Showing posts with label Ekadashi. Show all posts
Showing posts with label Ekadashi. Show all posts

Tuesday, July 22, 2025

ಏಕಾದಶಿ ಮತ್ತು ರುಕ್ಮಾ೦ಗದ ಮಹಾರಾಜ


ಹಿಂದಿನ ಒಂದು ಸಂಚಿಕೆಯಲ್ಲಿ "ಶಯನೀ ಏಕಾದಶಿ" ಮತ್ತು ಚಾತುರ್ಮಾಸ ಕಾಲದ ಸಂಗತಿಗಳ ಪ್ರಸ್ತಾಪವಾಗಿತ್ತು. ಏಕಾದಶಿಯ ವ್ರತವೆಂದರೆ ಏನು? ಅದರ ಪೂರ್ಣ ಆಚರಣೆ ಹೇಗೆ ಮಾಡಬೇಕು ಮುಂತಾದುವನ್ನು ಸಂಕ್ಷಿಪ್ತವಾಗಿ ನೋಡಿದೆವು. "ಏಕಾದಶಿಯ ದಿನ ಹಾಲು ಹಣ್ಣು ಸೇವಿಸಿ" ಎಂದು ಪುರಾಣದಲ್ಲಿ ಹೇಳಿದುದರ ಕೊನೆಯ ಭಾಗ ಮಾತ್ರ ಕೇಳಿ, ಅದರಂತೆ ಆಚರಿಸಲು ಪ್ರಯತ್ನಿಸಿ, ಶ್ರೀ ಮುಕುಂದರಾಯರು ಪಟ್ಟ ಬವಣೆಯನ್ನು ಅದೇ ಹೆಸರಿನ ಶೀರ್ಷಿಕೆಯ ಸಂಚಿಕೆಯಲ್ಲಿ ನೋಡಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಮಾರನೆಯ ದಿನ ಹಿರಿಯರೊಬ್ಬರ ನೆರವಿನಿಂದ ಮುಕುಂದರಾಯರಿಗೆ ಸರಿಯಾದ ವಿಷಯಗಳು ತಿಳಿದು ಪುರಾಣೀಕರು ಹೇಳಿದ್ದ ಹಾಲು "ಭಗವದ್ಗೀತೆ" ಮತ್ತು ಹಣ್ಣು "ಶ್ರೀಮದ್ ಭಾಗವತ" ಎಂದು ಅಥವಾಯಿತು. ಇದಕ್ಕೆ ಕಾರಣಗಳನ್ನು ಕೂಡ "ಗೀತೆ ಎಂಬ ಹಾಲು; ಭಾಗವತವೆಂಬ ಹಣ್ಣು" ಎನ್ನುವ ಸಂಚಿಕೆಯಲ್ಲಿ ನೋಡಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.   

ಏಕಾದಶಿಯ ಸಂದರ್ಭದಲ್ಲಿ ನೆನೆಯಲೇಬೇಕಾದ ಎರಡು ಹೆಸರುಗಳು "ರುಕ್ಮಾ೦ಗದ  ಮಹಾರಾಜ" ಮತ್ತು "ಅಂಬರೀಶ ಮಹಾರಾಜ". ಏಕಾದಶಿ ವ್ರತದ ಆಚರಣೆಗೆ ಹೆಸರಾಗಿ, ಅನೇಕ ಕಷ್ಟಗಳನ್ನು ಅನುಭವಿಸಿದರೂ ವ್ರತವನ್ನು ಬಿಡದೇ ಶಾಶ್ವತ ಕೀರ್ತಿಯನ್ನು ಸಂಪಾದಿಸಿದವರು ಇವರಿಬ್ಬರು. 

ಓದುಗರೊಬ್ಬರು ಇವರ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ರುಕ್ಮಾ೦ಗದ ಮಹಾರಾಜನ ವಿಷಯವನ್ನು ಸಂಕ್ಷಿಪ್ತವಾಗಿ ಈಗ ನೋಡೋಣ. 
*****

ಇಕ್ಷ್ವಾಕು ಮಹಾರಾಜನ ವಂಶದ ರಾಜಾ ಋತುಧ್ವಜನ ಮಗ ರುಕ್ಮಾ೦ಗದ ಮಹಾರಾಜ. ಈತನು ವಿದಿಶಾ ನಗರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ವಿಶಾಲ ಸಾಮ್ರಾಜ್ಯವನ್ನು ಆಳುತ್ತಿದ್ದನು. ಬಹಳ ಧರ್ಮಾತ್ಮನಾದ ರಾಜನೆಂದು ಕೀರ್ತಿ ಸಂಪಾದಿಸಿದ್ದನು. ಅವನಿಗೆ ಸಂಧ್ಯಾವಳೀ ಎನ್ನುವ ಹೆಸರಿನ ಹೆಂಡತಿಯಿದ್ದಳು. ಅವಳೂ ಬಹಳ ಯೋಗ್ಯಳಾಗಿ ಪ್ರಜೆಗಳ ಪ್ರೀತಿ ಸಂಪಾದಿಸಿದ್ದಳು. ರುಕ್ಮಾ೦ಗದ ಮಹಾರಾಜನ ರಾಜ್ಯದಲ್ಲಿ ಶಾಂತಿ, ಸುಭಿಕ್ಷಗಳು ನೆಲೆಸಿ ಅದೊಂದು ಸ್ವರ್ಗದಂತೆ ಭಾಸವಾಗುತ್ತಿತ್ತು. 

ರುಕ್ಮಾ೦ಗದ ಮಹಾರಾಜನು ಪ್ರತಿ ದಶಮಿಯ ದಿನ ಆನೆಗಳ ಮೇಲೆ ನಗಾರಿ ಬಾರಿಸುವವರನ್ನು ಬೀದಿ  ಬೀದಿಗಳಿಗೆ ಕಳಿಸಿ ಏಕಾದಶಿ ವ್ರತದ ಬಗ್ಗೆ ಜನಗಳಿಗೆ ಎಚ್ಚರಿಸುತ್ತಿದ್ದನು. ಅವನ ರಾಜ್ಯದಲ್ಲಿ ಏಕಾದಶಿ ವ್ರತ ಮಾಡದಿದ್ದರೆ ಅದು ಒಂದು ಅಪರಾಧವಾಗಿತ್ತು. ಎಂಟು ವರ್ಷ ದಾಟಿದ ಮತ್ತು ಎಂಭತ್ತು ವರುಷ ಒಳಗಿನ ಎಲ್ಲ ಜನರೂ ಏಕಾದಶಿ ವ್ರತ ಮಾಡುವುದು ಕಡ್ಡಾಯವಾಗಿತ್ತು. ಹೀಗೆ ಪ್ರಾರಂಭವಾದ ಏಕಾದಶಿ ವ್ರತ ಕ್ರಮೇಣ ಜನಜೀವನದ ಒಂದು ಅಂಗವೇ ಆಯಿತು. ಕೆಲಕಾಲದ ನಂತರ ಜನರು ಸ್ವಯಂ ಪ್ರೇರಿತರಾಗಿ ಏಕಾದಶಿ ವ್ರತ ಮಾಡಲು ಪ್ರಾರಂಭಿಸಿದರು. 

ಈ ರೀತಿ ಪ್ರಜೆಗಳೆಲ್ಲರೂ ಏಕಾದಶಿ ವ್ರತ ಮಾಡುತ್ತಿದ್ದ ಕಾರಣ ಪಾಪ ಕರ್ಮಗಳು ಮಾಡುವರು ಇಲ್ಲವಾಗಿ ನರಕ ವಾಸ ಅನುಭವಿಸುವ ಜನರೇ  ಕಾಣದಾದರು. ನರಕದಲ್ಲಿ ಬಂದು ಬೀಳುವ ಜನರು ಕಡಿಮೆ ಆದ ಕಾರಣ ನರಕದಲ್ಲಿರುವ ಉದ್ಯೋಗಿಗಳಿಗೆ ಕೆಲಸವೇ ಇಲ್ಲವಾಯಿತು. ಯಮಧರ್ಮನಿಗೆ ನಿರುದ್ಯೋಗ ಸೃಷ್ಟಿಯಾದಂತೆ ಆಯಿತು. ಹೀಗೆ ಒಂದು ಸ್ಥಿತಿ ಬಂದುದರ ಕಾರಣ ಯಮಧರ್ಮನು ವಿಧಿಯಿಲ್ಲದೇ ಚತುರ್ಮುಖ ಬ್ರಹ್ಮನನ್ನು ಕಂಡು ಪರಿಹಾರ ಕೇಳಲು ಸತ್ಯಲೋಕಕ್ಕೆ ಹೋದನು. 

***** 

ಯಮನ ಪೇಚಾಟವನ್ನು ಕಂಡು ಚತುರ್ಮುಖನು "ಜನಗಳು ನ್ಯಾಯವಾದ ರೀತಿಯಲ್ಲಿ ಬಾಳಿ ಧರ್ಮಿಷ್ಠರಾಗುವಂತೆ ಮಾಡುವುದು ರಾಜನ ಕರ್ತವ್ಯ. ರುಕ್ಮಾ೦ಗದನು ನ್ಯಾಯವನ್ನೇ ಮಾಡುತ್ತಿರುವುದರಿಂದ ಅವನದು ಏನೂ ಅಪರಾಧವಿಲ್ಲ. ನಿನ್ನ ಪರಿಸ್ಥಿತಿಗೆ ಏನೂ ಪರಿಹಾರವಿಲ್ಲ" ಎಂದುಬಿಟ್ಟನು. ಅದಲ್ಲದೆ ಈ ರೀತಿ ಹೇಳಿದನು:

ಏಕೋಪಿ ಕೃಷ್ಣಸ್ಯ ಕೃತಃ ಪ್ರಣಾಮೋ 
ದಶಾಶ್ವಮೇಧಾವಭೃತೇನ ತುಲ್ಯ:
ದಶಾಶ್ವಮೇಧೀ ಪುನರೇಪಿಜನ್ಮ 
ಕೃಷ್ಣಪ್ರಣಾಮೀ ನ ಪುನರ್ಭವಾಯ 

"ಒಮ್ಮೆ ಶ್ರೀಕೃಷ್ಣನಿಗೆ ಸರಿಯಾಗಿ ನಮಸ್ಕಾರ ಮಾಡಿದ ಮನುಷ್ಯನ ಪುಣ್ಯವು ಹತ್ತು ಅಶ್ವಮೇಧ ಯಾಗಗಳನ್ನು ಪೂರೈಸಿ ಯಜ್ಞದ ಅವಭೃತ ಸ್ನಾನ ಮಾಡಿದವನಿಗೆ (ಯಜ್ಞ-ಯಾಗಗಳ ಪೂರ್ಣವಾಯಿರುವ ಸಂದರ್ಭದಲ್ಲಿ ಮಾಡುವ ಮಂಗಳ ಸ್ನಾನ) ಬಂದ  ಪುಣ್ಯದಷ್ಟಾಗುತ್ತದೆ. ಇದಲ್ಲದೆ ಹತ್ತು ಅಶ್ವಮೇಧ ಯಾಗ ಮಾಡಿದವನು ಆ ಪುಣ್ಯ ಸಂಪತ್ತು ಅನುಭವಿಸಿ ಕಳೆದ ಮೇಲೆ ಮತ್ತೆ ಹುಟ್ಟಬೇಕು. ಆದರೆ ಶ್ರೀಕೃಷ್ಣನಿಗೆ ಒಂದು ಸಾರಿ ಸರಿಯಾಗಿ ನಮಸ್ಕರಿಸಿದವನು ಮತ್ತೆ ಹುಟ್ಟುವ ಪ್ರಮೇಯವೇ ಬರುವುದಿಲ್ಲ". 

ಯಮಧರ್ಮನು ಈ ಉತ್ತರ ಕೇಳಿ ಏನೂ ತೋಚದೆ ನಿಂತಿರಲು, ಚತುರ್ಮುಖನು ನಕ್ಕು ಒಂದು ಅಪೂರ್ವ ಲಾವಣ್ಯವತಿಯಾದ ಸ್ತ್ರೀರೂಪವನ್ನು ಸೃಷ್ಟಿಸಿದನು. ಆ ರೂಪಕ್ಕೆ ಜೀವ ಕೊಟ್ಟು ಎಲ್ಲರನ್ನೂ ತನ್ನನ್ನು ಕಂಡು ಮೋಹಗೊಳ್ಳುವಂತೆ ಮಾಡಬಲ್ಲವಳಾದುದರಿಂದ ಅವಳಿಗೆ "ಮೋಹಿನಿ" ಎಂದು ಹೆಸರಿಟ್ಟನು. ಆ ಮೋಹಿನಿಯನ್ನು ಕರೆದು ಅವಳಿಗೆ "ರುಕ್ಮಾ೦ಗದನು ನಿನ್ನನ್ನು ಮೋಹಿಸಿ ಮದುವೆಯಾಗುವಂತೆ ಒಪ್ಪಿಸು. ನಂತರ ಹೀಗೆ ಮದುವೆಯಾಗುವ ಸಂದರ್ಭದಲ್ಲಿ ನೀನು ಕೇಳಿದ ಕೋರಿಕೆಯನ್ನು ನಡೆಸಿಕೊಡುವ ವಚನವನ್ನು ಅವನಿಂದ ಪಡೆದುಕೋ. ವಿವಾಹದ ನಂತರ ಅವನಿಂದ ಏಕಾದಶಿ ವ್ರತವನ್ನು ನಿಲ್ಲಿಸುವಂತೆ ಮಾಡು" ಎಂದು ಆಜ್ಞಾಪಿಸಿದನು. 

***** 

ಇತ್ತ ಕಡೆ ರುಕ್ಮಾ೦ಗದ ಮತ್ತು ಸಂಧ್ಯಾವಳೀ ದಂಪತಿಗಳಿಗೆ 'ಧರ್ಮಾಂಗದ" ಎನ್ನುವ ಹೆಸರಿನ ಮಗನಿದ್ದನು. ಅವನು ಪ್ರಾಪ್ತ ವಯಸ್ಕನಾಗಿ ತನ್ನ ತಂದೆ-ತಾಯಿಯರಿಗೆ ಒಪ್ಪುವಂತೆ ಅತ್ಯಂತ ಯೋಗ್ಯನಾದ ಯುವರಾಜನಾದನು. ತಂದೆಗಿಂತಲೂ ಪರಾಕ್ರಮಿಯಾಗಿ ಸುತ್ತ-ಮುತ್ತಲ ಶತ್ರುಗಳನ್ನೆಲ್ಲ ನಿರ್ಮೂಲಮಾಡಿ ರಾಜ್ಯದ ಮೇರೆಗಳನ್ನು ಇನ್ನೂ ವಿಸ್ತಾರ ಮಾಡಿದನು. ಅನೇಕ ರೀತಿಯ ಧನ-ಸಂಪತ್ತುಗಳನ್ನು ಸಂಗ್ರಹಿಸಿ ತಂದೆಗೆ ತಂದು ಒಪ್ಪಿಸಿದನು. ಅತ್ಯಂತ ಜನಪ್ರಿಯನಾದ ಅವನಿಗೆ ರುಕ್ಮಾ೦ಗದನು  ರಾಜ್ಯಭಾರವನ್ನು ಒಪ್ಪಿಸಿ ತೀರ್ಥಯಾತ್ರೆಗೆಂದು ಹೊರಟನು. 

ಹೀಗೆ ಸಂಚರಿಸುತ್ತಿರುವಾಗ ಮೇರು ಪರ್ವತದ ಸನಿಹದಲ್ಲಿ ಇಂಪಾದ ಗಾನವನ್ನು ಕೇಳಿ ಅದರ ಗಾಯಕಿಯನ್ನು ಅರಸುತ್ತಾ ಬಂದು ಮೋಹಿನಿಯನ್ನು ಕಂಡನು. ಅವಳಲ್ಲಿ ಅನುರಾಗಗೊಂಡು ಮದುವೆಯಾಗಲು ಕೇಳಿಕೊಂಡನು. ಮೋಹಿನಿಯೂ ಒಪ್ಪಿ ತಾನು ಕೇಳಿದ ವರವನ್ನು ಕೊಡುವುದಾದರೆ ವಿವಾಹವಾಗಲು ಸಮ್ಮತಿಸಿದಳು. ಮುಂದೆ ಎಂದಾದರೂ ವರವನ್ನು ಕೇಳುವುದಾಗಿ ಹೇಳಿದ ಅವಳನ್ನು ಮದುವೆಯಾಗಿ, ಜೊತೆಯಲ್ಲಿ  ಕರೆದುಕೊಂಡು ರುಕ್ಮಾ೦ಗದನು ವಿದಿಶಾ ನಗರಕ್ಕೆ ಬಂದನು. 

ಮಹಾರಾಣಿ ಸಂಧ್ಯಾವಳೀ, ರಾಜಕುಮಾರ ಧರ್ಮಾಂಗದ ಮತ್ತು ಇತರರು ರುಕ್ಮಾ೦ಗದ ಮತ್ತು ಮೋಹಿನಿಯರನ್ನು ಆದರಪೂರ್ವಕವಾಗಿ ಬರಮಾಡಿಕೊಂಡು ಸತ್ಕರಿಸಿದರು. ಎಂಟು ವರ್ಷಗಳು ಹೀಗೆ ಕಳೆದ ನಂತರ ಮೋಹಿನಿಯು ಒಂದು ಏಕಾದಶಿಯ ಹಿಂದಿನ ದಿನ ತಾನು ಹಿಂದೆ ಕೇಳಿದ ವರವನ್ನು ಬೇಡಿದಳು. ರುಕ್ಮಾ೦ಗದನು ಏಕದಾಶಿಯ ವ್ರತದ ಮೂರು ದಿನಗಳ ಕಾಲ ಮೋಹಿನಿಯನ್ನು ಬಿಟ್ಟಿರುತ್ತಿದುದರಿಂದ, ಅವಳಿಗೆ ಅವನನ್ನು ಬಿಟ್ಟಿರಲು ಕಷ್ಟವಾಗುವುದರಿಂದ, ಏಕಾದಶಿ ವ್ರತವನ್ನು ನಿಲ್ಲಿಸಬೇಕೆಂದು ಕೇಳಿದಳು. ರುಕ್ಮಾ೦ಗದನು ಇದಕ್ಕೆ ಒಪ್ಪಲಿಲ್ಲ. 

ಕೊಟ್ಟ ಮಾತು ತಪ್ಪಿದನೆಂದು ಮೋಹಿನಿಯು ಪ್ರತಿಭಟಿಸಲು ಸಂಧ್ಯಾವಳಿಯು ಮಧ್ಯೆ ಪ್ರವೇಶಿಸಿ ಏಕಾದಶಿ ವ್ರತ ನಿಲ್ಲಿಸುವ ಬದಲು ಮತ್ತೆ ಯಾವುದಾದರೂ ಬದಲಿ ವರವನ್ನು ಕೇಳಿಕೊಳ್ಳುವಂತೆ ಮೋಹಿನಿಯನ್ನು ಪ್ರಾರ್ಥಿಸಿದಳು. ಮೋಹಿನಿಯು ಹಾಗಿದ್ದರೆ ಮಹಾರಾಜನು ತನ್ನ ಕೈಯಾರೆ ರಾಜಕುಮಾರನಾದ ಧರ್ಮಾಂಗದನ ತಲೆಯನ್ನು ಖಡ್ಗದಿಂದ ಕತ್ತರಿಸಿ ಅವನ ತಲೆಯನ್ನು ತಂದು ಕೊಡಲು ಕೇಳಿದಳು. 

ಬಹಳ ದುರ್ಭರವಾದ ಈ ವರವನ್ನು ಕೊಡುವಂತೆ, ತಾಯಿಯಾಗಿ ಸಂಕಟ ಪಡುತ್ತಿದ್ದರೂ, ಹಿಂದೆ-ಮುಂದೆ ನೋಡದೆ, ಸಂಧ್ಯಾವಳಿಯು ಮಹಾರಾಜನನ್ನು ಕೋರಿದಳು. ಧರ್ಮಾಂಗದನನ್ನು ಕರೆಸಿದರು. ಅವನು ಸ್ವಲ್ಪವೂ ವಿಚಲಿತನಾಗದೆ "ತಂದೆಯು ಕೊಟ್ಟ ಮಾತಿಗೆ ತಪ್ಪಬಾರದು. ಏಕಾದಶಿ ವ್ರತವೂ ಕೆಡಬಾರದು. ಈ ತುಚ್ಛ ಜೀವನ ಹೋಗಿ ಇವೆರಡೂ ಸಾಧ್ಯವಾಗುವುದಾದರೆ ಸಂತೋಷವಾಗಿ ಸಾವು ಸ್ವೀಕರಿಸುತ್ತೇನೆ" ಎಂದನು. 

ರುಕ್ಮಾ೦ಗದನು ಧರ್ಮಾಂಗದನ ಕತ್ತು ಕತ್ತರಿಸಲು ಖಡ್ಗವನ್ನು ತೆಗೆದುಕೊಂಡು ಬೀಸಿದನು. ಆಗ ಮಹಾವಿಷ್ಣುವು ಪ್ರತ್ಯಕ್ಷನಾಗಿ ರುಕ್ಮಾ೦ಗದ, ಸಂಧ್ಯಾವಳೀ ಮತ್ತು ಧರ್ಮಾಂಗದ, ಈ ಮೂವರಿಗೂ ಪರಮಪದವನ್ನು ಕರುಣಿಸಿ ಜೊತೆಯಲ್ಲಿ ಕರೆದೊಯ್ದನು. 

***** 

ರುಕ್ಮಾ೦ಗದ ಚರಿತ್ರೆಯು ನಮ್ಮ ವಿಶಾಲ ವೈದಿಕ ವಾಂಗ್ಮಯದಲ್ಲಿ ಅಲ್ಲಲ್ಲಿ ಬರುತ್ತದೆ. ನಾರದ ಪುರಾಣದಲ್ಲಿ (ನಾರದೀಯ ಪುರಾಣ) ಇದರ ವಿಸ್ತಾರವಾದ ವಿವರಗಳಿವೆ. ಮೇಲೆ ಕಾಣಿಸಿರುವ ಚಿತ್ರವೂ ಇದರ ಆಧಾರದ ಮೇಲೆ "ರಾಜಾ ರವಿವರ್ಮ" ರಚಿಸಿರುವ ಚಿತ್ರ. 

ಮೇಲೆ ಹೇಳಿದ ಕಥೆಯನ್ನು ತಿಳಿಯುವಾಗ ಯಮಧರ್ಮನಿಗೆ ಕಷ್ಟವಾಯಿತೆಂದೂ, ಅವನು ಬಂದಾಗ ಚತುರ್ಮುಖ ಬ್ರಹ್ಮದೇವರಿಗೆ ಏನೂ ಮಾಡಲು ತೋಚಲಿಲ್ಲವೆಂದೂ ತಿಳಿಯಬಾರದು. ಸಿನಿಮಾಗಳಲ್ಲಿ ಅವರನ್ನು ದುರುಳ ಖಳನಾಯಕರನ್ನು ತೋರಿಸುವಂತೆ ಮನರಂಜನೆಗಾಗಿ ಚಿತ್ರಿಸುತ್ತಾರೆ. ರುಕ್ಮಾ೦ಗದ, ಸಂಧ್ಯಾವಳೀ ಮತ್ತು ಧರ್ಮಾಂಗದರ ವ್ರತನಿಷ್ಠೆ ಮತ್ತು ಧರ್ಮಪರಾಯಣತೆ ಪರೀಕ್ಷಿಸಲು ಹೀಗೆ ಮಾಡಿದರು ಎಂದು ತಿಳಿಯಬೇಕು. 

ಮೇಲೆ ಹೇಳಿದ "ಏಕೋಪಿ ಕೃಷ್ಣಸ್ಯ ಕೃತಃ ಪ್ರಣಾಮ: ......" ಎನ್ನುವ ಶ್ಲೋಕವನ್ನು ಅನೇಕರು ಷೋಡಶೋಪಚಾರ ಪೂಜೆಯ ಅಂಗವಾಗಿ ಕಡೆಯಲ್ಲಿ ನಮಸ್ಕಾರ ಮಾಡುವಾಗ ಮತ್ತು ಸ್ತೋತ್ರಾದಿಗಳ ಕೊನೆಯಲ್ಲಿ, ದೇವಾಲಯಗಳಲ್ಲಿ ನಮಸ್ಕರಿಸುವಾಗ ಮುಂತಾಗಿ ಹೇಳುವ ಶ್ಲೋಕಗಳ ಜೊತೆಯಲ್ಲಿ ಹೇಳುತ್ತಾರೆ. ಆದರೆ ಅನೇಕರಿಗೆ ಇದರ ಮೂಲ "ನಾರದೀಯ ಪುರಾಣ"ದ ಉತ್ತರ ಭಾಗದ ಆರನೆಯ ಅಧ್ಯಾಯದಲ್ಲಿದೆ ಎಂದು ಗೊತ್ತಿಲ್ಲ. ಇದು ಆರನೆಯ ಅಧ್ಯಾಯದ ಮೂರನೆಯ ಶ್ಲೋಕ. 

*****

ಮತ್ತೊಬ್ಬ ಏಕಾದಶಿ ವ್ರತ ದುರಂಧರನಾದ ಅಂಬರೀಷ ಮಹಾರಾಜನ ವೃತ್ತಾಂತವನ್ನು ಮುಂದೆ ಎಂದಾದರೂ ನೋಡೋಣ. 

Tuesday, July 1, 2025

ಏಕಾದಶಿಯ ದಿನ ಹಾಲು-ಹಣ್ಣು ಸೇವಿಸಿ


ಹಿಂದಿನ ಸಂಚಿಕೆಯಲ್ಲಿ, "ಮನವ ಕಬ್ಬಿಣ ಮಾಡು, ಹೇ ಮೃಡನೇ!" ಎಂಬ ಶೀರ್ಷಿಕೆಯ ಅಡಿಯಲ್ಲಿ, "ಸಂದರ್ಭ ನೋಡಿ ಮಾತುಗಳಿಗೆ ಅರ್ಥ ಮಾಡಬೇಕು" ಎನ್ನುವ ವಿಷಯವನ್ನು ಎರಡು ಬಾರಿ ನೋಡಿದ್ದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ಸಂದರ್ಭ ನೋಡಿ ಮಾತುಗಳಿಗೆ ಅರ್ಥ ಮಾಡಬೇಕು ಎನ್ನುವುದು ಎಲ್ಲ ಕಾಲಗಳಿಗೂ ಒಪ್ಪುವ, ತಪ್ಪಿಸಲಾಗದ, ತಪ್ಪಿಸಬಾರದಾದ ಅವಶ್ಯಕತೆ. ಯಾವುದೇ ಒಂದು ಸಂದರ್ಭದ ಅರ್ಥದ ತಿಳುವಳಿಕೆಗೆ ಆಯಾ ಗ್ರಂಥದ ಎಲ್ಲ ಭಾಗಗಳನ್ನೂ ಪೂರ್ತಿಯಾಗಿ ಓದಿ, ಹಿಂದು ಮುಂದಿನ ಭಾಗಗಳನ್ನು ಸಮನ್ವಯ ಮಾಡಿ, ನಂತರ ಅರ್ಥಗಳನ್ನು ಗ್ರಹಿಸಬೇಕು. ಯಾವುದೋ ಗ್ರಂಥದ ಒಂದು ಅಧ್ಯಾಯ ಓದಿ, ಅದರ ಹಿಂದೆ ಮುಂದೆ ತಿಳಿಯದೆ, ಸಂದರ್ಭಗಳ ಅರ್ಥ ತಿಳಿಯುವುದು ಬಹಳ ಅಪಾರ್ಥಕ್ಕೆ ದಾರಿ ಮಾಡುತ್ತದೆ. ಇದು ಕೃತಿಗಳನ್ನು ಓದದೇ ಇರುವುದಕ್ಕಿಂತಲೂ ಹೆಚ್ಚು ಅಪಾಯಕಾರಿ. ತುಂಬಾ ಆಳವಾದ ವಿಷಯಗಳಲ್ಲಂತೂ ಕೇವಲ ಆ ಒಂದು ಗ್ರಂತಹವನ್ನಲ್ಲ; ಅದಕ್ಕೆ ಸಂಬಂಧಿಸಿದಂತಹ ಇತರೆ ವಾಂಗ್ಮಯವನ್ನೂ ಅವಲೋಕಿಸಿ ಅರ್ಥಗಳನ್ನು ತಿಳಿಯುವ ಅವಶ್ಯಕತೆ ಇರುತ್ತದೆ. ಇಲ್ಲದಿದ್ದರೆ "ಎತ್ತು ಈಯಿತು ಅಂದರೆ ಕರು ಕೊಟ್ಟಿಗೆಯಲ್ಲಿ ಕಟ್ಟು" ಎನ್ನುವ ಗಾದೆಯಂತೆ ಅಪಾರ್ಥಕ್ಕೆ ಎಡೆಗೊಡುತ್ತದೆ. ಎತ್ತು ಕರು ಹಾಕುವುದಿಲ್ಲ ಎಂದು ತಿಳುವಳಿಕೆ ಇರುವವನು "ಎತ್ತು ಈಯಿತು" ಅಂದ ತಕ್ಷಣ ನಕ್ಕು ಸುಮ್ಮನಾಗುತ್ತಾನೆ. ಕರುವಿನ ಬಗ್ಗೆ ಯೋಚಿಸುವ ಪ್ರಸಂಗವೇ ಬರುವುದಿಲ್ಲ. 

ಈ ಸೂತ್ರವನ್ನು ಚೆನ್ನಾಗಿ ಅರಿಯಲು ಒಂದು ಉದಾಹರಣೆಯನ್ನು ನೋಡೋಣ. 

*****

ಸಾಮಾನ್ಯವಾಗಿ ನಮ್ಮ ಸಂಪ್ರದಾಯಗಳನ್ನು ಸ್ವಲ್ಪಮಟ್ಟಿಗೆ ತಿಳಿದ ಎಲ್ಲರಿಗೂ "ಏಕಾದಶಿ" ಅಂದ ತಕ್ಷಣ ನೆನಪಿಗೆ ಬರುವುದು "ಉಪವಾಸ". ಅನೇಕರು ಏಕಾದಶಿ ಉಪವಾಸ ಅಂದರೆ "ಪಕ್ಕದ್ಮನೆ ಸುಬ್ಬಮ್ಮನಿಗೆ ಇಂದು ಏಕಾದಶಿ ಉಪವಾಸ" ಹಾಡನ್ನು ಜ್ಞಾಪಿಸಿಕೊಂಡು, ಅಲ್ಲಿ ಬರುವ ತಿಂಡಿಗಳ ಪಟ್ಟಿಯನ್ನು ನೋಡಿ, ಪ್ರತಿದಿನ ಏಕಾದಶಿ ಯಾಕೆ ಆಗಬಾರದು ಎಂದು ಆತಂಕ ಪಡಬಹುದು. ಕೆಲವರು ಏಕಾದಶಿ ಉಪವಾಸ ಮಾಡುತ್ತಾರೆ. ಇನ್ನು ಕೆಲವರು ಆ ರೀತಿ ಉಪವಾಸ ಮಾಡುವವರನ್ನು ಅಪಹಾಸ್ಯ ಮಾಡುತ್ತಾರೆ. ತಮಾಷೆಯ ಸಂಗತಿಯೆಂದರೆ ಅನೇಕರಿಗೆ ಇದು ಒಂದು ವ್ರತ ಎಂದು ಗೊತ್ತಿಲ್ಲ. ಗೊತ್ತಿದ್ದವರಿಗೂ ಅದರ ಪೂರ್ತಿ ಆಚರಣೆ ಗೊತ್ತಿಲ್ಲ. 

ಯಾವುದಾದರೂ ರೆಸ್ಟೋರೆಂಟ್ ಬಳಿ ಸಂಜೆ ಎಂಟರ ನಂತರ ಹೋದವರಿಗೆ ಅಲ್ಲಿ ನಡೆಯುವ ಚಟುವಟಿಕೆಗಳ ಪರಿಚಯ ಇರುತ್ತದೆ. ಬೆಳಗ್ಗಿನಿಂದ ನಿಲ್ಲದ ಚಟುವಟಿಕೆ ಆದ ನಂತರ, ಗ್ರಾಹಕರ ಸೇವೆ ಮುಗಿದ ಮೇಲೆ, ಅಂದಿನ ದಿನ ಬಾಗಿಲು ಮುಚ್ಚುವ ಮುಂಚೆ ಕೆಲವು ದೈನಿಕ ಕೆಲಸಗಳಿರುತ್ತವೆ. ಅಡಿಗೆ ಮನೆಯವರಿಗೆ ಮಿಕ್ಕ ಪದಾರ್ಥಗಳನ್ನು ಕೆಡದಂತೆ ಎತ್ತಿಟ್ಟು, ಪಾತ್ರೆಗಳನ್ನು ಶುಚಿ ಮಾಡಿ ಒರೆಸಿಟ್ಟು, ಮಾರನೆಯ ದಿನದ ಅಡಿಗೆಗೆ ನೆನೆಹಾಕುವ ಪದಾರ್ಥಗಳ ಕೆಲಸ ಮುಗಿಸಿ, ಎಲ್ಲ ತಯಾರಿ  ಮಾಡಿದಮೇಲೆ ವಿಶ್ರಾಂತಿ. ಸರ್ವರ್ ಮತ್ತು ಕ್ಲೀನರುಗಳಿಗೆ ಮೇಜಿನ ಮೇಲೆ ಕುರ್ಚಿಗಳನ್ನು ಮಗುಚಿಹಾಕಿ, ಎಲ್ಲ ಸಂದಿಗಳನ್ನೂ ಗುಡಿಸಿ, ನೀರಿನಿಂದ ತೊಳೆದು, ಜಾಗ ಒಣಗಿಸಿ, ಮಾರನೆಯ ದಿನಕ್ಕೆ ಗ್ರಾಹಕರನ್ನು ಎದುರುಗೊಳ್ಳಲು ಸಿದ್ಧ ಮಾಡಿಡಬೇಕು. ಬೆಳಗ್ಗೆ ಆರು ಗಂಟೆಗೆ ಮೊದಲ ಗ್ರಾಹಕ ಬರುವ ವೇಳೆಗೆ ಎಲ್ಲಾ ತಯಾರಾಗಿರಬೇಕು. 

ಪ್ರತಿ ಮನೆಯಲ್ಲಿಯೂ ಗೃಹಿಣಿ ಅಥವಾ ಅಡಿಗೆ ಮನೆ ನೋಡಿಕೊಳ್ಳುವವರು ಈ ಕೆಲಸ ಪ್ರತಿದಿನ ಮಾಡುತ್ತಾರೆ. ಸ್ವಲ್ಪ ಪಾಲುಮಾಲಿಕೆ ಪಟ್ಟರೂ (ಈ ಪದ ಈಗ ಮರೆತೇಹೋಗಿದೆ) ಸಹ ಮನೆಮಂದಿಯ ಆರೋಗ್ಯದ ಮೇಲೆ ನೇರ  ಪರಿಣಾಮ ಆಗುತ್ತದೆ. ಜೊತೆಗೆ ಅಡಿಗೆ ಪದಾರ್ಥಗಳ ಅಪವ್ಯಯವಾಗಿ ಮನೆಯ ಆಯ-ವ್ಯಯ ಏರುಪೇರಾಗುತ್ತದೆ. ಮಾರನೆಯ ದಿನ ಬೆಳಿಗ್ಗೆ ಕೆಲಸ ಮಾಡುವಾಗ ಎಡಚೆಡಚು (ತಾಳ-ಮೇಳ ತಪ್ಪುವುದು) ಆಗುತ್ತದೆ. 

ನಮ್ಮ ದೇಹದಲ್ಲೂ ಇದೇ ರೀತಿಯ ವ್ಯವಸ್ಥೆ ಉಂಟು. ಜಠರ, ಸಣ್ಣ ಕರುಳು, ದೊಡ್ಡ ಕರುಳು ಮೊದಲಾದ ಜೀರ್ಣಾಂಗಗಳಿಗೂ ಆಗಾಗ ಸ್ವಲ್ಪ ವಿಶ್ರಾಂತಿ ಬೇಕು. ಭಾನುವಾರ ದಣಿದ ದೇಹಕ್ಕೆ ವಿಶ್ರಾಂತಿ ಬೇಕು ಎಂದು ಜಗಳವಾಡುವವರೂ ಹೊಟ್ಟೆಗೆ ವಿಶ್ರಾಂತಿ ಕೊಡಲು ತಯಾರಿರುವುದಿಲ್ಲ. ಕ್ರಮವಾದ ಉಪವಾಸ ಜೇರ್ಣೇ೦ದ್ರಿಯಗಳಿಗೆ ಈ ರೀತಿಯ ವಿಶ್ರಾಂತಿ ಕೊಡುತ್ತದೆ. ಏಕಾದಶಿ ಉಪವಾಸ ಈ ಕೆಲಸ ಮಾಡುತ್ತದೆ. ಈಗಿನ ತಲೆಮಾರಿನವರು ಇದನ್ನು ಬಿಟ್ಟು "ಇಂಟರ್ಮಿಟೆಂಟ್ ಫಾಸ್ಟಿಂಗ್" ಮತ್ತು "ಡಬ್ಬಿಯ ಆಹಾರ" ಮೊರೆ ಹೋಗುತ್ತಿರುವುದು ಒಂದು ವಿಪರ್ಯಾಸ. 

*****

ಏಕಾದಶಿ ಉಪವಾಸ ಒಂದು ದಿನದ ಕಟ್ಟಲೆಯಲ್ಲ. ಅದು ಮೂರು ದಿನದ ಒಂದು ವ್ರತ. ನವಮಿ ಎರಡು ಹೊತ್ತು ಊಟ ಮಾಡಬಹುದು. ಏಕಾದಶಿಯ ಹಿಂದಿನ ದಿನ, ದಶಮಿಯಂದು ಒಂದೇ ಹೊತ್ತಿನ ಊಟ. ರಾತ್ರಿ ಏನೂ ತಿನ್ನುವ ಹಾಗಿಲ್ಲ. (ಇದಕ್ಕೆ "ದಶಮಿ ಏಕಭುಕ್ತ" ಅನ್ನುತ್ತಾರೆ). ಎರಡನೆಯ ದಿನ ಏಕಾದಶಿಯಂದು ಪೂರ್ತಿ ಉಪವಾಸ. ಉಪವಾಸ ಎಂದರೆ ಉಪವಾಸವೇ. ನೀರನ್ನೂ ಕುಡಿಯುವಹಾಗಿಲ್ಲ. (ಇದಕ್ಕೆ "ನಿರ್ಜಲ ಏಕಾದಶಿ" ಅನ್ನುತ್ತಾರೆ). ಮೂರ್ನಾಲ್ಕು ತರಹ ತಿಂಡಿಗಳನ್ನೋ, ಎರಡು-ಮೂರು ಲೀಟರು ಹಾಲನ್ನೋ, ಮೂರು-ನಾಲ್ಕು ಕೆಜಿ ಹಣ್ಣನ್ನೋ ಸೇವಿಸುವುದಲ್ಲ. (ಎಂದೋ ಮಾಡಿಟ್ಟ ಚಕ್ಕುಲಿ-ಕೋಡುಬಳೆ-ರವೆಉಂಡೆ ಮುಂತಾದುವನ್ನು ನೋಡಲೇಬಾರದು). ಮೂರನೆಯ ದಿನ ದ್ವಾದಶಿ ಬೆಳಿಗ್ಗೆ ಬೇಗನೆ ಗೊತ್ತಾದ ಹೊತ್ತಲ್ಲಿ (ಸೂರ್ಯೋದಯದ ವೇಳೆಯಲ್ಲಿ) ಊಟ ಮಾಡುವುದು. ಇದಕ್ಕೆ "ಪಾರಣೆ" ಎನ್ನುತ್ತರೆ. ಹೀಗೆ ದ್ವಾದಶಿ ಪಾರಣೆ ಮಾಡಿದಮೇಲೆ ರಾತ್ರಿ ಊಟವಿಲ್ಲ. ಮತ್ತೆ ಮಾರನೆಯ ದಿನ (ತ್ರಯೋದಶಿ) ಮಧ್ಯಾಹ್ನ ಮತ್ತು ರಾತ್ರಿ ಊಟ ಮಾಡಬಹುದು. 

ಇದಲ್ಲದೆ, ದೇವರ ನೈವೇದ್ಯವಲ್ಲದ ಯಾವ ಪದಾರ್ಥವನ್ನೂ ತಿನ್ನುವಹಾಗಿಲ್ಲ. ಊಟಗಳ ಮಧ್ಯೆ (ಮಧ್ಯೇ ಮಧ್ಯೇ ಪಾನೀಯಂ ಸಮರ್ಪಯಾಮಿ ಅನ್ನುವಂತೆ) ಸ್ವಲ್ಪ ಸ್ವಲ್ಪ ಅದು-ಇದು ಎಂದು ತಿನ್ನುವ-ಕುಡಿಯುವ ಹಾಗಿಲ್ಲ. ಪಾರಣೆಯಂದು (ಪೂರ್ತಿ ಏಕಾದಶಿ ವ್ರತ ಕಾಲದಲ್ಲಿಯೂ) ಈರುಳ್ಳಿ-ಆಲೂಗಡ್ಡೆ-ಬದನೇಕಾಯಿ, ಜೊತೆಗೆ ಒಂದಷ್ಟು ಹಲಸಂದೆಕಾಳು ಸೇರಿಸಿ, ಹುಳಿ ಮಾಡಿಸಿ ಹೊಡೆಯುವಹಾಗಿಲ್ಲ. ವರುಷಕ್ಕೆ ನಾಲ್ಕು ತಿಂಗಳು "ಚಾತುರ್ಮಾಸ" ಕಾಲದಲ್ಲಿ ಆ ವ್ರತದ ನಿಯಮ ಕೂಡ ಪಾಲಿಸಬೇಕು. ಒಂದು ತಿಂಗಳು ಹಾಲು ಏಪಯೋಗಿಸಬಾರದು. ಒಂದು ತಿಂಗಳು ಮೊಸರಿಲ್ಲ. (ಮಜ್ಜಿಗೆ ಆಗಬಹುದು!). ಒಂದು ತಿಂಗಳು ತರಕಾರಿಗಳಿಲ್ಲ. (ತರಕಾರಿ ಇಲ್ಲದ ತಿಂಗಳಲ್ಲಿ ಮೆಣಸಿನಕಾಯಿ ಉಪಯೋಗ ಇಲ್ಲ. ಖಾರಕ್ಕೆ ಬರೀ ಮೆಣಸು).  ಒಂದು ತಿಂಗಳು ಬೇಳೆ-ಕಾಳು ಇಲ್ಲ. (ವಡೆ-ಆಂಬೊಡೆ ಮಾಡುವಂತಿಲ್ಲ. ಮಾಡಲೇಬೇಕಾದರೆ ಅಕ್ಕಿ ವಡೆ ಮಾಡಬಹುದು). ಏಕಾದಶಿ ವ್ರತದ ಕ್ರಮ ಹೀಗೆ. ಕೆಲವೊಮ್ಮೆ ಎರಡೆರಡು ಏಕಾದಶಿ ಬರುವುದುಂಟು. ಹೆದರಬೇಕಿಲ್ಲ. ಇದು ಸುಮಾರು ಮೂರು ವರುಷಗಳಿಗೆ ಒಂದು ಬಾರಿ ಮಾತ್ರ. 

"ಏಕಾದಶಿ ಮನೆಗೆ ಶಿವರಾತ್ರಿ ಬಂದಂತೆ" ಎಂದು ಒಂದು ಗಾದೆ. "ದುರ್ಭಿಕ್ಷದಲ್ಲಿ ಅಧಿಕ ಮಾಸ ಬಂದಂತೆ" ಎಂದು ಮತ್ತೊಂದು ಗಾದೆ. ಮೊದಲೇ ಖರ್ಚಿಗೆ ಕಾಸಿಲ್ಲದಿದ್ದಾಗ ಹೆಚ್ಚಿನ ವೆಚ್ಚದ ಬಾಬ್ತು ಬಂದಾಗ ಈ ಗಾದೆಗಳನ್ನು ಹೇಳುತ್ತಾರೆ. "ದುರ್ಭಿಕ್ಷದ ಅಧಿಕ ಮಾಸದ ಎರಡು ಏಕಾದಶಿಯಲ್ಲಿ ಶಿವರಾತ್ರಿ ಬಂದಂತೆ" ಎಂದು ಸದ್ಯ ಗಾದೆಯಿಲ್ಲ. (ಶಿವರಾತ್ರಿ ಏಕಾದಶಿಯಂದು ಬರುವುದು ಗಾದೆಯಲ್ಲಿ ಮಾತ್ರ. ನಿಜ ಜೀವನದಲ್ಲಿ ಇದು ಆಗುವುದಿಲ್ಲ). 
*****

ಮುಕುಂದರಾಯರು ದೊಡ್ಡ ಅಧಿಕಾರದ ಹುದ್ದೆಯಲ್ಲಿದ್ದು ನಿವೃತ್ತರಾದರು. ಬಹಳ ಪ್ರಯತ್ನ ಪಟ್ಟರೂ ಎಲ್ಲಿಯೂ ಎರಡನೇ ಕೆಲಸ ಸಿಗಲಿಲ್ಲ. ವಿಧಿಯಿಲ್ಲದೇ ದೇವರ ಬೆನ್ನುಹತ್ತಿದರು. ಯಾರೋ ಬಂಧುಗಳು ಸಂಜೆ ದೇವಸ್ಥಾನದಲ್ಲಿ ಏಳು ಗಂಟೆಯಿಂದ ಎಂಟು ಗಂಟೆವರೆಗೆ ನಡೆಯುವ "ಪುರಾಣ" ಬಹಳ ಒಳ್ಳೆಯದು ಎಂದು ಹೇಳಿದರು. ಮುಕುಂದರಾಯರು ಹೊರಡಲು ತಯಾರಾದರು. ಕೆಲಸದಲ್ಲಿದ್ದಾಗ ಕಾರಿತ್ತು. ಈಗ ಸಿಟಿ ಬಸ್ಸಿನಲ್ಲಿ ಹೋಗಬೇಕು. ಮೊದಲ ದಿನ ಪುರಾಣಕ್ಕೆ ಹೊರಟು ಬಸ್ಸು ಹಿಡಿದು ದೇವಸ್ಥಾನ ತಲುಪುವುದರಲ್ಲಿ ಏಳು ಮುಕ್ಕಾಲು ಗಂಟೆ ಆಯಿತು. ಕಡೆಗೆ ಕೂಡಲು ಜಾಗ ಸಿಗದೇ ಒಂದೆಡೆ ನಿಂತುಕೊಂಡೇ ಕಡೆಯ ಹದಿನೈದು ನಿಮಿಷದ ಪುರಾಣ ಕೇಳಿದರು. 

ಪುರಾಣೀಕರು ಮಾರನೆಯ ದಿನ ವೈಕುಂಠ ಏಕಾದಶಿಯ ಕಾರಣ ಏನು ಮಾಡಬೇಕೆಂದು ವಿವರಿಸುತ್ತಿದ್ದರು. "ನಾಳೆ ವೈಕುಂಠ ಏಕಾದಶಿ ಒಂದು ಪರ್ವಕಾಲ. ನಾನು ವಿವರಿಸಿದಂತೆ ಉಪವಾಸವಿದ್ದು, ಹಾಲು-ಹಣ್ಣು ಚೆನ್ನಾಗಿ ಸೇವಿಸಿ, ದೇವರನಾಮ-ಸ್ತೋತ್ರಾದಿಗಳನ್ನು ಹೇಳಿಕೊಂಡು ಕಾಲ ಕಳೆಯಬೇಕು. ಭೋಜನ ಮಾಡಬಾರದು ಎಂದು ಬೇರೆ ಹೇಳಬೇಕಿಲ್ಲ. ಅವಕಾಶವಿದ್ದವರು ದೇವಾಲಯಗಳಿಗೆ ಅವಶ್ಯ ಹೋಗಿ ದೇವರ ದರ್ಶನ ಪಡೆಯಬೇಕು. ನಾಳೆ ಎಂದಿನಂತೆ ಏಳು ಘಂಟೆಯಿಂದ ಎಂಟು ಘಂಟೆವರೆಗೆ ಇಲ್ಲಿಯೂ ಹಾಲು-ಹಣ್ಣಿಗೆ ವ್ಯವಸ್ಥೆ ಮಾಡಿದೆ. ತಪ್ಪದೇ ಬಂದು ಭಾಗವಹಿಸಿ" ಎಂದು ಹೇಳಿ ಅಂದಿನ ಪ್ರವಚನ ಮುಗಿಸಿದರು. ರಾಯರು ಮನೆಗೆ ಬಂದರು. 

ರಾಯರಿಗೆ ಹಾಲು-ಹಣ್ಣಿನಲ್ಲಿ ದಿನ ಕಳೆದು ಗೊತ್ತಿಲ್ಲ. ಆದರೂ ಅದನ್ನು ಪಾಲಿಸಬೇಕೆಂದು ತೀರ್ಮಾನಿಸಿದರು. ಮನೆಯಲ್ಲಿ ಎಲ್ಲರೂ ಪರ ಊರಿಗೆ ಹೋಗಿ ಅವರು ಒಬ್ಬರೇ ಉಳಿದಿದ್ದರು. ಬೆಳಗ್ಗೆ ಹಾಲಿನಂಗಡಿಗೆ ಹೋದಾಗ ಅಂಗಡಿಯವನು "ಸ್ವಾಮಿ, ಇಂದು ಹಾಲಿಗೆ ಬಹಳ ಬೇಡಿಕೆ. ಎಲ್ಲಾ ಖರ್ಚಾಗಿದೆ. ಐದು ಲೀಟರಿನ ಒಂದು ಪ್ಯಾಕೆಟ್ ಮಾತ್ರ ಇದೆ" ಅಂದ. ರಾಯರು ಅದನ್ನು ಕೊಂಡರು. ಹಣ್ಣಿನ ಅಂಗಡಿಯಲ್ಲಿಯೂ ಎಲ್ಲಾ ಖಾಲಿ ಖಾಲಿ. ಕಡೆಗೆ ಒಂದು ಹಲಸಿನ ಹಣ್ಣು, ಒಂದು ಕಲ್ಲಂಗರೇ ಹಣ್ಣು, ಸ್ವಲ್ಪ  ಮೂಸಂಬಿ, ಬಾಳೆಹಣ್ಣು ಸಿಕ್ಕಿತು. ಅವರ ಹೆಂಡತಿ ಯಾವಾಗಲೋ "ಐದು ತರಹದ ಹಣ್ಣು" ಎಂದು ಹೇಳಿದ್ದುದು ನೆನಪಿಗೆ ಬಂತು. ಕಷ್ಟಪಟ್ಟು ಇನ್ನೊಂದು ಅಂಗಡಿಯಲ್ಲಿ ಒಂದು ಚಕ್ಕೋತ ಕೊಂಡರು. ಇವುಗಳ ಭಾರವನ್ನು ಹೊತ್ತು ಮನೆಗೆ ಬಂದರು.

ಸ್ನಾನ ಮಾಡಿ ಹಲಸಿನ ಹಣ್ಣು ಹೆಚ್ಚಿದರು. ಹಾಲು ದೊಡ್ಡ ಪಾತ್ರೆಯಲ್ಲಿ ಜಾಗರೂಕರಾಗಿ ಉಕ್ಕದಂತೆ  ಕಾಯಿಸಿದರು. ಬಾಳೆಯ ಹಣ್ಣಿನ ಜೊತೆ ಹಲಸಿನ ಹಣ್ಣು ಸೇರಿಸಿ ತಿಂದರು. ಸ್ವಲ್ಪ ಹಾಲೂ ಸೇರಿತು. ವಿಶ್ರಾಂತಿಯ ನಂತರ ಚಕ್ಕೋತ ಹಣ್ಣು ಮತ್ತು ಹಾಲು ನಡೆಯಿತು. ಸಂಜೆಯ ವೇಳೆ ಬೇರೆ ಹಣ್ಣುಗಳು ಮತ್ತು ಮತ್ತಷ್ಟು ಹಾಲು ಹೊಟ್ಟೆ ಸೇರಿತು. ದೇವಸ್ಥಾನದಲ್ಲಿ ಪುರಾಣೀಕರು ಹೇಳಿದ್ದು ನೆನಪಿಗೆ ಬಂತು. "ಅಲ್ಲಿ ಹಣ್ಣು-ಹಾಲಿನ ವಿತರಣೆ ವ್ಯವಸ್ಥೆ ಇದೆ. ಹೋಗಬೇಕು" ಎಂದು ನೆನಪಾಯಿತು. ಬೇಗ ಹೊರಟು ಏಳು ಗಂಟೆಯ ಮುಂಚೆ ಅಲ್ಲಿ ಸೇರಿದರು. 

ಏಳಕ್ಕೆ ಪ್ರಾಂಭವಾದ ಪುರಾಣದಲ್ಲಿ ಭಗವದ್ಗೀತೆ ಮತ್ತು ಭಾಗವತದ ಕೆಲವು ಭಾಗಗಳ ಶ್ಲೋಕಗಳು ಮತ್ತು ಅವುಗಳ ವಿವರಣೆ ನಡೆಯಿತು. ಹಾಲು ಮತ್ತು ಹಣ್ಣುಗಳ ಸುಳಿವೇ ಇಲ್ಲ. ಇರಲಿ, ಪುರಾಣದ ನಂತರ ವಿತರಣೆ ಆಗಬಹುದು ಎಂದು ರಾಯರು ಕಾದರು. ಎಂಟು ಗಂಟೆಗೆ ಪುರಾಣ ಮುಗಿಯುತ್ತಿದ್ದಂತೆಯೇ ಎಲ್ಲರೂ ಅವಸರವಸರವಾಗಿ ಅವರವ ಮನೆಗೆ ಹೊರಟರು. ಒಬ್ಬರು ವಯಸ್ಸಾದ ಯಜಮಾನರು ಮಾತ್ರ ನಿಧಾನವಾಗಿ ಹೋಗುತ್ತಿದ್ದರು. ಮಕುಂದರಾಯರು  ಅವರ ಜೊತೆ ಹೆಜ್ಜೆ ಹಾಕುತ್ತ ಹಾಲು-ಹಣ್ಣಿನ ಬಗ್ಗೆ ಕೇಳಿದರು. 

"ಇದೇನು, ಹೀಗೆ ಕೇಳುತ್ತೀರಿ. ಒಂದು ಗಂಟೆ ಹಾಲು-ಹಣ್ಣೇ ಆಯಿತಲ್ಲ?" ಅಂದರು ಆ ಹಿರಿಯರು. "ಎಲ್ಲಿ ಆಯಿತು? ಬರೀ ಭಗವದ್ಗೀತೆ ಮತ್ತು ಭಾಗವತದ ಕೆಲವು ಭಾಗ ಹೇಳಿದರು, ಅಷ್ಟೇ" ಅಂದರು ರಾಯರು. "ಅದೇ ಸ್ವಾಮಿ. ಹಾಲು ಅಂದರೆ ಭಗವದ್ಗೀತೆ. ಹಣ್ಣು ಅಂದರೆ ಭಾಗವತ" ಅಂದರು ಯಜಮಾನರು. "ಅದು ಹೇಗೆ?" ಎಂದು ರಾಯರು ಕೇಳಿದರು. "ನಿನ್ನೆ ಪುರಾಣದಲ್ಲಿ ಹೇಳಿದ್ದು ನೀವು ಕೇಳಲಿಲ್ಲವೇ? "ದುಗ್ಧಮ್ ಗೀತಾಮೃತಮ್ ಮಹತ್".  ಭಗವದ್ಗೀತೆ ಎಂಬುದೇ ಹಾಲು. ಮತ್ತೆ  "ನಿಗಮಕಲ್ಪ ತರೋರ್ಗಲಿತಂ ಫಲಂ".  ಶ್ರೀಮದ್ಭಾಗವತವೇ ಹಣ್ಣು. ಏಕಾದಶಿಯ ದಿನ ಈ ಹಾಲು-ಹಣ್ಣು ಸೇವಿಸಿ ಎಂದೇ ಪುರಾಣೀಕರು ನಿನ್ನೆ ಹೇಳಿದ್ದು. ಇವತ್ತು ಅದೇ ವಿತರಣೆ ಆಯಿತಲ್ಲ. ಏಕಾದಶಿಯಂದು ಬೇರೆ ಹಣ್ಣು-ಹಾಲು ಯಾರು ಸೇವಿಸುತ್ತಾರೆ?" ಎಂದರು ಆ ಹಿರಿಯರು. 

*****

ಹಲಸಿನ ಹಣ್ಣು, ಕಲ್ಲಂಗಡಿ ಹಣ್ಣು, ಮೂಸಂಬಿ, ಚಕ್ಕೋತ, ಬಾಳೆಹಣ್ಣು ಮತ್ತು ಹಾಲಿನ ಕೊಳಗ ರಾಯರ  ತಲೆಯಸುತ್ತ ಸುತ್ತುವಂತೆ ಅವರಿಗೆ ಭಾಸವಾಯಿತು.  ಹಿರಿಯರು ಅವರ  ಮುಖ ನೋಡಿದರು. ಅವರಿಗೆ ಅರ್ಥ ಆಯಿತು. "ನಾಳೆ ಸ್ವಲ್ಪ ಬೇಗ ಬನ್ನಿ. ಪುರಾಣ ಪ್ರಾರಂಭವಾಗುವುದರ ಮುಂಚೆ ಇದನ್ನು ವಿವರಿಸುತ್ತೇನೆ" ಎಂದು ಹೇಳಿ ಅವರ ಮನೆ ಗಲ್ಲಿಯಲ್ಲಿ ತಿರುಗಿದರು ಆ ವೃದ್ಧರು.