Tuesday, November 25, 2025

ಗುರುದ್ರೋಹ?


"ವರ್ಣಮಾತ್ರಂ ಕಲಿಸಿದಾತಂ ಗುರು" ಅನ್ನುವ ಶೀರ್ಷಿಕೆಯ ಹಿಂದಿನ ಸಂಚಿಕೆಯನ್ನು ಓದಿದ ಕೆಲವು ಓದುಗ ಮಿತ್ರರು ಶ್ರೀ ಶಂಕರಾಚಾರ್ಯರು ಮತ್ತು ಶ್ರೀ ಮಂಡನ ಮಿಶ್ರ ಪಂಡಿತರ ನಡುವೆ ನಡೆದ ಸಂಭಾಷಣೆ ಸಂದರ್ಭದಲ್ಲಿ ಬಂದ ಶ್ರೀ ಕುಮಾರಿಲ ಭಟ್ಟರು ತುಷಾಗ್ನಿಗೆ ಪ್ರವೇಶಿಸಿದ ಸಂಗತಿ ವಿವರಗಳನ್ನು ಕೇಳಿದ್ದಾರೆ. (ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). 

ಈ ಸಂದರ್ಭದ ಹಿನ್ನೆಲೆ ಮತ್ತು ವಿವರಗಳನ್ನು ಈಗ ನೋಡೋಣ. 

*****

ಕ್ರಿಕೆಟ್ ಒಂದು ಜನಪ್ರಿಯ ಕ್ರೀಡೆ. ಪ್ರಪಂಚದ ಅನೇಕ ಪ್ರದೇಶಗಳಲ್ಲಿ ಆಡುವ ಆಟ. (ಅದಕ್ಕಿಂತ ಜನಪ್ರಿಯ ಆಟಗಳೂ ಅನೇಕವಿವೆ. ಇಲ್ಲಿ ಉದಾಹರಣೆಗಾಗಿ ಅದೊಂದನ್ನು ತೆಗೆದುಕೊಂಡಿದೆ. ಇದರ ಬದಲು ಬೇರೆ ಕ್ರೀಡೆಯನ್ನು ತೆಗೆದುಕೊಂಡರೂ ಹೇಳುವುದರ ತಿರುಳಲ್ಲಿ ಏನೂ ವ್ಯತ್ಯಾಸ ಆಗುವುದಿಲ್ಲ). ಅದನ್ನು ಆಡಲು ಮುಖ್ಯವಾಗಿ ಕೆಲವು ವಸ್ತುಗಳು ಬೇಕು. ಒಂದು ದಾಂಡು ಅಥವಾ ಬ್ಯಾಟು. ಒಂದು ಚೆಂಡು ಅಥವಾ ಬಾಲು. ಮೂರೋ ಅಥವಾ ಆರೋ ಸ್ಟಂಪ್ ಅಥವಾ ಗೂಟಗಳು. ಗೂಟವಿಲ್ಲದಿದ್ದರೆ ಗೋಡೆಯ ಮೇಲೆ ಮೂರು ದಪ್ಪ ಗೆರೆಗಳು. ಇಷ್ಟಂತೂ ಬೇಕೇ ಬೇಕು. ಹೆಚ್ಚಿದ್ದರೆ ಇನ್ನೂ ಒಳ್ಳೆಯದು. ಆಡಲು ಆಟಗಾರರು. ತೀರ್ಪುಗಾರರಿದ್ದರೆ ಒಳ್ಳೆಯದು. ಎರಡು ತಂಡ ಇದ್ದರೆ ದ್ವಿಪಕ್ಷೀಯ ಸರಣಿ. ಹೆಚ್ಚಿನ ತಂಡಗಳಿದ್ದರೆ ಅದೊಂದು ದೊಡ್ಡ ಪಂದ್ಯಾವಳಿ. ಪ್ರಪಂಚದ ಎಲ್ಲ ಕ್ರಿಕೆಟ್ ಆಡುವ ದೇಶಗಳ ತಂಡಗಳು ಬಂದರೆ "ವಿಶ್ವ ಕಪ್" ಪಂದ್ಯಾವಳಿ. ಹೀಗೆ ನಡೆಯುತ್ತದೆ. 

ಇರುವ ಒಂದೇ ರೀತಿಯ ಬ್ಯಾಟಿನಲ್ಲಿ ಬೇರೆ ಬೇರೆ ದಾಂಡಿಗರು (ಬ್ಯಾಟ್ಸಮನ್) ತಮ್ಮ ಕೈಚಳಕ ತೋರಿಸುತ್ತಾರೆ. ಒಬ್ಬನಂತೆ ಇನ್ನೊಬ್ಬ ಇಲ್ಲ. ಏನೋ ಒಂದು ವ್ಯತ್ಯಾಸ. ಹಾಗೆಯೇ, ಹಿಡಿದ ಒಂದೇ ಚೆಂಡಿನಲ್ಲಿ ಬೌಲರುಗಳೂ ತಮ್ಮ ಕೌಶಲ್ಯ ತೋರಿಸುತ್ತಾರೆ. ಮೂಲ ಪರಿಕರ ಒಂದೇ ಆದರೂ ಅವರವರ ಶಕ್ತಿ, ಅನುಭವ, ತಯಾರಿ, ಕೌಶಲ್ಯ, ಪ್ರತಿಭೆ, ಸಮಯಪ್ರಜ್ಞೆ, ಪಂದ್ಯದಲ್ಲಿ ಉಳಿಯುವ ಶಕ್ತಿ, ಆ ತಕ್ಷಣದಲ್ಲಿ ಮಾಡುವ ಬದಲಾವಣೆಗಳು, ನಿಂತ ನಿಲುವಿನಲ್ಲಿ ಯೋಚಿಸಿ ಹೂಡುವ ಕಾರ್ಯತಂತ್ರ, ಹೀಗೆ ಅನೇಕ ತೆರನಾದ ವೈವಿಧ್ಯಗಳಿಂದ ಏನೋ ಹೊಸತನ್ನು, ನಿರೀಕ್ಷಿಸದ ತಿರುವನ್ನು ತಂದುಕೊಡುತ್ತಾರೆ. 

ಒಂದೇ ಚೆಂಡಿನಲ್ಲಿ ವೇಗದ ಬೌಲಿಂಗ್ ಮಾಡುವವನು ಒಬ್ಬ. ಅದರಲ್ಲಿಯೂ ಸೀಮ್ ಮತ್ತು ಸ್ವಿಂಗ್ ಎಂದು ಉಂಟು. ಅದೇ ಚೆಂಡಿನಲ್ಲಿ ಸ್ಪಿನ್ ಮಾಡುವವನು ಇನ್ನೊಬ್ಬ. ಬಲಗಡೆಯಿಂದ ಎಡಗಡೆಗೆ ಚೆಂಡು ತಿರುಗುವಂತೆ (ಆಫ್ ಸ್ಪಿನ್), ಎಡಗಡೆಯಿಂದ ಬಲಗಡೆ ತಿರುಗುವಂತೆ (ಲೆಗ್ ಸ್ಪಿನ್), ಗಾಳಿಯಲ್ಲಿ ಮೇಲೆ-ಕೆಳಗೆ ಹಾರುವಂತೆ (ಫ್ಲೈಟ್) ಮಾಡುವವರು ಉಂಟು. ಹೀಗೆ ತೋರಿಸಿ, ಹಾಗೆ ಹಾಕಿ ಎದುರಾಳಿಗೆ ಮಂಕುಬೂದಿ ಎರಚುವ ಪ್ರಯತ್ನಗಳೂ ನಡೆಯುತ್ತವೆ (ಗೂಗ್ಲಿ, ಚೈನಮನ್, ದೂಸ್ರಾ, ರಿವರ್ಸ್ ಸ್ವಿಂಗ್ ಇನ್ನೂ ಮುಂತಾದುವು) ಕೆಲವು ವಿಶೇಷ ಪ್ರತಿಭಾಶಾಲಿಗಳು ಇವುಗಳಲ್ಲಿ ಒಂದಕ್ಕಿಂತ ಹೆಚ್ಚನ್ನು, ಅಪರೂಪದ ಕೆಲವರು ಇವೆಲ್ಲವನ್ನೂ ಮಾಡುವವರು. ಕಾಲಕಾಲಕ್ಕೆ ಏನೋ ಒಂದು ಹೊಸದು ಬರುವುದು. ಆಟದಲ್ಲಿ ಒಂದು ಹೊಸ ತಿರುವು. ಹೊಸ ಉಲ್ಲಾಸ. ಹೀಗೆ ನಡೆಯುತ್ತಿರುವುದು. 

*****

ಕ್ರಿಕೆಟ್ ಆಟ ಪ್ರಾರಂಭವಾದಾಗ ಎರಡು ದೇಶದ ತಂಡಗಳ ಮಧ್ಯೆ ನಡೆವ ಯಾವುದೇ ಒಂದು ಸರಣಿ ಸೋಲು-ಗೆಲುವು ತೀರ್ಮಾನವಾಗದೆ ಇದ್ದರೆ, ಸರಣಿಯ ಕಡೆಯ ಪಂದ್ಯ ಯಾವುದಾದರೂ ಒಂದು ತಂಡ ಗೆಲ್ಲುವವರೆಗೂ ಆಡುತ್ತಿದ್ದರಂತೆ! ಮೊದಲ ಪಂದ್ಯಗಳು ಐದು ದಿನದ ಆಟದ ನಂತರ ತೀರ್ಮಾನವಾಗದೆ ಡ್ರಾ ಆದರೆ ಕಡೆಯ ಪಂದ್ಯಕ್ಕೆ ಸಮಯದ ನಿರ್ಬಂಧವಿರಲಿಲ್ಲ. 1939ರಲ್ಲಿ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಹೊರಟಿತು. ಕಡೆಯ ಪಂದ್ಯ ಹೆಚ್ಚು ದಿನ ನಡೆಯಬಹುದು ಎಂದು ಗೊತ್ತಿತ್ತು. ಆಗ ಆಟಗಾರರು ಹಡಗಿನಲ್ಲಿ ಪ್ರಯಾಣ ಮಾಡಬೇಕಾಗಿತ್ತು. ಆದ್ದರಿಂದ ಕಡೆಯ ಪಂದ್ಯ ಪ್ರಾರಂಭವಾಗುವ ದಿನದಿಂದ ಹದಿಮೂರನೆಯ ದಿನ ದಕ್ಷಿಣ ಆಫ್ರಿಕಾದಿಂದ ಹೊರಡುವ ಹಡಗಿನಲ್ಲಿ ಅವರಿಗೆ ಇಂಗ್ಲೆಂಡ್ ಮರಳುವ ಪ್ರಯಾಣದ ವ್ಯವಸ್ಥೆ ಮಾಡಿದರು. 

ಡರ್ಬನ್ ನಗರದಲ್ಲಿ ನಡೆದ ಆ ಪಂದ್ಯ 12 ದಿನ ನಡೆದರೂ ತೀರ್ಮಾನವಾಗಲಿಲ್ಲ. ಹತ್ತು ದಿನ ಪಂದ್ಯ ನಡೆದು (ಮಧ್ಯೆ ಎರಡು ದಿನ ವಿರಾಮದ ದಿನಗಳು - ರೆಸ್ಟ್ ಡೇಸ್) 1981 ರನ್ನುಗಳ ಸಂಗ್ರಹವಾದರೂ ಪಂದ್ಯ ನಡೆಯುತ್ತಲೇ ಇತ್ತು! ಕಡೆಗೆ ಹಡಗು ಹೊರಡುವ ದಿನ ಬಂದಿದ್ದರಿಂದ, ಪ್ರಯಾಣ ಮುಂದೂಡಲು ಬೇರೆ ಹಡಗುಗಳ ಅಲಭ್ಯ ಕಾರಣದಿಂದ, ಪಂದ್ಯ ಡ್ರಾ ಎಂದು ಘೋಷಿಸಿ ಮುಕ್ತಾಯ ಮಾಡಿದರು!

ಹೀಗೆ ಪ್ರಾರಂಭವಾದ ಕ್ರೀಡೆ ಇಂದು ಅನೇಕ ಬದಲಾವಣೆಗಳನ್ನು ಕಂಡಿದೆ. ಐದು ದಿನದ ಟೆಸ್ಟ್ ಪಂದ್ಯಗಳ ಜೊತೆ, ಏಕದಿನ ಪಂದ್ಯಗಳು (ಒನ್ ಡೇ), 20 ಓವರುಗಳ ಪಂದ್ಯಗಳು, ಹೀಗೆ. ಸಮಯದ ಜೊತೆ ಪಂದ್ಯಗಳು ನಡೆಯುವ ನಿಯಮಗಳೂ ಬದಲಾಗುತ್ತಿವೆ. 

ಕ್ರಿಕೆಟ್ ಇಂಗ್ಲೆಂಡ್ ದೇಶದಲ್ಲಿ ಪ್ರಾರಂಭವಾಗಿ ಕೆಲಕಾಲ ಆ ದೇಶದ ತಂಡ ಮೇಲುಗೈ ಪಡೆದಿತ್ತು. ನಂತರ ಸ್ವಲ್ಪಕಾಲ ವೆಸ್ಟಿಂಡೀಸ್ ತಂಡ ಮೆರೆಯಿತು. ಆಮೇಲೆ ಆಸ್ಟ್ರೇಲಿಯಾ. ಭಾರತ ಮತ್ತು ಪಾಕಿಸ್ತಾನಗಳೂ ಕೆಲ ಕಾಲ ಮೆಲಗೈ ಪಡೆದುವು. "ವಿಶ್ವ ಕಪ್" ಆಡುವುದು ಬಂದಮೇಲಂತೂ ಪ್ರತಿ ನಾಲ್ಕು ವರುಷಗಳಿಗೊಮ್ಮೆ ಒಂದು ತಂಡ "ಚಾಂಪಿಯನ್" ಆಗುವುದು. ಆ ಸಮಯದಲ್ಲಿ ಯಾರ ಕೈ ಮೇಲೋ ಅವರು ಗೆದ್ದು ಬೀಗುವರು. 
*****

ಕ್ರೀಡೆಯಂತೆ ಆಟಗಾರರ ನಡವಳಿಕೆಗಳಲ್ಲೂ ವ್ಯತ್ಯಾಸಗಳು ಉಂಟು. ಕೆಲವರು ಎದುರಾಳಿ ಆಟಗಾರರನ್ನು ಬದ್ಧ ದ್ವೇಷಿಗಳು ಎಂದು ತಿಳಿಯುವರು. ಮತ್ತೆ ಕೆಲವರು ಎದುರಾಳಿಗಳ ಒಳ್ಳೆಯ ಗುಣಗಳನ್ನು ಗುರುತಿಸಿ ಅವರನ್ನು ಮೆಚ್ಚುವರು. ಮತ್ತ್ತೆ ಕೆಲವರು ಇವೆರಡೂ ಇಲ್ಲದ ತಟಸ್ಥ ಮನಃಸ್ಥಿತಿ ಹೊಂದಿದವರು. ಕೆಲವರಂತೂ ಎದುರಾಳಿಗೂ ಕೆಲವು ವಿಷಯಗಳನ್ನು ತಿಳಿಸಿಹೇಳಿ ಹೃದಯ ವೈಶಾಲ್ಯ ಮೆರೆಯುವವರು. ಹೀಗೆ ಎಲ್ಲ ರೀತಿಯ ಆಟಗಾರರೂ ಉಂಟು. 

ಇಂಗ್ಲೆಂಡ್ ದೇಶದ ಹವಾಮಾನ, ಆಟದ ಮೈದಾನ, ಪಿಚ್ ಸ್ಥಿತಿ-ಗತಿ ಬೇರೆ ರೀತಿಯದು. ಅವರನ್ನು ತವರು ನೆಲದಲ್ಲಿ ಸೋಲಿಸುವುದು ಬಲು ಕಷ್ಟ. ಹೀಗೆಯೇ ಭಾರತದಲ್ಲಿ. ಭಾರತದವರು ಇಂಗ್ಲೆಂಡ್ ತಂಡವನ್ನು ಅಲ್ಲಿಯೇ ಹೋಗಿ ಮಣಿಸಬೇಕಾದರೆ ಏನು ಮಾಡಬೇಕು? ಯಾರಾದರೂ ಆಟಗಾರನನ್ನು (ಸಾಧ್ಯವಾದರೆ ಆಟಗಾರರನ್ನು) ಅಲ್ಲಿಯ ಕೌಂಟಿ ಪಂದ್ಯಗಲ್ಲಿ ಆಡಲು ಕಳಿಸಬೇಕು. ಅಲ್ಲಿ ಹೋಗಿ, ಅವರೊಡನೆ ಸೇರಿ, ಅವರಂತೆ ಆಡಿ, ಅವರ ರಹಸ್ಯಗಳನ್ನು ತಿಳಿದು, ನಂತರ ಅವರನ್ನು ಭೇದಿಸಬೇಕು. ಇದು ಒಂದು ದಾರಿ. 

ಈಗಂತೂ ಬೇರೆ ದೇಶದವರ ಮಾಜಿ ಆಟಗಾರರನ್ನು ಹೆಚ್ಚು ಹಣ ಕೊಟ್ಟು "ಕೋಚ್" ಎಂದು ನೇಮಕ ಮಾಡಿಕೊಳ್ಳುವುದು ಬಂದಿದೆ. ಏನೇ ಆದರೂ, ಅವರ ರಹಸ್ಯ ಅರಿಯಲು ಅಲ್ಲಯೇ ಹೋಗಿ, ಅವರಂತೆ ಇದ್ದು, ಕಲಿತು ಬರುವುದು ಒಂದು ಅತ್ಯುತ್ತಮ ತಂತ್ರ. 

*****

ಇದೇನು? "ಗುರುದ್ರೋಹ" ಎಂದು ಶೀರ್ಷಿಕೆ ಕೊಟ್ಟು ಕ್ರಿಕೆಟ್ ಕಥೆ ನಡೆಯುತ್ತಿದೆಯಲ್ಲ? ಹೀಗೆ ಅನ್ನಿಸಬಹುದು. ಕ್ರಿಕೆಟ್ ಆಟದ ಮೇಲಿನ ಎಲ್ಲ ವಿವರಗಳೂ ತತ್ವಶಾಸ್ತ್ರಕ್ಕೂ ಅನ್ವಯಿಸುತ್ತವೆ. ಇಲ್ಲಿಯೂ ಅದೇ ರೀತಿ. ಅಲ್ಲಿ ಚೆಂಡು-ದಾಂಡು. ಇಲ್ಲಿ ವೇದ-ಬ್ರಹ್ಮಸೂತ್ರಗಳು ಮುಂತಾದ ಗ್ರಂಥಗಳು. ಅಲ್ಲಿ ನಾಯಕರು-ಆಟಗಾರರು. ಇಲ್ಲಿ ಭಾಷ್ಯಕಾರರು-ವ್ಯಾಖ್ಯಾನಕಾರರು. ಅಲ್ಲಿ ಸರಣಿ ಪಂದ್ಯಗಳು - ಪಂದ್ಯಾವಳಿಗಳು. ಇಲ್ಲಿ ವಾದ-ವಿವಾದಗಳು. ಅಲ್ಲೊಂದು ತೆರನಾದ ನಿಯಮಗಳು. ಇಲ್ಲೊಂದು ತೆರನಾದ ನಿಯಮಗಳು. 

ಅಲ್ಲಿನ ಆಟಗಾರರಂತೆ ಇಲ್ಲಿಯೂ ಉಂಟು. ಕೆಲವರು ಪ್ರತಿಪಕ್ಷದವರನ್ನು ದ್ವೇಷಿಸುವವರು. ಕೆಲವರು ಎದುರಾಳಿಯ ಯೋಗ್ಯತೆಯನ್ನು ಗೌರವಿಸುವವರು. ಮತ್ತೆ ಕೆಲವರು "ನಿಮ್ಮ ಮಾತು ಒಪ್ಪುವುದಿಲ್ಲ. ಆದರೆ ನೀವು ಹೇಳುವುದರಲ್ಲಿ ಕೆಲವು ಸತ್ಯಗಳಿವೆ" ಎನ್ನುವ ವಿಶಾಲ ಹೃದಯಿಗಳು. 

ಒಂದೇ ವಾಂಗ್ಮಯದ ಗ್ರಂಥಗಳಿಗೆ ಅವುಗಳಲ್ಲಿರುವ ಪದಸಂಪತ್ತಿನ ಬೇರೆ ಬೇರೆ ಅರ್ಥಗಳ ಸಹಾಯದಿಂದ ಬೇರೆ ಬೇರೆ ಭಾಷ್ಯಗಳು. ಒಂದೇ ಪದಕ್ಕೆ ಅನೇಕ ಅರ್ಥಗಳುಳ್ಳ ಭಾಷೆಯ ಸಂಪತ್ತು. ಅದರಿಂದ ಹೊರಟ ವಿವಿಧ ಅರ್ಥಗಳು. ಆ ಕಾರಣದಿಂದ ಬೇರೆ ಬೇರೆ ಸಿದ್ಧಾಂತಗಳು.

ದೇವರಿದ್ದಾನೆ ಎನ್ನುವವರು ಕೆಲವರು. ದೇವರಿಲ್ಲ ಎನ್ನುವವರು ಮತ್ತೆ ಕೆಲವರು. ಅವನು ಹೀಗಿದ್ದಾನೆ ಅನ್ನುವವರು ಸ್ವಲ್ಪ ಜನ. ಅವನು ಹೀಗಿಲ್ಲ; ಹಾಗಿದ್ದಾನೆ ಅನ್ನುವವರು ಮತ್ತೆ ಬೇರೆ ಜನ. ಮನುಷ್ಯ ಸತ್ತ ಮೇಲೆ ಮುಗಿಯಿತು. ಮುಂದಿನ ಲೋಕವಿಲ್ಲ ಎನ್ನುವವರು ಕೆಲವರು. ಕರ್ಮವೇ ಪ್ರಧಾನ ಎಂದು ಹಲವರು. ಜೀವನು ಪರಮಾತ್ಮನ ಭಾಗ. ಎರಡೂ ಒಂದೇ ಅನ್ನುವರು ಕೆಲವರು. ಇಲ್ಲ, ಇಲ್ಲ, ಎರಡೂ ಬೇರೆ ಅನ್ನುವವರು ಇನ್ನು ಕೆಲವರು. ಎರಡೂ ಒಂದೇ, ಆದರೆ ಸ್ವಲ್ಪ ವ್ಯತ್ಯಾಸ ಎಂದು ಇನ್ನೂ ಕೆಲವರು. ಈ ಭೇದಗಳಿಂದ ಹುಟ್ಟಿದ ಅನೇಕ ಸಿದ್ಧಾಂತಗಳು. 

"ಈ ಗ್ರಂಥಗಳು ಪ್ರಮಾಣ. ಅದರಿಂದ ಇದೇ ಸರಿ" ಎಂದು ಕೆಲವರೆಂದರೆ "ನಾವು ನಿಮ್ಮ ಗ್ರಂಥಗಳನ್ನೇ ಒಪ್ಪುವುದಿಲ್ಲ" ಎನ್ನುವವರು ಮತ್ತೆ ಕೆಲವರು. "ಈ ಗ್ರಂಥಗಳಿಗೆ ಹೀಗೆ ಅರ್ಥ" ಎಂದು ಒಬ್ಬರು ಹೇಳಿದರೆ, "ಇಲ್ಲ. ಅದರ ಅರ್ಥ ಹಾಗೆ" ಎಂದು ಇನ್ನೊಬ್ಬರು. ಕಣ್ಣಿಗೆ ಕಾಣುವುದೇ ಸತ್ಯ ಎಂದು ಒಂದು ಬಣ. ಕಾಣದ ಸತ್ಯವೂ ಇದೆ ಎಂದು ಇನ್ನೊಂದು ಬಣ. ನಿಯಮಗಳು ಬದಲಾದಾಗ ಪಂದ್ಯದ ಫಲಿತಾಂಶವೂ ಬೇರೆ ಆಗುವುದು ವಿಶೇಷವೇನಲ್ಲ. ಹೀಗೆ. 

ಈ ರೀತಿಯ ವಾದ-ವಿವಾದಗಳಲ್ಲಿ ಒಂದು ಕಾಲಘಟ್ಟದಲ್ಲಿ ಯಾರ ತಂಡವು ಬಲಶಾಲಿಯೋ ಆ ತಂಡದ ಸಿದ್ಧಾಂತ ಮೇಲುಗೈ ಪಡೆಯಿತು. ವಿಶ್ವ ಕಪ್ ಗೆದ್ದಂತೆ. "ನಿರೀಶ್ವರವಾದ", "ಏಕವಾದ", "ಅದ್ವೈತ", "ವಿಶಿಷ್ಟಾದ್ವೈತ", "ದ್ವೈತ" ಇನ್ನೂ ಮುಂತಾದುವು. ಇವೆಲ್ಲವೂ ಎಲ್ಲ ಕಾಲದಲ್ಲಿಯೂ ಇದ್ದವು. ಈಗಲೂ ಇವೆ. ಒಂದು ಸಿದ್ಧಾಂತ ಸ್ವಲ್ಪ ಮಾಸುವಂತಾದಾಗ ಪ್ರತಿಭಾಶಾಲಿ ಒಬ್ಬರು ಬಂದು ಅದನ್ನು ಮತ್ತೆ ಸ್ಥಾಪಿಸುವರು. ಹೀಗೆ ಹಗ್ಗ-ಜಗ್ಗಾಟ ನಡೆದೇ ಇರುವುದು. 

******

ಶ್ರೀ ಕುಮಾರಿಲ ಭಟ್ಟರು ಏಳನೆಯ ಶತಮಾನದಲ್ಲಿ ಜೀವಿಸಿದ್ದ ಮಹಾನ್ ವಿದ್ವಾಂಸರು. "ಭಟ್ಟಪಾದರು" ಎಂದು ಕೀರ್ತಿ ಸಂಪಾದಿಸಿದವರು. ಪೂರ್ವ ಮೀಮಾಂಸಾ ಮತ್ತು ಕರ್ಮ ಸಿದ್ಧಾಂತದಲ್ಲಿ ಪ್ರಚಂಡರು. ಶ್ರೀ ಶಂಕರಾಚಾರ್ಯರಿಗಿಂತ ವಯಸ್ಸಿನಲ್ಲಿ ಹಿರಿಯರು. ಆಚಾರ್ಯ ಶಂಕರರು ಅವರನ್ನು ಕಂಡಾಗ ಆಚಾರ್ಯರಿಗೆ ಹದಿನೇಳು-ಹದಿನೆಂಟು ವಯಸ್ಸು. ಕುಮಾರಿಲ ಭಟ್ಟರು ಆ ವೇಳೆಗೆ ವೃದ್ಧರು. 

ಕಾಲಚಕ್ರದಲ್ಲಿ ವೈದಿಕ ಸಿದ್ಧಾಂತಕ್ಕೆ ವಿರುದ್ಧವಾದ ಬೌದ್ಧ ಮತ ಪ್ರಬಲವಾಯಿತು. ಬೌದ್ಧ ಪಂಡಿತರು ವೈದಿಕರನ್ನು ವಾದಗಳಲ್ಲಿ ಸೋಲಿಸಿ ಮೇಲೆ ಬಂದರು. ಕುಮಾರಿಲ ಭಟ್ಟರು ಅವರನ್ನು ಖಂಡಿಸಿ ವಾದಿಸಿದರು. ಬೌದ್ಧರ ಸಿದ್ಧಾಂತದ ಸೂಕ್ಷ್ಮಗಳನ್ನು ತಿಳಿದಹೊರತು ಅವರನ್ನು ವಾದಗಳಲ್ಲಿ ಸೋಲಿಸಲು ಅಸಾಧ್ಯ ಎಂದು ಅವರಿಗೆ ಅನಿಸಿತು. ಏನು ಮಾಡುವುದು? ಅವರ ಗುಟ್ಟನ್ನು ಅವರು ಬಿಡುವುದಿಲ್ಲ. ಮಾರುವೇಷದಿಂದ ಬೌದ್ಧ ವಿದ್ಯಾಲಕ್ಕೆ ಹೋಗಿ ವಿದ್ಯಾರ್ಥಿಯಾಗಿ ಸೇರಿಕೊಂಡರು. ಅವರ ಎಲ್ಲ ಸೂಕ್ಷ್ಮಗಳನ್ನೂ ತಿಳಿದುಕೊಂಡರು. (ಇಂಗ್ಲೆಂಡ್ ದೇಶಕ್ಕೆ ಹೋಗಿ, ಕೌಂಟಿ ಕ್ರಿಕೆಟ್ ಆಡಿ ಅಲ್ಲಿನ ಪರಿಸ್ಥಿತಿ ತಿಳಿದಂತೆ). 

ಅವರು ಅಲ್ಲಿ ವಿದ್ಯಾಭ್ಯಾಸ ಮುಗಿಸಿ ಹೊರಬರುವ ದಿನಗಳು. ಬೌದ್ಧರಿಗೆ ವೇದಗಳಲ್ಲಿ ನಂಬಿಕೆಯಿಲ್ಲ. ಪಾಠ ಮಾಡುತ್ತಿದ್ದ ಗುರುಗಳು ವೇದಗಳನ್ನು ನಿಂದಿಸಿದರು. ವೇದಗಳಲ್ಲಿ ಪೂರ್ಣ ನಂಬಿಕೆಯುಳ್ಳ ಕುಮಾರಿಲ ಭಟ್ಟರಿಗೆ ದುಃಖವಾಗಿ ಕಣ್ಣಲ್ಲಿ ನೀರು ಬಂದಿತು. (ಇನ್ನೊಬ್ಬರ ಮನೆಗೆ ಹೋದಾಗ ಅವರ ಮನೆಯವರು ನಮ್ಮ ಹಿರಿಯರನ್ನು ನಿಂದಿಸಿದರೆ ನೋವಾಗುವ ರೀತಿ). ಗುಟ್ಟು ರಟ್ಟಾಯಿತು. "ಒಹೋ, ಇವನು ನಮ್ಮ ಗುಟ್ಟುಗಳನ್ನು ತಿಳಿಯಲು ಬಂದಿರುವ ಪತ್ತೇದಾರ" ಎಂದು ಸಹಪಾಠಿಗಳಿಗೆ ತಿಳಿದುಹೋಯಿತು. 

ಜೊತೆಯ ವಿದ್ಯಾರ್ಥಿಗಳು ಕುಮಾರಿಲ ಭಟ್ಟರನ್ನು ಮಾಳಿಗೆಯ ಮೇಲೆ ಕರೆದುಕೊಂಡು ಹೋಗಿ ಅಲ್ಲಿಂದ ಕೆಳಗೆ ತಳ್ಳಿದರು. ಕೆಳಗೆ ಬೀಳುವಾಗ ಭಟ್ಟರು "ವೇದಗಳು ಪ್ರಮಾಣೀಭೂತವಾಗಿದ್ದರೆ ನನಗೆ ಏನೂ ಆಗದಿರಲಿ" ಎಂದು ಕೇಳಿಕೊಂಡರು. ಕೆಳಗೆ ಬಿದ್ದಾಗ ಅವರಿಗೆ ಪ್ರಾಣಾಪಾಯ ಆಗಲಿಲ್ಲ. "ವೇದಗಳು ಪ್ರಮಾಣ. ಅದರಿಂದ ನನಗೆ ಏನೂ ಆಗದಿರಲಿ" ಅನ್ನಲಿಲ್ಲ. "ಪ್ರಮಾಣೀಭೂತವಾಗಿದ್ದರೆ" ಅಂದುದರಿಂದ ಸ್ವಲ್ಪ ಅನುಮಾನ ತೋರಿಸಿದಂತೆ ಆಯಿತು. ಅವರಿಗೆ ಒಂದು ಕಣ್ಣು ಹೊಯಿತು. ಆದರೆ ಬದುಕುಳಿದರು. 

*****

ವಿದ್ಯಾಲಯದಿಂದ ಹೊರಬಂದು, ಅಲ್ಲಿ ಕಲಿತ ತಿಳುವಳಿಕೆಯಿಂದ ಬೌದ್ಧ ಗ್ರಂಥಗಳನ್ನೆಲ್ಲ ಖಂಡಿಸಿ ಜಯಶಾಲಿಗಳಾದರು. ಕರ್ಮ ಸಿದ್ಧಾಂತವನ್ನು ಮತ್ತೆ ಬಲಶಾಲಿ ಮಾಡಿದರು. ತಮ್ಮ ಈ ಕೆಲಸವೆಲ್ಲಾ ಮುಗಿದ ಮೇಲೆ ಅವರಿಗೆ ಬೇಸರವಾಯಿತು. ಬೌದ್ಧ ಸಿದ್ಧಾಂತ ಖಂಡಿಸಲು ಹೋಗಿ ಅಲ್ಲಿ ವಿದ್ಯಾರ್ಥಿಯಾಗಿ ಕಲಿತರೂ, ಕಡೆಗೆ ಅಲ್ಲಿನ ಗುರುಗಳಿಗೆ ದ್ರೋಹ ಮಾಡಿದೆ ಅನಿಸಿತು. "ವರ್ಣ ಮಾತ್ರಂ ಕಲಿಸಿದಾತಂ ಗುರು" ಅನ್ನುವಾಗ ತಾನು ಬೌದ್ಧ ಗುರುವಿಗೆ ಮಾಡಿದ್ದು ದೊಡ್ಡ ಅನ್ಯಾಯ ಎಂದು ತೋರಿತು. ಇದು ಗುರುದ್ರೋಹ ಎಂದು ತೀರ್ಮಾನಿಸಿದರು. 

ಕೆಲವೊಮ್ಮೆ ವಾದಗಳಲ್ಲಿ "ವೇದಗಳು ಪ್ರಮಾಣ" ಎಂದು ಹೇಳುವಾಗ "ಈಶ್ವರನು ಹೇಳಿದ್ದರಿಂದ ಅವು ಪ್ರಮಾಣ" ಎಂದು ಒಪ್ಪಿದರೆ "ಅವು ಸ್ವತಃ ಪ್ರಮಾಣ" ಎನ್ನುವುದು ನಿರಾಕರಿಸಿದಂತೆ ಅನ್ನುವ ಕಾರಣಕ್ಕೆ "ಈಶ್ವರನೇ ಇಲ್ಲ" ಎಂದು ವಾದಿಸಿದ್ದರು. (ಇಲ್ಲಿ ಈಶ್ವರ ಅಂದರೆ ಸರ್ವಶಕ್ತನಾದ ಪರಮಾತ್ಮ ಎಂದು). ಇದು "ಈಶ್ವರ ದ್ರೋಹ" ಆಯಿತು. 

ಕರ್ಮಠರಾದದ್ದರಿಂದ ಈ ಗುರುದ್ರೋಹ ಮತ್ತು ಈಶ್ವರ ದ್ರೋಹ ಎರಡಕ್ಕೂ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಯಿತು. ಇದಕ್ಕೆ ಪ್ರಾಯಶ್ಚಿತ್ತ ಅಂದರೆ "ತುಷಾಗ್ನಿ" ಮಾಡಿ ಅದರಲ್ಲಿ ಬೆಂದುಹೋಗುವುದು. ಒಂದೆಡೆ ಕುಳಿತುಕೊಂಡು ತನ್ನ ಸುತ್ತ ಭತ್ತದ ಹೊಟ್ಟಿನ ಗುಡ್ಡೆ ಮಾಡಿ, ಅದಕ್ಕೆ ಬೆಂಕಿ ಹೊತ್ತಿಸಿಕೊಂಡು ನಿಧಾನವಾಗಿ ಅದು ಸುಡುವಾಗ ಬೆಂದು ಸಾಯುವ ಭೀಕರ ಶಿಕ್ಷೆ. ಅನೇಕರು ಅದು ಬೇಡ ಎಂದು ಬೇರೆ ಬೇರೆ ರೀತಿಯಲ್ಲಿ ವಾದಿಸಿದರೂ ಅವರು ಒಪ್ಪದೇ ತುಷಾಗ್ನಿ ಪ್ರವೇಶಿಸಿದರು. 

*****

ಶ್ರೀ ಶಂಕರಾಚಾರ್ಯರಿಗೆ ತಮ್ಮ ಭಾಷ್ಯಗಳಿಗೆ ಕುಮಾರಿಲ ಭಟ್ಟರಿಂದ ವಾರ್ತಿಕಗಳನ್ನು (ವಿವರಣೆಗಳು ಅಥವಾ ಕಾಮೆಂಟರಿ) ಬರೆಸಬೇಕೆಂದು ಇಚ್ಛೆ. ಅದಕ್ಕಾಗಿ ಭಟ್ಟರನ್ನು ಕಾಣಲು ಅವರು ವಾಸವಿದ್ದ ಪ್ರಯಾಗಕ್ಕೆ ಬಂದರು. ಅವರು ಪ್ರಯಾಗಕ್ಕೆ ಬಂದು ತ್ರಿವೇಣಿ ಸಂಗಮದಲ್ಲಿ ಮಿಂದು ವಿಶ್ರಮಿಸುತಿದ್ದಾಗ ಜನಗಳು "ಅಯ್ಯೋ, ಕುಮಾರಿಲ ಭಟ್ಟರು ತುಷಾಗ್ನಿ ಪ್ರವೇಶಿಸಿಬಿಟ್ಟರಲ್ಲ" ಎಂದು ಕೂಗುತ್ತಿದ್ದುದು ಕೇಳಿಸಿತು. ತಕ್ಷಣ ಆ ಸ್ಥಳಕ್ಕೆ ಹೋದರು. ತುಷಾಗ್ನಿ ನಿದಾನವಾಗಿ ಉರಿಯುತ್ತಿತ್ತು. ಹೊಗೆಯಿಂದ ಭಟ್ಟರ ಕಣ್ಣುಗಲ್ಲಿ ನೀರು ಸುರಿಯುತ್ತಿತ್ತು. ಆದರೂ ಅವರು ಶಾಂತರಾಗಿದ್ದರು. ಕೂಗಾಟ-ಚೀರಾಟ ಇಲ್ಲ. (ಶ್ರೀ ಶಂಕರ ದಿಗ್ವಿಜಯ ಗ್ರಂಥದಲ್ಲಿ ಅವರು ಉರಿಯುತ್ತಿರುವ ಬೆಂಕಿಯ ಮಧ್ಯೆ ಪ್ರಜ್ವಲಿಸುವ ಮತ್ತೊಂದು ಬೆಂಕಿಯಂತೆ ಕಂಡರು ಎಂದು ಹೇಳುತ್ತಾರೆ). 

ಆಚಾರ್ಯರನ್ನು ಕಂಡ ಭಟ್ಟರು ಅವರನ್ನು ಸ್ವಾಗತಿಸಿ ಶಿಷ್ಯರ ಮೂಲಕ ಉಪಚರಿಸಿದರು. ಆಚಾರ್ಯರ ಜೊತೆ ಭಟ್ಟರು ಬೆಂಕಿಯಲ್ಲಿ ಕುಳಿತಿದ್ದಾಗಲೇ ಮಾತುಕತೆ ನಡೆಯಿತು. ಆಚಾರ್ಯರ ಭಾಷ್ಯದ ತಾತ್ಪರ್ಯ ಕೇಳಿ ಸ್ವತಃ ಭೇದವಾದಿಯಾಗಿದ್ದರೂ ಸಂತೋಷಪಟ್ಟರು. "ನನಗೆ ನಿಮ್ಮ ಭಾಷ್ಯಗಳಿಗೆ ವಾರ್ತಿಕ ಬರೆಯುವ ಅವಕಾಶ ಇಲ್ಲ. ಮಾಹಿಷ್ಮತಿ ನಗರದಲ್ಲಿ ನನ್ನ ಪ್ರಿಯ ಶಿಷ್ಯನಾದ ಮಂಡನ ಮಿಶ್ರ ಪಂಡಿತನಿದ್ದಾನೆ. ಅವನನ್ನು ವಾದದಲ್ಲಿ ಜಯಿಸಿ ನಿಮ್ಮ ಶಿಷ್ಯನನ್ನಾಗಿ ಮಾಡಿಕೊಳ್ಳಿ. ಅವನು ವಾರ್ತಿಕ ಬರೆದರೆ ನಾನು ಬರೆದಂತೆಯೇ. ನನ್ನ ಕಾಲ ಮುಗಿಯಿತು. ಅಪ್ಪಣೆ ಕೊಡಿ" ಎಂದು ಹೇಳಿ ಜೀವನ ಯಾತ್ರೆ ಮುಗಿಸಿದರು. 

ಆಚಾರ್ಯರು ಮಂಡನ ಮಿಶ್ರರ ಮನೆ ತಲುಪಿದ ನಂತರ ನಡೆದ ಘಟನೆಯ ವಿವರಗಳನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 
*****

ಈ ಸಂಚಿಕೆಯ ಮೇಲುಗಡೆ ಕೊಟ್ಟಿರುವ ಚಿತ್ರದಲ್ಲಿ ಶ್ರೀ ಕುಮಾರಿಲಭಟ್ಟರು ತುಷಾಗ್ನಿಯಲ್ಲಿ ಕುಳಿತಿರುವಾಗ ಶ್ರೀ ಶಂಕರಾಚಾರ್ಯರೊಡನೆ ಮಾತನಾಡುತ್ತಿರುವಂತೆ ಚಿತ್ರಿಸಲಾಗಿದೆ. ಚಿತ್ರದ ಮೇಲೆ ಒಂದು ಶ್ಲೋಕವನ್ನೂ ಬರೆದಿದ್ದಾರೆ. ಇದು ಮುಂಬೈ ನಗರದ ಮಾತುಂಗ ಬಡಾವಣೆಯ ಶ್ರೀ ಶಂಕರ ಮಠದ ಗೋಡೆಗಳ ಮೇಲಿನ ಚಿತ್ರ. ಅಲ್ಲಿ "ಶ್ರೀಶಂಕರ ದಿಗ್ವಿಜಯ" ಕೃತಿಯ ಕೆಲವು ದೃಶ್ಯಗಳನ್ನು ಚಿತ್ರಗಳ ಮೂಲಕ ವಿವರಿಸಿದ್ದಾರೆ. 

ಈ ಚಿತ್ರದಲ್ಲಿ ಕೊಟ್ಟಿರುವ ಶ್ಲೋಕ ಏಳನೆಯ ಸರ್ಗದ 104ನೇ ಶ್ಲೋಕ. ಅದು ಈ ರೀತಿ ಇದೆ:

ಜಾನೇ ಭವಂತಮಹಮಾರ್ಯಜನಾರ್ಥಜಾತಂ
ಅದ್ವೈತರಕ್ಷಣಕೃತೇ ವಿಹಿತಾವತಾರಮ್ 
ಪ್ರಾಗೇವ ಚೇನ್ನಯನವರ್ತ್ರು ಕೃತಾರ್ಥಯೇಥಾ:
ಪಾಪಕ್ಷಯಾಯ ನ ತದೇದೃಶಮಾಚರಿಷ್ಯಮ್ 

"ವೈದಿಕ ಜನರ ಹಿತಕ್ಕಾಗಿ ಅದ್ವೈತ ಸಿದ್ಧಾಂತವನ್ನು ರಕ್ಷಿಸಲು ತಾವು ಅವತಾರ ಮಾಡಿದ್ದೀರೆಂದು ನನಗೆ ಗೊತ್ತಿದೆ. ನನಗೆ ಈ ಮೊದಲೇ ನಿಮ್ಮ ಸಂಪರ್ಕ ಬಂದಿದ್ದರೆ  ನಾನು ಪಾಪ ಕಳೆದುಕೊಳ್ಳಲು ಈ ಕೆಲಸ ಮಾಡುತ್ತಿರಲಿಲ್ಲ. (ನಿಮ್ಮ ಭಾಷ್ಯಗಳಿಗೆ ವಾರ್ತಿಕಗಳನ್ನು ಬರೆದು ಪಾಪ ಕಳೆದುಕೊಳ್ಳುತ್ತಿದ್ದೆ. ಹೀಗೆ ತುಷಾಗ್ನಿಗೆ ಆಹುತಿಯಾಗಬೇಕಿರಲಿಲ್ಲ ಎಂದು ಸೂಚನೆ). 

ಆಸಕ್ತಿ ಇದ್ದವರು ಮುಂಬೈ ನಗರಕ್ಕೆ ಹೋದಾಗ ನೋಡಬಹುದು. 

3 comments:

  1. ಗುರುದ್ರೋಹ ಎಂದು ಸ್ವತಃ ಅರಿತ ಕುಮಾರಿಲ ಭಟ್ಟರ ಬದ್ಧತೆಯನ್ನು ತೋರಿಸುತ್ತದೆ.

    ಕುಷಾಗ್ನಿಗೆ ತನ್ನಂತಾನೇ ತೊಡಗಿಕೊಳ್ಳುವುದು ಊಹೆಗೂ ನಿಲುಕದ್ದು.

    ಮೈ ಝುಂ ಅನ್ನಿಸಿತು.

    ಸಾಧಕರಿಗೆ ಬೆಲೆಕಟ್ಟಲುಂಟೆ?

    ReplyDelete
  2. Such great spiritual and divine beings were born and preached righteousness, Self and God realizations centuries ago for our understanding. We should be proud of our heritage. UR….

    ReplyDelete
  3. Thank you very much, very well narrated with familiar game as an example, in detail,cleared my doubts about why Kumarila butt sacrificed his life .

    ReplyDelete