Monday, November 3, 2025

ಅಣ್ಣನು ಹಾವು ತಿಂದನು


ಅಂದು ಸಂಜೆ ಕಾರ್ಯಾಲಯದಿಂದ ಹಿಂದಿರುಗಿದ ತಂದೆಗೆ ಪ್ರತಿದಿನ ತನ್ನ ಬರವನ್ನು ನಿರೀಕ್ಷಿಸುತ್ತಾ ಕಾಯುತ್ತಿದ್ದ ಮಕ್ಕಳು ಮನೆಯಲ್ಲಿ ಕಾಣಿಸಲಿಲ್ಲ. ಮಕ್ಕಳು ಇಲ್ಲದಿದ್ದರೂ ಅವರು ಅಲ್ಲಿಯೇ ಸುತ್ತ-ಮುತ್ತ ಇದ್ದ ಕುರುಹುಗಳು ಕಾಣುತ್ತಿದ್ದವು. ಶಾಲೆಯ ಚೀಲಗಳು, ಪುಸ್ತಕಗಳು ಅಲ್ಲಲ್ಲಿ ಹರಡಿದ್ದವು. ತೆರೆದಿದ್ದ ಪುಸ್ತಕದಲ್ಲಿ ಅರ್ಧ ವಾಕ್ಯ ಬರೆದು, ಅದನ್ನು ಪೂರ್ತಿ ಮಾಡುವ ಮೊದಲೇ ಎಲ್ಲೋ ಓಡಿಹೋಗಿದ್ದುದು ಕಾಣುತ್ತಿತ್ತು. ಮಕ್ಕಳಿಗೆ ಆಟದ ಸೆಳೆತ ಅಂತಹುದು. ಎಲ್ಲ ಎತ್ತಿಟ್ಟು ಒಪ್ಪ-ಓರಣ ಮಾಡಿ ಹೋದರೆ ಅವರನ್ನು ಮಕ್ಕಳು ಎಂದೇಕೆ ಕರೆಯಬೇಕು? ಹಿರಿಯರಿಗೇ ಇಲ್ಲದ ಶಿಸ್ತನ್ನು ಮಕ್ಕಳ ಮೇಲೆ ಏಕೆ ಹೇರಬೇಕು? 

ಮಗಳು ಈಗ ತಾನೇ ಕನ್ನಡ ಕಲಿಯಲು ಪ್ರಾರಂಭಿಸಿದ್ದಾಳೆ. ಏನೋ ಬರೆಯುತ್ತಿದ್ದಾಳೆ. ಏನೆಂದು ನೋಡೋಣ ಅನ್ನಿಸಿತು. ನೋಟ್ ಪುಸ್ತಕವನ್ನು ಹಿಡಿದು ಅಲ್ಲೇ ಕುರ್ಚಿಯ ಮೇಲೆ ಕುಳಿತ. ಒಂದು ವಾಕ್ಯ ಪೂರ್ತಿಯಾಗಿದೆ. ಎರಡನೆಯದು ಪ್ರಾರಂಭವಾಗಿದೆ. ಓದಿದ. 

"ಅಣ್ಣನು ಹಾವು ತಿಂದನು. ಅದನ್ನು" ಅಷ್ಟು ಬರೆಯುವಲ್ಲಿ ಆಟದ ಮೇಲೆ ಗಮನ ತಿರುಗಿರಬೇಕು. ಅರ್ಧಕ್ಕೇ ಬಿಟ್ಟು ಓಡಿಹೋಗಿದ್ದಾಳೆ. 

ಇದೇನು, ಹೀಗಿದೆ? ಮೊನ್ನೆ ಗೋಕುಲಾಷ್ಟಮಿಗೆ ಅಜ್ಜಿ ಮಾಡಿಟ್ಟಿದ್ದ ಚಕ್ಕುಲಿ, ಕೋಡುಬಳೆ, ತೇಂಗೊಳಲು, ಸಿಹಿ ಉಂಡೆ, ಇವನ್ನು ಕೊಟ್ಟರೂ ತಿನ್ನುವುದಿಲ್ಲ. ಹಾವನ್ನು ತಿಂದನೇ? ಅನುಮಾನವಾಯಿತು. ಅದೂ ಎಂಥ ಹಾವೋ, ಏನೋ. 

ಒಹೋ, ಇದು ಅವಳ ಅಣ್ಣನ ಸಮಾಚಾರವಲ್ಲ. ಶಾಲೆಯ ಪಾಠದ ಪುಸ್ತಕದ ಸಾಲು. ನಗು ಬಂತು. ಅಷ್ಟರಲ್ಲಿ ಆಟ ಮುಗಿಸಿ ಮಗಳು ಓಡಿ ಬಂದಳು. 

"ಇದೇನು, ಹೀಗೆ ಬರೆದಿದ್ದಿ? ನಿಮಗೆ ಚೀನಾ ದೇಶದ ಕತೆಯ ಪಾಠ ಇದೆಯೇ?"
"ಇಲ್ಲಪ್ಪ"
"ಮತ್ತೆ ಅಣ್ಣ ಹಾವು ತಿಂದಿದ್ದಾನೆ ಅಂತ ಬರೆದಿದ್ದೀಯೆ. ಎಲ್ಲಿ, ಪಾಠ ತೋರಿಸು"

ಮಗಳು ಪುಸ್ತಕದಲ್ಲಿದ್ದ ಪಾಠ ತೋರಿಸಿದಳು. 

"ಅಣ್ಣನು ಹೂವು ತಂದನು. ಅದನ್ನು ಅಮ್ಮನಿಗೆ ಕೊಟ್ಟನು" ಎಂದಿತ್ತು ಪುಸ್ತಕದಲ್ಲಿ. ಮಗು ಕಾಗುಣಿತ ಕಲಿಯುವ ಕಷ್ಟದಲ್ಲಿ ಹೂವು ಹಾವಾಗಿತ್ತು. ತಂದದ್ದು ತಿಂದಾಗಿತ್ತು. 

*****

ಕನ್ನಡ ರಾಜ್ಯೋತ್ಸವ ಬಂದಿದೆ. ಈ ಸಂದರ್ಭದಲ್ಲಿ ಎಲ್ಲೆಡೆಯೂ ಒಂದು ಸಂಭ್ರಮದ ವಾತಾವರಣ. ವಾಟ್ಸಪ್ಪನಲ್ಲಂತೂ ಶುಭಾಶಯಗಳ ಮಹಾಪೂರ. 

ಸ್ವಾತಂತ್ರ್ಯಾನಂತರ ಭಾಷಾವಾರು ಪ್ರಾಂತಗಳ ರಚನೆಗೆ ಬಹಳ ಬೇಡಿಕೆ ಇದ್ದ ಕಾಲ. "ಕರ್ನಾಟಕ ಕುಲ ಪುರೋಹಿತ" ಎಂದೇ ಖ್ಯಾತರಾದ ಆಲೂರು ವೆಂಕಟ ರಾಯರು, ಹುಯಿಲುಗೋಳ ನಾರಾಯಣ ರಾಯರು, ಅ. ನ. ಕೃಷ್ಣ ರಾಯರು ಇನ್ನೂ ಮುಂತಾದ ಅನೇಕ ಮಹನೀಯರು "ಕರ್ನಾಟಕ ಏಕೀಕರಣ" ಆಗಬೇಕೆಂದು ಹೋರಾಡುತ್ತಿದ್ದ ಕಾಲ. ಇದೇ ರೀತಿ ಎಲ್ಲ ತೆಲುಗು ಮಾತನಾಡುವ ಪ್ರದೇಶವು "ವಿಶಾಲಾಂಧ್ರ" ಎಂದು ಒಂದಾಗಬೇಕೆಂದು ತೆಲುಗರೂ ಹೊಡೆದಾಡುತ್ತಿದ್ದರು. "ಪೊಟ್ಟಿ ಶ್ರೀರಾಮುಲು" ಅನ್ನುವವರು ಆಮರಣಾಂತ ಉಪವಾಸ ಸತ್ಯಾಗ್ರಹ ಇದಕ್ಕಾಗಿ ಮಾಡಿದರು. (ಇದರ ವಿವರಗಳನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು) 56 ದಿನಗಳ ಅಖಂಡ ಉಪವಾಸದ ನಂತರ ಶ್ರೀರಾಮುಲು ಅಮರರಾದರು. ತದನಂತರ ಭಾಷಾವಾರು ಪ್ರಾಂತಗಳ ರಚನೆಗೆ ಇನ್ನೂ ಹೆಚ್ಚಿನ ಬಲ ಬಂದು ಕಡೆಗೆ ಆ ಕೆಲಸವಾಯಿತು. 1956ನೆಯ ಇಸವಿ ನವೆಂಬರ್ ಒಂದರಂದು "ವಿಶಾಲ ಮೈಸೂರು ರಾಜ್ಯ" ರೂಪುಗೊಂಡಿತು. ಅದರ ನೆನಪಿನಲ್ಲಿ "ಕನ್ನಡ ರಾಜ್ಯೋತ್ಸವ" ಆಚರಿಸುತ್ತ ಬಂದಿದ್ದೇವೆ. ಐವತ್ತು ವರುಷಗಳ ಕನ್ನಡಿಗರ ಕನಸು ಅಂದು ನನಸಾಯಿತು. ಹೀಗೆಯೇ ವಿಶಾಲಾಂಧ್ರ ಸಹ ಅಸ್ತಿತ್ವಕ್ಕೆ ಬಂದಿತು. ನವೆಂಬರ್ ಮೊದಲ ದಿನ ಎರಡು ರಾಜ್ಯಗಳಲ್ಲೂ ಸರ್ಕಾರೀ ರಜಾದಿನವಾಗಿ ಸಮಾರಂಭಗಳು ನಡೆಯುವ ಸಂಪ್ರದಾಯ ಪ್ರಾರಂಭವಾಯಿತು. 

ನಂತರ ರಾಜ್ಯಕ್ಕೆ ಹೆಸರು ಬದಲಾವಣೆ ಮಾಡುವ ಬೇಡಿಕೆ ಬಂದಿತು. "ಕನ್ನಡನಾಡು", "ಕರ್ಣಾಟಕ" ಅಥವಾ "ಕರ್ನಾಟಕ" ಎಂದು ಪರ-ವಿರೋಧ ಚರ್ಚೆ ನಡೆದು ಕಡೆಗೆ 1973, ನವೆಂಬರ್ ಒಂದರಂದು "ಕರ್ನಾಟಕ" ಎಂದು ಮರುನಾಮಕರಣ ಆಯಿತು. ಹುಯಿಲುಗೋಳ ನಾರಾಯಣ ರಾಯರ "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು" ಬದಲಾಯಿಸಿ "ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು" ಎಂದು ಕೆಲವರು ಹಾಡಿದ್ದೂ ಉಂಟು. 

*****


ಮೈಸೂರು ರಾಜ್ಯ "ವಿಶಾಲ ಮೈಸೂರು ರಾಜ್ಯ" ಎಂದಾಗಿ ನಂತರ "ಕರ್ನಾಟಕ" ಕೂಡ ಆಗಿದೆ. ವಿಶಾಲಾಂಧ್ರ ಈಗ ಎರಡಾಗಿ "ತೆಲಂಗಾಣ" ಮತ್ತು "ಸೀಮಾಂಧ್ರ" (ಆಂಧ್ರ ಪ್ರದೇಶ ಎಂದು ಕರೆಯುವುದು) ಆಗಿವೆ. ಕರ್ನಾಟಕದಲ್ಲೂ ಆಗಾಗ್ಗೆ "ಕಲ್ಯಾಣ ಕರ್ನಾಟಕ" ಬೇರೆ ಆಗಬೇಕೆಂಬ ಕೂಗು ಕೇಳಿ ಬರುತ್ತದೆ. "ಹೆಸರಾಯಿತು ಕರ್ನಾಟಕ; ಉಸಿರಾಗಲಿ ಕನ್ನಡ" ಎನ್ನುವುದು ಒಂದು ಆಶಯವಾಗಿಯೇ ಉಳಿದಿದೆ. 

ಅನೇಕ ರಾಜಕೀಯ ಕಾರಣಗಳಿಂದ ಏಕೀಕೃತ ಕರ್ನಾಟಕದ ವಿಭಜನೆಯ ಕೂಗು ಆಗಾಗ ಕೇಳಿಬರುತ್ತಿದ್ದರೂ ಆಂಧ್ರದ ರೀತಿ ವಿಭಜನೆಯ ಲಕ್ಷಣಗಳು ವಿಪರೀತವಾಗಿ ಕಾಣಿಸುತ್ತಿಲ್ಲ. ಎಲ್ಲ ಬೆಳವಣಿಗೆ ಕೆಲಸಗಳೂ ಬೆಂಗಳೂರಿನಲ್ಲಿ ಆಗುತ್ತಿವೆ ಎನ್ನುವುದು ಒಂದು ಉತ್ತರ ಕರ್ನಾಟಕದ ಕೂಗಾಗಿದೆ. ಸಮಾಧಾನ ಪಡಿಸಲು ಬೆಳಗಾವಿಯಲ್ಲಿ ಒಂದು ವಿಧಾನ ಸೌಧ ರಚನೆಯಾಗಿ ಆಗಾಗ ಅಲ್ಲಿ ಅಧಿವೇಶನಗಳೂ ನಡೆಯುತ್ತಿವೆ. ಆದರೆ ಎಲ್ಲ ಸರಿಯಾಗಿದೆ ಎಂದು ಹೇಳುವ ಸ್ಥಿತಿ ಇದೆ ಅನ್ನುವಂತಿಲ್ಲ. 

ಕೇಂದ್ರ ಸರಕಾರ ಯಾರೇ ನಡೆಸಲಿ, ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಹಿಂದಿ ಭಾಷೆಯ ಹೇರಿಕೆ ಅವ್ಯಾಹತವಾಗಿ ನಡೆದಿದೆ. ತಮಿಳುನಾಡಿನಂತೆ ಅರವತ್ತರ ದಶಕದಲ್ಲಿ ಕನ್ನಡ ಭಾಷಿಕರು ಬಲವಾಗಿ ನಿಲ್ಲದಿದ್ದುದಕ್ಕೆ ತೆರುತ್ತಿರುವ ಬೆಲೆ ಇದು. 

*****

ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನ ಕಥೆ ಒಂದು ದೊಡ್ಡ ವ್ಯಥೆಯೇ ಆಗಿದೆ. ಹೊರರಾಜ್ಯಗಳಿಂದ ಬಂದವರು ತಾವಾಗಿ ಕನ್ನಡ ಕಲಿಯುವುದಿಲ್ಲ. ದಶಕಗಳೇ ಕಳೆದರೂ ಬೇರೆಯೇ ಆಗಿ ಉಳಿಯುತ್ತಾರೆ. ಕಲಿಸುವ ಪ್ರಯತ್ನ ಕನ್ನಡಿಗರು ಮಾಡುವುದಿಲ್ಲ. "ಕನ್ನಡ ಕಲಿಯಿರಿ" ಎಂದು ಹೇಳುವುದು ಒಂದು ರೀತಿಯ ಗೂಂಡಾಗಿರಿ ಎನ್ನುವಂತೆ ಮೀಡಿಯಾದಲ್ಲಿ ಪ್ರತಿಬಿಂಬಿತ ಆಗುತ್ತಿದೆ. ಈಗ ಬೆಂಗಳೂರಿನ ಒಟ್ಟಾರೆ ಜನಸಂಖ್ಯೆಯಲ್ಲಿ ಶೇಕಡಾ ಕೇವಲ ಮೂವತ್ತೈದರಷ್ಟು ಕನ್ನಡಿಗರು ಉಳಿದಿದ್ದಾರೆ. "ಒಂದು ಸಂಸ್ಕೃತಿ ನಾಶ ಮಾಡಬೇಕಾದರೆ ಅತ್ಯಂತ ಸುಲಭ ಉಪಾಯ ಅಲ್ಲಿನ ಭಾಷೆ ಹಾಳುಮಾಡುವುದು" ಎಂದು ಒಂದು ಹೇಳಿಕೆಯಿದೆ. ಇದರ ಪ್ರಯೋಗಶಾಲೆ ಕರ್ನಾಟಕವೇ ಆಗಿರುವುದು ನಮ್ಮ ದೌರ್ಭಾಗ್ಯ. 

ಈಗಿನ ತಲೆಮಾರಿನ ಅನೇಕ ಕನ್ನಡಿಗರಿಗೆ ಕನ್ನಡ ಮಾತನಾಡುವುದು ಗೊತ್ತು. ಓದಲು ಕಷ್ಟ. ಬರೆಯಲು ಬರದು. ಅಕಸ್ಮಾತ್ ಬರೆದರೂ "ಹೂವು" ಹಾವು" ಆಗಬಹುದು. "ತಂದು" ಅನ್ನುವುದು "ತಿಂದು" ಆಗಬಹುದು. ಅಂದು ಆ ಮನೆಯಲ್ಲಿ ಆಗಿದ್ದು ಕಲಿಯುವ ಮಗುವಿನ ತಪ್ಪು. ಇಂದು ಎಲ್ಲೆಡೆ ಆಗುತ್ತಿರುವುದು ನಮ್ಮ ಉದಾಸೀನದಿಂದ ಆಗುತ್ತಿರುವ ಪ್ರಮಾದ. 

ಕನ್ನಡದ ಕೆಲಸಕ್ಕೆ ಎಂದು ಸ್ಥಾಪಿತವಾದ ಸಂಸ್ಥೆ "ಕನ್ನಡ ಸಾಹಿತ್ಯ ಪರಿಷತ್ತು". ಆ ಸಂಸ್ಥೆಯ ಮುಖ್ಯ ಕಚೇರಿ "ಪರಿಷನ್ಮಂದಿರ" ಇರುವ ರಸ್ತೆಗೆ ಕನ್ನಡದ "ಆದಿಕವಿ" ಪಂಪನ ನೆನಪಾಗಿ "ಪಂಪ ಮಹಾಕವಿ ರಸ್ತೆ" ಎಂದು ಹೆಸರಿದೆ. ಇದನ್ನೂ ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸುದ್ದಿ. ಪಂಪನ ಕೃತಿಗಳನ್ನು ಓದುವುದು ಅತ್ತ ಇರಲಿ. ಅವನ ಹೆಸರೂ ನಮಗೆ ಬೇಡವಾಗಿದೆ.  

ಹಳಗನ್ನಡ ಎಂದೋ ಮರೆತುಹೋಯಿತು. ನಡುಗನ್ನಡ ನಡುವಿನಲ್ಲಿ ಬಿಟ್ಟುಹೋಯಿತು. ನವೋದಯ ಕನ್ನಡ ರಾಜ್ಯೋತ್ಸವದ ಕಾಲದಲ್ಲಿ ಮಾತ್ರ ನೆನಪಿಗೆ ಬರುತ್ತಿದೆ. "ನೀವು ಇಂಗ್ಲೀಷಿನಲ್ಲಿ ಬರೆದರೆ ತಕ್ಷಣ ಓದುತ್ತೇವೆ. ಕನ್ನಡ ಆದರೆ ಕಷ್ಟ" ಎಂದು ಐವತ್ತು ದಾಟಿದವರೇ ಹೇಳುತ್ತಾರೆ. ಅವರಿಗಿಂತ ಚಿಕ್ಕವರಿಗೆ ಇದು ಕನ್ನಡ ಎನ್ನುವುದು ಗೊತ್ತಾಗುವುದೂ ಶ್ರಮವೇ. 

ಐವತ್ತು-ಅರವತ್ತರ ದಶಕದಲ್ಲಿ ಕನ್ನಡ ಚಲನಚಿತ್ರಗಳು ಕನ್ನಡ ಭಾಷೆಯ ರಾಯಭಾರಿಗಳಾಗಿ ಕೆಲಸ ಮಾಡುತ್ತಿದ್ದವು. ಏಕೀಕರಣದ ಕಾಲದಲ್ಲಿ ಚಿತ್ರರಂಗ ದೊಡ್ಡ ಕಾಣಿಕೆ ನೀಡಿತು. ಇಂದು ಅನೇಕ ಕನ್ನಡ ಚಲನಚಿತ್ರಗಳಲ್ಲಿ ಕನ್ನಡ ಎಲ್ಲಿದೆ ಎಂದು ಹುಡುಕಬೇಕಾಗಿದೆ. 

*****

ದೈನಂದಿನ ಕಾರ್ಯಕ್ರಮದಲ್ಲಿ ಒಂದು ಪುಟವೋ, ಅರ್ಧ ಪುಟವೋ ಕನ್ನಡ ಬರೆಯುವುದು, ಬರೆದಿರುವುದನ್ನು ಓದುವುದು, ನಮ್ಮ-ನಮ್ಮಲ್ಲಿ ಕನ್ನಡ ಮಾತನಾಡುವುದು, ಅಕ್ಕ-ಪಕ್ಕದವರಿಗೆ ಕನ್ನಡ ಕಲಿಸುವುದು, ಕನ್ನಡದ ವಿಷಯದಲ್ಲಿ ರಾಜಕೀಯವಾಗಿ ಗಟ್ಟಿ ನಿಲುವುಗಳನ್ನು ಪಕ್ಷಭೇದ ಇಲ್ಲದೆ ತೆಗೆದುಕೊಳ್ಳುವುದು, ಕನ್ನಡಿಗರು ಒಟ್ಟಾಗಿ ಒಗ್ಗಟ್ಟಿನಿಂದ ಇರುವುದು ಈಗ ರಾಜ್ಯೋತ್ಸವ ಆಚರಿಸುವ ಮುಖ್ಯ ಅಂಗವಾಗಬೇಕು. 

ಇಲ್ಲದಿದ್ದರೆ "ಹೂವು ಹಾವಾಗುವುದು" ಮತ್ತು "ತರುವುದು ತಿನ್ನುವುದು" ಆಗುವುದು ಮಕ್ಕಳ ಕಾಗುಣಿತದ ತಪ್ಪಿನಿಂದಲ್ಲ; ನಮ್ಮ ಪ್ರಮಾದದಿಂದಲೇ ನಡೆದು ನಮ್ಮ ಎದುರೇ ಭೂತಾಕಾರವಾಗಿ ಬಂದು ನಿಲ್ಲುತ್ತದೆ. 

1 comment:

  1. ಕನ್ನಡಿಗರಿಗೆ ಸ್ವಾಭಿಮಾನ ಇನ್ನೂ ಸ್ವಲ್ಪ ಹೆಚ್ಚಬೇಕು.

    ReplyDelete