Showing posts with label bhagavata. Show all posts
Showing posts with label bhagavata. Show all posts

Sunday, October 26, 2025

ಒಂದೇ ಬಳೆಯ ಹುಡುಗಿ


ಅದೊಂದು ಸಣ್ಣ ಊರು. ಆ ಊರಿನಲ್ಲಿ ಕೆಲವೇ ಕೆಲವು ಮನೆಗಳು. ದುಡಿದು ಜೀವಿಸುವವರ ಮನೆಗಳು. ಅಷ್ಟು ಮನೆಗಳ ಮಧ್ಯೆ ಅದೊಂದು ಪುಟ್ಟ ಮನೆ. ಬಡವರ ಮನೆ. ಬಡವರ ಮನೆಯೆಂದು ಬಾಯಿಬಿಟ್ಟು ಹೇಳಬೇಕಾದ ಅವಶ್ಯಕತೆ ಇಲ್ಲ. ನೋಡಿದರೆ ಗೊತ್ತಾಗುವುದು. ಸಿರಿವಂತಿಕೆಯ ಪೀಠೋಪಕರಣಗಳಿಲ್ಲ. ಕಣ್ಣಿಗೆ ಕುಕ್ಕುವ ಅಲಂಕಾರ ವಸ್ತುಗಳಿಲ್ಲ. ಅಂದಿನ ದಿನದ ಸಂಪಾದನೆಯಿಂದ ಆ ದಿನದ ಕಾಲಹರಣ. ಹಾಗೆಂದು ಆ ಮನೆಯಲ್ಲಿರುವವರಿಗೆ ದುಃಖವಿಲ್ಲ. ಚಳಿ-ಮಳೆ-ಗಾಳಿಯಿಂದ ರಕ್ಷಣೆ ಕೊಡುವ ಒಂದು ಮನೆ ಇದೆ. ಅದೇ ದೊಡ್ಡದು. ಸಂಜೆ ಆದಮೇಲೆ ಬೆಳಗಿನವರೆಗೆ ಇರಲೊಂದು ಸೂರು ಉಂಟು. ಅದರಲ್ಲಿ ವಾಸ ಇರುವವರಿಗೆ ಅದೇ ಒಂದು ತೃಪ್ತಿ. 

ಒಂದು ದಿನ ಆ ಮನೆಯ ಸದಸ್ಯರೆಲ್ಲಾ ಹೊರಗಡೆ ಹೋಗಿದ್ದಾರೆ. ಕುಟುಂಬದ ಒಬ್ಬಳು ಹುಡುಗಿ ಮಾತ್ರ ಅಂದು ಮನೆಯಲ್ಲಿ ಉಳಿದಿದ್ದಾಳೆ. "ಕುಮಾರಿ" ಎಂದು ಅವಳ ಹೆಸರು. ಅವಳ ಪೂರ್ತಿ ಹೆಸರು ಗೊತ್ತಿಲ್ಲ. ಅಥವಾ "ಕುಮಾರಿ" ಎನ್ನುವುದೇ ಅವಳ ಪೂರ್ತಿ ಹೆಸರಿರಬಹುದು. ಕುಮಾರಿ ಮನೆಯ ಒಳಗಡೆ ಏನೋ ಕೆಲಸ ಮಾಡುತ್ತಿದ್ದಾಳೆ. 

ಹೊರಗಡೆ ಯಾರೋ ಬಂದ ಶಬ್ದವಾಯಿತು. ಆಚೆ ಬಂದು ನೋಡಿದಳು. ಪರಿಚಯದ ನೆಂಟನೊಬ್ಬ ಬಂದಿದ್ದಾನೆ. ಬಡವರ ಮನೆಯಾದರೂ ಪ್ರೀತಿ-ವಿಶ್ವಾಸಗಳಿಗೆ ಬಡತನವಿಲ್ಲ. ನೆಂಟ ಬಂದ ಈ ಸಮಯದಲ್ಲಿ ಕುಟುಂಬದ ಹಿರಿಯರೊಬ್ಬರೂ ಮನೆಯಲ್ಲಿಲ್ಲ. ಕುಮಾರಿಯೇ ಸ್ವಾಗತಿಸಿದಳು. ನೆಂಟ ಮನೆಯೊಳಗೆ ಬಂದ. ಕೈ-ಕಾಲು ತೊಳೆಯಲು ನೀರು ಕೊಟ್ಟಳು. ಕೈ-ಕಾಲು ತೊಳೆದುಕೊಂಡ. ಚಾಪೆ ಹಾಸಿತ್ತು. ಅದರ ಮೇಲೆ ಕುಳಿತುಕೊಂಡ. ಮಡಕೆಯಲ್ಲಿದ್ದ ತಣ್ಣಗಿನ ನೀರು ಕುಡಿಯಲು ಕೊಟ್ಟಳು. ಕುಡಿದು ದಣಿವಾರಿಸಿಕೊಂಡ. ಕುಶಲೋಪರಿ ಮಾತನಾಡಿಸಿದಳು. ಹೆಚ್ಚು ಮಾತನಾಡಲು ಕುಮಾರಿಗೆ ಗೊತ್ತಿಲ್ಲ. ನೆಂಟನಿಗೂ ಮುಂದೇನು ಎಂದು ತೋಚಲಿಲ್ಲ. "ಸರಿ. ಬಂದಿದ್ದೆ ಎಂದು ಹೇಳಿ. ಮತ್ತೊಮ್ಮೆ ಬರುತ್ತೇನೆ" ಎಂದು ಹೇಳಿ ಹೊರಡಲು ಅನುವಾದ. 

ಅವರ ಮನೆಯಲ್ಲಿ ಎಷ್ಟೇ ಬಡತನವಿದ್ದರೂ ಬಂದವರಿಗೆ ಆದರದ ಉಪಚಾರ ಇರುತ್ತಿತ್ತು. ಇದ್ದಿದ್ದರಲ್ಲೇ ಬಂದಿದ್ದವರಿಗೆ ಒಂದು ಪಾಲು ಅನ್ನ-ಆಹಾರ ಕೊಡುವ ಪರಿಪಾಠ. ಕುಮಾರಿಗೆ ಇದು ನೋಡಿ ಗೊತ್ತು. ನೆಂಟ ಮಧ್ಯಾನ್ಹದ ವೇಳೆಗೆ ಬಂದಿದ್ದಾನೆ. ದೂರದಿಂದ ಬಂದಂತೆ ತೋರುತ್ತಿದೆ. ಹಸಿದಿರುವ ಮುಖಭಾವ ಕಾಣುತ್ತಿದೆ. ಬರೀ ನೀರು ಕುಡಿದಿದ್ದಾನೆ. ಹೊರಟು ನಿಂತಿದ್ದಾನೆ. ಕುಮಾರಿಗೆ ಪಿಚ್ಚೆನ್ನಿಸಿತು. 

"ಊಟ ಮಾಡಿಕೊಂಡು ಹೋಗುವಿರಂತೆ. ಸ್ವಲ್ಪ ಇರಿ. ಬೇಗ ಅಡಿಗೆ ಮಾಡಿಬಿಡುತ್ತೇನೆ" ಅಂದಳು ಕುಮಾರಿ. 

ಅವನಿಗೂ ಪ್ರಾಯಶಃ ಅದೇ ಬೇಕಾಗಿತ್ತು. "ಆಗಲಿ. ಕುಳಿತಿರುತ್ತೇನೆ" ಅಂದ. ಚಾಪೆಯ ಮೇಲೆ ಕಾಲುನೀಡಿಕೊಂಡು ಆರಾಮವಾಗಿ ಕುಳಿತ. 

***** 

ಎಷ್ಟೋ ವೇಳೆ ಮನೆಗೆ ಬಂದವರಿಗೆ "ಇರಿ. ಊಟ ಮಾಡಿಕೊಂಡು ಹೋಗಿ" ಅನ್ನುವುದು ಅಭ್ಯಾಸ. ಹಾಗೆ ಹೇಳುವುದು ಮನೆಯವರ ಪದ್ಧತಿ. ತೊಂಭತ್ತು ಭಾಗ ಬಂದವರು "ಇಲ್ಲ. ಸ್ವಲ್ಪ ಕೆಲಸವಿದೆ. ಅವಸರವಿತ್ತು. ಇನ್ನೊಮ್ಮೆ ಬರುತ್ತೇನೆ" ಎಂದು ಹೇಳಿ ಹೋಗುತ್ತಾರೆ. ಇನ್ನು ಕೆಲವರು "ಬರುವಾಗಲೇ ಊಟಮಾಡಿಕೊಂಡು ಹೊರಟಿದ್ದೆ. ಏನೂ ಬೇಡ" ಎಂದು ಹೋಗಬಹುದು. ಮತ್ತೆ ಕೆಲವರು "ಸ್ನೇಹಿತರ ಮನೆಗೆ ಊಟಕ್ಕೆ ಹೇಳಿದ್ದಾರೆ. ಅಲ್ಲಿಗೆ ಹೊರಟಿದ್ದೆ. ಹಾಗೇ ಸುಮ್ಮನೆ ನಿಮ್ಮನ್ನು ನೋಡಿ ಹೋಗುವ ಎಂದು ಬಂದೆ. ಅವರು ಕಾಯುತ್ತಿರುತ್ತಾರೆ. ಇನ್ನೊಮ್ಮೆ ಬಂದಾಗ ಊಟ ಮಾಡಿಕೊಂಡೇ ಹೋಗುತ್ತೇನೆ. ನನಗೆ ನಿಮ್ಮ ಮನೆಯಲ್ಲಿ ಏನು ಸಂಕೋಚ!" ಎಂದು ಹೇಳಿ ಬಹಳ ಸಂಕೊಚದಿಂದ ಹೋಗಿಬಿಡಬಹುದು.

ಹಾಗೆ ಹೋಗುತ್ತಾರೆ ಅನ್ನುವ ಧೈರ್ಯದಿಂದಲೇ "ಇರಿ, ಊಟ ಮಾಡಿಕೊಂಡು ಹೋಗಿ" ಎಂದು ಕೆಲವರು ಹೇಳಬಹುದು. ಬಂದವರಿಗೂ ಸಾಮಾನ್ಯ ಗೊತ್ತಿರುತ್ತದೆ. ಹೇಳುವವರ ಮನಸ್ಸಿನಲ್ಲಿ ಏನಿರಬಹುದು ಅಂತ. ಇವರು ಹೇಳಿದ ಹಾಗೆ ಮಾಡಿದರು. ಅವರು ಕೇಳಿದಹಾಗೆ ಮಾಡಿದರು. ಇವರು ಊಟ ಹಾಕಲಿಲ್ಲ. ಅವರು ಮಾಡಲಿಲ್ಲ. ಆದರೂ ಕೇಳಿದ ಸಮಾಧಾನ ಇವರಿಗೆ. ಸಿಕ್ಕಿಹಾಕಿಕೊಂಡು ತೊಂದರೆ ಕೊಡಲಿಲ್ಲ ಅನ್ನುವ ಸಮಾಧಾನ ಅವರಿಗೆ. 

ಅದೆಲ್ಲ ಹಿಂದಿನ ಸಮಾಚಾರ. ಈಗ ಚಿಂತೆಯಿಲ್ಲ. ಸ್ವಿಗ್ಗಿ, ಜ್ಜೊಮಾಟೊ ಇವೆ. ಅವರಿಗೂ, ನಮಗೂ ಸೇರಿಸಿ ಊಟ-ತಿಂಡಿ ತರಿಸಿಬಿಡಬಹುದು. "ನಿಮಗೆ ಏನು ಬೇಕು?" ಎಂದು ಕೇಳಿ, ಅವರಿಗೆ ಬೇಕಾದದ್ದು ಅವರಿಗೆ, ನಮಗೆ ಬೇಕಾದದ್ದು ನಮಗೆ, ಅರ್ಧ ಘಂಟೆಯಲ್ಲಿ ಹಾಜರುಪಡಿಸಬಹುದು. ಅವರೂ ಸಂಕೋಚ ಪಡಬೇಕಾಗಿಲ್ಲ. ನಾವೂ ಕಷ್ಟ ಪಡುವಂತಿಲ್ಲ. ಜೇಬಲ್ಲಿ ದುಡ್ಡೂ ಇರಬೇಕೆಂದಿಲ್ಲ. ಕ್ರೆಡಿಟ್ ಕಾರ್ಡ್ ಉಂಟು. ತಿಂಗಳ ಬಿಲ್ ಬಂದಾಗ ನೋಡೋಣ. ಆಗ ಹಣ ಇಲ್ಲದಿದ್ದರೆ ಇನ್ನೊಂದು ಕಾರ್ಡಿಂದ ತೆಗೆದು ಕೊಟ್ಟರಾಯಿತು. 

ಕುಮಾರಿಗೆ ಈ ಅನುಕೂಲ ಇರಲಿಲ್ಲ. ಹಾಗೆ ಸುಮ್ಮನೆ ಹೇಳುವ ಮನಸ್ಸೂ, ಅಭ್ಯಾಸವೂ ಅವಳದಲ್ಲ. ಜೊತೆಗೆ ನೆಂಟನೂ ಊಟಕ್ಕೆ ಕಾದು ಕುಳಿತೇಬಿಟ್ಟನಲ್ಲ!

***** 

ಕುಮಾರಿ ಅಡಿಗೆ ಮನೆಯ ಒಳಗೆ ಬಂದಳು. ಅಕ್ಕಿಯ ಡಬ್ಬ ಬರಿದು. ಅಕ್ಕಿಯೇ ಇಲ್ಲದೆ ಏನು ಅಡಿಗೆ ಮಾಡುವುದು? ಅಡಿಗೆ ಮಾಡುತ್ತೇನೆ ಎಂದು ಹೇಳಿಯಾಯಿತು. ನೆಂಟ ಕಾದು ಕುಳಿತಿದ್ದಾನೆ. "ಸರ್ವಸ್ಯ ಗಾತ್ರಸ್ಯ ಶಿರಃ ಪ್ರಧಾನಂ" (ಇಡೀ ದೇಹಕ್ಕೆ ತಲೆಯೇ ಮುಖ್ಯ) ಅನ್ನುವಂತೆ ಊಟಕ್ಕೆ ಅನ್ನವೇ ಮುಖ್ಯ. ಅನ್ನವಿಲ್ಲದೇ ಏನು ಊಟ ಬಡಿಸುವುದು? ಕುಮಾರಿ ಅಡಿಗೆ ಮನೆಯೆಲ್ಲ ಹುಡುಕಿದಳು. ಸ್ವಲ್ಪ ಭತ್ತ ಸಿಕ್ಕಿತು. ಪರವಾಗಿಲ್ಲ. ಕುಟ್ಟಿದರೆ ಒಬ್ಬರ ಊಟಕ್ಕೆ ಸಾಕಾಗುವಷ್ಟು ಅನ್ನ ಮಾಡಬಹುದು. ಮರ್ಯಾದೆ ಉಳಿಯಿತು ಅಂದುಕೊಂಡಳು. ಆದರೆ ಭತ್ತ ಕುಟ್ಟಿ, ಜರಡಿ ಹಿಡಿದು, ನುಚ್ಚು ತೆಗೆದು, ಅಕ್ಕಿ ಬೇರ್ಪಡಿಸಿ, ಅನ್ನ ಮಾಡಬೇಕು. ಉಳಿದದ್ದು ಬೇಗ ತಯಾರು ಮಾಡಿ ಊಟ ಬಡಿಸಬೇಕು. ಕುಮಾರಿ ಚುರುಕು ಹುಡುಗಿ. ಒರಳಿನಲ್ಲಿ ಭತ್ತ ಹುಯ್ದು ಒನಕೆಯಿಂದ ಕುಟ್ಟತೊಡಗಿದಳು. 

ಕುಮಾರಿಗೆ ಬಳೆ ಅಂದರೆ ಬಹಳ ಇಷ್ಟ. ಚಿನ್ನದ ಬಳೆಗಳು ಹಾಕಿಕೊಳ್ಳುವ ಸ್ಥಿತಿಯಿಲ್ಲ. ಗಾಜಿನ ಬಳೆಗಳು. ಹಿಂದಿನ ವಾರ ಬಳೆಗಾರ ಬಂದಿದ್ದ. ಎರಡು ಕೈಗೂ ತುಂಬು ಬಳೆಗಳು ಹಾಕಿಸಿಕೊಂಡಾಗಿತ್ತು. ಕುಟ್ಟಲು ಹೋದರೆ ಮೊದಲ ಏಟಿಗೆ ಬಳೆಗಳು ಶಬ್ದಮಾಡಿದವು. ಶಬ್ದವಾದರೆ ಹೊರಗಡೆ ಕುಳಿತಿರುವ ನೆಂಟನಿಗೆ ಭತ್ತ ಕುಟ್ಟುವುದು ಗೊತ್ತಾಗುವುದು. ಸಂಕೋಚ ಮಾಡಿಕೊಂಡಾನು. ಅವನಿಗೆ ಗೊತ್ತಾಗದಂತೆ, ಶಬ್ದವಾಗದಂತೆ ಭತ್ತ ಕುಟ್ಟಬೇಕು. ಸರಿ, ಕೆಲವು ಬಳೆಗಳನ್ನು ತೆಗೆದಳು. ಎರಡನೇ ಏಟಿಗೆ ಶಬ್ದ ಕಡಿಮೆಯಾದರೂ ಶಬ್ದವೇ. ಎರಡನ್ನು ಬಿಟ್ಟು ಮತ್ತೆಲ್ಲ ಬಳೆ ತೆಗೆದಿಟ್ಟಳು. ಹಾಗಾದರೂ ಸ್ವಲ್ಪ ಶಬ್ದವಾಯಿತು. ಇದೂ ಸರಿಯಿಲ್ಲ ಎಂದು ಮತ್ತೊಂದು ಬಳೆ ತೆಗೆದಳು. ಈಗ ಎರಡೂ ಕೈಯಲ್ಲಿ ಒಂದೊಂದೇ ಬಳೆ. ಆದರೆ ಕುಟ್ಟುವಾಗ ಸದ್ಯ ಶಬ್ದವಿಲ್ಲ. 

ಬೇಗ ಬೇಗ ಭತ್ತ ಕುಟ್ಟಿ, ಅಕ್ಕಿ ತೆಗೆದು, ಅನ್ನ ಬೇಯಿಸಿ, ಅಡಿಗೆ ಮುಗಿಸಿ ನೆಂಟನಿಗೆ ಊಟ ಬಡಿಸಿದಳು. ನೆಂಟನಿಗೆ ಭತ್ತ ಕುಟ್ಟಿ ಅಕ್ಕಿ ಮಾಡಿದ್ದು ಗೊತ್ತಾಗಲಿಲ್ಲ. ಒಂದೇ ಬಳೆಯ ಹುಡುಗಿ ನೆಂಟನಿಗೆ ಊಟ ಬಡಿಸಿ, ಸತ್ಕರಿಸಿ ಕಳಿಸಿದಳು!

*****

ಅವಧೂತನೊಬ್ಬ ಎದುರು ಮನೆಯ ಜಗುಲಿಯಲ್ಲಿ ಕುಳಿತಿದ್ದ. ಕುಮಾರಿಯ ಈ ಜಾಣತನದ ಪ್ರಸಂಗ ನೋಡಿದ. ಅವನು ಇದರಿಂದ ಒಂದು ಪಾಠ ಕಲಿತ!

ಕೈತುಂಬಾ ಬಳೆ ಇದ್ದಾಗ ಬಹಳ ಶಬ್ದ. ಎರಡಿದ್ದಾಗ ಅವೆರಡರ ನಡುವೆ ಕಿಣಿ-ಕಿಣಿ ಶಬ್ದ. ಒಂದೇ ಬಳೆ ಇದ್ದಾಗ ಶಬ್ದವಿಲ್ಲ. ಬೇಕಿದ್ದ ಕೆಲಸ ಮಾಡಬಹುದು. 

ತುಂಬಾ ಜನವಿದ್ದರೆ ಅದೊಂದು ದೊಂಬಿಯ ಪರಿಸರ. ಘರ್ಷಣೆಗಳಿಗೆ ಅವಕಾಶ. ಪರಸ್ಪರ ವಿರೋಧಕ್ಕೆ ದಾರಿ. ಉದ್ದೇಶಿಸಿದ ಕೆಲಸವಾಗುವುದಿಲ್ಲ. 

ಇಬ್ಬರೇ ಇದ್ದರೆ ದೊಂಬಿಯಿಲ್ಲದಿದ್ದರೂ ಕಾಡುಹರಟೆಗೆ ನಾಂದಿ. ಸಮಯ ಹಾಳು. ಪ್ರಯೋಜನವಿಲ್ಲ. 

ಒಬ್ಬನೇ ಇದ್ದಾಗ ಅದು ಏಕಾಂತ. ಏಕಾಗ್ರತೆ ಸಾಧಿಸಬಹುದು. ಏಕಾಂತದ ಸಮ ಮತ್ತೊಂದಿಲ್ಲ. ಸಾಧನೆಗೆ ಇದು ಅತ್ಯವಶ್ಯಕ!

ಇದೇ ಅವಧೂತ ಕುಮಾರಿಯಿಂದ ಕಲಿತ ಪಾಠ!

ಕುಮಾರಿಯೇನು ಪಾಠ ಹೇಳಲಿಲ್ಲ. ಆದರೆ ಅವಳ ಕೆಲಸವನ್ನು ನೋಡಿದ ಅವಧೂತ ಏಕಾಂತದ ಪಾಠ ಕಲಿತುಕೊಂಡ. 

*****

ಶ್ರೀಮದ್ಭಾಗವತದ ಹನ್ನೊಂದನೆಯ ಸ್ಕಂಧದಲ್ಲಿ "ಅವಧೂತ ಗೀತೆ" ಎನ್ನುವ ಪ್ರಸಂಗ ಬರುತ್ತದೆ. ಅದರಲ್ಲಿ ಯದು ಮಾಹಾರಾಜನಿಗೆ ಸಿಕ್ಕ ಅವಧೂತನೊಬ್ಬ "ನನಗೆ ಇಪ್ಪತ್ನಾಲ್ಕು ಗುರುಗಳು. ಅವರೊಬ್ಬಬ್ಬರಿಂದ ಒಂದೊಂದು ಪಾಠ ಕಲಿತೆ" ಎಂದು ಹೇಳುತ್ತಾನೆ. ಹಾಗೆ ಹೇಳಿದ ಇಪ್ಪತ್ನಾಲ್ಕು ಪಾಠಗಳಲ್ಲಿ "ಒಂದೇ ಬಳೆಯ ಹುಡುಗಿ" ಕುಮಾರಿಯಿಂದ ಕಲಿತ ಈ ಪಾಠವೂ ಒಂದು. 

ಅದರ ವಿವರಗಳನ್ನು ಇನ್ನೊಮ್ಮೆ ಅವಕಾಶವಾದಾಗ ನೋಡೋಣ.  

Monday, September 22, 2025

ಒಂದು ಕಪ್ಪು ಚುಕ್ಕೆ


ಕಳೆದ ವಾರದ ಎರಡು ಸಂಚಿಕೆಗಳಾದ "ಯಯಾತಿಯ ಮೊಮ್ಮಕ್ಕಳು" ಮತ್ತು ಅದರ ಮುಂದಿನ ಭಾಗವಾದ "ಮಾಧವಿಯ ಮಕ್ಕಳು" ಅನೇಕ ಪ್ರತಿಕ್ರಿಯೆಗಳನ್ನು ತಂದಿವೆ. (ಈ ಸಂಚಿಕೆಗಳನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). ವಿಶೇಷವಾಗಿ ಕನ್ನಡದ ಒಂದು ಪ್ರಸಿದ್ಧ ಕೃತಿ, ಖ್ಯಾತ ಲೇಖಕ, ನಟ, ನಿರ್ದೇಶಕ, ಜ್ಞಾನ ಪೀಠ ಪ್ರಶಸ್ತಿ ವಿಜೇತ ಶ್ರೀ ಗಿರೀಶ್ ಕಾರ್ನಾಡ್ ಅವರ "ಯಯಾತಿ" ನಾಟಕ ಓದಿರುವವರು, ಅದರ ಪ್ರಯೋಗವನ್ನು ರಂಗಮಂಚದ ಮೇಲೆ ನೋಡಿದವರು ಕಳಿಸಿರುವ ಪ್ರತಿಕ್ರಿಯೆಗಳು. ಕೆಲವರು ಇದರ ಬಗ್ಗೆ ಪ್ರಶ್ನೆಗಳನ್ನು ಹಾಕಿ, ಸ್ವಲ್ಪ ವಿಸ್ತಾರ ಮಾಡಬೇಕೆಂದು ಕೇಳಿದ್ದಾರೆ. ಈ ಸಂಚಿಕೆಗಳಲ್ಲಿರುವ ಅಂಶಗಳನ್ನು ಒಳಗೊಂಡಂತೆ ಒಂದು ರಂಗನಾಟಕ ಬರೆಯಬೇಕೆಂದೂ ಅನೇಕರು ಸಲಹೆ ನೀಡಿದ್ದಾರೆ. 

ಸಾಮಾನ್ಯವಾಗಿ ಅನೇಕ ಓದುಗರು ಮಹಾಭಾರತ, ಭಾಗವತ ಮತ್ತು ಹಲವು ಪುರಾಣಗಲ್ಲಿರುವ ಚಂದ್ರವಂಶದವರ ಕುರಿತಾದ ಬಲು ವಿಸ್ತಾರವಾದ ಸರಕನ್ನು ಓದಿರುವುದಿಲ್ಲ. ಅದು ಎಲ್ಲರಿಗೂ ಸಾಧ್ಯವಾಗುವುದೂ ಇಲ್ಲ. ಅವುಗಳ ಗಾತ್ರ ಬಲು ದೊಡ್ಡದು. ಜೊತೆಗೆ ಮೂಲ ಕೃತಿಗಳು ಇರುವುದು ಸಂಸ್ಕೃತದಲ್ಲಿ. ಕಳೆದ ತಲೆಮಾರಿನ ಮತ್ತು ಇಂದಿನ ಅನೇಕ ಸಾಹಿತಿಗಳು ರಾಮಾಯಣ ಮತ್ತು ಮಹಾಭಾರತದ ಯಾವುದಾದರೂ ಒಂದು ಎಳೆಯನ್ನು ಹಿಡಿದು, ಅದರ ವಿಸ್ತಾರದಲ್ಲಿ ತಮ್ಮ ಕೃತಿಗಳ ರಚನೆ ಮಾಡಿರುತ್ತಾರೆ. ವ್ಯಾಸ, ವಾಲ್ಮೀಕಿಗಳ ಸೆಳೆತ, ಸತ್ವ ಅಂತಹುದು. ಈ ಮಹಾಮಹಿಮರು ಸೃಷ್ಟಿಸಿರುವ, ಬಣ್ಣಿಸಿರುವ ಪಾತ್ರ ಪ್ರಪಂಚ ಎಲ್ಲರನ್ನೂ ಅಯಸ್ಕಾಂತದಂತೆ ಆಕರ್ಷಿಸುತ್ತದೆ. ಅಂತಹ ಬೃಹತ್ ಕೃತಿಗಳನ್ನು ಹೊಸದಾಗಿ ನಿರ್ಮಾಣ ಮಾಡುವ ಸಾಹಸಕ್ಕೆ ಯಾರೂ ಕೈ ಹಾಕಿಲ್ಲ. 

ಯಾವುದೋ ಒಂದು ಪಾತ್ರದ ಒಂದು ಒಳ್ಳೆಯ ಗುಣವನ್ನೋ, ದುರ್ಗುಣವನ್ನೋ ಹಿಗ್ಗಿಸಿ ಮರುಸೃಷ್ಟಿ ಮಾಡಿದ ಕೃತಿಗಳು ಅತ್ಯಂತ ಜನಪ್ರಿಯವಾದಾಗ ಅವುಗಳಲ್ಲಿ ಬಿಂಬಿತವಾದ ಹೂರಣವೇ ಸತ್ಯವೆಂದು ಸಾಮಾನ್ಯ ಜನ ನಂಬುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಅದರಲ್ಲಿಯೂ ಅರ್ಥ, ಕಾಮಗಳ ಪ್ರಪಂಚ, ಇನ್ನೂ ವಿಶೇಷವಾಗಿ ದೈಹಿಕ ಕಾಮದ ವಿವರಣೆಗಳ ಆಕರ್ಷಣೆ ಹಾಗೆ. ಇದರಲ್ಲಿ ತಪ್ಪೇನೂ ಇಲ್ಲ. ಇದೂ ಸಹ ಮನುಷ್ಯನ ಸಹಜ ಜೀವನದ ಒಂದು ಮುಖವೇ. ಹೀಗಿದ್ದಾಗ ಯಾವುದೋ ಸಂದರ್ಭದಲ್ಲಿ ಬೇರೆ ಸಂಗತಿಗಳು ಗಮನಕ್ಕೆ ಬಂದಾಗ "ಒಹೋ, ಹೀಗೂ ಉಂಟೋ!" ಎಂದು ಆಶ್ಚರ್ಯ ಆಗುತ್ತದೆ. 

*****

ಯಾವುದೇ ಒಂದು ವಿಷಯದ ಮೇಲೆ ಚರ್ಚೆ ನಡೆದಾಗ ಪರಸ್ಪರ ವಿರೋಧ ದಿಕ್ಕಿನ ವಿಚಾರಗಳು ಬರುವುದು ಸಹಜ. ಒಬ್ಬ ವ್ಯಕ್ತಿಯಲ್ಲಿ ಅಥವಾ ಒಂದು ಪದಾರ್ಥದಲ್ಲಿ ಅನೇಕ ಗುಣಗಳಿದ್ದಾಗ ಒಂದು ಅವಗುಣ (ದುರ್ಗುಣ) ಕಂಡರೆ ಅದು ಹೇಗೆ ಧ್ವನಿತವಾಗುತ್ತದೆ ಎನ್ನುವುದಕ್ಕೆ ಕೆಳಗಿನ ಉದಾಹರಣೆ ನೋಡಬಹುದು. 

ಕವಿಕುಲಗುರು ಕಾಳಿದಾಸನು ತನ್ನ "ಕುಮಾರಸಂಭವ" ಮಹಾಕಾವ್ಯದ ಮೊದಲ ಸರ್ಗದ ಮೂರನೆಯ ಪದ್ಯದಲ್ಲಿ ಹೀಗೆ ಹೇಳುತ್ತಾನೆ:

ಅನಂತರತ್ನ ಪ್ರಭವಸ್ಯ ಯಸ್ಯ ಹಿಮಂನ ಸೌಭಾಗ್ಯವಿಲಾಪಿಜಾತಂ 
ಏಕೋಹಿ ದೋಷೋ ಗುಣಸನ್ನಿಪಾತೇ ನಿಮಜ್ಜತೀಂದೋಃ ಕಿರಣೀಶ್ವಿವಾಂಕಃ 

ಹಿಮಾಲಯದಲ್ಲಿ ಬೇಕಾದಷ್ಟು ಶ್ರೇಷ್ಠ ವಸ್ತುಗಳಿವೆ. ಆದ್ದರಿಂದ ಎಲ್ಲೆಡೆಯೂ ಹಿಮವಿದ್ದರೂ ಅದರ ಯೋಗ್ಯತೆ ಕಡಿಮೆಯಾಗಲಿಲ್ಲ. ಚಂದ್ರನ ಕಾಂತಿಯಲ್ಲಿ ಅವನ ಕಳಂಕವು ಮರೆಯಾದಂತೆ ಅನೇಕ ಗುಣಗಳಿಂದ ಒಂದು ದೋಷವೇ ಮರೆಯಾಗುತ್ತದೆ. 

ಇದಕ್ಕೆ ವಿರುದ್ಧವಾಗಿ ಶೃಂಗಾರ ಪ್ರಕಾಶ ಹೀಗೆ ಹೇಳುತ್ತದೆ: 

ಏಕೋಹಿದೋಷೋ ಗುಣಸನ್ನಿಪಾತೇ ನಿಮಜ್ಜತೀಂದೋರಿತಿ ಯೋ ಬಭಾಷೇ 

ತೇನಾಪಿ ನೂನಂ ಕವಿನಾ ನ ದೃಷ್ಟ೦ ದಾರಿದ್ರ್ಯದೋಷ: ಗುಣರಾಶಿನಾಶೀ 

ಅನೇಕ ಗುಣಗಳಿದ್ದಾಗ ಒಂದು ದೋಷವು ಮುಚ್ಚಿಹೋಗುತ್ತದೆ ಎಂದು ಹೇಳಿದ ಕವಿಗೆ, ದಾರಿದ್ರ್ಯ (ಬಡತನ) ಎನ್ನುವ ಒಂದು ದೋಷವೇ ಎಲ್ಲಾ ಗುಣಗಳನ್ನೂ ನುಂಗಿಹಾಕುತ್ತದೆ ಎನ್ನುವುದು ಕಾಣಲಿಲ್ಲ! 

ಹೀಗೆ ಪರಸ್ಪರ ಅಭಿಪ್ರಾಯ ಭೇದವಿರುವುದು ಸರಿಯಾದರೂ ಇಲ್ಲಿ ಒಟ್ಟಾರೆ ಆಗುವ ಪರಿಣಾಮ ಸನ್ಮಾರ್ಗ ಪ್ರೇರಕವೇ ಆಗಿದೆ. ದಾರಿದ್ರ್ಯದ ಭೀಕರತೆ ತೋರಿಸಿದರೂ, ಅದು ಬಡತನವನ್ನು ಅತಿಯಾಗಿ ಗಮನಿಸದೆ ಗುಣಗ್ರಾಹಿಯಾಗಬೇಕೆಂದು ಸೂಚಿಸುತ್ತದೆ. 

*****

ಪರಮಪುರುಷನೊಬ್ಬನೇ ಸಕಲ ದೋಷದೂರನಾದವನು. ಅವನೊಬ್ಬನೇ ಅನಂತ ಕಲ್ಯಾಣಗುಣ ಪರಿಪೂರ್ಣ. ಇದು ಒಂದು ಪ್ರಮೇಯ. ಅನೇಕ ತಾತ್ವಿಕ ನಿಲುವುಗಳು ಇದರ ಮೇಲೆ ನಿಂತಿವೆ. ಆದ್ದರಿಂದ ಪರಮಾತ್ಮನನ್ನು ನೆನೆಯುವುದು ಅಂದರೆ ಅವನ ಅನಂತ ಗುಣಗಳಲ್ಲಿ ನಮಗೆ ಚಿಂತನೆಗೆ ಸಿಲುಕುವ, ನಿಲುಕುವ ಗುಣಗಳ ಚಿಂತನೆಯೇ ಆಗಿದೆ. ಬೇರೆಯ ದೇವತೆಗಳೂ, ಮನುಷ್ಯರೂ ಈ ಅಳತೆಯಲ್ಲಿ ಕಡಿಮೆ ಬೀಳುವುದು ಸಹಜವೇ. ಎಲ್ಲ ದೇವತೆಗಳೂ, ಮನುಷ್ಯರೂ ದೋಷ ದೂರರಾದರೆ, ಸಕಲ ಗುಣಗಳ ಖನಿಗಳಾದರೆ, ಅವರು ಮನುಷ್ಯರಾಗಿಯೋ ಅಥವಾ ದೇವತೆಗಳಾಗಿಯೋ ಉಳಿಯುವುದಿಲ್ಲ. ಅವರೂ ದೇವರೇ ಆಗಿಬಿಡುತ್ತಾರೆ!

ಇಂತಹ ಪರಿಸ್ಥಿತಿಯಲ್ಲಿ ನಮ್ಮ ದೃಷ್ಟಿಕೋನ ಹೇಗಿರಬೇಕು? ನಮ್ಮ ಹಿರಿಯ ಸ್ನೇಹಿತರೊಬ್ಬರು ಸೂಚಿಸಿರುವಂತೆ "ನಾವು ಗುಣಾನ್ವೇಷಣೆಯಲ್ಲಿ ತೊಡಗಬೇಕೇ ಹೊರತು ದೋಷಾನ್ವೇಷಣೆಯಲ್ಲಿ ಅಲ್ಲ". ರಾಮಾಯಣ, ಮಹಾಭಾರತ, ಪುರಾಣಗಳು ಮುಂತಾದುವುಗಳಲ್ಲಿ ಕಂಡು ಬರುವ ದುಷ್ಟ ಪಾತ್ರಗಳನ್ನೇ ವೈಭವೀಕರಿಸಿ, ಅವರನ್ನೇ ನಾಯಕರುಗಳನ್ನಾಗಿ ಮಾಡಿ ರಚಿಸಿರುವ ಸಾಹಿತ್ಯ ಎಲ್ಲ ಭಾಷೆಗಳಲ್ಲಿ ವಿಪುಲವಾಗಿಯೇ ಇವೆ. ಸಾಹಿತ್ಯದ ಮೂಲೋದ್ದೇಶ "ರಸಾಸ್ವಾದನೆ" ಆದುದರಿಂದ ಆ ದೃಷ್ಟಿಯಲ್ಲಿ ಇದು ಅಸಾಧುವೂ ಅಲ್ಲ. ಆದರೆ ಅದು ಅಲ್ಲಿಗೇ ನಿಲ್ಲಬೇಕು. ಅದನ್ನು ಬಿಟ್ಟು ಇಂತಹ ವ್ಯಾಖ್ಯಾನಗಳೇ ಸತ್ಯ ಎಂದು ಜನಜನಿತವಾದರೆ ಮೂಲ ಕೃತಿಗಳ ಮೂಲಭೂತ ಆಶಯಕ್ಕೇ ಕೊಡಲಿಪೆಟ್ಟು ಬೀಳುತ್ತದೆ. 

ಪ್ರಾಚಾರ್ಯ ತಿ. ನಂ. ಶ್ರೀ ಅವರು ತಮ್ಮ "ಭಾರತೀಯ ಕಾವ್ಯ ಮೀಮಾಂಸೆ" ಮೇರು ಕೃತಿಯಲ್ಲಿ ಹೇಳಿರುವಂತೆ "ಓದುವಾಗ ರಸಾಸ್ವಾದವೇ ಮುಖ್ಯವಾದರೂ, ಅದರಿಂದ ಒದಗುವ ಆನಂದವೇ ಪ್ರಿಯವಾದರೂ, ಅಂತ್ಯ ಪ್ರಯೋಜನ ಅದರಿಂದ ಒದಗುವ ಸಂಸ್ಕಾರ". ಇನ್ನೂ ಸ್ವಲ್ಪ ಮುಂದೆ ಅವರು ಸೂಚಿಸುವಂತೆ "ವಾಚಕನ ಮನಸ್ಸು ಸಂಸ್ಕಾರ ಹೊಂದಿ, ಅವನಿಗೆ ಧರ್ಮಾಧರ್ಮಗಳ ಪರಿಜ್ಞಾನ ಒದಗಿ, ಸನ್ಮಾರ್ಗದಲ್ಲಿ ನಡೆಯಬೇಕೆಂಬ ಪ್ರವೃತ್ತಿ ಉಂಟಾಗುವುದೇ ಸಾಹಿತ್ಯದ ಪರಮ ಪ್ರಯೋಜನ. ಇದನ್ನೇ ಸತ್ಪ್ರೇರಣೆ ಅನ್ನುತ್ತಾರೆ". 

ಕೃತಿ ರಚನಾ ಸ್ವಾತಂತ್ರ್ಯ ಎಲ್ಲರಿಗೂ ಉಂಟು. ಆದರೆ ಕಡೆಗೆ "ಕೃತಿಯ ಒಟ್ಟಾರೆ ಪರಿಣಾಮ ಏನಾಗುವುದು?" ಎನ್ನುವುದನ್ನೂ ಗಮನಿಸಬೇಕಾಗುತ್ತದೆ. ಭೀಕರ ಅಪರಾಧಗಳನ್ನು ಮಾಡಿ ನಿಭಾಯಿಸಿಕೊಂಡವರ ಬಗ್ಗೆ ಚಲನಚಿತ್ರಗಳು ಬಂದಿವೆ. ಅವುಗಳನ್ನು ನೋಡಿ ಅದನ್ನೇ ಅನುಕರಿಸಿ ಅಪರಾಧಗಳನ್ನು ಮಾಡಿ ಸಿಕ್ಕಿಹಾಕಿಕೊಂಡವರು ಇಂತಹ ಚಿತ್ರಗಳೇ ಅವರ ಪ್ರೇರಕ ಶಕ್ತಿ ಎಂದು ಹೇಳಿರುವುದು ಗಮನಿಸಬೇಕಾದ ಅಂಶ. ಅಭಿವ್ಯಕ್ತಿ ಸ್ವಾತಂತ್ರ್ಯ, ರಸಾನುಭವ, ಮನರಂಜನೆ, ಜನಪ್ರಿಯತೆ ಇವೆಲ್ಲವೂ ಮುಖ್ಯವಾದರೂ ಸಮಾಜದ ಮೇಲೆ ಆಗುವ ಪೂರ್ಣ ಪರಿಣಾಮವೂ ಅಷ್ಟೇ ಮುಖ್ಯ ಎನ್ನುವುದು ಗಮನಿಸಬೇಕಾದ ಅಂಶ. 

*****

ಚಕ್ರವರ್ತಿ ಯಯಾತಿ ವಿಷಯದಲ್ಲಿ ಗಮನಿಸುವುದಾದರೆ, ಅವನನ್ನು ಕೇಂದ್ರೀಕರಿಸಿ ಮರಾಠಿ ಭಾಷೆಯ ಶ್ರೇಷ್ಠ ಲೇಖಕರಲ್ಲಿ ಒಬ್ಬರಾದ ಶ್ರೀ ವಿಷ್ಣು ಸಖಾರಾಮ ಖಾಂಡೇಕರ್ ಅವರು 1959 ರಲ್ಲಿ ಮರಾಠಿಯಲ್ಲಿ "ಯಯಾತಿ" ಏನುವ ಹೆಸರಿನ ಕಾದಂಬರಿ ಹೊರತಂದರು. ಅವರಿಗೆ ಈ ಕಾದಂಬರಿ ಬಹಳ ಕೀರ್ತಿ ತಂದಿತು. 1974 ವರ್ಷದ "ಜ್ಞಾನಪೀಠ" ಪ್ರಶಸ್ತಿಯೂ ಅವರಿಗೆ ಈ ಪುಸ್ತಕಕ್ಕಾಗಿ ಸಿಕ್ಕಿತು. 

ಎರಡು ವರ್ಷಗಳ ನಂತರ, 1961 ರಲ್ಲಿ ಕನ್ನಡದಲ್ಲಿ "ಯಯಾತಿ" ನಾಟಕ ರೂಪದಲ್ಲಿ ಶ್ರೀ ಗಿರೀಶ್ ಕಾರ್ನಾಡ್ ಅವರಿಂದ ಹೊರಬಂತು. ಈ ಕೃತಿ ರಚಿಸಿದಾಗ ಅವರಿಗೆ ಕೇವಲ 23 ವರ್ಷ ವಯಸ್ಸು. ಆ ಚಿಕ್ಕ ವಯಸ್ಸಿನಲ್ಲೇ ಇಂತಹ ಪ್ರಖರ ಕೃತಿ ಹೊರತಂದಿದ್ದು ಅವರ ಅಪಾರ ಪ್ರತಿಭೆಗೆ ಸಾಕ್ಷಿ. ಮುಂದೆ ಅವರು ಮಾಡಿದ ಒಟ್ಟಾರೆ ಸಾಹಿತ್ಯ ಸೇವೆಗೆ ಅವರಿಗೆ 1998 ರಲ್ಲಿ "ಜ್ಞಾನಪೀಠ" ಪ್ರಶಸ್ತಿ ಸಿಕ್ಕಿತು. 

ಮಹಾಭಾರತ ಮತ್ತು ಪುರಾಣಗಳಲ್ಲಿ ಸಿಗುವ ಯಯಾತಿಯ ಪೂರ್ತಿ ವಿವರಗಳನ್ನು ಗಮನಿಸಿದಾಗ ಅವನು ತನ್ನ ಮಗನಿಂದ ಯೌವನ ಪಡೆದುದು ಒಂದು ಆಕಸ್ಮಿಕ. ದೇವಯಾನಿಯ ದೂರಿನ ಕಾರಣವಾಗಿ ದೈತ್ಯಗುರು ಶುಕ್ರಾಚಾರ್ಯರಿಗೆ ಬಂದ ಕೋಪದ ಫಲಶ್ರುತಿಯಾಗಿ ಅವರು ಯಯಾತಿಗೆ "ಅಕಾಲ ವೃದ್ಧಾಪ್ಯ ಬರಲಿ" ಎಂದು ಶಾಪ ಕೊಟ್ಟರು. ಹೀಗೆ ಶಾಪ ಬಂದಾಗ ಅವನು ಅವರಲ್ಲಿ ಕ್ಷಮೆ ಬೇಡಿ ವಿಶಾಪ ಕೋರಿದಾಗ ಅವರು ತೋರಿಸಿದ ದಾರಿ ಯಾವುದು? "ನಿನ್ನ ಮಕ್ಕಳಲ್ಲಿ ಯಾರಾದರೂ ನಿನ್ನ ವೃದ್ಧಾಪ್ಯ ತೆಗೆದುಕೊಂಡು ಅವನ ಯೌವನ ನಿನಗೆ ಕೊಟ್ಟರೆ ತೆಗೆದುಕೋ" ಎಂದರು! ಅವನು ಆ ದಾರಿಯಲ್ಲಿ ಹೋದ. ತಾನಾಗಿ ಅದನ್ನು ಕೇಳಿದವನಲ್ಲ. ಮುಂದೆ ಒಂದು ಸಾವಿರ ವರುಷ ಮಗನ ಯುವತನ ಪಡೆದಿದ್ದನಂತೆ. ಕಡೆಗೆ ಏನು ಮಾಡಿದರೂ, ಎಷ್ಟು ಭೋಗ ಸವಿದರೂ, ತೃಪ್ತಿಯಾಗುವುದಿಲ್ಲ ಎಂದು ತಿಳಿಯಿತು. ಆಗ ತಕ್ಷಣ ಅದೇ ಮಗನಿಗೆ ಯೌವನ ಹಿಂದಿರುಗಿಸಿ ವಾನಪ್ರಸ್ಥಕ್ಕೆ ಹೊರಟ. ಈ ಘಟನೆ ಅವನ ಜೀವನದಲ್ಲಿ ನಡೆದ ಒಂದು ದುರ್ದೈವದ ನಡೆ. 

ಮಗನ ಯೌವನ ಪಡೆದ ಅವನನ್ನು ನೋಡುವ ಎರಡು ದೃಷ್ಟಿ ಕೋಣಗಳು ಇವೆ. ಒಂದರಲ್ಲಿ ಗಂಡ ತನ್ನ ಬಳಿ ಬಂದಾಗ ಅವನ ಹೆಂಡತಿ "ನನ್ನ ಹತ್ತಿರ ಬರಬೇಡ. ನಿನ್ನಲ್ಲಿ ನನ್ನ ಮಗ ಕಾಣಿಸುತ್ತಾನೆ" ಎಂದು ಹೇಳುವುದು. ಇನ್ನೊಂದರಲ್ಲಿ ಅವನ ಸೊಸೆ ಅವನ ಬಳಿ ಬಂದು "ಈಗ ನೀನೇ ನನ್ನ ಗಂಡ" ಅನ್ನುವುದು. ಒಂದು ಆ ವಯಸ್ಸಿಗೆ ತಕ್ಕ ಉದಾತ್ತತೆ. ಇನ್ನೊಂದು ಈ ವಯಸ್ಸಿಗೆ ತಕ್ಕ ಅವಶ್ಯಕತೆ. ಯಾವುದು ಸರಿ ಎಂದು ಹೇಳುವಂತಿಲ್ಲ. ಅದರ ಜಾಗದಲ್ಲಿ ಅದು ಸರಿ. ಇದರ ಜಾಗದಲ್ಲಿ ಇದು ಸರಿ. 

*****

ಯಯಾತಿಯ ತಂದೆ ನಹುಷ ಚಕ್ರವರ್ತಿಯ ಮಹಾಭಾರತ, ಪುರಾಣಗಳ ಚಿತ್ರಣದ ದೋಷವೊಂದನ್ನು ಪರಿಹರಿಸಿ ದೇವುಡು ನರಸಿಂಹ ಶಾಸ್ತ್ರಿಗಳು "ಮಹಾಕ್ಷತ್ರಿಯ" ಎನ್ನುವ ದಿವ್ಯ ಪೌರಾಣಿಕ ಕಾದಂಬರಿ ಕೊಟ್ಟರು. ದುಷ್ಯಂತನ ಒಂದು ದೋಷವನ್ನು ಒಂದು ಉಂಗುರದ ಪ್ರಭಾವವನ್ನು ತಂದು ಪರಿಹರಿಸಿ ಮಹಾಕವಿ ಕಾಳಿದಾಸನು "ಅಭಿಜ್ಞಾನ ಶಾಕುಂತಲ" ನಾಟಕವನ್ನು ಕೊಟ್ಟ. 

ಅಭಿವ್ಯಕ್ತಿ ಸ್ವಾತಂತ್ರ್ಯ, ಕೃತಿ ರಚಿಸುವವನ ಪ್ರತಿಭೆ, ಸಮಾಜದಲ್ಲಿ ಇರುವ ಸಂಬಂಧಗಳು ಮತ್ತು ಮೌಲ್ಯಗಳ ಹಿನ್ನೆಲೆಯಲ್ಲಿ ಆಯಾ ಕೃತಿಗಳ ವಿಮರ್ಶೆ ಮಾಡಬೇಕಲ್ಲದೆ, ಯಯಾತಿಯ ಬಗ್ಗೆ ನಮ್ಮ ಒಟ್ಟಾರೆ ಅಭಿಪ್ರಾಯ ರೂಪಿಸುವ ತುಲನೆ ಮಾಡುವಾಗ ಅವನ ವ್ಯಕ್ತಿತ್ವದ ಒಂದು ಕಪ್ಪು ಚುಕ್ಕೆಯನ್ನೇ ಗಮನಿಸಿ ಮಿಕ್ಕ ವಿಶಾಲ ಶುಭ್ರ ಶ್ವೇತ ಗುಣಗಳನ್ನು ಮರೆಯಬಾರದೆಂಬುದೇ ಇಷ್ಟೆಲ್ಲಾ ಚರ್ಚೆಯ ಆಶಯ. ಹಾಗೆ ಮಾಡಿದರೆ ಅದು ಕಳಂಕವಿದೆ ಎಂದು ಚಂದ್ರನನ್ನೇ ಪಕ್ಕಕ್ಕೆ ತಳ್ಳಿದ ಹಾಗೆ. 

Wednesday, July 30, 2025

ಪುರಾಣಗಳ ವಿಸ್ತಾರ


ಕಳೆದ ಕೆಲವು ಸಂಚಿಕೆಗಳಲ್ಲಿ, ಅನೇಕ ವಿಷಯಗಳ ಸಂದರ್ಭಗಳಲ್ಲಿ "ಪದ್ಮ ಪುರಾಣ" ಮತ್ತು "ನಾರದೀಯ ಪುರಾಣ" ಇವುಗಳ ಕೆಲವು ಅಂಶಗಳನ್ನು ಚರ್ಚೆಯಲ್ಲಿ ಕಂಡಿದ್ದೆವು. ಇವುಗಳನ್ನು ಗಮನಿಸಿದ ಮಿತ್ರರೊಬ್ಬರು ಈ ಪುರಾಣಗಳ ವಿಸ್ತಾರ, ಮತ್ತು ಆಸಕ್ತರು ಇವುಗಳನ್ನು ಓದಬೇಕಾದರೆ ಎಲ್ಲಿ ಹುಡುಕಬೇಕು ಎನ್ನುವ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇವುಗಳನ್ನು  ಕುರಿತು ಸ್ವಲ್ಪ ಈಗ ನೋಡೋಣ. 

ಪುರಾಣಗಳ ಸಂದರ್ಭದಲ್ಲಿ ಸಾಮಾನ್ಯವಾಗಿ "ಅಷ್ಟಾದಶ ಪುರಾಣಗಳು" ಎಂದು ಹೇಳುವ ಪರಿಪಾಠ ಇದೆ. ಈ "ಹದಿನೆಂಟು ಪುರಾಣಗಳು" ಭಗವಾನ್ ವೇದವ್ಯಾಸರಿಂದ ರಚಿತವಾಗಿವೆ ಎಂದು ನಂಬಿಕೆ. ಇವುಗಳಲ್ಲದೇ ಬೇರೆ ಪುರಾಣಗಳು ಮತ್ತು ಇವುಗಳ ಜೊತೆಗೆ ಅನೇಕ ಉಪ-ಪುರಾಣಗಳೂ ಇವೆ. ಅನೇಕ ಜೈನ ಪುರಾಣಗಳೂ ಪ್ರಸಿದ್ಧವಾಗಿವೆ. ಅನೇಕರು ಇವುಗಳಲ್ಲಿ ಕೆಲವನ್ನು ಮಾನ್ಯ ಮಾಡುವುದಿಲ್ಲ. ಕೆಲವರು ವೈಷ್ಣವ ಪುರಾಣಗಳನ್ನು ಒಪ್ಪುವುದಿಲ್ಲ. ಮತ್ತೆ ಕೆಲವರು ಶೈವ ಪುರಾಣಗಳನ್ನು ಒಪ್ಪುವುದಿಲ್ಲ. "ಅಯ್ಯೋ, ಈ ಪುರಾಣಗಳ ಪುರಾಣವೇ ಬೇಡಪ್ಪ" ಅನ್ನುವವರಿಗೂ ಕಡಿಮೆಯಿಲ್ಲ. 

ಪುರಾಣಗಳಿಗೆ ವೈದಿಕ ವಾಂಗ್ಮಯದಲ್ಲಿ ವಿಶಿಷ್ಟ ಸ್ಥಾನವಿದೆ. ರಾಮಾಯಣ, ಮಹಾಭಾರತಗಳ ಜೊತೆ ಜೊತೆಯಾಗಿ ಇವುಗಳ ಉಲ್ಲೇಖ ಬರುತ್ತದೆ. ಅನೇಕ ಸಂದರ್ಭಗಳು, ಕಥೆಗಳು, ವಿವರಗಳು ಇವುಗಳೆಲ್ಲದರಲ್ಲೂ ಸಿಗುತ್ತವೆ. ಕೆಲವು ವಿವರಗಳು ಒಂದೇ ರೀತಿ ಇವೆ. ಮತ್ತೆ ಕೆಲವು ಅಲ್ಲಲ್ಲಿ ವ್ಯತ್ಯಾಸಗಳನ್ನೂ ಹೊಂದಿವೆ. 
*****

ಪುರಾಣಗಳನ್ನು "ಧರ್ಮ ಗ್ರಂಥಗಳು" ಎಂದು ಓದುವವರಿದ್ದಾರೆ. ಇವುಗಳನ್ನು ಕೇವಲ ಒಂದು ಸಾಹಿತ್ಯ ಪ್ರಕಾರ ಎಂದೂ ಓದಬಹುದು. ಅನೇಕ ಪುರಾಣಗಳ ಭಾಗಗಳು ಒಳ್ಳೆಯ ಕಾವ್ಯವೂ ಹೌದು. ನಮ್ಮ ದೈನಂದಿನ ಜೀವನದಲ್ಲಿ ಕಂಡುಬರುವ ಅನೇಕ ವಿಷಯಗಳ ಚರ್ಚೆ ಇವುಗಳಲ್ಲಿ ಕಾಣಬಹುದು. ಜೀವನವನ್ನು ಹಸನು ಮಾಡಿಕೊಳ್ಳಲು ಬೇಕಾದ ಅಂಶಗಳನ್ನು ಹೇರಳವಾಗಿ ಇವುಗಳಲ್ಲಿ ನೋಡಬಹುದು. ನಮಗೆ ಅರ್ಥವಾಗದ ಅನೇಕ ಗೋಜಲು ಪ್ರಶ್ನೆಗಳಿಗೆ ಇವುಗಳಲ್ಲಿ ಉತ್ತರವನ್ನೂ ಕಂಡುಕೊಳ್ಳಬಹುದು. 

ಅನೇಕ ಪುರಾಣಗಳ ಶ್ಲೋಕಗಳು ನಮ್ಮಲ್ಲಿ ಅನೇಕರು ದೈನಂದಿನ ಜೀವನದಲ್ಲಿ ಪೂಜೆ-ಪುನಸ್ಕಾರಗಳಲ್ಲಿ ಹೇಳುವ ಅಭ್ಯಾಸವೂ ಇದೆ. ಇವು ಪುರಾಣಗಳ ಶ್ಲೋಕಗಳು ಎಂದು ಅನೇಕರಿಗೆ ಗೊತ್ತಿಲ್ಲ. ಅಷ್ಟೇ. ಹಿಂದಿನ "ಏಕಾದಶಿ ಮತ್ತು ರುಕ್ಮಾ೦ಗದ ಮಹಾರಾಜ" ಅನ್ನುವ ಸಂಚಿಕೆಯಲ್ಲಿ "ಏಕೋಪಿ ಕೃಷ್ಣಸ್ಯ ಕೃತಃ ಪ್ರಣಾಮಃ" ಎನ್ನುವ ಶ್ಲೋಕದ ಮೂಲ "ನಾರದ ಪುರಾಣ"ದಲ್ಲಿದೆ ಎಂದು ನೋಡಿದೆವು. (ಇಲ್ಲಿ ಕ್ಲಿಕ್ ಮಾಡಿ ಅದನ್ನು ಓದಬಹುದು).  ಸರ್ವಸಮರ್ಪಣ ಕಾಲದಲ್ಲಿ ಹೇಳುವ "ಕಾಯೇನ ವಾಚಾ, ಮನಸಾ ಇಂದ್ರಿಯೈರ್ವಾ, ಬುಧ್ಯಾತ್ಮನಾವಾ"  ಅನ್ನುವುದೂ ಶ್ರೀಮದ್ ಭಾಗವತದಿಂದ ಬಂದಿರುವುದು. ಹೀಗೆ ಅನೇಕ ಉದಾಹರಣೆಗಳು ಉಂಟು. 

"ಪುರಾಣಗಳನ್ನು ಓದದಿದ್ದರೆ ಏನಾಗುತ್ತದೆ?" ಎಂದು ಯಾರಾದರೂ ಕೇಳಬಹುದು. ಅದಕ್ಕೆ ಪ್ರಾಯಶಃ ಸರಿಯಾದ ಉತ್ತರ "ಏನೂ ಆಗುವುದಿಲ್ಲ" ಎಂದೇ ಇರಬೇಕು! ಪುರಾಣಗಳು ಎಂದು ಒಂದು ಇದೆ ಅನ್ನುವುದೇ ಗೊತ್ತಿಲ್ಲದವರೂ ಸುಖವಾಗಿ ಜೀವನ ಮಾಡಿಕೊಂಡಿದ್ದಾರೆ ಅನ್ನುವುದು ನಮ್ಮ ಕಣ್ಣ ಮುಂದೆ ಇದೆ. ಓದು-ಬರಹ ಗೊತ್ತಿಲ್ಲದೇ ಅನೇಕರು ಇಡೀ ಜೀವನವನ್ನೇ ಕಳೆಯುವುದೂ ಉಂಟು. ಸುಖ ಅನ್ನುವುದರ ಪರಿಭಾಷೆ ಏನು ಅನ್ನುವುದರ ಮೇಲೆ ಇದರ ಉತ್ತರವನ್ನು ಅವರವರು ತಮಗೆ ಸರಿಬಂದಂತೆ ಕಂಡುಕೊಳ್ಳಬಹುದು. 

*****

"ಗ್ರಂಥ" ಅನ್ನುವ ಪದವನ್ನು ಅನೇಕ ಸಂದರ್ಭಗಳಲ್ಲಿ ಉಪಯೋಗಿಸುತ್ತೇವೆ. "ಗ್ರಂಥಾಲಯ" (ಲೈಬ್ರರಿ), "ಗ್ರಂಥಪಾಲಕ" (ಲೈಬ್ರರಿಯನ್), "ಗ್ರಂಥ ಸಂಪತ್ತು" (ಲಿಟರೇಚರ್) ಮುಂತಾಗಿ ಮಾತಿನಲ್ಲಿ ಪ್ರಯೋಗಿಸುವುದರ ಜೊತೆಗೆ ಅಲ್ಲಲ್ಲಿ ಫಲಕಗಳನ್ನೂ (ಬೋರ್ಡುಗಳು) ಕಾಣಬಹುದು. ಈ "ಗ್ರಂಥ" ಅಂದರೇನು? ಗ್ರಂಥ ಅನ್ನುವುದಕ್ಕೆ ಅನೇಕ ಅರ್ಥಗಳಿವೆ. ದಾರಗಳಿಂದ ಕಟ್ಟಿಟ್ಟದ್ದು ಎನ್ನುವುದೂ ಒಂದು ಅರ್ಥ. ತಾಳೆಗರಿಯ ಮೇಲೆ ಬರೆದಿರುವ ಕೃತಿಗಳನ್ನು ದಾರಗಳಿಂದ ಸೇರಿಸಿ ಕಟ್ಟಿಡುತ್ತಿದ್ದುದರಿಂದ ಹೀಗೆ ಪ್ರಯೋಗ ಬಂದಿರಬಹುದು. ಸಿಖ್ಖರ ಧರ್ಮಗ್ರಂಥ "ಗುರು ಗ್ರಂಥ್ ಸಾಹಿಬ್" ಅಂದು ಕರೆಯಲ್ಪಡುತ್ತದೆ. ಅದರ ರಕ್ಷಣೆ ಮಾಡುವ ಪಾಲಕರಿಗೆ "ಗ್ರಂಥಿ" ಅನ್ನುತ್ತಾರೆ. ಯೋಗ ಮತ್ತು ಆಯುರ್ವೇದಗಳಲ್ಲಿ "ಗ್ರಂಥಿ" ಅನ್ನುವುದಕ್ಕೆ ಬೇರೆ ಅರ್ಥಗಳಿವೆ. 

ಸಂಸ್ಕೃತ ಸಾಹಿತ್ಯದ ಸಂದರ್ಭದಲ್ಲಿ "ಗ್ರಂಥ" ಎಂದರೆ ಮೂವತ್ತೆರಡು ಅಕ್ಷರಗಳು (32 ಅಕ್ಷರಗಳು) ಉಳ್ಳ ಒಂದು ಶ್ಲೋಕ. ಹೀಗೆ ನೋಡಿದಾಗ ರಾಮಾಯಣ 24,000 ಶ್ಲೋಕಗಳುಳ್ಳದ್ದು. ಮಹಾಭಾರತ ಅದರ ಐದುಪಟ್ಟು ದೊಡ್ಡದು. ಮಹಾಭಾರತದ ವಿಸ್ತಾರ 1,25,000 ಶ್ಲೋಕಗಳು. ಹೆಸರಾಂತ ಗ್ರೀಕ್ ಮಹಾಕೃತಿಗಳಾದ, ಹೋಮರ್ ಮಹಾಕವಿಯ "ಇಲಿಯಡ್" ಮತ್ತು "ಒಡಿಸ್ಸಿ" ಇವುಗಳ ಒಟ್ಟು ಗಾತ್ರಕ್ಕಿಂತ ಸುಮಾರು ಹತ್ತು ಪಟ್ಟು ದೊಡ್ಡದು ಮಹಾಭಾರತ. (ಇಲಿಯಡ್ ಸುಮಾರು 15,700 ಸಾಲುಗಳ ಕೃತಿ. ಒಡಿಸ್ಸಿ ಸುಮಾರು 12,100 ಸಾಲುಗಳುಳ್ಳದ್ದು. ಇವುಗಳ ಒಟ್ಟು ಗಾತ್ರ 27,800 ಸಾಲುಗಳು). ಮಹಾಭಾರತದ ಗಾತ್ರ (ಹರಿವಂಶವನ್ನೂ ಸೇರಿಸಿದರೆ) ಸುಮಾರು 2,50,000 ಸಾಲುಗಳಿಗಿಂತಲೂ ಹೆಚ್ಚು. ಹೀಗೆ ಲೆಕ್ಕಾಚಾರ. 

"ಸುಮಾರು" ಎಂದು ಏಕೆ ಹೇಳುತ್ತಾರೆ? ಸಂಸ್ಕೃತ ಕೃತಿಗಳಲ್ಲಿ ಎರಡು ಸಾಲಿನ ಮತ್ತು ನಾಲ್ಕು ಸಾಲಿನ ಶ್ಲೋಕಗಳಿರುತ್ತವೆ. ಅನೇಕ ವೇಳೆ ಮಧ್ಯೆ ಮಧ್ಯೆ ಗದ್ಯವೂ ಸೇರಿರುತ್ತದೆ. ಈ ಕಾರಣಗಳಿಗಾಗಿ. ಇದರ ಜೊತೆಗೆ ಅಚ್ಚು ಮತ್ತು ಕಾಗದದ ಮೇಲೆ ಮುದ್ರಣ ಇಲ್ಲದ ಕಾಲದಲ್ಲಿ, ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ಕೇವಲ ಬಾಯಿಪಾಠದ ಮೂಲಕ ವರ್ಗಾವಣೆ ಆಗುತ್ತಿದ್ದ ಸಮಯದಲ್ಲಿ, ಶ್ಲೋಕಗಳ ರೂಪ ಬಹಳ ಅನುಕೂಲಕರವಾಗಿತ್ತು. ಇದೇ ಕಾರಣಕ್ಕೆ ಒಂದು ಕಡೆಯ ಪಾಠದಿಂದ (ವರ್ಷನ್) ಮತ್ತೊಂದು ಕಡೆಯ ಪಾಠಕ್ಕೆ ವ್ಯತ್ಯಾಸಗಳಾಗಿ "ಪಾಠಾ೦ತರ" ಏನುವ ಕ್ರಮ ನಡೆದು ಬಂತು. 

*****

ಈ ಹಿನ್ನೆಲೆಯಲ್ಲಿ ಪುರಾಣಗಳ ವಿಸ್ತಾರವೇನು? ಇವುಗಳ ಲೆಕ್ಕ ಎಲ್ಲಿ ಸಿಗುತ್ತದೆ? ಇವು ಬಹಳ ಆಸಕ್ತಿ ಹುಟ್ಟಿಸುವ ಪ್ರಶ್ನೆಗಳು. ಹದಿನೆಂಟು ಪುರಾಣಗಳ ಖಚಿತವಾದ ಲೆಕ್ಕ ನಮಗೆ ಸಿಗುವುದು "ನಾರದ ಪುರಾಣ" ಪ್ರಾರಂಭದ ಶ್ಲೋಕಗಳಲ್ಲಿ. ಚತುರ್ಮುಖ ಬ್ರಹ್ಮನು ತನ್ನ ಮಗ ಮರೀಚಿಗೆ ತಿಳಿಸಿದಂತೆ ಹದಿನೆಂಟು ಪುರಾಣಗಳು ಮತ್ತು ಅವುಗಳ ಗಾತ್ರ ಈ ರೀತಿ ಇದೆ:

01.  ಬ್ರಹ್ಮ ಪುರಾಣ              10,000
02.  ಪದ್ಮ ಪುರಾಣ               55,000
03.  ವಿಷ್ಣು ಪುರಾಣ               23,000
04.  ವಾಯು ಪುರಾಣ            24,000 
05.  ಭಾಗವತ ಪುರಾಣ          18,000
06.  ನಾರದೀಯ ಪುರಾಣ       25,000
07.  ಮಾರ್ಕಂಡೇಯ ಪುರಾಣ    9,000
08.  ಆಗ್ನೇಯ ಪುರಾಣ           15,000
09.  ಭವಿಷ್ಯ ಪುರಾಣ             14,000
10.  ಬ್ರಹ್ಮವೈವರ್ತ ಪುರಾಣ    18,000
11.  ಲಿಂಗ ಪುರಾಣ               11,000
12.  ವರಾಹ ಪುರಾಣ             24,000
13.  ಸ್ಕಾ೦ದ ಪುರಾಣ             81,000
14.  ವಾಮನ ಪುರಾಣ            10,000
15.  ಕೂರ್ಮ ಪುರಾಣ             17,000
16.  ಮತ್ಸ್ಯ ಪುರಾಣ               14,000
17.  ಗರುಡ ಪುರಾಣ               19,000
18.  ಬ್ರಹ್ಮಾಂಡ ಪುರಾಣ          12,000

ಹದಿನೆಂಟು ಪುರಾಣಗಳು       3,99,000   

ಹದಿನೆಂಟು ಪುರಾಣಗಳ ಒಟ್ಟು ಗಾತ್ರ ನಾಲ್ಕು ಲಕ್ಷ ಶ್ಲೋಕಗಳು ಎಂದು ಹೇಳುವುದಕ್ಕೆ ಆಧಾರ ಇದು. ಇದರ ಪ್ರಕಾರ ಹದಿನೆಂಟು ಪುರಾಣಗಳ ಒಟ್ಟು ಗಾತ್ರ ರಾಮಾಯಣದ ಗಾತ್ರಕ್ಕಿಂತ ಹದಿನಾರರಷ್ಟು! ಮಹಾಭಾರತಕ್ಕಿಂತ ಮೂರುಪಟ್ಟಿಗೂ ಹೆಚ್ಚು. ಮಹಾಕವಿ ಹೋಮರನ ಕೃತಿಗಳ ಸುಮಾರು ಮೂವತ್ತೈದರಷ್ಟು. ಇಷ್ಟು ಅಗಾಧ ಹರವು ಅಷ್ಟಾದಶ ಪುರಾಣಗಳದ್ದು. 

*****

ಈ ಪುರಾಣಗಳ ಆಳ-ಅಗಲಗಳನ್ನು ಪ್ರವೇಶಿಸಿದರೆ ಧಾರ್ಮಿಕ, ಆಧ್ಯಾತ್ಮಿಕ ವಿಷಯಗಳನ್ನು ಬಿಟ್ಟೂ ಸಹ, ಜೀವನದ ಅನೇಕ ಆಯಾಮಗಳ ಬಗ್ಗೆ ಸಾವಿರಾರು ವರುಷಗಳ ಹಿಂದೆಯೇ ನಮ್ಮ ಹಿರಿಯರು ಎಷ್ಟು ಆಳವಾದ ಅಧ್ಯಯನ ನಡೆಸಿ, ಅವುಗಳ ಸಂಚಿತ ಜ್ಞಾನವನ್ನು ಹೇಗೆ ಕೂಡಿಟ್ಟಿದ್ದಾರೆ ಎಂದು ತಿಳಿಯಬಹುದು. ಒಮ್ಮೆ ಇವುಗಳನ್ನು ಓದುವುದೇ ಒಂದು ಪ್ರಯಾಸದ ಕೆಲಸ. ಇಂತಹ ಕೃತಿಗಳನ್ನು ಹೇಗೆ ರಚಿಸಿದರು, ಅವುಗಳು ಅನೇಕ ಕಠಿಣ ಸಂದರ್ಭಗಳಲ್ಲಿಯೂ ಉಳಿದುಕೊಂಡು ಇಂದಿಗೂ ನಮಗೆ ಲಭ್ಯವಿವೆ ಎನ್ನುವುದು ಒಂದು ದೊಡ್ಡ ವಿಸ್ಮಯವೇ ಸರಿ. 

ಈ ಪುರಾಣಗಳ ರಚನೆಯ ಬಗ್ಗೆ ಇರುವ ಅಭಿಪ್ರಾಯಗಳು, ಆಸಕ್ತರು ಓದಲು ಇರುವ ಅನುಕೂಲಗಳು ಮುಂತಾದ ವಿಷಯಗಳನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. 

Saturday, July 19, 2025

ಕೆಸರಿಂದ ಕೆಸರು ತೊಳೆದಂತೆ


ಮನುಷ್ಯನ ಅನೇಕ ಮತ್ತು ತೀರದ ಆಸೆಗಳಲ್ಲಿ ಜೀವನ ಸಂಪದ್ಭರಿತವಾಗಿರಬೇಕೆಂಬುದೂ ಒಂದು. ಸಕಲ ಸೌಭಾಗ್ಯಗಳೂ ಇರಬೇಕು. ಸರ್ವ ಸಂಪತ್ತುಗಳೂ ಸುತ್ತ-ಮುತ್ತ ತುಂಬಿರಬೇಕು. ಕುಟುಂಬದ ಸದಸ್ಯರೆಲ್ಲರೂ ಹೇಳಿದಂತೆ ಕೇಳುತ್ತಾ ಓಡಾಡಿಕೊಂಡಿರಬೇಕು. ದೊಡ್ಡ ಅಧಿಕಾರ ಇರಬೇಕು. ಸಮಾಜದಲ್ಲಿ ಮನ್ನಣೆ, ಗೌರವಗಳು ಸಿಗುತ್ತಿರಬೇಕು. ಹೀಗೆ ನಾನಾ ಬಗೆಯ ಅಸಂಖ್ಯ ಆಸೆಗಳು. 

ಅನೇಕ ಭಾಗ್ಯಗಳಲ್ಲಿ ಅಷ್ಟ ಐಶ್ವರ್ಯಗಳೂ ಸೇರಿದುವು. ಈ ಎಂಟರಲ್ಲಿ ಆಯುಸ್ಸು, ಅರೋಗ್ಯ ಮತ್ತು ಐಶ್ವರ್ಯಗಳು ಬೇಕಾದುವುಗಳ ಪಟ್ಟಿಯಲ್ಲಿ ಎಲ್ಲದರ ಮೇಲೆ ಕೂಡುತ್ತವೆ. ಆದರೆ ಆರೋಗ್ಯವಿದ್ದವರಿಗೆ ಕೆಲವೊಮ್ಮೆ ಆಯುಸ್ಸು ಇರುವುದಿಲ್ಲ. ಆಯುಸ್ಸು ಇದ್ದವರಿಗೆ ಬಹಳ ಅನಾರೋಗ್ಯ ಕಾಡುವುದು. ಆಯುಸ್ಸು ಮತ್ತು ಅರೋಗ್ಯ ಎರಡೂ ಇದ್ದವರಿಗೆ  ಬಡತನದ ಬವಣೆ. ಅಥವಾ ಇನ್ನೇನಾದರೂ ಒಂದಿಲ್ಲ ಎನ್ನುವ ಕೊರಗು. ಕೆಲವರಿಗೆ ಮಕ್ಕಳಿಲ್ಲ ಎನ್ನುವ ಚಿಂತೆ. ಮತ್ತೆ ಕೆಲವರಿಗೆ ಹೆತ್ತ ಮಕ್ಕಳು ಹತ್ತಿರ ಇಲ್ಲ ಅನ್ನುವ ವ್ಯಥೆ. ಮಕ್ಕಳು ಹತ್ತಿರ ಇರುವವರಿಗೆ ಅವರು ಯೋಗ್ಯರಲ್ಲ ಎನ್ನುವ ಯೋಚನೆಗಳು. ಹೀಗೆ ಏನಾದರೂ ಒಂದು ಕೊರತೆ.  

ಆಯುಸ್ಸು, ಅರೋಗ್ಯ ಮತ್ತು ಐಶ್ವರ್ಯಗಳು ಹಾಳಾಗಲು ಕಾರಣಗಳೇನು? ಈ ವಿಷಯವನ್ನು ಹಿಂದಿನ "ಸಂಪತ್ತು ಕಳೆಯುವ ಕಾರಣಗಳು" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ನೋಡಿದ್ದೆವು. ಇದನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.  ಶ್ರೀ ಗೋಪಾಲದಾಸರ "ಎನ್ನ ಬಿನ್ನಪ ಕೇಳು, ಧನ್ವಂತ್ರಿ ದಯ ಮಾಡು" ಎನ್ನುವ ದೇವರನಾಮದಲ್ಲಿ ಸೂಚಿತವಾದ ಈ ಕಾರಣಗಳ ಚರ್ಚೆ ನೋಡಿದ್ದೆವು. ಈ ಹಾಡಿನಲ್ಲಿ "ಕೆಸರಿನಿಂದ ಕೆಸರು ತೊಳೆದಂತೆ ಕರ್ಮದ ಪಥವು, ಅಸುನಾಥ ಹರಿಯೇ ಪೊರೆಯೊ" ಎನ್ನುವ ಅಭಿವ್ಯಕ್ತಿಯ ವಿಶೇಷ ವಿಷಯಗಳನ್ನು ಮುಂದೊಮ್ಮೆ ನೋಡೋಣ ಎಂದಿದ್ದೆವು. ಅದನ್ನು ಈಗ ಸ್ವಲ್ಪ ನೋಡೋಣ. 

*****

"ಕೆಸರಿನಿಂದ ಕೆಸರು ತೊಳೆದಂತೆ ಕರ್ಮದ ಪಥವು" ಅನ್ನುವುದರ ಅರ್ಥವೇನು? ಅದರ ಮೂಲ ಎಲ್ಲಿದೆ? ಯಾರಾದರೂ ಕೆಸರಿನಿಂದ ಕೊಳಕಾಗಿರುವ ವಸ್ತುವನ್ನು ಕೆಸರು ನೀರಿನಿಂದ ತೊಳೆಯುವ ತಪ್ಪು ಮಾಡುತ್ತಾರೆಯೇ? ಇವು ನಿಜವಾಗಿ ಕೇಳಲೇಬೇಕಾದ ಪ್ರಶ್ನೆಗಳು. 

ಯಾವುದೋ ಒಂದು ಕಾರಣಕ್ಕೆ ಬಟ್ಟೆ ಕೊಳಕಾಯಿತು ಅನ್ನೋಣ. ಬಿಳಿ ಬಟ್ಟೆ ಉಟ್ಟು ಹೊರಗಿನ ಕೆಲಸಕ್ಕೆ ಬಂದದ್ದಾಯಿತು. ಮಳೆ ಬಂತು. ಬಟ್ಟೆ ಕೊಳಕಾಯಿತು. ಯಾರೋ ಒಬ್ಬ ಸ್ಕೂಟರ್ ಸವಾರ ಮಳೆಯ ರಸ್ತೆಯಲ್ಲಿಯೇ ವೇಗವಾಗಿ ಹೋದ. ಅವನಿಗೆ ಅದೊಂದು ಆಟ. ನೀರು ಎರಚಿತು. ಬಟ್ಟೆ ಕೆಸರಿನಿಂದ ನೆನೆಯಿತು. ಈಗ ಮಾಡುವುದು? ಮನೆಗೆ ಹೋದಮೇಲೆ ಮೈ ಶುಚಿ ಮಾಡಿಕೊಂಡು, ಕೊಳೆಯ ಬಟ್ಟೆಯನ್ನು ತಿಳಿ ನೀರಿನಿಂದ ಒಗೆದು ಸ್ವಚ್ಛ ಮಾಡಬೇಕು. ಕೆಲವು ವೇಳೆ ಎಷ್ಟೇ ಸ್ವಚ್ಛ ಮಾಡಿದರೂ ಮೊದಲಿನಂತೆ ಬಟ್ಟೆ ಬಿಳಿ ಆಗುವುದಿಲ್ಲ. ಮೂರು-ನಾಲ್ಕು ಒಗೆತ ಆದಮೇಲೆ ಸರಿ ಹೋಗಬಹುದು. ಇಂತಹ ಸ್ಥಿತಿಯಲ್ಲಿ ಆ ಕೊಳೆಯ ಬಟ್ಟೆಯನ್ನು ಅದೇ ರಸ್ತೆಯ ಪಕ್ಕ ನಿಂತಿರುವ ಕೆಸರು ನೀರಿನಿಂದ ಒಗೆದರೆ ಹೇಗಾಗಬೇಡ? ಬಟ್ಟೆಗೆ ಮತ್ತಷ್ಟು ಕೆಸರು ಅಂಟಿಕೊಂಡು ಇನ್ನಷ್ಟು ರಾಡಿಯಾದೀತೇ ವಿನಃ ಸ್ವಚ್ಛವಂತೂ ಆಗುವುದಿಲ್ಲ. 

ಒಂದು ಗಾಜಿನ ಪಾತ್ರೆಯಲ್ಲಿ ಎಲ್ಲರಿಗೂ ಸುರೆ (ವೈನ್ ಅನ್ನೋಣ) ಹಂಚಿದ್ದಾರೆ. ಆ ಕಾರಣ ಅದಕ್ಕೆ ಸ್ವಲ್ಪ ಸುರೆ ಅಂಟಿಕೊಂಡಿದೆ. ಈಗ ಅದನ್ನು ಸ್ವಚ್ಛ ಮಾಡಬೇಕು. ಅದನ್ನು ಇನ್ನಷ್ಟು ಸುರೆ ಸುರಿದು ತೊಳೆದರೆ? ಅದು ಹೇಗೆ ಸ್ವಚ್ಛವಾದೀತು? ತಿಳಿಯಾದ ನೀರಿನಿಂದ ಮಾತ್ರ ಅದು ಶುದ್ಧವಾಗಬಲ್ಲದು. ಇಲ್ಲದಿದ್ದರೆ ಅದು ಇನ್ನಷ್ಟು ಸುರೆಯಲ್ಲಿ ಮುಳುಗೀತೇ ವಿನಃ ಶುದ್ಧವಾಗುವುದು ಸಾಧ್ಯವೇ ಇಲ್ಲ. 

ಇದು ಜೀವನದ ಒಂದು ಕಟು ಸತ್ಯ. 
*****

ಮಹಾಭಾರತದ ಪ್ರಸಂಗ. ಧರ್ಮಕ್ಷೇತ್ರ ಕುರುಕ್ಷೇತ್ರದ ಹದಿನೆಂಟು ದಿನಗಳ ಘನ ಘೋರ ಯುದ್ಧ ಮುಗಿದಿದೆ. ಹದಿನೆಂಟು ಅಕ್ಷೋಹಿಣಿ ಸೈನ್ಯ ನಾಶವಾಗಿದೆ. ಎಲ್ಲರ ಮನೆಯಲ್ಲೂ ಯಾರೋ ಒಬ್ಬರಾದರೂ ಯುದ್ಧದಲ್ಲಿ ಸತ್ತಿದ್ದಾರೆ. ಕೆಲವರ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಯುದ್ಧದ ನಂತರ ಇಲ್ಲವಾಗಿದ್ದಾರೆ. ಎಲ್ಲೆಲ್ಲೂ ಸೂತಕದ ಛಾಯೆ. ದ್ರೋಣ, ಕರ್ಣ, ಅಭಿಮನ್ಯು, ನೂರು ಮಂದಿ ಕೌರವರು, ಶಲ್ಯ, ಶಕುನಿ, ಮತ್ತನೇಕ ವೀರರು ಸ್ವರ್ಗಸ್ಥರಾದರು. 

ಮುಂದಿನ ಜೀವನ ನಡೆಯಬೇಕಲ್ಲ. ಯುಧಿಷ್ಠಿರನಿಗೆ ಪಟ್ಟಾಭಿಷೇಕವಾಯಿತು. ಅಷ್ಟು ದುಃಖದಲ್ಲಿ ಒಂದಷ್ಟು ಸುಖ. ಜೀವನವೇ ಹೀಗೆ. ಸುಖ-ದುಃಖಗಳು ಜೊತೆ ಜೊತೆ. ಅದಕ್ಕೇ ಯುಗಾದಿಯಂದು ಬೇವು-ಬೆಲ್ಲ ತಿನ್ನುವುದು. ಪಟ್ಟಾಭಿಷೇಕದ ಸಂಭ್ರಮದಲ್ಲೂ ಧರ್ಮರಾಯನಿಗೆ ಸಂತೋಷವಿಲ್ಲ. ಇಷ್ಟೊಂದು ಮಂದಿ ಬಂಧು-ಬಾಂಧವರನ್ನು, ಅದೆಷ್ಟೋ ಅಣ್ಣ-ತಮ್ಮಂದಿರ ಜಗಳಕ್ಕೆ ಸಂಬಂಧಿಸದ ಅಮಾಯಕರನ್ನು ಸೇರಿಸಿ, ಕೊಂದು ಸಂಪಾದಿಸಿದ ಸಾಮ್ರಾಜ್ಯ. ಇಲ್ಲಿ ತಲೆಯ ಮೇಲೆ ಕಿರೀಟ ಬಂದು ಕೂತಿದೆ. ಅಲ್ಲಿ ತಾತ ಭೀಷ್ಮರು ಚೂಪು ಬಾಣಗಳ ಮಂಚದ ಮೇಲೆ ಮಲಗಿದ್ದಾರೆ. ಯಾವ ಸುಖಕ್ಕೆ ಈ ರಾಜ್ಯ-ಕೋಶಗಳು? ಅವನಿಗೆ ತಡೆಯಲಾಗದ ದುಗುಡ-ದುಮ್ಮಾನ. ಪಾರ್ಥನಿಗೆ ಯುದ್ಧಕ್ಕೆ ಮೊದಲು ಕ್ಲೈಬ್ಯ ಬಂದಿತು. ಧರ್ಮರಾಯನಿಗೆ ಯುದ್ಧದ ನಂತರ ಬಂದಿದೆ. 

ಶ್ರೀ ಕೃಷ್ಣನ ಮುಂದೆ ದುಃಖ ತೋಡಿಕೊಳ್ಳುತ್ತಾನೆ. ಶ್ರೀಕೃಷ್ಣ ಅವನನ್ನು ಸಮಾಧಾನ ಪಡಿಸುತ್ತಾನೆ. ಒಂದು ಚಿಕ್ಕ ಗೀತೋಪದೇಶ ಅವನಿಗೂ ಆಗುತ್ತದೆ. ಆದರೆ ಯುಧಿಷ್ಠಿರನಿಗೆ ಸಮಾಧಾನವಿಲ್ಲ. ಶ್ರೀಕೃಷ್ಣನು ಅವನಿಗೆ ಅಶ್ವಮೇಧ ಯಾಗ ಮಾಡಲು ಸೂಚಿಸುತ್ತಾನೆ. ಅದರಿಂದ ಅವನು ಯುದ್ಧದಿಂದ ಬಂದಿದೆ ಅಂದುಕೊಂಡ ಪಾಪಗಳು ತೊಳೆದುಹೋಗುತ್ತವೆ. ಹೀಗೆಂದು ಯಾಗ ಮಾಡಲು ಸೂಚನೆ. 

ಇದಕ್ಕೆ ಉತ್ತರವಾಗಿ ಧರ್ಮರಾಯನು ಹೇಳಿದ್ದನ್ನು ಶ್ರೀಮದ್ ಭಾಗವತದ (1.8.52) ಶ್ಲೋಕ ಹೀಗೆ ಹೇಳುತ್ತದೆ:

ಯಥಾ ಪಂಕೇನ ಪಂಕಾಂಭ: 
ಸುರಯಾ ವಾ ಸುರಾಕೃತಂ 
ಭೂತಹತ್ಯಂ ತಥೈವಕಂ
ನ್ ಯಜ್ನಯಿ ಮರ್ತುಮರ್ಹತಿ    
 
 
"ಹೇಗೆ ಕೆಸರನ್ನು ಕೆಸರಿನಿಂದ ತೊಳೆಯಲಾಗದೋ, ಮತ್ತು ಹೇಗೆ ಮದ್ಯಪಾತ್ರೆಯನ್ನು ಮದ್ಯದಿಂದ ಶುದ್ಧಿಮಾಡಲಾಗದೋ, ಹಾಗೆಯೇ ಮನುಷ್ಯರನ್ನು ಕೊಂದ ಪಾಪಗಳನ್ನು ಪ್ರಾಣಿಗಳನ್ನು ಬಲಿ ಕೊಟ್ಟು ಕಳೆದುಕೊಳ್ಳಲಾಗದು" 

ಧರ್ಮರಾಯನ ಈ ದುಃಖ ಶಮನವಾಗುವ ಮುನ್ನ ರಣರಂಗದಲ್ಲಿ ಶರಶಯ್ಯೆಯಲ್ಲಿ ಮಲಗಿರುವ ಭೀಷ್ಮರನ್ನು ನೋಡಲು ಎಲ್ಲರೂ ಹೋಗುತ್ತಾರೆ. ಅಲ್ಲಿ ಭೀಷ್ಮರು ಧರ್ಮರಾಯನಿಗೆ ಅನೇಕ ವಿಷಯಗಳ ಬಗ್ಗೆ ವಿವಿಧ ರೀತಿಯಲ್ಲಿ ತಿಳಿಸಿಕೊಡುತ್ತಾರೆ. ನಂತರ ಅವನು ಅಶ್ವಮೇಧ ಯಾಗ ಮಾಡುತ್ತಾನೆ. ಈ ವಿವರಗಳೆಲ್ಲ ಮಹಾಭಾರತದಲ್ಲಿ ಅಶ್ವಮೇಧ ಪರ್ವದಲ್ಲಿ ಸಿಗುತ್ತವೆ. 

 ***** 

ಹರಿದಾಸರ ಪದ, ಸುಳಾದಿ, ಉಗಾಭೋಗಗಳಲ್ಲಿ ಬರುವ ಪದಪುಂಜಗಳಲ್ಲಿ ವೈದಿಕ ವಾಂಗ್ಮಯದ ತಿರುಳಿನ ಸೂಚನೆಗಳು ಇರುತ್ತವೆ. ನೋಡುವುದಕ್ಕೆ, ಕೇಳುವುದಕ್ಕೆ ಆಡುಭಾಷೆಯ ಮಾತಾಗಿದ್ದರೂ ಅವುಗಳ ಹಿಂದೆ ಗಾಢವಾದ ಚಿಂತನೆ ಇರುವುದು. ಈ "ಕೆಸರಿನಿಂದ ಕೆಸರು ತೊಳೆದಂತೆ" ಅನ್ನುವುದು ಹೀಗೆಯೇ ಶ್ರೀಮದ್ ಭಾಗವತದ ಮೇಲೆ ಹೇಳಿದ ಶ್ಲೋಕದ ಸಾರಾಂಶವನ್ನು ಹೇಳುವ ರೀತಿ. ವಿಶಾಲ ವಾಂಗ್ಮಯದ ಆಳವಾದ ಪರಿಚಯ ಆಗುತ್ತಿದ್ದಂತೆ ಅವೇ ಪದ, ಸುಳಾದಿಗಳ ವಿಶೇಷಾರ್ಥಗಳು ತೆರೆದುಕೊಳ್ಳುತ್ತವೆ.  

ಪ್ರತಿ ಜೀವಿ ಹುಟ್ಟುವಾಗ ಅವನ (ದೇಹ ಗಂಡಾಗಿರಬಹುದು ಅಥವಾ ಹೆಣ್ಣಾಗಿರಬಹುದು) ಜೊತೆ ಪರಮಾತ್ಮನೂ ಮತ್ತು ಮುಖ್ಯ ಪ್ರಾಣನು ಜನಿಸುತ್ತಾರೆ. ಅವರಿಬ್ಬರೂ ಇರುವವರೆಗೆ ಜೀವನ ಈ ದೇಹದಲ್ಲಿಯ ಜೀವನಯಾತ್ರೆ. ಅವರು ದೇಹ ಬಿಟ್ಟು ಹೊರಟರೆ ವ್ಯಾಪಾರ ಮುಗಿಯಿತು. (ಸಾಮಾನ್ಯ ವ್ಯವಹಾರದಲ್ಲಿ ವ್ಯಾಪಾರ ಎಂದರೆ ಕೊಡು-ಕೊಳ್ಳುವಿಕೆಯ ರೀತಿ, ವ್ಯಾಪಾರಕ್ಕೆ ಇಲ್ಲಿ ಚಟುವಟಿಕೆ (ಆಕ್ಟಿವಿಟಿ) ಎಂದು ಅರ್ಥ).  ಪ್ರಾಣವಾಯು (ಅಸು) ಆಡುವುದು ನಿಂತರೆ "ಅಸು ನೀಗಿದರು" ಎನ್ನುತ್ತಾರೆ. ಆದ್ದರಿಂದ ಆ ಪರಮಾತ್ಮನಿಗೆ "ಅಸುನಾಥ"ಎಂದು ಹೇಳುವುದು. ಉಸಿರು ಎನ್ನುವ ಆಸುವಿಗೆ ಅಥವಾ ಪ್ರಾಣನಿಗೆ ಒಡೆಯ ಆದುದರಿಂದ ಅಸುನಾಥ, ಪ್ರಾಣನಾಥ ಅಥವಾ ಪ್ರಾಣೇಶ. 

*****

"ದುಷ್ಕರ್ಮ ಪರಿಹರಿಸೋ" ಅನ್ನುವುದನ್ನು ಮತ್ತು ಅಂಟಿಕೊಂಡ ಕೊಳೆಯನ್ನು ತೊಳೆಯಲು ಏನು ಮಾಡಬೇಕೆನ್ನುವುದನ್ನು ಮುಂದಿನ ಒಂದು ಸಂಚಿಕೆಯಲ್ಲಿ ನೋಡೋಣ.

Tuesday, July 1, 2025

ಏಕಾದಶಿಯ ದಿನ ಹಾಲು-ಹಣ್ಣು ಸೇವಿಸಿ


ಹಿಂದಿನ ಸಂಚಿಕೆಯಲ್ಲಿ, "ಮನವ ಕಬ್ಬಿಣ ಮಾಡು, ಹೇ ಮೃಡನೇ!" ಎಂಬ ಶೀರ್ಷಿಕೆಯ ಅಡಿಯಲ್ಲಿ, "ಸಂದರ್ಭ ನೋಡಿ ಮಾತುಗಳಿಗೆ ಅರ್ಥ ಮಾಡಬೇಕು" ಎನ್ನುವ ವಿಷಯವನ್ನು ಎರಡು ಬಾರಿ ನೋಡಿದ್ದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ಸಂದರ್ಭ ನೋಡಿ ಮಾತುಗಳಿಗೆ ಅರ್ಥ ಮಾಡಬೇಕು ಎನ್ನುವುದು ಎಲ್ಲ ಕಾಲಗಳಿಗೂ ಒಪ್ಪುವ, ತಪ್ಪಿಸಲಾಗದ, ತಪ್ಪಿಸಬಾರದಾದ ಅವಶ್ಯಕತೆ. ಯಾವುದೇ ಒಂದು ಸಂದರ್ಭದ ಅರ್ಥದ ತಿಳುವಳಿಕೆಗೆ ಆಯಾ ಗ್ರಂಥದ ಎಲ್ಲ ಭಾಗಗಳನ್ನೂ ಪೂರ್ತಿಯಾಗಿ ಓದಿ, ಹಿಂದು ಮುಂದಿನ ಭಾಗಗಳನ್ನು ಸಮನ್ವಯ ಮಾಡಿ, ನಂತರ ಅರ್ಥಗಳನ್ನು ಗ್ರಹಿಸಬೇಕು. ಯಾವುದೋ ಗ್ರಂಥದ ಒಂದು ಅಧ್ಯಾಯ ಓದಿ, ಅದರ ಹಿಂದೆ ಮುಂದೆ ತಿಳಿಯದೆ, ಸಂದರ್ಭಗಳ ಅರ್ಥ ತಿಳಿಯುವುದು ಬಹಳ ಅಪಾರ್ಥಕ್ಕೆ ದಾರಿ ಮಾಡುತ್ತದೆ. ಇದು ಕೃತಿಗಳನ್ನು ಓದದೇ ಇರುವುದಕ್ಕಿಂತಲೂ ಹೆಚ್ಚು ಅಪಾಯಕಾರಿ. ತುಂಬಾ ಆಳವಾದ ವಿಷಯಗಳಲ್ಲಂತೂ ಕೇವಲ ಆ ಒಂದು ಗ್ರಂತಹವನ್ನಲ್ಲ; ಅದಕ್ಕೆ ಸಂಬಂಧಿಸಿದಂತಹ ಇತರೆ ವಾಂಗ್ಮಯವನ್ನೂ ಅವಲೋಕಿಸಿ ಅರ್ಥಗಳನ್ನು ತಿಳಿಯುವ ಅವಶ್ಯಕತೆ ಇರುತ್ತದೆ. ಇಲ್ಲದಿದ್ದರೆ "ಎತ್ತು ಈಯಿತು ಅಂದರೆ ಕರು ಕೊಟ್ಟಿಗೆಯಲ್ಲಿ ಕಟ್ಟು" ಎನ್ನುವ ಗಾದೆಯಂತೆ ಅಪಾರ್ಥಕ್ಕೆ ಎಡೆಗೊಡುತ್ತದೆ. ಎತ್ತು ಕರು ಹಾಕುವುದಿಲ್ಲ ಎಂದು ತಿಳುವಳಿಕೆ ಇರುವವನು "ಎತ್ತು ಈಯಿತು" ಅಂದ ತಕ್ಷಣ ನಕ್ಕು ಸುಮ್ಮನಾಗುತ್ತಾನೆ. ಕರುವಿನ ಬಗ್ಗೆ ಯೋಚಿಸುವ ಪ್ರಸಂಗವೇ ಬರುವುದಿಲ್ಲ. 

ಈ ಸೂತ್ರವನ್ನು ಚೆನ್ನಾಗಿ ಅರಿಯಲು ಒಂದು ಉದಾಹರಣೆಯನ್ನು ನೋಡೋಣ. 

*****

ಸಾಮಾನ್ಯವಾಗಿ ನಮ್ಮ ಸಂಪ್ರದಾಯಗಳನ್ನು ಸ್ವಲ್ಪಮಟ್ಟಿಗೆ ತಿಳಿದ ಎಲ್ಲರಿಗೂ "ಏಕಾದಶಿ" ಅಂದ ತಕ್ಷಣ ನೆನಪಿಗೆ ಬರುವುದು "ಉಪವಾಸ". ಅನೇಕರು ಏಕಾದಶಿ ಉಪವಾಸ ಅಂದರೆ "ಪಕ್ಕದ್ಮನೆ ಸುಬ್ಬಮ್ಮನಿಗೆ ಇಂದು ಏಕಾದಶಿ ಉಪವಾಸ" ಹಾಡನ್ನು ಜ್ಞಾಪಿಸಿಕೊಂಡು, ಅಲ್ಲಿ ಬರುವ ತಿಂಡಿಗಳ ಪಟ್ಟಿಯನ್ನು ನೋಡಿ, ಪ್ರತಿದಿನ ಏಕಾದಶಿ ಯಾಕೆ ಆಗಬಾರದು ಎಂದು ಆತಂಕ ಪಡಬಹುದು. ಕೆಲವರು ಏಕಾದಶಿ ಉಪವಾಸ ಮಾಡುತ್ತಾರೆ. ಇನ್ನು ಕೆಲವರು ಆ ರೀತಿ ಉಪವಾಸ ಮಾಡುವವರನ್ನು ಅಪಹಾಸ್ಯ ಮಾಡುತ್ತಾರೆ. ತಮಾಷೆಯ ಸಂಗತಿಯೆಂದರೆ ಅನೇಕರಿಗೆ ಇದು ಒಂದು ವ್ರತ ಎಂದು ಗೊತ್ತಿಲ್ಲ. ಗೊತ್ತಿದ್ದವರಿಗೂ ಅದರ ಪೂರ್ತಿ ಆಚರಣೆ ಗೊತ್ತಿಲ್ಲ. 

ಯಾವುದಾದರೂ ರೆಸ್ಟೋರೆಂಟ್ ಬಳಿ ಸಂಜೆ ಎಂಟರ ನಂತರ ಹೋದವರಿಗೆ ಅಲ್ಲಿ ನಡೆಯುವ ಚಟುವಟಿಕೆಗಳ ಪರಿಚಯ ಇರುತ್ತದೆ. ಬೆಳಗ್ಗಿನಿಂದ ನಿಲ್ಲದ ಚಟುವಟಿಕೆ ಆದ ನಂತರ, ಗ್ರಾಹಕರ ಸೇವೆ ಮುಗಿದ ಮೇಲೆ, ಅಂದಿನ ದಿನ ಬಾಗಿಲು ಮುಚ್ಚುವ ಮುಂಚೆ ಕೆಲವು ದೈನಿಕ ಕೆಲಸಗಳಿರುತ್ತವೆ. ಅಡಿಗೆ ಮನೆಯವರಿಗೆ ಮಿಕ್ಕ ಪದಾರ್ಥಗಳನ್ನು ಕೆಡದಂತೆ ಎತ್ತಿಟ್ಟು, ಪಾತ್ರೆಗಳನ್ನು ಶುಚಿ ಮಾಡಿ ಒರೆಸಿಟ್ಟು, ಮಾರನೆಯ ದಿನದ ಅಡಿಗೆಗೆ ನೆನೆಹಾಕುವ ಪದಾರ್ಥಗಳ ಕೆಲಸ ಮುಗಿಸಿ, ಎಲ್ಲ ತಯಾರಿ  ಮಾಡಿದಮೇಲೆ ವಿಶ್ರಾಂತಿ. ಸರ್ವರ್ ಮತ್ತು ಕ್ಲೀನರುಗಳಿಗೆ ಮೇಜಿನ ಮೇಲೆ ಕುರ್ಚಿಗಳನ್ನು ಮಗುಚಿಹಾಕಿ, ಎಲ್ಲ ಸಂದಿಗಳನ್ನೂ ಗುಡಿಸಿ, ನೀರಿನಿಂದ ತೊಳೆದು, ಜಾಗ ಒಣಗಿಸಿ, ಮಾರನೆಯ ದಿನಕ್ಕೆ ಗ್ರಾಹಕರನ್ನು ಎದುರುಗೊಳ್ಳಲು ಸಿದ್ಧ ಮಾಡಿಡಬೇಕು. ಬೆಳಗ್ಗೆ ಆರು ಗಂಟೆಗೆ ಮೊದಲ ಗ್ರಾಹಕ ಬರುವ ವೇಳೆಗೆ ಎಲ್ಲಾ ತಯಾರಾಗಿರಬೇಕು. 

ಪ್ರತಿ ಮನೆಯಲ್ಲಿಯೂ ಗೃಹಿಣಿ ಅಥವಾ ಅಡಿಗೆ ಮನೆ ನೋಡಿಕೊಳ್ಳುವವರು ಈ ಕೆಲಸ ಪ್ರತಿದಿನ ಮಾಡುತ್ತಾರೆ. ಸ್ವಲ್ಪ ಪಾಲುಮಾಲಿಕೆ ಪಟ್ಟರೂ (ಈ ಪದ ಈಗ ಮರೆತೇಹೋಗಿದೆ) ಸಹ ಮನೆಮಂದಿಯ ಆರೋಗ್ಯದ ಮೇಲೆ ನೇರ  ಪರಿಣಾಮ ಆಗುತ್ತದೆ. ಜೊತೆಗೆ ಅಡಿಗೆ ಪದಾರ್ಥಗಳ ಅಪವ್ಯಯವಾಗಿ ಮನೆಯ ಆಯ-ವ್ಯಯ ಏರುಪೇರಾಗುತ್ತದೆ. ಮಾರನೆಯ ದಿನ ಬೆಳಿಗ್ಗೆ ಕೆಲಸ ಮಾಡುವಾಗ ಎಡಚೆಡಚು (ತಾಳ-ಮೇಳ ತಪ್ಪುವುದು) ಆಗುತ್ತದೆ. 

ನಮ್ಮ ದೇಹದಲ್ಲೂ ಇದೇ ರೀತಿಯ ವ್ಯವಸ್ಥೆ ಉಂಟು. ಜಠರ, ಸಣ್ಣ ಕರುಳು, ದೊಡ್ಡ ಕರುಳು ಮೊದಲಾದ ಜೀರ್ಣಾಂಗಗಳಿಗೂ ಆಗಾಗ ಸ್ವಲ್ಪ ವಿಶ್ರಾಂತಿ ಬೇಕು. ಭಾನುವಾರ ದಣಿದ ದೇಹಕ್ಕೆ ವಿಶ್ರಾಂತಿ ಬೇಕು ಎಂದು ಜಗಳವಾಡುವವರೂ ಹೊಟ್ಟೆಗೆ ವಿಶ್ರಾಂತಿ ಕೊಡಲು ತಯಾರಿರುವುದಿಲ್ಲ. ಕ್ರಮವಾದ ಉಪವಾಸ ಜೇರ್ಣೇ೦ದ್ರಿಯಗಳಿಗೆ ಈ ರೀತಿಯ ವಿಶ್ರಾಂತಿ ಕೊಡುತ್ತದೆ. ಏಕಾದಶಿ ಉಪವಾಸ ಈ ಕೆಲಸ ಮಾಡುತ್ತದೆ. ಈಗಿನ ತಲೆಮಾರಿನವರು ಇದನ್ನು ಬಿಟ್ಟು "ಇಂಟರ್ಮಿಟೆಂಟ್ ಫಾಸ್ಟಿಂಗ್" ಮತ್ತು "ಡಬ್ಬಿಯ ಆಹಾರ" ಮೊರೆ ಹೋಗುತ್ತಿರುವುದು ಒಂದು ವಿಪರ್ಯಾಸ. 

*****

ಏಕಾದಶಿ ಉಪವಾಸ ಒಂದು ದಿನದ ಕಟ್ಟಲೆಯಲ್ಲ. ಅದು ಮೂರು ದಿನದ ಒಂದು ವ್ರತ. ನವಮಿ ಎರಡು ಹೊತ್ತು ಊಟ ಮಾಡಬಹುದು. ಏಕಾದಶಿಯ ಹಿಂದಿನ ದಿನ, ದಶಮಿಯಂದು ಒಂದೇ ಹೊತ್ತಿನ ಊಟ. ರಾತ್ರಿ ಏನೂ ತಿನ್ನುವ ಹಾಗಿಲ್ಲ. (ಇದಕ್ಕೆ "ದಶಮಿ ಏಕಭುಕ್ತ" ಅನ್ನುತ್ತಾರೆ). ಎರಡನೆಯ ದಿನ ಏಕಾದಶಿಯಂದು ಪೂರ್ತಿ ಉಪವಾಸ. ಉಪವಾಸ ಎಂದರೆ ಉಪವಾಸವೇ. ನೀರನ್ನೂ ಕುಡಿಯುವಹಾಗಿಲ್ಲ. (ಇದಕ್ಕೆ "ನಿರ್ಜಲ ಏಕಾದಶಿ" ಅನ್ನುತ್ತಾರೆ). ಮೂರ್ನಾಲ್ಕು ತರಹ ತಿಂಡಿಗಳನ್ನೋ, ಎರಡು-ಮೂರು ಲೀಟರು ಹಾಲನ್ನೋ, ಮೂರು-ನಾಲ್ಕು ಕೆಜಿ ಹಣ್ಣನ್ನೋ ಸೇವಿಸುವುದಲ್ಲ. (ಎಂದೋ ಮಾಡಿಟ್ಟ ಚಕ್ಕುಲಿ-ಕೋಡುಬಳೆ-ರವೆಉಂಡೆ ಮುಂತಾದುವನ್ನು ನೋಡಲೇಬಾರದು). ಮೂರನೆಯ ದಿನ ದ್ವಾದಶಿ ಬೆಳಿಗ್ಗೆ ಬೇಗನೆ ಗೊತ್ತಾದ ಹೊತ್ತಲ್ಲಿ (ಸೂರ್ಯೋದಯದ ವೇಳೆಯಲ್ಲಿ) ಊಟ ಮಾಡುವುದು. ಇದಕ್ಕೆ "ಪಾರಣೆ" ಎನ್ನುತ್ತರೆ. ಹೀಗೆ ದ್ವಾದಶಿ ಪಾರಣೆ ಮಾಡಿದಮೇಲೆ ರಾತ್ರಿ ಊಟವಿಲ್ಲ. ಮತ್ತೆ ಮಾರನೆಯ ದಿನ (ತ್ರಯೋದಶಿ) ಮಧ್ಯಾಹ್ನ ಮತ್ತು ರಾತ್ರಿ ಊಟ ಮಾಡಬಹುದು. 

ಇದಲ್ಲದೆ, ದೇವರ ನೈವೇದ್ಯವಲ್ಲದ ಯಾವ ಪದಾರ್ಥವನ್ನೂ ತಿನ್ನುವಹಾಗಿಲ್ಲ. ಊಟಗಳ ಮಧ್ಯೆ (ಮಧ್ಯೇ ಮಧ್ಯೇ ಪಾನೀಯಂ ಸಮರ್ಪಯಾಮಿ ಅನ್ನುವಂತೆ) ಸ್ವಲ್ಪ ಸ್ವಲ್ಪ ಅದು-ಇದು ಎಂದು ತಿನ್ನುವ-ಕುಡಿಯುವ ಹಾಗಿಲ್ಲ. ಪಾರಣೆಯಂದು (ಪೂರ್ತಿ ಏಕಾದಶಿ ವ್ರತ ಕಾಲದಲ್ಲಿಯೂ) ಈರುಳ್ಳಿ-ಆಲೂಗಡ್ಡೆ-ಬದನೇಕಾಯಿ, ಜೊತೆಗೆ ಒಂದಷ್ಟು ಹಲಸಂದೆಕಾಳು ಸೇರಿಸಿ, ಹುಳಿ ಮಾಡಿಸಿ ಹೊಡೆಯುವಹಾಗಿಲ್ಲ. ವರುಷಕ್ಕೆ ನಾಲ್ಕು ತಿಂಗಳು "ಚಾತುರ್ಮಾಸ" ಕಾಲದಲ್ಲಿ ಆ ವ್ರತದ ನಿಯಮ ಕೂಡ ಪಾಲಿಸಬೇಕು. ಒಂದು ತಿಂಗಳು ಹಾಲು ಏಪಯೋಗಿಸಬಾರದು. ಒಂದು ತಿಂಗಳು ಮೊಸರಿಲ್ಲ. (ಮಜ್ಜಿಗೆ ಆಗಬಹುದು!). ಒಂದು ತಿಂಗಳು ತರಕಾರಿಗಳಿಲ್ಲ. (ತರಕಾರಿ ಇಲ್ಲದ ತಿಂಗಳಲ್ಲಿ ಮೆಣಸಿನಕಾಯಿ ಉಪಯೋಗ ಇಲ್ಲ. ಖಾರಕ್ಕೆ ಬರೀ ಮೆಣಸು).  ಒಂದು ತಿಂಗಳು ಬೇಳೆ-ಕಾಳು ಇಲ್ಲ. (ವಡೆ-ಆಂಬೊಡೆ ಮಾಡುವಂತಿಲ್ಲ. ಮಾಡಲೇಬೇಕಾದರೆ ಅಕ್ಕಿ ವಡೆ ಮಾಡಬಹುದು). ಏಕಾದಶಿ ವ್ರತದ ಕ್ರಮ ಹೀಗೆ. ಕೆಲವೊಮ್ಮೆ ಎರಡೆರಡು ಏಕಾದಶಿ ಬರುವುದುಂಟು. ಹೆದರಬೇಕಿಲ್ಲ. ಇದು ಸುಮಾರು ಮೂರು ವರುಷಗಳಿಗೆ ಒಂದು ಬಾರಿ ಮಾತ್ರ. 

"ಏಕಾದಶಿ ಮನೆಗೆ ಶಿವರಾತ್ರಿ ಬಂದಂತೆ" ಎಂದು ಒಂದು ಗಾದೆ. "ದುರ್ಭಿಕ್ಷದಲ್ಲಿ ಅಧಿಕ ಮಾಸ ಬಂದಂತೆ" ಎಂದು ಮತ್ತೊಂದು ಗಾದೆ. ಮೊದಲೇ ಖರ್ಚಿಗೆ ಕಾಸಿಲ್ಲದಿದ್ದಾಗ ಹೆಚ್ಚಿನ ವೆಚ್ಚದ ಬಾಬ್ತು ಬಂದಾಗ ಈ ಗಾದೆಗಳನ್ನು ಹೇಳುತ್ತಾರೆ. "ದುರ್ಭಿಕ್ಷದ ಅಧಿಕ ಮಾಸದ ಎರಡು ಏಕಾದಶಿಯಲ್ಲಿ ಶಿವರಾತ್ರಿ ಬಂದಂತೆ" ಎಂದು ಸದ್ಯ ಗಾದೆಯಿಲ್ಲ. (ಶಿವರಾತ್ರಿ ಏಕಾದಶಿಯಂದು ಬರುವುದು ಗಾದೆಯಲ್ಲಿ ಮಾತ್ರ. ನಿಜ ಜೀವನದಲ್ಲಿ ಇದು ಆಗುವುದಿಲ್ಲ). 
*****

ಮುಕುಂದರಾಯರು ದೊಡ್ಡ ಅಧಿಕಾರದ ಹುದ್ದೆಯಲ್ಲಿದ್ದು ನಿವೃತ್ತರಾದರು. ಬಹಳ ಪ್ರಯತ್ನ ಪಟ್ಟರೂ ಎಲ್ಲಿಯೂ ಎರಡನೇ ಕೆಲಸ ಸಿಗಲಿಲ್ಲ. ವಿಧಿಯಿಲ್ಲದೇ ದೇವರ ಬೆನ್ನುಹತ್ತಿದರು. ಯಾರೋ ಬಂಧುಗಳು ಸಂಜೆ ದೇವಸ್ಥಾನದಲ್ಲಿ ಏಳು ಗಂಟೆಯಿಂದ ಎಂಟು ಗಂಟೆವರೆಗೆ ನಡೆಯುವ "ಪುರಾಣ" ಬಹಳ ಒಳ್ಳೆಯದು ಎಂದು ಹೇಳಿದರು. ಮುಕುಂದರಾಯರು ಹೊರಡಲು ತಯಾರಾದರು. ಕೆಲಸದಲ್ಲಿದ್ದಾಗ ಕಾರಿತ್ತು. ಈಗ ಸಿಟಿ ಬಸ್ಸಿನಲ್ಲಿ ಹೋಗಬೇಕು. ಮೊದಲ ದಿನ ಪುರಾಣಕ್ಕೆ ಹೊರಟು ಬಸ್ಸು ಹಿಡಿದು ದೇವಸ್ಥಾನ ತಲುಪುವುದರಲ್ಲಿ ಏಳು ಮುಕ್ಕಾಲು ಗಂಟೆ ಆಯಿತು. ಕಡೆಗೆ ಕೂಡಲು ಜಾಗ ಸಿಗದೇ ಒಂದೆಡೆ ನಿಂತುಕೊಂಡೇ ಕಡೆಯ ಹದಿನೈದು ನಿಮಿಷದ ಪುರಾಣ ಕೇಳಿದರು. 

ಪುರಾಣೀಕರು ಮಾರನೆಯ ದಿನ ವೈಕುಂಠ ಏಕಾದಶಿಯ ಕಾರಣ ಏನು ಮಾಡಬೇಕೆಂದು ವಿವರಿಸುತ್ತಿದ್ದರು. "ನಾಳೆ ವೈಕುಂಠ ಏಕಾದಶಿ ಒಂದು ಪರ್ವಕಾಲ. ನಾನು ವಿವರಿಸಿದಂತೆ ಉಪವಾಸವಿದ್ದು, ಹಾಲು-ಹಣ್ಣು ಚೆನ್ನಾಗಿ ಸೇವಿಸಿ, ದೇವರನಾಮ-ಸ್ತೋತ್ರಾದಿಗಳನ್ನು ಹೇಳಿಕೊಂಡು ಕಾಲ ಕಳೆಯಬೇಕು. ಭೋಜನ ಮಾಡಬಾರದು ಎಂದು ಬೇರೆ ಹೇಳಬೇಕಿಲ್ಲ. ಅವಕಾಶವಿದ್ದವರು ದೇವಾಲಯಗಳಿಗೆ ಅವಶ್ಯ ಹೋಗಿ ದೇವರ ದರ್ಶನ ಪಡೆಯಬೇಕು. ನಾಳೆ ಎಂದಿನಂತೆ ಏಳು ಘಂಟೆಯಿಂದ ಎಂಟು ಘಂಟೆವರೆಗೆ ಇಲ್ಲಿಯೂ ಹಾಲು-ಹಣ್ಣಿಗೆ ವ್ಯವಸ್ಥೆ ಮಾಡಿದೆ. ತಪ್ಪದೇ ಬಂದು ಭಾಗವಹಿಸಿ" ಎಂದು ಹೇಳಿ ಅಂದಿನ ಪ್ರವಚನ ಮುಗಿಸಿದರು. ರಾಯರು ಮನೆಗೆ ಬಂದರು. 

ರಾಯರಿಗೆ ಹಾಲು-ಹಣ್ಣಿನಲ್ಲಿ ದಿನ ಕಳೆದು ಗೊತ್ತಿಲ್ಲ. ಆದರೂ ಅದನ್ನು ಪಾಲಿಸಬೇಕೆಂದು ತೀರ್ಮಾನಿಸಿದರು. ಮನೆಯಲ್ಲಿ ಎಲ್ಲರೂ ಪರ ಊರಿಗೆ ಹೋಗಿ ಅವರು ಒಬ್ಬರೇ ಉಳಿದಿದ್ದರು. ಬೆಳಗ್ಗೆ ಹಾಲಿನಂಗಡಿಗೆ ಹೋದಾಗ ಅಂಗಡಿಯವನು "ಸ್ವಾಮಿ, ಇಂದು ಹಾಲಿಗೆ ಬಹಳ ಬೇಡಿಕೆ. ಎಲ್ಲಾ ಖರ್ಚಾಗಿದೆ. ಐದು ಲೀಟರಿನ ಒಂದು ಪ್ಯಾಕೆಟ್ ಮಾತ್ರ ಇದೆ" ಅಂದ. ರಾಯರು ಅದನ್ನು ಕೊಂಡರು. ಹಣ್ಣಿನ ಅಂಗಡಿಯಲ್ಲಿಯೂ ಎಲ್ಲಾ ಖಾಲಿ ಖಾಲಿ. ಕಡೆಗೆ ಒಂದು ಹಲಸಿನ ಹಣ್ಣು, ಒಂದು ಕಲ್ಲಂಗರೇ ಹಣ್ಣು, ಸ್ವಲ್ಪ  ಮೂಸಂಬಿ, ಬಾಳೆಹಣ್ಣು ಸಿಕ್ಕಿತು. ಅವರ ಹೆಂಡತಿ ಯಾವಾಗಲೋ "ಐದು ತರಹದ ಹಣ್ಣು" ಎಂದು ಹೇಳಿದ್ದುದು ನೆನಪಿಗೆ ಬಂತು. ಕಷ್ಟಪಟ್ಟು ಇನ್ನೊಂದು ಅಂಗಡಿಯಲ್ಲಿ ಒಂದು ಚಕ್ಕೋತ ಕೊಂಡರು. ಇವುಗಳ ಭಾರವನ್ನು ಹೊತ್ತು ಮನೆಗೆ ಬಂದರು.

ಸ್ನಾನ ಮಾಡಿ ಹಲಸಿನ ಹಣ್ಣು ಹೆಚ್ಚಿದರು. ಹಾಲು ದೊಡ್ಡ ಪಾತ್ರೆಯಲ್ಲಿ ಜಾಗರೂಕರಾಗಿ ಉಕ್ಕದಂತೆ  ಕಾಯಿಸಿದರು. ಬಾಳೆಯ ಹಣ್ಣಿನ ಜೊತೆ ಹಲಸಿನ ಹಣ್ಣು ಸೇರಿಸಿ ತಿಂದರು. ಸ್ವಲ್ಪ ಹಾಲೂ ಸೇರಿತು. ವಿಶ್ರಾಂತಿಯ ನಂತರ ಚಕ್ಕೋತ ಹಣ್ಣು ಮತ್ತು ಹಾಲು ನಡೆಯಿತು. ಸಂಜೆಯ ವೇಳೆ ಬೇರೆ ಹಣ್ಣುಗಳು ಮತ್ತು ಮತ್ತಷ್ಟು ಹಾಲು ಹೊಟ್ಟೆ ಸೇರಿತು. ದೇವಸ್ಥಾನದಲ್ಲಿ ಪುರಾಣೀಕರು ಹೇಳಿದ್ದು ನೆನಪಿಗೆ ಬಂತು. "ಅಲ್ಲಿ ಹಣ್ಣು-ಹಾಲಿನ ವಿತರಣೆ ವ್ಯವಸ್ಥೆ ಇದೆ. ಹೋಗಬೇಕು" ಎಂದು ನೆನಪಾಯಿತು. ಬೇಗ ಹೊರಟು ಏಳು ಗಂಟೆಯ ಮುಂಚೆ ಅಲ್ಲಿ ಸೇರಿದರು. 

ಏಳಕ್ಕೆ ಪ್ರಾಂಭವಾದ ಪುರಾಣದಲ್ಲಿ ಭಗವದ್ಗೀತೆ ಮತ್ತು ಭಾಗವತದ ಕೆಲವು ಭಾಗಗಳ ಶ್ಲೋಕಗಳು ಮತ್ತು ಅವುಗಳ ವಿವರಣೆ ನಡೆಯಿತು. ಹಾಲು ಮತ್ತು ಹಣ್ಣುಗಳ ಸುಳಿವೇ ಇಲ್ಲ. ಇರಲಿ, ಪುರಾಣದ ನಂತರ ವಿತರಣೆ ಆಗಬಹುದು ಎಂದು ರಾಯರು ಕಾದರು. ಎಂಟು ಗಂಟೆಗೆ ಪುರಾಣ ಮುಗಿಯುತ್ತಿದ್ದಂತೆಯೇ ಎಲ್ಲರೂ ಅವಸರವಸರವಾಗಿ ಅವರವ ಮನೆಗೆ ಹೊರಟರು. ಒಬ್ಬರು ವಯಸ್ಸಾದ ಯಜಮಾನರು ಮಾತ್ರ ನಿಧಾನವಾಗಿ ಹೋಗುತ್ತಿದ್ದರು. ಮಕುಂದರಾಯರು  ಅವರ ಜೊತೆ ಹೆಜ್ಜೆ ಹಾಕುತ್ತ ಹಾಲು-ಹಣ್ಣಿನ ಬಗ್ಗೆ ಕೇಳಿದರು. 

"ಇದೇನು, ಹೀಗೆ ಕೇಳುತ್ತೀರಿ. ಒಂದು ಗಂಟೆ ಹಾಲು-ಹಣ್ಣೇ ಆಯಿತಲ್ಲ?" ಅಂದರು ಆ ಹಿರಿಯರು. "ಎಲ್ಲಿ ಆಯಿತು? ಬರೀ ಭಗವದ್ಗೀತೆ ಮತ್ತು ಭಾಗವತದ ಕೆಲವು ಭಾಗ ಹೇಳಿದರು, ಅಷ್ಟೇ" ಅಂದರು ರಾಯರು. "ಅದೇ ಸ್ವಾಮಿ. ಹಾಲು ಅಂದರೆ ಭಗವದ್ಗೀತೆ. ಹಣ್ಣು ಅಂದರೆ ಭಾಗವತ" ಅಂದರು ಯಜಮಾನರು. "ಅದು ಹೇಗೆ?" ಎಂದು ರಾಯರು ಕೇಳಿದರು. "ನಿನ್ನೆ ಪುರಾಣದಲ್ಲಿ ಹೇಳಿದ್ದು ನೀವು ಕೇಳಲಿಲ್ಲವೇ? "ದುಗ್ಧಮ್ ಗೀತಾಮೃತಮ್ ಮಹತ್".  ಭಗವದ್ಗೀತೆ ಎಂಬುದೇ ಹಾಲು. ಮತ್ತೆ  "ನಿಗಮಕಲ್ಪ ತರೋರ್ಗಲಿತಂ ಫಲಂ".  ಶ್ರೀಮದ್ಭಾಗವತವೇ ಹಣ್ಣು. ಏಕಾದಶಿಯ ದಿನ ಈ ಹಾಲು-ಹಣ್ಣು ಸೇವಿಸಿ ಎಂದೇ ಪುರಾಣೀಕರು ನಿನ್ನೆ ಹೇಳಿದ್ದು. ಇವತ್ತು ಅದೇ ವಿತರಣೆ ಆಯಿತಲ್ಲ. ಏಕಾದಶಿಯಂದು ಬೇರೆ ಹಣ್ಣು-ಹಾಲು ಯಾರು ಸೇವಿಸುತ್ತಾರೆ?" ಎಂದರು ಆ ಹಿರಿಯರು. 

*****

ಹಲಸಿನ ಹಣ್ಣು, ಕಲ್ಲಂಗಡಿ ಹಣ್ಣು, ಮೂಸಂಬಿ, ಚಕ್ಕೋತ, ಬಾಳೆಹಣ್ಣು ಮತ್ತು ಹಾಲಿನ ಕೊಳಗ ರಾಯರ  ತಲೆಯಸುತ್ತ ಸುತ್ತುವಂತೆ ಅವರಿಗೆ ಭಾಸವಾಯಿತು.  ಹಿರಿಯರು ಅವರ  ಮುಖ ನೋಡಿದರು. ಅವರಿಗೆ ಅರ್ಥ ಆಯಿತು. "ನಾಳೆ ಸ್ವಲ್ಪ ಬೇಗ ಬನ್ನಿ. ಪುರಾಣ ಪ್ರಾರಂಭವಾಗುವುದರ ಮುಂಚೆ ಇದನ್ನು ವಿವರಿಸುತ್ತೇನೆ" ಎಂದು ಹೇಳಿ ಅವರ ಮನೆ ಗಲ್ಲಿಯಲ್ಲಿ ತಿರುಗಿದರು ಆ ವೃದ್ಧರು. 

Monday, April 14, 2025

ಚರ್ವಿತ ಚರ್ವಣ


ಕೆಲವು ದಶಕಗಳ ಹಿಂದೆ ಮಾವಿನ ಫಸಲು ಬರುವ ಕಾಲದಲ್ಲಿ (ಸುಮಾರು ಏಪ್ರಿಲ್, ಮೇ, ಜೂನ್ ತಿಂಗಳುಗಳು) ಮಾವು ಬೆಳೆವ ಹಳ್ಳಿಗಳಲ್ಲಿ ಮಾವಿನಹಣ್ಣು ಸಿಗುವುದು ಕಷ್ಟವೇನೂ ಇರಲಿಲ್ಲ. ಸಿಗುವುದು ಅಂದರೆ ಅಂಗಡಿಗಳಲ್ಲಿ ಅಲ್ಲ. ಅಲ್ಲಿ ಈಗಲೂ ಸಿಗುತ್ತವೆ. ಮಾವು ಬೆಳೆಯುವ ಪ್ರದೇಶಗಳಲ್ಲಿ ಅಲ್ಲಲ್ಲಿ ಮಾವಿನ ಮರಗಳಿದ್ದವು. ಅನೇಕರ ಮನೆಯ ಹಿತ್ತಿಲಲ್ಲಿ ಮಾವಿನ ಮರಗಳಿರುತ್ತಿದ್ದವು. ಈಗಿನಂತೆ ದೂರದ ಪ್ರದೇಶಗಳಿಗೆ ಶೀಘ್ರದಲ್ಲಿ ಹಣ್ಣುಗಳನ್ನು ಸರಬರಾಜು ಮಾಡುವ ವ್ಯವಸ್ಥೆ ಇರಲಿಲ್ಲ. ಹಣ್ಣು ಬೆಳೆದವರು ಇತರರೊಂದಿಗೆ ಹಂಚಿಕೊಂಡು ಬಾಳುತ್ತಿದ್ದರು. 

ಮಾವನ್ನು "ಫಲಗಳ ರಾಜ" ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ವಸಂತದ ಮೊದಲ ಮಳೆ ಬರುವವರೆಗೆ ಮಾವಿನಹಣ್ಣು ತಿನ್ನಬಾರದು ಎಂಬ ಅಲಿಖಿತ ನಿಯಮ ಕೆಲವರು ಪಾಲಿಸುತ್ತಿದ್ದರು. ಮಳೆ ಬರುವ ಮುನ್ನ ಅದನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ಅಭಿಪ್ರಾಯವಿತ್ತು. ಅದರಲ್ಲೂ ಮಕ್ಕಳು ಆರೋಗ್ಯದ ದೃಷ್ಟಿಯಿಂದ ಇದನ್ನು ಮಿತವಾಗಿ ಸೇವಿಸಬೇಕೆಂದೂ, ಇಲ್ಲದಿದ್ದರೆ ಉಷ್ಣದಿಂದ ಆರೋಗ್ಯದ ಮೇಲೆ ಪರಿಣಾಮ ಆಗುತ್ತದೆ ಎಂದೂ ಹೇಳುತ್ತಿದ್ದರು. ಮಾವಿನಹಣ್ಣು ಹೆಚ್ಚು ತಿಂದರೆ ಅದರ ಜೊತೆ ಹಾಲು ಕುಡಿಯಬೇಕೆಂಬ ಸಲಹೆಯೂ ಇತ್ತು. 

ಮಾವಿನಹಣ್ಣು ತಿನ್ನಬೇಕೆಂದು ಎಲ್ಲರಿಗೂ ಆಸೆಯೇ. ಅದರಲ್ಲೂ ಸಣ್ಣ ಮಕ್ಕಳಿಗೆ ಬಲು ಆಸೆ. ಏನು ಮಾಡುವುದು? ತಾಯಂದಿರು ಅದಕ್ಕೆ ಒಂದು ಸುಲಭ ಉಪಾಯ ಕಂಡಿದ್ದರು. ಒಂದು ದೊಡ್ಡ ಹಣ್ಣನ್ನು ಮೂರು ಭಾಗ ಮಾಡುವುದು. ಮಧ್ಯದ ಭಾಗದಲ್ಲಿ ಮಾವಿನ ಓಟೆ. ಅದರ ಪಕ್ಕದ ಎರಡು ಭಾಗ ಕೆನ್ನೆಗಳು. ಹೀಗೆ ವಿಭಾಗ. "ನಿನಗೆ ಕೆನ್ನೆ ಬೇಕೋ ಅಥವಾ ಓಟೆ ಬೇಕೋ?" ಎಂದು ಮಕ್ಕಳನ್ನು ಕೇಳುವುದು. ಅವರಿಗೆ ಒಂದು ಆಯ್ಕೆ ಅವಕಾಶ ಕೊಟ್ಟಂತೆಯೂ ಆಯಿತು. ಒಂದು ಹಣ್ಣು ಮೂರು ಮಕ್ಕಳಿಗೆ ಕೊಟ್ಟಂತೆಯೂ ಆಯಿತು!  ಕೇಳಿದ್ದು ಸಿಕ್ಕಿದಾಗ ಅದು ಎಷ್ಟೇ ಸಿಕ್ಕಿದರೂ ಮಕ್ಕಳಿಗೆ ಸಂತೋಷವೇ! 

ಕೆನ್ನೆಯಲ್ಲಿ ಹಣ್ಣು ಹೆಚ್ಚು ಇರುತ್ತದೆ ಎಂದು ಕೆಲವರಿಗೆ ಆಸೆ. ಆದರೆ ಓಟೆಯ ಮಜವೇ ಬೇರೆ. ಕೆನ್ನೆ ಭಾಗ ಪಡೆದವರು ತಿಂದು ಮುಗಿಸಿ ಕೈ ತೊಳೆದುಕೊಂಡು ಬಂದರೂ ಓಟೆ ಭಾಗದವನು ಇನ್ನೂ ತಿನ್ನುತ್ತಲೇ ಇರಬಹುದು. ಆದರೆ ಅದರಲ್ಲಿ ಇರುವ ರಸ ಎಷ್ಟೋ ಅಷ್ಟೇ. ಚೀಪಿದ ಓಟೆಯನ್ನೇ ಚೀಪುತ್ತಿರುವುದು. ಅಷ್ಟೇ.

*****

ಸಂಕ್ರಾಂತಿ ಸಮಯದಲ್ಲಿ ಎಳ್ಳು-ಬೆಲ್ಲಗಳ ಜೊತೆಯಲ್ಲಿ ಕಬ್ಬು-ಬಾಳೆಹಣ್ಣು ಕೊಡುವ ಸಂಪ್ರದಾಯ ಬಹಳ ಹಿಂದಿನಿಂದಲೂ ಬಂದಿದೆ. ಸಕ್ಕರೆ ಕಾರ್ಖಾನೆಗಳು ಇಲ್ಲದಿದ್ದ ಕಾಲದಲ್ಲಿ, ಮತ್ತು ಅವು ಬಂದಮೇಲೂ ಈಗಿನಷ್ಟು ಸಂಖ್ಯೆಯಲ್ಲಿ ಇಲ್ಲದಿದ್ದ ಕಾಲದಲ್ಲಿ, ಕಬ್ಬಿನಿಂದ ಬೆಲ್ಲ ಮಾಡುವುದು ಹಳ್ಳಿಗಳಲ್ಲಿ ಸಾಮಾನ್ಯವಾಗಿತ್ತು. ಈಗಲೂ ಅನೇಕ ಕಡೆಗಳಲ್ಲಿ ಬೆಲ್ಲ ಮಾಡುತ್ತಾರೆ. ಸಂಕ್ರಾಂತಿ ಸಮಯದಲ್ಲಿ ಕಬ್ಬಿನ ಜಲ್ಲೆಗಳನ್ನು ಸಣ್ಣ ತುಂಡುಗಳಾಗಿ ಮಾಡಿ ಬಾಗಿನದಲ್ಲಿ ಸೇರಿಸುತ್ತಾರೆ. ಬಿಳಿ ಎಳ್ಳು, ಹುರಿಗಡಲೆ, ಹುರಿದ ಕಡಲೆಕಾಯಿ ಬೀಜಗಳು, ಬೆಲ್ಲದ ಚೂರುಗಳು, ಕೊಬ್ಬರಿ ತುಂಡುಗಳು, ಇವುಗಳ ಮಿಶ್ರಣದ ಜೊತೆ ಸಕ್ಕರೆ ಅಚ್ಚಿನ ಬೊಂಬೆಗಳು, ಕಬ್ಬಿಣ ಜಲ್ಲೆಯ ತುಂಡು ಮತ್ತು ಬಾಳೆಯ ಹಣ್ಣು ಸೇರಿಸಿ ಬಂಧು-ಮಿತ್ರರಿಗೆ ಕೊಡುವುದು ಹಬ್ಬದ ಸಂಭ್ರಮದ ಒಂದು ಅವಿಭಾಜ್ಯ ಭಾಗ. "ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು" ಎಂದು ಹೇಳುವುದೂ ಒಂದು ಪರಿಪಾಠ. 

ಎಳ್ಳು-ಬೆಲ್ಲ ಇತ್ಯಾದಿಗಳ ಮಿಶ್ರಣ ಕೆಲವು ದಿನ ಇಡಬಹುದು. ಬಾಳೆಹಣ್ಣು ಹಾಗಲ್ಲ. ಕೆಡುವುದರ ಮುಂಚೆ ತಿಂದು ಮುಗಿಸಬೇಕು. ಕಬ್ಬಿನ ವಿಷಯವೇನು? ಅದೂ ಅಷ್ಟೇ. ರಸ ಒಣಗಿ ಕಬ್ಬು ಕಟ್ಟಿಗೆ ಆಗುವುದರ ಒಳಗೆ ತಿನ್ನಬೇಕು. ದಿನದಿಂದ ದಿನಕ್ಕೆ ಅದು ಒಣಗುತ್ತ ಹೋಗಿ ರಸ ಕಡಿಮೆ ಆಗುತ್ತದೆ. ಕೆಲವರು ಮಚ್ಚಿನಿಂದ ಕಬ್ಬಿನ ಹೊರಗಿನ ಗಟ್ಟಿ ಹೊದಿಕೆ ಕತ್ತರಿಸಿ ಆಮೇಲೆ ತಿನ್ನುತ್ತಿದ್ದರು. ಹರೆಯದ ಮಕ್ಕಳು ತಮ್ಮ ಹಲ್ಲಿನಿಂದಲೇ ಅದನ್ನು ಸಿಗಿದು, ಕಬ್ಬು ಜಗಿದು ರಸ ಹೀರುತ್ತಿದ್ದರು. ಈಗ ಕಾಲ ಬದಲಾಗಿದೆ. ಹಾಗೆ ರಸ ಸೋರಿಸಿಕೊಂಡು ತಿನ್ನುವುದು ನಾಗರಿಕತೆ ಅಲ್ಲ ಅನ್ನುವ ಭಾವನೆಯ ಪ್ರಪಂಚ ಇದು. ಚಿಕ್ಕ ಚಿಕ್ಕ ತುಂಡು ಮಾಡಿ ಫೋರ್ಕಿನಲ್ಲಿ ಚುಚ್ಚಿ ತಿನ್ನುವ ಕಾಲ ಈಗ. 

ಇಂತಹ ಒಂದು ಸಣ್ಣ ಕಬ್ಬಿನ ತುಂಡನ್ನೇ ತೆಗೆದುಕೊಳ್ಳೋಣ. ಮೊದಲ ಸರಿ ಜಗಿದಾಗ ಸ್ವಲ್ಪ ರಸ ಬರಬಹುದು. ಎರಡನೆಯ ಸಲ ಚೆನ್ನಾಗಿ ರಸ ಬರುತ್ತದೆ. ಮೂರನೆಯ ಸಲ ಅದಕ್ಕಿಂತ ಸ್ವಲ್ಪ ಕಡಿಮೆ. ನಾಲ್ಕು ಐದನೆಯ ಸಲ ಮತ್ತೂ ಕಡಿಮೆ. ಅದರ ನಂತರ ಎಷ್ಟು ಜಗಿದರೂ ಏನೂ ರಸ ಸಿಗದು. ಜಗಿದು ಜಗಿದೂ ವಸಡು ನೋವು ಬಂದದ್ದಷ್ಟೇ ಲಾಭ. ಕಬ್ಬಿನ ರಸ ಹೋಗಿ ಎಷ್ಟೋ ಸಮಯವಾಯಿತು. ವ್ಯರ್ಥ ಪ್ರಯತ್ನ. ವೃಥಾ ಶ್ರಮ. ಏನೂ ಪ್ರಯೋಜನವಿಲ್ಲದ ಕೆಲಸ. 

*****

ಈ ವ್ಯರ್ಥ ಪ್ರಯತ್ನ ಕೇವಲ ಮಾವಿನ ಓಟೆ ಚೀಪುವುದು ಅಥವಾ ಕಬ್ಬಿನ ತುಂಡು ಜಗಿಯುವುದಕ್ಕೆ ಮಾತ್ರ ಸೀಮಿತವಲ್ಲ. ಇವೆರಡು ಕೆಲಸಕ್ಕೂ ಉಪಯೋಗಿಸುವ ಅದೇ ನಾಲಿಗೆ ಮಾತಾಡುವುದಕ್ಕೂ ಉಪಯೋಗವಾಗುತ್ತದೆ. ಆಡಿದ ಮಾತನ್ನೇ ಮತ್ತೆ ಮತ್ತೆ ಆಡುತ್ತಿದ್ದರೆ ಅದೂ ವ್ಯರ್ಥವೇ. ಕೆಲವರು ಮಾತನಾಡುವಾಗ ಕೇಳುಗರಿಗೆ ಒಂದು ಹಿತವಿರುತ್ತದೆ. ಇನ್ನಷ್ಟು ಕೇಳೋಣ ಎನಿಸುತ್ತದೆ. ಮತ್ತೆ ಕೆಲವರು ಮಾತಾಡುವಾಗ "ನಾವು ಕಿವುಡರಾಗಿದ್ದರೆ ಎಷ್ಟೋ ಚೆನ್ನವಿತ್ತಲ್ಲ!" ಅನ್ನುವ ಭಾವನೆ ಬರುತ್ತದೆ. ಹೇಳಿದ್ದನ್ನೇ ಹೇಳಿದರೆ ಜಗಿದದ್ದನ್ನೇ ಮತ್ತೆ ಮತ್ತೆ ರಸ ಬರದಿದ್ದರೂ ಜಗಿದಂತೆ ವೃಥಾ ಶ್ರಮವೇ. 

ಈ ಕಾರಣದಿಂದ "ಚರ್ವಿತ ಚರ್ವಣ" ಅನ್ನುವ ಪದಪುಂಜದ ಪ್ರಯೋಗ ಬಂದಿದೆ. ಚರ್ವಣ ಅಂದರೆ ಅಗಿಯುವುದು. ಚರ್ವಿತ ಅಂದರೆ ಈಗಾಗಲೇ ಚೆನ್ನಾಗಿ ಆಗಿದಿರುವ ವಸ್ತು. ಅಂತಹ ವಸ್ತುವನ್ನು ಮತ್ತೆ ಮತ್ತೆ ಅಗಿಯುವುದೇ ಚರ್ವಿತ ಚರ್ವಣ. ಸಂಸ್ಕೃತದ ಪ್ರಯೋಗವಾದರೆ "ಚರ್ವಿತ ಚರ್ವಣ". ಕನ್ನಡದಲ್ಲಿ ಹೇಳಿದರೆ "ಹಾಡಿದ್ದೇ ಹಾಡಿದ ಕಿಸುಬಾಯಿ ದಾಸ". ಅನೇಕ ವಿಷಯಗಳನ್ನು, ಕೆಲಬಗೆಯ ಹಾಡುಗಳನ್ನು, ಕೆಲವು ಗ್ರಂಥಗಳನ್ನು ಮತ್ತೆ ಮತ್ತೆ ಹೇಳಿದರೂ, ಹಾಡಿದರೂ, ಓದಿದರೂ ಬೇಜಾರಾಗುವುದಿಲ್ಲ. ಇನ್ನೊಮ್ಮೆ, ಮತ್ತೊಮ್ಮೆ ಕೇಳಿದಾಗ ಹೊಸ ಅನುಭವಾಗುತ್ತದೆ.  ಹೊಸ ಹೊಸ ಅರ್ಥಗಳ ಸ್ಫುರಣ ಆಗುತ್ತದೆ. ಆದರೆ ಕೆಲಸಕ್ಕೆ ಬಾರದ ವಿಷಯಗಳನ್ನು ಮತ್ತೆ ಮತ್ತೆ ಹೇಳಿದಾಗ ಅದು ಚರ್ವಿತ ಚರ್ವಣವೇ ಆಗುತ್ತದೆ. 

ಈ "ಚರ್ವಿತ ಚರ್ವಣ" ಸಾಹಿತ್ಯಪರ ಚರ್ಚೆಗಳಲ್ಲಿ, ಸಭೆ, ಸಮಾರಂಭಗಳಲ್ಲಿ ಮಾತಾಡುವಾಗ ಅವಾಗವಾಗ ಕೇಳಿಬರುವ ಪದಪುಂಜ. ಇದರ ಮೂಲ ಎಲ್ಲಿ? ಇದೊಂದು ಮೂಲಭೂತ ಪ್ರಶ್ನೆ. 

*****

ಹಿರಣ್ಯ ಕಷಿಪು ಮತ್ತು ಅವನ ಮಗ ಪ್ರಹ್ಲಾದನ ಕಥೆ ಅನೇಕ ಕಡೆಗಳಲ್ಲಿ ಹೇಳಲ್ಪಟ್ಟಿದೆ. ಶ್ರೀಮದ್ಭಾಗವತದ ಏಳನೆಯ ಸ್ಕಂಧದಲ್ಲಿ ಈ ವೃತ್ತಾಂತ ಬಹಳ ವಿವರವಾಗಿ ಚರ್ಚಿತವಾಗಿದೆ. ದೈತ್ಯ ಗುರು ಶ್ರೀ ಶುಕ್ರಾಚಾರ್ಯರ ಮಕ್ಕಳಾದ ಶಂಡ ಮತ್ತು ಅಮರ್ಕ (ಶಂಡಾಮರ್ಕರು ಎಂದು ಒಟ್ಟಿಗೆ ಹೇಳುವುದು ರೂಢಿ) ಆಚಾರ್ಯರ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಗನನ್ನು ಹಿರಣ್ಯ ಕಷಿಪು ಕರೆಸುತ್ತಾನೆ. ಅವನ ವಿದ್ಯಾಭ್ಯಾಸದ ಪ್ರಗತಿ ವಿಚಾರಿಸುವ ಸಲುವಾಗಿ. ಅಪ್ಪ ನಿರೀಕ್ಷಿಸಿದ್ದಕ್ಕೂ ಮಗ ಕಲಿತದ್ದನ್ನು ಒಪ್ಪಿಸುವುದಕ್ಕೂ ಏನೂ ಸಂಬಂಧವಿಲ್ಲ. ಈ ಸಂದರ್ಭದಲ್ಲಿ ಪ್ರಹ್ಲಾದ ಕೇವಲ ಐದಾರು ವರುಷದ ಬಾಲಕನಾಗಿದ್ದರೂ ಜೀವನ್ಮರಣ ಚಕ್ರದ ಬಗ್ಗೆ ಅದ್ಭುತ ಮಾತುಗಳನ್ನು ಹೇಳುತ್ತಾನೆ:

"ಜೀವಿಗಳು ಪಂಚೇಂದ್ರಿಯಗಳ ಸೆಳೆತಕ್ಕೆ ಸಿಕ್ಕಿ, ಅವನ್ನು ನಿಯಂತ್ರಿಸಲಾರದೆ ಐಹಿಕ (ಈ ಪ್ರಪಂಚದ) ಸುಖಗಳ ಹಿಂದೆ ಬೀಳುತ್ತಾರೆ. ಈ ಕಾರಣದಿಂದ ಮತ್ತೆ ಮತ್ತೆ ಅದೇ ಜನನ-ಮರಣ (ಹುಟ್ಟು-ಸಾವು) ಚಕ್ರದಲ್ಲಿ ಸಿಕ್ಕಿ ಒದ್ದಾಡುತ್ತಾರೆ. ಪ್ರಾಪಂಚಿಕ ಸುಖಗಳು ಅಗಿದ ಪದಾರ್ಥವನ್ನು ಮತ್ತೆ ಮತ್ತೆ ಅಗಿದಂತೆ, ಚರ್ವಿತ ಚರ್ವಣದಂತೆ, ಇದ್ದರೂ ಅದರಲ್ಲೇ ಮುಳುಗುತ್ತಾರೆ. ಇವುಗಳಲ್ಲಿ ರಸವಿಲ್ಲವೆಂದು ತಿಳಿಯದೆ ಅಗಿದು ಬಿಟ್ಟಿದ್ದನ್ನು ಮತ್ತೆ ಮತ್ತೆ ಅಗಿಯುತ್ತಾ ಸಂತೋಷ ಪಡುತ್ತಿದ್ದೇವೆ ಅನ್ನುವ ಭ್ರಮೆಯಲ್ಲಿ ಬದುಕುತ್ತಾರೆ. ಅವರಿಗೆ ಪರಮಾರ್ಥ ವಿಷಯಗಳಲ್ಲಿ ಆಸಕ್ತಿ ಬರುವುದೇ ಇಲ್ಲ. ತಮ್ಮ ಪ್ರಯತ್ನದಿಂದಲೂ ಇಲ್ಲ. ಇನ್ನೊಬ್ಬರ ಹೇಳಿಕೆಯ ಮೂಲಕವಾಗಿಯೂ ಇಲ್ಲ. ಅಥವಾ ಇವೆರಡೂ ಸ್ವಲ್ಪ ಸ್ವಲ್ಪ ಸೇರಿದ್ದರಿಂದಲೂ ಇಲ್ಲ. ಯಮನ ಪಾಶಕ್ಕೆ ಸಿಕ್ಕಿ ನರಕದ ದಾರಿ ಹಿಡಿದಾರೆಯೇ ಹೊರತು ಈ ಜನನ-ಮರಣ ಚಕ್ರದಿಂದ ಹೊರಗೆ ಬರುವುದೇ ಇಲ್ಲ" 

ಶ್ರೀಮದ್ಭಾಗವತ ಏಳನೆಯ ಸ್ಕಂಧ, ಐದನೆಯ ಅಧ್ಯಾಯ ಮೂವತ್ತನೆಯ (7.5.30) ಶ್ಲೋಕ ಹೀಗಿದೆ:
ಮತಿರ್ನ ಕೃಷ್ಣೇ ಪರತಃ ಸ್ವತೋ ವಾ 
ಮಿಥೋಭಿಪದ್ಯೇತ ಗೃಹವತಾನಾಂ 
ಆದಾಂತಕೋಭಿರ್ವಿಶತಾಂ ತಮಿಸ್ರ೦
ಪುನಃ ಪುನಃ ಚರ್ವಿತ ಚರ್ವಣಾನಾಂ 

ಚರ್ವಿತ ಚರ್ವಣ ಅನ್ನುವುದರ ಮೊದಲ ಪ್ರಯೋಗ ಆಗಿದ್ದು ಹೀಗೆ. ಜೀವಿಗಳು ಹೇಗೆ ಅದೇ ಸಂಸಾರ ಚಕ್ರದಲ್ಲಿ ಮತ್ತೆ ಮತ್ತೆ ಸುತ್ತುತ್ತಾರೆ ಅನ್ನುವುದನ್ನು ವಿವರಿಸುವ ಸಲುವಾಗಿ ಭಗವಾನ್ ವೇದವ್ಯಾಸರು ಹೇಳಿದ್ದು. 
*****

"ವ್ಯಾಸೋಚ್ಛಿಷ್ಟಮ್ ಜಗತ್ ಸರ್ವಂ" ಎಂದು ಒಂದು ಹೇಳಿಕೆ ಉಂಟು. "ಈ ಪ್ರಪಂಚದಲ್ಲಿರುವ ಸಾಹಿತ್ಯವೆಲ್ಲ ವ್ಯಾಸರು ಹೇಳಿಬಿಟ್ಟದ್ದು" ಎಂದು ಅದರ ಭಾವ. ಉಚ್ಚಿಷ್ಟ ಅನ್ನುವ ಪದಕ್ಕೆ ಸಾಮಾನ್ಯವಾಗಿ "ತಿಂದು ಬಿಟ್ಟದ್ದು" ಅಥವಾ "ಎಂಜಲು" ಎಂಬುದು ಸಾಮಾನ್ಯ ಅರ್ಥ. ಇದಕ್ಕೆ ಏನಾದರೂ ವಿಶೇಷ ಅರ್ಥ ಇದೆಯೇ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ. 

Saturday, March 29, 2025

ಅನುಭವದ ಆಳ-ಅಗಲಗಳು


ಹಿಂದಿನ ಸಂಚಿಕೆಯಲ್ಲಿ "ಅನುಭವದಿಂದ ಬಂದ ಅರ್ಥ" ಎನ್ನುವ ಶೀರ್ಷಿಕೆಯಡಿ "ಒಬ್ಬಟ್ಟು ಮತ್ತು ಹೋಳಿಗೆ" ಉದಾಹರಣೆಯೊಂದಿಗೆ ಕೃತಿಗಳ ಅಭ್ಯಾಸದಲ್ಲಿ ಹೊರಗಿನ ಅರ್ಥ, ಒಳಗಿನ ಅರ್ಥ, ಗುಹ್ಯಾರ್ಥ ಮತ್ತು ಅನುಭವದಿಂದ ತಿಳಿದು ಬರುವ ಅರ್ಥ ವಿಶೇಷಗಳನ್ನು ನೋಡಿದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

"ಬಾಹ್ಯರ್ಥ - ಅಂತರಾರ್ಥ - ಗೂಡಾರ್ಥ" ಅನ್ನುವ ಮೂಲ ಸಂಚಿಕೆಯಲ್ಲಿ ಕೇವಲ ಓದುವುದರಿಂದ ತಿಳಿಯುವ ಹೊರ ಅರ್ಥ, ಗಮನವಿಟ್ಟು ಓದುವುದರಿಂದ ಹೊಳೆಯುವ ಅಂತರಾರ್ಥ ಮತ್ತು ತಿಳಿದವರಿಂದ ಹೆಚ್ಚಿನ ಶ್ರಮವಹಿಸಿ ತಿಳಿಯಬಹುದಾದ ಗೂಡಾರ್ಥಗಳ ಬಗ್ಗೆ ಸ್ವಲ್ಪ ಯೋಚಿಸಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ಈ ಮೂರೂ ಅರ್ಥಗಳನ್ನು ದಾಟಿದ ಮತ್ತು ಪಡೆದ ಅರ್ಥಗಳು ಕೇವಲ ಪುಸ್ತಕದ ಬದನೇಕಾಯಿ ಆಗದೆ ನಮ್ಮ ಜೀವನದಲ್ಲಿ ಮತ್ತು ಸಾಧನೆಯ ದಾರಿಯಲ್ಲಿ ಉಪಯೋಗಕ್ಕೆ ಬರುವ ದಾರಿಗಂಟಾಗಿ (ಪಾಥೇಯ ಅಥವಾ ಪ್ರಯಾಣದ ಕಾಲದಲ್ಲಿ ಸೇವಿಸಲು ಕೊಂಡೊಯ್ಯುವ ಆಹಾರ-ಪಾನೀಯಗಳು) ಉಳಿಯಲು ಅನುಭವದ ಅವಶ್ಯಕತೆ ಅತಿ ಮುಖ್ಯವಾಗುತ್ತದೆ. ಅಂತಹ ಅನುಭವ ಕಲಿಸುವ ಪಾಠಗಳ ಸ್ವಲ್ಪಮಟ್ಟಿನ ನೋಟಕ್ಕೆ ಇಲ್ಲಿ ಪ್ರಯತ್ನ ಮಾಡೋಣ.
*****

ಒಬ್ಬ ಪೆದ್ದ,, ಒಬ್ಬ ಸಾಮಾನ್ಯ ಮನುಷ್ಯ ಮತ್ತು ಒಬ್ಬ ಜಾಣ, ಇವರು ಮೂರು ಮಂದಿಯ ಗುಣ-ಲಕ್ಷಣಗಳೇನು? ಸುಲಭವಾಗಿ "ಅವನೊಬ್ಬ ಪೆದ್ದ" ಎನ್ನುತ್ತೇವೆ. ಹೇಗೆ ಪೆದ್ದ? ಯಾಕೆ ಪೆದ್ದ? ಲೋಕಾರೂಢಿಯಲ್ಲಿ ಸಾಮಾನ್ಯವಾದ ವಿಷಯಗಳನ್ನು ಅರ್ಥಮಾಡಿಕೊಳ್ಳಲಾಗದ ಮತ್ತು ಸಾಮಾನ್ಯ ಕೆಲಸಗಳನ್ನೂ ಸರಿಯಾಗಿ ಮಾಡದವನು ಪೆದ್ದ ಎಂದು ವ್ಯವಹಾರ. ಶಾಲೆಗಳಲ್ಲಿ, ತರಗತಿಗಳಲ್ಲಿ ನಪಾಸಾದವರನ್ನು (ಫೇಲ್) ಪೆದ್ದ ಅನ್ನುತ್ತಿದ್ದರು. ಕೆಲವು ವರ್ಷಗಳ ನಂತರ ಅದೇ ಪೆದ್ದರು ಅವರ ಜೊತೆ ಓದಿ ಜಾಣರೆನ್ನಿಸಿಕೊಂಡವರಿಗಿಂತ ಜೀವನದಲ್ಲಿ ಎಷ್ಟೋ ಮುಂದೆ ಹೋಗಿರುವುದನ್ನು ನಾವು ಕಂಡಿದ್ದೇವೆ. ಕೆಲವು ವೇಳೆ ಹೆಚ್ಚಿನ ಜ್ಞಾಪಕಶಕ್ತಿ ಇರುವವರನ್ನು ಮತ್ತು ಅದರಿಂದಾಗಿ ಹೆಚ್ಚು ಅಂಕಗಳನ್ನು ಪರೀಕ್ಷೆಯಲ್ಲಿ ಪಡೆಯುವವರನ್ನು ಜಾಣರೆಂದು ತಪ್ಪಾಗಿ ತಿಳಿಯುವುದೂ ಉಂಟು. ಕಠಿಣ ಪ್ರಸಂಗಗಳನ್ನು ಸುಲಭವಾಗಿ ನಿಭಾಯಿಸುವವರನ್ನು ಜಾಣ ಎನ್ನುವುದೂ ಕೇಳಿದ್ದೇವೆ. ಓದು ಮತ್ತು ವಿದ್ಯಾರ್ಹತೆ ಇಲ್ಲದೆ ಪೆದ್ದ ಎನ್ನಿಸಿಕೊಂಡವರು ವ್ಯವಹಾರ ಚತುರರಾಗಿ ಡಿಗ್ರಿಗಳುಳ್ಳ ಸಹಪಾಠಿಗಳನ್ನು ಕೆಲಸಕ್ಕೆ ಇಟ್ಟುಕೊಂಡಿರುವುದೂ ಕಾಣಬಹುದು. 

ಈ ಮೂರು ವರ್ಗವನ್ನು ಹೀಗೂ ಗುರುತಿಸಬಹುದು:
  • ತನ್ನ ತಪ್ಪುಗಳಿಂದ ಆದ ಅನುಭವಗಳಿಂದಲೂ ಪಾಠ ಕಲಿಯದೆ ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಾ ತೊಂದರೆ ಅನುಭವಿಸುವನು ಪೆದ್ದ. 
  • ತನ್ನ ತಪ್ಪುಗಳಿಂದ ಆದ ಅನುಭವಗಳಿಂದ ಪಾಠ ಕಲಿತು ಅದೇ ತಪ್ಪುಗಳನ್ನು ಮತ್ತೆ ಮಾಡದೆ ಸುಧಾರಿಸಿಕೊಳ್ಳುವವನು ಸಾಮಾನ್ಯ ಮನುಶ್ಯ. 
  • ಇನ್ನೊಬ್ಬರ ತಪ್ಪುಗಳಿಂದ ಅವರು ಅನುಭವಿಸುವ ತೊಂದರೆಗಳನ್ನು ಕಂಡು, ಅಂತಹ ತಪ್ಪುಗಳನ್ನು ಮಾಡದೇ ಮುಂದುವರೆದು, ಪರರ ಅನುಭವಗಳಿಂದ ಪಾಠ ಕಲಿಯುವವನು ಜಾಣ. 
ಈ ಕಾರಣದಿಂದ ಅನುಭವದಿಂದ ಕಲಿಯುವ ಪಾಠ ಬಹಳ ದೊಡ್ಡದು. ಆದರೆ, ಅನೇಕ ವೇಳೆ, ಇಂತಹ ಅನುಭವದ ಪಾಠಕ್ಕೆ ತೆರಬೇಕಾದ ಶುಲ್ಕವೂ (ಫೀಸು) ಬಹಳ ದುಬಾರಿ!

*****

ಜೀವನದಲ್ಲಿ ಎಲ್ಲರಿಗೂ ಎಲ್ಲ ರೀತಿಯ ಅನುಭವಗಳು ಆಗುವುದಿಲ್ಲ. ಹುಟ್ಟಿ-ಬೆಳೆದ ಕುಟುಂಬ, ಸುತ್ತಲಿನ ವಾತಾವರಣ, ಆರ್ಥಿಕ ಸ್ಥಿತಿ-ಗತಿ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ಥಾನ-ಮಾನ, ಮುಂತಾದುವುಗಳು ಒಬ್ಬ ಮನುಷ್ಯ ಪಡೆಯಬಹುದಾದ ಅನುಭವಗಳನ್ನು ಬಹುತೇಕ ನಿರ್ಧರಿಸುತ್ತವೆ. ವ್ಯಕ್ತಿ ಬದುಕುವ ಕಾಲಮಾನವೂ ಇದರಲ್ಲಿ ಮುಖ್ಯವಾಗುತ್ತದೆ. ಇವೆಲ್ಲ ಒಂದೇ ಸಮ ಇದ್ದರೂ ಸಿಗುವ ಅವಕಾಶಗಳು, ಕೈ ಹಿಡಿದು ನಡೆಸುವ ಜನ, ಮತ್ತು ವ್ಯಕ್ತಿಯ ಪರಿಶ್ರಮ ಇವೆಲ್ಲವೂ ಅನುಭವಗಳ ಆಳ-ಅಗಲಗಳನ್ನು ನಿರ್ಧರಿಸುತ್ತವೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಹುಟ್ಟಿದವರ ಅನುಭವಗಳಿಗೂ ಇಪ್ಪತ್ತೊಂದನೆಯ ಶತಮಾನದಲ್ಲಿ ಹುಟ್ಟಿದವರ ಅನುಭವಗಳಿಗೂ ಅರ್ಥಾತ್ ಸಂಬಂಧ ಇರದು. 

ಕೆಲವು ರೀತಿಯ ಅನುಭವಗಳು ಕೆಲವು ವರ್ಗಗಳಿಗೆ ಮೀಸಲು. ಉದ್ಯೋಗದಲ್ಲಿ ಜೀವನ ಸವೆಸಿದವರ ಅನುಭವ ವ್ಯಾಪಾರದಲ್ಲಿರುವವರಿಗೆ ಬರದು. ಹಾಗೆಯೇ ಒಂದೇ ಸ್ಥಳದಲ್ಲಿ ಜೀವನ ನಡೆಸುವವರಿಗೆ ಆಗುವ ಅನುಭವಗಳಿಗೂ ಸದಾ ಸಂಚಾರದಲ್ಲಿರುವವರಿಗೂ ಆಗುವ ಅನುಭವಗಳು ಬೇರೆ ಬೇರೆ. ಗಂಡಸರ ಅನುಭವ ಮತ್ತು ಹೆಂಗಸರ ಅನುಭವ ಒಂದೇ ಆಗಲು ಸಾಧ್ಯವೇ ಇಲ್ಲ. ಈ ಕಾರಣದಿಂದ ಎಲ್ಲವನ್ನೂ ನಮ್ಮ ಅನುಭವದಿಂದಲೇ ಕಲಿಯುತ್ತೇವೆ ಅನ್ನುವುದು ಹುಚ್ಚುತನ. ಎಲ್ಲವೂ ನಮ್ಮ ಅನುಭವ ಅಥವಾ "ಸ್ವಾನುಭವ" ಆಗಲಾರದು. ಮತ್ತೊಬ್ಬರ ಅನುಭವ ಅಥವಾ "ಪರಾನುಭವ" ಈ ಕಾರಣದಿಂದ ಮುಖ್ಯ ಆಗುತ್ತದೆ. ಅನೇಕ ಸಾಧಕರು ಶತ ಶತಮಾನಗಳಿಂದ ಕೂಡಿಟ್ಟಿರುವ ಅಮೂಲ್ಯ ಅನುಭವಗಳ ಗುಡಾಣವೇ ನಮ್ಮ ಬಳಿ ಇದೆ. ಇವುಗಳನ್ನು ಕೊಟ್ಟವರಿಗೆ ಯಾವುದೇ ಸ್ವಾರ್ಥ ಇರಲಿಲ್ಲ. ಇವುಗಳ ಸರಿಯಾದ ಉಪಯೋಗ ಬಹುಮೂಲ್ಯ ಸರಕನ್ನು ಶುಲ್ಕವಿಲ್ಲದೆ ಮತ್ತು ಸುಲಭವಾಗಿ ಪಡೆಯಲು ನೆರವಾಗುವುದು. 

ಅನುಭವದ ಆಳ-ಅಗಲಗಳು ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಚರ್ಚಿಸುವಾಗ ಎಲ್ಲರಿಗೂ ಸಮಾನವಾಗಿ ಆಗುವ, ಎಲ್ಲ ದೇಶ-ಕಾಲಗಳಿಗೂ ಅನ್ವಯ ಆಗುವ ಅನುಭವದ ಉದಾಹರಣೆಯನ್ನು ಹಿಡಿಯುವುದು ಆಗದ ಮಾತು. ಜೀವನದಲ್ಲಿ ಎಲ್ಲಾ ಮನುಷ್ಯರಿಗೂ ಆಗಿಯೇ ಆಗುತ್ತದೆ ಅನ್ನುವ ಅನುಭವಗಳು ಕೇವಲ ಎರಡು. ಹುಟ್ಟು ಮತ್ತು ಸಾವು. ಎಲ್ಲರೂ ಹುಟ್ಟಲೇಬೇಕು. ಹುಟ್ಟಿದವರೆಲ್ಲರೂ ಸಾಯಲೇಬೇಕು. ತಮಾಷೆಯ ವಿಷಯವೆಂದರೆ ನಾವೆಲ್ಲರೂ ಹುಟ್ಟಿದ್ದರೂ ನಮಗೆ ಅದರ ಅನುಭವವಿಲ್ಲ! ಯಾರಿಗಾದರೂ ತಮ್ಮ ಜೀವನದ ಅನುಭವ ಇದ್ದರೆ ಅದು ಸುಮಾರು ನಾಲ್ಕೈದು ವರ್ಷಗಳ ಬಾಲ್ಯದ ನಂತರ. ಎಲ್ಲರೂ ಒಂದು ದಿನ ಕಂತೆ ಒಗೆಯಬೇಕಾದ್ದೇ ಆದರೂ ಸಾವು ಆದ ಮೇಲೆ ಹಿಂದೆ ಬಂದು ಬೇರೆಯವರಿಗೆ ಹೇಳಲು ಆಗುವುದಿಲ್ಲ. ಆದ ಕಾರಣ ಈ ಅನುಭವಗಳನ್ನು ಪರಾನುಭವದಿಂದಲೇ ನಮ್ಮ ಜೀವಿತ ಕಾಲದಲ್ಲಿ ತಿಳಿಯಬೇಕಾದ್ದು ಒಂದು ವಿಪರ್ಯಾಸ. 

*****

ಎಲ್ಲರಿಗೂ ಅನುಭವವಾಗುವ ಮತ್ತು ತಮ್ಮ ಜೀವಿತಕಾಲದಲ್ಲಿ ನಡೆದ ಘಟನೆ ಅಂದರೆ ಹುಟ್ಟು ಎಂದಾಯಿತು. ತಮ್ಮ ಹುಟ್ಟಿನ ಅನುಭವ ಗೊತ್ತಿಲ್ಲದಿದ್ದರೂ (ನೆನಪಿಲ್ಲದಿದ್ದರೂ) ತಮ್ಮ ಜೀವಿತ ಕಾಲದಲ್ಲಿ ಪ್ರತಿಯೊಬ್ಬರೂ ಬೇರೆ ಮಕ್ಕಳು ಹುಟ್ಟುವುದನ್ನು ನೋಡುತ್ತಾರೆ. ಬಹಳ ಚಿಕ್ಕ ವಯಸ್ಸಿನಲ್ಲಿ ಈ ಘಟನೆಗಳು ಹೆಚ್ಚು ಅರ್ಥವಾಗದಿದ್ದರೂ ವಯಸ್ಸಾದಂತೆ ಅರ್ಥವಾಗುತ್ತಾ ಹೋಗುತ್ತದೆ. ಕಾಲಕ್ರಮದಲ್ಲಿ ತಮ್ಮ ಮನೆಯಲ್ಲೇ ಶಿಶು ಜನನಗಳನ್ನು ನೋಡುತ್ತಾರೆ. ಆದ್ದರಿಂದ ನಮ್ಮ ಚರ್ಚೆಗೆ ಈ ಸಂದರ್ಭವನ್ನೇ ಬಳಸುವುದು ಸೂಕ್ತ. 

ಬೇಕಾದ ಉದಾಹರಣೆ ಬಾಹ್ಯರ್ಥ, ಅಂತರಾರ್ಥ ಮತ್ತು ಗುಹ್ಯಾರ್ಥ ಒಳಗೊಂಡಿರಬೇಕು. ಅನುಭವದ ಪಾಠವೂ ಅದಕ್ಕೆ ಸೇರಬೇಕು. ಆದ್ದರಿಂದ ಶ್ರೀಮದ್ ಭಾಗವತದ ಏಳನೆಯ ಸ್ಕಂದ, ಎರಡನೇ ಅಧ್ಯಾಯದ ಪ್ರಸಿದ್ಧ "ಸ ರಕ್ಷಿತಾ ರಕ್ಷತಿ ಯೋ ಹಿ ಗರ್ಭೇ" (ಭಾಗವತ 7.2.38) ಅನ್ನುವ ಉದಾಹರಣೆಯನ್ನೇ ನೋಡೋಣ. ಒಂದು ಸಾವು ಆಗಿರುವಾಗ ಆ ಸತ್ತ ದೇಹದ ಸುತ್ತ ಕುಳಿತು ದುಃಖಿಸುತ್ತಿರುವ ಪರಿವಾರದವರನ್ನು ಕುರಿತು ಯಮಧರ್ಮನು "ನಾವು ತಾಯಿಯ ಗರ್ಭದಲ್ಲಿ ಇರುವಾಗ ಕಾಪಾಡಿದವನೇ ನಮ್ಮನ್ನು ಮುಂದೆಯೂ ಕಾಪಾಡುತ್ತಾನೆ" ಎಂದು ಹೇಳುವ ಸಂದರ್ಭ. ಇದು ಮುಂದೆ ಬರುವ ಪ್ರಹ್ಲಾದ ಮತ್ತು ಹಿರಣ್ಯಕಶಿಪು ವೃತ್ತಾಂತಕ್ಕೆ ಪೀಠಿಕೆಯಂತೆ ಇದೆ. 

ನಂಬುವವರು "ಶಿಶು ತಾಯಿಯ ಗರ್ಭದಲ್ಲಿ ಇರುವಾಗ ಪರಮಪುರುಷನು ಕಾಪಾಡುತ್ತಾನೆ, ಜನನ ಆಗುವವಗಳೂ ರಕ್ಷಿಸುತ್ತಾನೆ ಮತ್ತು ಮುಂದೆಯೂ ಪೊರೆಯುತ್ತಾನೆ" ಎಂದು ನಂಬುತ್ತಾರೆ. ಭಾಗವತದ ಈ ಭಾಗಗಳನ್ನು ಓದಿದರೆ ಬಾಹ್ಯರ್ಥ, ಅಂತರಾರ್ಥ ಮತ್ತು ಗೂಡಾರ್ಥಗಳ ಹರವು ಗೊತ್ತಾಗುತ್ತದೆ. ಈಗ ಅನುಭವದ ಲೇಪನ ಹೇಗೆ ಈ ನಂಬಿಕೆಯನ್ನು ಗಟ್ಟಿ ಮಾಡುತ್ತದೆ ಎಂದು ನೋಡೋಣ. 

ಮುಂದೆ ಹೋಗುವ ಮೊದಲು ಒಂದು ಮಾತು. ಶಿಶು ಜನನದ ನಿಜವಾದ ನೋವು ಮತ್ತು ಅನುಭವ ಹೆತ್ತ ತಾಯಿಗೆ ಮಾತ್ರ ಗೊತ್ತು. ಇದರಲ್ಲೂ ವ್ಯತ್ಯಾಸಗಳಿವೆ. ಕೆಲವು ಬಹು ಸುಲಭದ ಹೆರಿಗೆ (ನೋಡುವ ಬೇರೆಯವರಿಗೆ) ಇರಬಹುದು. ಮತ್ತೆ ಕೆಲವು ಬಹು ಪ್ರಯಾಸದ ಹೆರಿಗೆ ಇರಬಹುದು. ನೂರು ಹೆರಿಗೆ ಮಾಡಿಸಿರುವ ಪುರುಷ ವೈದ್ಯನಿಗೆ ಹೆರಿಗೆ ಮಾಡಿಸುವುದು ಸ್ವಾನುಭವವಾದರೂ ಹೆರುವುದು ಪರಾನುಭವವೇ ಅಲ್ಲವೇ? ನಾವೆಲ್ಲರೂ, ಸ್ತ್ರೀ ಪುರುಷ ಎಂಬ ಭೇದವಿಲ್ಲದೆ, ಈ ರೀತಿ ಹುಟ್ಟಿದವರೇ! 

***** 

ಸುಮಾರು ಐವತ್ತು ವರುಷಗಳ ಹಿಂದಿನ ಮಾತು. ಆಗ ಇನ್ನೂ ಉಗಿಬಂಡಿಗಳ ಕಾಲ. ಅಂದರೆ ಟ್ರೇನುಗಳು ಸ್ಟೀಮ್ ಎಂಜಿನ್ನುಗಳ ಬಲದಿಂದ ಓಡುತ್ತಿದ್ದವು. ಸುಮಾರು ಹದಿನೆಂಟು ಅಡಿಗಳ ಹಳಿಗಳು ಸೇರಿಸಿ ಮಾಡಿದ ರೈಲು ಮಾರ್ಗಗಳು. ಈಗಿನಂತೆ ಮಧ್ಯೆ ಮಧ್ಯೆ ಹಳಿಗಳನ್ನು ಎರಕ ಹೊಯ್ದು ಕೂಡಿಸುವ ವ್ಯವಸ್ಥೆ ಇನ್ನೂ ಬಂದಿರಲಿಲ್ಲ. ಬೋಲ್ಟು ಮತ್ತು ನಟ್ಟುಗಳು ಉಪಯೋಗಿಸಿ ಸೇರಿಸುವುದು ಬಹಳ ಹತ್ತಿರವಿದ್ದುದರಿಂದ ಶಬ್ದವೂ ಹಿಂದು-ಮುಂದಿನ ಜೋಲಿ ಹೊಡೆಯುವುದೂ ಬಹಳ ಹೆಚ್ಚಿತ್ತು, ಮೂರನೆಯ ದರ್ಜೆ ಇನ್ನೂ ಹೋಗಿರಲಿಲ್ಲ. (ಅದು ಹೋಗಿದ್ದು ಸುಮಾರು 1978 ರಲ್ಲಿ. ಮಧು ದಂಡವಟಿ ಅವರು ರೈಲು ಮಂತ್ರಿ ಆಗಿದ್ದಾಗ). ಕಾಯ್ದಿರಿಸದ ಬೋಗಿಗಳು (ಆನ್ ರಿಸರ್ವ್ಡ್ ಕಂಪಾರ್ಟ್ಮೆಂಟ್) ಇರುತ್ತಿದ್ದುದು ಎಂಜಿನ್ ಹಿಂದುಗಡೆ. ನಂತರ ಇತರ ಬೋಗಿಗಳು. ಆಂಧ್ರ ಪ್ರದೇಶದ ಈಲೂರು ಮತ್ತು ರಾಜಮಂಡ್ರಿ ನಡುವಿನ ಟ್ರೇನು. ಕಿಕ್ಕಿರಿದು ತುಂಬಿದ್ದ ಜನ. ತುಂಬು ಗರ್ಭಿಣಿಯೊಬ್ಬಳು ಕುಟುಂಬದವರ ಜೊತೆ ಹತ್ತಿ ಕುಳಿತಳು. ಯಾರೋ ಸ್ವಲ್ಪ ಸರಿದು ಕೂಡಲು ಜಾಗ ಕೊಟ್ಟರು. ಪ್ರಯಾಣ ಸಾಗಿತು. 

ಸ್ವಲ್ಪ ಸಮಯದ ನಂತರ ಆಕೆಗೆ ಶೌಚಾಗಾರಕ್ಕೆ ಹೋಗಬೇಕಾಯಿತು. ಹೋದವಳು ಹೆಚ್ಚು ಹೊತ್ತಾದರೂ ಹೊರಗೆ ಬರಲಿಲ್ಲ. ಜೊತೆಯಲ್ಲಿದ್ದವರು ಹೋಗಿ ನೋಡಿದರೆ ಉಗಿಬಂಡಿಯ ಓಲಾಟದಲ್ಲಿ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದ್ದಾಳೆ. ಶೈತ್ಯೋಪಚಾರದ ನಂತರ ಎಚ್ಚರವಾಯಿತು. ಇಷ್ಟರಲ್ಲಿ ಪ್ರಸವ ಆಗಿಹೋಗಿದೆ. ಮಗುವು ಶೌಚಾಗಾರದ ದೊಡ್ಡ ಪೈಪಿನಲ್ಲಿ ಕೆಳಗೆ ಬಿದ್ದುಹೋಗಿದೆ. ಅಷ್ಟರಲ್ಲಿ ಟ್ರೇನು ಕೆಲವು ಮೈಲಿ ಮುಂದೆ ಬಂದಿದೆ. ಹತ್ತಾರು ಬೋಗಿಗಳು ಮಗು ಬಿದ್ದ ಸ್ಥಳವನ್ನು ದಾಟಿವೆ. ಬೋಗಿಯಲ್ಲಿದ್ದ ಅಲಾರಾಂ ಚೈನನ್ನು ಎಳೆದು ಟ್ರೈನನ್ನು ನಿಲ್ಲಿಸಿ ಹಳಿಯಗುಂಟ ಮಗುವನ್ನು ಹುಡುಕಿಕೊಂಡು ಹೊರಟರು. 

ಹೀಗೆ ಬರುತ್ತಿರುವಾಗ ಎದುರಿನಿಂದ ಕೆಲವರು ಬರುತ್ತಿರುವುದು ಕಾಣಿಸಿತು. ಮಗುವೊಂದನ್ನು ಒಬ್ಬರು ಕೈಲಿ ಹಿಡಿದು "ಇದು ಯಾರ ಮಗು? ಟ್ರೇನಿಂದ ಬಿದ್ದಿರಬಹುದು. ನಾವು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಅಳುವುದು ಕೇಳಿಸಿತು" ಎಂದರು. ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಬಿದ್ದಿದ್ದರೂ, ಕೆಳಗಡೆ ನುರುಜುಗಲ್ಲು ರಾಶಿಯೇ ಇದ್ದರೂ ಕೆಲ ತರಚು ಗಾಯದ ಹೊರತಾಗಿ ಮಗು ಕ್ಷೇಮವಾಗಿತ್ತು! ತಾಯಿಗೆ ಮಗು ಸಿಕ್ಕಿತು. ಮಗುವಿಗೆ ತಾಯಿ ಸಿಕ್ಕಿದಳು. 

ಚಾಗಂಟಿ ಕೋಟೇಶ್ವರ ರಾವ್ ಆಂಧ್ರ ಪ್ರದೇಶದ ವಿಖ್ಯಾತ ವಿದ್ವಾಂಸರು. ತೆಲುಗು ಭಾಷೆಯ ಪ್ರವಚನಗಳಲ್ಲಿ ಬಹಳ ಹೆಸರು ಮಾಡಿದವರು. "ಪ್ರವಚನ ಚಕ್ರವರ್ತಿ", "ಶಾರದಾ ಜ್ಞಾನ ಪುತ್ರ" ಮೊದಲಾದ ಅನೇಕ ಬಿರುದುಗಳಿಂದ ಸನ್ಮಾನಿತರು. "ಸ ರಕ್ಷಿತಾ ರಕ್ಷತಿ ಯೋ ಹಿ ಗರ್ಭೆ" ಅನ್ನುವುದರ ವಿವರಣೆ ಕೊಡುವಾಗ "ನೇನು ನಾ ಕಣ್ಣಿಂಚಿ ಚೂಸಿನ್ನಾನು" ಎಂದು ಹೇಳುತ್ತಿದ್ದರಂತೆ. ಇಂತಹ ಪ್ರವಚನ ಕೇಳಿದ್ದ ಹಿರಿಯ ಮಿತ್ರರೊಬ್ಬರು ಇದೇ ಪ್ರಸಂಗವನ್ನು ಚರ್ಚಿಸುವಾಗ ನೆನಪು ಮಾಡಿಕೊಳ್ಳುತ್ತಿದ್ದರು. 

*****

ಎಲ್ಲಾ ಸಂದರ್ಭಗಳಲ್ಲೂ ಇದೇ ರೀತಿ ಸುಖಾಂತ್ಯವಾಗುತ್ತದೆ ಎಂದೇನೂ ಇಲ್ಲ. ಎಲ್ಲಾ ಸರಿಯಾಗಿದ್ದೂ, ಸುಸಜ್ಜಿತ ಆಸ್ಪತ್ರೆಯಲ್ಲಿದ್ದೂ, ನುರಿತ ವೈದ್ಯರ ನಿರ್ಲಕ್ಶ್ಯದಿಂದಲೋ ಅಥವಾ ಬೇರಾವುದೋ ಕಾರಣದಿಂದಲೋ, ಇಲ್ಲವೇ ಯಾವುದೂ ಕಾರಣವಿಲ್ಲದೇನೆಯೇ ಪರಿಸ್ಥಿತಿ ವಿಷಮಿಸಿ ದುಃಖಾಂತ್ಯ ಆಗಬಹುದು. ಅಂತಹ ಉದಾಹರಣೆಗಳೂ ಇವೆ. 

ಬಾಹ್ಯಾರ್ಥ, ಅಂತರಾರ್ಥ ಮತ್ತು ಗೂಡಾರ್ಥಗಳ ಜೊತೆ ಅನುಭವವೂ ಬೆರೆತಾಗ ಸರಿಯಾದ ತಳಹದಿ ನಿರ್ಮಾಣವಾಗಿ ವಿಷಯದ ಎಲ್ಲ ಆಯಾಮಗಳೂ ತಿಳಿಯುತ್ತವೆ ಎಂದು ಹೇಳುವುದಷ್ಟೇ ಇಲ್ಲಿನ ಗುರಿ. ಒಂದೇ ರೀತಿಯ ಅನುಭವದಿಂದ ಇಬ್ಬರು ಬೇರೆ ಬೇರೆ ಅರ್ಥ ತಿಳಿದು ಬೇರೆ ಬೇರೆ ದಿಕ್ಕಿನಲ್ಲಿ ಕಾರ್ಯೋನ್ಮುಖರಾಗುವುದೂ ಜೀವನದಲ್ಲಿ ನೋಡಿದ್ದು ಇದೆ. ಅವರವರ ನಂಬಿಕೆ, ಹಿನ್ನೆಲೆಗಳು ಮತ್ತು ಭವಿಷ್ಯವನ್ನು ನೋಡುವ ದೃಷ್ಟಿ ಕೂಡ ಅವುಗಳ ಕೆಲಸ ಮಾಡುತ್ತವೆ. 

ಸತ್ವಯುತವಾದ ಕೃತಿಗಳನ್ನು ಮತ್ತೆ ಮತ್ತೆ ಮೆಲಕುಹಾಕುವಾಗ, ಅದರ ಜೊತೆ ಅನುಭವ ಪಕ್ವವಾಗುತ್ತ ಹೋದಾಗ, ಜೀವನ ಯಾತ್ರೆಯ ಮತ್ತು ಸಾಧನೆಯ ಗುರಿಗಳು ಹೆಚ್ಚು ಸ್ಪಷ್ಟ ಆಗುತ್ತಾ ಹೋಗುತ್ತವೆ. ಯಾವ ರೀತಿಯ ಅನುಭವವನ್ನು ಆಯಾಯಾ ಸಂದರ್ಭಗಳಿಗೆ ತಳಕು ಹಾಕಬೇಕೆನ್ನುವ ವಿವೇಚನೆಯೂ ಮೂಡುತ್ತದೆ.