Showing posts with label govinda. Show all posts
Showing posts with label govinda. Show all posts

Wednesday, December 17, 2025

ರಾಮನಾಮ ಎಂಬ ರಸವುಳ್ಳ ನೀರಿಗೆ


ಕಳೆದ ಸಂಚಿಕೆಯಲ್ಲಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಬಹು ಜನಪ್ರಿಯ ದೇವರನಾಮ ಶ್ರೀ ಪುರಂದರದಾಸರ ಕೃತಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ, ತಾರೇ ಬಿಂದಿಗೆಯ" ವಿಶೇಷಾರ್ಥಗಳ ಅನ್ವೇಷಣೆಯಲ್ಲಿ ಕೃತಿಯ ಪಲ್ಲವಿಯ ಎರಡು ಸಾಲುಗಳಲ್ಲಿ ತುಂಬಿರುವ ಅರ್ಥವಿಶೇಷಗಳನ್ನು ನೋಡುವ ಪ್ರಯತ್ನ ಮಾಡಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಈಗ ಈ ಹಾಡಿನ ಉಳಿದ ಭಾಗಗಳ ವಿಶೇಷ ಅರ್ಥಗಳನ್ನು ನೋಡೋಣ. 

*****

ಬಿಂದಿಗೆ ಕೊಡು ಎಂದು ಕೇಳಿದ್ದು ನೀರು ತರಲು. ಯಾವ ನೀರು? ನಾವು ನಮ್ಮ ಸುತ್ತ-ಮುತ್ತ ಕಾಣುವ ಮತ್ತು ದಿನಂಪ್ರತಿ ಉಪಯೋಗಿಸುವ ನೀರು ಎನ್ನುವುದು ಸಾಮಾನ್ಯವಾದ ಹೊರ ಅರ್ಥ. ನೀರಿಲ್ಲದೆ ಜೀವನವಿಲ್ಲ. ಗಾಳಿಯ ನಂತರ ಜೀವಿಗೆ ಬೇಕಾದ ಅತ್ಯಂತ ಮುಖ್ಯ ಅವಶ್ಯಕತೆ ನೀರು. ನೀರನ್ನು ಶೇಖರಿಸಿ ತರಲು ಒಂದು ಸಾಧನ ಬೇಕು. ಬಿಂದಿಗೆಯು ಅಂತಹ ಒಂದು ಸಾಧನ. ನೀರಿಲ್ಲದೆ ಕರ್ಮವಿಲ್ಲ. ಏನಾದರೂ ಮಾಡುವ ಮೊದಲು ಕೈ, ಕಾಲುಗಳನ್ನಾದರೂ ತೊಳೆದುಕೊಳ್ಳುತ್ತೇವೆ. ಅದಕ್ಕೆ ನೀರು ಬೇಕು. ಸ್ನಾನ ಮಾಡಿದರೆ ನೀರು ಬೇಕು. ಪೂಜೆ-ಹೋಮಾದಿಗಳನ್ನು ಮಾಡಲು ಮೊದಲು ನೀರಿನಿಂದಲೇ ಪ್ರಾರಂಭ. ಕಡೆಯಲ್ಲಿ ಸಮರ್ಪಣ ಮಾಡಲೂ ನೀರು ಬೇಕು. ನೀರಿನಿಂದ ಪ್ರಾರಂಭವಾದ ಕೆಲಸಗಳು ನೀರಿನಿಂದಲೇ ಕೊನೆ! ಬೇರೆ ಯಾವುದಾದರೂ ಪದಾರ್ಥ ಇಲ್ಲದಿದ್ದರೆ ಹೇಗೋ ಕೆಲಸ ತೂಗಿಸಬಹುದು. ನೀರಿಲ್ಲದಿದ್ದರೆ ಮುಂದೆ ಹೋಗಲು ಆಗುವುದೇ ಇಲ್ಲ.  

ನೀರಿಗೆ ಒಂದು ವಿಶೇಷಾರ್ಥವಿದೆ. ಬಿಂದಿಗೆ ಅನ್ನುವುದು ದೇಹವಾದಾಗ (ಏಕೆ ಅನ್ನುವುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ) ನೀರು ಅನ್ನುವುದು ಜೀವಿಯು ಮಾಡುವ "ಕರ್ಮ" ಸೂಚಕವಾಗುತ್ತದೆ. ಬಿಂದಿಗೆಯಲ್ಲಿ ನೀರನ್ನು ತರುವಂತೆ ದೇಹದಿಂದ ಜೀವಿಯು ಕರ್ಮಗಳನ್ನು ಮಾಡಿ ಆ ಮೂಲಕ ಸಾಧನೆಗಳನ್ನು ಮಾಡುತ್ತಾನೆ. 

ಈಶಾವಾಸ್ಯ ಉಪನಿಷತ್ತು ತನ್ನ ನಾಲ್ಕನೆಯ ಮಂತ್ರದಲ್ಲಿ "ತಸ್ಮಿನ್ ಆಪಃ ಮಾತರಿಶ್ವಾ ದಧಾತಿ" ಎಂದು ಹೇಳುತ್ತದೆ. "ಆಪಃ" ಅಂದರೆ ನೀರು. "ಮಾತರಿಶ್ವ" ಅಂದರೆ ವಾಯು. ವಾಯುವು ಕೊಡುವ ನೀರು ಯಾವುದು? ಕೊಡುವುದು ಯಾರಿಗೆ? ಜೀವಿಯ ಎಲ್ಲ ಕರ್ಮಗಳಿಗೆ ಪ್ರತ್ಯಕ್ಷ ಸಾಕ್ಷಿ ಪ್ರಾಣವಾಯು. ಮೊದಲ ಉಸಿರಿನಿಂದ ಪ್ರಾರಂಭವಾದ ಜೀವನದಿಂದ ಕರ್ಮ ಪ್ರಾರಂಭ. ಕೊನೆಯ ಉಸಿರಿನೊಡನೆ ಅದು ಮುಗಿಯಿತು. ಬೇರೆಯವರ ಕಣ್ಣು ತಪ್ಪಿಸಿ ಅನೇಕ ಕೆಲಸಗಳನ್ನು ಮಾಡಬಹುದು. ಹಾಗೆ ಏನಾದರೂ ಮಾಡಿ ಅರಗಿಸಿಕೊಳ್ಳಬಹುದು. ಆದರೆ ಮಾತರಿಶ್ವನ ಕಣ್ಣು ತಪ್ಪಿಸಲಾಗದು. ಇದನ್ನೇ "ಅಂತಃಸಾಕ್ಷಿ" ಎಂದೂ ಹೇಳುತ್ತೇವೆ.  ಜೀವನ ಕಾಲ ಮುಗಿದ ಮೇಲೆ ಜೀವಿಯನ್ನು ಪರಮಾತ್ಮನ ಮುಂದೆ ನಿಲ್ಲಿಸಿ ವಾಯುದೇವನು ಅವನ ಸಮಸ್ತ ಕರ್ಮಗಳನ್ನು ಹಾಜರು ಮಾಡುತ್ತಾನೆ. 

ಈ ಕಾರಣದಿಂದ "ನಾ ನೀರಿಗ್ಹೋಗುವೆ" ಅಂದರೆ "ನೀನು ಕೊಟ್ಟ ದೇಹದಿಂದ ನಾನು ಕರ್ಮಗಳನ್ನು ಆಚರಿಸಿ ಸಾಧನೆಗಳನ್ನು ಮಾಡುವೆ, ಮಹಾಲಕ್ಷ್ಮಿ ಅಕ್ಕಾ" ಎಂದು ಹೇಳುವುದು. ಇದು ಅಂತರಾರ್ಥ. 
***** 

"ರಾಮನಾಮ ಎಂಬೋ ರಸವುಳ್ಳ ನೀರಿಗೆ" ಬಿಂದಿಗೆ ಬೇಕು. ರಾಮನಾಮದ ವಿಶೇಷವೇನು? ಅನಂತರೂಪಿ ಪರಮಾತ್ಮನಿಗೆ ಅನಂತ ಹೆಸರುಗಳು. ಸೃಷ್ಟಿಯಲ್ಲಿ ಇರುವ ಸಕಲ ಶಬ್ದಗಳೂ ಪರಮಾತ್ಮನನ್ನೇ ಹೇಳುತ್ತವೆ ಎನ್ನುವುದು ಒಂದು ಪ್ರಮೇಯ. (ಧ್ವನ್ಯಾತ್ಮಕ ಮತ್ತು ವರ್ಣಾತ್ಮಕ ಶಬ್ದಗಳ ಬಗ್ಗೆ ಹಿಂದೊಂದು ಸಂಚಿಕೆಯಲ್ಲಿ ನೋಡಿದ್ದೇವೆ). "ರಮಯತಿ ಇತಿ ರಾಮಃ". "ಆನಂದ (ಸಂತೋಷ) ಕೊಡುವವನು ರಾಮ" ಎಂದು ಇದರ ಅರ್ಥ. ಜೀವಿಗಳಿಗೆ ಈ ಸುತ್ತುವ ಸಂಸಾರದ ಹುಟ್ಟು-ಸಾವುಗಳಿಂದ ಬಿಡುಗಡೆ ಕೊಟ್ಟು ಶಾಶ್ವತ ಆನಂದ ಕೊಡುವವನು ರಾಮ. ಈ ಮೋಕ್ಷದ ನಂತರದ ಆನಂದಕ್ಕೆ ಅದರ ಪ್ರಮಾಣದಲ್ಲಿ ಆಗಾಗ ಹೆಚ್ಚು-ಕಡಿಮೆ ಆಗುವ ಭಯವಿಲ್ಲ. ಎಂದೋ ಒಂದು ದಿನ ಮುಗಿದುಹೋಗುವುದು ಎನ್ನುವ ಆತಂಕವಿಲ್ಲ. ಅದು ಶಾಶ್ವತವಾದ, ಕೊನೆಯಿಲ್ಲದ, ಪರಿಪೂರ್ಣ ಆನಂದ. 

ರಾಮನು ಎಲ್ಲ ಕಾಲದಲ್ಲೂ ಇದ್ದನು. ಎಲ್ಲ ಕಾಲದಲ್ಲೂ ಇರುತ್ತಾನೆ. ತ್ರೇತಾಯುಗದ ಶ್ರೀರಾಮಚಂದ್ರನು ಅವತಾರ ಮಾಡುವ ಮೊದಲೂ ಇದ್ದನು. ಆ ಅವತಾರ ಮುಗಿದಮೇಲೂ ಇರುತ್ತಾನೆ. ಇಂತಹ ರಾಮನ ಹೆಸರನ್ನೇ ದಶರಥ-ಕೌಸಲ್ಯೆಯರ ಮಗನಿಗೂ ಕೊಟ್ಟರು. ಇಬ್ಬರೂ ಒಂದೇ. ಭೇದವಿಲ್ಲ. 

ಪರಮಾತ್ಮನ ಅನಂತ ನಾಮಗಳಲ್ಲಿ ರಾಮನಾಮ ಅತ್ಯಂತ ಸುಲಭವಾದದ್ದು. ಒತ್ತಕ್ಷರಗಳ ಗೊಂದಲವಿಲ್ಲ. ಆರು-ಎಂಟು-ಹತ್ತು ಅಕ್ಷರಗಳ ದೊಡ್ಡ ಹೆಸರಲ್ಲ. ಈಗ ತಾನೇ ಮಾತು ಕಲಿಯುತ್ತಿರುವ ಮಗುವೂ ಸುಖವಾಗಿ "ರಾಮ" ಎಂದು ಹೇಳುವುದು. "ಹೃಷಿಕೇಶ" "ತ್ರಿವಿಕ್ರಮ" "ಪದ್ಮನಾಭ" "ಸಂಕರ್ಷಣ" "ಅಧೋಕ್ಷಜ" ಮುಂತಾದುವನ್ನು ಹೇಳಲು ಅನೇಕರಿಗೆ ಕಷ್ಟವಾಗುತ್ತದೆ. ರಾಮನಾಮಕ್ಕೆ ಇಂತಹ ಬಂಧವಿಲ್ಲ. ಅದು ಗಟ್ಟಿಯಾದ ಚಕ್ಕುಲಿ, ಕೋಡುಬಳೆ, ಪುಳ್ಳಂಗಾಯಿ ಉಂಡೆ ತಿಂದು ಅರಗಿಸಿಕೊಂಡಂತೆ ಅಲ್ಲ. ಪಾಯಸ ಕುಡಿದಂತೆ ಸುಲಭ. ಸಿಹಿಯೂ ಹೌದು. ಆದ್ದರಿಂದ "ರಾಮನಾಮ ಪಾಯಸ"!
*****

ರಾಮನಾಮ ಎಂಬ ನೀರು ಎಂದಾಯಿತು. "ರಸವುಳ್ಳ ನೀರು" ಎಂದೇಕೆ ಹೇಳಿದರು? ನೀರಿನಲ್ಲಿ ಎಂತಹ ರಸ? ನಮಗೆ ಬಾಯಾರಿಕೆ ಆದಾಗ ಕುಡಿಯಲು ನೀರು ಬೇಕು. ಒಳ್ಳೆಯ ಬಾದಾಮಿ ಹಾಲೋ, ಎಳನೀರೋ ಕೊಟ್ಟರೆ ಹೇಗೆ? ಸೊಗಸಾದ ಕಾಫಿ? ಅಥವಾ ಕಿತ್ತಳೆ ರಸ? "ಅದೆಲ್ಲಾ ಇರಲಿ. ಕೊಡುವಿರಂತೆ. ಮೊದಲು ಒಂದು ಲೋಟ ನೀರು ಕೊಡಿ, ಆಮೇಲೆ ಬೇರೆಯದು" ಎನ್ನುತ್ತೇವೆ. ಆಯಿತು. ಕೊಟ್ಟರು. ಎಲ್ಲ ನೀರೂ ಒಂದೇ ರೀತಿ ಇರುವುದಿಲ್ಲ. ಬೆಂಗಳೂರಿನಲ್ಲಿ ಬೋರ್ವೆಲ್ ನೀರು ಕೊಡಬಹುದು. ಯಾವುದೊ ಕೆರೆಯಿಂದ ತಂಡ ಟ್ಯಾಂಕರ್ ನೀರು ಇರಬಹುದು. ಕಾವೇರಿ, ಅರ್ಕಾವತಿ ನೀರು ತಂದಿರಬಹುದು. ಎಲ್ಲವೂ ಒಂದೇ ರೀತಿ ಇರುವುದಿಲ್ಲ. ಕೆಲವು ನೀರು ಕುಡಿದರೆ ಮುಖ ಸಿಂಡರಿಸುತ್ತೇವೆ. "ಈ ನೀರು ಅಷ್ಟು ಸರಿ ಇಲ್ಲ" ಅನ್ನುತ್ತೇವೆ. ಯಾಕೆ? ನೀರು ಚೆನ್ನಾಗಿರಬೇಕು. "ಇಂತಹ ಒಳ್ಳೆಯ ನೀರು ತರುತ್ತೇನೆ, ಬಿಂದಿಗೆ ಕೊಡು" ಅನ್ನುವುದು ಸಾಮಾನ್ಯ ಅರ್ಥ. 

"ರಸ" ಅನ್ನುವುದಕ್ಕೆ ವಿಶೇಷಾರ್ಥವೂ ಉಂಟು. ಅದು ತಿಳಿಯಬೇಕಾದರೆ ಶ್ರೀಮದ್ ಭಗವದ್ಗೀತೆಯ ಏಳನೆಯ ಅಧ್ಯಾಯ ನೋಡಬೇಕು. ಎಂಟನೆಯ ಶ್ಲೋಕದಲ್ಲಿ ಶ್ರೀಕೃಷ್ಣ ಹೇಳುತ್ತಾನೆ:

ರಸೋಹಂ ಅಪ್ಸು ಕೌಂತೇಯ ಪ್ರಭಾಸ್ಮಿ ಶಶಿ ಸೂರ್ಯಯೋ: 
ಪ್ರಣವಃ ಸರ್ವವೇದೇಷು ಶಬ್ದ: ಖೇ ಪೌರುಷಮ್ ನೃಷು 

"ನೀರಿನಲ್ಲಿ ನಾನು ರಸ ಆಗಿದ್ದೇನೆ. ಚಂದ್ರ-ಸೂರ್ಯರಲ್ಲಿ ಬೆಳಕಾಗಿದ್ದೇನೆ. 
ವೇದಗಳಲ್ಲಿ ಓಂಕಾರವಾಗಿದ್ದೇನೆ. ಆಕಾಶದಲ್ಲಿ ಶಬ್ದ ರೂಪದಲ್ಲಿ ಇದ್ದೇನೆ. 
ಮನುಷ್ಯರಲ್ಲಿ ಕ್ರಿಯಾಶಕ್ತಿಯ ರೂಪವಾಗಿ ನಿಂತಿದ್ದೇನೆ"

ಪರಮಾತ್ಮನ ಸನ್ನಿಧಾನ ಇದ್ದಾಗ ನೀರು ರುಚಿಸುತ್ತದೆ. ಪದಾರ್ಥಗಳ ಸೊಗಸು ನಾಲಿಗೆಗೆ ಸಿಗುತ್ತದೆ. ಕಿತ್ತಳೆ ತೊಳೆ ನೋಡಲು ಕೆಂಪಾಗಿದೆ. ದಪ್ಪಗೂ ಇದೆ. ಆದರೆ ತಿಂದಾಗ ಬರೀ ಬೆಂಡು ಬೆಂಡು. ಯಾಕೆ? ಅಲ್ಲಿ ಪರಮಾತ್ಮನ ಅಭಿವ್ಯಕ್ತಿ ಇಲ್ಲ. ಬಾದಾಮಿ, ಗೋಡಂಬಿ ಬಹಳ ಚೆನ್ನಾಗಿವೆ. ಬಾಯಿಯಲ್ಲಿ ಹಾಕಿಕೊಂಡು ಎಷ್ಟು ಹೊತ್ತು ಇಟ್ಟುಕೊಂಡರೂ ಏನೂ ರುಚಿಯಿಲ್ಲವಲ್ಲ? ಅಗಿದು ಅದಕ್ಕೆ ಸ್ವಲ್ಪ ರಸರೂಪದ ನೀರು ಸೇರಿದರೆ ತಕ್ಷಣ ರುಚಿ ಸಿಕ್ಕಿತು!  

ಮನುಷ್ಯನು ಮಾಡುವ ಕೆಲಸಗಳೂ ಅಂತೆಯೇ. ಯಾವುದೋ ಕಾರಣಕ್ಕೆ ಮಾಡಿದ ಕಾರ್ಯಗಳು ನೀರಸ. "ಪರಮಾತ್ಮನಿಗೆ ಪ್ರೀತಿಯಾಗಲಿ" ಎಂದು ಮಾಡಿದ ತಕ್ಷಣ ಅಲ್ಲಿ ರಸ ಬಂದು ಕೂತಿತು. ಮಾಡಿದ ಕರ್ಮ ಸತ್ಕರ್ಮ ಆಯಿತು. ಅವನಿದ್ದರೆ ಅದು ಸರಸ. ರಸದಿಂದ ಕೂಡಿದ್ದು. ಅವನಿಲ್ಲದಿದ್ದರೆ ಅದು ನೀರಸ. ರಸವಿಲ್ಲದ್ದು. ಅವನಿಗೆ ವಿರುದ್ಧವಾಗಿದ್ದರೆ ವಿರಸ. ಇದೇ ಸತ್ಕರ್ಮಗಳ ರಹಸ್ಯ!

"ರಾಮನಾಮವೆಂಬ ರಸವುಳ್ಳ ನೀರು ತರುತ್ತೇನೆ, ಬಿಂದಿಗೆ ಕೊಡು ಅಕ್ಕಾ" ಅಂದಾಗ "ಸತ್ಕರ್ಮಗಳನ್ನು ಮಾಡಿ ರಸರೂಪವಾದ ಸಾಧನೆಯನ್ನು ದೇಹದಲ್ಲಿ ತುಂಬಿಕೊಳ್ಳುತ್ತೇನೆ" ಎಂದು ಅರ್ಥ. ಇದೇ ಇಲ್ಲಿನ ವಿಶೇಷಾರ್ಥ. 
*****

"ಗೋವಿಂದ ಎಂಬ ಗುಣವುಳ್ಳ ನೀರಿಗೆ ತಾರೆ ಬಿಂದಿಗೆಯ, ಆವಾವ ಪರಿಯಲ್ಲಿ ಅಮೃತದ ನೀರಿಗೆ ತಾರೇ ಬಿಂದಿಗೆಯ" ಅನ್ನುವುದು ಮುಂದಿನದು. "ಗೋವಿಂದ" ಅನ್ನುವ ಪದಕ್ಕೆ ಅನೇಕ ಅರ್ಥಗಳು. ಗೋ ಅನ್ನುವ ಪದಕ್ಕೆ "ನೀರು" "ಹಸು" "ಭೂಮಿ" "ವೇದಗಳು" ಇನ್ನೂ ಮುಂತಾಗಿ ವಿವರಣೆಗಳಿವೆ. "ಉತ್ತಮವಾದದ್ದು" ಎಂದೂ ಅರ್ಥವುಂಟು. "ನೀರಿನಲ್ಲಿ ಶ್ರೇಷ್ಠವಾದ ರೀತಿಯ ನೀರು ತರುತ್ತೇನೆ" ಎಂದು ಹೇಳುವುದು ಸಾಮಾನ್ಯ ಅರ್ಥ. 

ಅಮೃತದ ನೀರು ಹೇಗೆ? ಸತ್ಕರ್ಮ ಮಾಡಿದ ಮೇಲೆ ಮುಂದೆ ಜನ್ಮವಿಲ್ಲದ ಮುಕ್ತಿ ಸಿಗುತ್ತದೆ. ಸಾವಿಲ್ಲದ್ದು ಅಮೃತ. ಗೋವಿಂದನ ಪ್ರೀತಿಗಾಗಿ ಮಾಡಿದ ಕರ್ಮಗಳನ್ನು, ನಿಷ್ಕಾಮ ಕರ್ಮಗಳನ್ನು, ತುಂಬಿಕೊಂಡಮೇಲೆ ಮತ್ತೆ ಮರಣವಿಲ್ಲ. ಅಂದರೆ ಅಮೃತತ್ವ ಸಿಕ್ಕಿತು. ಆದ್ದರಿಂದ "ಅಮೃತದ ನೀರು". 

"ಕಾಮಿನಿಯರ ಕೂಡೆ ಏಕಾಂತವಾಡೆನು, ತಾರೆ ಬಿಂದಿಗೆಯ" ಎಂದರೇನು? ನೀರು ತರಲು ನದಿಗೋ, ಭಾವಿಗೋ ಹೋದಾಗ ಅಲ್ಲಿ ನಮ್ಮಂತೆಯೇ ಅನೇಕರು ಬಂದಿರುತ್ತಾರೆ. ಸಾಮಾನ್ಯವಾಗಿ ನೀರು ತರಲು ಹೋಗುತ್ತಿದ್ದುದು ಲೋಕಾರೂಢಿಯಾಗಿ ಹೆಣ್ಣುಮಕ್ಕಳು. ಕಾಮಿನಿ ಅನ್ನುವ ಪದಕ್ಕೆ ಹೆಣ್ಣು ಎಂದೂ ಒಂದು ಅರ್ಥ. ಒಂದರ್ಥವೇನು, ಇದೇ ಅರ್ಥದಲ್ಲಿ ಆ ಪದವನ್ನು ಸಾಮಾನ್ಯವಾಗಿ ಬಳಸುವುದು. ಕೆಲವರು ಅಲ್ಲಿ ಕಂಡಾಗ ಸಹಜವಾಗಿ ಸ್ವಲ್ಪ ಅದು-ಇದು ಮಾತಾಡುವಂತೆ ಆಗುತ್ತದೆ. ಹರಟೆಯಲ್ಲಿ ಕಾಲಹರಣ ನಡೆಯುತ್ತದೆ. "ನಾನು ಹರಟೆಯಲ್ಲಿ ಕಾಲ ವ್ಯಯ ಮಾಡುವುದಿಲ್ಲ. ಅಲ್ಲಿ ಹೋಗಿ, ನೀರು ತುಂಬಿಕೊಂಡು ಬೇಗ ಬಂದುಬಿಡುತ್ತೇನೆ" ಎನ್ನುವುದು ಸಾಮಾನ್ಯ ಅರ್ಥ. 

"ಕಾಮ" ಅಂದರೆ ಆಸೆ. ಆಸೆ ಯಾವಾಗಲೂ ಒಂದೇ ಒಂದಾಗಿ ಬರುವುದಿಲ್ಲ. ಆಸೆಗಳು ಗುಂಪಾಗಿ ಮನುಷ್ಯನನ್ನು ಕಾಡುತ್ತವೆ. ಕಾಮದಿಂದ ಹುಟ್ಟಿದ್ದು ಕಾಮಿನಿ ಎಂದಾಗುತ್ತದೆ. "ಅಕ್ಕ, ನೀನು ದೇಹವನ್ನು ಕೊಟ್ಟರೆ ಅದನ್ನು ಇತರೆ ಆಸೆಗಳ, ಪ್ರಾಪಂಚಿಕ ಸುಖ-ಭೋಗಗಳ, ತೃಪ್ತಿಗೆ ಬಳಸುವುದಿಲ್ಲ. ಕೇವಲ ಸಾಧನೆಗಾಗಿಯೇ ಜೀವಿತ ಕಾಲವನ್ನು ಬಳಸಿಕೊಳ್ಳುತ್ತೇನೆ" ಎಂದು ಹೇಳುವುದೇ ವಿಶೇಷಾರ್ಥ. 

ನೀರು ತರಲೆಂದು ಬಿಂದಿಗೆ ಹಿಡಿದು ಹೊರಟು, ಜಲಾಶಯದ ಬಳಿ ಸಮಯವೆಲ್ಲ ಹರಟೆಯಲ್ಲಿ ಕಳೆದು, ಕಡೆಗೆ ಮನೆಗೆ ಖಾಲಿ ಬಿಂದಿಗೆ ಹಿಡಿದು ಬಂದರೆ ಹೇಗಿರುತ್ತದೆ? ಅಮೂಲ್ಯವಾದ ಮತ್ತು ಅಪರೂಪವಾದ ಮನುಷ್ಯ ಜನ್ಮ ಪಡೆದು. ಲೌಕಿಕ ಸುಖಗಳಲ್ಲಿ ಎಲ್ಲ ಕಾಲ ಕಳೆದು, ಕಡೆಗೆ ಅಲ್ಲಿ ಹೋಗಿ ನಿಂತಾಗ ಖಾಲಿ ಕೈ ಆಗುವಂತಾದರೆ ಹೇಗೆ? ಕಾಡಿ-ಬೇಡಿ ಪಡೆದ ದೇಹ, ಜನ್ಮ ವ್ಯರ್ಥವಾಯಿತು. ಹೀಗಾಗಲು ಬಿಡುವುದಿಲ್ಲ ಎಂದು ಮಹಾಲಕ್ಷ್ಮಿ ದೇವಿಗೆ ವಚನ ಕೊಟ್ಟಂತೆ ಈ ಮಾತು. 
***** 

"ಬಿಂದು ಮಾಧವನ ಘಟ್ಟಕ್ಕೆ ಹೋಗುವೆ, ಪುರಂದರ ವಿಠಲಗೆ ಅಭಿಷೇಕ ಮಾಡುವೆ" ಎನ್ನುವುದು ಕಡೆಯ ನುಡಿಯ ತಿರುಳು. ಕಾಶಿಯಲ್ಲಿ ಬಿಂದುಮಾಧವನ ದೇವಾಲಯ ಇದೆ. ಗಂಗಾನದಿಯ ಪಕ್ಕದಲ್ಲೇ ಇದೆ. "ಒಳ್ಳೆಯ ಗಂಗೆ ನೀರು ಬಿಂದಿಗೆಯಲ್ಲಿ ತುಂಬಿಕೊಂಡು ಬಂದು ವಿಠಲನ ಇನ್ನೊಂದು ರೂಪನಾದ ಮಾಧವನಿಗೆ ಅಭಿಷೇಕ ಮಾಡುತ್ತೇನೆ" ಅನ್ನುವುದು ಸಾಮಾನ್ಯ ಅರ್ಥ. 

"ನೀನು ನನ್ನ ಈ ಬೇಡಿಕೆಯ ಫಲವಾಗಿ ಕೊಡುವ ದೇಹದಲ್ಲಿ ಅನೇಕ ಸಾಧನೆಗಳನ್ನು ಮಾಡಿ ಅವುಗಳನ್ನೆಲ್ಲಾ ಪರಮಾತ್ಮನಿಗೆ ಸಮರ್ಪಣ ಮಾಡುತ್ತೇನೆ" ಎಂದು ಮಹಾಲಕ್ಷ್ಮೀದೇವಿಯ ಮುಂದೆ ಪ್ರತಿಜ್ಞೆ ಮಾಡುವುದೇ ಒಟ್ಟು ತಾತ್ಪರ್ಯ ಮತ್ತು ವಿಶೇಷಾರ್ಥ. 

"ಪ್ರತ್ಯಕ್ಷರಂ ಪ್ರತಿಪದಂ ಅನೇಕಾಕೂತಿ ಗರ್ಭಿತಂ" ಎಂದು ಒಂದು ಮಾತಿದೆ. ದೊಡ್ಡವರ ಮಾತುಗಳಲ್ಲಿ ಅವರ ಅನೇಕ ಕಾಲದ ಅನುಭವದ, ಅಧ್ಯಯನದ ಸಾರ ತುಂಬಿರುತ್ತದೆ. ಶ್ರೀ ಪುರಂದರದಾಸರ ಪದಗಳಲ್ಲಿ ಇವನ್ನು ಚೆನ್ನಾಗಿ ಕಾಣಬಹುದು. ಒಂದೊಂದು ಸಾಲಿನಲ್ಲೂ, ಒಂದೊಂದು ಪದದಲ್ಲೂ, ಸಾಮಾನ್ಯ ಅರ್ಥಗಳೂ, ಅವುಗಳ ಜೊತೆ-ಜೊತೆಯಾಗಿ ವಿಶೇಷ ಅರ್ಥಗಳೂ, ಗೂಡಾರ್ಥಗಳೂ ತುಂಬಿರುತ್ತವೆ. ಒಂದು ಸಲ ಓದಿದರೆ ಅಥವಾ ಕೇಳಿದರೆ ಅಷ್ಟಿಷ್ಟು ಅರ್ಥವೇನೋ ಆಗುತ್ತದೆ. ಸರಿಯಾದ ಮೌಲ್ಯ ನಮಗೆ ಸಿಗಬೇಕಾದರೆ ಹೆಚ್ಚಿನ ಅಧ್ಯಯನ ಅಗತ್ಯ. 

*****

ಹಿಂದಿನ ಮತ್ತು ಈ ಸಂಚಿಕೆಯನ್ನು ಓದಿದ ನಂತರ ಹಾಡನ್ನು ಕೇಳಿದರೆ ಹೆಚ್ಚು ಉಪಯೋಗವಾಗುತ್ತದೆ. ಆದ್ದರಿಂದ ಅದನ್ನು ಈ ಕೆಳಗೆ ಕೊಟ್ಟಿದೆ:


ಒಂದು ಬಾರಿ ಓದಿದರೆ ವಿಶೇಷಾರ್ಥಗಳು ಮನಸ್ಸಿನಲ್ಲಿ ನಿಲ್ಲುವುದಿಲ್ಲ. ಅದಕ್ಕೆ ಎರಡು ಮೂರು ಬಾರಿ ಓದುವ ತಾಳ್ಮೆ ಬೇಕು. ಒಮ್ಮೆ ಮನಸ್ಸಿನಲ್ಲಿ ನಿಂತರೆ ಮುಂದೆ ಬೇರೆ ಬೇರೆ ವಿಷಯಗಳ ಅಧ್ಯಯನ ಕಾಲದಲ್ಲಿ ಮತ್ತಷ್ಟು ಹೊಸ ವಿಷಯಗಳು ತೆರೆದುಕೊಳ್ಳುತ್ತವೆ. 

Sunday, April 27, 2025

ಅಚ್ಯುತ - ಅನಂತ - ಗೋವಿಂದ


"ವಿರಾಟ್ ಸೃಷ್ಟಿಯಲ್ಲಿ ಕೇಳಿಸುವ ಎಲ್ಲ ಶಬ್ದಗಳೂ ಪರಮಪುರುಷನನ್ನು ಕುರಿತಾಗಿವೆ ಮತ್ತು ಅವನ ಗುಣಗಳನ್ನೇ ಹೇಳುತ್ತವೆ" ಎನ್ನುವುದು ಶಾಸ್ತ್ರಾಧ್ಯಯನದಲ್ಲಿ ಕಲಿಯುವ ಒಂದು ಪ್ರಮೇಯ. ಹಾಗೆಯೇ ಪರಮಾತ್ಮನ ಸೃಷ್ಟಿಯಲ್ಲಿ ಇರುವ ಎಲ್ಲ ಶಬ್ದಗಳನ್ನೂ ಎರಡು ರೀತಿಯವು ಎಂದು ಜ್ಞಾನಿಗಳು ವಿಭಾಗ ಮಾಡಿದ್ದಾರೆ. "ವರ್ಣಾತ್ಮ್ಯಕ" ಮತ್ತು "ಧ್ವನ್ಯಾತ್ಮಕ" ಎಂಬುದಾಗಿ ಈ ಎರಡು ಪ್ರಭೇದಗಳು.


ನಾವು ಎಲ್ಲ ಬಗೆಯ ಶಬ್ದಗಳನ್ನೂ ಕೇಳಿ ತಿಳಿಯುವುದು ಶ್ರವಣೇಂದ್ರಿಯದಿಂದ. ನಮ್ಮ ಕಿವಿಗಳ ಸಹಾಯದಿಂದ. ಧ್ವನಿ ತರಂಗಗಳನ್ನು ಕಿವಿಗಳಿಂದ ಸ್ವೀಕರಿಸಿದ ನಂತರ ನಮ್ಮ ಮಿದುಳು ಅದನ್ನು ನಮಗೆ ಅರ್ಥ ಮಾಡಿಸುತ್ತದೆ. ವಿಜ್ಞಾನವೂ ಇದನ್ನೇ ಹೇಳುತ್ತದೆ. ನಾವು ಕೇಳುವ ಕೆಲವು ಶಬ್ದಗಳನ್ನು ವರ್ಣಮಾಲೆಯಲ್ಲಿರುವ ಅಕ್ಷರಗಳಿಂದ ಬರೆಯಬಹುದು. ಇವುಗಳನ್ನು "ವರ್ಣಾತ್ಮ್ಯಕ" ಶಬ್ದಗಳು ಎನ್ನುತ್ತಾರೆ. ನಾವು ಕೇಳುವ ಮತ್ತೆ ಕೆಲವು ಶಬ್ದಗಳನ್ನು ಅಕ್ಷರಗಳಲ್ಲಿ ಬರೆಯಲಾಗುವುದಿಲ್ಲ. ಉದಾಹರಣೆಗೆ ಘಂಟೆ, ಜಾಗಟೆ, ಸಿಡಿಲು ಮುಂತಾದುವುಗಳ ಶಬ್ದಗಳು. ಪ್ರಾಣಿ-ಪಕ್ಷಿಗಳು ಕೂಗುವ ಶಬ್ದಗಳು. ನದಿ-ಸಮುದ್ರಗಳು ಮಾಡುವ ಶಬ್ದಗಳು. ಘಂಟೆ "ಢಣ್" ಎಂದಿತು ಎಂದು ಹೇಳಿದರೂ ಎಲ್ಲ ಘಂಟೆಗಳೂ ಒಂದೇ ರೀತಿ ಶಬ್ದ ಮಾಡುವುದಿಲ್ಲ. ಒಂದು ಘಂಟೆ ಮಾಡಿದ ಶಬ್ದದಂತೆ ಮತ್ತೊಂದಿಲ್ಲ. ಹತ್ತು ಘಂಟೆಗಳು ಮಾಡುವ ಶಬ್ದ ವೈವಿಧ್ಯವನ್ನು ನಮ್ಮ ಇಂದ್ರಿಯಗಳು ಗುರುತಿಸಬಲ್ಲವು. ನದಿ ಜುಳು ಜುಳು ಎಂದು ಹರಿಯುತ್ತದೆ ಎಂದರೂ, ಒಮ್ಮೆ ಇದ್ದಂತೆ ಮತ್ತೊಮ್ಮೆ ಇಲ್ಲ. ನೀರು ಹರಿವು ಹೆಚ್ಚಿದ್ದಾಗಿನಂತೆ ನೀರು ಹರಿವು ಕಡಿಮೆ ಇದ್ದಾಗ ಇಲ್ಲ. ಇಂತಹ ಶಬ್ದಗಳನ್ನು "ಧ್ವನ್ಯಾತ್ಮಕ" ಶಬ್ದಗಳು ಎಂದು ಹೇಳುತ್ತಾರೆ. 

ನಮ್ಮ ಇಂದ್ರಿಯಗಳು ಒಂದು ನಿಗದಿತ ಪ್ರಮಾಣದ ಅಂತರದ ಆವರ್ತನ (ಫ್ರೀಕ್ವೆನ್ಸಿ) ಶಬ್ದಗಳನ್ನು ಮಾತ್ರ ಗ್ರಹಿಸಬಲ್ಲವು. ಆದರೆ ಸೃಷ್ಟಿಯಲ್ಲಿ ಇದನ್ನು ಮೀರಿದ ಶಬ್ದಗಳೂ ಇವೆ. ಇವನ್ನು ಇನ್ಫ್ರಾಸೌಂಡ್ ಮತ್ತು ಅಲ್ಟ್ರಾಸೌಂಡ್ ತರಂಗಗಳು ಅನ್ನುತ್ತಾರೆ. ಅನೇಕ ವೈದ್ಯಕೀಯ ಮತ್ತು ತಾಂತ್ರಿಕ ಬೆಳವಣಿಗಳಲ್ಲಿ ಈ ಶಬ್ದಗಳ ಉಪಯೋಗವನ್ನೂ ಮಾಡುತ್ತಾರೆ. 

*****

ನಮ್ಮ ಸಂಪ್ರದಾಯದಂತೆ ಮತ್ತು ನಡವಳಿಕೆಯಲ್ಲಿ ಬಂದಿರುವ ಅಭ್ಯಾಸದಂತೆ ಯಾರನ್ನಾದರೂ ನೋಡಲು ಹೋಗುವಾಗ ಬರಿಗೈಲಿ ಹೋಗುವುದಿಲ್ಲ. ನಮ್ಮ ಮನೆಗೆ ಯಾರಾದರೂ ಬಂದಾಗಲೂ ಅವರನ್ನು ಬರಿಗೈಲಿ ಕಳಿಸುವುದಿಲ್ಲ. ಸಮಾರಂಭಗಳಿಗೆ ಹೋದಾಗಲೂ ಅಷ್ಟೇ. "ಬರಿಗೈಲಿ ಹೇಗೆ ಹೋಗುವುದು?" ಎಂದು ಚಿಂತಿಸುತ್ತೇವೆ. ನಮ್ಮ ಸಮಾರಂಭಗಳಿಗೆ ಬೇರೆಯ ಅತಿಥಿ-ಅಭ್ಯಾಗತರು ಬಂದಾಗಲೂ ಅಷ್ಟೇ. "ಬಂದವರನ್ನು ಹಾಗೆಯೇ ಕಳಿಸಿದೆವಲ್ಲ" ಎಂದು ಬೇಸರಿಸುತ್ತೇವೆ. ಈ ರೀತಿ ಏನಾದರೂ ಕೊಡುವ ನಡಾವಳಿ ಹಾಸು-ಹೊಕ್ಕಾಗಿ ಬಂದಿದೆ. ವಿದೇಶಗಳಲ್ಲೂ ಅಷ್ಟೇ. ಒಂದು ಚಾಕೊಲೇಟ್ ಅಥವಾ ಒಂದು ವೈನ್ ಬಾಟಲು ಅಥವಾ ಹೂಗುಚ್ಛ ಇತ್ಯಾದಿ ತರುತ್ತಾರೆ. ಅವರವರ ದೇಶ-ಕಾಲಗಳ ಅನುಗುಣವಾಗಿ ಈ ವ್ಯವಸ್ಥೆ ನಡೆಯುತ್ತಾ ಬಂದಿದೆ. 

ನಾವು ಯಾರಿಗಾದರೂ ಏನನ್ನಾದರೂ ಕೊಡುವಾಗ ಅದರ ಬಗ್ಗೆ  ಸ್ವಲ್ಪ ಯೋಚಿಸುವುದು ಸಹಜ. ಯಾವುದಾರೂ ಪದಾರ್ಥ ಕೊಡುವ ಮುಂಚೆ ಮುಖ್ಯವಾಗಿ ಮೂರು ಅಂಶಗಳನ್ನು ಗಮನಿಸುತ್ತೇವೆ:
  • ಕೊಡುವ ಪದಾರ್ಥವು ಒಳ್ಳೆಯ ಗುಣಮಟ್ಟದ್ದು ಮತ್ತು ಚೆನ್ನಾಗಿ ಇರಬೇಕು. ಅದರಲ್ಲಿ ಯಾವುದೇ ನ್ಯೂನತೆ ಅಥವಾ ಕಡಿಮೆ ಇರಬಾರದು.  ಹಣ್ಣು ಕೊಟ್ಟರೆ ಅದು ನೋಡಲು ಚೆನ್ನಾಗಿರಬೇಕು. ಸಿಹಿಯಾಗಿದೆ ಎಂದು ಗೊತ್ತಾದರೆ ಇನ್ನೂ ಒಳ್ಳೆಯದು. ತಿಂಡಿ ಕೊಟ್ಟರೆ ಅದು ಶುಚಿ-ರುಚಿಯಾಗಿರಬೇಕು. ಬಟ್ಟೆ ಕೊಟ್ಟರೆ ಅದು ನೋಡಲು ಚೆನ್ನಾಗಿದ್ದು ಕೊಳೆ-ಕಲೆ ಇರಬಾರದು. ಹೀಗೆ ಪ್ರತಿ ವಸ್ತುವೂ ಕೆಲವು ಗುಣಗಳನ್ನು ಹೊಂದಿರಬೇಕು ಮತ್ತು ಅವುಗಳಲ್ಲಿ ಏನೂ ಕಳಪೆ ಅಥವಾ ಚ್ಯುತಿ ಇರಬಾರದು. 
  • ಕೊಡುವ ಪದಾರ್ಥವು ಹೆಚ್ಚಿದ್ದಷ್ಟೂ ಒಳ್ಳೆಯದು. ಕೆಲವು ಗಾತ್ರದಲ್ಲಿ ದೊಡ್ಡದಿರಬೇಕು. ಮತ್ತೆ ಕೆಲವು ಮೌಲ್ಯ ಅಥವಾ ಬೆಲೆಯಲ್ಲಿ ಹೆಚ್ಚಿರಬೇಕು. ಬಟ್ಟೆ ಕೊಟ್ಟರೆ ಅಳತೆ ಸರಿಯಾಗಿರಬೇಕು. ದೂರ ಪ್ರಯಾಣ ಮಾಡುವವರಿಗೆ ಕೊಟ್ಟರೆ ಪ್ಯಾಕಿಂಗ್ ಚೆನ್ನಾಗಿರಬೇಕು. ಮತ್ತೆ ಕೆಲವು ತೆಗೆದು ಕೊಳ್ಳುವವರ ಯೋಗ್ಯತೆಗೆ ಅನುಗುಣವಾಗಿರಬೇಕು. ಹೀಗೆಯೇ ಯೋಚಿಸಿ ಹುಡುಕಿ ಆರಿಸುವುದು, 
  • ಕೊಡುವ ಪದಾರ್ಥ ಸರಿಯಾದವರಿಗೆ ಸೇರಬೇಕು. ನಾವು ಕೊಡಬೇಕು ಎಂದು ಉದ್ದೇಶಿಸಿದ್ದು ಒಬ್ಬರಿಗೆ; ಅದು ತಲುಪಿದುದು ಇನ್ನೊಬ್ಬರಿಗೆ. ಹೀಗಾಗಬಾರದು. ಅನೇಕ ಸಮಾರಂಭಗಳಲ್ಲಿ ಯಾರಿಗೆ ಕೊಡಬೇಕು ಎಂದು ತೀರ್ಮಾನಿಸಿ, ಅದನ್ನು ಒಂದು ಪ್ಯಾಕೆಟ್ನಲ್ಲಿ ಹಾಕಿ ಹೆಸರೂ ಕೂಡ ಬರೆದಿಡುವುದಿದೆ. ಹೀಗಿದ್ದೂ ಹೆಚ್ಚು-ಕಡಿಮೆ ಆಗಿ ಗೈರುವಿಲೆ ಆಗಿರುವುದೂ ನಮ್ಮ ಅನುಭವದ ಮಾತೇ. ಆದ್ದರಿಂದ ಸರಿಯಾದವರಿಗೆ ಪದಾರ್ಥ ತಲುಪಿತು ಎಂದು ಖಚಿತವಾಗಬೇಕು. 
ಹೀಗೆ ಕೊಟ್ಟ ಪದಾರ್ಥದ ಗುಣಮಟ್ಟ, ಅದರ ಪ್ರಮಾಣ ಮತ್ತು ತಲುಪಬೇಕಾದವರ ವಿಳಾಸ, ಈ ಮೂರು ಅಂಶಗಳು ಬಹಳ ಮುಖ್ಯವಾಗುತ್ತವೆ. 

*****

ಲೋಕಾರೂಢಿಯಲ್ಲಿ ಕೊಡುವ ಪದಾರ್ಥಗಳ ವಿಷಯದಲ್ಲೇ ಇಷ್ಟು ಅಳೆದು-ಸುರಿದು ಕೊಡುವುದಾದರೆ ನಾವು ನಂಬಿದ ದೈವಕ್ಕೆ, ಆ ಪರಮಪುರುಷನಿಗೆ ಕೊಡುವಾಗ ಈ ಎಚ್ಚರ ಇರಲೇಬೇಕಲ್ಲವೇ?  ಆದ್ದರಿಂದ ನಾವು ಮಾಡುವ ಪೂಜೆ-ಪುನಸ್ಕಾರಗಳ ವಿಷಯದಲ್ಲೂ ಆದಷ್ಟೂ ಎಚ್ಚರ ವಹಿಸುತ್ತೇವೆ. ಪ್ರತಿಯೊಂದು ಪದಾರ್ಥ ಆರಿಸುವುದರಲ್ಲೂ ಹೆಚ್ಚಿನ ಗಮನ ಕೊಡುತ್ತೇವೆ. ಶ್ರದ್ದೆ ಇದ್ದಷ್ಟೂ ಒಳ್ಳೆಯದು ಎನ್ನುತ್ತೇವೆ. ಆ ಪರಮಾತ್ಮನಿಗೆ ನಾವು ಏನು ಕೊಟ್ಟೆವು? ಎಲ್ಲವೂ ಅವನು ಸೃಷ್ಟಿಸಿ ಕೊಟ್ಟಿರುವುದೇ. ಅವನು ಕೊಟ್ಟಿದ್ದು ಅವನ ಮುಂದೆ ಇಟ್ಟು ಕೈ ಮುಗಿಯುವುದೇ ಅಲ್ಲವೇ?

ಮೊದಲು ಗುಣಮಟ್ಟದ ವಿಷಯ ನೋಡೋಣ. ನಾವು ಎಷ್ಟು ಜಾಗರೂಕರಾಗಿದ್ದರೂ ವ್ಯತ್ಯಾಸ ಆಗೇ ಆಗುತ್ತದೆ. ಮೊದಲಿಗೆ ನಮ್ಮಲ್ಲೇ ಏನಾದರೂ ನ್ಯೂನತೆ ಇರಬಹುದು. ಕಾರ್ಯ ಮಾಡುವ ಸ್ಥಳ ಎಷ್ಟೇ ಶುಚಿ ಮಾಡಿದ್ದರೂ ಅದು ಪೂರ್ತಿ ಶುದ್ದವಾಗಿದೆ ಎಂದು ಎದೆ ತಟ್ಟಿ ಹೇಳುವಂತಿಲ್ಲ. ಪಾತ್ರೆ-ಪಡಗ ಎಷ್ಟು ತೊಳೆದಿದ್ದರೂ ಎಲ್ಲೋ ಒಂದು ಮೂಲೆಯಲ್ಲಿ ಸ್ವಲ್ಪ ಕಂಡೂಕಾಣದಂತೆ ಕೊಳೆ ಇರಬಹುದು. ನೈವೇದ್ಯಕ್ಕೆ ಮಾಡಿದ ಅಡಿಗೆಯಲ್ಲಿ ವ್ಯತ್ಯಾಸ ಇರಬಹುದು. ಬೆಂದಿರುವುದು ಕಡಿಮೆ ಇರಬಹುದು. ಸ್ವಲ್ಪ ತಳ ಹತ್ತಿರಬಹುದು. ಉಪ್ಪು-ಖಾರ ಹೆಚ್ಚು-ಕಡಿಮೆ ಇರಬಹುದು. ಇಡೇ ರೀತಿ ಪ್ರತಿ ಸಾಮಾನು-ಸಲಕರಣೆಯಲ್ಲಿ ಹೆಚ್ಚು-ಕಡಿಮೆ ಇರಬಹುದು. ಈ ಕಾರಣಕ್ಕಾಗಿಯೇ ಶ್ರಾದಾದಿಗಳಲ್ಲಿ ಎಲ್ಲ ತಯಾರಿ ಮಾಡಿಕೊಂಡು ಮುಖ್ಯ ಕೆಲಸ ಪ್ರಾರಂಭ ಮಾಡುವ ಮುನ್ನ ಈ ರೀತಿ ಹೇಳುತ್ತೇವೆ:

"ಆದೌ ಆತ್ಮ, ಸ್ಥಳ, ಭಾಂಡ,  ಭಾಜನ, ಕರ್ತೃ, ಭೋಕ್ಟ್ರು, ಹವಿದ್ರವ್ಯ ಶುಧ್ಯರ್ಥಂ 
ಕಾಲಾತೀತ ದೋಷ ಪ್ರಾಯಶ್ಚಿತ್ತಾರ್ಥಮ್ ವೈಶ್ವದೇವ ಸೂಕ್ತ ಮಂತ್ರ ಪಠನಂ ಕರಿಷ್ಯೇ" 

ಬೇರೆ ಕಾರ್ಯಗಳಲ್ಲೂ ಹೀಗೆ ಅವಕ್ಕೆ ಸರಿಯಾದ ಪ್ರಾರ್ಥನೆ ಮಾಡಿ ನಂತರ ಕೆಲಸ ಪ್ರಾರಂಭಿಸುತ್ತೇವೆ. ಇಷ್ಟಿದ್ದರೂ ಎಲ್ಲಾ ಸರಿಯಿದೆ ಎಂದು ಹೇಳಲು ಬರುವುದಿಲ್ಲ. ಇದನ್ನು ಸರಿಮಾಡುವುದು ಹೇಗೆ?

ಎರಡನೆಯದು ಪದಾರ್ಥ ಅಥವಾ ಮಾಡಿದ ಕೆಲಸದ ಮೌಲ್ಯ. ಇಡೀ ವಿಶ್ವವನ್ನೇ ತನ್ನ ಹೊಟ್ಟೆಯ ಒಂದು ಮೂಲೆಯಲ್ಲಿ ಧರಿಸಿರುವ ಪರಮಾತ್ಮನ ಯೋಗ್ಯತೆಗೆ ತಕ್ಕಂತೆ ನಾವು ಕೊಡುವುದನ್ನು ಯೋಚಿಸಲೂ ಸಾಧ್ಯವಿಲ್ಲ. "ಅಂಧಕಾಸುರನ ಹೊಟ್ಟೆಗೆ ಅರಕಾಸು ಮಜ್ಜಿಗೆ" ಎಂದೊಂದು ಗಾದೆ. ನಮ್ಮ ಪರಮಾತ್ಮನಿಗೆ ಮಾಡುವ ಸಮರ್ಪಣೆಗಳು ಇದಕ್ಕಿಂತ ಎಷ್ಟೂ ಪಾಲು ಕಡಿಮೆಯೇ. ನಾವು ಕೊಡುವ ಈ ಚಿಕ್ಕದ್ದನ್ನು ದೊಡ್ಡದು ಮಾಡುವುದು ಹೇಗೆ? 

ಗುಣಮಟ್ಟ ಮತ್ತು ಮೌಲ್ಯದ ವಿಷಯ ಹೀಗೆ. ತಲುಪಿಸುವ ವಿಳಾಸದ ಕಥೆ ಏನು? ಎಲ್ಲ ಶಬ್ದಗಳು, ಧ್ವನ್ಯಾತ್ಮಕವಿರಲಿ ಅಥವಾ ವರ್ಣಾತ್ಮ್ಯಕವಿರಲಿ, ಅವನನ್ನೇ ಕುರಿತು ಹೇಳುತ್ತವೆ ಅಂದ ಮೇಲೆ ಅವನ ಅನಂತ ನಾಮಗಳಲ್ಲಿ ಯಾವುದನ್ನು ವಿಳಾಸವಾಗಿ ಉಪಯೋಗಿಸಬೇಕು? 

ಈಗ ಮೂರು ಪ್ರಶ್ನೆಗಳು ನಮ್ಮ ಮುಂದೆ ನಿಂತವು. ಮೊದಲು ಹೇಗಾದರೂ ಮಾಡಿ ಸಮರ್ಪಣ ಮಾಡುವ ಪದಾರ್ಥ-ಕೆಲಸಗಳು ಎಲ್ಲ ನ್ಯೂನತೆಗಳಿಂದ ಹೊರಬರಬೇಕು. ಎರಡನೆಯದು ಅವುಗಳ ಮೌಲ್ಯ ಹೆಚ್ಚಾಗಿ ಪರಮಾತ್ಮನ ಯೋಗ್ಯತೆಗೆ ಸರಿಹೊಂದಬೇಕು. ಕಡೆಯದಾಗಿ ಅವೆಲ್ಲಾ ಅವನಿಗೇ ತಲುಪಬೇಕು. ಇದು ಹೇಗೆ ಸಾಧ್ಯ? 

*****

ಪರಮಾತ್ಮನ ಅನಂತ ಹೆಸರುಗಳಲ್ಲಿ "ಅಚ್ಯುತ" ಅನ್ನುವುದೂ ಒಂದು. ಏನಿದರ ಅರ್ಥ? ಏನೂ ಕುಂದು-ಕೊರತೆಗಳಿಲ್ಲದವನು, ಓರೆ-ಕೋರೆಗಳಿಲ್ಲದವನು, ಪರಿಪೂರ್ಣನು, ಚ್ಯುತಿ ಇಲ್ಲದವನು ಅಚ್ಯುತನು. ನಾವು ಅರ್ಪಿಸುವುದರಲ್ಲಿ ಇರುವ ಕೊರತೆಗಳನ್ನು, ಚ್ಯುತಿಗಳನ್ನು ತೆಗೆದು ಅದನ್ನು ಸರಿಮಾಡುವ ಶಕ್ತಿ ಅವನೊಬ್ಬನಿಗೆ ಇದೆ. ಆದ್ದರಿಂದ ಆ ಅಚ್ಯುತನನ್ನೇ "ಇವನ್ನು ಸರಿಮಾಡಪ್ಪಾ" ಎಂದು ಕೇಳಿಕೊಳ್ಳಬೇಕು!

ಕೊಟ್ಟ ಪದಾರ್ಥ ಅಥವಾ ಸಾಧನೆ ಅತ್ಯಲ್ಪ. ಇದನ್ನು ಅವನಿಗೆ ಯೋಗ್ಯ ಮಾಡುವುವು ಹೇಗೆ? ಅವನು ಅನಂತನು. ಅನಂತನಿಗೆ ತಕ್ಕುದಾದದ್ದು ಅನಂತವೇ. ಆದ್ದರಿಂದ "ಈ ಅಲ್ಪವನ್ನು ಅನಂತ ಮಾಡಪ್ಪಾ" ಎಂದು ಆ ಅನಂತನನ್ನೇ ಕೇಳುವುದು! 

ಇನ್ನು ವಿಳಾಸದ ವಿಚಾರ. ಎಲ್ಲೆಲ್ಲೂ ವ್ಯಾಪಿಸಿರುವವನು ಅವನು. ಇಡೀ ವಿಶ್ವವನ್ನು ಸೃಷ್ಟಿಸಿ ಅದರೊಳಗೆ ಪ್ರವೇಶ ಮಾಡಿದವನು ಅವನು. ಅಷ್ಟು ಮಾತ್ರವಲ್ಲ. ಅದರ ಒಳಗೆ ಪ್ರವೇಶ ಮಾಡಿದರೂ ಅದರ ಹೊರಗೂ ಇದ್ದಾನೆ. ಅದಕ್ಕೆ ಅವನನ್ನು "ಗೋವಿಂದ" ಎನ್ನುವುದು. (ಇದರ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ). ಆದ ಕಾರಣ ಇದನ್ನು ಆ ಗೋವಿಂದನ ವಿಳಾಸಕ್ಕೆ ಕಳಿಸುವುದು!

ಮೂರು ಸಮಾಸ್ಯೆಗಳಿಗೂ ಪರಿಹಾರ ಒದಗಿದಂತೆ ಆಯಿತಲ್ಲ!

******

ಈ ಕಾರಣಕ್ಕಾಗಿಯೇ ಎಲ್ಲ ರೀತಿಯ ಅಲ್ಪ ಸಾಧನೆಗಳನ್ನು ಅವನಿಗೆ ಅರ್ಪಿಸುವಾಗ ಅವನ ಲೆಕ್ಕವಿಲ್ಲದಷ್ಟು ಹೆಸರುಗಳಲ್ಲಿ ಈ ಮೂರನ್ನು ಆರಿಸಿ, ಎಲ್ಲಾ ರೀತಿಯ ಲೋಪ-ದೋಷಗಳನ್ನು ನಿವಾರಿಸಿ ಈ ಕಾರ್ಯವನ್ನು ಸಾರ್ಥಕ ಮಾಡು ಎಂದು ಬೇಡುತ್ತಾ ಹೀಗೆ ಹೇಳುವುದು:

ಅಚ್ಯುತಾಯ ನಮಃ 
ಅನಂತಾಯ ನಮಃ 
ಗೋವಿಂದಾಯ ನಮಃ 
ಅಚ್ಯುತ-ಅನಂತ-ಗೋವಿಂದೇಭ್ಯೋ ನಮಃ 

ಇದನ್ನೇ ಮೂರು ಸಾರಿ ಹೇಳುವ ಪದ್ಧತಿ ಉಂಟು. ಮೂರು ಸಾರಿ ಏಕೆ? ವಾಸ್ತವವಾಗಿ ಒಂದೇ ಸಲ ಸಾಕು. ಆದರೆ ನಮ್ಮ ಕೋತಿ ಮನಸ್ಸು ಅಲ್ಲಿ ಇಲ್ಲಿ ಹರಿದಾಡುತ್ತಿರುತ್ತಡೆ. ಆದ್ದರಿಂದ ಮೂರು ಸಲ ಹೇಳಿದರೆ ಒಂದು ಸಲವಾದರೂ ಈ ಅನುಸಂಧಾನ ಬರಬಹುದು ಅನ್ನುವ ಉದ್ದೇಶದಿಂದ ಹಾಗೆ ಮಾಡುವುದು. 

Wednesday, November 22, 2023

ವ್ಯಾಪ್ತೋಪಾಸನೆ

ಮನುಷ್ಯನ ಜ್ಞಾನ ಪ್ರಾಪ್ತಿ ಮತ್ತು ಸುತ್ತಮುತ್ತಲಿನ ವಸ್ತುಗಳ ಅನುಭವ ಪಡೆಯುವುದು ಐದು ಜ್ಞಾನೇಂದ್ರಿಯಗಳಿಂದ. ಕಣ್ಣಿನಿಂದ ನೋಡುವುದು, ಕಿವಿಯಿಂದ ಕೇಳುವುದು, ಮೂಗಿನಿಂದ ವಾಸನೆ ಇತ್ಯಾದಿ ಗ್ರಹಿಸುವುದು, ನಾಲಿಗೆಯಿಂದ ರುಚಿ ನೋಡುವುದು ಮತ್ತು ಚರ್ಮದಿಂದ ಸ್ಪರ್ಶ ಮಾಡುವುದು. ಇವುಗಳ ಚೌಕಟ್ಟಿನಲ್ಲೇ ನಮ್ಮ ಎಲ್ಲ ವ್ಯಾಪಾರಗಳೂ ನಡೆಯುವುದು. ಬುದ್ಧಿ ಇವುಗಳ ಹೊರಗಡೆಯೂ ಯೋಚಿಸಬಹುದು. ಮನಸ್ಸು ಎಲ್ಲೆಂದರಲ್ಲಿ ಹರಿದಾಡಬಹುದು. ಆದರೆ ಈ ಐದು ಇಂದ್ರಿಯಗಳ ಯೋಗ್ಯತೆಗಿಂತ ದೊಡ್ಡದಾದ ಪದಾರ್ಥವನ್ನು ಅಥವಾ ವಿಷಯವನ್ನು ತಿಳಿಯುವುದು ಕಷ್ಟ. ದೃಷ್ಟಿ ಹೋಗುವವರೆಗೂ ನೋಡಬಹುದು. ಒಂದು ಅಳತೆಯ ದೂರದವರೆಗಿನ ಶಬ್ದ ಕೇಳಬಹುದು. ಅದರಿಂದ ಹೊರಗಿನ ಪದಾರ್ಥಗಳ ಜ್ಞಾನ ಹೇಗೆ? ಅತೀಂದ್ರಿಯವಾದುದನ್ನು (ಇಂದ್ರಿಯಗಳ ವ್ಯಾಪ್ತಿಯ ಅಥವಾ ಯೋಗ್ಯತೆಯ ಹೊರಗಿನದು) ತಿಳಿಯುವುದು ಹೇಗೆ?

ಅತಿ ಸೂಕ್ಷ್ಮವಾದುದನ್ನು ನೋಡಲು ನಾವು "ಸೂಕ್ಷ್ಮದರ್ಶಕ" (ಮೈಕ್ರೋಸ್ಕೋಪ್) ಬಳಸುತ್ತೇವೆ. ಅತಿ ದೂರದಲ್ಲಿ ಇರುವ ವಸ್ತುಗಳನ್ನು ನೋಡಲು "ದೂರದರ್ಶಕ" (ಟೆಲಿಸ್ಕೋಪ್) ಉಪಯೋಗಿಸುತ್ತೇವೆ. ಇವುಗಳ ಪ್ರಯೋಜನ ಪಡೆದರೂ ಈ ಸಾಧನಗಳ ಶಕ್ತಿಗೂ ಒಂದು ಮಿತಿ ಇದೆ. ನಮ್ಮಲ್ಲಿರುವ ಅತ್ಯಂತ ಶಕ್ತಿಯುತ ಸೂಕ್ಷ್ಮದರ್ಶಕದ ಶಕ್ತಿಯನ್ನೂ ದಾಟಿದ ಅತಿ ಸೂಕ್ಷ್ಮ  ವಸ್ತುಗಳು ಸೃಷ್ಟಿಯ ರಹಸ್ಯದಲ್ಲಿ ಅಡಗಿವೆ. ಒಂದು ಕಾಲದಲ್ಲಿ "ಅಣು" ಅತಿ ಚಿಕ್ಕ ವಸ್ತು ಎಂದು ನಂಬಲಾಗಿತ್ತು. ವಿಜ್ನ್ಯಾನಿಗಳು ಅಣುವನ್ನೂ ಭೇದಿಸಿದರು. ಪರಮಾಣು ಬಂದಿತು. ಪರಮಾಣುವನ್ನೂ ಮೀರಿದ ಸೂಕ್ಷ್ಮ ಕಣಗಳು ಇವೆ ಎಂದಾಯಿತು. ಎಷ್ಟು ಶಕ್ತಿಯುತ ದೂರದರ್ಶಕವಾದರೂ ಇನ್ನೂ ನಮ್ಮ "ಹಾಲುಹಾದಿ" (Milkyway) ನಕ್ಷತ್ರಪುಂಜದ (ಗ್ಯಾಲಕ್ಸಿ) ಒಂದು ಭಾಗವನ್ನು ಮಾತ್ರ ತೋರಿಸಲು ಶಕ್ತವಾಗಿವೆ. ನಮ್ಮ ನಕ್ಷತ್ರಪುಂಜಕ್ಕಿಂತಲೂ ದೊಡ್ಡವಾದ ಅನೇಕ ಪುಂಜಗಳು ವಿಶ್ವದಲ್ಲಿ ಇವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. 

ನಾವು ತಿಳಿದಿರುವ ಅತಿಸೂಕ್ಷ್ಮ ಪದಾರ್ಥಕ್ಕಿಂತಲೂ ಸೂಕ್ಷ್ಮವಾದದ್ದು ಇದೆ ಎಂದಾಯಿತು. ಅಂತೆಯೇ, ನಾವು ಕಂಡಿರುವ ಅತಿದೊಡ್ಡ ದೃಶ್ಯಕ್ಕಿಂತಲೂ ಅನೇಕ ಪಾಲು ದೊಡ್ಡದಾದ ವಿಶ್ವವಿದೆ ಎಂದೂ ತಿಳಿಯಿತು. ಒಟ್ಟಿನಲ್ಲಿ ಈ ಕಡೆಯೂ ಅನಂತ, ಆ ಕಡೆಯೂ ಅನಂತ. ಇಂತಹ ವಿರಾಟ್ ವಿಶ್ವದ ಯಾವುದೋ ಒಂದು ಕ್ಸುದ್ರ ಕಣದಲ್ಲಿ ಮನುಷ್ಯನಿದ್ದಾನೆ. ಅನಂತ ವಿಶ್ವ ಅವನನ್ನು ಎಲ್ಲ ಕಡೆಯಿಂದಲೂ ವ್ಯಾಪಿಸಿದೆ. ಇಷ್ಟು ಮಾತ್ರವಲ್ಲ. ಮನುಷ್ಯನ ಒಳಗೂ ಅನಂತ ಕಣಗಳಿವೆ. ಮನುಷ್ಯನ ದೇಹದಲ್ಲಿ ಇಷ್ಟೆಲ್ಲಾ ಇದೆಯೇ ಎಂದು ಆಶ್ಚರ್ಯ ಪಡುವಷ್ಟು ಉಂಟು!

ಚಿಂತಿಸಲೂ ಅಗಾಧ.  

*****

ಮಹಾಭಾರತದ ಅತಿ ಮುಖ್ಯ ದೃಶ್ಯವೊಂದನ್ನು ನೆನಪಿಗೆ ತರೋಣ. ಎರಡು ಸೈನ್ಯಗಳ, ಹದಿನೆಂಟು ಅಕ್ಷೋಹಿಣಿಗಳ ವಿಶಾಲ ಹಿನ್ನೆಲೆಯ ಮಧ್ಯದಲ್ಲಿ ಪಾರ್ಥ ಮತ್ತು ಪಾರ್ಥಸಾರಥಿ ರಥದಲ್ಲಿ ಕುಳಿತಿದ್ದಾರೆ. ವಿಜಯನಿಗೆ ಜಯಿಸಲಾಗದ ಮೋಹ ಆವರಿಸಿದೆ. ತನ್ನ ಇಡೀ ಜೀವಮಾನ ಕಾಯುತ್ತಿದ್ದ ಯುದ್ಧ ಎದುರು ನಿಂತಿದ್ದರೂ ರಥದಿಂದ ಕೆಳಗಿಳಿದು ಗಾಂಡೀವ ಬಿಸಾಡಿದ್ದಾನೆ. ಯುದ್ಧ ಒಲ್ಲೆ ಎನ್ನುತ್ತಾನೆ. ವಿಚಿತ್ರವಾದ ತರ್ಕದಿಂದ ವಾದಿಸುತ್ತಾನೆ. "ಸ್ತ್ರೀಷು ದುಷ್ಟೇಷು ವಾರ್ಷ್ಣೇಯ ಜಾಯತೇ ವರ್ಣ ಸಂಕರಃ" ಎನ್ನುತ್ತಾನೆ. ಯುದ್ಧದಿಂದ ಸಮಾಜ ಹಾಳಾಗುತ್ತದೆ ಎನ್ನುವ ಸತ್ಯ ಹೇಳಿದರೂ, ಸಮಾಜವನ್ನು ಮತ್ತಷ್ಟು ಹಾಳುಮಾಡುವ ದುಷ್ಟರನ್ನು ಬಿಟ್ಟುಬಿಡಲು ನಿರ್ಧರಿಸಿದ್ದಾನೆ. ಭಿಕ್ಷೆ ಬೇಡಿ ತಿರಿದುಣ್ಣಲೂ  ತಯಾರಾಗಿದ್ದಾನೆ. 

ಇಂಥ ಶಿಷ್ಯನನ್ನು ಇಟ್ಟುಕೊಂಡು ಶ್ರೀಕೃಷ್ಣ ಏನು ಮಾಡಬೇಕು? ಅರ್ಜುನನ್ನು ನೆಪವಾಗಿಟ್ಟುಕೊಂಡು "ಗೀತೋಪದೇಶ" ಮಾಡುತ್ತಾನೆ. ತನ್ನ ವಿರಾಟ್ ಸ್ವರೂಪವನ್ನೂ ತೋರಿಸುತ್ತಾನೆ. "ನಿನ್ನ ಈ ಕಣ್ಣುಗಳು ನನ್ನ ಆ ವಿಶ್ವರೂಪವನ್ನು ನೋಡಲಾರವು. ಅದಕ್ಕಾಗಿ ನಿನಗೆ ದಿವ್ಯ ದೃಷ್ಟಿ ಕೊಡುತ್ತೇನೆ" ಎನ್ನುತ್ತಾನೆ. ಕೊಡುತ್ತಾನೆ. ಅರ್ಜುನ ನೋಡುತ್ತಾನೆ. ದಿವ್ಯ ದೃಷ್ಟಿ ಇದ್ದರೂ ಪೂರ್ತಿ ನೋಡಲಾರ. ಕ್ಷಣಕ್ಕಿಂತ ಹೆಚ್ಚು ಕಾಲ ದಿಟ್ಟಿಸಲಾರ. "ನನ್ನ ಅಂಗಾಂಗಗಳು ಸುಡುತ್ತಿವೆ. ಸೀದಂತಿ ಮಮ ಗಾತ್ರಾಣಿ" ಎಂದು ಕೂಗುತ್ತಾನೆ. ಈ ವಿರಾಟ್ ರೂಪವನ್ನು ಮರೆ ಮಾಡು. ಮೊದಲಿನ ಸೌಮ್ಯ ರೂಪ ತೋರಿಸು" ಎಂದು ಅಂಗಲಾಚುತ್ತಾನೆ! 

ವಿರಾಟಪುರುಷನೇ ಕೃಪೆಮಾಡಿ ವಿಶೇಷ ದೃಷ್ಟಿ ಕೊಟ್ಟು ತೋರಿಸಿದ ಆ ರೂಪವನ್ನು ಅರ್ಜುನನಂತಹವನೇ ನೋಡಲಾಗಲಿಲ್ಲ. ಸದಾ ಕೇಶವನ ಹಿಂದೆ-ಮುಂದೆ ಓಡಾಡಿಕೊಂಡಿದ್ದವನು. ಮಾಧವನ ಅನೇಕ ಮುಖಗಳನ್ನು ಕಣ್ಣಾರೆ ಕಂಡವನು. ಯೋಗ್ಯ ಜೀವರಲ್ಲಿ ಅತಿ ಯೋಗ್ಯನು. ಮುಕುಂದನಿಂದಲೇ ತರಬೇತಿ ಪಡೆದವನು. ಇಷ್ಟೆಲ್ಲಾ ಸಿದ್ಧತೆ,  ಯೋಗ್ಯತೆ ಇದ್ದರೂ ಅವನಿಂದಲೇ ಆ ರೂಪವನ್ನು ನೋಡಲಾಗಲಿಲ್ಲ. 

ನಾವೇನು ಕಂಡೇವು?

*****

ನಾವು ಬಹಳ ಕಷ್ಟ ಪಟ್ಟು ಒಂದು ಮನೆ ಕಟ್ಟುತ್ತೇವೆ. ಎಷ್ಟು ವಿಶಾಲವಾಗಿ ಕಟ್ಟಿದರೂ ಕಡೆಗೆ ನಮ್ಮ ಇಷ್ಟಕ್ಕಿಂತಲೂ ಚಿಕ್ಕದೇ. ಅದರೊಳಗೆ ಸೇರುತ್ತೇವೆ. ಸಾರ್ಥಕ ಭಾವ ಬರುತ್ತದೆ. ಮನೆಯ ಒಳಗೆ ನಾವು ಇದ್ದರೆ ಹೊರಗಿಲ್ಲ. ಹೊರಗೆ ಇದ್ದರೆ ಮನೆಯ ಒಳಗಿಲ್ಲ. ಸ್ವಲ್ಪ ಕಾಲದ ನಂತರ ಒಳಗೂ ಇಲ್ಲ; ಹೊರಗೂ ಇಲ್ಲ. ಮತ್ತೆ ಸ್ವಲ್ಪ ದಿನದ ನಂತರ ಇದ್ದೆವು ಅನ್ನುವ ನೆನಪೂ ಬೇರೆಯವರಿಗೆ ಇಲ್ಲ. ನಾವಂತೂ ಎಂದೋ ಇಲ್ಲವಾದೆವು. 

"ವಿಷ್ಣು ಸಹಸ್ರನಾಮ"ದ ಪ್ರತಿಯೊಂದು ಹೆಸರಿಗೂ ನೂರು ಅರ್ಥಗಳಿವೆ ಎಂದು ಹೇಳುತ್ತಾರೆ. "ಗೋವಿಂದ" ಎನ್ನುವ ಪದಕ್ಕೂ ಅನೇಕ ಅರ್ಥಗಳಿವೆ. ಮಹಾಪ್ರಳಯದ ನಂತರ ವಿಶಾಲ ವಿಶ್ವವನ್ನು ಹೊರಗೆ ನಿಂತು ಸೃಷ್ಟಿ ಮಾಡಿದನು ಆ ವಿರಾಟ್ ಪುರುಷ. ಅಷ್ಟೇ ಅಲ್ಲ. ಸೃಷ್ಟಿ ಮಾಡಿದ ನಂತರ ಅದರ ಒಳಗೆ ಪ್ರವೇಶ ಮಾಡಿದನು. ಒಳಗೆ ಆವರಿಸಿದನು. ಆದರೆ ಹೊರಗೂ ಉಳಿದನು. "ಅಂತರ್ಬಹಿಶ್ಚ ತತ್ಸರ್ವಂ ವ್ಯಾಪ್ಯ ನಾರಾಯಣ ಸ್ಥಿತಃ" ಅನ್ನುತ್ತದೆ ಮಹಾನಾರಾಯಣೋಪನಿಷತ್.  ಹಿಂದೆ ಮಾತ್ರ ಅಲ್ಲ. ಇಂದಷ್ಟೇ ಅಲ್ಲ. ಮುಂದೆಯೂ ಉಂಟು. ಅನಂತ ಕಾಲದಿಂದ ಅನಂತ ಕಾಲದವರೆಗೂ ಅನಂತವಾಗಿದ್ದಾನೆ. ಎಲ್ಲವನ್ನೂ ಅವರಿಸಿದ್ದಾನೆ. ಚಿಕ್ಕದರ ಒಳಗೆ ಅದಕ್ಕಿಂತ ಚಿಕ್ಕದಾಗಿದ್ದಾನೆ. ದೊಡ್ಡದರ ಹೊರಗೆ ಅದಕ್ಕಿಂತ ದೊಡ್ಡದಾಗಿದ್ದಾನೆ. 

ಇದರ ತಿಳುವಳಿಕೆ ನಮ್ಮ ಜ್ನ್ಯಾನದ ಪರಿಧಿ ಮೀರಿದ್ದು. ತಾನೇ ಸೃಷ್ಟಿಸಿದ ಜಗತ್ತಿನ ಒಳಗೆ ತಾನೇ ಪ್ರವೇಶ ಮಾಡಿ ಅದರ ಹೊರಗೂ ಉಳಿದಿದ್ದರಿಂದ ಅವನು "ಗೋವಿಂದ". 

ಇದನ್ನು ತಿಳಿಯಲಾಗದೇ ನಾವು ಗೋವಿಂದ!

*****

"ಕಾಲಾಯ ತಸ್ಮೈ ನಮಃ" ಎನ್ನುವುದು ಎಲ್ಲರೂ ಹೇಳುವ ಮಾತು. ಕಾಲವು ಎಲ್ಲವನ್ನೂ ಬದಲಿಸುತ್ತದೆ. ಕಾಲವು ಎಲ್ಲವನ್ನೂ ನುಂಗುತ್ತದೆ. ಕಾಲವೇ ಕೊನೆಗೆ ಉಳಿಯುವುದು. ಎಲ್ಲರ ಕಾಲ ಕಳೆದ ಮೇಲೂ. ಅಂದರೆ ಆ ಪರಮಾತ್ಮನ ಕಥೆ ಏನು? ಅವನಿಗೂ ಒಂದು ಕಾಲವಿಲ್ಲವೇ? ಅವನು ಕಾಲವಾಗುವುದಿಲ್ಲವೇ? ಇದೊಂದು ದೊಡ್ಡ ಪ್ರಶ್ನೆ. 

ಮಹಾ ವಿದ್ವಾಂಸರಾದ ಶ್ರೀನಿವಾಸಾಚಾರ್ಯರು, ಮುಂದೆ ಜಗನ್ನಾಥ ದಾಸರೆಂದು ಪ್ರಸಿದ್ಧರಾದವರು, ಇದಕ್ಕೆ ಉತ್ತರ ಕೊಡುತ್ತಾರೆ:

ಕಾಲಾಂತರ್ಗತ ಕಾಲನಿಯಾಮಕ ಕಾಲಾತೀತ ತ್ರಿಕಾಲಜ್ಞ 

ಕಾಲಪ್ರವರ್ತಕ ಕಾಲನಿವರ್ತಕ ಕಾಲೋತ್ಪಾದಕ 

ಕಾಲರೂಪ ತವ ದಾಸೋಹಂ ತವ ದಾಸೋಹಂ 

ವಾಸುದೇವ ವಿಘತಾಘಸಂಘ ತವ ದಾಸೋಹಂ ತವ ದಾಸೋಹಂ 

ಕಾಲವನ್ನು ಸೃಷ್ಟಿಸಿ, ಕಾಲದಲ್ಲಿದ್ದು, ಕಾಲವನ್ನು ಹಿಡಿತದಲ್ಲಿಟ್ಟು ಎಲ್ಲ ಕಾಲವನ್ನೂ ತಿಳಿದು, ಕಾಲದ ವ್ಯಾಪ್ತಿಯನ್ನೂ ದಾಟಿ ಕಾಲದ ಪರಮ ಸ್ವರೂಪನಾದವನೇ ಆ ವಿರಾಟ್ ಪುರುಷ. 

ನಮ್ಮ ಸೀಮಿತ ಕಾಲದಲ್ಲಿ ಅವನ್ನು ಪೂರ್ಣವಾಗಿ ತಿಳಿಯುವುದು ಅಸಾಧ್ಯ.  ಹಾಗೆಂದು ಬಿಟ್ಟೀ ಬಿಡೋಣವೇ? ಕೂಡದು. ನೂರಕ್ಕೆ ನೂರು ಅಂಕ ಸಿಗುವುದಿಲ್ಲ ಎಂದು ಪರೀಕ್ಷೆಯೇ ಬರೆಯದಿದ್ದರೆ ಹೇಗೆ? 

ಪರೀಕ್ಷೆ ಬರೆಯಲೇ ಬೇಕು. ಪ್ರಯತ್ನ ಪಡಲೇಬೇಕು. 

***** 

ದೇಶಾತೀತ, ಕಾಲಾತೀತನಾದ, ಸರ್ವವ್ಯಾಪ್ತನಾದ, ಸರ್ವಶಕ್ತನಾದ ಆ ವಿರಾಟ್ರೂಪಿ ಪರಮಾತ್ಮನನ್ನು ಹೇಗೆ ಆರಾಧಿಸುವುದು? ಅವನ ವ್ಯಾಪ್ತಿ ನಮ್ಮ ಕಲ್ಪನೆಗೂ ದೊಡ್ಡದು. ಆದರೆ ಅವನು ಈ ಎಲ್ಲ ಗುಣಗಳನ್ನೂ ಹೊಂದಿರುವವನು ಎಂದು ತಿಳಿದವರಿಗೆ ಎಲ್ಲಿ ನೋಡಿದರಲ್ಲಿ ಅವನೇ ಕಾಣಿಸಬೇಕು. ಆ ಸ್ಥಿತಿ ತಲುಪಿದವರು ಮಾಡುವ ಉಪಾಸನೆಯೇ "ವ್ಯಾಪ್ತೋಪಾಸನೆ". ಅವರ ಆರಾಧನೆ ಹೇಗಿರುತ್ತದೆ?

ಜಲ, ಕಾಷ್ಠ, ಶೈಲ, ಗಗನ, ನೆಲ, ಪಾವಕ, ವಾಯು, ತರು 

ಫಲ,  ಪುಷ್ಪ, ಬಳ್ಳಿಗಳೊಳಗೆ  ಪರಮಾತ್ಮನಿದ್ದಾನೆ 

ಎಂದರಿತವಗೆ ಆನಂದ ಆನಂದ 

ಆ ರೀತಿ ಉಪಾಸನೆ ಮಾಡುವ ಶಕ್ತಿ ಇದ್ದವರಿಗೆ ಬೇರೆ ಪ್ರತೀಕಗಳ ಅವಶ್ಯಕತೆಯೇ ಇಲ್ಲ. ಅಂತಹ ಸಾಧಕರಿಗೆ "ಕಂಡಕಂಡದ್ದೆಲ್ಲ ಕಮಲನಾಭನ ಮೂರ್ತಿ, ಉಂಡು ಉಟ್ಟದ್ದೆಲ್ಲಾ ದೇವಪೂಜೆ". ಆದರೆ ಆ ಮಟ್ಟ ತಲುಪಲು ಬಹಳ ಬಹಳ ಸಾಧನೆ ಬೇಕು. 

*****

ವ್ಯಾಪ್ತೋಪಾಸನೆಗೆ ಇಷ್ಟು ಮಹತ್ವ ಇದ್ದರೆ ಎಲ್ಲರೂ ಅದನ್ನೇ ಮಾಡಬಹುದಲ್ಲ! ಬೇರೆ ರೀತಿ ಪ್ರಯತ್ನಗಳು ಯಾಕೆ? ಈ ಪ್ರಶ್ನೆಗೆ ಉತ್ತರ ಮುಂದೆ ನೋಡೋಣ.