ಪ್ರಯಾಗ ನಗರದಿಂದ ಹೊರಟ ಆಚಾರ್ಯರು ಆಗ ತಾನೇ ಮಾಹಿಷ್ಮತಿ ನಗರಕ್ಕೆ ಬಂದು ತಲುಪಿದ್ದರು. ವ್ಯರ್ಥವಾಗಿ ಕಾಲ ಹರಣ ಮಾಡುವ ಪ್ರವೃತ್ತಿ ಅವರದ್ದಲ್ಲ. ಅವರಿಗೆ ಆಗ ಸುಮಾರು ಹದಿನೇಳು-ಹದಿನೆಂಟನೆಯ ವಯಸ್ಸು. ಆ ವಯಸ್ಸಿನ ಬಹುತೇಕ ಯುವಕರಿಗೆ ವಿದ್ಯಾಭ್ಯಾಸವೂ ಮುಗಿದಿರುವುದಿಲ್ಲ. ಜೀವನದಲ್ಲಿ ತಮ್ಮ ಗುರಿ ಏನು ಎನ್ನುವುದೇ ಗೊತ್ತಿರುವುದಿಲ್ಲ. ಆದ ಕಾರಣ ಗುರಿ ಸಾಧನೆಯ ವಿಷಯವಂತೂ ಬಲು ಬಲು ದೂರವೇ. ಆಚಾರ್ಯರಾದರೋ ತಮ್ಮ ಎಂಟನೆಯ ವಯಸ್ಸಿನಲ್ಲಿಯೇ ನಾಲ್ಕು ವೇದಗಳನ್ನು ಕಲಿತು ವಿದ್ವಾಂಸರೆಂದು ಹೆಸರು ಪಡೆದಿದ್ದರಂತೆ. ಹದಿನಾರನೆಯ ವಯಸ್ಸಿಗೇ ಭಾಷ್ಯಗಳನ್ನೂ, ಸ್ತೋತ್ರ ಕಾವ್ಯಗಳನ್ನೂ ರಚಿಸಿದ್ದ ಹಿರಿಮೆ ಅವರದ್ದು.
ಹುಟ್ಟಿದ್ದು ದಕ್ಷಿಣ ದೇಶದ ಒಂದು ಸಣ್ಣ ಊರಿನಲ್ಲಿ. ಈ ವೇಳೆಗಾಗಲೇ ಅನೇಕ ಘನ ವಿದ್ವಾಂಸರನ್ನು ವಾದಗಳಲ್ಲಿ ಜಯಿಸಿ, ದೇಶವೆಲ್ಲ ಸುತ್ತಿ, ಕಾಶಿಯವರೆಗೂ ಬಂದು ತಮ್ಮ ವಿದ್ವತ್ತಿನ, ಸಾಧನೆಯ ಪರಿಚಯ ಮಾಡಿಕೊಟ್ಟಿದ್ದವರು. ಅನೇಕ ಮಂದಿ ಶಿಷ್ಯರನ್ನು ಸಂಪಾದಿಸಿದ್ದವರು. ತಮ್ಮ ಗುರಿ ಸಾಧನೆಯ ಮುಂದಿನ ಹೆಜ್ಜೆಯಾಗಿ ಈಗ ತಕ್ಷಣ ಮಾಹಿಷ್ಮತಿಯ ಪ್ರಸಿದ್ಧ ಪಂಡಿತರೂ, ಕರ್ಮಠರೂ ಆದ ಮಂಡನ ಮಿಶ್ರರನ್ನು ಕಂಡು ಅವರನ್ನು ವಾದಕ್ಕೆ ಆಹ್ವಾನಿಸಲು ಹೊರಟಿದ್ದರು.
ಅದು ವೈದಿಕ ಧರ್ಮ ಅನುಸರಿಸುವವರಿಗೆ ಬಹಳ ಕಠಿಣ ಪರಿಸ್ಥಿತಿಯ ಕಾಲ. ಬೌದ್ಧ ಧರ್ಮ ಎಲ್ಲೆಲ್ಲೂ ಹರಡಿ ವಿಜೃಂಭಿಸುತ್ತಿದ್ದ ಸಮಯ. ಪ್ರಯಾಗದ ಖ್ಯಾತ ಪಂಡಿತರಾದ ಕುಮಾರಿಲ ಭಟ್ಟರು ಬೌದ್ಧ ಧರ್ಮದ ಸೂಕ್ಷ್ಮಗಳನ್ನು ತಿಳಿದುಕೊಳ್ಳದ ಹೊರತು ಬೌದ್ಧ ಪಂಡಿತರನ್ನು ವಾದಗಳಲ್ಲಿ ಸೋಲಿಸುವುದು ಸುಲಭ ಸಾಧ್ಯವಲ್ಲ ಎಂದು ಮನಗಂಡು, ಮಾರುವೇಷದಲ್ಲಿ ಅವರ ವಿದ್ಯಾಲಯವನ್ನೇ ಸೇರಿ ಎಲ್ಲಾ ಸೂಕ್ಷ್ಮಗಳನ್ನೂ ತಿಳಿದರು. ನಂತರ ಅದನ್ನು ಖಂಡನೆಮಾಡಿ ಕಡೆಗೆ ತುಷಾಗ್ನಿ (ಭತ್ತದ ಹೊಟ್ಟು ಉರಿಯುವ ಬೆಂಕಿ) ಪ್ರವೇಶಿಸಿದರು. ಆಚಾರ್ಯರು ಅವರನ್ನು ಕಾಣಲು ಹೋಗುವ ವೇಳೆಗೆ ಅವರಾಗಲೇ ಬೆಂಕಿಯಲ್ಲಿ ಬೇಯುತ್ತಿದ್ದರು.
ಕುಮಾರಿಲ ಭಟ್ಟರು ಆಚಾರ್ಯರನ್ನು ಮಂಡನ ಮಿಶ್ರರನ್ನು ವಾದಕ್ಕೆ ಆಹ್ವಾನಿಸುವಂತೆ ತಿಳಿಸಿ ತಮ್ಮ ಜೀವನ ಮುಗಿಸಿದರು. ಆಚಾರ್ಯರು ಮಂಡನ ಮಿಶ್ರ ಪಂಡಿತರು ಆಗ ವಾಸವಿದ್ದ ಮಾಹಿಷ್ಮತಿ ನಗರಕ್ಕೆ ಈ ಕಾರಣದಿಂದ ಬಂದಿದ್ದರು. ಅವರಿಗೆ ಮಂಡನ ಪಂಡಿತರ ಮನೆ ಸೇರಬೇಕಾಗಿತ್ತು. ಅದಕ್ಕಾಗಿ ಮಂಡನ ಪಂಡಿತರ ಮನೆ ಎಲ್ಲಿದೆ ಎಂದು ಯಾರನ್ನಾದರೂ ಕೇಳಲು ನೋಡುತ್ತಿದ್ದರು. ಆಗ ಮಧ್ಯಾನ್ಹದ ಸಮಯ.
ಆಚಾರ್ಯರು ತಮ್ಮ ದಾರಿಯಲ್ಲಿ ಎದುರಿನಿಂದ ನೀರು ತರಲು ಬರುತ್ತಿದ್ದ ಕೆಲವು ಹೆಣ್ಣು ಮಕ್ಕಳನ್ನು ಕಂಡರು. ಅವರನ್ನು "ಮಂಡನ ಪಂಡಿತರ ಮನೆ ಎಲ್ಲಿದೆ?" ಎಂದು ಕೇಳಿದರು.
*****
ಅನೇಕ ಪ್ರಾಚೀನ ನಗರಗಳು ಈಗಲೂ ಜೀವತುಂಬಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ವಿದ್ಯಾ ಕೇಂದ್ರಗಳಾಗಿ ಕಾಣಸಿಗುತ್ತವೆ. ಕಾಶಿ, ಪ್ರಯಾಗ (ಅಲಹಾಬಾದ್), ಅಯೋಧ್ಯಾ, ದ್ವಾರಕಾ, ಉಜ್ಜಯನಿ ಮುಂತಾದುವು ಕೆಲವು ಉದಾಹರಣೆಗಳು. ಮಾಹಿಷ್ಮತಿಯೂ ಹಿಂದೆ ಇಂತಹ ಒಂದು ನಗರವಾಗಿತ್ತು. ನರ್ಮದಾ ನದಿಯ ದ್ವೀಪವೊಂದರಲ್ಲಿ ಈ ಪಟ್ಟಣ ಇತ್ತಂತೆ. ಕಾವೇರಿ ನದಿಯು ಎರಡು ಭಾಗವಾಗಿ ಶ್ರೀರಂಗಪಟ್ಟಣ ದ್ವೀಪ ಇರುವಂತೆ.
ಸುಪ್ರಸಿದ್ಧನಾದ ಮಾಂಧಾತ ಚಕ್ರವರ್ತಿಯ ಮಗ ಮುಚುಕುಂದ ಮಹಾರಾಜನು ಈ ನಗರದ ಕಾರಣ ಕರ್ತನಂತೆ. ಬಹಳ ಕಾಲ "ಹೈಹಯ" ಎಂಬ ಹೆಸರಿನ ರಾಜವಂಶದವರ ರಾಜಧಾನಿಯಾಗಿತ್ತು. ಕಾರ್ತಿವೀರ್ಯಾರ್ಜುನನು ಈ ಮಾಹಿಷ್ಮತಿಯ ರಾಜನಾಗಿದ್ದು ಶ್ರೀ ಪರಶುರಾಮರಿಂದ ಹತನಾದನು ಎಂದು ತಿಳಿದುಬರುತ್ತದೆ. ಈಗ ಈ ನಗರವಿಲ್ಲ. ಅನೇಕ ಭೌತಿಕ ಕಾರಣಗಳಿಂದ ಕಣ್ಮರೆಯಾದ ನಗರಗಳಲ್ಲಿ ಮಾಹಿಷ್ಮತಿಯೂ ಒಂದು. (ಈಚಿನ ಪ್ರಸಿದ್ಧ ಚಲನಚಿತ್ರ "ಬಾಹುಬಲಿ" ಮಾಹಿಷ್ಮತಿ ಎನ್ನುವ ನಗರದ ಕಥೆ ಎಂದು ಈ ಚಿತ್ರ ನೋಡಿರುವವರು ನೆನಪಿಸಿಕೊಳ್ಳಬಹುದು).
ನರ್ಮದೆಯು ನಾವು ಪ್ರತಿದಿನ ನೆನೆಸಿಕೊಳ್ಳುವ ಒಂದು ಜೀವನದಿ. "ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂಕುರು" ಎಂದು ಕಲಶ ಸ್ಥಾಪನೆ ಸಂದರ್ಭಗಳಲ್ಲಿ ಆಹ್ವಾನಿಸುತ್ತೇವೆ. ನಮ್ಮ ದೇಶದಲ್ಲಿ ಪೂರ್ವದಿಂದ ಹರಿದು ಪಶ್ಚಿಮ ಸಮುದ್ರ ಸೇರುವ ಅತ್ಯಂತ ದೊಡ್ಡ ನದಿ ಇದು. ಮಧ್ಯ ಪ್ರದೇಶ ಮತ್ತು ಗುಜರಾತು ರಾಜ್ಯಗಳ ಅನೇಕ ಎಕರೆ ಪ್ರದೇಶಗಳಿಗೆ ನೀರಾವರಿ ಮತ್ತು ಕುಡಿಯುವ ನೀರಿನ ಸ್ರೋತ ಈ ನದಿ. ಈಚಿನ "ಸರ್ದಾರ್ ಸರೋವರ್ ಡ್ಯಾಮ್" ಗುಜರಾತಿನ ಬಹುತೇಕ ಮರುಭೂಮಿಗೂ ಜೀವ ಕೊಟ್ಟಿರುವ ಸಂಗತಿ ಎಲ್ಲರಿಗೂ ಗೊತ್ತು.
ಆಚಾರ್ಯ ಶಂಕರರಿಗೂ ನರ್ಮದೆಗೂ ಒಂದು ವಿಶೇಷ ನಂಟು. ದಕ್ಷಿಣದ ಕೇರಳದಲ್ಲಿ ಹುಟ್ಟಿದ ಅವರು ಸನ್ಯಾಸ ಸ್ವೀಕರಿಸಲು ಗುರುವನ್ನು ಹುಡುಕಿಕೊಂಡು ಹೊರಟಾಗ ಅವರಿಗೆ ಗುರುಗಳಾದ ಶ್ರೀ ಗೋವಿಂದ ಭಗವತ್ಪಾದರು ಸಿಕ್ಕಿದುದು ಈ ನರ್ಮದೆಯ ತೀರದಲ್ಲೇ. ಶ್ರೀ ಗೌಡಪಾದಾಚಾರ್ಯರ ಶಿಷ್ಯರಾದ ಶ್ರೀ ಗೋವಿಂದ ಭಗವತ್ಪಾದರು ತಮ್ಮನ್ನು ಹುಡುಕಿಕೊಂಡು ಬಂದ ಈ ಶಿಷ್ಯನಿಗೆ ಸನ್ಯಾಸ ಕೊಟ್ಟು ಶ್ರೀ ಶಂಕರಾಚಾರ್ಯ ಎಂದು ಹೆಸರು ಕೊಟ್ಟರು. ಅಲ್ಲಿಂದ ಪ್ರಾರಂಭವಾದ ಆಚಾರ್ಯರ ದೇಶ ಪರ್ಯಟನೆ ಈಗ ಮತ್ತೆ ಅವರನ್ನು ನರ್ಮದೆಯ ತೀರಕ್ಕೆ ತಂದಿತ್ತು.
*****
"ಕುತ್ರಾಲಯೋ ಮಂಡನ ಪಂಡಿತಸ್ಯ?" ("ಮಂಡನ ಪಂಡಿತರ ಮನೆ ಎಲ್ಲಿದೆ?") ಎಂದು ಆಚಾರ್ಯರು ಕೇಳಿದ ನೀರು ತರಲು ಹೊರಟಿದ್ದ ಹೆಣ್ಣು ಮಕ್ಕಳು ಬೇರೆ ಯಾರೋ ಆಗಿರದೆ ಮಂಡನ ಮಿಶ್ರರ ಮನೆಯ ಕೆಲಸದವರೇ ಆಗಿದ್ದರು. ತಮ್ಮನ್ನು ಕೇಳುತ್ತಿರುವ ಸನ್ಯಾಸಿ ಯುವಕನನ್ನು ಅವರು ನೋಡಿದರು. ಕಂಡ ಕೂಡಲೇ ಗೌರವ ಹುಟ್ಟುವ ಆಕರ್ಷಕ ವ್ಯಕ್ತಿತ್ವ. ತೇಜಸ್ವಿ ಸನ್ಯಾಸಿ. ಮಿಶ್ರರ ಮನೆಯ ದಾರಿ ಬೇರೆ ಯಾರಿಗೋ ಹೇಳಿದಂತೆ ಸುಮ್ಮನೆ ಹೇಳಿದರೆ ಹೇಗೆ? ಅವರು ಎರಡು ಶ್ಲೋಕಗಳಲ್ಲಿ ಮಂಡನ ಮಿಶ್ರ ಪಂಡಿತರ ಮನೆಯ ಗುರುತು ಹೇಳಿದರು:
ಸ್ವತಃ ಪ್ರಮಾಣಂ ಪರತಃ ಪ್ರಮಾಣಂಕೀರಾಂಗನಾ ಯತ್ರ ಗಿರಂ ಗಿರಂತಿದ್ವಾರಸ್ಥ ನೀಡಾಂತರ ಸಂನಿರುದ್ಧಾಜಾನೀಹಿ ತಂ ಮಂಡನಮಿಶ್ರ ಗೇಹಂಫಲಪ್ರದಂ ಕರ್ಮ ಫಲಪ್ರದೋಜ:ಕೀರಂಗನಾ ಯತ್ರ ಗಿರಂ ಗಿರಂತಿದ್ವಾರಸ್ಥ ನೀಡಾಂತರ ಸಂನಿರುದ್ಧಾಜಾನೀಹಿ ತಂ ಮಂಡನ ಪಂಡಿತೌಕಃ
"ಹೀಗೇ ಸ್ವಲ್ಪ ಮುಂದೆ ಹೋಗಿ. ಒಂದು ಮನೆಯ ಮುಂದೆ ಪಂಜರಗಳನ್ನು ತೂಗುಹಾಕಿದ್ದಾರೆ. ಅದರಲ್ಲಿರುವ ಗಿಳಿಗಳು "ಸ್ವತಃ ಪ್ರಮಾಣಂ ಪರತಃ ಪ್ರಮಾಣಂ" ಎಂದು ಕೂಗುತ್ತಿರುತ್ತವೆ. ಮತ್ತೆ ಕೆಲವು ಪಂಜರದ ಗಿಣಿಗಳು "ಫಲವನ್ನು ಕೊಡತಕ್ಕದ್ದು ಕರ್ಮ; ಫಲವನ್ನು ಕೊಡುವವನು ಈಶ್ವರ" ಎಂದು ಹೇಳುತ್ತಿರುತ್ತವೆ. ಅದೇ ಮಂಡನ ಮಿಶ್ರ ಪಂಡಿತರ ಮನೆ ಎಂದು ತಿಳಿಯಿರಿ!"
ಒಂದು ಸಾಮಾನ್ಯ ಪ್ರಶ್ನೆಗೆ ಎಂತಹ ಸುಂದರ ಉತ್ತರ! "ಮಂಡನ ಮಿಶ್ರರ ಮನೆಗೆ ಬರುವ ಅನೇಕ ಮೀಮಾಂಸಕರು, ತಾರ್ಕಿಕರು ಮತ್ತು ವಿದ್ವಾಂಸರು ನಡೆಸುವ ವಿದ್ವತ್ಸಭೆಗಳಲ್ಲಿ ನಡೆಯುವ ಚರ್ಚೆಗಳನ್ನು ಕೇಳಿಸಿಕೊಂಡಿರುವ ಗಿಣಿಗಳೂ ಸಹ ತಮ್ಮತಮ್ಮಲ್ಲಿ (ಬೇರೆ ವಿಷಯಗಳನ್ನು ಮಾತಾಡುವುದು ಬಿಟ್ಟು) ವೇದ-ಶಾಸ್ತ್ರ ಸಂಬಂಧಿ ವಿಷಯಗಳ ವಾಕ್ಯಾರ್ಥ ಮಾಡುತ್ತಿರುತ್ತವೆ. ಅದೇ ಪಂಡಿತರ ಮನೆ" ಎಂದು ಭಾವಾರ್ಥ.
ಮಂಡನ ಮಿಶ್ರರ ಮನೆಯ ಕೆಲಸದ ಹೆಣ್ಣು ಮಕ್ಕಳೇ ಈ ರೀತಿ ಹೇಳುವವರಾದರೆ ಮಂಡನ ಮಿಶ್ರರು ಸ್ವತಃ ಎಂತಹ ದೊಡ್ಡ ವಿದ್ವಾಂಸರಾಗಿರಬೇಕು!
*****
ಶ್ರೀ ವಿದ್ಯಾರಣ್ಯರು ಕನ್ನಡಿಗರಿಗೆ ಪ್ರಾತಃ ಸ್ಮರಣೀಯರು. ವಿಜಯನಗರ ಸ್ಥಾಪನೆಗೆ ಮೂಲ ಕಾರಣರು. ಹದಿನಾಲ್ಕನೇ ಶತಮಾನದಲ್ಲಿ ನಮ್ಮ ಕರ್ನಾಟಕದಲ್ಲಿ ಸಮಾಜಕ್ಕೆ ಅವಿಸ್ಮರಣೀಯ ಸೇವೆ ಸಲ್ಲಿಸಿದವರು. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂದೆ ಒಂದು ದಿನ ನೋಡೋಣ.
Very nice to hear about first entry of Acharya to Mandana Mishra place in unique way. Eager to hear about Madhava, later known as guru Vidyaranya.
ReplyDelete