Showing posts with label Trust. Show all posts
Showing posts with label Trust. Show all posts

Thursday, May 28, 2026

ಅನುಕೂಲ ದಾಂಪತ್ಯ


ಯಾವುದೋ ಕುಟುಂಬದ ಒಂದು ಹುಡುಗ. ಮತ್ಯಾವುದೋ ಕುಟುಂಬದ ಒಂದು ಹುಡುಗಿ. ತಂದೆ-ತಾಯಿಯರೋ, ಮತ್ಯಾರೋ ಹಿರಿಯರೋ ಗೊತ್ತು ಮಾಡಿ ನಡೆದ ವಿವಾಹ. ಹೀಗೆ ನಡೆಯುತ್ತಿದ್ದ ಸಮಾಜ. ಅಲ್ಲೊಂದು-ಇಲ್ಲೊಂದು ವಿಷಮ ವಿವಾಹಗಳು. ಹೆಚ್ಚಿನವು ಬಹಳ ಕಾಲ ನಿಂತ ದಾಂಪತ್ಯಗಳು. ಕಾಲ ಮುಂದುವರೆದಂತೆ ಹುಡುಗ-ಹುಡುಗಿ ತಾವೇ ತಮ್ಮ ಇಚ್ಛೆಯಿಂದ ಆದ ವಿವಾಹಗಳು. ಇವೂ ಬಹಳ ಕಾಲ ನಿಲ್ಲುತ್ತಿದ್ದುದೇ ಹೆಚ್ಚು.

ವಿವಾಹದ ಐವತ್ತು ವರ್ಷದ, ಅರವತ್ತು ವರ್ಷದ ವಾರ್ಷಿಕೋತ್ಸವಗಳು ಸಾಮಾನ್ಯವಾಗಿದ್ದವು. ಚಿಕ್ಕ ವಯಸ್ಸಿನಲ್ಲಿ ಮದುವೆಗಳು ನಡೆಯುತ್ತಿದ್ದುದರಿಂದ ಇವು ಸಾಧ್ಯವಾಗಿದ್ದವು. ಮೊಮ್ಮಕ್ಕಳ ಜೊತೆಗೆ ಮರಿಮಗ ಹುಟ್ಟಿದ ಸಮಯದಲ್ಲಿ "ಪ್ರಪೌತ್ರ ದರ್ಶನ ಶಾಂತಿ" ಎಂದು ಕನಕಾಭಿಷೇಕ ಸಹ ನಡೆಯುತ್ತಿತ್ತು. ನಂತರ ಇಪ್ಪತ್ತೈದು ವರ್ಷದ "ರಜತೋತ್ಸವ" ನಡೆಯುವುದೇ ದೊಡ್ಡದಾಯಿತು. 

ದಶಕಗಳು ಕಳೆದಂತೆ ವಿಚ್ಛೇದನಗಳು ಹುಟ್ಟಿದವು. ವಿಚ್ಛೇದನಗಳು ಸುಲಭವಾಗುತ್ತಿದ್ದಂತೆ ಪುನರ್ವಿವಾಹಗಳು ಹುಟ್ಟಿಬಂದವು. ಅದರ ಮುಂದಿನ ಹಂತದಲ್ಲಿ ವಿವಾಹಗಳೇ ಇಲ್ಲದೆ ನಡೆಯುತ್ತಿರುವ "ಅನುಕೂಲ ಸಿಂಧು ದಾಂಪತ್ಯಗಳು" ಅನ್ನಬಹುದಾದ ಜೊತೆ-ಜೀವನ ನಡೆಸುವ ಕಾಲ ಬಂದು ನಿಂತಿದೆ. ದಿನಂಪ್ರತಿ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಇಂತಹ ಸಂಬಂಧಗಳು ಕೋರ್ಟಿನ ಮೆಟ್ಟಲುಗಳನ್ನು ಹತ್ತಿರುವ ಸುದ್ದಿಗಳು ಉಂಟು. ಯಾವುದೋ ಯುವಕ ಅಥವಾ ಮತ್ಯಾವುದೋ ಯುವತಿ ತುಂಡು-ತುಂಡಾಗಿ ಪೆಟ್ಟಿಗೆಗಳಲ್ಲಿ ಸಿಕ್ಕುತ್ತಿರುವುದೂ ಹೌದು. ಮೊದಮೊದಲು ಇಂತಹ ಪ್ರಕರಣಗಳು ಭೀತಿ ಹುಟ್ಟಿಸುತ್ತಿದ್ದವು. ಈಗ ಅಷ್ಟು ಭಯಾನಕ ಅನ್ನಿಸದು. ರೋಚಕ ಅನಿಸುವುದೂ ಇಲ್ಲವಾಗಿದೆ. 

ಬಹಳಕಾಲ ಗಂಡ-ಹೆಂಡತಿ ಜೊತೆಯಲ್ಲಿ ಬದುಕಿ, ಇಬ್ಬರ ನಡುವೆ ಒಂದೇ ರೀತಿಯ, ಜೊತೆಯಲ್ಲಿ ಹೆಜ್ಜೆ ಹಾಕುವ ತಾಳ-ಮೇಳ ಏರ್ಪಡುತ್ತಿತ್ತು. ಬಾಯಿಬಿಟ್ಟು ಮಾತುಗಳಲ್ಲಿ ಹೇಳದೆ ಇದ್ದರೂ ಇಬ್ಬರ ನಡುವೆ ಒಂದು ರೀತಿಯ ಸದಾಕಾಲ ನಡೆಯುವ ಸಂವಾದ ಇರುತ್ತಿತ್ತು. "ಇಂಗಿತ" ಅನ್ನುವ ಪದಕ್ಕೆ ಬಹಳ ಬೆಲೆ ಇತ್ತು. "ಮನದ ಇಂಗಿತ ಅರಿಯಬೇಕು" ಅನ್ನುತ್ತಿದ್ದರು. ಇಲ್ಲಿ ಶಬ್ದಪೂರ್ವಕ ಹುಟ್ಟಿದ ಮಾತಿನ ಸಂಭಾಷಣೆ ಇಲ್ಲ. ಮನಸ್ಸು ಮನಸ್ಸನ್ನು ಅರಿವ, ಮೌನದ, ಏನೋ ಒಂದು ಸನ್ನೆಯ, ಅಥವಾ ಏನೂ ಇಲ್ಲದ ಕೇವಲ ಒಂದು ನೋಟದ ಮೂಲಕ ವಿಚಾರ ವಿನಿಮಯ. ಹೀಗೆ ಹುಟ್ಟಿದ "ಇಂಗಿತಜ್ಞತೆ" ಅಂದರೆ ಅದಕ್ಕೆ ಬಹಳ ಬೆಲೆ. 

*****

ಲೇಖನಿಯಿಂದ ಕಾಗದದ ಮೇಲೆ ಬರೆದ "ಕ್ರಯ ಪತ್ರ" ಅನ್ನುವ ದಾಖಲೆಗಿಂತ ಕೊಟ್ಟ ಮಾತು ಹೆಚ್ಚಿನದು ಎಂದು ಜನ ನಂಬಿದ ಕಾಲ. ಆ ಹಳ್ಳಿಯಲ್ಲಿ ಸುಡು ಬಿಸಿಲಿನ ಬೇಗೆ. ತಡೆಯಲಾಗದ ಧಗೆ. ವಾಸವಿರುವ ಜನ ಬೇರೆ ವಿಧಿ ಇಲ್ಲದೆ ಬಾಳುತ್ತಿದ್ದಾರೆ. ತಾಪ ತಡೆಯಲು ಸಾಧ್ಯವಿಲ್ಲದಿದ್ದರೂ ಜೀವನ ನಡೆಯುತ್ತಿದೆ. 

"ತಾಲ್ಲೂಕಿನ ಧಣಿ" ಎಂದು ಕರೆಸಿಕೊಳ್ಳುವ ಅಮಲ್ದಾರರು ನಾಳೆ ಆ ಹಳ್ಳಿಯ ದಾರಿಯಲ್ಲಿಯೇ ಹಾದು ಮುಂದಿನ ಊರಿಗೆ ಹೋಗಬೇಕು. ಈ ಸಂಗತಿ ಊರಿನ ಹಿರಿಯರಲ್ಲಿ ಒಬ್ಬನಾದ ನರಹರಿಗೆ ತಿಳಿಯಿತು. ಬರುವ ಅಧಿಕಾರಿಗೆ ಯೋಗ್ಯ ಸ್ವಾಗತ-ಆತಿಥ್ಯ ಕೊಡಲು ಮುಂದಾಳಾಗಲು ಊರಿನ ದೊಡ್ಡ ಕುಳವಾದ ತನ್ನ ಸ್ನೇಹಿತ ಶಿವನಂಜೇಗೌಡ ಸರಿಯಾದವನು ಎಂದು ನರಹರಿ ಅಭಿಪ್ರಾಯ. ಇವರಿಬ್ಬರ ನೇತೃತ್ವದಲ್ಲಿ ಹಳ್ಳಿಯ ಜನ ಮಾರನೆಯ ದಿನ ಅವರ ಬರವನ್ನು ಕಾಯುತ್ತಾರೆ.

ಮಧ್ಯಾನ್ಹದ ಉರಿಬಿಸಿಲಿನಲ್ಲಿ ಅಮಲ್ದಾರ್ ಕುದುರೆಯ ಮೇಲೆ ಕುಳಿತು ಬಂದರು. ಸ್ವಾಗತವಾಯಿತು. "ಇದೆಂತಹ ಊರು? ಈ ಬಿಸಿಲಿನಲ್ಲಿ ಹೇಗೆ ಬದುಕಿದ್ದೀರಿ?" ಎಂದು ಬಸವಳಿದ ಅಮಲ್ದಾರ್ ಬೇಸರ ವ್ಯಕ್ತಪಡಿಸುತ್ತಾರೆ. "ಏನು ಮಾಡುವುದು ಸ್ವಾಮಿ. ಹಿರಿಯರು ಮಾಡಿದ ಊರು. ಹೇಗೋ ಬಾಳುತ್ತಿದ್ದೇವೆ. ಹಾಲು-ಸಕ್ಕರೆ ಇಡಿಸಿದ್ದೇನೆ. ತೆಗೆದುಕೊಂಡು ಹೊಟ್ಟೆ ತಂಪು ಮಾಡಿಕೊಳ್ಳಿ" ಅನ್ನುತ್ತಾನೆ ಶಿವನಂಜೇಗೌಡ. 

"ಹಾಲು-ಸಕ್ಕರೆ ಬೇಡ. ಎರಡು ಎಳನೀರು ತರಿಸಿ" ಅನ್ನುತ್ತಾರೆ ಅಮಲ್ದಾರ್. "ಸುತ್ತ-ಮುತ್ತ ಎಲ್ಲ ಹುಡುಕಿಸಿದೆವು. ಎಲ್ಲೂ ತೆಂಗಿನ ಮರಗಳಿಲ್ಲ. ಮಜ್ಜಿಗೆ ತರಿಸಲೇ?" ಎಂದು ಕೇಳುತ್ತಾನೆ ನರಹರಿಯಪ್ಪ. 

"ಎಳನೀರು ಇಲ್ಲದ ಮೇಲೆ ಇನ್ನೇನು. ತೆಂಗಿನ ಮರ ಇಲ್ಲದ ಊರೂ ಒಂದು ಊರೇ? ಅದು ಊರಲ್ಲ. ಒಂದು ಸ್ಮಶಾನವೇ ಸರಿ. ಹೋಗಲಿ ಬಿಡಿ. ಮಜ್ಜಿಗೆಯೊ, ಕಲಗಚ್ಚೋ, ಯಾವುದೋ ಒಂದು ತರಿಸಿ" ಅನ್ನುತ್ತಾರೆ, ಕೋಪದಿಂದ ಅಮಲ್ದಾರ್. 
*****

ಜಮಾಬಂದಿಯ ಕೆಲಸ ಮುಗಿದು ಅಮಲ್ದಾರರು ತಮ್ಮ ಹಾದಿ ಹಿಡಿದು ಹೊರಟುಹೋದರು. ಶಿವನಂಜೇಗೌಡನಿಗೆ ತೆಂಗಿನ ಮರ ಇಲ್ಲದ ಕಾರಣ ಅಮಲ್ದಾರರು ತನ್ನ ಊರು ಒಂದು ಸುಡುಗಾಡು ಎಂದುಬಿಟ್ಟರಲ್ಲ ಅನ್ನುವ ನೋವು. ಪೆಚ್ಚಾಗಿ ಹಿಂದಿರುಗುತ್ತಿದ್ದಾಗ ನರಹರಿ ಅವನ ಚಿಂತೆಗೆ ಕಾರಣ ವಿಚಾರಿಸುತ್ತಾನೆ. "ಹೋಗಲಿ ಬಿಡು, ಶಿವನಂಜು. ಅವರು ಹಾಗೆ ಅಂದಮಾತ್ರಕ್ಕೇ ನಮ್ಮ ಊರು ಸುಡುಗಾಡಾಯಿತೇ?" ಅನ್ನುತ್ತಾನೆ ನರಹರಿ.

ಶಿವನಂಜೇಗೌಡನಿಗೆ ತನ್ನ ಊರಿನಲ್ಲಿ ಒಂದು ತೆಂಗಿನ ತೋಟ ಮಾಡಲೇಬೇಕೆಂಬ ಹಠ ಬಂದಿದೆ. "ಇಲ್ಲ, ನರಹರಿಯಪ್ಪ. ಒಂದು ತೆಂಗಿನ ತೋಟ ಮಾಡಲೇ ಬೇಕು. ಇಲ್ಲದಿದ್ದರೆ ನಾನು ನನ್ನ ಅಪ್ಪನ ಮಗನೇ ಅಲ್ಲ. ಊರಿನ ಮರ್ಯಾದೆ ಪ್ರಶ್ನೆ" ಎಂದು ಬಿಗಿಹಿಡಿದು ಕೂಡುತ್ತಾನೆ. "ಅದು ಸುಲಭದ ಮಾತಲ್ಲ. ತೋಟ ಮಾಡಲು ನೆಲ ಸರಿಯಿದೆಯೇ ಎಂದು ತಿಳಿಯಬೇಕು. ತೋಟ ನಿನಗೆ ಆಗಿ ಬರುತ್ತದೆಯೇ ಎಂದು ಕೇಳಿ ತಿಳಿದುಕೊಳ್ಳಬೇಕು" ಎಂದು ಹೇಳಿ ನರಹರಿ ಅವನ ಮನಸ್ಸು ಬದಲಿಸಲು ನೋಡುತ್ತಾನೆ. 

"ಮಣ್ಣು ಸರಿ ಇಲ್ಲ ಅಂದರೆ ನೂರು ಮೈಲಿ ದೂರದಿಂದಲಾದರೂ ಬೇಕಾದ ಮಣ್ಣು ತರಿಸುತ್ತೇನೆ. ಜ್ಯೋತಿಷ್ಯಕ್ಕೆ ನೀನೇ ಇದ್ದೀಯಲ್ಲ. ನೋಡಿ ಹೇಳು" ಅನ್ನುತ್ತಾನೆ ಶಿವನಂಜು. "ಇಂತಹ ವಿಷಯಕ್ಕೆ ನನ್ನ ಪುಡಿ ಜ್ಯೋತಿಷ್ಯ ಸಾಲುವುದಿಲ್ಲ. ಇಂತಹದಕ್ಕೆ ಕುರಿತೇಟಿನಂತೆ ಹೇಳಲು ತಾವರೆಕೆರೆ ವೆಂಕಟರಮಣ ಜೋಯಿಸರೇ ಸರಿ" ಅನ್ನುತ್ತಾನೆ ನರಹರಿ, ಹೀಗಾದರೂ ವಿಷಯ ಮುಂದೆ ಹೋಗಲಿ ಅನ್ನುವ ಬಯಕೆಯಿಂದ.  

ಶಿವನಂಜೇಗೌಡ ಸುಮ್ಮನೆ ಕೂಡುವವನಲ್ಲ. ತಾವರೆಕೆರೆ ಜೋಯೀಸರನ್ನೇ ಕರೆಸಿಬಿಡುತ್ತಾನೆ. ಅವರು ಎಲ್ಲಾ ಲೆಕ್ಕಹಾಕಿ ನೋಡುತ್ತಾರೆ. "ಶಿವನಂಜೇಗೌಡ, ನಿನಗೆ ತೋಟ ಮಾಡೋ ಯೋಗ ಏನೋ ಇದೆ. ಆದರೆ ಅದರಿಂದ ಸುಖ ಪಡೋ ಯೋಗ ಇಲ್ಲ" ಅಂದುಬಿಡುತ್ತಾರೆ. ಬೇರೆ ಉಪಾಯ ಕೇಳುತ್ತಾನೆ. "ಯಾರ ಹೆಸರಿಗೆ ಆಗಿ ಬರುತ್ತೋ ಅವರ ಹೆಸರಿನಲ್ಲಿ ಮಾಡಬಹುದು" ಅನ್ನುತ್ತಾರೆ ಜೋಯಿಸರು. ಶಿವನಂಜು ಇದಕ್ಕೂ ತಯಾರು. ಅಂತಹವರಿಗೆ ತನ್ನ ಭೂಮಿ ದಾನ ಕೊಡಲೂ ಸಿದ್ಧ. ಅವನ ಕುಟುಂಬದ ಹಿತ ದೃಷ್ಟಿಯಿಂದ ಈ ಹುಚ್ಚಾಟ ತಪ್ಪಿಸಲು ನರಹರಿ "ನಿನ್ನ ಹೆಂಡತಿ, ಮಕ್ಕಳನ್ನು ಕೇಳಿ ಮಾಡು" ಎನ್ನುತ್ತಾನೆ. 

"ಆಯಿತು. ನನ್ನ ಮಕ್ಕಳು ಇನ್ನೂ ಚಿಕ್ಕವರು. ಇನ್ನು ನನ್ನ ಹೆಂಡತಿ. ಅವಳನ್ನು ಈಗಲೇ ಕರೆತರುತ್ತೇನೆ" ಎಂದು ಶಿವನಂಜೇಗೌಡ ಹೊರಡುತ್ತಾನೆ. "ನೀನು ಹೋಗಬೇಡ. ಅವಳನ್ನು ಹೆದರಿಸಿ-ಬೆದರಿಸಿ ಕರೆದುಕೊಂಡು ಬರುವುದು ನನಗೆ ಗೊತ್ತು. ನೀನು ಇಲ್ಲೇ ಕೂಡು. ನಾನು ಕರೆಸುತ್ತೇನೆ" ಅನ್ನುತ್ತಾನೆ ನರಹರಿ. ತನ್ನ ಹೆಂಡತಿ ಪಾರ್ವತಿಯನ್ನು ಕಳಿಸಿ ಶಿವನಂಜನ ಹೆಂಡತಿ ಪುಟ್ಟತಾಯಮ್ಮ ಬರುವಂತೆ ಕರೆ ಕಳಿಸುತ್ತಾನೆ.
*****

ಪುಟ್ಟತಾಯಿ ಬಂದಳು. ನರಹರಿ ಮತ್ತು ಪುಟ್ಟತಾಯಿ ಒಂದು ತಾಯಿ ಮಕ್ಕಳಲ್ಲದಿದ್ದರೂ ಅಣ್ಣ-ತಂಗಿ ರೀತಿಯ ಬಾಂಧವ್ಯ. ಉಪಾಯವಾಗಿ ಅವಳನ್ನು ಕರೆದು ನರಹರಿ "ನೋಡು, ಪುಟ್ಟತಾಯಿ, ನಿನ್ನ ಗಂಡ ನಿಮ್ಮ ಭೂಮಿ ಯಾರಿಗೋ ದಾನ ಕೊಟ್ಟು ನೀನು, ನಿನ್ನ ಮಕ್ಕಳ ತಲೆ ಮೇಲೆ ಕಲ್ಲು ಚಪ್ಪಡಿ ಎಳೆದುಬಿಡುತ್ತಾನೆ. ನೀನು ಒಪ್ಪಬೇಡ. ಇದನ್ನು ತಪ್ಪಿಸಿದರೆ ನಿನಗೂ ನಿನ್ನ ಮಕ್ಕಳಿಗೂ ಒಳ್ಳೆಯದು" ಎಂದು ತಿಳಿ ಹೇಳುತ್ತಾನೆ. "ಹೌದಾ ನರಹರಿಯಣ್ಣ? ನೋಡು ನೀನು ಹೀಗೆ ತಿಳಿ ಹೇಳಿದ್ದು ಬಹಳ ಒಳ್ಳೆಯದಾಯಿತು. ನನಗೆ, ನನ್ನ ಮಕ್ಕಳಿಗೆ ಅನ್ಯಾಯ ಆಗಲು ನಾನು ಬಿಡುವುದಿಲ್ಲ" ಎಂದು ಖಚಿತವಾಗಿ ಹೇಳುತ್ತಾಳೆ. ಕಂಟಕ ತಪ್ಪಿತು ಎಂದು ನರಹರಿಗೆ ಬಲು ಸಂತೋಷ. 

ಜೋಯಿಸರ ಮುಂದೆ ಬಂದು ನಿಂತಾಗ ನರಹರಿ ಮತ್ತೊಮ್ಮೆ "ಪುಟ್ಟತಾಯಿ, ಇದು ನಿನ್ನ ಮತ್ತು ನಿನ್ನ ಮಕ್ಕಳ ಭವಿಷ್ಯದ ಪ್ರಶ್ನೆ. ಏನೂ ಹೆದರಬೇಡ. ನಿನಗೆ ಏನು ಅನ್ನಿಸುತ್ತೋ ಅದನ್ನು ಧೈರ್ಯವಾಗಿ ಹೇಳು" ಎಂದು ಪುಸಲಾಯಿಸುತ್ತಾನೆ. ಧೈರ್ಯ ಕೊಡುತ್ತಾನೆ. 

"ನೀವು ದೊಡ್ಡವರು ಇದ್ದೀರಿ. ಇದು ನನ್ನ, ನನ್ನ ಮಕ್ಕಳ ಮುಂದಿನ ಜೀವನದ ಪ್ರಶ್ನೆ. ಇವರು ನನಗೂ, ನನ್ನ ಮಕ್ಕಳಿಗೂ ಯಜಮಾನರು. ಅವರು ಮಾಡಬೇಕೆನ್ನುವ ಕೆಲಸಕ್ಕೆ ನಾನು ಅಡ್ಡ ಬರಲೇ? ಅವರು ಏನು ಮಾಡಿದರೂ ಅದು ನಮ್ಮ ಒಳ್ಳೆಯದಕ್ಕೇ. ಅವರು ಹೇಳಿದಂತೆ ಮಾಡಿ" ಅಂದುಬಿಡುತ್ತಾಳೆ. ಅಷ್ಟೇ ಅಲ್ಲ. ಭೂಮಿಯನ್ನು ನರಹರಿಗೇ ದಾನ ಕೊಡಿಸಿ ತೋಟ ಮಾಡಲು ಕಾರಣಳಾಗುತ್ತಾಳೆ.
*****

ಇದು ಅರವತ್ತು ವರುಷಗಳ ಹಿಂದೆ ತೆರೆ ಕಂಡ ಕನ್ನಡ ಚಲನಚಿತ್ರ "ಚಂದವಳ್ಳಿಯ ತೋಟ" ಪ್ರಾರಂಭವಾಗುವ ದೃಶ್ಯಗಳು. ಆರು ದಶಕಗಳು ಕಳೆದಿವೆ. ಈಗ ಸಮಾಜವೂ ಬದಲಾಗಿದೆ. ಗಂಡನನ್ನು "ಯಜಮಾನ" ಎಂದು ಒಪ್ಪಿಕೊಳ್ಳುವ ಹೆಣ್ಣುಮಕ್ಕಳು ಕಾಣಸಿಗರು. ಹೆಂಡತಿಯನ್ನು "ನಮ್ಮ ಯಜಮಾನಿ" ಅನ್ನುವ ಗಂಡಂದಿರೂ ಇಲ್ಲ. ಇದು ಸಮಾನತೆಯ ಯುಗ. ಅದರಲ್ಲಿ ತಪ್ಪೇನೂ ಇಲ್ಲ. 

ಎಷ್ಟೇ ಬದಲಾವಣೆಗಳು ಆಗಿದ್ದರೂ ಸಾಮರಸ್ಯ ಇರುವ ಕುಟುಂಬಗಳಲ್ಲಿ ಈ ರೀತಿಯ ಬಾಂಧವ್ಯ ಈಗಲೂ ಕಂಡುಬರುತ್ತದೆ. ಹೊರಗಡೆಯ ಜನರಿಗೆ ಅನೇಕ ವೇಳೆ ಈ ದಂಪತಿಗಳು ಜಗಳ ಕಾಯುತ್ತಲೇ ಇರುತ್ತಾರೆ ಅನ್ನಿಸಿದರೂ, ಒಳಗೊಳಗೇ ಪರಸ್ಪರ ಸರಿಯಾದ ತಿಳುವಳಿಕೆ ಇರುತ್ತದೆ. ಒಬ್ಬರು ಮಾಡಿದ ನಿರ್ಣಯಗಳನ್ನು ಇನ್ನೊಬ್ಬರು ಅನುಮೋದಿಸುತ್ತಾರೆ. "ಹಾಗೆ ಹೇಳಿದ್ದಾರೆ ಅಂದರೆ ಅದಕ್ಕೆ ಏನೋ ಕಾರಣ ಇರುತ್ತದೆ. ಅದು ಸರಿಯೇ ಇರುತ್ತದೆ" ಅನ್ನುವ ನಂಬಿಕೆಯಲ್ಲಿ ಜೀವನ ನಡೆಯುತ್ತದೆ. ಇಷ್ಟರ ಮೇಲೆ ಏನೋ ತಪ್ಪಾಯಿತು ಅನ್ನಿ. "ಏನು ಮಾಡುವುದು? ನಾನೇ ಹಾಗೆ ಮಾಡಬಹುದಿತ್ತು. ಹೋಗಲಿ. ಅಲ್ಲಿಗೇ ಬಿಡೋಣ" ಅನ್ನುವ ತಾಳ್ಮೆಯಿಂದ ಪರಿಹರಿಸಿಕೊಳ್ಳುತ್ತಾರೆ. ಅತಿರೇಕಕ್ಕೆ ಹೋಗುವುದಿಲ್ಲ. 

ದಾಂಪತ್ಯದ ಸಂದರ್ಭದಲ್ಲಿ "ಅನುರೂಪ ದಾಂಪತ್ಯ" ಅನ್ನುವ ಶಬ್ದಗಳನ್ನು ಕೇಳುತ್ತಿರುತ್ತೇವೆ. ಇದು ಹೊರಗಡೆಯ ಜನ ನೋಡುವುದಕ್ಕೆ ಅನ್ವಯಿಸುವಂತಹುದು. ಜೋಡಿ ಚೆನ್ನಾಗಿದೆ. ಹೇಳಿ ಮಾಡಿಸಿದಹಾಗಿದೆ. ನೋಡಲು ಸೊಗಸು. ಹೀಗೆ ತಿಳಿಯಬಹುದು. ಇದರಲ್ಲಿ ಜೀವನಕ್ರಮದ ವಿಶೇಷವೇನೂ ಇಲ್ಲ. ಕೆಲವು ವರುಷಗಳ ನಂತರ, ರೂಪ-ಲಕ್ಷಣ ಮಾಸಿದ ನಂತರ ಅನುರೂಪ ಅಪರೂಪವೇ ಆಗಬಹುದು. 

"ಅನುಕೂಲ ದಾಂಪತ್ಯ" ಹಾಗಲ್ಲ. ಒಂದು ವಸ್ತ್ರವನ್ನು ಕಂಡಾಗ ಅದು ನಮಗೆ ಒಂದಾಗಿ ಕಾಣುತ್ತದೆ. ಅದರಲ್ಲಿ ಹಾಸು-ಹೊಕ್ಕು ಆಗಿ ಅನೇಕ ದಾರಗಳಿವೆ. ಉದ್ದದ ದಾರಗಳು ಒಂದು ಕಡೆ. ಅಡ್ಡದ ದಾರಗಳು ಇನ್ನೊಂದು ಕಡೆ. ಆದರೆ ಅವುಗಳ ಹೊಂದಾಣಿಕೆ ಒಂದೇ ಆಗಿ ವಸ್ತ್ರವಾದಂತೆ ಈ ದಾಂಪತ್ಯ. ಏನೇ ಕಷ್ಟ-ಸುಖ ಬಂದರೂ ಇಂತಹ ದಾಂಪತ್ಯ ಸಮಯದ ಸವಾಲುಗಳು ದಾಟಿ ಗಟ್ಟಿಯಾಗಿ ನಿಲ್ಲುವುದು. ಇಂತಹ ಸಂಬಂಧದಲ್ಲಿ ತರ್ಕಕ್ಕೆ ಮೀರಿ ಪರಸ್ಪರ ಪ್ರೀತಿ-ವಿಶ್ವಾಸಗಳಿಗೆ ಬೆಲೆಯುಂಟು. ಸರಿ-ತಪ್ಪು ಅನ್ನುವುದಕ್ಕಿಂತ ನಂಬಿಕೆ-ಅವಲಂಬನೆ ಇಲ್ಲಿ ಮುಖ್ಯವಾಗುತ್ತದೆ.

*****

ನಲವತ್ತು-ನಲವತ್ತೈದು-ಐವತ್ತು ವರ್ಷಗಳು ಸಾಮರಸ್ಯದಿಂದ ಬಾಳಿ-ಬದುಕಿದ ಜೋಡಿಗಳನ್ನು ನಮ್ಮ ಸುತ್ತ-ಮುತ್ತ ಅಲ್ಲಲ್ಲಿ ಈಗಲೂ ಕಾಣುತ್ತಿರುತ್ತೇವೆ. ಅಂತಹವರನ್ನು ನೋಡಿದಾಗ ಒಂದು ರೀತಿಯ ಸಾತ್ವಿಕ ಸಂತೋಷ ತುಂಬಿ ಬರುತ್ತದೆ. ಹೀಗೆ ಇರುವ ಜೋಡಿಗಳಲ್ಲಿ ಒಬ್ಬರು ಕಾಲಧರ್ಮದ ಕಾರಣ ಇಲ್ಲವಾದಾಗ ಉಳಿದ ಒಂಟಿ ಜೀವಕ್ಕೆ ಎಲ್ಲಿಲ್ಲದ ಚಡಪಡಿಕೆ. ಉಳಿದ ಜೀವನಯಾತ್ರೆ ದುರ್ಭರ. ಆ ಜೋಡಿಯ ಹಿಂದಿನ ಸುಖೀ ಸಹಬಾಳ್ವೆ ಕಂಡ ಸಹೃದಯರಿಗೂ ಅದೊಂದು ವೇದನೆಯ ಸಂಗತಿಯೇ.

ಕೆಲವೇ ದಿನಗಲ್ಲಿ ಈ ರೀತಿಯ ಪ್ರಸಂಗಗಳು ಮತ್ತೆ ಮತ್ತೆ ಎದುರಾದಾಗ, ಈ ಎಲ್ಲ ಅಂಶಗಳೂ ಮನಸ್ಸಿನಲ್ಲಿ ಪುನರಾವರ್ತನೆ ಆಗುವುದು ಸಹಜ. 

Friday, June 27, 2025

ದೇವರಲ್ಲಿ ಬೇಡುವುದು ಸರಿಯೇ?


ಹಿಂದಿನ ಸಂಚಿಕೆಗಳಲ್ಲಿ "ಅಷ್ಟ ಭೋಗ", "ಅಷ್ಟ ಭಾಗ್ಯ" ಮತ್ತು "ಅಷ್ಟ ಐಶ್ವರ್ಯ" ಇವುಗಳ ಬಗ್ಗೆ ಸ್ವಲ್ಪಮಟ್ಟಿಗೆ ಚರ್ಚೆ ಮಾಡಿದೆವು. (ಈ ಹಿಂದಿನ ಸಂಚಿಕೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಇವುಗಳು ತಾವಾಗಿಯೇ ಸಿಗುವುದಿಲ್ಲ. ಕೆಲವನ್ನು ಸ್ವಲ್ಪ ಮಟ್ಟಿಗೆ ನಾವೇ ಸ್ವಂತ ಪರಿಶ್ರಮದಿಂದ ಗಳಿಸಬಹುದಾದರೂ ಅವುಗಳ ಪ್ರಮಾಣ ಹೆಚ್ಚಿರುವುದಿಲ್ಲ. ಅಷ್ಟೇ ಅಲ್ಲ, ಮನುಷ್ಯ ಸಹಜ ಬುದ್ಧಿಯ ಕಾರಣವಾಗಿ ಎಷ್ಟು ಸಂಪಾದನೆ ಮಾಡಿದರೂ ತೃಪ್ತಿ ಎನ್ನುವುದು ಬರುವುದಿಲ್ಲ. "ಇಷ್ಟು ದೊರಕಿದರೆ ಇನ್ನಷ್ಟು ಬೇಕೆಂಬಾಸೆ. ಅಷ್ಟು ದೊರಕಿದರೆ ಮತ್ತಷ್ಟು ಬೇಕೆಂಬಾಸೆ. ಕಷ್ಟ ಬೇಡ ಎಂಬಾಸೆ. ಕಡು ಸುಖವ ಕಾಂಬಾಸೆ." ಎಂದು ದಾಸರು ಹೇಳುವಂತೆ ಮನುಷ್ಯನಿಗೆ ಕಷ್ಟ ಬೇಡವೇ ಬೇಡ. ಸುಖ ಬೇಕೇ ಬೇಕು. ಅಷ್ಟೇ ಅಲ್ಲ. ಸುಖ ಇದ್ದಷ್ಟೂ ಇನ್ನೂ ಹೆಚ್ಚು ಬೇಕೆಂಬ ತವಕ. 

ತಾವಾಗಿಯೇ ಸಿಗದ, ನಾವು ಕಷ್ಟ ಪಟ್ಟರೂ ಪೂರ್ಣವಾಗಿ ಎಟುಕದ, ಆದರೆ ಬೇಕೆಂಬ ತುಡಿತವುಳ್ಳ ಈ ವಿಷಯಗಳನ್ನು ಪಡೆಯುವುದು ಹೇಗೆ? ನಮ್ಮ ಅನುಭವ ಹೇಳಿಕೊಟ್ಟಂತೆ ನಮ್ಮಲ್ಲಿ ಇಲ್ಲದಿದ್ದುದನ್ನು ಬೇರೆಯವರಿಂದ ಕೇಳಿ ಪಡೆಯಬಹುದು. ಹಾಗಿದ್ದರೆ ಯಾರನ್ನು ಕೇಳಬೇಕು? ಯಾರಾದರೂ ತಮ್ಮ ಬಳಿ ಇರುವುದನ್ನು ಮಾತ್ರ ಕೊಡಬಲ್ಲರು. ಅವರ ಬಳಿಯೇ ಇಲ್ಲದಿದ್ದುದನ್ನು ಯಾರಾದರೂ ಕೊಡುವುದು ಹೇಗೆ? ಆದಕಾರಣ ನಾವು ನಂಬಿದ ದೇವರನ್ನೋ, ದೇವತೆಯನ್ನೋ ಕೇಳಬಹುದು. ಅದರಲ್ಲಿಯೂ ಯಾರು ಸುಲಭವಾಗಿ ನಮಗೆ ಒಲಿಯುವವರೋ ಅವರನ್ನು ಕೇಳುವುದು. ಅವರಲ್ಲಿ ಕೊಡುವ ಶಕ್ತಿ ಇದ್ದರೂ ಕೇಳಿದರೆ ಕೊಡದವರನ್ನು ಬೇಡಿ ಏನು ಪ್ರಯೋಜನ? 

ಸಾಧನೆಯ ದಾರಿಯಲ್ಲಿ ನಡೆಯುತ್ತಿರುವ ಜಿಜ್ಞಾಸುವಿಗೆ "ಹೀಗೆ ಕೇಳುವುದು ಸರಿಯೇ?" ಎಂಬ ಅನುಮಾನ ಬರುವುದು ಸಹಜ. ವಾಸ್ತವವಾಗಿ ಈ ರೀತಿಯ ಅನುಮಾನ ಬರುವುದೇ ಒಂದು ಒಳ್ಳೆಯ ಸೂಚನೆ. ಎಷ್ಟು ಸಿಕ್ಕಿದರೂ ತೃಪ್ತಿ ಇಲ್ಲದ ಜೀವಕ್ಕೆ ಕೇಳುವುದರ ಎಲ್ಲೆ ಎಲ್ಲಿ? "ಕಿಂಗ್ ಮೈದಾಸ" ಕೇಳಿದಂತೆ ಮುಟ್ಟಿದ್ದೆಲ್ಲವೂ ಚಿನ್ನವಾಗಬೇಕು. ಅದು ನಿಜವಾಗಿ ಮುಟ್ಟಿದ್ದೆಲ್ಲಾ ಚಿನ್ನವಾದಾಗ, ತನ್ನ ಮುದ್ದಿನ ಮಗಳೂ ಒಂದು ಚಿನ್ನದ ಬೊಂಬೆಯಾಗಿ ಕುಳಿತಾಗ, ಅವನ ಕಣ್ಣು ತೆರೆಯಿತು. ಅಂತಹ ಅತಿರೇಕಕ್ಕೆ ಹೋಗದಿದ್ದರೆ ಆ ರೀತಿಯ ಪಾಠ ಕಲಿಯುವುದೂ ಸುಲಭ ಸಾಧ್ಯವಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಒಮ್ಮೆ ಕೇಳುವುದು ಅಭ್ಯಾಸವಾದರೆ ಆ ದುರಭ್ಯಾಸ ನಿಲ್ಲಿಸುವುದು ಕಷ್ಟವೇ. ಇದರಿಂದ ಹೊರಬರುವುದು ಹೇಗೆ?
*****

ಒಬ್ಬ ದೊಡ್ಡ ಧನಿಕ ಇದ್ದಾನೆ. ಅವನ ಬಳಿ ಬೇಕಾದಷ್ಟು ಐಶ್ವರ್ಯ ಇದೆ. ಕೊಡುವ ಶಕ್ತಿಯ ಜೊತೆ ಕೊಡುವ ಮನಸ್ಸೂ ಇದೆ. ಅನೇಕರು ಅವನ ಬಳಿ ಬಂದು, ಬೇಡಿ, ಬೇಕಾದುದನ್ನು ತೆಗೆದುಕೊಂಡು ಹೋಗುತ್ತಾರೆ. ಈ ರೀತಿ ತೆಗೆದುಕೊಂಡು ಹೋಗುವವರ ಸರತಿಯ ಸಾಲೇ ಇದೆ. 

ಒಂದು ದಿನ ಮೊದಲನೆಯವನು ಬಂದ. ಅವನಿಗೆ ಸ್ವಂತ ಖರ್ಚಿಗೆ ಹಣ ಬೇಕು. ಅದನ್ನು ಕೇಳುವುದಕ್ಕಾಗಿ ಬಂದಿದ್ದಾನೆ. ಕೇಳಲು ನಾಚಿಕೆ. ಬಹಳ ಸಂಕೋಚದಿಂದ ತಲೆ ಕೆಳಗೆ ಮಾಡಿ ಬೇಡುತ್ತಾನೆ. ಕೊಡುವ ಧನಿಕನ ಕೈ ಯಾವಾಗಲೂ ಮೇಲೆ. ಕೇಳುವವನಿಗೆ ಅನುಮಾನ. "ಕೊಡುತ್ತಾನೋ ಇಲ್ಲವೋ ಗೊತ್ತಿಲ್ಲ. ಹೇಗೆ ಕೇಳುವುದು? ಯಾವ ರೀತಿ ಕೇಳಿದರೆ ಕೊಡಬಹುದು? ಇಲ್ಲ ಅಂದುಬಿಟ್ಟರೆ ಏನು ಮಾಡುವುದು? ಕೊಟ್ಟರೂ ಏನು ಹೇಳಿ ಕೊಡುತ್ತಾನೋ? ಸಾಲ ಎಂದು ಕೊಡಬಹುದು. ಇಷ್ಟು ಬಡ್ಡಿ ಎಂದು ಹೇಳಬಹುದು. ಈಗ ಇಲ್ಲ, ನಾಳೆ ಬಾ ಎನ್ನಬಹುದು. ಹತ್ತು ಬಾರಿ ಓಡಾಡಿಸಿ ಕೊಡಬಹುದು. ಇನ್ನೊಬ್ಬರ ಮುಂದೆ ಅವಮಾನ ಮಾಡಬಹುದು. ಏನಾದರೂ ಕೇಳಲೇಬೇಕು. ವಿಧಿಯಿಲ್ಲ" ಹೀಗೆಲ್ಲಾ ಮನಸ್ಸಿನಲ್ಲಿ ಗೊಂದಲ. ಕಡೆಗೆ ಧೈರ್ಯ ಮಾಡಿ ಕೇಳಿದ. ಸಾಹುಕಾರ ಕೊಟ್ಟೇಬಿಟ್ಟ. ಅವನ ಕೆಲಸವಾಯಿತು. ಹೊರಟುಹೋದ. 

ಈಗ ಎರಡನೆಯವನು ಬಂದ. ಇವನು ತನಗೋಸ್ಕರ ಹಣ ಕೇಳಲು ಬಂದವನಲ್ಲ. ಇವನು ಯಾವುದೋ ಸಂಸ್ಥೆಯ ಒಬ್ಬ ವಿಶ್ವಸ್ತ ಮಂಡಳಿಯವನು (ಟ್ರಸ್ಟೀ). ಕೇಳುತ್ತಿರುವುದು ತನಗಾಗಿ ಅಲ್ಲ. ಟ್ರಸ್ಟಿಗಾಗಿ. ಪಡೆವ ಹಣದಿಂದ ಸ್ವಂತಕ್ಕೆ ಪ್ರಯೋಜನ ಪಡೆಯುವ ಅಭಿಲಾಷೆ ಇಲ್ಲ. ಹಣ ತೆಗೆದುಕೊಂಡಮೇಲೆ ತನ್ನದು ಅನ್ನುವ ಭಾವನೆ ಇಲ್ಲ. ದುರುಪಯೋಗ ಮಾಡಬೇಕೆಂಬ ಇರಾದೆ ಇಲ್ಲ. ತನಗಾಗಿ ಎಂದು ಕೇಳದುದರಿಂದ ಸಂಕೋಚವೂ ಇಲ್ಲ. ಕೊಡುವವನು ಇದನ್ನು ಸಾಲ ಎಂದು ಕೊಡುವುದಿಲ್ಲ. ಹಣ ಕೇಳಲು ಬಂದಿದ್ದರೂ ಸಾಹುಕಾರ ಗೌರವದಿಂದ ಕಾಣುತ್ತಾನೆ. ಕೂಡಿಸಿ ಮಾತನಾಡಿಸುತ್ತಾನೆ. ಸಾಹುಕಾರ ಕೊಡುತ್ತಾನೆ. ಇವನು ತೆಗೆದುಕೊಂಡು ಹೋಗುತ್ತಾನೆ. ತೆಗೆದುಕೊಂಡುದನ್ನು ಸರಿಯಾಗಿ, ಕೇಳಿದ ಉದ್ದೇಶ ಸಾಧನೆಗೆ ಉಪಯೋಗಿಸುತ್ತಾನೆ. 

ಇಬ್ಬರಾದಮೇಲೆ ಮೂರನೆಯವನು ಬಂದ . ಅವನು ಏನನ್ನೂ ಕೇಳಲು ಬಂದವನಲ್ಲ. ಅವನಿಗೆ ಏನೂ ಬೇಕಾಗಿಲ್ಲ. ಇರುವುದರಲ್ಲೇ ತೃಪ್ತನಾಗಿದ್ದಾನೆ. ಅವನಿಗೆ ಯಾವ ಪದಾರ್ಥವನ್ನೂ ಕೇಳಬೇಕೆಂಬ ಅಭಿಲಾಷೆ ಇಲ್ಲ. ಬದಲಾಗಿ ಅವನೇ ಸಾಹುಕಾರನಿಗೆ ಕೊಡಲು ಹಣ್ಣನ್ನು ತಂದಿದ್ದಾನೆ. ಹಣ್ಣು ಕೊಡುತ್ತಾನೆ. ಅಷ್ಟೇ. ಆದರೆ ಸಾಹುಕಾರ "ನಿನಗೆ ಏನು ಬೇಕು? ಕೇಳು. ಸಂತೋಷದಿಂದ ಕೊಡುತ್ತೇನೆ" ಅನ್ನುತ್ತಾನೆ. "ನನಗೆ ಏನೂ ಬೇಡ. ನಿನ್ನನ್ನು ಕಾಣಲು ಬಂದೆ. ನೋಡಿದ್ದಾಯಿತು. ಅಷ್ಟು ಸಾಕು" ಅನ್ನುತ್ತಾನೆ ಬಂದವನು. ಸಾಹುಕಾರ ಬಲವಂತ ಮಾಡಿ ಏನನ್ನೋ ಕೊಡುತ್ತಾನೆ.  ಬಂದವನು ಅದನ್ನು ತೆಗೆದುಕೊಂಡು ಹೋಗುತ್ತಾನೆ. ಕೊಡು ಎಂದು ಕೇಳಲಿಲ್ಲ. ಕೊಡದಿದ್ದರೆ ದುಃಖವಿಲ್ಲ. ಸಾಹುಕಾರ ತಾನಾಗಿಯೇ ಕೊಟ್ಟಿದ್ದನ್ನು ತೆಗೆದುಕೊಂಡಾಗ ಸಂತೋಷವಿಲ್ಲ. ಸಂತೋಷವಿಲ್ಲ ಎಂದರೆ ವಿಷಾದವೂ ಇಲ್ಲ. ಒಂದು ರೀತಿಯ ನಿರ್ಲಿಪ್ತ ಭಾವನೆ. "ನೀನು ಕೊಟ್ಟೆ. ಅದನ್ನು ಗೌರವಪೂರ್ವಕ ಸ್ವೀಕರಿಸುತ್ತೇನೆ. ಅದರ ಮೌಲ್ಯ ನೋಡಿ ಅಲ್ಲ. ಕೊಟ್ಟವನಾದ ನಿನ್ನ ದೊಡ್ಡತನ ನೋಡಿ ತೆಗೆದುಕೊಂಡೆ" ಎನ್ನುವ ಭಾವ. 
*****

ಭಗವಂತನೆಂಬ ದೊಡ್ಡ ಸಾಹುಕಾರ. ಬಂದವರು ಮೂರು ರೀತಿಯ ಭಕ್ತರು. ಮೊದಲನೆಯವನು ತನಗೆ ಬೇಕು ಎಂದು ಕೇಳುವ "ಸಕಾಮಿ ಭಕ್ತ". ಕೇಳಿ ಪಡೆದದ್ದರಿಂದ ಸುಖ ಪಡುವ ಅಭಿಲಾಷೆ. ಸಾಹುಕಾರನ ಬಳಿ ಹೋಗುವಾಗಲೇ ಏನು ಬೇಕು ಎಂದು ತೀರ್ಮಾನ ಮಾಡಿ ಅದನ್ನು ಕೇಳಿದವ. ಕೇಳಿದ ಉದ್ದೇಶದಲ್ಲಿ ಅನುಮಾನವಿಲ್ಲ. ಅದು ಸ್ವಾರ್ಥಕ್ಕೇ. ಆದರೂ ಭಗವಂತ ಕೊಟ್ಟ. ಭಕ್ತನಿಗೆ ಸಂತೋಷ. ಮತ್ತೆ ಇನ್ನೊಂದು ದಿನ ಮತ್ತೊಂದು ಬೇಕಾದಾಗ ಹೀಗೆ ಅವನ ಬಳಿ ಹೋಗುತ್ತಾನೆ. ಎಂದೋ ಒಂದು ದಿನ ಮುಂದಿನ ಹಂತಕ್ಕೆ ತೇರ್ಗಡೆ ಆಗಬಹುದು. ಪರಮಾತ್ಮ ಕರುಣಾಳು. ಅವನನ್ನು ತಳ್ಳಿ ಓಡಿಸುವುದಿಲ್ಲ. ಹೆಚ್ಚಿನ ಭಕ್ತರು, ಅವರ ಅನುಷ್ಠಾನಗಳು ಈ ರೀತಿಯವೇ. 

ಎರಡನೆಯವನೂ ಬೇಡಲೆಂದೇ ಬಂದವನು. ಆದರೆ ಪಡೆದುದರಿಂದ ಸುಖ ಪಡುವ ಅಭಿಲಾಷೆ ಇಲ್ಲ. ಆ ಪರಿಕರಗಳಿಂದ ಮತ್ತಷ್ಟು ಸಾಧನೆ ಮಾಡಲು ಅನುಕೂಲ ಎಂದು ಬೇಡುತ್ತಿದ್ದಾನೆ. ಇವನಿಗೆ ಕೊಡುವುದರಿಂದ ಸರಿದಾರಿಯಲ್ಲಿ ಮುಂದುವರೆಯುತ್ತಾನೆ ಎನ್ನುವುದು ಅವನಿಗೂ ಗೊತ್ತು. (ಅವನಿಗೆ ಎಲ್ಲವೂ ಗೊತ್ತು). ಮೊದಲಿನವನಂತೆ ಇವನೂ ಬೇಡುವವನೇ ಆದರೂ ಇವನಿಗೆ ಗೌರವವೂ ಸಿಗುತ್ತದೆ. ಕೇಳಿದ್ದೂ ಸಿಗುತ್ತದೆ. ಈ ರೀತಿ ಭಕ್ತರು ಮೊದಲಿನವರಿಗಿಂತ ಸಂಖ್ಯೆಯಲ್ಲಿ ಕಡಿಮೆ. 

ಮೂರನೆಯವರದು ಬೇರೆಯೇ ರೀತಿ. ಅವರಿಗೆ ಭಗವಂತನ ಪ್ರೀತಿ ಬಿಟ್ಟು ಬೇರೆ ಏನೂ ಬೇಕಾಗಿಲ್ಲ. ಮಾಡಿದ ಪ್ರತಿ ಕೆಲಸವೂ ಅವನ ಪ್ರೀತಿಗಾಗಿ. ಸಂಕಲ್ಪ ಮಾಡುವಾಗ "ಅಸ್ಮಾಕಂ ಸಹಕುಟುಂಬಾನಾಂ" ಇಲ್ಲ. "ಲೋಕ ಕಲ್ಯಾಣಾರ್ಥಂ" ಮಾತ್ರವೇ ಉಂಟು. "ಪರಮೇಶ್ವರ ಪ್ರೇರಣಯಾ, ಪರಮೇಶ್ವರ ಪ್ರೀತ್ಯರ್ಥಂ" ಎನ್ನುವುದೇ ಧ್ಯೇಯ. "ಕರ್ಮ ಫಲ" ಎಂಬ ಹಣ್ಣನ್ನೂ ಭಗವಂತನಿಗೇ ಕೊಡುತ್ತಾರೆ. ಅದರ ಮೇಲೂ ಪ್ರೀತಿಯಾಗಲೀ, ಅಧಿಕಾರವಾಗಲೀ ಇಲ್ಲವೇ ಇಲ್ಲ. ಪರಮಾತ್ಮನೇ ತಾನಾಗಿ ಕೊಟ್ಟದ್ದನ್ನು "ಪ್ರಸಾದ" ಎಂದು ಸ್ವೀಕರಿಸುತ್ತಾರೆ. ತಿರಸ್ಕರಿಸುವ ಅಹಂಕಾರವಿಲ್ಲ. ಸಿಕ್ಕಿತು ಎಂಬ ಬೀಗುವಿಕೆಯಂತೂ ಮೊದಲೇ ಇಲ್ಲ. 

*****

ಸ್ವಾತಂತ್ರ್ಯಾನಂತರದ ಎರಡು-ಮೂರು ದಶಕಗಳಲ್ಲಿ ಹುಟ್ಟಿದ ತಲೆಮಾರಿನ ಜನರಿಗೆ ಮೂರು ರೀತಿಯಲ್ಲಿ ತೊಂದರೆಗಳು. ಹೆಚ್ಚಿನವರು ನಮ್ಮ ಅನುಷ್ಠಾನಗಳನ್ನು ಕ್ರಮವಾಗಿ ಕಲಿತವರಲ್ಲ. ಅಪ್ಪ, ಅಜ್ಜಂದಿರು ಮಾಡುತ್ತಿದ್ದರು. ಆದ್ದರಿಂದ ನಾವೂ ಮಾಡುತ್ತೇವೆ. (ನಮ್ಮ ಹಿಂದಿನ ತಲೆಮಾರಿನ ಜನ ಸಾಮಾನ್ಯವಾಗಿ ಇವನ್ನು ಕ್ರಮವಾಗಿ ಕಲಿತಿದ್ದರು. ಮುಂದಿನ ತಲೆಮಾರಿನವರು ಹೆಚ್ಚು-ಕಡಿಮೆ ಬಿಟ್ಟೀ ಬಿಟ್ಟರು.) ಮಂತ್ರ-ಸ್ತೋತ್ರಗಳ ಸರಿಯಾದ ಅರ್ಥಗಳು ತಿಳಿದಿಲ್ಲ. ಆದ್ದರಿಂದ ಹಿಂದಿನವರಂತೆ ಮಾಡುತ್ತಾ ಹೋಗುವುದು. ಇದು ಮೊದಲನೆಯ ತೊಂದರೆ. ಕ್ರಮೇಣ ವ್ಯವಹಾರ ಜ್ಞಾನದ ಜೊತೆಗೆ ಅನುಭವದ ಜ್ಞಾನ ಸೇರಿದಾಗ "ಇದೇನು ಹೀಗಿದೆ? ಕೆಲವು ಸರಿ ಕಾಣುವುದಿಲ್ಲ?" ಎನ್ನುವ ಅನುಮಾನ ಬರುತ್ತದೆ.

ಎರಡನೆಯ ಸಿಕ್ಕು  ಅಂದರೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ನಾವು ಹುಟ್ಟಿದ ಮನೆಯ ಆಚರಣೆಯೇ ಸರ್ವಶ್ರೇಷ್ಠ.. ಹೀಗೆಂದು ಪ್ರತಿ ಮತವೂ, ಪಂಗಡವೂ ಹೇಳುತ್ತವೆ. ಬೇರೆಯದರಲ್ಲೂ ಸ್ವಲ್ಪ ಒಳ್ಳೆಯದಿರಬಹುದು ಎಂದು ಒಪ್ಪುವ ಉದಾರ ಮನೋಭಾವ ಕಡಿಮೆ. ಜೊತೆಗೆ ಯಾವುದಾದರೂ ಸರಿ ಇಲ್ಲ ಅಂದರೆ ಅದನ್ನು ಬಿಟ್ಟುಬಿಡುವ ದಾರ್ಢ್ಯ ಇರುವುದಿಲ್ಲ. ಏಕೆಂದರೆ ಅದು ಸರಿಯಾಗಿಲ್ಲ ಎಂದು ಖಚಿತವಾದ ಅಭಿಪ್ರಾಯಕ್ಕೆ ಬರುವ ತಳಹದಿ ಭದ್ರವಿಲ್ಲ. 

ಮೂರನೆಯ ಸಮಸ್ಯೆ ಅಂದರೆ ನಾವು ತತ್ವಕ್ಕೂ ಮತ-ಪಂಗಡಗಳಿಗೂ ಇರುವ ವ್ಯತ್ಯಾಸವನ್ನು ಮಸಕು-ಮಸಕಾಗಿ ಕಾಣುತ್ತೇವೆ. ನಮ್ಮ ವೈದಿಕ ವಾಂಗ್ಮಯದಲ್ಲಿ, ವಿಶೇಷವಾಗಿ ಉಪನಿಷತ್ತುಗಳಲ್ಲಿ, ಹೇಳುವಂತೆ "ಎಲ್ಲವನ್ನೂ ತಿಳಿ; ನಿನಗೆ ಸರಿ ಅನ್ನಿಸಿದ್ದನ್ನು ಮಾಡು" ಎನ್ನುವುದರಲ್ಲಿ ನಮಗೆ ಹೆಚ್ಚಿನ ಪರಿಶ್ರಮವಿಲ್ಲ. ಆದ್ದರಿಂದ ಮೊದಲಿನಿಂದ ಮಾಡಿಕೊಂಡು ಬಂದ ಯಾವುದನ್ನೂ ಅದು ಈಗ ನಮಗೆ ಸರಿಕಾಣುತ್ತಿಲ್ಲ ಎಂದು ಬಿಡುವುದಿಲ್ಲ. ಇದಕ್ಕೆ ಪೂರಕವಾಗಿ ನಮ್ಮ ಅನುಮಾನಗಳಿಗೆ ಮುಕ್ತ ಮನಸ್ಸಿನಿಂದ ಸಮಾಧಾನ ಹೇಳುವ ಹಿರಿಯರೂ ತಿಳಿದವರೂ ಸಿಗುವುದು ಬಹಳ ಅಪರೂಪ. 

*****

ನಮ್ಮ ಅನೇಕ ಮಂತ್ರ-ಸ್ತೋತ್ರಗಳಲ್ಲಿ ದೇವರಲ್ಲಿ ಅನೇಕ ವಸ್ತುಗಳನ್ನು ಬೇಡುವ ಪ್ರಕರಣಗಳಿವೆ. ಕೆಲವುಗಳಲ್ಲಿ ಬೇಡಿದ್ದನ್ನೇ ಮತ್ತೆ ಮತ್ತೆ ಕೇಳುವ ಅಂಶಗಳಿವೆ. ನಮ್ಮ ಅರಿವು ಆಳವಾದಂತೆ ಈ ರೀತಿ ಬೇಡುವುದು, ಮತ್ತೆ ಮತ್ತೆ ಅದನ್ನೇ ಕೇಳುವುದು, ಅನವಶ್ಯಕವಾದ ಪದಾರ್ಥಗಳ ಕೋರಿಕೆ, ಮುಂತಾದುವುಗಳ ಸಮಸ್ಯೆ ಕಾಡುತ್ತವೆ. ಇದಕ್ಕೆ ಪರಿಹಾರವೇನು?

ಅಂತಹವುಗಳ ಆಚರಣೆ ಬಿಡುವುದು ಒಂದು ಪರಿಹಾರ. ಆದರೆ ಅನೇಕ ಇಂತಹ ಸಂದರ್ಭಗಳಲ್ಲಿ ಅವುಗಳಲ್ಲಿ ನಮಗೆ ಹಿಡಿಸುವ, ಹಿತವಾದ ಅನೇಕ ವಿಷಯಗಳೂ ಸೇರಿರುತ್ತವೆ. ಕೆಲವಂತೂ ಮನಸ್ಸಿಗೆ ಹೆಚ್ಚಿನ ಮುದವನ್ನೂ, ಶಾಂತಿಯನ್ನೂ ಕೊಡುತ್ತವೆ. ಅನೇಕ ಕಡೆ ನಿಜವಾದ ಭಕ್ತಿ ಹೊರಹೊಮ್ಮುವ ಅವಕಾಶಗಳಿವೆ. ಹೀಗಾಗಿ ಅವನ್ನು ಬಿಡುವುದೂ ಪೂರ್ತಿಯಾಗಿ ಸರಿ ಕಾಣುವುದಿಲ್ಲ. 

ಮೇಲೆ ಚರ್ಚಿಸಿದ ಮೂವರು ಭಕ್ತರ ಗುಂಪುಗಳಲ್ಲಿ ಮೂರನೆಯ ಗುಂಪಿಗೆ ಹೋಗಲು ನಾವು ಬಹಳ ಬಹಳ ದೂರ ಹೋಗಬೇಕಾಗಿದೆ. ಇಂತಹ ಪ್ರಶ್ನೆಗಳು ಮನಸ್ಸಿನಲ್ಲಿ ಹುಟ್ಟಿವೆ ಅಂದರೆ ಮೊದಲನೆಯ ರೀತಿಯಲ್ಲಿ ಇರುವುದನ್ನು ದಾಟಿದ್ದೇವೆ ಅನ್ನಬಹುದು. ಆದ್ದರಿಂದ ಇಂತಹ ಬೇಡುವ ಸಂದರ್ಭಗಳಲ್ಲಿ ಮನಸ್ಸನ್ನು ಹದ ಮಾಡಿಕೊಂಡು ಕೇಳುವಾಗ "ಇದು ನಮ್ಮ ಭೋಗಕ್ಕಲ್ಲ. ಹೆಚ್ಚಿನ ಸಾಧನೆಗಾಗಿ ಬೇಡುತ್ತೇವೆ. ದುರುಪಯೋಗ ಮಾಡುವುದಿಲ್ಲ" ಅನ್ನುವ ಅನುಸಂಧಾನ ಇದ್ದು ಎರಡನೇ ವರ್ಗಕ್ಕೆ ಸೇರುವ ಪ್ರಯತ್ನ ಮಾಡಬಹುದು. 
***** 

ಮೂರನೆಯ ಗುಂಪಿನ ಭಕ್ತರ ಗುಣ-ಸ್ವರೂಪಗಳು ಮತ್ತು ಎರಡು-ಮೂರು ಉದಾಹರಣೆಗಳನ್ನು ಮುಂದಿನ ಸಂಚಿಕೆಯಲ್ಲಿ ಚರ್ಚಿಸುವ ಪ್ರಯತ್ನ ಮಾಡೋಣ.