Showing posts with label Yoga. Show all posts
Showing posts with label Yoga. Show all posts

Wednesday, June 4, 2025

ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ


ಸಾಮಾನ್ಯವಾಗಿ ಕುಟುಂಬಗಳಲ್ಲಿ ಸಂಜೆಯ ಹೊತ್ತು ಮನೆಮಂದಿಯೆಲ್ಲ ಒಟ್ಟಾಗಿ ಸೇರಿ, ಒಂದೆಡೆ ಕುಳಿತು ಸುಖ-ದುಃಖಗಳನ್ನು ಹಂಚಿಕೊಳ್ಳುವುದು, ಅಂದಿನ ಆಗು-ಹೋಗುಗಳನ್ನು ಚರ್ಚಿಸುವುದು ನಡೆಯುತ್ತದೆ. ಕೆಲಸ-ಕಾರ್ಯಗಳಲ್ಲಿ ನಿರತರಾದ ಕುಟುಂಬದ ಸದಸ್ಯರು ಪರಸ್ಪರ ಸಿಗುವುದು ಸಂಜೆಯ ವೇಳೆಯಲ್ಲಿಯೇ ಎನ್ನುವ ಕಾಲವೊಂದಿತ್ತು. ಈಗ ಖಚಿತವಾಗಿ ಹಾಗೆ ಹೇಳಲು ಬರುವುದಿಲ್ಲ. ಟೆಲಿವಿಶನ್ ಸೆಟ್ಟುಗಳು ಮನೆಯ ದಿವಾನಖಾನೆಯನ್ನು ಅಲಂಕರಿಸಲು ಪ್ರಾರಂಭಿಸಿದಾಗಿನಿಂದ ಜನಸಾಮಾನ್ಯರ ದೈನಂದಿನ ಜೀವನದಲ್ಲಿ ಅನೇಕ ಬದಲಾವಣೆಗಳಾಗಿವೆ. ನೆಲದಮೇಲೆ ಚಾಪೆ ಅಥವಾ ಜಮುಖಾನ ಹಾಸಿ ಕುಳಿತುಕೊಳ್ಳುವುದು ಮರೆತೇಹೋಗಿದೆ. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದು ಕಡಿಮೆಯಾಗಿದೆ. ಟೆಲಿವಿಶನ್ ಜೊತೆಯಲ್ಲಿ ಬಂದಿರುವ ಸೋಫಾಗಳ ಮೇಲೆ ಕುಳಿತು ಕೈನಲ್ಲಿ ತಟ್ಟೆ ಹಿಡಿದು ತಿನ್ನುವುದು ಅಭ್ಯಾಸವಾಗಿದೆ. ಅನೇಕ ವೇಳೆ ಏನು ತಿನ್ನುತ್ತಿದ್ದೇವೆ ಅನ್ನುವುದು ಗೊತ್ತೂ ಆಗದಂತೆ ವಾತಾವರಣ ಇರುತ್ತದೆ. ಅಡುಗೆ ಮಾಡುವವರಿಗೆ ಇದು ಬಹಳ ಒಳ್ಳೆಯದು.  ಉಪ್ಪು-ಖಾರ  ಹೆಚ್ಚು-ಕಡಿಮೆ ಆದರೂ ಯಾರ ಗಮನಕ್ಕೂ ಬರುವುದಿಲ್ಲ. 

ಮೊದಲು ಒಂದು ಮನೆಗೆ ಒಂದು ಟೆಲಿವಿಶನ್ ಸೆಟ್ ಇರುತ್ತಿತ್ತು. ಈಗ ಕೋಣೆಗೊಂದರಂತೆ ಅವು ಬಂದು ಕೂತಿವೆ. ಆದರೂ ಮನೆಮಂದಿ ಎಲ್ಲರೂ ಒಟ್ಟಾಗಿ ನೋಡುವ ಕೆಲವು ಧಾರಾವಾಹಿಗಳು ಇರುತ್ತವೆ. ಕನ್ನಡದಲ್ಲಿಯೂ ಹಾಗೆ ಉಂಟು. ಶ್ರೀ ಟಿ. ಏನ್. ಸೀತಾರಾಮ್ ಅವರ ಧಾರಾವಾಹಿಗಳು ಅಂತಹವು. ಈಚೆಗೆ "ಮಾಡು ಸಿಕ್ಕದಲ್ಲ" ಎನ್ನುವ ಧಾರಾವಾಹಿ ಪ್ರಸಾರವಾಗುತ್ತಿದೆಯಂತೆ. ಸೀತಾರಾಮ್ ಅವರ ಬೇರೆ ಧಾರಾವಾಹಿಗಳಂತೆ ಇದೂ ಜನಪ್ರಿಯವಾಗುವುದರಲ್ಲಿ ಅನುಮಾನವಿಲ್ಲ. 

ಇಂದಿನ ಯುವ ಜನಾಂಗಕ್ಕೆ ಅನೇಕ ಕನ್ನಡ ಪದಗಳು ಅಪರಿಚಿತವಾಗುತ್ತಿವೆ. ಪಟ್ಟಣಗಳಲ್ಲಿ ಹುಟ್ಟಿ ಬೆಳೆದವರಿಗಂತೂ ಈ ಸಮಸ್ಯೆ (ಇದೊಂದು ಸಮಸ್ಯೆ ಎಂದು ತಿಳಿದರೆ) ಇನ್ನೂ ಹೆಚ್ಚು. "ಮಾಡು" ಅನ್ನುವುದು ಒಂದು ಕ್ರಿಯಾಪದವಾಗಿ, ಇಂಗ್ಲೀಷಿನಲ್ಲಿ "ಡು" ಎನ್ನುವುದಕ್ಕೆ ಸಮಾನವಾಗಿ, ಅವರಿಗೆ ಗೊತ್ತು. "ಗೂಡು" ಅನ್ನುವುದರದು ಇನ್ನೂ ಕಡಿಮೆ ಪರಿಚಯ. ಆ ಪದಕ್ಕೆ "ಮನೆ" ಎಂದು ಕೆಲವರಿಗೆ ಅರ್ಥ ಆಗುತ್ತದೆ. ಅದೂ ಒಂದು ಅರ್ಥವೇ. "ಹಕ್ಕಿಗಳ ಗೂಡು" ಎನ್ನುವಂತೆ ಮನುಷ್ಯರ ಗೂಡು ಅಂದರೆ ಮನೆ. ಅದು ಸರಿಯೇ. 

ಯುವ ಮಿತ್ರರೊಬ್ಬರು ಇದರ ಬಗ್ಗೆ ವಿವರಣೆ ಕೇಳಿದ್ದಾರೆ. ಇದು ಒಂದು ಹಾಡಿನ ಮೊದಲ ಸಾಲು ಎಂದು ಕೆಲವರಿಗೆ ಗೊತ್ತು. ಆದರೆ ಪೂರ್ತಿ ಹಾಡು ಅನೇಕರಿಗೆ ಗೊತ್ತಿಲ್ಲ. ಹಾಡು ಗೊತ್ತಿದ್ದವರಿಗೆ ಅದರ ಅರ್ಥ ಗೊತ್ತಿಲ್ಲ. "ಬಾಹ್ಯಾರ್ಥ - ಗೂಡಾರ್ಥ - ಅಂತರಾರ್ಥ" ಎನ್ನುವ ಹಿಂದಿನ ಒಂದು ಸಂಚಿಕೆಯಲ್ಲಿ ಈ ಮೂರು ಅರ್ಥಗಳ ಬಗ್ಗೆ ಸ್ವಲ್ಪ ಚರ್ಚೆ ಮಾಡಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ)  "ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ" ಎನ್ನುವುದು ಶ್ರೀ ಪುರಂದರದಾಸರ ಒಂದು ಕೃತಿ. ಅದನ್ನು ಓದಿದರೆ ಅಥವಾ ಕೇಳಿದರೆ ಅರ್ಥವೇನೋ ಆಗುತ್ತದೆ. ಆದರೆ ಈ ಕೀರ್ತನೆ ಅನೇಕ ಗಹನವಾದ ಪ್ರಮೇಯಗಳನ್ನು ಒಳಗೊಂಡ ಕೃತಿ. ಪ್ರತಿಯೊಂದು ಪದದ ಹಿನ್ನೆಲೆ ಮತ್ತು ಅಂತರಾರ್ಥ ಗೊತ್ತಿಲ್ಲದಿದ್ದರೆ ಅದೊಂದು ಒಗಟಿನಂತೆ ಆಗುತ್ತದೆ. ಇದರ ಸ್ವಲ್ಪ ವಿವರಣೆ ಈಗ ನೋಡೋಣ. 

*****

"ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ" ಎನ್ನುವ ಹಾಡು ಮೂರು ನುಡಿಗಳನ್ನು ಒಳಗೊಂಡಿದೆ. ಎರಡು ಸಾಲುಗಳ ಒಂದು ನುಡಿ, ಇಂತಹ ಮೂರು ನುಡಿಗಳುಳ್ಳ ಒಂದು ಹಾಡು. ಅವುಗಳ ಮೊದಲಿಗೆ ಎರಡು ಸಾಲುಗಳ ಮುಖ್ಯ ಪ್ರಮೇಯ. ನಂತರದ ಮೂರು ನುಡಿಗಳು ಆ ಪ್ರಮೇಯವನ್ನು ವಿಸ್ತರಿಸುವ ವಿವರಣೆ. 

ಮೊದಲಿಗೆ ಈ ಹಾಡಿನ ಪೂರ್ತಿ ಪಾಠವನ್ನು ತಿಳಿಯೋಣ. ಅದು ಹೀಗಿದೆ:

ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ 
ಜೋಡಿ ಹೆಂಡಿರಿಗಂಜಿ ಓಡಿಹೋಗುವಾಗ, ಗೋಡೆ ಬಿದ್ದು ಬಯಲಾಯಿತಲ್ಲಾ 

ಎಚ್ಚರಗೊಳಲಿಲ್ಲ, ಮನವೇ  ಹುಚ್ಚನಾದೆನಲ್ಲಾ 
ಅಚ್ಚಿನೊಳಗೆ ಮೆಚ್ಚು, ಮೆಚ್ಚಿನೊಳಗೆ ಅಚ್ಚು, ಕಿಚ್ಚೆದ್ದು ಹೋಯಿತಲ್ಲಾ 

ಮುಪ್ಪು ಬಂದಿತಲ್ಲಾ, ಪಾಯಸ ತಪ್ಪದೆ ಉಣಲಿಲ್ಲಾ 
ತುಪ್ಪದ ಬಿಂದಿಗೆ ತಿಪ್ಪೆಯಮೇಲೆ ಧೊಪ್ಪನೆ ಬಿತ್ತಲ್ಲಾ 

ಯೋಗವು ಬಂತಲ್ಲಾ, ಬದುಕು ವಿಭಾಗವಾಯಿತಲ್ಲಾ 
ಭೋಗಿಶಯನ ಶ್ರೀ ಪುರಂದರವಿಠಲನ ಆಗ ನೆನೆಯಲಿಲ್ಲಾ  

ಎಲ್ಲ ಕಡೆಯೂ "ಲ್ಲಾ" ಅನ್ನುವುದು ದೀರ್ಘವೇ. "ಎಚ್ಚರಗೊಳಲಿಲ್ಲ" ಎನ್ನುವುದನ್ನು ಬಿಟ್ಟು.  ಏನಾದರೂ ಕಳೆದು ಹೋದರೆ "ಹೋಯಿತಲ್ಲ" ಎನ್ನುತ್ತೇವೆ. ತುಂಬಾ ಪ್ರಿಯವಾದದ್ದು ಕಳೆದು ಹೋದರೆ ಹಲಬುತ್ತೇವೆ. ಆಗ "ಹೋಯಿತಲ್ಲ" ಅನ್ನುವುದಿಲ್ಲ. "ಹೋಯಿತಲ್ಲಾ" ಎಂದು ಕೂಗುತ್ತೇವೆ. ದಾಸರೂ ಹೀಗೆ ಆರ್ತರಾಗಿ ಹೇಳುವಾಗ ಹೋಯಿತಲ್ಲಾ, ಸಿಕ್ಕದಲ್ಲಾ, ಮುಂತಾಗಿ ಹೇಳುತ್ತಾರೆ. ಇದನ್ನು ಗಮನಿಸಬೇಕು. ಧಾರಾವಾಹಿಯಲ್ಲಿ ತೋರಿಸುವಂತೆ ಅದು "ಮಾಡು ಸಿಕ್ಕದಲ್ಲ"  ಎಂದಲ್ಲ. ವಾಸ್ತವವಾಗಿ "ಮಾಡು ಸಿಕ್ಕದಲ್ಲಾ" ಎಂದು. 

*****

ಆರ್. ಸಿ. ಸಿ. ಮನೆಗಳು ಇಲ್ಲದಿದ್ದ ಕಾಲ. ಮಣ್ಣಿನ ಹೆಂಚು ಛಾವಣಿಗೆ ಹೊದ್ದಿಸಿದ ಮನೆಗಳೇ ಇದ್ದ ಕಾಲ. ಬಯಲು ಸೀಮೆಯಲ್ಲಿ ನಾಡಹೆಂಚುಗಳ ಮನೆಗಳು. ಕೆಲವೆಡೆ "ಮಂಗಳೂರು ಹೆಂಚು" ಹೊದಿಸಿದ ಮನೆಗಳು. ಮೇಲೆ ಕೊಟ್ಟಿರುವ ಚಿತ್ರ ನೋಡಿ. ಛಾವಣಿಗೆ ^ ಆಕಾರ ಇರುತ್ತಿತ್ತು. ಮಳೆಯ ನೀರು ಸುಲಭವಾಗಿ ಹರಿದು ಹೋಗಲು ಈ ವ್ಯವಸ್ಥೆ. ಚಾವಣಿಯ ಮೇಲಿನ ಭಾಗ ದಿನನಿತ್ಯದ ವಾಸಕ್ಕೆ ಅಷ್ಟು ಯೋಗ್ಯವಲ್ಲ. ಆದುದರಿಂದ ಅಲ್ಲಿ "ಮಾಡು" ಎಂದು ಕರೆಯುವ ಜಾಗದ ವ್ಯವಸ್ಥೆ ಮಾಡುತ್ತಿದ್ದರು. ಅದನ್ನು "ಅಟ್ಟ" ಎಂತಲೂ ಕರೆಯುತ್ತಿದ್ದರು. ಇಂಗ್ಲೀಷಿನಲ್ಲಿ Attic ಅನ್ನುತ್ತಾರೆ. ಮನೆಗಳಲ್ಲಿ ಹೆಚ್ಚಿನ ಪೀಠೋಪಕರಣಗಳು, ಕಪಾಟು ಮುಂತಾದುವುಗಳು ಇರುತ್ತಿರಲಿಲ್ಲ. ದಿನನಿತ್ಯ ಉಪಯೋಗಿಸುವ ಪದಾರ್ಥಗಳು ಕೆಳಗೆ ನೆಲದ ಮೇಲೆ ಇರುತ್ತಿದ್ದವು. ಆಗೊಮ್ಮೆ-ಈಗೊಮ್ಮೆ ಉಪಯೋಗಿಸುವ ಪದಾರ್ಥಗಳನ್ನು ಅಟ್ಟದ ಮೇಲೆ ಇಡುತ್ತಿದ್ದರು. ಈ ಕಾರಣಕ್ಕಾಗಿ ಕೆಲವು ಗೂಡುಗಳನ್ನು ಮಾಡಿರುತ್ತಿದ್ದರು. ಇಂತಹ ಗೂಡುಗಲ್ಲಿ ಇಟ್ಟ ಪದಾರ್ಥಗಳನ್ನು ಬೇಕಾದಾಗ ಹೊರತೆಗೆದು ಉಪಯೋಗಿಸಲು ಅಟ್ಟ ಹತ್ತಿ, ಅಲ್ಲಿನ ಗೂಡಿನಿಂದ  ಹೊರತೆಗೆಯಬೇಕಾಗುತ್ತಿತ್ತು. ಇದಕ್ಕೆ ಹೆಚ್ಚಿನ ಪ್ರಯತ್ನ ಬೇಕಿತ್ತು. "ಮಾಡು" ಮತ್ತು  "ಗೂಡು" ಅನ್ನುವ ಪದಗಳಿಗೆ ಈ ಹಿನ್ನೆಲೆ. 

ಮೇಲಿನದು ಹೊರ ಅರ್ಥ. ಶ್ರೀ ಪುರಂದರದಾಸರು ವೈಷ್ಣವ ಸಿದ್ಧಾಂತದ ಪ್ರತಿಪಾದಕರು. ನಾವು ಈಗ ಬದುಕಿರುವುದು ಭೂಲೋಕ. ಅದು ಕೆಳಗಿದೆ ಎಂದು ನಂಬಿಕೆ. ಶ್ರೀವೈಕುಂಠ ಇದರ ಮೇಲಿನ ಲೋಕ. ಆದ್ದರಿಂದ ಅದು ನಮಗೆ ಮಾಡು. ಅದರಲ್ಲಿನ ಗೂಡು ಎಂದರೆ ಆ ವೈಕುಂಠದಲ್ಲಿ ನಾವು ಪಡೆಯಬಹುದಾದ ಸ್ಥಾನ. ಒಟ್ಟಿನಲ್ಲಿ ಈ ಜೀವನ-ಮರಣ ಚಕ್ರದಿಂದ ಹೊರಬಂದು ದುಃಖವಿಲ್ಲದ, ಒಂದು ಶಾಶ್ವತವಾದ ಸ್ಥಾನ ಹೊಂದುವುದು. "ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ" ಎಂದರೆ ಸರಿಯಾಗಿ ಪ್ರಯತ್ನ ಮಾಡದೇ ಇರುವುದರಿಂದ "ಆ ವೈಕುಂಠ ಸಿಗಲಿಲ್ಲ. ಅಲ್ಲಿ ನನ್ನ ವಾಸದ ಜಾಗ ಸಿಗಲಿಲ್ಲ " ಎಂದು ಪ್ರಲಾಪಿಸುವುದು. ಇದು ಅಂತರಾರ್ಥ. 

ಈ ಹೇಳಿಕೆಯಲ್ಲಿ ಒಂದು ಗೂಡಾರ್ಥವೂ ಇದೆ. ನಮ್ಮ ಶರೀರವೇ ಒಂದು ಮನೆ. ಸರಿಯಾಗಿ ನೋಡಿದರೆ ಕಾಲು, ಸೊಂಟ, ಹೊಟ್ಟೆ ಮುಂತಾದುವು ಮನೆಯ ಕೆಳಭಾಗಗಳು. ಹೊಟ್ಟೆಯ ಮೇಲಿನ ಭಾಗ ಈ ದೇಹವೆಂಬ ಮನೆಯ ಮಾಡು. ಹೃದಯ ಈ ದೇಹವೆಂಬ ಮನೆಯ ಮಾಡಿನ ಭಾಗದಲ್ಲಿರುವ ಒಂದು ಗೂಡು. ಈ ಮನೆಯ ಮೇಲ್ಭಾಗದ ಮಾಡಿನ ಹೃದಯವೆಂಬ ಗೂಡಿನಲ್ಲಿ ಪರಮಾತ್ಮನೆಂಬ ದಿವ್ಯ ವಸ್ತು ಇದೆ. ಅವನು ಅಲ್ಲಿ ನೆಲೆಸಿದ್ದಾನೆ. ಮಾಡು ಹತ್ತಿ ಆ ಗೂಡಿನಲ್ಲಿರುವ ವಸ್ತುವನ್ನು ನಾವು ಪಡೆಯಲು ಪ್ರಯತ್ನಿಸಲೇ ಇಲ್ಲ. ಮನೆಯ ಕೆಳಗಿರುವ ಹೊಟ್ಟೆ ಹೊರೆಯುವ ಪ್ರಯತ್ನದಲ್ಲೇ ಜೀವನವೆಲ್ಲ ಕಳೆಯಿತು! ಯಾವುದು ಸುಖವೇ ಅಲ್ಲವೋ ಅದರ ಹಿಂದೆ ಬಿದ್ದು ನಿಜವಾದ ಸುಖ ಪಡೆಯುವ ಪ್ರಯತ್ನವನ್ನೇ ಮಾಡಲಿಲ್ಲ. ಈಗ, ಜೀವನದ ಕೊನೆಯಲ್ಲಿ, ಮಾಡಿನ ಗೂಡಿನಲ್ಲಿರುವ ಆ ಮುಖ್ಯ ವಸ್ತು ಸಿಗಲಿಲ್ಲ ಎನ್ನುವ ಕೊರಗು. 

ಪರಮಾತ್ಮನೆಂಬ ದಿವ್ಯ ವಸ್ತುವನ್ನು ನಾವು ದಿನಬಳಕೆಗಾಗಿಯೇ ಇಟ್ಟುಕೊಳ್ಳಬೇಕಿತ್ತು. ಆದರೆ ಬೇರೆ ವಸ್ತುಗಳ ಮೋಹದಿಂದ ಇಂತಹ ಮುಖ್ಯ ವಸ್ತುವನ್ನು ಮಾಡಿನ ಮೇಲಿನ ಗೂಡಿನಲ್ಲಿ ಭದ್ರವಾಗಿಟ್ಟೆವು. ಮುಂದೆ ಎಂದೋ, ವೃದ್ಧಾಪ್ಯದಲ್ಲಿ, ಉಪಯೋಗಿಸುವ ಎನ್ನುವ ಅಭಿಲಾಷೆ. ಆದರೆ ಮುದಿತನದಲ್ಲಿ ಮೇಲೆ ಹತ್ತಿ ಆ ಪದಾರ್ಥವನ್ನು ಪಡೆಯುವ ಶಕ್ತಿ ಕುಂದಿದೆ. 

*****

"ಜೋಡಿ ಹೆಂಡಿರಿಗಂಜಿ ಓಡಿಹೋಗುವಾಗ" ಎನ್ನುವುದು ಈ ಹಾಡಿನ ಜೀವಾಳ. (ನಮ್ಮ ಉಗುರು ಮತ್ತು ಬೆಟ್ಟುಗಳ ಚರ್ಮದ ಮಧ್ಯೆ ಇರುವ ದಾರದಂತಹ ವಸ್ತುವಿಗೆ "ಜೀವಾಳ" ಎನ್ನುತ್ತಾರೆ. ಈ ಜೀವಾಳ ಉಗುರನ್ನು ದೇಹಕ್ಕೆ ಬಂಧಿಸಿಟ್ಟಿದೆ. ಅದು ಇಲ್ಲದಿದ್ದರೆ ಉಗುರೂ ಸಹ ಹಲ್ಲಿನಂತೆ ಬಿದ್ದುಹೋಗಬಹುದು. ಒಮ್ಮೊಮ್ಮೆ ಉಗುರು ಕತ್ತರಿಸುವಾಗ ಈ ಜೀವಾಳದ ಸ್ವಲ್ಪ ಭಾಗ ಕತ್ತರಿಸುವುದೂ ಉಂಟು. ಆಗ ಬಹಳ ನೋವಾಗುತ್ತದೆ. ಅದನ್ನು ಅನುಭವಿಸಿದವರಿಗೆ ಗೊತ್ತು). ಈ ಜೋಡಿ ಹೆಂಡಿರು ಯಾರು? ಅವರು ಗಂಡಸರಿಗೆ ಮಾತ್ರವೇ ಸಂಬಂಧಿಸಿದವರೇ? ಹಾಗಿದ್ದರೆ ಈ ಹಾಡಿಗೂ ಸ್ತ್ರೀಯರಿಗೂ ಏನೂ ಸಂಬಂಧವಿಲ್ಲವೇ? ಒಬ್ಬಳೇ ಹೆಂಡತಿ ಇರುವ ಗಂಡಸಿಗೂ ಇದು ಬೇಕಾಗಿಲ್ಲ, ಅಲ್ಲವೇ? ಇವೆಲ್ಲವೂ ಸಾಧುವಾದ ಪ್ರಶ್ನೆಗಳೇ. 

ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಶ್ರೀಮದ್ ಭಾಗವತದ "ಪುರಂಜನೋಪಾಖ್ಯಾನ" ನೋಡಬೇಕು. ಅದರ ವಿವರಗಳನ್ನು ಮತ್ತೊಮ್ಮೆ ವಿವರವಾಗಿ ನೋಡೋಣ. ಈಗ ಸೂಕ್ಷ್ಮವಾಗಿ ಇಷ್ಟು ಹೇಳಿದರೆ ಸಾಕು. "ಪುರ" ಅಂದರೆ ಈ ದೇಹ ಅನ್ನುವ ಪಟ್ಟಣ. ಈ ದೇಹವೆಂಬ ಮನೆಯಲ್ಲಿ ಯಜಮಾನನಾಗಿ ವಾಸಿಸುವವನೇ "ಪುರುಷ" ಎಂಬ ಪರಮಾತ್ಮ. ಆ ಮನೆಯಲ್ಲಿ ಬಾಡಿಗೆದಾರನಾಗಿ ವಾಸಿಸುವವನೇ ಜೀವ. ಈ ಜೀವ ಗಂಡು ದೇಹದಲ್ಲಾದರೂ ಇರಬಹುದು; ಹೆಣ್ಣು ದೇಹದಲ್ಲಾದರೂ ಇರಬಹುದು. ಆದ್ದರಿಂದ ಇಲ್ಲಿ ಹೇಳಿದ ಎರಡು ಹೆಂಡಿರು ಸ್ತ್ರೀಯರಿಗೂ ಮತ್ತು ಪುರುಷರಿಗೂ ಸಮಾನವಾಗಿ ಅನ್ವಯ ಆಗುತ್ತದೆ. ಇಲ್ಲಿ ಹೆಂಡಿರು ಅಂದರೆ ನಮ್ಮ ವ್ಯಾವಹಾರಿಕ ಜೀವನದಲ್ಲಿ ನಿರ್ದೇಶಿಸುವ ಹೊಂಡತಿ ಅಲ್ಲ. ಆದ್ದರಿಂದ ಇದು ಎಲ್ಲರಿಗೂ ಸಮಾನವಾಗಿ ಅನ್ವಯ. 

ಪುರಂಜನೋಪಾಖ್ಯಾನದಲ್ಲಿ "ಬುದ್ಧೀತು ಪ್ರಮದಾಮ್ ವಿದ್ಧಿ" ಎಂದು ಹೇಳಿದ್ದಾರೆ. ಅಂದರೆ "ಬುದ್ಧಿ ಅನ್ನುವುದು ಒಂದು ಸ್ತ್ರೀಯಂತೆ. ಅದನ್ನು ಜೀವನು ಹೆಂಡತಿ ಎನ್ನುವಂತೆ ತಿಳಿಯಬೇಕು" ಎಂದು ಅರ್ಥ. ಹೆಂಡತಿ (ಅಥವಾ ಗಂಡ) ಸಾಂಸಾರಿಕ ಜೀವನದಲ್ಲಿ ಬಹಳ ಮುಖ್ಯ. ಸುಖಜೀವನಕ್ಕೆ ಹೇಗೆ ಹೆಂಡತಿ (ಅಥವಾ ಗಂಡ) ಸಹಕಾರಿಯಾಗಬಹುದೋ ಹಾಗೆಯೇ ಜೀವನ ದುರ್ಭರ ಆಗಲೂ ಕಾರಣ ಆಗಬಹುದು. ಬುದ್ಧಿ ಒಂದು ಹೆಂಡತಿ ಆದರೆ ಎರಡನೆಯ ಹೆಂಡತಿ ಯಾರು? ಅದು "ಮನಸ್ಸು". ಬುದ್ಧಿ ಮತ್ತು ಮನಸ್ಸು ಪ್ರತಿಯೊಬ್ಬರಿಗೂ (ಹೆಣ್ಣು ಗಂಡು ಎಂಬ ಭೇದವಿಲ್ಲದೆ} ಇರುವ ಇಬ್ಬರು ಹೆಂಡತಿಯರು. 

ಈ ಇಬ್ಬರು ಹೆಂಡತಿಯರು ನಮಗೆ ಸಹಕಾರಿಯಾಗಿರುವಂತೆ ನೋಡಿಕೊಳ್ಳಲಾಗದೆ ಅವರ ಭಯಕ್ಕೆ ಶರಣಾಗುವುದು "ಜೋಡಿ ಹೆಂಡರಿಗಂಜಿ ಓಡಿಹೋಗುವುದು". "ಏನು ಮಾಡಲಿ? ನನ್ನ ಮನಸ್ಸು ನನ್ನ ಮಾತು ಕೇಳುವುದಿಲ್ಲ. ಬುದ್ಧಿ ನನ್ನ ಸ್ಥಿಮಿತದಲ್ಲಿಲ್ಲ" ಎಂದು ಕೈಚೆಲ್ಲುವುದೇ ಈ ಇಬ್ಬರು ಹೆಂಡಿರಿಗಂಜಿ ಓಡಿಹೋಗುವುದು. ಪ್ರಯತ್ನಪೂರ್ವಕವಾಗಿ ಇವೆರಡನ್ನೂ ನಮ್ಮ ಗುರಿ ಸಾಧನೆಗೆ ಅನುಕೂಲ ಮಾಡಿಕೊಳ್ಳುವುದೇ ಅವರ ಜೊತೆ ಹೊಡೆದಾಡಿ ಗೆಲ್ಲುವುದು. ಹೀಗೆ ಗೆದ್ದರೆ ಓಡಿಹೋಗಬೇಕಾಗಿಲ್ಲ. ಹೀಗೆ ಹೋರಾಡಿ ಗೆಲ್ಲದೇ ಹೆದರಿ ಓಡಿಹೋಗುವಾಗ "ಗೋಡೆ ಬಿದ್ದು ಬಯಲಾಯಿತು". ಬಯಲಾಯಿತಲ್ಲ ಎಂದರೆ ಹೊಡೆದಾಟದಲ್ಲಿ ಕಾಲಚಕ್ರ ಓಡಿ ವೃದ್ಧಾಪ್ಯ ಬರುವುದು. ಮುಪ್ಪಿನಲ್ಲಿ ಕೈ-ಕಾಲುಗಳ, ದೇಹದ, ಶಕ್ತಿ ಕುಂದಿ ಗೋಡೆ ಬಿದ್ದ ಮನೆಯಂತೆ ಆಗುತ್ತದೆ. ಗೋಡೆ ಬಿದ್ದರೆ ಮನೆ ಇದ್ದೂ ಇಲ್ಲ. ಶಕ್ತಿ ಕುಂದಿದಮೇಲೆ ಬದುಕಿದ್ದೂ ಸಾಧನೆ ಮಾಡಲಾಗದು. ಪಾಳು ಬಿದ್ದ ಮನೆ ಅನ್ಯರ ಪಾಲು. ಜೂಜು ಆಡುವವರು, ಕುಡುಕರು ಇಂತಹವರ ಬೀಡು ಆ ಮನೆ. ದೇಹದಲ್ಲಾದರೋ, ರೋಗ-ರುಜಿನಗಳಿಗೆ ಹೇರಳವಾದ ಅವಕಾಶ. ಅಂತಹ ದೇಹದಿಂದ ಏನೂ ಪ್ರಯೋಜನವಿಲ್ಲ. ಇದು ಗೂಡಾರ್ಥ. 

*****

ಸಮಯ ಚೆನ್ನಾಗಿದ್ದಾಗ ಎಚ್ಚರದಿಂದ ಸಾಧನೆ ಮಾಡಲಿಲ್ಲ. ಆಗ ಮತ್ತನಾಗಿ ನಿಡ್ರೆ ಮಾಡಿದಂತೆ ಜೀವನ ನಡೆಸಿದ್ದಾಯಿತು. ಬುದ್ಧಿ ಸ್ಥಿಮಿತದಲ್ಲಿ ಇಟ್ಟುಕೊಳ್ಳದೆ ಬುದ್ಧಿಭ್ರಮಣೆ ಆದ ಹುಚ್ಚನಂತೆ ಜೀವನ ಕಳೆಯಿತು. ಹಣ ಸಂಪಾದಿಸುವುದೇ ಜೀವನದ ಗುರಿಯಾಯಿತು. ಸಂಸಾರದ ಸಿಹಿ ಅನ್ನುವ ಬೆಲ್ಲದ ಅಥವಾ ಸಕ್ಕರೆಯ ಅಚ್ಚಿನಲ್ಲಿ ಮನಸ್ಸು ಮುಳುಗಿತು. ಅಚ್ಚು ಅನ್ನುವ ಪದಕ್ಕೆ "ಠಸ್ಸೆ" ಅಥವಾ "ಸೀಲ್" ಎಂದೂ ಅರ್ಥವುಂಟು. ಈ ಸಂಸಾರವೆಂಬ ಅಚ್ಚಿನ ರುಚಿಯಲ್ಲಿ ಜೀವನದ ಉದ್ದೇಶ ಸೀಲ್ ಆಯಿತು. ಆದ್ದರಿಂದ "ಅಚ್ಚಿನೊಳಗೆ ಮೆಚ್ಚು; ಮೆಚ್ಚಿನೊಳಗೆ ಅಚ್ಚು". ಬೆಂಕಿ ಬಿದ್ದಾಗ ಬೆಲ್ಲದ ಅಥವಾ ಸಕ್ಕರೆ ಅಚ್ಚು ಕರಗಿ ಹೋಗುತ್ತದೆ. ಮುಪ್ಪಿನ ಬೆಂಕಿ ಬಿದ್ದಾಗ ಜೀವನವೆಂಬ ಪ್ರೀತಿಯಿಂದ ಕಾಯ್ದುಕೊಂಡಿದ್ದ ಅಚ್ಚು ಕರಗಿಹೋಯಿತು ಎಂದು ಈಗ ಪ್ರಲಾಪ. 

ಕೆಲವರಿಗೆ ಪಾಯಸ ಅಂದರೆ ಅಷ್ಟಕ್ಕಷ್ಟೇ. ಅದನ್ನು ತಿನ್ನುವುದೇ ಇಲ್ಲ. ತಿಂದರೂ ಆಗೊಮ್ಮೆ-ಈಗೊಮ್ಮೆ ಬಹಳ ಸ್ವಲ್ಪ ಪ್ರಮಾಣದಲ್ಲಿ. ಚಿಕ್ಕ ವಯಸ್ಸಿನಲ್ಲಿ ಪಾಯಸ ತಿನ್ನಲಿಲ್ಲ. ಈಗ ಮುಪ್ಪಿನಲ್ಲಿ ಪಾಯಸ  ತಿನ್ನುವಹಾಗಿಲ್ಲ! ಇಲ್ಲಿ ಪಾಯಸ ಅಂದರೆ "ರಾಮನಾಮ" ಮುಂತಾದ ಪಾಯಸ. "ರಾಮನಾಮ ಪಾಯಸಕೆ ಕೃಷ್ಣನಾಮ ಸಕ್ಕರೆ., ವಿಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೋ"ಎನ್ನುವ ಹಾಡಿನಲ್ಲಿ ಪಾಯಸ ಎಂದರೆ ಏನು ಎನ್ನುವುದನ್ನು ದಾಸರು ಹೇಳಿದ್ದಾರೆ. "ತುಪ್ಪದ ಬಿಂದಿಗೆ ತಿಪ್ಪೆಯ ಮೇಲೆ ಧೊಪ್ಪನೆ ಬಿತ್ತಲ್ಲ" ಅನ್ನುವುದು ಮುಪ್ಪಿನಲ್ಲಿ ದೇಹ ಹಾಸಿಗೆ ಹಿಡಿದದ್ದನ್ನು ತೋರಿಸುತ್ತದೆ. ತುಪ್ಪದ ಪಾತ್ರೆ ಕೈಜಾರಿ ತುಪ್ಪ ಕೆಳಗೆ ಬಿದ್ದರೆ, ಆ ಜಾಗ ಶುದ್ಧವಾಗಿದ್ದರೆ ಬಾಚಿಕೊಳ್ಳಬಹುದು. ಆದರೆ ಅದು ತಿಪ್ಪೆಯ ಮೇಲೆ ಬಿದ್ದರೆ?  ಪೂರ್ತಿ ಹಾಳು. ಮತ್ತೆ ಮೇಲೆ ಏಳದಂತೆ ಹಾಸಿಗೆ ಹಿಡಿದಂತೆ ಜೀವನ ಆಯಿತು ಎನ್ನುವಂತೆ. 

"ಯೋಗವು ಬಂತಲ್ಲಾ, ಬದುಕು ವಿಭಾಗವಾಯಿತಲ್ಲಾ" ಎನ್ನುವುದು ಬಂದ ಅವಕಾಶ ಕಳೆದುಕೊಂಡು ಜೀವನ ಅಲ್ಲಿ-ಇಲ್ಲಿ ಹರಿದು ಹಂಚಿ ಹೋದಂತೆ ಆಯಿತು ಎನ್ನುವುದನ್ನು ಸೂಚಿಸುತ್ತದೆ. ಭೋಗೀಶಯನನಾದ, ಆದಿಶೇಷನ ಮೇಲೆ ಮಲಗಿರುವ ಶ್ರೀಹರಿಯನ್ನು ಆಗ (ಚಿಕ್ಕವಯಸ್ಸಿನಲ್ಲಿ, ಶಕ್ತಿ, ಆರೋಗ್ಯಗಳು ಇದ್ದಾಗ} ನೆನೆಯಲಿಲ್ಲ. ಈಗ ನೆನೆಯಬೇಕೆಂದರೆ ಆಗುವುದಿಲ್ಲ. ಸಾಧನೆ ಸಾಧ್ಯವಿದ್ದಾಗ ಮಾಡದೇ, ಈಗ ಸಾಧ್ಯವಿಲ್ಲದಿದ್ದಾಗ ಗೋಳಾಡುವಂತೆ ಆಯಿತಲ್ಲ ಎಂದು ವ್ಯಥೆ. 

ಮೊದಲ ಎರಡು ಸಾಲುಗಳ ಪ್ರಮೇಯವನ್ನು ಹೀಗೆ ಮುಂದಿನ ಮೂರು ನುಡಿಗಳಲ್ಲಿ ವಿಸ್ತರಿಸಿ ದಾಸರು ಹೇಳಿದ್ದಾರೆ. ಇದನ್ನು ಅವರು ತಮಗೇ ಹೇಳಿಕೊಂಡಿದ್ದಾರೆ ಎಂದು ತಪ್ಪಾಗಿ ತಿಳಿಯಬಾರದು. "ನವಕೋಟಿ  ನಾರಾಯಣ" ಎನ್ನುವ ಬಿರುದು ಹೊಂದಿದ್ದು, ಎಲ್ಲವನ್ನೂ ಬಿಟ್ಟು ಬಂದು "ಹೆಂಡತಿ ಸಂತತಿ ಸಾವಿರವಾಗಲಿ, ದಂಡಿಗೆ ಬೆತ್ತ ಹಿಡಿಸಿದಳಯ್ಯಾ" ಎಂದವರು ಅವರು. ಸಾಮಾನ್ಯರಾದ ನಮ್ಮಂತಹವರ ಸ್ಥಿತಿಯನ್ನು ಹೇಳುವ ಹಾಡು ಇದು. 

*****

ಕಳೆದ ಶತಮಾನದ ಐವತ್ತು-ಅರವತ್ತರ ದಶಕದಲ್ಲಿ ಕನ್ನಡದ ಭಾವಗೀತೆಗಳ ಮೊದಲ ಗಾಯಕ ಹರಿಕಾರರಲ್ಲೊಬ್ಬರಾದ ಮಾನ್ಯ ಪಿ. ಕಾಳಿಂಗರಾಯರು ತಮ್ಮ ಗೋಷ್ಠಿಗಳಲ್ಲಿ ಈ ಹಾಡನ್ನು ಸೊಗಸಾಗಿ ಹಾಡುತ್ತಿದ್ದರು. ಆರ್ತರಾಗಿ ಕೂಗುವಂತಹುದು ಅವರ ಹಾಡಿನಲ್ಲಿ ಚೆನ್ನಾಗಿ ಧ್ವನಿತವಾಗಿದೆ. ಪುಣ್ಯಕ್ಕೆ ಅದರ ಧ್ವನಿಮುದ್ರಿಕೆ ಯೂಟ್ಯೂಬಿನಲ್ಲಿ ಸುಲಭವಾಗಿ ಲಭ್ಯವಿದೆ. ಅದರ ಲಿಂಕ್ ಕೆಳಗೆ ಕೊಟ್ಟಿದೆ. ಆಸಕ್ತರು ಕೇಳಬಹುದು:


https://www.youtube.com/watch?v=e-yowKKUL1k

*****

ವಿವರಣೆ ಸ್ವಲ್ಪ ದೀರ್ಘವಾಯಿತು ಎನ್ನಿಸಬಹುದು. ಆದರೆ ವಿಧಿಯಿಲ್ಲ. ಹಾಡಿನ ಮೇಲುನೋಟದ  ಅರ್ಥಕ್ಕೂ, ಅಂತರಾರ್ಥ, ಗೂಡಾರ್ಥಗಳಿಗೂ ಬಹಳ ಅಂತರ ಉಂಟು. ಆಳವಾಗಿ ಯೋಚಿಸಿದಷ್ಟೂ, ಅಧ್ಯಯನ ಮಾಡಿದಷ್ಟೂ ವಿಶೇಷ ಅರ್ಥಗಳು  ಹೊಳೆಯುತ್ತವೆ,

"ಬುದ್ಧಿ ಮತ್ತು ಮನಸ್ಸು" ಮತ್ತು "ಪುರಂಜನೋಪಾಖ್ಯಾನ" ಇವುಗಳ ಬಗ್ಗೆ ಹೆಚ್ಚಿನ ವಿವರಣೆಯನ್ನು  ಮತ್ತೆ ಎಂದಾದರೂ ಅವಕಾಶ ಆದಾಗ ನೋಡೋಣ!

Wednesday, April 9, 2025

ಸಿಕ್ಕಿದ್ದು - ದಕ್ಕಿದ್ದು


ಜರ್ಮನಿ ದೇಶದ ಬರ್ಲಿನ್ ನಗರದಲ್ಲಿ ನಡೆದ 1936ನೆಯ  ಇಸವಿಯ ಒಲಿಂಪಿಕ್ಸ್  ಪಂದ್ಯಾವಳಿಗಳು ಅನೇಕ ಕಾರಣಗಳಿಂದ ಬಹಳ ಮಹತ್ವದ್ದಾಗಿತ್ತು. ಮೊದಲ ಮಹಾಯುದ್ಧದ ನಂತರ ಅಡಾಲ್ಫ್ ಹಿಟ್ಲರ್ ನಾಯಕತ್ವದಲ್ಲಿ ಜೆರ್ಮನಿ ಒಂದು ದೊಡ್ಡ ಶಕ್ತಿಯಾಗಿ ಹೊರಹೊಮ್ಮಿತ್ತು. ಮುಂದೆ ಎರಡು ವರುಷಗಳ ನಂತರ ನಡೆಯಲಿದ್ದ ಎರಡನೇ ಮಹಾಯುದ್ಧದ ಮೂಲ ಕಾರಣ ಮತ್ತು ದೊಡ್ಡ ಪಾತ್ರಧಾರಿ ಅಗಲಿದ್ದ ದೇಶದ ರಾಜಧಾನಿ ಬರ್ಲಿನ್ ನಾಲ್ಕು ವರುಷಗಳಿಗೆ ಒಮ್ಮೆ ನಡೆಯುವ ಒಲಿಂಪಿಕ್ಸ್ ಪಂದ್ಯಾವಳಿಗಳಿಗೆ ಆತಿಥೇಯ ನಗರ. ಪ್ರಪಂಚದ ಎಲ್ಲ ಹೆಸರಾಂತ ಕ್ರೀಡಾಪಟುಗಳು ಅಲ್ಲಿ ನೆರೆದಿದ್ದರು. 


ಒಬ್ಬ ಭಾರತೀಯ ಆಟಗಾರ ಆ ಬರ್ಲಿನ್ ಒಲಿಂಪಿಕ್ಸ್  ಕ್ರೀಡೆಗಳಲ್ಲಿ ಬಹಳ ದೊಡ್ಡ ಹೆಸರು ಮಡಿದರು. "ಹಾಕಿ ಮಾಂತ್ರಿಕ" ಎಂದೇ ಹೆಸರಾದ ಮೇಜರ್ ಧ್ಯಾನ್ ಚಂದ್ ಭಾರತ-ಜರ್ಮನಿ ನಡುವಿನ ಫೈನಲ್ ಹಾಕಿ ಪಂದ್ಯದಲ್ಲಿ ಮೂರು ಗೋಲು ಗಳಿಸಿ (ಕೆಲವು ವರದಿ ನಾಲ್ಕು ಎಂದು ಹೇಳುತ್ತವೆ) ಭಾರತ 8 - 1 ಗೋಲುಗಳ ಅಂತರದಿಂದ ಚಿನ್ನದ ಪದಕ ಪಡೆಯಲು ಕಾರಣರಾದರು. ಧ್ಯಾನ್ ಚಂದ್ ಆಟವನ್ನು ನೋಡಿದ ಹಿಟ್ಲರ್ ಮುಕ್ತ ಕಂಠದಿಂದ ಹಾಡಿ ಹೊಗಳಿದನೆಂದು ವರದಿಗಳು ಹೇಳುತ್ತವೆ, 


ಇದೇ ಒಲಿಂಪಿಕ್ಸ್ ಪಂದ್ಯಗಳಲ್ಲಿ ಟ್ರ್ಯಾಕ್ ಅಂಡ್ ಫೀಲ್ಡ್  ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ಅಥ್ಲೆಟ್ ಅಮೇರಿಕ ಸಂಯುಕ್ತ ಸಂಸ್ಥಾನಗಳ ಜೆಸ್ಸಿ ಒವೆನ್ಸ್. ಕೇವಲ ಒಂದು ಗಂಟೆಯ ಸಮಯದಲ್ಲಿ ನಡೆದ ನಾಲ್ಕು ಪಂದ್ಯಗಳಲ್ಲಿ ಮೂರು ವರ್ಲ್ಡ್ ರೆಕಾರ್ಡ್ ಸ್ಥಾಪಿಸಿ, ನಾಲ್ಕನೆಯದನ್ನು ಸಮವಾಗಿಸಿ ಒಟ್ಟು ನಾಲ್ಕು ಚಿನ್ನದ ಮೆಡಲ್ಲುಗಳನ್ನು ಗೆದ್ದ ಧೀರ. 100 ಮೀಟರ್ ಮತ್ತು  200 ಮೀಟರ್ ಓಟ, ಲಾಂಗ್ ಜಂಪ್ ಮತ್ತು 4x100 ರಿಲೇ ಓಟಗಳಲ್ಲಿ ಚಿನ್ನದ ಪದಕ ಸಾಧಿಸಿದ ಮಹಾನ್ ಕ್ರೀಡಾಪಟು. ಅನೇಕ ದಶಕಗಳವರೆಗೆ ಪ್ರಪಂಚದ ಅತ್ಯಂತ ಶ್ರೇಷ್ಠ ಕ್ರೀಡಾಪಟು ಎನ್ನುವ ಗದ್ದುಗೆಯಲ್ಲಿ ಒಬ್ಬನೇ ಕುಳಿತಿದ್ದ ಸಾರ್ವಭೌಮ. 


ಇಂತಹ ಜೆಸ್ಸಿ ಒವೆನ್ಸ್  ಸ್ಥಾಪಿಸಿದ ನಾಲ್ಕು ಅಥ್ಲೆಟಿಕ್ಸ್ ಚಿನ್ನದ ಪದಕಗಳ ಶ್ರೇಯಸ್ಸು ಮತ್ತೊಮ್ಮೆ ನೋಡಲು ಪ್ರಪಂಚ ಸುಮಾರು ಐವತ್ತು ವರುಷ ಕಾಯಬೇಕಾಯಿತು. 1984ರಲ್ಲಿ ಲಾಸ್ ಏಂಜಲೀಸ್ ಒಲಿಂಪಿಕ್ಸ್  ಕ್ರೀಡಾಕೂಟದಲ್ಲಿ ಅಮೆರಿಕಾದವರೇ ಆದ ಕಾರ್ಲ್ ಲೂಯಿಸ್ ಮತ್ತೆ ಇವೇ ನಾಲ್ಕು ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗಳಿಸಿ ಜೆಸ್ಸಿ ಒವೆನ್ಸ್  ಸಾಧನೆ ಸರಿಸಮಗಟ್ಟಿದರು. "ಪ್ರಪಂಚದ ಶತಮಾನದ ಶ್ರೇಷ್ಠ ಅಥ್ಲೆಟ್" ಎನ್ನುವ ಹೆಸರು ಸಂಪಾದಿಸಿದರು. ಸುಮಾರು ಹತ್ತು ವರುಷಗಳ ಕಾಲ ಅನೇಕ ಕ್ರೀಡಾಕೂಟಗಳಲ್ಲಿ ಪದಕಗಳ ಸುರಿಮಳೆಯನ್ನೇ ಸುರಿಸಿದರು. 


ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಡೆದ ಕೆಲವು ದಿವಸಗಳ ನಂತರ ಕಾರ್ಲ್ ಲೂಯಿಸ್ ತಂದೆ ತೀರಿಕೊಂಡಾಗ ಅವರ ಶವಪೆಟ್ಟಿಗೆಯಲ್ಲಿ ಲೂಯಿಸ್ ತಮ್ಮ ಲಾಸ್ ಏಂಜಲೀಸ್ನಲ್ಲಿ ಗೆದ್ದಿದ್ದ ನೂರು ಮೀಟರ್ ಓಟದ ಚಿನ್ನದ ಪದಕ ಇಟ್ಟು ಬೀಳ್ಕೊಟ್ಟರು.  ತಮ್ಮ ಸಾಧನೆಗಳಿಗೆ ತಂದೆ ಪಟ್ಟ ಶ್ರಮಕ್ಕೆ ಕೃತಜ್ಞತೆ ಸೂಚಿಸುವ ಸಲುವಾಗಿ ಅವರು ಹೀಗೆ ಮಾಡಿದರಂತೆ. ಪಕ್ಕದಲ್ಲಿದ್ದ ತನ್ನ ತಾಯಿಗೆ "ಚಿಂತಿಸಬೇಡ. ನಾನು ಇನ್ನೊಂದು ನೂರು ಮೀಟರ್ ಓಟದ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದೇಗೆಲ್ಲುತ್ತೇನೆ" ಎಂದು ಹೇಳಿದರಂತೆ. ಅದರಂತೆ ತಯಾರಿ ಮಾಡಿದರು ಸಹ. 


ಮುಂದಿನ ಒಲಿಂಪಿಕ್ಸ್ ಪಂದ್ಯಗಳು ನಡೆದಿದ್ದು ದಕ್ಷಿಣ ಕೊರಿಯಾ ದೇಶದ ಸಿಯೋಲ್ ನಗರದಲ್ಲಿ. 1988 ಸಿಯೋಲ್ ಒಲಿಂಪಿಕ್ಸ್  ಕ್ರೀಡಾಕೂಟದಲ್ಲಿ ಕೆನಡಾ ದೇಶದ ಬೆನ್ ಜಾನ್ಸನ್ ಕಾರ್ಲ್ ಲೂಯಿಸ್ ಎದುರಿಸಿದ ಪ್ರಬಲ ಪ್ರತಿಸ್ಪರ್ಧಿ. 1984 ಲಾಸ್ ಏಂಜಲೀಸ್ ಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ ಬೆನ್ ಜಾನ್ಸನ್ ಸಿಯೋಲ್ ನಗರದ ಒಲಿಂಪಿಕ್ಸ್ ಕೂಟದಲ್ಲಿ  ಚಿನ್ನದ ಪದಕ ಗೆದ್ದರು. ಕಾರ್ಲ್ ಲೂಯಿಸ್ ಬೆಳ್ಳಿ ಪದಕ ಪಡೆದರು. ಆದರೆ ಮೂರು ದಿನಗಳ ನಂತರ ಬಂದ ಮಾದಕ ದ್ರವ್ಯ ಸೇವನೆಯ ವರದಿಯಲ್ಲಿ ಬೆನ್ ಜಾನ್ಸನ್ ದೋಷಿ ಎಂದು ಹೊರಬಿತ್ತು. ಮೂರು ದಿನದ ನಂತರ ಜಾನ್ಸನ್ ಪದಕ ಕಿತ್ತು, ಕಾರ್ಲ್ ಲೂಯಿಸ್ ಚಿನ್ನದ ಪದಕ ವಿಜೇತ ಎಂದು ಘೋಷಿಸಿದರು. ತಾಯಿಗೆ ಹೇಳಿದ ಮಾತಿನಂತೆ ಕಾರ್ಲ್ ಲೂಯಿಸ್ ಮತ್ತೊಂದು 100 ಮೀಟರ್ ಓಟದ ಒಲಿಂಪಿಕ್ಸ್ ಚಿನ್ನದ ಪದಕ ಗಳಿಸಿದಂತಾಯಿತು. 


ಒಲಿಂಪಿಕ್ಸ್ ಕ್ರೀಡೆಗಳ ಇತಿಹಾಸದಲ್ಲಿ ಇದೊಂದು ಬಹಳ ಚರ್ಚಿತವಾದ ಅಧ್ಯಾಯ. ತಿಂಗಳುಗಟ್ಟಲೆ ಪತ್ರಿಕೆಗಳು ನೂರಾರು ಪುಟಗಳು ಈ ವಿಷಯದ ಪರ-ವಿರೋಧ ಪ್ರಕಟಣೆ ಮಾಡಿದವು. ಆ ವಿಷಯ ಹಾಗಿರಲಿ. "ಸಿಕ್ಕಿದ್ದು - ದಕ್ಕಿದ್ದು" ಎನ್ನುವ ಶೀರ್ಷಿಕೆಯ ಚರ್ಚೆಯ ಹಿನ್ನೆಲೆಯಲ್ಲಿ ಹೇಳುವುದಾದರೆ ಬೆನ್ ಜಾನ್ಸನ್ ಅವರಿಗೆ ಚಿನ್ನದ ಪದಕ ಸಿಕ್ಕಿತು. ಆದರೆ ದಕ್ಕಲಿಲ್ಲ. ಕಾರ್ಲ್ ಲೂಯಿಸ್ ಅವರಿಗೆ ಸ್ವಲ್ಪ ತಡವಾದರೂ ಚಿನ್ನದ ಪದಕ ಸಿಕ್ಕಿತು ಮತ್ತು ದಕ್ಕಿತು. 


***** 

"ಯೋಗಕ್ಷೇಮ" ಅನ್ನುವ ಪದವನ್ನು ಕೆಲವು ದಶಕಗಳ ಹಿಂದೆ ಮಾತಾಡುವಾಗ ಮತ್ತು ಬರವಣಿಗೆಯಲ್ಲಿ ಮತ್ತೆ ಮತ್ತೆ ಉಪಯೋಗಿಸುತ್ತಿದ್ದರು. ನಾವು ಮಾಧ್ಯಮಿಕ ಶಾಲೆಗಳಲ್ಲಿ ಓದುತ್ತಿದ್ದಾಗ "ಪತ್ರಲೇಖನ" ಅಥವಾ "ಕಾಗದ ಬರೆಯುವುದು" ಹೇಗೆ ಎಂದು ಹೇಳಿಕೊಡುತ್ತಿದ್ದರು. ಪತ್ರ ಪ್ರಾರಂಭಮಾಡುವಾಗ ಮೇಲುಗಡೆ ಎಡ ಮೂಲೆಯಲ್ಲಿ "ಕ್ಷೇಮ" ಎಂದೂ, ಬಲಗಡೆಯಲ್ಲಿ ಪತ್ರ ಬರೆಯುವ ಸ್ಥಳ ಮತ್ತು ದಿನಾಂಕ ಬರೆಯಬೇಕೆಂದು ಹೇಳುತ್ತಿದ್ದರು. ಆಗ ಇನ್ನೂ "ಎಸ್ಸೆಮೆಸ್" ಭಾಷೆ ಬಂದಿರಲಿಲ್ಲ. ಪತ್ರದ ಮೊದಲ ಪ್ಯಾರಾದಲ್ಲಿ "ಇಲ್ಲಿ ನಾವೆಲ್ಲರೂ ಕ್ಷೇಮ. ಅಲ್ಲಿ ನಿಮ್ಮೆಲ್ಲರ ಯೋಗಕ್ಷೇಮಕ್ಕೆ ಕಾಗದ ಬರೆಯುವುದು" ಎನ್ನುವ ಒಕ್ಕಣೆ ಇರುತ್ತಿತ್ತು. ಈ "ಯೋಗಕ್ಷೇಮ" ಅಂದರೆ ಏನು? 


ಕೆಲವು ದಶಕಗಳ ಹಿಂದೆ ಹಳ್ಳಿಗಳಲ್ಲಿ ಮತ್ತು ದೊಡ್ಡ ಊರುಗಳಲ್ಲಿ ಕೂಡ ಆಸ್ಪತ್ರೆಗಳಿರಲಿಲ್ಲ. ದೂರದ ಊರುಗಳ ಆಸ್ಪತ್ರೆಗಳಿಗೆ ಹೋಗಲು ಜನರ ಬಳಿ ದುಡ್ಡಿರಲಿಲ್ಲ. ಆಸ್ಪತ್ರೆಗಳಲ್ಲಿ ಸಹ ಇಂದಿನಂತೆ ಹೆಚ್ಚಿನ ಸೌಲಭ್ಯಗಳು ಇರಲಿಲ್ಲ. ಸಾಮಾನ್ಯವಾಗಿ ಹತ್ತಿರದ "ನಾಟಿ ವೈದ್ಯ" ಕೊಡುವ ಮದ್ದಿನಿಂದ ಖಾಯಿಲೆ-ಕಸಾಲೆಗಳಿಗೆ ಚಿಕಿತ್ಸೆ ಮಾಡುತ್ತಿದ್ದರು. ಸ್ವಲ್ಪ ವಿದ್ಯಾವಂತರ ಮನೆಯಲ್ಲಿ ಒಂದು ಚಿಕಿತ್ಸೆ ಡಬ್ಬಿ ಮಾಡಿ ಅದರಲ್ಲಿ ಕೆಲವು ಮಾತ್ರೆಗಳ ಸರಕನ್ನು ಇಟ್ಟಿರುತ್ತಿದ್ದರು. ಚಿಕಿತ್ಸೆ ಇದರಿಂದಲೇ ನಡೆಯುತ್ತಿತ್ತು. ಜಾಕಾಯಿ, ಅಳಲೆಕಾಯಿ, ಶುಂಠಿ, ಅರಿಸಿನ, ಔಷಧಿ ಗುಣವಿರುವ ಸೊಪ್ಪುಗಳು, ಇವುಗಳಿಂದ ರೋಗಿಗಳ ಶುಶ್ರೂಷೆ ನಡೆಯುತ್ತಿತ್ತು. ಆಯುರ್ವೇದ ಪಂಡಿತರು ಬಾಣಂತಿಯರಿಗಾಗಿ "ಮಹಾ ಸೌಭಾಗ್ಯ ಶುಂಠಿ ಲೇಹ್ಯ" ಮಾಡಿಕೊಡುತ್ತಿದ್ದರು. ನಂಜನಗೂಡು ಬಿ. ವಿ. ಪಂಡಿತರ "ಸದ್ವೈದ್ಯಶಾಲಾ" ತಯಾರಿತ ಜ್ವರಕೇಸರಿ, ಸುಖಭೇದಿ ಮತ್ತು ಕಸ್ತೂರಿ ಮಾತ್ರೆ ಮುಂತಾದವು ಇಂತಹ ಡಬ್ಬಿಯಲ್ಲಿ ಇರುತ್ತಿದ್ದವು. 


ಮನೆಯಲ್ಲಿ ಯಾರಿಗಾದರೂ ಜ್ವರ ಬಂದರೆ "ಜ್ವರಕೇಸರಿ" ಮಾತ್ರೆ ಕೊಡುತ್ತಿದ್ದರು. ಮಾತ್ರೆ ನುಂಗಲಾರದ ಚಿಕ್ಕ ಮಕ್ಕಳಿಗೆ ಅದನ್ನು ಜೇನುತುಪ್ಪದಲ್ಲಿ ಕಲೆಸಿ ಒಂದು ವೀಳೆಯದೆಲೆ ಮೇಲೆ ಇಟ್ಟು ನೆಕ್ಕಿಸುತ್ತಿದ್ದರು. ಶಿಶುಗಳಿಗೆ ಒಂದು ಒಳಲೆಯಲ್ಲಿ ಅದನ್ನು ಹಾಲಿನಲ್ಲಿ ಪುಡಿ ಮಾಡಿ ಬೆರೆಸಿ ಕುಡಿಸುತ್ತಿದ್ದರು. ಅನೇಕವೇಳೆ ಒಳಲೆಯ ಔಷಧದ ಹಾಲು ಪೂರ್ತಿ ಶಿಶುವಿನ ಹೊಟ್ಟೆಗೆ ಸೇರುತ್ತಿರಲಿಲ್ಲ. ಅರ್ಧ ಹೋಗಿ ಅರ್ಧ ಶಿಶು ಉಗುಳಿ ಹೊರಹಾಕುತ್ತಿತ್ತು. "ಔಷದಿ ಪೂರ್ತಿ ದಕ್ಕಲಿಲ್ಲ" ಎನ್ನುತ್ತಿದ್ದರು. ಔಷದಿ ಸಿಕ್ಕಿತು. ಆದರೆ ದಕ್ಕಲಿಲ್ಲ. 


ಒಬ್ಬರು ಬಹಳ ಕಷ್ಟ ಪಟ್ಟು ಸಾಲ-ಸೋಲ ಮಾಡಿ ಮನೆ ಕಟ್ಟಿದ್ದಾಯಿತು. ಆದರೆ ಮನೆ ಕಟ್ಟಿ ಮುಗಿಯುವ ಹೊತ್ತಿಗೆ ಕೆಲಸದಲ್ಲಿ ದೂರದ ಊರಿಗೆ ವರ್ಗಾವಣೆ ಆಯಿತು. ಕಟ್ಟಿದ ಮನೆಯಲ್ಲಿ ವಾಸ ಮಾಡುವಂತಿಲ್ಲ. ಮನೆ ಕಟ್ಟುವ ಭಾಗ್ಯ ಸಿಕ್ಕಿತು. ಸ್ವಂತ ಮನೆ ಆಯಿತು. ಆದರೆ ಅದರಲ್ಲಿ ಇರುವ ಸಂತಸ ಸಿಗಲಿಲ್ಲ. ಇಂತಹ ಅನೇಕ ಉದಾಹರಣೆಗಳನ್ನು ಕೊಡಬಹುದು. "ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ" ಅನ್ನುವ ಗಾದೆ ಇಂತಹ ಸಂದರ್ಭಗಳಿಂದಲೇ ಹುಟ್ಟಿರಬೇಕು. 


*****

ಈ ಸಿಕ್ಕಿತು-ದಕ್ಕಿತು ಮತ್ತು ಯೋಗ-ಕ್ಷೇಮ ಎರಡೂ ಒಂದೇ. ಜೀವನದಲ್ಲಿ ಅನೇಕ ಪದಾರ್ಥಗಳು ಸಿಕ್ಕುತ್ತವೆ. ಆದರೆ ದಕ್ಕುವುದಿಲ್ಲ. ಯೋಗ ಎಂದರೆ ಯಾವುದೋ ಒಂದು ಸುಖ, ಸಂಪತ್ತು, ಪದವಿ, ಭಾಗ್ಯ ಸಿಕ್ಕುವ ಅವಕಾಶ. ಕ್ಷೇಮ ಅಂದರೆ ಅಂತಹ ಸಿಕ್ಕಿದ ಸುಖ, ಪದವಿ ಅಥವಾ ಭಾಗ್ಯ ದಕ್ಕುವುದು. ಸಿಕ್ಕಿದಾಗ ಅನುಭವ ಇಲ್ಲ. ಸಿಕ್ಕಿದ್ದು ದಕ್ಕಿದಾಗಲೇ ಅದರ ಅನುಭವ. ತುತ್ತು ಕೈಗೇನೋ ಬಂತು.  ಆದರೆ ಬಾಯಿಗೆ ಬೀಳುವ ಮುನ್ನ ಮಣ್ಣಲ್ಲಿ ಬಿದ್ದುಹೋಯಿತು!  ಸಿಕ್ಕದಿದ್ದರೆ ನಿರಾಸೆಯೇನೋ ಆಗುತ್ತಿತ್ತು. ಆದರೆ ಸಿಕ್ಕಮೇಲೆ ದಕ್ಕದಿದ್ದಾಗ ಎರಡರಷ್ಟು ನಿರಾಸೆ. ಬಹಳ ಪ್ರಯತ್ನಪಟ್ಟಮೇಲೆ ಹೀಗಾದರೆ ಹೇಳಲಾರದಷ್ಟು ನಿರಾಸೆ ಮತ್ತು ಹಿಂಸೆ. 


ಜ್ಯೋತಿಷ್ಯದಲ್ಲಿ ಜನ್ಮ ಕುಂಡಲಿ ನೋಡಿ ಕೆಲವರಿಗೆ "ಗಜಕೇಸರಿ ಯೋಗ" ಇದೆ ಅನ್ನುತ್ತಾರೆ. ಮತ್ತೆ ಕೆಲವರಿಗೆ "ರಾಜಯೋಗ". ಇದೇ ರೀತಿ ಅನೇಕ ಯೋಗಗಳು. ಅನೇಕರಿಗೆ ಈ ರೀತಿಯ ಯೋಗಗಳು ಇರುತ್ತವೆ. ಒಂದೇ ಸಮಯದಲ್ಲಿ ಹುಟ್ಟಿದ ಅನೇಕರಿಗೆ ಒಂದೇ ಕುಂಡಲಿ ಇರುತ್ತದೆ. ಆದರೆ ಎಲ್ಲರಿಗೂ ಅದೇ ಯೋಗ ಇದ್ದರೂ ಫಲ ಬೇರೆ ಬೇರೆ. ಅದರ ಫಲ ಎಲ್ಲರಿಗೂ ಒಂದೇ ಸಮನಾಗಿ ಸಿಗುವುದಿಲ್ಲ. ಯೋಗ ಇದ್ದರೆ ಮಾತ್ರ ಸಾಲದು. ಅದರ ಜೊತೆ ಸಿಕ್ಕಿದ್ದು ಕ್ಷೇಮವಾಗಿ ಬರಬೇಕು. ಇಲ್ಲದಿದ್ದರೆ ಸಿಕ್ಕುತ್ತದೆ. ಆದರೆ ದಕ್ಕುವುದಿಲ್ಲ. 


*****


ಮುಖ್ಯಪ್ರಾಣರು ಎಲ್ಲ ಜೀವರಲ್ಲೂ ಉಸಿರಾಡಿಸುತ್ತಾರೆ. ಪ್ರತಿ ಉಸಿರಿನಲ್ಲೂ ಹಂಸ ಮಂತ್ರ ಜಪ ಮಾಡಿ ಅದರ ಪುಣ್ಯ ಅವರವರ ಖಾತೆಗೆ ಹಾಕುತ್ತಾರೆ. ಈ ರೀತಿಯ ಹಂಸ ಮಂತ್ರ ಜಪದ ಫಲದ ಯೋಗ ಎಲ್ಲರಿಗೂ ಇದೆ. ಆದರೆ ಅದನ್ನು ತಿಳಿದು ಅವರಿಗೆ ಕೃತಜ್ಞತೆ ಸಲ್ಲಿಸಿದಾಗ ಮಾತ್ರ ನಮಗೆ ಅದರ ಪುಣ್ಯದ ಭಾಗ. ಆಗ ಯೋಗ-ಕ್ಷೇಮ ಆಯಿತು. ಇಲ್ಲದಿದ್ದರೆ ಸಿಕ್ಕಿದರೂ ದಕ್ಕಲಿಲ್ಲ ಎಂದಾಯಿತು. ನಮ್ಮ ಖಾತೆಗೆ ಹಣ ಬಂದು ಬಿದ್ದಿದೆ. ನಾವು ಖಾತೆಯನ್ನೇ ನೋಡಲಿಲ್ಲ. ಹಣ ತೆಗೆದು ಉಪಯೋಗಿಸದೆ ನಮ್ಮ ಜೀವನ ಬಡತನದಲ್ಲೇ ಮುಗಿದಂತೆ. ಬಂದ ಯೋಗ ಲ್ಯಾಪ್ಸ್ ಆಯಿತು. ನಾವು ನಿರ್ಭಗ್ಯರಾಗಿ ಉಳಿದೆವು. ಅಷ್ಟೇ.