Monday, September 22, 2025

ಒಂದು ಕಪ್ಪು ಚುಕ್ಕೆ


ಕಳೆದ ವಾರದ ಎರಡು ಸಂಚಿಕೆಗಳಾದ "ಯಯಾತಿಯ ಮೊಮ್ಮಕ್ಕಳು" ಮತ್ತು ಅದರ ಮುಂದಿನ ಭಾಗವಾದ "ಮಾಧವಿಯ ಮಕ್ಕಳು" ಅನೇಕ ಪ್ರತಿಕ್ರಿಯೆಗಳನ್ನು ತಂದಿವೆ. (ಈ ಸಂಚಿಕೆಗಳನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). ವಿಶೇಷವಾಗಿ ಕನ್ನಡದ ಒಂದು ಪ್ರಸಿದ್ಧ ಕೃತಿ, ಖ್ಯಾತ ಲೇಖಕ, ನಟ, ನಿರ್ದೇಶಕ, ಜ್ಞಾನ ಪೀಠ ಪ್ರಶಸ್ತಿ ವಿಜೇತ ಶ್ರೀ ಗಿರೀಶ್ ಕಾರ್ನಾಡ್ ಅವರ "ಯಯಾತಿ" ನಾಟಕ ಓದಿರುವವರು, ಅದರ ಪ್ರಯೋಗವನ್ನು ರಂಗಮಂಚದ ಮೇಲೆ ನೋಡಿದವರು ಕಳಿಸಿರುವ ಪ್ರತಿಕ್ರಿಯೆಗಳು. ಕೆಲವರು ಇದರ ಬಗ್ಗೆ ಪ್ರಶ್ನೆಗಳನ್ನು ಹಾಕಿ, ಸ್ವಲ್ಪ ವಿಸ್ತಾರ ಮಾಡಬೇಕೆಂದು ಕೇಳಿದ್ದಾರೆ. ಈ ಸಂಚಿಕೆಗಳಲ್ಲಿರುವ ಅಂಶಗಳನ್ನು ಒಳಗೊಂಡಂತೆ ಒಂದು ರಂಗನಾಟಕ ಬರೆಯಬೇಕೆಂದೂ ಅನೇಕರು ಸಲಹೆ ನೀಡಿದ್ದಾರೆ. 

ಸಾಮಾನ್ಯವಾಗಿ ಅನೇಕ ಓದುಗರು ಮಹಾಭಾರತ, ಭಾಗವತ ಮತ್ತು ಹಲವು ಪುರಾಣಗಲ್ಲಿರುವ ಚಂದ್ರವಂಶದವರ ಕುರಿತಾದ ಬಲು ವಿಸ್ತಾರವಾದ ಸರಕನ್ನು ಓದಿರುವುದಿಲ್ಲ. ಅದು ಎಲ್ಲರಿಗೂ ಸಾಧ್ಯವಾಗುವುದೂ ಇಲ್ಲ. ಅವುಗಳ ಗಾತ್ರ ಬಲು ದೊಡ್ಡದು. ಜೊತೆಗೆ ಮೂಲ ಕೃತಿಗಳು ಇರುವುದು ಸಂಸ್ಕೃತದಲ್ಲಿ. ಕಳೆದ ತಲೆಮಾರಿನ ಮತ್ತು ಇಂದಿನ ಅನೇಕ ಸಾಹಿತಿಗಳು ರಾಮಾಯಣ ಮತ್ತು ಮಹಾಭಾರತದ ಯಾವುದಾದರೂ ಒಂದು ಎಳೆಯನ್ನು ಹಿಡಿದು, ಅದರ ವಿಸ್ತಾರದಲ್ಲಿ ತಮ್ಮ ಕೃತಿಗಳ ರಚನೆ ಮಾಡಿರುತ್ತಾರೆ. ವ್ಯಾಸ, ವಾಲ್ಮೀಕಿಗಳ ಸೆಳೆತ, ಸತ್ವ ಅಂತಹುದು. ಈ ಮಹಾಮಹಿಮರು ಸೃಷ್ಟಿಸಿರುವ, ಬಣ್ಣಿಸಿರುವ ಪಾತ್ರ ಪ್ರಪಂಚ ಎಲ್ಲರನ್ನೂ ಅಯಸ್ಕಾಂತದಂತೆ ಆಕರ್ಷಿಸುತ್ತದೆ. ಅಂತಹ ಬೃಹತ್ ಕೃತಿಗಳನ್ನು ಹೊಸದಾಗಿ ನಿರ್ಮಾಣ ಮಾಡುವ ಸಾಹಸಕ್ಕೆ ಯಾರೂ ಕೈ ಹಾಕಿಲ್ಲ. 

ಯಾವುದೋ ಒಂದು ಪಾತ್ರದ ಒಂದು ಒಳ್ಳೆಯ ಗುಣವನ್ನೋ, ದುರ್ಗುಣವನ್ನೋ ಹಿಗ್ಗಿಸಿ ಮರುಸೃಷ್ಟಿ ಮಾಡಿದ ಕೃತಿಗಳು ಅತ್ಯಂತ ಜನಪ್ರಿಯವಾದಾಗ ಅವುಗಳಲ್ಲಿ ಬಿಂಬಿತವಾದ ಹೂರಣವೇ ಸತ್ಯವೆಂದು ಸಾಮಾನ್ಯ ಜನ ನಂಬುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಅದರಲ್ಲಿಯೂ ಅರ್ಥ, ಕಾಮಗಳ ಪ್ರಪಂಚ, ಇನ್ನೂ ವಿಶೇಷವಾಗಿ ದೈಹಿಕ ಕಾಮದ ವಿವರಣೆಗಳ ಆಕರ್ಷಣೆ ಹಾಗೆ. ಇದರಲ್ಲಿ ತಪ್ಪೇನೂ ಇಲ್ಲ. ಇದೂ ಸಹ ಮನುಷ್ಯನ ಸಹಜ ಜೀವನದ ಒಂದು ಮುಖವೇ. ಹೀಗಿದ್ದಾಗ ಯಾವುದೋ ಸಂದರ್ಭದಲ್ಲಿ ಬೇರೆ ಸಂಗತಿಗಳು ಗಮನಕ್ಕೆ ಬಂದಾಗ "ಒಹೋ, ಹೀಗೂ ಉಂಟೋ!" ಎಂದು ಆಶ್ಚರ್ಯ ಆಗುತ್ತದೆ. 

*****

ಯಾವುದೇ ಒಂದು ವಿಷಯದ ಮೇಲೆ ಚರ್ಚೆ ನಡೆದಾಗ ಪರಸ್ಪರ ವಿರೋಧ ದಿಕ್ಕಿನ ವಿಚಾರಗಳು ಬರುವುದು ಸಹಜ. ಒಬ್ಬ ವ್ಯಕ್ತಿಯಲ್ಲಿ ಅಥವಾ ಒಂದು ಪದಾರ್ಥದಲ್ಲಿ ಅನೇಕ ಗುಣಗಳಿದ್ದಾಗ ಒಂದು ಅವಗುಣ (ದುರ್ಗುಣ) ಕಂಡರೆ ಅದು ಹೇಗೆ ಧ್ವನಿತವಾಗುತ್ತದೆ ಎನ್ನುವುದಕ್ಕೆ ಕೆಳಗಿನ ಉದಾಹರಣೆ ನೋಡಬಹುದು. 

ಕವಿಕುಲಗುರು ಕಾಳಿದಾಸನು ತನ್ನ "ಕುಮಾರಸಂಭವ" ಮಹಾಕಾವ್ಯದ ಮೊದಲ ಸರ್ಗದ ಮೂರನೆಯ ಪದ್ಯದಲ್ಲಿ ಹೀಗೆ ಹೇಳುತ್ತಾನೆ:

ಅನಂತರತ್ನ ಪ್ರಭವಸ್ಯ ಯಸ್ಯ ಹಿಮಂನ ಸೌಭಾಗ್ಯವಿಲಾಪಿಜಾತಂ 
ಏಕೋಹಿ ದೋಷೋ ಗುಣಸನ್ನಿಪಾತೇ ನಿಮಜ್ಜತೀಂದೋಃ ಕಿರಣೀಶ್ವಿವಾಂಕಃ 

ಹಿಮಾಲಯದಲ್ಲಿ ಬೇಕಾದಷ್ಟು ಶ್ರೇಷ್ಠ ವಸ್ತುಗಳಿವೆ. ಆದ್ದರಿಂದ ಎಲ್ಲೆಡೆಯೂ ಹಿಮವಿದ್ದರೂ ಅದರ ಯೋಗ್ಯತೆ ಕಡಿಮೆಯಾಗಲಿಲ್ಲ. ಚಂದ್ರನ ಕಾಂತಿಯಲ್ಲಿ ಅವನ ಕಳಂಕವು ಮರೆಯಾದಂತೆ ಅನೇಕ ಗುಣಗಳಿಂದ ಒಂದು ದೋಷವೇ ಮರೆಯಾಗುತ್ತದೆ. 

ಇದಕ್ಕೆ ವಿರುದ್ಧವಾಗಿ ಶೃಂಗಾರ ಪ್ರಕಾಶ ಹೀಗೆ ಹೇಳುತ್ತದೆ: 

ಏಕೋಹಿದೋಷೋ ಗುಣಸನ್ನಿಪಾತೇ ನಿಮಜ್ಜತೀಂದೋರಿತಿ ಯೋ ಬಭಾಷೇ 

ತೇನಾಪಿ ನೂನಂ ಕವಿನಾ ನ ದೃಷ್ಟ೦ ದಾರಿದ್ರ್ಯದೋಷ: ಗುಣರಾಶಿನಾಶೀ 

ಅನೇಕ ಗುಣಗಳಿದ್ದಾಗ ಒಂದು ದೋಷವು ಮುಚ್ಚಿಹೋಗುತ್ತದೆ ಎಂದು ಹೇಳಿದ ಕವಿಗೆ, ದಾರಿದ್ರ್ಯ (ಬಡತನ) ಎನ್ನುವ ಒಂದು ದೋಷವೇ ಎಲ್ಲಾ ಗುಣಗಳನ್ನೂ ನುಂಗಿಹಾಕುತ್ತದೆ ಎನ್ನುವುದು ಕಾಣಲಿಲ್ಲ! 

ಹೀಗೆ ಪರಸ್ಪರ ಅಭಿಪ್ರಾಯ ಭೇದವಿರುವುದು ಸರಿಯಾದರೂ ಇಲ್ಲಿ ಒಟ್ಟಾರೆ ಆಗುವ ಪರಿಣಾಮ ಸನ್ಮಾರ್ಗ ಪ್ರೇರಕವೇ ಆಗಿದೆ. ದಾರಿದ್ರ್ಯದ ಭೀಕರತೆ ತೋರಿಸಿದರೂ, ಅದು ಬಡತನವನ್ನು ಅತಿಯಾಗಿ ಗಮನಿಸದೆ ಗುಣಗ್ರಾಹಿಯಾಗಬೇಕೆಂದು ಸೂಚಿಸುತ್ತದೆ. 

*****

ಪರಮಪುರುಷನೊಬ್ಬನೇ ಸಕಲ ದೋಷದೂರನಾದವನು. ಅವನೊಬ್ಬನೇ ಅನಂತ ಕಲ್ಯಾಣಗುಣ ಪರಿಪೂರ್ಣ. ಇದು ಒಂದು ಪ್ರಮೇಯ. ಅನೇಕ ತಾತ್ವಿಕ ನಿಲುವುಗಳು ಇದರ ಮೇಲೆ ನಿಂತಿವೆ. ಆದ್ದರಿಂದ ಪರಮಾತ್ಮನನ್ನು ನೆನೆಯುವುದು ಅಂದರೆ ಅವನ ಅನಂತ ಗುಣಗಳಲ್ಲಿ ನಮಗೆ ಚಿಂತನೆಗೆ ಸಿಲುಕುವ, ನಿಲುಕುವ ಗುಣಗಳ ಚಿಂತನೆಯೇ ಆಗಿದೆ. ಬೇರೆಯ ದೇವತೆಗಳೂ, ಮನುಷ್ಯರೂ ಈ ಅಳತೆಯಲ್ಲಿ ಕಡಿಮೆ ಬೀಳುವುದು ಸಹಜವೇ. ಎಲ್ಲ ದೇವತೆಗಳೂ, ಮನುಷ್ಯರೂ ದೋಷ ದೂರರಾದರೆ, ಸಕಲ ಗುಣಗಳ ಖನಿಗಳಾದರೆ, ಅವರು ಮನುಷ್ಯರಾಗಿಯೋ ಅಥವಾ ದೇವತೆಗಳಾಗಿಯೋ ಉಳಿಯುವುದಿಲ್ಲ. ಅವರೂ ದೇವರೇ ಆಗಿಬಿಡುತ್ತಾರೆ!

ಇಂತಹ ಪರಿಸ್ಥಿತಿಯಲ್ಲಿ ನಮ್ಮ ದೃಷ್ಟಿಕೋನ ಹೇಗಿರಬೇಕು? ನಮ್ಮ ಹಿರಿಯ ಸ್ನೇಹಿತರೊಬ್ಬರು ಸೂಚಿಸಿರುವಂತೆ "ನಾವು ಗುಣಾನ್ವೇಷಣೆಯಲ್ಲಿ ತೊಡಗಬೇಕೇ ಹೊರತು ದೋಷಾನ್ವೇಷಣೆಯಲ್ಲಿ ಅಲ್ಲ". ರಾಮಾಯಣ, ಮಹಾಭಾರತ, ಪುರಾಣಗಳು ಮುಂತಾದುವುಗಳಲ್ಲಿ ಕಂಡು ಬರುವ ದುಷ್ಟ ಪಾತ್ರಗಳನ್ನೇ ವೈಭವೀಕರಿಸಿ, ಅವರನ್ನೇ ನಾಯಕರುಗಳನ್ನಾಗಿ ಮಾಡಿ ರಚಿಸಿರುವ ಸಾಹಿತ್ಯ ಎಲ್ಲ ಭಾಷೆಗಳಲ್ಲಿ ವಿಪುಲವಾಗಿಯೇ ಇವೆ. ಸಾಹಿತ್ಯದ ಮೂಲೋದ್ದೇಶ "ರಸಾಸ್ವಾದನೆ" ಆದುದರಿಂದ ಆ ದೃಷ್ಟಿಯಲ್ಲಿ ಇದು ಅಸಾಧುವೂ ಅಲ್ಲ. ಆದರೆ ಅದು ಅಲ್ಲಿಗೇ ನಿಲ್ಲಬೇಕು. ಅದನ್ನು ಬಿಟ್ಟು ಇಂತಹ ವ್ಯಾಖ್ಯಾನಗಳೇ ಸತ್ಯ ಎಂದು ಜನಜನಿತವಾದರೆ ಮೂಲ ಕೃತಿಗಳ ಮೂಲಭೂತ ಆಶಯಕ್ಕೇ ಕೊಡಲಿಪೆಟ್ಟು ಬೀಳುತ್ತದೆ. 

ಪ್ರಾಚಾರ್ಯ ತಿ. ನಂ. ಶ್ರೀ ಅವರು ತಮ್ಮ "ಭಾರತೀಯ ಕಾವ್ಯ ಮೀಮಾಂಸೆ" ಮೇರು ಕೃತಿಯಲ್ಲಿ ಹೇಳಿರುವಂತೆ "ಓದುವಾಗ ರಸಾಸ್ವಾದವೇ ಮುಖ್ಯವಾದರೂ, ಅದರಿಂದ ಒದಗುವ ಆನಂದವೇ ಪ್ರಿಯವಾದರೂ, ಅಂತ್ಯ ಪ್ರಯೋಜನ ಅದರಿಂದ ಒದಗುವ ಸಂಸ್ಕಾರ". ಇನ್ನೂ ಸ್ವಲ್ಪ ಮುಂದೆ ಅವರು ಸೂಚಿಸುವಂತೆ "ವಾಚಕನ ಮನಸ್ಸು ಸಂಸ್ಕಾರ ಹೊಂದಿ, ಅವನಿಗೆ ಧರ್ಮಾಧರ್ಮಗಳ ಪರಿಜ್ಞಾನ ಒದಗಿ, ಸನ್ಮಾರ್ಗದಲ್ಲಿ ನಡೆಯಬೇಕೆಂಬ ಪ್ರವೃತ್ತಿ ಉಂಟಾಗುವುದೇ ಸಾಹಿತ್ಯದ ಪರಮ ಪ್ರಯೋಜನ. ಇದನ್ನೇ ಸತ್ಪ್ರೇರಣೆ ಅನ್ನುತ್ತಾರೆ". 

ಕೃತಿ ರಚನಾ ಸ್ವಾತಂತ್ರ್ಯ ಎಲ್ಲರಿಗೂ ಉಂಟು. ಆದರೆ ಕಡೆಗೆ "ಕೃತಿಯ ಒಟ್ಟಾರೆ ಪರಿಣಾಮ ಏನಾಗುವುದು?" ಎನ್ನುವುದನ್ನೂ ಗಮನಿಸಬೇಕಾಗುತ್ತದೆ. ಭೀಕರ ಅಪರಾಧಗಳನ್ನು ಮಾಡಿ ನಿಭಾಯಿಸಿಕೊಂಡವರ ಬಗ್ಗೆ ಚಲನಚಿತ್ರಗಳು ಬಂದಿವೆ. ಅವುಗಳನ್ನು ನೋಡಿ ಅದನ್ನೇ ಅನುಕರಿಸಿ ಅಪರಾಧಗಳನ್ನು ಮಾಡಿ ಸಿಕ್ಕಿಹಾಕಿಕೊಂಡವರು ಇಂತಹ ಚಿತ್ರಗಳೇ ಅವರ ಪ್ರೇರಕ ಶಕ್ತಿ ಎಂದು ಹೇಳಿರುವುದು ಗಮನಿಸಬೇಕಾದ ಅಂಶ. ಅಭಿವ್ಯಕ್ತಿ ಸ್ವಾತಂತ್ರ್ಯ, ರಸಾನುಭವ, ಮನರಂಜನೆ, ಜನಪ್ರಿಯತೆ ಇವೆಲ್ಲವೂ ಮುಖ್ಯವಾದರೂ ಸಮಾಜದ ಮೇಲೆ ಆಗುವ ಪೂರ್ಣ ಪರಿಣಾಮವೂ ಅಷ್ಟೇ ಮುಖ್ಯ ಎನ್ನುವುದು ಗಮನಿಸಬೇಕಾದ ಅಂಶ. 

*****

ಚಕ್ರವರ್ತಿ ಯಯಾತಿ ವಿಷಯದಲ್ಲಿ ಗಮನಿಸುವುದಾದರೆ, ಅವನನ್ನು ಕೇಂದ್ರೀಕರಿಸಿ ಮರಾಠಿ ಭಾಷೆಯ ಶ್ರೇಷ್ಠ ಲೇಖಕರಲ್ಲಿ ಒಬ್ಬರಾದ ಶ್ರೀ ವಿಷ್ಣು ಸಖಾರಾಮ ಖಾಂಡೇಕರ್ ಅವರು 1959 ರಲ್ಲಿ ಮರಾಠಿಯಲ್ಲಿ "ಯಯಾತಿ" ಏನುವ ಹೆಸರಿನ ಕಾದಂಬರಿ ಹೊರತಂದರು. ಅವರಿಗೆ ಈ ಕಾದಂಬರಿ ಬಹಳ ಕೀರ್ತಿ ತಂದಿತು. 1974 ವರ್ಷದ "ಜ್ಞಾನಪೀಠ" ಪ್ರಶಸ್ತಿಯೂ ಅವರಿಗೆ ಈ ಪುಸ್ತಕಕ್ಕಾಗಿ ಸಿಕ್ಕಿತು. 

ಎರಡು ವರ್ಷಗಳ ನಂತರ, 1961 ರಲ್ಲಿ ಕನ್ನಡದಲ್ಲಿ "ಯಯಾತಿ" ನಾಟಕ ರೂಪದಲ್ಲಿ ಶ್ರೀ ಗಿರೀಶ್ ಕಾರ್ನಾಡ್ ಅವರಿಂದ ಹೊರಬಂತು. ಈ ಕೃತಿ ರಚಿಸಿದಾಗ ಅವರಿಗೆ ಕೇವಲ 23 ವರ್ಷ ವಯಸ್ಸು. ಆ ಚಿಕ್ಕ ವಯಸ್ಸಿನಲ್ಲೇ ಇಂತಹ ಪ್ರಖರ ಕೃತಿ ಹೊರತಂದಿದ್ದು ಅವರ ಅಪಾರ ಪ್ರತಿಭೆಗೆ ಸಾಕ್ಷಿ. ಮುಂದೆ ಅವರು ಮಾಡಿದ ಒಟ್ಟಾರೆ ಸಾಹಿತ್ಯ ಸೇವೆಗೆ ಅವರಿಗೆ 1998 ರಲ್ಲಿ "ಜ್ಞಾನಪೀಠ" ಪ್ರಶಸ್ತಿ ಸಿಕ್ಕಿತು. 

ಮಹಾಭಾರತ ಮತ್ತು ಪುರಾಣಗಳಲ್ಲಿ ಸಿಗುವ ಯಯಾತಿಯ ಪೂರ್ತಿ ವಿವರಗಳನ್ನು ಗಮನಿಸಿದಾಗ ಅವನು ತನ್ನ ಮಗನಿಂದ ಯೌವನ ಪಡೆದುದು ಒಂದು ಆಕಸ್ಮಿಕ. ದೇವಯಾನಿಯ ದೂರಿನ ಕಾರಣವಾಗಿ ದೈತ್ಯಗುರು ಶುಕ್ರಾಚಾರ್ಯರಿಗೆ ಬಂದ ಕೋಪದ ಫಲಶ್ರುತಿಯಾಗಿ ಅವರು ಯಯಾತಿಗೆ "ಅಕಾಲ ವೃದ್ಧಾಪ್ಯ ಬರಲಿ" ಎಂದು ಶಾಪ ಕೊಟ್ಟರು. ಹೀಗೆ ಶಾಪ ಬಂದಾಗ ಅವನು ಅವರಲ್ಲಿ ಕ್ಷಮೆ ಬೇಡಿ ವಿಶಾಪ ಕೋರಿದಾಗ ಅವರು ತೋರಿಸಿದ ದಾರಿ ಯಾವುದು? "ನಿನ್ನ ಮಕ್ಕಳಲ್ಲಿ ಯಾರಾದರೂ ನಿನ್ನ ವೃದ್ಧಾಪ್ಯ ತೆಗೆದುಕೊಂಡು ಅವನ ಯೌವನ ನಿನಗೆ ಕೊಟ್ಟರೆ ತೆಗೆದುಕೋ" ಎಂದರು! ಅವನು ಆ ದಾರಿಯಲ್ಲಿ ಹೋದ. ತಾನಾಗಿ ಅದನ್ನು ಕೇಳಿದವನಲ್ಲ. ಮುಂದೆ ಒಂದು ಸಾವಿರ ವರುಷ ಮಗನ ಯುವತನ ಪಡೆದಿದ್ದನಂತೆ. ಕಡೆಗೆ ಏನು ಮಾಡಿದರೂ, ಎಷ್ಟು ಭೋಗ ಸವಿದರೂ, ತೃಪ್ತಿಯಾಗುವುದಿಲ್ಲ ಎಂದು ತಿಳಿಯಿತು. ಆಗ ತಕ್ಷಣ ಅದೇ ಮಗನಿಗೆ ಯೌವನ ಹಿಂದಿರುಗಿಸಿ ವಾನಪ್ರಸ್ಥಕ್ಕೆ ಹೊರಟ. ಈ ಘಟನೆ ಅವನ ಜೀವನದಲ್ಲಿ ನಡೆದ ಒಂದು ದುರ್ದೈವದ ನಡೆ. 

ಮಗನ ಯೌವನ ಪಡೆದ ಅವನನ್ನು ನೋಡುವ ಎರಡು ದೃಷ್ಟಿ ಕೋಣಗಳು ಇವೆ. ಒಂದರಲ್ಲಿ ಗಂಡ ತನ್ನ ಬಳಿ ಬಂದಾಗ ಅವನ ಹೆಂಡತಿ "ನನ್ನ ಹತ್ತಿರ ಬರಬೇಡ. ನಿನ್ನಲ್ಲಿ ನನ್ನ ಮಗ ಕಾಣಿಸುತ್ತಾನೆ" ಎಂದು ಹೇಳುವುದು. ಇನ್ನೊಂದರಲ್ಲಿ ಅವನ ಸೊಸೆ ಅವನ ಬಳಿ ಬಂದು "ಈಗ ನೀನೇ ನನ್ನ ಗಂಡ" ಅನ್ನುವುದು. ಒಂದು ಆ ವಯಸ್ಸಿಗೆ ತಕ್ಕ ಉದಾತ್ತತೆ. ಇನ್ನೊಂದು ಈ ವಯಸ್ಸಿಗೆ ತಕ್ಕ ಅವಶ್ಯಕತೆ. ಯಾವುದು ಸರಿ ಎಂದು ಹೇಳುವಂತಿಲ್ಲ. ಅದರ ಜಾಗದಲ್ಲಿ ಅದು ಸರಿ. ಇದರ ಜಾಗದಲ್ಲಿ ಇದು ಸರಿ. 

*****

ಯಯಾತಿಯ ತಂದೆ ನಹುಷ ಚಕ್ರವರ್ತಿಯ ಮಹಾಭಾರತ, ಪುರಾಣಗಳ ಚಿತ್ರಣದ ದೋಷವೊಂದನ್ನು ಪರಿಹರಿಸಿ ದೇವುಡು ನರಸಿಂಹ ಶಾಸ್ತ್ರಿಗಳು "ಮಹಾಕ್ಷತ್ರಿಯ" ಎನ್ನುವ ದಿವ್ಯ ಪೌರಾಣಿಕ ಕಾದಂಬರಿ ಕೊಟ್ಟರು. ದುಷ್ಯಂತನ ಒಂದು ದೋಷವನ್ನು ಒಂದು ಉಂಗುರದ ಪ್ರಭಾವವನ್ನು ತಂದು ಪರಿಹರಿಸಿ ಮಹಾಕವಿ ಕಾಳಿದಾಸನು "ಅಭಿಜ್ಞಾನ ಶಾಕುಂತಲ" ನಾಟಕವನ್ನು ಕೊಟ್ಟ. 

ಅಭಿವ್ಯಕ್ತಿ ಸ್ವಾತಂತ್ರ್ಯ, ಕೃತಿ ರಚಿಸುವವನ ಪ್ರತಿಭೆ, ಸಮಾಜದಲ್ಲಿ ಇರುವ ಸಂಬಂಧಗಳು ಮತ್ತು ಮೌಲ್ಯಗಳ ಹಿನ್ನೆಲೆಯಲ್ಲಿ ಆಯಾ ಕೃತಿಗಳ ವಿಮರ್ಶೆ ಮಾಡಬೇಕಲ್ಲದೆ, ಯಯಾತಿಯ ಬಗ್ಗೆ ನಮ್ಮ ಒಟ್ಟಾರೆ ಅಭಿಪ್ರಾಯ ರೂಪಿಸುವ ತುಲನೆ ಮಾಡುವಾಗ ಅವನ ವ್ಯಕ್ತಿತ್ವದ ಒಂದು ಕಪ್ಪು ಚುಕ್ಕೆಯನ್ನೇ ಗಮನಿಸಿ ಮಿಕ್ಕ ವಿಶಾಲ ಶುಭ್ರ ಶ್ವೇತ ಗುಣಗಳನ್ನು ಮರೆಯಬಾರದೆಂಬುದೇ ಇಷ್ಟೆಲ್ಲಾ ಚರ್ಚೆಯ ಆಶಯ. ಹಾಗೆ ಮಾಡಿದರೆ ಅದು ಕಳಂಕವಿದೆ ಎಂದು ಚಂದ್ರನನ್ನೇ ಪಕ್ಕಕ್ಕೆ ತಳ್ಳಿದ ಹಾಗೆ. 

1 comment:

  1. Although I have no knowledge about these things, I agree completely with your explanation.
    Same story written by others is subjected to the way they like to interpret. UR……..

    ReplyDelete