ಹಿಂದಿನ ಒಂದು ಸಂಚಿಕೆಯಲ್ಲಿ, "ಶ್ರೀಕೃಷ್ಣನಿಂದ ಅಮೃತತ್ವದ ಕಡೆಗೆ" ಎಂಬ ಶೀರ್ಷಿಕೆಯ ಅಡಿಯಲ್ಲಿ, ಸೋದೆ ಮಠಾಧೀಶರಾಗಿದ್ದ ಶ್ರೀ ವಾದಿರಾಜರು ಕ್ಷೀರ ಸಮುದ್ರ ಮಥನದ ಅಂಶಗಳನ್ನು ಕೇಂದ್ರವಾಗಿಟ್ಟುಕೊಂಡು ಅವನ್ನು ಹೇಗೆ ತಮ್ಮ "ಶ್ರೀರುಕ್ಮಿಣೀಶ ವಿಜಯ" ಮಹಾಕಾವ್ಯದ ಮಂಗಳಾಚರಣೆ ಶ್ಲೋಕವಾಗಿ ಪರಿವರ್ತಿಸಿದ್ದಾರೆ ಎನ್ನುವುದನ್ನು ನೋಡಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.
ಇದರ ಮುಂದಿನ ಸಂಚಿಕೆಯಲ್ಲಿ, "ಸಮ ಮತ್ತು ಸಮನಾ" ಎಂಬ ಶೀರ್ಷಿಕೆಯ ಅಡಿಯಲ್ಲಿ, ಶ್ರೀಕೃಷ್ಣ ಮತ್ತು ರುಕ್ಮಿಣಿ ದೇವಿಯರ (ಸಮಾನಾಂತರವಾಗಿ ಶ್ರೀ ನಾರಾಯಣ ಮತ್ತು ಮಹಾಲಕ್ಷ್ಮಿ ದೇವಿಯರ) ಬಾಂಧವ್ಯದ ವಿಶೇಷ ಏನು ಎನ್ನುವುದನ್ನು ಸ್ವಲ್ಪ ಮಟ್ಟಿಗೆ ಚರ್ಚಿಸಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.
ಇವುಗಳ ಹಿನ್ನೆಲಿಯಲ್ಲಿ ಶ್ರೀ ವಾದಿರಾಜರು ತಮ್ಮ ಮಹಾಕಾವ್ಯದಲ್ಲಿ ಶ್ರೀಕೃಷ್ಣ ಮತ್ತು ಹಯಗ್ರೀವ ರೂಪದ ನಂತರ ಮಾಡಿರುವ ರುಕ್ಮಿಣಿ ದೇವಿ ಕುರಿತಾದ ಪ್ರಾರ್ಥನೆ ಬಗ್ಗೆ ಸ್ವಲ್ಪ ನೋಡೋಣ.
******
ಸೀತಾದೇವಿ, ರುಕ್ಮಿಣಿ ಮೊದಲಾದ ರೂಪಗಳು ಶ್ರೀ ಮಹಾಲಕ್ಷ್ಮಿ ದೇವಿಯ ಅವತಾರ ರೂಪಗಳು. ಮಹಾವಿಷ್ಣುವಿನ ಶ್ರೀರಾಮ, ಶ್ರೀಕೃಷ್ಣ ಮುಂತಾದ ರೂಪಗಳ ರೀತಿಯಲ್ಲಿ. ಮೂಲ ರೂಪ ಮತ್ತು ಅವತಾರ ರೂಪಗಳ ಗುಣಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ. ಇದೊಂದು ಪ್ರಮೇಯ. ಗಣಿತದಲ್ಲಿ ಜ್ಯಾಮಿತಿ (Geometry) ಕಲಿಯುವಾಗ ದತ್ತ (Given Data) ಎನ್ನುವಂತೆ. ಅಲ್ಲಿಂದ ಮುಂದಿನ ಲೆಕ್ಕ. ಹೀಗೆ. ಮಹಾಲಕ್ಷ್ಮಿಗೆ ಸಂಸಾರ, ಹುಟ್ಟು-ಸಾವು, ಸುಖ-ದುಃಖ ಮೊದಲಾದ ವೈಪರೀತ್ಯಗಳಿಲ್ಲ. ಅವಳು ಪರಮಾತ್ಮನ ಎಲ್ಲ ರೂಪಗಳ ಜೊತೆಯಲ್ಲಿಯೂ, ಎಲ್ಲ ದೇಶ-ಕಾಲಗಳಲ್ಲಿಯೂ ಸಮ-ಸಮವಾಗಿ ಇರುತ್ತಾಳೆ. ಇಬ್ಬರ ನಡುವೆ ಇರುವ ವ್ಯತ್ಯಾಸ ಏನು ಎನ್ನುವುದನ್ನು ಹಿಂದಿನ "ಸಮ ಮತ್ತು ಸಮನಾ" ಎನ್ನುವ ಸಂಚಿಕೆಯಲ್ಲಿ ನೋಡಿದ್ದೇವೆ.
ಈ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿದೇವಿಯ ಬಗ್ಗೆ ನಮಗೆ ಗೊತ್ತಿರುವುದುದೇನು? ಅವಳ ರೂಪ ಹೇಗಿದೆ? ನಾವು ಕಾಣುವ ಮಹಾಲಕ್ಷ್ಮಿಯ ಚಿತ್ರಗಳಲ್ಲಿ (ಫೋಟೋಗಳು) ಇರುವ ವಿವರಗಳು ಅವಳ ಬಗ್ಗೆ ಶ್ರೀಸೂಕ್ತ ಮತ್ತು ಇತರ ವೈದಿಕ ವಾಂಗ್ಮಯ ಕೊಡುವ ವಿವರಗಳ ಅನುಸಾರ ಇರುತ್ತವೆ. ಮುಖ್ಯವಾಗಿ "ಯಾ ಸಾ ಪದ್ಮಾಸನಸ್ಥಾ ....." ಎಂದು ವರ್ಣಿಸುವ ಶ್ಲೋಕದಿಂದ ಬಂದವು. ಇದೇ ರೀತಿ ಅವಳ ರೂಪದ ಅಂಶಗಳ ವರ್ಣನೆಗಳು ವೈದಿಕ ವಾಂಗ್ಮಯದಲ್ಲಿ ಬೇರೆಡೆಗಳಲ್ಲಿ ಕಂಡುಬರುತ್ತವೆ. ಅವು ಹೇಳುವ ವಿವರಗಳೇನು?
- ಅವಳು ಗುಂಗುರು ಕೂದಲ ಸುಂದರಿ. ವೆಂಕಟರಮಣನ ಬಿಂಕದ ರಾಣಿ!
- ಕಾಲಂದಿಗೆಗಳಿಂದ (ಗೆಜ್ಜೆಗಳು) ಶೋಭಿಸುವ ಪಾದಗಳು. (ಗೆಜ್ಜೆ ಕಾಲ್ಗಳ ನಾದ!)
- ಅವಳ ಪಾದಗಳು ಬಣ್ಣದಲ್ಲಿ ಕಮಲದಂತೆ ಮತ್ತು ಮೃದು.
- ಸದಾ ನಗು ಮುಖದ ದೇವಿ. ಹಸನ್ಮುಖದ ರೂಪ.
- ಶ್ರೀಸೂಕ್ತ ಹೇಳುವಂತೆ "ವಿಪುಲ ಕಟಿ ತಟೀ". ಸಣ್ಣ ನಡು ಉಳ್ಳವಳು.
- "ಪದ್ಮಪತ್ರಯತಾಕ್ಷಿ". ಪಂಕಜ ಲೋಚನೆ. (ಕಮಲದ ಎಲೆಯಂತೆ ಕಣ್ಣುಗಳು).
- "ಶುಭ್ರ ವಸ್ತ್ರೋತ್ತರೀಯಾ". ಒಳ್ಳೆಯ ವಸ್ತ್ರಗಳನ್ನು ಧರಿಸಿರುವವಳು.
- ಬೇಡಿದವರಿಗೆ ಅಂಕೆಯಿಲ್ಲದ ಭಾಗ್ಯ ರಾಶಿಯನ್ನೇ ಕೊಡುವವಳು.
- ಕಂಕಣ (ಧರಿಸಿದ) ಕೈಗಳ ತಿರುವುತ್ತಾ ಬರುವವಳು.
- ಒಟ್ಟಿನಲ್ಲಿ ಸಕಲ ಸನ್ಮಂಗಳಗಳನ್ನೂ ಕೊಡುವ ದೇವಿ.
ಈ ಲಕ್ಷಣಗಳನ್ನು ಶ್ರೀ ವಾದಿರಾಜರು ತಮ್ಮ ಮಹಾಕಾವ್ಯದ ಕಥಾನಾಯಕಿ ರುಕ್ಮಿಣಿ ದೇವಿಯ ಸ್ತುತಿಯಲ್ಲಿ ಪ್ರಯೋಗಿಸಿದ್ದಾರೆ.
******
ಪರಮಪುರುಷನು ಅತ್ಯಂತ ಸುಂದರನು. ಅವನಿಗಿಂತ ಸುಂದರ ಇನ್ನೊಬ್ಬನಿಲ್ಲ. ಇವಳು ಅವನ ಮಡದಿ ಸುಂದರಿ. "ಸುಂದರಿ" ಅನ್ನುವ ಪದವನ್ನು ಕಂಡ ಕಂಡವರಿಗೆಲ್ಲಾ ಅನ್ವಯಿಸಿ ಹೇಳುವ ಅಭ್ಯಾಸ ನಮಗೆ ಉಂಟು. "ಸುಂದರ" ಅನ್ನುವ ಪದಕ್ಕೂ ಹಾಗೆಯೇ! ಲೋಕದಲ್ಲಿ ಸ್ತ್ರೀಯರಿಗೆ ಪುರುಷರೂ, ಪುರುಷರಿಗೆ ಸ್ತ್ರೀಯರೂ ಚೆನ್ನಾಗಿ ಕಾಣುವುದು ಸ್ವಾಭಾವಿಕ. ಆದರೆ ನಾವುಗಳು ಶ್ರೀಹರಿಯನ್ನು ನಮಸ್ಕರಿಸುವಾಗ ಹೇಳುವುದೇನು? "ಪುಂಸಾಂ ಮೋಹನ ರೂಪಾಯ, ಪುಣ್ಯ ಶ್ಲೋಕಾಯ ಮಂಗಳಂ". ಗಂಡಸರಿಗೂ ಮೋಹ ತರಿಸುವ ರೂಪ ಅವನದು. ಅವನ ಸ್ತ್ರೀರೂಪವಾದ "ಮೋಹಿನಿ ರೂಪ" ಸಹ ಅಷ್ಟೇ. ಸಮುದ್ರ ಮಥನ ಕಾಲದಲ್ಲಿ ದುಷ್ಟರಾದ ದೈತ್ಯರು ಅಮೃತದ ಗಡಿಗೆ ಒಯ್ದು ಓಡಿಹೋದಾಗ ಮೋಹಿನಿ ರೂಪ ಕಾಣಿಸಿಕೊಂಡಿತು. ಆಗ ಅವರಾಗಿ ಅಮೃತದ ಗಡಿಗೆ ತಂದು ಮೋಹಿನಿಗೆ ಒಪ್ಪಿಸಿದರು! ದೇವ-ದಾನವರೆಲ್ಲರೂ ಅಮೃತವನ್ನು ಮರೆತು ಆ ದಿವ್ಯ ರೂಪ ನೋಡುತ್ತಾ ಮೈಮರೆತರು. ಮಹಾಲಕ್ಷ್ಮಿಯೂ ಆ ರೂಪ ನೋಡಿ ಬೆರಗಾದಳಂತೆ! "ಇದೇನು ನನ್ನ ಗಂಡನ ರೂಪ? ಸದಾ ಅವನ ಜೊತೆ ಇದ್ದರೂ ನನಗೇ ಇನ್ನೂ ಅರ್ಥವಾಗಿಲ್ಲವಲ್ಲ!" ಎಂದು ಆಶ್ಚರ್ಯಚಕಿತಳಾದಳಂತೆ. ಶ್ರೀವಾದಿರಾಜರ "ದಶಾವತಾರ ಸ್ತುತಿ" ಕೃತಿಯಲ್ಲಿ ಈ ವರ್ಣನೆ ಕಾಣಬಹದುದು. ಅಂತಹ ಸುಂದರ ಅವನು. ಅವನಿಗೆ ತಕ್ಕ ಸುಂದರಿ ಇವಳು. ಆದ್ದರಿಂದ "ಅಂಬಾo ತಾಂ ಪ್ರಣತೋಸ್ಮಿ".
ಸಾಮಾನ್ಯವಾಗಿ "ನಮಸ್ಕಾರ ಮಾಡುತ್ತೇನೆ" ಎಂದು ಹೇಳುವಾಗ "ನತೋಸ್ಮಿ" ಅನ್ನಬೇಕು. "ಪ್ರ" ಏಕೆ ಸೇರಿತು? ಇದು ಸುಮ್ಮನೆ ಮಾಡುವ ನಮಸ್ಕಾರವಲ್ಲ. ಅತಿ ಹೆಚ್ಚು ಗೌರವದಿಂದ ಮಾಡುವ ನಮಸ್ಕಾರ. ಆದ್ದರಿಂದ "ಪ್ರಣತೋಸ್ಮಿ". ಬರೀ ಕಾಟಾಚಾರಕ್ಕೆ ಅಥವಾ ಅವರಿವರು ಹೇಳಿದರೆಂದು "ಅಡ್ಡಬಿದ್ದೆ" ಎಂದಲ್ಲ. "ನಾನು ಇಷ್ಟಪಟ್ಟು ಬಾಗಿ (ಮೈ ಬಗ್ಗಿಸಿ) ಅಡ್ಡಬಿದ್ದೆ" ಎಂದು ಅರ್ಥ.
ಈಗ ನಮಸ್ಕರಿಸುತ್ತಿರುವುದು ಶ್ರೀಕೃಷ್ಣನ ಜೊತೆಯಲ್ಲಿರುವ ರುಕ್ಮಿಣೀ ರೂಪಕ್ಕೆ. ಆದ ಕಾರಣ "ಕೃಷ್ಣ ರಮಣೀo". "ರುಗ್ಮ" ಅಂದರೆ ಬಂಗಾರ. ದೇವಿಯ ಮೈಬಣ್ಣ ಬಂಗಾರದ್ದು. ಆದ್ದರಿಂದ "ರುಗ್ಮಿಣೀ" ಅಥವಾ "ರುಕ್ಮಿಣೀ" ಎಂದು ಹೆಸರು. (ಶ್ರೀ ಸೂಕ್ತ "ಹಿರಣ್ಯವರ್ಣಾo ಹರಿಣೀo" ಎಂದು ಹೇಳುತ್ತದೆ).
ದೇಹದಲ್ಲಿ ಕೆಲವು ಅಂಗಗಳು ಚಿಕ್ಕವಾಗಿರಬೇಕು. ಕೆಲವು ದೊಡ್ಡದಿರಬೇಕು. ಹೀಗೆ ಹೀಗೆ ಇರಬೇಕು ಎಂದು ಲಕ್ಷಣ ಶಾಸ್ತ್ರ ಹೇಳುತ್ತದೆ. ಒಟ್ಟಿನಲ್ಲಿ ಮೂವತ್ತೆರಡು ಲಕ್ಷಣಗಳು. ಇಪ್ಪತ್ನಾಲ್ಕು-ಇಪ್ಪತ್ತೈದು ಲಕ್ಷಣಗಳಿದ್ದವರು ಮಿಸ್ ಯೂನಿವರ್ಸ್ ಅಥವಾ ಮಿಸ್ ವರ್ಲ್ಡ್ ಆಗುತ್ತಾರೆ. ಈ ದೇವಿಯಾದರೋ ಎಲ್ಲ ಮೂವತ್ತೆರಡು ಒಳ್ಳೆಯ ಲ್ಲಕ್ಷಣಗಳನ್ನು ಹೊಂದಿರುವ ದೇವಿ. ಆದ್ದರಿಂದ ಅವಳು "ಕುಚಭಾರಭೀರುವಿಲಾಸನ್ಮಧ್ಯಾo". ಸಣ್ಣ ನಡು. ಆ ನಡುವಿನಲ್ಲಿ ಸಣ್ಣ ಡಾಬು. ಸೊಂಟದ ಮೇಲೆ ಮತ್ತು ಕೆಳಗೆ ಮಾಟವಾದ ದೇಹ ಸೌಷ್ಠವ.
******
ಎಲ್ಲರಿಗೂ ಕೇಳಿದ ಆಭರಣಗಳನ್ನು ಕೊಡುವ ದೇವಿ ತಾನು ಸ್ವತಃ ಎಂತಹ ಆಭರಣಗಳನ್ನು ಧರಿಸಿರಬೇಕು? ನಾವು ಕಂಡಂತೆ ಯಾವುದೋ "Hallmark" ರೀತಿಯ ಲೋಕಲ್ ಚಿನ್ನದ ಆಭರಣಗಳಲ್ಲ. "ಜಾಂಬೂನ" ಬಂಗಾರದಿಂದ ಮಾಡಿದ ಒಡವೆಗಳು. ಇದನ್ನು ಡೂಪ್ಲಿಕೇಟ್ ಮಾಡಲು ಬರುವುದಿಲ್ಲ.
ಮೇರು ಪರ್ವತ ಚಿನ್ನದ ಪರ್ವತವಂತೆ. ಎಲ್ಲಾ ಬೆಟ್ಟ, ಗುಡ್ಡ, ಪರ್ವತಗಳಂತೆ ಕಲ್ಲು-ಮಣ್ಣು-ಹಿಮ ಇವುಗಳಿಂದ ಮಾಡಿದ ಪರ್ವತವಲ್ಲ. ಅದು ಐದು ಶಿಖರಗಳ ಪರ್ವತ. ಇಡೀ ಪ್ರಪಂಚ ಅದರ ಸುತ್ತ ಸುತ್ತಿಕೊಂಡಿದೆ. ಈ ಮೇರು ಪರ್ವತದ ಶಿಖರದ ಮೇಲೆ ಒಂದು ನೇರಿಳೆ ಮರ ಇದೆ. ಜಂಬೂ ಫಲ ಅಂದರೆ ನೇರಿಳೆ ಹಣ್ಣು. ಅದು ನಾವು ಕಾಣುವಂತೆ ಹೆಬ್ಬೆಟ್ಟು ಗಾತ್ರದ ನೇರಿಳೆ ಹಣ್ಣುಗಳನ್ನು ಕೊಡುವ ಮರವಲ್ಲ. ಒಂದೊಂದು ನೇರಿಳೆ ಹಣ್ಣು ಒಂದೊಂದು ಕಲ್ಲಂಗಡಿ ಹಣ್ಣಿನ ಗಾತ್ರದ್ದು. ಮರದ ತುಂಬಾ ಜೋತುಬಿದ್ದಿರುವ ಹಣ್ಣುಗಳು. ಪಕ್ವವಾಗಿ ಈ ಹಣ್ಣುಗಳು ಮರದಿಂದ ಬೇರ್ಪಟ್ಟು ಕೆಳಗೆ ಬೀಳುತ್ತವೆ. ಹೀಗೆ ಬಿದ್ದಾಗ ಆ ಹಣ್ಣುಗಳು ಒಡೆದು ಅವುಗಳ ರಸ ಕಾಲುವೆಯಂತೆ ಹರಿದು ಬರುತ್ತದೆ. ಮರದ ಕೆಳಗಿನ ಬಂಗಾರ ಹೀಗೆ ಹರಿಯುತ್ತಿರುವ ನೇರಿಳೆ ರಸ ಸೇರಿ "ನೇರಿಳೆ ಬಣ್ಣದ ಬಂಗಾರ" ಆಗುತ್ತದೆ. ಈ ಬಂಗಾರಕ್ಕೆ "ಜಾಂಬೂನದಾ" ಬಂಗಾರ ಎಂದು ಹೆಸರು.
ದೇವಿಯ ಒಡವೆಗಳು ಈ ಬಗೆಯ ಬಂಗಾರದಿಂದ ಮಾಡಿದುವು. ಅತಿ ಶುದ್ಧ, ದೈವಿಕ ಚಿನ್ನ ಅದು. ಆದರಿಂದ ಅವಳು "ಜಾಂಬೂನದಾಲಂಕೃತಾಂ".
ಇಂತಹ ಹೊಳೆಯುತ್ತಿರುವ ಜಾಂಬೂನ ಬಂಗಾರದ ಗೆಜ್ಜೆಗಳು ಅವಳ ಕಮಲದಂತಹ ಮೃದುವಾದ, ಮಾಟವಾದ ಪಾದಗಳ ಸುತ್ತ ಕುಳಿತು ಸದಾ ಸುಮಧುರ ಶಬ್ದ ಮಾಡುತ್ತಿರುತ್ತವೆ. (ಹೀಗೆ ಯಾಕೆ? ಅವಳು ಸುಮ್ಮನೆ ಕುಳಿತಿರುವವಳಲ್ಲ. ಯಾವಾಗಲೂ ಕೆಲಸ ಮಾಡುತ್ತಾ ಓಡಾಡುತ್ತಿರುತ್ತಾಳೆ. ಎಂತಹ ಕೆಲಸಗಳು? ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ). ಆದ್ದರಿಂದ "ಸಿಂಜನ್ನೂಪುರ ಶೋಭಿಪಾದಕಮಲಾಂ".
ಕಮಲದಂತಹ ಅರಳಿದ ಕಣ್ಣಿರುವುದರಿಂದ "ಕಂಜಾಕ್ಷೀ". ಅವಳು ಯಾವಾಗಲೂ ನಗೆಮೊಗದ ಸುಂದರಿ. ಒಮ್ಮೆಯೂ ಮುಖ ಗಂಟು ಹಾಕಿಕೊಂಡವಳಲ್ಲ. ಸದಾಕಾಲವೂ ನಗುನಗುತ್ತಿರುವವಳು. ಈ ಕಾರಣದಿಂದ "ಮಂದಸ್ಮಿತೋದ್ಯುನ್ಮುಖೀಮ್". ಅವಳ ಕೈನಲ್ಲಿರುವ ಕಂಕಣಗಳು ಒಂದು ಕಡೆ ಹೊಳೆಯುತ್ತವೆ. ಮತ್ತೆ ಒಂದಕ್ಕೊಂದು ತಾಕುವಾಗ ಸುಮಧುರ ಶಬ್ದ ಮಾಡುತ್ತವೆ. ಆದ್ದರಿಂದ "ಕಣತ್ಕಂಕಣಾಮ್". ಇವೆಲ್ಲಕ್ಕೆ ಹೊಂದುವಂತೆ ತಕ್ಕ ವಸ್ತ್ರಗಳನ್ನು ಧರಿಸಿದ್ದಾಳೆ. ಶುಭ್ರ ವಸ್ತ್ರೋತ್ತರೀಯಾ. ಹೀಗಿರುವುದರಿಂದ "ಸುವಾಸನಾo".
ಮಗನಾದ ಚತುರ್ಮುಖ ಬ್ರಹ್ಮನಿಂದ ಪ್ರಾರಂಭಿಸಿ ಸಮಸ್ತ ದೇವತೆಗಳೂ ದೇವಿಯು ನಮ್ಮ ಕಡೆ ನೋಡಲಿ ಎಂದು ಕಾಯುತ್ತಿದ್ದಾರೆ. ಕೆಲಸ ಏನಾದರೂ ಹೇಳಲಿ ಎಂದು ಹಾತೊರೆಯುತ್ತಾರೆ. ಹೀಗಿರುವುದರಿಂದ "ಶಂಭಾದೈ: ಪರಿಸೇವಿತಾಂ".
******
ಹೀಗೆ ಮೇಲೆ ಹೇಳಿದ ಎಲ್ಲ ಗುಣ-ಲಕ್ಷಣಗಳನ್ನೂ ಒಂದೆಡೆ ಒಟ್ಟಿಗೆ ಸೇರಿಸಿ "ಶಾರ್ದೂಲವಿಕ್ರೀಡಿತ" ವೃತ್ತದಲ್ಲಿ ಶ್ರೀವಾದಿರಾಜರು ದೇವಿ ರುಕ್ಮಿಣಿಯ ವಂದನೆಯ ಈ ಶ್ಲೋಕವನ್ನು ತಮ್ಮ "ಶ್ರೀರುಕ್ಮಿಣೀಶ ವಿಜಯ" ಮಹಾಕಾವ್ಯದಲ್ಲಿ ರಚಿಸಿದ್ದಾರೆ:
ಸಿಂಜನ್ನೂಪುರಶೋಭಿಪಾದಕಮಲಾಂ ಮಂದಸ್ಮಿತೋದ್ಯನ್ಮುಖೀo
ಕಂಜಾಕ್ಷೀo ಕುಚಭಾರಭೀರುವಿಲಸನ್ಮಧ್ಯಾo ಕ್ಕಣತ್ಕoಕಣಾo
ಶಂಭ್ವಾದೈ: ಪರಿಸೇವಿತಾಂ ಸುವಸನಾo ಜಾಂಬೂನದಾಲಂಕೃತಾಂ
ಅಂಬಾo ತಾಂ ಪ್ರಣತೋಸ್ಮಿ ಕೃಷ್ಣರಮಣೀo ಲಂಬಾಲಕಾಂ ರುಕ್ಮಿಣೀo
ಪ್ರತಿಯೊಂದು ಪದಪುಂಜಕ್ಕೂ ಮೇಲಿನ ವಿವರಣೆಯಲ್ಲಿ ಹಿನ್ನೆಲೆ ಮತ್ತು ಅರ್ಥ ಕೊಟ್ಟಿರುವುದರಿಂದ ಮತ್ತೆ ಶ್ಲೋಕದ ಸಾರಾಂಶ ಕೊಡಬೇಕಾಗಿಲ್ಲ.
ತಾಯಿ (ಮಹಾಲಕ್ಷ್ಮಿ) ರುಕ್ಮಿಣಿದೇವಿ ಈ ರೀತಿ ಇರುವಳೆಂದು ಕಲ್ಪಿಸಿಕೊಂಡು ಶ್ಲೋಕವನ್ನು ಹೇಳಿದರೆ ಅದರ ಅನುಭವವೇ ಬೇರೆ ರೀತಿಯದು. ಅನೇಕರು ಈ ಶ್ಲೋಕವನ್ನು ಪ್ರತಿನಿತ್ಯ ಪಾರಾಯಣಕ್ಕೆ ಉಪಯೋಗಿಸಿಕೊಳ್ಳುತ್ತಾರೆ.
******
ಹೆಚ್ಚಿನ ಅಭ್ಯಾಸ ಮತ್ತು ಸಾಧನೆ ಮಾಡಿದವರಿಗೆ ಇನ್ನೂ ಅನೇಕ ವಿಶೇಷಾರ್ಥಗಳು ಹೊಳೆದರೆ ಅದರಲ್ಲಿ ಆಶ್ಚರ್ಯ ಪಡುವುದು ಏನೂ ಇಲ್ಲ. ಅಧ್ಯಯನ ಬಲಿತಂತೆ ಹೊಸ ಹೊಳಹುಗಳು ತಾವಾಗಿಯೇ ಮನಸ್ಸಿನಲ್ಲಿ ಮೂಡುತ್ತವೆ. ವಿಶೇಷ ಆನಂದದ ಅನುಭವ ಆಗುತ್ತದೆ.
Very interesting
ReplyDelete