Thursday, December 25, 2025

ಅಂಥ ಇಂಥವರಲ್ಲ


ಅರವತ್ತು ವರುಷಗಳ ಹಿಂದಿನ ಮಾತು. ಆಗ ಸಂಚಾರ ಸೌಲಭ್ಯಗಳು ಇಂದಿನಂತೆ ಇರಲಿಲ್ಲ. ಪರಸ್ಥಳಗಳಿಗೆ ಪ್ರಯಾಣ ಮಾಡಲು ರೈಲು ಅಥವಾ ಬಸ್ಸುಗಳನ್ನು ಅವಲಂಬಿಸಬೇಕಿತ್ತು. ಕೆಲವು ಗಂಟೆಗಳ ಪ್ರಯಾಣಕ್ಕೆ ಬಸ್ಸುಗಳ ಉಪಯೋಗ. ಬಲು ದೂರದ ಪ್ರಯಾಣಗಳಿಗೆ (ಕೆಲವು ಕಡೆ ಎರಡು-ಮೂರು ದಿನಗಳ ಪ್ರಯಾಣ) ರೈಲು ಪ್ರಯಾಣವೇ ದಾರಿ. ವಿಮಾನಯಾನ ಬಹುಪಾಲು ಜನರ ಕೈಗೆಟುಕುವಂತೆ ಇರಲಿಲ್ಲ. ಕಾರುಗಳು ಇದ್ದದ್ದು ಅಲ್ಲೊಂದು-ಇಲ್ಲೊಂದು. ಮುಂಗಡ ರಿಸೆರ್ವಶನ್ ಅನ್ನುವುದು ಬಹಳ ಅಪರೂಪ. ರೈಲಿನಲ್ಲಿ ಮೂರು ದರ್ಜೆಗಳು. ಮೂರನೆಯ ದರ್ಜೆಯಲ್ಲೂ ಕಾದಿರಿಸದ ಬೋಗಿಗಳಲ್ಲಿ ಪ್ರಯಾಣ. ಅಸಾಧ್ಯ ಜನಜಂಗುಳಿ. ಕಬ್ಬಿಣದ ಪೆಟ್ಟಿಗೆಗಳಲ್ಲಿ ಪದಾರ್ಥಗಳು. ಹಾಸಿಗೆ ಅಥವಾ ಹೋಲ್ಡಾಲುಗಳು. ರೈಲು ತಂಬಿಗೆಗಳು. ಪ್ರತಿ ಪ್ರಯಾಣವೂ ಒಂದು ಪ್ರಯಾಸವೇ. 

ಬೆಂಗಳೂರಿನ ಸುತ್ತಮುತ್ತಲಿನ ಜನ ಮಂತ್ರಾಲಯ ತಲುಪಲು ಮೊದಲು ಬಸ್ಸಿನಲ್ಲಿ ಬೆಂಗಳೂರಿಗೆ ಹೋಗಬೇಕಿತ್ತು. ಅಲ್ಲಿಂದ ಮುಂದಕ್ಕೆ ಪ್ರತಿದಿನ ಒಂದೋ-ಎರಡೋ ಬಸ್ಸುಗಳು ಮಂತ್ರಾಲಯಕ್ಕೆ ಹೋಗುತ್ತಿದ್ದವು. ಕೂಡಲು ಸ್ಥಳ ಸಿಗುವುದು ಕಷ್ಟ. ಎಂಟು-ಹತ್ತು ಗಂಟೆಗಳ ಪ್ರಯಾಣ ನಿಂತು ಹೋಗುವುದು ಅಸಾಧ್ಯ. ಆದ ಕಾರಣ ರೈಲು ಪ್ರಯಾಣ. ಬೆಂಗಳೂರು-ಗುಂತಕಲ್ಲು ರೈಲು ಮಾರ್ಗ ಆಗ ಇನ್ನೂ ಮೀಟರುಗೇಜು. ಗುಂತಕಲ್ಲಿನಿಂದ ಮುಂದಕ್ಕೆ "ಮಂತ್ರಾಲಯಂ ರೋಡ್" ಅನ್ನುವ ಸ್ಟೇಷನ್ ತನಕ ಬ್ರಾಡ್ ಗೇಜು. ಅನೇಕ ರೈಲುಗಳಿಗೆ ಮಂತ್ರಾಲಯಂ ರೋಡ್ ಸ್ಟೇಷನ್ನಿನಲ್ಲಿ ನಿಲುಗಡೆ ಇರಲಿಲ್ಲ. ಗುಂತಕಲ್ಲಿನಲ್ಲಿ ರೈಲು ಬದಲಾಯಿಸಬೇಕು. ಮಂತ್ರಾಲಯಂ ರೋಡ್ ಸ್ಟೇಷನ್ ವರೆಗೆ ಲೋಕಲ್ ರೈಲು. ಪ್ರತಿ ಸಣ್ಣ ಸ್ಟೇಷನ್ನಲ್ಲೂ ನಿಲುಗಡೆ. "ಕೋಸಗಿ", "ಇಸವಿ" ಮುಂತಾಗಿ ಸ್ಟೇಷನ್ ಹೆಸರುಗಳು. ಚಿಕ್ಕವಯಸ್ಸಿನ ಮಕ್ಕಳಿಗೆ ಅದೊಂದು ವಿನೋದ. 

ರಾತ್ರಿ ಹತ್ತು ಗಂಟೆಗೆ ಬೆಂಗಳೂರಿನಿಂದ ಹೊರಡುವ ರೈಲು ಬೆಳಗಿನ ಆರು ಗಂಟೆಗೆ ಗುಂತಕಲ್ಲು ತಲುಪುತ್ತಿತ್ತು. ಅಲ್ಲಿಂದ ಎಂಟು ಗಂಟೆಯ ಲೋಕಲ್ ರೈಲಿನಲ್ಲಿ ಮಂತ್ರಾಲಯಂ ರೋಡ್ ವರೆಗೆ ಸುಮಾರು ಮೂರು ಗಂಟೆ ಪ್ರಯಾಣ. ಮುಂದೆ ಏಳು ಮೈಲು ದೂರದ ಮಂತ್ರಾಲಯಕ್ಕೆ ನಡೆದು ಹೋಗುವುದು. ದಿನಕ್ಕೆ ಮೂರೋ, ನಾಲ್ಕೋ ಬಸ್ಸುಗಳಿದ್ದವು. ಅಶಕ್ತರು ಬಸ್ಸಿಗೆ ಕಾಯುತ್ತಿದ್ದರು. ಮಿಕ್ಕವರು ನಡೆದೇ ಹೋಗುವುದು. ಗುಂಪು ಗುಂಪಾಗಿ ರಾಯರ ಕುರಿತಾದ ಹಾಡುಗಳನ್ನು ಹಾಡುತ್ತಾ ನಡೆಯುವುದು. "ಭಾಗ್ಯವಂತ" ಕನ್ನಡ ಚಲನಚಿತ್ರದಲ್ಲಿ "ವಾರ ಬಂತಮ್ಮಾ, ಗುರುವಾರ ಬಂತಮ್ಮಾ" ಎಂದು ರಾಜ್ ಕುಮಾರ್ ನೇತೃತ್ವದಲ್ಲಿ ಹೋಗುವ ಗುಂಪಿನಂತೆ. ಹೀಗೆ ಪ್ರಯಾಣ.  ಆ ಚಿತ್ರ ಸುಮಾರು ನಲವತ್ತು ವರುಷಗಳ ಹಿಂದಿನದು. ಇದು ಅದಕ್ಕೂ ಇಪ್ಪತ್ತು ವರುಷಗಳ ಹಿಂದಿನ ಸಮಾಚಾರ. 

*****

ಮಂತ್ರಾಲಯಂ ರೋಡ್ ರೈಲ್ವೆ ಸ್ಟೇಷನ್ ತಲುಪುವ ವೇಳೆಗೆ ಮಧ್ಯಾನ್ಹ ಹನ್ನೊಂದು ಗಂಟೆ ಸಮಯ. ಇದೇ ರೀತಿ ಉತ್ತರದ ಕಡೆಯಿಂದ ಬಂದವರೂ ಅಲ್ಲಿಗೆ ಬೆಳಿಗ್ಗೆ ಸುಮಾರು ಇದೇ ಸಮಯಕ್ಕೆ ಬಂದು ಸೇರುತ್ತಿದ್ದರು. ಎಷ್ಟು ಬೇಗ ನಡೆದರೂ ಮಂತ್ರಾಲಯ ತಲುಪುವ ವೇಳೆಗೆ ಅಂದಿನ ಬೆಳಗಿನ ದರ್ಶನ, ಪ್ರಸಾದದ ಸಮಯ ದಾಟುತ್ತಿತ್ತು. ಆದ್ದರಿಂದ ಬಹುತೇಕ ಮಂದಿ ಸ್ಟೇಷನ್ ಪಕ್ಕ ತುಂಗಾನದಿಯಲ್ಲಿ ಮಿಂದು, ಪಕ್ಕದ "ಅಣು ಮಂತ್ರಾಲಯ" ಎಂದು ಪ್ರಸಿದ್ಧವಾದ ರಾಯರ ವೃಂದಾವನದ ದರ್ಶನ ಮಾಡಿ ಪ್ರಸಾದ ಸ್ವೀಕರಿಸುತ್ತಿದ್ದರು. ಸ್ವಲ್ಪ ವಿಶ್ರಾಂತಿಯ ನಂತರ, ಬಿಸಿಲು ಕಡಿಮೆ ಆದಮೇಲೆ ನಡೆದುಕೊಂಡು ಸಂಜೆಯ ದರ್ಶನದ ವೇಳೆಗೆ ಮಂತ್ರಾಲಯ ತಲುಪುತ್ತಿದ್ದರು. ಸಂಜೆ ಐದೂವರೆ ಸಮಯಕ್ಕೆ ದಿನದ ಕೊನೆಯ ಬಸ್ಸು. ಕೆಲವರು ಆ ಬಸ್ಸಿಗೆ ಕಾಯುತ್ತಿದ್ದರು. 

ನಮ್ಮ ಕುಟುಂಬ ಹೀಗೆ ಮಂತ್ರಾಲಯ ರಸ್ತೆ ಸ್ಟೇಷನ್ ತಲುಪಿ, ಅಣು ಮಂತ್ರಾಲಯದಲ್ಲಿ ದರ್ಶನ ಮತ್ತು ಪ್ರಸಾದ ಪಡೆದು ಐದು ಗಂಟೆಯ ಬಸ್ಸಿಗೆ ಕಾದೆವು. ಬಸ್ಸಿನ ಮುಂದುಗಡೆ ಬಾಗಿಲಲ್ಲಿ ಹತ್ತಲು ವಯೋವೃದ್ಧೆ ಅಜ್ಜಿ, ದೊಡ್ಡಮ್ಮ, ಅಮ್ಮ ಮತ್ತು ಅಕ್ಕ ಒಂದು ಕಡೆ. ತಂದೆ ಮತ್ತು ನಾನು ಬಸ್ಸಿನ ಹಿಂದಿನ ಬಾಗಿಲಲಿನ ಇನ್ನೊಂದು ಕಡೆ. ಬಸ್ಸು ನಿಲ್ದಾಣಕ್ಕೆ ಬರುವ ವೇಳೆಗೇ ತುಂಬಿ ಬಂದಿತ್ತು. ಹೇಗೋ ಮಾಡಿ ಮುಂದಿನ ಬಾಗಿಲಲ್ಲಿ ಅವರು ಹತ್ತಿದರು. ನಾವಿಬ್ಬರು ಬಾಗಿಲ ಬಳಿಯೇ ಹೋಗಲಾಗಲಿಲ್ಲ. ಬಸ್ಸು ಹೊರಟುಹೋಯಿತು. ಇಬ್ಬರೂ ಹಿಂದುಳಿದೆವು. ಅಂದು ರಾತ್ರಿ ಅಲ್ಲಿಯೇ ಉಳಿದು ಮಾರನೆಯ ದಿನ ಹೋಗುವುದು ಒಂದು ದಾರಿ. ತಕ್ಷಣ ನಡೆಯುತ್ತಾ ಹೊರಟು, ಏಳು ಮೈಲು ನಡೆದು ರಾತ್ರಿ ಮಂತ್ರಾಲಯ ತಲುಪುವುದು ಇನ್ನೊಂದು ದಾರಿ. ನಾವಿಬ್ಬರೂ ನಡೆಯುತ್ತಾ ಹೊರಟೆವು. 

ಹುಣ್ಣಿಮೆಯ ದಿನವಾದುದರಿಂದ ಮಸುಕಾಗಿಯಾದರೂ ರಸ್ತೆ ಕಾಣುತ್ತಿತ್ತು. ಜೊತೆಗೆ ಕೆಲವರು ಸೇರಿದರು. ದಾರಿ ಕಳೆಯಲೆಂದು ತಂದೆಯವರು ರಾಯರ ಚರಿತ್ರೆಯ ಕಥೆಗಳನ್ನು ಹೇಳುತ್ತಿದ್ದರು. ದಾರಿಯಲ್ಲಿ ಮಾದಾವರ ಗ್ರಾಮದ ಕೆರೆಯ ಬಳಿಯ ಬಂಡೆಗಳನ್ನು ನೋಡಿದೆವು. ಇಂತಹ ಒಂದು ಬಂಡೆಯ ಮೇಲೆ ಶ್ರೀರಾಮಚಂದ್ರ ವನವಾಸದ ಕಾಲದಲ್ಲಿ ವಿಶ್ರಾಂತಿಗಾಗಿ ಕುಳಿತಿದ್ದರಂತೆ. ರಾಯರು ಅದೋನಿಯ ನವಾಬನ ದಿವಾನನಾಗಿದ್ದ ತಮ್ಮ ಶಿಷ್ಯ ವೆಂಕಣ್ಣನಿಗೆ ಆ ಬಂಡೆ ತೋರಿಸಿ ಅದರ ಶಿಲೆಯಲ್ಲಿಯೇ ತಮ್ಮ ವೃಂದಾವನ ಮಾಡಲು ಹೇಳಿದರಂತೆ. ರಾತ್ರಿ ಎಂಟು ಗಂಟೆಯ ಸುಮಾರಿಗೆ ಮಂತ್ರಾಲಯ ತಲುಪಿದೆವು. 

ಆಗ ಮಂತ್ರಾಲಯಕ್ಕೆ ಪ್ರತಿದಿನ ಬರುತ್ತಿದ್ದಷ್ಟು ಜನ ಈಗ ಬೇರೆಬೇರೆ ಕಡೆಗಳಲ್ಲಿರುವ "ಮೃತ್ತಿಕಾ ಬೃಂದಾವನ" ಇರುವೆಡೆಯೇ ಬರುತ್ತಾರೆ. ಮಂತ್ರಾಲಯದ ಮೂಲ ಬೃಂದಾವನದ ಮೇಲಿರುವ ಮೃತ್ತಿಕೆ (ಮಣ್ಣು) ಸ್ವಲ್ಪ ತಂದು ಬೇರೆಡೆ ವೃಂದಾವನ ನಿರ್ಮಿಸುತ್ತಾರೆ. ಇವನ್ನು "ಮೃತ್ತಿಕಾ ಬೃಂದಾವನ" ಎಂದು ಕರೆಯುತ್ತಾರೆ. ಇಪ್ಪತ್ತೈದು ವರುಷಗಳ ಹಿಂದೆ ಮದರಾಸಿನ ಟ್ರಿಪ್ಲಿಕೇನ್ ರಾಯರ ಮಠದ ಬಳಿ ಪ್ರತಿ ಗುರುವಾರ ಪೊಲೀಸರು ಬಂದು ದರ್ಶನಕ್ಕೆ ಬರುವ ಜನಜಂಗುಳಿಯ ನಿಯಂತ್ರಣ ಮಾಡುತ್ತಿದ್ದರು. ಆ ರಸ್ತೆಯಲ್ಲಿ ಗುರುವಾರ ಸಂಜೆ ವಾಹನಗಳ ನಡೆಸುವಿಕೆಗೆ ಅವಕಾಶ ಇರಲಿಲ್ಲ. ಈಗ ಜನಸಂದಣಿ ಇನ್ನೂ ಹೆಚ್ಚಾಗಿರಬಹುದು. ಇದೊಂದು ಉದಾಹರಣೆ ಅಷ್ಟೇ. 

ಗುರು ರಾಘವೇಂದ್ರ ರಾಯರು ಸಾಮಾನ್ಯರಲ್ಲ. ಅವರು "ಅಂಥ ಇಂಥವರಲ್ಲ. ಅವರಂಥವರೇ ಬೇಕು ಅಂತ ಹುಡುಕಿದರಿಲ್ಲ" ಅನ್ನುವುದು ಅಲ್ಲಿ ಎಲ್ಲರೂ ಹೇಳುವ ಒಂದು ಮಾತಾಗಿತ್ತು. 

*****

ಶ್ರೀ ಗೋಕಾವಿ ಅನಂತಾದ್ರೀಶ ದಾಸರು (1670-1750) ಘಟಪ್ರಭಾ ಮತ್ತು ಮಲಪ್ರಭಾ ನದಿಗಳ ಸಂಗಮ ಸ್ಥಾನವಾದ ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದವರು. ಗೋಕಾಕ್ ಅನಂತಾಚಾರ್ಯ ಎಂದು ಹೆಸರಿನ ಅವರು ವೇದ-ವೇದಾಂಗಗಳ ಘನ ವಿದ್ವಾಂಸರು. ಗೋಕಾಕ್ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದ ಮುಖ್ಯ ಅರ್ಚಕರಾಗಿದ್ದರಂತೆ. ಆಗಿನ ಸಮಯದ ಪ್ರಸಿದ್ಧ ಗುರುಗಳಾದ ಅಡವಿ ಆಚಾರ್ಯರು ಅಥವಾ ಅರಣ್ಯಕಾಚಾರ್ಯರು ಎಂದು ಹೆಸರು ಪಡೆದ ಮಾದನೂರು ವಿಷ್ಣು ತೀರ್ಥ (1678-1728)  ಅವರ ಪ್ರಭಾವಕ್ಕೆ ಒಳಗಾಗಿ ಅವರ ಶಿಷ್ಯರಾದವರು. 

ಉದ್ದಾಮ ಪಂಡಿತರಾದ ಅನಂತಾಚಾರ್ಯರು "ಅನಂತಾದ್ರೀಶ" ಅನ್ನುವ ಅಂಕಿತ ಹೊಂದಿದ ಅನೇಕ ಕೃತಿಗಳನ್ನು ರಚನೆ ಮಾಡಿದ್ದಾರೆ. ಅವರ "ಶ್ರೀ ವೆಂಕಟೇಶ ಪಾರಿಜಾತ" ಮತ್ತು "ಶ್ರೀ ಪ್ರಹ್ಲಾದ ಚರಿತ್ರೆ" ಹೆಸರಾದ ಕೃತಿಗಳು. ಮಾಧ್ವ ಸಂಪ್ರದಾಯದವರ ಅನೇಕ ಮನೆಗಳಲ್ಲಿ ಈಗಲೂ ಅವರ ಈ ಕೃತಿಗಳನ್ನು ಪ್ರತಿದಿನ ಹಾಡುತ್ತಾರೆ. "ಭೋ ಯತಿವರದೇಂದ್ರ, ಶ್ರೀ ಗುರು ರಾಯ ರಾಘವೇಂದ್ರ" ಅನ್ನುವುದು ಅವರ ಬಹಳ ಪ್ರಸಿದ್ಧವಾದ ಪದ. "ಬಾರೆ ಭಾಗ್ಯ ನಿಧಿಯೇ" ಅನ್ನುವುದು ಇನ್ನೊಂದು ಪದ. ಹೀಗೆ ಅನೇಕ ಕನ್ನಡ ಪದಗಳನ್ನು ರಚಿಸಿದ್ದಾರೆ. 

ಗೋಕಾವಿ ಅನಂತಾಚಾರ್ಯರು ಜನಿಸಿದ್ದು 1670ನೇ ಇಸವಿಯಲ್ಲಿ. ಶ್ರೀ ರಾಯರು ಬೃಂದಾವನಸ್ಥರಾಗಿದ್ದು 1671ರಲ್ಲಿ. ಅನಂತಾಚಾರ್ಯರ ಜೀವಿತಕಾಲ ಶ್ರೀ ರಾಯರು ಬೃಂದಾವನ ಪ್ರವೇಶ ಮಾಡಿದ ಪ್ರಾರಂಭದ ವರುಷಗಳಲ್ಲಿ. ಹಿರಣ್ಯ ಕಷಿಪುವಿನ ಮಗನಾದ ಪ್ರಹ್ಲಾದರಾಜರು ಮುಂದೆ ಶ್ರೀ ರಾಘವೇಂದ್ರ ತೀರ್ಥರೆಂದು ಅವತರಿಸಿ "ಮಂತ್ರಾಲಯದ ರಾಯರು"  ಎಂದಾಗಿದ್ದರೆ ಎಂದು ಅವರ ಶಿಷ್ಯ ಪರಂಪರೆಯ ನಂಬಿಕೆ. "ಶ್ರೀ ಪ್ರಹ್ಲಾದ ಚರಿತ್ರೆ" ಕೃತಿಯಲ್ಲಿ ಶ್ರೀ ಅನಂತಾದ್ರೀಶರು ಹೇಳುವ ಸಾಲುಗಳು ಹೀಗಿವೆ:

ಅಂಥ ಇಂಥವರಲ್ಲ 
ಇವರಂಥವರೇ ಬೇಕು ಅಂತ ಹುಡುಕಿದರಿಲ್ಲ 
ಎಂತೆಂಥ ವಿಷಯದ ಭ್ರಾಂತಿ ಈತಗೆ ಇಲ್ಲ 
ಅನಂತಾದ್ರೀಶನ ಚಿಂತನದ ಬಗೆ ಬಲ್ಲ 
ಸಂಶಯವು ಇಲ್ಲ 

ಶ್ರೀ ರಾಯರ ಗ್ರಂಥಗಳು ಬೇರೆ ಗ್ರಂಥಗಳ ಅಧ್ಯಯನ ಕಾಲದಲ್ಲಿ ಬರುವ ಸಂಶಯಗಳ ನಿವಾರಣೆಗಾಗಿ ಮಾಡಿದವುಗಳೇ ಹೊರತು ಸಂಶಯ ಹುಟ್ಟಿಸುವುಗಳಲ್ಲ.  ಶ್ರೀ ಅನಂತಾದ್ರೀಶರು ಇದನ್ನೇ ಸೂಚ್ಯವಾಗಿ ಮೇಲಿನಂತೆ ಹೇಳಿದ್ದಾರೆ. 

*****

ಆಚಾರ್ಯ ಶ್ರೀ ಮಧ್ವರು, ಶ್ರೀ ಜಯತೀರ್ಥರು, ಶ್ರೀ ವ್ಯಾಸರಾಜರು ಮೊದಲಾದವರ ದ್ವೈತ ಸಂಪ್ರದಾಯದ ಗ್ರಂಥಗಳ ಅಧ್ಯಯನದಲ್ಲಿ ಬರುವ ಸಂದೇಹ, ಅಲ್ಲಲ್ಲಿ ಬೇಕಾದ ವಿವರಣೆಗಳಿಗೆ ಅವುಗಳ ಅಧ್ಯಯನ ಮಾಡುವ ಪಂಡಿತರು ಮೊದಲಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಗ್ರಂಥಗಳಲ್ಲಿ ಅವುಗಳಿಗೆ ಉತ್ತರ ಹುಡುಕುತ್ತಾರೆ. ಬಹುತೇಕ ಉತ್ತರ ಸಿಗುತ್ತದಂತೆ. ಅಂತಹ ಉದ್ದಾಮ ಪಂಡಿತರಾಗಿದ್ದರೂ ಶ್ರೀ ರಾಯರು ಎಂದೂ ಯಾರ ಮನಸ್ಸನ್ನೂ ನೋಯಿಸುವಂತೆ ಮಾತನಾಡಿದವರಲ್ಲವಂತೆ. ತಮ್ಮೊಡನೆ ವಾದದಲ್ಲಿ ಸೋತ ಪ್ರತಿವಾದಿಗಳೊಡನೆಯೂ ಅತ್ಯಂತ ಗೌರವಯುತವಾದ ನಡವಳಿಕೆಗೆ ಮಾದರಿಯಾಗಿದ್ದರಂತೆ. "ಕೋಪ ಅರಿಯನಮ್ಮ, ಯಾರನು ದೂರ ತಳ್ಳನಮ್ಮ" ಅನ್ನುವುದು ಕೇವಲ ಹೇಳಿಕೆಯ ಮಾತಲ್ಲ. ಆದ್ದರಿಂದಲೇ ಅವರು "ಅಂಥ ಇಂಥವರಲ್ಲ. ಇಂಥವರೇ ಬೇಕು ಅಂತ ಹುಡುಕಿದರಿಲ್ಲ". 

ಈಗ ಮನೆಯ ಮುಂದೆ ವಾಹನ ಏರಿದರೆ ಮಂತ್ರಾಲಯದ ಮಠದ ಮುಂದೆ ವಾಹನದಿಂದ ಇಳಿಯುವಷ್ಟು ಅನುಕೂಲಗಳು ಬಂದಿವೆ. ನೇರವಾಗಿ ಮಂತ್ರಾಲಯಂ ರೋಡ್ ನಿಲ್ದಾಣದವರೆಗೆ ಟ್ರೇನುಗಳೂ ಉಂಟು. ಮೊದಲೇ ಹೋಗಿ-ಬರಲು ಸ್ಥಳ ಕಾದಿರುಸುವ ವ್ಯಸ್ಥೆಯೂ ಉಂಟು. ಬಹುತೇಕ ಜನರ ಕಿಸೆಯಲ್ಲಿ ಹಣವೂ ಉಂಟು. 

ಏನೆಲ್ಲಾ ಬದಲಾವಣೆಗಳಾದರೂ, ವೃಂದಾವನ ಪ್ರವೇಶ ಮಾಡಿ 350 ವರುಷಗಳು ಕಳೆದಿದ್ದರೂ ಶ್ರೀ ರಾಯರು "ಅಂಥ ಇಂಥವರಲ್ಲ" ಅನ್ನುವುದರಲ್ಲಿ ಏನೂ ಬದಲಾವಣೆ ಇಲ್ಲ. 

4 comments:

  1. Good observation Murthyji.

    ReplyDelete
  2. ಬಹಳ ಸುಂದರ ನಿರೂವಣೆ ಓದಲು ಬಹಳವೇ ಕುತೂಹಲಕಾರಿ ನಾಮಾನಿಯರಿಗೆ ತಿಳಿಯದ ರಾಯರ ಮಹಿಮೆಗಳು ಅರಿಯುವ ಸೌಭಾಗ್ಯ ದೊರಿಯಿತು ಧನ್ಯವಾದಗಳು

    ReplyDelete
  3. Sakshat Mantralayada Teerth Yatre Madida hagayitu sir

    ReplyDelete
  4. By reading it felt like I am on Pilgrimage to Mantralaya sir

    ReplyDelete