Friday, November 21, 2025

ಪ್ರಶ್ನಪತ್ರಿಕೆ


ಹಿಂದಿನ ಸಂಚಿಕೆಯಲ್ಲಿ "ದೇವರ ಎಲೆ" ಅನ್ನುವ ಶೀರ್ಷಿಕೆಯಡಿ ಶ್ರೀ ಶಂಕರಾಚಾರ್ಯ ಮತ್ತು ಶ್ರೀ ಮಂಡನ ಮಿಶ್ರ ಪಂಡಿತ ಇವರಿಬ್ಬರ ನಡುವೆ ನಡೆದ ಪ್ರಶ್ಮೋತ್ತರದ ಒಂದು ಶ್ಲೋಕವನ್ನೂ, ಮಿಶ್ರರು ಕೇಳಿದ ಪ್ರತಿ ಪ್ರಶ್ನೆಯನ್ನೂ ಆಚಾರ್ಯರು ಹೇಗೆ ಬೇರೆಯದೇ ಅರ್ಥಕೊಟ್ಟು ತಿರುಗಿಸಿ ಉತ್ತರಿಸಿ, ಮಿಶ್ರರ ಮಾನಸಿಕ ಮತ್ತು ಬೌದ್ಧಿಕ ಸಮತೋಲನ ತಪ್ಪಿಸಿದರು ಅನ್ನುವುದನನ್ನೂ ನೋಡಿದೆವು. (ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). ಇದು ಕೇವಲ ಪ್ರಾರಂಭವಷ್ಟೇ. "ಶ್ರೀ ಶಂಕರ ದಿಗ್ವಿಜಯ" ಕೃತಿಯಲ್ಲಿ ಈ ಸಂದರ್ಭದಲ್ಲಿ ಮುಂದುವರೆದ ಪ್ರಶ್ನೋತ್ತರವನ್ನೂ, ನಂತರದ ಸರ್ಗಗಳಲ್ಲಿ ಬರುವ ಇನ್ನೂ ಗಹನವಾದ ಕರ್ಮ-ವೇದಾಂತಗಳ ಸಂಬಂಧಿತ ಆಳವಾದ ವಾದ-ವಿವಾದ-ಸಂವಾದ ವಿಷಯಗಳನ್ನೂ ನೋಡಬಹುದು. ಇಬ್ಬರು ಪಂಡಿತೋತ್ತಮರ ಬೌದ್ಧಿಕ ಸ್ತರದ ಸ್ವಲ್ಪ ಮಟ್ಟಿನ ಪರಿಚಯ ಇದರಿಂದ ಆಗುತ್ತದೆ. ಅವರ ಮಟ್ಟದ ಜ್ಞಾನದ ಅರಿವು ಪೂರ್ಣವಾಗಿ ಆಗಬೇಕಾದರೆ ಅನೇಕ ವರುಷಗಳ ಅಧ್ಯಯನ ಮತ್ತು ಸಿದ್ಧತೆ ಬೇಕು ಎನ್ನುವಷ್ಟು ಮಾತ್ರ ತಿಳಿಯಬಹುದು! 

*****

ಸರಿಯಾಗಿ ಪ್ರಶ್ನೆ ಕೇಳುವುದೂ ಒಂದು ಕಲೆ. ಅದಕ್ಕೆ ಹೊಂದಿದಂತೆ ಸರಿಯಾಗಿ ಉತ್ತರಿಸುವುದು ಇನ್ನೂ ಒಂದು ದೊಡ್ಡ ಕಲೆ. ಇದರ ಪರಿಚಯವನ್ನು ಭಗವದ್ಗೀತೆ ಮತ್ತು ಉಪನಿಷತ್ತುಗಳ ಅಧ್ಯಯನದಿಂದ ತಿಳಿದುಕೊಳ್ಳಬಹುದು. ಪ್ರಶ್ನೋಪನಿಷತ್ತು ಎಂದು ಜನಜನಿತವಾಗಿರುವ "ಷಟ್ ಪ್ರಶ್ನೋಪನಿಷತ್ತು" ಒಳಗೊಂಡ ಗುರು-ಶಿಷ್ಯರ ಪ್ರಶ್ನೆ-ಉತ್ತರಗಳು ಮತ್ತು ಭಗವದ್ಗೀತೆಯ ಅರ್ಜುನ-ಕೃಷ್ಣರ ಸಂವಾದಗಳು ಈ ಕಲೆಗಳ ಉತ್ತಮ ಉದಾಹರಣೆಗಳು. ತನ್ನ ಮನಸ್ಸಿನಲ್ಲಿ ಹುದುಗಿರುವ ಸಂಶಯಗಳನ್ನು ಸರಿಯಾದ ಶಬ್ದಗಳಲ್ಲಿ ವ್ಯಕಪಡಿಸಿ ಕೇಳುವುದು ಮತ್ತು ಆ ಸಂಶಯಗಳನ್ನು ನಿವಾರಿಸಿ, ಅದಕ್ಕೆ ಸಂಬಂಧಿಸಿದ ಎಲ್ಲಾ ಪದರಗಳಿಗೂ ಒಟ್ಟಿಗೆ ಉತ್ತರಿಸುವುದನ್ನು ಇವುಗಳಲ್ಲಿ ಕಾಣಬಹುದು. 

ಕೇಳಿದ ಪ್ರಶ್ನೆ ಅದಕ್ಕೆ ಉತ್ತರ ಕೊಡುವವರಿಗೆ ಸರಿಯಾಗಿ ಅರ್ಥವಾಗಬೇಕು. ನಾವು ಕೇಳಿದ್ದೊಂದು. ಉತ್ತರ ಕೊಡುವವರು ಅರ್ಥ ಮಾಡಿಕೊಂಡದ್ದು ಇನ್ನೊಂದು. ಅವರು ಉತ್ತರಿಸಿದ್ದು ಮತ್ತೊಂದು. ಕಡೆಗೆ ಅದನ್ನು ನಾವು ತಿಳಿದುಕೊಂಡಿದ್ದು ಮಗದೊಂದು. ಹೀಗಾಗಿ ಅನೇಕ ವೇಳೆ ಒಟ್ಟಾರೆ ಪರಿಸ್ಥಿತಿ ಗೋಜಲು-ಗೋಜಲಾಗಿ ತಲೆ ಚಚ್ಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದು ನಡೆಯುತ್ತಿರುತ್ತದೆ. ವಿದ್ಯಾರ್ಥಿಗಳಿಗೆ ಪಾಠ ಹೇಳುವ ಶಿಕ್ಷಕರಿಗೆ ಇದು ಸರಿಯಾಗಿ ಗೊತ್ತಾಗಬೇಕು. 

ಅನೇಕ ವಿಶ್ವವಿದ್ಯಾಲಯಗಳಲ್ಲಿ ಉತ್ತರ ಪತ್ರಿಕೆಗಳನ್ನು ಇಬ್ಬರು ಮೌಲ್ಯಮಾಪಕರು ನೋಡಿ ಅಂಕ ಹಾಕುವ ಪದ್ಧತಿ ಇದೆ. ಈ ಎರಡು ಅಂಕಗಳ ಸರಾಸರಿ ತೆಗೆದುಕೊಳ್ಳುವುದು ಕೆಲವೆಡೆ ಉಂಟು. ಮತ್ತೆ ಕೆಲವು ಕಡೆ ಎರಡರಲ್ಲಿ ಹೆಚ್ಚಿನದನ್ನು ಒಪ್ಪಿಕೊಳ್ಳುವುದೂ ಇದೆ. ಇಷ್ಟಿದ್ದರೂ ಇಬ್ಬರು ಕೊಟ್ಟ ಅಂಕಗಳಲ್ಲಿ ತುಂಬಾ ವ್ಯತ್ಯಾಸ ಇದ್ದಾಗ ಮೂರನೆಯ ಮೌಲ್ಯಮಾಪಕರ ತಲೆಗೆ ಕಟ್ಟುವುದೂ ಉಂಟು. ಇವೆಲ್ಲ ವ್ಯವಸ್ಥೆ ಇದ್ದರೂ, ಪ್ರಶ್ನಪತ್ರಿಕೆ ಕೊಡುವವರು ಒಬ್ಬರು ಮತ್ತು ಮೌಲ್ಯ ನಿರ್ಧರಿಸುವವರು ಇನ್ನೊಬ್ಬರು ಆದಾಗ ಎಡವಟ್ಟು ಪರಿಸ್ಥಿತಿ ಉಂಟಾಗುವುದೂ ಆಗುತ್ತದೆ. ಇದರ ಪರಿಹಾರಕ್ಕಾಗಿ ಪ್ರಶ್ನಪತ್ರಿಕೆ ತಯಾರು ಮಾಡಿದವರು ಅದರ ಜೊತೆಗೆ ಒಂದು "ಮಾದರಿ ಉತ್ತರ ಪತ್ರಿಕೆ" (ಮಾಡಲ್ ಆನ್ಸರ್) ಕೂಡ ಕೊಡುವ ಪದ್ಧತಿಯೂ ಉಂಟು.  

ಶಿಕ್ಷಕರಿಗೆ ಒಂದು ಶೈಕ್ಷಣಿಕ ವರ್ಷ ಅಥವಾ ವೃತ್ತದಲ್ಲಿ ಅತ್ಯಂತ ಕಷ್ಟದ ದಿನಗಳು ಯಾವುವು? ಇದು ಶಿಕ್ಷಣ ನೀಡಿದವರಿಗೆ ಗೊತ್ತು. ಅದು ಪರೀಕ್ಷೆಯ ನಂತರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾಲ. ಆ ದಿನಗಳಲ್ಲಿ ಶಿಕ್ಷಕರ ಬಳಿ ಮಾತಾಡುವಾಗ ಬಹಳ ಜಾಗರೂಕರಾಗಿರಬೇಕು. ಆ ಕಾಲದಲ್ಲಿ ಅನೇಕರು ಖಿನ್ನತೆಗೆ (ಡಿಪ್ರೆಷನ್) ಒಳಗಾಗಿರುತ್ತಾರೆ. ವರುಷವೆಲ್ಲ ಬಹಳ ಚೆನ್ನಾಗಿ ಪಾಠ ಹೇಳಿದ್ದೇವೆ ಎಂದು ತಮ್ಮ ಬೆನ್ನು ತಾವೇ ಚಪ್ಪರಿಸಿಕೊಂಡವರಿಗೆ ಅದು ಸತ್ಯದ ಅರಿವು ಮೂಡಿಸುವ ಕಾಲ. "ನಾನು ಹೇಳಿಕೊಟ್ಟಿದ್ದು ಇದೇ ಏನು?" ಎಂದು ಅವರಿಗೆ ಅವರೇ ಪ್ರಶಿಸಿಕೊಳ್ಳುವ ಕಾಲ ಅದು. ಮೌಲ್ಯಮಾಪನ ಕೊಠಡಿಗಳಲ್ಲಿ ಸೀಲಿಂಗ್ ಫ್ಯಾನ್ ಮತ್ತು ಹಗ್ಗಗಳು ಇರಲೇಬಾರದು ಎಂದು ಹೇಳುವುದು ಕೇವಲ ವಿನೋದಕ್ಕೆಂದು ತಿಳಿಯಬಾರದು. 

*****

ಒಂದು ವಿಷಯವನ್ನು ವಿವರಿಸುವಾಗ ಅಥವಾ ಒಂದು ಪ್ರಶ್ನೆಗೆ ಉತ್ತರ ಕೊಡುವಾಗ ಉದಾಹರಣೆಗಳನ್ನು ಕೊಡುವುದು ಸಾಮಾನ್ಯ ಪದ್ಧತಿ. ಹೀಗೆ ಕೊಡುವ ದೃಷ್ಟಾಂತಗಳನ್ನು ಆರಿಸಿಕೊಳ್ಳುವಾಗ ಎರಡು ಮೂರು ಬಾರಿ ಯೋಚಿಸಿ ನಂತರ ಅವನ್ನು ಉಪಯೋಗಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಕೇಳುಗರು ಅದರ ಪೂರ್ಣ ವಿರುದ್ಧ ಅರ್ಥ ತಿಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ಜೊತೆಗೆ ಹೇಳುತ್ತಿರುವ ವಿಷಯವನ್ನೇ ಮರೆ ಮಾಡಿ ಚರ್ಚೆಯನ್ನು ಮತ್ತೆಲ್ಲಿಗೋ ಎಳೆದುಕೊಂಡು ಹೋಗುವ ಸಂದರ್ಭಗಳೂ ಉಂಟು.  

ಒಂದು ಹಳೆಯ ಉದಾಹರಣೆಯನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. "ಪಾನ ನಿರೋಧ ಚಳುವಳಿ" ಸರ್ಕಾರದ ಒಂದು ಮುಖ್ಯ ಕಾರ್ಯಕ್ರಮವಾಗಿದ್ದ ಕಾಲ. ಕೇವಲ ಕೆಲವರು ಕುಡಿದು ಅನೇಕರು ಕುಡಿಯದಿದ್ದಾಗ ಇಂತಹ ಚಳುವಳಿ ಬೇಕಿತ್ತು. ಎಲ್ಲರೂ ಕುಡಿಯುವ ಮತ್ತು ಅಲ್ಲೊಬ್ಬರು-ಇಲ್ಲೊಬ್ಬರು ಕುಡಿಯದ ಈ ದಿನಗಳಲ್ಲಿ ಇಂತಹ ಚಳುವಳಿ ತೀರಾ ಅನವಶ್ಯಕ. ಅದಕ್ಕಿಂತ ಹೆಚ್ಚಾಗಿ ಅನೇಕ ಸರಕಾರಗಳು ಕುಡಿತದ ವಸ್ತುಗಳ ಮಾರಾಟದ ಹಣದಿಂದಲೇ ನಡೆಯಬೇಕಾದ ಈಗಿನ ಸ್ಥಿತಿಯಲ್ಲಿ ಇದನ್ನು ನೆನೆಸಿಕೊಳ್ಳುವುದೂ ಒಂದು ಪಾಪದ ಕೆಲಸವೇ. 

ಕುಡಿತದಿಂದ ಆಗುವ ಕೆಟ್ಟ ಪರಿಣಾಮಗಳು ಏನೆಂದು ಹಳ್ಳಿಯ ಜನರಿಗೆ ವಿವರಿಸುವ ಕೆಲಸ ಒಬ್ಬ ಸರ್ಕಾರೀ ನೌಕರನಿಗೆ ಸಿಕ್ಕಿತು. ಅವನು ಬಹಳ ಉತ್ಸಾಹದಿಂದ ಮೊದಲ ಹಳ್ಳಿಗೆ ಹೋದ. ಎರಡು ಗಾಜಿನ ಲೋಟ, ಸ್ವಲ್ಪ ನೀರು, ಒಂದಷ್ಟು ಸಾರಾಯಿ ಮತ್ತು ಒಂದು ಸಣ್ಣ ಡಬ್ಬಿಯಲ್ಲಿ ಕೆಲವು ಹುಳುಗಳು. ಇವಿಷ್ಟು ಅವನ ಜೊತೆ ಹೊಂದಿಸಿಕೊಂಡು ಹೊರಟ. ಸಾರಾಯಿ ಕುಡಿದರೆ ಅರೋಗ್ಯ ಕೆಡುತ್ತದೆ ಎಂದು ತೋರಿಸುವುದು ಅವನ ಉದ್ದೇಶ. ಹಳ್ಳಿಯ ಜನರೆಲ್ಲಾ ನೆರೆದಿದ್ದರು. ಅಶ್ವಥ ಕಟ್ಟೆಯ ಬಳಿ ಇವನ ಭಾಷಣ. ಕಟ್ಟೆಯ ಕಲ್ಲ ಮೇಲೆ ಎಲ್ಲರಿಗೂ ಕಾಣುವಂತೆ ಎರಡು ಗಾಜಿನ ಲೋಟಗಳನ್ನೂ ಇಟ್ಟ. ಮೊದಲನೆಯದರಲ್ಲಿ ನೀರು ಹುಯ್ದ. ಎರಡನೆಯದರಲ್ಲಿ ಸ್ವಲ್ಪ ಸಾರಾಯಿ. "ಈಗ ನೋಡಿ. ಎರಡರಲ್ಲೂ ಹುಳಗಳನ್ನು ಹಾಕುತ್ತೇನೆ. ಏನಾಗುವುದು ಎಂದು ಗಮನಿಸಿ" ಎಂದ. ಎಲ್ಲರೂ ನೆಟ್ಟ ನೋಟದಲ್ಲಿ ನಿಂತರು. 

ನೀರಿನಲ್ಲಿ ಹಾಕಿದ ಹುಳಗಳು ಓಡಾಡಿಕೊಂಡಿದ್ದವು. ಸಾರಾಯಿಯಲ್ಲಿ ಹಾಕಿದ ಹುಳಗಳು ಸ್ವಲ್ಪ ಹೊತ್ತು ಒದ್ದಾಡಿದವು. ನಂತರ ಸತ್ತವು. "ನೋಡಿ. ಸಾರಾಯಿಯಲ್ಲಿ ಹಾಕಿದ ಹುಳಗಳು ಸತ್ತವು. ಇದರಿಂದ ಏನು ಕಲಿತಿರಿ?" ಎಂದು ಹಳ್ಳಿಗರನ್ನು ಕೇಳಿದ. ತಲೆತಲಾಂತರದಿಂದ ಕುಡಿತವನ್ನೇ ಉದ್ಯೋಗ ಮಾಡಿಕೊಂಡಿದ್ದ ಕುಟುಂಬದ ಮಹಾ ಕುಡುಕ ಚಕ್ರವರ್ತಿಯೊಬ್ಬ ಚೆನ್ನಾಗಿ ಕುಡಿದೇ ಅಲ್ಲಿ ಬಂದು ಕುಳಿತಿದ್ದ. "ಚೆನ್ನಾಗಿ ಗೊತ್ತಾಯ್ತು ಬುದ್ಧಿ. ಸಾರಾಯಿ ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಹುಳುಗಳೆಲ್ಲ ಸತ್ತು ಅರೋಗ್ಯ ಚೆನ್ನಾಗಿ ಆಗುತ್ತದೆ" ಅಂದ. ಮುಂದೆ ಪಾನ ನಿರೋಧದ ಕಥೆ ಹೇಳಬೇಕಾಗಿಲ್ಲ. 
***** 

ಈಚಿನ ದಿನಗಳಲ್ಲಿ ಪ್ರಶ್ನಪತ್ರಿಕೆಗಳು ಪರೀಕ್ಷೆಗೆ ಮುಂಚೆ ಬಹಿರಂಗಪಟ್ಟು ಪರೀಕ್ಷೆಗಳು ಮುಂದೂಡಿಕೆ ಆಗುವುದು ಸರ್ವೇ ಸಾಧಾರಣ ಸಂಗತಿ. ಅನೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಓದುವುದಕ್ಕಿಂತ ಪ್ರಶ್ನಪತ್ರಿಕೆ ಎಲ್ಲಿ ಸಿಗುವುದು ಎಂದು ತಿಳಿಯುವುದನ್ನೇ ಅಧ್ಯಯನ ಮಾಡುವುದೂ ಉಂಟು. ಇದು ಕೇವಲ ಕೆಲವರ ಹವ್ಯಾಸ ಆಗಿಲ್ಲದೇ ಒಂದು ಉದ್ಯಮವಾಗಿಯೇ ಬೆಳೆದಿದೆ. ಇಂತಹ ವಿದ್ಯಮಾನಗಳನ್ನು ತನಿಖೆ ಮಾಡಲೆಂದೇ ಕೆಲವು ಅಧಿಕಾರಿಗಳು ನಿಯುಕ್ತರಾಗಿ ಹೆಚ್ಚಿನ ಉದ್ಯೋಗ ಸೃಷ್ಟಿಯೂ ಆಗುತ್ತಿದೆ. ಪ್ರಶ್ನಪತ್ರಿಕೆಗಳು ಬಹಿರಂಗವಾಗದಂತೆ ಮಾಡಲು ಹೆಚ್ಚಿನ ಭದ್ರತೆ ವ್ಯವಸ್ಥೆ ಸಹ ಮಾಡುವುದರಿಂದ ಇನ್ನಷ್ಟು ಉದ್ಯೋಗಗಳು ತೆರೆದುಕೊಳ್ಳುತ್ತಿವೆ. ಇವುಗಳಿಂದ ದೇಶದ ಆರ್ಥಿಕತೆ ಮೇಲೆ ಆಗುತ್ತಿರುವ ಸತ್ಪರಿಣಾಮಗಳು ಮತ್ತು ಜಿ. ಡಿ. ಪಿ. ಪ್ರಮಾಣದಲ್ಲಿ ಹೆಚ್ಚಳ, ಇವನ್ನು ಅಧ್ಯಯನ ಮಾಡಿ ವರದಿ ಕೊಡಲು ಕೇಂದ್ರ ಸರ್ಕಾರ ಒಂದು ತಜ್ಞರ ಸಮಿತಿ ರಚಿಸುತ್ತಿದೆ ಎಂದು ಒಂದು ಗುಮಾನಿ. ಇಂತಹ ಸಮಿತಿಯಲ್ಲಿ ಅತ್ಯಂತ ಹೆಚ್ಚು ಪ್ರಶ್ನಪತ್ರಿಕೆ ಬಹಿರಂಗ ಪಡಿಸಿದವರನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಬೇಕೆಂದು ಚಳುವಳಿ ನಡೆಯುವ ಸಂಭವಗಳೂ ನಿಚ್ಚಳವಾಗಿ ಕಾಣಿಸುತ್ತಿವೆ. 

ಕೆಲವೊಮ್ಮೆ ಪರೀಕ್ಷೆಗಳು ಮುಗಿದ ನಂತರ ಹೀಗೆ ಬಹಿರಂಗವಾಗಿರುವ ಪ್ರಶ್ನಪತ್ರಿಕೆಗಳಲ್ಲಿ ಇರುವ ಕೆಲವು ಪ್ರಶ್ನೆಗಳ ಬಗ್ಗೆ ಬಹಿರಂಗ ಚರ್ಚೆ ಆಗಿ ಅನೇಕ ಪ್ರಶ್ನೆಗಳೇ ತಪ್ಪು ಎಂದು ಕಂಡುಬರುವುದೂ ಉಂಟು. ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಬಾರದು ಅನ್ನುವ ಸಾಮೂಹಿಕ ಹಿತ ದೃಷಿಯಿಂದ ಎಲ್ಲ ವಿದ್ಯಾರ್ಥಿಗಳಿಗೂ ಆ ಪ್ರಶ್ನೆಗಳಿಗೆ ನಿಗದಿ ಪಡಿಸಿದ ಅಂಕಗಳನ್ನು "ಕೃಪಾಂಕ" (ಗ್ರೇಸ್ ಮಾರ್ಕ್ಸ್) ಎಂದು ಕೊಡುವುದುಂಟು. ಈ ಕಾರಣದಿಂದ ಪ್ರಶ್ನಪತ್ರಿಕೆಗಳಲ್ಲಿ ಹೆಚ್ಚು ಹೆಚ್ಚು ತಪ್ಪು ಪ್ರಶ್ನೆಗಳು ಕಂಡುಬರಲಿ ಎಂದು ವಿದ್ಯಾರ್ಥಿಗಳು ದೇವಾಲಯಗಳಲ್ಲಿ ಬಂದು ಪ್ರಾರ್ಥಿಸುವುದರಿಂದ ದೈವಭಕ್ತಿಯೂ ಹೆಚ್ಚುತ್ತಿದೆ ಎಂದು ವರದಿಗಳು ತಿಳಿಸುತ್ತವೆ. 

*****

ಪ್ರಶ್ನಪತ್ರಿಕೆಗಳ ಬಗ್ಗೆ ಇನ್ನಷ್ಟು ವಿಚಾರಗಳನ್ನು ಮತ್ತೊಮ್ಮೆ ಸಮಯ ಬಂದಾಗ ನೋಡೋಣ. ಅಷ್ಟರಲ್ಲಿ ಈ ವಿಷಯದಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಅವಶ್ಯ ಗಮನವಿಡೋಣ. 

1 comment:

  1. Very beneficial for today generation students

    ReplyDelete