Showing posts with label Alankaara. Show all posts
Showing posts with label Alankaara. Show all posts

Monday, August 17, 2026

ಅರಳಿದ ಬಂಗಾರದ ಮಲ್ಲಿಗೆ


ಬೆಂಗಳೂರು ನಗರದಿಂದ ಉತ್ತರ ದಿಕ್ಕಿನ ಮೂವತ್ತು ಮೈಲಿಗಳ ದೂರದಲ್ಲಿ ದೊಡ್ಡಬಳ್ಳಾಪುರ ಪಟ್ಟಣ ಇರುವುದು ಎಲ್ಲರಿಗೂ ಚಿರಪರಿಚಿತ. ಈ ಪಟ್ಟಣದ ಹೊರವಲಯದಲ್ಲಿ (ಈಗ ಪಟ್ಟಣದಲ್ಲಿಯೇ ಸೇರಿಹೋಗಿದೆ) ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯವಿದೆ. ಈ ದೇವಾಲಯ ಇರುವ ಊರಿಗೆ "ಅರಳುಮಲ್ಲಿಗೆ" ಎಂದು ಹೆಸರು. 

"ಅರಳುಮಲ್ಲಿಗೆ" ಎಂದರೇನು? ಮಲ್ಲಿಗೆ ಬೆಳೆದವರಿಗೆಲ್ಲಾ ಇದು ಗೊತ್ತಿರುವ ವಿಚಾರ. ಮಲ್ಲಿಗೆಯು ಒಂದು ಬಳ್ಳಿಯ ಕುಟುಂಬ ಬಳಗದ ಸಸ್ಯ. ಇದರಲ್ಲಿ ಅನೇಕ ವಿಧಗಳು ಉಂಟು. ಆಸರೆ ಸಿಕ್ಕಿದ ಕಡೆ ಹಬ್ಬಿಕೊಂಡು ಹೋಗುವುದು. ಹೊಲಗಳಲ್ಲಿ ಕೃಷಿ ಮಾಡಿದರೆ ಒಂದು ಪೊದೆಯಂತೆ ಬೆಳೆದು ನಿಲ್ಲುವುದು. ಸಂಜೆಯ ವೇಳೆ ಮೊಗ್ಗು ತುಂಬಿದ ಗಿಡ ಕಾಣಬಹುದು. ಬೆಳಗ್ಗೆ ನೋಡಿದರೆ ಗಿಡದ ತುಂಬಾ ಹೂವುಗಳು. ಮತ್ತೇರಿಸುವ ಸುಗಂಧ. ದೇವರ ಪೂಜೆಗೆ ತುಂಬಾ ಬೇಕಾದ ಹೂವು. ಮದುವೆ-ಮುಂಜಿಗಳಿಗೆ, ಗಣ್ಯರಿಗೆ, ಅತಿಥಿಗಳಿಗೆ ಮಲ್ಲಿಗೆ ಮಾಲೆ ಹಾಕಿ ಸ್ವಾಗತಿಸುವುದು, ಸತ್ಕರಿಸುವುದು ಈಗಲೂ ನಡೆಯುತ್ತದೆ. ಮೈಸೂರಿನ "ದೇವರಾಜ ಮಾರ್ಕೆಟ್" ಒಳಗೆ, ನಾವು ಚಿಕ್ಕವರಿದ್ದಾಗ ಹೂವಿನ ಅಂಗಡಿಗಳ ಮುಂದೆ ಸುಗಂಧ ಸೇವನೆಗಾಗಿ ಸುಮ್ಮನೆ ಈಕಡೆಯಿಂದ ಆಕಡೆ, ಆಕಡೆಯಿಂದ ಈಕಡೆ ಒಮ್ಮೆ ಹೋಗಿ ಬರುತ್ತಿದ್ದುದೂ ಉಂಟು!

ಹಿಂದೆಲ್ಲಾ ಗಂಡು ಮಕ್ಕಳಿಗೂ ಐದಾರು ವರುಷ ಆಗುವವರೆಗೆ ಉದ್ದ ಕೂದಲು ಬೆಳೆಸುತ್ತಿದ್ದರು. ನಂತರ "ಚಂಡಿಕಾ ಕಾರ್ಯಕ್ರಮ" ನಡೆಯುತ್ತಿತ್ತು. "ಚೌಲ" ಅನ್ನುವ ಇದು ಷೋಡಶ (ಹದಿನಾರು) ಕರ್ಮಗಳಲ್ಲಿ ಒಂದಾಗಿತ್ತು. ಕನ್ನಡಲ್ಲಿ "ಮುಡಿ ಕೊಡುವುದು" ಎಂದು ಹೇಳುತ್ತಿದ್ದರು. ಒಂದು ಹಬ್ಬ ಮಾಡಿ, ಕುಲದೇವರ ಮುಂದೆ ಮೊದಲ ಬಾರಿ ತಲೆಯ ಕೂದಲು ಕತ್ತರಿಸುತ್ತಿದ್ದರು. ಅದರ ಹಿಂದಿನ ಒಂದೆರಡು ದಿನಗಳಲ್ಲಿ ಉದ್ದದ ಜಡೆ ಹೆಣೆದು, ಅದಕ್ಕೆ ಮಲ್ಲಿಗೆ, ಕನಕಾಂಬರ, ಸಿಕ್ಕಿದರೆ ತಾಳೆ ಹೂವು, ಮೊದಲಾದ ಹೂವುಗಳಿಂದ "ಮೊಗ್ಗಿನ ಜಡೆ" ಎನ್ನುವ ಹೆಸರಿನಿಂದ ಹೆಣ್ಣು ಮಗುವಿನಂತೆ ಅಲಂಕರಿಸುತ್ತಿದ್ದರು. ಕೆನ್ನೆಯ ಮೇಲೆ ಒಂದು ಕರಿಯ ದೃಷ್ಟಿ ಬೊಟ್ಟು ಇರುತ್ತಿತ್ತು. ನಂತರ ಅವರಿವರ ಮನೆಗೆ ಕರೆದುಕೊಂಡು ಹೋಗಿ ತೋರಿಸಿ, ಫೋಟೋ ಸ್ಟುಡಿಯೋದಲ್ಲಿ ಫೋಟೋ ತೆಗೆಸುತ್ತಿದ್ದರು. ಹೆಣ್ಣು ಮಕ್ಕಳಿಗಂತೂ ಈ "ಮೊಗ್ಗಿನ ಜಡೆ" ಕಾರ್ಯಕ್ರಮ ಆಗಲೇಬೇಕಿತ್ತು. ಕೆಲವರಿಗೆ ಎರಡು-ಮೂರು ಬಾರಿ ಈ ಉತ್ಸವ ಆಗುತ್ತಿದ್ದುದೂ ಉಂಟು. 

******

ಮಲ್ಲಿಗೆ ಗಿಡ ಇರುವ ಕಡೆಗಳಲ್ಲೆಲ್ಲಾ ಸಂಜೆ ಮೊಗ್ಗು ಕಾಣಿಸಿಕೊಂಡು ಮಾರನೆಯ ಬೆಳಿಗ್ಗೆ ಹೂವು ಅರಳಿ ಸುಗಂಧ ಪಸರಿಸುವುದುದು ಇದ್ದದ್ದೇ. ಅಂಥದುದರಲ್ಲಿ ಒಂದು ಊರಿಗೆ ಹೀಗೆ "ಅರಳುಮಲ್ಲಿಗೆ" ಎಂದು ಹೆಸರು ಬರಲು ಕಾರಣ ವಿಶೇಷ ಏನು? ಇದಕ್ಕೆ ಒಂದು ಸೊಗಸಾದ ಇತಿಹಾಸ ಇದೆ. 

ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಪರಮ ಗುರುಗಳಾದ ಶ್ರೀ ವಿಜಯೀ೦ದ್ರ ತೀರ್ಥರ ಬಗ್ಗೆ ಹಿಂದಿನ "ಇಷ್ಟು ಹೇಳಿದರೆ ನೀನು ಪಂಡಿತ!" ಅನ್ನುವ ಸಂಚಿಕೆಯಲ್ಲಿ ಕೆಲವು ಸಂಗತಿಗಳನ್ನು ತಿಳಿದೆವು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು.

ಸುಮಾರು ನಾಲ್ಕು ನೂರು ವರುಷಗಳ ಹಿಂದಿನ ಮಾತು. ಶ್ರೀ ರಾಘವೇಂದ್ರ ಗುರು ರಾಯರ ನೇರ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರು ಕುಂಭಕೋಣ ಮಠದಲ್ಲಿ ಶ್ರೀ ವಿಜಯೀ೦ದ್ರ ತೀರ್ಥರ ಬಳಿ ಸನ್ಯಾಸ ಸ್ವೀಕರಿಸಿ (1596), ಅಲ್ಲಿ ಕೆಲ ಕಾಲ ಹೆಚ್ಚಿನ ವಿದ್ಯಾರ್ಜನೆ ನಡೆಸಿ, ತಮ್ಮ ಗುರು ಪರಂಪರೆಯ ಎಲ್ಲ ಯತಿಗಳಂತೆ ವ್ಯಾಕರಣ, ತರ್ಕ, ಪೂರ್ವ ಮೀಮಾಂಸಾ, ಉತ್ತರ ಮೀಮಾಂಸಾ ಮೊದಲಾದ ಶಾಸ್ತ್ರಗಳಲ್ಲಿ ವಿಶೇಷ ಪಾಂಡಿತ್ಯ ಗಳಿಸಿದ್ದರು. ತಂಜಾವೂರು ಅರಸರ ಆಸ್ಥಾನದಲ್ಲಿ ನಡೆದ ಅನೇಕ ವಾದಗಳಲ್ಲಿ ಜಯಭೇರಿ ಬಾರಿಸಿ "ಷಟ್-ದರ್ಶನಾಚಾರ್ಯ" ಎಂದು ಬಿರುದನ್ನೂ ಸಂಪಾದಿಸಿದ್ದರು. ಶ್ರೀ ಸುಧೀಂದ್ರ ತೀರ್ಥರು ಯತಿಗಳು ಸಾಮಾನ್ಯವಾಗಿ ಹೆಚ್ಚು ಗಮನ ಕೊಡದ ಕಾವ್ಯ, ಅಲಂಕಾರ, ನಾಟಕ ಮುಂತಾದುವುಗಳಲ್ಲಿ ಸಹ ವಿಶೇಷ ಪರಿಣತಿ ಪಡೆದಿದ್ದರು. ನಂತರ ಗುರುಗಳ ಅಪ್ಪಣೆ ಪ್ರಕಾರ "ವಿಜಯ ಯಾತ್ರೆ" ಹೊರಟಿದ್ದರು. ಹೀಗೆ ಸಂಚಾರದ ಸಮಯದಲ್ಲಿ ದೊಡ್ಡಬಳ್ಳಾಪುರಕ್ಕೆ ಬಂದರು. 

******

ಶ್ರೀ ವಿಜಯೀ೦ದ್ರ ತೀರ್ಥರ ಮೊದಲ ಗುರುಗಳಾದ ಪೂರ್ವದಿ ಮಠದ ಶ್ರೀ ವ್ಯಾಸ ತೀರ್ಥರು ವಿಜಯನಗರದ ಅರಸರ ರಾಜಗುರುಗಳಾಗಿದ್ದವರು. ಅಭೂತಪೂರ್ವ ಕೀರ್ತಿ ಸಂಪಾದಿಸಿ ಜಯಶಾಲಿಗಳಾದವರು. ಶ್ರೀ ಮುಖ್ಯಪ್ರಾಣನ ಉಪಾಸಕರಾದ ಅವರು ದಕ್ಷಿಣ ಭಾರತ ಪ್ರದೇಶಗಳ ಮೂಲೆ ಮೂಲೆಗಳಲ್ಲಿ ಸಂಚರಿಸಿ 732 ಆಂಜನೇಯ ವಿಗ್ರಹಗಳನ್ನು ಪ್ರತಿಷ್ಠೆ ಮಾಡಿದ್ದಾರೆ. ಇವುಗಳ ವಿಶೇಷವೆಂದರೆ ಇಂತಹ ಮೂರ್ತಿಗಳ ಬಾಲದ ಕೊನೆಯಲ್ಲಿ ಒಂದು ಗಂಟೆ ಇರುವುದು.

ಶ್ರೀ ಸುಧೀಂದ್ರ ತೀರ್ಥರು ದೊಡ್ಡಬಳ್ಳಾಪುರಕ್ಕೆ ಬಂದಾಗ ಹತ್ತಿರದಲ್ಲೇ ಇದ್ದ, ತಮ್ಮ ಪರಮಗುರುಗಳ ವಿದ್ಯಾಗುರುಗಳಾದ ಶ್ರೀ ವ್ಯಾಸರಾಜ ಪ್ರತಿಷ್ಠಿತ ಮುಖ್ಯಪ್ರಾಣನ ಪೂಜೆ ಮಾಡಲು ಇಚ್ಛಿಸಿದರು. ಅಲ್ಲಿಗೆ ಹೋಗಿ ಪೂಜೆ ಮಾಡುವ ಸಂದರ್ಭದಲ್ಲಿ ಮಲ್ಲಿಗೆ ಹೂವು ಅಥವಾ ಮಾಲೆ ಇರಲಿಲ್ಲ. ಅವರ ಬಳಿ ಚಿನ್ನದಿಂದ ಮಾಡಿದ ಮಲ್ಲಿಗೆ ಮೊಗ್ಗುಗಳ ಸರ ಇತ್ತು. ಅದನ್ನೇ ಆಂಜನೇಯನಿಗೆ ಅರ್ಪಿಸಿ ಪೂಜಿಸಿದರು. ಪೂಜೆಯ ನಂತರ ದೇವಾಲಯದ ಗುಡಿಯ ಬಾಗಿಲು ಹಾಕಿ ಎಲ್ಲರೂ ಹೊರಬಂದರು. ರಾತ್ರಿ ಕಳೆಯಿತು. 

ಮಾರನೆಯ ದಿನ ದೇವಾಲಯದ ಬಾಗಿಲು ತೆರೆದಾಗ ಎಲ್ಲೆಲ್ಲೂ ಮಲ್ಲಿಗೆ ಹೂವುಗಳ ಅಮೋಘ ಪರಿಮಳ. ಆಂಜನೇಯನ ವಿಗ್ರಹಕ್ಕೆ ಹಾಕಿದ್ದ ಬಂಗಾರದ ಮಲ್ಲಿಗೆ ಸರದ ಮೊಗ್ಗುಗಳು ಅರಳಿದ್ದವು. ಅಂದಿನಿಂದ ಆ ಗ್ರಾಮಕ್ಕೆ "ಅರಳುಮಲ್ಲಿಗೆ" ಎಂದು ಹೆಸರಾಯಿತು.

******

ಶ್ರೀ ಸುಧೀಂದ್ರ ತೀರ್ಥರು ತಮ್ಮ ವಿಜಯ ಯಾತ್ರೆಯ ಸಂದರ್ಭದಲ್ಲಿ ಗ್ವಾಲಿಯರ್, ಬರೋಡ, ಜೈಪುರ ಮತ್ತು ಸುತ್ತಮುತ್ತಲಿನ ಇತರೆ ಸಂಸ್ಥಾನಗಳಿಗೂ ಭೇಟಿ ಕೊಟ್ಟಿದ್ದರು. ಗ್ವಾಲಿಯರ್ ಮಹಾರಾಜ ಸಿಂಧಿಯಾ ಅವರ ವಿದ್ವತ್ತಿಗೆ ಮೆಚ್ಚಿ "ರಾಜಗುರು" ಎಂದು ವಿಶೇಷ ಮನ್ನಣೆ ನೀಡಿದ್ದನು. ತಾನು ಉಪಯೋಗಿಸುವಂತಹ ಛತ್ರ, ಚಾಮರ ಮುಂತಾದುವುಗಳನ್ನು ಕೊಟ್ಟು ಗೌರವಿಸಿದನು. ವಿಜಯನಗರದ ವೀರ ವೆಂಕಟರಾಯ ಮಹಾರಾಜನು ಅವರಿಗೆ "ವಿಜಯ ಶಂಖ" ಕೊಟ್ಟು "ರತ್ನಾಭಿಷೇಕ" ಮಾಡಿ ಗೌರವಿಸಿದನು. 

ಬಿಜಾಪುರ ಆಳಿದ ಆದಿಲ್ ಶಾಹಿ ವಂಶದಲ್ಲಿ ಎರಡನೆಯ ಇಬ್ರಾಹಿಂ ಆದಿಲ್ ಷಾ (1579-1626) ಅತ್ಯಂತ ಪ್ರಭಾವಶಾಲಿ ಅರಸು. ಅವನ ಕಾಲದಲ್ಲಿ ಹನ್ನೆರಡು ವರುಷಗಳ ಸುದೀರ್ಘ ಕ್ಷಾಮ ಬಂದಿತ್ತಂತೆ. ಶ್ರೀ ಸುಧೀಂದ್ರ ತೀರ್ಥರಲ್ಲಿ ಬಹಳ ಗೌರವ ಇಟ್ಟಿದ್ದ ಅವನ ಮನವೀಯ ಮೇರೆಗೆ ಅವರು ರಾಜ್ಯದ ಧಾನ್ಯಾಗಾರದಲ್ಲಿ ಒಂದು ವಾರ ಕಾಲ ವಿಶೇಷ ಜಪಾದಿಗಳನ್ನು ನಡೆಸಿದರು. ನಂತರ ಧಾರಾಕಾರ ಮಳೆಯಾಗಿ ಸುಭಿಕ್ಷ ಬಂದಿತು. ಮೊದಲಿಗೆ ಸ್ವಲ್ಪ ಹಿಂಜರಿಯುತ್ತಿದ್ದ ಅವನ ಮಂತ್ರಿಯಾಗಿದ್ದ ಘನಶ್ಯಾಮ ರಾಯ ಅವರ ಶಿಷ್ಯನಾಗಿ "ಆನೆ ಹೊಸೂರು" ಎನ್ನುವ ತನ್ನ ಸ್ವಂತ ಗ್ರಾಮವನ್ನು ಗುರುಗಳಿಗೆ ಬಳುವಳಿಯಾಗಿ ಕೊಟ್ಟನು

ಈ ಎಲ್ಲ ಸಂಗತಿಗಳಿಗೂ ಸಂಬಂಧಪಟ್ಟ ಸ್ಥಳಗಳಲ್ಲಿ ದಾಖಲೆಗಳಿವೆ. ಶ್ರೀ ಸುಧೀಂದ್ರ ತೀರ್ಥರು ಅನೇಕ ಸತ್ವಯುತ ಗ್ರಂಥಗಳ ರಚಯಿತರು. ಅವುಗಳಲ್ಲಿ ಕೆಲವು ಸಿಕ್ಕಿವೆ. ಕೆಲವು ಉಪಲಬ್ಧವಿಲ್ಲ. 

ಶ್ರೀ ರಾಘವೇಂದ್ರ ಗುರುಗಳ ಸ್ತೋತ್ರದಲ್ಲಿ "ವಿಜಯೀ೦ದ್ರ ಕರಾಬ್ಜೋಥಾ ಸುಧೀಂದ್ರ ವರಪುತ್ರಕಃ" ಎಂಧು ಹೇಳುವುದಕ್ಕೆ ಈ ಎಲ್ಲಾ ಹಿನ್ನೆಲೆಗಳಿವೆ.
******

ಈ ತಿಂಗಳ (ಆಗಸ್ಟ್ 2026) 30ನೆಯ ದಿನಾಂಕ ಶ್ರೀ ಗುರು ರಾಘವೇಂದ್ರ ರಾಯರ 355ನೇ ವರ್ಷದ ಆರಾಧನಾ ಮಹೋತ್ಸವ ಮಂತ್ರಾಲಯದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅವರ ಗುರು ಪರಂಪರೆಯ ಶ್ರೀ ಸುರೇಂದ್ರ ತೀರ್ಥರು, ಶ್ರೀ ವಿಜಯೀ೦ದ್ರ ತೀರ್ಥರು ಮತ್ತು ಶ್ರೀ ಸುದೀಂಧ್ರ ತೀರ್ಥರ ಬಗ್ಗೆ ಸ್ವಲ್ಪ ಪರಿಚಯವನ್ನು ಮೂರು ಸಂಚಿಕೆಗಳಲ್ಲಿ ಮಾಡಿಕೊಂಡೆವು. 

ಒಬ್ಬರು ಕಣ್ಣ ಮುಂದೆ ಇಲ್ಲವಾದ ಬಳಿಕ ಕೆಲವು ವರುಷಗಳ ನಂತರ ಅವರ ಹೆಸರೂ ಇರುವುದಿಲ್ಲ. ನಾಲ್ಕು ಶತಮಾನ ಕಳೆದ ಬಳಿಕವೂ ಈ ಮಹನೀಯರ ಕಾರ್ಯಗಳು, ಕೃತಿಗಳು ಮತ್ತು ಸಾಧನೆಗಳ ವಿವರಗಳು ವಿಪುಲವಾಗಿ ಸಿಗುತ್ತವೆ. ಮೇಲೆ ಹೇಳಿದ ದೂರ ದೂರದ ಸ್ಥಳಗಳಲ್ಲಿಯೂ ಈಗಲೂ ಅವರ ಬಗ್ಗೆ ಗೌರವಾದರಗಳಿವೆ. ರಾಯರ ಆರಾಧನೆಯಂತೂ ವರುಷದಿಂದ ವರುಷಕ್ಕೆ ಇನ್ನೂ ಬೆಳೆಯುತ್ತಲೇ ಇದೆ. 

ಶ್ರಮಪಟ್ಟು ಆಯಾ ಗ್ರಂಥಗಳನ್ನು ಅಭ್ಯಸಿಸಿ, ಸ್ಥಳಗಳನ್ನು ನೋಡಿ ಬಂದರೆ, ಅವುಗಳ ಪರಿಣಾಮವಾಗಿ ಹೆಚ್ಚಿನ ನಂಬಿಕೆ ಬರುತ್ತದೆ. 

Saturday, June 21, 2025

ಅಷ್ಟ ಭೋಗಗಳು


ಹಿಂದಿನ ಸಂಚಿಕೆಯಲ್ಲಿ "ಕುಳಿತುಕೊಳ್ಳುವ ಆಸನಗಳು" ಎನ್ನುವ ಶೀರ್ಷಿಕೆಯಡಿ ಧ್ಯಾನ-ಜಪ ಮುಂತಾದುವುಗಳ ಅನುಷ್ಠಾನಕ್ಕೆ ಕುಳಿತುಕೊಳ್ಳುವಾಗ ಉಪಯೋಗಿಸುವ ಪೀಠಗಳು (ಆಸನಗಳು) ಮತ್ತು ಅವುಗಳಿಂದ ಬರಬಹುದಾದ ಶುಭ-ಅಶುಭ ಫಲಗಳನ್ನು ನೋಡಿದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ನಮ್ಮ ಆಚರಣೆಗಳಲ್ಲಿ ದೇವರು-ದೇವತೆಗಳನ್ನು ಪ್ರಾರ್ಥಿಸುವಾಗ  "ಸಕಲ ಭೋಗ-ಭಾಗ್ಯ ಸಿಧ್ಯರ್ಥಂ" ಎಂದು ಸಂಕಲ್ಪಿಸಿ ಬೇಡುವುದು ನಡೆದುಬಂದ ವಾಡಿಕೆ. ಗುರು-ಹಿರಿಯರ ಆಶೀರ್ವಾದ ಪಡೆಯುವಾಗ "ಸಕಲ ಭೋಗ-ಭಾಗ್ಯ ಸಿದ್ಧಿರಸ್ತು" ಎಂದು ಅವರು ಆಶೀರ್ವದಿಸುವೂ ಉಂಟು. 

ಈ ಭೋಗಗಳು ಮತ್ತು ಭಾಗ್ಯಗಳು ಯಾವುವು? ಸಾಮಾನ್ಯವಾಗಿ "ಅಷ್ಟಭೋಗಗಳು" ಮತ್ತು "ಅಷ್ಟ ಭಾಗ್ಯಗಳು" ಎಂದು ಹೇಳುತ್ತಾರೆ. ಇವುಗಳ ವಿವರವೇನು ಎಂದು ಸ್ನೇಹಿತರೊಬ್ಬರು ಕೇಳಿದ್ದಾರೆ. 

ಈ ಅಷ್ಟ ಭಾಗ್ಯಗಳು ಯಾವವು ಎನ್ನುವುದನ್ನು ಈಗ ನೋಡೋಣ. 

*****

ಮನುಷ್ಯನು ಸುಖಜೀವನ ನಡೆಸುವುದಕ್ಕೆ ಕೆಲವು ರೀತಿಯ ಅನುಕೂಲಗಳು ಬೇಕೇ ಬೇಕು. ಸಮಾಜವನ್ನು ತೊರೆದು ಕಾಡು-ಮೇಡುಗಳಲ್ಲಿ ಸನ್ಯಾಸಿಯ ಜೀವನ ನಡೆಸುವುದು ಒಂದು ರೀತಿ. ಅಲ್ಲಿ ಯಾವುದೇ ಭೋಗಕ್ಕೆ ಸ್ಥಾನವಿಲ್ಲ. ಆದರೆ ಸಮಾಜದಲ್ಲಿ ಗೃಹಸ್ಥನಾಗಿ ಬದುಕುವ ವ್ಯಕ್ತಿಗೆ ಈ ರೀತಿಯ ಸನ್ಯಾಸಿ ಜೀವನ ಅಷ್ಟು ಹೊಂದುವುದಿಲ್ಲ. ಭೋಗ-ಭಾಗ್ಯಗಳ ಹಿಂದೆ ಬಿದ್ದು ಸಾಧನೆಯನ್ನು ಗೌಣವಾಗಿ ಕಾಣುವುದು ಮನುಷ್ಯ ಜೀವನದ ಉದ್ದೇಶವಲ್ಲ. ಆದರೆ, ಈ ಕಾರಣಕ್ಕಾಗಿ ಗೃಹಸ್ಥನು ಎಲ್ಲವನ್ನೂ ತ್ಯಜಿಸುವುದು ಸಾಧ್ಯವಿಲ್ಲ. ತನ್ನ ಸ್ವಂತ ಉಪಯೋಗಕ್ಕೆ, ಮತ್ತು ಅದಕ್ಕಿಂತ ಹೆಚ್ಚಾಗಿ ತನ್ನನ್ನು ನಂಬಿ ಜೊತೆಯಲ್ಲಿ ಬಾಳುವ ಕುಟುಂಬದ ಸದಸ್ಯರಿಗೆ ಸುಖ ಜೀವನ ನಡೆಸಲು ಈ ಭೋಗ-ಭಾಗ್ಯಗಳು ಬೇಕು. ಇವೆರಡಿಕ್ಕಿಂತ ಹೆಚ್ಚಾಗಿ ತನ್ನ ಮನೆಗೆ ಬಂದ ಅತಿಥಿ-ಅಭ್ಯಾಗತರ ಸೇವೆಗೆ ಈ ಭೋಗ ವಸ್ತುಗಳು ಬೇಕಾಗುತ್ತವೆ. 

ಕಾಳಿದಾಸ ಮಹಾಕವಿಯ "ರಘುವಂಶ" ಮಹಾಕಾವ್ಯದಲ್ಲಿ ವರತಂತು ಮಹರ್ಷಿಗಳ ಶಿಷ್ಯನಾದ ಕೌತ್ಸ ಎಂಬ ಋಷಿಯು ಗುರುಕುಲದಲ್ಲಿ ವಿದ್ಯಾಭ್ಯಾಸ ಮುಗಿಸಿ ತನ್ನ ಗುರುಗಳಾದ ವರತಂತುಗಳಿಗೆ ಗುರುದಕ್ಷಿಣೆ ಕೊಡಲು ರಘು ಮಹಾರಾಜನ ಬಳಿ ಸಹಾಯಕ್ಕಾಗಿ ಬರುವ ಪ್ರಸಂಗವಿದೆ. ಅಲ್ಲಿ ತನ್ನನ್ನು ಎದುರುಗೊಂಡು, ಸ್ವಾಗತಿಸಿ ಕುಶಲ ಪ್ರಶ್ನೆಗಳನ್ನು ಮಾಡಿದ ಮಹಾರಾಜನಿಗೆ ಕೌತ್ಸನು ಉತ್ತರ ಕೊಡುವಾಗ "ಸರ್ವೋಪಕಾರಕ್ಷಮಮಾಶ್ರಮಂ ತೇ" ಎಂದು ಹೇಳುತ್ತಾನೆ. ನಾಲ್ಕು ವರ್ಣಾಶ್ರಮಗಳಲ್ಲಿ ಗೃಹಸ್ಥಾಶ್ರಮ ಬಹಳ ಮುಖ್ಯವಾದವನು. ಉಳಿದ ಮೂರು ಆಶ್ರಮ ಜೀವಿಗಳಾದ ಬ್ರಹ್ಮಚಾರಿ, ಸನ್ಯಾಸಿ ಮತ್ತು ವಾನಪ್ರಸ್ಥರು ಗೃಹಸ್ಥರನ್ನೇ ಅನೇಕ ವಿಷಯಗಳಿಗೆ ಆಶ್ರಯಿಸಬೇಕಾಗುತ್ತದೆ. ಬ್ರಹ್ಮಚಾರಿಗಳ ಮತ್ತು ಸನ್ಯಾಸಿಗಳ ಜೀವನಕ್ಕೆ ಗೃಹಸ್ಥರೇ ಆಧಾರ. 

ಸ್ವಂತ ಸಂಪಾದನೆಯಲ್ಲದ ವಿದ್ಯಾರ್ಥಿಗಳು ಮತ್ತು ಸಂಪಾದನೆ ಮಾಡಬಾರದ ಸನ್ಯಾಸಿಗಳ ಜೀವನ ಸಮಾಜದಲ್ಲಿರುವ ಗೃಹಸ್ಥರ ಸಹಾಯದಿಂದಲೇ ನಡೆಯುತ್ತದೆ. ಹೀಗಿರುವಾಗ ಗೃಹಸ್ಥರು ಈ ಭೋಗ-ಭಾಗ್ಯಗಳ ವಿಷಯದಲ್ಲಿ ಅತಿಯಾದ ಆಸಕ್ತಿ ತಾಳದಿದ್ದರೂ ಪೂರ್ಣವಾಗಿ ನಿರಾಸಕ್ತರಾಗಲು ಸಾಧ್ಯವಿಲ್ಲ. 
*****  

  1. "ಅಷ್ಟ ಭಾಗ್ಯಗಳು" ಎಂದು ಪರಿಗಣಿತವಾದ ಎಂಟರಲ್ಲಿ ಮೊದಲನೆಯದು "ಅನ್ನ". ಯಾವ ಪ್ರಾಣಿಯ ಜೀವನ ನಡೆಯಬೇಕಾದರೂ ಮೊದಲನೆಯ ಅವಶ್ಯಕತೆ ಆಹಾರ. ಇಲ್ಲಿ ಅನ್ನ ಎಂದರೆ, ಹಿಂದೊಮ್ಮೆ ಬೇರೆ ಸಂಚಿಕೆಯಲ್ಲಿ ಚರ್ಚಿಸಿದಂತೆ, ಅಕ್ಕಿಯನ್ನು ಬೇಯಿಸಿ ಮಾಡಿದ ಪದಾರ್ಥ ಮಾತ್ರವಲ್ಲ. ದೇಹದ ಬೆಳವಣಿಗೆ ಮತ್ತು ಬೆಳೆದ ದೇಹವನ್ನು ಸುಸ್ಥಿತಿಯಲ್ಲಿ ಕಾಪಾಡಲು ಬೇಕಾಗುವ ಎಲ್ಲ ಖಾದ್ಯಗಳಿಗೂ "ಅನ್ನ" ಎಂದು ನಿರ್ದೇಶಿಸಿ "ಬೃಹದಾರಣ್ಯಕ ಉಪನಿಷತ್" ಹೇಳುವ "ಸಪ್ತಾನ್ನ ಪ್ರಕರಣ" ತಿಳಿಸಿಕೊಡುತ್ತದೆ. ಅನ್ನವಿಲ್ಲದೇ ಜೀವನವಿಲ್ಲ. ಆದ್ದರಿಂದ ಎಂಟು ಭಾಗ್ಯಗಳಲ್ಲಿ ಮೊದಲೆನೆಯದು ಅನ್ನ. 
  2. ಎರಡನೆಯ ಭಾಗ್ಯ "ಉದಕ". ನೀರಿಲ್ಲದೆ ಬದುಕುವುದು ಸಾಧ್ಯವಿಲ್ಲ. ಉಸಿರಾಡುವ ಎಲ್ಲಾ ಪ್ರಾಣಿಗಳಿಗೂ ಗಾಳಿಯ ನಂತರ ನೀರು ಅತಿ ಮುಖ್ಯ. ವಾಸ್ತವಾಗಿ ಅನ್ನಕ್ಕಿಂತ ಮೊದಲು ನೀರು ಬೇಕು. ಆದರೆ ಕುಡಿಯುವ ನೀರು ಸೃಷ್ಟಿಯಲ್ಲಿ ಸುಲಭವಾಗಿ ಸಿಗುವುದು. ಆದ್ದರಿಂದ ಇಲ್ಲಿ ಅನ್ನ  ಎರಡನೆಯದು ಎಂದು ಗಣಿತವಾಗಿದೆ. (ಮುಂದಿನ ಸಂಚಿಕೆಯಲ್ಲಿ ಚರ್ಚಿಸುವ "ಅಷ್ಟ ಭಾಗ್ಯಗಳು" ಎಂದು ನಿರ್ದೇಶಿಸುವ ಎಂಟು ಭಾಗ್ಯಗಳಲ್ಲಿ ನೀರೇ ಮೊದಲನೆಯದು. ಅದರಲ್ಲಿ ಅನ್ನ ಎಂಟರ ಲೆಕ್ಕದಲ್ಲಿ ಸೇರುವುದಿಲ್ಲ. ಮನುಷ್ಯನ ಅನ್ಯಾಯ ಜೀವನ ಕ್ರಮಗಳಿಂದ ಈಚಿನ ದಿನಗಳಲ್ಲಿ ನೀರು ಸಿಗುವುದು ಕಷ್ಟವಾಗಿದೆ).
  3. ಮೂರನೆಯ ಭಾಗ್ಯ "ತಾಂಬೂಲ". ತಾಂಬೂಲ ಎಂದರೆ ಕೇವಲ ಎಲೆ-ಅಡಿಕೆ-ಸುಣ್ಣ ಮಾತ್ರವಲ್ಲ. ತಾಂಬೂಲ ಸೇವನೆ ಊಟದ ಕೊನೆಯ ಅಧ್ಯಾಯ. ಅವುಗಳಲ್ಲಿ ಅವರವರ ಅಂತಸ್ತಿಗೆ ತಕ್ಕಂತೆ ಅಂತರವೂ ಉಂಟು. ಅದು ಕೇವಲ ಗೋಟು ಅಡಿಕೆ ಇರಬಹುದು ಅಥವಾ ಬಣ್ಣ ಕಟ್ಟಿದ, ಕಾಚು, ಸಕ್ಕರೆ, ಸುಗಂಧ ಮಿಶ್ರಿತವಾದ ಪುಡಿಯಡಕೆ ಇರಬಹುದು. ತಾಂಬೂಲ ಸೇವನೆ ಇದೆ ಅಂದರೆ ಊಟದ ನಂತರ ಸ್ವಲ್ಪ ವಿಶ್ರಾಂತಿಗೂ ಅವಕಾಶ ಇದೆ ಎಂದು ಅರ್ಥ. ಜೀವನದ ಇತರ ಚಟುವಟಿಕೆಗಳಿಗೆ ತಕ್ಷಣ ಓಡಬೇಕಾಗಿಲ್ಲ. ಕುಟುಂಬದ ಇತರ  ಸದಸ್ಯರ, ಬಂಧು-ಬಾಂಧವರ, ಸ್ನೇಹಿತರ ಕೂಡ ಸ್ವಲ್ಪ ವಿನೋದದ ಕ್ಷಣಗಳನ್ನೂ ಕಳೆಯುವ ಅವಕಾಶವೂ ಒಂದು ಭೋಗವೇ. 
  4. ನಾಲ್ಕನೆಯದು "ಪುಷ್ಪ". ಈಗ ಗಂಡಸರು ಹೂವಿನ ಹಾರಗಳನ್ನು ಧರಿಸುವುದು ತಪ್ಪಿಹೋಗಿದೆ. ಸ್ತ್ರೀಯರು ಕೂಡ  ಮರೆತಿದ್ದಾರೆ. ಸುಗಂಧಭರಿತ ಹೂವುಗಳು ಮತ್ತು ಹೂವಿನ ಹಾರಗಳನ್ನು ಉಪಯೋಗಿಸುವುದು ಒಂದು ಭೋಗದ ರೀತಿ. ಅನೇಕ ಬಣ್ಣದ, ಸುವಾಸನೆಯ, ಗಾತ್ರದ ಹೂವುಗಳು ಸೊಗಸನ್ನು ಹೆಚ್ಚಿಸುವುದರ ಜೊತೆಗೆ ವಾತಾವರಣವನ್ನೂ ರಂಗೇರಿಸಬಲ್ಲುದು. 
  5. ಐದನೆಯದು "ಚಂದನ". ಗಂಧದ ಮರಗಳು ಹೇರಳವಾಗಿ ಇದ್ದಾಗಿನ ಮಾತು. ಗಂಧ ತಂದು ತೇಯ್ದು ಸುಗಂಧ ಪೂಸಿಕೊಳ್ಳುತ್ತಿದ್ದ ಕಾಲದ ಮಾತು ಇದು. ಪುಟ್ಟಕೃಷ್ಣನ ದಾಸರು ವರ್ಣಿಸುವುದು "ಪೂಸಿದ ಶ್ರೀಗಂಧ ಮಯ್ಯೊಳಗಮ್ಮ" ಎಂದು. (ಈಗ ಅದು ಕೇವಲ ರಾಸಾಯನಿಕ ಗಂಧ ಸಿಂಪಡಣೆಗೆ ಸೀಮಿತವಾಗಿದೆ. ಕೆಲವುಕಡೆಯಂತೂ ದೊಡ್ಡ ಫ್ಯಾನುಗಳು ಈ ಕೆಲವನ್ನು ಬೇಜಾರಿಲ್ಲದೆ ಮಾಡುತ್ತವೆ). 
  6. ಆರನೆಯ ಭೋಗ "ವಸನ". ಮಾನ ಮುಚ್ಚಲು ಬಟ್ಟೆ ಅನ್ನ-ನೀರಿನ ನಂತರದ ಸ್ಥಾನ ಪಡೆಯುತ್ತದೆ. ಅದು ಭೋಗದ ವಸ್ತುವೂ ಆಗಬಹುದು. ಬರಿಯ ಶುಭ್ರ ಬಟ್ಟೆಯಿಂದ ಜರತಾರಿ ಸೀರೆ-ಪಂಚೆ-ದಿರಿಸು, ಮುಂಡಾಸು, ಮೇಲು ಹೊದಿಕೆ, ಮುಂತಾದ ಅನೇಕ ರೀತಿಯಲ್ಲಿ ಜೀವನಕ್ಕೆ ಸೊಗಸನ್ನು ತಂದುಕೊಡುವ ಭೋಗ ಈ ವಸನದ್ದು. 
  7. ಭೋಗಗಳಲ್ಲಿ ಏಳನೆಯದು "ಶಯ್ಯಾ". ಊಟವಾಗಿ ಹೊಟ್ಟೆ ತುಂಬಿತು. ಬಟ್ಟೆ ಸಿಕ್ಕಿತು. ನಂತರದ ಸ್ಥಾನ ದಣಿದ ದೇಹಕ್ಕೆ ನಿದ್ರೆ ಕೊಡುವುದು. ನೆಲದ ಮೇಲೆ ತೋಳನ್ನೇ ತಲೆದಿಂಬಾಗಿ ಇಟ್ಟುಕೊಂಡು ಮಲಗಬಹುದು. ಅದನ್ನು ಯಾರೂ ಭೋಗ ಅನ್ನುವುದಿಲ್ಲ. ಅದೇ ಸೊಗಸಾದ ಮೆತ್ತನೆಯ ಹಾಸಿಗೆಯ ಮೇಲೆ ಆಗಬಹುದು. ಸುಪ್ಪತ್ತಿಗೆಯೂ ಆಗಬಹುದು. ಇವು ನೆಲದ ಬದಲು ಸುಂದರ ಮಂಚದ ಮೇಲೂ ಇರಬಹುದು. ಸೊಳ್ಳೆಪರದೆ ಸೇರಿರಬಹುದು. ಹೊದೆಯಲು ಒಳ್ಳೆಯ ಪದರಗಳ ಹೊದಿಕೆ ಇರಬಹುದು. ಚಳಿಗಾಲದಲ್ಲಿ ಉಣ್ಣೆಯದು ಇರಬಹುದು. ಹೀಗೆ ಭೋಗದ ವಿವಿಧ ಮಜಲುಗಳು. ಜೊತೆಗೆ ತನ್ನದೇ ಮನೆಯಲ್ಲಿಯೂ ಇರಬಹುದು. 
  8. ಎಂಟನೆಯ ಭೋಗವೆಂದರೆ "ಅಲಂಕಾರ". ಬರೀ ಬಟ್ಟೆ ಉಟ್ಟರೆ ಸಾಕೆ? ಆಭರಣಗಳು ಬೇಡವೇ? ಚಿನ್ನ, ವಜ್ರ ಮುಂತಾದವು. ಕುಂಕುಮ ಮುಂತಾದ ಬಣ್ಣ-ಬಣ್ಣದ ದ್ರವ್ಯಗಳು. ಸುಂದರವಾದ ಕೈಚೀಲ. ಕೈಗೆ ಕಸೂತಿ ಹಾಕಿದ ಕರ್ಚೀಫು. ಸ್ವಲ್ಪ ವಯಸ್ಸಾದ ಮೇಲೆ ಕೈಗೊಂಡು ಕೊರೆದ ಬೆತ್ತದ ಕೋಲು. ಹೀಗೆ. ಅವರವರ ಯೋಗ್ಯತೆ-ಅಭಿರುಚಿಗಳಿಗೆ ತಕ್ಕಂತೆ ಇವುಗಳ ಪಟ್ಟಿಯನ್ನು ಪಸರಿಸಬಹುದು. 
ಇಲ್ಲಿಗೆ ಎಂಟು ರೀತಿಯ "ಅಷ್ಟ ಭೋಗ" ವಿಷಯದ ವಿವರಣೆ ಸಾಕು. ಮುಂದೆ ಇವನ್ನು ವಿಸ್ತರಿಸುವುದು ಅವರವರ ಮನಸ್ಸಿಗೆ ಬಿಡುವುದು ಒಳ್ಳೆಯದು. 

*****

ಅಷ್ಟ ಭೋಗಗಳ ವಿಷಯಗಳನ್ನು ಇಬ್ಬರು ಬಲ್ಲರು. ಇವು ಇಲ್ಲದವರು. ಇವು ಚೆನ್ನಾಗಿ ಇದ್ದು ಅನುಭವಿಸುವವರು. ಎಲ್ಲ ಭೋಗಗಳ ಸವಲತ್ತಿದ್ದರೂ ಅನುಭವಿಸಲು ಸಾಧ್ಯವಿಲ್ಲದವರ ವಿಷಯ ಚಿಂತಿಸುವುದು ಬೇಡ. 

"ಅಷ್ಟ ಭಾಗ್ಯಗಳು" ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.