Showing posts with label Habbadoota. Show all posts
Showing posts with label Habbadoota. Show all posts

Thursday, September 10, 2026

ಕೈತುತ್ತು, ದಿನದೂಟ ಮತ್ತು ಹಬ್ಬದೂಟ


ಶ್ರೀ ವೇದಾಂತ ದೇಶಿಕರ "ಯಾದವಾಭ್ಯುದಯಂ" ಎನ್ನುವ ಶೀರ್ಷಿಕೆಯ ಹಿಂದಿನ ಒಂದು ಸಂಚಿಕೆಯಲ್ಲಿ (ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು) ಪುರಾಣ ಮತ್ತು ಮಹಾಕಾವ್ಯ ಇವುಗಳ ನಡುವಣ ವ್ಯತ್ಯಾಸದ ಬಗ್ಗೆ ಪ್ರಸ್ತಾಪ ಬಂದಿತ್ತು. ಇವುಗಳ ಜೊತೆಗೆ ಹಿಂದಿನ ಕೆಲವು ಸಂಚಿಕೆಗಳಲ್ಲಿ "ಮಹಾಕಾವ್ಯ', "ಖಂಡಕಾವ್ಯ", "ರಸ" ಮತ್ತು "ಧ್ವನಿ" ಮುಂತಾದ ಪದಗಳನ್ನು ಮತ್ತೆ ಮತ್ತೆ ಉಪಯೋಗಿಸಿದೆ. ಸ್ನೇಹಿತರೊಬ್ಬರು ಮಹಾಕಾವ್ಯ, ಖಂಡಕಾವ್ಯ ಮತ್ತು ಕವನ, ಈ ಪದಗಳ ಬಳಕೆ ಏಕೆ ಮತ್ತು ಏನು ವ್ಯತ್ಯಾಸ ಎಂಬ ಪ್ರಶ್ನೆ ಕೇಳಿದ್ದಾರೆ. 

ಈ ರೀತಿಯ ಪ್ರತಿಯೊಂದು ಪದಕ್ಕೂ ನಿಶ್ಚಿತವಾದ ಅರ್ಥ ಮತ್ತು ಲಕ್ಷಣಗಳು ಉಂಟು. ಇಂತಹ ಪ್ರಶ್ನೆಗಳಿಗೆ ಕಾವ್ಯ ಮೀಮಾಂಸೆ ವಿಷಯದಲ್ಲಿ ಪರಿಣತರಾದವರು ಸಮರ್ಥವಾಗಿ ಉತ್ತರ ಕೊಡಬಲ್ಲರು. ಕಾವ್ಯ ಮೀಮಾಂಸೆಯ ಕುರಿತಾಗಿ ಅನೇಕ ಲಕ್ಷಣ ಗ್ರಂಥಗಳಿವೆ. ಇವುಗಳನ್ನು ಅನೇಕ ವರ್ಷ ಅಭ್ಯಾಸ ಮಾಡುತ್ತಾರೆ. ಅವುಗಳ ಅಧ್ಯಯನ ಒಂದು ಸುಂದರ ಲೋಕ. ನಮ್ಮಂತಹ ಸಾಮಾನ್ಯರು ಈ ವಿಷಯದಲ್ಲಿ ಪ್ರವೇಶ ಮಾಡುವುದು ಕಷ್ಟದ ಕೆಲಸವೇ. 

ಹೀಗಿದ್ದರೂ, ನಮ್ಮ ಸಾಮಾನ್ಯ ಜ್ಞಾನ ವರ್ಧನೆಗೆ ಅಲ್ಪ ಸ್ವಲ್ಪ ತಿಳಿದಿರುವುದನ್ನು ಪರಸ್ಪರ ಹಂಚಿಕೊಳ್ಳುವುದು ತಪ್ಪೇನೂ ಅಲ್ಲವಲ್ಲ ಎಂಬ ಧೈರ್ಯದಿಂದ ಪ್ರವೇಶ ಮಾಡೋಣ! ತಪ್ಪುಗಳಿದ್ದರೆ ತಿಳಿದವರು ಸರಿ ಮಾಡಬಹುದು. ಅಲ್ಲವೇ?
 
******

ಎಲ್ಲಾ ಪ್ರಾಣಿಗಳೂ ತಮ್ಮ ಮುಂದಿನ ಸಂತತಿಗೆ ಜನ್ಮ ಕೊಡುತ್ತವೆ. ಕೆಲವು ಪ್ರಾಣಿಗಳಿಗೆ ಜನ್ಮ ಕೊಟ್ಟ ನಂತರ ಜವಾಬ್ದಾರಿ ಮುಗಿಯಿತು. ತಾಯಿಗೂ ಮಗುವಿಗೂ ಮುಂದೆ ಏನೂ ಸಂಬಂಧವಿಲ್ಲ. ತಾಯಿ-ಮಗು ಅನ್ನುವ ಪದದ ವ್ಯಾಪ್ತಿಯೇ ಇಲ್ಲ. ದೊಡ್ಡ ಪ್ರಾಣಿಗಳಿಗೆ, ಪಶು-ಪಕ್ಷಿಗಳಿಗೆ, ಕೆಲವು ಕಾಲ ಸಂಬಂಧ ಉಂಟು. ಅವೂ ಮರಿಗಳ-ಕರುಗಳ ಲಾಲನೆ-ಪಾಲನೆ ಸ್ವಲ್ಪ ಮಟ್ಟಿಗೆ ಮಾಡುತ್ತವೆ. ನಂತರ ಮುಗಿಯಿತು. ಅವುಗಳ ದಾರಿ ಅವುಗಳಿಗೆ. ಬಾಂಧವ್ಯ ಕೊನೆಯಾಯಿತು. ತಾಯಿಯನ್ನು ನೋಡಲು ಮಗುವೂ, ಮತ್ತು ಅದಕ್ಕಿಂತ ಹೆಚ್ಚಾಗಿ ಮಗುವನ್ನು ನೋಡಲು ತಾಯಿಯೂ ಹಂಬಲಿಸುವುದಿಲ್ಲ. 

ಎಲ್ಲಾ ಪ್ರಾಣಿಗಳಿಗಿಂತ ಮನುಷ್ಯ ಪ್ರಾಣಿಗಳಿಗೆ(?) ಶಿಶುಪಾಲನೆ ಅತ್ಯಂತ ದೀರ್ಘಾವಧಿಯ ಕೆಲಸ. ತನ್ನ ಕಾಲ ಮೇಲೆ ಶಿಶು ತಾನೇ ನಿಂತುಕೊಳ್ಳಲು ವರುಷಗಳೇ ಬೇಕು. ಸುಮಾರು ನಾಲ್ಕು ವರುಷಗಳವರೆಗೂ ಶಿಶುವಿಗೆ ಏನೂ ನೆನಪಿರುವುದಿಲ್ಲ. ತನ್ನ ತಾಯಿ ಹೊರತು. ಮನೆಯ ಇತರರ ಪರಿಚಯ ಇದ್ದರೂ ಎಲ್ಲಕ್ಕೂ ತಾಯಿಯೇ ಬೇಕು. ಮಗುವಿಗೆ ಹಸಿವಾಗಿದೆ ಅನ್ನುವುದು ಮಗುವಿಗೆ ಗೊತ್ತಾಗದಿದ್ದರೂ ಅಮ್ಮನಿಗೆ ಗೊತ್ತಾಗುತ್ತದೆ. ಮಗುವಿಗೆ ಬೇಕಾದ ಆಹಾರ ಪದಾರ್ಥ ಏನು ಎಂದು ತಾಯಿಯೇ ತೀರ್ಮಾನ ಮಾಡುತ್ತಾಳೆ. ತುಂಬಾ ಚಿಕ್ಕದಿದ್ದಾಗ ಹಾಲಾದರೆ ಸರಿ. ಮಗು ಸ್ವಲ್ಪ ದೊಡ್ಡದಾದ ಮೇಲೆ ಮೆತ್ತಗಿರುವ ಅನ್ನವೋ, ಮತ್ತೊಂದೋ, ದೇಶ-ಕಾಲಗಳಿಗೆ ಅನುಗುಣವಾಗಿ ಅಮ್ಮನೇ ಕೊಡಬೇಕು. ಮಗುವಿಗೆ ಆಟದ ಮೇಲೆ ಗಮನ. ಹೆತ್ತವಳಿಗೆ ಹೇಗಾದರೂ ಮಗುವಿನ ಹೊಟ್ಟೆಗೆ ಆಹಾರ ಸೇರಿದರೆ ಸಾಕು. ಕಾಗೆ-ಗುಬ್ಬಿ ತೋರಿಸುತ್ತಾ, ಅವರಿಗೊಂದು ತುತ್ತು, ಇವರಿಗೊಂದು ತುತ್ತು ಎಂದು ಹೇಳುತ್ತಾ, ಒಟ್ಟಿನಲ್ಲಿ ಅಷ್ಟಿಷ್ಟು ಶಿಶುವಿನ ಹೊಟ್ಟೆ ಸೇರಿದರೆ ಕೆಲಸವಾಯಿತು. ಇದು "ಬಾಯಿತುತ್ತು". 

ಮಗು ಸ್ವಲ್ಪ ದೊಡ್ಡದಾಯಿತು. ಈಗ ಶಾಲೆಗೆ ಹೋಗುತ್ತಿದೆ. ಹಾಸಿಗೆಯಿಂದ ಏಳುವುದು ತಡ. ನಂತರ ಎಲ್ಲಿಲ್ಲದ ಆತುರ. ಮಗುವಿಗೆ ಶಾಲೆಯ ಕಡೆ ಹೊರಡುವ ಚಿಂತೆ. ತಾಯಿಗೆ ಮಗುವಿನ ಹೊಟ್ಟೆಯ ಚಿಂತೆ. ಮಗು ಕೊಟ್ಟ ತಿಂಡಿಯಲ್ಲಿ ಅರ್ಧ ತಿಂದು ಹೊರಡುತ್ತದೆ. ಕಾಲುಚೀಲ ಹಾಕಿಕೊಳ್ಳುತ್ತಿದೆ. ತಾಯಿ ಅದರ ಹಿಂದೆ-ಹಿಂದೆ ಓಡಾಡುತ್ತಾ, ಕೈಯಲ್ಲಿ ಮಿಕ್ಕಿದ ಪದಾರ್ಥ ಹಿಡಿದು ಹೆಣಗಾಡುತ್ತಾ ಮಗುವಿನ ಬಾಯಿಗೆ ಸೇರಿಸುತ್ತಾಳೆ. ಒಟ್ಟಿನಲ್ಲಿ ಅಷ್ಟು ಆಹಾರ ಮಗುವಿಗೆ ದಕ್ಕಿತು. ತಾಯಿಯ ಪ್ರಯತ್ನ ಸಾರ್ಥಕ ಆಯಿತು. ಇದು "ಬಾಯಿತುತ್ತು" ಬಾಬ್ತಿನ, ಸ್ವಲ್ಪ ಮುಂದುವರೆದ, ಇನ್ನೊಂದು ಅಧ್ಯಾಯ.

******

ಮಕ್ಕಳು ಸ್ವಲ್ಪ ದೊಡ್ಡವರಾದರು. (ಇದು ಸ್ವಲ್ಪ ಹಿಂದಿನ ಸಮಾಚಾರ. ಈಗ ಮಕ್ಕಳು ಎನ್ನುವ ಬಹುವಚನ ಪ್ರಯೋಗ ಹೆಚ್ಚು ಕಡಿಮೆ ಇಲ್ಲವಾಗಿದೆ). ಸಂಜೆಯ ಊಟದ ಸಮಯ. ಮಾಡಿದ್ದ ಎಲ್ಲ ಪದಾರ್ಥಗಳೂ ಬಹುಪಾಲು ಖರ್ಚಾಗಿ ಸ್ವಲ್ಪ ಸ್ವಲ್ಪ ಮಾತ್ರ ಉಳಿದಿದೆ. ಸುಮಾರು ಅನ್ನ, ಸ್ವಲ್ಪ ಸಾರು, ಇಷ್ಟು ಪಲ್ಯ, ಅಷ್ಟು ಮಜ್ಜಿಗೆ, ಹೀಗೆ. ಎಲ್ಲರನ್ನೂ ಕೂಡಿಸಿ ಊಟ ಬಡಿಸಲು ಸಾಲುವುದಿಲ್ಲ. ಆದರೆ ಒಟ್ಟಾರೆ ಸಾಕಾಗಬಹುದು. (ಮನೆಗಳಲ್ಲಿ ರೆಫ್ರಿಜಿರೇಟರ್ ಇಲ್ಲದ ಕಾಲ. ಅಂದು ಮಾಡಿದ್ದು ಅಂದೇ ಮುಗಿಸಬೇಕು ಅನ್ನುವ ಸ್ಥಿತಿ. ಪದಾರ್ಥ ಹಾಳು ಮಾಡುವ ಐಷಾರಾಮಿ ಸ್ಥಿತಿ ಇಲ್ಲ). ಸರಿ, ಎಲ್ಲರನ್ನೂ ಕೂಡಿಸಿ ಕೈತುತ್ತು ಹಾಕುವುದು. 

ತುತ್ತು ಹಾಕುವವರ ಪಕ್ಕ ಒಂದು ತಟ್ಟೆ. ಒಂದು ಸುತ್ತು ಬಂದ ತಕ್ಷಣ ಅದರಲ್ಲಿ ಒಂದು ತುತ್ತು. ತುತ್ತು ಹಾಕುತ್ತಿರುವವರಿಗೆ ಅದು ಮೀಸಲು. ಮಿಕ್ಕವರಂತೆ, ವ್ಯತ್ಯಾಸವಿಲ್ಲದೆ ಅವರಿಗೂ ನ್ಯಾಯ. ಎಲ್ಲರಿಗೂ ಸಮ-ಸಮ. ಎದುರುಗಡೆ ಕುಳಿತಿರುವವರ ಸಂಖ್ಯೆ ಮತ್ತು ಪಾತ್ರೆಯಲ್ಲಿ ಇರುವ ಪದಾರ್ಥ ತಾಳೆಹಾಕಿ ತುತ್ತಿನ ಗಾತ್ರ ದೊಡ್ಡದಾಗಬಹುದು, ಇಲ್ಲವೇ ಚಿಕ್ಕದಾಗಬಹುದು. ಒಟ್ಟಿನಲ್ಲಿ ಎಲ್ಲರಿಗೂ ಸಮ-ಸಮ. ಸಮ-ಸಮ ಅನ್ನುವುದಕ್ಕೆ ತಿನ್ನುವವರ ವಯಸ್ಸಿನ ಸಾಮ್ಯತೆ ಕೂಡ ಉಂಟು. ಇದು ಕೈತುತ್ತು. 

ಕೈತುತ್ತು ಬಾಯಿತುತ್ತಿನ ನಂತರದ ಅನುಕೂಲಕರ ಆಚರಣೆ. ಒಟ್ಟಿಗೆ ಕೂತು ಊಟ ಆಯಿತು. ಎಲ್ಲಾ ಪದಾರ್ಥ ಸದ್ವಿನಿಯೋಗ ಆಯಿತು. ಪಾತ್ರೆಗಳೆಲ್ಲಾ ತೊಳೆಯಲು ಬಿಡುವಾದವು. ತಾಟು ತೊಳೆಯುವ ಯೋಚನೆ ಇಲ್ಲ. ಸ್ಥಳ ಶುದ್ದಿಯೂ ಸುಲಭ ಮತ್ತು ಸುಗಮ. ಊಟದ ಸಮಯದಲ್ಲಿಯೂ ಉಳಿತಾಯ. ಎಷ್ಟೊಂದು ಅನುಕೂಲ ಈ ಕೈತುತ್ತಿನ ಊಟದಲ್ಲಿ!

******

ಕೈತುತ್ತಿನ ಊಟ ಎಂದೋ ಒಮ್ಮೆ ಆಗಬಹುದು. ಹಾಗೆ ಇದ್ದರೂ, ಅದು ಸಂಜೆಯ ವೇಳೆಗೆ ಸರಿ. ಹಗಲಿನ ಊಟಕ್ಕೆ ಅದು ಅಷ್ಟು ಸರಿ ಬರದು. ಮಧ್ಯಾನ್ಹದಲ್ಲಿ ಊಟದ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಬೇಕೇ ಬೇಕು. ತನ್ನ ಕೈ; ತನ್ನ ಬಾಯಿ. ಬೇಕಿದ್ದು ತಿನ್ನಿ; ಬೇಡದ್ದು ಬಿಡಿ. ಒಂದೊಂದು ಪದಾರ್ಥ ನಿಧಾನವಾಗಿ ಜಗಿದು ನುಂಬಬೇಕು. ಇನ್ನೊಂದು ಬೇಗ ತಿಂದು ಮುಗಿಸಬೇಕು. ಕೈತುತ್ತಿನಲ್ಲಿ ತಿನ್ನುವವನಿಗೆ ಇಂಥದು ಬೇಕೆಂದು ಕೇಳುವ ಸ್ವಾತಂತ್ರ್ಯವಿಲ್ಲ. ಬೇಡದ್ದು ಬಿಡುವುದೂ ಕಷ್ಟ. ಈ ನಿರ್ಬಂಧ ಹಗಲಿನ ಊಟದಲ್ಲಿ ಬೇಕಾಗಿಲ್ಲ. ಕುಳಿತು, ಸ್ವಸ್ಥವಾಗಿ, ವಿರಾಮದಲ್ಲಿ ಪ್ರತಿಯೊಂದು ಪದಾರ್ಥದ ರುಚಿ ನೋಡಿ, ಬೇಕು-ಬೇಡ ತೀರ್ಮಾನಿಸಿ, ಮತ್ತಷ್ಟು ಕೇಳಬಹುದು. ಬೇಡದ್ದು ಪಕ್ಕಕ್ಕೆ ಸರಿಸಬಹುದು. ಮಧ್ಯೆ ಅದೂ-ಇದೂ ಮಾತಾಡಬಹುದು. ಇನ್ನೆಂದೋ ಮಾಡಿದ ಊಟದ ಪದಾರ್ಥಕ್ಕೆ ಹೋಲಿಸಬಹುದು. ಎಷ್ಟು ಸ್ವಾತಂತ್ರ್ಯ!

ದಿನದೂಟ ಬೇರೆಯ ಪರಿಯದು. ಅದರಲ್ಲಿ ಕನಿಷ್ಠ ಕೆಲವು ಪದಾರ್ಥಗಳು ಇದ್ದೇ ಇರುತ್ತವೆ. ಆನ್ನ-ಹುಳಿ ಇರಬಹುದು ಅಥವಾ ಅನ್ನ-ಸಾರು ಇರಬಹುದು. ರೊಟ್ಟಿ-ಪಲ್ಯ ಇರಬಹುದು. ಒಂದೊಂದು ದಿನ ಇವೆರಡೂ ಇರಬಹುದು. ಜೊತೆಗೆ ಪಲ್ಯ ಅಥವಾ ಗೊಜ್ಜು ಆಗಬಹುದು. ಹಪ್ಪಳ-ಸಂಡಿಗೆ, ಬಾಳಕ ಮೆಣಸಿನಕಾಯಿಗೂ ಅವಕಾಶ ಉಂಟು. ಉಪ್ಪಿನಕಾಯಿ-ಚಟ್ನಿಪುಡಿ ಬೇಕಿದ್ದಾಗ ತೆಗೆದುಕೊಳ್ಳಬಹುದು. ಮೋಸರೋ, ಮಜ್ಜಿಗೆಯೋ ಇರಬಹುದು. ಆಯಾಯಾ ದೇಶ-ಕಾಲಗಳಿಗೆ ಅನುಗುಣವಾಗಿ ಹೆಸರು ಮತ್ತು ಪದಾರ್ಥ ಬದಲಾಗಬಹುದು. ಆದರೆ ಕೆಲವು ಪದಾರ್ಥಗಳಾದರೂ ಇದ್ದೇ ಇರುತ್ತವೆ.

ಹಬ್ಬದೂಟ ಅನ್ನುವುದೇ ಬೇರೆ! ಅದರ ಸೊಗಸೇ ಇನ್ನೊಂದು ರೀತಿಯದು. ಭರ್ಜರಿ ಊಟವಿಲ್ಲದ ಹಬ್ಬವಿಲ್ಲ. ವಿಶೇಷವಾದ ಊಟವಿಲ್ಲದ ಹಬ್ಬವೂ ಒಂದು ಹಬ್ಬವೇ? "ನಮ್ಮ ಮನೆಯಲ್ಲಿ ನಾಳೆ ಹಬ್ಬ. ಖಂಡಿತ ಬನ್ನಿ. ಭಾರಿ ಪೂಜೆ ಉಂಟು. ತುಂಬಾ ಸಂಭ್ರಮ. ಆದರೆ ಊಟ ಮಾತ್ರ ಇರುವುದಿಲ್ಲ" ಎಂದು ಯಾರಿಗಾದರೂ ಆಮಂತ್ರಣ ಕೊಟ್ಟು ನೋಡಿ. ಅತಿಥಿ-ಅಭ್ಯಾಗತರನ್ನು ಬಿಡಿ. ಮನೆಯವರೇ ಕೆಲವರು ಅಂದು ಕಾಣಿಸುವುದಿಲ್ಲ. 

ಪ್ರತಿ ಹಬ್ಬಕ್ಕೂ ಅದರದೇ ಆದ ವಿಶೇಷ ತಿನಿಸು ಎಂದುಂಟು. ಯುಗಾದಿಗೆ ಒಬ್ಬಟ್ಟು-ಹೋಳಿಗೆ. ಗಣಪತಿ ಚೌತಿಗೆ ಕಡಬು-ಮೋದಕ. ಈ ರೀತಿ. ಹೆಚ್ಚು ಹೇಳಿ ಅನಾವಶ್ಯಕವಾಗಿ ಬಾಯಲ್ಲಿ ನೀರೂರಿಸುವುದು ಬೇಡ. ಷಡ್ರಸಗಳ ಪದಾರ್ಥಗಳೂ ಇರಬೇಕು. ಹಾಗಲಕಾಯಿಯ ಕಹಿ ಬೇಕು. ಮಾವಿನ ಹುಳಿ ಬೇಕು. ಬೆಲ್ಲದ ಸಿಹಿ ಬೇಕು. ಉಂಡ ಮೇಲೆ, ಸ್ವಲ್ಪ ಸಮಯದ ನಂತರ ಯಾವುದೋ ಪದಾರ್ಥ ಇನ್ನೂ ಸ್ವಲ್ಪ ಬೇಕು ಅನ್ನಿಸಬೇಕು. ಇನ್ನೊಂದು ಕಾಯಿ ಹೋಳಿಗೆ ಇರಬಹುದು. ಒಂದು ಸಣ್ಣ ಬೋಂಡಾ ಅನ್ನಬಹುದು. ಎರಡೇ ಎರಡು ಆಂಬೊಡೆ ಆಗಬಹುದು. ಹೀಗೆ.

ಹಬ್ಬದ ಮಧ್ಯಾನ್ಹ ಮನೆಗೆ ಯಾರೋ ಬಂದರು. ಅವರ ಮುಂದೆ ಇಡಲು ಇವು ಯಾವುದಾದರೂ ಬೇಕು. ಲೋಕಾಭಿರಾಮವಾಗಿ ಹರಟೆ ಹೊಡೆಯುವಾಗ ಅವುಗಳು ಜೊತೆ ಇದ್ದರೆ ಚೆನ್ನ. ಹೀಗೆ ಜೀವನ ರಸಮಯ. 
******

ಇದೇನು? ಕವನ, ಖಂಡಕಾವ್ಯ ಮತ್ತು ಮಹಾಕಾವ್ಯ ಚರ್ಚೆಯ ದಿಕ್ಕು ಬದಲಾಯಿತು ಅನ್ನುವಂತಿಲ್ಲ. ಮೇಲಿನದು ದೇಹ ಪೋಷಣೆ ಮಾಡಲು ಬೇಕಾದ ಸರಕಿನ ವಿವರಣೆ ಆಯಿತು. ಬರೀ ದೇಹ ಬೆಳೆದರೆ ಸಾಕೆ? ಬುದ್ಧಿಯೂ ಬೆಳೆಯಬೇಕಲ್ಲ. ಬುದ್ಧಿಯ ಬೆಳವಣಿಗೆ ಕೂಡ ಇದೇ ಹಾದಿ. ಆಹಾರದಿಂದ ದೇಹ ಪೋಷಣೆಯ ಜೊತೆಗೆ ಮನಸ್ಸಿಗೆ ಸಂತೋಷ. ಕವನ, ಕಾವ್ಯ ಮುಂತಾದುವುಗಳಿಂದ ಬುದ್ಧಿ ಪ್ರದೀಪನದ ಜೊತೆಗೆ ಮನಸ್ಸಿಗೆ ಆನಂದ. ಎರಡೂ ಸಮಾನಾಂತರ ರೇಖೆಗಳು. ಮನುಷ್ಯನಿಗೆ ಎರಡೂ ಬೇಕಲ್ಲ.

ಒಂದು ಹನಿಗವನ. ಶ್ರೀ ಡುಂಡಿರಾಜ್ ಅವರದ್ದಿರಬೇಕು. ಎರಡೇ ಸಾಲು:

ನಾನು ನೋಡಿದೆ. ಅವಳು ನಕ್ಕಳು.
ನಮಗೀಗ ಇಬ್ಬರು ಮಕ್ಕಳು.

ಎರಡು ಸಾಲಿನಲ್ಲಿ ಹೇಳಬೇಕಾದದ್ದೆಲ್ಲ ಹೇಳಿಯಾಯಿತು. ಬಾಯಿತುತ್ತು ಇದ್ದಂತೆ. 

ಮುಂದೆ ಹೋದರೆ ಸರ್ವಜ್ಞನ ತ್ರಿಪದಿ ಇರಬಹುದು. ಸೋಮೇಶ್ವರ ಶತಕದ ಚೌಪದಿ ಇರಬಹುದು. ದಿನಕರ ದೇಸಾಯಿಯವರ ಸಾಲುಗಳಿರಬಹುದು. ಮೂರು ಅಥವಾ ನಾಲ್ಕು ಸಾಲುಗಳಲ್ಲಿ ಒಂದು ವಿಷಯದ ಹರವು ಹಿಡಿದಿಟ್ಟಿತು. ಕೆಲಕಾಲ ನೆನಪು ಹಿಡಿದಿಡಬಹುದು. ಬಹುಕಾಲ ಮೆಲುಕು ಹಾಕುವಂತೆಯೂ ಇರಬಹುದು. ಹಿಂದು-ಮುಂದಿನ ಬಂಧವಿಲ್ಲ. ಪ್ರತಿಯೊಂದೂ ಸ್ವಯಂಪೂರ್ಣ. ಕೈತುತ್ತು ಇದ್ದಂತೆ. ಅನೇಕ ಕೈತುತ್ತುಗಳು ಜೀವನ ಪೂರ್ತಿ ನೆನಪು ಇರುವಂತೆ. ಇಂತಹುವುಗಳ ಒಟ್ಟು ಸಂಕಲನ ಅಮೂಲ್ಯವಾಗಿ ಉಳಿಯಲೂಬಹುದು. ಸೋಮೇಶ್ವರ ಶತಕ, ಭರ್ತೃಹರಿಯ ಶತಕಗಳು, ಮುಂತಾದುವುಗಳು.

ಮೂವತ್ತೆರಡು (32) ಅಕ್ಷರಗಳ ಒಂದು ಶ್ಲೋಕಕ್ಕೆ "ಗ್ರಂಥ" ಎಂದು ಕರೆಯುತ್ತಾರೆ. "ಗ್ರಂಥಗಳು" ಇದರಿಂದ ಹುಟ್ಟಿದ್ದು. ಶ್ಲೋಕಗಳ ಸಂಗ್ರಹ. ಅನೇಕ ಶ್ಲೋಕಗಳ ಒಂದು ಪುಸ್ತಕ.

******

ಒಂದು ಹೇಳಬೇಕಾದ ವಿಷಯಕ್ಕೆ ಮೂರು-ನಾಲ್ಕು ಸಾಲು ಸಾಲದಿದ್ದಾಗ ಕವನ ಮಾಡಬೇಕು. ಹತ್ತು-ಹದಿನಾರು ಸಾಲು ಆಗಬಹುದು. ಇನ್ನೂ ಸ್ವಲ್ಪ ಹೆಚ್ಚೇ ಆಗಬಹುದು. ಒಂದು ದೊಡ್ಡ ವಿಷಯವನ್ನು ಹೇಳಬೇಕಾದಾಗ ದೀರ್ಘ ಕವನ ಆಗಬೇಕು. "ಹಾಡುಗಬ್ಬ" ಅನ್ನುತ್ತಿದ್ದರು. "ಪುಣ್ಯಕೋಟಿ" ಹಾಡು ಇರಬಹುದು. "ಕುಚೇಲನ ಕಥೆ" ಅಥವಾ "ಧ್ರುವ ಚರಿತ್ರೆ" ಇರಬಹುದು. ಹತ್ತು-ಹದಿನೈದು-ಇಪ್ಪತ್ತು ನಿಮಿಷ ಹೇಳುವ, ಹಾಡುವ ರೀತಿ. ಒಂದು ದಿನದೂಟ ಇದ್ದಂತೆ. ಒಂದು ಪ್ರಾರಂಭ, ಮಧ್ಯ, ಅಂತ್ಯ ಇದೆ. ಹೇಳುವ ವಿಷಯ ಅತಿ ದೊಡ್ಡದೂ ಅಲ್ಲ. ತೀರಾ ಚಿಕ್ಕದೂ ಅಲ್ಲ. ಹೀಗೆ.

ಕವನಕ್ಕಿಂತ ದೊಡ್ಡದು. ಮಹಾಕಾವ್ಯಕ್ಕಿಂತ ಚಿಕ್ಕದು. ವಿವರಣೆ, ವರ್ಣನೆಗೆ ಪ್ರಾಮುಖ್ಯತೆ. ಕವಿಯ ಕರ್ತೃತ್ವ ಶಕ್ತಿಗೆ ಕೆಲಸವುಂಟು. ಹೇಳುವುದನ್ನು ಅರ್ಥಲಂಕಾರ-ಶಬ್ದಾಲಂಕಾರ ಸಹಿತ ವಿವರಿಸುವುದು. ಒಂದು ದೊಡ್ಡ ಹಬ್ಬದೂಟದ ಸ್ಯಾಂಪಲ್ ಇರುವಂತೆ. ಆನೆಯಲ್ಲ. ಆನೆಯ ಮರಿ ಇರುವಂತೆ. ಇವುಗಳು ಖಂಡಕಾವ್ಯಗಳು. 

ಖಂಡಕಾವ್ಯಗಳು ಅಂದ ತಕ್ಷಣ ನೆನಪಿಗೆ ಬರುವುವು ಕಾಳಿದಾಸ ಮಹಾಕವಿಯ "ಋತು ಸಂಹಾರ" ಮತ್ತು "ಮೇಘದೂತ". ಹಿಂದಿಯಲ್ಲಿ ಶ್ರೀ ಮೈಥಿಲಿ ಶರಣ ಗುಪ್ತರ "ಪಂಚವಟಿ". ಕನ್ನಡದಲ್ಲಿ ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಕಾಡು-ಮೇಡು ಅಲೆದಾಡುವ ಕುಂತಿಯ ಕಥೆ "ಕೊಂತಿಪೂಜೆ" (ಕೊಂತ್ಯಮ್ಮ) ಇದ್ದಂತೆ. "ಮಾದೇಶ್ವರ ಪದ" ಇನ್ನೊಂದು. ಹರಪನಹಳ್ಳಿ ಭೀಮವ್ವನ ಕುಚೇಲನ ಕಥೆ ಮುಂತಾದುವು.

******

ಮಹಾಕಾವ್ಯ ಅಂದರೆ ಅದೊಂದು ದೊಡ್ಡ ಹಬ್ಬದೂಟ ಇದ್ದಂತೆ. ಅದು ಪೂರ್ಣ ಪ್ರಮಾಣದ ಆನೆಯೇ. ಬಲು ವಿಸ್ತಾರ. ಮಹಾಕಾವ್ಯದ ಅನೇಕ ಲಕ್ಷಣಗಳಲ್ಲಿ ಕೆಲವು:

  • "ಸರ್ಗಬಂಧೋ ಮಹಾಕಾವ್ಯಮ್" ಅನ್ನುತ್ತಾರೆ. (ಸರ್ಗ ಅಂದರೆ "ಸೃಷ್ಟಿ" ಎಂದು ಹಿಂದಿನ ಸಂಚಿಕೆಯಲ್ಲಿ ನೋಡಿದೆವು). ಒಂದು ಸರ್ಗ ಒಂದು ಅಧ್ಯಾಯ ಇದ್ದಂತೆ. ಹದಿನೈದು ಸರ್ಗಕ್ಕೆ ಕಡಿಮೆ ಇರಬಾರದು.
  • ವಿಸ್ತಾರವಾದ ಕಥಾವಸ್ತು ಇರಬೇಕು. ಅನೇಕ ಕಾಲಘಟ್ಟಗಳ ಸರಣಿ ಇರಬೇಕು.
  • ಛಂದೋಬದ್ಧವಾಗಿರಬೇಕು. ಅನೇಕ (ಬೇರೆ ಬೇರೆ) ಛಂದಸ್ಸುಗಳಿಂದ ಕೂಡಿರಬೇಕು. ಇದರಿಂದ ವೈವಿಧ್ಯತೆ ಇರುತ್ತದೆ. ಕವಿಯ ಕರ್ತೃತ್ವಕ್ಕೂ ಅವಕಾಶ ಇರುತ್ತದೆ.
  • ನಾಯಕ, ನಾಯಕಿ ಮತ್ತು ಪ್ರತಿನಾಯಕರು ಇರಬೇಕು.
  • ಶ್ಲೋಕಗಳಲ್ಲಿ ಯತಿ, ಪ್ರಾಸ ಮುಂತಾದುವುಗಳಿರಬೇಕು.
  • ಪ್ರಕೃತಿ, ಸೂರ್ಯ-ಚಂದ್ರರು, ಸೂರ್ಯೋದಯ-ಸೂರ್ಯಾಸ್ತ, ಬೆಳದಿಂಗಳು, ಸಮುದ್ರ, ನದಿಗಳು, ನಗರಗಳು, ಮುಂತಾದುವುಗಳ ವರ್ಣನೆ ಇರಬೇಕು.
  • ಅನೇಕ ರಸಗಳಿಂದ (ಶೃಂಗಾರ, ವೀರ, ಹಾಸ್ಯ ಮೊದಲಾದುವುಗಳು) ಕೂಡಿರಬೇಕು. ಒಂದು ಮುಖ್ಯ ರಸ. ಮತ್ತೊಂದು ಮುಖ್ಯ ಪೋಷಕ ರಸ. ಇತರೆ ರಸಗಳು ಕೂಡಿಕೊಂಡಿರಬೇಕು.
  • ಔಚಿತ್ಯ ಬಹಳ ಮುಖ್ಯ. ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ. ಸುಮ್ಮನೆ ಅನವಶ್ಯಕ ವಿವರಣೆ, ವರ್ಣನೆ ತುರುಕುವಂತಿಲ್ಲ. ಕಥಾ ಹಂದರಕ್ಕೆ ಪೋಷಕವಾಗಿರಬೇಕು. 
  • ಕವಿಯ ಪ್ರತಿಭೆಗೆ ತಕ್ಕಂತೆ ಅರ್ಥಲಂಕಾರ, ಶಬ್ದಾಲಂಕಾರಗಳು ಇರಬೇಕು. 
ಒಂದು ಸುಂದರವಾದ ಮಹಾಕಾವ್ಯ ದೇಶ-ಕಾಲ ಇವುಗಳನ್ನು ಮೀರಿ ನಿಲ್ಲುತ್ತದೆ. ಅನೇಕ ತಲೆಮಾರುಗಳ ಜನ ಅವುಗಳ ಸವಿ ಅನುಭವಿಸುತ್ತಾರೆ. ಮತ್ತೆ ಮತ್ತೆ ಓದಬೇಕು ಅನ್ನಿಸುತ್ತದೆ. ಪ್ರತಿ ಬಾರಿ ಓದಿದಾಗಲೂ ಹೊಸ ಹೊಸ ಅರ್ಥಗಳು ತೆರೆದುಕೊಳ್ಳುತ್ತವೆ. ಓದುಗನ ಅನುಭವದ ಮೇಲೆ ಜ್ಞಾನ ವಿಸ್ತಾರ ಆಗುತ್ತದೆ. ಹೀಗೆ ಹೇಳುತ್ತಾ ಹೋಗಬಹುದು.