Wednesday, September 23, 2026

ಸಮ ಮತ್ತು ಸಮನಾ


ಹಿಂದಿನ ಸಂಚಿಕೆಯಲ್ಲಿ "ಶ್ರೀಕೃಷ್ಣನಿಂದ ಅಮೃತತ್ವದ ಕಡೆಗೆ" ಎನ್ನುವ ಶೀರ್ಷಿಕೆಯಡಿ, ಸೋದೆ ಶ್ರೀ ವಾದಿರಾಜರು ಕ್ಷೀರ ಸಮುದ್ರ ಮಥನದ ಸಂದರ್ಭದ ಅಂಶಗಳನ್ನು ಕೇಂದ್ರವಾಗಿಟ್ಟುಕೊಂಡು ತಮ್ಮ "ಶ್ರೀ ರುಕ್ಮಿಣೀಶ ವಿಜಯ" ಮಹಾಕಾವ್ಯದ ಮೊದಲ ಶ್ಲೋಕದಲ್ಲಿ ಕಥಾನಾಯಕನಾದ ಶ್ರೀಕೃಷ್ಣನ ಪ್ರಾರ್ಥನೆಯನ್ನು "ಮಂಗಳಾಚರಣೆ" ಶ್ಲೋಕವಾಗಿ ಪರಿವರ್ತಿಸಿದ್ದಾರೆ ಎಂದು ನೋಡಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ದೇವತೆಗಳು ಮತ್ತು ದಾನವರು ಜೊತೆಗೂಡಿ ಕ್ಷೀರ ಸಮುದ್ರ ಕಡೆದದ್ದರಿಂದ ಸಾವಿನಿಂದ ಬಿಡುಗಡೆ ಮಾಡುವ ಅಮೃತ ಬಂದ ವಿವರಗಳನ್ನು ನೋಡಿದ್ದೇವೆ. ನಮಗೆ ಇಷ್ಟೇ ಸಾಲದು. ಈ ಅಮೃತದಿಂದ ಸಾವು ಮಹಾಪ್ರಳಯದವರೆಗೆ ತಪ್ಪಬಹುದೇ ಹೊರತು, ಹುಟ್ಟು-ಸಾವು ಇವುಗಳ ಚಕ್ರದಿಂದ ಶಾಶ್ವತ ಮುಕ್ತಿಯಲ್ಲ. ನಮಗೆ ಅಪೇಕ್ಷಿತವಾದದ್ದು ಈ ಜನನ-ಮರಣ ಚಕ್ರದಿಂದ ಸದಾಕಾಲಕ್ಕೂ ಬಿಡುಗಡೆ ಕೊಡುವ ನಿಜವಾದ ಅಮೃತತ್ವ ಎನ್ನುವ ಮುಕ್ತಿ.  

ಈ ರೀತಿಯ ಮುಕ್ತಿಗೆ (ಸಾಲೋಕ್ಯ, ಸಾರೂಪ್ಯ, ಸಾಮೀಪ್ಯ ಮತ್ತು ಸಾಯುಜ್ಯ ಎನ್ನುವ ನಾಲ್ಕು ವಿಧದ ಮುಕ್ತಿಗಳು ಇವೆ ಎಂದು ಹೇಳುತ್ತಾರೆ) ನಮ್ಮ ಹೃದಯ ಕಮಲ ಮಧ್ಯದಲ್ಲಿರುವ ಶ್ರೀಕೃಷ್ಣ ಎನ್ನುವ ಕ್ಷೀರ ಸಾಗರವನ್ನು ನಮ್ಮಲ್ಲಿರುವ ಸಾಧನಗಳಿಂದಲೇ ಮಥನ ಮಾಡಿ ಅಮೃತತ್ವವನ್ನು ಪಡೆಯುವ ಗುಟ್ಟು ತಿಳಿದಾಯಿತು. 

ಶ್ರೀಕೃಷ್ಣನ ಪ್ರಾರ್ಥನೆಯ ನಂತರ ಶ್ರೀ ವಾದಿರಾಜರು ತಮ್ಮ ಇಷ್ಟದೈವವಾದ ಶ್ರೀಹಯಗ್ರೀವ ಮೂರ್ತಿಯ ಪ್ರಾರ್ಥನೆ ಶ್ಲೋಕಗಳನ್ನು ರಚಿಸಿದ್ದಾರೆ. ತದನಂತರ ಮಹಾಕಾವ್ಯದ ಕಥಾನಾಯಕಿಯಾದ ರುಕ್ಮಿಣಿ ದೇವಿ ವರ್ಣನೆಯನ್ನು ಮಾಡಿ ನಮಸ್ಕರಿಸುತ್ತಾರೆ. ಇದರ ವಿಶೇಷಗಳನ್ನು ನೋಡುವ ಮೊದಲು ಶ್ರೀಕೃಷ್ಣ ಮತ್ತು ರುಕ್ಮಿಣಿ ದೇವಿಯ ಅಪರೂಪದ ಬಾಂಧವ್ಯ ಏನು ಎಂದು ಅರಿಯಬೇಕು. ಈ ಕಾರಣಕ್ಕೆ "ಸಮ" ಮತ್ತು "ಸಮನಾ" ಎಂಬ ಎರಡು ಪದಗಳು, ಅವುಗಳ ಉಗಮ ಮತ್ತು ವಿಸ್ತಾರದ ಬಗ್ಗೆ ಸ್ವಲ್ಪ ತಿಳಿಯಬೇಕು. ಅದನ್ನು ಈಗ ಯಥಾಶಕ್ತಿ ನೋಡೋಣ.
****** 

ಈಗಿನ ದಿನಗಳಲ್ಲಿ ಎಲ್ಲ ಕಡೆಯೂ ಶಿಕ್ಷಣ ಮತ್ತು ಪರೀಕ್ಷೆ, ಇವುಗಳ ಬಗ್ಗೆ ಕೂಗು ಎದ್ದಿದೆ. ಹೊಸ ಜನಾಂಗದ ಆಶೋತ್ತರಗಳು, ಅವರ ಮುಂದಿರುವ ಪ್ರಶ್ನೆಗಳು, ಇವುಗಳ ಲಾಭ ಪಡೆದು, ಮತಗಳನ್ನು ಪಿಡಿದು, ಅಧಿಕಾರ ಪಡೆಯುವ ಅಥವಾ ಉಳಿಸಿಕೊಳ್ಳುವ ಹವಣಿಕೆಯಲ್ಲಿ ರಾಜಕೀಯ ಪಕ್ಷಗಳು ತೊಡಗಿವೆ. ಪ್ರಶ್ನೆ ಪತ್ರಿಕೆಗಳ ಸೋರಿಕೆ, ಅವುಗಳ ತಡೆಗಟ್ಟುವಿಕೆ, ಇವುಗಳಿಂದ ಲಾಭ ಪಡೆಯುವವರನ್ನು ಹಿಡಿಯುವ ಕೆಲಸ, ಇವುಗಳು ನಡೆಯುತ್ತಿವೆ. ಇವೆಲ್ಲದರ ಮಧ್ಯೆ "ಸಮಾನತೆ" ಎನ್ನುವ ಒಂದು ತತ್ವದ ಬಗ್ಗೆಯೂ ಅನೇಕ ವಿಚಾರಗಳು ಚರ್ಚಿಸಲ್ಪಡುತ್ತಿವೆ. 

ಅನೇಕ ದಶಕಗಳ ಹಿಂದೆ ನಾವುಗಳೂ ವಿದಾರ್ಥಿಗಳಾಗಿದ್ದವರೇ ಅಲ್ಲವೇ? ಆಗಲೂ ಅನೇಕ ಪರೀಕ್ಷೆಗಳು ನಡೆಯುತ್ತಿದ್ದವು. ನಾವೂ ಹೀಗೆ ಪರೀಕ್ಷೆಗಳನ್ನು ದಾಟಿ ಬಂದವರೇ. ಅನೇಕ ಪರೀಕ್ಷೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಉತ್ತರಗಳನ್ನು ಬರೆಯುತ್ತಿದ್ದರು. ಹೀಗೆ ಬರೆಯಲು ಪರೀಕ್ಷೆ ನಡೆಸುವ ಸಂಸ್ಥೆಗಳು (ಬೋರ್ಡು, ವಿಶ್ವವಿದ್ಯಾಲಯ, ಲೋಕ ಸೇವಾ ಆಯೋಗ ಮುಂತಾದುವು) ಉತ್ತರ ಬರೆಯಲು "ಉತ್ತರ ಪುಸ್ಕಕ" ವಿದ್ಯಾರ್ಥಿಗಳಿಗೆ ಕೊಡುತ್ತಿದ್ದವು. ಪರೀಕ್ಷೆ ಮುಗಿದ ಮೇಲೆ ಈ ಉತ್ತರ ಪುಸ್ತಕಗಳು "ಮೌಲ್ಯ ಮಾಪನ" ಮಾಡುವವರ ಬಳಿ ಹೋಗುತ್ತಿದ್ದವು. ಅವರು ಅಂಕಗಳನ್ನು ನೀಡಿದ ನಂತರ ಎಲ್ಲವನ್ನೂ ಒಟ್ಟುಗೂಡಿಸಿ ಫಲಿತಾಂಶ ಪ್ರಕಟಿಸುತ್ತಿದ್ದರು. 

ಉತ್ತರಪತ್ರಿಕೆಗಳನ್ನು ನೋಡಿ ಅಂಕಗಳನ್ನು ಕೊಡುವವರಿಗೆ ಉತ್ತರ ಬರೆದಿರುವ ವಿದ್ಯಾರ್ಥಿ ಯಾರು ಎಂದು ಗೊತ್ತಾಗಬಾರದು. ಇದು ಗೊತ್ತಾದರೆ ಮೌಲ್ಯಮಾಪಕನು ಸರಿಯಾಗಿ ಅಂಕಗಳನ್ನು ಕೊಡದೇ ಇರಬಹುದು. ತನಗೆ ಪ್ರಿಯರಾದವರಿಗೆ ಹೆಚ್ಚು ಅಂಕ ಕೊಡಬಹುದು. ಬೇಡದವರಿಗೆ ಕಡಿಮೆ ಮಾಡಬಹುದು. ಉತ್ತರ ಪತ್ರಿಕೆ ಯಾವ ಮೌಲ್ಯ ಮಾಪಕನ ಬಳಿ ತಲುಪಿದೆ ಎಂದು ತಿಳಿದ ಪೋಷಕರು ಅವರನ್ನು ಕಂಡು ಅನೈತಿಕ ರೀತಿಯಲ್ಲಿ ಹೆಚ್ಚು ಅಂಕ ಪಡೆಯಲು ಪ್ರಯತ್ನಿಸಬಹುದು. ಈ ರೀತಿಯ ಸಂದರ್ಭಗಳು ಬರುವುದು ಸುಲಭ. ಇದು ಅನಪೇಕ್ಷಿತ. ಪರೀಕ್ಷೆಯ ಒಟ್ಟಾರೆ ವ್ಯವಸ್ಥೆಗೆ ಇದು ಬಲು ಮಾರಕ.

ಈ ರೀತಿಯ ಸಂದರ್ಭಗಳನ್ನು ತಪ್ಪಿಸಿ, ಅಭ್ಯರ್ಥಿಯ ಗೋಪ್ಯತೆ ಕಾಪಾಡಲು ಒಂದು ವ್ಯವಸ್ಥೆ ಇತ್ತು. ಉತ್ತರ ಪತ್ರಿಕೆಯ ಮುಖಪುಟದ ಮೇಲೆ ಒಂದು ಚೌಕಾಕಾರದ ಭಾಗ. ಅದರಲ್ಲಿ ಅಭ್ಯರ್ಥಿಯ ಹೆಸರು ಮತ್ತು ವಿವರಗಳು ಬರೆಯಲು ಅವಕಾಶ. ಉತ್ತರ ಪತ್ರಿಕೆಗೆ ಒಂದು ನಂಬರು. ಈ ನಂಬರು ಈ ಚೌಕದಲ್ಲಿಯೂ ಉಂಟು. ಹೊರಗಡೆಯೂ ಉಂಟು. ಹೊರಗಡೆಯ ಭಾಗದಲ್ಲಿ ಅಭ್ಯರ್ಥಿಯ ವಿವರಗಳಿಲ್ಲ. ಪರೀಕ್ಷೆ ಮುಗಿದೊಡನೆ ಈ ಚೌಕಾಕಾರದ ಭಾಗ ಬೇರ್ಪಡಿಸಿ ಪರೀಕ್ಷಾ ವಿಭಾಗದಲ್ಲಿ ಇಟ್ಟುಕೊಳ್ಳುವುದು. ಮೌಲ್ಯಮಾಪಕರಿಂದ ಬಂದ ಉತ್ತರ ಪತ್ರಿಕೆಯ ಅಂಕಗಳನ್ನು ಈ ಉತ್ತರ ಪತ್ರಿಕೆಯ ನಂಬರಿನ ಮೂಲಕ ಗುರುತಿಸಿ, ಸರಿಯಾದ ಅಭ್ಯರ್ಥಿಗೆ ತಾಳೆ ಹಾಕಿ, ಫಲಿತಾಂಶ ಕೊಡುವುದು.

ಈ ವ್ಯವಸ್ಥೆಯಿಂದ ಅಂಕ ಹಾಕುವವರಿಗೆ ಅದು ಯಾರ ಉತ್ತರ ಪತ್ರಿಕೆ ಎಂದು ಗೊತ್ತಾಗದು. ಯಾವುದೇ ಅನೈತಿಕ ವ್ಯವಹಾರ, ಸ್ವಜನ ಪಕ್ಷಪಾತ, ಬೇಡದವರಿಗೆ ಕಡಿಮೆ ಅಂಕ ಕೊಡುವುದು ಮುಂತಾದುವು ನಡೆಯುವಂತಿಲ್ಲ. ಅಭ್ಯರ್ಥಿ ಬರೆದ ಉತ್ತರಕ್ಕೆ ತಕ್ಕ ಮೌಲ್ಯ. ಯಾರಿಗೂ ಅನ್ಯಾಯವಿಲ್ಲ. ಇದರ ಜೊತೆಯಲ್ಲಿ ಪರೀಕ್ಷಕರಿಗೆ ಒಂದು "ಮಾದರಿ ಉತ್ತರಪತ್ರಿಕೆ" ಸಹ ಕೊಡುತ್ತಿದ್ದರು.

ಈಗ ಕಂಪ್ಯೂಟರ್ ಯುಗ. ಇದಕ್ಕೆ ಸಮಾನಾಂತರ ವ್ಯವಸ್ಥೆಗಳು ಬಂದಿವೆ. ಇಷ್ಟೆಲ್ಲಾ ಬೆಳವಣಿಗೆಗಳು, ವ್ಯಸ್ಥೆಗಳು ಇದ್ದರೂ ಗೊಂದಲ ತಪ್ಪಿಲ್ಲ!

****** 

ಅದೊಂದು ಬಲು ದೊಡ್ಡ ಕುಟುಂಬ. ಅನೇಕ ಸದಸ್ಯರು ಮನೆಯಲ್ಲುಂಟು. ಸಕಲ ಐಶ್ವರ್ಯಗಳೂ ಒಂದೆಡೆ ಸೇರಿವೆ. ಲೆಕ್ಕವಿಲ್ಲದಷ್ಟು ಆಳು-ಕಾಳುಗಳು. ಮನೆಗೊಬ್ಬ ಯಜಮಾನ. ಅವನ ಹೆಂಡತಿ ಯಜಮಾನಿ. ಎಲ್ಲಾ ಸುವ್ಯವಸ್ಥಿತವಾಗಿ ನಡೆಯುತ್ತಿದೆ. ಕೆಲಸದವರು ಕೇವಲ ಸಂಬಳಕ್ಕೆಂದು ದುಡಿಯುವವರಲ್ಲ. ಯಜಮಾನ ಮತ್ತು  ಯಜಮಾನಿ ಮೇಲೆ ಅವರಿಗೆ ಅಪಾರ ಪ್ರೀತಿ. ಕೆಲಸ ಹೇಳಿದರೆ ಸಾಕು ಎಂದು ಕಾಯುತ್ತಿರುತ್ತಾರೆ. ಯಾವುದೇ ಕೆಲಸ ಮಾಡಲು ಅವರಿಗೆ ಸಂಕೋಚವಿಲ್ಲ. ಹೇಳಿದ ಕೆಲಸಗಳನ್ನು ಮಾಡುವುದರಲ್ಲಿಯೂ ಬಹಳ ನುರಿತವರು. ಯಜಮಾನನಿಗೂ ಮತ್ತು ಯಜಮಾನತಿಗೂ ಏನೂ ಕೆಲಸ ಮಾಡುವ ಅಗತ್ಯವಿಲ್ಲ. ಕೇವಲ ಸನ್ನೆಯಿಂದಲೇ ಎಲ್ಲವನ್ನೂ ಮಾಡಿಸುವ ಶಕ್ತಿ ಉಳ್ಳವರು. 

ಹೀಗಿದ್ದೂ ಯಜಮಾನ ಸುಮ್ಮನೆ ಕೂಡುವವಲ್ಲ. ಸದಾಕಾಲ ಅನೇಕ ಕೆಲಸಗಳಲ್ಲಿ ನಿರತ. ಯಜಮಾನಿಯೂ ಅಷ್ಟೇ. ಕೈಗೊಂದು-ಕಾಲಿಗೊಂದು ಕೆಲಸದವರಿದ್ದರೂ ತನ್ನ ಗಂಡನ ಕೆಲಸ ತಾನೇ ಮಾಡಬೇಕು. ಬೇರೆಯವರಿಗೆ ಬಿಡುವುದಿಲ್ಲ. ಏಕೆ ಹೀಗೆ? ಗಂಡ ಹೀಗೇ ಆಗಬೇಕು ಎಂದು ಕಟ್ಟಪ್ಪಣೆ ಮಾಡಿದ್ದಾನೆಯೇ? ಹಾಗೇನಿಲ್ಲ. ಹೀಗೆ ಮಾಡುವುದರಿಂದ ಅವಳಿಗೆ ಏನಾದರೂ ಲಾಭ ಇದೆಯೇ? ಅದೂ ಇಲ್ಲ. ಆದರೂ ಯಜಮಾನಿ ಹೀಗೆ ನಡೆದುಕೊಳ್ಳುತ್ತಾಳೆ. ಏನು ಕಾರಣ?

ತನ್ನ ಗಂಡನ ಕೆಲಸ ಮಾಡುವುದರಲ್ಲಿ ಅವಳಿಗೆ ಅಮಿತ ಉತ್ಸಾಹ. ಅದಕ್ಕೆ ಕಾರಣ ಅವಳಿಗೆ ಅವನಲ್ಲಿರುವ ವಿಶೇಷವಾದ ಪ್ರೀತಿ ಮತ್ತು ಗೌರವಗಳು. ಗಂಡ ತನ್ನನ್ನು ಪ್ರೀತಿಸಲಿ, ಗೌರವಿಸಲಿ ಎನ್ನುವ ಕಾರಣ ಇಲ್ಲವೇ ಇಲ್ಲ. ಅವಳಿಗೆ ಅತಿ ಹೆಚ್ಚಿನ ಪ್ರೀತಿ, ಗೌರವಗಳು ಈಗಾಗಲೇ ಸಿಕ್ಕಿಬಿಟ್ಟಿವೆ. ಆದರೂ ತನ್ನ ಗಂಡನ ಕೆಲಸಗಳನ್ನು ಇನ್ನೊಬ್ಬರಿಗೆ ಬಿಡದೆ ತಾನೇ ಮಾಡುವ ಇಚ್ಛೆ ಅವಳಿಗೆ!
******

ಪರಮಪುರುಷನ ಅನೇಕ ರೂಪಗಳಲ್ಲಿ ಶ್ರೀಕೃಷ್ಣ ಅನ್ನುವ ರೂಪವೂ ಒಂದು. ಅವನು ಸಕಲ ಲೋಕಗಳ ಒಡೆಯ. ಅವನಿಗೆ ಯಾವುದೇ ಕೆಲಸ ಮಾಡುವ ಅಗತ್ಯವಿಲ್ಲ. ಅರ್ಜುನನಿಗೆ ಅವನೇ ಗೀತೆಯಲ್ಲಿ ಹೇಳುತ್ತಾನೆ: "ನ ಮೇ ಪಾರ್ಥಾಸ್ತಿ ಕರ್ತವ್ಯo ತ್ರಿಷು ಲೋಕೇಷು ಕಿಂಚನ" (ಭಗವದ್ಗೀತೆ 3.22). ಅವನಿಗೆ ಯಾವ ಕರ್ತವ್ಯದ ಅವಶ್ಯಕತೆಯೂ ಇಲ್ಲ. ಸಂಪಾದಿಸಬೇಕಾದದ್ದೂ ಇಲ್ಲ. ಹೀಗಿದ್ದೂ ಕರ್ತವ್ಯಗಳನ್ನು ಮಾಡುತ್ತಲೇ ಇರುತ್ತಾನೆ! 

ಅವನು ಮಾಡುವ ಅನೇಕ ಕರ್ತವ್ಯಗಲ್ಲಿ "ಮೌಲ್ಯಮಾಪನ" ಕ್ರಿಯೆಯೂ ಒಂದು. ಸಮಸ್ತ ಜೀವರಾಶಿಗಳು ಪ್ರತಿಯೊಂದು ಕ್ಷಣದಲ್ಲಿಯೂ ಮಾಡುವ ಕರ್ಮಗಳಿಗೆ ಒಂದೇ ಸಮನೆ ಅಂಕಗಳನ್ನು ಹಾಕುವುದೂ ಅವನ ಒಂದು ಕೆಲಸ. ಇದೊಂದು ಬಿಡುವಿಲ್ಲದ ಕೆಲಸ. ಹೀಗೆ ಮಾಡುವುದರಿಂದ ಅವನಿಗೆ ಆಯಾಸವಿಲ್ಲ. ವಿಶ್ರಾಂತಿ ಬೇಕಿಲ್ಲ. ಕಷ್ಟಪಟ್ಟು ಮಾಡಬೇಕಿಲ್ಲ. ಅದಾಗದೇ, ತಾನೇತಾನಾಗಿ ನಡೆಯುವ ಕೆಲಸ ಇದು.

ಹೀಗೆ ಮಾಡಬೇಕಾದರೆ ಅವನಿಗೆ ಮೇಲೆ ಹೇಳಿದಂತೆ ಚೌಕಾಕಾರದ ಕಾಗದದ ತುಂಡಿನ ಮೇಲಿನ ಸಂಖ್ಯೆ ಬೇಕಾಗಿಲ್ಲ. ಏನು ಮಾಡಿದರೂ ಅವನಿಂದ ಅಭ್ಯರ್ಥಿಯ ಗೋಪ್ಯತೆ ಸಾಧ್ಯವಿಲ್ಲ. ಪರೀಕ್ಷಾ ಮೇಲ್ವಿಚಾರಕರಿಗೆ (invigilator) ಟೋಪಿ ಹಾಕಿದಂತೆ ಅವನ ಕಣ್ಣು ತಪ್ಪಿಸುವಂತಿಲ್ಲ. ಅವನಲ್ಲಿ ಭೇದಭಾವ ಇಲ್ಲ. ಬೇಕಾದವರು-ಬೇಡವಾದವರು ಎನ್ನುವ ಸಮಸ್ಯೆ ಇಲ್ಲ. ಎಲ್ಲರಿಗೂ ಸಮ ಭಾವದ ಮೌಲ್ಯಮಾಪನ. 

ಭಗವದ್ಗೀತೆಯಲ್ಲಿ (9.29) ಶ್ರೀಕೃಷ್ಣ ಅರ್ಜುನನಿಗೆ ಹೇಳುತ್ತಾನೆ:

ಸಮೋಹಂ ಸರ್ವಭೂತೇಷು ನ ಮೇ ದ್ವೇಷ್ಯೋಸ್ತಿ ನ ಪ್ರಿಯಃ 
ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಂ  

"ನಾನು ಎಲ್ಲ ಜಂತುಗಳಲ್ಲಿಯೂ ಸಮ ಆಗಿದ್ದೇನೆ (ಸಮಃ ಅಹಂ - ಸಮೋಹಂ). ನನಗೆ ಪ್ರಿಯರು ಅಥವಾ ದ್ವೇಷಿಗಳು ಎಂದಿಲ್ಲ. ನನ್ನನ್ನು ಪ್ರೀತಿಯಿಂದ ನೋಡುವವರಲ್ಲಿ ನಾನಿದ್ದೇನೆ. ನನ್ನಲ್ಲಿ ಅವರಿದ್ದಾರೆ."

ಈ ಕಾರಣದಿಂದ ಅವನಿಗೆ "ಸಮ" ಎಂದು ಹೆಸರು. ಸಮ ಎಂದರೆ "ಪರಮಪುರುಷ" ಎಂದೇ ಅರ್ಥ. 

ಇಂಗ್ಲಿಷಿನಲ್ಲಿ Equal ಮತ್ತು Equity ಎನ್ನುವ ಪದಗಳಿವೆ. ನಾವು ಸಾಮಾನ್ಯವಾಗಿ Equal ಎನ್ನುವ ಅರ್ಥವನ್ನೇ ಗಮನಿಸುತ್ತೇವೆ. ಒಂದೇ ಅಳತೆಯ ಎರಡು ವಸ್ತುಗಳು ಸಮ ಎಂದು ಪರಿಗಣಿಸುತ್ತೇವೆ. ಆದರೆ Equity ಅನ್ನುವುದು ವಿಶಾಲವಾದ ಅರ್ಥ. Equity ಅಂದರೇನು? Equal treatment of Equals ಅನ್ನುತ್ತಾರೆ. It is the quality of being fair and impartial. 

"ಸಮ" ಅನ್ನುವ ಪದಕ್ಕೆ "ಪರಮಪುರುಷ" (ಮತ್ತು ಅವನ ಒಂದು ರೂಪವಾದ ಶ್ರೀಕೃಷ್ಣ) ಎಂದು ತಿಳಿದಾಯಿತು.
******

ಈ ಸಕಲ ಸೃಷ್ಟಿಗೆ ಪರಮಪುರುಷನು ಯಜಮಾನನಾದರೆ ಶ್ರೀಮಹಾಲಕ್ಷ್ಮಿದೇವಿ ಯಜಮಾನಿ. ಅಸಂಖ್ಯ ದೇವತೆಗಳು ಅವಳ ಒಂದು ಕಣ್ಣೋಟಕ್ಕಾಗಿ ಕಾದು ನಿಂತಿದ್ದಾರೆ. ಏನಾದರೂ ಕೆಲಸ ಹೇಳಲು "ನಮ್ಮ ಕಡೆ ನೋಡಿಯಾಳೇ?" ಎಂದು ಹಾತೊರೆಯುತ್ತಿದ್ದಾರೆ. ಚತುರ್ಮುಖ ಬ್ರಹ್ಮನಿಂದ ಪ್ರಾರಂಭಿಸಿ ಕಡೆಯ ದೇವತೆಯವರೆಗೆ. ಹೀಗಿದ್ದೂ ಪರಮಪುರುಷನ ಎಲ್ಲ ಕೆಲಸಗಳನ್ನೂ ಅವಳೇ ಮಾಡಬೇಕು!

ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳು!
ಛತ್ರ-ಚಾಮರ ವ್ಯಜನ ಪರ್ಯಂಕ ಪಾತ್ರರೂಪಳಾಗಿ ಹರಿಯ ನಿತ್ಯಸೇವೆ ಮಾಡುತಿಹಳು!
ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ ಸಾಟಿಯಿಲ್ಲದೆ ಮಾಡುತಿಹಳು!

ಅಷ್ಟು ಮಾತ್ರವಲ್ಲ. ನಮ್ಮೆಲ್ಲರ ಕೈಗಳ ತುದಿಯಲ್ಲಿ ತಾನೇ ಕುಳಿತಿದ್ದಾಳೆ. ಕರಾಗ್ರೇ ವಸತೇ ಲಕ್ಷ್ಮೀ.  ಪರಮಪುರುಷನಿಗೆ ಏನಾದರೂ ಅರ್ಪಿಸಿದರೆ ಕೈಯ್ಯಿಂದ ತಾನೇ ಕೊಡಬೇಕು? ಅಲ್ಲಿ ತಾನೇ ಕುಳಿತಿದ್ದಾಳೆ. ದೇವಾಲಯದ ಅರ್ಚಕನ ಕೈ ಕೊನೆಯಲ್ಲಿಯೂ ಅವಳೇ ಇದ್ದಾಳೆ. ಅವಳನ್ನು ಮೀರಿ ಮುಂದೆ ಹೋಗುವಂತಿಲ್ಲ. 

ಅವಳಿಗೆ ಸಂಸಾರ ಬಂಧನ ಇಲ್ಲ. ಅವಳು ನಿತ್ಯ ಮುಕ್ತಳು. ಅವಳೂ ಪರಮಾತ್ಮನ ಉಪಾಸನೆ ಮಾಡುವಳು. ಅದು ಮುಕ್ತಿಗೆಂದಲ್ಲ. ಪರಮಪುರುಷನಲ್ಲಿ ಇರುವ ಅತಿಯಾದ ಪ್ರೀತಿ ಗೌರವಗಳ ಕಾರಣ ಅವನ ಎಲ್ಲ ಕೆಲಸ ತಾನೇ ಮಾಡುತ್ತಾಳೆ. ಅವನಿಗೆ ಅದರ ಅವಶ್ಯಕತೆ ಇಲ್ಲದಿದ್ದರೂ. ಅರ್ಥವಾಗುವುದು ಅಷ್ಟು ಸುಲಭವಲ್ಲ. ಮಾತಿನಲ್ಲಿ ಹೇಳುವುದೂ ಸುಲಭವಲ್ಲ.

ಬ್ರಹ್ಮಸೂತ್ರ ಅಧ್ಯಯನದಲ್ಲಿ "ಸಮನಾಧಿಕಾರಣ" ಎಂದು ಒಂದು ಭಾಗ ಕಾಣುತ್ತೇವೆ (4.2.7 ನಿಂದ 4.2.14). ಇವುಗಳಲ್ಲಿ ಜಡ ಪ್ರಕೃತಿಯ ಅಭಿಮಾನಿ ದೇವತೆಯಾದ ಲಕ್ಷ್ಮೀದೇವಿಯ ಬಗ್ಗೆ ವಿವರಣೆ ಇದೆ. ಸೂತ್ರ 4.2.7 ಹೀಗೆ ಹೇಳುತ್ತದೆ:

ದೇಶತಃ ಕಾಲತಶ್ಚ ವ್ಯಾಪ್ತ್ಯಾ ಸಮೋನಾ 
ಪರಮಪುರುಷೋ ಯಸ್ಯಾ: ಸಾ ಸಮನಾ 

ಏನಿದರ ಅರ್ಥ? ಮಹಾಲಕ್ಷ್ಮಿಯು ಪರಮಪುರುಷನಂತೆ ಎಲ್ಲ ಕಡೆ ಇದ್ದಾಳೆ. ಎಲ್ಲ ಕಾಲದಲ್ಲಿಯೂ ಇದ್ದಾಳೆ. ಅವನಂತೆ ಅನಾದಿಕಾಲದಿಂದ ಇದ್ದಾಳೆ. ಅವನಂತೆ ಅನಂತ ಕಾಲದವರೆಗೆ ಇರುತ್ತಾಳೆ. ಹೀಗೆ ದೇಶ (Space) ಮತ್ತು ಕಾಲದಿಂದ (Time) ಪರಮಪುರುಷನಿಗೆ ಸಮಳು. ಆದರೆ ಪರಮಪುರುಷನು ಅವಳಿಗೂ ನಿಯಾಮಕನು. ಅವನಿಗೆ ನಿಯಾಮಕರಿಲ್ಲ. ಅನಂತ ಗುಣಗಳಿಂದ ಅಧಿಕನು. ಈ ಕಾರಣದಿಂದ ಅವಳು ಅವನ ಸಮ ಅಲ್ಲ. ಸಮ ನಾ (ಅಲ್ಲ). ಸಮನಾ. ಆದ್ದರಿಂದ ಅವಳಿಗೆ "ಸಮನಾ" ಎಂದು ಹೆಸರು. (ಸುಮನಾ ಅಲ್ಲ. ಸಮನಾ).

ಈಗ ಸಮ ಮತ್ತು ಸಮನಾ ಎಂದರೆ ಪರಮಪುರುಷ ಮತ್ತು ಮಹಾಲಕ್ಷ್ಮಿ ಎಂದು ತಿಳಿದಂತಾಯಿತು.

******

"ಇದೇಕೆ ಹೀಗೆ?" ಎಂದು ಕೇಳುವಂತಿಲ್ಲ. ಅದು ಇರುವುದು ಹಾಗೆ. ಹೀಗೆ ಪ್ರಮೇಯ. Algebra ಕಲಿಯುವಾಗ ಗೊತ್ತಿಲ್ಲದ ಸಂಖ್ಯೆಯನ್ನು "x" ಎಂದಂತೆ. ಅದಕ್ಕಿಂತ ಹೆಚ್ಚು.

"ಸೂರ್ಯ ಪೂರ್ವದಲ್ಲಿಯೇ ಏಕೆ ಹುಟ್ಟಬೇಕು? ನಾನು ಆ ದಿಕ್ಕನ್ನು ಪಶ್ಚಿಮ ಅನ್ನುತ್ತೇನೆ" ಎನ್ನುವಂತಿಲ್ಲ. ಸೂರ್ಯನು ಜಗತ್ತಿಗೆ ಮೊದಲು ಕಾಣುವುದು ಒಂದು ದಿಕ್ಕಿನಲ್ಲಿ. ಪುರ್ ಅಂದರೆ "ಮೊದಲು", "ಅಗ್ರಗಮನ" ಎಂದರ್ಥ. ಮುಂದೆ ಹೋಗುವುದು ಎಂದು. ಮುಂದಿರುವುದು ಎಂದು. ಸೂರ್ಯ ಮೊದಲು ನಮಗೆ ಕಾಣುವ ದಿಕ್ಕು. ಅಲ್ಲಿಂದ ಮುಂದೆ ಹೋಗುವ ದಿಕ್ಕು. ಆದ್ದರಿಂದ ಅದು ಪೂರ್ವ. ಹೀಗೆ. 

ಗಂಡಸು-ಹೆಂಗಸು ಸಮಾನ ಎನ್ನುವ ಲೌಕಿಕ ತರ್ಕ ಇಲ್ಲಿ ತರುವಂತಿಲ್ಲ. ಈ ಬಗ್ಗೆ ಆ ಗಂಡ-ಹೆಂಡಿರಿಗೆ ಜಗಳ ಇಲ್ಲ. ನಮಗೇಕೆ ಅನವಶ್ಯ ಜಗಳ?

No comments:

Post a Comment