Thursday, July 17, 2025

ಪಾರ್ಥಿವ ಶರೀರ


ಚಿತ್ರರಂಗದ ಹಿರಿಯ ನಟಿ, "ಚತುರ್ಭಾಷಾ ತಾರೆ" ಎಂದು ಹೆಸರಾದ ಶ್ರೀಮತಿ ಬಿ. ಸರೋಜಾ ದೇವಿ ಅವರ ನಿಧನ ಕಳೆದ ವಾರ ಸಂಭವಿಸಿ ಕಲಾಲೋಕವನ್ನು ಬಡವಾಗಿಸಿತು.  ಅನೇಕ ದಶಕಗಳ ಕಾಲ ವಿವಿಧ ರೀತಿಯ ಚಲನಚಿತ್ರಗಳ ವಿಶಿಷ್ಟ ಪಾತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿ, ಕಲಾಸೇವೆ ಸಲ್ಲಿಸಿ, ಕೀರ್ತಿ ಸಂಪಾದಿಸಿದವರು ಅವರು. ಅವರ ಅಂತ್ಯ ಸಂಸ್ಕಾರಗಳು ತಮ್ಮ ಹುಟ್ಟೂರಾದ ರಾಮನಗರ ಜಿಲ್ಲೆ, ಚನ್ನಪಟ್ಟಣ ಬಳಿಯ ದಶಾವರ ಗ್ರಾಮದಲ್ಲಿ ಎರಡು ದಿನಗಳ ಹಿಂದೆ, ಮಂಗಳವಾರ ನಡೆಯಿತು. 

ಈ ಸಂದರ್ಭದಲ್ಲಿ ಕರ್ನಾಟಕ ಮುಖ್ಯ ಮಂತ್ರಿಗಳ ಕಚೇರಿ ನೀಡಿದ ಕನ್ನಡ ಪ್ರಕಟಣೆಯೊಂದು ಅದೇ ಕಚೇರಿಯಿಂದ ಇಂಗ್ಲಿಷಿನಲ್ಲಿ (ಪ್ರಾಯಶಃ ಗೂಗಲ್ ಮೂಲಕ) ತರ್ಜುಮೆಗೊಂಡು "ಮುಖ್ಯ ಮಂತ್ರಿಗಳು ಶ್ರೀಮತಿ ಸರೋಜಾ ದೇವಿಯವರ earthly body ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು" ಎಂದು ತಿಳಿಸಿತು. 

ಕನ್ನಡದಲ್ಲಿ "ಪಾರ್ಥಿವ ಶರೀರ" ಎಂದು ಹೇಳುವ ರೀತಿ ಇಂಗ್ಲೀಷಿನಲ್ಲಿ ಸಾಮಾನ್ಯವಾಗಿ "mortal remains" ಅನ್ನುತ್ತಾರೆ. ಇಂಗ್ಲಿಷಿಗೆ ಹೀಗೆ "earthly body" ಆಗಿ  ಭಾಷಾಂತರಗೊಂಡ ಸಂದರ್ಭದಲ್ಲಿ ಮಿತ್ರರೊಬ್ಬರು "ಹೀಗೆ ಪಾರ್ಥಿವ ಶರೀರ ಎಂದು ಏಕೆ ಹೇಳುತ್ತಾರೆ?" ಎಂದು ಪ್ರಶ್ನಿಸಿದ್ದಾರೆ. ಅದನ್ನಷ್ಟು ನೋಡೋಣ. 

ಪಾರ್ಥಿವ ಅನ್ನುವ ಪದದ ಮೂಲ "ಪೃಥ್ವಿಯಿಂದ ಆದದ್ದು" ಎನ್ನುವುದರಿಂದ ಬಂದದ್ದು. ಈ ಭೂಮಿಗೆ "ಪೃಥ್ವಿ" ಎಂದು ಹೆಸರು ಬಂದದ್ದು "ಪೃಥು ಚಕ್ರವರ್ತಿ" ಕಡೆಯಿಂದ. ಜೀವ ಕೊಟ್ಟವನು ತಂದೆ. ಹಾಗೆಯೇ ಜೀವ ಉಳಿಸಿದವನೂ ತಂದೆಯೇ. ಹಸುವಿನ ರೂಪದಲ್ಲಿ ತಪ್ಪಿಸಿಕೊಂಡು ಓಡುತ್ತಿದ್ದ ಭೂದೇವಿಯ ಸಂಹಾರ ಮಾಡಲು ಹೊರಟ ಪೃಥು, ಅವಳ  ಮನವಿಯ ಮೇರೆಗೆ ಜೀವದಾನ ಮಾಡಿದ. ಆದ್ದರಿಂದ ಭೂದೇವಿಯು ಪೃಥುವಿನ ಮಗಳಾಗಿ, "ಪೃಥ್ವಿ" ಎಂದು ಹೆಸರು ಪಡೆದಳು. ಈ ಪೃಥು ಚಕ್ರವರ್ತಿ ಯಾರು? ನಾವು ವಾಸಿಸುವ ಭೂಮಿಗೆ "ಪೃಥ್ವಿ" ಎಂದು ಹೆಸರು ಏಕೆ ಬಂದಿತು? ಈ ಪ್ರಶ್ನೆಗಳಿಗೆ ಉತ್ತರಕ್ಕೆ ಇಲ್ಲಿ ಕ್ಲಿಕ್ ಮಾಡಿ ಓದಿ ತಿಳಿಯಬಹುದು. 

*****

"ಮಣ್ಣಿಂದ ಕಾಯ ಮಣ್ಣಿಂದ" ಎನ್ನುವುದು ಶ್ರೀ ಪುರಂದರದಾಸರ ಒಂದು ದೇವರನಾಮ. ಅದರಲ್ಲಿ "ಸತ್ತವರನ್ನು ಹೂಳಿ ಸುಡುವುದೇ ಮಣ್ಣು" ಎಂದು ಹೇಳಿದ್ದಾರೆ. "ಪಂಚಭೂತಗಳಿಂದ ಆದ ದೇಹ ಪಂಚಭೂತಗಳಲ್ಲಿ ಲೀನವಾಯಿತು" ಎಂದು ಕಥೆ, ಕಾದಂಬರಿಗಳಲ್ಲಿ ಬರೆಯುತ್ತಾರೆ. "ನುಡಿನಮನ" ನೀಡುವಾಗಲೂ ಈ ರೀತಿ ಹೇಳುತ್ತಾರೆ. ಹಾಗಾದರೆ "ಪಾರ್ಥಿವ ಶರೀರ" ಎಂದರೆ ಏನು? ಇದೇ ರೀತಿ ಬೇರೆಯ ಶರೀರಗಳೂ ಇವೆಯೇ? ಇವೆಲ್ಲ ಕೇಳಬಹುದಾದ, ಕೇಳಬೇಕಾದ ಪ್ರಶ್ನೆಗಳೇ. 

ಸೃಷ್ಟಿಯು ಹೇಗಾಯಿತು? ಅದರ ಕ್ರಮವೇನು? ಈ ಮುಂತಾದ ಪ್ರಶ್ನೆಗಳಿಗೆ ನಮ್ಮ ವೈದಿಕ ವಾಂಗ್ಮಯದಲ್ಲಿ ಅನೇಕ ಕಡೆ ವಿವರಣೆಗಳನ್ನು ಕೊಟ್ಟಿದ್ದಾರೆ. ಉಪನಿಷತ್ತುಗಳು ಮತ್ತು ಪುರಾಣಗಳಲ್ಲಿ ಈ ವಿವರಗಳು ಲಭ್ಯವಿವೆ. ಪದ್ಮ ಪುರಾಣದ ಪ್ರಾರಂಭದಲ್ಲಿಯೇ ಸವಿಸ್ತಾರವಾಗಿ ಇದನ್ನು ನೋಡಬಹುದು. 

ಬ್ರಹ್ಮರ್ಷಿ ವಸಿಷ್ಠರ ಮಗ ಶಕ್ತಿ. ಶಕ್ತಿಯ ಮಗ ಪರಾಶರರು. ಪರಾಶರರ ಮಗ ವೇದವ್ಯಾಸರು. ವೇದವ್ಯಾಸರಿಂದ ಈ ಗ್ರಂಥಗಳೆಲ್ಲ ರಚನೆ ಆದವು. ಶುಕಾಚಾರ್ಯರು ವೇದವ್ಯಾಸರ ಮಗ. ಅವರ ಮೂಲಕ ಶ್ರೀಮದ್ ಭಾಗವತ ಪರೀಕ್ಷಿತ್ ಮಹಾರಾಜನಿಗೆ ಹೇಳಲ್ಪಟ್ಟಿರು. ರೋಮಹರ್ಷಣ ಋಷಿ ವೇದವ್ಯಾಸರ ಮತ್ತೊಬ್ಬ ಮಗ. ಉಗ್ರಶ್ರವಸ್ ರೋಮಹರ್ಷಣರ ಮಗ. ಈ ರೋಮಹರ್ಷಣ ಮತ್ತು ಉಗ್ರಶ್ರವಸ್ ಸಾಕ್ಷಾತ್ ವೇದವ್ಯಾಸರ ಬಳಿ ಅಧ್ಯಯನ ಮಾಡಿದ್ದರಿಂದ ಅವರ ಶಿಷ್ಯರೂ ಹೌದು. ಅನೇಕ ಪುರಾಣಗಳಲ್ಲಿ ಇವರ ಹೆಸರು ಬರುತ್ತದೆ. "ಸೂತಿ" ಅನ್ನುವ ತಾಯಿಯ ಮಗನಾದುದರಿಂದ ಉಗ್ರಶ್ರವಸ್ಸಿಗೆ "ಸೂತ" ಎಂದೂ ಹೆಸರಾಯಿತು. ಪುರಾಣಗಳನ್ನು ಪ್ರಚುರಪಡಿಸಿದ್ದರಿಂದ "ಪುರಾಣೀಕರು" ಎಂದು ವೃತ್ತಿನಾಮ (ಶಾಸ್ತ್ರವನ್ನು ತಿಳಿದು, ಅದನ್ನು ತಿಳಿಸಿ ಹೇಳುವರಿಗೆ ಶಾಸ್ತ್ರೀ ಎನ್ನುವಂತೆ) ಬಂದಿತು. "ಸೂತ ಪುರಾಣೀಕರು" ಎಂದು ಕಥೆಗಳಲ್ಲಿ ಬರುವ ಹೆಸರು ಇವರದೇ. 

"ನೈಮಿಷಾರಣ್ಯ" ಅನ್ನುವುದು ಈಗಿನ ಉತ್ತರ ಪ್ರದೇಶ ರಾಜ್ಯದ ಸೀತಾಪುರ ಜಿಲ್ಲೆಯಲ್ಲಿದೆ. ಗೋಮತಿ ನದಿಯ ತೀರದ ಕ್ಷೇತ್ರ. ಇದು ಹಿಂದೆ ಒಂದು ದಟ್ಟವಾದ ಕಾಡು ಪ್ರದೇಶ. ಇಲ್ಲಿ "ನಿಮಿಷ" ಅನ್ನುವ ಹಣ್ಣು ಕೊಡುವ ಮರಗಳಿದ್ದವಂತೆ. ಈ ಮರದ ಹಣ್ಣುಗಳು ತಪಸ್ವಿಗಳಿಗೆ ಆಧಾರವಾಗಿದ್ದುದರಿಂದ ಮತ್ತು ದಟ್ಟವಾಗಿ ಈ ಮರಗಳು ಆ ಕಾಡಿನಲ್ಲಿ ಬೆಳೆದಿದ್ದುದರಿಂದ ಅದಕ್ಕೆ "ನೈಮಿಷಾರಣ್ಯ" ಎನ್ನುವ ಹೆಸರು ಬಂದಿತು. "ನಿಮಿಷ" ಅನ್ನುವ ಪದಕ್ಕೆ ಬೇರೆ ಬೇರೆ ವಿವರಣೆಗಳೂ ಉಂಟು. ಅಲ್ಲಿ ಶೌನಕರು ಎನ್ನುವ ಹೆಸರಿನ ಋಷಿಗಳು ಒಂದು ಗುರುಕುಲವನ್ನು ನಡೆಸುತ್ತಿದ್ದರು. ಬಹಳ ತಿಳಿದವರೂ, ಜ್ಞಾನಿಗಳೂ ಆದುದರಿಂದ ಈ ಶೌನಕರನ್ನು ಕಾಣಲು ಮತ್ತು ಅವರಿಂದ ಜ್ಞಾನ ಸಂಪಾದಿಸಲು ಅನೇಕ ಋಷಿ-ಮುನಿಗಳು ದೇಶದ ಎಲ್ಲಕಡೆಗಳಿಂದ ನೈಮಿಷಾರಣ್ಯದಲ್ಲಿ ಬಂದು ಸೇರುತ್ತಿದ್ದರು.  ಆ ಪುಣ್ಯಕ್ಷೇತ್ರದಲ್ಲಿ ಅನೇಕ ಯಜ್ಞ-ಯಾಗಾಡಿಗಳೂ ನಡೆಯುತ್ತಿದ್ದುವು. 

ಇಂತಹ ಸಂದರ್ಭಗಳಲ್ಲಿ ಸೇರಿದ ಎಲ್ಲ ಋಷಿ-ಮುನಿಗಳು ಮತ್ತು ಜಿಜ್ಞಾಸು ಮಹನೀಯರು "ಜ್ಞಾನ ಸಭೆ" ನಡೆಸುತ್ತಿದ್ದರು. ಯಾರಿಗಾದರೂ ಅನುಮಾನ, ಪ್ರಶ್ನೆಗಳಿದ್ದರೆ ಆ ಸಭೆಯಲ್ಲಿ ಪ್ರಸ್ತಾಪ ಮಾಡಬಹುದಿತ್ತು. ಸೂಕ್ತ ಉತ್ತರ, ಸಮಾಧಾನ ತಿಳಿದ ಮತ್ತೊಬ್ಬರು ಅವಕ್ಕೆ ಉತ್ತರ ಕೊಡುತ್ತಿದ್ದರು. ಹೀಗೆ  ನಡೆಯುತ್ತಿದ್ದಾಗ ಅಲ್ಲಿಗೆ ಸೂತ ಪುರಾಣೀಕರು ಬಂದರು. ಅವರ ಜ್ಞಾನಪ್ರಭೆಯ ಬಗ್ಗೆ ತಿಳಿದಿದ್ದ ಎಲ್ಲಾ ಸಜ್ಜನರು ಅವರನ್ನು ಆದರದಿ೦ದ ಬರಮಾಡಿಕೊಂಡು ಸತ್ಕರಿಸಿದರು. ನಂತರ ಅವರ ಮುಂದೆ ತಮ್ಮ ತಮ್ಮ ಪ್ರಶ್ನೆ, ಅನುಮಾನಗಳನ್ನು ಇಡುತ್ತಾ ಪರಿಹಾರ ಕಂಡುಕೊಂಡರು. ಅನೇಕ ಪುರಾಣಗಳು ಮೊದಲ ಬಾರಿಗೆ ಅಲ್ಲಿ ಪ್ರವಚನಗೊಂಡವು. ಪ್ರಶ್ನೆ ಕೇಳುವವರು ಶೌನಕರೇ ಮುಂತಾದ ಜ್ಞಾನಿಗಳು. ಆದ್ದರಿಂದ "ಶೌನಕಾದಿಗಳು" ಎಂದು ಸಂಬೋಧನೆ. ಉತ್ತರ ಹೇಳುವವರು ಸೂತ ಪುರಾಣೀಕರು. ಆದ್ದರಿಂದ ಅನೇಕ ಕಥೆಗಳಲ್ಲಿ "ನೈಮಿಷಾರಣ್ಯವಾಸಿಗಳಾದ ಶೌನಕಾದಿ ಋಷಿಗಳಿಗೆ ಸೂತ ಪುರಾಣೀಕರು ಹೀಗೆ ಹೇಳಿದರು....." ಎಂಬ ವಾಕ್ಯದಿಂದ ಪ್ರಾರಂಭ! 

*****

ಐದರ ಐದು ಗುಂಪುಗಳು ಸೇರಿ ಇಪ್ಪತ್ತೈದು ತತ್ವಗಳಾದುವು. ಐದು ಜ್ಞಾನೇಂದ್ರಿಯಗಳು. ಐದು ಕರ್ಮೇಂದ್ರಿಯಗಳು. ಐದು ಪಂಚಭೂತಗಳು. ಐದು ಪಂಚತನ್ಮಾತ್ರಗಳು. ಮನಸ್ಸು-ಬುದ್ಧಿ-ಅಹಂಕಾರ-ಚಿತ್ತ-ಚೇತನ ಇವು ಮತ್ತೈದು. ಇವುಗಳ ವಿವರವನ್ನು ಮತ್ತೆಂದಾದರೂ ನೋಡೋಣ. 

ಪೃಥ್ವಿ-ಅಪ್ಪು-ತೇಜಸ್ಸು-ವಾಯು-ಆಕಾಶ ಇವು ಪಂಚಭೂತಗಳೆಂದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಇವನ್ನೇ ಕ್ರಮವಾಗಿ ಮಣ್ಣು-ನೀರು-ಬೆಂಕಿ-ಗಾಳಿ-ಆಕಾಶ ಎನ್ನುವುದು. ತೇಜಸ್ಸು ಅಥವಾ ಬೆಂಕಿ ಎಂದರೆ ಕೇವಲ ಉರಿಯುವ ಅಗ್ನಿಯಲ್ಲ. ಎಲ್ಲ ರೀತಿಯ ಶಕ್ತಿ ಸ್ರೋತಗಳೂ ಅಗ್ನಿಯ ರೂಪಗಳೇ. ಆಕಾಶವೆಂದರೆ ನಮ್ಮ ತಲೆಯ ಮೇಲೆ ಎಲ್ಲೋ ಮೇಲೆ ಇದೆ ಎಂದಲ್ಲ. ಆಕಾಶ ಎಂದರೆ ಚಲನೆಗೆ ಅವಕಾಶ. ಇಂಗ್ಲಿಷಿನಲ್ಲಿ ಸ್ಪೇಸ್ ಅನ್ನಬಹುದು. ಆಕಾಶ ಇಲ್ಲದಿದ್ದರೆ ನಮ್ಮ ಕೈ-ಕಾಲುಗಳು ಆಡಲೂ ಸಾಧ್ಯವಿಲ್ಲ. 

ಏನಾದರೂ ವಸ್ತು ತಯಾರು ಮಾಡಬೇಕಾದರೆ ಅದಕ್ಕೆ ಸೂಕ್ತವಾದ "ಪದಾರ್ಥ" ಬೇಕು. ಇದನ್ನು "ದ್ರವ್ಯ' ಅನ್ನುತ್ತಾರೆ. (ದ್ರವ್ಯ ಅಂದರೆ ಕೇವಲ ಹಣ-ಕಾಸು ಅಲ್ಲ). ಇಂಗ್ಲಿಷಿನಲ್ಲಿ ರಾ ಮಟೇರಿಯಲ್ ಅನ್ನಬಹುದು. ಈ  ದ್ರವ್ಯಗಳ ಮಿಶ್ರಣದಿಂದ ಪದಾರ್ಥಗಳು ತಯಾರಾಗುತ್ತದೆ. ಮಿಶ್ರಣದ ಪ್ರಮಾಣ ಮತ್ತು ಮಾಡುವ ವಿಧಾನ ಬದಲಾದಂತೆ ತಯಾರಾಗುವ ಪದಾರ್ಥವೂ ಬದಲಾಗುತ್ತದೆ. ಅಡಿಗೆ ಮಾಡುವವರಿಗೆ ಇದು ಚೆನ್ನಾಗಿ ಗೊತ್ತು. ಒಂದೇ ರೀತಿಯ ಅಡಿಗೆ ಸಾಮಾನುಗಳನ್ನು ಬಳಸಿ, ಬೇರೆ ಬೇರೆ ಪ್ರಮಾಣದಲ್ಲಿ ಸೇರಿಸಿ, ಮಾಡುವ ಕ್ರಮ, ಕಾಲ ಮತ್ತು ಉಷ್ಣಾ೦ಶ ಬದಲಿಸಿ ವಿವಿಧ ತಿಂಡಿ-ತಿನಿಸುಗಳನ್ನು ತಯಾರಿಸುವಂತೆ. 

*****

ಒಂದು ಮಡಿಕೆ ಮಾಡುವುದನ್ನೇ ನೋಡೋಣ. ಮಡಿಕೆ ಮಾಡಲು ಮೂಲ ದ್ರವ್ಯ ಮಣ್ಣು. ಕೇವಲ ಮಣ್ಣಿನಿಂದ ಮಡಿಕೆ ಮಾಡಲಾಗುವುದಿಲ್ಲ. ಮಣ್ಣು ಪುಡಿ ಪುಡಿಯಾದ ದ್ರವ್ಯ. ಕೈಯಲ್ಲಿ ಹಿಡಿದುಕೊಂಡು ಕೆಳಗೆ ಬಿಟ್ಟರೆ ಒಂದು ಗುಡ್ಡೆಯಾಗಿ ಬೀಳುತ್ತದೆ. ಅದಕ್ಕೆ ಒಂದು ಆಕಾರ ಕೊಡಬೇಕಾದರೆ ಅದಕ್ಕೆ ನೀರು ಸೇರಿಸಬೇಕು. ಮಣ್ಣನ್ನು ನೀರಿನಿಂದ ಕಲೆಸಿದರೆ ಆ ಮಿಶ್ರಣದಿಂದ ಮಡಿಕೆ ಮಾಡಬಹುದು. ಮಡಿಕೆಯನ್ನೇನೋ ಮಾಡಬಹುದು. ಆದರೆ ಅದು ಉಳಿಯುವುದಿಲ್ಲ. ಅದನ್ನು ಬಿಸಿಲಿನಲ್ಲಿ ಒಣಗಿಸಿದರೆ ಸ್ವಲ್ಪಮಟ್ಟಿಗೆ ಉಳಿಯುತ್ತದೆ. ಆದರೆ ಅದರಲ್ಲಿ ನೀರು ಶೇಖರಿಸಬೇಕಾದರೆ, ಅದು ಪ್ರಯೋಜನಕ್ಕೆ ಬರಬೇಕಾದರೆ, ಅದನ್ನು ಬೆಂಕಿಯಲ್ಲಿ ಕಾಯಿಸಬೇಕು. ಇಷ್ಟೆಲ್ಲಾ ಆದ ನಂತರ ಮಡಿಕೆ ಕೆಲವು ಕಾಲ ಇರಬಲ್ಲದು. 

ಮಡಿಕೆಯ ಖಾಲಿ ಇರುವ ಜಾಗದಲ್ಲಿ ಗಾಳಿ ತುಂಬಿಕೊಳ್ಳುತ್ತದೆ. ಅದು ಈಕಡೆ-ಆಕಡೆ ಚಲಿಸಲು ಅವಕಾಶ (ಆಕಾಶ) ಬೇಕು. ತಯಾರು ಮಾಡಲು ಮೂರು ದ್ರವ್ಯಗಳು. ಮತ್ತೆ ಉಪಯೋಗಕ್ಕೆ ಬರಲು ಇನ್ನೆರಡು ದ್ರವ್ಯಗಳು. 

ನಾಲ್ಕು ಭಾಗ ಮಣ್ಣು, ಮೂರು ಭಾಗ ನೀರು ಮತ್ತು ಒಂದು ಭಾಗ ಬೆಂಕಿಯಿಂದ ಆದ ದೇಹಕ್ಕೆ "ಪಾರ್ಥಿವ" ಎನ್ನುತ್ತಾರೆ. ನಮ್ಮಗಳ ದೇಹವೂ ಇದೇ ಪ್ರಮಾಣದ್ದು. ಮಣ್ಣು-ನೀರುಗಳ ಮಿಶ್ರಣವನ್ನು ಶಕ್ತಿ (ಎನರ್ಜಿ) ಹಿಡಿದಿಟ್ಟಿದೆ. ಅದು ಕೆಲಸಮಾಡಲು ವಾಯು ಮತ್ತು ಆಕಾಶಗಳೂ ಬೇಕು. ಮಣ್ಣಿನ (ಪೃಥ್ವಿ) ಪ್ರಮಾಣ ಎಲ್ಲಕ್ಕೂ ಹೆಚ್ಚು ಇರುವುದರಿಂದ ಅದು "ಪಾರ್ಥಿವ ಶರೀರ" ಎಂದಾಯಿತು. 

ನಾಲ್ಕು ಭಾಗ ನೀರು, ಮೂರು ಭಾಗ ಮಣ್ಣು ಮತ್ತು ಒಂದು ಭಾಗ ಬೆಂಕಿಯಿಂದ ಆದ ಶರೀರಕ್ಕೆ "ಜಲೀಯ" ಶರೀರ ಎಂದು ಹೆಸರು. ಹೆಚ್ಚಿನ ಜಲಚರಗಳು ಈ ಗುಂಪಿಗೆ ಸೇರಿದವು. ನೀರಿನ (ಜಲ) ಪ್ರಮಾಣ ಹೆಚ್ಚಿರುವುದರಿಂದ ಅದು "ಜಲೀಯ ಶರೀರ" ಎಂದಾಯಿತು. 

ನಾಲ್ಕು ಭಾಗ ಶಕ್ತಿ , ಮೂರು ಭಾಗ ನೀರು ಮತ್ತು ಒಂದು ಭಾಗ ಮಣ್ಣು, ಇವುಗಳಿಂದ ಆದ ಶರೀರಕ್ಕೆ "ತೈಜಸ" ಎಂದು ಕರೆಯುವರು. ತೇಜಸ್ಸು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಅದು "ತೈಜಸ ಶರೀರ" ಆಯಿತು. ಅನೇಕ ದೇವತೆಗಳು ಈ ರೀತಿಯ ತೈಜಸ ರೂಪದಲ್ಲಿ ದರ್ಶನ ಕೊಡುತ್ತಾರಂತೆ. ಆಗ ಹೆಚ್ಚಿನ ಶಕ್ತಿಯ ಅನುಭವ ಆಗುತ್ತದಂತೆ. 

ಈ ಪಾರ್ಥಿವ ಶರೀರ, ಜಲೀಯ ಶರೀರ ಮತ್ತು ತೈಜಸ ಶರೀರ ಅಲ್ಲದೆ ಮತ್ತೊಂದು ಉಂಟು. ಅದು "ದಿವ್ಯ ಶರೀರ".  ಅದು ಪೂರ್ಣವಾಗಿ ಬೆಳಕಿನ ರೂಪ. ಆ ರೂಪದಲ್ಲಿ ಅಗಾಧವಾದ ಬೆಳಕು. ಅಂದರೆ ಸೂರ್ಯನಂತೆ ಪ್ರಖರತೆ. ಆದರೆ ಅಂತಹ ತಡೆಯಲಾರದ ಶಾಖವಿಲ್ಲ. ಚಂದ್ರನ ಬೆಳಕಿನಂತೆ ಹಿತಕರ. ಎರಡೂ ಗುಣವುಳ್ಳದ್ದು. ಸೂರ್ಯನ ಪ್ರಖರವಾದ ಕಾಂತಿ. ಆದರೆ ಚಂದ್ರನ ಬೆಳಕಿನ ಶಾಂತವಾದ ಅನುಭವ. ಪರಮಾತ್ಮನು ಮತ್ತು ಕೆಲವು ಹಿರಿಯ ದೇವತೆಗಳು ಹೀಗೆ ದರ್ಶನ ಕೊಡುತ್ತಾರಂತೆ. 

*****

ಪಾರ್ಥಿವ ಶರೀರದಿಂದ ಜೀವನು ನಿರ್ಗಮಿಸಿದ ಮೇಲೆ, ಮಡಿಕೆ ಒಡೆದು ಚೂರಾದಾಗ ಹೇಗೆ ಅದು ಮಣ್ಣು, ನೀರು ಮತ್ತು ವಿಶಾಲ ಶಕ್ತಿಯ ಸ್ರೋತದಲ್ಲಿ ಸೇರುತ್ತದೋ ಹಾಗೆ ಪಾರ್ಥಿವ ದೇಹವೂ ಮತ್ತೆ ಪಂಚಭೂತಗಳಲ್ಲಿ ಸೇರುತ್ತದೆ. ಸುಟ್ಟಾಗ ಬೂದಿ. ಅದೂ ಮಣ್ಣೇ. ಹೂಳಿದಾಗ ಮಣ್ಣಂತೂ ಸರಿಯೇ ಸರಿ. ಹೀಗೂ ಮಣ್ಣು. ಹಾಗೂ ಮಣ್ಣು.  ನೀರಿನ ಅಂಶ ಸುಟ್ಟಾಗ ಆವಿಯಾಗಿ ಗಾಳಿಗೆ ಹೋಯಿತು. ಹೂತಾಗ ಮಣ್ಣಿನಲ್ಲಿ ತೇವವಾಗಿ ಸೇರಿತು. ಹೀಗಾದಾಗ ವಾಯುವೂ ಇಲ್ಲ; ಆಕಾಶವೂ ಇಲ್ಲ. ಪಾರ್ಥಿವ ದೇಹ ಪಂಚ ಭೂತಗಳಲ್ಲಿ ಲೀನವಾಯಿತು ಎನ್ನುತ್ತೇವೆ. 

ಪಾರ್ಥಿವ ಶರೀರ ಮತ್ತು ಅದು ಪಂಚ ಭೂತಗಳಲ್ಲಿ ಹೇಗೆ ಲೀನವಾಗುತ್ತದೆ ಎಂದು ತಿಳಿದಂತಾಯಿತು. ಇಪ್ಪತ್ತೈದು ತತ್ವಗಳ ಬಗ್ಗೆ ಮತ್ತೆಂದಾದರೂ ಯೋಚಿಸೋಣ.  

1 comment:

  1. So many doubts which had taken a permanent place in the mind was waiting for clearance. Today by grace of your esteemed articles and writings , are getting cleared day by day. As far as clarity of thoughts and explanation of every minutest details are concerned, especially for layman like me, there can be only , "one and only " Keshavmurthy Sir. Hats off to you and thanking you for helping me in this process.

    ReplyDelete