Showing posts with label Kavade Shastra. Show all posts
Showing posts with label Kavade Shastra. Show all posts

Wednesday, July 8, 2026

ಜ್ಯೋತಿಷ್ಯ, ವಿಮಾನ ಮತ್ತು ಜೀವನ


ಕಳೆದ ಮೂರು ಸಂಚಿಕೆಗಳಲ್ಲಿ ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಕೆಲವು ಸಂಗತಿಗಳನ್ನು ನೋಡಿದೆವು. "ಜ್ಯೋತಿಷ್ಯದಲ್ಲಿ ನಂಬಿಕೆ" ಎಂಬ ಶೀರ್ಷಿಕೆಯ ಹಿಂದಿನ ಸಂಚಿಕೆಯಲ್ಲಿ ಈ ವಿಷಯದಲ್ಲಿ ಅವರವರ ನಂಬಿಕೆ-ಅಪನಂಬಿಕೆ ಬಗ್ಗೆ ವಿಚಾರ ನಡೆದಿತ್ತು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆ ಓದಬಹುದು. ಅದರ ಹಿಂದಿನ ಸಂಚಿಕೆಗಳ ಕೊಂಡಿಗಳು ಅಲ್ಲಿ ಸಿಗುತ್ತವೆ. 

ಯಾವುದೋ ಒಂದು ಜನಗಳ ಗುಂಪು. ಒಬ್ಬರಿಗೊಬ್ಬರು ಪರಿಚಯ ಇರಬಹುದು, ಇಲ್ಲದಿರಬಹುದು. ಬಸ್ ನಿಲ್ದಾಣದಲ್ಲಿರಬಹುದು. ಮದುವೆ ಮನೆಯಲ್ಲಿರಬಹುದು. ಕ್ರಿಕೆಟ್ ಪಂದ್ಯದ ಊಟದ ವಿರಾಮದ ವೇಳೆಯಲ್ಲಿರಬಹುದು. ಸಂಗೀತ ಕಚೇರಿ ಪ್ರಾರಂಭ ತಡವಾದ ಸಮಯದಲ್ಲಿ ಇರಬಹುದು. ಇಂಥದೇ ಸಮಯ, ಸ್ಥಳ, ಕೂಟ ಎಂದೇನಿಲ್ಲ. ಯಾರೋ ಒಬ್ಬರು ಮೈ ಮುರಿದು ಅವರದೇ ಅಂಗೈ ನೋಡಿಕೊಂಡರೂ ಅವರ ಮುಂದೆ ಇನ್ನೈವರು ಅಂಗೈ ಚಾಚುವರು! ಅಪಘಾತದಲ್ಲಿ ಕೈ ಕಳೆದುಕೊಂಡವರು ಬಹಳ ಬೇಸರಿಸುವರು. ಮುಖ್ಯವಾದ ಒಂದು ಅಂಗವಾದ "ಕೈ" ಉಪಯೋಗ ಇಲ್ಲವೆನ್ನುವುದಕ್ಕಿಂತಲೂ ಮಿಗಿಲಾಗಿ ಕೈ ತೋರಿಸಿ ಭವಿಷ್ಯ ತಿಳಿಯುವ ಅವಕಾಶ ಹೋಯಿತು ಅನ್ನುವ ದುಃಖ. "ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡಂತೆ" ಅನ್ನುವ ಗಾದೆ ಗೊತ್ತಿರುವವರೂ ಎರಡೂ ಕೈ ಚಾಚುವರು. ಇದು ಮನುಜ ಸಹಜ ಗುಣ. ಕಾಣದಿರುವ ನಾಳಿನ ಜೀವನ ಹೇಗಿದೆ ಎನ್ನುವುದನ್ನು ಇಂದೇ ತಿಳಿಯುವ ಹಂಬಲ. 

"ಹಸ್ತ ಸಾಮುದ್ರಿಕ" ಅನ್ನಬಹುದು. "ಪ್ರಶ್ನೆ" ಕೇಳಿ ಉತ್ತರ ಪಡೆದು ಸಮಸ್ಯೆ ಪರಿಹರಿಸಿಕೊಳ್ಳುವ ಕಾತರ ಇರಬಹುದು. "ಕವಡೆ ಶಾಸ್ತ್ರ" ಆಗಬಹುದು. "ಕುಂಡಲಿ" ತೋರಿಸಿ ಹಿಂದೆ ನಡೆದದ್ದು, ಈಗ ನಡೆಯಬೇಕಾದದ್ದು, ಮುಂದೆ ನಡೆಯಬಹುದಾದದ್ದು, ಇವೆಲ್ಲವನ್ನೂ ಚಾಚೂ ತಪ್ಪದೆ ತಿಳಿದುಕೊಂಡು ನಿರಾಳವಾಗುವ ಬಯಕೆಗಳು ತೀರಿಸುವವನಿರಬಹುದು. ರಸ್ತೆಯಲ್ಲಿ ಚಾಪೆ ಹಾಸಿಕೊಂಡು ಕುಳಿತಿರುವ "ಗಿಣಿಶಾಸ್ತ್ರ" ಪಾರಂಗತನಿರಬಹುದು. ಮನೆಯ ಮುಂದೆ ಬಂದು ನಿಂತ "ಬುಡುಬುಡಿಕೆ" ವ್ಯಕ್ತಿ ಇರಬಹುದು. ಮೊದಲೇ ಸಮಯ ಗೊತ್ತುಪಡಿಸಿಕೊಂಡು (ಅಪಾಯಿಂಟ್ಮೆಂಟ್ ಪಡೆದುಕೊಂಡು) ಕಾಣಬೇಕಾದ ಕಂಪ್ಯೂಟರ್ ತಜ್ಞ ಆಧುನಿಕ "ಅಸ್ಟ್ರಾಲಜರ್" ಆಗಬಹುದು.  ಅವನ ಭವಿಷ್ಯವೇ ಗೊತ್ತಿಲ್ಲದೇ ತೊಳಲಾಡುತ್ತಿರುವ "ಅಜ್ಞ" ಆದರೂ ಆಗಬಹುದು. ಅಲ್ಲಿ ಹೋದವರ ಮನಸ್ಸಿನಲ್ಲಿ ತಿಳಿಯುವ ಕುತೂಹಲ ಒಂದೇ ರೀತಿಯದು. 

ಅಂದಂತೆ, ಈ "ಪಾರಂಗತ" ಅನ್ನುವ ಶಬ್ದಕ್ಕೆ ಅರ್ಥ ಏನು? ಒಂದು ವಿಶಾಲ ಜಲರಾಶಿ ಇದೆ. ಸಮುದ್ರ ಅನ್ನಿ. ಕಣ್ಣು ನಮಗೆ ತೋರಿಸುವವರೆಗೆ ನೀರೇ ನೀರು. ಜಲರಾಶಿಯ ಆ ಕಡೆ ಏನು ಇದೆ? ನಮಗೆ ಗೊತ್ತಿಲ್ಲ. ಯಾರೋ ಒಬ್ಬ ಅಲ್ಲಿ, ಅಷ್ಟು ದೂರ, ನಮಗೆ ಗೊತ್ತಿಲದಷ್ಟು ದೂರ, ಹೋಗಿ ನೋಡಿಕೊಂಡು ಬಂದಿದ್ದಾನೆ. ಅವನು ನಾವು ಕಾಣದ ಆ ದಡ ಕಂಡವನು. "ಪಾರ" ಅಂದರೆ ಆ ಕಡೆಯ ದಡ. ಕಾಣದ ತೀರ.  "ಪಾರಂ ದೃಷ್ಟವಾನ್". ಆ ದಡಕ್ಕೆ ಹೋಗಿ ನೋಡಿ ಬಂದವನು. ಪಾರಂ ಗತವಾನ್. ಆದ್ದರಿಂದ "ಪಾರಂಗತ". ("ಪಾರುಗಾಣಿಸೋ ಹರಿಯೇ!" ಎಂದು ಕೂಗುವುದೂ ಅದಕ್ಕೇ. ಕಾಣದ ತೀರವನ್ನು ತಲುಪಿಸಿ, ಮಧ್ಯದಲ್ಲಿ ಮುಳುಗುವುದನ್ನು ತಪ್ಪಿಸು ಎಂದು ಬೇಡುವುದು).

*****

ಮುಂದಿನ ಚರ್ಚೆಯ ವಿಷಯ ಅರ್ಥವಾಗುವುದಕ್ಕೆ ಸ್ವಲ್ಪ ವಿಮಾನಗಳ ಹೆಚ್ಚಿನ ತಿಳುವಳಿಕೆ ಅಗತ್ಯ. ಒಂದು ದೊಡ್ಡ ಬೋಯಿಂಗ್ ಅಥವಾ ಏರ್-ಬಸ್ ವಿಮಾನದಲ್ಲಿ ಅರವತ್ತು ಲಕ್ಷ ಮೀರಿದ (ಆರು ಮಿಲಿಯನ್) ಬಿಡಿ ಭಾಗಗಳು ಇರುತ್ತವಂತೆ. ಬಿಡಿ ಭಾಗಗಳು ಅನೇಕ ಫ್ಯಾಕ್ಟರಿಗಳಲ್ಲಿ ತಯಾರಾಗುತ್ತವೆ. ಕಡೆಯಲ್ಲಿ ಎಲ್ಲವೂ ಒಂದು ಕಡೆ ಬಂದು ಸೇರುತ್ತವೆ. ಇಂತಹ ಸಂಗಮ ಸ್ಥಳಕ್ಕೆ "ಕಡೆಯ ಜೋಡಣಾ ಸಾಲು" ಅನ್ನುತ್ತಾರೆ. ಇಂಗ್ಲಿಷ್ನಲ್ಲಿ Final Assembly Line (FAL). ಬೋಯಿಂಗ್ ಸಂಸ್ಥೆಯ ಎವೆರೆಟ್ಟ್ (Everette, near Seattle, WA, USA) ಫ್ಯಾಕ್ಟರಿ ಮತ್ತು ಕಳೆದ ವರ್ಷ ಅಲಬಾಮಾ ರಾಜ್ಯದ ಮೊಬೈಲ್ (Mobile, Alabama, USA) ಎಂಬಲ್ಲಿ ವಿಸ್ತರಿಸಲಾದ ಏರ್-ಬಸ್ ಫ್ಯಾಕ್ಟರಿ, ಈ ಸ್ಥಳಗಳಲ್ಲಿ ನೋಡಬಂದ ವೀಕ್ಷಕರಿಗೆ ಇಡೀ ಜೋಡಣೆ ತೋರಿಸುವ ವ್ಯವಸ್ಥೆ (Visitor tours) ಇದೆ. (ಏರ್-ಬಸ್ ಸಂಸ್ಥೆಗೆ ಯೂರೋಪಿನಲ್ಲಿ ಸಹ ಈ ರೀತಿ ಇದೆ). ಹೆಚ್ಚಿನ ವಿವರಗಳಿಗೆ ಇಂಗ್ಲಿಷ್ನಲ್ಲಿ ಇರುವ ಲೇಖನ ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಹೀಗೆ ಫ್ಯಾಕ್ಟರಿಯ ಜೋಡಣಾ ಸಾಲಿನಲ್ಲಿ ಒಮ್ಮೆಗೇ ಮೂರು ವಿಮಾನಗಳು ತಯಾರಾಗುತ್ತಿರುತ್ತವೆ. ಪ್ರತಿಯೊಂದೂ ಮೂರು ಮುಖ್ಯ ಭಾಗಗಳಾಗಿ ಬಂದಿರುತ್ತವೆ. ಇವುಗಳನ್ನು ಒಂದು ಚಲಿಸುವ ವೇದಿಕೆಯ (moving platform) ಮೇಲೆ ಇಟ್ಟಿರುತ್ತಾರೆ. ಮೂರು ಪಾಳಿಯಲ್ಲಿ ಕೆಲಸಗಾರರು ಹಗಲು-ರಾತ್ರಿ ಕೆಲಸ ಮಾಡುತ್ತಾರೆ. ರಜೆ ಎಂಬುದಿಲ್ಲ. ಮೂರು ಭಾಗಗಳಾಗಿ ಬಂದದ್ದು ಈ ಕೊನೆಯಿಂದ ವೇದಿಕೆಯ ಮೇಲೆ ನಿಧಾನವಾಗಿ ಚಲಿಸುತ್ತಿದ್ದಂತೆ ಎಂಜಿನು, ರೆಕ್ಕೆಗಳ ಸೇರುವಿಕೆಯ ನಂತರ, ಮೂರನೆಯ ದಿನ ಆ ಕೊನೆಯಲ್ಲಿ ತಯಾರಾಗಿ ನಿಂತು, ಒಟ್ಟಿಗೆ ಹಾರಿ, ಬೇರೆ ಬೇರೆ ದಿಕ್ಕಿನಲ್ಲಿ ಚಲಿಸುತ್ತಾ, ಅವನ್ನು ಕೊಂಡುಕೊಂಡಿರುವ ಸಂಸ್ಥೆಯ ದೇಶಕ್ಕೆ ಹೋಗುತ್ತವೆ!  

ಹೀಗೆ ಒಂದೇ ಸಲ ತಯಾರಾದ ಮೂರು ವಿಮಾನಗಳು ಒಂದೇ ಸಮಯದಲ್ಲಿ ಹುಟ್ಟಿದ ಮೂರು ಮಕ್ಕಳಂತೆ. ಅವು ಮೂರು ಹಾರಿ ಹೋಗುವ ದಿನ ಫ್ಯಾಕ್ಟರಿಯಲ್ಲಿ ಒಂದು ಹಬ್ಬದ ವಾತಾವರಣ! ಅವುಗಳಿಗೆ ಮನುಷ್ಯರಿಗೆ ಬರೆದಂತೆ ಕುಂಡಲಿ ಬರೆದರೆ ಮೂರಕ್ಕೂ ಒಂದೇ ಕುಂಡಲಿ ಇರಬೇಕು. ಒಂದು ಬ್ಯಾಚಿನ ಮೂರು ವಿಮಾನಗಳಿಗೆ ಒಂದೇ ವಿವರಗಳು: ಒಟ್ಟು ತೂಕ, ಎಂಜಿನ್ನುಗಳ ಶಕ್ತಿ, ಒಟ್ಟು ಪ್ರಯಾಣಿಕರ ಕುರ್ಚಿಗಳ ಸಂಖ್ಯೆ, ಇಂಧನ ಟ್ಯಾಂಕುಗಳ ಗಾತ್ರ, ಹಾರುವ ವೇಗ ಕ್ಷಮತೆ, ಹೀಗೆ ಎಲ್ಲ ವಿವರಗಳು. "ತ್ರಿವಳಿಗಳು" ಎಂದು ಧಾರಾಳವಾಗಿ ಕರೆಯಬಹುದು. 

*****

ಹಿಂದಿನ ಸಂಚಿಕೆಯಲ್ಲಿ ನಡೆಯುತ್ತಿದ್ದ ತಂದೆ-ಮಗನ ಸಂವಾದ ಮುಂದುವರೆಯಿತು.

"ನಿನ್ನೆ ಭವಿಷ್ಯ ಹೇಳುವ ಜ್ಯೋತಿಷಿಯ ವಿವೇಚನೆಯ ಬಗ್ಗೆ ಮಾತಾಯಿತು"
"ಹೌದು. ಅದರ ಬಗ್ಗೆ ಈಗ ಏನು?"
"ಈ ವಿವೇಚನೆ ಅನ್ನುವುದು ಹೇಗೆ ತಿಳಿಯುವುದು?"
"ಒಂದೇ ಫ್ಯಾಕ್ಟರಿಯಲ್ಲಿ, ಒಂದೇ ದಿನ ತಯಾರಾದ ಮೂರು ಒಂದೇ ರೀತಿಯ ವಿಮಾನಗಳನ್ನು ತೆಗೆದುಕೊಳ್ಳೋಣ. ತಯಾರಾಗಿ ಕಾರ್ಖಾನೆಯಿಂದ ಹೊರಬಂದ ದಿನ ಎಲ್ಲವೂ ಸಮ ಸಮ. ಅಲ್ಲವೇ?"
"ಹೌದು"
"ಅವುಗಳ ಪರಿಪೂರ್ಣ ಸಾಮ್ಯತೆ ಅಲ್ಲಿಗೆ ಮುಗಿಯಿತು. ಮುಂದಿನ ನಡಾವಳಿ ಒಂದೇ ರೀತಿ ಇರುವುದಿಲ್ಲವಲ್ಲ"
"ಹೌದು"
"ಒಂದು ವಿಮಾನ ನಿಲ್ದಾಣದಿಂದ ಪೂರ್ವಕ್ಕೆ ಹಾರಿತು. ಮತ್ತೊಂದು ಪಶ್ಚಿಮಕ್ಕೆ. ಮೂರನೆಯದು ಉತ್ತರಕ್ಕೆ"
"ಇರಬಹುದು"
"ಪೂರ್ವದಲ್ಲಿ ಸುಗಮ ಹವಾಮಾನ. ಅನುಕೂಲ ವಾತಾವರಣ. ಒಳ್ಳೆಯ ಅನುಚರ ವಾಯು. ಇಂಗ್ಲಿಷಿನಲ್ಲಿ Tail Wind"
" ಹಾರಾಟ ಸುಗಮವಾಗಿರುತ್ತದೆ. ಅದರ ವೇಗದ ಜೊತೆ ಗಾಳಿಯ ಸಹಕಾರ ಸಿಕ್ಕಿದೆ"
"ಪಶ್ಚಿಮಕ್ಕೆ ಹಾರಿದ ವಿಮಾನಕ್ಕೆ ಕೂಡ ಸುಗಮ ಹವಾಮಾನ ಸಿಕ್ಕಿದೆ. ಆದರೆ ಅನುಚರ ವಾಯು ಇಲ್ಲ. ಬದಲಾಗಿ ಪ್ರತಿಕೂಲ ವಾಯು. Heavy Head Wind"
"ಮೊದಲಿನ ವಿಮಾನದಷ್ಟೇ ದೂರ ಕ್ರಮಿಸಲು ಹೆಚ್ಚಿನ ಸಮಯ ಬೇಕು. ಪ್ರಯಾಸ ಸಹ ಜಾಸ್ತಿ. ಹೆಚ್ಚು ಇಂಧನ ಖರ್ಚಾಗುತ್ತದೆ" 
"ಉತ್ತರಕ್ಕೆ ಹಾರಿದ ವಿಮಾನ ಚಂಡಮಾರುತ ತೀವ್ರವಾಗಿರುವ ಹಾದಿಯಲ್ಲಿ ಸಾಗಬೇಕು"
"ಅದೊಂದು ಏರುಪೇರಿನ ಪ್ರಯಾಣ. Bumpy Ride. ಎಲ್ಲ ಕಾಲವೂ ಸೀಟ್ ಬೆಲ್ಟ್ ಕಟ್ಟಿಕೊಂಡೇ ಕೂತಿರಬೇಕು"
"ಅಪಘಾತಗಳಿಗೆ ಹೆಚ್ಚಿನ ಅವಕಾಶ. ಅಲ್ಲವೇ?"
"ಖಂಡಿತ"
"ಜ್ಯೋತಿಷ್ಯದಲ್ಲಿಯೂ ಹಾಗೆಯೇ. ಕೇವಲ ಜನ್ಮ ಕುಂಡಲಿಗಳಿಂದ ಪೂರ್ತಿ ಫಲ ಹೇಳಬಾರದು"
"ಅಂದರೆ?"
"ಜನ್ಮ ಕುಂಡಲಿ ಹುಟ್ಟಿದ ಸಮಯದಲ್ಲಿ ಗ್ರಹಗಳ ಬಲಾಬಲ ಹೇಳುತ್ತದೆ. ಅವುಗಳ ಈಗಿನ ಸ್ಥಿತಿ ಏನು? ಅದನ್ನು "ಗೋಚಾರ" ಅನ್ನುತ್ತಾರೆ. ಇದನ್ನೂ ಗಮನಿಸಬೇಕು"
"ಅಂದರೆ ಹುಟ್ಟಿನ ಕುಂಡಲಿ ಜೊತೆಗೆ ಈಗಿನ ಗೋಚರ ಫಲವನ್ನೂ ಸಾಮ್ಯ ಮಾಡಬೇಕು"
"ಹೌದು"

ಜ್ಯೋತಿಷ್ಯ ಫಲ ಹೇಳಲು ಇಷ್ಟೆಲ್ಲಾ ಬೇಕು! 

*****

"ಇವೆರಡು ಸರಿಯಾಗಿ ನೋಡಿದರೆ ಆಯಿತು"
"ಇಷ್ಟೇ ಅಲ್ಲ. ಇನ್ನೂ ಒಂದಿದೆ"
"ಅದೇನು?"
"ಪ್ರತಿ ಜೀವಿಯ ಮೇಲೂ ಅನ್ಯರ ಪ್ರಭಾವ ಇರುತ್ತದೆ"
"ಇರಬಹುದು. ಅದಕ್ಕೂ ಇದಕ್ಕೂ ಏನು ಸಂಬಂಧ?"
"ಅಶ್ವಪತಿ ಮಹಾರಾಜನಿಗೆ ಮಗ ಹುಟ್ಟಿದಾಗ ಜ್ಯೋತಿಷ್ಕರು ಮಗು ಅಲ್ಪಾಯು ಎಂದು ಹೇಳಿದರು"
"ಸರಿ"
"ಅವನ ಹೆಸರು ಸತ್ಯವಾನ. ಆದರೆ ಇದನ್ನು ತಿಳಿದೂ ಸಾವಿತ್ರಿ ಹಠ ಹಿಡಿದು ಅವನನ್ನು ಮದುವೆ ಆದಳು"
"ಹೌದು"
"ಅವಳು "ದೀರ್ಘ ಸುಮಂಗಲಿ" ಯೋಗ ಇದ್ದವಳು"
"ಮುಂದೆ?"
"ಯಮನೊಡನೆ ಹೋರಾಡಿ ಗಂಡನನ್ನು ಬದುಕಿಸಿಕೊಂಡಳು"
"ಅಂದರೆ?"
"ಅನೇಕರಿಗೆ ತಂದೆ-ತಾಯಿ, ಹೆಂಡತಿ, ಮಕ್ಕಳು, ಅಣ್ಣ-ತಮ್ಮಂದಿರು, ಮುಂತಾದ ಕಡೆಗಳಿಂದ ವಿಶೇಷ ಸಹಾಯ ಸಿಗುತ್ತದೆ. ಹಾಗೆಯೇ ಕೆಲವರ ಕಡೆಯಿಂದ ಹೆಚ್ಚಿನ ತೊಂದರೆ ಕೂಡ ಆಗಬಹುದು"
"ಇದರ ಸಮನ್ವಯ ಹೇಗೆ?"
"ಜ್ಯೋತಿಷ್ಯ ಫಲ ಹೇಳುವುದು ಕೇವಲ "ಪುಸ್ತಕದ ಬದನೇಕಾಯಿ" ಎಂಬಂತೆ ಆಗಬಾರದು. ಫಲ ಹೇಳುವವನಿಗೆ ಚೆನ್ನಾದ ಲೌಕಿಕ ಜ್ಞಾನ ಇರಬೇಕು"

ಇನ್ನೂ ಹೆಚ್ಚಿನ ಆಳಕ್ಕೆ ಇಳಿಯುವ ಅವಶ್ಯಕತೆ ಇದೆ!

*****

"ಮೂರು ವಿಮಾನಗಳನ್ನು ಮತ್ತೆ ತೆಗೆದುಕೊಳ್ಳೋಣ"
"ಮತ್ತಿನ್ನೇನು?"
"ಒಂದರ ಪೈಲಟ್ಗಳು ಇನ್ನೂ ಹೊಸಬರು. ಮತ್ತೊಂದರವರು ನುರಿತವರು. ಮೂರನೆಯವರು ಮೊದಲ ಬಾರಿ ಸ್ವತಂತ್ರವಾಗಿ ವಿಮಾನ ಚಾಲನೆ ಮಾಡುತ್ತಿದ್ದಾರೆ"
"ಇದು ಬಹಳ ಗಾಢವಾದ ಪರಿಣಾಮ ಮಾಡುತ್ತದೆ"
"ಜೊತೆಗೆ ಇಳಿಯುವ ನಿಲ್ದಾಣದ ಕಾರ್ಯ ಕ್ಷಮತೆ, ಏರ್ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿ ಸಹಕಾರ, ಮುಂತಾದುವೂ ಮುಖ್ಯ ಆಗುತ್ತವೆ. ಅಲ್ಲವೇ?"
"ಹೌದು"
"ಹತ್ತು ರೂಪಾಯಿ ಪುಸ್ತಕ ಕೊಂಡು, ಐದು ಸಲ ಓದಿ, ಜಾತಕ ಫಲ ಹೇಳಬಾರದು"
"ಅಂದರೆ?"
"ಇನ್ನೂ ಅನೇಕ ಸೂಕ್ಷ್ಮಗಳು ಇರುತ್ತವೆ. ನಂಬಿಕೆ ಇದ್ದರೆ ಕ್ರಮವಾಗಿ ಅಭ್ಯಾಸ ಮಾಡಬೇಕು"
"ಹುಂ"
"ತಿಳಿದವರೊಡನೆ ಒಡನಾಡಿ ಕಲಿಯಬೇಕು"
"ಗ್ರಹ ಸಮಯ ಎಂದೊಂದು ಉಂಟು. ಅದನ್ನೂ ನೋಡಬೇಕು"
"ಅಂದರೆ?"
"ಇಲ್ಲಿ ಇಬ್ಬರಿದ್ದಾರೆ. ಇಬ್ಬರಿಗೂ ಸೋದರಮಾವನ ಕಡೆಯಿಂದ ವಿಶೇಷ ಸಹಾಯ ಎಂದಿದೆ"
"ಸರಿ"
"ಒಬ್ಬನ ಸೋದರಮಾವ ಈಗ ಮಂತ್ರಿ ಆಗಿದ್ದಾನೆ"
"ಇನ್ನೊಬ್ಬನ ಸೋದರಮಾವ?'
"ಯಾವುದೋ ಕಾರಣಕ್ಕೆ ಅವನಿಗೆ ಜೈಲು ವಾಸ ನಡೆಯುತ್ತಿದೆ"
"ಒಹೋ! ಹೀಗೂ ಉಂಟೋ?"
"ಆದಕಾರಣ ಹುಟ್ಟು ಕಾಲದ ಫಲ, ಗೋಚಾರ ಫಲ, ವಾತಾವರಣ ಮುಂತಾದುವನ್ನು ಸಮನ್ವಯ ಮಾಡಬೇಕು"

ಇದು ಅಷ್ಟು ಸುಲಭದ ಕೆಲಸವಲ್ಲ!

*****

"ಇನ್ನೊಂದು ಉದಾಹರಣೆ ಕೊಡುತ್ತೇನೆ, ವಿನೋದಕ್ಕಾಗಿ"
"ಏನು?"
"ಮೂವರಿಗೆ "ಶತ್ರು ನಾಶ ಯೋಗ" ಇದೆ"
"ಹೀಗೊಂದು ಯೋಗ ಇದೆಯೇ?"
"ಇದೊಂದು ಉದಾಹರಣೆ. ಕೆಲವರಿಗೆ ಶತ್ರುಗಳನ್ನು ಜಯಿಸುವ ಯೋಗಗಳು ಇರುತ್ತವೆ"
"ಸರಿ"
"ಒಬ್ಬ ಸೈನ್ಯ ಸೇರುತ್ತಾನೆ. ಇನ್ನೊಬ್ಬ ಪಂಡಿತ ಆಗುತ್ತಾನೆ. ಮೂರನೆಯವ ಅಡಿಗೆ ಭಟ್ಟ ಆಗುತ್ತಾನೆ"
"ಮುಂದೆ?"
"ಸೈನ್ಯಕ್ಕೆ ಸೇರಿದವನು ನಿಜವಾಗಿ ಶತ್ರುಗಳನ್ನು ಕೊಚ್ಚಿ ಹಾಕಬಹುದು"
"ಅದು ಸಾಧ್ಯ"
"ಪಂಡಿತ?"
"ಅವನದೇನು?"
"ಅವನು ಪ್ರತಿವಾದಿಗಳನ್ನು ಸೋಲಿಸುತ್ತಾ ಯಶಸ್ಸು ಪಡೆಯಬಹುದು"
"ಹೌದು. ಅಡಿಗೆ ಭಟ್ಟ?"
"ಅವನು ಬಾಣಸಿಗನಾಗಿ ಅಡಿಗೆ ಮನೆಯಲ್ಲಿ ಸೊಪ್ಪು-ತರಕಾರಿ ಮುಂತಾದುವುಗಳನ್ನು ಚೆನ್ನಾಗಿ ಕತ್ತರಿಸುತ್ತಾ ಸೊಗಸಾಗಿ ಅಡಿಗೆ ಮಾಡುತ್ತಾನೆ!"

ಜೋರಾಗಿ ನಗುವುದನ್ನು ಬಿಟ್ಟು ಮತ್ತಿನ್ನೇನು ಮಾಡುವುದು? ಜ್ಯೋತಿಷಿಗೆ "ಹಾಸ್ಯ ಪ್ರಜ್ಞೆ" ಸಹ ಇರಬೇಕೆ?

*****

ಸ್ವಂತ ಕುಂಡಲಿಗಳ ನಿರೀಕ್ಷಣೆ ಮತ್ತು ದೈವ ಸಹಾಯ ಎನ್ನುವ ಇನ್ನೆರಡು ಪದರಗಳನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. 

Friday, December 19, 2025

ನಿರಂಜನ


ಕಳೆದ ತಿಂಗಳಿನ ಒಂದು ಸಂಚಿಕೆಯಲ್ಲಿ "ರಾಗಿ ಮೂಟೆಯ ಮೇಲೆ ಸಾವೇರಿ ರಾಗ" ಅನ್ನುವ ಶಿರೋನಾಮೆಯಡಿಯಲ್ಲಿ ನಮ್ಮ ನಾಡಿನ ಹೆಮ್ಮೆಯ ಸಂಗೀತ ವಿದ್ವಾಂಸರು ಮತ್ತು ಗಾಯಕರಲ್ಲಿ ಒಬ್ಬರಾದ ಭೈರವಿ ಕೆಂಪೇಗೌಡ ಅವರನ್ನು ಕುರಿತು ಕೆಲವು ಸಂಗತಿಗಳನ್ನು ನೋಡಿದ್ದೆವು. ಇದರಲ್ಲಿ ಬೆಂಗಳೂರಿನ ಬದಲಾದ ರೂಪದ ಬಗ್ಗೆ ಕೆಲವು ವಿಷಯಗಳನ್ನು ನೆನಪಿಸಿಕೊಂಡಿದ್ದೆವು. ಈ ಕುರಿತ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಅಲ್ಲಿ ನೋಡಿದ ವಿವರಗಳಲ್ಲಿ ಪ್ರಾಸ್ತಾವಿಕವಾಗಿ "ಧರ್ಮಾ೦ಬುಧಿ ಕೆರೆ" ಎನ್ನುವ ಹೆಸರು ಬಂದಿತ್ತು. ನಗರದ ಮಧ್ಯೆ ಇದ್ದ ಒಂದು ಸುಂದರ ಕೆರೆ ಅದು.  ಅದರ ನೀರು ಕುಡಿದು ಬೆಳೆದ ನಾವು ಕಡೆಗೆ ನಮ್ಮ ನಗರೀಕರಣದ ಪಿಶಾಚಿಯ ಪ್ರೀತಿಗಾಗಿ ಅದನ್ನೇ ನುಂಗಿ ನೀರು ಕುಡಿದಿದ್ದೇವೆ. ಈಗ ಆ ಕೆರೆ ಇತ್ತು ಅನ್ನುವ ಕುರುಹೂ ಉಳಿದಿಲ್ಲ. ಒಂದು ಕಾಲದಲ್ಲಿ ಅದಕ್ಕೆ ಸ್ವತಂತ್ರ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ನೆನಪಿನಲ್ಲಿ "ಸುಭಾಷ್ ನಗರ" ಅನ್ನುವ ಹೆಸರಿತ್ತು. ಕೆರೆಯಲ್ಲಿ ನೀರು ನಿಲ್ಲುವುದು ತಪ್ಪಿದ ಮೇಲೆ ಅದಕ್ಕೆ "ಸುಭಾಷ್ ನಗರ ಕೆರೆಯ ಅಂಗಳ" ಅನ್ನುತ್ತಿದ್ದರು. ವೃತ್ತಿ ನಾಟಕರಂಗದ ಮರೆಯಲಾಗದ ತಂಡ "ಹಿರಣ್ಣಯ್ಯ ಮಿತ್ರ ಮಂಡಳಿ" ಅವರ ಪ್ರಸಿದ್ಧ ನಾಟಕಗಳಾದ "ದೇವದಾಸಿ", "ಸದಾರಮೆ", "ಲಂಚಾವತಾರ" ಮತ್ತು ಇತರ ನಾಟಕಗಳು ಇಲ್ಲಿಯೇ ನಡೆಯುತ್ತಿದ್ದವು. ಈಗ ಅವೆಲ್ಲಾ ನೆನಪು ಮಾತ್ರ. ಇನ್ನು ಕೆಲವೇ ವರ್ಷಗಳಲ್ಲಿ ಅದನ್ನು ನೆನಪಿಸಿಕೊಳ್ಳುವ ತಲೆಮಾರೂ ಇಲ್ಲವಾಗುತ್ತದೆ. 

ಈ ಸುಭಾಷ್ ನಗರ ಕೆರೆಯ ಅಂಗಳದಲ್ಲಿ ಪ್ರತಿವರ್ಷ "ಕಾಂಗ್ರೆಸ್ ವಸ್ತುಪ್ರದರ್ಶನ" ಏರ್ಪಡುತ್ತಿತ್ತು. ವಸ್ತು ಪ್ರದರ್ಶನಕ್ಕೆ ನೋಡಲು ಬಂದ ಜನಜಂಗುಳಿಯಲ್ಲಿ ಕೆಲವರು, ವಿಶೇಷವಾಗಿ ಮಕ್ಕಳು, ತಪ್ಪಿಸಿಕೊಳ್ಳುವುದು ನಡೆಯುತ್ತಿತ್ತು. ವಸ್ತುಪ್ರದರ್ಶನದಲ್ಲಿ ಒಂದು "ಪೊಲೀಸ್ ಔಟ್ ಪೋಸ್ಟ್" ಕೂಡ ಇದ್ದು ಹೀಗೆ ತಪ್ಪಿಸಿಕೊಂಡವರು ಮತ್ತು ಕಳೆದು ಹೋದ ಮತ್ತು ಸಿಕ್ಕಿದ ವಸ್ತುಗಳ ಬಗ್ಗೆ ಆಗಾಗ ಧನಿವರ್ಧಕಗಳ ಮೂಲಕ ಪ್ರಕಟಿಸುತ್ತಿದ್ದರು. ಟಿವಿ ಇಲ್ಲದ ಕಾಲದಲ್ಲಿ ಕುಟುಂಬದ ಸದಸ್ಯರು ಒಟ್ಟಾಗಿ ಒಂದು ಸಂಜೆ ಕಳೆಯಲು ಈ ವಸ್ತುಪ್ರದರ್ಶನ ಸಹಕಾರಿಯಾಗಿತ್ತು. 

ಈಗ ಸುಭಾಷ್ ನಗರ ಅನ್ನುವ ಹೆಸರೇ ಕೇಳಿಬರುವುದಿಲ್ಲ. ದೊಡ್ಡ ಬಸ್ ನಿಲ್ದಾಣ ತಲೆಯೆತ್ತಿ ನಿಂತಿದೆ. ಸುಭಾಷ್ ನಗರ ಮರೆಯಾದರೂ ಹತ್ತಿರವಿದ್ದ "ಮೆಜೆಸ್ಟಿಕ್" ಚಿತ್ರಮಂದಿರದ ಹೆಸರನ್ನು ಜನ ಮರೆತಿಲ್ಲ. ಆ ಸುತ್ತಮುತ್ತಲಿನ ಪ್ರದೇಶಕ್ಕೆ ಈಗಲೂ "ಮೆಜೆಸ್ಟಿಕ್" ಏರಿಯಾ ಅನ್ನುವುದು ನಡೆದೇ ಇದೆ. 

*****

ಹಳ್ಳಿಗಳಲ್ಲಿ ಜನಗಳು ತಪ್ಪಿಸಿಕೊಳ್ಳುವುದು ನಡೆಯದಿದ್ದರೂ ಜಾನುವಾರುಗಳು (ದನಗಳು) ತಪ್ಪಿಸಿಕೊಳ್ಳುವುದು ಅಲ್ಲಲ್ಲಿ ಆಗಾಗ ನಡೆಯುತ್ತಿತ್ತು. ಈಗಿನಂತೆ ಹಳ್ಳಿಗಳಲ್ಲಿ ಆಗ ಹೆಚ್ಚಾಗಿ ರಸ್ತೆಗಳಿರಲ್ಲ. ಮೋಟಾರ್ ಸೈಕಲ್ಗಳಲ್ಲಿ ಓಡಾಡುವವರಿರಲಿಲ್ಲ. ಜಮೀನಿನಲ್ಲಿ ಬೆಳೆ ತೆಗೆಯುವುದರ ಜೊತೆಗೆ ರೈತರ ಜೀವನದ ಮುಖ್ಯ ಭಾಗ "ಹೈನುಗಾರಿಕೆ" ಆಗಿತ್ತು. (ಹಯನು ಅಂದರೆ ಹಾಲು ಕರೆಯುತ್ತಿರುವ ಪ್ರಾಣಿ. ಮುಖ್ಯವಾಗಿ ಹಸು. ಬರಡು ಹಸು ಅಂದರೆ ಹಾಲು ಕೊಡದಿರುವ ಹಸು. "ನೀನೊಲಿದರೆ ಬರಡು ಹಯನಹುದಯ್ಯ" ಎನ್ನುವ ಶರಣರ ವಚನವನ್ನು ನೆನಪಿಸಿಕೊಳ್ಳಬಹುದು). ತಮ್ಮ ಕುಟುಂಬದ ಹಾಲು, ಮೊಸರು, ಮಜ್ಜಿಗೆ, ತುಪ್ಪ ಇವುಗಳ ಪೂರೈಕೆಗಲ್ಲದೇ ಹತ್ತಿರದ ಪಟ್ಟಣಗಳಿಗೆ ಹೆಚ್ಚಿನ ಈ ಪದಾರ್ಥಗಳನ್ನು ಸರಬರಾಜು ಮಾಡುವುದರಿಂದ ರೈತಾಪಿ ಜನ ಕೆಲವು ಪುಡಿಗಾಸು ಸಂಪಾದಿಸುತ್ತಿದ್ದರು. ಹೀಗೆ ತಮ್ಮ ಜೀವನಕ್ಕೆ ಆಧಾರವಾಗಿದ್ದ ಹಸುಗಳು ಕಳೆದುಹೋದರೆ ರೈತರಿಗೆ ಬಲು ಕಷ್ಟ. ಇವುಗಳ ಜೊತೆ, ಗುಡಿಸಲುಗಳಲ್ಲಿ ವಾಸಿಸುತ್ತಿದ್ದ ಜನ ಕೆಲವು ಬೆಲೆ ಬಾಳುವ ಅವಶ್ಯಕ ಪದಾರ್ಥಗಳನ್ನು ಆಗಾಗ ಕಳೆದುಕೊಳ್ಳುತ್ತಿದ್ದರು. 

ಹುಲ್ಲು ಮೇಯಲು ಹೊರಗಡೆ ಹೋದ ದನಗಳು ಅಲ್ಲಿ-ಇಲ್ಲಿ ಕಂಡ ಹುಲುಸಾದ ಹಸಿರು ಪೈರಿನ ಆಸೆಯಲ್ಲಿ ಅವರಿವರ ಹೊಲ, ತೋಟಗಳಿಗೆ ನುಗ್ಗಿ ಪೈರುಗಳನ್ನು ತಿನ್ನುವುದು ಕೆಲವೊಮ್ಮೆ ನಡೆಯುತ್ತಿತ್ತು. ಆ ಜಮೀನಿನ ಮಾಲೀಕರಿಗೆ ಅವು ಯಾರ ದನಗಳು ಎಂದು ಗೊತ್ತಾಗುತ್ತಿರಲಿಲ್ಲ. ಮೇಲಾಗಿ, ತಮ್ಮ ಹೊಲಗಳ ಪೈರು ತಿಂದ ದನಗಳ ಮೇಲೆ ಅವರಿಗೆ ಸಹಜವಾಗಿಯೇ ಸ್ವಲ್ಪ ಅಸಹನೆ ಇರುತ್ತ್ತಿತ್ತು. ಪುರಸಭೆಗಳು ಅಲ್ಲಲ್ಲಿ "ತೊಂಡಿನ ಮನೆ" ಎನ್ನುವ ವ್ಯವಸ್ಥೆ ಮಾಡಿರುತ್ತಿದ್ದರು. ಅವು ಹೆಸರಿಗೆ ಮನೆ. ವಾಸ್ತವವಾಗಿ ನಾಲ್ಕು ಗೋಡೆಗಳು ಮತ್ತು ಒಂದು ಬಾಗಿಲು ಇದ್ದು ಬೀಗ ಹಾಕುವ ವ್ಯವಸ್ಥೆ ಇರುತ್ತಿತ್ತು. ದನಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಇರುತ್ತಿತ್ತು. "ತೊಂಡು" ಅನ್ನುವ ಪದಕ್ಕೆ "ದಾರಿ ತಪ್ಪಿದ", "ಹೇಳುವವರು-ಕೇಳುವವರು ಇಲ್ಲದ" ಅಥವಾ "ಅಂಕೆಯಿಲ್ಲದ" ಎಂದು ಅರ್ಥ. ಇಂಗ್ಲೀಷಿನಲ್ಲಿ "ವೈಲ್ಡ್" ಅಥವಾ "ಆನ್-ಕಂಟ್ರೊಲ್ಡ್" ಎನ್ನಬಹುದು. ಯಾರಾದರೂ ಹುಡುಗರು ಮನೆಯಲ್ಲಿ ಹೇಳಿದ ಮಾತು ಕೇಳದಿದ್ದರೆ "ಇವನೇನು, ತೊಂಡು ಬಿದ್ದಿದ್ದಾನೆ" ಎಂದು ಗದರುತ್ತಿದ್ದರು. 

ಜಮೀನಿನ ಮಾಲೀಕರು ತಮ್ಮ ಭೂಮಿಗೆ ನುಗ್ಗಿದ ಹಸುಗಳನ್ನು ಹೊಡೆದುಕೊಂಡು ಹೋಗಿ ತೊಂಡಿನ ಮನೆಗೆ ದಬ್ಬುತ್ತಿದ್ದರು. ದನ ಕಳೆದುಕೊಂಡವರು ಮೊದಲು ತೊಂಡಿನ ಮನೆಗೆ ಹೋಗಿನೋಡಿ, ತಮ್ಮ ಹುಸುಗಳು ಅಲ್ಲಿದ್ದರೆ ಪುರಸಭೆಗೆ ದಂಡ ಕಟ್ಟಿ ಅವನ್ನು ಬಿಡಿಸಿಕೊಂಡು ತಮ್ಮೊಡನೆ ಕರೆದೊಯ್ಯುತ್ತಿದ್ದರು. ಅಲ್ಲಿಯೂ ತಮ್ಮ ಹಸುಗಳು ಇಲ್ಲದಿದ್ದರೆ ಹುಡುಕುವ ಕೆಲಸ ನಡೆಯುತ್ತಿತ್ತು. 

ಹೀಗೆ ಕಳೆದುಹೋದ ಜಾನುವಾರು ಮತ್ತು ಪದಾರ್ಥಗಳನ್ನು ಹಿಂಪಡೆಯಲು ಸಾಮಾನ್ಯವಾಗಿ ಮೊದಲು ಮಾಡುತ್ತಿದ್ದ ಕೆಲಸ "ಶಾಸ್ತ್ರ ಕೇಳುವುದು". ಅಲ್ಲಲ್ಲಿ ಇದ್ದ ಜೋಯಿಸರು, ಅಯ್ಯನೋರು, ಶಾಸ್ತ್ರಿಗಳು ಮುಂತಾದವರ ಬಳಿ ಹೋಗುವುದು. ಅವರ ಬತ್ತಳಿಕೆಯಲ್ಲಿ ಅನೇಕ ಉಪಾಯಗಳಿದ್ದವು. ಪ್ರಶ್ನೆ ಕೇಳುವುದು, "ಕವಡೆ ಶಾಸ್ತ್ರ", ಚೀಟಿ ಎತ್ತುವುದು ಮುಂತಾದುವು. ಹೀಗೆ ಮಾಡಿ "ನಿಮ್ಮ ಹಸು ಉತ್ತರ ದಿಕ್ಕಿನಲ್ಲಿ ಇದೆ. ಅಲ್ಲಿ ಹುಡುಕಿ" ಮುಂತಾಗಿ ಅವರು ಹೇಳುತ್ತಿದ್ದರು. ಕೆಲವೊಮ್ಮೆ "ಏನೂ ಮಾಡಬೇಡಿ. ಅದೇ ನಿಮ್ಮ ಮನೆಯ ಮುಂದೆ ಬಂದು ನಿಲ್ಲುತ್ತದೆ" ಎಂದೂ ಹೇಳಬಹುದಿತ್ತು. ಇವು ನಿಜವಾದಷ್ಟೂ ಆಯಾ ಶಾಸ್ತ್ರ ಹೇಳುವವರಿಗೆ ಬೆಲೆ ಹೆಚ್ಚುತ್ತಿತ್ತು. 

*****

ಬೆಲೆಬಾಳುವ ವಸ್ತುಗಳು ಕಳೆದು ಹೋದಾಗ ಕಳವಳ ಮತ್ತಷ್ಟು ಹೆಚ್ಚುತ್ತಿತ್ತು. ಹೊಟ್ಟೆ-ಬಟ್ಟೆ ಕಟ್ಟಿ ಆಸೆಯಿಂದ ಸಂಪಾಸಿದ ಬೆಳ್ಳಿ-ಬಂಗಾರದ ಒಡವೆಗಳು ಮುಂತಾದವು ಹೀಗೆ ಕಳೆದುಹೋದರೆ ಅಥವಾ ಕಳವಾದರೆ ಸಹಜವಾದ ನೋವು ಇರುತ್ತಿತ್ತು. ಇವು ದನಗಳನ್ನು ಹುಡುಕಿದಂತೆ ಅಲ್ಲ. ಕವಡೆ ಶಾಸ್ತ್ರ ಮುಂತಾದುವು ಇವುಗಳ ಹುಡುಕುವಿಕೆಗೆ ಸಾಲವು. ಆಗ ಜನಗಳು "ಅಂಜನ" ಹಾಕುವವರ ಮೊರೆಹೋಗುತ್ತಿದ್ದರು. 

ಅಂಜನ ಹಾಕುವವರು ತಮ್ಮ ಬಳಿ ಬಂದವರ ಸಮಸ್ಯೆ ವಿಚಾರಿಸಿ ಅಂಜನ ಹಾಕುತ್ತಿದ್ದರು. "ಅಂಜನ ಹಾಕುವುದು" ಎಂದರೇನು? ಒಂದು ಇಷ್ಟದೈವದ ಪೂಜೆ ಮಾಡುವುದು. ನಂತರ ಒಂದು ಹರಿವಾಣದಲ್ಲಿ (ತಟ್ಟೆ ಅಥವಾ ಬಾಂಡಲೆ) ತಿಳಿಯಾದ ಎಣ್ಣೆ ತುಂಬಿಸುವುದು. ತಮ್ಮ ಬಳಿ ಇರುವ ಕಾಡಿಗೆಯಂತಹ ಒಂದು ಮುಲಾಮು ಕಣ್ಣಿಗೆ ಹಚ್ಚಿಕೊಳ್ಳುವುದು. ನಂತರ ಬಂದವರನ್ನು ಪ್ರಶ್ನೆ ಕೇಳುತ್ತಾ ಆ ಎಣ್ಣೆಯಲ್ಲಿ ನೋಡುತ್ತಾ ಹೋಗುವುದು. ಹೀಗೆ ನೋಡುತ್ತಿರುವಾಗ ಕಳೆದಿರುವ ಪದಾರ್ಥ ಎಲ್ಲಿದೆ ಎಂದು ಅವರಿಗೆ ಕಾಣುವುದು. ಕಂಡದ್ದನ್ನು ಬಂದವರಿಗೆ ಹೇಳುವುದು. ಈ ಸುಳಿವಿನ ಮೇರೆಗೆ ಅವರು ತಮ್ಮ ಹುಡುಕಾಟ ಮುಂದುವರೆಸುವುದು. ಹೀಗೆ ವ್ಯವಸ್ಥೆ. 

ಇದು ನಿಜವೇ? ಹೀಗೆ ಕಾಣಿಸುತ್ತದೆಯೇ? ಈ ರೀತಿಯ ಪ್ರಶ್ನೆಗಳು ಬರುತ್ತವೆ. ಇವೆಲ್ಲಾ ಅವರವರ ನಂಬಿಕೆಯ ಸಮಾಚಾರ. ಹೀಗೆ ಅಂಜನ ಹಾಕಿ ಕೇಳಿ ಪದಾರ್ಥಗಳು ಸಿಕ್ಕಿದ್ದೂ ಉಂಟು. ಸಿಗದಿದ್ದದ್ದೂ ಉಂಟು. ಸಿಕ್ಕಿದ್ದು ಕಾಕತಾಳೀಯ ನ್ಯಾಯ ಇರುವಂತೆ ಇರಬಹುದು. (ಒಬ್ಬ ವ್ಯಕ್ತಿ ಒಂದು ತಾಳೆಯ ಮರದ ಕೆಳಗೆ ಹೋಗಿ ಕುಳಿತುಕೊಂಡ. ಅದೇ ಸಮಯಕ್ಕೆ ಒಂದು ಕಾಗೆ ಆ ಮರದ ಮೇಲೆ ಬಂದು ಕುಳಿತುಕೊಂಡಿತು. ಮರ ಅವನ ಮೇಲೆ ಬಿದ್ದಿತು. ಕಾಗೆಯ ಭಾರಕ್ಕೆ ಮರ ಮುರಿದು ಅವನ ಮೇಲೆ ಬಿತ್ತು ಎನ್ನುವುದು ಕಾಕ-ತಾಳೀಯ ನ್ಯಾಯ ಎಂದು ಹೇಳುವುದು. ಇಂಗ್ಲೀಷಿನಲ್ಲಿ coincidence ಅನ್ನಬಹುದು). ಏನಾದರೂ ಮಾಡಿ ಬೆಲೆಬಾಳುವ ವಸ್ತು ಮರಳಿ ಪಡೆಯಬೇಕೆಂಬ ಆಸೆ ಇರುವ ವ್ಯಕ್ತಿ ಏನು ಬೇಕಾದರೂ ಮಾಡುತ್ತಾನೆ. ಇದು ಮನುಷ್ಯ ಸಹಜ ವ್ಯವಹಾರ. 

*****

ವಿದ್ಯಾರ್ಥಿಗಳಿಗೆ ವಿಜ್ಞಾನದ ತರಗತಿಗಳಲ್ಲಿ, ವಿಶೇಷವಾಗಿ ರಸಾಯನ ಶಾಸ್ತ್ರ ಕಲಿಸುವ ಸಂದರ್ಭದಲ್ಲಿ, ಆಮ್ಲಜನಕ (oxygen) ತಯಾರಿಸುವುದನ್ನು ಕಲಿಸುತ್ತಾರೆ. ಇದಕ್ಕೆ ಅನೇಕ ವಿಧಾನಗಳಿವೆ. (ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ ಹೈಡ್ರೋಜನ್ ಪರಾಕ್ಸೈಡ್ ಉಪಯೋಗಿಸುವುದು ಒಂದು ವಿಧಾನ). ಸಾಮಾನ್ಯವಾಗಿ ಪೊಟ್ಯಾಸಿಯಂ ಕ್ಲೋರೇಟ್ (Potassium Chlorate - KClO3)) ಹೆಸರಿನ ರಾಸಾಯನಿಕ ಪುಡಿಯನ್ನು ಕಾಯಿಸಿದರೆ ಅದು ಪೊಟ್ಯಾಸಿಯಂ ಕ್ಲೋರೈಡ್ (KCl) ಆಗಿ ರೂಪಾಂತರಗೊಂಡು ಆಮ್ಲಜನಕ (O2) ಬಿಡುಗಡೆ ಆಗುತ್ತದೆ. ಆದರೆ ಈ ಕ್ರಿಯೆ ಬಹಳ ನಿಧಾನ. ಇದು ಬೇಗ ಆಗುವುದಕ್ಕೆ ಪೊಟ್ಯಾಸಿಯಂ ಕ್ಲೋರೇಟ್ ಜೊತೆಗೆ ಸ್ವಲ್ಪ ಮ್ಯಾಂಗನೀಸ್ ಡೈ ಆಕ್ಸೈಡ್ (Mn O2) ಬೆರೆಸುತ್ತಾರೆ. ಹೀಗೆ ಮಾಡುವುದರಿಂದ ಆಮ್ಲಜನಕ ಬೇಗ ಬಿಡುಗಡೆ ಆಗುತ್ತದೆ. ಈ ಮ್ಯಾಂಗನೀಸ್ ಡೈ ಆಕ್ಸೈಡ್ ಅನ್ನುವುದು ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ಆದರೆ ಅದರ ಇರುವುಕೆ ಆಗಬೇಕಾದ ಕೆಲಸವನ್ನು ಬೇಗ ನಡೆಯುವಂತೆ ಮಾಡುತ್ತದೆ.

ಕ್ರೀಡಾಂಗಣಗಳಲ್ಲಿ ಭಾಗವಹಿಸುವ ಆಟಗಾರರಂತೆ ಅವರ ಸಮರ್ಥಕರೂ, ಅಭಿಮಾನಿಗಳೂ, ಸಾಮಾನ್ಯ ಪ್ರೇಕ್ಷಕರೂ ಸೇರಿರುತ್ತಾರೆ. "ಹೊಡಿ, ಹಿಡಿ, ನುಗ್ಗು, ಓಡು, ಎಗರು" ಮುಂತಾಗಿ ಆಟಗಾರರನ್ನು ಅವರು ಹುರಿದುಂಬಿಸುತ್ತಾರೆ. ಆಡುವವರು, ಗೆಲ್ಲುವವರು ಮತ್ತು ಸೋಲುವವರು ಆಟಗಾರರೇ. ಪ್ರೇಕ್ಷಕರಿಗೆ ಅದರಿಂದ ನೋಡಿದ ಸಂತೋಷ ಅಷ್ಟೇ. ಬಹುಮಾನ, ಮನ್ನಣೆ, ಟ್ರೋಫಿ, ಹಣ, ಇವು ಯಾವುವೂ ಪ್ರೇಕ್ಷಕರಿಗೆ ಸಿಗುವುದಿಲ್ಲ. ಅವೆಲ್ಲಾ ಆಟಗಾರರಿಗೆ ಮಾತ್ರ. ಆದರೂ ಕ್ರೀಡಾಂಗಣ ಪ್ರೇಕ್ಷಕರಿಲ್ಲದೆ ಕೋವಿಡ್ ಮಾರಿಯ ಸಮಯದಂತೆ ಬರಿದಾಗಿದ್ದರೆ ಆಟಗಾರರಿಗೆ ಎಲ್ಲ ನೀರಸವಾಗುತ್ತದೆ. 

ಇದು ನಾನ್-ಸ್ಟಿಕ್ ಪಾತ್ರೆಗಳ ಯುಗ. ಸೌದೆ ಒಲೆಯ ಮಸಿಯಿಲ್ಲ. ಎಣ್ಣೆಯ ಜಿಡ್ಡಿಲ್ಲ. ತಂಗಳಿನ ವಾಸನೆಯಿಲ್ಲ. ಸುಮ್ಮನೆ ಸ್ವಲ್ಪ ನೀರು ಹಾಕಿ ಒರೆಸಿದರೆ ಆಯಿತು. ಹಿಂದಿನ ದಿನಗಳಂತೆ ತಿಕ್ಕಿ-ತಿಕ್ಕಿ ತೊಳೆಯುವ ಕೆಲಸವಿಲ್ಲ. ತೊಳೆದರೂ ಮಸಿ ಉಳಿಯಿತೆಂಬ ಕಸಿವಿಸಿ ಇಲ್ಲ. ಮತ್ಯಾರೋ ಏನಾದರೂ ಅನ್ನುತ್ತಾರೆ ಅನ್ನುವ ಅಳುಕಿಲ್ಲ. 
***** 

ಪರಮಾತ್ಮನನ್ನು ಅನೇಕ ಹೆಸರುಗಳಿಂದ ಕರೆಯುತ್ತೇವೆ. ಅವುಗಳಲ್ಲಿ "ನಿರಂಜನ" ಅನ್ನುವುದೂ ಒಂದು. ಹೀಗೆ ನಿರಂಜನ ಎಂದು ಕರೆಯುವುದರ ಕಾರಣವೇನು? 

"ಅಂಜನ" ಅಂದರೆ ಏನು ಅನ್ನುವುದರ ವಿವರವನ್ನು ಮೇಲೆ ನೋಡಿದೆವು. ಅಂಜನ ಹಾಕುವವರು ಕಣ್ಣಿಗೆ ಹಚ್ಚಿಕೊಳ್ಳುವ ಮುಲಾಮಿನಂತಹ ವಸ್ತುವಿಗೆ ಅಂಜನ ಎನ್ನುವುದೇಕೆ? ಅದು ಕಣ್ಣಿಗೆ ಅಂಟಿಕೊಂಡು ಕೂಡುತ್ತದೆ. "ಅಂಜನ" ಪದಕ್ಕೆ "ಅಂಟಿಕೊಳ್ಳುವುದು" ಎಂದು ಅರ್ಥ. 

ಅಂಟಿಕೊಳ್ಳುವ ಪದಾರ್ಥ ಅಂಜನ ಎಂದಾದರೆ ಅಂಟಿಕೊಳ್ಳದ ವಸ್ತು "ನಿರಂಜನ". ಆದ್ದರಿಂದ ಪರಮಾತ್ಮನು "ನಿರಂಜನ". 

ಆಮ್ಲಜನಕದ ತಯಾರಿಕೆಯಲ್ಲಿ ಉಪಯೋಗಿಸುವ ಮ್ಯಾಂಗನೀಸ್ ಡೈ ಆಕ್ಸೈಡ್ ಎಂಬ ವಸ್ತುವಿಗೆ "ವೇಗವರ್ಧಕ" (Catalyst) ಅನ್ನುತ್ತಾರೆ. ಅದು ತಯಾರಿಕೆಯಲ್ಲಿ ಸುಮ್ಮನೆ ಇರುವುದೇ ಹೊರತು ಆ ಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ಕ್ರಿಯೆಯ ಮೊದಲು ಹೇಗೆ ಇತ್ತೋ ಕ್ರಿಯೆಯ ನಂತರವೂ ಹಾಗೆಯೇ ಉಳಿಯುವುದು. ಕ್ರೀಡಾಂಗಣದಲ್ಲಿ ಸೇರಿದ ಪ್ರೇಕ್ಷಕರೂ ಹಾಗೆಯೇ. ಅವರಿಗೆ ಆಟದ ನೇರ ಲಾಭ ಏನೂ ಇಲ್ಲ. ನಾನ್-ಸ್ಟಿಕ್ ಪಾತ್ರೆಯೂ ಹೀಗೆಯೇ. 

ಪರಮಾತ್ಮನು ನಮ್ಮ ಎಲ್ಲ ಕ್ರಿಯೆಗಳ ಅಂತಃಶಕ್ತಿಯಾಗಿ ಜೊತೆಗಿರುತ್ತಾನೆ. ಅವನಿಗೆ ಈ ಕ್ರಿಯೆಗಳ ಯಾವುದೇ ವಿಕಾರಗಳೂ ಆಗುವುದಿಲ್ಲ. ಮ್ಯಾಂಗನೀಸ್ ಡೈ ಆಕ್ಸೈಡ್ ಆದರೂ ಬೇರೆ ಪದಾರ್ಥಗಳ ಜೊತೆ ಕಾದು, ನಂತರ ತಣ್ಣಗಾಗುತ್ತದೆ. ಪರಮಾತ್ಮನಿಗೆ ಈ ರೀತಿ ವಿಕಾರಗಳೂ ಇಲ್ಲ. ಪ್ರೇಕ್ಷಕರಿಗೆ ಕೂಗಿದುದರಿಂದ ಆಯಾಸ, ತಮ್ಮ ನೆಚ್ಚಿನ ತಂಡ ಗೆದ್ದರೆ ಆನಂದ, ಸೋತರೆ ದುಃಖ ಆಗುತ್ತವೆ. ಪರಮಾತ್ಮನಿಗೆ ಈ ರೀತಿ ಆಗುವುದಿಲ್ಲ. ಅವನಿಗೆ ಲಾಭದ ಆಸೆಯಿಲ್ಲ. ನಷ್ಟದ ಭೀತಿಯಿಲ್ಲ. ಕೆಲಸ ಮಾಡಿದ ಆಯಾಸವಿಲ್ಲ. ನಾನ್-ಸ್ಟಿಕ್ ಪಾತ್ರೆಯಂತೆ ಬಿಸಿಯಾಗುವುದಿಲ್ಲ. ಒಮ್ಮೆ ತೊಳೆದು ಒರೆಸಬೇಕಾದದ್ದೂ ಇಲ್ಲ. ಅವನು ಯಾವುದಕ್ಕೂ ಅಂಟಿಕೊಂಡವನಲ್ಲ. ಆದ್ದರಿಂದ ಪರಮಾತ್ಮ ನಿರಂಜನ. 

ಹಾಗಿದ್ದರೆ ಕರ್ಮಗಳನ್ನು ಮಾಡುವುದರಲ್ಲಿ ಕೆಲವರಿಗೆ ಪಾಪ, ಮತ್ತೆ ಕೆಲವರಿಗೆ ಪುಣ್ಯ ಏಕೆ? ಎಲ್ಲರೂ ಅವನ ಮಕ್ಕಳಲ್ಲವೇ? ಕೆಲವರಿಗೆ ಯಾಕೆ ಕಷ್ಟ? ಮತ್ತೆ ಕೆಲವರಿಗೆ ಯಾಕೆ ಸುಖ? ಅವನು ಒಬ್ಬ ನ್ಯಾಯಾಧೀಶನಂತೆ. ಒಬ್ಬನಿಗೆ ಶಿಕ್ಷೆ. ಮತ್ತೊಬ್ಬನಿಗೆ ಮನ್ನಣೆ. ಅವರವರು ಮಾಡಿದ ಕೆಲಸಗಳಂತೆ ತೀರ್ಪು. ಇದೇ ಅವನ "ಸಂವಿಧಾನ". 
*****

ಭಗವದ್ಗೀತೆ ಮೂರನೆಯ ಅಧ್ಯಾಯ, ಇಪ್ಪತ್ತೆರಡನೆಯ ಶ್ಲೋಕದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಾನೆ: 

ನ ಮೇ ಪಾರ್ಥಾಸ್ತಿ ಕರ್ತವ್ಯಮ್  ತ್ರಿಷು ಲೋಕೇಷು ಕಿಂಚನ 
ನಾನಾವಾಪ್ತಮವಾಪ್ತವ್ಯಮ್ ವರ್ತ ಏವ ಚ ಕರ್ಮಣಿ 

ಪಾರ್ಥ, ನನಗೆ ಎಲ್ಲಿಯೂ (ಮೂರು ಲೋಕಗಳಲ್ಲಿಯೂ) ಯಾವುದೇ ಕರ್ತವ್ಯಗಳಿಲ್ಲ. 
(ಇಂಥದು ಮಾಡಲೇಬೇಕೆಂಬ ಬಂಧವಿಲ್ಲ). 
ಸಂಪಾದಿಸಬೇಕು, ಗೆಲ್ಲಬೇಕು ಅಥವಾ ಪಡೆಯಬೇಕು ಎನ್ನುವುದು ಯಾವುದೂ ಇಲ್ಲ. 
ಆದರೂ ನಾನು ಕೆಲಸಗಳನ್ನು (ಕರ್ತವ್ಯ ಎನ್ನುವಂತೆ) ಮಾಡುತ್ತಲೇ ಇರುತ್ತೇನೆ. 

ಇದೇ ಅವನ ನಿರಂಜನತ್ವದ ಲಕ್ಷಣ. 

ನಾವು ಮೇಲೆ ಮಾಡಿದ ಚರ್ಚೆಯೆಲ್ಲವೂ ಇದನ್ನೇ ಸೂಚಿಸುತ್ತದೆ. ಪರಮಾತ್ಮನ ಪರಿಪೂರ್ಣ ಜ್ಞಾನ, ಪರಿಪೂರ್ಣ ಆನಂದ, ಮೊದಲಾದ ಗುಣಗಳಂತೆ ಅವನ ನಿರಂಜನ ಗುಣವೂ ಅವನ ಉಪಾಸನೆಯಲ್ಲಿ ಬಹಳ ಮುಖ್ಯವಾದುದು.