Friday, December 19, 2025

ನಿರಂಜನ


ಕಳೆದ ತಿಂಗಳಿನ ಒಂದು ಸಂಚಿಕೆಯಲ್ಲಿ "ರಾಗಿ ಮೂಟೆಯ ಮೇಲೆ ಸಾವೇರಿ ರಾಗ" ಅನ್ನುವ ಶಿರೋನಾಮೆಯಡಿಯಲ್ಲಿ ನಮ್ಮ ನಾಡಿನ ಹೆಮ್ಮೆಯ ಸಂಗೀತ ವಿದ್ವಾಂಸರು ಮತ್ತು ಗಾಯಕರಲ್ಲಿ ಒಬ್ಬರಾದ ಭೈರವಿ ಕೆಂಪೇಗೌಡ ಅವರನ್ನು ಕುರಿತು ಕೆಲವು ಸಂಗತಿಗಳನ್ನು ನೋಡಿದ್ದೆವು. ಇದರಲ್ಲಿ ಬೆಂಗಳೂರಿನ ಬದಲಾದ ರೂಪದ ಬಗ್ಗೆ ಕೆಲವು ವಿಷಯಗಳನ್ನು ನೆನಪಿಸಿಕೊಂಡಿದ್ದೆವು. ಈ ಕುರಿತ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಅಲ್ಲಿ ನೋಡಿದ ವಿವರಗಳಲ್ಲಿ ಪ್ರಾಸ್ತಾವಿಕವಾಗಿ "ಧರ್ಮಾ೦ಬುಧಿ ಕೆರೆ" ಎನ್ನುವ ಹೆಸರು ಬಂದಿತ್ತು. ನಗರದ ಮಧ್ಯೆ ಇದ್ದ ಒಂದು ಸುಂದರ ಕೆರೆ ಅದು.  ಅದರ ನೀರು ಕುಡಿದು ಬೆಳೆದ ನಾವು ಕಡೆಗೆ ನಮ್ಮ ನಗರೀಕರಣದ ಪಿಶಾಚಿಯ ಪ್ರೀತಿಗಾಗಿ ಅದನ್ನೇ ನುಂಗಿ ನೀರು ಕುಡಿದಿದ್ದೇವೆ. ಈಗ ಆ ಕೆರೆ ಇತ್ತು ಅನ್ನುವ ಕುರುಹೂ ಉಳಿದಿಲ್ಲ. ಒಂದು ಕಾಲದಲ್ಲಿ ಅದಕ್ಕೆ ಸ್ವತಂತ್ರ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ನೆನಪಿನಲ್ಲಿ "ಸುಭಾಷ್ ನಗರ" ಅನ್ನುವ ಹೆಸರಿತ್ತು. ಕೆರೆಯಲ್ಲಿ ನೀರು ನಿಲ್ಲುವುದು ತಪ್ಪಿದ ಮೇಲೆ ಅದಕ್ಕೆ "ಸುಭಾಷ್ ನಗರ ಕೆರೆಯ ಅಂಗಳ" ಅನ್ನುತ್ತಿದ್ದರು. ವೃತ್ತಿ ನಾಟಕರಂಗದ ಮರೆಯಲಾಗದ ತಂಡ "ಹಿರಣ್ಣಯ್ಯ ಮಿತ್ರ ಮಂಡಳಿ" ಅವರ ಪ್ರಸಿದ್ಧ ನಾಟಕಗಳಾದ "ದೇವದಾಸಿ", "ಸದಾರಮೆ", "ಲಂಚಾವತಾರ" ಮತ್ತು ಇತರ ನಾಟಕಗಳು ಇಲ್ಲಿಯೇ ನಡೆಯುತ್ತಿದ್ದವು. ಈಗ ಅವೆಲ್ಲಾ ನೆನಪು ಮಾತ್ರ. ಇನ್ನು ಕೆಲವೇ ವರ್ಷಗಳಲ್ಲಿ ಅದನ್ನು ನೆನಪಿಸಿಕೊಳ್ಳುವ ತಲೆಮಾರೂ ಇಲ್ಲವಾಗುತ್ತದೆ. 

ಈ ಸುಭಾಷ್ ನಗರ ಕೆರೆಯ ಅಂಗಳದಲ್ಲಿ ಪ್ರತಿವರ್ಷ "ಕಾಂಗ್ರೆಸ್ ವಸ್ತುಪ್ರದರ್ಶನ" ಏರ್ಪಡುತ್ತಿತ್ತು. ವಸ್ತು ಪ್ರದರ್ಶನಕ್ಕೆ ನೋಡಲು ಬಂದ ಜನಜಂಗುಳಿಯಲ್ಲಿ ಕೆಲವರು, ವಿಶೇಷವಾಗಿ ಮಕ್ಕಳು, ತಪ್ಪಿಸಿಕೊಳ್ಳುವುದು ನಡೆಯುತ್ತಿತ್ತು. ವಸ್ತುಪ್ರದರ್ಶನದಲ್ಲಿ ಒಂದು "ಪೊಲೀಸ್ ಔಟ್ ಪೋಸ್ಟ್" ಕೂಡ ಇದ್ದು ಹೀಗೆ ತಪ್ಪಿಸಿಕೊಂಡವರು ಮತ್ತು ಕಳೆದು ಹೋದ ಮತ್ತು ಸಿಕ್ಕಿದ ವಸ್ತುಗಳ ಬಗ್ಗೆ ಆಗಾಗ ಧನಿವರ್ಧಕಗಳ ಮೂಲಕ ಪ್ರಕಟಿಸುತ್ತಿದ್ದರು. ಟಿವಿ ಇಲ್ಲದ ಕಾಲದಲ್ಲಿ ಕುಟುಂಬದ ಸದಸ್ಯರು ಒಟ್ಟಾಗಿ ಒಂದು ಸಂಜೆ ಕಳೆಯಲು ಈ ವಸ್ತುಪ್ರದರ್ಶನ ಸಹಕಾರಿಯಾಗಿತ್ತು. 

ಈಗ ಸುಭಾಷ್ ನಗರ ಅನ್ನುವ ಹೆಸರೇ ಕೇಳಿಬರುವುದಿಲ್ಲ. ದೊಡ್ಡ ಬಸ್ ನಿಲ್ದಾಣ ತಲೆಯೆತ್ತಿ ನಿಂತಿದೆ. ಸುಭಾಷ್ ನಗರ ಮರೆಯಾದರೂ ಹತ್ತಿರವಿದ್ದ "ಮೆಜೆಸ್ಟಿಕ್" ಚಿತ್ರಮಂದಿರದ ಹೆಸರನ್ನು ಜನ ಮರೆತಿಲ್ಲ. ಆ ಸುತ್ತಮುತ್ತಲಿನ ಪ್ರದೇಶಕ್ಕೆ ಈಗಲೂ "ಮೆಜೆಸ್ಟಿಕ್" ಏರಿಯಾ ಅನ್ನುವುದು ನಡೆದೇ ಇದೆ. 

*****

ಹಳ್ಳಿಗಳಲ್ಲಿ ಜನಗಳು ತಪ್ಪಿಸಿಕೊಳ್ಳುವುದು ನಡೆಯದಿದ್ದರೂ ಜಾನುವಾರುಗಳು (ದನಗಳು) ತಪ್ಪಿಸಿಕೊಳ್ಳುವುದು ಅಲ್ಲಲ್ಲಿ ಆಗಾಗ ನಡೆಯುತ್ತಿತ್ತು. ಈಗಿನಂತೆ ಹಳ್ಳಿಗಳಲ್ಲಿ ಆಗ ಹೆಚ್ಚಾಗಿ ರಸ್ತೆಗಳಿರಲ್ಲ. ಮೋಟಾರ್ ಸೈಕಲ್ಗಳಲ್ಲಿ ಓಡಾಡುವವರಿರಲಿಲ್ಲ. ಜಮೀನಿನಲ್ಲಿ ಬೆಳೆ ತೆಗೆಯುವುದರ ಜೊತೆಗೆ ರೈತರ ಜೀವನದ ಮುಖ್ಯ ಭಾಗ "ಹೈನುಗಾರಿಕೆ" ಆಗಿತ್ತು. (ಹಯನು ಅಂದರೆ ಹಾಲು ಕರೆಯುತ್ತಿರುವ ಪ್ರಾಣಿ. ಮುಖ್ಯವಾಗಿ ಹಸು. ಬರಡು ಹಸು ಅಂದರೆ ಹಾಲು ಕೊಡದಿರುವ ಹಸು. "ನೀನೊಲಿದರೆ ಬರಡು ಹಯನಹುದಯ್ಯ" ಎನ್ನುವ ಶರಣರ ವಚನವನ್ನು ನೆನಪಿಸಿಕೊಳ್ಳಬಹುದು). ತಮ್ಮ ಕುಟುಂಬದ ಹಾಲು, ಮೊಸರು, ಮಜ್ಜಿಗೆ, ತುಪ್ಪ ಇವುಗಳ ಪೂರೈಕೆಗಲ್ಲದೇ ಹತ್ತಿರದ ಪಟ್ಟಣಗಳಿಗೆ ಹೆಚ್ಚಿನ ಈ ಪದಾರ್ಥಗಳನ್ನು ಸರಬರಾಜು ಮಾಡುವುದರಿಂದ ರೈತಾಪಿ ಜನ ಕೆಲವು ಪುಡಿಗಾಸು ಸಂಪಾದಿಸುತ್ತಿದ್ದರು. ಹೀಗೆ ತಮ್ಮ ಜೀವನಕ್ಕೆ ಆಧಾರವಾಗಿದ್ದ ಹಸುಗಳು ಕಳೆದುಹೋದರೆ ರೈತರಿಗೆ ಬಲು ಕಷ್ಟ. ಇವುಗಳ ಜೊತೆ, ಗುಡಿಸಲುಗಳಲ್ಲಿ ವಾಸಿಸುತ್ತಿದ್ದ ಜನ ಕೆಲವು ಬೆಲೆ ಬಾಳುವ ಅವಶ್ಯಕ ಪದಾರ್ಥಗಳನ್ನು ಆಗಾಗ ಕಳೆದುಕೊಳ್ಳುತ್ತಿದ್ದರು. 

ಹುಲ್ಲು ಮೇಯಲು ಹೊರಗಡೆ ಹೋದ ದನಗಳು ಅಲ್ಲಿ-ಇಲ್ಲಿ ಕಂಡ ಹುಲುಸಾದ ಹಸಿರು ಪೈರಿನ ಆಸೆಯಲ್ಲಿ ಅವರಿವರ ಹೊಲ, ತೋಟಗಳಿಗೆ ನುಗ್ಗಿ ಪೈರುಗಳನ್ನು ತಿನ್ನುವುದು ಕೆಲವೊಮ್ಮೆ ನಡೆಯುತ್ತಿತ್ತು. ಆ ಜಮೀನಿನ ಮಾಲೀಕರಿಗೆ ಅವು ಯಾರ ದನಗಳು ಎಂದು ಗೊತ್ತಾಗುತ್ತಿರಲಿಲ್ಲ. ಮೇಲಾಗಿ, ತಮ್ಮ ಹೊಲಗಳ ಪೈರು ತಿಂದ ದನಗಳ ಮೇಲೆ ಅವರಿಗೆ ಸಹಜವಾಗಿಯೇ ಸ್ವಲ್ಪ ಅಸಹನೆ ಇರುತ್ತ್ತಿತ್ತು. ಪುರಸಭೆಗಳು ಅಲ್ಲಲ್ಲಿ "ತೊಂಡಿನ ಮನೆ" ಎನ್ನುವ ವ್ಯವಸ್ಥೆ ಮಾಡಿರುತ್ತಿದ್ದರು. ಅವು ಹೆಸರಿಗೆ ಮನೆ. ವಾಸ್ತವವಾಗಿ ನಾಲ್ಕು ಗೋಡೆಗಳು ಮತ್ತು ಒಂದು ಬಾಗಿಲು ಇದ್ದು ಬೀಗ ಹಾಕುವ ವ್ಯವಸ್ಥೆ ಇರುತ್ತಿತ್ತು. ದನಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಇರುತ್ತಿತ್ತು. "ತೊಂಡು" ಅನ್ನುವ ಪದಕ್ಕೆ "ದಾರಿ ತಪ್ಪಿದ", "ಹೇಳುವವರು-ಕೇಳುವವರು ಇಲ್ಲದ" ಅಥವಾ "ಅಂಕೆಯಿಲ್ಲದ" ಎಂದು ಅರ್ಥ. ಇಂಗ್ಲೀಷಿನಲ್ಲಿ "ವೈಲ್ಡ್" ಅಥವಾ "ಆನ್-ಕಂಟ್ರೊಲ್ಡ್" ಎನ್ನಬಹುದು. ಯಾರಾದರೂ ಹುಡುಗರು ಮನೆಯಲ್ಲಿ ಹೇಳಿದ ಮಾತು ಕೇಳದಿದ್ದರೆ "ಇವನೇನು, ತೊಂಡು ಬಿದ್ದಿದ್ದಾನೆ" ಎಂದು ಗದರುತ್ತಿದ್ದರು. 

ಜಮೀನಿನ ಮಾಲೀಕರು ತಮ್ಮ ಭೂಮಿಗೆ ನುಗ್ಗಿದ ಹಸುಗಳನ್ನು ಹೊಡೆದುಕೊಂಡು ಹೋಗಿ ತೊಂಡಿನ ಮನೆಗೆ ದಬ್ಬುತ್ತಿದ್ದರು. ದನ ಕಳೆದುಕೊಂಡವರು ಮೊದಲು ತೊಂಡಿನ ಮನೆಗೆ ಹೋಗಿನೋಡಿ, ತಮ್ಮ ಹುಸುಗಳು ಅಲ್ಲಿದ್ದರೆ ಪುರಸಭೆಗೆ ದಂಡ ಕಟ್ಟಿ ಅವನ್ನು ಬಿಡಿಸಿಕೊಂಡು ತಮ್ಮೊಡನೆ ಕರೆದೊಯ್ಯುತ್ತಿದ್ದರು. ಅಲ್ಲಿಯೂ ತಮ್ಮ ಹಸುಗಳು ಇಲ್ಲದಿದ್ದರೆ ಹುಡುಕುವ ಕೆಲಸ ನಡೆಯುತ್ತಿತ್ತು. 

ಹೀಗೆ ಕಳೆದುಹೋದ ಜಾನುವಾರು ಮತ್ತು ಪದಾರ್ಥಗಳನ್ನು ಹಿಂಪಡೆಯಲು ಸಾಮಾನ್ಯವಾಗಿ ಮೊದಲು ಮಾಡುತ್ತಿದ್ದ ಕೆಲಸ "ಶಾಸ್ತ್ರ ಕೇಳುವುದು". ಅಲ್ಲಲ್ಲಿ ಇದ್ದ ಜೋಯಿಸರು, ಅಯ್ಯನೋರು, ಶಾಸ್ತ್ರಿಗಳು ಮುಂತಾದವರ ಬಳಿ ಹೋಗುವುದು. ಅವರ ಬತ್ತಳಿಕೆಯಲ್ಲಿ ಅನೇಕ ಉಪಾಯಗಳಿದ್ದವು. ಪ್ರಶ್ನೆ ಕೇಳುವುದು, "ಕವಡೆ ಶಾಸ್ತ್ರ", ಚೀಟಿ ಎತ್ತುವುದು ಮುಂತಾದುವು. ಹೀಗೆ ಮಾಡಿ "ನಿಮ್ಮ ಹಸು ಉತ್ತರ ದಿಕ್ಕಿನಲ್ಲಿ ಇದೆ. ಅಲ್ಲಿ ಹುಡುಕಿ" ಮುಂತಾಗಿ ಅವರು ಹೇಳುತ್ತಿದ್ದರು. ಕೆಲವೊಮ್ಮೆ "ಏನೂ ಮಾಡಬೇಡಿ. ಅದೇ ನಿಮ್ಮ ಮನೆಯ ಮುಂದೆ ಬಂದು ನಿಲ್ಲುತ್ತದೆ" ಎಂದೂ ಹೇಳಬಹುದಿತ್ತು. ಇವು ನಿಜವಾದಷ್ಟೂ ಆಯಾ ಶಾಸ್ತ್ರ ಹೇಳುವವರಿಗೆ ಬೆಲೆ ಹೆಚ್ಚುತ್ತಿತ್ತು. 

*****

ಬೆಲೆಬಾಳುವ ವಸ್ತುಗಳು ಕಳೆದು ಹೋದಾಗ ಕಳವಳ ಮತ್ತಷ್ಟು ಹೆಚ್ಚುತ್ತಿತ್ತು. ಹೊಟ್ಟೆ-ಬಟ್ಟೆ ಕಟ್ಟಿ ಆಸೆಯಿಂದ ಸಂಪಾಸಿದ ಬೆಳ್ಳಿ-ಬಂಗಾರದ ಒಡವೆಗಳು ಮುಂತಾದವು ಹೀಗೆ ಕಳೆದುಹೋದರೆ ಅಥವಾ ಕಳವಾದರೆ ಸಹಜವಾದ ನೋವು ಇರುತ್ತಿತ್ತು. ಇವು ದನಗಳನ್ನು ಹುಡುಕಿದಂತೆ ಅಲ್ಲ. ಕವಡೆ ಶಾಸ್ತ್ರ ಮುಂತಾದುವು ಇವುಗಳ ಹುಡುಕುವಿಕೆಗೆ ಸಾಲವು. ಆಗ ಜನಗಳು "ಅಂಜನ" ಹಾಕುವವರ ಮೊರೆಹೋಗುತ್ತಿದ್ದರು. 

ಅಂಜನ ಹಾಕುವವರು ತಮ್ಮ ಬಳಿ ಬಂದವರ ಸಮಸ್ಯೆ ವಿಚಾರಿಸಿ ಅಂಜನ ಹಾಕುತ್ತಿದ್ದರು. "ಅಂಜನ ಹಾಕುವುದು" ಎಂದರೇನು? ಒಂದು ಇಷ್ಟದೈವದ ಪೂಜೆ ಮಾಡುವುದು. ನಂತರ ಒಂದು ಹರಿವಾಣದಲ್ಲಿ (ತಟ್ಟೆ ಅಥವಾ ಬಾಂಡಲೆ) ತಿಳಿಯಾದ ಎಣ್ಣೆ ತುಂಬಿಸುವುದು. ತಮ್ಮ ಬಳಿ ಇರುವ ಕಾಡಿಗೆಯಂತಹ ಒಂದು ಮುಲಾಮು ಕಣ್ಣಿಗೆ ಹಚ್ಚಿಕೊಳ್ಳುವುದು. ನಂತರ ಬಂದವರನ್ನು ಪ್ರಶ್ನೆ ಕೇಳುತ್ತಾ ಆ ಎಣ್ಣೆಯಲ್ಲಿ ನೋಡುತ್ತಾ ಹೋಗುವುದು. ಹೀಗೆ ನೋಡುತ್ತಿರುವಾಗ ಕಳೆದಿರುವ ಪದಾರ್ಥ ಎಲ್ಲಿದೆ ಎಂದು ಅವರಿಗೆ ಕಾಣುವುದು. ಕಂಡದ್ದನ್ನು ಬಂದವರಿಗೆ ಹೇಳುವುದು. ಈ ಸುಳಿವಿನ ಮೇರೆಗೆ ಅವರು ತಮ್ಮ ಹುಡುಕಾಟ ಮುಂದುವರೆಸುವುದು. ಹೀಗೆ ವ್ಯವಸ್ಥೆ. 

ಇದು ನಿಜವೇ? ಹೀಗೆ ಕಾಣಿಸುತ್ತದೆಯೇ? ಈ ರೀತಿಯ ಪ್ರಶ್ನೆಗಳು ಬರುತ್ತವೆ. ಇವೆಲ್ಲಾ ಅವರವರ ನಂಬಿಕೆಯ ಸಮಾಚಾರ. ಹೀಗೆ ಅಂಜನ ಹಾಕಿ ಕೇಳಿ ಪದಾರ್ಥಗಳು ಸಿಕ್ಕಿದ್ದೂ ಉಂಟು. ಸಿಗದಿದ್ದದ್ದೂ ಉಂಟು. ಸಿಕ್ಕಿದ್ದು ಕಾಕತಾಳೀಯ ನ್ಯಾಯ ಇರುವಂತೆ ಇರಬಹುದು. (ಒಬ್ಬ ವ್ಯಕ್ತಿ ಒಂದು ತಾಳೆಯ ಮರದ ಕೆಳಗೆ ಹೋಗಿ ಕುಳಿತುಕೊಂಡ. ಅದೇ ಸಮಯಕ್ಕೆ ಒಂದು ಕಾಗೆ ಆ ಮರದ ಮೇಲೆ ಬಂದು ಕುಳಿತುಕೊಂಡಿತು. ಮರ ಅವನ ಮೇಲೆ ಬಿದ್ದಿತು. ಕಾಗೆಯ ಭಾರಕ್ಕೆ ಮರ ಮುರಿದು ಅವನ ಮೇಲೆ ಬಿತ್ತು ಎನ್ನುವುದು ಕಾಕ-ತಾಳೀಯ ನ್ಯಾಯ ಎಂದು ಹೇಳುವುದು. ಇಂಗ್ಲೀಷಿನಲ್ಲಿ coincidence ಅನ್ನಬಹುದು). ಏನಾದರೂ ಮಾಡಿ ಬೆಲೆಬಾಳುವ ವಸ್ತು ಮರಳಿ ಪಡೆಯಬೇಕೆಂಬ ಆಸೆ ಇರುವ ವ್ಯಕ್ತಿ ಏನು ಬೇಕಾದರೂ ಮಾಡುತ್ತಾನೆ. ಇದು ಮನುಷ್ಯ ಸಹಜ ವ್ಯವಹಾರ. 

*****

ವಿದ್ಯಾರ್ಥಿಗಳಿಗೆ ವಿಜ್ಞಾನದ ತರಗತಿಗಳಲ್ಲಿ, ವಿಶೇಷವಾಗಿ ರಸಾಯನ ಶಾಸ್ತ್ರ ಕಲಿಸುವ ಸಂದರ್ಭದಲ್ಲಿ, ಆಮ್ಲಜನಕ (oxygen) ತಯಾರಿಸುವುದನ್ನು ಕಲಿಸುತ್ತಾರೆ. ಇದಕ್ಕೆ ಅನೇಕ ವಿಧಾನಗಳಿವೆ. (ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ ಹೈಡ್ರೋಜನ್ ಪರಾಕ್ಸೈಡ್ ಉಪಯೋಗಿಸುವುದು ಒಂದು ವಿಧಾನ). ಸಾಮಾನ್ಯವಾಗಿ ಪೊಟ್ಯಾಸಿಯಂ ಕ್ಲೋರೇಟ್ (Potassium Chlorate - KClO3)) ಹೆಸರಿನ ರಾಸಾಯನಿಕ ಪುಡಿಯನ್ನು ಕಾಯಿಸಿದರೆ ಅದು ಪೊಟ್ಯಾಸಿಯಂ ಕ್ಲೋರೈಡ್ (KCl) ಆಗಿ ರೂಪಾಂತರಗೊಂಡು ಆಮ್ಲಜನಕ (O2) ಬಿಡುಗಡೆ ಆಗುತ್ತದೆ. ಆದರೆ ಈ ಕ್ರಿಯೆ ಬಹಳ ನಿಧಾನ. ಇದು ಬೇಗ ಆಗುವುದಕ್ಕೆ ಪೊಟ್ಯಾಸಿಯಂ ಕ್ಲೋರೇಟ್ ಜೊತೆಗೆ ಸ್ವಲ್ಪ ಮ್ಯಾಂಗನೀಸ್ ಡೈ ಆಕ್ಸೈಡ್ (Mn O2) ಬೆರೆಸುತ್ತಾರೆ. ಹೀಗೆ ಮಾಡುವುದರಿಂದ ಆಮ್ಲಜನಕ ಬೇಗ ಬಿಡುಗಡೆ ಆಗುತ್ತದೆ. ಈ ಮ್ಯಾಂಗನೀಸ್ ಡೈ ಆಕ್ಸೈಡ್ ಅನ್ನುವುದು ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ಆದರೆ ಅದರ ಇರುವುಕೆ ಆಗಬೇಕಾದ ಕೆಲಸವನ್ನು ಬೇಗ ನಡೆಯುವಂತೆ ಮಾಡುತ್ತದೆ.

ಕ್ರೀಡಾಂಗಣಗಳಲ್ಲಿ ಭಾಗವಹಿಸುವ ಆಟಗಾರರಂತೆ ಅವರ ಸಮರ್ಥಕರೂ, ಅಭಿಮಾನಿಗಳೂ, ಸಾಮಾನ್ಯ ಪ್ರೇಕ್ಷಕರೂ ಸೇರಿರುತ್ತಾರೆ. "ಹೊಡಿ, ಹಿಡಿ, ನುಗ್ಗು, ಓಡು, ಎಗರು" ಮುಂತಾಗಿ ಆಟಗಾರರನ್ನು ಅವರು ಹುರಿದುಂಬಿಸುತ್ತಾರೆ. ಆಡುವವರು, ಗೆಲ್ಲುವವರು ಮತ್ತು ಸೋಲುವವರು ಆಟಗಾರರೇ. ಪ್ರೇಕ್ಷಕರಿಗೆ ಅದರಿಂದ ನೋಡಿದ ಸಂತೋಷ ಅಷ್ಟೇ. ಬಹುಮಾನ, ಮನ್ನಣೆ, ಟ್ರೋಫಿ, ಹಣ, ಇವು ಯಾವುವೂ ಪ್ರೇಕ್ಷಕರಿಗೆ ಸಿಗುವುದಿಲ್ಲ. ಅವೆಲ್ಲಾ ಆಟಗಾರರಿಗೆ ಮಾತ್ರ. ಆದರೂ ಕ್ರೀಡಾಂಗಣ ಪ್ರೇಕ್ಷಕರಿಲ್ಲದೆ ಕೋವಿಡ್ ಮಾರಿಯ ಸಮಯದಂತೆ ಬರಿದಾಗಿದ್ದರೆ ಆಟಗಾರರಿಗೆ ಎಲ್ಲ ನೀರಸವಾಗುತ್ತದೆ. 

ಇದು ನಾನ್-ಸ್ಟಿಕ್ ಪಾತ್ರೆಗಳ ಯುಗ. ಸೌದೆ ಒಲೆಯ ಮಸಿಯಿಲ್ಲ. ಎಣ್ಣೆಯ ಜಿಡ್ಡಿಲ್ಲ. ತಂಗಳಿನ ವಾಸನೆಯಿಲ್ಲ. ಸುಮ್ಮನೆ ಸ್ವಲ್ಪ ನೀರು ಹಾಕಿ ಒರೆಸಿದರೆ ಆಯಿತು. ಹಿಂದಿನ ದಿನಗಳಂತೆ ತಿಕ್ಕಿ-ತಿಕ್ಕಿ ತೊಳೆಯುವ ಕೆಲಸವಿಲ್ಲ. ತೊಳೆದರೂ ಮಸಿ ಉಳಿಯಿತೆಂಬ ಕಸಿವಿಸಿ ಇಲ್ಲ. ಮತ್ಯಾರೋ ಏನಾದರೂ ಅನ್ನುತ್ತಾರೆ ಅನ್ನುವ ಅಳುಕಿಲ್ಲ. 
***** 

ಪರಮಾತ್ಮನನ್ನು ಅನೇಕ ಹೆಸರುಗಳಿಂದ ಕರೆಯುತ್ತೇವೆ. ಅವುಗಳಲ್ಲಿ "ನಿರಂಜನ" ಅನ್ನುವುದೂ ಒಂದು. ಹೀಗೆ ನಿರಂಜನ ಎಂದು ಕರೆಯುವುದರ ಕಾರಣವೇನು? 

"ಅಂಜನ" ಅಂದರೆ ಏನು ಅನ್ನುವುದರ ವಿವರವನ್ನು ಮೇಲೆ ನೋಡಿದೆವು. ಅಂಜನ ಹಾಕುವವರು ಕಣ್ಣಿಗೆ ಹಚ್ಚಿಕೊಳ್ಳುವ ಮುಲಾಮಿನಂತಹ ವಸ್ತುವಿಗೆ ಅಂಜನ ಎನ್ನುವುದೇಕೆ? ಅದು ಕಣ್ಣಿಗೆ ಅಂಟಿಕೊಂಡು ಕೂಡುತ್ತದೆ. "ಅಂಜನ" ಪದಕ್ಕೆ "ಅಂಟಿಕೊಳ್ಳುವುದು" ಎಂದು ಅರ್ಥ. 

ಅಂಟಿಕೊಳ್ಳುವ ಪದಾರ್ಥ ಅಂಜನ ಎಂದಾದರೆ ಅಂಟಿಕೊಳ್ಳದ ವಸ್ತು "ನಿರಂಜನ". ಆದ್ದರಿಂದ ಪರಮಾತ್ಮನು "ನಿರಂಜನ". 

ಆಮ್ಲಜನಕದ ತಯಾರಿಕೆಯಲ್ಲಿ ಉಪಯೋಗಿಸುವ ಮ್ಯಾಂಗನೀಸ್ ಡೈ ಆಕ್ಸೈಡ್ ಎಂಬ ವಸ್ತುವಿಗೆ "ವೇಗವರ್ಧಕ" (Catalyst) ಅನ್ನುತ್ತಾರೆ. ಅದು ತಯಾರಿಕೆಯಲ್ಲಿ ಸುಮ್ಮನೆ ಇರುವುದೇ ಹೊರತು ಆ ಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ಕ್ರಿಯೆಯ ಮೊದಲು ಹೇಗೆ ಇತ್ತೋ ಕ್ರಿಯೆಯ ನಂತರವೂ ಹಾಗೆಯೇ ಉಳಿಯುವುದು. ಕ್ರೀಡಾಂಗಣದಲ್ಲಿ ಸೇರಿದ ಪ್ರೇಕ್ಷಕರೂ ಹಾಗೆಯೇ. ಅವರಿಗೆ ಆಟದ ನೇರ ಲಾಭ ಏನೂ ಇಲ್ಲ. ನಾನ್-ಸ್ಟಿಕ್ ಪಾತ್ರೆಯೂ ಹೀಗೆಯೇ. 

ಪರಮಾತ್ಮನು ನಮ್ಮ ಎಲ್ಲ ಕ್ರಿಯೆಗಳ ಅಂತಃಶಕ್ತಿಯಾಗಿ ಜೊತೆಗಿರುತ್ತಾನೆ. ಅವನಿಗೆ ಈ ಕ್ರಿಯೆಗಳ ಯಾವುದೇ ವಿಕಾರಗಳೂ ಆಗುವುದಿಲ್ಲ. ಮ್ಯಾಂಗನೀಸ್ ಡೈ ಆಕ್ಸೈಡ್ ಆದರೂ ಬೇರೆ ಪದಾರ್ಥಗಳ ಜೊತೆ ಕಾದು, ನಂತರ ತಣ್ಣಗಾಗುತ್ತದೆ. ಪರಮಾತ್ಮನಿಗೆ ಈ ರೀತಿ ವಿಕಾರಗಳೂ ಇಲ್ಲ. ಪ್ರೇಕ್ಷಕರಿಗೆ ಕೂಗಿದುದರಿಂದ ಆಯಾಸ, ತಮ್ಮ ನೆಚ್ಚಿನ ತಂಡ ಗೆದ್ದರೆ ಆನಂದ, ಸೋತರೆ ದುಃಖ ಆಗುತ್ತವೆ. ಪರಮಾತ್ಮನಿಗೆ ಈ ರೀತಿ ಆಗುವುದಿಲ್ಲ. ಅವನಿಗೆ ಲಾಭದ ಆಸೆಯಿಲ್ಲ. ನಷ್ಟದ ಭೀತಿಯಿಲ್ಲ. ಕೆಲಸ ಮಾಡಿದ ಆಯಾಸವಿಲ್ಲ. ನಾನ್-ಸ್ಟಿಕ್ ಪಾತ್ರೆಯಂತೆ ಬಿಸಿಯಾಗುವುದಿಲ್ಲ. ಒಮ್ಮೆ ತೊಳೆದು ಒರೆಸಬೇಕಾದದ್ದೂ ಇಲ್ಲ. ಅವನು ಯಾವುದಕ್ಕೂ ಅಂಟಿಕೊಂಡವನಲ್ಲ. ಆದ್ದರಿಂದ ಪರಮಾತ್ಮ ನಿರಂಜನ. 

ಹಾಗಿದ್ದರೆ ಕರ್ಮಗಳನ್ನು ಮಾಡುವುದರಲ್ಲಿ ಕೆಲವರಿಗೆ ಪಾಪ, ಮತ್ತೆ ಕೆಲವರಿಗೆ ಪುಣ್ಯ ಏಕೆ? ಎಲ್ಲರೂ ಅವನ ಮಕ್ಕಳಲ್ಲವೇ? ಕೆಲವರಿಗೆ ಯಾಕೆ ಕಷ್ಟ? ಮತ್ತೆ ಕೆಲವರಿಗೆ ಯಾಕೆ ಸುಖ? ಅವನು ಒಬ್ಬ ನ್ಯಾಯಾಧೀಶನಂತೆ. ಒಬ್ಬನಿಗೆ ಶಿಕ್ಷೆ. ಮತ್ತೊಬ್ಬನಿಗೆ ಮನ್ನಣೆ. ಅವರವರು ಮಾಡಿದ ಕೆಲಸಗಳಂತೆ ತೀರ್ಪು. ಇದೇ ಅವನ "ಸಂವಿಧಾನ". 
*****

ಭಗವದ್ಗೀತೆ ಮೂರನೆಯ ಅಧ್ಯಾಯ, ಇಪ್ಪತ್ತೆರಡನೆಯ ಶ್ಲೋಕದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಾನೆ: 

ನ ಮೇ ಪಾರ್ಥಾಸ್ತಿ ಕರ್ತವ್ಯಮ್  ತ್ರಿಷು ಲೋಕೇಷು ಕಿಂಚನ 
ನಾನಾವಾಪ್ತಮವಾಪ್ತವ್ಯಮ್ ವರ್ತ ಏವ ಚ ಕರ್ಮಣಿ 

ಪಾರ್ಥ, ನನಗೆ ಎಲ್ಲಿಯೂ (ಮೂರು ಲೋಕಗಳಲ್ಲಿಯೂ) ಯಾವುದೇ ಕರ್ತವ್ಯಗಳಿಲ್ಲ. 
(ಇಂಥದು ಮಾಡಲೇಬೇಕೆಂಬ ಬಂಧವಿಲ್ಲ). 
ಸಂಪಾದಿಸಬೇಕು, ಗೆಲ್ಲಬೇಕು ಅಥವಾ ಪಡೆಯಬೇಕು ಎನ್ನುವುದು ಯಾವುದೂ ಇಲ್ಲ. 
ಆದರೂ ನಾನು ಕೆಲಸಗಳನ್ನು (ಕರ್ತವ್ಯ ಎನ್ನುವಂತೆ) ಮಾಡುತ್ತಲೇ ಇರುತ್ತೇನೆ. 

ಇದೇ ಅವನ ನಿರಂಜನತ್ವದ ಲಕ್ಷಣ. 

ನಾವು ಮೇಲೆ ಮಾಡಿದ ಚರ್ಚೆಯೆಲ್ಲವೂ ಇದನ್ನೇ ಸೂಚಿಸುತ್ತದೆ. ಪರಮಾತ್ಮನ ಪರಿಪೂರ್ಣ ಜ್ಞಾನ, ಪರಿಪೂರ್ಣ ಆನಂದ, ಮೊದಲಾದ ಗುಣಗಳಂತೆ ಅವನ ನಿರಂಜನ ಗುಣವೂ ಅವನ ಉಪಾಸನೆಯಲ್ಲಿ ಬಹಳ ಮುಖ್ಯವಾದುದು. 

Wednesday, December 17, 2025

ರಾಮನಾಮ ಎಂಬ ರಸವುಳ್ಳ ನೀರಿಗೆ


ಕಳೆದ ಸಂಚಿಕೆಯಲ್ಲಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಬಹು ಜನಪ್ರಿಯ ದೇವರನಾಮ ಶ್ರೀ ಪುರಂದರದಾಸರ ಕೃತಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ, ತಾರೇ ಬಿಂದಿಗೆಯ" ವಿಶೇಷಾರ್ಥಗಳ ಅನ್ವೇಷಣೆಯಲ್ಲಿ ಕೃತಿಯ ಪಲ್ಲವಿಯ ಎರಡು ಸಾಲುಗಳಲ್ಲಿ ತುಂಬಿರುವ ಅರ್ಥವಿಶೇಷಗಳನ್ನು ನೋಡುವ ಪ್ರಯತ್ನ ಮಾಡಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಈಗ ಈ ಹಾಡಿನ ಉಳಿದ ಭಾಗಗಳ ವಿಶೇಷ ಅರ್ಥಗಳನ್ನು ನೋಡೋಣ. 

*****

ಬಿಂದಿಗೆ ಕೊಡು ಎಂದು ಕೇಳಿದ್ದು ನೀರು ತರಲು. ಯಾವ ನೀರು? ನಾವು ನಮ್ಮ ಸುತ್ತ-ಮುತ್ತ ಕಾಣುವ ಮತ್ತು ದಿನಂಪ್ರತಿ ಉಪಯೋಗಿಸುವ ನೀರು ಎನ್ನುವುದು ಸಾಮಾನ್ಯವಾದ ಹೊರ ಅರ್ಥ. ನೀರಿಲ್ಲದೆ ಜೀವನವಿಲ್ಲ. ಗಾಳಿಯ ನಂತರ ಜೀವಿಗೆ ಬೇಕಾದ ಅತ್ಯಂತ ಮುಖ್ಯ ಅವಶ್ಯಕತೆ ನೀರು. ನೀರನ್ನು ಶೇಖರಿಸಿ ತರಲು ಒಂದು ಸಾಧನ ಬೇಕು. ಬಿಂದಿಗೆಯು ಅಂತಹ ಒಂದು ಸಾಧನ. ನೀರಿಲ್ಲದೆ ಕರ್ಮವಿಲ್ಲ. ಏನಾದರೂ ಮಾಡುವ ಮೊದಲು ಕೈ, ಕಾಲುಗಳನ್ನಾದರೂ ತೊಳೆದುಕೊಳ್ಳುತ್ತೇವೆ. ಅದಕ್ಕೆ ನೀರು ಬೇಕು. ಸ್ನಾನ ಮಾಡಿದರೆ ನೀರು ಬೇಕು. ಪೂಜೆ-ಹೋಮಾದಿಗಳನ್ನು ಮಾಡಲು ಮೊದಲು ನೀರಿನಿಂದಲೇ ಪ್ರಾರಂಭ. ಕಡೆಯಲ್ಲಿ ಸಮರ್ಪಣ ಮಾಡಲೂ ನೀರು ಬೇಕು. ನೀರಿನಿಂದ ಪ್ರಾರಂಭವಾದ ಕೆಲಸಗಳು ನೀರಿನಿಂದಲೇ ಕೊನೆ! ಬೇರೆ ಯಾವುದಾದರೂ ಪದಾರ್ಥ ಇಲ್ಲದಿದ್ದರೆ ಹೇಗೋ ಕೆಲಸ ತೂಗಿಸಬಹುದು. ನೀರಿಲ್ಲದಿದ್ದರೆ ಮುಂದೆ ಹೋಗಲು ಆಗುವುದೇ ಇಲ್ಲ.  

ನೀರಿಗೆ ಒಂದು ವಿಶೇಷಾರ್ಥವಿದೆ. ಬಿಂದಿಗೆ ಅನ್ನುವುದು ದೇಹವಾದಾಗ (ಏಕೆ ಅನ್ನುವುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ) ನೀರು ಅನ್ನುವುದು ಜೀವಿಯು ಮಾಡುವ "ಕರ್ಮ" ಸೂಚಕವಾಗುತ್ತದೆ. ಬಿಂದಿಗೆಯಲ್ಲಿ ನೀರನ್ನು ತರುವಂತೆ ದೇಹದಿಂದ ಜೀವಿಯು ಕರ್ಮಗಳನ್ನು ಮಾಡಿ ಆ ಮೂಲಕ ಸಾಧನೆಗಳನ್ನು ಮಾಡುತ್ತಾನೆ. 

ಈಶಾವಾಸ್ಯ ಉಪನಿಷತ್ತು ತನ್ನ ನಾಲ್ಕನೆಯ ಮಂತ್ರದಲ್ಲಿ "ತಸ್ಮಿನ್ ಆಪಃ ಮಾತರಿಶ್ವಾ ದಧಾತಿ" ಎಂದು ಹೇಳುತ್ತದೆ. "ಆಪಃ" ಅಂದರೆ ನೀರು. "ಮಾತರಿಶ್ವ" ಅಂದರೆ ವಾಯು. ವಾಯುವು ಕೊಡುವ ನೀರು ಯಾವುದು? ಕೊಡುವುದು ಯಾರಿಗೆ? ಜೀವಿಯ ಎಲ್ಲ ಕರ್ಮಗಳಿಗೆ ಪ್ರತ್ಯಕ್ಷ ಸಾಕ್ಷಿ ಪ್ರಾಣವಾಯು. ಮೊದಲ ಉಸಿರಿನಿಂದ ಪ್ರಾರಂಭವಾದ ಜೀವನದಿಂದ ಕರ್ಮ ಪ್ರಾರಂಭ. ಕೊನೆಯ ಉಸಿರಿನೊಡನೆ ಅದು ಮುಗಿಯಿತು. ಬೇರೆಯವರ ಕಣ್ಣು ತಪ್ಪಿಸಿ ಅನೇಕ ಕೆಲಸಗಳನ್ನು ಮಾಡಬಹುದು. ಹಾಗೆ ಏನಾದರೂ ಮಾಡಿ ಅರಗಿಸಿಕೊಳ್ಳಬಹುದು. ಆದರೆ ಮಾತರಿಶ್ವನ ಕಣ್ಣು ತಪ್ಪಿಸಲಾಗದು. ಇದನ್ನೇ "ಅಂತಃಸಾಕ್ಷಿ" ಎಂದೂ ಹೇಳುತ್ತೇವೆ.  ಜೀವನ ಕಾಲ ಮುಗಿದ ಮೇಲೆ ಜೀವಿಯನ್ನು ಪರಮಾತ್ಮನ ಮುಂದೆ ನಿಲ್ಲಿಸಿ ವಾಯುದೇವನು ಅವನ ಸಮಸ್ತ ಕರ್ಮಗಳನ್ನು ಹಾಜರು ಮಾಡುತ್ತಾನೆ. 

ಈ ಕಾರಣದಿಂದ "ನಾ ನೀರಿಗ್ಹೋಗುವೆ" ಅಂದರೆ "ನೀನು ಕೊಟ್ಟ ದೇಹದಿಂದ ನಾನು ಕರ್ಮಗಳನ್ನು ಆಚರಿಸಿ ಸಾಧನೆಗಳನ್ನು ಮಾಡುವೆ, ಮಹಾಲಕ್ಷ್ಮಿ ಅಕ್ಕಾ" ಎಂದು ಹೇಳುವುದು. ಇದು ಅಂತರಾರ್ಥ. 
***** 

"ರಾಮನಾಮ ಎಂಬೋ ರಸವುಳ್ಳ ನೀರಿಗೆ" ಬಿಂದಿಗೆ ಬೇಕು. ರಾಮನಾಮದ ವಿಶೇಷವೇನು? ಅನಂತರೂಪಿ ಪರಮಾತ್ಮನಿಗೆ ಅನಂತ ಹೆಸರುಗಳು. ಸೃಷ್ಟಿಯಲ್ಲಿ ಇರುವ ಸಕಲ ಶಬ್ದಗಳೂ ಪರಮಾತ್ಮನನ್ನೇ ಹೇಳುತ್ತವೆ ಎನ್ನುವುದು ಒಂದು ಪ್ರಮೇಯ. (ಧ್ವನ್ಯಾತ್ಮಕ ಮತ್ತು ವರ್ಣಾತ್ಮಕ ಶಬ್ದಗಳ ಬಗ್ಗೆ ಹಿಂದೊಂದು ಸಂಚಿಕೆಯಲ್ಲಿ ನೋಡಿದ್ದೇವೆ). "ರಮಯತಿ ಇತಿ ರಾಮಃ". "ಆನಂದ (ಸಂತೋಷ) ಕೊಡುವವನು ರಾಮ" ಎಂದು ಇದರ ಅರ್ಥ. ಜೀವಿಗಳಿಗೆ ಈ ಸುತ್ತುವ ಸಂಸಾರದ ಹುಟ್ಟು-ಸಾವುಗಳಿಂದ ಬಿಡುಗಡೆ ಕೊಟ್ಟು ಶಾಶ್ವತ ಆನಂದ ಕೊಡುವವನು ರಾಮ. ಈ ಮೋಕ್ಷದ ನಂತರದ ಆನಂದಕ್ಕೆ ಅದರ ಪ್ರಮಾಣದಲ್ಲಿ ಆಗಾಗ ಹೆಚ್ಚು-ಕಡಿಮೆ ಆಗುವ ಭಯವಿಲ್ಲ. ಎಂದೋ ಒಂದು ದಿನ ಮುಗಿದುಹೋಗುವುದು ಎನ್ನುವ ಆತಂಕವಿಲ್ಲ. ಅದು ಶಾಶ್ವತವಾದ, ಕೊನೆಯಿಲ್ಲದ, ಪರಿಪೂರ್ಣ ಆನಂದ. 

ರಾಮನು ಎಲ್ಲ ಕಾಲದಲ್ಲೂ ಇದ್ದನು. ಎಲ್ಲ ಕಾಲದಲ್ಲೂ ಇರುತ್ತಾನೆ. ತ್ರೇತಾಯುಗದ ಶ್ರೀರಾಮಚಂದ್ರನು ಅವತಾರ ಮಾಡುವ ಮೊದಲೂ ಇದ್ದನು. ಆ ಅವತಾರ ಮುಗಿದಮೇಲೂ ಇರುತ್ತಾನೆ. ಇಂತಹ ರಾಮನ ಹೆಸರನ್ನೇ ದಶರಥ-ಕೌಸಲ್ಯೆಯರ ಮಗನಿಗೂ ಕೊಟ್ಟರು. ಇಬ್ಬರೂ ಒಂದೇ. ಭೇದವಿಲ್ಲ. 

ಪರಮಾತ್ಮನ ಅನಂತ ನಾಮಗಳಲ್ಲಿ ರಾಮನಾಮ ಅತ್ಯಂತ ಸುಲಭವಾದದ್ದು. ಒತ್ತಕ್ಷರಗಳ ಗೊಂದಲವಿಲ್ಲ. ಆರು-ಎಂಟು-ಹತ್ತು ಅಕ್ಷರಗಳ ದೊಡ್ಡ ಹೆಸರಲ್ಲ. ಈಗ ತಾನೇ ಮಾತು ಕಲಿಯುತ್ತಿರುವ ಮಗುವೂ ಸುಖವಾಗಿ "ರಾಮ" ಎಂದು ಹೇಳುವುದು. "ಹೃಷಿಕೇಶ" "ತ್ರಿವಿಕ್ರಮ" "ಪದ್ಮನಾಭ" "ಸಂಕರ್ಷಣ" "ಅಧೋಕ್ಷಜ" ಮುಂತಾದುವನ್ನು ಹೇಳಲು ಅನೇಕರಿಗೆ ಕಷ್ಟವಾಗುತ್ತದೆ. ರಾಮನಾಮಕ್ಕೆ ಇಂತಹ ಬಂಧವಿಲ್ಲ. ಅದು ಗಟ್ಟಿಯಾದ ಚಕ್ಕುಲಿ, ಕೋಡುಬಳೆ, ಪುಳ್ಳಂಗಾಯಿ ಉಂಡೆ ತಿಂದು ಅರಗಿಸಿಕೊಂಡಂತೆ ಅಲ್ಲ. ಪಾಯಸ ಕುಡಿದಂತೆ ಸುಲಭ. ಸಿಹಿಯೂ ಹೌದು. ಆದ್ದರಿಂದ "ರಾಮನಾಮ ಪಾಯಸ"!
*****

ರಾಮನಾಮ ಎಂಬ ನೀರು ಎಂದಾಯಿತು. "ರಸವುಳ್ಳ ನೀರು" ಎಂದೇಕೆ ಹೇಳಿದರು? ನೀರಿನಲ್ಲಿ ಎಂತಹ ರಸ? ನಮಗೆ ಬಾಯಾರಿಕೆ ಆದಾಗ ಕುಡಿಯಲು ನೀರು ಬೇಕು. ಒಳ್ಳೆಯ ಬಾದಾಮಿ ಹಾಲೋ, ಎಳನೀರೋ ಕೊಟ್ಟರೆ ಹೇಗೆ? ಸೊಗಸಾದ ಕಾಫಿ? ಅಥವಾ ಕಿತ್ತಳೆ ರಸ? "ಅದೆಲ್ಲಾ ಇರಲಿ. ಕೊಡುವಿರಂತೆ. ಮೊದಲು ಒಂದು ಲೋಟ ನೀರು ಕೊಡಿ, ಆಮೇಲೆ ಬೇರೆಯದು" ಎನ್ನುತ್ತೇವೆ. ಆಯಿತು. ಕೊಟ್ಟರು. ಎಲ್ಲ ನೀರೂ ಒಂದೇ ರೀತಿ ಇರುವುದಿಲ್ಲ. ಬೆಂಗಳೂರಿನಲ್ಲಿ ಬೋರ್ವೆಲ್ ನೀರು ಕೊಡಬಹುದು. ಯಾವುದೊ ಕೆರೆಯಿಂದ ತಂಡ ಟ್ಯಾಂಕರ್ ನೀರು ಇರಬಹುದು. ಕಾವೇರಿ, ಅರ್ಕಾವತಿ ನೀರು ತಂದಿರಬಹುದು. ಎಲ್ಲವೂ ಒಂದೇ ರೀತಿ ಇರುವುದಿಲ್ಲ. ಕೆಲವು ನೀರು ಕುಡಿದರೆ ಮುಖ ಸಿಂಡರಿಸುತ್ತೇವೆ. "ಈ ನೀರು ಅಷ್ಟು ಸರಿ ಇಲ್ಲ" ಅನ್ನುತ್ತೇವೆ. ಯಾಕೆ? ನೀರು ಚೆನ್ನಾಗಿರಬೇಕು. "ಇಂತಹ ಒಳ್ಳೆಯ ನೀರು ತರುತ್ತೇನೆ, ಬಿಂದಿಗೆ ಕೊಡು" ಅನ್ನುವುದು ಸಾಮಾನ್ಯ ಅರ್ಥ. 

"ರಸ" ಅನ್ನುವುದಕ್ಕೆ ವಿಶೇಷಾರ್ಥವೂ ಉಂಟು. ಅದು ತಿಳಿಯಬೇಕಾದರೆ ಶ್ರೀಮದ್ ಭಗವದ್ಗೀತೆಯ ಏಳನೆಯ ಅಧ್ಯಾಯ ನೋಡಬೇಕು. ಎಂಟನೆಯ ಶ್ಲೋಕದಲ್ಲಿ ಶ್ರೀಕೃಷ್ಣ ಹೇಳುತ್ತಾನೆ:

ರಸೋಹಂ ಅಪ್ಸು ಕೌಂತೇಯ ಪ್ರಭಾಸ್ಮಿ ಶಶಿ ಸೂರ್ಯಯೋ: 
ಪ್ರಣವಃ ಸರ್ವವೇದೇಷು ಶಬ್ದ: ಖೇ ಪೌರುಷಮ್ ನೃಷು 

"ನೀರಿನಲ್ಲಿ ನಾನು ರಸ ಆಗಿದ್ದೇನೆ. ಚಂದ್ರ-ಸೂರ್ಯರಲ್ಲಿ ಬೆಳಕಾಗಿದ್ದೇನೆ. 
ವೇದಗಳಲ್ಲಿ ಓಂಕಾರವಾಗಿದ್ದೇನೆ. ಆಕಾಶದಲ್ಲಿ ಶಬ್ದ ರೂಪದಲ್ಲಿ ಇದ್ದೇನೆ. 
ಮನುಷ್ಯರಲ್ಲಿ ಕ್ರಿಯಾಶಕ್ತಿಯ ರೂಪವಾಗಿ ನಿಂತಿದ್ದೇನೆ"

ಪರಮಾತ್ಮನ ಸನ್ನಿಧಾನ ಇದ್ದಾಗ ನೀರು ರುಚಿಸುತ್ತದೆ. ಪದಾರ್ಥಗಳ ಸೊಗಸು ನಾಲಿಗೆಗೆ ಸಿಗುತ್ತದೆ. ಕಿತ್ತಳೆ ತೊಳೆ ನೋಡಲು ಕೆಂಪಾಗಿದೆ. ದಪ್ಪಗೂ ಇದೆ. ಆದರೆ ತಿಂದಾಗ ಬರೀ ಬೆಂಡು ಬೆಂಡು. ಯಾಕೆ? ಅಲ್ಲಿ ಪರಮಾತ್ಮನ ಅಭಿವ್ಯಕ್ತಿ ಇಲ್ಲ. ಬಾದಾಮಿ, ಗೋಡಂಬಿ ಬಹಳ ಚೆನ್ನಾಗಿವೆ. ಬಾಯಿಯಲ್ಲಿ ಹಾಕಿಕೊಂಡು ಎಷ್ಟು ಹೊತ್ತು ಇಟ್ಟುಕೊಂಡರೂ ಏನೂ ರುಚಿಯಿಲ್ಲವಲ್ಲ? ಅಗಿದು ಅದಕ್ಕೆ ಸ್ವಲ್ಪ ರಸರೂಪದ ನೀರು ಸೇರಿದರೆ ತಕ್ಷಣ ರುಚಿ ಸಿಕ್ಕಿತು!  

ಮನುಷ್ಯನು ಮಾಡುವ ಕೆಲಸಗಳೂ ಅಂತೆಯೇ. ಯಾವುದೋ ಕಾರಣಕ್ಕೆ ಮಾಡಿದ ಕಾರ್ಯಗಳು ನೀರಸ. "ಪರಮಾತ್ಮನಿಗೆ ಪ್ರೀತಿಯಾಗಲಿ" ಎಂದು ಮಾಡಿದ ತಕ್ಷಣ ಅಲ್ಲಿ ರಸ ಬಂದು ಕೂತಿತು. ಮಾಡಿದ ಕರ್ಮ ಸತ್ಕರ್ಮ ಆಯಿತು. ಅವನಿದ್ದರೆ ಅದು ಸರಸ. ರಸದಿಂದ ಕೂಡಿದ್ದು. ಅವನಿಲ್ಲದಿದ್ದರೆ ಅದು ನೀರಸ. ರಸವಿಲ್ಲದ್ದು. ಅವನಿಗೆ ವಿರುದ್ಧವಾಗಿದ್ದರೆ ವಿರಸ. ಇದೇ ಸತ್ಕರ್ಮಗಳ ರಹಸ್ಯ!

"ರಾಮನಾಮವೆಂಬ ರಸವುಳ್ಳ ನೀರು ತರುತ್ತೇನೆ, ಬಿಂದಿಗೆ ಕೊಡು ಅಕ್ಕಾ" ಅಂದಾಗ "ಸತ್ಕರ್ಮಗಳನ್ನು ಮಾಡಿ ರಸರೂಪವಾದ ಸಾಧನೆಯನ್ನು ದೇಹದಲ್ಲಿ ತುಂಬಿಕೊಳ್ಳುತ್ತೇನೆ" ಎಂದು ಅರ್ಥ. ಇದೇ ಇಲ್ಲಿನ ವಿಶೇಷಾರ್ಥ. 
*****

"ಗೋವಿಂದ ಎಂಬ ಗುಣವುಳ್ಳ ನೀರಿಗೆ ತಾರೆ ಬಿಂದಿಗೆಯ, ಆವಾವ ಪರಿಯಲ್ಲಿ ಅಮೃತದ ನೀರಿಗೆ ತಾರೇ ಬಿಂದಿಗೆಯ" ಅನ್ನುವುದು ಮುಂದಿನದು. "ಗೋವಿಂದ" ಅನ್ನುವ ಪದಕ್ಕೆ ಅನೇಕ ಅರ್ಥಗಳು. ಗೋ ಅನ್ನುವ ಪದಕ್ಕೆ "ನೀರು" "ಹಸು" "ಭೂಮಿ" "ವೇದಗಳು" ಇನ್ನೂ ಮುಂತಾಗಿ ವಿವರಣೆಗಳಿವೆ. "ಉತ್ತಮವಾದದ್ದು" ಎಂದೂ ಅರ್ಥವುಂಟು. "ನೀರಿನಲ್ಲಿ ಶ್ರೇಷ್ಠವಾದ ರೀತಿಯ ನೀರು ತರುತ್ತೇನೆ" ಎಂದು ಹೇಳುವುದು ಸಾಮಾನ್ಯ ಅರ್ಥ. 

ಅಮೃತದ ನೀರು ಹೇಗೆ? ಸತ್ಕರ್ಮ ಮಾಡಿದ ಮೇಲೆ ಮುಂದೆ ಜನ್ಮವಿಲ್ಲದ ಮುಕ್ತಿ ಸಿಗುತ್ತದೆ. ಸಾವಿಲ್ಲದ್ದು ಅಮೃತ. ಗೋವಿಂದನ ಪ್ರೀತಿಗಾಗಿ ಮಾಡಿದ ಕರ್ಮಗಳನ್ನು, ನಿಷ್ಕಾಮ ಕರ್ಮಗಳನ್ನು, ತುಂಬಿಕೊಂಡಮೇಲೆ ಮತ್ತೆ ಮರಣವಿಲ್ಲ. ಅಂದರೆ ಅಮೃತತ್ವ ಸಿಕ್ಕಿತು. ಆದ್ದರಿಂದ "ಅಮೃತದ ನೀರು". 

"ಕಾಮಿನಿಯರ ಕೂಡೆ ಏಕಾಂತವಾಡೆನು, ತಾರೆ ಬಿಂದಿಗೆಯ" ಎಂದರೇನು? ನೀರು ತರಲು ನದಿಗೋ, ಭಾವಿಗೋ ಹೋದಾಗ ಅಲ್ಲಿ ನಮ್ಮಂತೆಯೇ ಅನೇಕರು ಬಂದಿರುತ್ತಾರೆ. ಸಾಮಾನ್ಯವಾಗಿ ನೀರು ತರಲು ಹೋಗುತ್ತಿದ್ದುದು ಲೋಕಾರೂಢಿಯಾಗಿ ಹೆಣ್ಣುಮಕ್ಕಳು. ಕಾಮಿನಿ ಅನ್ನುವ ಪದಕ್ಕೆ ಹೆಣ್ಣು ಎಂದೂ ಒಂದು ಅರ್ಥ. ಒಂದರ್ಥವೇನು, ಇದೇ ಅರ್ಥದಲ್ಲಿ ಆ ಪದವನ್ನು ಸಾಮಾನ್ಯವಾಗಿ ಬಳಸುವುದು. ಕೆಲವರು ಅಲ್ಲಿ ಕಂಡಾಗ ಸಹಜವಾಗಿ ಸ್ವಲ್ಪ ಅದು-ಇದು ಮಾತಾಡುವಂತೆ ಆಗುತ್ತದೆ. ಹರಟೆಯಲ್ಲಿ ಕಾಲಹರಣ ನಡೆಯುತ್ತದೆ. "ನಾನು ಹರಟೆಯಲ್ಲಿ ಕಾಲ ವ್ಯಯ ಮಾಡುವುದಿಲ್ಲ. ಅಲ್ಲಿ ಹೋಗಿ, ನೀರು ತುಂಬಿಕೊಂಡು ಬೇಗ ಬಂದುಬಿಡುತ್ತೇನೆ" ಎನ್ನುವುದು ಸಾಮಾನ್ಯ ಅರ್ಥ. 

"ಕಾಮ" ಅಂದರೆ ಆಸೆ. ಆಸೆ ಯಾವಾಗಲೂ ಒಂದೇ ಒಂದಾಗಿ ಬರುವುದಿಲ್ಲ. ಆಸೆಗಳು ಗುಂಪಾಗಿ ಮನುಷ್ಯನನ್ನು ಕಾಡುತ್ತವೆ. ಕಾಮದಿಂದ ಹುಟ್ಟಿದ್ದು ಕಾಮಿನಿ ಎಂದಾಗುತ್ತದೆ. "ಅಕ್ಕ, ನೀನು ದೇಹವನ್ನು ಕೊಟ್ಟರೆ ಅದನ್ನು ಇತರೆ ಆಸೆಗಳ, ಪ್ರಾಪಂಚಿಕ ಸುಖ-ಭೋಗಗಳ, ತೃಪ್ತಿಗೆ ಬಳಸುವುದಿಲ್ಲ. ಕೇವಲ ಸಾಧನೆಗಾಗಿಯೇ ಜೀವಿತ ಕಾಲವನ್ನು ಬಳಸಿಕೊಳ್ಳುತ್ತೇನೆ" ಎಂದು ಹೇಳುವುದೇ ವಿಶೇಷಾರ್ಥ. 

ನೀರು ತರಲೆಂದು ಬಿಂದಿಗೆ ಹಿಡಿದು ಹೊರಟು, ಜಲಾಶಯದ ಬಳಿ ಸಮಯವೆಲ್ಲ ಹರಟೆಯಲ್ಲಿ ಕಳೆದು, ಕಡೆಗೆ ಮನೆಗೆ ಖಾಲಿ ಬಿಂದಿಗೆ ಹಿಡಿದು ಬಂದರೆ ಹೇಗಿರುತ್ತದೆ? ಅಮೂಲ್ಯವಾದ ಮತ್ತು ಅಪರೂಪವಾದ ಮನುಷ್ಯ ಜನ್ಮ ಪಡೆದು. ಲೌಕಿಕ ಸುಖಗಳಲ್ಲಿ ಎಲ್ಲ ಕಾಲ ಕಳೆದು, ಕಡೆಗೆ ಅಲ್ಲಿ ಹೋಗಿ ನಿಂತಾಗ ಖಾಲಿ ಕೈ ಆಗುವಂತಾದರೆ ಹೇಗೆ? ಕಾಡಿ-ಬೇಡಿ ಪಡೆದ ದೇಹ, ಜನ್ಮ ವ್ಯರ್ಥವಾಯಿತು. ಹೀಗಾಗಲು ಬಿಡುವುದಿಲ್ಲ ಎಂದು ಮಹಾಲಕ್ಷ್ಮಿ ದೇವಿಗೆ ವಚನ ಕೊಟ್ಟಂತೆ ಈ ಮಾತು. 
***** 

"ಬಿಂದು ಮಾಧವನ ಘಟ್ಟಕ್ಕೆ ಹೋಗುವೆ, ಪುರಂದರ ವಿಠಲಗೆ ಅಭಿಷೇಕ ಮಾಡುವೆ" ಎನ್ನುವುದು ಕಡೆಯ ನುಡಿಯ ತಿರುಳು. ಕಾಶಿಯಲ್ಲಿ ಬಿಂದುಮಾಧವನ ದೇವಾಲಯ ಇದೆ. ಗಂಗಾನದಿಯ ಪಕ್ಕದಲ್ಲೇ ಇದೆ. "ಒಳ್ಳೆಯ ಗಂಗೆ ನೀರು ಬಿಂದಿಗೆಯಲ್ಲಿ ತುಂಬಿಕೊಂಡು ಬಂದು ವಿಠಲನ ಇನ್ನೊಂದು ರೂಪನಾದ ಮಾಧವನಿಗೆ ಅಭಿಷೇಕ ಮಾಡುತ್ತೇನೆ" ಅನ್ನುವುದು ಸಾಮಾನ್ಯ ಅರ್ಥ. 

"ನೀನು ನನ್ನ ಈ ಬೇಡಿಕೆಯ ಫಲವಾಗಿ ಕೊಡುವ ದೇಹದಲ್ಲಿ ಅನೇಕ ಸಾಧನೆಗಳನ್ನು ಮಾಡಿ ಅವುಗಳನ್ನೆಲ್ಲಾ ಪರಮಾತ್ಮನಿಗೆ ಸಮರ್ಪಣ ಮಾಡುತ್ತೇನೆ" ಎಂದು ಮಹಾಲಕ್ಷ್ಮೀದೇವಿಯ ಮುಂದೆ ಪ್ರತಿಜ್ಞೆ ಮಾಡುವುದೇ ಒಟ್ಟು ತಾತ್ಪರ್ಯ ಮತ್ತು ವಿಶೇಷಾರ್ಥ. 

"ಪ್ರತ್ಯಕ್ಷರಂ ಪ್ರತಿಪದಂ ಅನೇಕಾಕೂತಿ ಗರ್ಭಿತಂ" ಎಂದು ಒಂದು ಮಾತಿದೆ. ದೊಡ್ಡವರ ಮಾತುಗಳಲ್ಲಿ ಅವರ ಅನೇಕ ಕಾಲದ ಅನುಭವದ, ಅಧ್ಯಯನದ ಸಾರ ತುಂಬಿರುತ್ತದೆ. ಶ್ರೀ ಪುರಂದರದಾಸರ ಪದಗಳಲ್ಲಿ ಇವನ್ನು ಚೆನ್ನಾಗಿ ಕಾಣಬಹುದು. ಒಂದೊಂದು ಸಾಲಿನಲ್ಲೂ, ಒಂದೊಂದು ಪದದಲ್ಲೂ, ಸಾಮಾನ್ಯ ಅರ್ಥಗಳೂ, ಅವುಗಳ ಜೊತೆ-ಜೊತೆಯಾಗಿ ವಿಶೇಷ ಅರ್ಥಗಳೂ, ಗೂಡಾರ್ಥಗಳೂ ತುಂಬಿರುತ್ತವೆ. ಒಂದು ಸಲ ಓದಿದರೆ ಅಥವಾ ಕೇಳಿದರೆ ಅಷ್ಟಿಷ್ಟು ಅರ್ಥವೇನೋ ಆಗುತ್ತದೆ. ಸರಿಯಾದ ಮೌಲ್ಯ ನಮಗೆ ಸಿಗಬೇಕಾದರೆ ಹೆಚ್ಚಿನ ಅಧ್ಯಯನ ಅಗತ್ಯ. 

*****

ಹಿಂದಿನ ಮತ್ತು ಈ ಸಂಚಿಕೆಯನ್ನು ಓದಿದ ನಂತರ ಹಾಡನ್ನು ಕೇಳಿದರೆ ಹೆಚ್ಚು ಉಪಯೋಗವಾಗುತ್ತದೆ. ಆದ್ದರಿಂದ ಅದನ್ನು ಈ ಕೆಳಗೆ ಕೊಟ್ಟಿದೆ:


ಒಂದು ಬಾರಿ ಓದಿದರೆ ವಿಶೇಷಾರ್ಥಗಳು ಮನಸ್ಸಿನಲ್ಲಿ ನಿಲ್ಲುವುದಿಲ್ಲ. ಅದಕ್ಕೆ ಎರಡು ಮೂರು ಬಾರಿ ಓದುವ ತಾಳ್ಮೆ ಬೇಕು. ಒಮ್ಮೆ ಮನಸ್ಸಿನಲ್ಲಿ ನಿಂತರೆ ಮುಂದೆ ಬೇರೆ ಬೇರೆ ವಿಷಯಗಳ ಅಧ್ಯಯನ ಕಾಲದಲ್ಲಿ ಮತ್ತಷ್ಟು ಹೊಸ ವಿಷಯಗಳು ತೆರೆದುಕೊಳ್ಳುತ್ತವೆ. 

Tuesday, December 16, 2025

ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ


ಹಿಂದೊಮ್ಮೆ "ಹೂವು-ಹುಲ್ಲು ಮತ್ತು ಶ್ರೀಕೃಷ್ಣ" ಅನ್ನುವ ಶೀರ್ಷಿಕೆಯಡಿ ಶ್ರೀ ಪುರಂದರದಾಸರ ಜನಪ್ರಿಯ ಕೃತಿ "ಹೂವ ತರುವರ ಮನೆಗೆ ಹುಲ್ಲ ತರುವ, ಅವ್ವ ಲಕುಮಿರಮಣ ಇವಗಿಲ್ಲ ಗರುವ" ಬಗ್ಗೆ ವಿಚಾರ ಮಾಡಿದ್ದೆವು. ಇಲ್ಲಿ ಕ್ಲಿಕ್ ಮಾಡಿ ಅದನ್ನು ಓದಬಹುದು.  

ಅನೇಕ ಕೃತಿಗಳಲ್ಲಿ ಹೊರನೋಟಕ್ಕೆ ಕಾಣುವ ಅರ್ಥಕ್ಕೂ, ಒಳಗಿನ ಅಂತರಾರ್ಥಕ್ಕೂ ಬಹಳ ವ್ಯತ್ಯಾಸವಿರುತ್ತದೆ. ಒಟ್ಟಿನಲ್ಲಿ ಮೂರು ವಿಧದ ಅರ್ಥಗಳು ಉಂಟು. ಇವನ್ನು ಬಾಹ್ಯಾರ್ಥ, ಅಂತರಾರ್ಥ ಮತ್ತು ಗೂಡಾರ್ಥ ಅನ್ನುತ್ತಾರೆ. ಇದರ ಬಗ್ಗೆ ವಿವರಗಳನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಇದೇ ಸಂದರ್ಭದಲ್ಲಿ "ಬಿಂದು ಗಂಗೋದಕ" ಎನ್ನುವ ವಿಷಯದ ಚರ್ಚೆಯಲ್ಲಿ ವಾರಣಾಸಿಯಲ್ಲಿರುವ ಬಿಂದುಮಾಧವ ದೇವಾಲಯ, ದೇಶದಲ್ಲಿರುವ ಇತರೆ ಮಾಧವ ದೇವಾಲಯಗಳು ಮತ್ತು ಕಾಶಿಯ ಬಿಂದುಮಾಧವ ಘಟ್ಟ ಮುಂತಾದ ವಿವರಗಳನ್ನು ನೋಡಿದ್ದೆವು. ಓದುಗರೊಬ್ಬರು "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ" ಕೃತಿಯಲ್ಲಿ ಬರುವ "ಬಿಂದು ಮಾಧವನ ಘಟ್ಟಕ್ಕೆ ಹೋಗುವೆ ತಾರೇ ಬಿಂದಿಗೆಯ" ಅಂತರಾರ್ಥ ಮತ್ತು ಗೂಡಾರ್ಥಗಳ ಬಗ್ಗೆ ಕೇಳಿದ್ದಾರೆ. ಈಗ ಅದನ್ನು ಸ್ವಲ್ಪ ನೋಡೋಣ. 

*****

"ತಾರಕ್ಕ ಬಿಂದಿಗೆ.." ಕೃತಿಯಲ್ಲಿ ಒಬ್ಬರು (ಪುರುಷ ಅಥವಾ ಸ್ತ್ರೀ) ಮತ್ತೊಬ್ಬರನ್ನು (ಸ್ತ್ರೀ) ನೀರು ತರಲು ಒಂದು ಬಿಂದಿಗೆ ಕೊಡಲು ಕೇಳುವಂತೆ ಇದೆ. ಇದನ್ನು ನರ್ಸರಿ ಶಾಲೆಯಲ್ಲಿ ಪುಟ್ಟ ಮಕ್ಕಳಿಗೆ ಚೆನ್ನಾಗಿ ಅಲಂಕಾರ ಮಾಡಿ ಶಾಲಾ ವಾರ್ಷಿಕೋತ್ಸವದಂದು ನೃತ್ಯ ಮಾಡಲು ವಿಶೇಷವಾಗಿ ಬಳಸುತ್ತಾರೆ. ಸಂಗೀತ ಕಲಿಯುವ ಮಕ್ಕಳಿಗೆ ಪ್ರಾರಂಭದಲ್ಲಿ ಹೇಳಿಕೊಡುವ ಹಾಡುಗಳಲ್ಲಿ ಇದೂ ಒಂದು. ಸರಳವಾದ ಪದಗಳ ಬಳಕೆಯ ಮೂರು ನುಡಿಗಳ ಪುಟ್ಟ ಹಾಡು. ಕಲಿಯಲು ಸುಲಭ. ನೆನಪಿಡಲು ಸರಳ. ಹಾಡಲು ಸುಗಮ. ಆದರೆ ಅರ್ಥ ಬಹಳ ಗಹನ. ಇದೇ ಇದರ ವಿಶೇಷ. 

ಶ್ರೀ ಪುರಂದರದಾಸರು ಮಾಧ್ವ ಸಂಪ್ರದಾಯದ ಕವಿಗಳು ಮತ್ತು ತತ್ವಜ್ಞರು. "ಸುಮಧ್ವ ವಿಜಯ" ಅನ್ನುವ ಗ್ರಂಥದಲ್ಲಿ (ಅದ್ವೈತದಲ್ಲಿ "ಶ್ರೀ ಶಂಕರ ದಿಗ್ವಿಜಯ" ಗ್ರಂಥವಿದ್ದಂತೆ ದ್ವೈತದಲ್ಲಿ ಈ "ಸುಮಧ್ವ ವಿಜಯ ಗ್ರಂಥ) ಆಚಾರ್ಯ ಮಧ್ವರ ಭಾಷ್ಯಗಳ ಮತ್ತು ಪ್ರವಚನಗಳ ಪರಿಣಾಮಗಳನ್ನು ವರ್ಣಿಸುವ ಪ್ರಸಂಗವಿದೆ. ಈ ಗ್ರಂಥದ ಒಂಭತ್ತನೆಯ ಸರ್ಗದ ಹತ್ತನೆಯ ಶ್ಲೋಕದಲ್ಲಿ "ಬಾಲಸಂಗಮಪಿ ಬೋಧಯದ್ ಭೃಶಂ ದುರ್ನಿರೂಪವಚನಂ ಚ ಪಂಡಿತೈ:" ಎನ್ನುವ ಒಂದು ಹೇಳಿಕೆಯಿದೆ. "ಚಿಕ್ಕಮಕ್ಕಳಿಗೂ ಅರ್ಥವಾಗುವುದು. ಆದರೆ ಘನ ಪಂಡಿತರಿಗೂ ಗೊತ್ತಾಗದು!" ಎಂದು ಅದರ ಅರ್ಥ. ಈ ಹಾಡೂ ಅಂತೆಯೇ. ಬಾಹ್ಯಾರ್ಥ ಪುಟ್ಟ ಮಕ್ಕಳಿಗೂ ಗೊತ್ತಾಗುವುದು. ನೀರು ತರಲು ಬಿಂದಿಗೆ ಕೊಡು ಎನ್ನುವುದು. ಅಂತರಾರ್ಥ-ಗೂಡಾರ್ಥಗಳು ತಿಳಿಯಲು ಅನೇಕ ಗ್ರಂಥಗಳ ಆಳವಾದ ಅಭ್ಯಾಸ ಬೇಕಾಗುವುದು. ಇದು ಏಕೆ ಎನ್ನುವುದನ್ನು ಸ್ವಲ್ಪಮಟ್ಟಿಗೆ ನೋಡೋಣ. 

*****

ಬಿಂದಿಗೆ ಕೊಡು ಎಂದು ಕೇಳುತ್ತಿರುವುದು ಅಕ್ಕನನ್ನು. ಅಕ್ಕ ಯಾರು? ಒಂದು ಮನೆಯಲ್ಲಿ ಹುಟ್ಟಿದ ಹುಡುಗಿ ತನ್ನ ನಂತರ ಹುಟ್ಟಿದ ತಮ್ಮ-ತಂಗಿಯರಿಗೆ ಅಕ್ಕ. ಇದು ಲೋಕಾರೂಢಿ. ತಮ್ಮ-ತಂಗಿಯರು ಏನಾದರೂ ಬೇಕಾದರೆ ತಮಗಿಂತ ದೊಡ್ಡವಳಾದ, ಮತ್ತು ಆ ಕಾರಣದಿಂದ ಮನೆಯಲ್ಲಿ ಸ್ವಲ್ಪ ಹೆಚ್ಚಿನ ಅಧಿಕಾರ ಹೊಂದಿರುವ ಅಕ್ಕನನ್ನು ಕೇಳುವುದು ಸಹಜ. ಅದಲ್ಲದೆ ಅಕ್ಕ ಎಂದರೆ ಸ್ವಲ್ಪ ಸಲಿಗೆಯೂ ಹೆಚ್ಚಾಗಿ ಉಂಟು. ಅಣ್ಣನಿಗಿಂತ ಅಕ್ಕನಲ್ಲಿ ಕೇಳುವುದು ಸುಲಭ. ಅವಳದ್ದು ಹೆಂಗರುಳು. ತುಂಬಿದ ಮನೆಯಲ್ಲಿ ಬೆಳೆದವರಿಗೆ ಇದು ಗೊತ್ತು. ವಯಸ್ಸಿನ ಅಂತರ ಹೆಚ್ಚಿದ್ದರೆ ಕೇಳುವವರು ರಾಗವಾಗಿ ಬೇಡುವುದು ಸಾಮಾನ್ಯ. ಇಲ್ಲಿ ಕೇಳುವುದು ಹಾಗೆ ಇದೆ. "ಕೊಡೇ ಅಕ್ಕಾ...." ಎಂದು ಪ್ರೀತಿಯಿಂದ ಮನವೊಲಿಸುವ ರೀತಿ. ಆದ್ದರಿಂದ "ತಾರೇ ಬಿಂದಿಗೆಯಾ" ಎಂದು ದೀರ್ಘ! ಇದು ಇಲ್ಲಿನ ಸಾಮಾನ್ಯ ಅರ್ಥ. 

ಕೆಲವು ಕುಟುಂಬಗಳಲ್ಲಿ ತಾಯಿಗೆ "ಅಮ್ಮ" ಎಂದು ಸಂಬೋಧಿಸುವ ಪದ್ಧತಿ ಉಂಟು. ಹೆಚ್ಚಿನ ಕುಟುಂಬಗಳಲ್ಲಿ ಹೀಗೆಯೇ ಅಭ್ಯಾಸ. ಕೆಲವು ಪ್ರದೇಶಗಳಲ್ಲಿ (ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ) "ಅವ್ವ" ಎಂದೂ ಕರೆಯುತ್ತಾರೆ. ಗಂಡ-ಹೆಂಡತಿ ಮದುವೆಯ ನಂತರ ಹೊಸದಾಗಿ ಸಂಸಾರ ಹೂಡಿದಾಗ ಇನ್ನೂ ಸಂತಾನ ಇರುವುದಿಲ್ಲ. ಅವರ ಜೊತೆ ಗಂಡನ ತಮ್ಮ-ತಂಗಿಯರು ವಾಸವಿದ್ದರೆ ಅವರು ಅವನನ್ನು "ಅಣ್ಣ" ಎಂದು ಕರೆಯುತ್ತಾರೆ. ನಂತರ ಆ ದಂಪತಿಗಳ ಸಂತಾನವಾಗಿ ಹುಟ್ಟಿದ ಮಕ್ಕಳು ತಂದೆಯನ್ನು "ಅಣ್ಣ" ಎಂದು ಈ ಕಾರಣದಿಂದ ಕರೆಯುವುದು ಉಂಟು. ಇದೇ ರೀತಿ ಹೆಂಡತಿಯ ತಮ್ಮ-ತಂಗಿಯರು ಅವರೊಡನಿದ್ದರೆ ಆಕೆಯನ್ನು "ಅಕ್ಕ" ಎಂದು ಕರೆಯುತ್ತಾರೆ. ಮುಂದೆ ಹುಟ್ಟಿದ ಮಕ್ಕಳು ಇದನ್ನೇ ಅನುಸರಿಸಿ ತಾಯಿಯನ್ನೂ "ಅಕ್ಕ" ಎಂದೇ ಕರೆಯುತ್ತಾರೆ. ಮಹಾಲಕ್ಷ್ಮಿ ಎಲ್ಲರಿಗೂ ತಾಯಿಯಾದರೂ ಈ ಹಿನ್ನೆಲೆಯಲ್ಲಿ ಅಕ್ಕನೂ ಆಗುತ್ತಾಳೆ.       

ಬಿಂದಿಗೆ ಒಂದು ದಿನಬಳಕೆಯ ಜಡ ಪದಾರ್ಥ. ಸ್ವಲ್ಪ ಅನುಕೂಲವಂತರಾದ ಜನರ ಮನೆಯಾದರೆ ಅಲ್ಲಿ ಹಿತ್ತಾಳೆ ಅಥವಾ ತಾಮ್ರದ ಬಿಂದಿಗೆ ಉಂಟು. ಬಡವರ ಮನೆಯಾದರೆ ಮಣ್ಣಿನ ಮಡಕೆ ಮಾತ್ರ ಇರುವುದು. ಚಿಕ್ಕವರಿಗೆ ಕೊಟ್ಟಾಗ, ಅವರು ಕಳೆದುಕೊಂಡರೆ ಬೆಲೆಬಾಳುವ ವಸ್ತು ಹೋಯಿತು. ಮಣ್ಣಿನದಾದರೆ, ಅವರು ಬಲು ಬೇಗ ಒಡೆದುಹಾಕಿ ಅದು ಹಾಳಾಗಬಹುದು. ಆದ್ದರಿಂದ ಎರಡು ರೀತಿಯಲ್ಲೂ ನಷ್ಟವೇ ಹೌದು. ಈ ಕಾರಣಕ್ಕಾಗಿ ದೊಡ್ಡವರನ್ನು ಕೇಳಿ ಪಡೆದುಕೊಳ್ಳಬೇಕಾಗುತ್ತದೆ. 

ಒಂದೆಡೆ ಒಬ್ಬ ಪರಮಾತ್ಮ. ಇನ್ನೊಂದೆಡೆ ಅನೇಕ ಜೀವರುಗಳು. ಮೂರನೆಯವು ಜಡ ವಸ್ತುಗಳು. ಜಡ ಪ್ರಕೃತಿಗಳಿಗೆ ಅಭಿಮಾನಿ ದೇವತೆ ಮಹಾಲಕ್ಷ್ಮೀದೇವಿ. ಇಲ್ಲಿ ಜೀವಿಗಳು ಮಹಾಲಕ್ಷ್ಮೀದೇವಿಯನ್ನು ತಮಗೊಂದು ದೇಹವನ್ನು ಕೊಡು ಎಂದು ಕೇಳುತ್ತಿರುವುದು ಅಂತರಾರ್ಥ. ನಮ್ಮ ದೇಹವೂ ಒಂದು ಬಿಂದಿಗೆಯಂತೆ ಅಥವಾ ಮಡಕೆಯಂತೆಯೇ ಇದೆ. ಅವುಗಳಿಗೂ ಕತ್ತು ಅಥವಾ ಕಂಠ ಪ್ರದೇಶ ಉಂಟು. ನಮ್ಮ ದೇಹಗಳಿಗೂ ಹೀಗೆಯೇ ಕತ್ತು ಇದೆ. ನದಿಯಲ್ಲೋ, ಜಲಾಶಯದಲ್ಲೋ ಬೇಕಾದಷ್ಟು ನೀರುಂಟು. ಆದರೆ ನೀರು ತರಬೇಕಾದರೆ ಬಿಂದಿಗೆ ಬೇಕು. ಬಿಂದಿಗೆಗಳಲ್ಲಿ ನೀರು ತುಂಬಬಹುದು. ಜೀವನಿಗೆ ಸಾಧನೆ ಮಾಡಲು ಅನೇಕ ಅವಕಾಶಗಳಿವೆ. ಆದರೆ ಸಾಧನೆ ಮಾಡಲು ಒಂದು ದೇಹ ಬೇಕು! ನಮ್ಮ ದೇಹಗಳಿಂದ ಅನೇಕ ರೀತಿಯ ಸಾಧನೆಕ್ರಿಯೆಗಳನ್ನು ಮಾಡಿ ಸಾಧನೆಯ ಫಲವನ್ನು ಜೀವಿಯು ತುಂಬಿಕೊಳ್ಳಬಹುದು. ದೇಹವಿಲ್ಲದಿದ್ದರೆ ಜೀವನು ಏನೂ ಸಾಧನೆ ಮಾಡಲು ಸಾಧ್ಯವಿಲ್ಲ.

"ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ" ಅನ್ನುವಲ್ಲಿ ಜೀವನು ಜಡ ಪ್ರಕೃತಿಯ ಅಭಿಮಾನಿ ದೇವತೆ ಮಹಾಲಕ್ಷ್ಮಿಯನ್ನು ಸಾಧನೆ ಮಾಡುವ ಸಲುವಾಗಿ ನಮಗೆ ಒಂದು ದೇಹವನ್ನು ಕೊಡು ಎಂದು ಬೇಡುವುದು ಅಂತರಾರ್ಥ. 
***** 

ಇನ್ನು "ಬಿಂದಿಗೆ ಒಡೆದರೆ ಒಂದೇ ಕಾಸು" ಎಂದರೇನು? ತಾಮ್ರದ ಅಥವಾ ಹಿತ್ತಾಳೆ ಬಿಂದಿಗೆ ಒಡೆಯುವುದಿಲ್ಲ. ಅವು ಕಳೆದುಹೋಗಬಹುದು ಅಥವಾ ಚಿಕ್ಕವರನ್ನು ಹೆದರಿಸಿ ಮತ್ಯಾರೋ ಧಾಂಡಿಗರು ಕಿತ್ತುಕೊಂಡು ಹೋಗಬಹುದು. ಒಡೆಯಬೇಕಾದರೆ ಅದು ಮಣ್ಣಿನ ಬಿಂದಿಗೆ (ಮಡಕೆ) ಆಗಿರಬೇಕು. ಇದು ನೇರವಾಗಿ ದೇಹವನ್ನೇ ಸೂಚಿಸುತ್ತದೆ. ಯಾರಾದರೂ ಸತ್ತ ಸುದ್ದಿ ಕೇಳಿದಾಗ ಹಿಂದಿನ ದಿನಗಳಲ್ಲಿ "ಒಂದು ಘಟ ಬಿತ್ತು" ಎಂದು ಸೂಚ್ಯವಾಗಿ ಹೇಳುತ್ತಿದ್ದರು. ಘಟ ಸಂಸ್ಕೃತ ಪದ. ಕನ್ನಡಲ್ಲಿ ಮಡಕೆ. 

ಸ್ಮಶಾನದಲ್ಲಿ ಮೃತ ದೇಹಗಳ ಅಂತ್ಯ ಸಂಸ್ಕಾರ ಮಾಡುವಾಗ, ಸಂಸ್ಕಾರ ಮಾಡುತ್ತಿರುವ ವ್ಯಕ್ತಿಯ ಹೆಗಲ ಮೇಲೆ ಒಂದು ನೀರು ತುಂಬಿದ ಮಣ್ಣಿನ ಘಟ (ಮಡಕೆ) ಹೊರಿಸುತ್ತಾರೆ. ಮೃತ ದೇಹದ ಸುತ್ತ ಅವನು ಸುತ್ತುವಾಗ ಒಂದು ಸಣ್ಣ ಕಲ್ಲಿನಿಂದ ಅದಕ್ಕೆ ಮತ್ತೊಬ್ಬರು ಒಂದು ರಂಧ್ರ ಮಾಡುತ್ತಾರೆ. ಮೂರು ಸುತ್ತು. ಒಂದು ಸುತ್ತಿಗೆ ಒಂದರಂತೆ ಮೂರು ರಂಧ್ರಗಳು. ಈ ತೂತುಗಳಿಂದ ನೀರು ಹೊರಗೆ ಸೋರಿಹೋಗುತ್ತಿರುತ್ತದೆ. ಮೂರನೆಯ ಸುತ್ತು ಬಂದ ಮೇಲೆ ಮಡಕೆ ಹೊತ್ತುಕೊಂಡಿರುವ ವ್ಯಕ್ತಿ ಅದನ್ನು ಹಿಮ್ಮುಖವಾಗಿ ಬೀಳಿಸುತ್ತಾನೆ. ಈಗ ಮಡಕೆ ಪೂರ್ತಿ ಒಡೆದು ಚೂರುಗಳಾಗಿ ಬೀಳುತ್ತದೆ. ಹೀಗೆ ಬಿದ್ದ ಒಂದು ದೊಡ್ಡ ಮಡಕೆಯ ಚೂರಿನಲ್ಲಿ ಇರುವ ಸ್ವಲ್ಪ ನೀರನ್ನು ಮುಂದಿನ ಕರ್ಮದ ಕೆಲಸಗಳಿಗೆ ಬಳಸುತ್ತಾರೆ. "ಒಂದು ಘಟ ಬಿತ್ತು" ಎನ್ನುವ ಪದಪ್ರಯೋಗ ಈ ಕಾರಣದಿಂದ ಬಂದದ್ದು. 

ಹಿಂದೆಲ್ಲಾ ಸುಡುಗಾಡಿಗೆ ಅಥವಾ ಸ್ಮಶಾನಕ್ಕೆ ಹೋಗಿ ಇದನ್ನು ನೋಡಿದವರಿಗೆ ಮಾತ್ರ ಇವು ಗೊತ್ತಾಗುತ್ತಿತ್ತು. ಸುಡುವ ಕಾಡು ಸುಡುಗಾಡು. ಈಗ ಟಿವಿ ಕಾರ್ಯಕ್ರಮಗಳಲ್ಲಿ ಮತ್ತು ಸಿನಿಮಾಗಳಲ್ಲಿ ವೈಭವದಿಂದ ತೋರಿಸುವುದರಿಂದ ಹೆಚ್ಚಿನ ಜನಕ್ಕೆ ಗೊತ್ತು. 

ಉಳಿದಿದ್ದು "ಒಂದೇ ಕಾಸು" ಅನ್ನುವುದು. ಒಬ್ಬ ವ್ಯಕ್ತಿ ಸತ್ತ ಮೇಲೆ ಆ ದೇಹವನ್ನು ಏನು ಮಾಡಬೇಕು? ಎಷ್ಟೇ ಪ್ರೀತಿಯ ವ್ಯಕ್ತಿಯಾದರೂ ಆ ದೇಹವನ್ನು ಇಟ್ಟುಕೊಳ್ಳುವಂತಿಲ್ಲ. ಸಂಸ್ಕಾರ ಮಾಡಬೇಕು. ಹಾಗೆ ಮಾಡಿ ದೇಹದ ಕೆಲಸ ಮುಗಿಸಬೇಕು. ಇದು ಲೋಕದಲ್ಲಿ ಎರಡು ರೀತಿಯಲ್ಲಿ ನಡೆಯುತ್ತದೆ. ಕೆಲವರು ಭೂಮಿಯಲ್ಲಿ ಹೂಳುತ್ತಾರೆ. ಮತ್ತೆ ಕೆಲವರು ಬೆಂಕಿಯಲ್ಲಿ ಸುಡುತ್ತಾರೆ. ಬೆಂಕಿಯಲ್ಲಿ ಸುಡುವುದಕ್ಕೆ "ಕಾಯಿಸುವುದು" ಎಂದೂ ಹೇಳುತ್ತಾರೆ. ಆಡು ಭಾಷೆಯಲ್ಲಿ "ಕಾಯಿಸು" ಅನ್ನುವುದು "ಕಾಸು" ಆಗುತ್ತದೆ. "ಇನ್ನೇನು, ಕಾಫಿ ಕಾಸು" ಎಂದು ಹಿಂದೆಲ್ಲಾ ಹೇಳುತ್ತಿದ್ದರು. "ಸ್ನಾನಕ್ಕೆ ನೀರು ಕಾಸು" ಅನ್ನುತ್ತಿದ್ದರು. ದಾಸರು ಇದನ್ನೇ "ಬಿಂದಿಗೆ ಒಡೆದರೆ ಒಂದೇ ಕಾಸು" ಎಂದಿದ್ದಾರೆ. ಒಂದೇ ಕಾಸು. ಏಕೆಂದರೆ "ಮತ್ತೆ ಮತ್ತೆ ಕಾಸುವಂತಿಲ್ಲ". ಇದು ಕಡೆಯ ಕಾಸುವಿಕೆ. ಅಲ್ಲಿಗೆ ಎಲ್ಲ ಮುಗಿಯಿತು. ಹೀಗೆ. 

*****

ಕೇವಲ ಎರಡು ಸಾಲಿನ ಪಲ್ಲವಿಗೇ ಇಷ್ಟಾಯಿತು. ಇದರಲ್ಲೂ "ನೀರು" ಪದದ ವಿಶೇಷಾರ್ಥ ಉಳಿದಿದೆ. ಈಗಿನ ಪೀಳಿಗೆಗೆ ಇಂತಹ ಹೆಚ್ಚು ವಿಷಯಗಳು ಗೊತ್ತಿರುವುದಿಲ್ಲ. ಪ್ರಶ್ನೆಗಳನ್ನು ಕೇಳುವವರು ಬಹುತೇಕ ಈಗಿನ ತಲೆಮಾರಿನವರು. ಆದ್ದರಿಂದ ವಿವರಗಳು ಜಾಸ್ತಿ. ಲೇಖನದ ಉದ್ದವೂ ದೊಡ್ಡದು.

ಮುಂದಿನ ಸಂಚಿಕೆಯಲ್ಲಿ ಈ ಕೃತಿಯ ಇತರೆ ಅಂತರಾರ್ಥ, ಗೂಡಾರ್ಥಗಳನ್ನು ಹುಡುಕುವ ಪ್ರಯತ್ನ ಮಾಡೋಣ.

Sunday, December 14, 2025

ರಾಗಿ ಮೂಟೆಯ ಮೇಲೆ ಸಾವೇರಿ ರಾಗ


ಈಗ ಬೆಂಗಳೂರಿನ ಚಿತ್ರಣವೇ ಬದಲಾಗಿದೆ. ನಾವುಗಳು ನಮ್ಮ ಬಾಲ್ಯದಲ್ಲಿ ಕಂಡ ಬೆಂಗಳೂರು ನಗರಕ್ಕೂ ಈಗಿನ ನಗರಕ್ಕೂ ಅಜ-ಗಜಾಂತರ ವ್ಯತ್ಯಾಸ. "ಸಿಟಿ ಮಾರ್ಕೆಟ್" ಎಂದು ಹೆಸರಾದ "ಕೃಷ್ಣರಾಜೇಂದ್ರ ಮಾರುಕಟ್ಟೆ" ಪೊರೆ ಬಿಟ್ಟ ಹಾವಿನಂತೆ ಹೊಸ ರೂಪ ಪಡೆದುಕೊಂಡರೂ ಈಗಲೂ ಉಳಿದಿದೆ. ಅದಕ್ಕೆ ಹೊಂದಿಕೊಂಡಂತೆ ದಕ್ಷಿಣಕ್ಕೆ ನರಸಿಂಹರಾಜ ರಸ್ತೆ. ಅದಕ್ಕೆ ಸೇರಿದಂತೆ ಉದ್ಯಾನವನದ ಎದುರುಗಡೆ "ಸಿಲ್ವರ್ ಜುಬಿಲಿ ಪಾರ್ಕ್ ರಸ್ತೆ" ಕೂಡ ಉಂಟು. ಆದರೆ ಆ ಪಾರ್ಕ್ ಕಳೆಗುಂದಿ ಧೂಳುತುಂಬಿ ಅರ್ಧಕ್ಕಿಂತಲೂ ಹೆಚ್ಚು ಮಾಯವಾಗಿದೆ. ನರಸಿಂಹರಾಜ ರಸ್ತೆ ಪಶ್ಚಿಮಕ್ಕೆ ಮುಂದುವರೆದರೆ ಮೈಸೂರು ರಸ್ತೆ. 

ಈ ಕಡೆ ಪೂರ್ವದಲ್ಲಿ  ಜಯಚಾಮರಾಜೇಂದ್ರ ರಸ್ತೆ. ಹಾಗೆಂದು ಹೇಳಿದರೆ ಹೆಚ್ಚಿನ ಜನಕ್ಕೆ ಅರ್ಥ ಆಗುವುದಿಲ್ಲ. ಜೆಸಿ ರಸ್ತೆ ಅಂದರೆ ಗೊತ್ತಾಗುವುದು. (ಮಹಾತ್ಮಗಾಂಧಿ ರಸ್ತೆ ಅಂದರೆ ಗೊತ್ತಾಗುವುದಿಲ್ಲ. ಎಂ.ಜಿ ರಸ್ತೆ ಅಂದರೆ ಗೊತ್ತಾಗುತ್ತದೆ. ಈ ರೀತಿ!). ಉತ್ತರದಲ್ಲಿ ಜಿಲ್ಲಾ ಕಚೇರಿ (ಡಿಸ್ಟ್ರಿಕ್ಟ್ ಆಫೀಸು) ರಸ್ತೆ ಮತ್ತು ಕೆಂಪೇಗೌಡ ರಸ್ತೆ.  ಅಲ್ಲಿಂದ ಮುಂದೆ ತುಳಸಿ ತೋಟ ಎಂದಿತ್ತು. ಅಲ್ಲಿದ್ದ ಧರ್ಮಾ೦ಬುಧಿ  ಕೆರೆ ಮಾಯವಾಗಿ ಕೆಂಪೇಗೌಡ ಬಸ್ ನಿಲ್ದಾಣವಾಗಿ ಕೂತಿದೆ. ರೈಲ್ವೆ ನಿಲ್ದಾಣದಿಂದ ಕೆಳಗೆ ಬಂದರೆ ಅರಳೇಪೇಟೆ ಅಥವಾ ಕಾಟನ್ ಪೇಟೆ. ಹೀಗೆ ಇರುವ ರಸ್ತೆಗಳ ಮಧ್ಯೆ ಪೇಟೆ ಪ್ರದೇಶ.   

ಅನೇಕ ಪೇಟೆಗಳು. ಸಣ್ಣ ಸಣ್ಣ ಗಲ್ಲಿಗಳು. ಅಲ್ಲಿ ಅಕ್ಕಿಪೇಟೆ, ರಾಗಿಪೇಟೆ, ಅರಳೇಪೇಟೆ, ಚಿಕ್ಕಪೇಟೆ, ಸುಣ್ಣಕಲ್ಲು ಪೇಟೆ ಮುಂತಾದ ಪೇಟೆಗಳು. ಪೇಟೆಗಳಲ್ಲಿ ಅನೇಕ ಅಂಗಡಿಗಳು. ಅಲ್ಲಿ ಸಿಕ್ಕದಿದ್ದ ಪದಾರ್ಥಗಳೇ ಇರಲಿಲ್ಲ. ಪದಾರ್ಥಗಳು ಅಂದರೆ ಆಗಿನ ಜೀವನಕ್ಕೆ ಬೇಕಿದ್ದ ಪದಾರ್ಥಗಳು. ಪುಸ್ತಕಗಳಿಗೆ ಅವೆನ್ಯೂ ರಸ್ತೆ, ಚಿನ್ನ-ಬೆಳ್ಳಿ ಒಡವೆಗಳು ಬೇಕಿದ್ದರೆ ನಗರ್ತಪೇಟೆ. ಮತ್ತೆ ಕೆಲವಕ್ಕೆ ಕಿಲಾರಿ ರಸ್ತೆ. ಬಟ್ಟೆ-ಬರೆಗೆ ಚಿಕ್ಕಪೇಟೆ ಅಂಗಡಿಗಳು. ಹೂವು-ಹಾರಗಳಿಗೆ ತಿಗಳರ ಪೇಟೆ. ಬಳೆ-ಬಿಚ್ಚೂಲೆಗಳಿಗೆ ಬಳೆಪೇಟೆ. ಹೀಗೆ. ಸೂಪರ್ ಮಾರ್ಕೆಟ್, ಮಾಲುಗಳು ಬಂದ ಮೇಲೆ ಇವೆಲ್ಲಾ ಹೆಚ್ಚು-ಕಡಿಮೆ ಮರೆತೇ ಹೋಗಿವೆ. 
*****

ಸುಮಾರು ಒಂದು ನೂರು ವರ್ಷಗಳ ಹಿಂದಿನ ಒಂದು ದಿನ. ಬೆಳಗ್ಗೆ ಒಂಭತ್ತು ಗಂಟೆಯ ಸಮಯ. ಅಂಗಡಿಗಳ ಬಾಗಿಲುಗಳು ಆಗ ತಾನೇ ಒಂದೊಂದಾಗಿ ತೆರೆಯುತ್ತಿದ್ದವು. ಚಿತ್ರಾಪೂರ್ಣಿಮೆಯಂದು ನಡೆಯುವ "ಬೆಂಗಳೂರು ಕರಗ" ಉತ್ಸವದ ಕೇಂದ್ರವಾದ "ಧರ್ಮರಾಯಸ್ವಾಮಿ" ದೇವಸ್ಥಾನದ ಪಕ್ಕದ ರಾಗಿಪೇಟೆ. ಬೆಂಕಿನವಾಬ ರಸ್ತೆ. ಅಂಗಡಿ ಬಾಗಿಲು ತೆಗೆಯುತ್ತಿದ್ದಂತೆಯೇ ಒಬ್ಬರು ಸಾಮಾನು ಕೊಳ್ಳಲು ಬಂದರು. ಅಂಗಡಿಯ ಮಾಲೀಕ ಮತ್ತು ಕೊಳ್ಳಲು ಬಂದವರು ಚೆನ್ನಾಗಿ ಪರಸ್ಪರ ತಿಳಿದಿದ್ದ ಸ್ನೇಹಿತರು. ಕುಶಲೋಪರಿ ನಡೆಯಿತು. 

"ಏನು? ಬೆಳಗ್ಗೆಯೇ ಬಂದೆ?"
"ಬಂದರೇನು? ನೀನು ಅಂಗಡಿ ಇಟ್ಟಿರುವುದು ಅದಕ್ಕೇ ತಾನೇ?"
"ಇಷ್ಟರಲ್ಲಿಯೇ ಮುಗಿದುಹೋಯಿತು"
"ಏನು ಹಾಗಂದರೆ? ಮತ್ತೇನು ಆಗಬೇಕು?"
"ನೀನು ಬಹಳ ಸೊಗಸಾಗಿ ಹಾಡುತ್ತೀಯೆ ಎಂದು ಎಲ್ಲರೂ ಹೇಳುತ್ತಾರೆ"
"ಹೌದೇನು?"
"ನನಗೆ ಮಾತ್ರ ಕೇಳುವ ಅವಕಾಶ ಸಿಗಲಿಲ್ಲ" 
"ಏನು ತೊಂದರೆ? ಬಂದು ಕೂತು ಕೇಳು"
"ನಿನ್ನ ಹಾಡುಗಾರಿಕೆ ಸಂಜೆಯ ವೇಳೆಯೇ. ನನಗೆ ಆಗ ಅಂಗಡಿ ಬಿಟ್ಟು ಬರಲಾಗದು"
"ಈಗ ನಾನೇ ಬಂದಿದ್ದೇನಲ್ಲ. ಹಾಡುತ್ತೇನೆ. ಕೇಳು"

ಬಂದವರು ಅಲ್ಲಿಯೇ ಇದ್ದ ಒಂದು ರಾಗಿ ಮೂಟೆಯ ಮೇಲೆ ಕುಳಿತರು. ಶ್ರುತಿ ಪೆಟ್ಟಿಗೆ ಇಲ್ಲ. ಪಕ್ಕವಾದ್ಯಗಳಿಲ್ಲ. ಸಾವೇರಿ ರಾಗ ಆರಿಸಿಕೊಂಡರು. ರಾಗಿ ಮೂಟೆಯ ಮೇಲೆ ಸಾವೇರಿ ರಾಗ. ತನ್ಮಯರಾಗಿ ಹಾಡಿದರು. ಇಬ್ಬರೂ ಸುತ್ತಲಿನ ಪ್ರಪಂಚ ಮರೆತರು. 

ಇವರು ಪ್ರಪಂಚ ಮರೆತರೂ ಮಿಕ್ಕವರಿಗೆ ಈ ಹಾಡುಗಾರಿಕೆ ಕೇಳಿಸಿತು. ಸುತ್ತ-ಮುತ್ತ ಓಡಾಡುತ್ತಿದ್ದ ಜನರೆಲ್ಲಾ ಸೇರಿದರು. ಬೆಂಕಿನವಾಬನ ರಸ್ತೆಯ ಈ ಕೊನೆಯಿಂದ ಆ ಕೊನೆಯವರೆಗೆ. ಹೀಗೆ ನಡೆಯುತ್ತಿದೆ ಎಂದು ಕೇಳಿದ ಬೇರೆಯವರೂ ಓಡಿ ಬಂದರು. ಕಡೆಗೆ ಬಂದವರಿಗೆ ನಿರಾಸೆಯೂ ಆಯಿತು. ಅದು ಬರಿ ಹಾಡುಗಾರಿಕೆಯಲ್ಲ. ಗಂಧರ್ವಗಾನ. ಗಂಧರ್ವಗಾನ ನಾವು ಕೇಳಿಲ್ಲ. ಹೀಗೆ ಹಾಡುವುದೇ ಗಂಧರ್ವಗಾನ ಇರಬಹುದು.
*****

"ಹಂಸಗೀತೆ" ಕನ್ನಡ ಚಲನಚಿತ್ರ ಪದ್ಮಭೂಷಣ ಅನಂತನಾಗ್ ಅವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದ್ದಲ್ಲದೇ ಅವರ ಕಲಾಸಾಧನೆಯಲ್ಲಿ ಒಂದು ಮೈಲಿಗಲ್ಲಾಗಿ ನಿಂತಿದೆ. ಚಿತ್ರದುರ್ಗದ ಅರಸ ಮದಕರಿನಾಯಕನ ಆಸ್ಥಾನ ವಿದ್ವಾನ್ "ಭೈರವಿ ವೆಂಕಟಸುಬ್ಬಯ್ಯ" ಎಂಬ ಸಂಗೀತಗಾರನ ಪಾತ್ರ ಅವರಿಗೆ ಹೇಳಿ ಮಾಡಿಸಿದಂತಿತ್ತು. 

ಅಂದು "ಭೈರವಿ ವೆಂಕಟಸುಬ್ಬಯ್ಯ" ಎಂದು ಆತ ಹೆಸರು ಪಡೆದಂತೆ ಕಳೆದ ಶತಮಾನದಲ್ಲಿ ಅದೇ ರಾಗದ ಮೂಲಕ ಹೆಸರುಮಾಡಿ ಗುರುತಿಸಿಕೊಂಡವರು ಗಾನಗಂಧರ್ವ "ಭೈರವಿ ಕೆಂಪೇಗೌಡ" (1857-1937) ಅವರು. ರಾಗಿಮೂಟೆಯ ಮೇಲೆ ಸಾವೇರಿ ರಾಗ ಹಾಡಿದವರು. 

ಕೆಂಪೇಗೌಡರ ಪೂರ್ವಜರು ಶ್ರೀರಂಗಪಟ್ಟಣದ ಬಳಿಯ ಗ್ರಾಮದವರಂತೆ. ಅವರ ತಂದೆ ವ್ಯಾಪಾರ-ವ್ಯವಹಾರದಲ್ಲಿ ಇದ್ದವರು. ಅದಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಕೊಯಮತ್ತೂರು ಪಟ್ಟಣಕ್ಕೆ ಹೋಗಿ ನೆಲೆಸಿದರಂತೆ. ಅಲ್ಲಿ ಚೆನ್ನಾಗಿ ವ್ಯಾಪಾರ ಬೆಳೆದು ಯಶಸ್ಸು ಕಂಡರು. ಕೆಂಪೇಗೌಡರು ಕೊಯಮತ್ತೂರಿನಲ್ಲಿ ಜನಿಸಿದರಂತೆ. ತಂದೆಗೆ ಮಗನೂ ತಮ್ಮಂತೆ ವ್ಯಾಪಾರದಲ್ಲಿ ಮುಂದೆ ಬರಲಿ ಎಂದು ಆಸೆ. ಆದರೆ ಮಗನಿಗೆ ಸಂಗೀತದಲ್ಲಿ ಆಸಕ್ತಿ. 

ಗೌಡರು ಶ್ರೀ ತ್ಯಾಗರಾಜರ ಹುಟ್ಟೂರು ತಿರುವಾರೂರಿಗೆ ಹೋದರು. ಆಗ ಅಲ್ಲಿನ ಶ್ರೇಷ್ಠ ಸಂಗೀತ ವಿದ್ವಾಂಸರಾದ ಶ್ರೀ ಪಟ್ನ೦ ಸುಬ್ರಹ್ಮಣ್ಯ ಅಯ್ಯರ್ (1845-1902) ಅವರ ಗರಡಿಯಲ್ಲಿ ಮೈಸೂರು ವಾಸುದೇವಾಚಾರ್ಯರು, ಟೈಗರ್ ವರದಾಚಾರ್ಯರು ಮುಂತಾದವರು ಶಿಷ್ಯವೃತ್ತಿ ನಡೆಸುತ್ತಿದ್ದ ಸಮಯ. ಕೆಂಪೇಗೌಡರು ಮನೆಯ ಕೆಲಸಕ್ಕೆ ಎಂದು ಸೇರಿಕೊಂಡರಂತೆ. ಸುತ್ತಲಿನ ಕೆಲಸ ಮಾಡುತ್ತಿದ್ದರೂ ಗೌಡರ ಗಮನವೆಲ್ಲ ಅಯ್ಯರ್ ಅವರು ಹೇಳುತ್ತಿದ್ದ ಸಂಗೀತ ಪಾಠದ ಕಡೆಗೇ. ಗೌಡರ ತನ್ಮಯತೆಗೆ ಮಾರುಹೋದ ಅಯ್ಯರ್ ಅವರನ್ನು ಶಿಷ್ಯನನ್ನಾಗಿ ತೆಗೆದುಕೊಂಡರು. 

*****

ಕೆಂಪೇಗೌಡರು ಗುರುಕುಲದಲ್ಲಿ ಇದ್ದಾಗ ನಡೆದ ಒಂದು ರೋಚಕ ಘಟನೆಯ ಉಲ್ಲೇಖಗಳಿವೆ. ಒಮ್ಮೆ ಮನೆಗೆ ಬಂದಿದ್ದ ಕೆಲವು ಸಂಗೀತಪ್ರೇಮಿಗಳ ಮುಂದೆ ಅಯ್ಯರ್ ಅವರು ಹಾಡುತ್ತಿದ್ದರು. ಊಟದ ಸಮಯವಾಯಿತು. ಅಯ್ಯರ್ ಅವರ ಹೆಂಡತಿ ಗೌಡರನ್ನು ಕರೆದು ಹಾಡುಗಾರಿಕೆ ಮಧ್ಯದಲ್ಲಿ ಅಯ್ಯರ್ ಅವರಿಗೆ ಊಟಕ್ಕೆ ಬರುವಂತೆ ಸೂಚಿಸಲು ಹೇಳಿದರು. ಸಂದರ್ಭ ನೋಡಿ ಗೌಡರು ಗುರುಗಳಿಗೆ ಹೇಳುವಾಗ, ನೀವು ಬರುವವರೆಗೆ ನಾನು ಇವರನ್ನು ಗಮನಿಸುತ್ತೇನೆ ಎಂದರಂತೆ. ಗುರುಗಳಿಗೆ ಕೋಪಬಂದಿತು. "ಹಾಗಿದ್ದರೆ ಈಗಲೇ ಹಾಡು" ಅಂದರಂತೆ. ಕೆಂಪೇಗೌಡರು ಗುರುಗಳು ನಿಲ್ಲಿಸಿದ್ದಕಡೆಯಿಂದ ಮುಂದುವರೆಸಿ ಅಧ್ಭತವಾಗಿ ಹಾಡಿದರಂತೆ. ಹಾಡುವಿಕೆ ಮುಗಿದಮೇಲೆ ಮೆಚ್ಚಿದ ಗುರುಗಳು ತಾವು ಹೊದೆದಿದ್ದ, ತಿರುವಾಂಕೂರು ಮಹಾರಾಜರು ಸನ್ಮಾನಿಸಿ ಕೊಟ್ಟಿದ್ದ ಶಾಲನ್ನೇ ಹೊದಿಸಿ ಹರಸಿದರಂತೆ!

ಗುರುಕುಲದಿಂದ ಬಂದ ಗೌಡರಿಗೆ ವಿವಾಹವಾಯಿತು. ಮಡದಿ ಸ್ವಲ್ಪ ಕಾಲದಲ್ಲೇ ತೀರಿಕೊಂಡರು. ಗೌಡರು ಒಂದು ರೀತಿಯ ವಿರಕ್ತರಾದರು. ಅಲೆಮಾರಿ ಜೀವನ ನಡೆಸಿದರೂ ಸಂಗೀತ ಮಾತ್ರ ಬಿಡಲಿಲ್ಲ. ಅವರು ಸಂಗೀತ ಬಿಡಲಿಲ್ಲ. ಅವರ ಹಾಡುಗಾರಿಕೆ ಕೇಳಿದವರು ಅದನ್ನು ಮರೆಯಲಿಲ್ಲ. ದುರದೃಷ್ಟವಶಾತ್ ಕುಡಿತದ ಚಟ ಅಂಟಿಕೊಂಡಿತು. ಕೆಂಪೇಗೌಡರಿಗೆ ಹೆಸರು, ಹಣ, ಬಿರುದು-ಬಾವಲಿಗಳ ಆಸೆ ಇರಲಿಲ್ಲ. ಒಮ್ಮೆ ಎಲ್ಲಿಗೋ ಹೋಗುತ್ತಿದ್ದಾಗ ಆಗಿನ ಮಹಾರಾಜ ಶ್ರೀ ಚಾಮರಾಜ ಒಡೆಯರ್ ಅಕಸ್ಮಾತ್ ಕೆಂಪೇಗೌಡರ ಗಾಯನ ಕೇಳಿದರಂತೆ. ವಾಸುದೇವಾಚಾರ್ಯರ ಮೂಲಕ ಗೌಡರನ್ನು ಕರೆಸಿ ಮಹಾರಾಜರು ಅರಮನೆಯಲ್ಲಿ ಹಾಡಿಸಿದರಂತೆ. 

ಮಹಾರಾಜರ ಮೂಲಕ ಬಂದ ಆಸ್ಥಾನ ವಿದ್ವಾನ್ ಪದವಿಯನ್ನು ಗೌಡರು ಬೇಡವೆಂದರೂ, ಆಗಾಗ ಅರಮನೆಗೆ ಹೋಗಿ ಹಾಡುತ್ತಿದ್ದರಂತೆ. ಬೆಂಗಳೂರಿನ ಬಸವನಗುಡಿ ಸುತ್ತ-ಮುತ್ತ ಆಗಾಗ ಬಂದು ಹಾಡುತ್ತಿದ್ದರಂತೆ. 
*****

ಚಿಕಾಗೋ ನಗರದಲ್ಲಿ ನಡೆದ "ವಿಶ್ವ ಧರ್ಮ ಸಮ್ಮೇಳನ" ಕಾರ್ಯಕ್ರಮದಲ್ಲಿ ಭಾಗವಹಿಸುವ ಮುಂಚೆ 1892 ಇಸವಿಯಲ್ಲಿ ಬೆಂಗಳೂರಿಗೆ ಬಂದಿದ್ದಾಗ ಸ್ವಾಮಿ ವಿವೇಕಾನಂದ ಅವರು ಭೈರವಿ ಕೆಂಪೇಗೌಡರ ಗಾಯನ ಕೇಳಿದ್ದರಂತೆ. ಸ್ವತಃ ಒಳ್ಳೆಯ ಗಾಯಕರಾಗಿದ್ದ ವಿವೇಕಾನಂದರು ಬಹಳ ಸಂತೋಷಪಟ್ಟು ಗೌಡರನ್ನು ಅಭಿನಂದಿಸಿದರು. 

ಚಿಕಾಗೊ ಸಮ್ಮೇಳನದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿ ವಿವೇಕಾನಂದರು ಭಾರತಕ್ಕೆ ಮರಳಿದರು. ಅವರ ಜಯಭೇರಿಯನ್ನು ಕೇಳಿ ತಿಳಿದ ಕೆಂಪೇಗೌಡರು ಕಲ್ಕತ್ತ ನಗರಕ್ಕೆ ಪ್ರಯಾಣ ಮಾಡಿ ಅವರನ್ನು ಕಂಡರು. ವಿವೇಕಾನಂದರು ಮತ್ತೊಮ್ಮೆ ಅವರಿಗೆ ಹಾಡುವಂತೆ ಕೇಳಿದರು. ಕೆಂಪೇಗೌಡರು ಮತ್ತೊಮ್ಮೆ ಮೈಮರೆತು ಹಾಡಿದರು. ತಲೆದೂಗಿದ ಸ್ವಾಮಿ ವಿವೇಕಾನಂದರು ತಮ್ಮ ಮೇಲು ಹೊದಿಕೆಯನ್ನೇ ಬಹುಮಾನವಾಗಿ ಗೌಡರಿಗೆ ಹೊದಿಸಿ ಸಂತೋಷ ಸೂಚಿಸಿದರಂತೆ. 

ಕರ್ನಾಟಕದ ಖ್ಯಾತ ಸಂಗೀತ ವಿದುಷಿ "ಗಾನ ಕಲಾ ಭೂಷಣ" ಶ್ರೀಮತಿ ಟಿ. ಎಸ್. ವಸಂತ ಮಾಧವಿ ಅವರು ಭೈರವಿ ಕೆಂಪೇಗೌಡರ ಬಗ್ಗೆ ಒಂದು ಕೃತಿ ರಚಿಸಿದ್ದಾರೆ.  ಡಾ. ಎನ್. ಜಗದೀಶ್ ಕೊಪ್ಪ ಅವರು "ಗಾನಗಂಧರ್ವ ಭೈರವಿ ಕೆಂಪೇಗೌಡ" ಎನ್ನುವ ಒಂದು ಕೃತಿ ರಚಿಸಿದ್ದಾರೆ.  ಆಸಕ್ತರು ಓದಬಹುದು. 

*****

ಕರ್ನಾಟಕದ ಸಂಗೀತದ ಇತಿಹಾಸದಲ್ಲಿ ಭೈರವಿ ಕೆಂಪೇಗೌಡರದ್ದು ಒಂದು ಸುವರ್ಣ ಅಧ್ಯಾಯ. ಹೆಸರು, ಹಣ, ಬಿರುದು, ಮುಂತಾದುವುಗಳಿಗೆ ಓಗೊಡದೆ ಸಂಗೀತಸೇವೆಯನ್ನೇ ಉಸಿರಾಗಿ ಬಾಳಿದ ಮಹಾನುಭಾವರು. ತನ್ನ ಸ್ನೇಹಿತನಿಗಾಗಿ ಪಕ್ಕವಾದ್ಯವಿಲ್ಲದೇ ಬೆಳ್ಳಂಬೆಳಿಗ್ಗೆ ರಾಗಿ ಮೂಟೆಯ ಮೇಲೆ ಕುಳಿತು ಹಾಡಿದ ಅವರ ವ್ಯಕ್ತಿತ್ವ ಇದಕ್ಕೊಂದು ಸಣ್ಣ ನಿದರ್ಶನ. 

Thursday, December 4, 2025

ಶ್ರೀಕೃಷ್ಣ ಅಂದರೆ ಯಾರು?


ಶ್ರೀಕೃಷ್ಣ ಅಂದರೆ ಯಾರು? ಹೀಗೆ ಯಾರಾದರೂ ನಮ್ಮನ್ನು ಪ್ರಶ್ನೆ ಮಾಡಿದರೆ ನಮ್ಮಲ್ಲಿ ಬಹುತೇಕರು ಪ್ರಶ್ನೆಗೆ ಉತ್ತರ ಕೊಡುವ ಬದಲು ಪ್ರಶ್ನೆ ಕೇಳಿದವರ ಮುಖವನ್ನು ದಿಟ್ಟಿಸಿ ನೋಡುವುದು ಸಹಜ. ಇದೇನು, ಇಂತಹ ಪ್ರಶ್ನೆ ಕೇಳುವುದೇ? ನಮ್ಮಲ್ಲಿ ರಾಮ, ಕೃಷ್ಣರನ್ನು ತಿಳಿಯದ ಮಂದಿ ಇದ್ದಾರೆಯೇ? ವಾಮನ, ತ್ರಿವಿಕ್ರಮ ನೆನಪಿಲ್ಲದಿರಬಹುದು. ವರಾಹ, ಸಂಕರ್ಷಣ ಯಾರೆಂದು ಗೊತ್ತಿಲ್ಲದಿರಬಹುದು. ದಾಮೋದರ ಮತ್ತು ಪ್ರದ್ಯುಮ್ನ ತಿಳಿದಿಲ್ಲದಿರಬಹುದು. ಆದರೆ ರಾಮ, ಕೃಷ್ಣ ಗೊತ್ತಿಲ್ಲವೇ? ಗಣಪ, ಹನುಮ, ಶಿವ, ರಾಮ, ಕೃಷ್ಣ, ಇವರು ಚಿಕ್ಕ ಮಕ್ಕಳಿಗೂ ಗೊತ್ತು. ಅಷ್ಟೇ ಅಲ್ಲ. ಇದು ಚಿಕ್ಕ ಮಕ್ಕಳಿಗೂ ಗೊತ್ತು ಎನ್ನುವುದು ಕೂಡ ಎಲ್ಲರಿಗೂ ಗೊತ್ತು. ಹೀಗಿರುವಾಗ, ಇದೆಂಥ ಪ್ರಶ್ನೆ? 

ಇಂತಹ ಪ್ರಶ್ನೆ ಸುಮ್ಮನೆ ಮಾಡಿದುದಲ್ಲ. ಅದಕ್ಕೆ ಕಾರಣಗಳಿವೆ. ಏನು ಕಾರಣಗಳು ಎನ್ನುವುದನ್ನು ಸ್ವಲ್ಪ ನೋಡೋಣ. 
*****

ಇಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ಅಂಚೆಯ ಪೆಟ್ಟಿಗೆ (ಪೋಸ್ಟ್ ಬಾಕ್ಸ್) ಅನ್ನುವ ಒಂದು ವಸ್ತು ಹೆಚ್ಚು ಕಡಿಮೆ ಮರೆತೇಹೋಗಿದೆ. ಕೊರಿಯರ್ ಸೇವೆ ಬಂದು ಹರಡಿದ ನಂತರ ಪೋಸ್ಟ್ ಆಫೀಸಿಗೆ ಹೋಗುವ ಸಂದರ್ಭಗಳು ಬಹಳ ಕಡಿಮೆ ಆದವು. ಸುಮಾರು ನಲವತ್ತು ವರುಷಗಳ ಹಿಂದೆ ಪೋಸ್ಟ್ ಕಾರ್ಡು, ಅಂಚೆ ಚೀಟಿ, ಅಂಚೆ ಡಬ್ಬ, ಅಂಚೆ ಕಚೇರಿ, ಇವೆಲ್ಲ ಪ್ರತಿದಿನ ನೋಡುತ್ತಿದ್ದ, ಆಗಾಗ ಉಪಯೋಗಿಸುತ್ತಿದ್ದ ಸೇವೆಗಳು. ಯಾವುದೋ ಸಂದರ್ಭಗಳಲ್ಲಿ ಪೋಸ್ಟ್ ಮ್ಯಾನ್ ಆಗಮನ ನಿರೀಕ್ಷಿಸಿ ಮನೆಯ ಬಾಗಿಲ ಬಳಿ ಕಾಯುತ್ತಿದ್ದುದೂ ಇರುತ್ತಿತ್ತು. ಕೆಲವು ಅಂಗಡಿಗಳಲ್ಲಿ ಒಂದು ಸಣ್ಣ ಡಬ್ಬಿಯಲ್ಲಿ ಅಂಚೆ ಚೀಟಿಗಳನ್ನು ಇಟ್ಟುಕೊಂಡು ಐದು ಪೈಸೆ ಚೀಟಿಯನ್ನು ಆರು ಪೈಸೆಗೆ ಮಾರುತ್ತಿದ್ದುದೂ ಉಂಟು. ಅಂಚೆ ಕಚೇರಿ ದಿನದ ವಹಿವಾಟು ಮುಗಿಸಿ ಮುಚ್ಚಿದ ನಂತರ ಅಥವಾ ರಜಾ ದಿನಗಳಲ್ಲಿ ಇವುಗಳ ಸೇವೆ ಅಮೂಲ್ಯವಾಗಿಯೂ ಇತ್ತು. 

ಬೇರೆಡೆಗೆ ಕಳುಹಿಸಬೇಕಾದ ಪತ್ರಗಳನ್ನು ಅಂಚೆಯ ಡಬ್ಬದಲ್ಲಿ ಹಾಕುವುದು ಆಗ ಒಂದು ಮುಖ್ಯ ಕೆಲಸ ಆಗಿರುತ್ತಿತ್ತು. ಅಲ್ಲಲ್ಲಿ ಸಣ್ಣ ಕೆಂಪು ಬಣ್ಣದ ಪೋಸ್ಟ್ ಡಬ್ಬಗಳಿರುತ್ತಿದ್ದುವು. ಅವುಗಳ ಮೇಲೆ "Next Clearance" ಎಂದು ಸಮಯ ತೋರಿಸುವ ಬಿಲ್ಲೆಗಳನ್ನು ಹಾಕಿರುತ್ತಿದ್ದರು. ಪ್ರತಿಯೊಂದು ಡಬ್ಬಕ್ಕೂ ಕಾಗದ-ಲಕೋಟೆಗಳನ್ನು ಹಾಕಲು ಒಂದು ಕಿಂಡಿ ಇರುತ್ತಿತ್ತು. ಮುಖ್ಯ ಅಂಚೆ ಕಚೇರಿಗಳ ಮುಂದೆ ದೊಡ್ಡ ಕೆಂಪು ಬಣ್ಣದ ಪೋಸ್ಟ್ ಬಾಕ್ಸುಗಳು. ಅವುಗಳಿಗೆ ಎರಡು ಕಡೆ ಕಿಂಡಿಗಳು. ಒಂದೇ ಸಮಯದಲ್ಲಿ ಇಬ್ಬರು ಪತ್ರಗಳನ್ನು ಅವುಗಳಲ್ಲಿ ಹಾಕುವ ಅನುಕೂಲತೆಗೆ. ಯಾವ ಕಿಂಡಿಯಲ್ಲಿ ಹಾಕಿದರೂ ಅವು ಬೀಳುತ್ತಿದ್ದುದು ಆ ಬಾಕ್ಸುಗಳ ಒಂದೇ ದೊಡ್ಡ ಹೊಟ್ಟೆಗೆ. 

ಬೆಂಗಳೂರಿನಲ್ಲಿ ವಿಧಾನಸೌಧ ಮತ್ತು ಆಗ ಇದ್ದ ಟ್ರಂಕ್ ಟೆಲಿಫೋನ್ ಎಕ್ಸ್ಚೇಂಜ್ ಕಟ್ಟಡದ ಮಧ್ಯೆ ಇದ್ದ ಹಳೆಯ ಜಿ. ಪಿ. ಓ. ಕಟ್ಟಡದ ಮುಂದೆ (ಈಗ ಅಲ್ಲಿ ಒಂದು ಸೌಧದಂತಹ ಜಿ.ಪಿ.ಓ. ಕಟ್ಟಡ ಬಂದಿದೆ) ಒಂದು ಬಲು ದೊಡ್ಡ ಪೋಸ್ಟ್ ಬಾಕ್ಸ್ ಇತ್ತು. ಅದಕ್ಕೆ ಆರು ಕಿಂಡಿಗಳು! ಅದೂ ಸಹ ದೊಡ್ಡ ದೊಡ್ಡ ಕಿಂಡಿಗಳು. ಒಂದೇ ಸಮಯದಲ್ಲಿ ಆರು ಮಂದಿ ದಪ್ಪ ಕಾಗದ-ಪಾತ್ರಗಳನ್ನು ಅಲ್ಲಿ ತುರುಕಬಹುದಾಗಿತ್ತು. ಎಲ್ಲಿ ತುರುಕಿದರೂ ಅವೆಲ್ಲಾ ತಲುಪುತ್ತಿದ್ದುದು ಆ ಅತಿ ದೊಡ್ಡ ಬಾಕ್ಸಿನ ಒಂದೇ ಬಕಾಸುರ ಹೊಟ್ಟೆಗೆ. ಹೀಗಿದ್ದರೂ ಸಂಜೆಯ ಹೊತ್ತಿನಲ್ಲಿ ಅಲ್ಲಿ ಹೆಚ್ಚಿನ ಜನ ಪತ್ರಗಳನ್ನು ಪೋಸ್ಟ್ ಮಾಡಲು ಬಂದಿರುತ್ತಿದ್ದರು. ಹಳೆಯ ತಲೆಮಾರಿನ ಜನ ಇದನ್ನು ನೆನೆಪಿಸಿಕೊಳ್ಳಬಹುದು. ಆತುರಾತುರದಲ್ಲಿ ಸಂಜೆ ಅಲ್ಲಿಗೆ ಹೋಗಿ, ಡಬ್ಬದಲ್ಲಿ ಪತ್ರ-ಲಕೋಟೆಗಳನ್ನು ಹಾಕಿ, ಕೈ ಮುಗಿದು ಬಂದಿರುವ ಉದಾಹರಣೆಗಳು ಅನೇಕ. 
*****

ಯಾವುದೇ ಪೂಜೆ-ಪುನಸ್ಕಾರ, ಹವನ-ಹೋಮ, ವ್ರತ-ನಿಯಮಗಳನ್ನು ಆಚರಿಸಿದಮೇಲೆ ಕಡೆಯಲ್ಲಿ ಇದೆಲ್ಲ ಪರಮಪುರುಷನಿಗೆ ಸೇರಲಿ ಎಂದು ಭಾವಿಸಿ "ಶ್ರೀಕೃಷ್ಣಾರ್ಪಣಮಸ್ತು" ಎಂದು ಹೇಳುವುದು ವಾಡಿಕೆ. ಜಪ-ತಪ, ದಾನ-ಧರ್ಮಗಳನ್ನು ಮಾಡಿದ್ದು ಕೂಡ ಕಡೆಗೆ ಹೀಗೆಯೇ ವಿನಿಯೋಗ. ಅಷ್ಟೇ ಏಕೆ? ದಾಸರು "ಕೈ ಮೀರಿ ಹೋದದ್ದೇ ಕೃಷ್ಣಾರ್ಪಣ" ಅಂದುಬಿಟ್ಟರು. ಇದನ್ನು ನಾವು ಕೊಡಬೇಕೆಂದು ಕೊಟ್ಟದ್ದಲ್ಲ. ಕೈತಪ್ಪಿ ಜಾರಿರಬಹುದು. ಯಾರೋ ಕಿತ್ತುಕೊಂಡು ಹೋಗಿರಬಹುದು. ಇಲ್ಲವೇ ಕುತಂತ್ರ, ಮೋಸಗಳಿಗೆ ಸಿಕ್ಕಿ ಕಳೆದುಕೊಂಡಿರಬಹುದು. ಹೀಗಿದ್ದರೂ ಸಹ, ಅಂತಹವುಗಳೆಲ್ಲದರ ಗತಿಯೂ ಕಡೆಯ ವಿನಿಯೋಗವನ್ನು  ಮಾಡುವುದು "ಶ್ರೀಕೃಷ್ಣಾರ್ಪಣಮಸ್ತು" ಎಂದು ಹೇಳಿಯೇ. ಕೆಲವರು "ಪರಮೇಶ್ವರಾರ್ಪಣಮಸ್ತು" ಅನ್ನಬಹುದು. ಆದರೂ ಈ ಸಂದರ್ಭಗಳಲ್ಲಿ ಶ್ರೀಕೃಷ್ಣನನ್ನು ನೆನೆಸಿಕೊಳ್ಳುವುದೇ ಹೆಚ್ಚು ವ್ಯಾಪಕ. 

ಈ ಕೃಷ್ಣ ಯಾರು? 

ಕೃಷ್ಣ ಯಾರು ಅಂದರೆ? ಅವನೇ. ಮಥುರೆಯ ಕಂಸನ ಕಾರಾಗೃಹದಲ್ಲಿ ಹುಟ್ಟಿದವನು. ಕಂಸನ ತಂಗಿ ದೇವಕಿಯ ಮಗ. ದೇವಕಿ-ವಸುದೇವರ ಮಗ. ಅವರ ಎಂಟನೆಯ ಕೂಸು. ಹುಟ್ಟಿದ ತಕ್ಷಣ ಅವರಪ್ಪ ಅವನನ್ನು ಎತ್ತಿಕೊಂಡು ತುಂಬಿ ಹರಿಯುತ್ತಿದ್ದ ಯಮುನೆಯನ್ನು ದಾಟಿ, ಗೋಕುಲ ತಲುಪಿ, ಅಲ್ಲಿನ ನಂದಗೋಪನ ಹೆಂಡತಿ ಯಶೋದೆ ಪಕ್ಕ ಮಲಗಿಸಿ, ಅಲ್ಲಿದ್ದ ಹೆಣ್ಣು ಮಗುವನ್ನು ಹೊತ್ತುಕೊಂಡು ಬರಲಿಲ್ಲವೇ? ಅವನೇ. ಪೂತನಿಯಿಂದ ಪ್ರಾರಂಭಿಸಿ, ಅದೆಷ್ಟೋ ರಕ್ಕಸರನ್ನು ಕೊಂದು, ಕಾಳೀಯನನ್ನು ಮರ್ದಿಸಿ, ಗೋವರ್ಧನ ಎಬ್ಬಿಸಿ, ಗೋಪಿಯರ ಮನೆಯ ಹಾಲು-ಮೊಸರು-ಬೆಣ್ಣೆ ಕದ್ದು ಕುಡಿದು-ತಿಂದು-ತೇಗಿ, ಹೆಣ್ಣುಮಕ್ಕಳ ಸೀರೆ-ವಸ್ತ್ರಗಳನ್ನು ಅಪಹರಿಸಿ, ಜಲಕ್ರೀಡೆ-ರಾಸಕ್ರೀಡೆ ಆಡಿ-ಆಡಿಸಿ, ಇನ್ನೂ ಏನೇನೂ ಮಾಡಿದನಲ್ಲ. ಅವನೇ. 

ಅಣ್ಣ ಬಲರಾಮನೊಡನೆ ಅಕ್ರೂರನ ಜೊತೆ ಮಧುರೆಗೆ ಹೋಗಿ, ಚಾಣೂರ-ಮುಷ್ಟಿಕ-ಕುವಲಯಾಪೀಡ ಆನೆ, ಇವೆಲ್ಲ ಕೊಂದು, ಕಡೆಗೆ ಕಂಸನಿಗೂ ಒಂದು ಗತಿ ಕಾಣಿಸಿ, ಅಪ್ಪ-ಅಮ್ಮನನ್ನು ಸೆರೆಯಿಂದ ಬಿಡಿಸಿದನಲ್ಲ.  ಅವನೇ. ಭೀಮಸೇನನಿಂದ ಜರಾಸಂಧನನ್ನು ಕೊಲ್ಲಿಸಿ, ಕುರುಕ್ಷೇತ ಯುದ್ಧ ಮಾಡಿಸಿ, ಕೌರವರನ್ನು ಕೊನೆಗಾಣಿಸಿ, ಪಾಂಡವರಿಗೆ ರಾಜ್ಯ ಕೊಡಿಸಿದವನು. ಹದಿನಾರು ಸಾವಿರದ ನೂರಾ ಎಂಟು ಹೆಣ್ಣುಗಳನ್ನು ಮದುವೆ ಮಾಡಿಕೊಂಡವನು. ದ್ವಾರಕಾವತಿ ನಿರ್ಮಿಸಿ, ಯಾದವರನ್ನೆಲ್ಲ ಅಲ್ಲಿಗೆ ಸೇರಿಸಿದವನು. ಹೀಗೆ ಬೇರೆ ಇನ್ನೂ ಏನೇನೋ ಮಾಡಿದವನು. ಅವನೇ. ತಲೆಗೆ ನವಿಲುಗರಿ ಸಿಕ್ಕಿಸಿಕೊಂಡು ಕೊಳಲು ನುಡಿಸುತ್ತಿರುವ ಮುರಳೀಧರ. ದನಗಳನ್ನು ಕಾಯುವ ಗೋಪಾಲ. ಅವನೇ ಶ್ರೀಕೃಷ್ಣ. 

ಕಪ್ಪು ಬಣ್ಣದವನಾದ್ದರಿಂದ ಕೃಷ್ಣ. ವಸುದೇವನ ಮಗ ಆದುದರಿಂದ ವಾಸುದೇವ. ಅವನೇ ವಾಸುದೇವ ಶ್ರೀಕೃಷ್ಣ. ಹೀಗೆ ಸಾಮಾನ್ಯವಾಗಿ ಹೇಳುವುದು. 

*****

ಸರಿ ಹಾಗಿದ್ದರೆ. ಶ್ರೀಕೃಷ್ಣನು ದೇವಕಿ-ವಸುದೇವರ ಎಂಟನೆಯ ಮಗ. ದ್ವಾಪರಯುಗದಲ್ಲಿ ಹುಟ್ಟಿದವನು. ಅವನು ಶ್ರೀವಿಷ್ಣುವಿನ ಒಂದು ಅವತಾರರೂಪ. ಅವನೇ ಅರ್ಜುನನಿಗೆ ಭಗವದ್ಗೀತೆಯನ್ನು ಉದಪದೇಶಿಸಿದವನು. "ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್, ಯತ್ತಪಸ್ಯಸಿ ಕೌಂತೇಯ ತತ್ಕುರುಶ್ವ ಮದರ್ಪಣಂ" ಎಂದವನು. "ನೀನು ಮಾಡಿದ್ದನ್ನೆಲ್ಲ, ನೀನು ಸೇವಿಸಿದ್ದನ್ನೆಲ್ಲ, ಹೋಮಾದಿಗಳಲ್ಲಿ ಹಾಕಿದ್ದನ್ನು, ದಾನಾದಿಗಳಲ್ಲಿ ಕೊಟ್ಟಿದ್ದನ್ನು, ಜಪ-ತಪಗಳಲ್ಲಿ ಪಡೆದದ್ದನ್ನು, ಎಲ್ಲವನ್ನೂ ನನಗೆ ಅರ್ಪಿಸು" ಎಂದು ಭಗವದ್ಗೀತೆಯಲ್ಲಿ ಹೇಳಿದವನು. ಅದಕ್ಕೇ ಅವನಿಗೆ ಅರ್ಪಿಸಲು ಎಂದು ಉದ್ದೇಶಿಸಿ "ಶ್ರೀಕೃಷ್ಣಾರ್ಪಣಮಸ್ತು" ಅನ್ನುತ್ತೇವೆ. 

ಒಪ್ಪೋಣ. ಹಾಗಿದ್ದರೆ ಮಹಾಭಾರತ ನಡೆಯುವುದಕ್ಕೆ ಮುನ್ನ, ದ್ವಾಪರ ಯುಗಕ್ಕೆ ಮುಂಚೆ, ಈ ಕೃಷ್ಣ ಹುಟ್ಟುವ ಮುಂಚೆ, ಏನು ಮಾಡುತ್ತಿದ್ದರು? ಹೇಗೆ ಅರ್ಪಣೆ ನಡೆಯುತ್ತಿತ್ತು? ಇದೊಂದು ಪ್ರಶ್ನೆ ಉಳಿಯಿತು. ಅಲ್ಲವೇ?

ಕೇಶವಾದಿ (ಚತುರ್ವಿಂಶತಿ) ಇಪ್ಪತ್ತನಾಲ್ಕು ನಾಮಗಳು ಎನ್ನುತ್ತೇವೆ. ಕೇಶವನಿಂದ ಹಿಡಿದು, ನಾರಾಯಣ, ಮಾಧವ ಮುಂತಾದ ಇಪ್ಪತ್ತನಾಲ್ಕು ಹೆಸರುಗಳು ಉಂಟು. ಅದರಲ್ಲಿ ಕಡೆಯದು ಶ್ರೀಕೃಷ್ಣ. ಹದಿನಾಲ್ಕನೆಯವನು ವಾಸುದೇವ. ಹತ್ತೊಂಭತ್ತನೆಯವನು ಒಬ್ಬ ನರಸಿಂಹನೂ ಇದ್ದಾನೆ. ಇದು ಎಂದಿನಿಂದಲೂ ಉಂಟು. ಸೃಷ್ಟಿಯ ಮೊದಲಿನಿಂದಲೂ ಇದೆ. ಈ ಕೃಷ್ಣ ಯಾರು? ಈ ಇಪ್ಪತ್ತನಾಲ್ಕರಲ್ಲಿ ಹದಿನಾಲ್ಕನೆಯವನು ವಾಸುದೇವ. ಈ ವಾಸುದೇವ ಯಾರು? ದ್ವಾಪರದ ಕೃಷ್ಣ ಹುಟ್ಟುವ ಮುಂಚೆ ಇವರು ಹೇಗೆ ಇದ್ದರು?

*****

ಗೀತೋಪದೇಶ ಕಾಲದಲ್ಲಿ, ಕಡೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಒಮ್ಮೆ ತನ್ನ ವಿರಾಟ್ ರೂಪ ತೋರಿಸುತ್ತಾನೆ. ಅರ್ಜುನನಂತಹವನೂ ಅದನ್ನು ನೋಡಲಾರ. "ಸ್ವಾಮಿ, ಇದನ್ನು ಮರೆ ಮಾಡು. ನನ್ನ ಮೈ ಸುಡುತ್ತಿದೆ. ಮೊದಲಿನ ಸೌಮ್ಯ ರೂಪ ತೋರಿಸು" ಎಂದು ಅಂಗಲಾಚಾಚುತ್ತಾನೆ. ಪರಮಪುರುಷನ ವಿರಾಟ್ ರೂಪವನ್ನು ನಾವು ಕಲ್ಪಿಸಿಕೊಳ್ಳುವುದೂ ಕಷ್ಟ. ಅವನ ಆಯುಧಗಳು ಮೂರು ಅವನ ಜೊತೆಯಲ್ಲಿಯೇ ಇರುತ್ತವೆ. ಸುದರ್ಶನ ಚಕ್ರ, ಪಾಂಚಜನ್ಯ ಶಂಖ ಮತ್ತು ಕೌಮೋದಕಿ ಗದೆ. ಒಂದು ಅಭಯ ಹಸ್ತವೋ, ಕಮಲದ ಕೈಯ್ಯೋ ಬೇಕು. ಅದಕ್ಕೆ ನಾಲ್ಕು ಕೈಗಳ ಶ್ರೀಹರಿಯನ್ನು ಚಿಂತಿಸುವುದು. ಈ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದೆ, ಪದ್ಮ. ಇವುಗಳನ್ನು ಹೇಗೆ ಹಿಡಿದುಕೊಳ್ಳಬೇಕು? ಇದು ಇಪ್ಪತ್ತುನಾಲ್ಕು ರೀತಿ ಸಾಧ್ಯ. ಆದ್ದರಿಂದ ಇಪ್ಪತ್ತುನಾಲ್ಕು ರೂಪಗಳು. ಅವುಗಳಿಗೆ ಕೇಶವನಿಂದ ಶ್ರೀಕೃಷ್ಣನವರೆಗೆ ಇಪ್ಪತ್ತುನಾಲ್ಕು ಮೂಲ ಹೆಸರುಗಳು. 


ಶ್ರೀಕೃಷ್ಣಾರ್ಪಣಮಸ್ತು ಎನ್ನುವಾಗ ವಾಸ್ತವವಾಗಿ ನೆನೆಯುವುದು ಈ ಇಪ್ಪತ್ನಾಲ್ಕು ಮೂಲ ರೂಪಗಳ ಕಡೆಯವನಾದ ಶ್ರೀಕೃಷ್ಣನನ್ನು. ಮೇಲಿನ ಚಿತ್ರದಲ್ಲಿರುವುದು ಶ್ರೀಕೃಷ್ಣ ರೂಪ. ಅವನು ಕ್ರಮವಾಗಿ ಗದೆ, ಪದ್ಮ, ಚಕ್ರ ಮತ್ತು ಶಂಖಗಳನ್ನು ಹಿಡಿದಿದ್ದಾನೆ. ಹದಿನಾಲ್ಕನೆಯವನು ವಾಸುದೇವ. "ಸರ್ವತ್ರ ವಾಸಯತಿ ಇತಿ ವಾಸುದೇವಃ". "ಎಲ್ಲ ಕಡೆಯೂ ವಾಸವಾಗಿ ಇದ್ದಾನೆ. ಆದ್ದರಿಂದ ಅವನಿಗೆ ವಾಸುದೇವ ಎಂದು ಹೆಸರು". ದ್ವಾಪರದ ವಸುದೇವ ಹುಟ್ಟುವ ಮೊದಲೂ ಈ ವಾಸುದೇವ ಮತ್ತು ಶ್ರೀಕೃಷ್ಣರು ಇದ್ದೇ ಇದ್ದರು. ಅನಾದಿ ಕಾಲದಿಂದ ಇದ್ದಾರೆ. ಅನಂತ ಕಾಲದವರೆಗೆ ಇರುತ್ತಾರೆ. 

ಇಪ್ಪತ್ತುನಾಲ್ಕು ಜನರು ಸಾಲಾಗಿ ನಿಂತಿದ್ದಾರೆ. ಹೇಗೆ ಕರೆಯಬೇಕು? ಈ ಕಡೆಯಿಂದ ಕರೆದರೆ "ಕೇಶವಾದಿಗಳೇ, ಬನ್ನಿ" ಎನ್ನಬೇಕು. ಆ ಕಡೆಯಿಂದ ಕೊಟ್ಟರೆ "ಶ್ರೀಕೃಷ್ಣಾದಿಗಳೇ, ತೆಗೆದುಕೊಳ್ಳಿ" ಆನ್ನಬೇಕು. ಆದ್ದರಿಂದ ಸಮರ್ಪಣೆ ಮಾಡುವಾಗ (ಇಪ್ಪತ್ತನಾಲ್ಕರಲ್ಲಿ) ಕಡೆಯ ರೂಪ ಶ್ರೀಕೃಷ್ಣ ಆದುದರಿಂದ "ಶ್ರೀಕೃಷ್ಣಾರ್ಪಣಮಸ್ತು" ಅನ್ನುವುದು.. 

***** 

ಹಾಗಿದ್ದರೆ, ನಾವು ಪ್ರತಿದಿನ ಮಾಡುತ್ತಿರುವುದು ತಪ್ಪೇ? ನಾವು ನವಿಲುಗರಿಯ, ದನಕಾಯುವ, ಬೆಣ್ಣೆ ಕದಿಯುವ, (ಅಥವಾ ಬಿ. ಆರ್. ಛೋಪ್ರಾ ಮಹಾಭಾರತ ಧಾರಾವಾಹಿಯ ನಿತೀಶ್ ಭಾರದ್ವಾಜನನ್ನು) ಇಲ್ಲವೆಂದರೆ ಗೀತೋಪದೇಶ ಮಾಡುತ್ತಿರುವ ಪಾರ್ಥಸಾರಥಿಯನ್ನು ನೆನೆಯುತ್ತೆವಲ್ಲ! ಅದು ಸರಿಯೇ?

ಪರಮಪುರುಷನ ಪೂರ್ಣ ರೂಪ ನಮ್ಮ ಕಲ್ಪನೆಗೆ ನಿಲುಕದ್ದು. ಆದ್ದರಿಂದ ಅವನು ನಮಗೆ ಬಲು ಸುಲಭ ಮಾಡಿಕೊಟ್ಟಿದ್ದಾನೆ. ನಾವು ಹೇಗೆ ಕಲ್ಪಿಸಿಕೊಳ್ಳುತ್ತೇವೆಯೋ, ಹಾಗೆ ತೋರುತ್ತಾನೆ. ಅದಕ್ಕೆ ಅವನೇನು ವೇಷ ಹಾಕಬೇಕಾಗಿಲ್ಲ. ಮೇಕಪ್ ಬೇಕಿಲ್ಲ. ಎಲ್ಲೆಡೆ ವ್ಯಾಪಿಸಿ ನಿಂತಿದ್ದಾನೆ. ಆ ಕೃಷ್ಣನನ್ನು ನೆನೆದು ಕರೆದರೆ ಹಾಗೆ ಬರುತ್ತಾನೆ. ಈ ಕೃಷ್ಣನನ್ನು ನೆನೆದು ಕರೆದರೆ ಹೀಗೆ ಬರುತ್ತಾನೆ. ಅಷ್ಟೇ. 

ಜಿ. ಪಿ. ಓ. ಮುಂದೆ ಇರುವ ಅಂಚೆ ಡಬ್ಬಿಯ ಆರು ಕಿಂಡಿಗಳಲ್ಲಿ ಯಾವ ಕಿಂಡಿಯಲ್ಲಿ ಪತ್ರ ಹಾಕಿದರೂ ಆ ಡಬ್ಬಿಯ ದೊಡ್ಡ ಹೊಟ್ಟೆಯನ್ನೇ ಸೇರುತ್ತದೆ. "ಅಯ್ಯೋ, ಆ ಕಿಂಡಿಯಲ್ಲಿ ಹಾಕಬೇಕಿತ್ತು. ಇದರಲ್ಲಿ ಹಾಕಿಬಿಟ್ಟೆನಲ್ಲ" ಎಂದು ಚಿಂತಿಸಬೇಕಿಲ್ಲ. ಈ ಕೃಷ್ಣನು ತೆಗೆದುಕೊಂಡರೂ ಒಂದೇ. ಆ ಕೃಷ್ಣನು ತೆಗೆದುಕೊಂಡರೂ ಒಂದೇ. ಇಪ್ಪತ್ತುನಾಲ್ಕು ಮೂಲ ರೂಪಗಳಲ್ಲಿ ಕಡೆಯವನು ಶ್ರೀಕೃಷ್ಣ (ಮೇಲೆ ತೋರಿಸಿರುವ ಚಿತ್ರದಂತೆ) ಎಂದು ಗೊತ್ತಿದ್ದರೆ ಒಳ್ಳೆಯದು. ಅಷ್ಟೇ. 

ಇನ್ನೊಂದು ವಿಶೇಷವುಂಟು. ಅಂಚೆ ಡಬ್ಬಿಯ ಪತ್ರಗಳಲ್ಲಿ ಸ್ವಲ್ಪ ವ್ಯತ್ಯಾಸ ಆಗಬಹುದು. ಎಲ್ಲೋ ಒಂದು ಕಳೆದುಹೋಗಬಹುದು. ಕಾಗದಗಳ ಗಂಟುಗಳನ್ನು ತೆಗೆದುಕೊಂಡು ಹೋಗುತ್ತಿರುವ ವಾಹನವೋ, ವಿಮಾನವೋ, ಅಪಘಾತಕ್ಕೆ ಈಡಾಗಿ ಸುಟ್ಟು ಹೋಗಬಹುದು. ಮಳೆಯಲ್ಲಿ ನೆನೆದುಹೋಗಬಹುದು. ಬೆಂಗಳೂರಿನ ಜಯನಗರದ ಪಾಪಣ್ಣನ ಪತ್ರ ನೇಪಾಳದ ಗಡಿಯಲ್ಲಿರುವ ಬಿಹಾರದ ಜಯನಗರದ ಪಾಪಣ್ಣನಿಗೆ ರಾಂಗ್ ಡೆಲಿವರಿ ಆಗಬಹುದು. ಕೆಲವೊಮ್ಮೆ ಹತ್ತು ಹನ್ನೆರಡು ವರುಷಗಳ ನಂತರ ಸಿಗಬಹುದು. "ಶ್ರೀಕೃಷ್ಣಾರ್ಪಣಮಸ್ತು" ಡಬ್ಬಿಯಲ್ಲಿ ಹಾಕಿದ ಯಾವ ವಸ್ತುವೂ ಕಳೆದುಹೋಗುವುದಿಲ್ಲ. ತಪ್ಪು ವಿಳಾಸಕ್ಕೆ ಸೇರುವುದಿಲ್ಲ. ಅವನಿಗೇ ಹೋಗಿ ತಲಪುತ್ತದೆ. ಮತ್ತೆ ಅಷ್ಟೇ ಅಲ್ಲ. ಒಂದಕ್ಕೆ ಎರಡಾಗಿ, ನಾಲ್ಕಾಗಿ, ಅನಂತವಾಗಿ, ಹಿಂದಿರುಗಿ ಕೊಡುವ (ಅನಂತಮಡಿಮಾಡಿ ಹಿಂದಿರುಗಿ ಕೊಡುವ) ರೀತಿ ಅವನಿಗೆ ಚೆನ್ನಾಗಿ ಗೊತ್ತು. 

ಅನುಮಾನವಿದ್ದರೆ ಸುದಾಮನನ್ನು (ಕುಚೇಲನನ್ನು) ಕೇಳಬಹುದು. ಕೊಟ್ಟಿದ್ದು ಮೂರು ಹಿಡಿ ಒಣ ಅವಲಕ್ಕಿ. ಅದಕ್ಕೇನು ಕಡಲೆ, ಕಡಲೆಕಾಯಿ ಬೀಜ, ಗೋಡಂಬಿ, ಕರಿಬೇವು, ಒಗ್ಗರಣೆ, ಹಾಕಿರಲೂ ಇಲ್ಲ. ಅವನಿಗೆ ಹಿಂತಿರುಗಿ ಸಿಕ್ಕಿದ್ದು ಶ್ರೀಕೃಷ್ಣನ ಎಂಟು ಹೆಂಡಿರು ಸಾಲಾಗಿ ಬಡಿಸಿದ ಮೃಷ್ಟಾನ್ನ ಭೋಜನ. ದ್ವಾರಾವತಿಯ ಶ್ರೀಕೃಷ್ಣನ ಅರಮನೆಗೆ ಮಿಗಿಲಾದ ಅರಮನೆ. ಅನಂತ ಐಶ್ವರ್ಯ. ಕಡೆಗೆ ಮತ್ತೆ ಹುಟ್ಟುವ ಅವಶ್ಯಕತೆ ಇಲ್ಲದ "ಸಾಯುಜ್ಯ" ಎನ್ನುವ ಮೋಕ್ಷ ಸಾಮ್ರಾಜ್ಯ!

Monday, December 1, 2025

ತಳೋದರಿಯ ಮಾತುಳನ ಮಾವನ...




ಹಿಂದಿನ ಸಂಚಿಕೆಯಲ್ಲಿ ಸಹೋದರಿ, ತಳೋದರಿ, ಮತ್ತು ಮಂಡೋದರಿ ಪದಗಳ ಸಾಮ್ಯ ಮತ್ತು ಭೇದಗಳ ಸ್ವಲ್ಪಮಟ್ಟಿನ ವಿವರಣೆ ನೋಡಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. ವಿಶೇಷವಾಗಿ "ತಳೋದರಿ" ಅನ್ನುವ ಪದದ ಹಿನ್ನೆಲೆ ಮತ್ತು ಸೊಬಗು ಏನು ಎನ್ನುವುದನ್ನು ನೋಡಿದೆವು. 

ಎಲಿಜಬೆತ್ ಟೇಲರ್ ಅನ್ನುವ ಪ್ರಸಿದ್ಧ ಆಂಗ್ಲ ಚಲನಚಿತ್ರಗಳ ನಟಿ "ಕ್ಲಿಯೋಪಾತ್ರ" ಚಿತ್ರೀಕರಣದ ವೇಳೆಯಲ್ಲಿ ಇಪ್ಪತ್ತೊಂದು ಅಂಗುಲದ ನಡು ಹೊಂದಿದ್ದಳು ಎನ್ನುವುದು ಇತಿಹಾಸದಲ್ಲಿ ದಾಖಲಾಗಿದೆ.  1963ರ ಚಲನಚಿತ್ರದಲ್ಲಿ ರೋಮ್ ನಗರಕ್ಕೆ ಅವಳು ಬರುವ ದೃಶ್ಯದ ಚಿತ್ರೀಕರಣ ಈಗಲೂ ನೋಡುಗರನ್ನು ಆಕರ್ಷಿಸುತ್ತದೆ. AI ಮೊದಲಾದ ಸಾಧನಗಳಿಲ್ಲದ ಕಾಲದ ಅಂತಹ ದೃಶ್ಯದ ಚಿತ್ರೀಕರಣ ಒಂದು ವಿಸ್ಮಯವೇ ಸರಿ. "ಕೃಶಾಂಗಿ" ಎನ್ನುವ ಪದಕ್ಕೆ ಮುಖ್ಯವಾದ ಲಕ್ಷಣ ಹೀಗೆ ಸಣ್ಣ ನಡುವಿರುವುದು. 

ಅನೇಕ ಸಾಹಿತ್ಯ ಕೃತಿಗಳಲ್ಲಿ ಸ್ತ್ರೀಯರ ವರ್ಣನೆಗಳಲ್ಲಿ ಈ ನಡುವಿನ ಸೂಕ್ಷ್ಮತೆ ಬಗ್ಗೆ ವಿವರಣೆಗಳಿವೆ. ಹಸೆಗೆ ಕರೆಯುವ ಹಾಡುಗಳಲ್ಲಿ "ಬಡ ನಡುವಿನ ಬಾಲೆಯರು" ಎಂದು ಸಂಬೋಧನೆಗಳಿವೆ. ಪುರುಷರಿಗೇ ಆಗಲಿ, ಸ್ತ್ರೀಯರಿಗಗೇ ಆಗಲಿ, ಕೆಲವು ಅಂಗಗಳು ಹ್ರಸ್ವವಾಗಿರಬೇಕು. ಕೆಲವು ದೀರ್ಘವಾಗಿರಬೇಕು. (ಕೈ ಮೊಟುಕಾಗಿದ್ದು ಮೂಗು ಬಲು ಉದ್ದವಿದ್ದರೆ ಹೇಗೆ?).  ಕೆಲವು ಸಣ್ಣ ಇರಬೇಕು. ಕೆಲವು ದೊಡ್ಡವಿರಬೇಕು. (ಕೈ-ಕಾಲು ಸಣ್ಣ; ಹೊಟ್ಟೆ ಡುಬ್ಬಣ್ಣ ಅನ್ನುವುದು ಕೇಳಿದ್ದೆವಲ್ಲ!). ಕೆಲವು ಅವಕ್ಕೆ ಅನುಗುಣವಾದ ಬಣ್ಣ ಹೊಂದಿರಬೇಕು. ಹೀಗೆ ಸೌಂದರ್ಯ ಶಾಸ್ತ್ರಗಳ ನಿಯಮಗಳು ಉಂಟು. 

"ನಾವೇನು ಮಾಡುವುದು? ದೇವರು ಅಂಗಾಂಗ ಕೊಟ್ಟಂತಿದ್ದೇವೆ" ಎಂದು ದೇವರ ತಲೆಯಮೇಲೆ ಹೇರುವುದುಂಟು. ಆಯಿತು. ನಮ್ಮ ವಿಷಯಗಳಲ್ಲಿ ಅದು ಸರಿ ಇರಬಹುದು. ಹಾಗಿದ್ದರೂ, ಸೌಂದರ್ಯ ವರ್ಧನೆ ಮಾಡಲು ಎಲ್ಲರೂ ಪಡುವ ಪಾಡು ಅಷ್ಟಿಷ್ಟಲ್ಲ. ಬೊಕ್ಕತಲೆಗೆ ಕೂದಲು ಕಸಿ ಮಾಡುವುದರಿಂದ ಹಿಡಿದು ವಾರಕ್ಕೊಮ್ಮೆ ಮುಖ ತಿದ್ದುವ-ತೀಡುವ ಅಂಗಡಿಗಳ ಮುಂದೆ ಇರುವ ಸರತಿಯ ಸಾಲು ಕಂಡಿದ್ದೆವಲ್ಲ. ನಮ್ಮ ಕಥೆ-ಕವನಗಳ ಪಾತ್ರಗಳಲ್ಲಿ ಹೀಗೆ ಚೆನ್ನಾಗಿರುವುದು ವಿವರಿಸುವುದಕ್ಕೆ ಏನಡ್ಡಿ? ಹೀಗೆ ಚೆನ್ನಾಗಿರುವವರೂ ಅನೇಕರು ಇದ್ದಾರಲ್ಲವೆ? ರಾಕ್ಷಸರನ್ನು ಚಿತ್ರಿಸುವಾಗ ಇವಕ್ಕೆ ವಿರುದ್ಧವಾದ ವರ್ಣನೆಗಳೂ ಉಂಟಲ್ಲ! 

"ತಳೋದರಿ" ಪದವನ್ನು ಕೇವಲ ಒಂದು ಸಾರಿ ಮಾತ್ರ ಉಪಯೋಗಿಸಿ ಅದನ್ನು ವಿಶ್ವ ವಿಖ್ಯಾತ ಮಾಡಿದ ಶ್ರೇಯಸ್ಸು ನಮ್ಮ ಹೆಮ್ಮೆಯ ಕವಿ "ಕುಮಾರವ್ಯಾಸ" ಬಿರುದಿನ ಗದುಗಿನ ನಾರಾಣಪ್ಪನಿಗೆ ಸೇರಬೇಕು ಎಂದು ಸಂಚಿಕೆಯ ಕೊನೆಯಲ್ಲಿ ಹೇಳಿದ್ದೆವು. ಅದು ಏಕೆ ಎಂದು ಈಗ ನೋಡೋಣ. 

*****

ಮನೆಗೆ ಬಂದ ಅತಿಥಿ-ಅಭ್ಯಾಗತರನ್ನು ತೃಪ್ತಿ ಪಡಿಸಲು ಗೃಹಿಣಿ ಮಾಡುವ ಕಸರತ್ತುಗಳಿಗೂ ಕವಿ ತನ್ನ ಕಾವ್ಯ ರಚನೆಯಲ್ಲಿ ಕಾಣುವ ಕಷ್ಟಗಳಿಗೂ ಏನೋ ಒಂದು ವಿಧವಾದ ಸಾದೃಶ್ಯವಿದೆ. ಹಿಂದೆ ಮಾಡಿದ ಅಡಿಗೆ ಪುನರಾವರ್ತನೆ ಆಗಬಾರದು. ಕವಿಗೆ ಹಿಂದೆ ಮಾಡಿದ ವರ್ಣನೆ ಮತ್ತೆ ಬಂದಿರಬಾರದು. ಉಗ್ರಾಣದಲ್ಲಿ ಇರುವ ಪದಾರ್ಥಗಳಿಂದಲೇ ಅಡಿಗೆ ತಯಾರಾಗಬೇಕು. ಕವಿಯ ಪದಸಂಪತ್ತಿನಿಂದಲೇ ಕಾವ್ಯ ಮೂಡಬೇಕು. ಕೆಲವಾದರೂ ಮಾಡಿದ ಪದಾರ್ಥ ಮಕ್ಕಳಿಗೂ ಹಿಡಿಸಬೇಕು. ಹೆಚ್ಚು ತಿಳಿಯದ ಓದುಗರಿಗೂ ಸ್ವಲ್ಪವಾದರೂ ಅರ್ಥ ಆಗುವಂತಿರಬೇಕು. ದೊಡ್ಡವರಿಗೂ ಇಷ್ಟವಾಗುವ ಉಪ್ಪು-ಹುಳಿ-ಖಾರ  ಇರಬೇಕು. ತಿಳಿದ ಓದುಗರಿಗೂ ರಂಜಿಸುವ ರೀತಿ ಕಾವ್ಯ ಇರಬೇಕು. 

ಅತಿಥಿ-ಅಭ್ಯಾಗತರಲ್ಲಿ ಅಡಿಗೆ ಮಾಡುವುದರಲ್ಲಿ ನುರಿತವರು ಇರುತ್ತಾರೆ. ಅವರನ್ನೂ ಮೆಚ್ಚಿಸಬೇಕು. ಕವಿಗೂ ಪಂಡಿತ ವಿಮರ್ಶಕ ಜನರ ಮನ ಗೆಲ್ಲಬೇಕು. ಮುಂದೊಂದು ದಿನ ಇನ್ನೆಲ್ಲೋ ಸಿಕ್ಕಾಗ "ಆಹಾ, ಅಂದು ನಿಮ್ಮ ಮನೆಯ ಊಟ ಈಗಲೂ ನೆನೆಸಿಕೊಳ್ಳುತ್ತೇವೆ" ಎಂದು ಊಟ ಮಾಡಿದವರು ಹೇಳಬೇಕು. ಕವಿಗೆ ತನ್ನ ಕೃತಿ ಬಹು ಕಾಲದವರೆಗೆ ನಿಲ್ಲುವಂತೆ ಆಗಬೇಕು. ಅಡಿಗೆ ಶುಚಿ-ರುಚಿಯಾಗಿ ಇರಬೇಕು. ಕವಿಯ ಕೃತಿ ಸತ್ವಯುತವಾಗಿ ಒಂದು ಮಾದರಿಯಾಗಿ ಉಳಿಯಬೇಕು. ಹೀಗೆ ಆಸೆಗಳು. 

ಕುಮಾರವ್ಯಾಸನ "ಕರ್ಣಾಟ ಭಾರತ ಕಥಾಮಂಜರಿ" ಈ ಎಲ್ಲ ಮಾನದಂಡಗಳಲ್ಲಿಯೂ ಗೆದ್ದು ನಿಂತು ಶತಮಾನಗಳ ನಂತರ ಈಗಲೂ ಜನಪ್ರಿಯವಾಗಿರುವ ಕೃತಿ. ಅವನೇ ಹೇಳುವಂತೆ "ಅರಸುಗಳಿಗಿದು ವೀರ, ದ್ವಿಜರಿಗೆ ಪರಮ ವೇದದ ಸಾರ, ಯೋಗ್ಗೀಶ್ವರರ ತತ್ವ ವಿಚಾರ, ಮಂತ್ರಿ ಜನಕೆ ಬುದ್ಧಿಗುಣ" ಮುಂತಾದ ಯೋಗ್ಯತೆಯುಳ್ಳದ್ದು. ವಿರಹಿಗಳ ಶೃಂಗಾರವೂ ಹೌದು. ವಿದ್ಯಾಪರಿಣಿತರ ಅಲಂಕಾರವೂ ಸರಿಯೇ. ಒಟ್ಟಿನಲ್ಲಿ "ಕಾವ್ಯಕೆ ಗುರು" ಆ ಕೃತಿ.  

*****

ಕವಿ ನಾರಾಣಪ್ಪನು ತನ್ನ ಮಂಗಳಾಚರಣೆ ಮಾಡುವಾಗ "ಪೀಠಿಕಾ ಸಂಧಿ" ಭಾಗವಾಗಿ ಇಪ್ಪತ್ತಮೂರು ಪದ್ಯಗಳಲ್ಲಿ ದೇವನ, ದೇವತೆಗಳ ಸ್ತುತಿ ಮಾಡುತ್ತಾನೆ. "ಇಳೆಯ ಜಾಣರು ಮೆಚ್ಚುವಂತೆ" ರಚಿಸಲು ಪಣ ತೊಡುತ್ತಾನೆ. ಅವನಲ್ಲಿ ಅಹಂಕಾರ ಭಾವವಿಲ್ಲ. ಆದರೆ ವೀರನ ಗತ್ತು ಇದೆ. "ವೀರ ನಾರಾಯಣನೆ ಕವಿ, ಕುಮಾರವ್ಯಾಸ ಲಿಪಿಕಾರ" ಎಂದು ವಿನಯದಿಂದ ಹೇಳಿದರೂ "ಪದವಿಟ್ಟಳುಪದೊಂದಗ್ಗಳಿಕೆ" ಅವನದು. ಒಮ್ಮೆ ಬರೆದರೆ ಮುಗಿಯಿತು. ಮತ್ತೆ ಅಳಿಸಿ, ತಿದ್ದಿ, ಒದ್ದಾಡುವಂತಿಲ್ಲ. ಹೀಗೆ ಶಪಥ ಹೂಡಿ ಮುಂದುವರೆಯುತ್ತಾನೆ. 

ಕೃತಿ "ಭಾಮಿನಿ ಷಟ್ಪದಿ" ರಚನೆ. ಪ್ರತಿ ಪದ್ಯವೂ ಆರು ಸಾಲುಗಳು ಇರಬೇಕು. ಮೊದಲ ಸಾಲು ಏಳು ಮತ್ತು ಏಳು, ಒಟ್ಟು ಹದಿನಾಲ್ಕು ಮಾತ್ರೆಗಳು. ಎರಡನೆಯ ಸಾಲೂ ಹೀಗೆಯೇ ಹದಿನಾಲ್ಕು ಮಾತ್ರೆಗಳು. ಮೂರನೆಯದು ಏಳು, ಏಳು, ಎಂಟು, ಒಟ್ಟು ಇಪ್ಪತ್ತೆರಡು ಮಾತ್ರೆಗಳು. ಮೊದಲ ಅರ್ಧ ಪದ್ಯ ಒಟ್ಟು ಐವತ್ತು ಮಾತ್ರೆಗಳು. ಎರಡನೇ ಅರ್ಧ ಪದ್ಯವೂ ಒಟ್ಟು ಹೀಗೆ ಐವತ್ತು ಮಾತ್ರೆಗಳು. ಒಂದು ಪದ್ಯಕ್ಕೆ ಸರಿಯಾಗಿ ಒಂದು ನೂರು ಮಾತ್ರೆಗಳು. ಹೆಚ್ಚು-ಕಡಿಮೆ ಆಗುವಂತಿಲ್ಲ. ಅಷ್ಟು ಕಾಲ ಹಿಡಿಯುವಂತೆ ಪದಗಳ ಜೋಡಣೆ ಇರಬೇಕು.  

ಪ್ರತಿ ಪದ್ಯವೂ ಒಂದು ದೊಡ್ಡ ಹಾರದ ಮುತ್ತೊಂದರಂತೆ ಇರಬೇಕು. ಹಿಂದು-ಮುಂದಕ್ಕೆ ಕೊಂಡಿಯಂತಿರಬೇಕು. ಕಥೆಯ ಒಟ್ಟು ಓಟಕ್ಕೆ ಸರಿಯಾಗಿ ಕೂಡಿಕೊಂಡಿರಬೇಕು. ಬೇಕಾದ ರಸ-ಭಾವಗಳಿಗೆ ಪೂರಕವಾಗಿರಬೇಕು. ಒಂದು ಪದ್ಯವೂ ಊಟದ ಮಧ್ಯೆ ಸಣ್ಣ ಕಲ್ಲಿನ ಚೂರು ಸಿಕ್ಕಂತೆ ಇರಬಾರದು. ಇವು ಅವನ ಮುಂದಿರುವ ಅನೇಕ ಸವಾಲುಗಳಲ್ಲಿ ಕೆಲವು ಮಾತ್ರ. 

ಒಂದು ಸಣ್ಣ ಪತ್ರ ಬರೆಯಬೇಕಾದರೆ ಹೇಗೆ ಪ್ರಾರಂಭ ಮಾಡಬೇಕು, ಯಾವ ಪದ ಉಪಯೋಗಿಸಬೇಕು, ಎಂದು ತಿಣುಕಾಡಿ, ಹತ್ತು ಬಾರಿ ಬದಲಾಯಿಸಿ, ಹೊಡೆದುಹಾಕಿ, ತಿದ್ದಿ-ತೀಡಿ, ಒದ್ದಾಡುವ ಪರಿಸ್ಥಿತಿಯ ಮುಂದೆ ಇವನ್ನು ಗಮನಿಸಬೇಕು. ಎಲ್ಲ ಬರೆದು ಮುಗಿಸಿದ ಮೇಲೆ "ಅಯ್ಯೋ, ಇದು ಸೇರಿಸುವುದು ಬಿಟ್ಟೆ ಹೋಯಿತಲ್ಲ!" ಎಂದು ಗೋಳಾಡುವುದು ಕೂಡದು. 

*****

ಇಷ್ಟೆಲ್ಲಾ ಕಠಿಣ ಚೌಕಟ್ಟಿನ ಸಂದರ್ಭದಲ್ಲಿ ಪೀಠಿಕಾ ಸಂಧಿಯ ಇಪ್ಪತ್ತಮೂರನೆಯ ಮತ್ತು ಕಡೆಯ ಪದ್ಯದಲ್ಲಿ ಕವಿ ಒಂದು ಸುಂದರ ಒಗಟು ಇಟ್ಟಿದ್ದಾನೆ. ಬಹಳ ಜನಪ್ರಿಯವಾಗಿರುವ ಆ ಪದ್ಯ ಹೀಗಿದೆ:

ವೇದಪುರುಷನ ಸುತನಸುತನ ಸ 
ಹೋದರನ ಮೊಮ್ಮಗನ ಮಗನ ತ
ಳೋದರಿಯ ಮಾತುಳನ ರೂಪನನತುಳ ಭುಜಬಲದಿ 
ಕಾದಿ ಗೆಲಿದನ ಅಣ್ಣ ನವ್ವೆಯ 
ನಾದಿನಿಯ ಜಠರದಲಿ ಜನಿಸಿದ 
ನಾದಿ ಮೂರತಿ ಸಲಹೊ ಗದುಗಿನ ವೀರನಾರಯಣ 

ಮೇಲೆ ಕೊಟ್ಟಿರುವ ಚಿತ್ರವನ್ನು ನೋಡಿಕೊಂಡು ಈ ಪದ್ಯವನ್ನು ಓದಿಕೊಂಡರೆ ಒಗಟನ್ನು ಸುಲಭವಾಗಿ ಬಿಡಿಸಿಕೊಳ್ಳಬಹುದು.  

  • ವೇದಪುರುಷನ - ಶ್ರೀಮನ್ನಾರಾಯಣನ  
  • ಸುತನ (ಮಗ) - ಚತುರ್ಮುಖ ಬ್ರಹ್ಮನ  
  • ಸುತನ (ಮಗ) - ನಾರದನ  
  • ಸಹೋದರನ - ಮರೀಚಿಯ 
  • ಮೊಮ್ಮಗನ - ಮಗ ಕಶ್ಯಪನ ಮಗನಾದ ಇಂದ್ರನ 
  • ಮಗನ - ಅರ್ಜುನನ
  • ತಳೋದರಿಯ - ಹೆಂಡತಿಯಾದ ಸುಭದ್ರೆಯ 
  • ಮಾತುಳನ - ಸೋದರಮಾವನಾದ ಕಂಸನ 
  • ಮಾವನ - ಕಂಸನಿಗೆ ಹೆಣ್ಣುಕೊಟ್ಟ ಮಾವ ಜರಾಸಂಧನನ್ನು 
  • ಅತುಲ ಭುಜಬಲದಿ ಕಾದು ಗೆಲಿದನ - ಭೀಮಸೇನನ 
  • ಅಣ್ಣನ - ಧರ್ಮರಾಯನ 
  • ಅವ್ವೆಯ - ತಾಯಿ ಕುಂತಿಯ 
  • ನಾದಿನಿಯ - ದೇವಕಿಯ 
  • ಜಠರದಲಿ ಜನಿಸಿದ ಅನಾದಿ ಮೂರುತಿ - ಶ್ರೀಕೃಷ್ಣ 
ಶ್ರೀಮನ್ನಾರಾಯಣನಿಂದ ಪ್ರಾರಂಭಿಸಿ ಹದಿಮೂರು ಜನರ ನಂತರ ಅವನ ಇನ್ನೊಂದು ರೂಪನಾದ ಶ್ರೀಕೃಷ್ಣನೇ ಬಂದು ನಿಂತ. ಅವನು ನಮ್ಮನ್ನು ಸಲಹಲಿ ಎಂದು ಪ್ರಾರ್ಥನೆ. ಒಂದು ಹದಿಮೂರು ಮುತ್ತುಗಳ ಹಾರ. ಶ್ರೀಮನ್ನಾರಾಯಣನ ಅವತಾರಿ ಶ್ರೀಕೃಷ್ಣನೇ ಆ ಹಾರದ ಪದಕ. 

*****

 ಈ ಪದ್ಯದಲ್ಲಿ ಅಡಗಿದ ಬೇರೆ ವಿಶೇಷಗಳು ಏನುಂಟು?

  • ಕವಿಯ ಇಷ್ಟ ದೈವ ವೀರ ನಾರಾಯಣ. ಪದ್ಯದ ಪ್ರಾರಂಭ ನಾರಾಯಣನಿಂದ. ಕಡೆಯಾದದ್ದು ಶ್ರೀಕೃಷ್ಣನಿಂದ. ಇದು ಕೌರವ-ಪಾಂಡವರ ಕಥೆ ಎಂದು ಮೇಲು ನೋಟಕ್ಕೆ ಕಂಡರೂ, ಇದರ ಕಥಾನಾಯಕ ಶ್ರೀಕೃಷ್ಣನೇ. ಇದನ್ನು ಕವಿ ಹೀಗೆ ಸೂಚಿಸಿದ್ದಾನೆ.
  • ನಾರಾಯಣನೇ ಅವತರಿಸಿ ಶ್ರೀಕೃಷ್ಣನಾದ ಎಂದು ಹೇಳಿದಂತಾಯಿತು. 
  • ಕೆಲವು ಮುಖ್ಯ ಪಾತ್ರಧಾರಿಗಳನ್ನು (ಅರ್ಜುನ, ಭೀಮ, ಧರ್ಮಜ, ಕುಂತಿ, ಇಂದ್ರ, ಶ್ರೀಕೃಷ್ಣ, ಸುಭದ್ರೆ) ಪರಿಚಯಿಸಿದ್ದಾಯಿತು. (ಬೇರೆಯವರು ಯಾಕಿಲ್ಲ ಎಂದು ಕೇಳಬಹುದು. ನೂರು ಮಾತ್ರೆಗಳ ನೆನಪಿಡಬೇಕು). 
  • ಪಾಂಡವರ-ಯಾದವರ ಕೊಂಡಿ ಇಲ್ಲಿ ಸಿಕ್ಕಿತು. 
ಇನ್ನು ಕೆಲವು ಸಂಗತಿಗಳು:
  • ಮಹಾನಾರಾಯಣೋಪನಿಷತ್ತು ಮುಂತಾದುವು ಹೇಳುವಂತೆ ನಾರಾಯಣನು ವೇದಪ್ರತಿಪಾದ್ಯನಾದ ವೇದಪುರುಷನು. 
  • ನಾರಾಯನಿಗೆ ಅನೇಕ ನೇರ ಮಕ್ಕಳಿದ್ದರೂ ಬ್ರಹ್ಮನೇ ಮೊದಲಿಗನು. ಅಲ್ಲಿಂದ ಸೃಷ್ಟಿ ಪ್ರಾರಂಭ. 
  • ಚತುರ್ಮುಖನಿಗೆ ಅನೇಕ ಮಾನಸ ಪುತ್ರರಿದ್ದಾರೆ. ಅವರಲ್ಲಿ ಯಾರನ್ನಾದರೂ ತೆಗೆದುಕೊಳ್ಳಬಹುದು. ನಾರದರು ಎಲ್ಲರಿಗೂ ಪರಿಚಿತರು. ಹೀಗಾಗಿ ಅವರನ್ನು ತೆಗೆದುಕೊಳ್ಳುವುದು ವಾಡಿಕೆ. 
  • ಮಾನಸ ಪುತ್ರರೆಲ್ಲರೂ ಬ್ರಹ್ಮನಿಂದ ನೇರ ಹುಟ್ಟಿದವರಾದದ್ದರಿಂದ ಅವನೇ ತಾಯಿ ಮತ್ತು ತಂದೆ. ಹೀಗೆ ಹುಟ್ಟಿದವರೆಲ್ಲರೂ ಸಹೋದರರು. 
  • ಅರ್ಜುನನು ಇಂದ್ರನ ವರಪ್ರಸಾದದಿಂದ ಹುಟ್ಟಿದವನು. ಹೀಗಾಗಿ ಮಗನು. 
  • ಅರ್ಜುನನಿಗೆ ಅನೇಕ ಹೆಂಡತಿಯರಿದ್ದರೂ, ಪಾಂಡವ-ಯಾದವ ಕುಲಗಳ ಕೊಂಡಿ ಸುಭದ್ರೆ. 
  • ಶ್ರೀಕೃಷ್ಣ-ಬಲರಾಮರಂತೆ ಕಂಸನು ಸುಭದ್ರೆಗೂ ಸೋದರಮಾವ. ದೇವಕಿಯ ಅಣ್ಣ. 
  • ಕಂಸನು ಜರಾಸಂಧನ ಇಬ್ಬರು ಹೆಣ್ಣು ಮಕ್ಕಳಾದ ಆಸ್ತಿ-ಪ್ರಾಪ್ತಿಯರನ್ನು ಮದುವೆಯಾಗಿದ್ದನು. ಆದ್ದರಿಂದ ಜರಾಸಂಧನು ಕಂಸನಿಗೆ ಹೆಣ್ಣು ಕೊಟ್ಟ ಮಾವ. 
  • ಭೀಮನ ಅವ್ವೆ ಕುಂತಿಯಾದರೂ ಧರ್ಮರಾಯ ಎಲ್ಲರಿಗೂ ಹಿರಿಯ. ಆದ್ದರಿಂದ ಮುಖ್ಯ. ಅಲ್ಲದೆ ಒಂದು ನೂರು ಮಾತ್ರೆಗಳ ಪದಗಳನ್ನು ಕೂಡಿಸಬೇಕಲ್ಲ!
  • ಕುಂತಿಯು ವಸುದೇವನ ಸಹೋದರಿ. ಇಬ್ಬರೂ ಯಾದವ ಶೂರಸೇನನ ಮಕ್ಕಳು. ಅವಳ ಹುಟ್ಟು ಹೆಸರು ಪೃಥಾ. ಶೂರಸೇನನ ತಮ್ಮ ಕುಂತಿಭೋಜನು ಮಕ್ಕಳಿಲ್ಲದ್ದರಿಂದ ಅವಳನ್ನು ದತ್ತು ತೆಗೆದುಕೊಂಡ. ಆಗ ಅವಳ ಹೆಸರು ಕುಂತಿ ಎಂದಾಯಿತು. 
  • ಕುಂತಿ ಮತ್ತು ವಸುದೇವನ ಹೆಂಡತಿ ದೇವಕಿ ಈ ಕಾರಣದಿಂದ ಅತ್ತಿಗೆ-ನಾದಿನಿಯರು. ಶ್ರೀಕೃಷ್ಣನಿಗೆ ಕುಂತಿ ಸೋದರತ್ತೆ. 
*****

ಮಂಗಳಾಚರಣೆಯ ಈ ಕೊನೆಯ ಪದ್ಯದ ಮೂಲಕ ಕವಿ ತನ್ನ ಇಷ್ಟದೈವ ಗದುಗಿನ ವೀರನಾರಾಯಣನಿಂದ ಕಥಾನಾಯಕ ಶ್ರೀಕೃಷ್ಣವರೆಗೆ ಒಂದು ದೊಡ್ಡ ಮಂಗಳಾರತಿ ಮಾಡಿ ಪ್ರಾರಂಭಿಸಿದ್ದಾನೆ. ಇಲ್ಲಿ ಬಳಸಿದ "ತಳೋದರಿ" ಪದವೂ ಹೀಗೆ ವಿಶ್ವ ವಿಖ್ಯಾತ ಆಯಿತು!