Tuesday, May 6, 2025

The Wise Believe They Are Immortal


Cambridge English Dictionary defines "NEET" as "Not in Education, Employment or Training" and denotes a youth who has completed his education, but is not engaged in any activity or is unemployed. It appears this was the usage by the UK government in the 1980s. But in India, NEET means "National Eligibility cum Entrance Test" that is held for deciding the eligibility for admission to the undergraduate classes like MBBS, BDS and allied courses. It is conducted by the National Testing Agency (NTA) on All-India basis. Students desiring admission to these courses make all out efforts to perform well in this examination and secure a seat for admission to the courses. There are complaints about conduct of the examinations from time to time, like improper way of conducting the examinations and leakage of question papers. Nevertheless, all desiring students seeking admission to these courses look forward eagerly for the examination and its results. 

The examination was conducted two days ago, on Sunday, 4th May, 2025 in various centres across the country.  As is customary on such examination days, some eager parents also accompany their wards to the examination centres, anxious about locating the right room for writing the examination, encouraging them to well and so on. Some even wait outside the examination centre till conclusion of the examination and enquire about the performance of the candidates. This is indeed the culmination of months of efforts be the candidates, tutors and family members. 

Kakinada in Andhra Pradesh was one of the centres for conduct of the examination on Sunday. Among the many candidates and others waiting at the examination centre was one 72-year old Pothula Venkatalakshmi as well. As the parents and guardians wished the candidates well urging them to perform well, all the candidates moved towards the rooms assigned for them to write the examination. Pothula Venkatalakshmi also moved along with the candidates. One of the officials tasked with the conduct of the examination gently told her that parents are not allowed to enter the rooms. She produced her admission card and informed that she was also one of the candidates writing the examination. Dressed in a modest salwar kameez (photograph given above) she confidently took her seat and went on with writing the examination. 

*****

It appears the NEET lifted the age limit for writing the examination in 2022. Thus being able to write the examination, Venktalakshmi availed the opportunity. Reports say that she earned admiration form everyone around the centre and later from all over the country, She underlined the fact that determination and pursuit of dreams does not come with any expiry date!

One of the seven great Rishis, the Saptarshis, Sage Bharadwaja is a shining example of continuous learning, for the entire life span, getting extensions in life span and even then continuing to learn for ever. Please click here to read about his unquenchable desire for learning. 

We know of innumerable instances where people believe that the learning process concludes once a final degree (in their opinion) is obtained and working life starts. We also have some examples around us where many persons who were deprived of opportunities to get proper education in their younger days doubling up in later years in life and earning tremendous recognition for their efforts as well making valuable contributions to the society. 

Venkatalakshmi has chosen to write an entrance examination for a probable 4-year course. The pursuit of the goal requires tremendous physical energy as well as other resources. The desire to achieve the goal is paramount as we can recognise this from her endeavours.

*****

There is a Subhashita in "Samoyochita Padyamalika" that symbolises the spirit shown by Pothula Venkatalakshmi. It is as under:

अजरामरवत् प्राज्ञः विद्यां अर्थञ्च साधयेत् 
गृहीत इव केशेषु मृत्युना धर्ममाचरेत्  

Ajaraamaravat pragnyaha vidyaam arthancha saadhayet 
Gruheeta iva kesheshu murutyunaa dharmamacahatet 

A wise man should consider himself immortal 
(free from ageing and death) 
while putting efforts for learning and earning (resources like money etc,).
At the same time, while doing good deeds (practicing dharma), 
he should do them quickly 
as if death is dragging him by grabbing his hair!

*****

This beautiful saying summarises how we should shape our attitude towards life. There is no end to learning and earning. It should be pursued till the last breath. Otherwise, we cannot achieve these goals. On the other side, do good as quickly as possible and don't postpone it. Life is indeed uncertain. 

Pothula Venkatalakshmi just did not explain this to us. She has showed it to us by her own efforts! 
*****

This is my 450th blog post. I am beholden to all readers, friends and well-wishers who have motivated me all along, by their kind words of encouragement.

Saturday, May 3, 2025

ಒನ್- ಬೈ- ಟು ಮತ್ತು ಟೂ- ಬೈ-ತ್ರೀ



ನಾವು ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದಾಗ ನಮಗೆ ವ್ಯವಹಾರ ಜ್ಞಾನ ಬರಲಿ ಎಂಬ ದೃಷ್ಟಿಯಿಂದ ನಮ್ಮ ಮನೆಯ ಹಿರಿಯರು ನಮ್ಮನ್ನು ದಿನಬಳಕೆಗೆ ಬೇಕಾದ ಪದಾರ್ಥಗಳನ್ನು ತರಲು ಅಂಗಡಿಗಳಿಗೆ ಕಳಿಸುತ್ತಿದ್ದರು. ಆಗ ಈಗಿನಂತೆ ಮನೆ ಬಾಗಿಲಿಗೆ ಸಾಮಾನು-ಸರಂಜಾಮು ತಂದು ಕೊಡುವ ವ್ಯವಸ್ಥೆ ಇರಲಿಲ್ಲ. ರೆಫ್ರಿಜಿರೇಟರ್ಗಳು ಇನ್ನೂ ಬಂದಿರಲಿಲ್ಲ. ಪ್ರತಿದಿನ ತರಕಾರಿ ಕೊಂಡು ತರಬೇಕಾಗಿತ್ತು. ಮನೆಯ ಹಿತ್ತಿಲಿನಲ್ಲಿ ಕೆಲವನ್ನು ಬೆಳೆದರೂ ಪೇಟೆಯಿಂದ ಮತ್ತೆ ಕೆಲವು ಕೊಂಡು ತರಬೇಕಾಗಿತ್ತು. ಯಾವ ತರಕಾರಿ ಎಳೆಯದಿರಬೇಕು, ಯಾವುದು ಬಲಿತಿರಬೇಕು, ಕೊಡುವ ಹಣದ ಲೆಕ್ಕ ಮತ್ತು ತರುವ ಪದಾರ್ಥಗಳ ಲೆಕ್ಕ ಮುಂತಾದುವನ್ನು ಹೀಗೆ ಕಲಿಯುತ್ತಿದ್ದೆವು.

ಪೇಟೆಯಲ್ಲಿ ಕೆಲವು ತರಕಾರಿ ಅಂಗಡಿಗಳಿದ್ದವು. ಸುತ್ತ-ಮುತ್ತಲಿನ ಹಳ್ಳಿಗಳ ಜನರು ತಾವು ಬೆಳೆದ ತರಕಾರಿ, ಸೊಪ್ಪು, ಹಣ್ಣುಗಳು ಮುಂತಾದುವನ್ನು ಬೆಳಿಗ್ಗೆ  ಬೇಗನೆ ತಲೆಯ ಮೇಲೆ ಹೊತ್ತುಕೊಂಡು ಹತ್ತಿರದ ಪಟ್ಟಣಗಳಿಗೆ ಬರುತ್ತಿದ್ದರು. ರಸ್ತೆಯ ಪಕ್ಕದಲ್ಲಿ ಗೋಣಿಚೀಲ ಅಥವಾ ಚಾಪೆ ಹಾಸಿಕೊಂಡು ತಂದ ಸರಕನ್ನು ಇಟ್ಟು ಮಾರುತ್ತಿದ್ದರು. ಎಂಟು-ಒಂಬತ್ತು ಗಂಟೆಗಲ್ಲಾ ಅವನ್ನು ಮಾರಿ ಮುಗಿಸಿ ತಮಗೆ ಬೇಕಾದ ಪದಾರ್ಥಗಳನ್ನು ಕೊಂಡುಕೊಂಡು ಹಳ್ಳಿಗಳಿಗೆ ಹಿಂತಿರುಗುತ್ತಿದ್ದರು. ಅವರು ವರ್ತಕರಲ್ಲದುದರಿಂದ ಅವರ ಬಳಿ ತಕ್ಕಡಿಗಳು ಇರುತ್ತಿರಲಿಲ್ಲ. ತರಕಾರಿಗಳನ್ನು ಸಣ್ಣ ಸಣ್ಣ ಗುಡ್ಡೆಗಳಾಗಿ ಇಟ್ಟು ಮಾರುತ್ತಿದ್ದರು. ಈಗಿನಂತೆ ಆಗ ಅಂಗಡಿಗಳ ಒಳಗೆ ಹೋಗಿ ಬೇಕಾದ ತರಕಾರಿ ಆರಿಸುವಂತಿರಲಿಲ್ಲ. ಅಂಗಡಿಯವರು ಕೊಟ್ಟಿದ್ದನ್ನು ತರಬೇಕಿತ್ತು. ಅಂಗಡಿಯವರು ಕೆಲವರು ಮಕ್ಕಳು ಕೊಳ್ಳಲು ಹೋದಾಗ ತೂಕದಲ್ಲಿ ವ್ಯತ್ಯಾಸ ಸಹ ಮಾಡುತ್ತಿದ್ದರು. ಗುಡ್ಡೆಗಳಲ್ಲಿ ಹೆಚ್ಚು ತರಕಾರಿ ಇರುವ ಗುಡ್ಡೆ ಆರಿಸಿ ತರುವುದರಲ್ಲಿ ಒಂದು ಆನಂದವಿರುತ್ತಿತ್ತು. ಈ ಕಾರಣಗಳಿಗೆ ನಾವು ರಸ್ತೆ ಬದಿಯ ಗುಡ್ಡೆ ತರಕಾರಿಗಳನ್ನು ಕೊಳ್ಳಲು ಇಷ್ಟ ಪಡುತ್ತಿದ್ದೆವು. 

ಆಗ ರೆಸ್ಟೋರಂಟುಗಳು ಬಹಳ ಕಡಿಮೆ. ಹೈಸ್ಕೂಲು ಮತ್ತು ಕಾಲೇಜು ಓದು ತಲುಪುವವರೆಗೂ ಹೋಟೆಲು ತಿಂಡಿ ಅಪರೂಪವೇ. ಇಬ್ಬರು ಸ್ನೇಹಿತರು ಜೊತೆಯಾಗಿ ಹೋಗಿ ಜೇಬಿನಲ್ಲಿದ್ದ ಹಣವನ್ನು ಕೂಡಿಸಿ ಅವಾಗೊಮ್ಮೆ, ಇವಾಗೊಮ್ಮೆ ತಿಂಡಿ ತಿನ್ನುವುದು ಒಂದು ಸಾಧನೆಯಂತೆ. ಕಾಫಿ ಅಥವಾ ಟೀ ಕುಡಿಯುತ್ತಿರಲಿಲ್ಲ. ಕುಡಿದರೂ ಒಂದನ್ನು ಇಬ್ಬರು ಹಂಚಿಕೊಂಡು ಕುಡಿಯುವುದು. ಮಾಣಿಗೆ "ಒನ್-ಬೈ-ಟು" ಕಾಫಿ ಎಂದು ಹೇಳುವುದರಲ್ಲಿ ಒಂದು ಖುಷಿ. ಮೂವರು ಹೋದರೆ "ಟು-ಬೈ-ತ್ರೀ" ಆಗುತ್ತಿತ್ತು. ಮಾಣಿ ಸಾಮಾನ್ಯವಾಗಿ ಎರಡು ಕಾಫಿ ಮತ್ತು ಒಂದು ಖಾಲಿ ಲೋಟ ತರುತ್ತಿದ್ದ. ನಾವೇ ಹಂಚಿಕೊಳ್ಳುವುದು. ಅದು ಎಲ್ಲರಿಗೂ ಸಮವಾಗಿ ಬರುವಂತೆ ಹಂಚಿಕೊಳ್ಳುವುದು ಒಂದು ಉತ್ಸಾಹದ ಆಟ ಆಗಿರುತ್ತಿತ್ತು. 

ಬೆಂಗಳೂರಿನಲ್ಲಿ, ಅದಕ್ಕಿಂತ ಹೆಚ್ಚಾಗಿ ಮೈಸೂರಿನಲ್ಲಿ, ಹೊಟೇಲುಗಳಲ್ಲಿ ಸೆಟ್ ಮಸಾಲೆ ದೋಸೆ ಸಿಗುತ್ತಿತ್ತು. (ಸೆಟ್ ದೋಸೆ ಈಗಲೂ ಎಲ್ಲ ಕಡೆ ಸಿಗುತ್ತದೆ). ಸೆಟ್ ಮಾಸಾಲೆಯಲ್ಲಿ ಎರಡು ಮಸಾಲೆ ದೋಸೆಗಳು ಇರುತ್ತಿದ್ದವು. ಮಾಮೂಲಿ ಮಸಾಲೆ ದೋಸೆಗಿಂತ ಸ್ವಲ್ಪ ಸಣ್ಣವಾದರೂ ಎರಡು ಸೇರಿದರೆ ಒಂದು ಮಾಮೂಲಿ ಮಸಾಲೆ ದೋಸೆಗಿಂತ ಹೆಚ್ಚಾಗುತ್ತಿತ್ತು. ಆದ್ದರಿಂದ ಅದು "ಟೂ-ಬೈ-ಒನ್" ಎಂದು ಒಬ್ಬರಿಗೊಬ್ಬರು ತಮಾಷೆ ಮಾಡಿಕೊಳ್ಳುತ್ತಿದ್ದೆವು. ಇಂತಹ ಕೆಲವು ರೆಸ್ಟೋರಂಟುಗಳಲ್ಲಿ "ನೋ ಒನ್-ಬೈ-ಟೂ ಸರ್ವಿಸ್" ಎಂದು ಬೋರ್ಡ್ ಕೂಡ ಹಾಕಿರುತ್ತಿದ್ದರು. ಕೆಲವು ಕಡೆ "ಸ್ಪೆಷಲ್ ರೂಮ್" ಇರುತ್ತಿತ್ತು. (ಎಸಿ ರೂಮುಗಳು ಇನ್ನೂ ಬಂದಿರಲಿಲ್ಲ). ಅಲ್ಲಿ ಒಬ್ಬರಿಗೆ  ಐದು ಪೈಸೆ ಹೆಚ್ಚು  ಕೊಡಬೇಕಿತ್ತು. ಹೀಗೆಂದು ಬೋರ್ಡ್ ಬರೆದಿರುತ್ತಿದ್ದರು. ಆ ರೂಮಿನಲ್ಲಿ ಕಪ್ಪು-ಸಾಸರಿನಲ್ಲಿ ಕಾಫಿ ಕೊಡುತ್ತಿದ್ದರು. ಅದರ ಹೊರಗಡೆ ಗಾಜಿನ ಲೋಟದಲ್ಲಿ. ಸ್ಪೆಷಲ್ ರೂಮಿನಲ್ಲಿ ತಿಂಡಿ ತಿಂದರೆ ಅಲ್ಲೇ ಬಿಲ್ ಪಾವತಿಸಬಹುದಿತ್ತು. ಹೊರಗಡೆ ತಿಂದರೆ ಬಿಲ್ ತೆಗೆದುಕೊಂಡು ಹೋಗಿ ಕ್ಯಾಷಿಯರ್ ಬಳಿ ಪಾವತಿ ಮಾಡಬೇಕಿತ್ತು. 

ಈ "ಒನ್-ಬೈ-ಟು" ಆಥವಾ "ಟೂ-ಬೈ-ತ್ರೀ" ಎಂದು ಹೇಳುವುದು ಇಂಗ್ಲಿಷ್ ಕಲಿತಮೇಲೆ ಬಂದದ್ದು. ಆದರೆ ಒಂದನ್ನು ಎರಡು, ಎರಡನ್ನು ಮೂರು, ಅಥವಾ ಎರಡನ್ನು ಒಂದು ಮಾಡುವುದು ಹೊಸದೇನೂ ಅಲ್ಲ. ಅದು ತಲೆತಲಾಂತರದಿಂದ ಬಂದದ್ದೇ. ರಾಮಾಯಣ, ಮಹಾಭಾರತ ಕಾಲಗಳಿಂದಲೂ ಇವು ಇದ್ದೇ ಇವೆ. ಅದು ಹೇಗೆ? ಸ್ವಲ್ಪ ಮುಂದೆ ನೋಡೋಣ. ಹಿಂದಿನ "ರಾಹುಕಾಲ ಮತ್ತು ಬಲಿ ಪಾಡ್ಯಮಿ" ಎಂಬ ಸಂಚಿಕೆಯಲ್ಲಿ ರಾಹುಕಾಲ ಹೇಗೆ "ಸೆವೆನ್-ಬೈ-ಯೈಟ್" ಆಯಿತು ಅನ್ನುವುದನ್ನು ನೋಡಿದ್ದೆವಲ್ಲ! ಅದನ್ನು ಓದಬೇಕಾದರೆ ಇಲ್ಲಿ ಕ್ಲಿಕ್ ಮಾಡಿ.  

*****  

ಕೌರವರು ಮತ್ತು ಪಾಂಡವರು ಇನ್ನೂ ಹುಟ್ಟುವುದರ  ಮುಂಚಿನ ಸಮಾಚಾರ ಇದು. ಮಗಧದ ರಾಜನಾಗಿದ್ದ ಬೃಹದ್ರಥ ರಾಜ್ಯಭಾರ ಮಾಡುತ್ತಿದ್ದ ಕಾಲ. ಅವನು ಕಾಶೀರಾಜನ ಅವಳಿ ಹೆಣ್ಣುಮಕ್ಕಳನ್ನು ವಿವಾಹವಾಗಿದ್ದನು. ಸಂತಾನವಿಲ್ಲದೆ ಚಿಂತಿತನಾಗಿದ್ದನು. ಒಮ್ಮೆ ಮಹಾತಪಸ್ವಿ ಒಬ್ಬರು ಅವನ ಆಸ್ಥಾನಕ್ಕೆ ಬಂದು ಅವನಿಗೆ ಅನುಗ್ರಹಿಸಿ ಒಂದು ಹಣ್ಣನ್ನು ಕೊಟ್ಟರು. ಇದನ್ನು ನಿನ್ನ ಪತ್ನಿ ಸೇವಿಸಿದರೆ ಸಂತಾನ ಆಗುವುದು ಎಂದು ಹೇಳಿದರು. ಬೃಹದ್ರಥನಿಗೆ ಒಬ್ಬಳಿಗೆ ಹಣ್ಣು ಕೊಟ್ಟು ಮತ್ತೊಬ್ಬಳ ಜೊತೆ ಮನಸ್ತಾಪ ಆಗುವುದು ಇಷ್ಟವಿರಲಿಲ್ಲ. ಅವರು ಹೋದ ನಂತರ ಬೃಹದ್ರಥನು ಆ ಹಣ್ಣನ್ನು ಒನ್-ಬೈ-ಟು ಮಾಡಿ ತನ್ನ ಇಬ್ಬರು ಹೆಂಡತಿಯರಿಗೂ ಕೊಟ್ಟನು. ಕಾಲಕ್ರಮದಲ್ಲಿ ಅವರಿಬ್ಬರೂ ಗರ್ಭವತಿಯರಾದರು. ಸಮಯ ಕಳೆದ ಮೇಲೆ ಅವರಿಬ್ಬರೂ ಒಂದೇ ದಿನ ಅರ್ಧ ಅರ್ಧ ಶಿಶುವನ್ನು ಹಡೆದರು. ನೋಡಲು ಭೀಕರವಾಗಿದ್ದ ಆ ಎರಡು ಶಿಶು ಹೋಳುಗಳನ್ನು ನಗರದ ಹೊರಗಡೆ ಬಿಸಾಡುವಂತೆ ರಾಜನು ತನ್ನ ನೌಕರರಿಗೆ ಆಜ್ಞಾಪಿಸಿದನು. ಅದರಂತೆ ಅವರು ತಮ್ಮ ಕೆಲಸ ಮಾಡಿದರು. 

ಸ್ವಲ್ಪ ಸಮಯದ ನಂತರ ಜರೆ ಎಂಬ ಹೆಸರಿನ ರಕ್ಕಸಿಯೊಬ್ಬಳು ಹಸಿವಿನಿಂದ ಬಳಲುತ್ತಾ ಆಹಾರ ಹುಡುಕುತ್ತ ಅಲ್ಲಿ ಬಂದಳು. ಕಂಡ ಎರಡು ಶಿಶು ಹೋಳುಗಳನ್ನು ಎರಡು ಕೈಗಳಲ್ಲಿ ತೆಗೆದುಕೊಂಡು ತಿನ್ನಲು ನೋಡಿದಳು. ಆಗ ಎರಡು ಹೋಳುಗಳೂ ವಿಧಿವಶಾತ್ ಒಂದಾದವು. ಎರಡು ಭಾಗಗಳು ಸೇರಿಕೊಂಡ ತಕ್ಷಣ ಆ ಶಿಶುವಿಗೆ ಜೀವ ಬಂದು ಉಸಿರಾಡುತ್ತಾ ಬಹಳ ಜೋರಾದ ಶಬ್ದದಿಂದ ಅಳಲು ಪ್ರಾರಂಭಿಸಿತು. ಆ ಮಗುವನ್ನು ತಿನ್ನಲು ಮನಸ್ಸು ಬರದೆ ಜರೆಯು ಮಗುವನ್ನು ರಾಜನಿಗೆ ತಂದು ಕೊಟ್ಟಳು. ರಾಜನು ಸಂತೋಷ ಪಟ್ಟು ಆ ಮಗುವಿಗೆ "ಜರಾಸಂಧ" ಎಂದು ಅವಳ ಹೆಸರು ನೆನಪಿರುವಂತೆ ನಾಮಕರಣ ಮಾಡಿದನು. ಬೃಹದ್ರಥನ ನಂತರ ಜರಾಸಂಧನು ಮಗಧದ ರಾಜ ಆದನು. 

ಜರಾಸಂಧನಿಗೆ ಅಸ್ತಿ ಮತ್ತು ಪ್ರಾಪ್ತಿ ಎಂದು ಎರಡು ಹೆಣ್ಣು ಮಕ್ಕಳಿದ್ದರು. ಮಥುರೆಯ ಉಗ್ರಸೇನ ರಾಜನ ಮಗ ಕಂಸನು ತಂದೆಯನ್ನು ಸಿಂಹಾಸನದಿಂದ ಕೆಳಗಿಳಿಸಿ ತಾನು ರಾಜನಾದನು. ಜರಾಸಂಧನು ತನ್ನ ಎರಡೂ ಹೆಣ್ಣು ಮಕ್ಕಳನ್ನು ಅವನಿಗೆ ಕೊಟ್ಟು ಮಡುವೆ ಮಾಡಿ ಟೂ-ಇನ್-ಒನ್ ಸಿಸ್ಟಮ್ಮಿನಲ್ಲಿ ಅಳಿಯನನ್ನಾಗಿ ಮಾಡಿಕೊಂಡನು. ಮುಂದೆ ಕಂಸನ ತಂಗಿ ದೇವಕಿಯನ್ನು ವಸುದೇವನು ಮದುವೆಯಾದದ್ದು, ಬಲರಾಮ-ಕೃಷ್ಣರು ಜನಿಸಿದ್ದು, ಕೃಷ್ಣನು ಕಂಸನನ್ನು ಕೊಂಡಿದ್ದು, ಜರಾಸಂಧ-ಕೃಷ್ಣರ ಅನೇಕ ಯುದ್ಧಗಳು, ಜರಾಸಂಧನ ಉಪಟಳ ತಾಳಲಾರದೆ ಕೃಷ್ಣನು ಯಾದವರನ್ನು ಮಥುರೆಯಿಂದ ದ್ವಾರಕೆಗೆ ಸ್ಥಳಾಂತರಿಸಿದ್ದು ಇವೆಲ್ಲ ನಡೆದುವು. ರಾಜಸೂಯ ಯಾಗಕ್ಕೆ ಮುಂಚೆ ಕೃಷ್ಣನು ಭೀಮಾರ್ಜುನರ ಜೊತೆ ಮಗಧಕ್ಕೆ ಹೋಗಿ ಜರಾಸಂಧನನ್ನು ಭೀಮನಿಂದ ಕುಸ್ತಿ ಕಾಳಗದಲ್ಲಿ ಸಿಕ್ಕಿಸಿದನು. ಕೃಷ್ಣನ ಸೂಚನೆಯಂತೆ ಭೀಮಸೇನನು ಜರಾಸಂಧನನ್ನು ಮತ್ತೆ ಒನ್-ಬೈ-ಟೂ ಮಾಡಿ ಕೊಂದನು. 
*****

ಮಹಾಭಾರತದ ಕಾಲಕ್ಕಿಂತ ಹಿಂದೆ ಹೋಗೋಣ. ದಶರಥನು ರಾಜ್ಯಭಾರ ಮಾಡುತ್ತಾ ಅಯೋಧ್ಯೆಯನ್ನು ಆಳುತ್ತಿದ್ದ ಕಾಲ. ಕೌಸಲ್ಯೆ, ಸುಮಿತ್ರೆ, ಕೈಕೇಯಿ ಎಂಬ ಮೂರು ರಾಣಿಯರಿದ್ದರೂ ದಶರಥನಿಗೆ ಮಕ್ಕಳಿರಲಿಲ್ಲ. ದಶರಥನು ಬಹಳ ಚಿಂತಿತನಾಗಿದ್ದನು. ಒಮ್ಮೆ ಬೇಟೆಗೆಂದು ಕಾಡಿಗೆ ಹೋಗಿದ್ದಾಗ ಪ್ರಮಾದವಶಾತ್ ಶ್ರವಣ ಕುಮಾರನನ್ನು ಆನೆಯೆಂದು ತಿಳಿದು ಶಬ್ದವೇಧಿ ಬಾಣ ಪ್ರಯೋಗಿಸಿ ಕೊಂದನು. "ನಿನ್ನ ಕೊನೆಯ ಕಾಲದಲ್ಲಿ ನಿನಗೂ ಪುತ್ರ ವಿಯೋಗವಾಗಲಿ" ಎಂದು ಶಪಿಸಿ ಶ್ರವಣನ ತಂದೆ-ತಾಯಿಯರು ದೇಹ ತ್ಯಾಗ ಮಾಡಿದರು. ರಾಜಧಾನಿಗೆ ಬಂದ ದಶರಥನು ವಿಷಾದದಿಂದ ರಾಜಗುರು ವಸಿಷ್ಠರಿಗೆ ವಿಷಯ ತಿಳಿಸಿದನು. "ಚಿಂತಿಸಬೇಡ. ಮೊದಲು ಮಕ್ಕಳಾಗಲಿ" ಎಂದು ವಸಿಷ್ಠರು ಸಮಾಧಾನ ಮಾಡಿದರು. 

ವಸಿಷ್ಟರು ದಶರಥನಿಂದ ಪುತ್ರಕಾಮೇಷ್ಟಿ ಯಾಗವನ್ನು ಮಾಡಿಸಿದರು. ಯಜ್ಞಪುರುಷನು ಹೋಮಕುಂಡದಿಂದ ಹೊರಬಂದು ಒಂದು ದಿವ್ಯವಾದ ಪಾತ್ರೆಯಲ್ಲಿ ಸಂತಾನ ಕಾರಕ ಪಾಯಸವನ್ನು ಕೊಟ್ಟನು. ಕೌಸಲ್ಯೆಯು ಪಟ್ಟದರಾಣಿ. ಕೈಕೇಯಿ ಇಷ್ಟದ ರಾಣಿ. ಸುಮಿತ್ರೆ ಯಾವಾಗಲೂ ಇವರ ಹಿಂದಿರುವವಳು. ಅವಳಿಗೆ ಅದೇ ಅಭ್ಯಾಸ. ದಶರಥನು ಪಾಯಸವನ್ನು ಒನ್-ಬೈ-ಟೂ ಸಿಸ್ಟಮ್ಮಿನಲ್ಲಿ ಎರಡು ಭಾಗ ಮಾಡಿ ಕೌಸಲ್ಯೆ ಮತ್ತು ಕೈಕೆಯರಿಗೆ ಕೊಟ್ಟನು. ನಂತರ ಹಿಂದೆ ನೋಡಿದರೆ ಸುಮಿತ್ರೆ ನಿಂತಿದ್ದಾಳೆ. ಈಗೇನು ಮಾಡುವುದು? ಆಗ ಸವತಿಯರಲ್ಲಿ ತುಂಬಾ ವಿಸ್ವಾಸವಿತ್ತು. ಇನ್ನೂ ಮಂಥರೆಯ ಉಪದೇಶಗಳು ಪ್ರಭಾವ ಬೀರಿರಲಿಲ್ಲ. ಕೌಸಲ್ಯೆಯು ತನ್ನ ಪಾಲಿನ ಪಾಯಸದಲ್ಲಿ ಅರ್ಧವನ್ನು ಸುಮಿತ್ರೆಗೆ ಕೊಟ್ಟಳು. ಕೈಕೇಯಿಯೂ ಹಾಗೆಯೇ ಮಾಡಿದಳು. ಈಗ ಮೊದಲು ಒನ್-ಬೈ-ಟೂ ಇದ್ದದ್ದು ಟೂ-ಬೈ-ಫೋರ್ ಆಯಿತು. ಎರಡು ಪಾಲು ಸಿಕ್ಕಿದ್ದರಿಂದ ಸುಮಿತ್ರೆಗೆ ಇಬ್ಬರು ಮಕ್ಕಳು ಜನಿಸಿದರು. ಕೌಸಲ್ಯೆ ಮತ್ತು ಕೈಕೇಯಿಗೆ ಒಬ್ಬೊಬ್ಬ ಮಗ. ಒಟ್ಟಿನಲ್ಲಿ ನಾಲ್ಕು. ಹೀಗೆ ನಡೆಯಿತು. 

ಲಕ್ಷ್ಮಣ-ಶತ್ರುಘ್ನರು ಒಂದೇ ತಾಯಿಯ ಮಕ್ಕಳಾದರೂ ಅಷ್ಟಾಗಿ ಜೊತೆಯಲ್ಲಿ ಇರಲಿಲ್ಲ. ಲಕ್ಷ್ಮಣನು ಎಂದೂ ರಾಮನ ಜೊತೆ. ಶತ್ರುಘ್ನನು ಯಾವಾಗಲೂ ಭರತನ ಜೊತೆ. ಏಕೆ ಹೀಗೆ? ತಿಳಿದವರು ಇದು ಪಾಯಸದ ನಂಟು ಅಂದರು. ಕೌಸಲ್ಯೆ ಕೊಟ್ಟ ಪಾಯಸದ ಕೂಸು ಲಕ್ಷ್ಮಣ ಅವಳ ಮಗ ರಾಮನ ಜೊತೆ. ಕೈಕೇಯಿ ಕೊಟ್ಟ ಪಾಯಸದ ಕೂಸು ಶತ್ರುಘ್ನ ಅವಳ ಕೂಸು ಭರತನ ಜೊತೆ. ಹೀಗಂತೆ. 

ಒಟ್ಟಿನಲ್ಲಿ ಇಲ್ಲಿ ಒನ್-ಬ್ಯೆ-ಟೂ, ಟೂ-ಬ್ಯೆ-ತ್ರೀ, ಟೂ-ಬ್ಯೆ-ಫೋರ್ ಎಲ್ಲವೂ ಆದವು. ಮುಂದೆ ರಾಮಾಯಣ ನಡೆಯಿತು. ಅದು ಎಲ್ಲರಿಗೂ ಗೊತ್ತಿದ್ದದ್ದೇ. 

*****

ಕೆಲವರಿಗೆ ಈಗ ಒಂದು ಸಮಸ್ಯೆ ಬರಬಹುದು. ರಾಮಾಯಣದ ಕಾಲದಲ್ಲಿ ನಡೆದಿದ್ದಕ್ಕೂ ಮಹಾಭಾರತದ ಕಾಲದಲ್ಲಿ ನಡೆದಿದ್ದಕ್ಕೂ ಏಕೆ ವ್ಯತ್ಯಾಸ? ಅಲ್ಲಿ ನಾಲ್ಕು ಪೂರ್ಣ ಶಿಶುಗಳು. ಇಲ್ಲಿ ಎರಡು ಅರ್ಧ ಶಿಶುಗಳು. ಇದೇಕೆ ಈ ಗೋಜಲು? 

ಇದಕ್ಕೆ ಉತ್ತರ ಪಾಯಸದಲ್ಲಿ ಮತ್ತು ಹಣ್ಣಿನಲ್ಲಿ ಅಡಗಿದೆ. ಪಾಯಸ ಭಾಗವಾದರೂ ಪಾಯಸವೇ. ಹಣ್ಣು ಭಾಗವಾದರೆ ಹಣ್ಣಾಗಿ ಉಳಿಯುವುದಿಲ್ಲ. ಹಣ್ಣಿನ ಹೋಳಾಗುತ್ತದೆ. ಅಷ್ಟೇ. 

ಒಂದು ಕೆಲಸ ಮಾಡಿ. ಹತ್ತು ಲೀಟರು ಸೊಗಸಾದ ಪಾಯಸ ತಯಾರಿಸಿ. ಎರಡು ಭಾಗ ಮಾಡಿ. ಐದು ಲೀಟರು ಪಾಯಸ ಬಲಗಡೆ ಮನೆಯವರಿಗೆ ಕೊಡಿ. ಇನ್ನೈದು ಲೀಟರು ಪಾಯಸ ಎಡಗಡೆ ಮನೆಯವರಿಗೆ ಕೊಡಿ. ಅವರಿಬ್ಬರೂ ಮತ್ತೆ ಎರಡು ಭಾಗ ಮಾಡಿ, ಒಂದನ್ನು ಅವರೇ ಇಟ್ಟುಕೊಂಡು ಮತ್ತೆ ಒಂದು ಭಾಗವನ್ನು ಅವರ ಪಕ್ಕದ ಮನೆಯವರಿಗೆ ಕೊಡಲಿ. ಈಗ ಎಲ್ಲರೂ ನಮಗೆ ಪಾಯಸ ಸಿಕ್ಕಿತು ಅನ್ನುತ್ತಾರೆ. ಪಾಯಸದ ಹೋಳು ಅನ್ನುವುದಿಲ್ಲ. 

ಇದೇ ಪ್ರಯೋಗ ಒಂದು ಹಣ್ಣಿನಲ್ಲಿ ಮಾಡಿ. ನಮಗೆ ಒಂದು ಹಣ್ಣು ಕೊಟ್ಟರು ಎಂದು ಯಾರೂ ಹೇಳುವುದಿಲ್ಲ. ಹಣ್ಣಿನ ಹೋಳು ಸಿಕ್ಕಿತು ಎಂದೇ ಹೇಳುತ್ತಾರೆ. 

*****

ಮುಂದೆ ಯಾರಾದರೂ ತಪಸ್ವಿಗಳು ನಿಮಗೆ ಸಂತಾನಕ್ಕಾಗಿ ಪಾಯಸವನ್ನೋ ಅಥವಾ ಹಣ್ಣನ್ನೋ ಕೊಟ್ಟರೆ ಈ ಎರಡು ಪ್ರಸಂಗಗಳನ್ನು ನೆನಪಿಟ್ಟುಕೊಳ್ಳಿ. ಇಲ್ಲದಿದ್ದರೆ ಏನಾಗುತ್ತದೆ ಎಂದು ನಿಮಗೇ ಗೊತ್ತು!

Thursday, May 1, 2025

ರಾಹುಕಾಲ ಮತ್ತು ಬಲಿ ಪಾಡ್ಯಮಿ


ಹಿಂದಿನ ಸಂಚಿಕೆಯಲ್ಲಿ "ಹಿಂದು-ಮುಂದಾದ ಅಕ್ಷಯ ತೃತೀಯಾ" ಎನ್ನುವ ಶೀರ್ಷಿಕೆಯಡಿ ಅಕ್ಷಯ ತೃತೀಯಾ ದಿನದ ಹಿಂದಿರುವ ಅರ್ಥವ್ಯಾಪ್ತಿ ಮತ್ತು ಈಗಿನ ಮಾರ್ಕೆಟಿಂಗ್ ಯುಗದಲ್ಲಿ ಅದು ಹೇಗೆ ರೂಪಾಂತರಗೊಂಡು ಆಚರಿಸಲ್ಪಡುತ್ತಿದೆ ಎಂದು ನೋಡಿದೆವು. ಈ ಸಂಚಿಕೆಯ ಬಗ್ಗೆ ಅನೇಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಕೆಲವರು ಒಂದೆರಡು ಸಂದೇಹಗಳನ್ನೂ ಕೇಳಿದ್ದಾರೆ. ಇವುಗಳಲ್ಲಿ ಒಂದು ಮುಖ್ಯ ಸಂದೇಹ ಎಂದರೆ "ಮೊದಲ ಮೂರು ದಿನಗಳು (ಯುಗಾದಿ, ಅಕ್ಷಯ ತೃತೀಯಾ, ಮತ್ತು ವಿಜಯದಶಮಿ) ಇಡೀ ದಿನ ಸ್ವಯಂಸಿದ್ಧ ಮುಹೂರ್ತ ಎಂದು ಲೆಕ್ಕಿಸುವಾಗ ಬಲಿ ಪಾಡ್ಯಮಿ ಮಾತ್ರ ಅರ್ಧ ದಿನ ಎಂದು ಏಕಾಯಿತು?" ಎನ್ನುವುದು. ಇದು ಅತ್ಯಂತ ಸಾಧುವಾದ ಪ್ರಶ್ನೆಯೇ. ಇದಕ್ಕೆ ಈ ಸಂಚಿಕೆಯಲ್ಲಿ ಉತ್ತರ ಹುಡುಕುವ ಪ್ರಯತ್ನ ಮಾಡೋಣ. ಈ ಚರ್ಚೆ ಸರಿಯಾಗಿ ತಿಳಿಯಬೇಕಾದರೆ ಹಿಂದಿನ ಸಂಚಿಕೆಯ ವಿಷಯ ಮೆಲಕು ಹಾಕುವುದು ಅವಶ್ಯಕ. ಅದಕ್ಕೆ  ಇಲ್ಲಿ ಕ್ಲಿಕ್ ಮಾಡಿ ಅದನ್ನು ಓದಬಹುದು. 
*****

ಹಿಂದಿನ ಸಂಚಿಕೆಯಲ್ಲಿ "ಕಾಮ್ಯಕರ್ಮ" ಎನ್ನುವ ಪದ ಬಳಸಿದೆ. ಇದರ ಬಗ್ಗೆ ಕೆಲವು ಪ್ರಶ್ನೆಗಳು ಬಂದಿವೆ. ಕಾಮ್ಯ ಕರ್ಮಗಳು ಎಂದರೆ ನಮಗೆ ಇಂತಹ ಫಲ ಬೇಕು ಎಂದು ಉದ್ದೇಶಿಸಿ ಆಚರಿಸುವ ಪೂಜೆಗಳು, ಹವನ-ಹೋಮಗಳು, ಜಪ-ತಪಗಳು ಇತ್ಯಾದಿ. ನಾವು ಮಾಡುವುದೆಲ್ಲಾ ಸಾಮಾನ್ಯವಾಗಿ ಕಾಮ್ಯ ಕರ್ಮಗಳೇ. ಪ್ರಾಂಭದಲ್ಲಿ ಸಂಕಲ್ಪ ಮಾಡುವಾಗ ಹೇಳುವುದೇನು? ಮೊದಲಿಗೆ "ಸಂಕಲ್ಪ" ಎಂದರೇನು? "ಇಂತಹ ಕೆಲಸ ಮಾಡಲು ಉದ್ದೇಶಿಸಿ ಈಗ ಮಾಡುತ್ತೇವೆ" ಎಂದು ಮನಸ್ಸು ಗಟ್ಟಿ ಮಾಡುವುದೇ ಸಂಕಲ್ಪ. ಸಂಕಲ್ಪ ಸಮಯದಲ್ಲಿ ಏನು ಹೇಳುತ್ತೇವೆ? ಯಾವುದಾದರೂ ಒಂದು ಪತ್ರ ಬರೆಯುವಾಗ ಅಥವಾ ದಾಖಲೆ ತಯಾರು ಮಾಡಬೇಕಾದರೆ ಸ್ಥಳ ಮತ್ತು ದಿನಾಂಕ ಮೊದಲು ಬರೆಯುವಂತೆ, ಈ ಕಾರ್ಯ ಮಾಡುವ ದಿನ ಮತ್ತು ಸ್ಥಳದ ವಿವರ ಹೇಳುವುದು. ನಂತರ "ಅಸ್ಮಾಕಂ ಸಹಕುಟುಂಬಾನಾ೦ ಕ್ಷೇಮ, ಸ್ಥೈರ್ಯ, ವಿಜಯ, ವೀರ್ಯ, ಆಯು, ಆರೋಗ್ಯ, ಐಶ್ವರ್ಯಾಡಿ ಅಭಿವ್ರುಧ್ಯರ್ಥಂ, ಧರ್ಮಾರ್ಥ, ಕಾಮ, ಮೋಕ್ಷ ಚತುರ್ವಿಧ ಫಲ ಪುರುಷಾರ್ಥ ಸಿಧ್ಯರ್ಥಂ, ಇಷ್ಟ ಕಾಮ್ಯಾರ್ಥ ಸಿಧ್ಯರ್ಥಂ ....." ಮುಂತಾಗಿ ನಮಗೆ ಬೇಕಾದ ಎಲ್ಲ ಇಷ್ಟಗಳ ದೊಡ್ಡ ಪಟ್ಟಿಯನ್ನೇ ಕೊಡುತ್ತೇವೆ. ಮಾಡುವುದು ಇಷ್ಟು. ಅದರಿಂದ ನಮಗೆ ಆಗಬೇಕಾದದ್ದು ಅಷ್ಟೊಂದು. ನಮಗೆ ಹೀಗೆ ಹೇಳುವಾಗ ಅದರ ಅರ್ಥ ಗೊತ್ತಿಲ್ಲದೇ ಇರುವುದೇ ಒಳ್ಳೆಯದು. ಇಲ್ಲದಿದ್ದರೆ ತುಂಬಾ ನಾಚಿಕೆಯಾದೀತು. 

"ನಮಗೆ ಎಂದು ಏನೂ ಬೇಕಾಗಿಲ್ಲ. ಈ ಮಾಡುತ್ತಿರುವುದು ಎಲ್ಲವೂ ಕೇವಲ ಪರಮಾತ್ಮನ ಪ್ರೀತಿಗಾಗಿ. ಅವನು ಇದನ್ನು ಒಪ್ಪಿಸಿಕೊಂಡು ಪ್ರೀತನಾದರೆ ಅಷ್ಟೇ ಸಾಕು" ಎಂದು  ಕೇವಲ "ಪರಮೇಶ್ವರ ಪ್ರೇರಣೀಯಾ, ಪರಮೇಶ್ವರ ಪ್ರೀತ್ಯರ್ಥಂ" ಎಂದು ಮಾಡುವುದು ನಿಷ್ಕಾಮ ಕರ್ಮ. ಇಲ್ಲಿ ನಮಗೆ ಬೇಕಾದದ್ದು ಒಂದೇ ಒಂದು. ಅವನು ಪ್ರೇರಣೆ ಮಾಡಿದ್ದರಿಂದ ಮಾಡುತ್ತೇವೆ ಅನ್ನುವ ಪ್ರಜ್ಞೆ  ಇದೆ, ಅವನೇ ಮಾಡಿಸುತ್ತಾನೆ ಎನ್ನುವ ಅರಿವು ಇದೆ. ಇದರಿಂದ ಅವನು ಸಂತುಷ್ಟನಾದರೆ ಸಾಕು ಅನ್ನುವ ಅಭಿಲಾಷೆ ಇದೆ. ಇಷ್ಟಿದ್ದರೆ ಅದು ನಿಷ್ಕಾಮ ಕರ್ಮ ಆಗುತ್ತದೆ.

ಪ್ರೀತಿಗೆ  ಮೂರು ಮುಖಗಳು ಉಂಟು. ನಮಗಿಂತ ಕಿರಿಯರಲ್ಲಿ ಮಾಡುವ ಪ್ರೀತಿಗೆ "ಕೃಪೆ" ಅನ್ನುತ್ತಾರೆ. ನಮ್ಮ ಸಮಾನರಲ್ಲಿ ಅದೇ "ಪ್ರೀತಿ" ಎಂದಾಗುತ್ತದೆ. ನಮಗಿಂತ ದೊಡ್ಡವರಲ್ಲಿ, ಗುರು ಹಿರಿಯರಲ್ಲಿ ಮತ್ತು ದೇವರಲ್ಲಿ, ಮಾಡುವ ಅದೇ ಉತ್ಕಟವಾದ ಪ್ರೀತಿಯನ್ನು  "ಭಕ್ತಿ" ಎನ್ನುತ್ತಾರೆ.  

ಕಾಮ್ಯ ಕರ್ಮಗಳನ್ನು ಮಾಡಬಾರದೆಂದೇನೂ ಇಲ್ಲ. ಆದರೆ ಅದು ನಿಷ್ಕಾಮ ಕರ್ಮಕ್ಕಿಂತ ಕೆಳಗಿನದು. ನಮಗೆ ಮೈಸೂರುಪಾಕು ತಿನ್ನಬೇಕೆಂದು ಆಸೆ. ಮಾಡಿಕೊಂಡು ತಿಂದೆವು. ಇದು ಕಾಮ್ಯವಾಯಿತು. ದೇವರ ನೈವೇದ್ಯಕ್ಕೆ ಎಂದು ಮಾಡಿದೆವು. ನಮಗೆ ತಿನ್ನಲು ಎಂದಲ್ಲ. ಮಾಡಿದಾಗ "ನಮಗೆ ತಿನ್ನಲು ಸಿಗುತ್ತದೆ" ಎನ್ನುವ ಆಸೆ ಇರಲಿಲ್ಲ. ಇದು ನಿಷ್ಕಾಮವಾಯಿತು. ನೈವೇದ್ಯದ ನಂತರ ಅದೇ ಮೈಸೂರುಪಾಕು ತಿನ್ನುವುದೇ. ಆದರೆ ಈಗ ಮೈಸೂರುಪಾಕು ತಿನ್ನುತ್ತಿಲ್ಲ. ಪ್ರಸಾದ ತಿನ್ನುತ್ತಿದ್ದೇವೆ. ಇದು "ನಿಷ್ಕಾಮ" ಆಯಿತು! ಭಾವದಲ್ಲಿ ವ್ಯತ್ಯಾಸ. ಅದರಿಂದ ಇಷ್ಟು ಭೇದ. ಕೆಲವರು ಇದನ್ನು "ಇದೇನು? ಕೂದಲು ಸೀಳುವಂತೆ (ಹೇರ್ ಸ್ಪ್ಲಿಟ್ಟಿಂಗ್) ಇದೆಯಲ್ಲಾ" ಎನ್ನಬಹುದು. ಅಂದುಕೊಳ್ಳಲಿ. "ಭಕುತಿಯ ಭಾವದ ಪ್ರಭಾವ" ಅಂತಹುದು. 

*****

ಬಲಿಚಕ್ರವರ್ತಿಯು ತೊಂಬತ್ತೊಂಬತ್ತು ಅಶ್ವಮೇಧಗಳನ್ನು ಮಾಡಿ ಮುಗಿಸಿ ನೂರನೆಯದನ್ನು ಪ್ರಾರಂಭಿಸಿದನು. ಇಂದ್ರನಿಗೆ "ಶತಕ್ರತು" ಅನ್ನುತ್ತಾರೆ. ಅಂದರೆ ನೂರು ಅಶ್ವಮೇಧ ಯಾಗಗಳನ್ನು ಪೂರ್ಣವಾಗಿ ಮಾಡಿದವನು ಎಂದು. ಅದರ ಫಲವಾಗಿ ಅವನಿಗೆ ಇಂದ್ರ ಪದವಿ ಸಿಕ್ಕಿತು. ಬಲಿ ಚಕ್ರವರ್ತಿ ಇದನ್ನು ಮಾಡಿ ಮುಗಿಸಿದರೆ ಅವನು ಇಂದ್ರನಾಗುತ್ತಾನೆ. ಅದು ಆಗಬಹುದು. ಆದರೆ ಅವನು ಅದು ಮಾಡಿ ಮುಗಿಸುವ ಮುನ್ನವೇ ತನ್ನ ಪ್ರಭಾವದಿಂದ ಬಲವಂತವಾಗಿ ದೇವೇಂದ್ರನ ಸ್ಥಾನವನ್ನು ಆಕ್ರಮಿಸಿದ್ದನು. ತನ್ನ ಮಗನು ಇದ್ದ ಸ್ಥಾನವನ್ನು ಇನ್ನೊಬ್ಬನು ಬಲವಂತವಾಗಿ ಕಿತ್ತುಕೊಂಡದ್ದರಿಂದ ತಾಯಿ ಅದಿತಿದೇವಿಗೆ ಬಹಳ ನೋವಾಯಿತು. ತನ್ನ ಪತಿ ಕಶ್ಯಪರಲ್ಲಿ ದುಃಖ ಹೇಳಿಕೊಂಡಳು. ಅವರು "ಪಯೋವ್ರತ" ಅನ್ನುವ ಒಂದು ವ್ರತ ಮಾಡಲು ಹೇಳಿದರು. ಅದಿತಿಯು ಅದನ್ನು ಭಕ್ತಿ-ಪ್ರೀತಿಗಳಿಂದ ಮಾಡಿದಳು. ಮಹಾವಿಷ್ಣುವು ಬಂದನು. "ಈಗ ಬಲಿ ಪ್ರಬಲನಾಗಿದ್ದಾನೆ. ಅವನಿಂದ ಸ್ಥಾನ ತೆರವು ಮಾಡಿಸುವುದು ಆಗುವುದಿಲ್ಲ. ಆದರೆ ನಿನ್ನ ಪಯೋವ್ರತದಿಂದ ಪ್ರೀತನಾಗಿದ್ದೇನೆ. ಆದ್ದರಿಂದ ನಿನ್ನ-ಕಶ್ಯಪರ ಮಗನಾಗಿ ಹುಟ್ಟುತ್ತೇನೆ. ಇಂದ್ರನ ತಮ್ಮನಾಗುವ ಕಾರಣ ಉಪೇಂದ್ರ ಆಗಿ ಹುಟ್ಟುತ್ತೇನೆ. ಬಲಿಯ ಬಳಿ ಭಿಕ್ಷ ಬೇಡಿ ನಿನ್ನ ಮಗನಿಗೆ ಇಂದ್ರ ಪದವಿ ಮತ್ತೆ ಕೊಡಿಸುತ್ತೇನೆ" ಎನ್ನುತ್ತಾನೆ. ಹಾಗೆಯೇ ಮಾಡುತ್ತಾನೆ. (ಇದರ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ ಓದಿ.) 

ಯಾಗ ನಡೆಯುತ್ತಿದ್ದಾಗ ಉಪೇಂದ್ರನು ವಾಮನರೂಪದಿಂದ ಬಲಿಯ ಬಳಿಗೆ ಬಂದನು. ಮೂರು ಹೆಜ್ಜೆ ಭೂಮಿ ಬೇಡಿದನು. ಬಲಿ ಹಾಸ್ಯ ಮಾಡಿದನು. "ನಾನು ಚಕ್ರವರ್ತಿ. ಸರಿಯಾದ್ದನ್ನು ಬೇಡು. ನನ್ನ ಯೋಗ್ಯತೆಗೆ ಸರಿಯಾದುದನ್ನು ಕೇಳು" ಎಂದನು. ಕಡೆಗೆ ಮೂರು ಹೆಜ್ಜೆ ಭೂಮಿ ಇಲ್ಲದೆ ತನ್ನ ತಲೆಯ ಮೇಲೆಯೇ ಮೂರನೆಯ ಹೆಜ್ಜೆಗೆ ಜಾಗ ಕೊಟ್ಟು ಪಾತಾಳಕ್ಕೆ ಹೋಗಬೇಕಾಯಿತು. ಬಲಿಯ ಪತ್ನಿ ವಿಂಧ್ಯಾವಳೀ ವಾಮನನ (ಈಗ ತ್ರಿವಿಕ್ರಮನಾಗಿದ್ದಾನೆ) ಕ್ಷಮೆ ಕೇಳುತ್ತಾಳೆ. "ಎಲ್ಲವೂ ನಿನ್ನದೇ ಎಂದು ಅರಿಯದೆ ನನ್ನ ಗಂಡ 'ನಾನು ಚಕ್ರವತಿಯಾಗಿ  ಕೊಡುತ್ತೇನೆ' ಎಂದು ಹೇಳಿದನು.  ಅವನನ್ನು  ಕ್ಷಮಿಸು" ಎನ್ನುತ್ತಾಳೆ. 

ಬಲಿಯ ನೂರನೆಯ ಅಶ್ವಮೇಧದ ಕಥೆ ಏನು? ಅದು ಪೂರ್ತಿಯಾಯಿತೇ? ಇಲ್ಲ. ಅದರ "ಪೂರ್ಣಾಹುತಿ" ಆಗುವ ಮುನ್ನವೇ ಅವನು ಪಾತಾಳಕ್ಕೆ ಹೋಗಬೇಕಾಯಿತು. ಆದ್ದರಿಂದ ಯಾಗ ಅಪೂರ್ಣವಾಯಿತು. ಇದು ಒಂದು ಕಡೆ. ಎಲ್ಲಾ ಯಾಗಗಳೂ ಕಡೆಗೆ ತಲುಪುವುದು ಆ ಪರಮಾತ್ಮನನ್ನೇ. ಅವನು ದೇವತೆಗಳ ಮೂಲಕ ಅದನ್ನು ಸ್ವೀಕರಿಸಬೇಕು. ಇಲ್ಲಿ ಅವನೇ ಸ್ವತಃ ವಾಮಾನನಾಗಿ ಬಂದು ತೆಗೆದುಕೊಂಡಿದ್ದಾನೆ.  ಯಾಗದ ಪೂರ್ಣ ಫಲ ಬಲಿಗೆ ಬಂದೇ ಬಂದಿತು. ಅಷ್ಟೇ ಅಲ್ಲ; ಪೂರ್ಣವಾದ ಫಲ ಸ್ವರೂಪವಾಗಿ ಮುಂದಿನ ಮನ್ವಂತರದ ಇಂದ್ರಪಟ್ಟ ಕೂಡ ಕಾದಿರಿಸಲಾಯಿತು! ಆದ್ದರಿಂದ ಅದು ಇನ್ನೊಂದು ಕಡೆಯಲ್ಲಿ ಪೂರ್ಣವಾದಂತೆಯೂ ಆಯಿತು! 

ಇಂತಹ ಅಪರೂಪದ ಅವಕಾಶದ ದಿನ ಇದು. ಆದ್ದರಿಂದ ಅದೊಂದು ಸ್ವಯಂಸಿದ್ಧ ಮುಹೂರ್ತ ಆಯಿತು. ಒಂದು ದೃಷ್ಟಿಯಲ್ಲಿ ಅಪೂರ್ಣವಾದುದರಿಂದ ಅದು ಅರ್ಧ ದಿನಕ್ಕೇ ನಿಂತಿತು. 

*****

ರಾಹುಕಾಲ ಪ್ರತಿ ದಿನ ಬರುತ್ತದೆ. ಅದರ ವಿಷಯ ಎಲ್ಲರಿಗೂ ಗೊತ್ತು. ಅದೇಕೆ ಒಂದು ದಿನ ಪೂರ್ತಿ ಇಲ್ಲ? ಎಲ್ಲ ಗ್ರಹಕ್ಕೂ ಒಂದು ದಿನವಾದ ಮೇಲೆ ಅದಕ್ಕೆ ಯಾಕೆ ಇಲ್ಲ? ಕೇತುವಿಗೆ ಯಾಕೆ ಇಲ್ಲ? ರಾಹು-ಕೇತು ಒಬ್ಬನೇ ಎಂದರೂ ಒಂದು ದಿನ ಪೂರ್ತಿ ಇರಬೇಕಲ್ಲ? ಪ್ರತಿ ದಿನ ಒಂದೂವರೆ ಘಂಟೆಯ ಕಾಲವೇ ಏಕೆ? ಅದು ಬರುವ ಸರದಿಗೆ (ಸೀಕ್ವೆನ್ಸ್) ಏನಾದರೂ ತರ್ಕವುಂಟೆ? ಈರೀತಿ ಅನೇಕ ಪ್ರಶ್ನೆಗಳು. 

ಒಂದು ಉದಾಹರಣೆ ತೆಗೆದುಕೊಳ್ಳೋಣ. ಒಂದು ಮನೆಯಲ್ಲಿ ಏಳು ಜನರಿದ್ದಾರೆ. ಏಳು ಕಿತ್ತಳೆ ಹಣ್ಣುಗಳಿವೆ.  ಪ್ರತಿ ಹಣ್ಣಿನಲ್ಲೂ ಎಂಟೆಂಟು ತೊಳೆಗಳಿವೆ. ಎಲ್ಲರಿಗೂ  ಕೊಟ್ಟಿದ್ದಾಯಿತು. ಎಲ್ಲರೂ ಬಿಡಿಸಿದ್ದಾಯಿತು. ಇನ್ನೇನು ತಿನ್ನಬೇಕು. ಅಷ್ಟರಲ್ಲಿ ಎಂಟನೆಯವರು ಒಬ್ಬರು ಬಂದರು! ಬೇರೆ ಹಣ್ಣಿಲ್ಲ. ಈ ರೀತಿ ಆಗುವುದು ನಾವು ಕಂಡಿದ್ದೇವೆ. ಆಗ ಎಲ್ಲರೂ ತಮ್ಮ ಕೈಲಿರುವುದರಲ್ಲಿ ಸ್ವಲ್ಪ ಕೊಟ್ಟು ಎಲ್ಲರೂ ಹಂಚಿಕೊಳ್ಳುತ್ತಾರೆ. ಆಗ ಇದ್ದ ಏಳು ಹಣ್ಣುಗಳು ಎಂಟೂ ಜನರಿಗೆ ಸಿಕ್ಕಂತಾಯಿತು! 

ಏಳು ಜನರೂ ಎಂಟನೆಯವನಿಗೆ ಒಂದೊಂದು ತೊಳೆ ಕಿತ್ತಳೆ ಕೊಟ್ಟರು. ಈಗ ಎಲ್ಲರ ಕೈಲೂ ಏಳು ಕಿತ್ತಳೆ ತೊಳೆ ಉಳಿಯಿತು. ಎಂಟನೆಯವನಾಗಿ ಬಂದವನಿಗೂ ಏಳು ತೊಳೆ ಸಿಕ್ಕಿತು. ಎಲ್ಲರಿಗೂ ಸಮಪಾಲು ಸಿಕ್ಕಿತು. ಹಿಂದಿನವರು ಹೇಳುತ್ತಿದ್ದಂತೆ, "ತಂಟೆ ಫೈಸಲು"! ವಿಶೇಷವೇನೆಂದರೆ, ಮೊದಲ ಏಳು ಜನಕ್ಕೆ ಒಂದೇ ಹಣ್ಣಿನ ಏಳು ತೊಳೆಗಳು ಸಿಕ್ಕವು. ಕಡೆಯವನಾದ ಎಂಟನೆಯವನಿಗೆ ಏಳು ಹಣ್ಣಿನಲ್ಲೂ ಒಂದೊಂದು ತೊಳೆ ಸಿಕ್ಕೇ ಒಟ್ಟು ಏಳಾಯಿತು!

ಚಾಂದ್ರಮಾನ ಮಾಸದಲ್ಲಿ ಇಪ್ಪತ್ತೆಂಟು ದಿನ. ವಾರಗಳಾಗಿ ವಿಭಜಿಸುವಾಗ ಏಳು ದಿನದ ವಾರ ಮಾಡಿದರೆ ನಾಲ್ಕು ವಾರವಾಯಿತು. ಎಂಟು ದಿನದ ವಾರ ಮಾಡಿದರೆ ಲೆಕ್ಕ ತಾಳೆ ಆಗುವುದಿಲ್ಲ. ಎಲ್ಲಾ ಗೋಜಲಾಗುತ್ತದೆ. ಏಳು ದಿನಗಳ ವಾರವನ್ನೇ ಇಟ್ಟುಕೊಂಡು ದಿನಗಳಾಗಿ ವಿಭಜಿಸಬೇಕು. 

ಪ್ರತಿ ದಿನದ ಪ್ರಮಾಣ ಹನ್ನೆರಡು ಗಂಟೆ. ಎಂಟು ಭಾಗ ಮಾಡಿದರೆ ಒಂದು ಭಾಗದ ಪ್ರಮಾಣ ಒಂದೂವರೆ ಘಂಟೆ. ಒಂದೂವರೆ ಘಂಟೆ ಹಗಲಿನ ಹನ್ನೆರಡು ಘಂಟೆಯಲ್ಲಿ ತೆಗೆದರೆ ಪ್ರತಿದಿನ ಉಳಿದಿದ್ದು ಹತ್ತೂವರೆ ಘಂಟೆ. ಏಳು ದಿನದ ಒಂದೂವರೆ ಘಂಟೆ ಸೇರಿಸಿದರೆ ರಾಹುವಿಗೂ ಹತ್ತೂವರೆ ಘಂಟೆಯೇ! ಆದರೆ ರಾಹುವಿಗೆ ಏಳೂ ದಿನಗಳಲ್ಲಿ ಭಾಗ ಸಿಕ್ಕಿತು. 

ಯಾವ ಸರದಿಯಲ್ಲಿ ರಾಹುವಿಗೆ ಭಾಗ ಸಿಕ್ಕಿತೋ ಆಯಾ ದಿನ ಅದೇ ಸರತಿಯಲ್ಲಿ ರಾಹುಕಾಲ ಬಂತು. ಇದನ್ನು ಸುಲಭವಾಗಿ ನೆನಪಿಡಲು ನಮ್ಮ ದೊಡ್ಡಪ್ಪ ಒಂದು ಸೂತ್ರ ಹೇಳುತ್ತಿದ್ದರು. "Mother Saw Father Wearing The Turban Suddenly" ಎಂದು. ಬೆಳಿಗ್ಗೆ ಏಳೂವರೆಯಿಂದ ಒಂದೂವರೆ ಘಂಟೆ ಪ್ರಮಾಣ. (ಆರು ಗಂಟೆಗೆ ಏಕಿಲ್ಲ? ಎಲ್ಲವೂ ಬೇರೆಯವರಿಂದ ಬಂದದ್ದು. ಆದ್ದರಿಂದ ಮೊದಲಿನದಿಲ್ಲ!) ಸಂಜೆ ಆರಕ್ಕೆ ಮುಗಿಯಿತು. ಸೋಮವಾರ, ಶನಿವಾರ, ಶುಕ್ರವಾರ, ಬುಧವಾರ, ಗುರುವಾರ, ಮಂಗಳವಾರ ಮತ್ತು ಭಾನುವಾರ. ಹೀಗೆ ವಿಂಗಡಣೆ. 

*****

ಈ ರೀತಿ ಬಲಿಪಾಡ್ಯಮಿ ಮತ್ತು ರಾಹುಕಾಲಗಳಿಗೆ ಸಮಸ್ಯೆ ಪರಿಹಾರ ಮಾಡುವುದು ಸರಿಯೇ? ಇದಕ್ಕೆ ಏನು ಆಧಾರ? ಒಹೋ! ಈಗ ಹೊಸ ಪ್ರಶ್ನೆಗಳು ಬಂದವು. ಅವಕ್ಕೆ ಪರಿಹಾರ ಮುಂದಿನ ಸಂಚಿಕೆಯಲ್ಲಿ ಹುಡುಕೋಣ. 

Wednesday, April 30, 2025

ಹಿಂದು-ಮುಂದಾದ "ಅಕ್ಷಯ ತೃತೀಯಾ"

ಕಾಮಧೇನು ಮತ್ತು ಕಲ್ಪವೃಕ್ಷಗಳು ದೇವರಾಜನಾದ ಇಂದ್ರನ ಅಧೀನದಲ್ಲಿ ಸ್ವರ್ಗದಲ್ಲಿರುತ್ತವೆ ಎಂದು ನಂಬಿಕೆ. ತಮ್ಮನ್ನು ಆರಾಧಿಸಿ ಬೇಡುವವರಿಗೆ ಕೇಳಿದ್ದನ್ನು ಕೊಡುತ್ತವೆ ಎಂದು ಪ್ರತೀತಿ. 

ಇವು ಎರಡರಲ್ಲಿ ಮುಖ್ಯ ವ್ಯತ್ಯಾಸ ಏನು? ನಾವು ಅವನ್ನು ಕಂಡವರಲ್ಲ. ಅಲ್ಲಿ ಇಲ್ಲಿ ಓದಿ-ಕೇಳಿ ತಿಳಿದದ್ದು. ಕಲ್ಪವೃಕ್ಷವು ಈಗ ನಮ್ಮ ಸುತ್ತ-ಮುತ್ತ ಇರುವ ಎಟಿಎಂ ಇದ್ದಂತೆ. ಅದು ಒಂದು ದಿವ್ಯವಾದ ಮರ. ಒಂದು ಕಡೆ ನೆಟ್ಟು ಬೆಳಿಸಿದಂತೆ. ನಮ್ಮ ಸುತ್ತಲಿನ ಎಟಿಎಂಗಳು ನಗದು ರೂಪದಲ್ಲಿ ಹಣ ಕೊಡುತ್ತವೆ. (ಈಗ ಇಡ್ಲಿ-ವಡೆ ಮುಂತಾದುವನ್ನು ಕೊಡುವ ಎಟಿಎಂಗಳು ಕೂಡ ಬಂದಿವೆಯಂತೆ. ಅವನ್ನು ಇಲ್ಲಿ ಸೇರಿಸುವುದು ಬೇಡ). ಆದರೆ ಅದು ಇರುವಲ್ಲಿಗೆ ಹೋಗಬೇಕು. ಕಾಮಧೇನು ಒಂದು ದಿವ್ಯವಾದ ಹಸು. ಅದು ಓಡಾಡಬಹುದು. ಆದ್ದರಿಂದ ಕಾಮಧೇನು ಒಂದು ಮೊಬೈಲ್ಎಟಿಎಂ ಇದ್ದಂತೆ. ಅದು ನಾವಿರುವಲ್ಲಿಗೇ ಬಂದು ಕೇಳಿದ್ದನ್ನು ಕೊಡುತ್ತದೆ. 

ಹೀಗೆ ಅಲ್ಲಿ ಇಲ್ಲಿ ಓಡಾಡುತ್ತಿದ್ದ ಕಾಮಧೇನು ನಮ್ಮ ಮನೆ ಬೀದಿಯಲ್ಲಿ ಬಂದಿದೆ. ಈಗ ನಮ್ಮ ಮನೆಯ ಮುಂದೆಯೇ ನಿಂತಿದೆ. ಏನು ಕೇಳಿದರೂ ಕೊಡುವ ಕಾಮಧೇನು. ಅದರ ಬಳಿ ಹೋಗಿ ಕೇಳಿಕೊಳ್ಳಬೇಕು. ಅಷ್ಟೇ. 

ಈ ದಿನ ಯಾಕೋ ಪ್ರತಿದಿನ ಬೆಳಿಗ್ಗೆ ನಮ್ಮ ಮನೆಗೆ ಹಾಲು ತಂದು ಕೊಡುವ  ಹುಡುಗ ಬಂದಿಲ್ಲ. ಬೆಳಗಾಗಿ ಎದ್ದು ಕಾಫಿ ಕುಡಿಯುವ ಅಭ್ಯಾಸ. ಕಾಫಿ ಸ್ವಲ್ಪ ತಡವಾದರೆ ಬುದ್ಧಿಯೇ ಓದುವುದಿಲ್ಲ. ಹೇಗೂ ಕಾಮಧೇನು ಮನೆಮುಂದೆ ಬಂದು ನಿಂತಿದೆ. ಹತ್ತಿರ ಹೋಗಿ "ಒಂದು ಅರ್ಧ ಲೀಟರ್ ಹಾಲು ಕೊಡು ತಾಯಿ" ಎಂದು ಕೇಳಿದೆವು. ಆಹಾ! ಕೊಟ್ಟಿತು! ಏನು ಸಂತೋಷ! ಎಂಥ ಉತ್ಸಾಹ!

*****

ಏನಾದರೂ ಒಳ್ಳೆಯ ಕೆಲಸ ಮಾಡಬೇಕಾದರೆ ಏನು ಮಾಡಬೇಕು? ಮಾಡಬೇಕು. ಅಷ್ಟೇ. "ಮಂತ್ರಿಸಿದರೆ ಮಾವಿನಕಾಯಿ ಬೀಳುವುದಿಲ್ಲ. ಅದು ಬೀಳಬೇಕಾದರೆ ಕಲ್ಲು ಹೊಡೆಯಬೇಕು. ಇಲ್ಲವೇ, ಮರ ಹತ್ತಿ ಕೀಳಬೇಕು". ಹೀಗೊಂದು ಪಾಠವಿತ್ತು, ನಾವು ಶಾಲೆಯಲ್ಲಿ ಓದುತ್ತಿದ್ದಾಗ. ಕೆಲಸ ಆಗಬೇಕಾದರೆ ಮೀನ-ಮೇಷ ಎಣಿಸುವುದಲ್ಲ. ಕೆಲಸ ಪ್ರಾರಂಭ ಮಾಡಬೇಕು. ಆದರೆ ನಮ್ಮಲ್ಲಿ ಒಂದು ಒಳ್ಳೆಯ ದಿನ, ಸರಿಯಾದ ಸಮಯ ನೋಡಿ ಪ್ರಾರಂಭ ಮಾಡಬೇಕು ಎನ್ನುವ ಒಂದು ಪದ್ಧತಿ. ಒಳ್ಳೆಯ ದಿನ ನೋಡಿದೆವು. ಸರಿಯಾದ ಸಮಯಕ್ಕೇ ಪ್ರಾರಂಭಿಸಿದೆವು. ಕೆಲಸವಾಗುತ್ತದೆಯೇ? ಸರಿಯಾಗಿ ಪರಿಶ್ರಮ ಪಟ್ಟು ಮಾಡಿದರೆ ಆಗುತ್ತದೆ. ಸುಮ್ಮನೆ ಒಳ್ಳೆಯ ದಿನ, ಸರಿಯಾದ ಸಮಯದಲ್ಲಿ ಪ್ರಾರಂಭ ಮಾಡಿದರೆ ಕೆಲಸ ಆಗುವುದಿಲ್ಲ. "ಪುರುಷ ಪ್ರಯತ್ನ" ಬೇಕೇ ಬೇಕು. "ದೈವದಿಂದ ಆಗುತ್ತದೆ" ಎನ್ನುವವರು ಕೆಲವರು. "ಪುರುಷ ಪ್ರಯತ್ನದಿಂದಲೇ ಆಗುವುದು" ಎನ್ನುವರು ಇನ್ನು ಕೆಲವರು. "ಪುರುಷ ಪ್ರಯತ್ನಕ್ಕೆ ದೈವ ಸಹಾಯವೂ ಸೇರಬೇಕು" ಎನ್ನುವುದು ಇನ್ನೊಂದು ಮಾರ್ಗ. 

ಒಳ್ಳೆಯ ದಿನ, ಸರಿಯಾದ ಸಮಯ ಅಂದರೆ ಏನು? ಅದು ಹೇಗೆ ಸಿಗುತ್ತದೆ? ಇದು ಒಂದು ಮುಖ್ಯ ಪ್ರಶ್ನೆ. ನಂಬಿಕೆ ಇದ್ದವರು ಜೋಯಿಸರ ಬಳಿ ಹೋಗಿ ಕೇಳಬಹುದು. ಈಗಿನ ಕಂಪ್ಯೂಟರ್ ಪರಿಣತರು ಯಾವುದೋ ಸಾಫ್ಟ್ ವೇರ್ ಸಹಾಯದಿಂದ ಅದನ್ನು ಹಿಡಿಯಬಹುದು. ಮೊಬೈಲ್ ಕೈಗೇ ಅಂಟಿಕೊಂಡಿರುವವರು ಅದಕ್ಕೊಂದು "ಅಪ್ಪ" ಹುಡುಕಿ ಅದರಲ್ಲಿ ತೆಗೆಯಬಹುದು. ಇದಕ್ಕೆ ಇಷ್ಟೆಲ್ಲಾ ಮಾಡದೆ ಏನಾದರೂ ಸುಲಭ ಉಪಾಯ ಇದೆಯೇ? 

"ಸಾಡೆತೀನ್ ಮುಹೂರ್ತ" ಎಂದು ಹಿರಿಯರು ಹೇಳುತ್ತಿದ್ದರು. ಮೂರು ದಿನಗಳು ಮತ್ತು ಅದರ ಮೇಲೆ ಅರ್ಧ ದಿನ. "ಈ ದಿನಗಳು ಸ್ವಯಂಸಿದ್ಧ ಮಹೂರ್ತಗಳು. ಈ ದಿನಗಳಲ್ಲಿ ಯಾವುದೇ ಕೆಲಸ ಪ್ರಾರಂಭ ಮಾಡಬಹುದು. ಈ ದಿನಗಳಲ್ಲಿ ಆದರೆ ಅದಕ್ಕೆ ಒಳ್ಳೆ ದಿನ, ಸರಿಯಾದ ಸಮಯ ನೋಡಬೇಕಿಲ್ಲ" ಎಂದು ಬಲವಾದ ನಂಬಿಕೆ.  ಯಾವುವು ಈ ದಿನಗಳು?

ಮೊದಲನೆಯದು ಉಗಾದಿ. ಎರಡನೆಯದು ಅಕ್ಷಯ ತೃತೀಯ. ಮೂರನೆಯದು ವಿಜಯದಶಮಿ. ಇವುಗಳ ಜೊತೆಗೆ ಬಲಿಪಾಡ್ಯಮಿಯಲ್ಲಿ ಮೊದಲ ಅರ್ಧ ದಿನ. ಮೂರೂವರೆ ದಿನ ಆಯಿತಲ್ಲ? 

*****

ಇದರಲ್ಲಿ "ಅಕ್ಷಯ ತೃತೀಯ" ವಿಶೇಷವೇನು? ಚತುರ್ಮುಖ ಬ್ರಹ್ಮದೇವರು ತಮ್ಮ ಸೃಷ್ಟಿಕಾರ್ಯ ಪ್ರಾರಂಭಿಸಿದ ದಿನ ಇದು. ಅವರ ಸೃಷ್ಟಿ ಕಾರ್ಯಕ್ಕಿಂತ ದೊಡ್ಡ ಕೆಲಸ ಮತ್ತೊಂದಿಲ್ಲ. ಅದು ಪ್ರಾರಂಭವಾದದ್ದು ಚೆನ್ನಾಗಿ ನಡೆದೇ ಇದೆ. ನಾವು ಏನೇ ಕೆಲಸ ಹೊಸದಾಗಿ ನಡೆಸಿದರೂ ಅದು ಸೃಷ್ಟಿಯ ಮಿತಿಯಲ್ಲಿ ತಾನೇ ಆಗುವುದು? ಆದ್ದರಿಂದ ಇದೊಂದು ಸ್ವಯಂಸಿದ್ಧ ಮಹೂರ್ತ. 

ಇದೇ ದಿನ "ಪರುಶುರಾಮ ಜಯಂತಿ". ಜೈನರ ಮೊದಲ ತೀರ್ಥಂಕರನಾದ ಋಷಭದೇವನು ತನ್ನ ಮರಿಮಗನಿಂದ ಆಹಾರ ಪಡೆದು ನಾಲ್ಕು ನೂರು ದಿನದ ಉಪವಾಸಡಾ ಕೊನೆ ಮಾಡಿದನೆಂದು ಇನ್ನೊಂದು ವಿಶೇಷ, ಹೀಗೆ ಮತ್ತೆ ಕೆಲವು.

ಇದರಲ್ಲಿ "ಅಕ್ಷಯ" ಅನ್ನುವುದರ ವಿಶೇಷ ಏನು? 

ಕಾಲವು ಎಂದೂ ನಿಲ್ಲದು. ಅದು ಚಲಿಸುತ್ತಲೇ ಇರುತ್ತದೆ. ಆದರೆ ಕೆಲವು ಪ್ರಕೃತಿ ವಿಶೇಷಗಳ ಕಾರಣ ಈ ಚಲಿಸುತ್ತಲೇ ಇರುವ ಸಮಯದಲ್ಲಿ ಕೆಲವು ಸಂಧಿಕಾಲಗಳು, ವಿಶೇಷ ಸಂದರ್ಭಗಳು ಒದಗುತ್ತವೆ. ಹುಣ್ಣಿಮೆ ಒಂದು ವಿಶೇಷ. ಅಂದು ಪೂರ್ಣ ಚಂದ್ರನಿದ್ದಾನೆ. ಅಮಾವಾಸ್ಯೆ ಒಂದು ವಿಶೇಷ. ಮಕರ ಸಂಕ್ರಾಂತಿ, ಕರ್ಕಾಟಕ ಸಂಕ್ರಾಂತಿ ವಿಶೇಷ ಕಾಲಗಳು. ಶ್ರಾದ್ಧಗಳ ದೃಷ್ಟಿಯಿಂದ "ಪಕ್ಷ ಮಾಸ' ಒಂದು ಪರ್ವ ಕಾಲ. ಇವೆಲ್ಲ ಸಾರ್ವತ್ರಿಕ ಪರ್ವ ಕಾಲಗಳು. 

ಇನ್ನು ಕೆಲವು ಪರ್ವ ಕಾಲಗಳು ವ್ಯಕ್ತಿಗತ. ನಾವು ಕಾಶಿಗೆ ಹೋದೆವು. ಬದರಿನಾಥಕ್ಕೆ ಹೋದೆವು. ರಾಮೇಶ್ವರಕ್ಕೆ ಹೋದೆವು. ಗಯಾದಲ್ಲಿ ಗದಾಧರನ ದರ್ಶನ ಮಾಡಲು ಹೋದೆವು. ಈ ರೀತಿ ಕ್ಷೇತ್ರಗಳ ದರ್ಶನಕ್ಕೆ ಹೋದದ್ದು. ಇದೇನು ನಾವು ಬೇಕೆಂದಾಗ್ಗೆ ಹೋಗುವಂಥದಲ್ಲ. ಆದ್ದರಿಂದ ನಮ್ಮ ಮಟ್ಟಿಗೆ ಇದು ಪರ್ವ ಕಾಲವೇ. ಆದ್ದರಿಂದ "ಕ್ಷೇತ್ರ ಶ್ರಾದ್ದ" ಎಂದು ಒಂದು ಪದ್ಧತಿ ಇದೆ. ಇಂತಹ ಕ್ಷೇತ್ರಗಳಿಗೆ ಹೋದಾಗ ಅಂದು ಪಿತೃ  ಶ್ರಾದ್ಧ ಮಾಡಬಹುದು. ಅದು ಯಾವ ದಿನವಾದರೂ ಪರವಾಗಿಲ್ಲ. ಹೀಗೆ.  

ಒಳ್ಳೆಯ ಕೆಲಸ ಯಾವಾಗ ಮಾಡಿದರೂ ಪುಣ್ಯ ಸಂಪಾದನೆಗೆ ದಾರಿ. ಪರ್ವ ಕಾಲಗಳಲ್ಲಿ ಮಾಡಿದರೆ ಅದಕ್ಕೆ ಅಧಿಕ ಪುಣ್ಯ.  ತಿಂಗಳಿಗೊಮ್ಮೆ ಬರುವ ಪರ್ವ ಕಾಲದಲ್ಲಿ ಹೆಚ್ಚು ಪುಣ್ಯ. ಆರು ತಿಂಗಳಿಗೊಮ್ಮೆ ಬರುವ ಪರ್ವಕಾಲದಲ್ಲಿ ಅದಕ್ಕಿಂತ ಹೆಚ್ಚು ಪುಣ್ಯ. ವರ್ಷಕ್ಕೊಮ್ಮೆ ಬರುವ ದಿನವಾದರೆ? ಗ್ರಹಣ-ಸಂಕ್ರಮಣಗಳಾದರೆ? ಇನ್ನೂ ಹೆಚ್ಚು ಪುಣ್ಯ.  ಹೀಗೆ ನಂಬಿಕೆ. 

ಚತುರ್ಮುಖ ಬ್ರಹ್ಮ ದೇವರು ಸೃಷ್ಟಿ ಕಾರ್ಯ ಪ್ರಾರಂಭ ಮಾಡಿದ ದಿನ ಒಂದು ದೊಡ್ಡ ವಿಶೇಷ. ಆದ್ದರಿಂದ ಅಂದು ಮಾಡಿದ ಪುಣ್ಯ ಕಾರ್ಯಗಳಿಗೆ, ದಾನ-ಧರ್ಮಗಳಿಗೆ, ಪರೋಪಕಾರಗಳಿಗೆ, ಅಶಕ್ತರು-ವೃದ್ಧರಿಗೆ ಮಾಡಿದ ಸಹಾಯ-ಒತ್ತಾಸೆಗೆ ಹೇಳಲಾಗದಷ್ಟು, ಅಕ್ಷಯ ಅನ್ನುವಷ್ಟು, ಕ್ಷಯವಾಗದಷ್ಟು, ಪುಣ್ಯ. ಆದ್ದರಿಂದ ಅಕ್ಷಯ ತೃತೀಯ ಬಹಳ ಶ್ರದ್ಧೆ-ಭಕ್ತಿಗಳಿಂದ ದಾನ ಮಾಡಬೇಕೆಂದು ವಿಶೇಷವಾಗಿ ಕಟ್ಟಲೆ. 

*****

"ನ ಕರ್ಮಣಾ, ನ ಪ್ರಜಾಯಾ, ನ ಧನೇನ, ತ್ಯಾಗೇನೈಕೇನ ಅಮೃತತ್ವಮಾನಶು:" ಎನ್ನುವುದು ಒಂದು ಶ್ರುತಿವಚನ. ಜೀವನ-ಮರಣ ಚಕ್ರದಿಂದ ಬಿಡುಗಡೆ ಸಿಗಬೇಕಾದರೆ ಕಾಮ್ಯಕರ್ಮಗಳಿಂದಲ್ಲ (ನಮಗೆ ಇವು ಬೇಕು ಎಂದು ಮಾಡುವ ಕೆಲಸಗಳು ಕಾಮ್ಯಕರ್ಮಗಳು), ಮಕ್ಕಳು ಮುಂತಾದ ಸಂತತಿಯಿಂದಲ್ಲ, ಧನ-ಕನಕಗಳಿಂದಲ್ಲ, ತ್ಯಾಗದಿಂದ ಮಾತ್ರ ಮುಕ್ತಿ ಸಿಗುತ್ತದೆ ಎಂದು ಇದರ ಅರ್ಥ. ನಮ್ಮ ಸಂಸ್ಕೃತಿಯಲ್ಲಿ ಪಡೆಯುವುದಕ್ಕಿಂತ ಕೊಡುವುದಕ್ಕೆ ಹೆಚ್ಚು ಬೆಲೆ. ದೊಡ್ಡ ಪುರಸ್ಕಾರ. "ಇದ್ದುದರಲ್ಲಿ ಜೀವನ ಮಾಡು. ಅಷ್ಟೇ ಅಲ್ಲ. ಇರುವುದರಲ್ಲಿಯೇ ಸ್ವಲ್ಪವನ್ನಾದರೂ ಬೇರೆಯವರಿಗೆ ಕೊಡು" ಅನ್ನುವುದು ಮೂಲಭೂತ ಸಿದ್ಧಾಂತ. 

ಅಕ್ಷಯ ತೃತೀಯ ಪರ್ವಕಾಲದಲ್ಲಿಯೂ ಅಷ್ಟೇ. ಕೊಡುವುದಕ್ಕೆ ಇದು ಅತ್ಯಂತ ಪ್ರಶಸ್ತವಾದ ಕಾಲ. ಇಂತಹ ಕಾಲ ಬರಲಿ ಎಂದು ಕಾತುರದಿಂದ ಕಾದುಕೊಂಡು ಕೊಡಬೇಕು. ಅದೇ ಅಕ್ಷಯ ತೃತೀಯದ ವೈಶಿಷ್ಟ್ಯ. 

*****

ಇದು "ಸೇಲ್ಸ್ ಮತ್ತು ಮಾರ್ಕೆಟಿಂಗ್" ಕಾಲ. ಪೀಟರ್ ಡ್ರಕರ್ ಎನ್ನುವ ಮ್ಯಾನೇಜ್ಮೆಂಟ್ ಗುರು ಹೇಳುತ್ತಾನೆ: "ಇನ್ನೋವೇಷನ್ ಮತ್ತು ಮಾರ್ಕೆಟಿಂಗ್" ಅನ್ನುವುದು ಯಾವುದೇ ವ್ಯವಹಾರ (ಬಿಸನೆಸ್ಸ್} ಸಫಲವಾಗಲು ಮೂಲ ಕಾರಣಗಳು ಎನ್ನುವ ಮಂತ್ರ. ಪ್ರತಿಯೊಂದಕ್ಕೂ ಒಂದು ಮಾರಾಟದ ತಂತ್ರ. ವರುಷದ ಪ್ರತಿ ದಿನವೂ ಒಂದೊಂದು ಆಚರಣೆ. ತಾಯಿಗೆ ಒಂದು ದಿನ. ತಂದೆಗೆ ಒಂದು ದಿನ. ಪ್ರೇಯಸಿಗೆ ಅಥವಾ ಪ್ರಿಯಕರನಿಗೆ ಒಂದು ದಿನ. ಕಂಡರೆ ಆಗದವರಿಗೆ ಒಂದು ದಿನ. (ಇದು ಇದೆ ಎಂದು ನಂಬಿಕೆ). ಹೀಗೆ. 

ಈಗಿನ ಮಾರಾಟಗಾರರು, ಅದರಲ್ಲೂ ಚಿನ್ನ-ವಜ್ರ ಮುಂತಾದುವುಗಳ ಮಾರಾಟಗಾರರು "ಅಕ್ಷಯ ತೃತೀಯ" ಪರ್ವಕಾಲವನ್ನು "ಹೈಜಾಕ್" ಮಾಡಿದ್ದಾರೆ. ಕೊಡುವುದರ ಬದಲು ಕೊಳ್ಳುವುದು ಮುಖ್ಯ ಮಾಡಿದ್ದಾರೆ. ಕೊಡುವುದು ಹಿಂದೆ ಉಳಿಯಿತು. ಈಗ ಕೊಳ್ಳುವುದು ಮುಖ್ಯ. ಅದರಲ್ಲೂ ಬೆಲೆ ಹೆಚ್ಚಿರುವ ಪದಾರ್ಥಗಳು. ಒಡವೆ-ಆಭರಣಗಳು. ಇತ್ಯಾದಿ. ಮೊದಲೇ ಹುಡುಕಿ, ಆರಿಸಿಟ್ಟು, ಬಿಲ್ ಮಾಡಿಸಿ, ದುಡ್ಡು ತೆತ್ತು ಈ ದಿನ ಮನೆಗೆ ತಂದರೆ ಅದು ಅಕ್ಷಯವಾಗುತ್ತದೆ ಅನ್ನುವ ಪ್ರಚಾರ. ತಂದ ಪದಾರ್ಥ ಮೈಮೇಲೆ ಧರಿಸುವಹಾಗಿಲ್ಲ. ಹಾಕಿಕೊಂಡರೆ ಜೀವಭಯ. ಪೆಟ್ಟಿಗೆಯಲ್ಲಿಟ್ಟರೆ ಕಳ್ಳ-ಕಾಕರ ಭಯ. ಅದಕ್ಕೆ ಬ್ಯಾಂಕಿನಲ್ಲಿ ಒಂದು ಲಾಕರ್. ಅದಕ್ಕೆ ವರ್ಷಕ್ಕೆ ಬಾಡಿಗೆ. ಅದರ ಬೀಗದಕೈ ಕೈಲಿ ಹಿಡಿದು ಸಂಭ್ರಮ! 

ಮಗುವಿನ ಜಾತಕ ಚೆನ್ನಾಗಿರಲಿ ಎಂದು ಗ್ರಹಗತಿ ಶೋಧಿಸಿ, ನೋಡಿಸಿ, ಮೊದಲೇ ಜನನದ ದಿನ, ಸಮಯ ನಿರ್ಧರಿಸಿ ಸಿಸೇರಿಯನ್ ಹೆರಿಗೆ ಮಾಡಿಸಿದಂತೆ. 

*****

ಕೊಡಬೇಕು ಅನ್ನುವ "ನ ಕರ್ಮಣಾ, ನ ಪ್ರಜಾಯಾ, ನ ಧನೇನ, ತ್ಯಾಗೇನೈಕೇನ ಅಮೃತತ್ವಮಾನಶು:" ಹಿಂದೆ ಹೋಯಿತು. ತರಬೇಕು ಅನ್ನುವ "ಇನ್ನೋವೇಷನ್ ಮತ್ತು ಮಾರ್ಕೆಟಿಂಗ್" ಮುಂದೆ ಬಂತು. 

ಭತ್ತ ಬೆಳೆಯುವವನಿಗೆ ಹುಲ್ಲು ತಾನಾಗಿಯೇ ಸಿಕ್ಕುತ್ತದೆ. ಕೇವಲ ಹುಲ್ಲು ಬೆಳೆಯುವವನಿಗೆ ಭತ್ತ ಸಿಗುವುದಿಲ್ಲ. ಮೋಕ್ಷ ಸಾಧಿಸುವವನಿಗೆ ಅರ್ಥ, ಕಾಮಗಳು ತಾವಾಗಿಯೇ ಸಿಗುತ್ತವೆ. ಈಗಿನ ಮಾರಾಟ ತಂತ್ರ ಇದನ್ನು ಪೂರ್ತಿ ಮರೆಸಿತು. 

ಮನೆಯಮುಂದೆ ಬಂದಿರುವ ಕಾಮಧೇನು ಬಳಿ ಅರ್ಧ ಲೀಟರ್ ಹಾಲು ಕೇಳಿದಂತಾಯಿತು. 

ಒಟ್ಟಿನಲ್ಲಿ "ಅಕ್ಷಯ ತೃತೀಯಾ"  ದಿನದ ವಿಶೇಷತೆ ಹಿಂದು-ಮುಂದಾಯಿತು. 

Sunday, April 27, 2025

ಅಚ್ಯುತ - ಅನಂತ - ಗೋವಿಂದ


"ವಿರಾಟ್ ಸೃಷ್ಟಿಯಲ್ಲಿ ಕೇಳಿಸುವ ಎಲ್ಲ ಶಬ್ದಗಳೂ ಪರಮಪುರುಷನನ್ನು ಕುರಿತಾಗಿವೆ ಮತ್ತು ಅವನ ಗುಣಗಳನ್ನೇ ಹೇಳುತ್ತವೆ" ಎನ್ನುವುದು ಶಾಸ್ತ್ರಾಧ್ಯಯನದಲ್ಲಿ ಕಲಿಯುವ ಒಂದು ಪ್ರಮೇಯ. ಹಾಗೆಯೇ ಪರಮಾತ್ಮನ ಸೃಷ್ಟಿಯಲ್ಲಿ ಇರುವ ಎಲ್ಲ ಶಬ್ದಗಳನ್ನೂ ಎರಡು ರೀತಿಯವು ಎಂದು ಜ್ಞಾನಿಗಳು ವಿಭಾಗ ಮಾಡಿದ್ದಾರೆ. "ವರ್ಣಾತ್ಮ್ಯಕ" ಮತ್ತು "ಧ್ವನ್ಯಾತ್ಮಕ" ಎಂಬುದಾಗಿ ಈ ಎರಡು ಪ್ರಭೇದಗಳು.


ನಾವು ಎಲ್ಲ ಬಗೆಯ ಶಬ್ದಗಳನ್ನೂ ಕೇಳಿ ತಿಳಿಯುವುದು ಶ್ರವಣೇಂದ್ರಿಯದಿಂದ. ನಮ್ಮ ಕಿವಿಗಳ ಸಹಾಯದಿಂದ. ಧ್ವನಿ ತರಂಗಗಳನ್ನು ಕಿವಿಗಳಿಂದ ಸ್ವೀಕರಿಸಿದ ನಂತರ ನಮ್ಮ ಮಿದುಳು ಅದನ್ನು ನಮಗೆ ಅರ್ಥ ಮಾಡಿಸುತ್ತದೆ. ವಿಜ್ಞಾನವೂ ಇದನ್ನೇ ಹೇಳುತ್ತದೆ. ನಾವು ಕೇಳುವ ಕೆಲವು ಶಬ್ದಗಳನ್ನು ವರ್ಣಮಾಲೆಯಲ್ಲಿರುವ ಅಕ್ಷರಗಳಿಂದ ಬರೆಯಬಹುದು. ಇವುಗಳನ್ನು "ವರ್ಣಾತ್ಮ್ಯಕ" ಶಬ್ದಗಳು ಎನ್ನುತ್ತಾರೆ. ನಾವು ಕೇಳುವ ಮತ್ತೆ ಕೆಲವು ಶಬ್ದಗಳನ್ನು ಅಕ್ಷರಗಳಲ್ಲಿ ಬರೆಯಲಾಗುವುದಿಲ್ಲ. ಉದಾಹರಣೆಗೆ ಘಂಟೆ, ಜಾಗಟೆ, ಸಿಡಿಲು ಮುಂತಾದುವುಗಳ ಶಬ್ದಗಳು. ಪ್ರಾಣಿ-ಪಕ್ಷಿಗಳು ಕೂಗುವ ಶಬ್ದಗಳು. ನದಿ-ಸಮುದ್ರಗಳು ಮಾಡುವ ಶಬ್ದಗಳು. ಘಂಟೆ "ಢಣ್" ಎಂದಿತು ಎಂದು ಹೇಳಿದರೂ ಎಲ್ಲ ಘಂಟೆಗಳೂ ಒಂದೇ ರೀತಿ ಶಬ್ದ ಮಾಡುವುದಿಲ್ಲ. ಒಂದು ಘಂಟೆ ಮಾಡಿದ ಶಬ್ದದಂತೆ ಮತ್ತೊಂದಿಲ್ಲ. ಹತ್ತು ಘಂಟೆಗಳು ಮಾಡುವ ಶಬ್ದ ವೈವಿಧ್ಯವನ್ನು ನಮ್ಮ ಇಂದ್ರಿಯಗಳು ಗುರುತಿಸಬಲ್ಲವು. ನದಿ ಜುಳು ಜುಳು ಎಂದು ಹರಿಯುತ್ತದೆ ಎಂದರೂ, ಒಮ್ಮೆ ಇದ್ದಂತೆ ಮತ್ತೊಮ್ಮೆ ಇಲ್ಲ. ನೀರು ಹರಿವು ಹೆಚ್ಚಿದ್ದಾಗಿನಂತೆ ನೀರು ಹರಿವು ಕಡಿಮೆ ಇದ್ದಾಗ ಇಲ್ಲ. ಇಂತಹ ಶಬ್ದಗಳನ್ನು "ಧ್ವನ್ಯಾತ್ಮಕ" ಶಬ್ದಗಳು ಎಂದು ಹೇಳುತ್ತಾರೆ. 

ನಮ್ಮ ಇಂದ್ರಿಯಗಳು ಒಂದು ನಿಗದಿತ ಪ್ರಮಾಣದ ಅಂತರದ ಆವರ್ತನ (ಫ್ರೀಕ್ವೆನ್ಸಿ) ಶಬ್ದಗಳನ್ನು ಮಾತ್ರ ಗ್ರಹಿಸಬಲ್ಲವು. ಆದರೆ ಸೃಷ್ಟಿಯಲ್ಲಿ ಇದನ್ನು ಮೀರಿದ ಶಬ್ದಗಳೂ ಇವೆ. ಇವನ್ನು ಇನ್ಫ್ರಾಸೌಂಡ್ ಮತ್ತು ಅಲ್ಟ್ರಾಸೌಂಡ್ ತರಂಗಗಳು ಅನ್ನುತ್ತಾರೆ. ಅನೇಕ ವೈದ್ಯಕೀಯ ಮತ್ತು ತಾಂತ್ರಿಕ ಬೆಳವಣಿಗಳಲ್ಲಿ ಈ ಶಬ್ದಗಳ ಉಪಯೋಗವನ್ನೂ ಮಾಡುತ್ತಾರೆ. 

*****

ನಮ್ಮ ಸಂಪ್ರದಾಯದಂತೆ ಮತ್ತು ನಡವಳಿಕೆಯಲ್ಲಿ ಬಂದಿರುವ ಅಭ್ಯಾಸದಂತೆ ಯಾರನ್ನಾದರೂ ನೋಡಲು ಹೋಗುವಾಗ ಬರಿಗೈಲಿ ಹೋಗುವುದಿಲ್ಲ. ನಮ್ಮ ಮನೆಗೆ ಯಾರಾದರೂ ಬಂದಾಗಲೂ ಅವರನ್ನು ಬರಿಗೈಲಿ ಕಳಿಸುವುದಿಲ್ಲ. ಸಮಾರಂಭಗಳಿಗೆ ಹೋದಾಗಲೂ ಅಷ್ಟೇ. "ಬರಿಗೈಲಿ ಹೇಗೆ ಹೋಗುವುದು?" ಎಂದು ಚಿಂತಿಸುತ್ತೇವೆ. ನಮ್ಮ ಸಮಾರಂಭಗಳಿಗೆ ಬೇರೆಯ ಅತಿಥಿ-ಅಭ್ಯಾಗತರು ಬಂದಾಗಲೂ ಅಷ್ಟೇ. "ಬಂದವರನ್ನು ಹಾಗೆಯೇ ಕಳಿಸಿದೆವಲ್ಲ" ಎಂದು ಬೇಸರಿಸುತ್ತೇವೆ. ಈ ರೀತಿ ಏನಾದರೂ ಕೊಡುವ ನಡಾವಳಿ ಹಾಸು-ಹೊಕ್ಕಾಗಿ ಬಂದಿದೆ. ವಿದೇಶಗಳಲ್ಲೂ ಅಷ್ಟೇ. ಒಂದು ಚಾಕೊಲೇಟ್ ಅಥವಾ ಒಂದು ವೈನ್ ಬಾಟಲು ಅಥವಾ ಹೂಗುಚ್ಛ ಇತ್ಯಾದಿ ತರುತ್ತಾರೆ. ಅವರವರ ದೇಶ-ಕಾಲಗಳ ಅನುಗುಣವಾಗಿ ಈ ವ್ಯವಸ್ಥೆ ನಡೆಯುತ್ತಾ ಬಂದಿದೆ. 

ನಾವು ಯಾರಿಗಾದರೂ ಏನನ್ನಾದರೂ ಕೊಡುವಾಗ ಅದರ ಬಗ್ಗೆ  ಸ್ವಲ್ಪ ಯೋಚಿಸುವುದು ಸಹಜ. ಯಾವುದಾರೂ ಪದಾರ್ಥ ಕೊಡುವ ಮುಂಚೆ ಮುಖ್ಯವಾಗಿ ಮೂರು ಅಂಶಗಳನ್ನು ಗಮನಿಸುತ್ತೇವೆ:
  • ಕೊಡುವ ಪದಾರ್ಥವು ಒಳ್ಳೆಯ ಗುಣಮಟ್ಟದ್ದು ಮತ್ತು ಚೆನ್ನಾಗಿ ಇರಬೇಕು. ಅದರಲ್ಲಿ ಯಾವುದೇ ನ್ಯೂನತೆ ಅಥವಾ ಕಡಿಮೆ ಇರಬಾರದು.  ಹಣ್ಣು ಕೊಟ್ಟರೆ ಅದು ನೋಡಲು ಚೆನ್ನಾಗಿರಬೇಕು. ಸಿಹಿಯಾಗಿದೆ ಎಂದು ಗೊತ್ತಾದರೆ ಇನ್ನೂ ಒಳ್ಳೆಯದು. ತಿಂಡಿ ಕೊಟ್ಟರೆ ಅದು ಶುಚಿ-ರುಚಿಯಾಗಿರಬೇಕು. ಬಟ್ಟೆ ಕೊಟ್ಟರೆ ಅದು ನೋಡಲು ಚೆನ್ನಾಗಿದ್ದು ಕೊಳೆ-ಕಲೆ ಇರಬಾರದು. ಹೀಗೆ ಪ್ರತಿ ವಸ್ತುವೂ ಕೆಲವು ಗುಣಗಳನ್ನು ಹೊಂದಿರಬೇಕು ಮತ್ತು ಅವುಗಳಲ್ಲಿ ಏನೂ ಕಳಪೆ ಅಥವಾ ಚ್ಯುತಿ ಇರಬಾರದು. 
  • ಕೊಡುವ ಪದಾರ್ಥವು ಹೆಚ್ಚಿದ್ದಷ್ಟೂ ಒಳ್ಳೆಯದು. ಕೆಲವು ಗಾತ್ರದಲ್ಲಿ ದೊಡ್ಡದಿರಬೇಕು. ಮತ್ತೆ ಕೆಲವು ಮೌಲ್ಯ ಅಥವಾ ಬೆಲೆಯಲ್ಲಿ ಹೆಚ್ಚಿರಬೇಕು. ಬಟ್ಟೆ ಕೊಟ್ಟರೆ ಅಳತೆ ಸರಿಯಾಗಿರಬೇಕು. ದೂರ ಪ್ರಯಾಣ ಮಾಡುವವರಿಗೆ ಕೊಟ್ಟರೆ ಪ್ಯಾಕಿಂಗ್ ಚೆನ್ನಾಗಿರಬೇಕು. ಮತ್ತೆ ಕೆಲವು ತೆಗೆದು ಕೊಳ್ಳುವವರ ಯೋಗ್ಯತೆಗೆ ಅನುಗುಣವಾಗಿರಬೇಕು. ಹೀಗೆಯೇ ಯೋಚಿಸಿ ಹುಡುಕಿ ಆರಿಸುವುದು, 
  • ಕೊಡುವ ಪದಾರ್ಥ ಸರಿಯಾದವರಿಗೆ ಸೇರಬೇಕು. ನಾವು ಕೊಡಬೇಕು ಎಂದು ಉದ್ದೇಶಿಸಿದ್ದು ಒಬ್ಬರಿಗೆ; ಅದು ತಲುಪಿದುದು ಇನ್ನೊಬ್ಬರಿಗೆ. ಹೀಗಾಗಬಾರದು. ಅನೇಕ ಸಮಾರಂಭಗಳಲ್ಲಿ ಯಾರಿಗೆ ಕೊಡಬೇಕು ಎಂದು ತೀರ್ಮಾನಿಸಿ, ಅದನ್ನು ಒಂದು ಪ್ಯಾಕೆಟ್ನಲ್ಲಿ ಹಾಕಿ ಹೆಸರೂ ಕೂಡ ಬರೆದಿಡುವುದಿದೆ. ಹೀಗಿದ್ದೂ ಹೆಚ್ಚು-ಕಡಿಮೆ ಆಗಿ ಗೈರುವಿಲೆ ಆಗಿರುವುದೂ ನಮ್ಮ ಅನುಭವದ ಮಾತೇ. ಆದ್ದರಿಂದ ಸರಿಯಾದವರಿಗೆ ಪದಾರ್ಥ ತಲುಪಿತು ಎಂದು ಖಚಿತವಾಗಬೇಕು. 
ಹೀಗೆ ಕೊಟ್ಟ ಪದಾರ್ಥದ ಗುಣಮಟ್ಟ, ಅದರ ಪ್ರಮಾಣ ಮತ್ತು ತಲುಪಬೇಕಾದವರ ವಿಳಾಸ, ಈ ಮೂರು ಅಂಶಗಳು ಬಹಳ ಮುಖ್ಯವಾಗುತ್ತವೆ. 

*****

ಲೋಕಾರೂಢಿಯಲ್ಲಿ ಕೊಡುವ ಪದಾರ್ಥಗಳ ವಿಷಯದಲ್ಲೇ ಇಷ್ಟು ಅಳೆದು-ಸುರಿದು ಕೊಡುವುದಾದರೆ ನಾವು ನಂಬಿದ ದೈವಕ್ಕೆ, ಆ ಪರಮಪುರುಷನಿಗೆ ಕೊಡುವಾಗ ಈ ಎಚ್ಚರ ಇರಲೇಬೇಕಲ್ಲವೇ?  ಆದ್ದರಿಂದ ನಾವು ಮಾಡುವ ಪೂಜೆ-ಪುನಸ್ಕಾರಗಳ ವಿಷಯದಲ್ಲೂ ಆದಷ್ಟೂ ಎಚ್ಚರ ವಹಿಸುತ್ತೇವೆ. ಪ್ರತಿಯೊಂದು ಪದಾರ್ಥ ಆರಿಸುವುದರಲ್ಲೂ ಹೆಚ್ಚಿನ ಗಮನ ಕೊಡುತ್ತೇವೆ. ಶ್ರದ್ದೆ ಇದ್ದಷ್ಟೂ ಒಳ್ಳೆಯದು ಎನ್ನುತ್ತೇವೆ. ಆ ಪರಮಾತ್ಮನಿಗೆ ನಾವು ಏನು ಕೊಟ್ಟೆವು? ಎಲ್ಲವೂ ಅವನು ಸೃಷ್ಟಿಸಿ ಕೊಟ್ಟಿರುವುದೇ. ಅವನು ಕೊಟ್ಟಿದ್ದು ಅವನ ಮುಂದೆ ಇಟ್ಟು ಕೈ ಮುಗಿಯುವುದೇ ಅಲ್ಲವೇ?

ಮೊದಲು ಗುಣಮಟ್ಟದ ವಿಷಯ ನೋಡೋಣ. ನಾವು ಎಷ್ಟು ಜಾಗರೂಕರಾಗಿದ್ದರೂ ವ್ಯತ್ಯಾಸ ಆಗೇ ಆಗುತ್ತದೆ. ಮೊದಲಿಗೆ ನಮ್ಮಲ್ಲೇ ಏನಾದರೂ ನ್ಯೂನತೆ ಇರಬಹುದು. ಕಾರ್ಯ ಮಾಡುವ ಸ್ಥಳ ಎಷ್ಟೇ ಶುಚಿ ಮಾಡಿದ್ದರೂ ಅದು ಪೂರ್ತಿ ಶುದ್ದವಾಗಿದೆ ಎಂದು ಎದೆ ತಟ್ಟಿ ಹೇಳುವಂತಿಲ್ಲ. ಪಾತ್ರೆ-ಪಡಗ ಎಷ್ಟು ತೊಳೆದಿದ್ದರೂ ಎಲ್ಲೋ ಒಂದು ಮೂಲೆಯಲ್ಲಿ ಸ್ವಲ್ಪ ಕಂಡೂಕಾಣದಂತೆ ಕೊಳೆ ಇರಬಹುದು. ನೈವೇದ್ಯಕ್ಕೆ ಮಾಡಿದ ಅಡಿಗೆಯಲ್ಲಿ ವ್ಯತ್ಯಾಸ ಇರಬಹುದು. ಬೆಂದಿರುವುದು ಕಡಿಮೆ ಇರಬಹುದು. ಸ್ವಲ್ಪ ತಳ ಹತ್ತಿರಬಹುದು. ಉಪ್ಪು-ಖಾರ ಹೆಚ್ಚು-ಕಡಿಮೆ ಇರಬಹುದು. ಇಡೇ ರೀತಿ ಪ್ರತಿ ಸಾಮಾನು-ಸಲಕರಣೆಯಲ್ಲಿ ಹೆಚ್ಚು-ಕಡಿಮೆ ಇರಬಹುದು. ಈ ಕಾರಣಕ್ಕಾಗಿಯೇ ಶ್ರಾದಾದಿಗಳಲ್ಲಿ ಎಲ್ಲ ತಯಾರಿ ಮಾಡಿಕೊಂಡು ಮುಖ್ಯ ಕೆಲಸ ಪ್ರಾರಂಭ ಮಾಡುವ ಮುನ್ನ ಈ ರೀತಿ ಹೇಳುತ್ತೇವೆ:

"ಆದೌ ಆತ್ಮ, ಸ್ಥಳ, ಭಾಂಡ,  ಭಾಜನ, ಕರ್ತೃ, ಭೋಕ್ಟ್ರು, ಹವಿದ್ರವ್ಯ ಶುಧ್ಯರ್ಥಂ 
ಕಾಲಾತೀತ ದೋಷ ಪ್ರಾಯಶ್ಚಿತ್ತಾರ್ಥಮ್ ವೈಶ್ವದೇವ ಸೂಕ್ತ ಮಂತ್ರ ಪಠನಂ ಕರಿಷ್ಯೇ" 

ಬೇರೆ ಕಾರ್ಯಗಳಲ್ಲೂ ಹೀಗೆ ಅವಕ್ಕೆ ಸರಿಯಾದ ಪ್ರಾರ್ಥನೆ ಮಾಡಿ ನಂತರ ಕೆಲಸ ಪ್ರಾರಂಭಿಸುತ್ತೇವೆ. ಇಷ್ಟಿದ್ದರೂ ಎಲ್ಲಾ ಸರಿಯಿದೆ ಎಂದು ಹೇಳಲು ಬರುವುದಿಲ್ಲ. ಇದನ್ನು ಸರಿಮಾಡುವುದು ಹೇಗೆ?

ಎರಡನೆಯದು ಪದಾರ್ಥ ಅಥವಾ ಮಾಡಿದ ಕೆಲಸದ ಮೌಲ್ಯ. ಇಡೀ ವಿಶ್ವವನ್ನೇ ತನ್ನ ಹೊಟ್ಟೆಯ ಒಂದು ಮೂಲೆಯಲ್ಲಿ ಧರಿಸಿರುವ ಪರಮಾತ್ಮನ ಯೋಗ್ಯತೆಗೆ ತಕ್ಕಂತೆ ನಾವು ಕೊಡುವುದನ್ನು ಯೋಚಿಸಲೂ ಸಾಧ್ಯವಿಲ್ಲ. "ಅಂಧಕಾಸುರನ ಹೊಟ್ಟೆಗೆ ಅರಕಾಸು ಮಜ್ಜಿಗೆ" ಎಂದೊಂದು ಗಾದೆ. ನಮ್ಮ ಪರಮಾತ್ಮನಿಗೆ ಮಾಡುವ ಸಮರ್ಪಣೆಗಳು ಇದಕ್ಕಿಂತ ಎಷ್ಟೂ ಪಾಲು ಕಡಿಮೆಯೇ. ನಾವು ಕೊಡುವ ಈ ಚಿಕ್ಕದ್ದನ್ನು ದೊಡ್ಡದು ಮಾಡುವುದು ಹೇಗೆ? 

ಗುಣಮಟ್ಟ ಮತ್ತು ಮೌಲ್ಯದ ವಿಷಯ ಹೀಗೆ. ತಲುಪಿಸುವ ವಿಳಾಸದ ಕಥೆ ಏನು? ಎಲ್ಲ ಶಬ್ದಗಳು, ಧ್ವನ್ಯಾತ್ಮಕವಿರಲಿ ಅಥವಾ ವರ್ಣಾತ್ಮ್ಯಕವಿರಲಿ, ಅವನನ್ನೇ ಕುರಿತು ಹೇಳುತ್ತವೆ ಅಂದ ಮೇಲೆ ಅವನ ಅನಂತ ನಾಮಗಳಲ್ಲಿ ಯಾವುದನ್ನು ವಿಳಾಸವಾಗಿ ಉಪಯೋಗಿಸಬೇಕು? 

ಈಗ ಮೂರು ಪ್ರಶ್ನೆಗಳು ನಮ್ಮ ಮುಂದೆ ನಿಂತವು. ಮೊದಲು ಹೇಗಾದರೂ ಮಾಡಿ ಸಮರ್ಪಣ ಮಾಡುವ ಪದಾರ್ಥ-ಕೆಲಸಗಳು ಎಲ್ಲ ನ್ಯೂನತೆಗಳಿಂದ ಹೊರಬರಬೇಕು. ಎರಡನೆಯದು ಅವುಗಳ ಮೌಲ್ಯ ಹೆಚ್ಚಾಗಿ ಪರಮಾತ್ಮನ ಯೋಗ್ಯತೆಗೆ ಸರಿಹೊಂದಬೇಕು. ಕಡೆಯದಾಗಿ ಅವೆಲ್ಲಾ ಅವನಿಗೇ ತಲುಪಬೇಕು. ಇದು ಹೇಗೆ ಸಾಧ್ಯ? 

*****

ಪರಮಾತ್ಮನ ಅನಂತ ಹೆಸರುಗಳಲ್ಲಿ "ಅಚ್ಯುತ" ಅನ್ನುವುದೂ ಒಂದು. ಏನಿದರ ಅರ್ಥ? ಏನೂ ಕುಂದು-ಕೊರತೆಗಳಿಲ್ಲದವನು, ಓರೆ-ಕೋರೆಗಳಿಲ್ಲದವನು, ಪರಿಪೂರ್ಣನು, ಚ್ಯುತಿ ಇಲ್ಲದವನು ಅಚ್ಯುತನು. ನಾವು ಅರ್ಪಿಸುವುದರಲ್ಲಿ ಇರುವ ಕೊರತೆಗಳನ್ನು, ಚ್ಯುತಿಗಳನ್ನು ತೆಗೆದು ಅದನ್ನು ಸರಿಮಾಡುವ ಶಕ್ತಿ ಅವನೊಬ್ಬನಿಗೆ ಇದೆ. ಆದ್ದರಿಂದ ಆ ಅಚ್ಯುತನನ್ನೇ "ಇವನ್ನು ಸರಿಮಾಡಪ್ಪಾ" ಎಂದು ಕೇಳಿಕೊಳ್ಳಬೇಕು!

ಕೊಟ್ಟ ಪದಾರ್ಥ ಅಥವಾ ಸಾಧನೆ ಅತ್ಯಲ್ಪ. ಇದನ್ನು ಅವನಿಗೆ ಯೋಗ್ಯ ಮಾಡುವುವು ಹೇಗೆ? ಅವನು ಅನಂತನು. ಅನಂತನಿಗೆ ತಕ್ಕುದಾದದ್ದು ಅನಂತವೇ. ಆದ್ದರಿಂದ "ಈ ಅಲ್ಪವನ್ನು ಅನಂತ ಮಾಡಪ್ಪಾ" ಎಂದು ಆ ಅನಂತನನ್ನೇ ಕೇಳುವುದು! 

ಇನ್ನು ವಿಳಾಸದ ವಿಚಾರ. ಎಲ್ಲೆಲ್ಲೂ ವ್ಯಾಪಿಸಿರುವವನು ಅವನು. ಇಡೀ ವಿಶ್ವವನ್ನು ಸೃಷ್ಟಿಸಿ ಅದರೊಳಗೆ ಪ್ರವೇಶ ಮಾಡಿದವನು ಅವನು. ಅಷ್ಟು ಮಾತ್ರವಲ್ಲ. ಅದರ ಒಳಗೆ ಪ್ರವೇಶ ಮಾಡಿದರೂ ಅದರ ಹೊರಗೂ ಇದ್ದಾನೆ. ಅದಕ್ಕೆ ಅವನನ್ನು "ಗೋವಿಂದ" ಎನ್ನುವುದು. (ಇದರ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ). ಆದ ಕಾರಣ ಇದನ್ನು ಆ ಗೋವಿಂದನ ವಿಳಾಸಕ್ಕೆ ಕಳಿಸುವುದು!

ಮೂರು ಸಮಾಸ್ಯೆಗಳಿಗೂ ಪರಿಹಾರ ಒದಗಿದಂತೆ ಆಯಿತಲ್ಲ!

******

ಈ ಕಾರಣಕ್ಕಾಗಿಯೇ ಎಲ್ಲ ರೀತಿಯ ಅಲ್ಪ ಸಾಧನೆಗಳನ್ನು ಅವನಿಗೆ ಅರ್ಪಿಸುವಾಗ ಅವನ ಲೆಕ್ಕವಿಲ್ಲದಷ್ಟು ಹೆಸರುಗಳಲ್ಲಿ ಈ ಮೂರನ್ನು ಆರಿಸಿ, ಎಲ್ಲಾ ರೀತಿಯ ಲೋಪ-ದೋಷಗಳನ್ನು ನಿವಾರಿಸಿ ಈ ಕಾರ್ಯವನ್ನು ಸಾರ್ಥಕ ಮಾಡು ಎಂದು ಬೇಡುತ್ತಾ ಹೀಗೆ ಹೇಳುವುದು:

ಅಚ್ಯುತಾಯ ನಮಃ 
ಅನಂತಾಯ ನಮಃ 
ಗೋವಿಂದಾಯ ನಮಃ 
ಅಚ್ಯುತ-ಅನಂತ-ಗೋವಿಂದೇಭ್ಯೋ ನಮಃ 

ಇದನ್ನೇ ಮೂರು ಸಾರಿ ಹೇಳುವ ಪದ್ಧತಿ ಉಂಟು. ಮೂರು ಸಾರಿ ಏಕೆ? ವಾಸ್ತವವಾಗಿ ಒಂದೇ ಸಲ ಸಾಕು. ಆದರೆ ನಮ್ಮ ಕೋತಿ ಮನಸ್ಸು ಅಲ್ಲಿ ಇಲ್ಲಿ ಹರಿದಾಡುತ್ತಿರುತ್ತಡೆ. ಆದ್ದರಿಂದ ಮೂರು ಸಲ ಹೇಳಿದರೆ ಒಂದು ಸಲವಾದರೂ ಈ ಅನುಸಂಧಾನ ಬರಬಹುದು ಅನ್ನುವ ಉದ್ದೇಶದಿಂದ ಹಾಗೆ ಮಾಡುವುದು. 

Friday, April 25, 2025

ಪಿಷ್ಟ ಪೇಷಣ ಮತ್ತು ತೌಡು ಕುಟ್ಟುವುದು

ಸ್ವಲ್ಪ ದಿನಗಳ ಹಿಂದೆ "ಚರ್ವಿತ ಚರ್ವಣ" ಎಂಬ ಶೀರ್ಷಿಕೆಯಲ್ಲಿ ಶ್ರೀಮದ್ ಭಾಗವತ ಪುರಾಣದ ಏಳನೆಯ ಸ್ಕಂಧದಲ್ಲಿ ವರ್ಣಿತವಾದ ಹಿರಣ್ಯ ಕಷಿಪು ಮತ್ತು ಬಾಲಕ ಪ್ರಹ್ಲಾದನ ನಡುವೆ ನಡೆದ ಸಂಭಾಷಣೆಯಲ್ಲಿ "ಚರ್ವಿತ ಚರ್ವಣ" ಎಂಬುದರ ಪ್ರಯೋಗ ಮತ್ತು ಈಗಿನ ಭಾಷೆಯಲ್ಲಿ ಅದನ್ನು ಹೇಗೆ ಉಪಯೋಗಿಸುತ್ತೇವೆ ಎಂದು ನೋಡಿದೆವು. ಇದರ ವಿವರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 


ಚರ್ವಿತ ಚರ್ವಣ ಅನ್ನುವುದರ ಜೊತೆಯಲ್ಲಿ "ಪಿಷ್ಟ ಪೇಷಣ" ಅನ್ನುವ ಪ್ರಯೋಗವೂ ಉಂಟು. ಚರ್ವಿತ ಚರ್ವಣ ಆಗಲೇ ದೀರ್ಘವಾಗಿದ್ದರಿಂದ ಅದನ್ನು ಅಲ್ಲಿ ಸೇರಿಸಲಿಲ್ಲ. ಮಾನ್ಯ ಸ್ನೇಹಿತರೊಬ್ಬರು ಕನ್ನಡ ಆಡು ಭಾಷೆಯ "ತೌದು ಕುಟ್ಟುವುದು" ಅನ್ನುವುದನ್ನೂ ನೆನಪು ಮಾಡಿದರು. ಚರ್ವಿತ ಚರ್ವಣ ಅನ್ನುವುದರ ಜೊತೆ ಈ ಎರಡು ಪ್ರಯೋಗಗಳನ್ನೂ ಈಗಲೂ ಮಾಡುವುದು, ಮತ್ತು ಅದರಲ್ಲಿಯೂ ಬರವಣಿಗೆಯಲ್ಲಿ ಹೆಚ್ಚಾಗಿ, ಮಾಡುವುದು, ನಡೆದಿದೆ. 

ಇವೆರಡರ  ಅರ್ಥ ಮತ್ತು ಪ್ರಯೋಗವನ್ನು ಈ ಸಂಚಿಕೆಯಲ್ಲಿ ನೋಡೋಣ. 

***** 


ಈಗ್ಗೆ ಸುಮಾರು ಐವತ್ತು ವರುಷಗಳ ಹಿಂದಿನ ಸಮಯ. ಆಗ ಇನ್ನೂ ಮೊಬೈಲ್ ಫೋನ್ ಎನ್ನುವ ಕಲ್ಪನೆಯೂ ಇರಲಿಲ್ಲ. ಲ್ಯಾಂಡ್ ಲೈನ್ ದೂರವಾಣಿ ಇದ್ದವರೂ ಕಡಿಮೆಯೇ. ಯಾರದ್ದಾದರೂ ಫೋನ್ ನಂಬರ್ ಬೇಕಾಗಿದ್ದರೆ "ಟೆಲಿಫೋನ್ ಡೈರೆಕ್ಟರಿ" ತೆಗೆದು ಹುಡುಕಬೇಕಾಗಿತ್ತು. ದೊಡ್ಡ ಪಟ್ಟಣಗಳಲ್ಲಿ ಮೂರು ನಾಲ್ಕು ದೊಡ್ಡ ಪುಸ್ತಗಳ ಡೈರೆಕ್ಟರಿಗಳು. ಅದರಲ್ಲಿ "ಹಳದಿ ಹಾಳೆಗಳು" (ಯಲ್ಲೋ ಪೇಜಸ್) ಬೇರೆ. ವಾಣಿಜ್ಯ ಸಂಸ್ಥೆಗಳು ಈ ಹಳದಿ ಹಾಳೆಗಳ ಮೇಲೆ ತಮ್ಮ ನಂಬರುಗಳು ಬರುವ ಕಡೆ ತಮ್ಮ ತಮ್ಮ ಜಾಹೀರಾತು (ಅಡ್ವರ್ಟೈಸ್ಮೆಂಟ್) ಹಾಕುತ್ತಿದ್ದರು. ಒಂದೆಡೆಯಿಂದ ಇನ್ನೊಂದೆಡೆಗೆ ಸರಕು-ಸಾಮಾನು ಸಾಗಿಸುವ ಸಂಸ್ಥೆಯೊಂದು ಇಂತಹ ಒಂದು ಜಾಹೀರಾತು ಹಾಕಿತ್ತು. "ನಾವು ಪ್ರಪಂಚದ ಎರಡನೇ ಶ್ರೇಷ್ಠ ಸಾಮಾನು ಪ್ಯಾಕರ್ ಸಂಸ್ಥೆ" ಎಂದು ಅದರ ಜಾಹೀರಾತು!  ಅದನ್ನು ನೋಡಿದವನಿಗೆ ಮೊದಲನೆಯ ಶ್ರೇಷ್ಠ ಪ್ಯಾಕರ್ ಯಾರು ಎಂದು ಕುತೂಹಲ ಹುಟ್ಟಬೇಕು. ಜಾಹೀರಾತಿನ ಜೊತೆ ಒಂದು ಚಿತ್ರ. ಒಂದು ದಾಳಿಂಬೆ ಹಣ್ಣು ಅಥವಾ ಒಂದು ಹಲಸಿನ ಹಣ್ಣು ಇತ್ಯಾದಿ ಹಣ್ಣುಗಳನ್ನು ಮಧ್ಯೆ ಕತ್ತರಿಸಿರುವಂತೆ ಕಾಣುವಂತೆ ಇರುವ ಚಿತ್ರ. ಅವನ್ನು ಪ್ಯಾಕ್ ಮಾಡಿದವನು ಸೃಷ್ಟಿಕರ್ತ. ಅವನೇ ಮೊದಲನೆಯ ಶ್ರೇಷ್ಠ ಪ್ಯಾಕರ್. ಅವನಿಗಿಂತ ಉತ್ತಮನಾದ ಪ್ಯಾಕರ್ ಇನ್ನೊಬ್ಬನಿಲ್ಲ. ಅವನನ್ನು ಬಿಟ್ಟರೆ ನಾವೇ ಶ್ರೇಷ್ಠ ಪ್ಯಾಕರ್ ಅಂಡ್ ಮೂವರ್ಸ್ ಎಂದು ಅದರ ಅಂತರಾರ್ಥ! 

ತನ್ನ ಸೃಷ್ಟಿಯಲ್ಲಿ ಅನೇಕ ಧಾನ್ಯಗಳನ್ನು ಅವನು ನಮಗೆ ಕೊಟ್ಟಿದ್ದಾನೆ. ಅದರ ಪ್ಯಾಕಿಂಗ್ ಹೇಗೆ? ಸಸಿಯಲ್ಲಿ ಒಂದು ತೆನೆ. ಆ ತೆನೆಯಲ್ಲಿ ಹೊರಗಿನ ಹೊದ್ದಿಕೆಯ ಒಳಗೆ ಧಾನ್ಯ. ಭತ್ತ,  ಗೋಧಿ, ರಾಗಿ, ಜೋಳ ಇತ್ಯಾದಿ ಧಾನ್ಯಗಳನ್ನು ಹೊಲಗಳಲ್ಲಿ ನೋಡಿದವರಿಗೆ ಇದು ಗೊತ್ತು. ಮೊದಲು ತೆನೆ ಬೇರ್ಪಡಿಸಿ, ನಂತರ ಧಾನ್ಯ ಹೊರತೆಗೆದುಕೊಳ್ಳಬೇಕು. ಅದ್ಕಕೆ ಸಂಸ್ಕಾರಗಳಿವೆ. ಕತ್ತರಿಸು, ಬಡಿ, ಕೇರು, ತೂರು ಮುಂತಾದವು. ಭತ್ತವನ್ನೇ ತೆಗೆದುಕೊಳ್ಳೋಣ. ಹೀಗೆ ಮಾಡಿದಮೇಲೆ ಭತ್ತ ಸಿಕ್ಕಿತು. ಅದನ್ನೇ ತಿನ್ನುವಹಾಗಿಲ್ಲ. ಅದರ ಹೊರಗಿನ ಪದರ ಬೇರ್ಪಡಿಸಿದಮೇಲೆ ಅಕ್ಕಿ ಸಿಗುತ್ತದೆ. ಅದನ್ನು ನೀರಿನಲ್ಲಿ ನೆನೆಸಿ, ಬೇಯಿಸಿ ತಿನ್ನಬಹುದು. ನೀರಿನಲ್ಲಿ ಬೇಯಿಸಿದರೆ ಅನ್ನ ಆಯಿತು. "ಪರಮಾನ್ನ" ಎಂದೊಂದು ಪದವಿದೆ. ಏನದು ಪರಮಾನ್ನ? ಬಹಳ ಜನ "ಪಾಯಸ" ಅಂತ ಅರ್ಥ ಮಾಡುತ್ತಾರೆ.  ಪರಮಾನ್ನ ಅಂದರೆ ಹಾಲಿನಲ್ಲಿ ಬೇಯಿಸಿ ಮಾಡಿದ ಅನ್ನ. "ಪಂಚಭಕ್ಷ-ಪರಮಾನ್ನ" ಆನ್ನುವಾಗ ಹೇಳುವುದು ಹಾಲಿನಲ್ಲಿ ಬೇಯಿಸಿ ಮಾಡಿದ ಅನ್ನವನ್ನು. (ಎಸ. ಎಲ್. ಭೈರಪ್ಪನವರ "ಪರ್ವ" ಕಾದಂಬರಿಯಲ್ಲಿ ಈ ಪರಮಾನ್ನದ ಮಾತು ಅನೇಕ ಕಡೆ ಬಂದಿದೆ). ಅಕ್ಕಿ-ಕಡಲೆಬೇಳೆ ಪಾಯಸಕ್ಕೆ ಪರಮಾನ್ನ ಎಂದು ಕೆಲವರು ಹೇಳುವುದುಂಟು. 

ಭತ್ತದಿಂದ ಅಕ್ಕಿ ಬೇರ್ಪಡಿಸಬೇಕಾದರೆ ಭತ್ತ ಕುಟ್ಟುತ್ತಿದ್ದರು. ಭತ್ತವನ್ನು ಒರಳಲ್ಲಿ ಹಾಕಿ, ಇಬ್ಬರು ಒನಕೆ ಹಿಡಿದು ಸರದಿಯ ಮೇಲೆ ತಾಳ ಹಾಕಿದಂತೆ ಏಟುಗಳು ಹಾಕುತ್ತಿದ್ದರು. ಇದಕ್ಕಿಂತ ವ್ಯಾಯಾಮ ಬೇಕಿಲ್ಲ, (ಹೀಗೆ ಭತ್ತ ಕುಟ್ಟಿಯೇ ಚಿತ್ರದುರ್ಗದ ಒನಕೆ ಓಬವ್ವನ ರಟ್ಟೆಯಲ್ಲಿ ಹೈದರ್ ಅಲಿಯ ಸೈನಿಕರ ಹೆಣಗಳ ರಾಶಿ ಹಾಕುವ ಶಕ್ತಿ ಬಂದಿರಬೇಕು. ಒಂದು ಏಟಿಗೆ ಒಂದು ತಲೆ. ಹೀಗಿರಬೇಕು ಹೊಡೆತ). ಕುಟ್ಟಿದ ನಂತರ ಬಿದಿರಿನ ಮೊರಗಳಲ್ಲಿ ಕೇರಿ ಅಕ್ಕಿ ಮತ್ತು ತೌಡು (ಹೊಟ್ಟು) ಬೇರ್ಪಡಿಸುತ್ತಿದ್ದರು. ಅಕ್ಕಿ ಮನುಷ್ಯರ ಆಹಾರಕ್ಕೆ. ತೌಡು ದನಗಳ ಆಹಾರಕ್ಕೆ. ಹಿಂಡಿ-ಕಲಗಚ್ಚಿನ ಜೊತೆ. ಹಿಂದೆಲ್ಲ "ಕೊಟ್ಟಣ" ಎನ್ನುವ ಯಂತ್ರದಿಂದ ಕುಟ್ಟಿದ ಅಕ್ಕಿ ಸಿಗುತ್ತಿತ್ತು. ಅದರಲ್ಲಿ ಅನ್ನಸತ್ವಗಳು ಚೆನ್ನಾಗಿ ಇರುತ್ತಿದ್ದವು. ಆಮೇಲಾಮೇಲೆ "ಹಲ್ಲರ್" ಯಂತ್ರಗಳು ಬಂದವು. ಈಗಂತೂ ದೊಡ್ಡ ದೊಡ್ಡ ಯಂತ್ರಗಳ ಫ್ಯಾಕ್ಟರಿಗಳಿವೆ. ಅವುಗಳಿಂದ ಪಡೆದ ಅಕ್ಕಿ ಹೇರಳವಾಗಿ ಸಿಗುತ್ತದೆ, ಆದರೆ ಆದರಿಲ್ಲಿರುವ ಸತ್ವ ಕಡಿಮೆಯೇ. 

ಆಯಿತು. ಭತ್ತ ಕುಟ್ಟಿ ಅಕ್ಕಿ ಮತ್ತು ತೌಡು ಪಡೆದಿದ್ದಾಯಿತು. ಒಬ್ಬ ಬಹಳ ಬುದ್ಧಿವಂತನಿದ್ದ. ಒಂದಷ್ಟು ತೌದು ತೆಗೆದುಕೊಂಡು ಕುಟ್ಟಲು ಶುರುಮಾಡಿದ. ಕುಟ್ಟುತ್ತ ಹೋದ. ತೌಡು ಇನ್ನಷ್ಟು ಪುಡಿಯಾಯಿತೇ ವಿನಃ ಅಕ್ಕಿಯೇನೂ ಸಿಗಲಿಲ್ಲ. ರಸವೆಲ್ಲಾ ಹೀರಿ ಮಿಕ್ಕಿದ ಕಬ್ಬಿನ ಸಿಪ್ಪೆ ಜಗಿದಂತೆ. "ಚರ್ವಿತ ಚರ್ವಣ"ದಂತೆ. ಹೇಳಿದ್ದೇ ಮತ್ತೆ ಮತ್ತೆ ಹೇಳುವುದು. ಅಗಿದದ್ದೇ ಮತ್ತೆ ಮತ್ತೆ ಅಗಿದದ್ದು. ಕುಟ್ಟಿದ್ದನ್ನೇ ಮತ್ತೆ ಮತ್ತೆ ಕುಟ್ಟುವುದು. ಅದಕ್ಕೇ ಆಡು ಭಾಷೆಯಲ್ಲಿ "ತೌಡು ಕುಟ್ಟುವುದು" ಅನ್ನುತ್ತಾರೆ. ವ್ಯರ್ಥ ಪ್ರಯತ್ನಕ್ಕೆ ಒಳ್ಳೆಯ ದೃಷ್ಟಾಂತ. 
*****

ಅಕ್ಕಿಯಲ್ಲಾದರೆ ಅನ್ನ ಮಾಡಬಹುದು. ಜೋಳದಂತಹ ಧಾನ್ಯದಲ್ಲಿ ಹಾಗೆ ಮಾಡುವ ಪರಿಪಾಠವಿಲ್ಲ, ಮುಸುಕಿನ ಜೋಳಕ್ಕೂ ಹಾಗೆ. ಅವಕ್ಕೆ ಗಟ್ಟಿ  ಹೊರಕವಚ, ಭತ್ತ ಕುಟ್ಟಿ ಅಕ್ಕಿ ಮಾಡುವಾಗಲೂ ಕೆಲವು ಅಕ್ಕಿ ಕಾಳುಗಳು ಚೂರಾಗಿ "ನುಚ್ಚು" ಎಂದು ಕರೆಸಿಕೊಳ್ಳುತ್ತವೆ. ಸಾಮಾನ್ಯವಾಗಿ ಈ ನುಚ್ಚಿನಲ್ಲಿ ಅನ್ನ ಮಾಡುವುದಿಲ್ಲ. ಅಕ್ಕಿ ನುಚ್ಚು, ರಾಗಿ, ಗೋಧಿ, ಜೋಳ ಮೊದಲಾದ ಧಾನ್ಯಗಳನ್ನು ಬೀಸಿ ಪುಡಿ ಮಾಡಿ, ಆ ಹಿಟ್ಟಿನಿಂದ ರೊಟ್ಟಿಯನ್ನೋ, ಮುದ್ದೆಯನ್ನೋ, ಮತ್ತೇನಾದರೊ ತಿನ್ನುವ ಪದಾರ್ಥ ಮಾಡುತ್ತಾರೆ. 

ಈ ರೀತಿ ಮಾಡಿದ ಹಿಟ್ಟಿಗೆ ಸಂಸ್ಕೃತದಲ್ಲಿ "ಪಿಷ್ಟ" ಎನ್ನುತ್ತಾರೆ. ಧಾನ್ಯದ ಹಿಟ್ಟು ಎಂದು ಅರ್ಥ. ಈಗಿನ ವಿಜ್ಞಾನದ ತರಗತಿಗಳಲ್ಲಿ ಉಪಯೋಗಿಸುವ ಭಾಷೆಯಲ್ಲಿ ಪಿಷ್ಟ ಅಂದರೆ ಇಂಗ್ಲಿಷಿನ "ಸ್ಟಾರ್ಚ್" ಎಂಬುದರ ಸಮಾನ ಪದ. ಧಾನ್ಯವನ್ನು ಬೀಸುವಕಲ್ಲಿನಲ್ಲಿ ಬೀಸಿ ಹಿಟ್ಟು ಮಾಡುವ ಕ್ರಿಯೆಗೆ "ಪೇಶಣ" ಎನ್ನುತ್ತಾರೆ. 


ಬೀಸುವಕಲ್ಲಿನಲ್ಲಿ ಹಾಕಿ ಬೀಸಿ ಹಿಟ್ಟು ತೆಗೆಯುವುದು ಹಿಂದೆ ಹಳ್ಳಿಗಳಲ್ಲಿ ಸಾಮಾನ್ಯವಾಗಿತ್ತು. ಬೀಸುವ ಕೆಲಸ ಮಾಡುತ್ತಾ ಹೆಣ್ಣುಮಕ್ಕಳು ಹಾಡುತ್ತಿದ್ದ ಹಾಡುಗಳು ನಮ್ಮ ಜಾನಪದ ಸಾಹಿತ್ಯದ ಒಂದು ಬಂಗಾರದ ಅಧ್ಯಾಯ. ಮದುವೆ-ಮುಂಜಿಗಳಲ್ಲಿ "ಗೋಧಿಕಲ್ಲು ಶಾಸ್ತ್ರ" ಎಂದು ಮಾಡುತ್ತಿದ್ದರು. ಬೀಸುವ ಕಲ್ಲಿಗೆ (ಈಗಿನ ಪೀಳಿಗೆಯವರು ಮೇಲಿನ ಚಿತ್ರದಲ್ಲಿ ಬೀಸುವ ಕಲ್ಲನ್ನು ನೋಡಬಹುದು) ಅಲಂಕಾರ ಮಾಡಿ ಅರಿಸಿನ ಮತ್ತು ಗೋಧಿ ಬೀಸಿ, ಹಿಟ್ಟು ಮಾಡಿ ಶುಭ ಕಾರ್ಯಗಳಲ್ಲಿ ಉಪಯೋಗಿಸುತ್ತಿದ್ದರು. (ಸ್ನೇಹಿತರೊಬ್ಬರು ಕಳಿಸಿರುವ ಅವರ ೪೦ ವರುಷಗಳ ಹಿಂದಿನ ಅವರ ಮದುವೆಯ ಗೋಧಿಕಲ್ಲು ಶಾಸ್ತ್ರದ ಚಿತ್ರ ಮೇಲೆ ಕೊಟ್ಟಿದೆ), ಆಗ ಹೇಳುತ್ತಿದ್ದ ಹಾಡುಗಳು ಹೀಗಿರುತ್ತಿದ್ದವು:

ಅವಸರದಾ ಮುಹೂರ್ತವನ್ನು ಅವರಿಟ್ರು ಜೋಯಿಸರು 
ರಾಯ ಅಣ್ಣಯ್ಯ ಮನೆಗೆ ಬಂದು 
ರಾಯ ಅಣ್ಣಯ್ಯ ಮನೆಗೆ ಬಂದು 
ಅರಿಶಿಣಕೆ ಹಣವ ಕೊಡಿಸಿದ 

ಅವಸರದಾ ಮುಹೂರ್ತವನ್ನು ಅವರಿಟ್ರು ಜೋಯಿಸರು 
ರಾಯ ಮಾವಯ್ಯ ಮನೆಗೆ ಬಂದು
ರಾಯ ಮಾವಯ್ಯ ಮನೆಗೆ ಬಂದು 
ಗೋಧಿಗೆ ಹಣವ ಕೊಡಿಸಿದ 

ಮಗಳ ಮದುವೆ ಮಾಡಲು ಲಗ್ನ ಕಟ್ಟಿಸಲು ಹಳ್ಳಿಯ ಹೆಣ್ಣು ಮಗಳೊಬ್ಬಳು ತನ್ನ ಅಣ್ಣ ಮತ್ತು ಸೋದರಮಾವರ ಜೊತೆಯಲ್ಲಿ ಜೋಯಿಸರ ಮನೆಗೆ ಹೋದಳು. ಜೋಯಿಸರು ಪಂಚಾಂಗ ತೆಗೆದು ಬಹಳ ಸನಿಹದ (ಹತ್ತಿರದ) ಮುಹೂರ್ತ ಹೇಳಿದರು. ಈ ಹೆಣ್ಣು ಮಗಳ ಬಳಿ ಅಷ್ಟು ಶೀಘ್ರವಾಗಿ ಮದುವೆ ಮಾಡಲು ಹಣವಿಲ್ಲ. ದುಡ್ಡು ಹೊಂದಿಸಲು ಸಮಯ ಬೇಕು. ಮುಂದಿನ ಮುಹೂರ್ತ ಹೇಳಿ ಎಂದರೆ ಜೋಯಿಸರು ಇದನ್ನು ಬಿಟ್ಟರೆ ಕೆಲವು ತಿಂಗಳ ಕಾಲ ಮುಹೂರ್ತವೇ ಇಲ್ಲ ಅಂದುಬಿಟ್ಟರು. ಪೆಚ್ಚು ಮೊರೆ ಹಾಕಿ ಕುಳಿತಳು ಇವಳು. ಜೊತೆಯಲ್ಲಿ ಬಂದಿದ್ದ ಅಣ್ಣ ಮತ್ತು ಸೋದರಮಾವ ಧೈರ್ಯ ಹೇಳಿ ಹತ್ತಿರದ ಮುಹೂರ್ತವನ್ನೇ ಇಡಿಸಿದರು. ಮನೆಗೆ ಬಂದ ನಂತರ ಇಬ್ಬರೂ ಬೇಕಿದ್ದ ಹಣ ಕೊಟ್ಟು ಮುಂದಿನ ಕೆಲಸ ಮಾಡಲು ಸುಗಮ ಮಾಡಿದರು. ಆ ಹಣದಲ್ಲಿ ಮಂಗಳ ಪದಾರ್ಥಗಳನ್ನು ತಂದು ಕೆಲಸ ನಡೆಸುತ್ತಿದ್ದಾಳೆ. ಸಮಯದಲ್ಲಿ ಸಹಾಯ ಮಾಡಿದ ಅಣ್ಣ ಮತ್ತು ಮಾವನನ್ನು ಅವಳು ಈ ರೀತಿ ಹಾಡು ಹೇಳುತ್ತಾ ನೆನೆಸುತ್ತಿದ್ದಾಳೆ! 

*****

ಧಾನ್ಯವನ್ನು ಬೀಸಿದರೆ ಹಿಟ್ಟು ಬಂದೀತು. ಆದರೆ ಹಿಟ್ಟನ್ನೇ ಬೀಸಿದರೆ? ಹಿಟ್ಟೇ ಉಳಿದೀತು. ಅಷ್ಟೇ. ಅದೇನೂ ಹೆಚ್ಚುವುದಿಲ್ಲ. ಅಥವಾ ಹಿಟ್ಟು ಮತ್ತೇನೋ ಆಗುವುದಿಲ್ಲ. ಪಿಷ್ಟ ಪೇಷಣ ಮಾಡಿದರೆ ಪಿಷ್ಟವೇ ಉಳಿಯುವುದು. ಇದು ವ್ಯರ್ಥ ಪ್ರಯತ್ನಕ್ಕೆ ಇನ್ನೊಂದು ಉದಾಹರಣೆ. ಈ ಮಾತು ಮಾಡಿದ್ದನ್ನೇ ಮತ್ತೆ ಮತ್ತೆ ಮಾಡಿ ಪ್ರಯೋಜವಿಲ್ಲವಾಗುವುದು ತೋರಿಸಲು ದೃಷ್ಟಾಂತ. ಬೀಸಿದರೆ ಧಾನ್ಯ ಬೀಸಬೇಕು; ಹಿಟ್ಟನ್ನಲ್ಲ ಎಂದು ಹೇಳುವು ಇದರ ಗುರಿ. 

"ಪಿಷ್ಟ ಪೀಷಣ" ಮತ್ತು "ತೌಡು ಕುಟ್ಟುವುದು" ಇವೆರಡರಲ್ಲಿ ಯಾವುದು ಉತ್ತಮ? ಆಯ್ಕೆ ನಿಮಗೆ ಬಿಟ್ಟದ್ದು! 

Tuesday, April 22, 2025

ಅನ್ನದ ಹಾಹಾಕಾರ


"ಎಂಜಲು ಮತ್ತು ಪ್ರಸಾದ" ಹೆಸರಿನ ಶೀರ್ಷಿಕೆಯ ಹಿಂದಿನ ಒಂದು ಸಂಚಿಕೆಯಲ್ಲಿ, "ಊಟಮಾಡಿ ಮುಗಿದ ಮೇಲೆ ಎಲೆಗಳಲ್ಲಿ ಅಥವಾ ತಟ್ಟೆಗಳಲ್ಲಿ  ಬಿಟ್ಟಿರುವ ಪದಾರ್ಥಗಳನ್ನು "ಎಂಜಲು" ಎನ್ನುತ್ತಾರೆ. ಇದನ್ನು ಯಾರೂ ತಿನ್ನುವುದಿಲ್ಲ. ಇದೆಲ್ಲಾ ಒಟ್ಟುಗೂಡಿಸಿ ಹೊರಗೆ ಬಿಸಾಡುತ್ತಾರೆ. ಅಲ್ಲಿ ಪ್ರಾಣಿಗಳು ತಿನ್ನಬಹುದು ಇಲ್ಲವೇ ಕಡೆಗೆ ಗೊಬ್ಬರ ಆಗಬಹುದು" ಎಂದು ಹೇಳಿತ್ತು. ಇದು ಇಂದಿನ ದಿನದ ಸತ್ಯ. ಆದರೆ ಐವತ್ತು ಅರವತ್ತು ವರುಷಗಳ ಹಿಂದಿನ ಸತ್ಯ ಬೇರೆಯೇ ಇತ್ತು. ಆಗ ಕಂಡ ದೃಶ್ಯಗಳು ಹೃದಯ ಕದಡಿ ಮನಸ್ಸು ನೀರಾಗುವಂತೆ ಇರುತ್ತಿದ್ದವು. ವಾಸ್ತವವಾಗಿ ಅದನ್ನು ಚರ್ಚಿಸಲು ಮನಸ್ಸು ಬರುವುದಿಲ್ಲ. ಆದರೆ ಜೀವನದ ಸತ್ಯಗಳು ಯಾವಾಗಲೂ ಮಧುರವಾಗಿಯೇ ಇರುವುದಿಲ್ಲ. ಇಂದಿನ ಪ್ರಪಂಚದಲ್ಲಿ "ಅನ್ನದ ಹಾಹಾಕಾರ" ಇದ್ದರೂ ಅಂದಿನಷ್ದು ಭೀಕರವಾಗಿಲ್ಲ. ಪರಿಸ್ಥಿತಿ ಎಷ್ಟೋ ಸುಧಾರಿಸಿದೆ. 

1962, 1965 ಮತ್ತು 1971 ಇಸವಿಗಳಲ್ಲಿ ನಮ್ಮ ದೇಶ ಯುದ್ಧದ ಬೇಗೆಯಲ್ಲಿ ಬೇಯುತ್ತಿತ್ತು. ಮೊದಲು ಚೀನಾದ ಕಡೆ, ಮತ್ತೆರಡು ಬಾರಿ ಪಾಕಿಸ್ತಾನದ ಗಡಿಗಳಲ್ಲಿ.  ಆಗಿನ ಪರಿಸ್ಥಿತಿಯಲ್ಲಿ ಜನರಿಗೆ ಉದ್ಯೋಗದ ಅವಕಾಶಗಳು ಮೂಲತಃ ನಾಲ್ಕು ದಾರಿಗಳಲ್ಲಿದ್ದವು. ಮೊದಲನೆಯದು ಕೃಷಿ ಮತ್ತು ಪಶುಪಾಲನೆ. ಎರಡನೆಯದು ತಿಂಗಳ ಸಂಬಳ ಸಿಗುವ ಸರಕಾರಿ ನೌಕರಿ. ಮೂರನೆಯದು ಕುಂಬಾರ, ಬಡಗಿ, ಕಮ್ಮಾರ, ನೇಕಾರ ಮೊದಲಾದ ಗೃಹ ಕೈಗಾರಿಕೆ ಅಥವಾ ಕಸಬುಗಳು. ನಾಲ್ಕನೆಯದು ಸಣ್ಣ ವ್ಯವಹಾರ, ಅಂಗಡಿಗಳು ಮುಂತಾದವು. ಈಗಿನಂತೆ "ಸರ್ವಿಸ್ ಸೆಕ್ಟರ್" ಅನ್ನುವ ಕಲ್ಪನೆಯೇ ಇರಲಿಲ್ಲ. ಹಸಿವಿನ ದಾವಾಗ್ನಿ ಜ್ವಾಲೆಗಳು ಅನೇಕರನ್ನು ಕಿತ್ತು ತಿನ್ನುತ್ತಿದ್ದವು. ಎಲ್ಲಾದರೂ ಸಮಾರಂಭಗಳಾಗಿ ಊಟದ ಎಲೆ ಎಸೆಯುವ ಕಡೆ ಕೆಲವರು ಕಾದು ಕುಳಿತಿರುತ್ತಿದ್ದರು. ಅಲ್ಲಿ ಸೇರಿದ್ದ ಪ್ರಾಣಿಗಳ ಜೊತೆ ಹೊಡೆದಾಡಿ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಅವರದ್ದು. ಭಿಕ್ಷೆ ಬೇಡಿ ಜೀವನ ಮಾಡುವುದೂ ಒಂದು ವೃತ್ತಿಯೇ ಆಗಿತ್ತು. ಇಷ್ಟು ಹೇಳಿ ಮುಂದಿನದನ್ನು ಇಲ್ಲಿಗೇ ಬಿಡೋಣ. ಆ ಕಾಲಮಾನದಲ್ಲಿ ಇಂತಹ ದೃಶ್ಯಗಳನ್ನು ಕಣ್ಣಾರೆ ಕಂಡವರಿಗೆ ಆ ನೋವು ಬೇಗ ಅರ್ಥವಾಗುತ್ತದೆ. 
*****  

ಇಂತಹ ಅತಿ ಕಷ್ಟದ ಸಮಯ ಕೇವಲ ಮೂರ್ನಾಕು ವರುಷಗಳ ಹಿಂದೆ ಮತ್ತೆ ಕದ ತಟ್ಟಿತ್ತು. ಕರೋನ ಮಹಾಮಾರಿಯ ಕಾರಣ ಜನತೆ ಎರಡು ಕಡೆಗಳಲ್ಲಿ ಹಿಂಸೆ ಅನುಭವಿಸಿದರು. ಒಂದೆಡೆ ಜೀವಭಯ. ಏನನ್ನು ನೋಡಿದರೂ, ಏನನ್ನು ಮುಟ್ಟಿದರೂ ದಿಗಿಲು. ಕೈಗಳನ್ನೂ, ಎಲ್ಲ ಪದಾರ್ಥಗಳನ್ನೂ ತೊಳೆದದ್ದೇ ತೊಳೆದದ್ದು. ಇನ್ನೊಂದೆಡೆ ಅನೇಕರಿಗೆ ದೈನಂದಿನ ಜೀವನೋಪಾಯಕ್ಕೆ ದಾರಿಯಿಲ್ಲದೆ ಮನೆಯಲ್ಲಿ ಕುಳಿತುಕೊಳ್ಳಬೇಕಾದ ಸಂದರ್ಭ. ಎಲ್ಲಾ ಚಟುವಟಿಕೆ ನಿಲ್ಲಿಸಿದರೂ ಹೊಟ್ಟೆ ಮಾತ್ರ ಸುಮ್ಮನಿರದಲ್ಲ. ಕೋಟಿ ಕೋಟಿ ಮಂದಿ ಉಪವಾಸ ಬೀಳುವ ಸಂದರ್ಭ ಅದು. 

ಈಗ ಇಡೀ ಪ್ರಪಂಚದ ಜನಸಂಖ್ಯೆ ಸುಮಾರು 800 ಕೋಟಿ. ಭಾರತದಲ್ಲಿ 140 ಕೋಟಿ. ಇದರಲ್ಲಿ 80 ಕೋಟಿ ಜನಕ್ಕೆ ಸರಿಯಾದ ಸಂಪಾದನೆ ಇಲ್ಲದೆ ಅನ್ನದ ಹಾಹಾಕಾರ ಬಡಿಯುವ ಸಂದರ್ಭ. 80 ಕೋಟಿ ಅಂದರೆ ಅದೇನು ಸಾಮಾನ್ಯವಲ್ಲ. ಇಡೀ ಯುರೋಪ್ ಖಂಡದ ಜನಸಂಖ್ಯೆಗಿಂತ ಸ್ವಲ್ಪ ಹೆಚ್ಚು. ಉತ್ತರ ಅಮೇರಿಕ ಮತ್ತು ದಕ್ಷಿಣ ಅಮೆರಿಕಗಳ ಒಟ್ಟು ಜನಸಂಖ್ಯೆಯಷ್ಟು. ಇಷ್ಟು ಮಂದಿ ಉಪವಾಸ ಬೀಳುವುದನ್ನು ಉಚಿತವಾಗಿ ಆಹಾರ ಧಾನ್ಯ ವಿತರಿಸುವುದರ ಮೂಲಕ ಸರ್ಕಾರ ತಪ್ಪಿಸಿತು. ಆಗ ಪ್ರಾರಂಭವಾದ ಈ ಯೋಜನೆ ಇಂದೂ ನಡೆಯುತ್ತಿದೆ. ಒಂದೆಡೆ ಕರೋನಾ ಲಸಿಕೆ ಹಾಕುವ ಭರಾಟೆ. ಮತ್ತೊಂದೆಡೆ ಈ ಆಹಾರ ಧಾನ್ಯ ವಿತರಣೆ ಯೋಜನೆ. ಇವೆರಡು ಎಷ್ಟೋ ಜನರನ್ನು ಆ ಕಂಟಕದಿಂದ ಪಾರುಮಾಡಿತು. 

ಜಿ. ಎಸ. ಟಿ. ತೆರಿಗೆ ಪದ್ದತಿಯನ್ನು ಅನೇಕ ರೀತಿಯಿಂದ ಮೂದಲಿಸುವವರಿದ್ದಾರೆ. ಅದನ್ನು ತೆರುವಾಗ ನಾವೂ ಅನೇಕ ಬಾರಿ ಬೇಸರಿಸುತ್ತೇವೆ. ಆದರೆ ಇದರಿಂದ ಪ್ರತಿ ತಿಂಗಳೂ ಸರಕಾರಕ್ಕೆ ಬರುತ್ತಿರುವ ಆದಾಯ ಇಂತಹ ಕಾರ್ಯಕ್ರಮಗಳ ಭಾರವನ್ನು ಭರಿಸಲು ಸರ್ಕಾರಕ್ಕೆ ಆಸರೆ ಒದಗಿಸಿದೆ. ತೆರಿಗೆ ಕಳ್ಳರಿಂದ ಸೋರುತ್ತಿದ್ದ ಹಣ ಸರ್ಕಾರದ ಖಜಾನೆಗೆ ಸೇರುವುದರಿಂದ ಇದು ಸಾಧ್ಯವಾಯಿತು. ಬೇರೆ ಸಂಪನ್ಮೂಲಗಳೂ ಇವೆ ಎಂದರೂ ಈ ದಾರಿಯ ಆದಾಯ ಬಹಳ ಮುಖ್ಯವಾಆದದ್ದೇ ಆಗಿದೆ. 

*****

ಅನ್ನದ ಹಾಹಾಕಾರ ಮುಗಿಲು ಮುಟ್ಟಿದ್ದ ಹಿಂದಿನ ಶತಮಾನದ ಐವತ್ತು-ಅರವತ್ತರ ದಶಕದಲ್ಲಿ ಸಮಾಜದ ಮೇಲೆ ಸಮತಾವಾದದ ಬಹಳ ಪ್ರಭಾವ ಇತ್ತು. ವರ್ಗ ಸಂಘರ್ಷ ಎಲ್ಲೆಡೆ ವಿಜೃಂಭಿಸುತ್ತಿದ್ದ ಕಾಲವದು. ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಅದು "ಕನ್ನಡ ನವೋದಯ" ಕಾಲಘಟ್ಟವನ್ನು ದಾಟಿ "ನವ್ಯ" ಅನ್ನುವ ಘಟ್ಟಕ್ಕೆ ಜಾರುತ್ತಿದ್ದ ಸಮಯ. ನವ್ಯ ಸಾಹಿತ್ಯದ ಹರಿಕಾರರಲ್ಲಿ ಒಬ್ಬರಾದ ಕೀರ್ತಿಶೇಷ ಎಂ. ಗೋಪಾಲಕೃಷ್ಣ ಅಡಿಗರ (1918-1992) ಜನಪ್ರಿಯ ಕವನವೊಂದು ಅದೇ ಸಮಯದಲ್ಲಿ, ಇದೇ ಅನ್ನದ ಹಾಹಾಕಾರ ಕುರಿತು ರಚಿತವಾದದ್ದು. 

ಅಡಿಗರು ಒಮ್ಮೆ (1971) ಬೆಂಗಳೂರು ಲೋಕಸಭೆ ಕ್ಷೇತ್ರದಿಂದ (ಆಗ ಬೆಂಗಳೂರು ದಕ್ಷಿಣ ಕ್ಷೇತ್ರ ಇರಲಿಲ್ಲ) ಮಾಜಿ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರ ವಿರುದ್ಧ ಸ್ಪರ್ಧಿಸಿದ್ದರು. ಅವರ ಚುನಾವಣಾ ಪ್ರಚಾರ ಸಭೆಗಳ ಪ್ರಾರಂಭದಲ್ಲಿ ಈ ಗೀತೆಯನ್ನು ಖ್ಯಾತ ಗಮಕಿಗಳು ಮತ್ತು ಸುಗಮ ಸಂಗೀತ ಗಾಯಕರಾಗಿದ್ದ ಶ್ರೀ ಚಂದ್ರಶೇಖರ ಕೆದಿಲಾಯ ಅವರು ಹಾಡುತ್ತಿದ್ದರು. ಆ ನಂತರ ಅಡಿಗರು ಚುನಾವಣಾ ಭಾಷಣ ಮಾಡುತ್ತಿದ್ದರು. ಒಂದು ರೀತಿಯಲ್ಲಿ ಅದು ಅವರ ಚುನಾವಣಾ ಪ್ರಣಾಳಿಕೆಯಂತೆ ಇತ್ತು. ಚುನಾವಣೆಯಲ್ಲಿ ಅಡಿಗರು ಸೋತರು. ಆದರೆ ಈ ಕವನ ಬಹಳ ಪ್ರಸಿದ್ಧವಾಯಿತು. ನಂತರ ಅಡಿಗರು "ನ್ಯಾಷನಲ್ ಬುಕ್ ಟ್ರಸ್ಟ್" ಅಧ್ಯಕ್ಷರಾದರು. ಇನ್ನೂ ಅನೇಕ ರೀತಿಯಲ್ಲಿ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದರು. 

ಅನ್ನದ ಹಾಹಾಕಾರದ ಚರ್ಚೆಯ ಸಮಯದಲ್ಲಿ ಆ ಕವನ ನೆನಪಿಸಿಕೊಳ್ಳುವುದು ಒಳ್ಳೆಯದು. 

*****

ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ 
ಹರೆಯದೀ ಮಾಂತ್ರಿಕನ ಮಾಟ  ಮಸಳುವ  ಮುನ್ನ 
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ 
ಈ ಕ್ಷುಭ್ದ ಸಾಗರವು ಬತ್ತಿಹೋಗುವ ಮುನ್ನ 
     ಕಟ್ಟುವೆವು ನಾವು ಹೊಸ ನಾಡೊಂದನು 
     ರಸದ ಬೀಡೊಂದನು   

ನಮ್ಮೆದೆಯ ಕನಸುಗಳೆ ಕಾಮಧೇನು 

ಆದಾವು ಕರೆದಾವು ವಾಂಛಿತವನು 

ಕರೆವಕೈಗಳಿಗಿಹುದಿದೋ ಕನಸುಗಳ ಹರಕೆ

ಗುರಿತಪ್ಪದೊಮ್ಮುಖದ ಬಯಕೆ ಬೆಂಬಲಕೆ

ಕಟ್ಟುವೆವು ನಾವು ಹೊಸ ನಾಡೊಂದನು 

ರಸದ ಬೀಡೊಂದನು 

ನಾವು ಹಿಂದೆಗೆವೆವೇ ವೀರ ತರುಣರು ನಾವು 

ಒಂದೆ ನೆಗೆತಕೆ ನೆಗೆವೆವೋ ಕಂದಕವನು 

ಕುಟ್ಟಿ ಪುಡಿ ಮಾಡುವೆವು ಕೋಟೆಗಳನು 

ಎದೆಮೆಟ್ಟಿ ಮುರಿಯುವೆವು ಅಸುರ ರಟ್ಟೆಗಳನು 

        ಕಟ್ಟುವೆವು ನಾವು ಹೊಸ ನಾಡೊಂದನು 

        ರಸದ ಬೀಡೊಂದನು 

                 ......... 

                 ......... 

                 ......... 

ಇಂದು ಬಾಳಿದು ಕೂಳ ಕಾಳಗವು 

ಹೊಟ್ಟೆಯೇ ಕೇಂದ್ರವಾಗಿದೆ ನರನ ಜೀವಿತಕ್ಕೆ 

ಅನ್ನದನ್ಯಾಯ ದಾವಾಗ್ನಿಯಲಿ ದಹಿಸುತಿದೆ 

ನರತೆ ಸಂಸ್ಕೃತಿ ಪ್ರೀತಿ ದಿವದ ಬಯಕೆ 

       ಕಟ್ಟುವೆವು ನಾವು ಹೊಸ ನಾಡೊಂದನು 

       ರಸದ ಬೀಡೊಂದನು  

ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ 

ಸಮಬಗೆಯ ಸಮಸುಖದ ಸಮದುಃಖದ 

ಸಾಮರಸ್ಯದ ಸಾಮಗಾನ ಲಹರಿಯ ಮೇಲೆ 

ತೇಲಿಬರಲಿದೆ ನೋಡು ನಮ್ಮ ನಾಡು  

        ಕಟ್ಟುವೆವು ನಾವು ಹೊಸ ನಾಡೊಂದನು 

        ರಸದ ಬೀಡೊಂದನು ಸುಖದ ಬೀಡೊಂದನು  

*****

ಈ ಕವಿತೆಗೆ ಈಗ ಸುಮಾರು ಐವತ್ತೈದು ವರುಷ. ಕಳೆದ  ದಶಕಗಳಲ್ಲಿ ಬಹಳ ಬದಲಾವಣೆಗಳಾಗಿವೆ. ಪಡಿತರ ಪದ್ದತಿಯಲ್ಲಿ, ವ್ಯವಸ್ಥೆಯಲ್ಲಿ ಎಷ್ಟೋ ಸುಧಾರಣೆ ಆಗಿದೆ. ಅಂದು ರೇಷನ್ ಅಂಗಡಿ ಎಂದು ತೆಗೆಯುತ್ತದೋ, ಯಾವಾಗ ಏನು ಕೊಡುತ್ತಾರೋ ಗೊತ್ತಿರಲಿಲ್ಲ. ಇಂದು 80 ಕೋತಟಿ  ಜನ ಪಡಿತರ ಪ್ರತಿ ತಿಂಗಳೂ ಪಡೆಯುತ್ತಿದ್ದಾರೆ. ತಿಂಗಳು ತಿಂಗಳೂ ಏನು ಪದಾರ್ಥ ಕೊಡುತ್ತಾರೆ ಅನ್ನುವುದು ಎಲ್ಲರಿಗೂ ಗೊತ್ತು. ನಮಗೆ ಪಡಿತರ ಸಿಕ್ಕಿಲ್ಲ ಎನ್ನುವ ದೂರುಗಳು ಅಷ್ಟಾಗಿ ಕೇಳಿಬರುತ್ತಿಲ್ಲ. ಇದರ ಜೊತೆಗೆ ಸರ್ಕಾರಗಳು DBT ಮೂಲಕ ಅನೇಕ ಯೋಜನೆಗಳಿಂದ ಅನೇಕರ ಖಾತೆಗಳಿಗೆ ಹಣವನ್ನೂ ಹಾಕುತ್ತಿದ್ದಾರೆ. ಇಂತಹ ಯೋಜನೆಗಳಿಂದ ಜನ ಸೋಮಾರಿಗಳಾಗುತ್ತಿದ್ದರೆ ಎನ್ನುವ ಚರ್ಚೆಯೂ ಬಲವಾಗಿ ನಡೆದಿದೆ. 

"ಸಾಮರಸ್ಯದ ಸಾಮಗಾನ ಲಹರಿಯ ಮೇಲೆ ಕನಸಿನ ನಾಡು" ಪೂರ್ಣವಾಗಿ ತೇಲಿ ಬಂದಿಲ್ಲ. ಅನೇಕ ಪದರಗಳಲ್ಲಿ ಸಾಮರಸ್ಯ ಇನ್ನೂ ಹದಗೆಡುವ ಲಕ್ಷಣಗಳು ನಿಚ್ಚಳವಾಗಿ ಕಂಡುಬರುತ್ತಿವೆ. ಸಮಾಜವಾದ ಮತ್ತು ಸಮತಾವಾದ ಪ್ರತಿಧ್ವನಿಸಿದ ಈ ಕವನ ಇಂದು ಅಷ್ಟಾಗಿ ಕೇಳಿಬರುತ್ತಿಲ್ಲ. ಸಮತಾವಾದದ ಬಿರುಸು ಬಹಳ ಕಡಿಮೆಯಾಗಿದೆ. ಸಮತಾವಾದದ ಹೆಸರಿನಲ್ಲಿ ಮುಂದೆ ಬಂಡ ನಾಯಕರುಗಳು ತಮ್ಮ ಹಿಂದಿದ್ದ ಜನತೆಯನ್ನು ಹಿಂದೆ ಬಿಟ್ಟು ಎಷ್ಟೋ ಮುಂದೆಬಂದಿದ್ದಾರೆ!

ಅನ್ನದ ಹಾಹಾಕಾರ ಎಷ್ಟೋ ಕಡಿಮೆಯಾಗಿದೆ. ಆದರೂ ಪೂರ್ಣವಾಗಿ ಹೋಗಿದೆ ಎನ್ನುವಂತಿಲ್ಲ.  ಮನಸ್ಸಿದ್ದವರಿಗೆ  ದುಡಿಯುವ ದಾರಿ ಮೊದಲಿಗಿಂತ ಎಷ್ಟೋ ಉತ್ತಮವಾಗಿದೆ. ಆದರೂ ನಿರುದ್ಯೋಗ ಪೂರ್ಣವಾಗಿ ನೀಗಿಲ್ಲ. ಪರಿಸ್ಥಿತಿ ಇನ್ನೂ ಉತ್ತಮವಾಗುವುದೆಂದು ಆಶಿಸೋಣ. 


*****
ಚಂದ್ರಶೇಖರ ಕೆದಿಲಾಯರು ಹಾಡಿರುವ ಈ ಕವನ ಯೂಟ್ಯೂಬಿನಲ್ಲಿ ಲಭ್ಯವಿದೆ. ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೇಳಬಹುದು: