Friday, August 8, 2025

ಸಂತಾನ ಸೃಷ್ಟಿಯ ವಿಧಗಳು


ಹಿಂದಿನ ಒಂದು ಸಂಚಿಕೆಯಲ್ಲಿ "ಸತ್ಪುತ್ರ ಪ್ರಾಪ್ತಿ" ಎನ್ನುವ ಶೀರ್ಷಿಕೆಯಡಿ ಒಳ್ಳೆಯ ಮಕ್ಕಳು ಜನಿಸಲು ಮಾಡಬೇಕಾದ ಕೆಲವು ಸತ್ಕರ್ಮಗಳ ಬಗ್ಗೆ ಚರ್ಚೆ ಮಾಡಿದ್ದೆವು. ಅದಕ್ಕೂ ಹಿಂದೆ "ಐದು ರೀತಿಯ ಮಕ್ಕಳು" ಎನ್ನುವ ಸಂಚಿಕೆಯಲ್ಲಿ ಮಕ್ಕಳ ಜನನಕ್ಕೆ ವಿವಿಧ ಕಾರಣಗಳನ್ನೂ ನೋಡಿದ್ದೆವು. (ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಗಳನ್ನು ಓದಬಹುದು).

ಓದುಗರೊಬ್ಬರು ಇವುಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. "ಕೆಲವು ಕಥೆಗಳಲ್ಲಿ ಯಾರೋ ದೊಡ್ಡವರು ವರಗಳನ್ನು ಕೊಟ್ಟಿದ್ದರಿಂದ ಮಕ್ಕಳಾದರು, ಯಜ್ಞ-ಯಾಗಾದಿಗಳನ್ನು ಮಾಡಿ ಪಡೆದ ಯಜ್ಞಫಲದಿಂದ ಸಂತಾನವಾಯಿತು, ಈ ರೀತಿಯ ಸಂಗತಿಗಳನ್ನು ಕೇಳಿದ್ದೇವೆ. ಇದು ಹೇಗೆ ಸಾಧ್ಯ? ಸಂತಾನ ಸೃಷ್ಟಿಗೆ ಬೇರೆ ಬೇರೆ ವಿಧಗಳಿವೆಯೇ?" ಎನ್ನುವ ಪ್ರಶ್ನೆ ಎದ್ದಿದೆ. ಹೀಗೆಯೇ, "ಒಂದು ವರದಿಂದ ಅನೇಕ ಮಂದಿ ಮಕ್ಕಳು ಹುಟ್ಟುವುದು ಹೇಗೆ?" ಎಂದೂ ಪ್ರಶ್ನಿಸಿದ್ದಾರೆ. ಇದರ ಬಗ್ಗೆ ಈಗ ಸ್ವಲ್ಪ ನೋಡೋಣ. 

*****

ಪ್ರಾಣಿ ಪ್ರಪಂಚದಲ್ಲಿ ಸಂತಾನೋತ್ಪತ್ತಿಯ ವಿವಿಧ ರೀತಿಗಳನ್ನು ಕಾಣುತ್ತೇವೆ. ಏಕಕೋಶ ಜೀವಿಗಳ ವಿಷಯದಲ್ಲಿ ಗಂಡು ಹೆಣ್ಣು ಎನ್ನುವ ಭೇದ ಅಥವಾ ಸಂಬಂಧ ಇಲ್ಲ. ಒಂದು ಜೀವಿಯೇ ಎರಡಾಗಿ ಮುಂದಿನ ಸೃಷ್ಟಿ ನಡೆಯುತ್ತಿದೆ. ಕೆಲವು ಪ್ರಾಣಿಗಳಲ್ಲಿ ಮೊಟ್ಟೆಯ ಮೂಲಕ ಮರಿಗಳಾಗಿ ಮುಂದಿನ ತಲೆಮಾರು ರೂಪುಗೊಳ್ಳುತ್ತದೆ. ಸಸ್ತನಿಗಳಲ್ಲಿ ಹೆಣ್ಣು ಪ್ರಾಣಿ ಗರ್ಭ ಧರಿಸಿ, ಕಾಲ ತುಂಬಿದ ಮೇಲೆ ಮರಿ ಹಾಕಿ ಮುಂದಿನ ಜನಾಂಗ ಹುಟ್ಟುತ್ತದೆ. 

ನಮ್ಮ ಸುತ್ತ-ಮುತ್ತಲಿನ ಸಸ್ಯರಾಶಿಗಳಲ್ಲಿ ಅನೇಕ ವಿಧದ ರೀತಿಯ ಬೆಳವಣಿಗೆಗಳನ್ನು ಕಾಣಬಹುದು. ಕೆಲವು ಸಸ್ಯಗಳು ಪರಾಗ ಸ್ಪರ್ಶದಿಂದ ಧಾನ್ಯ, ಹೂವು, ಹಣ್ಣುಗಳನ್ನು ಕೊಡುತ್ತವೆ. ಕುಂಬಳ, ಸೋರೆ ಮುಂತಾದ ಬಳ್ಳಿಗಳಲ್ಲಿ ಹೆಣ್ಣು ಹೂವು ಮತ್ತು ಗಂಡು ಹೂವು ಎನ್ನುವುದನ್ನು ನಾವು ಕಾಣಬಹುದು. ಹೆಣ್ಣು ಹೂವುಗಳು ಪರಾಗ ಸ್ಪರ್ಶದ ನಂತರ ಕಾಯಿ, ಹಣ್ಣುಗಳಾಗುತ್ತವೆ. 

ಮತ್ತೆ ಕೆಲವು ಸಸ್ಯಗಳಲ್ಲಿ ಅವುಗಳ ಒಂದು ಭಾಗವನ್ನು ಮಣ್ಣಿನಲ್ಲಿ ನೆಟ್ಟು ಮುಂದಿನ ಬೆಳೆ ತೆಗೆಯುವುದನ್ನು ಕಾಣುತ್ತೇವೆ. ಕಬ್ಬು, ಬಾಳೆ, ಶುಂಠಿ, ಸುವರ್ಣ ಗೆಡ್ಡೆ ಮುಂತಾದುವುಗಳನ್ನು ಅವುಗಳ ಗೆಡ್ಡೆಯ ತುಂಡುಗಳು ಅಥವಾ ಕಂದುಗಳ ಮೂಲಕ ಬೆಳೆಯುವುದು ಸರ್ವೇ ಸಾಮಾನ್ಯ. ಈ ರೀತಿಯ ಬೆಳವಣಿಗೆಗಳಲ್ಲಿ ಪರಾಗ ಸ್ಪರ್ಶ ಇರುವುದಿಲ್ಲ. ಈ ಕ್ರಮ ಇಲ್ಲದೆಯೇ ಮುಂದಿನ ಋತುವಿನ ಬೆಳೆ ತೆಗೆಯುವುದು ಸಾಧ್ಯ.

ಹೀಗೆ ನಮ್ಮ ಕಣ್ಣ ಮುಂದೆ ಇರುವ ಸಸ್ಯ ಮತ್ತು ಪ್ರಾಣಿಗಳಲ್ಲೇ ಮುಂದಿನ ತಲೆಮಾರಿನ ಸೃಷ್ಟಿ ಬೇರೆ ಬೇರೆ ರೀತಿ ನಡೆಯುವುದು ನಮ್ಮ ಅನುಭವದಿಂದ ಗೊತ್ತಾಗುವುದು. ಹಾಗಿದ್ದರೆ ಮನುಷ್ಯರ ವಿಷಯದಲ್ಲಿ ವಿವಿಧ ರೀತಿಯ ಸೃಷ್ಟಿ ಇದ್ದಲ್ಲಿ ಅದೇನೂ ಆಶ್ಚರ್ಯದ ಸಮಾಚಾರವಲ್ಲ. 

***** 

ನಮ್ಮ ವೈದಿಕ ವಾಂಗ್ಮಯದ ಅನೇಕ ಮೂಲಗಳ ಪ್ರಕಾರ ಪರಮಾತ್ಮನ ನಿಯಮನದಲ್ಲಿ ಮಹಾಪ್ರಳಯದ ನಂತರ ಸಂತಾನೋತ್ಪತ್ತಿ ನಾಲ್ಕು ರೀತಿಗಳಿಂದ ಆಗಿರುವುದು ಗೊತ್ತಾಗುತ್ತದೆ. ಮೊದಲನೆಯದು "ಸಂಕಲ್ಪ ಸೃಷ್ಟಿ". ಎರಡನೆಯದು "ದೃಷ್ಟಿ ಸೃಷ್ಟಿ". ಮೂರನೆಯದು "ಸ್ಪರ್ಶ ಸೃಷ್ಟಿ". ನಂತರದ ನಾಲ್ಕನೆಯದು "ದೈಹಿಕ ಸೃಷ್ಟಿ". ಹೀಗಂದರೆ ಏನು?

ಸೃಷ್ಟಿಯಲ್ಲಿಯ ಮೊಟ್ಟ ಮೊದಲನೆಯ ಜನನವಾದದ್ದು ಎಲ್ಲರನ್ನೂ ಸೃಷ್ಟಿಸುವ ಚತುರ್ಮುಖ ಬ್ರಹ್ಮನದ್ದು. ಅವನು ಹುಟ್ಟಿದ ಪರಿ ಹೇಗೆ? "ಮರಳು ಮಾಡಿಕೊಂಡೆಯಲ್ಲೇ, ಮಾಯಾದೇವಿಯೇ!" ಎನ್ನುವ ಪದದಲ್ಲಿ (ಇಲ್ಲಿ ಕ್ಲಿಕ್ ಮಾಡಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬಹುದು) ಪುರಂದರದಾಸರು ಲಕ್ಷ್ಮಿ ದೇವಿಯನ್ನು ಲಲಿತ ಹಾಸ್ಯದ ಧಾಟಿಯಲ್ಲಿ ಹೀಗೆ ಹೇಳುತ್ತಾರೆ: 

ಮಕ್ಕಳ ಪಡೆದರೆ ನಿನ್ನ ಚೊಕ್ಕತನವು ಪೋಪುದೆಂದು 
ಪೊಕ್ಕುಳಲಿ ಮಗನ ಪಡೆದು ಕಕ್ಕುಲಾತಿ ಮೆರೆವಂತೆ 
ಮರುಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ!

ಮಕ್ಕಳು ಹುಟ್ಟಿದರೆ ತನ್ನ ಹೆಂಡತಿಯ ಅಂಗ ಸೌಷ್ಟವ ಹಾಳಾಗುವುದು ಎಂದು ತನ್ನ ಹೊಕ್ಕುಳಿನಿಂದಲೇ ಬ್ರಹ್ಮನನ್ನು ನಾರಾಯಣನು ಪಡೆದ! ಈ ಜನನಕ್ಕೆ ಕಾರಣ ಪರಮಾತ್ಮನ ಸಂಕಲ್ಪವೊಂದೇ. ಮುಂದೆ ಚತುರ್ಮುಖನೂ ಸನಕಾದಿಗಳನ್ನು, ರುದ್ರನನ್ನು, ನಾರದಾದಿ ಋಷಿಗಳನ್ನೂ, ಮತ್ತನೇಕ ದೇವತೆಗಳನ್ನೂ ಸೃಷ್ಟಿಸಿದ್ದು ಹೀಗೆಯೇ. (ಇವರು ನಾಭಿಯಿಂದ ಹುಟ್ಟದಿದ್ದರೂ ಕೇವಲ ಸಂಕಲ್ಪದಿಂದ ಹುಟ್ಟಿದವರು). ಇಲ್ಲಿ ಗಂಡು-ಹೆಣ್ಣುಗಳ ಸಂಪರ್ಕವಿಲ್ಲ. ಇದೇ ರೀತಿ ಅನೇಕ "ಮಾನಸ ಪುತ್ರರು" ಆಯಾಯಾ ದೇವತೆಗಳ ಮನಸ್ಸಿನಲ್ಲಿ ಮೂಡಿದ ಇಚ್ಛೆಯಿಂದ ಹುಟ್ಟಿದವರು. ಇವೆಲ್ಲವೂ ಸಂಕಲ್ಪ ಸೃಷ್ಟಿ. 

ಇಂತಹ ಸೃಷ್ಟಿ ಎಲ್ಲರಿಂದಲೂ ಸಾಧ್ಯವಿಲ್ಲ. ವಿಶಾಲ ಸೃಷ್ಟಿ ಕಾರ್ಯದಲ್ಲಿ ಮೊದಲ ಹಂತದಲ್ಲಿ ಮಾತ್ರ ಈ ರೀತಿ ಸಂಕಲ್ಪ ಸೃಷ್ಟಿಗಳಾದವು. 

*****

ಮೊದಲ ಸೃಷ್ಟಿಗಲ್ಲಿ ಹೆಚ್ಚಿನ ಸಂಖ್ಯೆಯ ಪ್ರಜಾಸೃಷ್ಟಿ ಬೇಗ ಬೇಗ ಆಗಬೇಕಾಗಿದ್ದರಿಂದ ಅನೇಕ "ಪ್ರಜಾಪತಿ" ಎಂಬ ಕರ್ತವ್ಯದ ದೇವತೆಗಳ ಸೃಷ್ಟಿಯಾಯಿತು. ಸಂತಾನ ಜನಿಸಲು ಬೇಕಾದ ಕ್ರಿಯೆಯನ್ನು ಕೇವಲ ಅವರ ದರ್ಶನದಿಂದ ನಡೆಸಿದಾಗ "ದೃಷ್ಟಿ ಸೃಷ್ಟಿ" ಆಯಿತು. ಸಂತಾನ ಪ್ರಾಪ್ತಿಗಾಗಿ ಅನೇಕ ದೇವತೆಗಳನ್ನು ಅರ್ಚಿಸಿ, ಆರಾಧಿಸಿದಾಗ ಹೀಗೆ ಅವರ ವರರೂಪದ ಕರುಣಾ ದೃಷ್ಟಿಯಿಂದಲೇ ಸಂತತಿಗಳು ಉಂಟಾದುವು. 

ಇದೇ ರೀತಿ ತಮ್ಮನ್ನು ಸತ್ಸಂತಾನಕ್ಕಾಗಿ ಆರಾಧಿಸಿದ ಸುಜೀವಿಗಳಿಗೆ ಕೇವಲ ಸ್ಪರ್ಶದಿಂದ ಅಥವಾ ಯಜ್ಞಫಲ, ಇತರ ಫಲ-ಪಾಯಸ ರೂಪದಿಂದ ಅನುಗ್ರಹಿಸಿ 'ಸ್ಪರ್ಶ ಸೃಷ್ಟಿ" ನಡೆಯಿತು. ಇಂತಹ ಸಂದರ್ಭಗಳಲ್ಲಿ ಸತ್ಪಾತ್ರರ ಕೋರಿಕೆಯಂತೆ ಒಂದೇ ವರದ ಪ್ರಭಾವದಿಂದ ಅನೇಕ ಮಕ್ಕಳ ಜನನಗಳೂ ನಡೆದವು. 

ಕಾಲಕ್ರಮದಲ್ಲಿ ಪ್ರಜೋತ್ಪತ್ತಿ ಅಭಿವೃದ್ಧಿಯಾದುದರಿಂದ ಈ ರೀತಿಯ ಸೃಷ್ಟಿಕಾರ್ಯಗಳು ನಿಂತವು. ಅಸಂಖ್ಯ ಸ್ತ್ರೀ-ಪುರುಷರ ಸೃಷ್ಟಿಯಿಂದ ಇವುಗಳ ಅವಶ್ಯಕತೆಯೂ ಇಲ್ಲವಾಯಿತು. ಗಂಡು-ಹೆಣ್ಣುಗಳ ದೈಹಿಕ ಸಮಾಗಮದ ಫಲವಾಗಿ ನಡೆಯುವ "ದೈಹಿಕ ಸೃಷ್ಟಿ" ಕಾಲ ಇದಾಗಿದೆ. 

ಈಗಲೂ ಅನೇಕರು ವ್ರತಾದಿಗಳನ್ನು ಮಾಡಿ, ಪ್ರಾರ್ಥಿಸಿದ ದೇವತೆಗಳ, ದೇವದೂತರ ಅನುಗ್ರಹವನ್ನು ಸ್ವಪ್ನರೂಪದಲ್ಲಿ ಪಡೆದು ಸಂತಾನ ಆದುವೆಂದು ನಂಬುತ್ತಾರೆ. 

*****

ಹಿಂದೆ ಅನೇಕ ಸಂದರ್ಭಗಳಲ್ಲಿ ಹೇಳಿದಂತೆ ಇವುಗಳನ್ನು ನಂಬುವುದೂ, ಬಿಡುವುದೂ ಅವರವರಿಗೆ ಸೇರಿದ ವಿಷಯ.  ವೈದಿಕ ವಾಂಗ್ಮಯದ ಅಧ್ಯಯನದ ಮೂಲಕ ತಿಳಿದವರು ನಮಗೆ ಹೇಳಿರುವ ರೀತಿಗಳು ಇವು. 

ಈಗಿನ ಸಮಾಜದಲ್ಲಿ ವೈಜ್ಞಾನಿಕ ಬೆಳವಣಿಗಳ ಪರಿಣಾಮವಾಗಿ "ಪ್ರನಾಳ ಶಿಶುಗಳು" ಜನಿಸಿವುದನ್ನು ನೋಡುವ ನಾವುಗಳು ಇವನ್ನು ಏಕೆ ನಂಬಬಾರದು?

7 comments:

  1. ಚೆನ್ನಾಗಿದೆ

    ReplyDelete
  2. Good information which made me to understand about how in different ways birth was taken over a period of time.

    ReplyDelete
  3. ಅದ್ಭುತ ಅತ್ಯದ್ಭುತ ವಾಗಿದೆ, ನಿನ್ನ ಕಾಮೆಂಟ್ಗೆ ಶುಭವಾಗಲಿ .

    ReplyDelete
  4. Informative..... make us to think...👍👍

    ReplyDelete
  5. As said it depends on upto mind set of the people to accept the logic ದಾಸರು ಹೇಳಿರುವ ಹಾಗೆ ನಂಬಿ ಕೆಟ್ಟ ವರಿಲ್ಲ

    ReplyDelete
  6. As said it depends on upto mind set of the people to accept the logic ದಾಸರು ಹೇಳಿರುವ ಹಾಗೆ ನಂಬಿ ಕೆಟ್ಟ ವರಿಲ್ಲ

    ReplyDelete
  7. ರಾಘವೇಂದ್ರAugust 9, 2025 at 4:18 AM

    ಅಧ್ಬುತವಾದ ಲೇಖನ. ನಾಲ್ಕು ರೀತ ಸೃಷ್ಟಿಯ ವಿವರಣೆ ‌ಸೊಗಸಾಗಿದೆ.

    ನೀವು, ಸಸ್ಯ ಶಾಸ್ತ್ರ, ಜೀವ ಶಾಸ್ತ್ರ,ವೇದ, ಉಪನಿಷತ್ತು, ಬ್ಯಾಂಕಿಂಗ್, ಎಲ್ಲವನ್ನು, ಕರಗತ ಮಾಡಿಕೊಂಡಿದ್ಧಿರಿ. ನಿರ್ಗಳವಾಗಿ ಮಾತನಾಡಬಲ್ಲರಿ.
    ಈ ನಿಮ್ಮ ಅಪರಿಮಿತ ಸಾದನೆಯಿಂದ ನಮಗೆ ಅನೇಕ ಮಾಹಿತಿಗಳು ತಿಳಿಯುತ್ತಿದೆ.

    🙏🏽🙏🏽

    ReplyDelete