Showing posts with label Vasudeva. Show all posts
Showing posts with label Vasudeva. Show all posts

Thursday, December 4, 2025

ಶ್ರೀಕೃಷ್ಣ ಅಂದರೆ ಯಾರು?


ಶ್ರೀಕೃಷ್ಣ ಅಂದರೆ ಯಾರು? ಹೀಗೆ ಯಾರಾದರೂ ನಮ್ಮನ್ನು ಪ್ರಶ್ನೆ ಮಾಡಿದರೆ ನಮ್ಮಲ್ಲಿ ಬಹುತೇಕರು ಪ್ರಶ್ನೆಗೆ ಉತ್ತರ ಕೊಡುವ ಬದಲು ಪ್ರಶ್ನೆ ಕೇಳಿದವರ ಮುಖವನ್ನು ದಿಟ್ಟಿಸಿ ನೋಡುವುದು ಸಹಜ. ಇದೇನು, ಇಂತಹ ಪ್ರಶ್ನೆ ಕೇಳುವುದೇ? ನಮ್ಮಲ್ಲಿ ರಾಮ, ಕೃಷ್ಣರನ್ನು ತಿಳಿಯದ ಮಂದಿ ಇದ್ದಾರೆಯೇ? ವಾಮನ, ತ್ರಿವಿಕ್ರಮ ನೆನಪಿಲ್ಲದಿರಬಹುದು. ವರಾಹ, ಸಂಕರ್ಷಣ ಯಾರೆಂದು ಗೊತ್ತಿಲ್ಲದಿರಬಹುದು. ದಾಮೋದರ ಮತ್ತು ಪ್ರದ್ಯುಮ್ನ ತಿಳಿದಿಲ್ಲದಿರಬಹುದು. ಆದರೆ ರಾಮ, ಕೃಷ್ಣ ಗೊತ್ತಿಲ್ಲವೇ? ಗಣಪ, ಹನುಮ, ಶಿವ, ರಾಮ, ಕೃಷ್ಣ, ಇವರು ಚಿಕ್ಕ ಮಕ್ಕಳಿಗೂ ಗೊತ್ತು. ಅಷ್ಟೇ ಅಲ್ಲ. ಇದು ಚಿಕ್ಕ ಮಕ್ಕಳಿಗೂ ಗೊತ್ತು ಎನ್ನುವುದು ಕೂಡ ಎಲ್ಲರಿಗೂ ಗೊತ್ತು. ಹೀಗಿರುವಾಗ, ಇದೆಂಥ ಪ್ರಶ್ನೆ? 

ಇಂತಹ ಪ್ರಶ್ನೆ ಸುಮ್ಮನೆ ಮಾಡಿದುದಲ್ಲ. ಅದಕ್ಕೆ ಕಾರಣಗಳಿವೆ. ಏನು ಕಾರಣಗಳು ಎನ್ನುವುದನ್ನು ಸ್ವಲ್ಪ ನೋಡೋಣ. 
*****

ಇಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ಅಂಚೆಯ ಪೆಟ್ಟಿಗೆ (ಪೋಸ್ಟ್ ಬಾಕ್ಸ್) ಅನ್ನುವ ಒಂದು ವಸ್ತು ಹೆಚ್ಚು ಕಡಿಮೆ ಮರೆತೇಹೋಗಿದೆ. ಕೊರಿಯರ್ ಸೇವೆ ಬಂದು ಹರಡಿದ ನಂತರ ಪೋಸ್ಟ್ ಆಫೀಸಿಗೆ ಹೋಗುವ ಸಂದರ್ಭಗಳು ಬಹಳ ಕಡಿಮೆ ಆದವು. ಸುಮಾರು ನಲವತ್ತು ವರುಷಗಳ ಹಿಂದೆ ಪೋಸ್ಟ್ ಕಾರ್ಡು, ಅಂಚೆ ಚೀಟಿ, ಅಂಚೆ ಡಬ್ಬ, ಅಂಚೆ ಕಚೇರಿ, ಇವೆಲ್ಲ ಪ್ರತಿದಿನ ನೋಡುತ್ತಿದ್ದ, ಆಗಾಗ ಉಪಯೋಗಿಸುತ್ತಿದ್ದ ಸೇವೆಗಳು. ಯಾವುದೋ ಸಂದರ್ಭಗಳಲ್ಲಿ ಪೋಸ್ಟ್ ಮ್ಯಾನ್ ಆಗಮನ ನಿರೀಕ್ಷಿಸಿ ಮನೆಯ ಬಾಗಿಲ ಬಳಿ ಕಾಯುತ್ತಿದ್ದುದೂ ಇರುತ್ತಿತ್ತು. ಕೆಲವು ಅಂಗಡಿಗಳಲ್ಲಿ ಒಂದು ಸಣ್ಣ ಡಬ್ಬಿಯಲ್ಲಿ ಅಂಚೆ ಚೀಟಿಗಳನ್ನು ಇಟ್ಟುಕೊಂಡು ಐದು ಪೈಸೆ ಚೀಟಿಯನ್ನು ಆರು ಪೈಸೆಗೆ ಮಾರುತ್ತಿದ್ದುದೂ ಉಂಟು. ಅಂಚೆ ಕಚೇರಿ ದಿನದ ವಹಿವಾಟು ಮುಗಿಸಿ ಮುಚ್ಚಿದ ನಂತರ ಅಥವಾ ರಜಾ ದಿನಗಳಲ್ಲಿ ಇವುಗಳ ಸೇವೆ ಅಮೂಲ್ಯವಾಗಿಯೂ ಇತ್ತು. 

ಬೇರೆಡೆಗೆ ಕಳುಹಿಸಬೇಕಾದ ಪತ್ರಗಳನ್ನು ಅಂಚೆಯ ಡಬ್ಬದಲ್ಲಿ ಹಾಕುವುದು ಆಗ ಒಂದು ಮುಖ್ಯ ಕೆಲಸ ಆಗಿರುತ್ತಿತ್ತು. ಅಲ್ಲಲ್ಲಿ ಸಣ್ಣ ಕೆಂಪು ಬಣ್ಣದ ಪೋಸ್ಟ್ ಡಬ್ಬಗಳಿರುತ್ತಿದ್ದುವು. ಅವುಗಳ ಮೇಲೆ "Next Clearance" ಎಂದು ಸಮಯ ತೋರಿಸುವ ಬಿಲ್ಲೆಗಳನ್ನು ಹಾಕಿರುತ್ತಿದ್ದರು. ಪ್ರತಿಯೊಂದು ಡಬ್ಬಕ್ಕೂ ಕಾಗದ-ಲಕೋಟೆಗಳನ್ನು ಹಾಕಲು ಒಂದು ಕಿಂಡಿ ಇರುತ್ತಿತ್ತು. ಮುಖ್ಯ ಅಂಚೆ ಕಚೇರಿಗಳ ಮುಂದೆ ದೊಡ್ಡ ಕೆಂಪು ಬಣ್ಣದ ಪೋಸ್ಟ್ ಬಾಕ್ಸುಗಳು. ಅವುಗಳಿಗೆ ಎರಡು ಕಡೆ ಕಿಂಡಿಗಳು. ಒಂದೇ ಸಮಯದಲ್ಲಿ ಇಬ್ಬರು ಪತ್ರಗಳನ್ನು ಅವುಗಳಲ್ಲಿ ಹಾಕುವ ಅನುಕೂಲತೆಗೆ. ಯಾವ ಕಿಂಡಿಯಲ್ಲಿ ಹಾಕಿದರೂ ಅವು ಬೀಳುತ್ತಿದ್ದುದು ಆ ಬಾಕ್ಸುಗಳ ಒಂದೇ ದೊಡ್ಡ ಹೊಟ್ಟೆಗೆ. 

ಬೆಂಗಳೂರಿನಲ್ಲಿ ವಿಧಾನಸೌಧ ಮತ್ತು ಆಗ ಇದ್ದ ಟ್ರಂಕ್ ಟೆಲಿಫೋನ್ ಎಕ್ಸ್ಚೇಂಜ್ ಕಟ್ಟಡದ ಮಧ್ಯೆ ಇದ್ದ ಹಳೆಯ ಜಿ. ಪಿ. ಓ. ಕಟ್ಟಡದ ಮುಂದೆ (ಈಗ ಅಲ್ಲಿ ಒಂದು ಸೌಧದಂತಹ ಜಿ.ಪಿ.ಓ. ಕಟ್ಟಡ ಬಂದಿದೆ) ಒಂದು ಬಲು ದೊಡ್ಡ ಪೋಸ್ಟ್ ಬಾಕ್ಸ್ ಇತ್ತು. ಅದಕ್ಕೆ ಆರು ಕಿಂಡಿಗಳು! ಅದೂ ಸಹ ದೊಡ್ಡ ದೊಡ್ಡ ಕಿಂಡಿಗಳು. ಒಂದೇ ಸಮಯದಲ್ಲಿ ಆರು ಮಂದಿ ದಪ್ಪ ಕಾಗದ-ಪಾತ್ರಗಳನ್ನು ಅಲ್ಲಿ ತುರುಕಬಹುದಾಗಿತ್ತು. ಎಲ್ಲಿ ತುರುಕಿದರೂ ಅವೆಲ್ಲಾ ತಲುಪುತ್ತಿದ್ದುದು ಆ ಅತಿ ದೊಡ್ಡ ಬಾಕ್ಸಿನ ಒಂದೇ ಬಕಾಸುರ ಹೊಟ್ಟೆಗೆ. ಹೀಗಿದ್ದರೂ ಸಂಜೆಯ ಹೊತ್ತಿನಲ್ಲಿ ಅಲ್ಲಿ ಹೆಚ್ಚಿನ ಜನ ಪತ್ರಗಳನ್ನು ಪೋಸ್ಟ್ ಮಾಡಲು ಬಂದಿರುತ್ತಿದ್ದರು. ಹಳೆಯ ತಲೆಮಾರಿನ ಜನ ಇದನ್ನು ನೆನೆಪಿಸಿಕೊಳ್ಳಬಹುದು. ಆತುರಾತುರದಲ್ಲಿ ಸಂಜೆ ಅಲ್ಲಿಗೆ ಹೋಗಿ, ಡಬ್ಬದಲ್ಲಿ ಪತ್ರ-ಲಕೋಟೆಗಳನ್ನು ಹಾಕಿ, ಕೈ ಮುಗಿದು ಬಂದಿರುವ ಉದಾಹರಣೆಗಳು ಅನೇಕ. 
*****

ಯಾವುದೇ ಪೂಜೆ-ಪುನಸ್ಕಾರ, ಹವನ-ಹೋಮ, ವ್ರತ-ನಿಯಮಗಳನ್ನು ಆಚರಿಸಿದಮೇಲೆ ಕಡೆಯಲ್ಲಿ ಇದೆಲ್ಲ ಪರಮಪುರುಷನಿಗೆ ಸೇರಲಿ ಎಂದು ಭಾವಿಸಿ "ಶ್ರೀಕೃಷ್ಣಾರ್ಪಣಮಸ್ತು" ಎಂದು ಹೇಳುವುದು ವಾಡಿಕೆ. ಜಪ-ತಪ, ದಾನ-ಧರ್ಮಗಳನ್ನು ಮಾಡಿದ್ದು ಕೂಡ ಕಡೆಗೆ ಹೀಗೆಯೇ ವಿನಿಯೋಗ. ಅಷ್ಟೇ ಏಕೆ? ದಾಸರು "ಕೈ ಮೀರಿ ಹೋದದ್ದೇ ಕೃಷ್ಣಾರ್ಪಣ" ಅಂದುಬಿಟ್ಟರು. ಇದನ್ನು ನಾವು ಕೊಡಬೇಕೆಂದು ಕೊಟ್ಟದ್ದಲ್ಲ. ಕೈತಪ್ಪಿ ಜಾರಿರಬಹುದು. ಯಾರೋ ಕಿತ್ತುಕೊಂಡು ಹೋಗಿರಬಹುದು. ಇಲ್ಲವೇ ಕುತಂತ್ರ, ಮೋಸಗಳಿಗೆ ಸಿಕ್ಕಿ ಕಳೆದುಕೊಂಡಿರಬಹುದು. ಹೀಗಿದ್ದರೂ ಸಹ, ಅಂತಹವುಗಳೆಲ್ಲದರ ಗತಿಯೂ ಕಡೆಯ ವಿನಿಯೋಗವನ್ನು  ಮಾಡುವುದು "ಶ್ರೀಕೃಷ್ಣಾರ್ಪಣಮಸ್ತು" ಎಂದು ಹೇಳಿಯೇ. ಕೆಲವರು "ಪರಮೇಶ್ವರಾರ್ಪಣಮಸ್ತು" ಅನ್ನಬಹುದು. ಆದರೂ ಈ ಸಂದರ್ಭಗಳಲ್ಲಿ ಶ್ರೀಕೃಷ್ಣನನ್ನು ನೆನೆಸಿಕೊಳ್ಳುವುದೇ ಹೆಚ್ಚು ವ್ಯಾಪಕ. 

ಈ ಕೃಷ್ಣ ಯಾರು? 

ಕೃಷ್ಣ ಯಾರು ಅಂದರೆ? ಅವನೇ. ಮಥುರೆಯ ಕಂಸನ ಕಾರಾಗೃಹದಲ್ಲಿ ಹುಟ್ಟಿದವನು. ಕಂಸನ ತಂಗಿ ದೇವಕಿಯ ಮಗ. ದೇವಕಿ-ವಸುದೇವರ ಮಗ. ಅವರ ಎಂಟನೆಯ ಕೂಸು. ಹುಟ್ಟಿದ ತಕ್ಷಣ ಅವರಪ್ಪ ಅವನನ್ನು ಎತ್ತಿಕೊಂಡು ತುಂಬಿ ಹರಿಯುತ್ತಿದ್ದ ಯಮುನೆಯನ್ನು ದಾಟಿ, ಗೋಕುಲ ತಲುಪಿ, ಅಲ್ಲಿನ ನಂದಗೋಪನ ಹೆಂಡತಿ ಯಶೋದೆ ಪಕ್ಕ ಮಲಗಿಸಿ, ಅಲ್ಲಿದ್ದ ಹೆಣ್ಣು ಮಗುವನ್ನು ಹೊತ್ತುಕೊಂಡು ಬರಲಿಲ್ಲವೇ? ಅವನೇ. ಪೂತನಿಯಿಂದ ಪ್ರಾರಂಭಿಸಿ, ಅದೆಷ್ಟೋ ರಕ್ಕಸರನ್ನು ಕೊಂದು, ಕಾಳೀಯನನ್ನು ಮರ್ದಿಸಿ, ಗೋವರ್ಧನ ಎಬ್ಬಿಸಿ, ಗೋಪಿಯರ ಮನೆಯ ಹಾಲು-ಮೊಸರು-ಬೆಣ್ಣೆ ಕದ್ದು ಕುಡಿದು-ತಿಂದು-ತೇಗಿ, ಹೆಣ್ಣುಮಕ್ಕಳ ಸೀರೆ-ವಸ್ತ್ರಗಳನ್ನು ಅಪಹರಿಸಿ, ಜಲಕ್ರೀಡೆ-ರಾಸಕ್ರೀಡೆ ಆಡಿ-ಆಡಿಸಿ, ಇನ್ನೂ ಏನೇನೂ ಮಾಡಿದನಲ್ಲ. ಅವನೇ. 

ಅಣ್ಣ ಬಲರಾಮನೊಡನೆ ಅಕ್ರೂರನ ಜೊತೆ ಮಧುರೆಗೆ ಹೋಗಿ, ಚಾಣೂರ-ಮುಷ್ಟಿಕ-ಕುವಲಯಾಪೀಡ ಆನೆ, ಇವೆಲ್ಲ ಕೊಂದು, ಕಡೆಗೆ ಕಂಸನಿಗೂ ಒಂದು ಗತಿ ಕಾಣಿಸಿ, ಅಪ್ಪ-ಅಮ್ಮನನ್ನು ಸೆರೆಯಿಂದ ಬಿಡಿಸಿದನಲ್ಲ.  ಅವನೇ. ಭೀಮಸೇನನಿಂದ ಜರಾಸಂಧನನ್ನು ಕೊಲ್ಲಿಸಿ, ಕುರುಕ್ಷೇತ ಯುದ್ಧ ಮಾಡಿಸಿ, ಕೌರವರನ್ನು ಕೊನೆಗಾಣಿಸಿ, ಪಾಂಡವರಿಗೆ ರಾಜ್ಯ ಕೊಡಿಸಿದವನು. ಹದಿನಾರು ಸಾವಿರದ ನೂರಾ ಎಂಟು ಹೆಣ್ಣುಗಳನ್ನು ಮದುವೆ ಮಾಡಿಕೊಂಡವನು. ದ್ವಾರಕಾವತಿ ನಿರ್ಮಿಸಿ, ಯಾದವರನ್ನೆಲ್ಲ ಅಲ್ಲಿಗೆ ಸೇರಿಸಿದವನು. ಹೀಗೆ ಬೇರೆ ಇನ್ನೂ ಏನೇನೋ ಮಾಡಿದವನು. ಅವನೇ. ತಲೆಗೆ ನವಿಲುಗರಿ ಸಿಕ್ಕಿಸಿಕೊಂಡು ಕೊಳಲು ನುಡಿಸುತ್ತಿರುವ ಮುರಳೀಧರ. ದನಗಳನ್ನು ಕಾಯುವ ಗೋಪಾಲ. ಅವನೇ ಶ್ರೀಕೃಷ್ಣ. 

ಕಪ್ಪು ಬಣ್ಣದವನಾದ್ದರಿಂದ ಕೃಷ್ಣ. ವಸುದೇವನ ಮಗ ಆದುದರಿಂದ ವಾಸುದೇವ. ಅವನೇ ವಾಸುದೇವ ಶ್ರೀಕೃಷ್ಣ. ಹೀಗೆ ಸಾಮಾನ್ಯವಾಗಿ ಹೇಳುವುದು. 

*****

ಸರಿ ಹಾಗಿದ್ದರೆ. ಶ್ರೀಕೃಷ್ಣನು ದೇವಕಿ-ವಸುದೇವರ ಎಂಟನೆಯ ಮಗ. ದ್ವಾಪರಯುಗದಲ್ಲಿ ಹುಟ್ಟಿದವನು. ಅವನು ಶ್ರೀವಿಷ್ಣುವಿನ ಒಂದು ಅವತಾರರೂಪ. ಅವನೇ ಅರ್ಜುನನಿಗೆ ಭಗವದ್ಗೀತೆಯನ್ನು ಉದಪದೇಶಿಸಿದವನು. "ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್, ಯತ್ತಪಸ್ಯಸಿ ಕೌಂತೇಯ ತತ್ಕುರುಶ್ವ ಮದರ್ಪಣಂ" ಎಂದವನು. "ನೀನು ಮಾಡಿದ್ದನ್ನೆಲ್ಲ, ನೀನು ಸೇವಿಸಿದ್ದನ್ನೆಲ್ಲ, ಹೋಮಾದಿಗಳಲ್ಲಿ ಹಾಕಿದ್ದನ್ನು, ದಾನಾದಿಗಳಲ್ಲಿ ಕೊಟ್ಟಿದ್ದನ್ನು, ಜಪ-ತಪಗಳಲ್ಲಿ ಪಡೆದದ್ದನ್ನು, ಎಲ್ಲವನ್ನೂ ನನಗೆ ಅರ್ಪಿಸು" ಎಂದು ಭಗವದ್ಗೀತೆಯಲ್ಲಿ ಹೇಳಿದವನು. ಅದಕ್ಕೇ ಅವನಿಗೆ ಅರ್ಪಿಸಲು ಎಂದು ಉದ್ದೇಶಿಸಿ "ಶ್ರೀಕೃಷ್ಣಾರ್ಪಣಮಸ್ತು" ಅನ್ನುತ್ತೇವೆ. 

ಒಪ್ಪೋಣ. ಹಾಗಿದ್ದರೆ ಮಹಾಭಾರತ ನಡೆಯುವುದಕ್ಕೆ ಮುನ್ನ, ದ್ವಾಪರ ಯುಗಕ್ಕೆ ಮುಂಚೆ, ಈ ಕೃಷ್ಣ ಹುಟ್ಟುವ ಮುಂಚೆ, ಏನು ಮಾಡುತ್ತಿದ್ದರು? ಹೇಗೆ ಅರ್ಪಣೆ ನಡೆಯುತ್ತಿತ್ತು? ಇದೊಂದು ಪ್ರಶ್ನೆ ಉಳಿಯಿತು. ಅಲ್ಲವೇ?

ಕೇಶವಾದಿ (ಚತುರ್ವಿಂಶತಿ) ಇಪ್ಪತ್ತನಾಲ್ಕು ನಾಮಗಳು ಎನ್ನುತ್ತೇವೆ. ಕೇಶವನಿಂದ ಹಿಡಿದು, ನಾರಾಯಣ, ಮಾಧವ ಮುಂತಾದ ಇಪ್ಪತ್ತನಾಲ್ಕು ಹೆಸರುಗಳು ಉಂಟು. ಅದರಲ್ಲಿ ಕಡೆಯದು ಶ್ರೀಕೃಷ್ಣ. ಹದಿನಾಲ್ಕನೆಯವನು ವಾಸುದೇವ. ಹತ್ತೊಂಭತ್ತನೆಯವನು ಒಬ್ಬ ನರಸಿಂಹನೂ ಇದ್ದಾನೆ. ಇದು ಎಂದಿನಿಂದಲೂ ಉಂಟು. ಸೃಷ್ಟಿಯ ಮೊದಲಿನಿಂದಲೂ ಇದೆ. ಈ ಕೃಷ್ಣ ಯಾರು? ಈ ಇಪ್ಪತ್ತನಾಲ್ಕರಲ್ಲಿ ಹದಿನಾಲ್ಕನೆಯವನು ವಾಸುದೇವ. ಈ ವಾಸುದೇವ ಯಾರು? ದ್ವಾಪರದ ಕೃಷ್ಣ ಹುಟ್ಟುವ ಮುಂಚೆ ಇವರು ಹೇಗೆ ಇದ್ದರು?

*****

ಗೀತೋಪದೇಶ ಕಾಲದಲ್ಲಿ, ಕಡೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಒಮ್ಮೆ ತನ್ನ ವಿರಾಟ್ ರೂಪ ತೋರಿಸುತ್ತಾನೆ. ಅರ್ಜುನನಂತಹವನೂ ಅದನ್ನು ನೋಡಲಾರ. "ಸ್ವಾಮಿ, ಇದನ್ನು ಮರೆ ಮಾಡು. ನನ್ನ ಮೈ ಸುಡುತ್ತಿದೆ. ಮೊದಲಿನ ಸೌಮ್ಯ ರೂಪ ತೋರಿಸು" ಎಂದು ಅಂಗಲಾಚಾಚುತ್ತಾನೆ. ಪರಮಪುರುಷನ ವಿರಾಟ್ ರೂಪವನ್ನು ನಾವು ಕಲ್ಪಿಸಿಕೊಳ್ಳುವುದೂ ಕಷ್ಟ. ಅವನ ಆಯುಧಗಳು ಮೂರು ಅವನ ಜೊತೆಯಲ್ಲಿಯೇ ಇರುತ್ತವೆ. ಸುದರ್ಶನ ಚಕ್ರ, ಪಾಂಚಜನ್ಯ ಶಂಖ ಮತ್ತು ಕೌಮೋದಕಿ ಗದೆ. ಒಂದು ಅಭಯ ಹಸ್ತವೋ, ಕಮಲದ ಕೈಯ್ಯೋ ಬೇಕು. ಅದಕ್ಕೆ ನಾಲ್ಕು ಕೈಗಳ ಶ್ರೀಹರಿಯನ್ನು ಚಿಂತಿಸುವುದು. ಈ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದೆ, ಪದ್ಮ. ಇವುಗಳನ್ನು ಹೇಗೆ ಹಿಡಿದುಕೊಳ್ಳಬೇಕು? ಇದು ಇಪ್ಪತ್ತುನಾಲ್ಕು ರೀತಿ ಸಾಧ್ಯ. ಆದ್ದರಿಂದ ಇಪ್ಪತ್ತುನಾಲ್ಕು ರೂಪಗಳು. ಅವುಗಳಿಗೆ ಕೇಶವನಿಂದ ಶ್ರೀಕೃಷ್ಣನವರೆಗೆ ಇಪ್ಪತ್ತುನಾಲ್ಕು ಮೂಲ ಹೆಸರುಗಳು. 


ಶ್ರೀಕೃಷ್ಣಾರ್ಪಣಮಸ್ತು ಎನ್ನುವಾಗ ವಾಸ್ತವವಾಗಿ ನೆನೆಯುವುದು ಈ ಇಪ್ಪತ್ನಾಲ್ಕು ಮೂಲ ರೂಪಗಳ ಕಡೆಯವನಾದ ಶ್ರೀಕೃಷ್ಣನನ್ನು. ಮೇಲಿನ ಚಿತ್ರದಲ್ಲಿರುವುದು ಶ್ರೀಕೃಷ್ಣ ರೂಪ. ಅವನು ಕ್ರಮವಾಗಿ ಗದೆ, ಪದ್ಮ, ಚಕ್ರ ಮತ್ತು ಶಂಖಗಳನ್ನು ಹಿಡಿದಿದ್ದಾನೆ. ಹದಿನಾಲ್ಕನೆಯವನು ವಾಸುದೇವ. "ಸರ್ವತ್ರ ವಾಸಯತಿ ಇತಿ ವಾಸುದೇವಃ". "ಎಲ್ಲ ಕಡೆಯೂ ವಾಸವಾಗಿ ಇದ್ದಾನೆ. ಆದ್ದರಿಂದ ಅವನಿಗೆ ವಾಸುದೇವ ಎಂದು ಹೆಸರು". ದ್ವಾಪರದ ವಸುದೇವ ಹುಟ್ಟುವ ಮೊದಲೂ ಈ ವಾಸುದೇವ ಮತ್ತು ಶ್ರೀಕೃಷ್ಣರು ಇದ್ದೇ ಇದ್ದರು. ಅನಾದಿ ಕಾಲದಿಂದ ಇದ್ದಾರೆ. ಅನಂತ ಕಾಲದವರೆಗೆ ಇರುತ್ತಾರೆ. 

ಇಪ್ಪತ್ತುನಾಲ್ಕು ಜನರು ಸಾಲಾಗಿ ನಿಂತಿದ್ದಾರೆ. ಹೇಗೆ ಕರೆಯಬೇಕು? ಈ ಕಡೆಯಿಂದ ಕರೆದರೆ "ಕೇಶವಾದಿಗಳೇ, ಬನ್ನಿ" ಎನ್ನಬೇಕು. ಆ ಕಡೆಯಿಂದ ಕೊಟ್ಟರೆ "ಶ್ರೀಕೃಷ್ಣಾದಿಗಳೇ, ತೆಗೆದುಕೊಳ್ಳಿ" ಆನ್ನಬೇಕು. ಆದ್ದರಿಂದ ಸಮರ್ಪಣೆ ಮಾಡುವಾಗ (ಇಪ್ಪತ್ತನಾಲ್ಕರಲ್ಲಿ) ಕಡೆಯ ರೂಪ ಶ್ರೀಕೃಷ್ಣ ಆದುದರಿಂದ "ಶ್ರೀಕೃಷ್ಣಾರ್ಪಣಮಸ್ತು" ಅನ್ನುವುದು.. 

***** 

ಹಾಗಿದ್ದರೆ, ನಾವು ಪ್ರತಿದಿನ ಮಾಡುತ್ತಿರುವುದು ತಪ್ಪೇ? ನಾವು ನವಿಲುಗರಿಯ, ದನಕಾಯುವ, ಬೆಣ್ಣೆ ಕದಿಯುವ, (ಅಥವಾ ಬಿ. ಆರ್. ಛೋಪ್ರಾ ಮಹಾಭಾರತ ಧಾರಾವಾಹಿಯ ನಿತೀಶ್ ಭಾರದ್ವಾಜನನ್ನು) ಇಲ್ಲವೆಂದರೆ ಗೀತೋಪದೇಶ ಮಾಡುತ್ತಿರುವ ಪಾರ್ಥಸಾರಥಿಯನ್ನು ನೆನೆಯುತ್ತೆವಲ್ಲ! ಅದು ಸರಿಯೇ?

ಪರಮಪುರುಷನ ಪೂರ್ಣ ರೂಪ ನಮ್ಮ ಕಲ್ಪನೆಗೆ ನಿಲುಕದ್ದು. ಆದ್ದರಿಂದ ಅವನು ನಮಗೆ ಬಲು ಸುಲಭ ಮಾಡಿಕೊಟ್ಟಿದ್ದಾನೆ. ನಾವು ಹೇಗೆ ಕಲ್ಪಿಸಿಕೊಳ್ಳುತ್ತೇವೆಯೋ, ಹಾಗೆ ತೋರುತ್ತಾನೆ. ಅದಕ್ಕೆ ಅವನೇನು ವೇಷ ಹಾಕಬೇಕಾಗಿಲ್ಲ. ಮೇಕಪ್ ಬೇಕಿಲ್ಲ. ಎಲ್ಲೆಡೆ ವ್ಯಾಪಿಸಿ ನಿಂತಿದ್ದಾನೆ. ಆ ಕೃಷ್ಣನನ್ನು ನೆನೆದು ಕರೆದರೆ ಹಾಗೆ ಬರುತ್ತಾನೆ. ಈ ಕೃಷ್ಣನನ್ನು ನೆನೆದು ಕರೆದರೆ ಹೀಗೆ ಬರುತ್ತಾನೆ. ಅಷ್ಟೇ. 

ಜಿ. ಪಿ. ಓ. ಮುಂದೆ ಇರುವ ಅಂಚೆ ಡಬ್ಬಿಯ ಆರು ಕಿಂಡಿಗಳಲ್ಲಿ ಯಾವ ಕಿಂಡಿಯಲ್ಲಿ ಪತ್ರ ಹಾಕಿದರೂ ಆ ಡಬ್ಬಿಯ ದೊಡ್ಡ ಹೊಟ್ಟೆಯನ್ನೇ ಸೇರುತ್ತದೆ. "ಅಯ್ಯೋ, ಆ ಕಿಂಡಿಯಲ್ಲಿ ಹಾಕಬೇಕಿತ್ತು. ಇದರಲ್ಲಿ ಹಾಕಿಬಿಟ್ಟೆನಲ್ಲ" ಎಂದು ಚಿಂತಿಸಬೇಕಿಲ್ಲ. ಈ ಕೃಷ್ಣನು ತೆಗೆದುಕೊಂಡರೂ ಒಂದೇ. ಆ ಕೃಷ್ಣನು ತೆಗೆದುಕೊಂಡರೂ ಒಂದೇ. ಇಪ್ಪತ್ತುನಾಲ್ಕು ಮೂಲ ರೂಪಗಳಲ್ಲಿ ಕಡೆಯವನು ಶ್ರೀಕೃಷ್ಣ (ಮೇಲೆ ತೋರಿಸಿರುವ ಚಿತ್ರದಂತೆ) ಎಂದು ಗೊತ್ತಿದ್ದರೆ ಒಳ್ಳೆಯದು. ಅಷ್ಟೇ. 

ಇನ್ನೊಂದು ವಿಶೇಷವುಂಟು. ಅಂಚೆ ಡಬ್ಬಿಯ ಪತ್ರಗಳಲ್ಲಿ ಸ್ವಲ್ಪ ವ್ಯತ್ಯಾಸ ಆಗಬಹುದು. ಎಲ್ಲೋ ಒಂದು ಕಳೆದುಹೋಗಬಹುದು. ಕಾಗದಗಳ ಗಂಟುಗಳನ್ನು ತೆಗೆದುಕೊಂಡು ಹೋಗುತ್ತಿರುವ ವಾಹನವೋ, ವಿಮಾನವೋ, ಅಪಘಾತಕ್ಕೆ ಈಡಾಗಿ ಸುಟ್ಟು ಹೋಗಬಹುದು. ಮಳೆಯಲ್ಲಿ ನೆನೆದುಹೋಗಬಹುದು. ಬೆಂಗಳೂರಿನ ಜಯನಗರದ ಪಾಪಣ್ಣನ ಪತ್ರ ನೇಪಾಳದ ಗಡಿಯಲ್ಲಿರುವ ಬಿಹಾರದ ಜಯನಗರದ ಪಾಪಣ್ಣನಿಗೆ ರಾಂಗ್ ಡೆಲಿವರಿ ಆಗಬಹುದು. ಕೆಲವೊಮ್ಮೆ ಹತ್ತು ಹನ್ನೆರಡು ವರುಷಗಳ ನಂತರ ಸಿಗಬಹುದು. "ಶ್ರೀಕೃಷ್ಣಾರ್ಪಣಮಸ್ತು" ಡಬ್ಬಿಯಲ್ಲಿ ಹಾಕಿದ ಯಾವ ವಸ್ತುವೂ ಕಳೆದುಹೋಗುವುದಿಲ್ಲ. ತಪ್ಪು ವಿಳಾಸಕ್ಕೆ ಸೇರುವುದಿಲ್ಲ. ಅವನಿಗೇ ಹೋಗಿ ತಲಪುತ್ತದೆ. ಮತ್ತೆ ಅಷ್ಟೇ ಅಲ್ಲ. ಒಂದಕ್ಕೆ ಎರಡಾಗಿ, ನಾಲ್ಕಾಗಿ, ಅನಂತವಾಗಿ, ಹಿಂದಿರುಗಿ ಕೊಡುವ (ಅನಂತಮಡಿಮಾಡಿ ಹಿಂದಿರುಗಿ ಕೊಡುವ) ರೀತಿ ಅವನಿಗೆ ಚೆನ್ನಾಗಿ ಗೊತ್ತು. 

ಅನುಮಾನವಿದ್ದರೆ ಸುದಾಮನನ್ನು (ಕುಚೇಲನನ್ನು) ಕೇಳಬಹುದು. ಕೊಟ್ಟಿದ್ದು ಮೂರು ಹಿಡಿ ಒಣ ಅವಲಕ್ಕಿ. ಅದಕ್ಕೇನು ಕಡಲೆ, ಕಡಲೆಕಾಯಿ ಬೀಜ, ಗೋಡಂಬಿ, ಕರಿಬೇವು, ಒಗ್ಗರಣೆ, ಹಾಕಿರಲೂ ಇಲ್ಲ. ಅವನಿಗೆ ಹಿಂತಿರುಗಿ ಸಿಕ್ಕಿದ್ದು ಶ್ರೀಕೃಷ್ಣನ ಎಂಟು ಹೆಂಡಿರು ಸಾಲಾಗಿ ಬಡಿಸಿದ ಮೃಷ್ಟಾನ್ನ ಭೋಜನ. ದ್ವಾರಾವತಿಯ ಶ್ರೀಕೃಷ್ಣನ ಅರಮನೆಗೆ ಮಿಗಿಲಾದ ಅರಮನೆ. ಅನಂತ ಐಶ್ವರ್ಯ. ಕಡೆಗೆ ಮತ್ತೆ ಹುಟ್ಟುವ ಅವಶ್ಯಕತೆ ಇಲ್ಲದ "ಸಾಯುಜ್ಯ" ಎನ್ನುವ ಮೋಕ್ಷ ಸಾಮ್ರಾಜ್ಯ!

Friday, November 28, 2025

ಸಹೋದರಿ, ತಳೋದರಿ ಮತ್ತು ಮಂಡೋದರಿ


ಕಳೆದ ತಿಂಗಳ ಒಂದು ಸಂಚಿಕೆಯಲ್ಲಿ (ಅಕ್ಟೋಬರ್ 2025) ಸಹೋದರರು ಮತ್ತು ಅಣ್ಣ-ತಮ್ಮಂದಿರ ನಡುವಿನ ವ್ಯತ್ಯಾಸದ ಪ್ರಸ್ತಾಪ ಬಂದಿತ್ತು. ಒಂದು ತಾಯಿಯ ಮಕ್ಕಳು ಸಹೋದರರು ಎಂದು ನಿರ್ದೇಶಿಸುವಾಗ, ಚಕ್ರವರ್ತಿ ಯಯಾತಿಯ ಮಗಳು ಮಾಧವಿಯ ನಾಲ್ವರು ಮಕ್ಕಳಾದ ಪ್ರದರ್ತನ, ವಸುಮನ, ಶಿಬಿ ಮತ್ತು ಅಷ್ಟಕ ಇವರು ನಾಲ್ಕು ಬೇರೆ ಬೇರೆ ತಂದೆಯರ ಮಕ್ಕಳಾದರೂ ಒಂದೇ ತಾಯಿ ಮಾಧವಿಯ ಮಕ್ಕಳಾದುದರಿಂದ ಸಹೋದರರು ಎಂದು ಹೇಳಿತ್ತು. "ನಾಲ್ಕು ಮಾತುಗಳು" ಎಂಬ ಶೀರ್ಷಿಕೆಯ ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಇದನ್ನು ಓದಿದ ಸ್ನೇಹಿತರೊಬ್ಬರು "ಸಹೋದರಿ" ಶಬ್ದಕ್ಕೂ "ತಳೋದರಿ" ಶಬ್ದಕ್ಕೂ ಏನಾದರೂ ಸಂಬಂಧವಿದೆಯೇ?" ಎಂದು ಕೇಳಿದ್ದಾರೆ. ಹಾಗೆಯೇ, "ರಾವಣನ ಹೆಂಡತಿ ಮಂಡೋದರಿ. ಈ "ಮಂಡೋದರಿ" ಅನ್ನುವುದಕ್ಕೂ ಸಹೋದರಿ ಮತ್ತು ತಳೋದರಿ ಅನ್ನುವುದಕ್ಕೂ ಸಂಬಂಧ ಏನು?" ಎಂದು ಕೇಳಿದ್ದಾರೆ. ಇವುಗಳ ಬಗ್ಗೆ ಸ್ವಲ್ಪ ಈಗ ನೋಡೋಣ. 

*****

ಒಂದು ತಾಯಿಯ ಹೊಟ್ಟೆಯಲ್ಲಿ (ಅಂದರೆ ಗರ್ಭದಲ್ಲಿ) ಹುಟ್ಟಿದ ಗಂಡು ಮಕ್ಕಳು ಪರಸ್ಪರ ಸಹೋದರರು. ಹೆಣ್ಣು ಮಕ್ಕಳು ಸಹೋದರಿಯರು. ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಒಟ್ಟಿಗೆ ಸೇರಿ ಪರಸ್ಪರ ಸಹೋದರ-ಸಹೋದರಿಯರು. ಒಂದು ತಂದೆಯ ಮಕ್ಕಳು ಅಣ್ಣ-ತಮ್ಮಂದಿರು ಮತ್ತು ಅಕ್ಕ-ತಂಗಿಯರು. ಯದುವಂಶದ ಬಲರಾಮ ರೋಹಿಣಿಯ ಮಗ. ಶ್ರೀಕೃಷ್ಣ ದೇವಕಿಯ ಮಗ. ಸುಭದ್ರೆ ರೋಹಿಣಿಯ ಮಗಳು. ಮೂವರೂ ವಸುದೇವನ ಮಕ್ಕಳು. ಹೀಗಾಗಿ, ಬಲರಾಮ ಮತ್ತು ಸುಭದ್ರೆ ಸಹೋದರ-ಸಹೋದರಿಯರು. ಬಲರಾಮ-ಶ್ರೀಕೃಷ್ಣ ಅಣ್ಣ-ತಮ್ಮ. ಸುಭದ್ರೆ ಬಲರಾಮನ ಸಹೋದರಿ. ಶ್ರೀಕೃಷ್ಣನ ತಂಗಿ.  

ದೇವಕಿಯನ್ನು ಮದುವೆಯಾದ ತಕ್ಷಣ ವಸುದೇವ ಸೆರೆಮನೆಯನ್ನು ಸೇರಿದ. ಆಮೇಲೆ ಕಂಸನ ಸರ್ಪಗಾವಲು. ನಂತರ ದೇವಕಿಯ ಎಂಟು ಮಕ್ಕಳು ಹುಟ್ಟುವವರೆಗೂ ಅಲ್ಲಿಯೇ ಇದ್ದ. ಅಷ್ಟು ಮಾತ್ರವಲ್ಲ. ಶ್ರೀಕೃಷ್ಣ ಗೋಕುಲದಲ್ಲಿ ಎಂಟು ವರುಷದವರೆಗೆ ಬೆಳೆದು, ಮಥುರೆಗೆ ಬಂದು ಕಂಸನನ್ನು ಕೊಲ್ಲುವವರೆಗೂ ಅಲ್ಲಿಯೇ ಇದ್ದ. ಕಂಸನ ಆಡಳಿತದಲ್ಲಿ ಈಗಿನಂತೆ ಖೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವ ವ್ಯವಸ್ಥೆಯೂ ಇರಲಿಲ್ಲ. ಸುಭದ್ರೆ ಕಂಸನ ವಧೆಯಾಗಿ ವಸುದೇವನ ಬಿಡುಗಡೆಯಾದ ನಂತರ ಹುಟ್ಟಿದವಳಿರಬೇಕು. ಕೃಷ್ಣನಿಗಿಂತ ಸುಮಾರು ಹತ್ತು ವರುಷ ಚಿಕ್ಕವಳು. ಪುಟ್ಟ ತಂಗಿಯಾದ್ದರಿಂದ ಕೃಷ್ಣನಿಗೆ ಅವಳ ಮೇಲೆ ತುಂಬಾ ವಾತ್ಸಲ್ಯ. 

ವಸುದೇವನಿಗೆ ರೋಹಿಣಿ ಮತ್ತು ದೇವಕಿ ಅಲ್ಲದೆ ಬೇರೆ ಹೆಂಡತಿಯರೂ ಇದ್ದರು. ಸುತನು, ವೈಶಾಖಿ, ಭದ್ರುವ, ಮದಿರ, ಉಪಾದೇವಿ ಮೊದಲಾದವರು. ಬಲರಾಮ, ಕೃಷ್ಣ ಮತ್ತು ಸುಭದ್ರೆ ಅಲ್ಲದೆ ಬೇರೆ ಮಕ್ಕಳೂ ಇದ್ದರು. ಪೌಂಡ್ರಕ ವಾಸುದೇವ (ವಸುದೇವ-ಸುತನು ಇವರ ಮಗ), ಶಥ, ಶರಣ, ನಂದಕ, ಅವಗಾಹ ಮೊದಲಾದವರು. ಇವರೆಲ್ಲರೂ ಅಣ್ಣ-ತಮ್ಮ-ತಂಗಿಯರು. ರೋಹಿಣಿಯನ್ನೇನೋ ಮೊದಲೇ ವಿವಾಹವಾಗಿದ್ದ. ಮಿಕ್ಕ ಐವರನ್ನು ಯಾವಾಗ ಮದುವೆಯಾದ ಎಂದು ಖಚಿತವಾಗಿ ಗೊತ್ತಾಗುವುದಿಲ್ಲ. 

ವಸುದೇವನಿಗೆ ಐವರು ತಂಗಿಯರು ಬೇರೆ ಇದ್ದರು. ಪೃಥಾ (ಮುಂದೆ ಕುಂತಿಭೋಜನ ದತ್ತು ಮಗಳಾದ ನಂತರ ಕುಂತಿ ಎಂದು ಪ್ರಸಿದ್ಧಳಾದಳು), ಶ್ರುತಕೀರ್ತಿ, ಶ್ರುತದೇವಿ, ರಾಜಾಧಿದೇವಿ, ಮತ್ತು ಶ್ರುತಶ್ರವಸ್ ತಂಗಿಯರು. ದೇವಶ್ರವ ಮತ್ತು ದೇವಭಾಗ ಎಂದು ಇಬ್ಬರು ತಮ್ಮಂದಿರು. ಶಿಶುಪಾಲ ಮತ್ತು ದಂತವಕ್ತ್ರರು ಕ್ರಮವಾಗಿ ಶ್ರುತಶ್ರವೆ ಮತ್ತು ಶ್ರುತದೇವೆಯರ ಮಕ್ಕಳು. ಒಟ್ಟಿನಲ್ಲಿ ಅವರ ಕುಟುಂಬದ ಸದಸ್ಯರದ್ದೇ ಮೂರು-ನಾಲ್ಕು ಕ್ರಿಕೆಟ್ ಟೀಮ್ ಮಾಡಬಹುದಿತ್ತು.

***** 

ಸಹೋದರ-ಸಹೋದರಿಯರನ್ನು ನೋಡಿದ್ದಾಯಿತು. ಇನ್ನು ತಳೋದರಿಯನ್ನು ನೋಡೋಣ. 

ದ್ರವ ಪದಾರ್ಥವಿರುವ ಒಂದು ಪಾತ್ರೆ. "ತುಪ್ಪದ ತಂಬಿಗೆ" ಅನ್ನೋಣ. (ಬಿಂದಿಗೆಯಲ್ಲಿ ತುಪ್ಪ ಇಡುವ ಸಿರಿವಂತರ ಮನೆ ಆದರೆ "ತುಪ್ಪದ ಬಿಂದಿಗೆ" ಎನ್ನಲೂಬಹುದು). ಮೊದಲು ಅದರ ತುಂಬಾ ತುಪ್ಪ ಇತ್ತು. ಉಪಯೋಗಿಸುತ್ತಾ ಇದ್ದಂತೆ ಕಡಿಮೆಯಾಗುತ್ತಾ ಹೋಯಿತು. ಈಗ ಹೆಚ್ಚು-ಕಡಿಮೆ ಖಾಲಿಯಾಗಿದೆ. ತುಪ್ಪ ಇಲ್ಲವೇ ಇಲ್ಲ ಅನ್ನುವಂತಿಲ್ಲ. ಒಂದೆರಡು ಚಮಚದಷ್ಟು ತಂಬಿಗೆಯ "ತಳ" ಭಾಗದಲ್ಲಿ ಉಳಿದಿದೆ. ಖಂಡಿತ ಇದೆ. ಅಂದರೆ ಇದ್ದೂ ಇಲ್ಲದಂತೆ ಇದೆ. 

ಹೊಟ್ಟೆಯೂ ಅಷ್ಟೇ. ಕೆಲವರಿಗೆ ದೂರದಿಂದಲೇ ಕಾಣುವಂತೆ ಇರುತ್ತದೆ. ಅವರ ದೇಹದ ಎಲ್ಲಾ ಅಂಗಗಳಿಗಿಂತ ಹೊಟ್ಟೆಯೇ ಪ್ರಧಾನ. ನಮ್ಮ ಊರಿನಲ್ಲಿ ಒಬ್ಬರು ಶಾಸ್ತ್ರಿಗಳಿದ್ದರು. ಅವರ ಹೆಸರು ಹೇಳಿದರೆ ಯಾರಿಗೂ ತಿಳಿಯದು. "ಹೊಟ್ಟೆ ಶಾಸ್ತ್ರಿಗಳು" ಅಂದರೆ ಸಣ್ಣ ಮಕ್ಕಳಿಗೂ ಗೊತ್ತು. ಮತ್ತೆ ಕೆಲವರಿಗೆ ಹೊಟ್ಟೆಯೇ ಇರುವುದಿಲ್ಲ. ಹೊಟ್ಟೆಯೇ ಇಲ್ಲದೆ ಹೇಗೆ ಬದುಕಿದ್ದಾರೆ? ಇದೆ. ಆದರೆ ಕಾಣುವಂತೆ ಇಲ್ಲ. ಎಲ್ಲೋ ತಳದಲ್ಲಿ ಇದೆ. ಸುದಾಮನನ್ನು ಕಂಡ ಭಟರು ಶೀಕೃಷ್ಣನಿಗೆ ಹೇಳುತ್ತಾರೆ: "ಅವನ ಹೊಟ್ಟೆ ಬೆನ್ನಿಗೆ ಅಂಟಿಕೊಂಡಿದೆ".

ಹೊಟ್ಟೆ ಬೆನ್ನಿಗೆ ಅಂಟಿಕೊಂಡಂತಿದ್ದರೆ, ಕಂಡೂಕಾಣದಂತಿದ್ದರೆ, ಎಲ್ಲೋ ತಳದಲ್ಲಿದ್ದರೆ ಅಂತಹ ಹೆಣ್ಣು "ತಳೋದರಿ" ಅನ್ನಿಸಿಕೊಳ್ಳುತ್ತಾಳೆ. ಬಾಳೆಯ ಎಲೆಯಂತಹ ಹೊಟ್ಟೆಯಿರುವವಳು "ತಳೋದರಿ". ಬಾಳೆಯ ಗುಡಾಣದಂತಿರುವ ಹೊಟ್ಟೆಯವಳು 'ಗುಂಡೋದರಿ". (ಮನೆಯ ಹಿತ್ತಿಲಿನ ಬಾಳೆಯ ಗಿಡದಲ್ಲಿ ಗೊನೆ ಮೂಡಿ, ಕಾಯಿ ಬಲಿತ ನಂತರ ಅದನ್ನು ಕಡಿದು ತಂದು, ಚಿಪ್ಪುಗಳಾಗಿ ಕತ್ತರಿಸಿ, ಮಣ್ಣಿನ ಗುಡಾಣಗಳಲ್ಲಿ ಬಾಳೆಲೆಗಳ ಮಧ್ಯದಲ್ಲಿ ಸುತ್ತಿ ಬಿಸಿಲಲ್ಲಿ ಇಡುತ್ತಿದ್ದರು. ಮೂರು-ನಾಲ್ಕು ದಿನದಲ್ಲಿ ಹಣ್ಣಾಗುತ್ತಿದ್ದವು. ಗಿಡದಲ್ಲೇ ಬಿಟ್ಟರೆ ಅಳಿಲು, ಹಕ್ಕಿ-ಪಕ್ಷಿಗಳ ಕಾಟ. ಅದನ್ನು ತಪ್ಪಿಸಲು ಈ ಉಪಾಯ).

ಯಾರನ್ನಾದರೂ ವರ್ಣಿಸುವುದು ಹೇಗೆ? ಅವರ  ಅಂಗಾಂಗಗಳನ್ನು ತಾನೇ ವರ್ಣಿಸುವುದು. ಎತ್ತರದ ನಿಲುವು. ಆಜಾನುಬಾಹು (ಕೈಗಳು ಮೊಣಕಾಲು ಮುಟ್ಟುವಂತಿವೆ ಎಂದು). ಮಾಟವಾದ ಮೂಗು. ಮುತ್ತಿನಂತಹ ಹಲ್ಲು. ಈ ರೀತಿ. ಹೊಟ್ಟೆಯನ್ನು ಹೇಳುವಾಗ "ತಳೋದರಿ". ಅದೊಂದು ಸೌಂದರ್ಯದ ಲಕ್ಷಣ. ಆದ್ದರಿಂದ ಈ ಪದದ ಬಳಕೆ. 
*****

ಹಿಂದೆಲ್ಲಾ ಹೆಣ್ಣು ಮಕ್ಕಳಿಗೆ ಪ್ರಸವವಾದ ನಂತರ ಬಾಣಂತಿತನ (ಆಡುಮಾತಿನಲ್ಲಿ ಬಾಣಂತನ) ಮಾಡುವಾಗ "ಸೌಭಾಗ್ಯ ಶುಂಠಿ" ಲೇಹ್ಯವನ್ನು ಕೊಡುವುದರ ಜೊತೆಗೆ, ಶಿಶು ಜನನದಿಂದ ಖಾಲಿಯಾದ ಜಾಗದಲ್ಲಿ ಗಾಳಿ ತುಂಬಿ ಹೊಟ್ಟೆ ಉಬ್ಬರಿಸದಿರುವಂತೆ ಒಂದು ಉದ್ದದ ಬಟ್ಟೆಯ ತುಂಡಿನಿಂದ ಹೊಟ್ಟೆಯನ್ನು ಬಲವಾಗಿ ಕಟ್ಟುತ್ತಿದ್ದರು. ಗರ್ಭಿಣಿಯಾಗಿದ್ದಾಗ ಉಬ್ಬಿದ ಹೊಟ್ಟೆ ಮತ್ತೆ ಮೊದಲಿನಂತೆ ಆಗಿ, ಆ ಹುಡುಗಿ ಹಿಂದಿನಂತೆ ತಳೋದರಿಯೇ ಆಗಿ ಉಳಿಯಲಿ ಎನ್ನುವ ದೃಷ್ಟಿಯಿಂದ. 

ಅರ್ಜುನನೊಡನೆ ಮದುವೆಯಾಗುವ ಮೊದಲು ಸುಭದ್ರೆಯು ಅತ್ಯಂತ ಸುಂದರಿಯೂ, ತಳೋದರಿಯೂ ಆಗಿದ್ದಳಂತೆ. ಅಭಿಮನ್ಯುವಿನ ಜನನದ ಸಮಯದಲ್ಲಿ ಹೆರಿಗೆಗೆ ತೌರು ಮನೆ ದ್ವಾರಕಿಗೆ ಬಂದಳು. ಅವಳಿಗೆ (ಹಿರಿಯ ಅತ್ತಿಗೆ ಬಲರಾಮನ ಹೆಂಡತಿ) ರೇವತಿಯ ಜೊತೆಗೆ ಶ್ರೀಕೃಷ್ಣನ ಕಡೆಯಿಂದ ಹದಿನಾರು ಸಾವಿರದ ಒಂದು ನೂರಾ ಎಂಟು ಅತ್ತಿಗೆಯರು. ಹೊಟ್ಟೆ ಕಟ್ಟುವವರಿಗೆ ಏನೂ ಕಡಿಮೆಯಿರಲಿಲ್ಲ. ಹೀಗಾಗಿ ಸುಭದ್ರೆಯು ಅಭಿಮನ್ಯು ಹುಟ್ಟಿದಮೇಲೂ ತಳೋದರಿಯಾಗಿಯೇ ಉಳಿದಳು. 
*****

ರಾವಣನ ಹೆಂಡತಿಯಾದ ಮಂಡೋದರಿ ಅಸುರರ ರಾಜನಾದ ಮಯಾಸುರ ಮತ್ತು ಹೇಮಾ ಎನ್ನುವ ಹೆಸರಿನ ಅಪ್ಸರೆಯ ಮಗಳು. ಸಂಸ್ಕೃತದಲ್ಲಿ "ಮಂದ" ಅನ್ನುವ ಪದಕ್ಕೆ (ಇತರೆ ಅನೇಕ ಪದಗಳಂತೆ) ಅನೇಕ ಅರ್ಥಗಳಿವೆ. ಇವುಗಳಲ್ಲಿ "ಕೆಳಗೆ" ಎಂದೂ ಒಂದರ್ಥ. "ಮೆತ್ತಗಿರುವುದು" ಎಂದೂ ಒಂದರ್ಥ. ಮಂಡೋದರಿ ಅವಳ ತಾಯಿ ಅಪ್ಸರೆಯಂತೆ ಅತಿಲೋಕ ಸುಂದರಿ. ಅವಳೂ ತಳೋದರಿಯೇ. ಕೆಲವು ಕಥೆಗಳಲ್ಲಿ ರಾವಣನು ಈಶ್ವರನನ್ನು ಪಾರ್ವತಿಯನ್ನೇ ಕೊಡು ಎಂದು ಕೇಳಿದಾಗ (ಭೂಕೈಲಾಸ ನೆನಪಿಸಿಕೊಳ್ಳಬಹುದು) ಕಪ್ಪೆಯ ಮರಿ ಒಂದನ್ನು ಪಾರ್ವತಿಯಂತೆಯೇ ಸುಂದರಳಾದ ಹೆಣ್ಣಾಗಿ ಮಾಡಿ ಕೊಡಲಾಯಿತು ಎಂದು ಹೇಳಿದೆ. (ಹೀಗೆ ಮಾಡಿದವರು ಯಾರೆಂದರೆ ಬೇರೆ ಬೇರೆ ಕಥೆಗಳಲ್ಲಿ ಶಿವ, ಪಾರ್ವತೀ, ವಿಷ್ಣು ಎಂದೆಲ್ಲಾ ಉಂಟು). ಕಪ್ಪೆಗೆ "ಮಂಡೋದರಿ" ಎಂದೂ ಹೆಸರುಂಟು. ಈ ಕಾರಣಗಳಿಂದ ಅವಳಿಗೆ ಮಂಡೋದರಿ ಎಂದು ಹೆಸರು ಬಂತಂತೆ. 

ಸಹೋದರಿಗೂ ಮಂಡೋದರಿಗೂ ಸಂಬಂಧವಿಲ್ಲ. ಮೆತ್ತಗಿರುವ ಮತ್ತು ಕೆಳಗಿರುವ ಹೊಟ್ಟೆಯ ಕಾರಣದಿಂದ ಅವಳು ತಳೋದರಿಯೂ ಹೌದು, ಮಂಡೋದರಿಯೂ ಹೌದು. ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಹನುಮಂತನು ರಾವಣನ ಅಂತಃಪುರದಲ್ಲಿ ಮಂಡೋದರಿಯನ್ನು ನೋಡಿ ಸೀತೆ ಎಂದು ಕ್ಷಣ ಕಾಲ ಚಿಂತಿತನಾದನು ಎಂದು ಹೇಳುವ ಸಂಗತಿಯಿದೆ. ನಂತರ ಪಾದವನ್ನು ನೋಡಲಾಗಿ, ಮಂಡೋದರಿಗೆ ಕಾಕರೇಖೆ ಇತ್ತಂತೆ. ಸೀತಾದೇವಿಗೆ ಪದ್ಮರೇಖೆ. (ಅಂದರೆ ಮಂಡೋದರಿಯೂ ಸೀತೆಯಂತೆಯೇ ಸುಂದರಿ ಎಂದು ತಾತ್ಪರ್ಯ). 

*****

ಹೆಂಗಸರು ಮಾತ್ರ ತಳೋದರಿಯಾರಾಗಿರಬೇಕೇ? ಹೀಗೇಕೆಂದು "ಸ್ತ್ರೀ ವಿಮೋಚನಾ ವಾದಿ" ಸಂಘಗಳು ಯೋಚಿಸಬೇಕಾಗಿಲ್ಲ. ಗಂಡಸರೂ ಸಹ "ತಳೋದರ" ಆಗಿಯೇ ಇರಬೇಕಂತೆ. ಇದರಲ್ಲಿ ಅವರಿಗೆ ಏನೂ ವಿನಾಯಿತಿ ಇಲ್ಲ. ಶ್ರೀಮನ್ನಾರಾಯನನ್ನು ಚಿಂತಿಸುವಾಗ ಅವನನ್ನು ಪಾದದಿಂದ ಮೇಲೆ ಪ್ರತಿಯೊಂದು ಅಂಗವನ್ನೂ ನೆನಪಿಸಿಕೊಳ್ಳಬೇಕಂತೆ. ಹಾಗೆ ನೋಡುವಾಗ ಅವನ ಹೊಟ್ಟೆಯೂ ತೆಳುವೇ. ಶ್ರೀ ಮಧ್ವಾಚಾರ್ಯರು ತಮ್ಮ "ದ್ವಾದಶ ಸ್ತೋತ್ರ" ಕೃತಿಗಳಲ್ಲಿ ಹೀಗೆ ಹೇಳುತ್ತಾರೆ:

ಉದರಂ ಚಿಂತ್ಯಮೀಶಸ್ಯ ತನುತ್ವೇಪ್ಯಖಿಲಂಭರಂ 
ವಲಿತ್ರಯಾಂಕಿತ೦ ನಿತ್ಯಂ ಉಪಗೂಢ೦ ಶ್ರೀಯೈಕಯಾ 

ತನ್ನ ಹೊಟ್ಟೆಯಲ್ಲಿ ಹದಿನಾಲ್ಕು ಲೋಕಗಳನ್ನು ತುಂಬಿಕೊಂಡಿದ್ದರೂ ಅವನ ಹೊಟ್ಟೆಯು ಬಾಳೆ ಎಲೆಯಂತೆ ತೆಳುವಾಗಿಯೇ ಇದೆ. ಅಷ್ಟು ಮಾತ್ರವಲ್ಲ. ಅವನ ಹೊಟ್ಟೆಯಮೇಲೆ ಮೂರು ಗೆರೆಗಳು ಬೀಳುತ್ತವಂತೆ. ಹೊಟ್ಟೆ ಒಣಗಿಕೊಂಡವರಿಗೆ ಮಾತ್ರ ಈ ರೀತಿ ಗೆರೆಗಳು ಬೀಳುತ್ತವೆ ಎಂದು ನಾವು ನೋಡಿ ತಿಳಿದಿದ್ದೇವೆ. ಆದರೆ ಶ್ರೀಹರಿಯ ಹೊಟ್ಟೆಯ ಮೇಲಿನ ಗೆರೆಗಳು ಸುಲಭವಾಗಿ ಕಾಣುವುದಿಲ್ಲ. ಏಕೆಂದರೆ ಆ ತಾಯಿ ಮಹಾಲಕ್ಷ್ಮಿಯು ಅವನನ್ನು ಯಾವಾಗಲೂ ತಬ್ಬಿಕೊಂಡೇ ಕುಳಿತಿರುತ್ತಾಳೆ. ಅವಳ ಕರುಣೆಯಾದರೆ ಮಾತ್ರ ಸ್ವಲ್ಪ ಪಕ್ಕಕ್ಕೆ ತಿರುಗಿ ನಮಗೆ ಅದರ ದರ್ಶನ ಮಾಡಿಸುತ್ತಾಳೆ!

ಶ್ರೀಹರಿ ಹೀಗಿದ್ದರೆ ಅವನ ಹೆಂಡತಿ ಕಥೆಯೇನು? ಮಹಾಲಕ್ಸ್ಮಿ ದೇವಿಯೂ ತಳೋದರಿಯೇ. ಶ್ರೀಹರಿ ಪ್ರಳಯ ಕಾಲದಲ್ಲಿ ಆಲದೆಲೆಯ ಮೇಲೆ ಮಲಗಿದ. ಮಹಾಲಕ್ಷ್ಮಿಯು ಆಲದೆಲೆಯಾಗಿ ಜೊತೆಗಿದ್ದಳು. (ಛತ್ರ, ಚಾಮರ, ಮಂಚ, ಬೇರೆ ಪದಾರ್ಥಗಳು (ವ್ಯಜನ), ಪಾತ್ರೆ-ಪಡಗ, ಕಡೆಗೆ ಪ್ರಳಯದ ನೀರೂ ಅವಳೇ ಆಗಿ ಅವನನ್ನು ಸುತ್ತುವರೆದಿದ್ದಳು). ಮುಂದೆ ಸೃಷ್ಟಿ ಕಾರ್ಯ ಸಾಗಬೇಕು. ಮಹಾಲಕ್ಷ್ಮಿಯ ಮೂಲಕ ಮಕ್ಕಳು ಪಡೆಯಬೇಕಾದರೆ ತಳೋದರಿಯಾಗಿರುವ ಅವಳು ಬಾಣಂತಿತನದಲ್ಲಿ ಸರಿಯಾಗಿ ಹೊಟ್ಟೆ ಕಟ್ಟದಿದ್ದರೆ ಮುಂದೆ "ಗುಂಡೋದರಿ" ಆಗಬಹುದು. ಹೊಟ್ಟೆ ಕಟ್ಟಲು ಬೇರೆ ಯಾರೂ ಇಲ್ಲ. ಇರುವುದು ಅವರಿಬ್ಬರೇ. ಪಕ್ಕದ ಮನೆಯವರ ಸಹಾಯ ಕೇಳೋಣವೆಂದರೆ ಅಕ್ಕ-ಪಕ್ಕ ಮನೆಗಳೇ ಇಲ್ಲ. ಎಲ್ಲಾ ನೀರಿನಮಯ. ಏನು ಮಾಡುವುದು?

ಯೋಚಿಸಿ ಯೋಚಿಸಿ ಕಡೆಗೆ ಅವಳ ಸೌಂದರ್ಯ ಮಾಸಬಾರದೆಂದು ತನ್ನ ಕರುಳಿನಿಂದಲೇ ಬ್ರಹ್ಮನನ್ನು ಹೆತ್ತ. ಆಮೇಲೆ ಅವನಿಗೆ ಅದೇ ಅಭ್ಯಾಸವಾಗಿಹೋಯಿತು. ಪ್ರಾಣದಿಂದ ವಾಯುವನ್ನು ಹಡೆದ. ಮನಸ್ಸಿನಿಂದ ಚಂದ್ರನನ್ನೂ, ಕಣ್ಣಿನಿಂದ ಸೂರ್ಯನನ್ನೂ ಪಡೆದ. ಮುಖದಿಂದ ಇಂದ್ರನನ್ನೂ ಅಗ್ನಿಯನ್ನೂ ಮಕ್ಕಳಾಗಿ ಪಡೆದ. 

ಸೂಕ್ತಗಳ ರಾಜನಾದ "ಪುರುಷ ಸೂಕ್ತ" ಇದನ್ನೇ ಹೇಳುತ್ತದೆ:

ಚಂದ್ರಮಾ ಮನಸೋ ಜಾತಃ ಚಕ್ಷೋ: ಸೂರ್ಯೋ ಅಜಾಯತ 
ಮುಖಾತ್ ಇಂದ್ರಶ್ಚ ಅಗ್ನಿಶ್ಚ ಪ್ರಾಣಾತ್ ವಾಯುರಾಜಾಯತ 


ಈ ಕಾರಣದಿಂದ ಮಹಾಲಕ್ಷ್ಮಿಗೆ ಮಕ್ಕಳ ಹಡೆಯುವುದೂ, ಹೊಟ್ಟೆ ಕಟ್ಟಿಸಿಕೊಳ್ಳುವುದೂ ಬೇಕೇ ಆಗಲಿಲ್ಲ. ಅವಳು "ತಳೋದರಿ" ಆಗಿಯೇ ಉಳಿದಳು! ಅವನು ತಳೋದರ. ಅವಳು ತಳೋದರಿ. ಅನುರೂಪ ದಾಂಪತ್ಯ. 

ಶ್ರೀ ಪುರಂದರ ದಾಸರು ಇದನ್ನೇ "ಮರಳು ಮಾಡಿಕೊಂಡೆಯಲ್ಲೇ, ಮಾಯಾದೇವಿಯೇ"  ಎಂದು ಹೀಗೆ ಹಾಡುತ್ತಾರೆ:

ಮಕ್ಕಳು ಪಡೆದರೆ ನಿನ್ನ ಚೊಕ್ಕತನವು ಪೋಪುದೆಂದು 
ಪೊಕ್ಕುಲೊಳು ಮಕ್ಕಳ ಪಡೆದು ಕಕ್ಕುಲಾತಿ ಮೆರೆವಂತೆ
ಮರಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ! 

ಇದರ ಬಗ್ಗೆ ಹೆಚ್ಚಿಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

*****

"ತಳೋದರಿ" ಅನ್ನುವ ಪದವನ್ನು ಕೇವಲ ಒಂದು ಸಾರಿ ಮಾತ್ರ ಉಪಯೋಗಿಸಿ ಅದನ್ನು ವಿಶ್ವ ವಿಖ್ಯಾತ ಮಾಡಿದ ಶ್ರೇಯಸ್ಸು ನಮ್ಮ ಕನ್ನಡದ ಹೆಮ್ಮೆಯ ಕವಿ ಕುಮಾರವ್ಯಾಸ ಬಿರುದಿನ ಗದುಗಿನ ನಾರಾಣಪ್ಪನಿಗೆ ಸೇರಬೇಕು. ಅದು ಹೇಗೆಂದು ಮುಂದಿನ ಸಂಚಿಕೆಯಲ್ಲಿ ನೋಡೋಣ. 

Saturday, May 17, 2025

ಜಯಾ, ಮಾಯಾ, ಕೃತಿ ಮತ್ತು ಶಾಂತಿ


ಪ್ರತಿಯೊಂದಕ್ಕೂ ಒಂದೊಂದು ಕಾಲ ಇರುತ್ತೆ.  ಆ ಕಾಲ ಬರುತ್ತೆ. ಹೌದು. ಆದರೆ ಕೆಲವಕ್ಕೆ ಎಲ್ಲ ಕಾಲವೂ ಸರಿಹೊಂದಿ ನಡೆಯುತ್ತೆ. ಇದೂ ಹೌದು!

ಇದು ಮಾವಿನ ಹಣ್ಣಿನ ಕಾಲ. ಎಲ್ಲೆಲ್ಲಿ ನೋಡಿದರೂ ಮಾವಿನ ಹಣ್ಣು. ಮುಂದೆ ಸೇಬಿನ ಕಾಲ ಬರುತ್ತೆ. ನಂತರ ಇನ್ನೊಂದು ಹಣ್ಣಿನ ಕಾಲ. ಹೀಗೆ ಕೆಲವು ಹಣ್ಣಿಗೆ ಒಂದೊಂದು ಕಾಲ. (ಈಗ ಕೋಲ್ಡ್ ಸ್ಟೋರೇಜುಗಳ ಕಾಲವಾದ್ದರಿಂದ ಎಲ್ಲ ಕಾಲದಲ್ಲೂ ಸ್ವಲ್ಪಮಟ್ಟಿಗೆ ಸಿಗಬಹುದು). ಹಿಂದೆ ಕಲ್ಲಂಗಡಿ, ಕರಬೂಜಕ್ಕೆ ಬೇಸಿಗೆ ಕಾಲವಿತ್ತು. ಈಗ ಹಾಗೆ ಹೇಳುವಂತಿಲ್ಲ. ಆದರೆ ಬಾಳೆ ಹಣ್ಣಿಗೆ ಎಲ್ಲ ಕಾಲವೂ ಸಕಾಲ. ವರುಷದ ಹನ್ನೆರಡು ತಿಂಗಳೂ ಅದರ ಕಾಲವೇ. 

ಕನ್ನಡ ಚಲನಚಿತ್ರ ರಂಗವನ್ನೇ ನೋಡೋಣ. ಪ್ರಾರಂಭದಲ್ಲಿ ಪೌರಾಣಿಕ ಚಿತ್ರಗಳ ಕಾಲ. ನಂತರ ಜಾನಪದ ಚಿತ್ರಗಳ ಕಾಲ. ಅದರನಂತರ ಸಾಮಾಜಿಕ ಚಿತ್ರಗಳ ಕಾಲ. ಅದರಲ್ಲಿಯೂ ಕಾದಂಬರಿ ಆಧಾರಿತ ಚಿತ್ರಗಳ ಸಮಯ. ಅದಾದ ಮೇಲೆ ಹೊಸ ಅಲೆಯ ಚಿತ್ರಗಳ ಕಾಲ. ತದನಂತರ ಸಾಹಸಮಯ, ಜೇಮ್ಸ್ ಬಾಂಡ್ ರೀತಿಯ ಚಿತ್ರಗಳ ಕಾಲ. ಇವಾದಮೇಲೆ ಹಿಂಸಾಪ್ರಧಾನ (ಕೊಲೆ-ರಕ್ತಪಾತ) ಚಿತ್ರಗಳ ಕಾಲ. ಒಂದು ಚಿತ್ರದಲ್ಲಿ ಎಷ್ಟು ಹೆಣಗಳು ಬಿದ್ದವು ಅಥವಾ ಎಷ್ಟು ಲೀಟರು ರಕ್ತ ಸುರಿಯಿತು ಎನ್ನುವುದರ ಮೇಲೆ ಚಿತ್ರ ಯಶಸ್ವಿಯೋ ಅಲ್ಲವೋ ಎಂದು ತೀರ್ಮಾನಿಸುವ ಕಾಲ. ಮತ್ತೆ ಈಗಂತೂ ಇವು ಕನ್ನಡ ಚಿತ್ರಗಳೇ ಎಂದು ಅನುಮಾನಿಸುವ ಕಾಲ! ಈ ಚಿತ್ರಗಳಲ್ಲಿ "ಕನ್ನಡ ಎಲ್ಲಿದೆ?" ಎಂದು ಹುಡುಕುವ ಕಾಲ. ಎಲ್ಲಕ್ಕೂ ಒಂದೊಂದು ಕಾಲ! 

ರವಿಕೆಗಳಿಗೂ ಹೀಗೆಯೇ ಇತ್ತು. ಯಾರೋ ಒಬ್ಬರು ದರ್ಜಿಯೊಬ್ಬನಿಗೆ ರವಿಕೆ ಹೊಲೆಯಲು ಕೊಟ್ಟ ಬಟ್ಟೆ ಸ್ವಲ್ಪ ಹೆಚ್ಚಾಗಿತ್ತು. ಎರಡು ರವಿಕೆ ಹೊಲೆಯಲು ಕಡಿಮೆ. ಒಂದಕ್ಕೆ ಜಾಸ್ತಿ. ಸರಿ, ಏನು ಮಾಡುವುದು? ಮುಂಗೈಗೆ ಹತ್ತಿರ ಬರುವಷ್ಟು ಉದ್ದ ತೋಳಿಟ್ಟು ರವಿಕೆ ಹೊಲೆದ. ಒಂದು ತಿಂಗಳಿನಲ್ಲಿ ಎಲ್ಲರ ರವಿಕೆಯೂ ಹಾಗೆಯೇ ಆಯಿತು. ಬರಬರುತ್ತ ತೋಳು (ರವಿಕೆಯದು) ಮೇಲೆ ಹೋಗಲು ಶುರುವಾಯಿತು. ಕಡೆಗೆ ರವಿಕೈ "ರವಿ" ಆಯಿತು. {ತೋಳೇ ಇಲ್ಲದ, ಕೈ ಇಲ್ಲದ, ಸ್ಲೀವ್ ಲೆಸ್ ರವಿಕೆ). ಈಗ ಡ್ರೆಸ್ಸುಗಳು ಬಂದು ಇದು ಸ್ವಲ್ಪ ಕಡಿಮೆ ಆಗಿರಬಹುದು. ಆದರೆ ನಿರಾಸೆ ಪಡಬೇಕಿಲ್ಲ. ಡ್ರೆಸ್ಸುಗಳ ತೋಳೂ ಹೀಗೆಯೇ ಹುಣ್ಣಿಮೆ-ಅಮಾವಾಸ್ಯೆ ಕಾಣುತ್ತಿವೆ. 

ಪ್ಯಾಂಟುಗಳ ಸ್ಥಿತಿಯೂ ಹಾಗೆಯೇ. ಹಿಂದೆಲ್ಲ  ಪ್ಯಾಂಟಿನ ಕೆಳಗಡೆ ಮಡಿಕೆ ಇರುತ್ತಿತ್ತು. ನಂತರ ಆನೆ ಬುಡದ (ಎಲಿಫೆಂಟ್ ಬಾಟಮ್) ಮಡಿಕೆಯ ಪ್ಯಾಂಟುಗಳು ಬಂದವು. ಟೈಟ್ ಪ್ಯಾಂಟಿಗೂ ಒಂದು ಕಾಲ ಇತ್ತು. ಅವನನ್ನು ನಿಲ್ಲಿಸಿ ಹೊಲೆದುದೋ ಎನ್ನುವಷ್ಟು ಟೈಟು. ಚರ್ಮಕ್ಕೂ ಬಟ್ಟೆಗೂ ಮಧ್ಯೆ ನಿರ್ವಾತ ಪ್ರದೇಶ. ಈಗಂತೂ ಹರಕು ಬಟ್ಟೆಯ ಹೊಸ ಪ್ಯಾಂಟುಗಳು. ಹೊಸ ಪ್ಯಾಂಟು ಹರಿಯಲಿ ಎಂದು ಕಾಯಲೇಬೇಕಿಲ್ಲ. "ನಾವು ಹರಕು ಜನ" ಎಂದು ಬಾಯಲ್ಲಿ ಹೇಳದೇ ಬೇರೆಯವರಿಗೆ ಗೊತ್ತಾಗುವುದು. ಹೀಗೆ ಕಾಲದಿಂದ ಕಾಲಕ್ಕೆ ಬದಲಾವಣೆ. 

*****

ಹೀಗೆ ಕಾಲದಿಂದ ಕಾಲಕ್ಕೆ ಚಾಲ್ತಿಯಲ್ಲಿರುವುದು ಬದಲಾಗುವ ಪದ್ದತಿಗೆ ಹಾಡುಗಳೂ ಹೊರತಲ್ಲ. ಯಾರೋ ಒಬ್ಬರು ಪ್ರಭಾವಿಗಳು ಅಥವಾ ಪ್ರಸಿದ್ಧರು ಹಾಡಿದರೆ ಸಾಕು. ಕೆಲವುಕಾಲ ಆ ಹಾಡಿಗೆ ಶುಕ್ರ ದೆಸೆ. ಮತ್ತೊಂದು ಅದರ ಜಾಗ ಆಕ್ರಮಿಸುವವರೆಗೆ. ಯೂಟ್ಯೂಬ್ ಮತ್ತು ವಾಟ್ಸಾಪ್ ಬಂದಮೇಲಂತೂ ಕೇಳುವುದೇ ಬೇಡ. ಕೆಲವು ಕಾಲ "ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ" ನಡೆಯಿತು. ಅದು ಮುಗಿದನಂತರ "ರಘುವೀರ ಗದ್ಯ" ಸ್ವಲ್ಪ ದಿನ. ಅದಾದಮೇಲೆ "ಎಂಥ ಶ್ರೀಮಂತನಂತಾನೋ" ಓಡಿತು. ನಂತರ "ಯಾರೂ ಸಂಗಡ ಬಹೋರಿಲ್ಲ". ಈಗ "ಮರಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ" ನಡೆಯುತ್ತಿದೆ. ಮುಂದೆ ಇನ್ನೊಂದು ಕಾಯುತ್ತಿರುತ್ತದೆ. ಹೀಗೆ. 

ಈ ಮಾಯಾದೇವಿ ಯಾರು? ಆ ಹೆಸರು ಹೇಗೆ ಬಂತು? ಅದರ ವಿಶೇಷವೇನು? ಹೀಗೆಂದು ಮಿತ್ರರೊಬ್ಬರು ಕೇಳಿದ್ದಾರೆ. "ಪ್ರಳಯ ಕಾಲದಲ್ಲಿ ಅಲದೆಲೆಯ ಮೇಲೆ ಮಲಗಿದಾಗ ಹಲವು ಆಭರಣಗಳು, ಜಲವು ಆಗಿ ಜಾಣತನದಿ" ಅನ್ನುವುದು ನೇರವಾಗಿ ಮಹಾಲಕ್ಷ್ಮಿ ದೇವಿಯನ್ನೇ ಸೂಚಿಸುತ್ತದೆ. "ಎಡಕೆ ಭೂಮಿ, ಬಲಕೆ ಶ್ರೀಯು, ಎದುರಿನಲ್ಲಿ ದುರ್ಗಾದೇವಿ" ಎನ್ನುವುದು ಅವಳದೇ ಆದ ಶ್ರೀ, ಭೂ, ಮತ್ತು ದುರ್ಗಾ ರೂಪಗಳನ್ನು ಹೇಳುತ್ತವೆ. "ಛತ್ರ, ಚಾಮರ, ವ್ಯಜನ, ಪರ್ಯಂಕ, ಪಾತ್ರರೂಪದಲ್ಲಿ ಹರಿಯ ನಿತ್ಯ ಸೇವೆ ಮಾಡುವಂಥ" ಎಂದು ವರ್ಣಿಸುವ "ಏನು ಧನ್ಯಳೋ, ಲಕುಮಿ ಎಂಥ ಮಾನ್ಯಳೋ" ಎನ್ನುವುದನ್ನು ಇನ್ನೊಂದು ರೀತಿ ಹೇಳುವುದು ಇದು. ಆದರೆ "ಮಾಯಾದೇವಿ" ಎಂದು ಏಕೆ ಸಂಬೋಧಿಸಿದರು ದಾಸರು? ಪರಮ ಮಾಯಾವಿಗೇ ಮಾಯ-ಮಾಟ ಮಾಡಿದ್ದಾಳೆ ಎಂದೇ? 
*****

ಮನೆಯಲ್ಲಿ ಒಂದು ಮಗು ಬರುತ್ತದೆ ಎಂದ ತಕ್ಷಣ ಭಾವಿ ತಾಯಿ-ತಂದೆಯರಿಗೆ ಚಿಂತೆಗಳ ಸರಮಾಲೆ ಶುರು. ಬೇರೆ ಅನೇಕ ಚಿಂತೆಗಳಿಗಿಂತ ಹೆಚ್ಚಾಗಿ ಕಾಡುವುದು "ಏನು ಹೆಸರಿಡಬೇಕು?" ಎನ್ನುವುದು. ಹಿಂದೆಲ್ಲಾ ಇದು ಅಂತಹ ಯೋಚಿಸುವ ವಿಷಯವಾಗಿರಲಿಲ್ಲ. ಯಾವುದೋ ಒಂದು ದೇವರ ಹೆಸರು ಇಡುತ್ತಿದ್ದರು. ಇಲ್ಲವೇ ಮನೆಯ ಹಿರಿಯರು ಯಾರಾದರೂ ಸ್ವಲ್ಪ ದಿನದ ಹಿಂದೆ ನಿಧನರಾಗಿದ್ದಾರೆ ಅವರ ಹೆಸರು. ಇಲ್ಲವಾದರೆ ಮನೆದೇವರ ಅನೇಕ ಹೆಸರುಗಳಲ್ಲಿ ಯಾವುದಾದರೂ ಒಂದು. ಈಗ ಹಾಗಿಲ್ಲ. ಯಾರೂ ಇಡದ ಅಪರೂಪದ ಹೆಸರು ಬೇಕು ಎನ್ನುವ ತವಕ. ಅದರ ಅರ್ಥ ಏನು ಎಂದು ಯಾರಿಗೂ ಗೊತ್ತಾಗದಿದ್ದರೂ ಪರವಾಗಿಲ್ಲ. ಯಾರಿಗೂ ಅದು ಅರ್ಥವಾಗದಿದ್ದರೆ ಇನ್ನೂ ಒಳ್ಳೆಯದು. ಇಂಗ್ಲಿಷಿನಲ್ಲಿ "ಏ" ಇಂದ ಪ್ರಾರಂಭವಾಗುವ ಹೆಸರಾದರೆ ಬಹಳ ಒಳ್ಳೆಯದು. ಏಕೆಂದರೆ ಶಾಲೆಯ ಹಾಜರಿ ರಿಜಿಸ್ಟರಿನಲ್ಲಿ ಮೊದಲನೆಯ ಹೆಸರಾಗುತ್ತದೆ. ಈ ರೀತಿ. 

ಸಮಾರಂಭದಲ್ಲಿ ಒಂದು ಮುದ್ದಾದ ಮಗು ಕಂಡಿತು. "ಮಗು ಬಹಳ ಮುದ್ದಾಗಿದೆ" ಅಂದರು ನೋಡಿದವರೊಬ್ಬರು. ತಾಯಿಗೆ ನ್ಯಾಯವಾಗಿಯೇ ಬಲು ಸಂತೋಷವಾಯಿತು. ಮುಖ ಅಗಲಿಸಿದಳು. "ಏನು ಹೆಸರು?" ಎಂದು ಕೇಳಿದರು. ಸ್ವಲ್ಪ ಒದ್ದಾಡಿದರೂ ಕಡೆಗೆ ಸತ್ಯ ಹೇಳಿದಳು. "ಅಪರೂಪದ ಹೆಸರು ಇಟ್ಟಿದ್ದೇವೆ. ತಕ್ಷಣ ನೆನಪಿಗೆ ಬರುತ್ತಿಲ್ಲ. ಮರೆತುಹೋಗಿದೆ. ಕ್ಷಮಿಸಿ" ಅಂದಳು. ಇದು ಕಟ್ಟು ಕಥೆಯಲ್ಲ.  ನಿಜವಾಗಿ ನಡೆದದ್ದು. 

ಹೆಣ್ಣುಮಕ್ಕಳಿಗೆ ಗಂಗಾ, ಯಮುನಾ, ಗೋದಾವರಿ, ನರ್ಮದಾ, ಕಾವೇರಿ, ಹೀಗೆ ನದಿಗಳ ಹೆಸರು ಇಡುತ್ತಿದ್ದರು. ಇಲ್ಲವೇ ಹಿಂದಿ ಸಿನಿಮಾಗಳಲ್ಲಿ ಬರುವಂತೆ ಚಂಪಾ, ಚಮೇಲಿ, ಗುಲಾಬಿ, ಮಾಲಾ, ಸುರಭಿ ಇತ್ಯಾದಿ. ಈ ರೀತಿಯ ಜನಪ್ರಿಯ ಹೆಸರುಗಳಲ್ಲಿ ಜಯ, ಮಾಯಾ ಮತ್ತು ಶಾಂತಿ ಸಹ ಸೇರಿವೆ. ಜಯಾ ಅಂತೂ ಅನೇಕ ರೂಪಗಳಲ್ಲಿ ಉಂಟು. ಜಯ, ವಿಜಯ, ಜಯಶ್ರೀ, ವಿಜಯಶ್ರೀ, ಜಯಮಾಲಾ, ಜಯಲಲಿತಾ, ವಿಜಯಲಲಿತಾ, ಜಯಗೌರಿ, ಹೀಗೆ ಅನೇಕ ಪ್ರಭೇದಗಳು. ಮಾಯಾ ಎಂದೂ ಹೆಸರಿಡುವುದು ಉಂಟು. ಶಾಂತಿ ಅನ್ನುವುದು ಒಂದು ಕಾಲದಲ್ಲಿ ಹೆಚ್ಚಾಗಿಯೇ ಇತ್ತು. ಗಂಡ-ಹೆಂಡಿರು ಜಗಳಕಾದರೆ ಅತ್ತೆ-ಮಾವ ಅಥವಾ ತಾಯಿ-ತಂದೆ ಕದನವಿರಾಮಕ್ಕೆ "ಶಾಂತೀ" ಎಂದು ಮೊಮ್ಮಗಳನ್ನು ಕರೆಯಬಹುದಿತ್ತು. ಕೃತಿ ಎಂದು ಸಾಮಾನ್ಯವಾಗಿ ಹೆಸರಿಡುತ್ತಿರಲಿಲ್ಲ. "ಪ್ರಕೃತಿ" ಅನ್ನುವುದು ಐವತ್ತು ವರುಷಗಳ ಹಿಂದೆ ಒಂದು ಹೊಸ ಮಾದರಿ ಹೆಸರಾಗಿತ್ತು. 

ಈ ಜಯಾ, ಮಾಯಾ, ಶಾಂತಿ, ಇವರಿಗಿರುವ ಸಂಬಂಧವೇನು? ಇವರ ಜೊತೆ ಕೃತಿ ಏಕೆ ಸೇರಿದಳು? ಇದನ್ನು ಸ್ವಲ್ಪ ವಿಚಾರ ಮಾಡೋಣ.

*****
 
ಕಂಪನಿ ನಾಟಕಗಳು ಜನಪ್ರಿಯವಾಗಿದ್ದ ಕಾಲ ಒಂದಿತ್ತು. ಆ ನಾಟಕಗಳಲ್ಲಿ ಸಾಹಿತ್ಯ, ಸಂಗೀತ, ನಟನ ಕಲೆಗಳ ಮಿಶ್ರಣವಿರುತ್ತಿತ್ತು. ಅನೇಕ ನಟ-ನಟಿಯರು, ಮೇಕಪ್ ಕಲಾವಿದರು, ವಾದ್ಯಗಾರರು ಮುಂತಾದವರು ಒಟ್ಟಿಗೆ  ಇರುತ್ತಿದ್ದರು. ತಂಡ ಊರಿಂದ ಊರಿಗೆ ಪ್ರಯಾಣಿಸಿ ನಾಟಕಗಳನ್ನು ಆಡುತ್ತಿದ್ದವು. ಮುಖ್ಯ ಪಾತ್ರ ಮಾಡುವ ಗಂಡು ಮತ್ತು ಹೆಣ್ಣು ಕಲಾವಿದರಿರುತ್ತಿದ್ದರು. (ಹೆಣ್ಣು ಪಾತ್ರಗಳನ್ನೂ ಗಂಡಸರೇ ಮಾಡುತ್ತಿದ್ದ ಕಾಲ ಕಳೆದ ಮೇಲೆ). ಮುಖ್ಯ ಪುರುಷ ಪಾತ್ರ ಮಾಡುವವನನ್ನು "ರಾಜಾ ಪಾರ್ಟ್" ಎಂದೂ, ಹೆಣ್ಣು ಪಾತ್ರ ಮಾಡುವವರನ್ನು "ರಾಣಿ ಪಾರ್ಟ್" ಎಂದೂ ಕರೆಯುತ್ತಿದ್ದರು. ಇವನು ರಾಜ ಆದರೆ ಅವಳು ರಾಣಿ. ಇವನು ರಾಮನಾದರೆ ಅವಳು ಸೀತೆ. ಇವನು ರೋಮಿಯೋ ಆದರೆ ಅವಳು ಜ್ಯುಲಿಯೆಟ್. ಕನ್ನಡದಲ್ಲಿ ಅದೇ ನಾಟಕವಾದರೆ ರಾಮವರ್ಮ-ಲೀಲಾವತಿ. ಇವನು ಶಿವ ಆದರೆ ಅವಳು ಪಾರ್ವತಿ. ಇವನು ಹರಿಶ್ಚಂದ್ರ ಆದರೆ ಅವಳು ಚಂದ್ರಮತಿ. ಹೀಗೆ ಜೋಡಿ. 

"ಅಮ್ಮ" ಎಂಬ ಹೆಸರಿನ "ಪದ್ಮಿನಿ ಪಿಕ್ಚರ್ಸ್" ಸಂಸ್ಥೆಯ ಕನ್ನಡ ಚಲನಚಿತ್ರ ಬಹಳ ಚೆನ್ನಾಗಿ ಓಡಿತು. ಅದರ ನಿರ್ಮಾಪಕ-ನಿರ್ದೇಶಕ ಬಿ. ಆರ್. ಪಂತುಲು "ಹುಲ್ಲಳ್ಳಿ ರಾಮರಾಯ" ರಾಜಾ ಪಾರ್ಟುಗಳು. ಫಂಡರಿಬಾಯಿ "ಕಮಲಮ್ಮ" ರಾಣಿ ಪಾರ್ಟುಗಳು. ದುಷ್ಯಂತ-ಶಕುಂತಲೆಯಿಂದ ಚಿತ್ರ ಪ್ರಾರಂಭ. "ನಾಗವೇಣಿ, ನಗರಿಗೆ ನಾ ಪೋಗಿ ಬರುವೆನೇ" ಎಂಬ ಕಂದ ಪದ್ಯದಿಂದ ಚಿತ್ರ ಪ್ರಾರಂಭ. ತಂದೆಯ ಮೇಲೆ ವಿರಸಗೊಂಡ ಮೇಲೆ ರಾಜಕುಮಾರ್ ರಾಜಾ ಪಾರ್ಟ್ ಆದರೆ ಭಾರತಿ ರಾಣಿ ಪಾರ್ಟ್. ಹೀಗೆ ಚಿತ್ರ ಮುಂದುವರೆಯುತ್ತದೆ. ರಾಜಾ-ರಾಣಿ ಪಾತ್ರಗಳಿಗೆ ಇದು ಒಂದು  ಉದಾಹರಣೆ. ಅಷ್ಟೇ. ಚಿತ್ರ ಯಟ್ಯೂಬಿನಲ್ಲಿ ಲಭ್ಯವಿದೆ. ಬೇಕಿದ್ದವರು ನೋಡಬಹುದು. 

*****

ನಾಟಕ ಮತ್ತು ಸಿನಿಮಾಗಳಲ್ಲೇ ಹೀಗಾದರೆ ಜಗತ್ತು ಸೃಷ್ಟಿಸಿದವರ ಕಥೆ ಹೇಗೆ? ಅದನ್ನೇ ತಾನೇ ನಾವು ಕಾಪಿ ಮಾಡುವುದು. ಶ್ರೀಹರಿಯ ಪ್ರತಿಯೊಂದು ರೂಪಗಳಿಗೂ ಅದಕ್ಕೆ ಹೊಂದುವ ಒಂದು ಮಹಾಲಕ್ಷಿಯ ರೂಪವುಂಟು. ಅವನನ್ನು ಬಿಟ್ಟು ಅವಳಿಲ್ಲ. ಅವಳನ್ನು ಬಿಟ್ಟು ಅವನಿಲ್ಲ. ಎದೆಯ ಗೂಡಿನಲ್ಲಿಯೇ ಒಂದು ಅಂತಃಪುರ ಮಾಡಿ ಕೂಡಿಸಿಕೊಂಡಿದ್ದಾನೆ. ಸನ್ಯಾಸಿಯಾದಾಗಲೂ ಬಿಟ್ಟಿಲ್ಲ. (ಈಗಲೂ ಕೆಲವು ಸನ್ಯಾಸಿಗಳು ಸಾಂಸಾರಿಕರಾಗಿದ್ದರೆ ಅವರನ್ನು ಇದೇ ಕಾರಣಕ್ಕೆ ಅಕ್ಷೆಸುಪಿಸುವಂತಿಲ್ಲ). 

ಶ್ರೀಹರಿಯ ಪ್ರಸಿದ್ಧವಾದ "ಪಂಚ ರೂಪಗಳು" ಮತ್ತು ಅವಕ್ಕೆ  ಜೊತೆಯಾದ (ರಾಜ-ರಾಣಿ ಪಾರ್ಟುಗಳಂತೆ ) ಮಹಾಲಕ್ಷ್ಮಿ ರೂಪಗಳು ಹೀಗಿವೆ:

ಸಂಕರ್ಷಣ - ಜಯಾ  
ವಾಸುದೇವ - ಮಾಯಾ  
ಪ್ರದ್ಯುಮ್ನ - ಕೃತಿ 
ಅನಿರುದ್ಧ - ಶಾಂತಿ 
ನಾರಾಯಣ - ಲಕ್ಷ್ಮಿ 

ಲಕ್ಸ್ಮಿ-ನಾರಾಯಣ ಎನ್ನುವುದು ಎಲ್ಲರಿಗೂ ಚಿರಪರಿಚಿತ. ಮಿಕ್ಕವು ಅಷ್ಟಾಗಿ ಪರಿಚಿತವಲ್ಲ. ಮಾಯಾ ಅನ್ನುವುದು ವಾಸುದೇವ ರೂಪಿ ಶ್ರೀಹರಿಯ ಜೊತೆಯಿರುವ ಮಹಾಲಕ್ಷ್ಮಿ. ಒಂದಲ್ಲಾ ಒಂದು ಕಾರಣದಿಂದ ಯಾವಾಗಲೂ ಮಾತ್ರವಲ್ಲ, ಶ್ರೀಹರಿಯು ಯಾವ ರೂಪ ತಳೆದರೂ ಅದಕ್ಕೆ ಜೊತೆಯಾಗಿ ರೂಪ ತಳೆವ ಲಕ್ಶ್ಮಿಯನ್ನು, ಅರೆ-ಹಾಸ್ಯ ಮಿಶ್ರಿತ ಸಂಬೋಧನೆಯಲ್ಲಿ, ಮಾಯಗಾರನಿಗೇ ಮಾಯಮಾಡಿರುವವಳು ಎಂದು ಸೂಚಿಸಲು "ಮಾಯಾದೇವಿ" ಎಂದು ದಾಸರು ಉಪಯೋಗಿಸಿದ್ದಾರೆ.  ಮಗನು ಅಮ್ಮನಿಗೆ ಸಲುಗೆಯಿಂದ "ನೀನೇನೂ ಸಾಮಾನ್ಯಳಲ್ಲ. ಎಲ್ಲರಿಗೂ ಟೋಪಿ ಹಾಕುವ ನಮ್ಮ ಅಪ್ಪನಿಗೇ ಟೋಪಿ ಹಾಕಿದವಳು!" ಎಂದು ಹೇಳುವಂತೆ. 

ಜಯಾ, ಮಾಯಾ, ಮತ್ತು ಶಾಂತಿ ಎನ್ನುವ ಹೆಸರು ಹೆಣ್ಣು ಮಕ್ಕಳಿಗೆ ಇಡುವ ಮೂಲ ಕಾರಣ ಇದು. ಇವೆಲ್ಲವೂ ಮಹಾಲಕ್ಷ್ಮಿಯ ರೂಪಗಳ ಹೆಸರುಗಳೇ. 

*****

ಈ ಪಂಚ ರೂಪಗಳಿಗೂ ನಾವು ನೀರು, ಆಹಾರ ಸೇವಿಸುವುದು, ಅರಗಿಸುವುದು, ಅದರ ರಸಗಳು ದೇಹದ ಎಲ್ಲ ಅಂಗಾಂಗಗಳಿಗೆ ತಲುಪುವುದು, ಇವೆಲ್ಲಕ್ಕೂ ನೇರವಾದ ಸಂಬಂಧವಿದೆ. ತೈತ್ತರೀಯ ಉಪನಿಷತ್ತಿನಲ್ಲಿ ಈ ಪಂಚರೂಪಗಳ ವಿಸ್ತಾರವಾದ ವಿವರಣೆಯಿದೆ. ಅದನ್ನು ಇನ್ನೊಮ್ಮೆ ನೋಡೋಣ.