Saturday, March 14, 2026

ಒಂದು ನಾಟಕದ ಯಶಸ್ಸಿನ ರಹಸ್ಯಗಳು



ರಂಗನಾಟಕಗಳು ಯಶಸ್ವಿಯಾಗುವುದರ ಹಿಂದಿರುವ ರಹಸ್ಯವೇನು? ಎಲ್ಲಾ ನಾಟಕಗಳೂ ಏಕೆ ಜನಪ್ರಿಯವಾಗುವುದಿಲ್ಲ? ಪ್ರೇಕ್ಷಕರ ಮನಸ್ಸನ್ನು ಹಿಡಿದಿಡುವ ಅಂಶಗಳೇನು? ಕೆಲವು ನಾಟಕಗಳನ್ನು ಮಾತ್ರ ಏಕೆ ಜನ ಮತ್ತೆ ಮತ್ತೆ ಬಂದು ನೋಡುತ್ತಾರೆ? ಒಂದೆರಡು ವಾರಗಳ ಮೊದಲೇ ಏಕೆ ಟಿಕೆಟ್ಟು ಕೊಂಡು ಸ್ಥಳ ಕಾದಿರಿಸಬೇಕು? ಹೀಗೆ ಕಾದಿರಿಸಿದ ಮೇಲೂ ರಂಗಮಂದಿರದ ಬಾಗಿಲು ತೆಗೆಯುವ ಒಂದು ಘಂಟೆಯ ಮೊದಲೇ ಪ್ರೇಕ್ಷಕರು ಕೂಡಲು ಸ್ಥಳ ಹಿಡಿಯಲೋಸುಗ ಸರತಿಯ ಸಾಲಿನಲ್ಲಿ ಏಕೆ ನಿಲ್ಲುತ್ತಾರೆ? ಒಂದು ಅತ್ಯಂತ ಜನಪ್ರಿಯ ನಾಟಕವನ್ನು ನೋಡಿ ರಂಗಮಂದಿರದಿಂದ ಹಿಂದಿರುಗುವಾಗ ಈ ರೀತಿಯ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ರಂಗ ನಾಟಕಗಳನ್ನು ಆಗಾಗ ನೋಡುವ ಹವ್ಯಾಸವಿರುವವರಿಗಂತೂ ಇದು ಆಗಿಯೇ ಆಗುತ್ತದೆ. 

ನಿನ್ನೆ (13 ಮಾರ್ಚ್ 2026) ಬೆಂಗಳೂರಿನ "ರಂಗಶಂಕರ" ರಂಗಮಂದಿರದಲ್ಲಿ ಹೆಸರಾಂತ "ಕಲಾಗಂಗೋತ್ರಿ" ತಂಡದ ಬಹುಪರಿಚಿತ ಮತ್ತು ಜನಪ್ರಿಯ "ಮುಖ್ಯಮಂತ್ರಿ" ನಾಟಕದ 896 ನೆಯ ಪ್ರದರ್ಶನ ನೋಡಿ ಬಂದ ನಂತರ ಮನಸ್ಸು ಈ ಪ್ರಶ್ನೆಗಳನ್ನೇ ಮೆಲುಕು ಹಾಕುತ್ತಿದೆ. 

*****

ಅಗಾಥಾ ಕ್ರಿಸ್ಟಿ ರಚಿಸಿದ "ಬ್ಲ್ಯಾಕ್ ಕಾಫಿ" ಒಂದು ಜನಪ್ರಿಯ ನಾಟಕ. ಹದಿನೈದು ವರುಷಗಳ ಹಿಂದೆ (19 ಅಕ್ಟೋಬರ್ 2011) ಈ ನಾಟಕವನ್ನು ಅಮೇರಿಕ ಸಂಯುಕ್ತ ಸಂಸ್ಥಾನಗಳ ಪೆನ್ಸಿಲ್ವೇನಿಯಾ ಪ್ರಾಂತದ "ನ್ಯೂ ಟೌನ್ ಆರ್ಟ್ಸ್ ಕಂಪನಿ" ಎನ್ನುವ ತಂಡ ರಂಗದ ಮೇಲೆ ತಂದಾಗ ನೋಡುವ ಅವಕಾಶ ನಮಗೆ ಸಿಕ್ಕಿತ್ತು. ಆ ಸಂದರ್ಭದಲ್ಲಿ ಅನೇಕ ಬಾರಿ ರಂಗಭೂಮಿಯ ಮೇಲೆ ಪ್ರದರ್ಶನ ಕಂಡ ನಾಟಕಗಳ ಬಗ್ಗೆ ಅಧ್ಯಯನ ಮಾಡುವ ಸಂದರ್ಭ ಬಂದಿತ್ತು. ಆಗ ಬರೆದ ಇಂಗ್ಲಿಷ್ ಬ್ಲಾಗನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಅಗಾಥಾ ಕ್ರಿಸ್ಟಿ ರಚಿಸಿದ ಇನ್ನೊಂದು ನಾಟಕ "ದಿ ಮೌಸ್ ಟ್ರ್ಯಾಪ್". ಬೇಕಿದ್ದರೆ ಕನ್ನಡದಲ್ಲಿ "ಇಲಿಯ ಬೋನು" ಎನ್ನಬಹುದು! ಈ ನಾಟಕ ಮೊದಲು ರಂಗದ ಮೇಲೆ ಬಂದಿದ್ದು 1952 ಇಸವಿ ನವೆಂಬರ್ 25 ತಾರೀಖಿನಂದು. ಅಂದರೆ ನಮ್ಮಲ್ಲಿ ಅನೇಕರು ಹುಟ್ಟುವ ಮೊದಲೇ! ಅಂದಿನಿಂದ ಇಂದಿನವರೆಗೂ ಆ ನಾಟಕ ಪ್ರತಿದಿನ ರಂಗದ ಮೇಲೆ ಪ್ರದರ್ಶನ ಕಾಣುತ್ತಲೇ ಇದೆ. ಕೋವಿಡ್ ಸಂದರ್ಭದಲ್ಲಿ ಸುಮಾರು ಮೂರು ವರುಷ ಅನಿವಾರ್ಯವಾಗಿ ನಿಲ್ಲಿಸಿದ್ದನ್ನು ಬಿಟ್ಟು. ಮೊದಲಿಗೆ ಲಂಡನ್ ನಗರದ "ಅಂಬಾಸೆಡರ್ ಥೀಯೇಟರ್" 21 ವರ್ಷಗಳ ಕಾಲ ಪ್ರತಿದಿನ ನಾಟಕ ನಡೆಸಿತು. ಟಿಕೇಟುಗಳ ಬೇಡಿಕೆ ಹೆಚ್ಚಿದ್ದರಿಂದ ನಂತರ ಅದರ ಪಕ್ಕದ "ಸೈನ್ಟ್ ಮಾರ್ಟಿನ್" ಅನ್ನುವ ದೊಡ್ಡ ರಂಗಮಂದಿರಕ್ಕೆ ವರ್ಗಾವಣೆ ಆಯಿತು. 

ಈಗಲೂ ಈ ನಾಟಕ ಪ್ರತಿದಿನ ನಡೆಯುತ್ತಲೇ ಇದೆಯಂತೆ. ಲಂಡನ್ ನಗರಕ್ಕೆ ಬರುವ ಕಲಾರಸಿಕರು ಈ ನಾಟಕ ನೋಡದೆ ಹೋಗುವುದಿಲ್ಲ ಎಂದು ಪ್ರತೀತಿ. ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ (2025) ಇದರ 30,000 ಸಂಖ್ಯೆಯ ಪ್ರದರ್ಶನವನ್ನು ಅದ್ದೊರಿಯಿಂದ ಆಚರಿಸಲಾಯಿತು!

ಮೂರು ತಲೆಮಾರಿನ ಕಲಾವಿದರು ಈ ನಾಟಕದಲ್ಲಿ ಪಾತ್ರ ವಹಿಸಿದ್ದಾರೆ. "ಡೇವಿಡ್ ರೊವೆನ್" ಎನ್ನುವ ಅಪ್ರತಿಮ ಕಲಾವಿದ ಈ ನಾಟಕದ "ಮೇಜರ್ ಮೆಟ್ಕಾಫ್" ಅನ್ನುವ ಪಾತ್ರವನ್ನು 4,575 ಬಾರಿ ನಿರ್ವಹಿಸಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ!

*****

ಒಂದು ನಾಟಕ ಯಶಸ್ವಿಯಾಗಲು ಏನು ಕಾರಣ ಎಂದು ಹತ್ತು ಜನರನ್ನು ಕೇಳಿದರೆ ಹದಿನಾಲ್ಕು-ಹದಿನೈದು ಅಭಿಪ್ರಾಯಗಳು ಬರಬಹುದು. (ಕೆಲವರಿಗೆ ಒಂದೇ ವಿಷಯದ ಬಗ್ಗೆ ಅನೇಕ ಅಭಿಪ್ರಾಯಗಳಿರುತ್ತವಲ್ಲ!). ಈ ಪ್ರಶ್ನೆಗೆ ಉತ್ತರವನ್ನು ಸುಮಾರು ಒಂದು ಸಾವಿರದ ನಾಲ್ಕು ನೂರು ವರುಷಗಳ ಹಿಂದೆಯೇ ರಚಿತವಾದ "ನಾಗಾನಂದ" ಸಂಸ್ಕೃತ ನಾಟಕದಲ್ಲಿ ಕಾಣಬಹುದು. 

ಈ ನಾಟಕದ ಪ್ರಾರಂಭದಲ್ಲಿ ಸೂತ್ರಧಾರ ಹೀಗೆ ಹೇಳುತ್ತಾನೆ: 

ಶ್ರೀಹರ್ಷೋ ನಿಪುಣಃ ಕವಿ: ಪರಿಷದಪ್ಯೇಷಾ ಗುಣಗ್ರಾಹಿಣೀ 
ಲೋಕೇಹಾರಿಚ ಬೋಧಿಸತ್ವಚರಿತಂ ನಾಟ್ಯೇಚ ದಕ್ಷಾ ವಯಂ
ವಸ್ತ್ವೇಕೈಕಮಪೀಹ  ವಾಂಛಿತಫಲಪ್ರಾಪ್ತೇ: ಪದಂ ಕಿಂ ಪುನರ್ 
ಮದ್ಭಾಗ್ಯೋಪಚಯಾದಯಂ ಸಮುದಿತಃ ಸರ್ವೇ ಗುಣಾನಾo ಗಣಃ 

"ಶ್ರೀಹರ್ಷ ಕವಿ ನಾಟಕ ರಚಿಸುವುದರಲ್ಲಿ ನಿಪುಣನು. ನಾಟಕ ನೋಡಲು ಬಂದಿರುವ ಸಜ್ಜನರಾದರೋ  ಗುಣಗ್ರಾಹಿಗಳು. ಕಥಾವಸ್ತುವು ಎಲ್ಲರ ಮನಸ್ಸು ಗೆಲ್ಲುವ ಬೋಧಿಸತ್ವನ ಕಥೆಯು. ನಮ್ಮ ತಂಡವು ನಾಟಕ ಪ್ರದರ್ಶನ ಕಲೆಯಲ್ಲಿ ಎತ್ತಿದಕೈ. ಇವು ನಾಲ್ಕರಲ್ಲಿ ಒಂದಿದ್ದರೂ ನಾಟಕ ಗೆದ್ದುಬಿಡುವುದು. ನನ್ನ ಪುಣ್ಯ ನೋಡಿ! ಇಂದು ಈ ನಾಲ್ಕೂ ಒಟ್ಟಿಗೆ ಬಂದು ಸೇರಿವೆ! ಇದಕ್ಕಿಂತ ಹೆಚ್ಚಿನ ಸಂಯೋಗ ಬೇರೆ ಇನ್ನೆಲ್ಲುಂಟು?"


ನಾಲ್ಕು ಅಂಶಗಳು ಯಾವುವು? ಮೊದಲನೆಯದು ನಾಟಕವನ್ನು ಹೆಣೆದ ಕವಿ ಆ ಕಲೆಯಲ್ಲಿ (ನಾಟಕ ರಚನಾಕಲೆ) ನಿಪುಣನಾಗಿರಬೇಕು. ಎರಡನೆಯದು ನಾಟಕದ ಕಥಾವಸ್ತು ಬಲವಾಗಿದ್ದು ಜನರ ಮನಸ್ಸನ್ನು ಆಕರ್ಷಿಸುವಂತಿರಬೇಕು. ಮೂರನೆಯದು ನಾಟಕ ಆಡುವ ತಂಡ ರಂಗದ ಮೇಲೆ ಪ್ರದರ್ಶಿಸುವ ವಿಷಯದಲ್ಲಿ ಪರಿಣಿತರಾಗಿರಬೇಕು. ನಾಲ್ಕನೆಯದು ಪ್ರದರ್ಶನ ನೋಡಲು ಬಂದಿರುವ ಜನರು ಗುಣಗ್ರಾಹಿಗಳೂ, ಸದಭಿರುಚಿಯ ಸಜ್ಜನರೂ ಆಗಿರಬೇಕು. ಇವು ನಾಲ್ಕರಲ್ಲಿ ಒಂದಿದ್ದರೂ ನಾಟಕ ರಂಗದ ಮೇಲೆ ಗೆಲ್ಲುತ್ತದೆ. ಒಂದಕ್ಕಿಂತ ಹೆಚ್ಚಿದ್ದರೆ, ಮತ್ತು ಹೆಚ್ಚಿದ್ದಷ್ಟೂ, ನಾಟಕದ ಯಶಸ್ಸು ಮೇಲೇರುತ್ತಾ ಹೋಗುತ್ತದೆ.  

ಇದೇ ಕಡೆಯ ಮಾತು ಎಂದೇನಿಲ್ಲ. ಆದರೆ ಬಹಳ ಹಿಂದಿನಿಂದಲೂ ಈ ನಾಲ್ಕು ಅಂಶಗಳಿಗೆ ವಿಶೇಷ ಸ್ಥಾನ ಉಂಟು ಎನ್ನುವುದು ಇದರಿಂದ ತಿಳಿಯಬಹುದು.

*****

ಈ ಹಿನ್ನೆಲಿಯಲ್ಲಿ ನಿನ್ನೆ ನಾವು ನೋಡಿದ "ಮುಖ್ಯಮಂತ್ರಿ" ನಾಟಕದ ಅಪೂರ್ವ ಯಶಸ್ಸಿನ ಕಾರಣಗಳು ಏನೆಂದು ನೋಡಬಹುದು. 

1976ರ ಶ್ರೀ ಚಾಣಕ್ಯ ಸೆನ್ ಅವರ ಕಾದಂಬರಿ ಆಧರಿಸಿ ಶ್ರೀ ರಣಜಿತ್ ಕಪೂರ್ ಅವರು ಹಿಂದಿ ನಾಟಕವಾಗಿ ರೂಪಾಂತರಗೊಳಿಸಿದರು. ಶ್ರೀ ಟಿ. ಎಸ್. ಲೋಹಿತಾಶ್ವ ಅದನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಭಾಷಾಂತರ ಸಮಯದಲ್ಲಿ ಕೌಶಲ್, ದುಬೆ, ತ್ರಿಪಾಠಿ, ದೇಸಾಯಿ ಮೊದಲಾದ ಹೆಸರುಗಳನ್ನೇ ಉಳಿಸಿಕೊಂಡಿದ್ದಾರೆ. ಇದರಿಂದ ಕನ್ನಡನಾಡಿನ ಪ್ರೇಕ್ಷಕರು ಈ ಪಾತ್ರಗಳಲ್ಲಿ ಸಮಾನಾಂತರವಾದ ನಮ್ಮ ನಾಡಿನ ರಾಜಕೀಯ ವ್ಯಕ್ತಿಗಳನ್ನು ಸುಲಭವಾಗಿ ಕಂಡರೂ, ಯಾವುದೇ ನಿರ್ದಿಷ್ಟ ರಾಜಕಾರಣಿಯನ್ನು ಗುರಿ ಮಾಡಿದಂತೆ ಇಲ್ಲ. 1980ರಿಂದ ಈವರೆಗೆ ನಲವತ್ತೈದು ವರುಷಗಳು ಕಳೆದಿದ್ದರೂ, ಪ್ರತಿ ಪ್ರದರ್ಶನದಲ್ಲೂ ಕಥಾವಸ್ತು ನಿತ್ಯನೂತನ. ಹೀಗಾಗಿ ಕಥಾವಸ್ತುವಿನ ಅಂಶದಲ್ಲಿ ನಾಟಕ ಗಟ್ಟಿಯಾಗಿ ಉಳಿದಿದೆ. 

ಕಥಾವಸ್ತುವಿನ ರೂಪಾಂತರ ಮತ್ತ್ತು ಭಾಷಾಂತರದಲ್ಲಿ ಇರುವ ಬಿಗಿ, ಹಾಸ್ಯಮಿಶ್ರಿತ ಸಂಭಾಷಣೆಗಳು, ಸಮಕಾಲೀನ ಸೊಗಡು, ಇವುಗಳಿಂದ ಕೃತಿ ರಚನಕಾರರ ಚತುರತೆ (ಮೂಲ ಕೃತಿಕಾರರು, ಹಿಂದಿ ರೂಪಾಂತರಕಾರರು, ಮತ್ತು ಕನ್ನಡದ ಭಾಷಾಂತರಕಾರರು) ಎದ್ದು ಕಾಣುತ್ತದೆ. ರಂಗದ ಮೇಲೆ ಬಂದಾಗ ನುರಿತ ನಟರು ಮತ್ತು ನಿರ್ದೇಶಕರ ರಸ ಪೋಷಣೆಯಿಂದ ಈ ಅಂಶವು ಇನ್ನಷ್ಟು ಸ್ಫುಟವಾಗಿ ತೋರುತ್ತದೆ. ಹೀಗೆ ಈ ಅಂಶದಲ್ಲಿಯೂ ನಾಟಕ ಸುಲಭವಾಗಿ ಗೆಲ್ಲುತ್ತದೆ. 

"ಕಲಾಗಂಗೋತ್ರಿ" ತಂಡವು ಸುವರ್ಣ ಮಹೋತ್ಸವ ಆಚರಿಸಿ ಮುನ್ನಡೆಯುತ್ತಿರುವ ಕಲಾತಂಡ. ಈ ನಾಟಕದ ಪ್ರದರ್ಶನದಲ್ಲಿ ಅಭಿನಯಿಸುವ ನಟ-ನಟಿಯರು ಎರಡು ರೀತಿಯವರು. ಮೊದಲಿನಿಂದಲೂ ಭಾಗವಹಿಸುತ್ತಿರುವ ಹಿರಿಯ ಕಲಾವಿದರು ಮತ್ತು ಈಗ ಚಿಗುರುತ್ತಿರುವ ಪ್ರತಿಭೆಗಳು, ಎರಡು ರೀತಿಯೂ ಸೇರಿ "ಹೊಸ ಚಿಗುರು - ಹಳೆ ಬೇರು" ಎನ್ನುವಂತೆ ಸೊಗಸಾದ ಅನುಭವವನ್ನು ಕೊಡುತ್ತದೆ. ಡಾ. ಬಿ.ವಿ. ರಾಜಾರಾಂ ಅವರ ನಿರ್ದೇಶನದಲ್ಲಿ ಪ್ರತಿ ಪ್ರದರ್ಶನವೂ "ರಂಗಮಂದಿರ ತುಂಬಿದೆ" ಎಂದು ನಡೆಯುತ್ತಿದೆ. 

ನಾಟಕ ನೋಡಲು ಬಂದಿದ್ದ ಪ್ರೇಕ್ಷಕರ ಬಗ್ಗೆ ಒಂದು ಮಾತು. ಅನೇಕ ನಾಟಕ ಪ್ರದರ್ಶನಗಳಲ್ಲಿ ಒಂದು ವರ್ಗದ ಅಥವಾ ಒಂದು ವಯೋಮಾನದ ಜನರನ್ನು ಕಾಣಬಹುದು. ಆದರೆ ನಿನ್ನಿನ ಪ್ರದರ್ಶನದಲ್ಲಿ ಕಂಡಂತೆ ಎಲ್ಲ ವಯಸ್ಸಿನ, ಎಲ್ಲ ಹಿನ್ನೆಲೆಯ ಪ್ರೇಕ್ಷಕರೂ ತುಂಬಿದ್ದರು. ಹಿತೈಷಿಗಳೊಬ್ಬರು ಮೊದಲೇ ಎಚ್ಚರಿಸಿದ್ದರಿಂದ ಮುಂಗಡ ಬುಕಿಂಗ್ ಮಾಡಿದ್ದುದು ಒಳಿತಾಯಿತು. ಇಲ್ಲದಿದ್ದಲ್ಲಿ ನಿರಾಶರಾಗಿ ಹೊರಬರಬೇಕಿತ್ತು. 

"ಮುಖ್ಯಮಂತ್ರಿ ಚಂದ್ರು" ಮುಖ್ಯಮಂತ್ರಿ ಕೆ. ಡಿ. ಕೌಶಲ್ (ಕೇಡಿ ಕೌಶಲ್?) ಪಾತ್ರದಲ್ಲಿ ಎಂದಿನಿಂದಲೋ ಮನೆಮಾತಾಗಿದ್ದಾರೆ. ನಾಟಕ ಮುಗಿದನಂತರ ಅವರೊಡನೆ ಫೋಟೋ ತೆಗೆಸಿಕೊಳ್ಳಲು ಒಂದು ಸರತಿಯ ಸಾಲೇ ಇರುತ್ತದೆ. (ಹೀಗೆ ಅವರೊಡನೆ ನಾವು ತೆಗೆಸಿಕೊಂಡ ಫೋಟೋವನ್ನು ಮೇಲೆ ನೋಡಬಹುದು). ರಾತ್ರಿ ಕಾಲ, ಸಮಯ ಮೀರಿದ್ದರೂ ತಮ್ಮನ್ನು ಮಾತನಾಡಿಸಲು ಬಂದ ಪ್ರತಿಯೊಬ್ಬರೊಡನೆ ಅವರು ಸೌಜನ್ಯದಿಂದ ನಡೆದುಕೊಳ್ಳುತ್ತಿದ್ದ ರೀತಿ ಇತರರಿಗೆ ಒಂದು ಮಾದರಿ. 

ಹೀಗೆ ನೋಡಿದಾಗ ನಾಗಾನಂದ ನಾಟಕದ ಸೂತ್ರಧಾರನು ಹೇಳುವ ನಾಲ್ಕು ಅಂಶಗಳಲ್ಲೂ "ಮುಖ್ಯಮಂತ್ರಿ" ನಾಟಕ ಗೆಲ್ಲುವುದೇ ಅದರ ಯಶಸ್ಸಿನ ರಹಸ್ಯ. 

*****

ಕಲಾಗಂಗೋತ್ರಿ ತಂಡವು ತನ್ನ ಸುವರ್ಣ ಮಹೋತ್ಸವ ಕಾಲದಲ್ಲಿ ಡಾ. ಕೆ. ವೈ. ನಾರಾಯಣಸ್ವಾಮಿ ಅವರಿಂದ  "ಮತ್ತೆ ಮುಖ್ಯಮಂತ್ರಿ" ಎಂದು ಮತ್ತೊಂದು ನಾಟಕವನ್ನು ಬರೆಸಿದೆ. ಈ ನಾಟಕವೂ ಕಳೆದ ಎರಡು-ಮೂರು ವರುಷಗಳಲ್ಲಿ ಕೆಲವು ಪ್ರದರ್ಶನಗಳನ್ನು ಕಂಡಿದೆ. ಅಧಿಕಾರ ಉಳಿಸಿಕೊಳ್ಳಲು ಏನೇನೋ ಕಸರತ್ತು ಮಾಡುವ ಮುಖ್ಯಮಂತ್ರಿಯ ಬದಲಾಗಿ ಇಲ್ಲಿ ಆದರ್ಶ, ಸಿದ್ಧಾಂತಗಳಿಗಾಗಿ ತನ್ನ ಅಧಿಕಾರವನ್ನು, ಮತ್ತು ಕಡೆಗೆ ಪ್ರಾಣವನ್ನೂ ಬಲಿಕೊಡುವ "ಮುಖ್ಯಮಂತ್ರಿ ಶೀಲವಂತ" ಎನ್ನುವ ವ್ಯಕ್ತಿಯ ಚಿತ್ರಣ ಇಲ್ಲುಂಟು. ಈ ನಾಟಕ ನೋಡುವ ಸುಯೋಗ ಇನ್ನೂ ನಮಗೆ ಸಿಕ್ಕಿಲ್ಲ. 

"ಮುಖ್ಯಮಂತ್ರಿ" ನಾಟಕ ಇನ್ನು ಕೆಲವೇ ದಿನಗಳಲ್ಲಿ ತನ್ನ 900 ಪ್ರದರ್ಶನಗಳನ್ನು ದಾಟಲಿದೆ. ಅದರ "ಸಹಸ್ರ ಪ್ರದರ್ಶನ" ನಡೆವ ದಿನವೂ ಹತ್ತಿರದಲ್ಲಿಯೇ ಇದೆ.