Showing posts with label Gaalava. Shyamala Karna. Show all posts
Showing posts with label Gaalava. Shyamala Karna. Show all posts

Monday, October 20, 2025

ನಾಲ್ಕು ಮಾತುಗಳು


ಚಂದ್ರವಂಶದವರ ವಿವರಗಳು ಮಹಾಭಾರತ, ಶ್ರೀಮದ್ಭಾಗವತ, ಹರಿವಂಶ ಮತ್ತು ಇತರ ಕಡೆಗಳಲ್ಲಿ ವಿಪುಲವಾಗಿ ದೊರೆಯುತ್ತವೆ. ಚಕ್ರವರ್ತಿ ಯಯಾತಿಯ ಮಗಳಾದ ಮಾಧವಿಯ ವೃತ್ತಾಂತ ಮುಖ್ಯವಾಗಿ ಮಹಾಭಾರತದ ಉದ್ಯೋಗ ಪರ್ವದಲ್ಲಿ ಏಳೆಂಟು ಶ್ಲೋಕಗಳಲ್ಲಿ ಸಿಗುತ್ತದೆ. ಮಾಧವಿಯ ಮಕ್ಕಳ ಚರಿತ್ರೆಗಳು ಶ್ರೀಮದ್ಭಾಗವತದಲ್ಲಿ ವಿವರವಾಗಿ ಸಿಗುತ್ತವೆ. 


ದುರ್ಯೋಧನನು ಯಾವ ಹಿತೈಷಿಗಳ ಮಾತನ್ನೂ ಕೇಳದೆ, ಪಾಂಡವರಿಗೆ ರಾಜ್ಯಭಾಗ ಕೊಡದೇ ಉದ್ಧಟನಾಗಿ ವರ್ತಿಸುವಾಗ ದೇವರ್ಷಿ ನಾರದರು ಅವನಿಗೆ ಬುದ್ಧಿವಾದ ಹೇಳಿ “ಹಠಮಾರಿತನ ಒಳ್ಳೆಯದಲ್ಲ” ಎಂದು ತಿಳಿಸುವ ಸಲುವಾಗಿ ಗಾಲವನ ವೃತ್ತಾಂತ (ಗಾಲವೋಪಾಖ್ಯಾನ) ಹೇಳುತ್ತಾರೆ. ಶಿಷ್ಯ ಗಾಲವನ ಹಠಮಾರಿತನದಿಂದ ಕುಪಿತರಾದ ಅವನ ಗುರುಗಳು ವಿಶ್ವಾಮಿತ್ರರು ಎಂಟುನೂರು “ಶ್ಯಾಮಲಕರ್ಣ” ಕುದುರೆಗಳನ್ನು ಗುರುದಕ್ಷಿಣೆಯಾಗಿ ಕೇಳುತ್ತಾರೆ. ಆ ಸಮಯದಲ್ಲಿ ಭೂಮಿಯ ಮೇಲೆ ಅಂತಹ ಕುದುರೆಗಳು ಕೇವಲ ಆರುನೂರು ಮಾತ್ರ ಇದ್ದುವಂತೆ. ವಿಶ್ವಾಮಿತ್ರರು ಅವನಿಗೆ ಪಾಠ ಕಲಿಸುವ ಸಲುವಾಗಿ ಎಂಟುನೂರು ಶ್ಯಾಮಲಕರ್ಣ ಕುದುರೆಗಳನ್ನು ಕೇಳಿದರಂತೆ. ಹೀಗೆ ನಡೆಯುವ ಕಥೆಯಲ್ಲಿ ಮಾಧವಿಯ ಮೂಲಕ ಆ ಕುದುರೆಗಳ ಸಂಪಾದನೆಯ ಕಥೆ ಬೆಳೆಯುತ್ತದೆ. 


ಮಾಧವಿಯ ಕಥೆಯಂತೆಯೇ ಇರುವ ಇನ್ನೊಂದು ಕಥೆ “ಮೂರುವರೆ ವಜ್ರಗಳು” ಅನ್ನುವುದು. ಇದೂ ಕುದುರೆಯ ಕಥೆಯೇ. ಇದರಲ್ಲಿ ಶಾಪಗ್ರಸ್ತ ಸ್ತ್ರೀ ಒಬ್ಬಳಿಗೆ ಮೂರುವರೆ ವಜ್ರ ತಾಕಿದಾಗ ಶಾಪವಿಮೋಚನೆ ಎಂದು ಹೇಳುವ ಸಮಾಚಾರ. ಇದು ನಡೆದದ್ದು ಶ್ರೀಕೃಷ್ಣ, ಭೀಮಸೇನ, ದುರ್ಯೋಧನರ ಕಾಲದಲ್ಲಿ. ಶ್ರೀಕೃಷ್ಣ ಒಂದು ವಜ್ರ, ಬಲರಾಮ (ಅಥವಾ ಸುದರ್ಶನ) ಒಂದು ವಜ್ರ, ಭೀಮಸೇನ ಒಂದು ವಜ್ರ ಮತ್ತು ದುರ್ಯೋಧನ ಅರ್ಧ ವಜ್ರ. ನಾಲ್ವರು ಸೇರಿ ಮೂರುವರೆ ವಜ್ರ. ವಜ್ರ ಅಂದರೆ ವಜ್ರದೇಹಿಗಳು ಎಂದು. “ಮೂರುವರೆ ವಜ್ರಗಳು” ಹರಿಕಥೆಗಳ ಮುಖಾಂತರ ಹೆಚ್ಚು ಪ್ರಚಲಿತವಾಯಿತು. ಚಲನಚಿತ್ರವಾಗಿ ಜನರಿಗೆ ಇನ್ನಷ್ಟು ಪರಿಚಿತವಾಯಿತು. ಮಾಧವಿಯ ಕಥೆಗೆ ಈ ಭಾಗ್ಯ ಸಿಕ್ಕಲಿಲ್ಲ. 


ಮಾಧವಿಯ ಕಥೆ ಬಹಳ ಕುತೂಹಲಕಾರಿಯೂ, ರೋಮಾಂಚಕವೂ ಆಗಿದೆ. ಇದು ಅನೇಕ ಲೇಖಕರ, ಸಾಹಿತಿಗಳ ಗಮನ ಸೆಳೆದು ಪುಸ್ತಕಗಳು ಪ್ರಕಟವಾಗಿವೆ. ಕನ್ನಡದಲ್ಲಿ ಡಾ. ಅನುಪಮಾ ನಿರಂಜನ ಅವರ “ಮಾಧವಿ” ಬಹಳ ಹಿಂದೆ ಪ್ರಕಟವಾಗಿದೆ. ಪತ್ರಿಕೆಗಳಲ್ಲಿ ಧಾರಾವಾಹಿಯಾಗಿಯೂ ಪ್ರಕಟವಾಗಿವೆ. ಹಿಂದಿ ಭಾಷೆಯಲ್ಲಿಯೂ ಉಂಟು. ಬೇರೆ ಭಾಷೆಗಳಲ್ಲಿಯೂ ಇರಬಹುದು. ಬಹುತೇಕ, ಇವು ಪುರುಷಪ್ರಧಾನ ಸಮಾಜ ಒಬ್ಬ ಸ್ತ್ರೀಯ ಶೋಷಣೆ ಮಾಡಿದ ದೃಷ್ಟಿಯಿಂದ ವಿಶ್ಲೇಷಿಸಿ ಬರೆದವು. 


ನಹುಷ, ಯಯಾತಿ ಮುಂತಾದುವರ ಪ್ರಸಂಗಗಳು ಅನೇಕ ಸಾಹಿತ್ಯ ಕೃತಿಗಳ ರಚನೆಗೆ ಕಾರಣವಾಗಿವೆ. ನನ್ನ roundtheclockstories.blogspot.in ಬ್ಲಾಗ್-ಗಳಲ್ಲಿ “ಯಯಾತಿಯ ಮೊಮ್ಮಕ್ಕಳು” ಮತ್ತು “ಮಾಧವಿಯ ಮಕ್ಕಳು” ಎಂದು ಎರಡು ಸಂಚಿಕೆಗಳು ಒಂದು ತಿಂಗಳ ಹಿಂದೆ (ಸೆಪ್ಟೆಂಬರ್ 2025) ಪ್ರಕಟವಾಗಿದ್ದವು. ಅವುಗಳ ಬಗ್ಗೆ ಬಂದ ಪ್ರತಿಕ್ರಿಯೆಗಳಲ್ಲಿ ಹೆಚ್ಚಿನವು ದೊಡ್ಡವರ ಗುಣ ಮತ್ತು ದೋಷಗಳು, ಅವುಗಳನ್ನು ನೋಡುವ ರೀತಿ, ಇವುಗಳ ಬಗ್ಗೆ ಕೇಂದ್ರೀಕೃತವಾಗಿದ್ದವು. ಅವುಗಳನ್ನು ಓದಿದವರು ಮತ್ತು ಮಿತ್ರರು ಇದನ್ನು ಸ್ವಲ್ಪ ವಿವರವಾಗಿ ಒಂದು ನಾಟಕ ರೂಪವಾಗಿ ಬರೆಯುವಂತೆ ಪ್ರೋತ್ಸಾಹಿಸಿದರು. ಬ್ಲಾಗ್ ಸಂಚಿಕೆಗಳು ಹೊರಬಂದ ನಂತರ ಹೃದಯದ ಶಸ್ತ್ರ ಚಿಕಿತ್ಸೆಯ ಪರಿಣಾಮವಾಗಿ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದಾಗ ಅದರ ನೋವನ್ನು ಮರೆಸಿದುದು ಈ ಯಯಾತಿಯ ಮೊಮ್ಮಕ್ಕಳ, ಮಾಧವಿಯ ಮಕ್ಕಳ ಉದಾತ್ತತೆಯ ಬಗ್ಗೆ ಮನಸ್ಸಿನಲ್ಲಿ ನಡೆದ ಮಂಥನ. ಅದರ ಫಲವಾಗಿ ಈ ನಾಟಕರೂಪ ಹೊರಬಂದಿದೆ. ನಾನು ಲೇಖಕನೂ ಅಲ್ಲ; ಸಾಹಿತಿಯೂ ಅಲ್ಲ.  ಸ್ನೇಹಿತರ ಪ್ರೀತಿಯ ಒತ್ತಾಯದ ಕಾರಣವಾಗಿ ಅಲ್ಲಿ ನಡೆದ ಮಂಥನ ಈ ನಾಟಕವಾಗಿ ರೂಪುಗೊಂಡಿದೆ. ಅಷ್ಟೇ. 


ಯಯಾತಿಯ ವ್ಯಕ್ತಿತ್ವದಲ್ಲಿ ಎರಡು ಗಂಟಿನ ಘಟ್ಟಗಳು. ಒಂದು ಮಗ ಪುರುವಿನ ಯೌವನ ತೆಗೆದುಕೊಂಡದ್ದು. ಇನ್ನೊಂದು ಮಗಳು ಮಾಧವಿಯನ್ನು ಗಾಲವರ ಅಶ್ವಗಳ ಅವಶ್ಯಕತೆಯ ಕಾರಣ ಕಳಿಸಿಕೊಟ್ಟದ್ದು. ಒಬ್ಬ ತಂದೆಯಾಗಿ ಅವನು ಅನುಭವಿಸಿರಬಹುದಾದ ವೇದನೆಗಳು, ತಂದೆಯ ಆಜ್ಞಾಧಾರಕಿಯಾಗಿ ಮಾಧವಿಯು ಅನುಭವಿಸಿದ ಹಿಂಸೆ, ಇವು ಇಲ್ಲಿನ ಮುಖ್ಯ ಬಿಂದುಗಳು. ಎರಡು ಕಪ್ಪು ಚುಕ್ಕೆಗಳಿಂದ ಯಯಾತಿಯ ವ್ಯಕ್ತಿತ್ವವನ್ನು ಅಳೆಯಬಾರದು ಎಂದು ನಾಟಕದ ಆಶಯ. ನಂಬುವವರು ಇದು ದೇವತೆಗಳ ಆಟ ಎಂದು ತಿಳಿದರಂತೂ ಅದರ ಸಮಾಧಾನವೇ ಬೇರೆ ರೀತಿಯದು. 


ಹಿಂದಿನ ತಲೆಮಾರಿನಲ್ಲಿ ಶ್ರಾದ್ಧಗಳ ಸಮಯದಲ್ಲಿ ದೌಹಿತ್ರರಿಗೆ (ಹೆಣ್ಣುಮಕ್ಕಳ ಮಕ್ಕಳು) ವಿಶೇಷ ಸ್ಥಾನವಿತ್ತು. ಗಂಡುಮಕ್ಕಳು ಶ್ರಾದ್ಧ ಮಾಡಿದರೂ, ಅವರ ಅಕ್ಕ-ತಂಗಿಯರು ಮತ್ತು ಅವರ ಮಕ್ಕಳು ಆ ಸಂದರ್ಭದಲ್ಲಿ ಬಂದು ಭಾಗವಹಿಸಲಿ ಎನ್ನುವುದು ಅದರ ಮೂಲ ಕಾರಣ. ಪ್ರತಿ ಮನೆಯಲ್ಲೂ ಅನೇಕ ಮಕ್ಕಳಿರುತ್ತಿದುದರಿಂದ ದೌಹಿತ್ರರು ಬರುವುದು ಅಷ್ಟೇನೂ ಕಷ್ಟವಿರಲಿಲ್ಲ. ಒಬ್ಬನೂ ದೌಹಿತ್ರ ಅಂದು ಬರಲಿಲ್ಲ ಅಂದರೆ ಶ್ರಾದ್ದ ಮಾಡುವವರು ಪೇಚಾಡಿಕೊಳ್ಳುತ್ತಿದ್ದರು. ಈಗ ಈ ಪದ್ಧತಿ ಮರೆತೇಹೋಗಿದೆ. ಎಷ್ಟೋ ಜನರಿಗೆ ಅಕ್ಕ-ತಂಗಿಯರೇ ಇಲ್ಲ. ಅವರ ಮಕ್ಕಳು ಎಲ್ಲಿಂದ ಬರಬೇಕು? ಈ ದೌಹಿತ್ರರ ಪ್ರಾಮುಖ್ಯತೆ ಬಂದಿದ್ದು ಯಯಾತಿಯ ಮೊಮ್ಮಕ್ಕಳು, ಅಂದರೆ ಮಾಧವಿಯ ಮಕ್ಕಳು, ಅಜ್ಜನಿಗೆ (ಮಾತಾಮಹ) ಪುಣ್ಯ ಭಾಗ ಕೊಟ್ಟಿದ್ದರಿಂದ. ಇದು ಎಷ್ಟೋ ಜನರಿಗೆ ಗೊತ್ತಿಲ್ಲ. ಗೊತ್ತಿದ್ದವರಿಗೆ ಮರೆತುಹೋಗಿದೆ. ಈ ನಾಟಕದಲ್ಲಿ ಅದನ್ನು ನೆನಪು ಮಾಡಿಸುವ ಪ್ರಯತ್ನವೂ ಇದೆ. 


ನಮ್ಮಲ್ಲಿ ಅಣ್ಣ-ತಮ್ಮಂದಿರನ್ನು “ಸಹೋದರರು” ಎಂದು ಹೇಳುವುದು ಸ್ವಾಭಾವಿಕವೆನ್ನುವಂತೆ ಆಗಿದೆ. ಸಹೋದರರೆಂದರೆ ಒಂದೇ ಉದರದಲ್ಲಿ (ಹೊಟ್ಟೆಯಲ್ಲಿ, ಅಥವಾ ಇನ್ನೂ ಖಚಿತವಾಗಿ ಹೇಳಿದರೆ ಗರ್ಭದಲ್ಲಿ) ಹುಟ್ಟಿದವರು. ಒಂದೇ ತಂದೆಯ ಮಕ್ಕಳಾದರೂ ತಾಯಿ ಬೇರೆ ಬೇರೆಯವರಾಗಿರಬಹುದು. ಹಾಗೆಯೇ, ಒಂದೇ ತಾಯಿಯ ಮಕ್ಕಳಾದರೂ ತಂದೆ ಬೇರೆಯವರಾಗಿರಬಹುದು. ಹೀಗೆ ತಿಳಿದಾಗ ವ್ಯತ್ಯಾಸ ಗೊತ್ತಾಗುತ್ತದೆ. ಈ ರೀತಿ ನೋಡಿದಾಗ ಐವರು ಪಾಂಡವರು ಅಣ್ಣ-ತಮ್ಮಂದಿರು. ಧರ್ಮಜ-ಭೀಮ-ಅರ್ಜುನ ಸಹೋದರರು. ಹಾಗೆಯೇ ನಕುಲ-ಸಹದೇವರು ಸಹೋದರರು. ಈ ಕಾರಣದಿಂದ ಮಾಧವಿಯ ನಾಲ್ಕು ಮಕ್ಕಳು (ತಂದೆಯರು ಬೇರೆ ಬೇರೆ ಆದರೂ) ಸಹೋದರರು. 


ಮಾಧವಿಯ ಪ್ರಸಂಗದಲ್ಲಿ ಕಾಣಿಸುವ ವಿಶ್ವಾಮಿತ್ರರು ಯಾರು? ಕೆಲವರು “ವಿಶ್ವಾಮಿತ್ರರು ಅನ್ನುವ ಹೆಸರಿನ ಅನೇಕರಿದ್ದರು. ಅವರಲ್ಲಿ ಒಬ್ಬರು ಇವರು. ವಸಿಷ್ಠ-ವಿಶ್ವಾಮಿತ್ರರ ಸಂಬಂಧದ ವಿಶ್ವಾಮಿತ್ರರಲ್ಲ” ಎಂದು ಅಭಿಪ್ರಾಯ ಪಡುತ್ತಾರೆ. ಮಾಧವಿ-ವಿಶ್ವಾಮಿತ್ರರ ಮಗನ ಹೆಸರು ಅಷ್ಟಕ. ಕೆಲವರ ಕೌಶಿಕ ಗೋತ್ರಗಳ ಪ್ರವರದಲ್ಲಿಯೂ ಅಷ್ಟಕ ಎನ್ನುವ ಹೆಸರಿದೆ. ಆದ್ದರಿಂದ ಅವರು ಬ್ರಹ್ಮರ್ಷಿ ವಿಶ್ವಾಮಿತ್ರರು ಎಂದು ಬಲವಾದ ಅಭಿಪ್ರಾಯ. ಇಲ್ಲಿ ಹಾಗೆಯೇ ಸೂಚಿಸಿದೆ. ಎಲ್ಲ ಕಡೆ ಮಹರ್ಷಿ ಎಂದು ಹೇಳಿ, ಕಡೆಯ ದೃಶ್ಯದಲ್ಲಿ ಮಾತ್ರ ಬ್ರಹ್ಮರ್ಷಿ ಎಂದು ಸಂಬೋಧಿಸಿದೆ. ಅವರು ಯಾವಾಗ ಬ್ರಹ್ಮರ್ಷಿ ಆದರು ಅನ್ನುವ ಚರ್ಚೆ ಈ ನಾಟಕದ ಸಂದರ್ಭದಲ್ಲಿ ಬೇಡ. ಅದು ಎಲ್ಲರಿಗೂ ಗೊತ್ತಿರುವ ವಿಚಾರವೇ. 


ನಾಲ್ಕು ಜನ ಸಹೋದರರು ನೈಮಿಷಾರಣ್ಯದಲ್ಲಿ ಸತ್ರ ನಡೆಸಿದ್ದು, ಅಲ್ಲಿಗೆ ಯಯಾತಿಯು ಸ್ವರ್ಗದಿಂದ ತಳ್ಳಿದಾಗ ಬಿದ್ದದ್ದು, ಅಲ್ಲಿಗೆ ಮಾಧವಿಯು ಬಂದದ್ದು, ಅವಳೂ ತನ್ನ ಪುಣ್ಯದಲ್ಲಿ ಭಾಗ ಕೊಟ್ಟಿದ್ದು, ಇವೆಲ್ಲವೂ ಮೂಲಗಳಲ್ಲಿ ಇರುವ ಸತ್ಯ ಸಂಗತಿಗಳೇ. ಅಲ್ಲಿಗೆ (ನೈಮಿಷಾರಣ್ಯಕ್ಕೆ) ಬ್ರಹ್ಮರ್ಷಿ ವಿಶ್ವಾಮಿತ್ರರು ಬಂದಿದ್ದು ಮಾತ್ರ ಕಲ್ಪನೆ. ನಾಟಕದ ಕೊನೆಯಲ್ಲಿ, ಖಚಿತವಾಗಿ ಹೇಳಿದ ಕಡೆಯ ಮಾತನ್ನು ಎಲ್ಲರೂ ಒಪ್ಪಬೇಕಾದ ಸಂದರ್ಭದಲ್ಲಿ, ಅಧಿಕಾರಯುತವಾಗಿ ಮಾತನಾಡಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕೊಡಲಿ ಎನ್ನುವ ದೃಷ್ಟಿಯಿಂದ ಮಾಡಿರುವ ಮಾರ್ಪಾಡು ಇದು. ಅಷ್ಟೇ. 


ಗಾಲವರಿಗೆ ಅಶ್ವಗಳ ಸಂಪಾದನೆಯ ಸಂದರ್ಭದಲ್ಲಿ ಗರುಡನ ಸಹಾಯ ಸಿಕ್ಕಿತು ಎಂದು ಕೆಲವು ಕಡೆ ಸೂಚ್ಯವಾಗಿದೆ. ಈ ನಾಟಕದಲ್ಲಿ ಗರುಡನ ಬದಲು “ವೈನತೇಯ” ಎನ್ನುವ ಗಾಲವನ ಬಾಲ್ಯ ಸ್ನೇಹಿತ ಎಂದು ತೋರಿಸಿದೆ. ರಂಗದ ಮೇಲೆ ಪ್ರಯೋಗ ಮಾಡುವ ಕಾಲದಲ್ಲಿ (ಅದು ಆಗುತ್ತದೆಯೋ, ಇಲ್ಲವೋ ಅನ್ನುವುದು ಬೇರೆ  ವಿಷಯ!) ಬಹಳ ಕಾಲ ಜೊತೆಯಲ್ಲಿ ಇರುವ ಎರಡು ಪಾತ್ರಗಳ ಆತ್ಮೀಯತೆ, ಸ್ವಲ್ಪ ಹಾಸ್ಯ, ಇವು ತರಲು ಮಾಡಿಕೊಂಡಿರುವ ಬದಲಾವಣೆ ಇದು.


ಮಾಧವಿಯ ತಂದೆ ಯಯಾತಿ ಎಂದು ಎಲ್ಲ ಕಡೆ ಹೇಳಿದ್ದರೂ, ತಾಯಿ ಯಾರು ಎಂದು ಸ್ಪಷ್ಟವಿಲ್ಲ. ದೇವಯಾನಿ ಮತ್ತು ಶರ್ಮಿಷ್ಠೆ, ಇಬ್ಬರೂ ಅವಳ ಹೆತ್ತತಾಯಿಯರಲ್ಲ ಅನ್ನುವುದು ಮೊದಲ ನೋಟಕ್ಕೆ ಗೊತ್ತಾಗುತ್ತದೆ. ಆದ್ದರಿಂದ ಅವಳು ಯಯಾತಿಯ ಮತ್ತೊಬ್ಬ ಹೆಂಡತಿಯ ಮಗಳಾಗಿರಬೇಕು. ದೇವಯಾನಿಯ ವಿವಾಹವಾಗುವ ಮೊದಲೇ ಯಯಾತಿಗೆ ಮದುವೆಯಾಗಿರಬಹುದು. ರಾಜರಿಗೆ ಅನೇಕ ಹೆಂಡಿರಿರುತ್ತಿದ್ದರು ಅನ್ನುವುದು ಆಗ ಸಾಮಾನ್ಯವಾಗಿತ್ತು. (ಈಗಿನ ಕಾಲದ ರಾಜ ಸಮಾನರಾದವರಿಗೆ ಹೀಗೆ ಇದ್ದರೂ ಗೊತ್ತಾಗುವುದಿಲ್ಲ). ಇಲ್ಲಿ ಮಾಧವಿ ತಾಯಿ ಇಲ್ಲದ ತಬ್ಬಲಿ ಎಂದು ತೋರಿಸಲಾಗಿದೆ. ತಂದೆಯ ಮನಸ್ಸಿನ ದುಗುಡದ ತೀವ್ರತೆ ಪರಿಣಾಮಕಾರಿಯಾಗಿರಲೂ ಇದು ಸಹಾಯಕ. 


ಹೆಣ್ಣುಮಕ್ಕಳಿಗೆ, ಅವರು ರಾಜಕುಮಾರಿಯರಾದರೆ ಏನಂತೆ, ಸ್ವತಂತ್ರವಾಗಿ ಬದುಕು ರೂಪಿಸಿಕೊಳ್ಳುವ ಪೂರ್ಣ ಸ್ವಾತಂತ್ರ್ಯ ಪ್ರಾಯಶಃ ಯಾವ ಕಾಲದಲ್ಲೂ ಇರಲಿಲ್ಲ. ಸ್ವಯಂವರ ಪದ್ಧತಿಯಲ್ಲಿಯೂ ಪೂರ್ಣ ಸ್ವಾತಂತ್ರ್ಯ ಇರಲಿಲ್ಲ. ಬಹಳ ಸಂದರ್ಭಗಳಲ್ಲಿ ಅವರು ಯೋಚನೆ ಮಾಡುವಷ್ಟು ಪ್ರಬುದ್ಧತೆ ಬರುವ ವಯಸ್ಸಿನ ಮೊದಲೇ ವಿವಾಹವಾಗಿರುತ್ತಿತ್ತು. ಎರಡನೆಯ ಪತ್ನಿಯಾಗುವ, ಅಥವಾ ಎಷ್ಟನೆಯದು ಎಂದು ಗೊತ್ತಿಲ್ಲದ, ವಿವಾಹಗಳೂ ನಡೆಯುತ್ತಿದ್ದವು. ಇವುಗಳ ಸೂಚ್ಯವಾದ ನೋಟ ಕೊಡುವ ಪ್ರಯತ್ನ ಇಲ್ಲುಂಟು.


ಕೆಲವು ಸಂಗತಿಗಳು (ಮಾಧವಿಯ ವರದ ವಿವರಗಳು, ಕುದುರೆಗಳ ವಿಚಾರ, ವಿವಾಹದ ನಿಬಂಧನೆಗಳು ಮುಂತಾದುವು) ಮತ್ತೆ ಮತ್ತೆ ಬಂದವಲ್ಲಾ ಅನಿಸಬಹುದು. ವಿಧಿಯಿಲ್ಲ. ಕೆಲವು ಕಡೆ ಊಟದಲ್ಲಿ ಅನ್ನ ನಾಲ್ಕು ಸಲ ಬರುತ್ತದೆ. “ಕೂಟಿಗೂ ಅನ್ನ ಬಂತು, ಸಾರಿಗೂ ಅನ್ನ ಬಂತು, ಚಿತ್ರಾನ್ನದಲ್ಲೂ ಅನ್ನ ಇತ್ತು, ಈಗ ಮಜ್ಜಿಗೆಗೂ ಅನ್ನ ಬಂತಲ್ಲ?” ಎಂದು ಯಾರೂ ಬೇಸರಿಸುವುದಿಲ್ಲ. ಇದೂ ಹಾಗೆಯೇ ಎಂದು ನಕ್ಕು ಸುಮ್ಮನಾಗಬೇಕಷ್ಟೆ!  ಒಬ್ಬ ಅಧ್ಯಾಪಕನು ಒಂದೇ ಪಾಠವನ್ನು ನಾಲ್ಕು ತರಗತಿಗಳಿಗೆ (ಸೆಕ್ಷನ್) ಪಾಠ ಹೇಳುವಾಗ ಅದು ಅವನಿಗೆ ನಾಲ್ಕು ಸಾರಿ ಆಗುತ್ತದೆ. ಆದರೆ ವಿದ್ಯಾರ್ಥಿಗಳಿಗೆ ಒಂದೇ ಸಲ. ಅಲ್ಲವೇ? ಹೇಳುವವರಿಗೆ ನಾಲ್ಕು ಸಲ. ಕೇಳುವವರಿಗೆ ಒಂದೇ ಸಲ. ಇಲ್ಲಿಯೂ ಹಾಗೆಯೇ ಎಂದು ತಿಳಿಯಬೇಕು!


ನಾಟಕದ ಒಟ್ಟು ಗಾತ್ರದ ಬಗ್ಗೆ ಟೀಕೆಗಳು ಬರಬಹುದು. ಈಗ ಸಾಮಾನ್ಯವಾಗಿ ಹೆಚ್ಚೆಂದರೆ ಎರಡು ಗಂಟೆಗಳ ಒಳಗಾಗಿ ನಡೆಯುವ ರಂಗಪ್ರಯೋಗಗಳ ಕಾಲ. ರಾತ್ರಿಯೆಲ್ಲ ನಡೆಯುವ ನಾಟಕಗಳು ಕಡಿಮೆಯೇ. ನಾಲ್ಕೈದು ಗಂಟೆಗಳ ನಾಟಕಗಳು ಪ್ರಯೋಗ ಕಂಡರೂ ಅವು ಬಹಳ ಪ್ರಸಿದ್ಧರಾದವರ ರಚನೆಗಳು ಮಾತ್ರ. ಇದೊಂದು ಏಳು ಅಂಕಗಳ ನಾಟಕ. ಏನು ಮಾಡುವುದು? ಇದು ಮೂರು ತಲೆಮಾರುಗಳ ಕಥೆ. ಮಾಧವಿಗೆ ನಾಲ್ಕು ಮದುವೆಗಳು! ಅವಳ ಬದುಕೇ ಆರು ಅಂಕಗಳದ್ದು. ತಂದೆಯ ಮನೆಯಲ್ಲಿ ಮೊದಲಂಕ. ನಂತರ ಮದುವೆಗಳ ನಾಲ್ಕಂಕ. ಕಡೆಯಲ್ಲಿ ಇನ್ನೊಂದಂಕ. ಇನ್ನೂ ಚಿಕ್ಕದು ಮಾಡುವುದು ಕಷ್ಟ. ಯಾರಾದರೂ ರಂಗದ ಮೇಲೆ ತರುವ ಸಾಹಸ ಮಾಡಿದರೆ ಆಗ ಇನ್ನೂ ಸ್ವಲ್ಪ ಚಿಕ್ಕದು ಮಾಡಲು ಅವಕಾಶವಿದೆ. ಸಂದರ್ಭ ಬಂದರೆ (?) ನೋಡೋಣ. 


ರಂಗಪ್ರಯೋಗಕ್ಕೆ ಕೆಲವು ಬಾಧಕಗಳು ಇರಬಹುದು. ಏನೂ ಪರಿಕರಗಳಿಲ್ಲದೇ ಗಾಳಿಯಲ್ಲಿ ಕೈಕಾಲು ಆಡಿಸಿ ಪರಿಕರದ ಭ್ರಮೆ ಹುಟ್ಟಿಸುವ ಪ್ರಯೋಗಗಳಿರುವ ಕಾಲದಲ್ಲಿ ಇದೇನೂ ದೊಡ್ಡದಲ್ಲ. ನುರಿತ ನಿರ್ದೇಶಕರು ಅವಕ್ಕೆ ಸಮಾಧಾನಗಳನ್ನು ಸುಲಭವಾಗಿ ಕಂಡುಕೊಳ್ಳಬಲ್ಲರು. 


ವರಗಳು-ಶಾಪಗಳು, ಗುರುದಕ್ಷಿಣೆ, ಸ್ವರ್ಗ-ಸಾಕ್ಷಾತ್ಕಾರ, ಇವೆಲ್ಲಾ ಈ ಕಾಲದಲ್ಲಿ ಯಾರಿಗೆ ಬೇಕು ಅನ್ನುವ ಪ್ರಶ್ನೆ ಬರಬಹುದು. ನಿಜ. ಕಡಿಮೆಯಿದ್ದರೂ, ಇವನ್ನು ರಸಾನುಭವಕ್ಕಾಗಿ ಅಥವಾ ನಂಬಿಕೆಗಾಗಿ ಓದುವ, ನೋಡುವ ಜನರು ಕೆಲವರಾದರೂ ಈಗಲೂ ಇದ್ದಾರೆ. ಅಲ್ಲವೇ?


ನಾಲ್ಕು ವಿವಾಹದ ಕತೆಗೆ ನಾಲ್ಕು ಮಾತುಗಳು ಅಂದದ್ದು ಕಡೆಗೆ ಎಂಟು ಮಾತಾಯಿತು!


"ಮಾಧವಿ" ನಾಟಕವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.