Showing posts with label Surendra Tirtha. Show all posts
Showing posts with label Surendra Tirtha. Show all posts

Wednesday, August 19, 2026

ವೇದಾಂತ ದೇಶಿಕರ "ಯಾದವಾಭ್ಯುದಯಮ್"


ಶ್ರೀ ಗುರು ರಾಘವೇಂದ್ರ ರಾಯರ ಸ್ತೋತ್ರದಲ್ಲಿ ಬರುವ "ವಿಜಯೀ೦ದ್ರ ಕರಾಬ್ಜೋಥಾ ಸುಧೀಂದ್ರ ವರಪುತ್ರಕಃ" ಎನ್ನುವ ಹೇಳಿಕೆಯ ಹಿನ್ನೆಲೆಯಲ್ಲಿ ಅವರ ಗುರು ಪರಂಪರೆಯ ಶ್ರೀ ಸುರೇಂದ್ರ ತೀರ್ಥರು, ಶ್ರೀ ವಿಜಯೀ೦ದ್ರ ತೀರ್ಥರು ಮತ್ತು  ಶ್ರೀ ಸುಧೀಂದ್ರ ತೀರ್ಥರು, ಇವರುಗಳ ಸ್ವಲ್ಪಮಟ್ಟಿನ ಪರಿಚಯಗಳನ್ನು ಈ ಹಿಂದಿನ ಮೂರು ಸಂಚಿಕೆಗಳಲ್ಲಿ ಮಾಡಿಕೊಂಡೆವು.  

"ಅರಳಿದ ಬಂಗಾರದ ಮಲ್ಲಿಗೆ" ಎಂಬ ಶೀರ್ಷಿಕೆಯ ಹಿಂದಿನ ಸಂಚಿಕೆಯಲ್ಲಿ ಶ್ರೀ ಸುಧೀಂದ್ರ ತೀರ್ಥರ ಬಗ್ಗೆ ನೋಡಿದ್ದೆವು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು. ಅವುಗಳ ಹಿಂದಿನ ಸಂಚಿಕೆಗಳ ಕೊಂಡಿಗಳು ಹೀಗೆಯೇ ಅಲ್ಲಲ್ಲಿ ಸಿಕ್ಕುತ್ತವೆ. 

"ಇಷ್ಟು ಹೇಳಿದರೆ ನೀನು ಪಂಡಿತ" ಎಂಬ ಶೀರ್ಷಿಕೆಯ ಸಂಚಿಕೆಯನ್ನು ಓದಿದ ಸ್ನೇಹಿತರೊಬ್ಬರು ಶ್ರೀ ವಿಜಯೀ೦ದ್ರ ತೀರ್ಥರ ಮತ್ತು ಶ್ರೀ ಅಪ್ಪಯ್ಯ ದೀಕ್ಷಿತರ ಒಡನಾಟದ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದಾರೆ. ಕೆಲವು ಪುಸ್ತಕಗಳಲ್ಲಿ ಬೇರೆ ರೀತಿಯ ಅರ್ಥ ಬರುವ ವಿವರಗಳಿವೆ ಎನ್ನುವುದು ಅವರ ಅನುಮಾನಕ್ಕೆ ಕಾರಣ. 

"ನಮ್ಮ ಮತವೇ ಶ್ರೇಷ್ಠ. ಉಳಿದುವುಗಳೆಲ್ಲ ಲೆಕ್ಕಕ್ಕಿಲ್ಲ. ಇದನ್ನು ನಂಬಿದರೆ ಮಾತ್ರ ನೀವು ನೇರ ಸ್ವರ್ಗ ಅಥವಾ ಮುಕ್ತಿ ಪಡೆಯುತ್ತೀರಿ. ಇಲ್ಲದಿದ್ದರೆ ನೇರ ನರಕ ತಲುಪುತ್ತೀರಿ" ಎಂದು ಹೇಳುವ ಸಾಹಿತ್ಯ ರಾಶಿಗೆ ಏನೂ ಕಡಿಮೆ ಇಲ್ಲ. ಆದರೆ, ನಾವು ಯುವುದೋ ಒಂದು ಪುಸ್ತಕವನ್ನು ಓದಿ, ಅದನ್ನೇ ಪರಮ ಸತ್ಯ ಎಂದು ನಂಬುವುದು ಎಷ್ಟು ಸರಿ? ಅದಕ್ಕೆ ವಿರುದ್ಧವಾದುವುಗಳೂ ಅನೇಕವಿವೆ. ಎಲ್ಲವನ್ನೂ ತಿಳಿಯುವ ಪ್ರಯತ್ನ ಮಾಡಿ, ನಂತರ ನಾವು ಒಂದು ತೀರ್ಮಾನಕ್ಕೆ ಬರುವುದು ಒಂದು ಉತ್ತಮ ಪಕ್ಷ. 

ಈ ಹಿನ್ನೆಲೆಯಲ್ಲಿ ಶ್ರೀ ಅಪ್ಪಯ್ಯ ದೀಕ್ಷಿತರ ಪಾಂಡಿತ್ಯ ಮತ್ತು ಅವರ ಒಟ್ಟಾರೆ ಭಾವ (sentiment) ಹೇಗಿದ್ದಿತು ಎನ್ನುವುದನ್ನು ಇಲ್ಲಿ ಸ್ವಲ್ಪ ನೋಡೋಣ. 

******

ಜ್ಞಾನದ ಯಾವುದೇ ಒಂದು ಶಾಖೆಯಲ್ಲಿ ಸ್ವಲ್ಪಮಟ್ಟಿನ ಪ್ರಭುತ್ವ ಪಡೆಯಬೇಕಾದರೆ ಹತ್ತಾರು ವರ್ಷಗಳ ಅಧ್ಯಯನ ಅವಶ್ಯಕ. ಗುರುಕುಲಗಳಲ್ಲಿ ಮೊದಲ ಕೆಲವು ವರುಷ ಸಾಮಾನ್ಯ ಜ್ಞಾನ ಪಡೆದ ನಂತರ ವಿದ್ಯಾರ್ಥಿಗಳು ಯಾವುದಾದರೂ ಒಂದು ವಿಭಾಗವನ್ನು ಆರಿಸಿಕೊಂಡು ಅದರಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿದ್ದರು. ಈಗಿನ ಶಿಕ್ಷಣ ಪದ್ದತಿಯಲ್ಲಿಯೂ ಈ ರೀತಿಯ ವಿಶೇಷ ಪರಿಣತಿ ಪಡೆಯುವ ಅವಕಾಶ ಇದೆ. ನಾವು ಮೇಲೆ ಹೇಳಿದ ಹೆಸರುಗಳ ಮಹನೀಯರು ಅನೇಕ ವಿಷಯಗಳಲ್ಲಿ ಪರಿಣತಿ ಸಾಧಿಸಿದ ವ್ಯಕ್ತಿಗಳು. "ಒಂದು ಜೀವಿತ ಕಾಲದಲ್ಲಿ ಇಷ್ಟು ಸಾಧನೆ ಸಾಧ್ಯವೇ?" ಎಂದು ನಾವು ಯೋಚಿಸುವಂತೆ ಮಾಡುವ ಶಕ್ತಿಗಳು ಅವರು.

ಶ್ರೀ ಅಪ್ಪಯ್ಯ ದೀಕ್ಷಿತರು "ಶಿವಾದ್ವೈತ" ವಿಭಾಗದಲ್ಲಿ ಎಲ್ಲ ಕಾಲದ ಶ್ರೇಷ್ಠ ವಿದ್ವಾಂಸರಲ್ಲಿ ಅಗ್ರಗಣ್ಯರು. ಅವರ ಅನೇಕ ಬಿರುದುಗಳಲ್ಲಿ "ಅದ್ವೈತ ವಿದ್ಯಾಚಾರ್ಯ" ಅನ್ನುವುದೂ ಒಂದು ಬಿರುದು. "ಅಲಂಕಾರ ಶಾಸ್ತ್ರ" (Poetics) ವಿಷಯದಲ್ಲಿ ಅವರು ರಚಿಸಿರುವ "ಕುವಲಯಾನಂದ" ಒಂದು ಮೇರು ಕೃತಿ. ನಾವು ಶಾಲಾ-ಕಾಲೇಜುಗಳಲ್ಲಿ ಕಲಿಯುತ್ತಿದ್ದಾಗ ಮೂರು-ನಾಲ್ಕು ಅಲಂಕಾರಗಳ (Figure of Speech) ಬಗ್ಗೆ ಸೂಕ್ಷ್ಮವಾಗಿ ಹೇಳಿಕೊಡುತ್ತಿದ್ದರು. ಉಪಮಾಲಂಕಾರ (Simile), ರೂಪಕಾಲಂಕಾರ (Metaphor), ಉತ್ಪ್ರೇಕ್ಷೆ (Hyperbole) ಮುಂತಾದ ಕೆಲವು. ಕುವಲಯಾನಂದ ಕೃತಿಯಲ್ಲಿ 124 ಅಲಂಕಾರಗಳ ವಿವರಣೆ ಇದೆ!

"ಕುವಲಯಾನಂದ" ಕೃತಿಗೆ "ಪೀಯೂಷವರ್ಷ ಜಯದೇವ" ರಚಿಸಿರುವ "ಚಂದ್ರಾಲೋಕ" ಎಂಬ ಹೆಸರಿನ ವ್ಯಾಖ್ಯಾನ ಇದೆ. 51ನೆಯ ಶ್ಲೋಕದಲ್ಲಿ "ಪ್ರತಿವಸ್ತು ಉಪಮಾಲಂಕಾರ" ಅನ್ನುವ ಅಲಂಕಾರದ ವರ್ಣನೆ ಇದೆ.  ಆ ಶ್ಲೋಕದ ವಿವರಣೆ ಹೀಗಿದೆ:

ವಿದ್ವಾನೇವ ವಿಜಾನಾತಿ ವಿದ್ವಜ್ಜನ ಪರಿಶ್ರಮಂ 
ನ ಹಿ ವಂಧ್ಯಾ ವಿಜಾನಾತಿ ಗುರ್ವಿo  ಪ್ರಸವವೇದನಂ 

ಒಬ್ಬ ವಿದ್ವಾಂಸನ ಶ್ರಮವನ್ನು ಇನ್ನೊಬ್ಬ ವಿದ್ವಾಂಸ ಮಾತ್ರ ತಿಳಿಯಬಲ್ಲನು. (ಕೃತಿ ರಚನೆಯ ಕಷ್ಟವನ್ನು ಕೃತಿಗಳನ್ನು ರಚಿಸಿರುವ ಇನ್ನೊಬ್ಬನು ಮಾತ್ರ ಅರಿಯಬಲ್ಲನು). ಒಂದು ಮಗುವನ್ನೂ ಹಡೆಯದವಳಿಗೆ ಪ್ರಸವ ವೇದನೆ ಏನೆಂಬುದು ಹೇಗೆ ಗೊತ್ತು?

ಸ್ವತಃ ಅದ್ವೈತ ವಿದ್ಯಾಚಾರ್ಯರಾಗಿದ್ದರೂ ಶ್ರೀ ಅಪ್ಪಯ್ಯ ದೀಕ್ಷಿತರು ವೈಷ್ಣವ ಸಿದ್ಧಾಂತ ಸಾರಿ ಹೇಳುವ ಶ್ರೀ ವೇದಾಂತ ದೇಶಿಕರ "ಯಾದವಾಭ್ಯುದಯಂ" ಕೃತಿಗೆ ವ್ಯಾಖ್ಯಾನ ಬರೆದಿದ್ದಾರೆ. ವೇದಾಂತ ದೇಶಿಕರಿಗೆ "ಶ್ರೀ ವೈಷ್ಣವಾಚಾರ್ಯ" ಎಂದು ಬಿರುದು. ಕೃತಿ ಬರೆದವರು ಶ್ರೀವೈಷ್ಣವಾಚಾರ್ಯರು. ಅದರ ವ್ಯಾಖ್ಯಾನ ಬರೆದವರು ಅದ್ವೈತವಿದ್ಯಾಚಾರ್ಯರು. ಅದೂ ಸಮಕಾಲೀನ ಕೃತಿಯೊಂದರ ಮೇಲೆ ಬರೆದ ವ್ಯಾಖ್ಯಾನವಲ್ಲ. ಎರಡು ನೂರು ವರುಷ ಹಿಂದಿನ ಕೃತಿ. ಮೇಲೆ ಹೇಳಿದ ಪ್ರತಿವಸ್ತು ಉಪಮಾಲಂಕಾರಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಮತ್ತೆ ಎಲ್ಲಿ ಸಿಕ್ಕೀತು? 

******


ವಿಶಿಷ್ಟಾದ್ವೈತ ಸಿದ್ಧಾಂತದಲ್ಲಿ ನೆನೆಯಬೇಕಾದ ಹೆಸರುಗಳಲ್ಲಿ ಶ್ರೀ ವೇದಾಂತ ದೇಶಿಕ ಆವರದು ಎತ್ತರದ ಹೆಸರು. ಅವರ ಕಾಲ (1268-1369) ದಕ್ಷಿಣ ಭಾರತದ ಇತಿಹಾಸದಲ್ಲಿ ಬಹಳ ಕ್ಷೋಭೆ ತುಂಬಿದ ಸಮಯ. ಅನೇಕ ಅಡೆ-ತಡೆಗಳ ನಡುವೆ ಗುದ್ದಾಡಿ, ಅನೇಕ ಸತ್ವಯುತ ಗ್ರಂಥಗಳನ್ನು ರಚಿಸಿ 101 ವರುಷದ ತುಂಬು ಜೀವನ ನಡೆಸಿದ ಮಹನೀಯರು. ಅವರ ಹೆಸರಿನ ಜೊತೆ ತಳುಕು ಹಾಕಿಕೊಂಡಿರುವ ಬಿರುದುಗಳೇ ಒಂದು ರೋಮಾಂಚನ ಮಾಡುವಂತಹ ಸರಣಿ. "ಕವಿತಾರ್ಕಿಕ ಸಿಂಹ", "ವೇದಾಂತಾಚಾರ್ಯ" ಮತ್ತು "ಸರ್ವ ತಂತ್ರ ಸ್ವತಂತ್ರ" ಎನ್ನುವುವು ಅವುಗಳಲ್ಲಿ ಕೆಲವು. ಸನ್ಯಾಸಿಗಳಾಗದೆ, ಪೀಠದ ಬಲ ಇಲ್ಲದೆ, ತಮ್ಮ ವಿದ್ವತ್ತಿನ ಕಾರಣ ಪೀಠಾಧಿಪತಿಗಳ ಮನ್ನಣೆಯನ್ನೂ ಗಳಿಸಿದ ಹಿರಿಯರು. ಶ್ರೀ ರಾಮಾನುಜಾಚಾರ್ಯ (1077-1157) ಅವರ ಒಂದು ನೂರು ವರುಷಗಳ ನಂತರ ಬಾಳಿದ ಅವರು ತಾವು ನಂಬಿದ ಸಿದ್ಧಾಂತದ ಜೊತೆಗೆ ವಿಪುಲವಾದ ಸಾಹಿತ್ಯ ಸೇವೆ ಮಾಡಿದವರು. 

ಕಾಂಚಿಪುರಂ ನಗರದ ಬಳಿಯ ತುಪ್ಪಿಲ್ ಎಂಬಲ್ಲಿ ಜನಿಸಿದ ಅವರು ತಮ್ಮ ಜೀವನದ ಮೊದಲ ಕೆಲವು ವರುಷಗಳನ್ನು ತಮಿಳುನಾಡಿನ ಕಡಲೂರು ಬಳಿಯ, ಅಲ್ಲಿಂದ ಮೂರು-ನಾಲ್ಕು ಮೈಲಿ ದೂರದ, ತಿರುವಹಿಂದ್ರಪುರಮ್ (ತಿರುವಂಡಿಪುರಂ) ಎನ್ನುವ ಸ್ಥಳದಲ್ಲಿ ಕಳೆದರಂತೆ. ಅಲ್ಲಿನ ದೇವನಾಥಸ್ವಾಮಿ ದೇವಾಲಯ ಮತ್ತು ಸಮೀಪದ ಬೆಟ್ಟದ ಮೇಲಿರುವ ಶ್ರೀಲಕ್ಷ್ಮೀ-ಹಯಗ್ರೀವ ದೇವರ ಸನ್ನಿಧಿಯಲ್ಲಿ ಇದ್ದರಂತೆ. ಶ್ರೀ ವೈಷ್ಣವ ಪಂಥದ ಅನುಯಾಯಿಗಳು ಆರಾಧಿಸುವ "108 ದಿವ್ಯದೇಶಂ" ದೇವಾಲಯಗಳಲ್ಲಿ ಇದೂ ಒಂದು. 

ದೇಶಿಕರು ಅಲ್ಲಿ ವಾಸವಿದ್ದ ಸಮಯದಲ್ಲಿ ರಚಿಸಿದ "ರಘುವೀರಗದ್ಯ" ಅವರ ಪಾಂಡಿತ್ಯಕ್ಕೂ, ಕವಿತಾ ಪ್ರೌಢಿಮೆಗೂ ಒಂದು ನಿದರ್ಶನ.  ಈಚಿನ ದಿನಗಳಲ್ಲಿ ವಾಟ್ಸಾಪ್ಪ್ ವಿಡಿಯೋಗಳಲ್ಲಿ ಅದನ್ನು ಅನೇಕರು ಹಾಡಿ ತೋರಿಸಿದ್ದಾರೆ. ಅವರಿಗಿದ್ದ "ಸರ್ವ ತಂತ್ರ ಸ್ವತಂತ್ರ" ಹೆಸರಿನ ಬಿರುದು ಕಂಡ ಗಾರೆ ಕೆಸಲದವನು ಒಬ್ಬನು "ನಿಮಗೆ ಎಲ್ಲ ವಿದ್ಯೆ ಗೊತ್ತಿದ್ದರೆ ಒಂದು ಬಾವಿ ತೋಡಿ ತೋರಿಸಿ, ನೋಡೋಣ!" ಎಂದು ಸವಾಲು ಹಾಕಿದನಂತೆ. ಅವರು ತಮ್ಮ ಕೈಯಾರೆ ಆಗ ತೋಡಿದ ಬಾವಿಯನ್ನು ಈಗಲೂ ನೋಡಬಹುದೆಂದು ಕಂಡವರು ಹೇಳುತ್ತಾರೆ. 

******

ಶ್ರೀರಂಗಂ ಕ್ಷೇತ್ರದ ವಿದ್ವಾಂಸರ ಮನವಿಯ ಮೇರೆಗೆ ದೇಶಿಕರು ಅಲ್ಲಿಗೆ ಹೋದರು. ಆ ಸಮಯದಲ್ಲಿ ದೆಹಲಿ ಸುಲ್ತಾನ ಅಲ್ಲಾಉದ್ದೀನ್ ಖಿಲ್ಜಿ ಸೇನಾಧಿಪತಿ ಮಲ್ಲಿಕಾಫರ್ ಮದುರೈ ಮತ್ತು ಶ್ರೀರಂಗಂ ಪ್ರದೇಶಗಳಲ್ಲಿ ದಂಡೆತ್ತಿ ಬಂದ. ಶ್ರೀರಂಗಂ ದೇವಾಲಯದ ಮೇಲೆ ನಡೆದ ದಾಳಿಗಳಲ್ಲಿ ಮತ್ತು ಅಲ್ಲಿನ ಐಶ್ವರ್ಯದ ಲೂಟಿಯ ಸಂದರ್ಭದಲ್ಲಿ ನೂರಾರು ಮಂದಿ ದೇವಾಲಯದ ಸಿಬ್ಬಂದಿ, ಶ್ರೀವೈಷ್ಣವ ಪಂಡಿತರು ಮತ್ತು ಭಕ್ತರನ್ನು ಮುಘಲ್ ಸೈನಿಕರು ಹತ್ಯೆಗೈದರು. ಅದರ ವಿವರಗಳನ್ನು ಕೇಳಿದರೆ ಕಣ್ಣೀರು ಬರುತ್ತದೆ. 

ಶ್ರೀ ಸುದರ್ಶನ ಸೂರಿಗಳು (ಸುದರ್ಶನ ಭಟ್ಟ ಎಂದೂ ಹೇಳುತ್ತಾರೆ) ಆಚಾರ್ಯ ರಾಮಾನುಜರ ಅನೇಕ ಗ್ರಂಥಗಳಿಗೆ ಟೀಕಾಗ್ರಂಥಗಳನ್ನು ಬರೆದಿರುವ ವಿದ್ವಾಂಸರು. ಆಚಾರ್ಯರ "ಶ್ರೀಭಾಷ್ಯ" ಗ್ರಂಥದ ಮೇಲಿನ ಅವರ "ಶ್ರುತ ಪ್ರಕಾಶಿಕಾ" ಟೀಕಾ ಗ್ರಂಥ ಬಹಳ ಹೆಸರು ಮಾಡಿರುವಂಥದು. ಸೂರಿಗಳು ತಮ್ಮ ಹತ್ಯೆಗೆ ಮೊದಲು ತಮ್ಮಲ್ಲಿದ್ದ ಅಮೂಲ್ಯ ತಾಳೆಗರಿ ಗ್ರಂಥಗಳನ್ನು ಮತ್ತು ಇಬ್ಬರು ಮಕ್ಕಳನ್ನು ವೇದಾಂತ ದೇಶಿಕರ ಕೈಗೆ ಒಪ್ಪಿಸಿದರಂತೆ. ಶ್ರುತ ಪ್ರಕಾಶಿಕಾ ಗ್ರಂಥದ ಅದೊಂದೇ ಪ್ರತಿ ಆಗ ಲಭ್ಯವಿತ್ತಂತೆ. ಆ ಅಸಂಖ್ಯ ಶವಗಳ ರಾಶಿಯಲ್ಲಿ ಈ ಗ್ರಂಥಗಳನ್ನೂ ಮತ್ತು ಆ ಎರಡು ಮಕ್ಕಳನ್ನು ಹಿಡಿದಿಟ್ಟುಕೊಂಡು ಮಲಗಿ, ಆ ಮುಘಲ್ ಸೈನಿಕರ ಆಟಾಟೋಪ ಮುಗಿದ ನಂತರ ಕರ್ನಾಟಕದ ಗಡಿಯ ಸತ್ಯಮಂಗಲ ತಲುಪಿದರಂತೆ. ನಂತರ ಮೇಲುಕೋಟೆ ತಲುಪಿ ಅವೆಲ್ಲವನ್ನೂ ಸುರಕ್ಷಿತ ಮಾಡಿದರಂತೆ. ಸುದರ್ಶನ ಸೂರಿಗಳ ಇಬ್ಬರು ಮಕ್ಕಳಿಗೆ ಉಪನಯನಾದಿಗಳನ್ನು ಮಾಡಿ ಅವರಿಗೆ ನೆಲೆ ಮಾಡಿ ಕೊಟ್ಟರಂತೆ. 

ಇಂತಹ ಅಮೂಲ್ಯ ಗ್ರಂಥಗಳನ್ನು ರಕ್ಷಿಸಿದ್ದಕ್ಕೆ ಈ ಇಬ್ಬರು ಮಹಾನ್ ವಿದ್ವಾಂಸರಿಗೆ ನಾವುಗಳು ಎಂದೂ ಋಣಿಯಾಗಿರಬೇಕು. ಮುಂದೆ ದೇಶಿಕರು ಉತ್ತರ ಭಾರತ ಪ್ರವಾಸ ಮಾಡಿ, ಅಲ್ಲಿನ ದೇವಾಲಯಗಳ ಅವಶೇಷಗಳನ್ನು ನೋಡಿ, ಶ್ರೀರಂಗಂ ಹತ್ಯಾಕಾಂಡದ ಹಿನ್ನೆಲೆಯಲ್ಲಿ "ಅಭೀತಿ ಸ್ತವ" (ಭಯದಿಂದ ಬಿಡುಗಡೆ ಸ್ತೋತ್ರ) ರಚಿಸಿದರು. ಉತ್ತರ ಭಾರತದಿಂದ ಹಿಂದಿರುಗಿದ ನಂತರ ಮತ್ತನೇಕ ಗ್ರಂಥಗಳನ್ನು ರಚಿಸಿ, ಅನೇಕ ಸಾರ್ಥಕ ಕೆಲಸಗಳನ್ನು ನಡೆಸಿದರು. ಬಂದ ಆಪತ್ತುಗಳನ್ನು ಧೈರ್ಯ ಮತ್ತು ಯುಕ್ತಿಗಳಿಂದ ಎದುರಿಸಿ, ಅನೇಕ ಗ್ರಂಥ ರಚನೆ ಮಾಡಿ, ಹಲವಾರು ಶಿಷ್ಯರನ್ನು ಸಂಪಾದಿಸಿ ದೇಶಿಕರು ಕೀರ್ತಿಶೇಷರಾದರು. 
******

ಶ್ರೀಕೃಷ್ಣನ ಜೀವನದ ವಿವರಗಳನ್ನು ಕೊಡುವ ಗ್ರಂಥಗಳಲ್ಲಿ ನಮಗೆ ಹತ್ತಿರವಾದದ್ದು ಶ್ರೀಮದ್ ಭಾಗವತ. ಮಹಾಭಾರತದಲ್ಲಿಯೂ ಮತ್ತು ಇತರ ಗ್ರಂಥಗಳಲ್ಲಿಯೂ ಅಲ್ಲಲ್ಲಿ ಕೆಲವು ವಿವರಗಳು ಸಿಕ್ಕರೂ ಸಮಗ್ರ ಮಾಹಿತಿ ದೊರೆಯುವುದು ಭಾಗವತದಲ್ಲಿಯೇ. ಭಾಗವತವು "ಪುರಾಣ" ಎಂದು ವರ್ಗಿಕೃತವಾಗುತ್ತದೆ. ಹದಿನೆಂಟು ಪುರಾಣಗಳಲ್ಲಿ ಅದು ಒಂದು. ಸಂಸ್ಕೃತ ಮಹಾಕಾವ್ಯಗಳ ಲೆಕ್ಕದಲ್ಲಿ ನೋಡುವುದಾದರೆ ಮಾಘ ಕವಿಯ "ಶಿಶುಪಾಲ ವಧ" ಇಂತಹ ಒಂದು ಮಹಾಕಾವ್ಯ. ಇದನ್ನು ಪಂಚಮಹಾಕಾವ್ಯಗಳಲ್ಲಿ ಒಂದು ಎಂದು ಪರಿಗಣಿಸುತ್ತಾರೆ. 

ಶ್ರೀಕೃಷ್ಣನು ವೈಷ್ಣವ ಸಿದ್ಧಾಂತಗಳಲ್ಲಿ ಪರದೈವ. ಹೀಗೆ ಅವನನ್ನು ನಾಯಕನನ್ನಾಗಿ ಮಾಡಿಕೊಂಡು ರಚಿಸಿದ ಕಾವ್ಯಗಳ ಸಾಲಿನಲ್ಲಿ ಎರಡು ಕಾವ್ಯಗಳು ಗಮನ ಸೆಳೆಯುತ್ತವೆ. ಮೊದಲನೆಯದು ಹದಿನಾಲ್ಕನೆಯ ಶತಮಾನದ ಶ್ರೀ ವೇದಾಂತ ದೇಶಿಕರ "ಯಾದವಾಭ್ಯುದಯ". ಇದು ಶ್ರೀವೈಷ್ಣವ ಸಿದ್ಧಾಂತದ ಪ್ರಮೇಯಗಳನ್ನು ಒಳಗೊಂಡ ಕಾವ್ಯ. ನಂತರದ್ದು ಹದಿನಾರನೆಯ ಶತಮಾನದ ಉಡುಪಿಯ ಎಂಟು ಮಠಗಳಲ್ಲಿ ಒಂದಾದ ಸೋದೆ ಮಠದ ಶ್ರೀ ವಾದಿರಾಜ ತೀರ್ಥ ಅವರು ರಚಿಸಿರುವ "ಶ್ರೀ ರುಕ್ಮಿಣೀಶ ವಿಜಯ". ಇದರಲ್ಲಿ ಮಧ್ವ ಸಿದ್ಧಾಂತದ ಪ್ರಮೇಯಗಳನ್ನು ಕಾಣಬಹುದು.

ಶ್ರೀ ವೇದಾಂತ ದೇಶಿಕರ "ಯಾದವಾಭ್ಯುದಯ" 24 ಸರ್ಗಗಳಲ್ಲಿ ಹರಡಿಕೊಂಡಿರುವ ಮಹಾಕಾವ್ಯ. ನವರಸಗಳನ್ನು, ಅನೇಕ ಸ್ತೋತ್ರಗಳನ್ನೂ ಒಡಗೊಂಡಿದೆ. ದೇವಕಿಯ ಗರ್ಭವಾಸ್ಥೆಯಿಂದ ಪ್ರಾರಂಭವಾಗಿ, ಶ್ರೀಕೃಷ್ಣನ ಜೀವಿತದ ಎಲ್ಲ ಹಂತಗಳ ವಿವರಣೆ ಇದರಲ್ಲಿದೆ. ದೇಶಿಕರ ಪಾಂಡಿತ್ಯ ಮತ್ತು ಕೃಷ್ಣ ಭಕ್ತಿ, ಎರಡನ್ನೂ ಬೆಸೆದು ರಚಿಸಿರುವ ಕೃತಿ. 

ಶ್ರೀ ಅಪ್ಪಯ್ಯ ದೀಕ್ಷಿತರು ಈ ಯಾದವಾಭ್ಯುದಯ ಕೃತಿ ರಚನೆಯ ಸುಮಾರು ಎರಡು ನೂರು ವರುಷ ಕಳೆದ ನಂತರ ಇದಕ್ಕೆ ವ್ಯಾಖ್ಯಾನ ರಚಿಸಿದ್ದಾರೆ. ಪ್ರತಿಗಳು ಸುಲಭವಾಗಿ ಲಭ್ಯವಿವೆ. ಆಸಕ್ತರು ಓದಿ ಆನಂದಿಸಬಹುದು.

ಶ್ರೀ ವಾದಿರಾಜ ಯತಿಗಳ "ರುಕ್ಮಿಣೀಶ ವಿಜಯ" ಕೃತಿಯ ಬಗ್ಗೆ ಮತ್ತೊಮ್ಮೆ ನೋಡೋಣ.

*****

ಒಂದು ಹಣ್ಣಿನ ತೋಟವಿದೆ. ಅದರಲ್ಲಿ ಅನೇಕ ಹಣ್ಣು ಕೊಡುವ ಮರಗಳಿವೆ. ಒಬ್ಬೊಬ್ಬರಿಗೆ ಒಂದೊಂದು ಹಣ್ಣಿನ ಮೇಲೆ ಪ್ರೀತಿ. ಯಾವ ಹಣ್ಣು ತೆಗೆದುಕೊಳ್ಳಬೇಕು ಅನ್ನುವುದು ಅವರವರ ಇಷ್ಟ. ಎಲ್ಲರಿಗೂ ಒಂದೇ ಹಣ್ಣು ಪ್ರಿಯವಾಗಬೇಕು ಎಂದಿಲ್ಲ. 

ಎಲ್ಲ ಹಣ್ಣುಗಳ ಬಗ್ಗೆ ತಿಳಿದುಕೊಂಡು ಕಡೆಗೆ ನಮಗೆ ಯಾವುದು ಪ್ರಿಯ ಎಂದು ನಿರ್ಧರಿಸಬಹುದು. ನಮ್ಮಲ್ಲಿ ಬಹುತೇಕರು ಮಾಡುವುದು ಏನು? ಮೊದಲಿನಿಂದಲೂ ನಮ್ಮ ಮನೆಯಲ್ಲಿ ಹೀಗೆ ಬಂದಿದೆ. ಆದ್ದರಿಂದ ಅದೇ ಒಳ್ಳೆಯ ಹಣ್ಣು ಎಂಬುದು. ಇರಬಹುದು. ಆದರೆ ಮತ್ತೊಬ್ಬರು ಅವರಿಗೆ ಬೇಕಾದ ಹಣ್ಣು ತಿನ್ನಲಿ. ಅದಕ್ಕೆ ನಮ್ಮ ನಿರ್ಬಂಧವಿಲ್ಲ. 

ಭಾರತೀಯ ತತ್ವಶಾಸ್ತ್ರ ಸಹ ಈ ಹಣ್ಣಿನ ತೋಟದಂತೆ. ನಾವು ನಮ್ಮ ನಮ್ಮ ಮನೆಗಳಲ್ಲಿ ಯಾವ ಆಚರಣೆ ಮಾಡುತ್ತೇವೆ ಅನ್ನುವುದು ನಮಗೆ ಬಿಟ್ಟದ್ದು. ಹಾಗೆ ಅಂದಮಾತ್ರಕ್ಕೆ ಎಲ್ಲರೂ ಅದೇ ಆಚರಣೆ ನಡೆಸಬೇಕು ಎಂದಲ್ಲ. 

ಇಷ್ಟು ತಿಳಿದರೆ ಸಾಮರಸ್ಯ ಮೂಡುವುದು. ವಿಜಯೀoದ್ರರೂ, ಅಪ್ಪಯ್ಯ ದೀಕ್ಷಿತರೂ ಹೀಗಿದ್ದವರು. ಆದ ಕಾರಣ ಪ್ರಬಲ ಅಭಿಪ್ರಾಯ ಭೇದ ಇದ್ದ ಕಡೆಯಲ್ಲಿಯೂ ಸಾಮರಸ್ಯ ಸಾಧ್ಯ ಆಗಿತ್ತು. ನಾವು ಇಷ್ಟು ತಿಳಿದರೆ ಸಾಕು.

Friday, August 14, 2026

ಇಷ್ಟು ಹೇಳಿದರೆ ನೀನು ಪಂಡಿತ!


ಕಳೆದ ಸಂಚಿಕೆಯಲ್ಲಿ "ನಮಗೆ ಅವರೇ ಬೇಕು!" ಅನ್ನುವ ಶೀರ್ಷಿಕೆಯಡಿ ಕುಂಭಕೋಣ ಮಠದ ಶ್ರೀ ಸುರೇಂದ್ರ ತೀರ್ಥರು ಪೂರ್ವಾದಿ ಮಠದ ಯತಿಗಳಾದ ಶ್ರೀ ವ್ಯಾಸರಾಜರಿಂದ ಅವರ ಪ್ರೀತಿಯ ಶಿಷ್ಯರಾದ ಶ್ರೀ ವಿಷ್ಣುತೀರ್ಥರನ್ನು ದತ್ತು ಪಡೆದುಕೊಂಡು, ಅವರಿಗೆ "ಶ್ರೀ ವಿಜಯೀ೦ದ್ರ ತೀರ್ಥ" ಎಂದು ಮರುನಾಮಕರಣ ಮಾಡಿ, ತಮ್ಮ ನಂತರ ಪೀಠಾಧಿಪತಿಗಳನ್ನಾಗಿ ಮಾಡಿದ ವಿಚಾರ ನೋಡಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಶ್ರೀ ವಿಜಯೀ೦ದ್ರ ತೀರ್ಥರ ವಿಚಾರದಲ್ಲಿ ಕೆಲವು ಓದುಗರು ಪ್ರಶ್ನೆಗಳನ್ನು ಕೇಳಿದ್ದಾರೆ. ಅವುಗಳ ಬಗ್ಗೆ ಈ ಸಂಚಿಕೆಯಲ್ಲಿ ಸ್ವಲ್ಪ ವಿಚಾರ ಮಾಡೋಣ. 

ಶ್ರೀ ವಿಜಯೀ೦ದ್ರ  ತೀರ್ಥರ ಬಾಲ್ಯದ ಬಗ್ಗೆ ಹೆಚ್ಚು ತಿಳಿಯುವುದಿಲ್ಲ. ಅವರು ಶ್ರೀ ವ್ಯಾಸತೀರ್ಥರ ಪೂರ್ವಾಶ್ರಮದ ಕಡೆಯ ಸಂಬಂಧಿ ಎಂದು ಒಂದು ಅಭಿಪ್ರಾಯವಿದೆ. ಅವರು "ಗೌಡ ಸಾರಸ್ವತ" ಕುಟುಂಬದವರು ಎಂದು ಹೇಳುವ ಕೊಂಕಣಿ ಭಾಷೆಯ ವಿಡಿಯೋ ಒಂದು ಪ್ರಚಲಿತವಿದೆ. ಸ್ನೇಹಿತರೊಬ್ಬರು ಅದನ್ನು ಮೊನ್ನೆ ಕಳಿಸಿಕೊಟ್ಟಿದ್ದಾರೆ. ಅದಕ್ಕೆ ಯಾವುದೇ ಆಧಾರ ಸಿಗುವುದಿಲ್ಲ. ಇದು ಐದು ನೂರು ವರುಷ ಕಳೆದ ಮಾತು. ಆಧಾರ ಎಲ್ಲಿ ಸಿಗಬೇಕು? ಆಗ ಈಗಿನಂತೆ ಅಧಿಕೃತವಾಗಿ ದಾಖಲೆಗಳು ಇರಲಿಲ್ಲವಲ್ಲ.

"ಹಂಸ-ಕ್ಷೀರ ನ್ಯಾಯ", "ಬೀಜ-ವೃಕ್ಷ ನ್ಯಾಯ", "ಕಾಕ-ತಾಳ ನ್ಯಾಯ" ಮುಂತಾದುವುಗಳಂತೆ "ಪುತ್ರಿಕಾ-ಪುತ್ರ ನ್ಯಾಯ" ಎಂದು ಒಂದುಂಟು. ಹೆಣ್ಣು ಮಗಳು ಪಡೆದಿದ್ದು, ಮಗನು ಇಲ್ಲದ ದಂಪತಿಗಳು ಆ ಕಾರಣಕ್ಕಾಗಿ ಅವಳ ವಿವಾಹದ ಸಮಯದಲ್ಲಿ ಅಳಿಯನಲ್ಲಿ ಒಂದು ಬೇಡಿಕೆ ಇಡುತ್ತಿದ್ದರು. ಮುಂದೆ ಆ ದಂಪತಿಗಳಿಗೆ ಹುಟ್ಟುವ ಮೊದಲ ಗಂಡು ಶಿಶುವನ್ನು ತಮಗೆ ದತ್ತು ಕೊಡಬೇಕೆಂದು ಕೇಳುವುದು. ಹೀಗೆ ದತ್ತು ಬಂದ ಮೊಮ್ಮಗನನ್ನು ಮಗ ಎಂದು ಸ್ವೀಕರಿಸುವುದು. ಇದನ್ನು "ಪುತ್ರಿಕಾ-ಪುತ್ರ ನ್ಯಾಯ" ಅನ್ನುತ್ತಾರೆ. ನಮ್ಮ ಬಾಲ್ಯದಲ್ಲಿ ಈ ರೀತಿಯ ಕೆಲವು ಪ್ರಕರಣಗಳನ್ನು ನೋಡಿದ್ದೇವೆ. ಈಗ ಈ ರೀತಿಯ ಉದಾಹರಣೆಗಳು ಸಿಗುವುದಿಲ್ಲ.

ಅನೇಕ ಮಕ್ಕಳಿಲ್ಲದ ದಂಪತಿಗಳು ಆಗಿನ ತಪಸ್ವಿ ಯತಿಗಳನ್ನು ಸಂತಾನಕ್ಕಾಗಿ ಕೋರಿಕೊಳ್ಳುತ್ತಿದ್ದರು. ಹೀಗೆ ಸಂತಾನ ಆಗಲೆಂದು ವರಕೊಟ್ಟ ಯತಿಗಳು ಮೊದಲ ಮಗನನ್ನು ತಮಗೆ ಕೊಡಬೇಕೆಂದೂ, ಮುಂದೆ ಹುಟ್ಟುವ ಮಗುವನ್ನು ಆ ದಂಪತಿಗಳು ಸಂತಾನವಾಗಿ ಇಟ್ಟುಕೊಳ್ಳಬಹುದೆಂದು ಸೂಚಿಸುತ್ತಿದ್ದ ಪದ್ಧತಿ ಇತ್ತು. ಈ ರೀತಿ ಪಡೆದುಕೊಂಡ ಶಿಶುವಿಗೆ ಸನ್ಯಾಸ ಕೊಟ್ಟು ಉತ್ತರಾಧಿಕಾರಿ ಪಡೆದುಕೊಂಡ ಉದಾಹರಣೆಗಳು ಅಲ್ಲಲ್ಲಿ ಸಿಗುತ್ತವೆ. ಶ್ರೀ ವಿಷ್ಣು ತೀರ್ಥರು ಹೀಗೆ ಶ್ರೀ ವ್ಯಾಸರಾಜರಿಗೆ ದೊರೆತವರು ಎಂದು ಒಂದು ಅಭಿಪ್ರಾಯ ಇದೆ. ಅವರ ಬಾಲ್ಯದ ಹೆಸರು ವಿಠಲಾಚಾರ್ಯ ಎಂಬುದಾಗಿತ್ತು ಎಂದು ತಿಳಿದುಬರುತ್ತದೆ. ಏಳು-ಎಂಟು ವರುಷದವರಾಗಿದ್ದ ಸಮಯದಲ್ಲೇ ಸನ್ಯಾಸ ಆಗಿದ್ದಿತಂತೆ.

******

ಇಲ್ಲಿ, ಪಕ್ಕದಲ್ಲಿ ಒಬ್ಬ ಬಾಲಕ ಕುಳಿತಿದ್ದಾನೆ. ಅವನಿಗೆ ಭೂಗೋಳದ ಬಗ್ಗೆ ಅಪಾರ ಒಲವಿತ್ತು. ಈಗ ಅದು ಚರಿತ್ರೆ ಬಗ್ಗೆ ಹೊರಳಿದೆ. ಚರಿತ್ರೆಯ ಬಗೆಗಿನ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗಳಿಸುವ ಪ್ರಯತ್ನ. ಅಮೇರಿಕ ಸಂಯುಕ್ತ ಸಂಸ್ಥಾನ (USA) ದೇಶದ ಅಧ್ಯಕ್ಷರ ಬಗ್ಗೆ ಅಭ್ಯಾಸ ಮಾಡುತ್ತಿದ್ದಾನೆ. ಸುತ್ತ ಐದಾರು ಪುಸ್ತಕಗಳು ಹರಡಿವೆ. ಇಲ್ಲಿಯವರೆಗೆ 47 ಅಧ್ಯಕ್ಷರು ತಮ್ಮ ತಮ್ಮ ಸರದಿಯಂತೆ ಅಧ್ಯಕ್ಷ ಪದವಿ ಪಡೆದು ದೇಶವನ್ನು ಮುನ್ನಡೆಸಿದ್ದಾರೆ. ಒಬ್ಬರು 13 ವರುಷದಷ್ಟು ದೀರ್ಘಕಾಲ. ಮತ್ತನೇಕರು ಎಂಟೆಂಟು ವರುಷಗಳು. ಕೆಲವರು ನಾಲ್ಕು ವರುಷ. ಹೀಗೆ ಒಟ್ಟು 45 ಮಹನೀಯರು ಈ 47 ಸರದಿಗಳಲ್ಲಿ ಅಧ್ಯಕ್ಷಪೀಠ ಅಲಂಕರಿಸಿದ್ದಾರೆ. ಮೊದಲ ಅಧ್ಯಕ್ಷರಾದ ಶ್ರೀ ಜಾರ್ಜ್ ವಾಶಿಂಗಟನ್ ಅವರಿಂದ ಈಗಿನ ಅಧ್ಯಕ್ಷರಾದ ಶ್ರೀ ಡೊನಾಲ್ಡ್ ಟ್ರಂಪ್ ಅವರತನಕ ಎಲ್ಲ 45 ಹೆಸರುಗಳನ್ನೂ ತಪ್ಪಿಲ್ಲದೆ ಹೇಳುವುದು ಒಂದು ಸವಾಲು. ಅದಕ್ಕೆ ತಯಾರಿ ನಡೆದಿದೆ. 

ಇದು ಕೇವಲ ಮೊದಲ ಹೆಜ್ಜೆ. ಮುಂದೆ ಈ ಎಲ್ಲ ಅಧ್ಯಕ್ಷರ ಕಾಲಗಳಲ್ಲಿ ನಡೆದ ವಿಶೇಷ ಘಟನೆಗಳು ಮತ್ತು ಸಂಬಂಧಪಟ್ಟ ವಿವರಗಳನ್ನು ಕಲಿತು ತಯಾರಾಗಬೇಕು. 45 ಹೆಸರುಗಳ ಎರಡರಷ್ಟು ಆದರೆ? ಅದಕ್ಕಿಂತ ಹೆಚ್ಚು ಆದರೆ? ಅದೆಷ್ಟು ಪ್ರಯಾಸದ ಕೆಲಸ!

ಮಂತ್ರಾಲಯಕ್ಕೆ ಹೋಗಿಬಂದವರಿಗೆ, ಗುರುರಾಯರ ವೃಂದಾವನದ ದರ್ಶನ ಮಾಡಿದವರಿಗೆ ಈಗ ಮುಂದೆ ಹೇಳುವ ವಿಷಯ ಗೊತ್ತು. ಶ್ರೀ ರಾಘವೇಂದ್ರ ರಾಯರ ವೃಂದಾವನದ ಪಕ್ಕದಲ್ಲೇ ಅದೇ ರೀತಿಯ ಇನ್ನೊಂದು ಭವ್ಯ ವೃಂದಾವನ ಇದೆ. ಅದು ಶ್ರೀ ರಾಯರ ನಂತರ ಐದನೆಯವರಾಗಿ ಪೀಠ ಏರಿದ ಶ್ರೀ ವಾದೀಂದ್ರ ತೀರ್ಥ ಶ್ರೀಪಾದರದ್ದು. ಅಂದರೆ, ಶ್ರೀ ವಿಜಯೀ೦ದ್ರ  ತೀರ್ಥ ಗುರುಗಳ ನಂತರ ಏಳನೆಯವರು. ಅವರು 37 ಶ್ಲೋಕಗಳ "ಗುರುಗುಣಸ್ತವನ" ಎಂಬ ಸ್ತೋತ್ರ ಗ್ರಂಥ ರಚಿಸಿದ್ದಾರೆ. ಅದರ ಪ್ರಾರಂಭದಲ್ಲಿ, ಎಂಟನೆಯ ಶ್ಲೋಕದಲ್ಲಿ, ಶ್ರೀ ವಿಜಯೀ೦ದ್ರ ತೀರ್ಥರ ಬಗ್ಗೆ ಹೇಳುತ್ತಾ "ಚತುರಧಿಕ ಶತ ಗ್ರಂಥರತ್ನ ಪ್ರಣೇತಾ" ಎಂದು ವಿವರಿಸುತ್ತಾರೆ. ಶ್ರೀ ವಿಜಯೀ೦ದ್ರ ತೀರ್ಥರು 104 ಗ್ರಂಥ ರತ್ನಗಳನ್ನು ರಚಿಸಿದ ಮಹಾನುಭಾವರು! 

ಮಾಧ್ವ ಸಿದ್ಧಾಂತ ಗ್ರಂಥಗಳ ಅಧ್ಯಯನ ಮಾಡುವ ವಿದ್ವಾಂಸರಲ್ಲಿ ಒಂದು ನಾಣ್ನುಡಿ ಇದೆ. ಆ ವಿಶಾಲ ವಾಗ್ಮಯದ ಆಳ-ಅಗಲಗಳ ಮಾತು ಅತ್ತ ಇಡೋಣ. "ಶ್ರೀ ವಿಜಯೀ೦ದ್ರ ತೀರ್ಥರ 104 ಗ್ರಂಥಗಳ ಹೆಸರು ತಪ್ಪಿಲ್ಲದೆ ಹೇಳು. ಹಾಗೆ ಹೇಳಿದರೆ ಸಾಕು. ಇಷ್ಟು ಹೇಳಿದರೆ ನೀನು ಪಂಡಿತ ಎಂದು ನಾವು ಒಪ್ಪುತ್ತೇವೆ" ಎಂದು. 

ಅಷ್ಟು ಗ್ರಂಥಗಳ ಹೆಸರು ನೆನಪಿಡುವುದೇ ಕಷ್ಟ. ಇನ್ನು ಅಷ್ಟು ಗಾಢ ಪಾಂಡಿತ್ಯಪೂರ್ಣ ಕೃತಿಗಳ ರಚನೆಯ ಬಗೆಗೆ ಏನು ಹೇಳುವುದು? ಈ ಜನಪ್ರಿಯ ಹೇಳಿಕೆ ಶ್ರೀ ವಿಜಯೀ೦ದ್ರ ತೀರ್ಥರ ವಿದ್ವತ್ತಿಗೆ ಮತ್ತು ಕೃತಿ ರಚನಾ ಕೌಶಲ್ಯಕ್ಕೆ ಒಂದು ಕನ್ನಡಿ ಹಿಡಿದಂತೆ.

*******

ಶ್ರೀ ವಿಜಯೀ೦ದ್ರರು (1517-1614) ಕುಂಭಕೋಣಕ್ಕೆ ಬಂದಾಗ ಅದು ಅನೇಕ ವಿದ್ವಾಂಸರ ಬೀಡಾಗಿತ್ತು. ಅಷ್ಟು ಪಂಡಿತ ಮಂಡಳಿಯ ನಡುವೆ ಹೊಸಬರೊಬ್ಬರು ಬಂದು ತಳ ಊರುವುದು ಸಾಮಾನ್ಯ ಮಾತಾಗಿರಲಿಲ್ಲ. ಶ್ರೀ ಅಪ್ಪಯ್ಯ ದೀಕ್ಷಿತರು (1520-1593) ಅದ್ವೈತ ಸಿದ್ಧಾಂತ ಪ್ರತಿಪಾದಕರಲ್ಲಿ ಒಂದು ಬಲು ದೊಡ್ಡ ಹೆಸರು. ಇಬ್ಬರೂ ಸಮ ವಯಸ್ಕರು. ಜೀವನ ಪೂರ್ತಿ ಜೊತೆಯಲ್ಲಿ ಬಾಳಿದವರು. ಸುಮಾರು ಐವತ್ತು ವರುಷ ಕಾಲ ತಮ್ಮ ತಮ್ಮ ಸಿದ್ಧಾಂತವನ್ನು ಎತ್ತಿ ಹಿಡಿದ ಮಹನೀಯರು. ಒಬ್ಬರು ಪ್ರಬಲ ದ್ವೈತಿ. ಇನ್ನೊಬ್ಬರು ಅಂತೆಯೇ ಪ್ರಬಲ ಅದ್ವೈತಿ. ಆದರೂ ತಮ್ಮ ತಮ್ಮ ಸಿದ್ಧಾಂತವನ್ನು ಬಿಡದೆ ಸಾಮರಸ್ಯದಿಂದ ಬಾಳಿದವರು. 

ಸುಮಾರು ನಲವತ್ತು ವರುಷಗಳ ಹಿಂದೆ ಕುಂಭಕೋಣಕ್ಕೆ ಹೋಗಿದ್ದಾಗ ಅಲ್ಲಿನ ಹಿರಿಯರು ಹೇಳಿದ ಮಾತು. ಕುಂಭಕೋಣ ಮಠ ಮತ್ತು ಶ್ರೀ ಅಪ್ಪಯ್ಯ ದೀಕ್ಷಿತರ ಮನೆ ಅಕ್ಕ-ಪಕ್ಕದಲ್ಲಿ. ಮಠದ ಪಕ್ಕದಲ್ಲಿ ದೀಕ್ಷಿತರ ಮನೆ ಎಂದು ತೋರಿಸುತ್ತಿದ್ದರು. ಇವರು ಸನ್ಯಾಸಿಗಳು. ಅವರು ಗೃಹಸ್ಥರು. ಇವರು ದ್ವೈತಿಗಳು. ಅವರು ಅದ್ವೈತಿಗಳು. ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿಶಾಲ ಗ್ರಂಥ ರಾಶಿ ನಿರ್ಮಾಣ ಮಾಡಿದವರು. ಇವರಿಗೆ ವಿಜಯನಗರದ ಅರಸರ ಆಸ್ಥಾನದಲ್ಲಿ ಗುರುಪೀಠ. ಅವರಿಗೆ ವೆಲ್ಲೂರಿನ ಚಿನ್ನಬೋಮ್ಮ ನಾಯಕನ ಆಸ್ಥಾನದಲ್ಲಿ ವಿಶೇಷ ಮನ್ನಣೆ. ಹೀಗೆ ಸಮಾನಾಂತರವಾದ ಜೀವನಗಳು.

ಇವರಿಬ್ಬರ ಮೊದಲ ಭೇಟಿ ಬಗ್ಗೆ ಒಂದು ವಿಶೇಷ ಪ್ರಸಂಗ ಹೇಳುತ್ತಾರೆ. ಒಂದು ಕಾಡಿನ ಕಡಿದಾದ ದಾರಿ. ಇತ್ತಕಡೆಯಿಂದ ಶ್ರೀ ವಿಜಯೀ೦ದ್ರರೂ, ಅತ್ತಕಡೆಯಿಂದ ಶ್ರೀ ಅಪ್ಪಯ್ಯ ದೀಕ್ಷಿತರೂ ಅವರವರ ಶಿಷ್ಯರ ಸಂಗಡ ಬಂದು ಎದುರುಬದರಾದರು. ಆ ದಾರಿಯಲ್ಲಿ ಒಬ್ಬರು ಮಾತ್ರ ನಡೆದು ಹೋಗಬಹುದು. ಇಬ್ಬರಲ್ಲಿ ಒಬ್ಬರು ಹಿಂದೆ ಸರಿದು ದಾರಿ ಬಿಡಬೇಕು. "ಯಾರು ಹಿಂದೆ ಸರಿಯಬೇಕು?" ಎಂದು ಪ್ರಶ್ನೆ ಬಂದಿತು. ಜೊತೆಯಲ್ಲಿದ್ದ ವಿದ್ವಾಂಸರೊಬ್ಬರು "ಈ ಕಾಡನ್ನು ವರ್ಣಿಸಿ ಒಂದು ವಾಕ್ಯವನ್ನು ಇಬ್ಬರೂ ಹೇಳಲಿ. ಯಾವುದು ಚೆನ್ನವಿದೆ ಎಂದು ನಾವೆಲ್ಲಾ ಒಪ್ಪುತ್ತೇವೋ, ಅವರಿಗೆ ಇನ್ನೊಬ್ಬರು ದಾರಿ ಬಿಡಲಿ" ಎಂದು ಸೂಚಿಸಿದರು.  

ಮೊದಲು ಶ್ರೀ ಅಪ್ಪಯ್ಯ ದೀಕ್ಷಿತರು ಹೇಳಿದರು: 
ಅಸ್ತ್ಯರಣ್ಯಂ ತರಣ್ಯ೦ಘರಿ ತರಣ್ಯನ್ತರ್ಧಿ ಪಾದಪಂ 

"ಈ ಕಾಡಿನಲ್ಲಿ ಬೆಳೆದಿರುವ ಹೆಮ್ಮರಗಳು ಸೂರ್ಯನ ಕಿರಣಗಳೇ ಭೂಮಿಗೆ ಬೀಳದಂತೆ ತಡೆದಿವೆ"  ಎಂದು ಅರ್ಥ. ಮರಗಳು ಕಾಲಿನಿಂದ (ಪಾದದಿಂದ-ಅಂದರೆ ಬೇರಿನಿಂದ) ನೀರು ಕುಡಿಯುವುದರಿಂದ ಪಾದಪಗಳು. ತರಣಿ ಅಂದರೆ ಸೂರ್ಯ. ಹೀಗೆ ಪ್ರಾಸಗಳಿಂದ ಕೂಡಿದ ವಿಶೇಷ ರಚನೆ. 

ಈಗ ಶ್ರೀ ವಿಜಯೀ೦ದ್ರರ ಸರದಿ: 
ದರೀಸುಪ್ತ ಝರೀದತ್ತ ಪರೀರಂಭ ಸರೀಸೃಪ೦

"ಕಾಡಿನ ಗುಹೆಗಳಲ್ಲಿ ನಾಗ-ನಾಗಿಣಿಯರು ಒಂದಕ್ಕೊಂದು ಹೆಣೆದುಕೊಂಡು ನಿರ್ಭೀತಿಯಿಂದ ಮಲಗಿವೆ" ಎಂದು ಅರ್ಥ. ದರಿ ಅಂದರೆ ಗುಹೆಗಳು. ಗುಹೆಗಳಲ್ಲಿ ಇರುವ ಸರ್ಪಗಳು. ಹೀಗೆ ಪ್ರಾಸಗಳಿಂದ ಕೂಡಿದ ವಿವರಣೆ. 

ಅಂದಿನಿಂದ ಪ್ರಾರಂಭವಾದ ಅವರಿಬ್ಬರ ಜೊತೆ ಮುಂದೆ ಅನೇಕ ದಶಕಗಳು ಮುಂದುವರೆಯಿತು.

******

ಶ್ರೀ ವಿಜಯೀ೦ದ್ರ ತೀರ್ಥರು ಚತುಷಷ್ಠಿ ಕಲೆಗಳಲ್ಲಿ (ಅರವತ್ತನಾಲ್ಕು ವಿದ್ಯೆಗಳು) ಪರಿಣಿತರು. (ಇವುಗಳಲ್ಲಿ ಕೆಲವು ವಿದ್ಯೆಗಳು. ಮತ್ತೆ ಕೆಲವು ಕಲೆಗಳು). ಹೀಗೆ ಪ್ರಸಿದ್ಧರಾದವರನ್ನು ಪರೀಕ್ಷಿಸಲು ಒಬ್ಬ ದೊಂಬರಾಟ ಮಾಡುವವನು ಬಂದನಂತೆ. "ನೀವು ಅಷ್ಟು ವಿದ್ಯೆ ಕಲಿತಿದ್ದರೆ ನನ್ನಂತೆ ಹಗ್ಗದ ಮೇಲೆ ನಡೆದು ತೋರಿಸಿ" ಎಂದು ಸವಾಲು ಹಾಕಿದನಂತೆ. "ಆಗಲಿ. ಮೊದಲು ನಿನ್ನ ವಿದ್ಯೆ ತೋರಿಸು" ಅಂದರಂತೆ ಶ್ರೀ ವಿಜಯೀ೦ದ್ರರು. ಎತ್ತರದಲ್ಲಿ ಎರಡು ಗೂಟಗಳಿಗೆ ಹಗ್ಗ ಕಟ್ಟಿ ದೊಂಬರವನು ನಡೆದು ತೋರಿಸಿದ. ಈಗ ವಿಜಯೀ೦ದ್ರರ ಸರದಿ.

"ನಮಗೆ ನಿನ್ನ ಹಗ್ಗ ತುಂಬಾ ದಪ್ಪ. ಸಣ್ಣದು ಬೇಕು" ಅಂದರಂತೆ. ಆಶ್ಚರ್ಯ ಚಕಿತನಾದ ದೊಂಬರವನು "ನಿಮಗೆ ಎಂತಹ ಹಗ್ಗ ಬೇಕು?" ಎಂದು ಕೇಳಿದನಂತೆ. "ಬಾಳೆಯ ನಾರು ಆಗಬಹುದು" ಅಂದರಂತೆ. ಬಾಳೆಯ ನಾರಿನಮೇಲೆ ನಡೆದು ತೋರಿಸಿದರಂತೆ.

"ಅಣಿಮಾದಿ ಅಷ್ಟ ಸಿದ್ಧಿಗಳು" ಎಂದು ಕೇಳಿದ್ದೇವೆ. "ಅಣಿಮಾ" ಅಂದರೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು. ಹೀಗೆ ಸಿದ್ಧಿ ಪಡೆದವರು ದೇಹದ ತೂಕವನ್ನು ಇರುವೆಯಷ್ಟು ಇರುವಂತೆ ಮಾಡಿಕೊಳ್ಳಬಲ್ಲರಂತೆ. ಹೀಗೆ ಮಾಡಿಕೊಂಡು ಬಾಳೆಯ ನಾರಿನ ಮೇಲೆ ನಡೆದು ತೋರಿಸಿದರಂತೆ!

******

ಅನೇಕ ರೀತಿಯಿಂದ ಅವರನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಲು ಪ್ರತಿವಾದಿಗಳು ಪ್ರಯತ್ನಿಸಿದರು. "ನಿಮ್ಮ ಬ್ರಹ್ಮಚರ್ಯ ಪರೀಕ್ಷಿಸಬೇಕು" ಎಂದು ಒಂದು ತಂಡ ಬಂದಿತು. "ಹೇಗೆ ಪರೀಕ್ಷಿಸುತ್ತೀರಿ?" ಎಂದು ಕೇಳಿದರೆ, "ನಾಲ್ವರು ವಾರಾಂಗನೆಯರು ಬಂದು ನಿಮಗೆ ಅಭ್ಯಂಜನ ಮಾಡಿಸುತ್ತಾರೆ. ನಿಮಲ್ಲಿ ಯಾವುದೇ ವಿಕಾರ ಆಗದಿದ್ದರೆ ಆಗ ಒಪ್ಪುತ್ತೇವೆ" ಅಂದರು. ಪರೀಕ್ಷೆ ದಿನ ಬಂತು. ಕೌಪೀನ ಧರಿಸಿ ಶ್ರೀ ವಿಜಯೀ೦ದ್ರರು ಕುಳಿತರು.

ವಾರಾಂಗನೆಯರು ಬಂದರು. ಅವರ ದೇಹಕ್ಕೆ ಎಣ್ಣೆ ಹಚ್ಚಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ ದೂರ ನಿಂತರು. "ಏಕೆ? ಮುಂದುವರೆಸಿ" ಅಂದರು ಅವರನ್ನು ಕರೆತಂದವರು. "ಆಗುವುದಿಲ್ಲ. ಮೊದಲು ಎಣ್ಣೆ ಹಚ್ಚಿದೆವು. ಈಗ ಅವರ ಮೈ ಮುಟ್ಟಿದರೆ ಛಳಕು ಹೊಡೆದಂತೆ ಆಗುತ್ತಿದೆ. ನಮ್ಮಿಂದ ಇದು ಸಾಧ್ಯವಿಲ್ಲ" ಎಂದು ಹೇಳಿ, ನಮಸ್ಕರಿಸಿ ಹೊರಟುಹೋದರು. 

ಪರೀಕ್ಷೆಗೆ ಎಂದು ಬಂದವರು ಪರೀಕ್ಷೆಗೆ ಕುಳಿತವರನ್ನು ಎಬ್ಬಿಸಿದರು. ಸ್ವಾಮಿಗಳು "ಅಸಂಪ್ರಜ್ಞಾತ ಸಮಾಧಿ" ಹೊಂದಿ ಕುಳಿತಿದ್ದರು. ಮನಸ್ಸು ಧ್ಯಾನದಲ್ಲಿ ಲೀನವಾಗಿತ್ತು. "ಎಲ್ಲಿ? ಪರೀಕ್ಷಕರು ಬರಲಿಲ್ಲವೇ?" ಎಂದರು. ಪರೀಕ್ಷಕರು ಬಂದು, ಪರೀಕ್ಷೆಯ ಪ್ರಯತ್ನ ಮಾಡಿ, ಹೊರಟುಹೋಗಿ ಎಷ್ಟೋ ಹೊತ್ತಾಗಿತ್ತು. 

ಹೀಗೆ ಸಮಾಧಿಯಲ್ಲಿ ಕುಳಿತವರು "ನಾರಾಯಣ" ಅನ್ನುವ ಪದದ ಅರ್ಥಗಳನ್ನು ಚಿಂತಿಸುತ್ತಿದ್ದರಂತೆ. ಸಮಾಧಿಯಿಂದ ಏಳುವವರೆಗೆ 125 ಅರ್ಥಗಳು ಹೊಳೆದಿತ್ತು. ಅದನ್ನೇ "ನಾರಾಯಣ ಶಬ್ದಾರ್ಥ ನಿರ್ವಚನಂ" ಎನ್ನುವೆ ಹೆಸರಿನಲ್ಲಿ ಗ್ರಂಥ ಮಾಡಿಟ್ಟಿದ್ದಾರೆ. 

*******
ಇವು ಮೂರು ನಾಲ್ಕು ಉದಾಹರಣೆಗಳು. ಅಷ್ಟೇ. ಇವುಗಳಲ್ಲಿ ಕೆಲವನ್ನು ಕೆಲವರು ಅನುಮಾನಿಸಬಹುದು. "ಹೀಗೆ ಸಾಧ್ಯವೇ?" ಎಂದು ಹೇಳಬಹುದು. ಹಿಂದಿನ ದಿನದ ಸಮಸ್ಯೆಗೆ ಮಾರನೆಯ ದಿನ ಒಂದು ಪ್ರಭಂಧ ಬರೆದು ತಂದು ವಿವರಿಸುವವರನ್ನು ನಾವು ಇಂದೂ ಕಾಣಬಹುದು. ಅನೇಕ ಕಲೆಗಳಲ್ಲಿ ಮೂಗಿನ ಮೇಲೆ ಬೆರಳಿಡುವಂತೆ ಸಾಧನೆ ಮಾಡಿದವರು, ಮಾಡುತ್ತಿರುವವರು ಈಗಲೂ ಇದ್ದಾರಲ್ಲವೇ?

ಕನ್ನಡಲ್ಲಿ "ಅಜೇಯ ವಿಜಯೀ೦ದ್ರರು" ಅನ್ನುವ ಗ್ರಂಥವಿದೆ. ಇಂಗ್ಲಿಷಿನಲ್ಲಿ 968 ಪುಟಗಳ, ಮೂರು ಸಂಪುಟಗಳ "The invincible Saint" ಹೆಸರಿನ ಪುಸ್ತಕವಿದೆ. "ಶ್ರೀ ರಾಘವೇಂದ್ರ ವಿಜಯ", "ಶ್ರೀ ಗುರುಗುಣಸ್ತವನ" ಮತ್ತು ಮಾಧವ ಸೂರಿಗಳ "ವಿಜಯೀ೦ದ್ರ ವಿಜಯ" ಇದೆ. ಆಸಕ್ತರು ವಿವರಣೆಗಳನ್ನು ನೋಡಬಹುದು. 

Sunday, August 9, 2026

ನಮಗೆ ಅವರೇ ಬೇಕು!


ಕಳೆದ ವಾರ ಧಾರವಾಡದಲ್ಲಿ ನಡೆದ ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮ ತೀರ್ಥರ ಚಾತುರ್ಮಾಸ್ಯ ಪುರ ಪ್ರವೇಶ ಸಂದರ್ಭದಲ್ಲಿ ಆ ಪ್ರದೇಶದ ಸಂಸತ್ ಸದಸ್ಯರೂ, ಕೇಂದ್ರ ಸರ್ಕಾರದ ಮಂತ್ರಿಗಳೂ ಆದ ಶ್ರೀ ಪ್ರಹ್ಲಾದ್ ಜೋಶಿ ಅವರ ಸ್ವಾಗತ ಭಾಷಣದ ವಿಡಿಯೋವೊಂದು ಹೆಚ್ಚಿನ ಪ್ರಚಾರ ಪಡೆದಿದೆ. ಈಗಿನ ಭಾಷೆಯಲ್ಲಿ ಹೇಳಿದರೆ "ವೈರಲ್" ಆಗಿದೆ. "ಈ ಸಂದರ್ಭದಲ್ಲಿ ನಾನು ಅಲ್ಲಿರಬೇಕೆಂದು ಅಭಿಲಾಷೆ ಇತ್ತು. ಆದರೆ ಈಚಿನ ಕೆಲವು ವಿದ್ಯಮಾನಗಳಿಂದ ಮತ್ತು ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಅಲ್ಲಿರಲು ಆಗಲಿಲ್ಲ. ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಶುಭಾಶಯಗಳು" ಮುಂತಾಗಿ ಹೇಳಿರುವ ವಿಡಿಯೋ ಅದು. ಶ್ರೀ ಪ್ರಹ್ಲಾದ ಜೋಶಿ ಅವರಿಗೆ ಹೆಚ್ಚಿನ ಜವಾಬ್ದಾರಿಯಾಗಿ ವಿದ್ಯಾ ಖಾತೆಯನ್ನು ಪ್ರಧಾನಮಂತ್ರಿಗಳು ಈಚೆಗೆ ವಹಿಸಿರುವುದನ್ನು ಇಲ್ಲಿ ಸ್ಮರಿಸಬಹುದು. 

"ವೈರ" ಅಥವಾ "ವೈರಸ್" ಎನ್ನುವ ಪದಕ್ಕೆ ಭಯಬೀಳುವ ಪರಿಸ್ಥಿತಿ ಒಂದು ಕಾಲದಲ್ಲಿ ಇತ್ತು. ಈಗ ವಿಡಿಯೋಗಳು ವೈರಲ್ ಆಗಲಿ ಎಂದು ಕೆಲವರು ಪ್ರಾಥಿಸುವ ಕಾಲ ಬಂದಿದೆ!

ಈ ಸಂದರ್ಭದಲ್ಲಿ ಮಿತ್ರರೊಬ್ಬರು ಒಂದು ಪ್ರಶ್ನೆ ಕೇಳಿದ್ದಾರೆ. "ಉತ್ತರಾದಿ ಮಠ" ಎನ್ನುವುದು ಬಹಳ ಪ್ರಸಿದ್ಧಿ ಪಡೆದಿದೆ. ಈ ಹೆಸರು ಹೇಗೆ ಬಂತು? "ಪೂರ್ವಾದಿ ಮಠ" ಒಂದು ಇದೆಯೇ?" ಎನ್ನುವುದು ಆ ಪ್ರಶ್ನೆ. 
******

ಶ್ರೀ ಮಧ್ವಾಚಾರ್ಯರು ಕನ್ನಡನಾಡಿನ ಉಡುಪಿಯಲ್ಲಿ ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಅಲ್ಲಿನ ಪೂಜಾದಿಗಳ ವ್ಯವಸ್ಥೆಯನ್ನು ಚ್ಯುತಿಯಿಲ್ಲದೆ ಮುಂದುವರೆಸಲು ಎಂಟು ಮಠಗಳನ್ನು ಸ್ಥಾಪಿಸಿ ಯತಿಗಳನ್ನು ನೇಮಕ ಮಾಡಿದರು. ಇವು "ಅಷ್ಟ ಮಠಗಳು" ಎಂದು ಪ್ರಸಿದ್ಧಿ ಪಡೆದಿವೆ. ಇದೇ ರೀತಿ ಅವರ ನೇರ ಶಿಷ್ಯರಾದ ಶ್ರೀ ಪದ್ಮನಾಭ ತೀರ್ಥ ಮುಂತಾದವರು ದ್ವೈತ ಮತ ಪ್ರಸಾರಕ್ಕಾಗಿ ಘಟ್ಟದ ಮೇಲಿನ ಪ್ರದೇಶಗಳಿಗೆ ಮಠವನ್ನು ಮುಂದುವರೆಸಿಕೊಂಡು ಬಂದರು. ಶ್ರೀ ಪದ್ಮನಾಭ ತೀರ್ಥರ ನಂತರ ಕ್ರಮವಾಗಿ ಶ್ರೀ ನರಹರಿ ತೀರ್ಥರು, ಶ್ರೀ ಮಾಧವ ತೀರ್ಥರು, ಶ್ರೀ ಅಕ್ಷೋಭ್ಯ ತೀರ್ಥರು, ಶ್ರೀ ಜಯತೀರ್ಥರು ಮತ್ತು ಶ್ರೀ ವಿದ್ಯಾಧಿರಾಜ ತೀರ್ಥರು ನಡೆಸಿಕೊಂಡು ಬಂದರು. ಶ್ರೀ ವಿದ್ಯಾಧಿರಾಜ ತೀರ್ಥರ ಕಾಲದಲ್ಲಿ ಅವರ ಇಬ್ಬರು ಪ್ರಮುಖ ಶಿಷ್ಯರಾದ ಶ್ರೀ ರಾಜೇಂದ್ರ ತೀರ್ಥರು ಮತ್ತು ಶ್ರೀ ಕವೀಂದ್ರ ತೀರ್ಥರು, ಇವರುಗಳಿಂದ ಎರಡು ಶಾಖೆಗಳು ಆದವು. 

ಯಾವುದೇ ಒಂದು ವಸ್ತುವನ್ನು ಎರಡು ಭಾಗ ಮಾಡಿದಾಗ ಸಂಸ್ಕೃತದಲ್ಲಿ ಅವನ್ನು ಪೂರ್ವ ಭಾಗ ಮತ್ತು ಉತ್ತರ ಭಾಗ ಎಂದು ವ್ಯವಹರಿಸುವುದು ವಾಡಿಕೆ. ಇಂಗ್ಲಿಷಿನಲ್ಲಿ First Half ಮತ್ತು Second Half ಅನ್ನುವ ರೀತಿ. ಈ ಕಾರಣದಿಂದ ಶ್ರೀ ರಾಜೇಂದ್ರ ತೀರ್ಥರ ಪರಂಪರೆ "ಪೂರ್ವಾದಿ ಮಠ" ಎಂದು ಪ್ರಸಿದ್ಧವಾಯಿತು. ಶ್ರೀ ಕವೀಂದ್ರ ತೀರ್ಥರ ಪರಂಪರೆ "ಉತ್ತರಾದಿ ಮಠ" ಎಂದು ಪ್ರಸಿದ್ಧವಾಯಿತು. 

ಶ್ರೀರಾಮಚಂದ್ರನು ಜನಿಸಿದುದು ಸೂರ್ಯವಂಶದಲ್ಲಿ. ಅನೇಕ ಪ್ರಸಿದ್ಧ ರಾಜರು ಸೂರ್ಯವಂಶದಲ್ಲಿ ರಾಜ್ಯಭಾರ ಮಾಡಿದರು. ಮುಂದೆ ಬಂದ ರಘು ಮಹಾರಾಜ ತನ್ನ ಪೂರ್ವಜರಿಗಿಂತಲೂ ಹೆಚ್ಚು ಪ್ರಸಿದ್ಧನಾದನು. ಲೋಕ ವ್ಯವಹಾರದಲ್ಲಿ ಪ್ರಾರಂಭದಲ್ಲಿ ಮಕ್ಕಳನ್ನು "ಇಂತಹವರ ಮಗ" ಎಂದು ಗುರುತಿಸುತ್ತಾರೆ. ಮುಂದೆ ಮಗನು ಹೆಚ್ಚು ಪ್ರಸಿದ್ಧ ಆದಾಗ ಅವನ ತಂದೆಯನ್ನು "ಇಂತಹವರ ತಂದೆ" ಎನ್ನುತ್ತಾರೆ! ಸೂರ್ಯವಂಶದಲ್ಲಿಯೂ ಹೀಗೆಯೇ ಆಯಿತು. ಕಾಳಿದಾಸ ಮಹಾಕವಿಯ ರಘುವಂಶ ಮಹಾಕಾವ್ಯ ಇದನ್ನೇ ವಿವರಿಸುತ್ತದೆ. ರಘು ಮಹಾರಾಜನ ನಂತರ ಅವನ ಮುಂದಿನವರನ್ನು "ರಘು ವಂಶದವರು" ಎಂದು ಹೇಳುವುದು ರೂಢಿ ಆಯಿತು. ಈ ಕಾರಣದಿಂದ ಶ್ರೀರಾಮಚಂದ್ರನು ರಾಘವ ಎಂದೂ ಪ್ರಖ್ಯಾತನಾದನು.

ಪೂರ್ವದಿ ಮಠ ಪರಂಪರೆಯಲ್ಲಿ ಮುಂದೆ ಶ್ರೀ ವ್ಯಾಸತೀರ್ಥರು ಪೀಠಾಧಿಪತಿಗಳಾದರು. ವಿಜಯನಗರ ಅರಸರಾದವರಿಗೆ ರಾಜಗುರುಗಳಾಗಿ, ಅನೇಕ ಗ್ರಂಥಗಳ ಕರ್ತೃವಾಗಿ, ವಿಶೇಷ ಪಾಂಡಿತ್ಯ, ಸಮಾಜ ಸೇವೆ, ಮುಂತಾದುವುಗಳಿಂದ ಅಧಿಕ ಮನ್ನಣೆಗೆ ಪಾತ್ರರಾದರು. ಶ್ರೀ ವ್ಯಾಸ ತೀರ್ಥ ಎಂದು ಹೆಸರಿದ್ದರೂ "ವ್ಯಾಸರಾಜ" ಎಂದಾಗಿ ಸನ್ಯಾಸಿಗಳಿಗೂ ರಾಜರಂತೆ ಮೆರೆದರು. ಈ ಕಾರಣದಿಂದ "ಪೂರ್ವಾದಿ ಮಠ" ಆ ಹೆಸರಿನ ಬದಲಾಗಿ "ವ್ಯಾಸರಾಜ ಮಠ" ಎಂದು ಹೆಸರುವಾಸಿ ಆಯಿತು. 
******

ಉತ್ತರಾಧಿ ಮಠದ ಪರಂಪರೆಯಲ್ಲಿ ಶ್ರೀ ಕವೀಂದ್ರ ತೀರ್ಥರ ನಂತರ ಶ್ರೀ ವಾಗೀಶ ತೀರ್ಥರು ಮತ್ತು ಶ್ರೀ ರಾಮಚಂದ್ರ ತೀರ್ಥರು ಮುಂದುವರೆದರು. ಶ್ರೀ ರಾಮಚಂದ್ರ ತೀರ್ಥರಿಗೆ ಶ್ರೀ ವಿಬುಧೆಂದ್ರ ತೀರ್ಥರು ಮತ್ತು ಶ್ರೀ ವಿದ್ಯಾನಿಧಿ ತೀರ್ಥರು ಇಬ್ಬರು ಪ್ರಮುಖ ಶಿಷ್ಯರು. ಆ ಕಾಲದಲ್ಲಿ ಮತ್ತೆ ಎರಡು ಭಾಗವಾಗಿ ಶ್ರೀ ವಿಭುದೇಂದ್ರ ತೀರ್ಥರ ಮೊದಲ ಭಾಗ (ಪೂರ್ವದಿ ಮಠ ಆಗಲೇ ಇದ್ದ ಕಾರಣ) ತಮಿಳುನಾಡಿನ ಕುಂಭಕೋಣಂ ಎಂಬ ಸ್ಥಳದಲ್ಲಿ ಇದ್ದುದರಿಂದ "ಕುಂಭಕೋಣ ಮಠ" ಎಂದು ಹೆಸರುವಾಸಿ ಆಯಿತು. ಶ್ರೀ ವಿದ್ಯಾನಿಧಿ ತೀರ್ಥರ ಪರಂಪರೆ ಉತ್ತರಾದಿ ಮಠ ಎಂದು ಮುಂದುವರೆಯಿತು. 

ಈ ಕುಂಭಕೋಣ ಮಠದಲ್ಲಿ ಕಾಲಕ್ರಮದಲ್ಲಿ ಶ್ರೀ ವಿಭುದೇಂದ್ರ ತೀರ್ಥರ ಸಂತತಿಯಲ್ಲಿ, ಅವರ ನಂತರ ಆರನೆಯವರಾಗಿ ಶ್ರೀ ರಾಘವೇಂದ್ರ ತೀರ್ಥರು ಪಟ್ಟ ಏರಿದರು. ಶ್ರೀ ರಾಘವೇಂದ್ರ ತೀರ್ಥರು ಅತ್ಯಧಿಕ ಹೆಸರುವಾಸಿಯಾಗಿ ಶ್ರೀ ರಾಯರು ಎಂದು ಕರೆಸಿಕೊಳ್ಳುತ್ತಾರೆ. ಅವರು ವೃಂದಾವನಸ್ಥರಾದದ್ದು ಆಂಧ್ರ ಪ್ರದೇಶದ ಮಂತ್ರಾಲಯದಲ್ಲಿ. ಶ್ರೀ ವ್ಯಾಸತೀರ್ಥರ ಕಾರಣ ಪೂರ್ವಾದಿ ಮಠ ವ್ಯಾಸರಾಜ ಮಠ ಆದಂತೆ, ಶ್ರೀ ರಾಘವೇಂದ್ರ ತೀರ್ಥರ ಕಾರಣ ಕುಂಭಕೋಣ ಮಠ "ರಾಯರ ಮಠ" ಅಥವಾ "ಮಂತ್ರಾಲಯ ಮಠ" ಎಂದು ಪ್ರಸಿದ್ಧವಾಗಿದೆ. 

******


ಸುಮಾರು 1535 ಇಸವಿಯ ಕಾಲ. ಶ್ರೀ ವ್ಯಾಸರಾಯರು (1460-1539) ಪೂರ್ವಾದಿ ಮಠದ ಅಧಿಪತಿಯಾಗಿ ಇದ್ದ ದಿನಗಳು. ಅವರ ಬಳಿ ಒಂದು ಬಲು ದೊಡ್ಡ ಶಿಷ್ಯ ವೃಂದವೇ ಇತ್ತು. ವಿಜಯನಗರದ ರಾಜಗುರುಗಳು. ಶ್ರೀ ಕೃಷ್ಣದೇವರಾಯ ಮೊದಲಾದ ರಾಜರು ಅವರ ಆಜ್ಞಾಧಾರಕರಾಗಿ ನಡೆಯುತ್ತಿದ್ದ ಸಮಯ. ಶ್ರೀಕೃಷ್ಣದೇವರಾಯ ರಾಜ್ಯ ಆಳಿದ (1509-1529) ಕಾಲ ಕಳೆದು ಅವನ ತಮ್ಮ ಶ್ರೀ ಅಚ್ಯುತ ದೇವರಾಯ ರಾಜನಾಗಿದ್ದ ಸಮಯ. ಬ್ರಹ್ಮಚಾರಿ ಮತ್ತು ಗೃಹಸ್ಥ ಶಿಷ್ಯರಲ್ಲದೇ ಅನೇಕ ಸನ್ಯಾಸಿ ಶಿಷ್ಯರೂ ಶ್ರೀ ವ್ಯಾಸರಾಜರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಶ್ರೀ ಕೇಶವ ತೀರ್ಥ ಅನ್ನುವ ಹೆಸರಿನಿಂದ ಶ್ರೀ ಕೃಷ್ಣ ತೀರ್ಥ ಅನ್ನುವವರೆಗೆ 24 ಸನ್ಯಾಸಿ ಶಿಷ್ಯರು ಅವರಲ್ಲಿ ಇದ್ದರಂತೆ. 

ಈ ಶಿಷ್ಯರಲ್ಲಿ ಐದನೆಯವರು ಶ್ರೀ ವಿಷ್ಣು ತೀರ್ಥ. ಬಲು ಚೂಟಿ ಬಾಲ ಸನ್ಯಾಸಿ. ಶ್ರೀ ವ್ಯಾಸ ತೀರ್ಥರ ಬಳಿ ಅನೇಕ ಬಾರಿ ಶ್ರೀಮನ್ ನ್ಯಾಯಸುಧಾ ಮತ್ತು ಸರ್ವಮೂಲ ಗ್ರಂಥ ಪಾಠ ಕಲಿತಿದ್ದರೆಂದು ಉಲ್ಲೇಖವಿದೆ. (ಶ್ರೀ ಮಧ್ವಾಚಾರ್ಯರ ಸಮಸ್ತ ಕೃತಿಗಳ ಒಟ್ಟು ಹೆಸರು "ಸರ್ವಮೂಲ ಗ್ರಂಥಗಳು" ಎಂದು). ಒಂದೊಂದು ಬಾರಿ ಪಾಠ ಹೇಳುವಾಗಲೂ ಹೊಸ ಹೊಸ ವಿಷಯಗಳು. ಹೇಳಿದ್ದನ್ನೇ ಹೇಳಿದರು ಅನ್ನುವಂತಿಲ್ಲ. ಶ್ರೀ ವ್ಯಾಸತೀರ್ಥರ ಸಂಸ್ಥಾನ ಪೂಜೆಗೆ ಬೆಳಗಿನ ವೇಳೆ ಹೂವು-ತುಳಸಿ ಹೊಂದಿಸಿಡುವುದು ಈ ವಿಷ್ಣುತೀರ್ಥರ ಕೆಲಸ. ಒಂದು ದಿನ ಬೆಳಗ್ಗೆ ಶ್ರೀ ವ್ಯಾಸತೀರ್ಥರು ಪೂಜಾಸಮಯಕ್ಕೆ ಬಂದು ಕುಳಿತರು. ಎದುರಿಗಿದ್ದ ತುಳಸಿ ಅವರ ಕಣ್ಣಿಗೆ ಬಿತ್ತು.

"ವಿಷ್ಣು ತೀರ್ಥ, ತುಳಸಿ ಎಲ್ಲಿಂದ ತಂದೆ?"
"ನದಿಯ ದಂಡೆಯ ತೋಟದಿಂದ ಗುರುಗಳೇ"
"ಇದು ಆಗಲೇ ಪರಮಾತ್ಮನಿಗೆ ಅರ್ಪಣೆ ಆಗಿದೆ. ಇದು ನಿರ್ಮಾಲ್ಯ"
"ಗಿಡದಿಂದ ನಾನೇ ಬಿಡಿಸಿ ತಂದಿದ್ದು, ಗುರುಗಳೇ"
"ಇರಬಹುದು. ಆದರೆ ಇದು ಅರ್ಪಣೆ ಆಗಿದೆ. ಬೇರೆ ತೆಗೆದುಕೊಂಡು ಬಾ"

ಬೇರೆ ತುಳಸಿ ತಂದು ಪೂಜೆ ನಡೆಯಿತು. (ಒಮ್ಮೆ ಅರ್ಪಿತವಾದ ಹೂವು ಮತ್ತೆ ಬಳಸುವಂತಿಲ್ಲ. ಆದರೆ ತುಳಸಿಗೆ ಹಾಗಲ್ಲ. ಒಮ್ಮೆ ಅರ್ಪಿಸಿದ್ದರೂ, ಬೇರೆ ಇಲ್ಲದಿದ್ದರೆ ಪೂಜಿಸಿದ ತುಳಸಿಯನ್ನು ತೊಳೆದು ಮತ್ತೆ ಉಪಯೋಗಿಸಬಹುದಂತೆ).

"ವಿಷ್ಣು ತೀರ್ಥ, ನದಿ ದಂಡೆಗೆ ಮತ್ತೆ ಹೋಗು. ಸುತ್ತ ಮುತ್ತ ನೋಡು. ಅಲ್ಲಿ ಯಾರೋ ಮಹಾತ್ಮರು ಬಂದಿದ್ದಾರೆ. ಅವರನ್ನು ಕಂಡು, ಇಲ್ಲಿಗೆ ಕರೆದುಕೊಂಡು ಬಾ"

ವಿಷ್ಣು ತೀರ್ಥರು ಮತ್ತೆ ಅಲ್ಲಿಗೆ ಹೋದರು. ಗುರುಗಳು ಹೇಳಿದ್ದಂತೆ ಅಲ್ಲಿ ತೇಜಸ್ವಿಯಾದ ಸನ್ಯಾಸಿ ಒಬ್ಬರು ಕೆಲ ಶಿಷ್ಯರ ಜೊತೆ ಬಿಡಾರ ಮಾಡಿದ್ದರು. ನಯ-ವಿನಯಗಳಿಂದ ಅವರನ್ನು ಕರೆದುಕೊಂಡು ಬಂದರು.

ಬಂದವರು ಕುಂಭಕೋಣ ಮಠದ ಪರಂಪರೆಯಿಂದ ಬಂದ ಶ್ರೀ ಸುರೇಂದ್ರ ತೀರ್ಥರು. ಶ್ರೀ ಸುರೇಂದ್ರ ತೀರ್ಥರು (1504-1575) ಮಹಾತಪಸ್ವಿಗಳು. ಗಿಡಗಳಿದ್ದ ಇಡೀ ತುಳಸಿಯ ವನವನ್ನೇ ಮಾನಸ ಪೂಜೆ ಮಾಡಿ ಪರಮಾತ್ಮನಿಗೆ ಅರ್ಪಿಸಿದ್ದರು. ಅವರು ಉಪವಾಸ ವ್ರತಗಳಲ್ಲಿ ಎತ್ತಿದ ಕೈ. ಮೂರು ಬಾರಿ ಪಾದಚಾರಿಯಾಗಿ ಇಡೀ ದೇಶ ಸಂಚಾರ ಮಾಡಿದ ಧೀಮಂತರು. ವ್ಯಾಸರಾಜರಿಗಿಂತ ವಯಸ್ಸಿನಲ್ಲಿ ನಲವತ್ತು ವರುಷದಷ್ಟು ಚಿಕ್ಕವರು. ಹಾಲು-ಜೇನು ಬೆರೆತಂತೆ ಆಯಿತು.

****** 

ಮಾರನೆಯ ದಿನ ಭಿಕ್ಷಾಸ್ವೀಕಾರದ ಸಮಯ. ಶ್ರೀ ಸುರೇಂದ್ರ ತೀರ್ಥರು ಅಂಗಯ್ಯಲ್ಲಿ ತೀರ್ಥ ಹಿಡಿದು ಹಾಗೆಯೇ ಕುಳಿತರು. ಶ್ರೀ ವ್ಯಾಸತೀರ್ಥರು ನೋಡಿದರು.

"ಎಲ್ಲ ಆಯಿತು. ತಾವು ಧರಿಸಬಹುದು"
"ತಮ್ಮಲ್ಲಿ ನಮ್ಮದೊಂದು ಕೋರಿಕೆ ಇದೆ"
"ನಮ್ಮಲ್ಲಿ ಕೋರಿಕೆಯೇ? ನಿಮಗೆ ಕೊಡಬಹುದಾದದ್ದು ನಮ್ಮಲ್ಲಿ ಏನಿದೆ? ಮಠದ ಪಟ್ಟದ ದೇವರನ್ನು ನಾವು ಕೊಡುವಂತಿಲ್ಲ. ಈ ವಿಷ್ಣು ತೀರ್ಥ ನಮ್ಮ ಪ್ರಿಯ ಶಿಷ್ಯ. ಇವೆರಡನ್ನು ಬಿಟ್ಟು ಬೇರೆ ಏನನ್ನು ಕೇಳಿದರೂ ನಾವು ಕೊಡಲು ಸಿದ್ಧರಿದ್ದೇವೆ. ಸಂಕೋಚವಿಲ್ಲದೆ ಹೇಳಿ"
"ಪಟ್ಟದ ದೇವರನ್ನು ನಾವು ಕೇಳುವುದಿಲ್ಲ. ನಮಗೆ ನಮ್ಮ ಗುರುಗಳಿಂದ ಬಂದಿರುವುದು ಇದೆ"
"ಹಾಗಿದ್ದರೆ ಮತ್ತೇನು?"
"ನಮಗೆ ವಿಷ್ಣು ತೀರ್ಥರನ್ನು ಕೊಡಿ"
"ಇದೇ ಆಗಬೇಕೇ?"
"ನಮಗೆ ಅವರೇ ಬೇಕು"
"ಇದೇ ತಮ್ಮ ಇಚ್ಛೆಯೇ?"
"ಹೌದು. ಹಾಗೆಂದು ನಮಗೆ ಶ್ರೀಹರಿಯ ಪ್ರೇರಣೆ ಆಗಿದೆ"
"ಸರಿ. ಆಗಬಹುದು. ಆಪೋಶನ ಧರಿಸಿರಿ"

ಭಿಕ್ಷಾಸ್ವೀಕಾರ ಆಯಿತು. ಪ್ರಾಯಶಃ ಶ್ರೀ ವ್ಯಾಸತೀರ್ಥರು ವಿಷ್ಣು ತೀರ್ಥರನ್ನು ತಮ್ಮ ಮುಂದೆ ಪಟ್ಟಕ್ಕೆ ಇರಲಿ ಎಂದುಕೊಂಡಿದ್ದಿರಬಹುದು. ಕೊಟ್ಟ ಮಾತಿನಂತೆ ಶ್ರೀ ವಿಷ್ಣುತೀರ್ಥರು ಪೂರ್ವಾದಿ ಮಠದಿಂದ ಕುಂಭಕೋಣ ಮಠಕ್ಕೆ ವರ್ಗಾವಣೆ ಆದರ

ಬಾಲಕರನ್ನು "ದತ್ತು ಸ್ವೀಕಾರ" ಮಾಡುವಾಗ ಹಾಗೆ ದತ್ತು ತೆಗೆದುಕೊಂಡವರು ತಮ್ಮ ಮನೆತನಕ್ಕೆ ತಕ್ಕುದಾಗಿ ಹೆಸರು ಬದಲಿಸುವ ಪದ್ಧತಿ ಉಂಟು. ಮನೆಗೆ ಮದುವೆಯಾಗಿ ಬಂದ ಸೊಸೆಗೆ ಹೀಗೇ ಹೆಸರು ಬಲಿಸುವ ಪದ್ಧತಿ ಅನೇಕ ಮನೆತನಗಳಲ್ಲಿ ಉಂಟು. ಸನ್ಯಾಸಿಗಳನ್ನು ಹೀಗೆ ದತ್ತು ಸ್ವೀಕಾರ ಮಾಡುವಾಗ "ದಂಡ ಪಲ್ಲಟ" ಅನ್ನುವ ಕ್ರಮದಂತೆ ಅವರ ದಂಡ (ಸನ್ಯಾಸಿಗಳು ಹಿಡಿದಿರುವ ಕೋಲು) ಬದಲಾಯಿಸಿ ಸ್ವೀಕರಿಸುತ್ತಾರೆ. 

ಹೀಗೆ ಮಾಡಿದಾಗ ಶ್ರೀ ವಿಷ್ಣು ತೀರ್ಥರು "ಶ್ರೀ ವಿಜಯೇಂದ್ರ ತೀರ್ಥ" ಎಂದು ಹೆಸರು ಪಡೆದು ಕುಂಭಕೋಣ ಮಠದಲ್ಲಿ ಪ್ರಖ್ಯಾತರಾದರು. 104 ಗ್ರಂಥಗಳನ್ನು ರಚಿಸಿ, ಮಹಾನ್ ಪಂಡಿತರನ್ನು ಜಯಿಸಿ ಹೆಸರಿಗೆ ತಕ್ಕಂತೆ ವಿಜಯೇಂದ್ರರೇ ಆದರು.

*******

ಶ್ರೀ ರಾಘವೇಂದ್ರ ರಾಯರ ಸ್ತೋತ್ರದಲ್ಲಿ "ವಿಜಯೇಂದ್ರ ಕರಾಬ್ಜೋತ್ಥಾ ಸುಧೀಂದ್ರ ವರಪುತ್ರಕಃ" ಎಂದು ಹೇಳುತ್ತೇವೆ. ಶ್ರೀ ವಿಜಯೇಂದ್ರ ಗುರುಗಳ ಶಿಷ್ಯರು ಶ್ರೀ ಸುಧೀಂದ್ರ ತೀರ್ಥರು. ಶ್ರೀ ಸುಧೀಂದ್ರ ತೀರ್ಥರ ಶಿಷ್ಯರೇ ಶ್ರೀ ರಾಘವೇಂದ್ರ ಗುರು ಸಾರ್ವಭೌಮರು.