Showing posts with label Bhagavadgite. Show all posts
Showing posts with label Bhagavadgite. Show all posts

Friday, January 9, 2026

ಮನಸ್ಸು ನಿಲ್ಲಿಸುವ ಪ್ರಯತ್ನ


ಹಿಂದಿನ ಸಂಚಿಕೆಯಲ್ಲಿ "ಹದಿನಾರು ಮತ್ತು ಇಪ್ಪಂತ್ತೊಂದು" ಅನ್ನುವ ಶೀರ್ಷಿಕೆಯ ಅಡಿಯಲ್ಲಿ ಭಾರತೀಯ ಸಂಖ್ಯಾಶಾಸ್ತ್ರ ಹುಟ್ಟಿ ಬೆಳೆದ ರೀತಿಯ ಮತ್ತು ಅದರ ಜನ್ಮದಾತ ಎಂದು ಹೇಳುವ ಕಪಿಲ ಮುನಿ ಬಗ್ಗೆ ಸ್ವಲ್ಪ ವಿಚಾರ ಮಾಡಿದೆವು. ಕರ್ದಮ ಪ್ರಜಾಪತಿ ಮತ್ತು ದೇವಹೂತಿ ದೇವಿಯರ ಮಗನಾದ ಕಪಿಲನಾಗಿ ಶ್ರೀ ಮಹಾವಿಷ್ಣುವು ಅವತರಿಸಿದ ಸಮಾಚಾರವನ್ನು ನೋಡಿದೆವು. ಪ್ರಜಾಪತಿ ಕರ್ದಮ-ದೇವಹೂತಿ-ಕಪಿಲ ಮುನಿಗಳ ಕಾರ್ಯಕ್ಷೇತ್ರವಾದ ಗುಜರಾತು ರಾಜ್ಯದ ಪಾಟನ್ ಜಿಲ್ಲೆಯಲ್ಲಿರುವ ಸಿದ್ಧಿಪುರ, ಅಲ್ಲಿನ ಪ್ರಸಿದ್ಧ ಬಿಂದು ಸರೋವರ ಮತ್ತು "ಮಾತೃಗಯಾ" ಕ್ಷೇತ್ರದ ಬಗ್ಗೆ ನೋಡಿದ್ದೆವು. 

"I Salute You, Dear Mother" ಎಂಬ ಶೀರ್ಷಿಕೆಯ ಸಂಚಿಕೆಯಲ್ಲಿ ಹೆತ್ತ ತಾಯಿ ನೆನಪಿನಲ್ಲಿ ತಾಯಿಯನ್ನು ಉದ್ದೇಶಿಸಿ ಮಾಡುವ ಹದಿನಾರು ಸಂಖ್ಯೆಯ ಪಿಂಡಪ್ರದಾನ ಮತ್ತು ಪ್ರತಿ ಪಿಂಡ ಕೊಡುವ ಸಂದರ್ಭದಲ್ಲಿ ಹೇಳುವ ಶ್ಲೋಕಗಳು, ಅವುಗಳಲ್ಲಿರುವ ಭಾವ ತುಂಬಿದ ಅರ್ಥಗಳನ್ನೂ ನೋಡಿದೆವು. 

ಇದೇ ವಿಷಯಕ್ಕೆ ಸಂಬಂಧಿಸಿದ ಈ ಹಿಂದಿನ ಎರಡು ಸಂಚಿಕೆಗಳನ್ನು (ಒಂದು ಇಂಗ್ಲೀಷಿನಲ್ಲಿದೆ) ಇಲ್ಲಿ ಕ್ಲಿಕ್ ಮಾಡಿ ಓದಬಹುದು. 
*****

ಬಿಹಾರ ರಾಜ್ಯದಲ್ಲಿರುವ "ಗಯಾ" ಕ್ಷೇತ್ರದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಶ್ರದ್ದಾಳು ಜನಗಳು ಈ ಗಯಾ ಕ್ಷೇತ್ರ ಯಾತ್ರೆ ಮಾಡಿ ಅಲ್ಲಿರುವ "ಗದಾಧರ" ದೇವಾಲಯದಲ್ಲಿ ಪಿತೃಶ್ರಾದ್ಧ ಮಾಡಿ, ಗದಾಧರನ ವಿಗ್ರಹದ ಮುಂದುಗಡೆ ಇರುವ ಕಲ್ಲಿನ "ವಿಷ್ಣುಪಾದ" ಸ್ಥಳದಲ್ಲಿ ಪಿಂಡಗಳನ್ನು ವಿಸರ್ಜನೆ ಮಾಡಿದರೆ ಪಿತೃಗಳಿಗೆ ಉತ್ತಮ ಗತಿ ಸಿಗುವುದೆಂದು ನಂಬಿಕೆ. ಸಾಮಾನ್ಯವಾಗಿ ಕಾಶಿಯಾತ್ರೆ ಮಾಡುವ ಯಾತ್ರಿಕರು ಮೊದಲು ಪ್ರಯಾಗ ತಲುಪಿ, ಅಲ್ಲಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ (ಕೆಲವರು "ವೇಣೀದಾನ" ಸಹ ಮಾಡುತ್ತಾರೆ), ನಂತರ ಕಾಶಿಯ ವಿಶ್ವೇಶ್ವರ ಮತ್ತು ಬಿಂದುಮಾಧವ ದರ್ಶನ ಮಾಡಿ, ಆಮೇಲೆ ಗಯಾ ತಲುಪಿ ಅಲ್ಲಿ "ಸರ್ವ ಪಿತೃ ಶ್ರಾದ್ಧ" ಮಾಡುತ್ತಾರೆ. ಅಲ್ಲಿಗೆ "ಕಾಶಿಯಾತ್ರೆ" ಎಂದು ಹೇಳುವ ಸಂಪ್ರದಾಯ ಪದ್ಧತಿ ಪೂರ್ತಿ ಆಯಿತು ಎಂದು ನಂಬುತ್ತಾರೆ. 

ಗದಾಧರ ಅಂದರೆ ಯಾರು? ಗದಾಧರ ಅನ್ನುವ ಶ್ರೀ ಮಹಾವಿಷ್ಣುವನ್ನು ಹೀಗೆ ವರ್ಣಿಸಿ ಹೇಳುತ್ತಾರೆ:

ಬ್ರಹ್ಮಾಂಡ ಭುವನಾರಂಭ ಮೂಲಸ್ತoಭೋ ಗದಾಧರಃ 
ಕೌಮೋದಕೀ ಕರೇ ಯಸ್ಯ ತಂ ನಮಾಮಿ ಗದಾಧರಮ್ 

ಕೈಯಲ್ಲಿ "ಕೌಮೋದಕೀ" ಹೆಸರಿನ ಗದೆ ಹಿಡಿದು ಈ ಬ್ರಹ್ಮಾಂಡಕ್ಕೆ ಆಧಾರವಾದ ಕಂಭದಂತೆ ನಿಂತಿರುವ ಶ್ರೀ ಮಹಾವಿಷ್ಣುವೇ ಗದಾಧರ.

ಪಕ್ಕದಲ್ಲಿ ಕೊಟ್ಟಿರುವ ಗಯಾ ದೇವಾಲಯದ ಮೂಲ ಮೂರ್ತಿ ಚಿತ್ರವನ್ನು ನೋಡಿದರೆ ಕೌಮೋದಕಿ ಗದೆಯನ್ನು ಕಾಣಬಹುದು

ಭೂಮಿಯ ಯಾವ ಪ್ರದೇಶದಲ್ಲಿ ಶ್ರಾದ್ಧ ಮಾಡಿ "ಪಿಂಡಪ್ರದಾನ" ಮಾಡಿದರೂ ಅದು ಭೂಲೋಕದಲ್ಲಿ ಮಾಡಿದಂತೆ ಆಗುತ್ತದೆ. ಆದರೆ ಗಯಾದಲ್ಲಿರುವ ಗದಾಧರನ ಪಾದದ ಮೇಲೆ ಅದನ್ನು ಅರ್ಪಿಸಿದಾಗ ಅದು ಅನಂತ ವಿಶ್ವದ ಮೂಲ ಕಂಭದಂತೆ ನಿಂತಿರುವ ಶ್ರೀಹರಿಯ ಪದತಲದಲ್ಲಿ ಅರ್ಪಿಸಿದಂತೆ. ಈ ಕಾರಣಕ್ಕಾಗಿ ಗಯಾ ಪಿಂಡಪ್ರದಾನಕ್ಕೆ ವಿಶೇಷ ಮಹತ್ವ. 

ಗಯಾ ದೇವಾಲಯದ ಈ ಗದಾಧರ ಮೂರ್ತಿಯ ಮುಂಭಾಗದಲ್ಲಿ ಇರುವ ಅವನ ಪಾದವನ್ನು ಸ್ವಲ್ಪ ಕೆಳಗಡೆ ಕೊಟ್ಟಿರುವ ಚಿತ್ರದಲ್ಲಿ ಕಾಣಬಹುದು. ಈ ಚಿತ್ರದಲ್ಲಿ ಮಹಾವಿಷ್ಣುವಿನ ಪಾದದಲ್ಲಿರುವ ಧ್ವಜ, ವಜ್ರ, ಅಂಕುಶ ಮುಂತಾದ ರೇಖಾ ಲಕ್ಷಣಗಳನ್ನು ಕಾಣಬಹುದು. ಇವುಗಳ ವಿಶೇಷವನ್ನು ಮುಂದೆ ಸ್ವಲ್ಪ ಮಟ್ಟಿಗೆ ನೋಡೋಣ. 

ಪ್ರತಿದಿನ ಸಾವಿರಾರು ಯಾತ್ರಿಕರು ಈ "ವಿಷ್ಣುಪಾದ" ಇರುವ ಕಲ್ಲಿನ ಮೇಲೆ ಪಿಂಡಪ್ರದಾನ ಮಾಡುತ್ತಾರೆ. ಈ ಕಾರಣದಿಂದ ಅಲ್ಲಿ ರಾಶಿ ರಾಶಿ ಪಿಂಡಗಳು ಬಿದ್ದಿರುತ್ತವೆ. ಕೆಲವು ನಿಮಿಷಗಳಿಗೊಮ್ಮೆ ದೇವಾಲಯದ ಕಾರ್ಯಕರ್ತರು ಈ ಪ್ರದೇಶವನ್ನು ಸ್ವಚ್ಛ ಮಾಡುತ್ತಾರೆ. ಕೆಲವರು ಈ ಸಮಯಕ್ಕಾಗಿ ಕಾದುಕೊಂಡಿದ್ದು ಆ ಚಿನ್ಹೆಯಮೇಲೆ ಪಿಂಡಗಳನ್ನು ಹಾಕಿ ಧನ್ಯತಾ ಭಾವ ಹೊಂದುತ್ತಾರೆ. 

ಕೆಲವು ಕುಟುಂಬಗಳಲ್ಲಿ, ವಿಶೇಷವಾಗಿ ವೈಷ್ಣವರಲ್ಲಿ, ಮನೆ-ಮಠಗಳಲ್ಲಿ ಮಾಡುವ ಶ್ರಾದ್ಧ ಸಮಯದಲ್ಲಿ ಹೀಗೆ ಗಯಾಯಾತ್ರೆಯ ಸಮಯದಲ್ಲಿ ಅಲ್ಲಿಂದ ತಂದಿರುವ ತಾಮ್ರದ ವಿಷ್ಣು ಪಾದ ಇಟ್ಟು ಪೂಜಿಸಿ, ಅದರ ಮೇಲೆ ಪಿಂಡಪ್ರದಾನ ಮಾಡುವ ಪದ್ಧತಿ ಈಗಲೂ ನಡೆದುಬಂದಿದೆ. 

******

ಹಿಂದಿನ ಸಂಚಿಕೆಯಲ್ಲಿ ತಾಯಿ ದೇವಹೂತಿ ಮತ್ತು ಮಗ ಕಪಿಲ ಮುನಿಯ ಸಂವಾದವನ್ನು ಸ್ವಲ್ಪ ನೋಡಿದೆವು. ಜೀವನ-ಮರಣ ಚಕ್ರದಿಂದ ಬಿಡುಗಡೆ ಹೊಂದಲು ಯಾವ ದಾರಿ ಹಿಡಿಯಬೇಕೆಂಬ ಬಗ್ಗೆ ದೇವಹೂತಿ ಕೇಳಿದ ಪ್ರಶ್ನೆಗಳಿಗೆ ಮಗನಾದ ಕಪಿಲ ಮುನಿ ನೀಡಿದ ಉತ್ತರರೂಪದ ಉಪದೇಶ ಶ್ರೀಮದ್ ಭಾಗವತದ ಮೂರನೆಯ ಸ್ಕಂಧದಲ್ಲಿ "ಕಪಿಲ ಗೀತೆ" ಎಂದು ಪ್ರಸಿದ್ಧವಾಗಿದೆ. ಮಹಾಭಾರತದ ಮಧ್ಯದಲ್ಲಿ ಕುರುಕ್ಷೇತ್ರದ ಯುದ್ಧ ಪ್ರಾರಂಭವಾಗುವ ಸಮಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ತಿಳಿಸಿದ "ಶ್ರೀಮದ್ ಭಗವದ್ಗೀತೆ" ಗೀತೆ ಎಂಬ ಹೆಸರಿಂದ ಪ್ರಸಿದ್ಧವಾಗಿದೆ. ಭಾಗವತದ ಮೂರನೆಯ ಸ್ಕಂಧದ ಈ "ಕಪಿಲ ಗೀತೆ" ಮತ್ತು ಹನ್ನೊಂದನೆಯ ಸ್ಕಂಧದ ಶ್ರೀಕೃಷ್ಣ ಉದ್ಧವನಿಗೆ ಮಾಡಿದ ಉಪದೇಶದ "ಉದ್ಧವ ಗೀತೆ" ಇವುಗಳು ಕೂಡ ಭಗವದ್ಗೀತೆಯಂತೆಯೇ ಅನೇಕ ಸಾರಯುತ ವಿಷಯಗಳನ್ನು ಒಳಗೊಂಡಿವೆ. 

ಜೀವನ-ಮರಣ ಚಕ್ರದಿಂದ ಬಿಡುಗಡೆಗಾಗಿ ಮಾಡುವ ಸಾಧನೆಯ ಮೊದಲ ಮೆಟ್ಟಿಲು ನಮ್ಮ ಮನಸ್ಸನ್ನು ನಿಯಂತ್ರಿಸಿ ಗಟ್ಟಿ ಮಾಡುವ ಕೆಲಸ. ನಮ್ಮ ಮನಸ್ಸು ಇಡೀ ಪ್ರಪಂಚದಲ್ಲಿ ಅತಿ ವೇಗವಾಗಿ ಓಡುವ ವಸ್ತು. ಅದಕ್ಕೇ ವೇಗದ ಸುದ್ದಿ ಬಂದಾಗಲೆಲ್ಲಾ ವಾಯುವೇಗ, ಮನೋವೇಗ ಅನ್ನುವುದು. ವಾಯುವೇಗಕ್ಕೂ ಮೀರಿದುದು ಮನೋವೇಗ. ಒಂದೇ ಕ್ಷಣದಲ್ಲಿ ವಿಶ್ವವನ್ನೆಲ್ಲಾ ಸುತ್ತಿ ಬರುವುದು ಅದು. ಯಾವುದೇ ಸಾಧನೆಯ ಕೆಲಸ ಮಾಡಲು ತೊಡಗಿದಾಗ ಈ ಮನಸ್ಸನ್ನು ನಿಯಂತ್ರಿಸುವುದೇ ದೊಡ್ಡ ಕಷ್ಟದ ಕಾರ್ಯ. 

ಕಪಿಲ ಮುನಿಯ ಉಪದೇಶದಲ್ಲಿ ಇದಕ್ಕೆ ಪರಿಹಾರ ಸಿಕ್ಕುತ್ತದೆ. ಪ್ರಾರಂಭದಲ್ಲಿ ಎಲ್ಲ ಕೆಲಸಗಳೂ ಕಷ್ಟವೇ. ಹುಟ್ಟಿದ ಮಗು ವರುಷ ತುಂಬುವ ವೇಳೆಗೆ ನಡೆಯಲು ಪ್ರಾರಂಭಿಸುತ್ತದೆ. ಅನೇಕ ಸಲ ಬೀಳುತ್ತದೆ. ಮೊದಲು ಗೋಡೆ ಹಿಡಿದು ನಡೆಯುತ್ತದೆ. ನಂತರ ತಾಯಿಯ ಕೈಬೆಟ್ಟು ಹಿಡಿದು ನಡೆಯುತ್ತದೆ. ಕ್ರಮೇಣ ತಾನೇ ಮೆಲ್ಲಮೆಲ್ಲನೆ ನಡೆಯುತ್ತದೆ. ಬಿದ್ದಾಗ ಮತ್ತೆ ಮೇಲೇಳುತ್ತದೆ. ಹೀಗೆ ಮಾಡುತ್ತ ಮಾಡುತ್ತಾ ಕಲಿಯುತ್ತದೆ. ಮನಸ್ಸಿನ ಹತೋಟಿಯೂ ಹೀಗೆಯೇ. 

ಕಪಿಲ ಮುನಿಯು ಇದಕ್ಕೆ ಉಪಾಯವಾಗಿ "ಸಜ್ಜನರ ಸಹವಾಸ" ಎನ್ನುವ ಪರಿಹಾರ ಹೇಳುತ್ತಾನೆ. ನಾವು ಚಿಕ್ಕವರಿದ್ದಾಗ ನಮ್ಮ ಹಿರಿಯರು "Tell me who is your friend; I will tell you who you are" ಎಂದು ಒಂದು ಗಾದೆ ಹೇಳುತ್ತಿದ್ದರು. ಜೊತೆಯವರು ಸೋಮಾರಿಗಳಾದರೆ ನಾವೂ ಸೋಮಾರಿಗಳಾಗುತ್ತೇವೆ. ಅವರು ದುರಭ್ಯಾಸಗಳ ದಾಸರಾಗಿದ್ದಾರೆ ನಾವೂ ಹಾಗಾಗುತ್ತೇವೆ. ಅವರು ನಡೆಯುವ ರೀತಿಯೇ ನಮಗೆ ಮಾದರಿ ಆಗುತ್ತದೆ. ಸಾಧನೆಯಲ್ಲಿಯೂ ಹೀಗೆಯೇ. ಆದ್ದರಿಂದ ಮೊದಲು ಸಜ್ಜನರನ್ನು ಹುಡುಕಿ ಅವರ ಸಂಗದಲ್ಲಿ ಆದಷ್ಟೂ ಹೆಚ್ಚು ಕಾಲ ಕಳೆಯಬೇಕು. ಶ್ರೀ ಮೋಹನದಾಸರ ಕೋಲೆ ಪದದಲ್ಲಿ "ಸಜ್ಜನರ ಸಹವಾಸ ಮಲ್ಲಿಗೆ ಮುಡಿದಂತೆ, ದುರ್ಜನರ ಸಂಗ ಮುಲ್ಲಂಗಿ ತಿಂದು ತೇಗಿದಂತೆ ಕೋಲೆ" ಎಂದು ಹೇಳುತ್ತಾರೆ. ಮಲ್ಲಿಗೆ ಹೂವು ಮುಡಿದು ಮಾರನೆಯ ದಿನ ಅದನ್ನು ಬಿಸಾಡಿದರೂ ತಲೆಯಲ್ಲಿ ಮಲ್ಲಿಗೆ ಸುವಾಸನೆ ಇರುವುದು. ಮೂಲಂಗಿಯೂ ಹಾಗೆ. ತಿಂದು ಎಷ್ಟೋ ಹೊತ್ತಿನಮೇಲೆ ತೇಗಿದರೂ ಅದೇ ಕಮಟು ವಾಸನೆಯೇ!

ಆಯಿತು. ಒಪ್ಪೋಣ. ಸಜ್ಜನರ ಸಂಗ ಪ್ರಾರಂಭಿಸಿದೆವು. ಅವರು ದಿನಕ್ಕೆ ಇಪ್ಪತ್ತುನಾಲ್ಕು ಗಂಟೆಯೂ ಹತ್ತಿರವಿರುವುದಿಲ್ಲ. ಮೇಲಾಗಿ, ನಾವು ಒಂಟಿಯಾಗಿದ್ದಾಗ ಮನಸ್ಸು ಹಿಡಿದಿಡುವುದು ಇನ್ನೂ ಕಷ್ಟ. ಅದಕ್ಕೆ ಏನು ಉಪಾಯ?
 
ಈ ಕಠಿಣ ಮತ್ತು ಜಟಿಲ ಸಮಸ್ಯೆಗೆ ಕಪಿಲ ಮುನಿ ಹೇಳಿ ಕೊಡುವ ಉಪಾಯವೆಂದರೆ ಒಂಟಿಯಾಗಿದ್ದಾಗಲೆಲ್ಲಾ ಪರಮಾತ್ಮನ ಪಾದದ ಬಗ್ಗೆ ಚಿಂತನೆ ಮಾಡುವುದು:

ಸಂಚಿಂತಯೇತ್ ಭಗವತಃ ಚರಣಾರವಿಂದಮo  
ವಜ್ರಾoಕುಶ ಧ್ವಜ ಸರೋರುಹ ಲಾಂಛನಾಡ್ಯo
ಉತ್ತುಂಗರಕ್ತವಿಲಸನ್  ನಖಚಕ್ರವಾಳ 
ಜ್ಯೋತ್ಸ್ನಾಭಿರಾಹತಾಮಹದ್ ಹೃದಯಾಂಧಕಾರಂ 

ಇದು ಭಾಗವತದ ಅತ್ಯಂತ ಪ್ರಸಿದ್ಧವಾದ ಶ್ಲೋಕಗಳಲ್ಲಿ ಒಂದು.

ಪರಮಾತ್ಮನ ಕಮಲಗಳಂತಿರುವ ಪಾದಗಳನ್ನು ಯಾವಾಗಲೂ ನೆನೆಯುತ್ತಿರಬೇಕು. ಅದರಲ್ಲಿ ಮಿಂಚು, ಅಂಕುಶ, ಧ್ವಜ, ಕಮಲ ಮುಂತಾದ ರೇಖೆಗಳಿವೆ. ಆ ಪಾದದ ಬೆರಳುಗಳ ಉಗುರುಗಳಿಂದ ಸದಾಕಾಲವೂ ಚಂದ್ರನ ಬೆಳದಿಂಗಳಿಗಿಂತಲೂ ಅಧಿಕವಾದ (ಬೆಳಕು ಬೆಳದಿಂಗಳಿಗಿಂತ ಕೋಟಿ ಕೋಟಿ ಬಹುಪಾಲು ಹೆಚ್ಚು. ಆದರೆ ಸೂರ್ಯನ ಬೆಳಕಿನಂತೆ ಕಣ್ಣು ಕುಕ್ಕುವುದಲ್ಲ. ಹೀಗೆ) ಆದರೆ ಹಿತವಾದ ಪ್ರಕಾಶ ಹೊರಹೊಮ್ಮುತ್ತಿರುತ್ತದೆ. ಈ ಬೆಳದಿಂಗಳ ಬೆಳಕು ನಮ್ಮ ಹೃದಯ, ಮನಸ್ಸುಗಳಲ್ಲಿರುವ ಕತ್ತಲನ್ನು ಹೊರದೋಡಿಸುತ್ತದೆ. (ಒಮ್ಮೆ ಆ ಕತ್ತಲೆ ಹೋದರೆ ಮುಂದೆ ಎಲ್ಲವೂ ಸುಗಮವಾಗುವುದು ಎಂದು ಭಾವ). 


ಕೊಟ್ಟಿರುವ ಚಿತ್ರವನ್ನು ಹಿಗ್ಗಿಸಿ ನೋಡಿದರೆ ಅಥವಾ ಪಕ್ಕದಲ್ಲಿ ಕೊಟ್ಟ್ಟಿರುವ ತಾಮ್ರದ ವಿಷ್ಣುಪಾದವನ್ನು ನೋಡಿದರೆ ಈ ರೇಖೆಗಳನ್ನು ಚೆನ್ನಾಗಿ ಕಾಣಬಹುದು. 
*****

ನಮ್ಮ ಮನಸ್ಸುಗಳೂ ಮದವೇರಿದ ಆನೆಗಳಂತೆ. ದಿಕ್ಕಾಪಾಲಾಗಿ ಓಡುತ್ತಿರುತ್ತವೆ. ಎಂತಹ ಮದಿಸಿದ ಆನೆಯಾದರೂ ಮಾವುತನ ಅಂಕುಶ ಅದನ್ನು ಒಂದು ನಿಮಿಷದಲ್ಲಿ ಹಿಡಿತಕ್ಕೆ ತರಬಲ್ಲದು. ಪರಮಾತ್ಮನ ಪಾದಗಳ ಚಿಂತನೆಯಿಂದ ಅದರಲ್ಲಿರುವ ಅಂಕುಶ ನಮ್ಮ ಮನಸ್ಸೆಂಬ ಆನೆಗಳನ್ನು ಹಿಡಿತಕ್ಕೆ ತರುತ್ತದೆ ಎಂದು ಪರ್ಯಾಯವಾದ ಅರ್ಥ. 

ಇದೇ ವಿಷಯವನ್ನು ಶ್ರೀ ಕನಕದಾಸರು ತಮ್ಮ "ಕೇಶವನಾಮ" ಕೃತಿಯಲ್ಲಿ (ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನೋ) ಹೀಗೆ ಹೇಳುತ್ತಾರೆ:

ಹಿಂದನೇಕ ಯೋನಿಗಳಲಿ ಬಂದುಬಂದು ನೊಂದೆನಯ್ಯ 
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದಾ 

ಭಷ್ಟನೆನಿಸಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ 
ಶಿಷ್ಟರೊಳಗೆ ಇಟ್ಟು ಕಷ್ಟ ಬಿಡಿಸೋ ವಿಷ್ಣುವೇ  

ಈ ಸಜ್ಜನರ ಸಂಗವನ್ನೇ "ಸತ್ಸಂಗ" ಎಂದು ಪ್ರೀತಿಯಿಂದ ಕರೆಯುವುದು. ಮನಸ್ಸು ನಿಲ್ಲಿಸುವುದು ಬಲು ಕಷ್ಟ. ಆದರೂ ಸತತ ಪ್ರಯತ್ನದಿಂದ ಮತ್ತು ಸಜ್ಜನರ ಸಹವಾಸದಿಂದ ಅದನ್ನು ಸಾಧಿಸಬೇಕು. 

Wednesday, December 17, 2025

ರಾಮನಾಮ ಎಂಬ ರಸವುಳ್ಳ ನೀರಿಗೆ


ಕಳೆದ ಸಂಚಿಕೆಯಲ್ಲಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಬಹು ಜನಪ್ರಿಯ ದೇವರನಾಮ ಶ್ರೀ ಪುರಂದರದಾಸರ ಕೃತಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ, ತಾರೇ ಬಿಂದಿಗೆಯ" ವಿಶೇಷಾರ್ಥಗಳ ಅನ್ವೇಷಣೆಯಲ್ಲಿ ಕೃತಿಯ ಪಲ್ಲವಿಯ ಎರಡು ಸಾಲುಗಳಲ್ಲಿ ತುಂಬಿರುವ ಅರ್ಥವಿಶೇಷಗಳನ್ನು ನೋಡುವ ಪ್ರಯತ್ನ ಮಾಡಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಈಗ ಈ ಹಾಡಿನ ಉಳಿದ ಭಾಗಗಳ ವಿಶೇಷ ಅರ್ಥಗಳನ್ನು ನೋಡೋಣ. 

*****

ಬಿಂದಿಗೆ ಕೊಡು ಎಂದು ಕೇಳಿದ್ದು ನೀರು ತರಲು. ಯಾವ ನೀರು? ನಾವು ನಮ್ಮ ಸುತ್ತ-ಮುತ್ತ ಕಾಣುವ ಮತ್ತು ದಿನಂಪ್ರತಿ ಉಪಯೋಗಿಸುವ ನೀರು ಎನ್ನುವುದು ಸಾಮಾನ್ಯವಾದ ಹೊರ ಅರ್ಥ. ನೀರಿಲ್ಲದೆ ಜೀವನವಿಲ್ಲ. ಗಾಳಿಯ ನಂತರ ಜೀವಿಗೆ ಬೇಕಾದ ಅತ್ಯಂತ ಮುಖ್ಯ ಅವಶ್ಯಕತೆ ನೀರು. ನೀರನ್ನು ಶೇಖರಿಸಿ ತರಲು ಒಂದು ಸಾಧನ ಬೇಕು. ಬಿಂದಿಗೆಯು ಅಂತಹ ಒಂದು ಸಾಧನ. ನೀರಿಲ್ಲದೆ ಕರ್ಮವಿಲ್ಲ. ಏನಾದರೂ ಮಾಡುವ ಮೊದಲು ಕೈ, ಕಾಲುಗಳನ್ನಾದರೂ ತೊಳೆದುಕೊಳ್ಳುತ್ತೇವೆ. ಅದಕ್ಕೆ ನೀರು ಬೇಕು. ಸ್ನಾನ ಮಾಡಿದರೆ ನೀರು ಬೇಕು. ಪೂಜೆ-ಹೋಮಾದಿಗಳನ್ನು ಮಾಡಲು ಮೊದಲು ನೀರಿನಿಂದಲೇ ಪ್ರಾರಂಭ. ಕಡೆಯಲ್ಲಿ ಸಮರ್ಪಣ ಮಾಡಲೂ ನೀರು ಬೇಕು. ನೀರಿನಿಂದ ಪ್ರಾರಂಭವಾದ ಕೆಲಸಗಳು ನೀರಿನಿಂದಲೇ ಕೊನೆ! ಬೇರೆ ಯಾವುದಾದರೂ ಪದಾರ್ಥ ಇಲ್ಲದಿದ್ದರೆ ಹೇಗೋ ಕೆಲಸ ತೂಗಿಸಬಹುದು. ನೀರಿಲ್ಲದಿದ್ದರೆ ಮುಂದೆ ಹೋಗಲು ಆಗುವುದೇ ಇಲ್ಲ.  

ನೀರಿಗೆ ಒಂದು ವಿಶೇಷಾರ್ಥವಿದೆ. ಬಿಂದಿಗೆ ಅನ್ನುವುದು ದೇಹವಾದಾಗ (ಏಕೆ ಅನ್ನುವುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ) ನೀರು ಅನ್ನುವುದು ಜೀವಿಯು ಮಾಡುವ "ಕರ್ಮ" ಸೂಚಕವಾಗುತ್ತದೆ. ಬಿಂದಿಗೆಯಲ್ಲಿ ನೀರನ್ನು ತರುವಂತೆ ದೇಹದಿಂದ ಜೀವಿಯು ಕರ್ಮಗಳನ್ನು ಮಾಡಿ ಆ ಮೂಲಕ ಸಾಧನೆಗಳನ್ನು ಮಾಡುತ್ತಾನೆ. 

ಈಶಾವಾಸ್ಯ ಉಪನಿಷತ್ತು ತನ್ನ ನಾಲ್ಕನೆಯ ಮಂತ್ರದಲ್ಲಿ "ತಸ್ಮಿನ್ ಆಪಃ ಮಾತರಿಶ್ವಾ ದಧಾತಿ" ಎಂದು ಹೇಳುತ್ತದೆ. "ಆಪಃ" ಅಂದರೆ ನೀರು. "ಮಾತರಿಶ್ವ" ಅಂದರೆ ವಾಯು. ವಾಯುವು ಕೊಡುವ ನೀರು ಯಾವುದು? ಕೊಡುವುದು ಯಾರಿಗೆ? ಜೀವಿಯ ಎಲ್ಲ ಕರ್ಮಗಳಿಗೆ ಪ್ರತ್ಯಕ್ಷ ಸಾಕ್ಷಿ ಪ್ರಾಣವಾಯು. ಮೊದಲ ಉಸಿರಿನಿಂದ ಪ್ರಾರಂಭವಾದ ಜೀವನದಿಂದ ಕರ್ಮ ಪ್ರಾರಂಭ. ಕೊನೆಯ ಉಸಿರಿನೊಡನೆ ಅದು ಮುಗಿಯಿತು. ಬೇರೆಯವರ ಕಣ್ಣು ತಪ್ಪಿಸಿ ಅನೇಕ ಕೆಲಸಗಳನ್ನು ಮಾಡಬಹುದು. ಹಾಗೆ ಏನಾದರೂ ಮಾಡಿ ಅರಗಿಸಿಕೊಳ್ಳಬಹುದು. ಆದರೆ ಮಾತರಿಶ್ವನ ಕಣ್ಣು ತಪ್ಪಿಸಲಾಗದು. ಇದನ್ನೇ "ಅಂತಃಸಾಕ್ಷಿ" ಎಂದೂ ಹೇಳುತ್ತೇವೆ.  ಜೀವನ ಕಾಲ ಮುಗಿದ ಮೇಲೆ ಜೀವಿಯನ್ನು ಪರಮಾತ್ಮನ ಮುಂದೆ ನಿಲ್ಲಿಸಿ ವಾಯುದೇವನು ಅವನ ಸಮಸ್ತ ಕರ್ಮಗಳನ್ನು ಹಾಜರು ಮಾಡುತ್ತಾನೆ. 

ಈ ಕಾರಣದಿಂದ "ನಾ ನೀರಿಗ್ಹೋಗುವೆ" ಅಂದರೆ "ನೀನು ಕೊಟ್ಟ ದೇಹದಿಂದ ನಾನು ಕರ್ಮಗಳನ್ನು ಆಚರಿಸಿ ಸಾಧನೆಗಳನ್ನು ಮಾಡುವೆ, ಮಹಾಲಕ್ಷ್ಮಿ ಅಕ್ಕಾ" ಎಂದು ಹೇಳುವುದು. ಇದು ಅಂತರಾರ್ಥ. 
***** 

"ರಾಮನಾಮ ಎಂಬೋ ರಸವುಳ್ಳ ನೀರಿಗೆ" ಬಿಂದಿಗೆ ಬೇಕು. ರಾಮನಾಮದ ವಿಶೇಷವೇನು? ಅನಂತರೂಪಿ ಪರಮಾತ್ಮನಿಗೆ ಅನಂತ ಹೆಸರುಗಳು. ಸೃಷ್ಟಿಯಲ್ಲಿ ಇರುವ ಸಕಲ ಶಬ್ದಗಳೂ ಪರಮಾತ್ಮನನ್ನೇ ಹೇಳುತ್ತವೆ ಎನ್ನುವುದು ಒಂದು ಪ್ರಮೇಯ. (ಧ್ವನ್ಯಾತ್ಮಕ ಮತ್ತು ವರ್ಣಾತ್ಮಕ ಶಬ್ದಗಳ ಬಗ್ಗೆ ಹಿಂದೊಂದು ಸಂಚಿಕೆಯಲ್ಲಿ ನೋಡಿದ್ದೇವೆ). "ರಮಯತಿ ಇತಿ ರಾಮಃ". "ಆನಂದ (ಸಂತೋಷ) ಕೊಡುವವನು ರಾಮ" ಎಂದು ಇದರ ಅರ್ಥ. ಜೀವಿಗಳಿಗೆ ಈ ಸುತ್ತುವ ಸಂಸಾರದ ಹುಟ್ಟು-ಸಾವುಗಳಿಂದ ಬಿಡುಗಡೆ ಕೊಟ್ಟು ಶಾಶ್ವತ ಆನಂದ ಕೊಡುವವನು ರಾಮ. ಈ ಮೋಕ್ಷದ ನಂತರದ ಆನಂದಕ್ಕೆ ಅದರ ಪ್ರಮಾಣದಲ್ಲಿ ಆಗಾಗ ಹೆಚ್ಚು-ಕಡಿಮೆ ಆಗುವ ಭಯವಿಲ್ಲ. ಎಂದೋ ಒಂದು ದಿನ ಮುಗಿದುಹೋಗುವುದು ಎನ್ನುವ ಆತಂಕವಿಲ್ಲ. ಅದು ಶಾಶ್ವತವಾದ, ಕೊನೆಯಿಲ್ಲದ, ಪರಿಪೂರ್ಣ ಆನಂದ. 

ರಾಮನು ಎಲ್ಲ ಕಾಲದಲ್ಲೂ ಇದ್ದನು. ಎಲ್ಲ ಕಾಲದಲ್ಲೂ ಇರುತ್ತಾನೆ. ತ್ರೇತಾಯುಗದ ಶ್ರೀರಾಮಚಂದ್ರನು ಅವತಾರ ಮಾಡುವ ಮೊದಲೂ ಇದ್ದನು. ಆ ಅವತಾರ ಮುಗಿದಮೇಲೂ ಇರುತ್ತಾನೆ. ಇಂತಹ ರಾಮನ ಹೆಸರನ್ನೇ ದಶರಥ-ಕೌಸಲ್ಯೆಯರ ಮಗನಿಗೂ ಕೊಟ್ಟರು. ಇಬ್ಬರೂ ಒಂದೇ. ಭೇದವಿಲ್ಲ. 

ಪರಮಾತ್ಮನ ಅನಂತ ನಾಮಗಳಲ್ಲಿ ರಾಮನಾಮ ಅತ್ಯಂತ ಸುಲಭವಾದದ್ದು. ಒತ್ತಕ್ಷರಗಳ ಗೊಂದಲವಿಲ್ಲ. ಆರು-ಎಂಟು-ಹತ್ತು ಅಕ್ಷರಗಳ ದೊಡ್ಡ ಹೆಸರಲ್ಲ. ಈಗ ತಾನೇ ಮಾತು ಕಲಿಯುತ್ತಿರುವ ಮಗುವೂ ಸುಖವಾಗಿ "ರಾಮ" ಎಂದು ಹೇಳುವುದು. "ಹೃಷಿಕೇಶ" "ತ್ರಿವಿಕ್ರಮ" "ಪದ್ಮನಾಭ" "ಸಂಕರ್ಷಣ" "ಅಧೋಕ್ಷಜ" ಮುಂತಾದುವನ್ನು ಹೇಳಲು ಅನೇಕರಿಗೆ ಕಷ್ಟವಾಗುತ್ತದೆ. ರಾಮನಾಮಕ್ಕೆ ಇಂತಹ ಬಂಧವಿಲ್ಲ. ಅದು ಗಟ್ಟಿಯಾದ ಚಕ್ಕುಲಿ, ಕೋಡುಬಳೆ, ಪುಳ್ಳಂಗಾಯಿ ಉಂಡೆ ತಿಂದು ಅರಗಿಸಿಕೊಂಡಂತೆ ಅಲ್ಲ. ಪಾಯಸ ಕುಡಿದಂತೆ ಸುಲಭ. ಸಿಹಿಯೂ ಹೌದು. ಆದ್ದರಿಂದ "ರಾಮನಾಮ ಪಾಯಸ"!
*****

ರಾಮನಾಮ ಎಂಬ ನೀರು ಎಂದಾಯಿತು. "ರಸವುಳ್ಳ ನೀರು" ಎಂದೇಕೆ ಹೇಳಿದರು? ನೀರಿನಲ್ಲಿ ಎಂತಹ ರಸ? ನಮಗೆ ಬಾಯಾರಿಕೆ ಆದಾಗ ಕುಡಿಯಲು ನೀರು ಬೇಕು. ಒಳ್ಳೆಯ ಬಾದಾಮಿ ಹಾಲೋ, ಎಳನೀರೋ ಕೊಟ್ಟರೆ ಹೇಗೆ? ಸೊಗಸಾದ ಕಾಫಿ? ಅಥವಾ ಕಿತ್ತಳೆ ರಸ? "ಅದೆಲ್ಲಾ ಇರಲಿ. ಕೊಡುವಿರಂತೆ. ಮೊದಲು ಒಂದು ಲೋಟ ನೀರು ಕೊಡಿ, ಆಮೇಲೆ ಬೇರೆಯದು" ಎನ್ನುತ್ತೇವೆ. ಆಯಿತು. ಕೊಟ್ಟರು. ಎಲ್ಲ ನೀರೂ ಒಂದೇ ರೀತಿ ಇರುವುದಿಲ್ಲ. ಬೆಂಗಳೂರಿನಲ್ಲಿ ಬೋರ್ವೆಲ್ ನೀರು ಕೊಡಬಹುದು. ಯಾವುದೊ ಕೆರೆಯಿಂದ ತಂಡ ಟ್ಯಾಂಕರ್ ನೀರು ಇರಬಹುದು. ಕಾವೇರಿ, ಅರ್ಕಾವತಿ ನೀರು ತಂದಿರಬಹುದು. ಎಲ್ಲವೂ ಒಂದೇ ರೀತಿ ಇರುವುದಿಲ್ಲ. ಕೆಲವು ನೀರು ಕುಡಿದರೆ ಮುಖ ಸಿಂಡರಿಸುತ್ತೇವೆ. "ಈ ನೀರು ಅಷ್ಟು ಸರಿ ಇಲ್ಲ" ಅನ್ನುತ್ತೇವೆ. ಯಾಕೆ? ನೀರು ಚೆನ್ನಾಗಿರಬೇಕು. "ಇಂತಹ ಒಳ್ಳೆಯ ನೀರು ತರುತ್ತೇನೆ, ಬಿಂದಿಗೆ ಕೊಡು" ಅನ್ನುವುದು ಸಾಮಾನ್ಯ ಅರ್ಥ. 

"ರಸ" ಅನ್ನುವುದಕ್ಕೆ ವಿಶೇಷಾರ್ಥವೂ ಉಂಟು. ಅದು ತಿಳಿಯಬೇಕಾದರೆ ಶ್ರೀಮದ್ ಭಗವದ್ಗೀತೆಯ ಏಳನೆಯ ಅಧ್ಯಾಯ ನೋಡಬೇಕು. ಎಂಟನೆಯ ಶ್ಲೋಕದಲ್ಲಿ ಶ್ರೀಕೃಷ್ಣ ಹೇಳುತ್ತಾನೆ:

ರಸೋಹಂ ಅಪ್ಸು ಕೌಂತೇಯ ಪ್ರಭಾಸ್ಮಿ ಶಶಿ ಸೂರ್ಯಯೋ: 
ಪ್ರಣವಃ ಸರ್ವವೇದೇಷು ಶಬ್ದ: ಖೇ ಪೌರುಷಮ್ ನೃಷು 

"ನೀರಿನಲ್ಲಿ ನಾನು ರಸ ಆಗಿದ್ದೇನೆ. ಚಂದ್ರ-ಸೂರ್ಯರಲ್ಲಿ ಬೆಳಕಾಗಿದ್ದೇನೆ. 
ವೇದಗಳಲ್ಲಿ ಓಂಕಾರವಾಗಿದ್ದೇನೆ. ಆಕಾಶದಲ್ಲಿ ಶಬ್ದ ರೂಪದಲ್ಲಿ ಇದ್ದೇನೆ. 
ಮನುಷ್ಯರಲ್ಲಿ ಕ್ರಿಯಾಶಕ್ತಿಯ ರೂಪವಾಗಿ ನಿಂತಿದ್ದೇನೆ"

ಪರಮಾತ್ಮನ ಸನ್ನಿಧಾನ ಇದ್ದಾಗ ನೀರು ರುಚಿಸುತ್ತದೆ. ಪದಾರ್ಥಗಳ ಸೊಗಸು ನಾಲಿಗೆಗೆ ಸಿಗುತ್ತದೆ. ಕಿತ್ತಳೆ ತೊಳೆ ನೋಡಲು ಕೆಂಪಾಗಿದೆ. ದಪ್ಪಗೂ ಇದೆ. ಆದರೆ ತಿಂದಾಗ ಬರೀ ಬೆಂಡು ಬೆಂಡು. ಯಾಕೆ? ಅಲ್ಲಿ ಪರಮಾತ್ಮನ ಅಭಿವ್ಯಕ್ತಿ ಇಲ್ಲ. ಬಾದಾಮಿ, ಗೋಡಂಬಿ ಬಹಳ ಚೆನ್ನಾಗಿವೆ. ಬಾಯಿಯಲ್ಲಿ ಹಾಕಿಕೊಂಡು ಎಷ್ಟು ಹೊತ್ತು ಇಟ್ಟುಕೊಂಡರೂ ಏನೂ ರುಚಿಯಿಲ್ಲವಲ್ಲ? ಅಗಿದು ಅದಕ್ಕೆ ಸ್ವಲ್ಪ ರಸರೂಪದ ನೀರು ಸೇರಿದರೆ ತಕ್ಷಣ ರುಚಿ ಸಿಕ್ಕಿತು!  

ಮನುಷ್ಯನು ಮಾಡುವ ಕೆಲಸಗಳೂ ಅಂತೆಯೇ. ಯಾವುದೋ ಕಾರಣಕ್ಕೆ ಮಾಡಿದ ಕಾರ್ಯಗಳು ನೀರಸ. "ಪರಮಾತ್ಮನಿಗೆ ಪ್ರೀತಿಯಾಗಲಿ" ಎಂದು ಮಾಡಿದ ತಕ್ಷಣ ಅಲ್ಲಿ ರಸ ಬಂದು ಕೂತಿತು. ಮಾಡಿದ ಕರ್ಮ ಸತ್ಕರ್ಮ ಆಯಿತು. ಅವನಿದ್ದರೆ ಅದು ಸರಸ. ರಸದಿಂದ ಕೂಡಿದ್ದು. ಅವನಿಲ್ಲದಿದ್ದರೆ ಅದು ನೀರಸ. ರಸವಿಲ್ಲದ್ದು. ಅವನಿಗೆ ವಿರುದ್ಧವಾಗಿದ್ದರೆ ವಿರಸ. ಇದೇ ಸತ್ಕರ್ಮಗಳ ರಹಸ್ಯ!

"ರಾಮನಾಮವೆಂಬ ರಸವುಳ್ಳ ನೀರು ತರುತ್ತೇನೆ, ಬಿಂದಿಗೆ ಕೊಡು ಅಕ್ಕಾ" ಅಂದಾಗ "ಸತ್ಕರ್ಮಗಳನ್ನು ಮಾಡಿ ರಸರೂಪವಾದ ಸಾಧನೆಯನ್ನು ದೇಹದಲ್ಲಿ ತುಂಬಿಕೊಳ್ಳುತ್ತೇನೆ" ಎಂದು ಅರ್ಥ. ಇದೇ ಇಲ್ಲಿನ ವಿಶೇಷಾರ್ಥ. 
*****

"ಗೋವಿಂದ ಎಂಬ ಗುಣವುಳ್ಳ ನೀರಿಗೆ ತಾರೆ ಬಿಂದಿಗೆಯ, ಆವಾವ ಪರಿಯಲ್ಲಿ ಅಮೃತದ ನೀರಿಗೆ ತಾರೇ ಬಿಂದಿಗೆಯ" ಅನ್ನುವುದು ಮುಂದಿನದು. "ಗೋವಿಂದ" ಅನ್ನುವ ಪದಕ್ಕೆ ಅನೇಕ ಅರ್ಥಗಳು. ಗೋ ಅನ್ನುವ ಪದಕ್ಕೆ "ನೀರು" "ಹಸು" "ಭೂಮಿ" "ವೇದಗಳು" ಇನ್ನೂ ಮುಂತಾಗಿ ವಿವರಣೆಗಳಿವೆ. "ಉತ್ತಮವಾದದ್ದು" ಎಂದೂ ಅರ್ಥವುಂಟು. "ನೀರಿನಲ್ಲಿ ಶ್ರೇಷ್ಠವಾದ ರೀತಿಯ ನೀರು ತರುತ್ತೇನೆ" ಎಂದು ಹೇಳುವುದು ಸಾಮಾನ್ಯ ಅರ್ಥ. 

ಅಮೃತದ ನೀರು ಹೇಗೆ? ಸತ್ಕರ್ಮ ಮಾಡಿದ ಮೇಲೆ ಮುಂದೆ ಜನ್ಮವಿಲ್ಲದ ಮುಕ್ತಿ ಸಿಗುತ್ತದೆ. ಸಾವಿಲ್ಲದ್ದು ಅಮೃತ. ಗೋವಿಂದನ ಪ್ರೀತಿಗಾಗಿ ಮಾಡಿದ ಕರ್ಮಗಳನ್ನು, ನಿಷ್ಕಾಮ ಕರ್ಮಗಳನ್ನು, ತುಂಬಿಕೊಂಡಮೇಲೆ ಮತ್ತೆ ಮರಣವಿಲ್ಲ. ಅಂದರೆ ಅಮೃತತ್ವ ಸಿಕ್ಕಿತು. ಆದ್ದರಿಂದ "ಅಮೃತದ ನೀರು". 

"ಕಾಮಿನಿಯರ ಕೂಡೆ ಏಕಾಂತವಾಡೆನು, ತಾರೆ ಬಿಂದಿಗೆಯ" ಎಂದರೇನು? ನೀರು ತರಲು ನದಿಗೋ, ಭಾವಿಗೋ ಹೋದಾಗ ಅಲ್ಲಿ ನಮ್ಮಂತೆಯೇ ಅನೇಕರು ಬಂದಿರುತ್ತಾರೆ. ಸಾಮಾನ್ಯವಾಗಿ ನೀರು ತರಲು ಹೋಗುತ್ತಿದ್ದುದು ಲೋಕಾರೂಢಿಯಾಗಿ ಹೆಣ್ಣುಮಕ್ಕಳು. ಕಾಮಿನಿ ಅನ್ನುವ ಪದಕ್ಕೆ ಹೆಣ್ಣು ಎಂದೂ ಒಂದು ಅರ್ಥ. ಒಂದರ್ಥವೇನು, ಇದೇ ಅರ್ಥದಲ್ಲಿ ಆ ಪದವನ್ನು ಸಾಮಾನ್ಯವಾಗಿ ಬಳಸುವುದು. ಕೆಲವರು ಅಲ್ಲಿ ಕಂಡಾಗ ಸಹಜವಾಗಿ ಸ್ವಲ್ಪ ಅದು-ಇದು ಮಾತಾಡುವಂತೆ ಆಗುತ್ತದೆ. ಹರಟೆಯಲ್ಲಿ ಕಾಲಹರಣ ನಡೆಯುತ್ತದೆ. "ನಾನು ಹರಟೆಯಲ್ಲಿ ಕಾಲ ವ್ಯಯ ಮಾಡುವುದಿಲ್ಲ. ಅಲ್ಲಿ ಹೋಗಿ, ನೀರು ತುಂಬಿಕೊಂಡು ಬೇಗ ಬಂದುಬಿಡುತ್ತೇನೆ" ಎನ್ನುವುದು ಸಾಮಾನ್ಯ ಅರ್ಥ. 

"ಕಾಮ" ಅಂದರೆ ಆಸೆ. ಆಸೆ ಯಾವಾಗಲೂ ಒಂದೇ ಒಂದಾಗಿ ಬರುವುದಿಲ್ಲ. ಆಸೆಗಳು ಗುಂಪಾಗಿ ಮನುಷ್ಯನನ್ನು ಕಾಡುತ್ತವೆ. ಕಾಮದಿಂದ ಹುಟ್ಟಿದ್ದು ಕಾಮಿನಿ ಎಂದಾಗುತ್ತದೆ. "ಅಕ್ಕ, ನೀನು ದೇಹವನ್ನು ಕೊಟ್ಟರೆ ಅದನ್ನು ಇತರೆ ಆಸೆಗಳ, ಪ್ರಾಪಂಚಿಕ ಸುಖ-ಭೋಗಗಳ, ತೃಪ್ತಿಗೆ ಬಳಸುವುದಿಲ್ಲ. ಕೇವಲ ಸಾಧನೆಗಾಗಿಯೇ ಜೀವಿತ ಕಾಲವನ್ನು ಬಳಸಿಕೊಳ್ಳುತ್ತೇನೆ" ಎಂದು ಹೇಳುವುದೇ ವಿಶೇಷಾರ್ಥ. 

ನೀರು ತರಲೆಂದು ಬಿಂದಿಗೆ ಹಿಡಿದು ಹೊರಟು, ಜಲಾಶಯದ ಬಳಿ ಸಮಯವೆಲ್ಲ ಹರಟೆಯಲ್ಲಿ ಕಳೆದು, ಕಡೆಗೆ ಮನೆಗೆ ಖಾಲಿ ಬಿಂದಿಗೆ ಹಿಡಿದು ಬಂದರೆ ಹೇಗಿರುತ್ತದೆ? ಅಮೂಲ್ಯವಾದ ಮತ್ತು ಅಪರೂಪವಾದ ಮನುಷ್ಯ ಜನ್ಮ ಪಡೆದು. ಲೌಕಿಕ ಸುಖಗಳಲ್ಲಿ ಎಲ್ಲ ಕಾಲ ಕಳೆದು, ಕಡೆಗೆ ಅಲ್ಲಿ ಹೋಗಿ ನಿಂತಾಗ ಖಾಲಿ ಕೈ ಆಗುವಂತಾದರೆ ಹೇಗೆ? ಕಾಡಿ-ಬೇಡಿ ಪಡೆದ ದೇಹ, ಜನ್ಮ ವ್ಯರ್ಥವಾಯಿತು. ಹೀಗಾಗಲು ಬಿಡುವುದಿಲ್ಲ ಎಂದು ಮಹಾಲಕ್ಷ್ಮಿ ದೇವಿಗೆ ವಚನ ಕೊಟ್ಟಂತೆ ಈ ಮಾತು. 
***** 

"ಬಿಂದು ಮಾಧವನ ಘಟ್ಟಕ್ಕೆ ಹೋಗುವೆ, ಪುರಂದರ ವಿಠಲಗೆ ಅಭಿಷೇಕ ಮಾಡುವೆ" ಎನ್ನುವುದು ಕಡೆಯ ನುಡಿಯ ತಿರುಳು. ಕಾಶಿಯಲ್ಲಿ ಬಿಂದುಮಾಧವನ ದೇವಾಲಯ ಇದೆ. ಗಂಗಾನದಿಯ ಪಕ್ಕದಲ್ಲೇ ಇದೆ. "ಒಳ್ಳೆಯ ಗಂಗೆ ನೀರು ಬಿಂದಿಗೆಯಲ್ಲಿ ತುಂಬಿಕೊಂಡು ಬಂದು ವಿಠಲನ ಇನ್ನೊಂದು ರೂಪನಾದ ಮಾಧವನಿಗೆ ಅಭಿಷೇಕ ಮಾಡುತ್ತೇನೆ" ಅನ್ನುವುದು ಸಾಮಾನ್ಯ ಅರ್ಥ. 

"ನೀನು ನನ್ನ ಈ ಬೇಡಿಕೆಯ ಫಲವಾಗಿ ಕೊಡುವ ದೇಹದಲ್ಲಿ ಅನೇಕ ಸಾಧನೆಗಳನ್ನು ಮಾಡಿ ಅವುಗಳನ್ನೆಲ್ಲಾ ಪರಮಾತ್ಮನಿಗೆ ಸಮರ್ಪಣ ಮಾಡುತ್ತೇನೆ" ಎಂದು ಮಹಾಲಕ್ಷ್ಮೀದೇವಿಯ ಮುಂದೆ ಪ್ರತಿಜ್ಞೆ ಮಾಡುವುದೇ ಒಟ್ಟು ತಾತ್ಪರ್ಯ ಮತ್ತು ವಿಶೇಷಾರ್ಥ. 

"ಪ್ರತ್ಯಕ್ಷರಂ ಪ್ರತಿಪದಂ ಅನೇಕಾಕೂತಿ ಗರ್ಭಿತಂ" ಎಂದು ಒಂದು ಮಾತಿದೆ. ದೊಡ್ಡವರ ಮಾತುಗಳಲ್ಲಿ ಅವರ ಅನೇಕ ಕಾಲದ ಅನುಭವದ, ಅಧ್ಯಯನದ ಸಾರ ತುಂಬಿರುತ್ತದೆ. ಶ್ರೀ ಪುರಂದರದಾಸರ ಪದಗಳಲ್ಲಿ ಇವನ್ನು ಚೆನ್ನಾಗಿ ಕಾಣಬಹುದು. ಒಂದೊಂದು ಸಾಲಿನಲ್ಲೂ, ಒಂದೊಂದು ಪದದಲ್ಲೂ, ಸಾಮಾನ್ಯ ಅರ್ಥಗಳೂ, ಅವುಗಳ ಜೊತೆ-ಜೊತೆಯಾಗಿ ವಿಶೇಷ ಅರ್ಥಗಳೂ, ಗೂಡಾರ್ಥಗಳೂ ತುಂಬಿರುತ್ತವೆ. ಒಂದು ಸಲ ಓದಿದರೆ ಅಥವಾ ಕೇಳಿದರೆ ಅಷ್ಟಿಷ್ಟು ಅರ್ಥವೇನೋ ಆಗುತ್ತದೆ. ಸರಿಯಾದ ಮೌಲ್ಯ ನಮಗೆ ಸಿಗಬೇಕಾದರೆ ಹೆಚ್ಚಿನ ಅಧ್ಯಯನ ಅಗತ್ಯ. 

*****

ಹಿಂದಿನ ಮತ್ತು ಈ ಸಂಚಿಕೆಯನ್ನು ಓದಿದ ನಂತರ ಹಾಡನ್ನು ಕೇಳಿದರೆ ಹೆಚ್ಚು ಉಪಯೋಗವಾಗುತ್ತದೆ. ಆದ್ದರಿಂದ ಅದನ್ನು ಈ ಕೆಳಗೆ ಕೊಟ್ಟಿದೆ:


ಒಂದು ಬಾರಿ ಓದಿದರೆ ವಿಶೇಷಾರ್ಥಗಳು ಮನಸ್ಸಿನಲ್ಲಿ ನಿಲ್ಲುವುದಿಲ್ಲ. ಅದಕ್ಕೆ ಎರಡು ಮೂರು ಬಾರಿ ಓದುವ ತಾಳ್ಮೆ ಬೇಕು. ಒಮ್ಮೆ ಮನಸ್ಸಿನಲ್ಲಿ ನಿಂತರೆ ಮುಂದೆ ಬೇರೆ ಬೇರೆ ವಿಷಯಗಳ ಅಧ್ಯಯನ ಕಾಲದಲ್ಲಿ ಮತ್ತಷ್ಟು ಹೊಸ ವಿಷಯಗಳು ತೆರೆದುಕೊಳ್ಳುತ್ತವೆ.