕಳಿಗಿಂತ ಮೊಮ್ಮಕ್ಕಳ ಬಳಿ ಸಲಿಗೆ ಹೆಚ್ಚು. ಅಸಲು ಮಕ್ಕಳಿಗಿಂತ ಬಡ್ಡಿಯಾದ ಮೊಮ್ಮಕ್ಕಳ ಮೇಲೆ ಎಷ್ಟು ಬೇಕಾದರೂ ಪ್ರೀತಿ ಸುರಿಸಬಹುದು.

ಹೀಗೆಂದ ಮಾತ್ರಕ್ಕೇ ಅದೇನು ಸುಲಭವಲ್ಲ. ಮೊದಲು ಮೊಮ್ಮಕ್ಕಳು ಇರಬೇಕು. ಆಮೇಲೆ ಹತ್ತಿರ ಇರಬೇಕು. ಪರವೂರಿನಲ್ಲೋ, ಪರದೇಶದಲ್ಲೋ ಇದ್ದರೆ ದಿನಾ ಸಿಗುವ ಬಾಳೆಹಣ್ಣಿನ ಬದಲು ವರುಷಕ್ಕೊಮೆ ಸಿಗುವ ಮಾವಿನ ಹಣ್ಣಿನಂತೆ ಅಪರೂಪ. ಚಳಿಗಾಲದಲ್ಲಿ ಸಿಗುವ ಬಾಲಸೂರ್ಯನ ಬಿಸಿಲು ಕಾಯಿಸಿಕೊಂಡಂತೆ (ಹಿಂದಿನ ಕಾಲದಲ್ಲಿ) ಮೊಮ್ಮಕ್ಕಳು ಸಿಕ್ಕಾಗ ಸಂತೋಷ ಅನುಭವಿಸಬೇಕು. ಅದೂ ಏಳೆಂಟು ವರ್ಷಗಳು ಮಾತ್ರ. ಆಮೇಲೆ ಅವರು ಕೈಗೆ ಸಿಕ್ಕುವುದಿಲ್ಲ. ಅಜ್ಜ-ಅಜ್ಜಿಯರನ್ನು ನೋಡಿದರೂ ನೋಡದವರಂತೆ ಹೋಗಬಹುದು.

ಹೀಗೆ ವರ್ಷಕ್ಕೊಮ್ಮೆ ಸಿಗುವ ಮೊಮ್ಮಗಳೊಬ್ಬಳ ಜೊತೆ ಆನಂದಪಡುತ್ತಿರುವ ದಂಪತಿಗಳು ನಿನ್ನೆ ದೂರವಾಣಿಯಲ್ಲಿ ಮಾತನಾಡಿದರು. ಅವರ ಮೋಮ್ಮಗಳು ಪ್ರತಿದಿನ "ಏಕಪಾತ್ರಾಭಿನಯ" ಮಾಡುತ್ತಾಳಂತೆ. "ಅದರಲ್ಲಿ ಏನು ವಿಶೇಷ?" ಎಂದು ಕೇಳಬಹುದು. ಇದು ಬರಿಯ ಏಕಪಾತ್ರಾಭಿನಯ ಅಲ್ಲ. ಅನೇಕ ವಿಶೇಷವುಂಟು.

******

ಪುಟ್ಟ ಮಕ್ಕಳಿಗೆ, ಅದರಲ್ಲೂ ಮೊಮ್ಮಕ್ಕಳಿಗೆ, ಪ್ರತಿದಿನ ಕಥೆ ಹೇಳಬೇಕು. ಏನೋ ಒಂದು ಹೇಳಿದರೆ ಆಯಿತು ಅನ್ನುವಂತಿಲ್ಲ. ಕರ್ಣನ ಶಪಥ "ತೊಟ್ಟ ಬಾಣ ತೊಡುವಂತಿಲ್ಲ" ಎನ್ನುವಂತೆ "ಹೇಳಿದ ಕಥೆ ಹೇಳುವಂತಿಲ್ಲ". ಪ್ರತಿದಿನ ಹೊಸ ಕಥೆ ಆಗಬೇಕು. ಅಷ್ಟೇ ಅಲ್ಲ. ಇಂದು ಹೇಳುವ ಕಥೆಗೂ, ಹಿಂದೆಂದೋ ಹೇಳಿದ್ದ ಇನ್ನೊಂದು ಕಥೆಗೂ ತಾಳ-ಮೇಳ ಇರಬೇಕು. ಕಬಡ್ಡಿ ಆಟದಲ್ಲಿ ಎದುರಾಳಿಯನ್ನು ಹಿಡಿಯಲು ಆಟಗಾರರ ಸರಪಳಿಯ ಎರಡು ಕೊನೆಯ ಚತುರ ಆಟಗಾರರಂತೆ ತಪ್ಪು ಹಿಡಿಯಲು ಮೊಮ್ಮಕ್ಕಳು ಕಾದಿರುತ್ತಾರೆ. ದೊಡ್ಡವರಿಗೆ ಏನೋ ಹೇಳಿ ಬಾಯಿ ಮುಚ್ಚಿಸಬಹುದು. ಪ್ರಯತ್ನವಾದರೂ ಪಡಬಹುದು. ಇಲ್ಲಿ ಅದಕ್ಕೂ ಅವಕಾಶ ಇಲ್ಲ.

ಗಂಡ-ಹೆಂಡತಿ (ಈಗ ಅಜ್ಜ-ಅಜ್ಜಿ) ಜೀವನ ಪೂರ್ತಿ ಬೇರೆ-ಬೇರೆ ಹೇಳಿಕೊಂಡು ಬದುಕಿರಬಹುದು. ಅದು ಒಮ್ಮೊಮ್ಮೆ ಸಾಧ್ಯ. ಆದರೆ ಈಗ ಅದು ಅಸಾಧ್ಯ. ಮೊಮ್ಮಕ್ಕಳ ಜೊತೆ ಮಾತನಾಡುವಾಗ, ಅದಕ್ಕಿಂತ ಹೆಚ್ಚಾಗಿ ಕಥೆ ಹೇಳುವಾಗ ತುಂಬಾ ಎಚ್ಚರ ಇರಬೇಕು. ಇಲ್ಲದಿದ್ದರೆ "ಅಜ್ಜ ಹಾಗೆ ಹೇಳಿದ್ದ. ನೀನು ಹೀಗೆ ಹೇಳುತ್ತೀ. ಯಾವುದು ಸರಿ?" ಎಂದು ಇಬ್ಬರನ್ನೂ ಒಟ್ಟಿಗೆ ಕೂಡಿಸಿ ಪಂಚಾಯಿತಿ ಪ್ರಾರಂಭಿಸುತ್ತಾರೆ. ಅಕಸ್ಮಾತ್ ಒಬ್ಬರು ಒಂದು ದಿನ ತಪ್ಪು ಹೇಳಬಹುದು. ಮೊಮ್ಮಗು ಮಲಗಿದ ನಂತರ "ನೋಡು, ನಾನು ಹಾಗೆ ಹೇಳಿಬಿಟ್ಟೆ. ಇನ್ನು ಮುಂದೆ ನೀನೂ ಅದನ್ನೇ ಹೇಳಬೇಕು" ಎಂದು ಹೇಳಿ ಎಚ್ಚರಿಸುವುದಲ್ಲದೆ ಮುಂದೆ ಜೀವನ ಪೂರ್ತಿ ಇಬ್ಬರೂ ಅದರಂತೆ ನಡೆಯಬೇಕು. ಸಪ್ತಪದಿ ತುಳಿದಾಗ ಕೊಟ್ಟ ಭಾಷೆ ಅಕಸ್ಮಾತ್ ತಪ್ಪಬಹುದು. ಇಲ್ಲಿ ತಪ್ಪಬಾರದು.

ಮೂರು ವರ್ಷ ತುಂಬಿ ನಾಲ್ಕಕ್ಕೆ ಸ್ವಲ್ಪ ಕಡಿಮೆ ವಯಸ್ಸಿನ ಮೊಮ್ಮಗಳು. ಅರಳು ಹುರಿದಂತೆ ಮಾತು. ಹಿಂದೆ ಹೇಳಿದ ಕಥೆಗಳೆಲ್ಲಾ ನೆನಪಿನಲ್ಲಿ ಉಂಟು. ರಾತ್ರಿ ಮಲಗುವಳು. ಬೆಳಿಗ್ಗೆ ಎದ್ದು ಕೋಣೆಯಿಂದ ಹೊರಬರುವ ಮೊದಲೇ ಅಂದಿನ ಏಕಪಾತ್ರಾಭಿನಯದ ತೀರ್ಮಾನ ಮಾಡಿರುವಳು. ಅದರಂತೆ ವೇಷ-ಭೂಷಣ ಸಹಿತ ಹೊರಬರುವಳು. ಬಂದ ತಕ್ಷಣ ಘೋಷಣೆ ಮಾಡುವಳು. ಪುಟ್ಟ ಸೀತೆಯಂತೆ ಒಂದು ದಿನ ವೇಷ. (ಮೇಲಿನ ಚಿತ್ರ ನೋಡಬಹುದು).

"ಇಂದು ನಾನು ಸೀತೆ. ಎಲ್ಲರೂ ಗಮನಿಸಿ"

ಗಮನಿಸಿದರೆ ಮುಗಿಯಲಿಲ್ಲ. ಡಾ. ರಾಜಕುಮಾರ್ ಎಚ್ಚಮನಾಯಕನ ಏಕಪಾತ್ರಾಭಿನಯದಲ್ಲಿ ಒಬ್ಬ "ತಿರುವೆಂಕಟ ನಾಯಕ" ಸಾಕು. ಇಲ್ಲಿ ಹಾಗಲ್ಲ!

ಅವಳು ಸೀತೆ ಆದ ತಕ್ಷಣ ತಂದೆ ಜನಕ ಆಗಬೇಕು. ತಾಯಿ ಸುನಯನಾ. ಅವರಿಬ್ಬರ ತಂದೆ-ತಾಯಿಯರ ಹೆಸರು ಗೊತ್ತಿಲ್ಲದಿದ್ದರೆ ಅವರನ್ನು ಪಿತಾಶ್ರೀ-ಮಾತಾಶ್ರೀ ಅನ್ನಬೇಕು.

ಅವಳು ರಾಮನಾದ ದಿನ ಜನಕನ ಬದಲು ದಶರಥ. ಸುನಯನಾ ಇರುವಲ್ಲಿ ಕೌಸಲ್ಯ. ಹೀಗೆ ಬದಲಾವಣೆ. ತಮಗೆ ಬೇಕಿದ್ದ ಪಾತ್ರ ಮನೆಯವರು ಆರಿಸಿಕೊಳ್ಳುವಂತಿಲ್ಲ.  

ಅವಳು ಸೀತೆಯಾದ ದಿನ ಅವಳ ಅಮ್ಮ ಗಂಡನನ್ನು "ರೀ, ಊಟಕ್ಕೆ ಬನ್ನಿ" ಅನ್ನುವಂತಿಲ್ಲ. "ಜನಕ ಮಹಾರಾಜರೇ, ಭೋಜನಕ್ಕೆ ದಯಮಾಡಿಸಿ" ಅನ್ನಬೇಕು. (ಗಂಡ-ಹೆಂಡತಿ ಜಗಳ ಕಾಯಬೇಕಿದ್ದರೆ ಮಗಳನ್ನು ಮನೆಯಲ್ಲಿ ಬಿಟ್ಟು, ಪಾರ್ಕಿಗೆ ಹೋಗಿ ಹೊಡೆದಾಡಬಹುದು. ಏಕೆಂದರೆ, ಜನಕ-ಸುನಯನಾ ಜಗಳ ಆಡಿದ್ದು ಕತೆಯಲ್ಲಿ ಬಂದಿಲ್ಲ).

ವಾಸ್ತವವಾಗಿ ಇದು "ಏಕಪಾತ್ರಾಭಿನಯ" ಸಂದರ್ಭ ಅಲ್ಲ. "ಎಲ್ಲಪಾತ್ರಾಭಿನಯ"! ಇಡೀ ದಿನ ಹೀಗೆ ಕಳೆಯಬೇಕು. ಇದು ಮುಂದೆ ಕಥೆಯಲ್ಲಿ ಬರುವ "ಸುಗ್ರೀವಾಜ್ಞೆ" ತರಹ.

******

ನಾವು ನಮ್ಮ ನಮ್ಮ ಜೀವನದಲ್ಲಿ ಅನೇಕರನ್ನು ಬೇರೆ ಬೇರೆ ಕಾರಣಗಳಿಗೆ ಕುಣಿಸಿರಬಹುದು. ಅದು ನ್ಯಾಯವಿರಬಹುದು. ಅನ್ಯಾಯವಿರಬಹುದು. ಆದರೆ ನಮ್ಮನ್ನು ಮೊಮ್ಮಕ್ಕಳು ಕುಣಿಸುತ್ತಾರೆ. ಅದು ಮಾತ್ರ ಯಾವಾಗಲೂ ನ್ಯಾಯವೇ!