ಐವತ್ತೈದು ವರುಷಗಳ ಹಿಂದೆ (1971) ಈಶ್ವರಿ ಪ್ರೊಡಕ್ಷನ್ಸ್ ಅವರ "ಕುಲ ಗೌರವ" ಎನ್ನುವ ಹೆಸರಿನ ಕನ್ನಡ ಚಲನಚಿತ್ರವೊಂದು ತೆರೆ ಕಂಡಿತ್ತು. ನಟ ಸಾರ್ವಭೌಮ ದಾಜಕುಮಾರ್ ಮೂರು ಪಾತ್ರಗಳಲ್ಲಿ ಅಭಿನಯಿಸಿದ್ದ ಚಲನಚಿತ್ರ. ಈಶ್ವರಿ ಪ್ರೊಡಕ್ಷನ್ಸ್ ಸಂಸ್ಥೆಯ ಮಾಲೀಕ ಎನ್. ವೀರಾಸ್ವಾಮಿ ಅವರ ಮಗ ರವಿಚಂದ್ರನ್ ಮೊದಲ ಬಾರಿಗೆ ಅದರಲ್ಲಿ ಬಾಲಕಲಾವಿದನಾಗಿ ಅಭಿನಯಿಸಿದ್ದರು. ಮೂರು ತಲೆಮಾರಿನ ಸಂಘರ್ಷವನ್ನು ತೋರಿಸುವ ಕಥೆಯ ಚಿತ್ರವದು. ತಾತ, ಅಪ್ಪ ಮತ್ತು ಮಗ ಅನ್ನುವ ಮೂರು ಪಾತ್ರಗಳು ರಾಜಕುಮಾರ್ ಪಾಲಿಗೆ.
ತಾತ-ಅಪ್ಪ-ಮಗ ಮತ್ತು ಅಪ್ಪ-ಮಗ-ಮೊಮ್ಮಗ ಎನ್ನುವ ಮೂರು ತಲೆಮಾರುಗಳನ್ನು ಒಟ್ಟಾಗಿ ಸೂಚಿಸುವ ಪದಪ್ರಯೋಗವನ್ನು ನಾವು ಆಗಾಗ್ಗೆ ಕೇಳಬಹುದು. ಅನೇಕ ತಂದೆ-ತಾಯಿಯರಿಗೆ ಹಿಂದೆಲ್ಲ ಅನೇಕ ಮಕ್ಕಳಿರುತ್ತಿದ್ದರು. (ಈಗ ಇದ್ದರೆ ಒಂದೋ ಅಥವಾ ಎರಡೋ ಇರಬಹುದು). ಹೀಗೆ ಇರುತ್ತಿದ್ದ ಅನೇಕ ಮಕ್ಕಳಲ್ಲಿ ಕೆಲವು ಗಂಡು; ಕೆಲವು ಹೆಣ್ಣು. ಗಂಡು ಸಂತಾನಕ್ಕೆ "ಮಗ" ಎಂದೂ ಹೆಣ್ಣು ಸಂತಾನಕ್ಕೆ "ಮಗಳು" ಎಂದೂ ಹೇಳುವುದು. ಈಗಲೂ ಹಾಗೆಯೇ ನಡೆಯುತ್ತಿದೆ. ಎಲ್ಲರನ್ನೂ ಸೇರಿಸಿ ಒಟ್ಟಾಗಿ ನಿರ್ದೇಶಿಸುವಾಗ ಅದು "ಮಕ್ಕಳು" ಎಂದಾಗುತ್ತದೆ. ಇದೇ ರೀತಿ ಮಕ್ಕಳ ಮಕ್ಕಳನ್ನು "ಮೊಮ್ಮಕ್ಕಳು" ಎಂದು ಹೇಳುವುದು. ಈಗಲೂ ಇದು ಹೀಗೆಯೇ ಇದೆ.
ಮೊಮ್ಮಕ್ಕಳು ಅವರ ತಂದೆ-ತಾಯಿಯರ ತಂದೆ-ತಾಯಿಯರನ್ನು ಏನೆಂದು ಕರೆಯಬೇಕು? ಸಾಮಾನ್ಯವಾಗಿ ನಾವು ಕೇಳುವ ಪದ "ತಾತ" ಮತ್ತು "ಅಜ್ಜಿ" ಎಂದು. ಕೆಲವೊಮ್ಮೆ "ಅಜ್ಜ" ಮತ್ತು "ಅಜ್ಜಿ" ಎಂದು ಹೇಳಬಹುದು. ನಾವು ಚಿಕ್ಕವರಿದ್ದಾಗ ತಂದೆಯ ತಂದೆಯನ್ನು "ತಾತ" ಎಂದೂ, ತಾಯಿಯ ತಂದೆಯನ್ನು "ಅಜ್ಜ" ಎಂದೂ ಕರೆಯುತ್ತಿದ್ದೆವು. ಆದರೆ ಎರಡೂ ಕಡೆಯವರು ಅಜ್ಜಿಯರು. ತೆಲುಗಿನಲ್ಲಿ ತಾಯಿಯ ತಾಯಿಯನ್ನು "ಅಮ್ಮಮ್ಮ" ಅನ್ನುತ್ತಾರೆ. ಈಗಲೂ ಪ್ರಾಯಶಃ ಕರಾವಳಿಯಲ್ಲಿ ಮತ್ತು ಮಲೆನಾಡಿನಲ್ಲಿ "ಅಜ್ಜ" ಅನ್ನುವ ಪದ ಹೆಚ್ಚು ಬಳಕೆಯಲ್ಲಿದೆ ಅನ್ನಿಸುತ್ತದೆ. ಈಗಂತೂ ತಾತ, ಅಜ್ಜ, ಅಜ್ಜಿ ಎಲ್ಲರೂ ಮರೆಯಾಗಿ "ಗ್ರಾಂಡ್ ಪಾ" ಮತ್ತು "ಗ್ರಾಂಡ್ ಮಾ" ಬಂದಿದ್ದಾರೆ.
ಸಂಸ್ಕೃತದಲ್ಲಿ ಮಗನಿಗೆ ಮತ್ತು ಮಗಳಿಗೆ ನಿರ್ದೇಶಿಸಲು ಅನೇಕ ಪದಗಳು ಇವೆ. ಮಗನಿಗೆ "ಪುತ್ರ" ಎನ್ನುವ ಪದ ಹೆಚ್ಚು ಬಳಕೆಯಲ್ಲುಂಟು. ಹಾಗೆಯೇ ಮಗಳಿಗೆ "ಪುತ್ರೀ" ಎಂದುಂಟು. "ಸುತ" ಮತ್ತು "ಸುತಾ" ಎಂದೂ ಉಂಟು. ಹಾಗೆಯೇ ಉಪಯೋಗಿಸುವ ಅನೇಕ ಪದಗಳಲ್ಲಿ ಮಗಳಿಗೆ "ದುಹಿತಾ" ಎಂದು ಒಂದು ಪದ ಉಂಟು. ತಂದೆಯ ತಂದೆಯನ್ನು "ಪಿತಾಮಹ" ಎಂದು ಸಂಬೋಧಿಸುತ್ತಾರೆ. ಕನ್ನಡದಲ್ಲಿಯೂ ಹೀಗುಂಟು. ತಾಯಿಯ ತಂದೆಯನ್ನು "ಮಾತಾಮಹ" ಎನ್ನುತ್ತಾರೆ. ಹೀಗೆಯೇ ಮಗನ ಮಗನಾದ ಮೊಮ್ಮಗನಿಗೆ "ಪೌತ್ರ" ಎಂದೂ, ಮಗಳ ಮಗನಾದ ಮೊಮ್ಮಗನಿಗೆ "ದೌಹಿತ್ರ" (ದುಹಿತಾಳ ಮಗ) ಎಂದೂ ಹೇಳುವುದು.
ಈ ಪಿತಾಮಹ, ಮಾತಾಮಹ, ಪೌತ್ರ ಮತ್ತು ದೌಹಿತ್ರ ಎನ್ನುವ ಪದಗಳಿಂದ ಸಂಬಂಧಗಳು ಖಚಿತವಾಗಿ ತಿಳಿಯುತ್ತವೆ. ಈ ಸಂಚಿಕೆಯ ಹೆಸರು "ಯಯಾತಿಯ ಮೊಮ್ಮಕ್ಕಳು" ಎಂದು. ಮುಂದೆ "ದೌಹಿತ್ರ" ಎನ್ನುವ ಪದ ಬರುತ್ತದೆ. ಆದ್ದರಿಂದ ಇಷ್ಟು ಪೀಠಿಕೆ.
*****
ಪರೀಕ್ಷಿತ್ ಮಾಹಾರಾಜನಿಗೆ ಏಳು ದಿನದೊಳಗೆ ಸಾವು ಸಂಭವಿಸುವುದು ಎಂದು ತಿಳಿದಿದೆ. ಸಾಧನೆಯ ಒಂದು ರೀತಿಯಾಗಿ ಶುಕಾಚಾರ್ಯರಿಂದ "ಶ್ರೀಮದ್ಭಾಗವತ" ಕೇಳುತ್ತಿದ್ದಾನೆ. ಎಂಟು ಸ್ಕಂದಗಳು ಮುಗಿದಿವೆ. ಪರೀಕ್ಷಿತನಿಗೆ ತಾನು ತಾಯಿಯ ಗರ್ಭದಲ್ಲಿದ್ದಾಗ ಅಶ್ವತ್ಥಾಮಾಚಾರ್ಯರ ಬ್ರಹ್ಮಾಸ್ತ್ರದಿಂದ ತನ್ನನ್ನು ಕಾಪಾಡಿದ ಶ್ರೀಕೃಷ್ಣನ ಕಥೆ ಕೇಳಬೇಕೆಂದು ಆಸೆ. ತಾನೂ ಚಂದ್ರವಂಶದವನು. ಶ್ರೀಕೃಷ್ಣನೂ ಚಂದ್ರವಂಶದವನು. ಚಂದ್ರವಂಶದವರ ಕಥೆಯನ್ನು ವಿವರವಾಗಿ ಹೇಳಬೇಕೆಂದು ಶುಕಾಚಾರ್ಯರನ್ನು ಕೇಳುತ್ತಾನೆ. ಶುಕರು ಒಂಭತ್ತನೆಯ ಸ್ಕಂದದಲ್ಲಿ ಚಂದ್ರವಂಶದವರ ವೃತ್ತಾಂತವನ್ನೂ, ನಂತರ ಹತ್ತನೆಯ ಸ್ಕಂದದಲ್ಲಿ ವಿಸ್ತಾರವಾಗಿ ಶ್ರೀಕೃಷ್ಣನ ಕಥೆಯನ್ನೂ ಹೇಳುತ್ತಾರೆ.
ಹೀಗೆ ಹೇಳುವಾಗ ಯಯಾತಿಯ ಮತ್ತು ಅವನ ಮಕ್ಕಳ, ಮೊಮ್ಮಕ್ಕಳ ಪ್ರಸಂಗಗಳು ಬರುತ್ತವೆ. ಮಹಾಭಾರತದಲ್ಲೂ ಯಯಾತಿಯ, ಅವನ ಸಂತತಿಯ ವಿವರಗಳು ಸಿಕ್ಕುತ್ತವೆ.
ಚತುರ್ಮುಖ ಬ್ರಹ್ಮನ ಅನೇಕ ಮಕ್ಕಳಲ್ಲಿ ಅತ್ರಿ ಋಷಿಗಳೂ ಒಬ್ಬರು. ಅನಸೂಯ-ಅತ್ರಿಯರ ಮಗ ಚಂದ್ರ. ಚಂದ್ರನ ಮಗ ಬುಧ. ಬುಧ ಮತ್ತು ಇಳಾ ದಂಪತಿಗಳ ಮಗ ಪುರೂರವ. ಪುರೂರವ ಮತ್ತು ಆಯುಷ್ ದಂಪತಿಗಳ ಮಗ ನಹುಷ ಚಕ್ರವರ್ತಿ. ನಹುಷ ಚಕ್ರವತಿಯು ಕೆಲವು ಕಾಲ ದೇವೇಂದ್ರನ ಪದವಿಯನ್ನೂ ಹೊಂದಿದ್ದವನು.
ನಹುಷನಿಗೆ ಪಿತೃ ದೇವತೆಗಳ ಮಗಳಾದ ವಿರಜಾ ಎನ್ನುವವಳು ಹೆಂಡತಿ. ಇವರ ಮಗನೇ ಯಯಾತಿ. ಯಯಾತಿಗೆ ಶುಕ್ರಾಚಾರ್ಯರ ಮಗಳಾದ ದೇವಯಾನಿ ಮತ್ತು ವೃಷಪರ್ವ ರಾಜನ ಮಗಳಾದ ಶರ್ಮಿಷ್ಠೆ ಪತ್ನಿಯರು. "ರಾಜಾನೋ ಬಹುವಲ್ಲಭಾ:" ಎನ್ನುವಂತೆ ಬೇರೆ ಹೆಂಡತಿಯರೂ ಇದ್ದರು.
ಯಯಾತಿಗೆ ದೇವಯಾನಿಯಿಂದ ಯದು ಮತ್ತು ತುರ್ವಸು ಎಂದು ಮಕ್ಕಳು. ಈ ಯದು ಮಹಾರಾಜನ ಸಂತತಿಯವರೇ ಮುಂದೆ "ಯಾದವರು" ಎಂದಾದರು.
ಯಯಾತಿಗೆ ಶರ್ಮಿಷ್ಠೆಯಿಂದ ದೃಹ್ಯು, ಅನುದೃಹ್ಯು ಮತ್ತು ಪುರು ಎಂದು ಮೂವರು ಮಕ್ಕಳು. ಈ ಪುರು ಮಹಾರಾಜನ ಸಂತತಿಯಲ್ಲಿ ಬಂದ ಕುರು ಮಹಾರಾಜನ ಹೆಸರಿನಿಂದ, ಮುಂದೆ ಕೌರವರು ಮತ್ತು ಪಾಂಡವರು ಎಂದಾಯಿತು.
ಹೀಗೆ ಯಾದವರು, ಕೌರವರು ಮತ್ತು ಪಾಂಡವರು, ಈ ಮೂರೂ ಸಂತತಿಗಳಿಗೆ ಯಯಾತಿಯು ಮೂಲಪುರುಷ.
*****
ತನ್ನ ಪಿತಾಮಹನಾದ ಪುರೂರವ ಮತ್ತು ತಂದೆಯಾದ ನಹುಷ ಚಕ್ರವರ್ತಿಗಳಂತೆ ಯಯಾತಿ ಸಹ ಬಹಳ ಪ್ರತಾಪಿಯೂ ಮತ್ತು ಧರ್ಮಿಷ್ಟನೂ ಆಗಿದ್ದನು. ಬಹು ಸಂಖ್ಯಾತ ಯಜ್ಞ-ಯಾಗಾದಿಗಳನ್ನು ಮಾಡಿ, ನ್ಯಾಯವಾಗಿ ರಾಜ್ಯಪಾಲನೆ ಮಾಡಿ ಬಹಳ ಪುಣ್ಯವನ್ನು ಸಂಪಾದಿಸಿದ್ದನು. ಕಾಲಕ್ರಮದಲ್ಲಿ ಅವನಿಗೆ ತನ್ನ ಯೋಗ್ಯತೆಗೆ ಅನುಗುಣವಾಗಿ ಸ್ವರ್ಗ ಪ್ರಾಪ್ತಿಯಾಯಿತು. ಅವನಿಗೆ ಸ್ವರ್ಗದಲ್ಲಿ ವಿಶೇಷ ಗೌರವಗಳಿದ್ದವು. ಅನೇಕ ದೇವತೆಗಳು "ಇಂತಹ ಪುಣ್ಯವಂತನ ದರ್ಶನ ಸಿಗುವುದೇ ದುರ್ಲಭ" ಎಂದು ಪ್ರತಿದಿನ ಅವನನ್ನು ನೋಡಿಹೋಗುತ್ತಿದ್ದರಂತೆ!
ಆಗಾಗ ದೇವೇಂದ್ರನು "ಯಯಾತಿ, ನಿನ್ನಂತೆ ಅನೇಕ ಯಜ್ಞ-ಯಾಗಗಳನ್ನು ಮಾಡಿರುವವರು ಭೂಲೋಕದಲ್ಲಿ ಬೇರೆ ಯಾರಾದರೂ ಇದ್ದಾರೆಯೇ?" ಎಂದು ಕೇಳುವನು. ಯಯಾತಿಯು "ಅಯ್ಯೋ, ನನ್ನದೇನು ದೊಡ್ಡದು. ನನಗಿಂತ ಎಷ್ಟೋ ದೊಡ್ಡ ಮಹಾತ್ಮರು ಇರುವರು" ಎನ್ನುವನು. ಹೀಗೆಯೇ ಅನೇಕ ಬಾರಿ ನಡೆಯಿತು.
ಒಮ್ಮೆ ಯಯಾತಿಗೆ ದೇವೇಂದ್ರನು ಹೀಗೆ ಮತ್ತೆ ಮತ್ತೆ ಕೇಳುವುದರಿಂದ ಅಹಂಕಾರ ಉಂಟಾಯಿತು. ದೇವೇಂದ್ರನು ಮತ್ತೆ ಕೇಳಿದಾಗ "ನನ್ನಷ್ಟು ಮಾಡಿರುವವರು ಯಾರಿದ್ದಾರು? ನಾನೇ ಹೆಚ್ಚು" ಎಂದುಬಿಟ್ಟನು. ದೇವೇಂದ್ರನು ಅವನನ್ನು ಸ್ವರ್ಗದಿಂದ ಕೆಳಗೆ ತಳ್ಳಿಸಿಬಿಟ್ಟನು.
ಹೀಗೆ ಕೆಳಗೆ ಬೀಳುವಾಗ ಯಯಾತಿಯು ಚತುರ್ಮುಖ ಬ್ರಹ್ಮರನ್ನು ಪ್ರಾರ್ಥಿಸಿದನು. ಅವರ ದರ್ಶನವಾಯಿತು. "ನನಗೆ ಏಕೆ ಈ ಗತಿ ಬಂತು?" ಎಂದು ಕೇಳಿದನು. ಬ್ರಹ್ಮರು "ಸ್ವರ್ಗದಲ್ಲಿ ಅಹಂಕಾರಿಗಳಿಗೆ ಜಾಗ ಇಲ್ಲ. ಆದ್ದರಿಂದ ಹೀಗಾಯಿತು" ಎಂದರು. "ಹೋಗಲಿ. ಈಗ ಬೀಳುತ್ತಿರುವುದಂತೂ ನಿಜ. ನನ್ನನ್ನು ಯಾರಾದರೂ ಯೋಗ್ಯರ ಮಧ್ಯದಲ್ಲಿ ಬೀಳುವಂತೆ ಮಾಡಿ" ಎಂದು ಕೇಳಿಕೊಂಡನು. ಅವರು "ಆಗಲಿ" ಎಂದರು.
*****
ನೈಮಿಷಾರಣ್ಯದಲ್ಲಿ (ಈಗಿನ ಉತ್ತರಪ್ರದೇಶದಲ್ಲಿ ಇದೆ) ನಾಲ್ವರು ಮಹಾ ತೇಜಸ್ವಿಗಳಾದ ಅಣ್ಣ-ತಮ್ಮಂದಿರು ಒಂದು ಯಜ್ಞವನ್ನು ನಡೆಸುತ್ತಿದ್ದರು. ಸ್ವರ್ಗದಿಂದ ಕೆಳಗೆ ಬೀಳುತ್ತಿದ್ದ ಯಯಾತಿಯು ಚತುರ್ಮುಖ ಬ್ರಹ್ಮರ ಕರುಣೆಯಿಂದ ಆ ನಾಲ್ವರ ಮಧ್ಯದಲ್ಲಿ ಬಿದ್ದನು. ಅಣ್ಣ-ತಮ್ಮಂದಿರು ಅವನನ್ನು ಉಪಚರಿಸಿ, ಮಾತನಾಡಿಸಿದರು.
"ಮಹಾತ್ಮರೇ, ನೀವು ಯಾರು?"
"ನಾನು ಯಯಾತಿ. ಚಂದ್ರವಂಶದ ಚಕ್ರವರ್ತಿಯಾಗಿದ್ದವನು"
"ಹೀಗೆ ಬೀಳಲು ಕಾರಣವೇನು?"
"ನಾನು ಸ್ವರ್ಗದಲ್ಲಿದ್ದೆ. ಕಾರಣಾಂತರದಿಂದ ಪುಣ್ಯಕ್ಷಯವಾಯಿತು"
"ನಮ್ಮ ಪುಣ್ಯಗಳನ್ನು ನಿಮಗೆ ಧಾರೆ ಎರೆಯುತ್ತೇವೆ. ತಾವು ಮತ್ತೆ ಅಲ್ಲಿಗೆ ಹೋಗಿರಿ"
"ನಾನು ಕ್ಷತ್ರಿಯ. ದಾನ ಕೊಡಬಹುದೇ ಹೊರತು ದಾನ ತೆಗೆದುಕೊಳ್ಳುವಂತಿಲ್ಲ"
"ನಮ್ಮಿಂದ ತೆಗೆದುಕೊಳ್ಳಬಹುದು"
"ಅದು ಹೇಗೆ?"
"ನಾವು ಬೇರೆಯವರಲ್ಲ. ನಿಮ್ಮ ದೌಹಿತ್ರರು. ಆದ್ದರಿಂದ ಇದು ಆಗಬಹುದು"
"ದೌಹಿತ್ರರೇ? ನೀವು ಯಾರು?"
"ನಾವು ನಾಲ್ವರೂ ನಿನ್ನ ಮಗಳು ಮಾಧವಿ ಪಡೆದ ಮಕ್ಕಳು. ನೀನು ನಮ್ಮ ಮಾತಾಮಹ! ನೀನು ನಮ್ಮ ನಡುವೆ ಬಂದದ್ದು ನಮ್ಮ ಭಾಗ್ಯ"
*****
ಮಾಧವಿಯ ನಾಲ್ಕು ಮಕ್ಕಳೂ ಪ್ರಚಂಡರು. ವಿಶೇಷ ಸಾಧನೆಗಳನ್ನು ಮಾಡಿ ಬಹಳ ಪುಣ್ಯ ಸಂಪಾದನೆ ಮಾಡಿದವರು.
ಸಂಚಿಕೆ ದೀರ್ಘವಾಯಿತು. ಮಾಧವಿಯ ಮಕ್ಕಳ ಸಂಗತಿಯನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.
ಬಹಳ ಸುಂದರ ವಾಗಿದೆ ಹರಿಕಥೆಯಲ್ಲಿ ತೃಪತರಾಗುಪ ನಮಗೆ ತಿಳಿಯದ ವಿಷಯಗಳು ಅಮೋಘವಾಗಿದೆ
ReplyDeleteA beautiful written article. Really appreciable.
ReplyDeleteThis blog gives us good information about mytholoogy.
ReplyDeleteಈ ಲೇಖನದ ಹಲವು ವಿಚಾರಗಳು ಮೊದಲೇ ತಿಳಿದಿದ್ದವು.ಆದರೆ ಇಷ್ಟು ವಿವರ-ವಿಚಾರಗಳು ತಿಳಿದಿರಲಿಲ್ಲ.ಧನ್ಯವಾದಗಳು ಕೇಶವಮೂರ್ತಿ
ReplyDelete