ಸೂರ್ಯ ವಂಶದ ಮಹಾರಾಜ ಸತ್ಯವ್ರತ ಸಶರೀರವಾಗಿ ಸ್ವರ್ಗಕ್ಕೆ ಹೋಗಲು ಆಸೆಪಟ್ಟ. ಸ್ವರ್ಗಕ್ಕೆ ಹೋಗುವ ಯೋಗ್ಯತೆ ಪಡೆದ ಜೀವಿಗಳಿಗೆ ದೇವತೆಗಳು ಒಂದು ದಿವ್ಯ ಶರೀರವನ್ನು ಕೊಟ್ಟು ಅಲ್ಲಿಗೆ ಬರಮಾಡಿಕೊಳ್ಳುತ್ತಾರೆ. ಭೂಲೋಕದಲ್ಲಿ "ಪಾರ್ಥಿವ ಶರೀರ" ಹೊಂದಿರುವ ಮನುಷ್ಯರು ಅದೇ ಶರೀರದಲ್ಲಿ ಸ್ವರ್ಗಕ್ಕೆ ಹೋಗಲಾರರು. ಇದು ಒಂದು ನಿಯಮ. ಸತ್ಯವ್ರತನಿಗೆ ಅದೇನೋ ಪಾರ್ಥಿವ ಶರೀರದ ಮೇಲೆ ಮೋಹ. (ಪಾರ್ಥಿವ ಶರೀರದ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಬಹುದು). ಈ ನಿಯಮವನ್ನು ಮೀರಿ ಅಲ್ಲಿಗೆ ಹೋಗಬೇಕೆಂಬ ಅಭಿಲಾಷೆ. ಕುಲಗುರುಗಳಾದ ವಸಿಷ್ಠರು ಈ ಮನವಿಗೆ ಒಪ್ಪಲಿಲ್ಲದ ಕಾರಣ ಅವರ ಎದುರಾಳಿ ಎಂದು ತಿಳಿದು ಮಹರ್ಷಿ ವಿಶ್ವಾಮಿತ್ರರನ್ನು ಈ ಕೆಲಸಕ್ಕೆ ಆಶ್ರಯಿಸಿದ.
ಅವನಿಂದ ಒಂದು ಹೊಸ ರೀತಿಯ ಯಾಗ ಮಾಡಿಸಿ, ಅದರ ಫಲದ ಬಲದಿಂದ ಮಹರ್ಷಿ ವಿಶ್ವಾಮಿತ್ರರು ಅವನನ್ನು ಸ್ವರ್ಗಕ್ಕೆ ಕಳಿಸಿದರು. ದೇವೇಂದ್ರನು ಅದನ್ನು ಒಪ್ಪದೇ ಸತ್ಯವ್ರತನನ್ನು ಸ್ವರ್ಗದಿಂದ ಹೊರಕ್ಕೆ ತಳ್ಳಿಸಿದ. ಕೆಳಗೆ ಬೀಳುತ್ತಿರುವ ರಾಜನು ಮಹರ್ಷಿ ವಿಶ್ವಾಮಿತ್ರರನ್ನು ಕೂಗಿ ಕರೆದ. ಅವರು ತಮ್ಮ ತಪ:ಶಕ್ತಿಯಿಂದ ತಲೆ ಕೆಳಗಾಗಿ ಬೀಳುತ್ತಿದ್ದ ಅವನನ್ನು ಅಲ್ಲೇ ನಿಲ್ಲಿಸಿ ಅವನಿಗೆ ಹೊಸದೊಂದು ಸ್ವರ್ಗವನ್ನೇ ಸೃಷ್ಟಿಸಿದರು. ಹೀಗಾಗಿ ಅವನು ಸ್ವರ್ಗಕ್ಕೂ, ಭೂಲೋಕಕ್ಕೂ ಮಧ್ಯೆ ನಿಂತ. ಈ ಕಾರಣದಿಂದ ಅವನು "ತ್ರಿಶಂಕು" ಎಂದು ಹೆಸರು ಪಡೆದ. ಹೀಗೂ ಇಲ್ಲ, ಹಾಗೂ ಇಲ್ಲ ಎನ್ನುವಂತಾಗಿ ಮಧ್ಯದಲ್ಲಿ ಸಿಕ್ಕಿ ನೇತಾಡುವ ಸ್ಥಿತಿಗೆ ಅಂದಿನಿಂದ "ತ್ರಿಶಂಕು ಸ್ವರ್ಗ" ಅಥವಾ "ತ್ರಿಶಂಕು ಪರಿಸ್ಥಿತಿ" ಎಂದು ಹೇಳುವುದು ಬಂದಿತು. (ಇಂದಿನ ಕಾಲದ ಚುನಾವಣೆಗಳ ನಂತರ ಯಾವುದೇ ಒಂದು ಪಕ್ಷಕ್ಕೆ ಅಥವಾ ಗುಂಪಿಗೆ ಬಹುಮತ ಬರದೇ ಇದ್ದಾಗ ಈ ಪದ ಬಹಳ ಜನಪ್ರಿಯ).
ಈ ತ್ರಿಶಂಕು ಮಹಾರಾಜನ ಮಗನೇ ರಾಜಾ ಹರಿಶ್ಚಂದ್ರ. ಸತ್ಯಕ್ಕೆ ಇನ್ನೊಂದು ಹೆಸರಾದ ಈ ಹರಿಶ್ಚಂದ್ರ ಕಾರಣಾಂತರಗಳಿಂದ ವಿಶ್ವಾಮಿತ್ರರ ಪರೀಕ್ಷೆಗೆ ಗುರಿಯಾಗಬೇಕಾಯಿತು. ತನ್ನ ಮಾತನ್ನು ಉಳಿಸಿಕೊಳ್ಳುವ ಕಾರಣ ರಾಜ್ಯ-ಕೋಶಗಳನ್ನು ಕಳೆದುಕೊಂಡು, ಹೆಂಡತಿ-ಮಗನನ್ನು ಮಾರಿಕೊಂಡ. (ಮೇಲೆ ಕೊಟ್ಟಿರುವ ಚಿತ್ರ ಹೀಗೆ ಅವನು ಹೆಂಡತಿ-ಮಗನನ್ನು ಮಾರಿಕೊಳ್ಳುತ್ತಿರುವ ಪ್ರಸಂಗವನ್ನು ರಾಜ ರವಿವರ್ಮ ಚಿತ್ರಿಸಿರುವುದು). ಕಡೆಗೆ ತನ್ನನ್ನೇ ಮಾರಿಕೊಂಡು ವಿಶ್ವಾಮಿತ್ರರಿಗೆ ಕೊಡಬೇಕಾದ ಹಣ ಸಂದಾಯಮಾಡಿ ಸತ್ಯನಿಷ್ಠ ಎನಿಸಿದ. ಹೀಗೆ ಅವನು ಮಾರಾಟಕ್ಕೆಂದು ಕಾಶಿ ಕ್ಷೇತ್ರದಲ್ಲಿ ನಿಂತಾಗ ಅವನನ್ನು ಹರಾಜಿನಲ್ಲಿ ಕೊಂಡುಕೊಂಡವನೇ ವೀರಬಾಹು ಎನ್ನುವ ಸ್ಮಶಾನದ ಒಡೆಯ. ಈಗಿನ ಕಾಲದ ಸ್ಮಶಾನದ ಉಸ್ತುವಾರಿ ಪಡೆದ ಕಂಟ್ರಾಕ್ಟರ್ ಇದ್ದಂತೆ ಎನ್ನಬಹುದು.
ಈ ವೀರಬಾಹು ಯಾರು? ಅವನದೂ ಒಂದು ದೊಡ್ಡ ಕಥೆಯೇ! ಹಿಂದೆ ಕೆಲವು ಸಂಚಿಕೆಗಳಲ್ಲಿ ಸೋಮಶರ್ಮ ಮತ್ತು ಅವನ ಹೆಂಡತಿಯಾದ ಸುಮನಾ ಎಂಬ ಚ್ಯವನ ಋಷಿಗಳ ಮಗಳ ನಡುವೆ ನಡೆದ ಸಂವಾದದ ಸಂಚಿಕೆಗಳನ್ನು ನೋಡಿದ್ದೆವು. ಈ ವೀರಬಾಹುವಿನ ವೃತ್ತಾಂತ ಅದರಲ್ಲಿಯೇ ಒಂದು ಕಡೆ ಬರುತ್ತದೆ. ಸೋಮಶರ್ಮನು ಸುಮನಾ ಧರ್ಮಪುರುಷನ ಬಗ್ಗೆ ಕೊಡುವ ವಿವರಣೆ ಕೇಳಿ ಆಶ್ಚರ್ಯ ಪಟ್ಟು ಮುಂದೆ ಧರ್ಮಪುರುಷನ ಸ್ವರೂಪದ ಬಗ್ಗೆ ಕೇಳುತ್ತಾನೆ. ಆಗ ಸುಮನಾ ಕೊಡುವ ವಿಷಯಗಳ ನಿರೂಪಣೆಯಿಂದ ಈ ವೀರಬಾಹುವಿನ ಸುಳುಹು ಸಿಗುತ್ತದೆ. ಅದನ್ನಿಷ್ಟು ಈಗ ನೋಡೋಣ.
*****
"ಸಪ್ತರ್ಷಿಗಳು" ಎಂದು ಹೆಸರಾದ ಏಳು ಜನ ಮಹಾತಪಸ್ವಿಗಳಲ್ಲಿ ಅತ್ರಿ ಮಹರ್ಷಿಗಳೂ ಒಬ್ಬರು. ಇವರು ಚತುರ್ಮುಖ ಬ್ರಹ್ಮನ ಮಾನಸ ಪುತ್ರರು. ಕರ್ದಮ ಮಹರ್ಷಿ ಮತ್ತು ದೇವಹೂತಿ ದಂಪತಿಗಳ ಮಗಳಾದ ಅನಸೂಯ ಇವರ ಪತ್ನಿ. ತ್ರಿಮೂರ್ತಿಗಳ ವರದಿಂದ ಇವರಿಗೆ ಮೂರು ಮಕ್ಕಳಾಗುತ್ತಾರೆ. ಬ್ರಹ್ಮನ ವರದಿಂದ ಚಂದ್ರನೂ, ವಿಷ್ಣುವಿನ ವರದಿಂದ ದತ್ತಾತ್ರೇಯನೂ ಮತ್ತು ಪರಶಿವನ ವರದಿಂದ ದೂರ್ವಾಸರೂ ಜನಿಸುತ್ತಾರೆ. (ಮೂವರ ವರದ ಕಾರಣ ಸಂಯುಕ್ತವಾಗಿ ಮೂರು ತಲೆಯ "ದತ್ತಾತ್ರೇಯ" ಜನಿಸಿದ್ದು ಎಂದು ಒಂದು ನಂಬಿಕೆ. ಇದು ಚಲನಚಿತ್ರಗಳ ಮೂಲಕ ಮತ್ತು ಹರಿಕಥಾ ಕಾಲಕ್ಷೇಪಗಳ ಮೂಲಕ ಹೆಚ್ಚು ಪ್ರಚಾರದಲ್ಲಿದೆ).
ಧರ್ಮದೇವತೆಯನ್ನು ಪೂರ್ಣವಾಗಿ ಕಂಡವರು ಬಹಳ ಕಡಿಮೆ ಜನ. ಧರ್ಮದೇವತೆಗೆ ಎರಡು ರೂಪಗಳು. ಒಂದು ಯಮ ರೂಪ. ಪಾಪಿಗಳಿಗೆ ಕೇವಲ ಯಮದೂತರ ದರ್ಶನ ಆಗುತ್ತದೆ. ಕೆಲವರಿಗೆ ಯಮ ರೂಪದ ದರ್ಶನ ಆಗುತ್ತದೆ. ಆದರೆ ಪುಣ್ಯಾತ್ಮರಿಗೆ ಧರ್ಮದೇವತೆಯ ಎರಡನೆಯ ರೂಪವಾದ ಧರ್ಮನ ಸ್ವಲ್ಪ ದರ್ಶನ ಆಗುತ್ತದೆ. ಹೀಗೆ ಧರ್ಮದೇವತೆಯ ಪೂರ್ಣ ಸ್ವರೂಪವನ್ನು ನೋಡಬೇಕೆಂದು ತಪಸ್ಸು ಮಾಡಿ ಮುಖತಃ ಕಂಡವರು ಅತ್ರಿ-ಅನಸೂಯರ ಮಕ್ಕಳಾದ ದತ್ತಾತ್ರೇಯ ಮತ್ತು ದೂರ್ವಾಸರು ಎಂದು ಪದ್ಮ ಪುರಾಣ ಹೇಳುತ್ತದೆ.
ದೂರ್ವಾಸರು ಒಂದು ಲಕ್ಷ ವರ್ಷ ಧರ್ಮದೇವತೆಯನ್ನು ನೋಡುವುದಕ್ಕೆ ಘನಘೋರ ತಪಸ್ಸು ಮಾಡಿದರು. ತಪಸ್ಸಿನ ಕಾಲ ಏರುತ್ತಿದ್ದಂತೆ ಅವರಿಗೆ ಕೋಪವೂ ಏರಿತು. ಅದು ಎಷ್ಟರ ಮಟ್ಟಿಗೆ ಹಿಗ್ಗಿತು ಎಂದರೆ ಯಾವ ದೇವತೆಯನ್ನು ಕುರಿತು ತಪಸ್ಸು ಮಾಡಿದರೋ ಆ ದೇವತೆಯ ಮೇಲೆ ಕೋಪ ಬರಲು ಕಾರಣವಾಯಿತು. ಕಡೆಗೆ ಧರ್ಮದೇವತೆ ತನ್ನ ಪರಿವಾರದ ಸಮೇತ ಪ್ರತ್ಯಕ್ಷನಾದನು. ಧರ್ಮದೇವತೆಯ ಪಕ್ಕದಲ್ಲಿ ಐದು ಜನ ಮಹಾತೇಜಸ್ವಿಗಳಾದ ಪುರುಷರೂ ಮತ್ತು ಒಂಭತ್ತು ಮಂದಿ ಪರಮ ಸುಂದರಿಯರಾದ ಸ್ತ್ರೀಯರೂ, ಒಬ್ಬ ತೇಜೋಮಯಿಯಾದ ವೃದ್ಧ ತಪಸ್ವಿನಿಯೂ ನಿಂತಿದ್ದರು.
"ಮಹರ್ಷಿ, ನೋಡು. ನಾನು ಬಂದಿದ್ದೇನೆ."
"ಯಾರು ನೀನು? ಈ ತೇಜಸ್ವಿ ಪುರುಷರು ಯಾರು? ಈ ದಿವ್ಯ ಸುಂದರಿಯರು ಯಾರು?"
"ಈ ತೇಜಸ್ವಿ ಪುರುಷರು ಕ್ರಮವಾಗಿ ಬ್ರಹ್ಮಚರ್ಯ, ತಪಸ್ಸು, ದಮ, ನಿಯಮ ಮತ್ತು ಶೌಚ ಎಂಬುವುವು. ಈ ಸುಂದರ ಸ್ತ್ರೀಯರು ಕ್ರಮವಾಗಿ ಕ್ಷಮೆ, ಶಾಂತಿ, ಅಹಿಂಸೆ, ಶುಶ್ರೂಷೆ, ಕಲ್ಪನೆ, ಬುದ್ಧಿ, ಪ್ರಜ್ಞೆ, ಶ್ರದ್ದೆ ಮತ್ತು ಮೇಧೆ. ಹತ್ತನೆಯವಳಾದ ವೃದ್ಧ ತಪಸ್ವಿನಿ ನನ್ನ ತಾಯಿಯಾದ ದಯೆ. ನಾನು ನೀನು ನೋಡಲು ಅಪೇಕ್ಷಿಸಿದ ಧರ್ಮಪುರುಷ."
"ನೀನೇಕೆ ಇಷ್ಟು ತಡ ಮಾಡಿದೆ? ನೋಡು, ಒಂದು ಲಕ್ಷ ವರುಷ ತಪಸ್ಸು ಮಾಡಿ ಹೇಗೆ ಸೊರಗಿದ್ದೇನೆ. ನಿನ್ನ ವಿಳಂಬ ನೀತಿಯಿಂದ ನನಗೆ ಬಹಳ ಕೋಪ ಬಂದಿದೆ."
"ನೀನು ಮಹಾ ತಪಸ್ವಿ. ನಿನ್ನಂತಹವರಿಗೆ ಕೋಪವು ಒಳ್ಳೆಯದಲ್ಲ. ಶಾಂತನಾಗು."
"ಶಾಂತನಾಗುವುದು ಸುಲಭವಲ್ಲ. ನಿನಗೆ ಶಾಪ ಕೊಡುತ್ತೇನೆ."
"ಕೋಪವು ನಿನಗೆ ಶೋಭಿಸದು. ಶಾಪವನ್ನು ಕೊಟ್ಟಾದರೂ ಶಾಂತನಾಗು. ನನ್ನನು ದಾಸೀಪುತ್ರನನ್ನಾಗಿ ಮಾಡು. ರಾಜನನ್ನಾಗಿ ಮಾಡು. ಇಲ್ಲವೇ. ಚಂಡಾಲನನ್ನಾಗಿ ಮಾಡು. ಆದರೆ ನೀನು ಶಾಂತನಾಗು."
"ನೀನು ದಾಸೀಪುತ್ರನಾಗಿ ಜನ್ಮ ತಾಳು. ಭರತ ವಂಶದಲ್ಲಿ ರಾಜನಾಗಿ ಜನಿಸು. ಚಂಡಾಲನಾಗಿಯೂ ಹುಟ್ಟು"
ದೂರ್ವಾಸರ ಕೋಪ ಅಂತಹುದು. ಧರ್ಮದೇವತೆಯನ್ನು ನೋಡಲು ತಪಸ್ಸು ಮಾಡಿದರು. ಕಡೆಗೆ ದರ್ಶನ ಕೊಡಲು ಬಂದ ಧರ್ಮದೇವತೆಗೇ ಮೂರು ಶಾಪ ಕೊಟ್ಟು ಹೊರತು ಹೋದರು.
ಹೀಗೆ ಮೂರು ಶಾಪ ಪಡೆದ ಧರ್ಮದೇವತೆ ದಾಸೀಪುತ್ರನಾಗಲು ವಿದುರ ಆಗಿ ಹುಟ್ಟಿದ. ಭರತ ವಂಶದ ಚಕ್ರವರ್ತಿ ಯುಧಿಷ್ಠಿರ ಆಗಿ ಜನಿಸಿದ.
ಮೂರನೆಯ ಶಾಪವನ್ನು ಉಪಯೋಗಿಸಿಕೊಂಡು ತ್ರಿಶಂಕುವಿನ ಮಗ ಹರಿಶ್ಚಂದ್ರ ಕಾಶಿಯಲ್ಲಿ ಮಾರಾಟಕ್ಕೆ ಬರುವ ವೇಳೆಯಲ್ಲಿ "ವೀರಬಾಹು" ಎನ್ನುವ ಹೆಸರಿನಿಂದ ಹುಟ್ಟಿ, ಸ್ಮಶಾನದ ಮಾಲೀಕನಾಗಿ ಹರಿಶ್ಚಂದ್ರನನ್ನು ಕೊಂಡುಕೊಂಡು ಕೆಲಸಕ್ಕೆ ಇಟ್ಟುಕೊಂಡ.
*****
"ಸತ್ಯ ಹರಿಶ್ಚಂದ್ರ" ಹೆಸರಿನ ಅನೇಕ ಚಲನಚಿತ್ರಗಳು ಬೇರೆ ಬೇರೆ ಭಾಷೆಗಳಲ್ಲಿ ಬಂದಿವೆ. ಕನ್ನಡದ "ಸತ್ಯ ಹರಿಶ್ಚಂದ್ರ" ಚಲನಚಿತ್ರ ಜನಪ್ರಿಯ ನಾಯಕ ನಟ ರಾಜಕುಮಾರ್ ಅವರಿಗೆ ಅಪಾರ ಹೆಸರು ತಂದಿತು. ಇಂದಿಗೂ ಈ ಚಿತ್ರ ಪ್ರದರ್ಶನವಾದ ಕಡೆ ನೂಕುನುಗ್ಗಲು, ಜನಸಂದಣಿ ಇರುತ್ತದೆ. ಎಂ. ಪಿ. ಶಂಕರ್ ಅವರ ವೀರಬಾಹು ಪಾತ್ರ ಮತ್ತು ಅದರ "ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮತದಲ್ಲಿ ಮೇಲ್ಯಾವುದೋ" ಹಾಡು ಅತ್ಯಂತ ಜನಪ್ರಿಯ. ಈ ಹಾಡಿನಲ್ಲಿ ಅನೇಕ ತತ್ವಗಳೂ ಅಡಗಿವೆ.
ಚಿತ್ರದ ಕಡೆಯಲ್ಲಿ ವಸಿಷ್ಠ-ವಿಶ್ವಾಮಿತ್ರರೂ, ದೇವೇಂದ್ರನೂ ಮೊದಲಾದವರು ಹರಿಶ್ಚಂದ್ರನಿಗೆ ಮತ್ತೆ ರಾಜ್ಯಭಾರವನ್ನು ವಹಿಸಿಕೊಳ್ಳಲು ಹೇಳುತ್ತಾರೆ. ಆಗ ಅವನು "ನಾನು ಸ್ಮಶಾನ ಕಾಯುವ ಕೆಲಸ ಮಾಡಿದವನು. ಈಗ ಅದಕ್ಕೆ ಯೋಗ್ಯನಲ್ಲ. ಕ್ಷಮಿಸಿ" ಅನ್ನುತ್ತಾನೆ. ಆಗ ಅವರು "ನೀನು ಕಾದದ್ದು ಸ್ಮಶಾನವಲ್ಲ. ಅಲ್ಲಿ ನೋಡು. ನಿನ್ನನ್ನು ಕೊಂಡುಕೊಂಡವನು ಧರ್ಮರಾಜನು. ನೀನು ಕಾಯುತ್ತಿದ್ದುದು ಅನೇಕ ಋಷಿಗಳ ಹೋಮಕುಂಡಗಳು" ಎಂದು ತೋರಿಸುತ್ತಾರೆ. ಚಿತ್ರದ ಕೊನೆಯ ಕೆಲವು ಸೆಕೆಂಡುಗಳ ಈ ಭಾಗವನ್ನು ಯಾರೂ ಹೆಚ್ಚಾಗಿ ಗಮನಿಸುವುದಿಲ್ಲ. ಮತ್ತೊಮ್ಮೆ ನೋಡಿದರೆ ಗೊತ್ತಾಗುವುದು. ಚಿತ್ರ ಯೂಟ್ಯೂಬಿನಲ್ಲಿ ಲಭ್ಯವಿದೆ.
"ದಯೆಯೇ ಧರ್ಮದ ಮೂಲವಯ್ಯ" ಎನ್ನುವ ಶರಣಶ್ರೇಷ್ಠರ ವಚನಗಳಿಗೂ, ಧರ್ಮಪುರುಷನು "ದಯೆ ನನ್ನ ತಾಯಿ" ಎಂದು "ಪದ್ಮ ಪುರಾಣ" ಸಂದರ್ಭದ ಸಂಭಾಷಣೆಯಲ್ಲಿ ಹೇಳುವುದಕ್ಕೂ ಸಾಮ್ಯವನ್ನು ಕಾಣಬಹುದು.
*****
ದೂರ್ವಾಸರು ಧರ್ಮದೇವತೆಗೆ ಶಾಪ ಕೊಟ್ಟದ್ದು ಸರಿಯೇ? ಧರ್ಮದೇವತೆ ಅದನ್ನು ಯಾಕೆ ಒಪ್ಪಿಕೊಂಡನು? ಧರ್ಮದೇವತೆಗೆ ಅದನ್ನು ತಪ್ಪಿಸಿಕೊಳ್ಳಲು ಆಗಲಿಲ್ಲವೇ? ಇವೇ ಮುಂತಾದ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಯಲ್ಲಿ ಉತ್ತರ ಹುಡುಕೋಣ.