Showing posts with label Chandana. Show all posts
Showing posts with label Chandana. Show all posts

Monday, March 30, 2026

ಅಕ್ಷಯ ತೃತೀಯಾ ಗಂಧ ಲೇಪನ

 

ಇನ್ನು ಕೆಲವೇ ದಿನಗಳಲ್ಲಿ "ಅಕ್ಷಯ ತೃತೀಯಾ" ಬರುವುದಿದೆ. ಪ್ರತಿ ವರ್ಷ ವೈಶಾಖ ಮಾಸದ ಮೂರನೆಯ ದಿನ (ವೈಶಾಖ ಶುಕ್ಲ ತೃತೀಯ) ಒಂದು ವಿಶೇಷವಾದ ದಿನ. ಆ ದಿನವನ್ನು ಒಂದು "ಸ್ವಯಂ ಸಿದ್ಧ ಮುಹೂರ್ತ" ಎಂದು ತಿಳಿದು ಅದಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಆ ದಿನ ಮಂತ್ರಾಲಯದಲ್ಲಿರುವ ಶ್ರೀ ಗುರು ರಾಘವೇಂದ್ರ ರಾಯರ ಮೂಲ ಬೃಂದಾವನ ಮತ್ತು ದೇಶದ ವಿವಿಧ ಕಡೆಗಳಲ್ಲಿ ಇರುವ "ಮೃತ್ತಿಕಾ ಬೃಂದಾವನ" (ಈಗ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿಯೂ ಉಂಟು. ಅಮೇರಿಕ ಸಂಯುಕ್ತ ಸಂಸ್ಥಾನ (USA) ಒಂದರಲ್ಲಿಯೇ ಹನ್ನೆರಡು ಇಂತಹ ಬೃಂದಾವನಗಳಿವೆಯಂತೆ) ಇವುಗಳನ್ನು ಶ್ರೀಗಂಧ ಲೇಪನದಿಂದ ಅಲಂಕರಿಸಲಾಗುತ್ತದೆ. ಇದೊಂದು ವಿಶೇಷ ಸೇವೆ. ಅಂದು ಭಕ್ತಾದಿಗಳು ಸರತಿಯಲ್ಲಿ ಕಾದಿದ್ದು ದರ್ಶನ ಪಡೆಯುತ್ತಾರೆ. 

ಅಕ್ಷಯ ತೃತೀಯಾ ದಿನದಂದು ಹೀಗೆ ವೃಂದಾವನಕ್ಕೆ ಗಂಧ ಲೇಪನ ಏಕೆ ಮಾಡುತ್ತಾರೆ? ಹೀಗೆ ಪ್ರಶ್ನೆ ಮಾಡಿದರೆ ಅನೇಕ ವೇಳೆ ಸರಿಯಾದ ಉತ್ತರ ಬರುವುದಿಲ್ಲ. "ಬೇಸಿಗೆ ಕಾಲ. ಆದ್ದರಿಂದ ತಂಪಾಗಿರಲಿ ಎಂದು ಹೀಗೆ ಮಾಡುತ್ತಾರೆ" ಅನ್ನುವುದು ಸಾಮಾನ್ಯ ಉತ್ತರ. ಹಾಗಿದ್ದರೆ, ಎರಡು-ಮೂರು ತಿಂಗಳ ಕಾಲ ಕಡು ಬೇಸಿಗೆ ಇರುತ್ತದೆ. ಅದರಲ್ಲಿ ಈ ದಿನವನ್ನೇ ಏಕೆ ಆರಿಸಿಕೊಂಡರು? ಬಾಕಿ ದಿನ ಬೇಸಗೆಯ ಬೇಗೆ ಇಲ್ಲವೇ? ಆಗಾಗ ಏಕೆ ಮಾಡುವುದಿಲ್ಲ? ಇವೆಲ್ಲಾ ಸಾಧುವಾದ ಪ್ರಶ್ನೆಗಳೇ. ಅಕ್ಷಯ ತೃತೀಯ ಹನ್ನೆರಡು ತಿಂಗಳ ಮಧ್ಯದಲ್ಲಿ ಬರುವ ಒಂದು ದಿನ. ಅದು ಹೇಗೆ "ಸ್ವಯಂ ಸಿದ್ಧ ಮುಹೂರ್ತ" ಆಯಿತು? ಅದಕ್ಕೆ ಅಂತಹ ವಿಶೇಷವೇನು? ಇದೂ ಸಹ ಯೋಚಿಸಬೇಕಾದ ವಿಷಯವೇ. 

*****

ಪ್ರತಿ ಸಂವತ್ಸರದ ಪ್ರಾರಂಭದ ದಿನ ಯುಗಾದಿ. ಅದು ಕಾಲಮಾನದ ಲೆಕ್ಕದ ಪ್ರಾರಂಭ. ಹೀಗಾಗಿ ಅದೊಂದು ಸ್ವಯಂ ಸಿದ್ಧ ಮುಹೂರ್ತ ಆಯಿತು. ವಿಜಯದಶಮಿ ವಿಶೇಷ ಎಲ್ಲರಿಗೂ ಗೊತ್ತಿರುವುದೇ. ಅದೂ ಸರಿ. ಬಲಿಪಾಡ್ಯಮಿ ಅರ್ಧ ದಿನವೂ ಒಂದು ವಿಶೇಷವೇ. ಅಂದು ಬಲಿಯಿಂದ ವಾಮನನು ಮೂರು ಲೋಕಗಳ ಅಧಿಪತ್ಯವನ್ನು ಕಸಿದುಕೊಂಡು ದೇವೇಂದ್ರನಿಗೆ ಹಿಂದಿರುಗಿಸಿದನು. ಇದರ ವಿವರಗಳಿಗೆ ಸಂಬಂಧಿಸಿದ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. ಆದರೆ ಈ ಅಕ್ಷಯ ತೃತೀಯ ಹೇಗೆ ವಿಶೇಷ? 

ಚತುರ್ಮುಖ ಬ್ರಹ್ಮ ದೇವರು ತಮ್ಮ ಸೃಷ್ಟಿಕಾರ್ಯ ಪ್ರಾರಂಭ ಮಾಡಿದ ದಿನ ಅಕ್ಷಯ ತೃತೀಯಾ. ಯುಗಾದಿ ಕಾಲಮಾನದ ಲೆಕ್ಕದ ಕಾರಣ ಮುಖ್ಯವಾದರೆ ಅಕ್ಷಯ ತೃತೀಯಾ ಸೃಷ್ಟಿಯ ಪ್ರಾರಂಭವಾದದ್ದರಿಂದ ವಿಶೇಷವಾಯಿತು. ಅದೂ ಒಂದು ಸ್ವಯಂ ಸಿದ್ಧ ಮುಹೂರ್ತ ಆಯಿತು. ಯಾವುದೇ ಕೆಲಸ ಪ್ರಾರಂಭ ಮಾಡಲು, ಮತ್ತು ಮುಖ್ಯವಾದ ಕಾರ್ಯಗಳನ್ನು ಮಾಡಲು ದಿನ ಶುದ್ದಿ ನೋಡಿ ಒಳ್ಳೆಯ ಸಮಯ ನಿರ್ಧರಿಸುವ ಪರಿಪಾಠ ಇದೆ. ಆದರೆ ಈ ನಾಲ್ಕು ದಿನಗಳಲ್ಲಿ ಅವುಗಳ ಅವಶ್ಯಕತೆ ಇಲ್ಲ ಎಂದು ನಂಬುತ್ತಾರೆ. 

ಅಕ್ಷಯ ತೃತೀಯಾ ದಿನದಂದು ಮಾಡಿದ ಒಳ್ಳೆಯ ಕೆಲಸಗಳಿಗೆ (ದಾನ, ಜಪ, ತಪ ಮುಂತಾದುವು) ಹೆಚ್ಚಿನ ಫಲ ಎಂದು ನಂಬಿಕೆ. ಆದರೆ ಈಗ ಅದೊಂದು "ಮಾರಾಟ ಮಾಡುವ ಮೋಡಿ" ಆಗಿದೆ. ಇದರ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

*****

ಶ್ರೀ ವೈಕುಂಠದ ದ್ವಾರ ಪಾಲಕರಾದ ಜಯ-ವಿಜಯರು ಸನಕ-ಸನಂದನಾದಿಗಳಿಗೆ ಶ್ರೀಮನ್ನಾರಾಯಣನ ದರ್ಶನಕ್ಕೆ ಅಡ್ಡಿ ಮಾಡಿದ ಕಾರಣದಿಂದ ಶಾಪಕ್ಕೊಳಗಾದ ಕಥೆ ಎಲ್ಲರಿಗೂ ಗೊತ್ತು. ಆ ಕಾರಣದಿಂದ ಅವರು ಮೂರು ಅಸುರ ಜನ್ಮ ಪಡೆದರು. ಶ್ರೀಹರಿಯ ಹೇಳಿಕೆಯ ಅನುಸಾರ ಅವನೇ ಮೂರು ಅವತಾರ ತೆಗೆದು ಅವರ ವಧೆ ಮಾಡಿ ಅವರ ಶಾಪ ವಿಮೋಚನೆ ಮಾಡಿದನು. 

ಮೊದಲಿಗೆ ಅವರು ಹಿರಣ್ಯಾಕ್ಷ-ಹಿರಣ್ಯಕಶಿಪು ಆಗಿ ಒಂದೇ ತಾಯಿ ದಿತಿಯ ಅವಳಿ ಮಕ್ಕಳಾಗಿ ಹುಟ್ಟಿದರು. ಎರಡನೆಯ ಬಾರಿ ಒಂದೇ ತಾಯಿ ಕೈಕಸೆಯ ಬೇರೆ ಬೇರೆ ಇಬ್ಬರು ಮಕ್ಕಳು ರಾವಣ-ಕುಂಭಕರ್ಣ ಆಗಿ ಹುಟ್ಟಿದರು. ಮೂರನೆಯ ಸಾರಿ ಅಕ್ಕ-ತಂಗಿಯರ ಮಕ್ಕಳು (ಶ್ರುತದೇವೆ ಮತ್ತು ಶ್ರುತಶ್ರವೆ - ವಸುದೇವನ ತಂಗಿಯರು) ಶಿಶುಪಾಲ-ದಂತವಕ್ತ್ರ ಆಗಿ ಹುಟ್ಟಿದರು. ಕ್ರಮವಾಗಿ ಮೊದಲಿಗೆ ವರಾಹ-ನರಸಿಂಹ ಎಂಬ ಎರಡು ರೂಪ, ಎರಡನೆಯದಾಗಿ ಶ್ರೀರಾಮ ರೂಪ ಮತ್ತು ಕಡೆಯದಾಗಿ ಶ್ರೀಕೃಷ್ಣ ರೂಪದಿಂದ ಅವರ ನಿಗ್ರಹವನ್ನು ಶ್ರೀಹರಿಯು ಮಾಡಿದನು. 

ಅವಳಿ ಮಕ್ಕಳಲ್ಲಿ ಲೋಕಾರೂಢಿಯಂತೆ ಮೊದಲು ತಾಯಿಯ ಗರ್ಭದಿಂದ ಬಂದವನು ಅಣ್ಣ ಎಂದೂ, ನಂತರ ಜನಿಸಿದವನು ತಮ್ಮ ಎಂದೂ ವ್ಯವಹರಿಸುತ್ತಾರೆ. ಆದರೆ ನಂತರ ಹುಟ್ಟಿದವನ ಗರ್ಭಧಾರಣೆ ಮೊದಲು ಆಗಿರುತ್ತದೆ. ಮೊದಲು ಜನಿಸಿದವನ ಗರ್ಭಧಾರಣೆ ಆಮೇಲೆ ಆಗಿರುತ್ತದೆ. ಈ ಕಾರಣದಿಂದ ವಾಸ್ತವವಾಗಿ ಹಿರಣ್ಯ ಕಷಿಪು ನಂತರ ಹುಟ್ಟಿದರೂ ಅಣ್ಣನು. ಹಿರಣ್ಯಾಕ್ಷನು ಮೊದಲು ಜನಿಸಿದರೂ ತಮ್ಮ. ಇದು ಸೂಕ್ಷ್ಮವಾದ ವಾಸ್ತವ. ಶ್ರೀಹರಿಯು ಮೊದಲು ವರಾಹರೂಪದಿಂದ ಹಿರಣ್ಯಾಕ್ಷನನ್ನೂ, ನಂತರ ನರಸಿಂಹ ರೂಪದಿಂದ ಹಿರಣ್ಯಕಶಿಪುವನ್ನೂ ಸಂಹರಿಸಿದನು. 

*****

ಹಿರಣ್ಯಕಶಿಪುವಿನ ಮಗನಾದ ಪ್ರಹ್ಲಾದನನ್ನು ತಂದೆಯು ಬಹಳವಾಗಿ ಹಿಂಸಿಸಿದನು. ಪ್ರಹ್ಲಾದನು ಶ್ರೀಹರಿಯನ್ನು ಬಲವಾಗಿ ನಂಬಿ ಎಲ್ಲ ತೊಂದರೆಗಳನ್ನೂ ಧೈರ್ಯವಾಗಿ ಎದುರಿಸಿದನು. ಕಡೆಗೆ ನರಸಿಂಹರೂಪದಿಂದ ಹಿರಣ್ಯನ ಸಂಹಾರವಾಯಿತು. ನರಸಿಂಹನ ಸ್ತುತಿ ಮಾಡಿದ ಬಾಲಕ ಪ್ರಹ್ಲಾದನು ವರಾಹ ಮತ್ತು ನರಸಿಂಹ ರೂಪ ಎರಡನ್ನೂ ಒಟ್ಟಿಗೆ ನೋಡಬೇಕೆಂದು ಶ್ರೀಹರಿಯನ್ನು ಪ್ರಾರ್ಥಿಸಿದನು. ಆಗ ಶ್ರೀಹರಿಯು ಎರಡು ರೂಪಗಳನ್ನೂ ಒಟ್ಟಿಗೆ ತೋರಿಸಿದನಂತೆ. ಸಾಮಾನ್ಯವಾಗಿ ಕೆಲವೇ ಕೆಲವು ವರಾಹ ರೂಪಿ ಶ್ರೀಹರಿಯ ದೇವಾಲಯಗಳು ಉಂಟು. ನರಸಿಂಹ ರೂಪಿ ಶ್ರೀಹರಿಯ ದೇವಾಲಯಗಳು ಅನೇಕ. ಆದರೆ, ಶ್ರೀವರಾಹ-ನರಸಿಂಹ ರೂಪಿ ಶ್ರೀಹರಿಯ ದೇವಾಲಯ ಒಂದಾಗಿ ಇರುವುದು ಒಂದೇ ಕಡೆ.  ಅದು ಆಂಧ್ರ ಪ್ರದೇಶದ ಸಿಂಹಾಚಲದಲ್ಲಿ. 

ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಗರದ ಉತ್ತರಭಾಗದಲ್ಲಿ "ಸಿಂಹಾಚಲ ಪರ್ವತ ಶ್ರೇಣಿ" ಇದೆ. ಈ ಬೆಟ್ಟ ಪ್ರದೇಶದಲ್ಲಿ ಸಿಂಹಾಚಲ ವರಾಹ-ಲಕ್ಷ್ಮಿನರಸಿಂಹ ದೇವಾಲಯವಿದೆ. ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಿಂದ ಸುಮಾರು ಇಪ್ಪತ್ತು ಕಿಲೋಮೀಟರು ದೂರ. ಈಗ ಈ ಭಾಗ ನಗರದಲ್ಲಿಯೇ ಸೇರಿಹೋದಂತಿದೆ. ಮೇಲಿನ ಚಿತ್ರದಲ್ಲಿ ಕಾಡಿನ ಮಧ್ಯೆ ಇರುವ ದೇವಾಲಯವನ್ನು ನೋಡಬಹುದು. 

ಈ ದೇವಾಲಯದಲ್ಲಿ ಒಂದು ವಿಶೇಷ. ಇಬ್ಬರು ರಕ್ಕಸರನ್ನು ಸಂಹರಿಸಿದ ಶ್ರೀಹರಿಯು ಆ ಸಮಯದಲ್ಲಿ ಅತಿ ಉಗ್ರ ರೂಪವನ್ನು ಧಾರಣೆ ಮಾಡಿದ್ದನಂತೆ. ಆ ರೂಪಗಳನ್ನು ನೋಡಲು ದೇವತೆಗಳಿಗೂ ಅಸಾಧ್ಯವಾಗಿತ್ತಂತೆ. ನೇರವಾಗಿ ನೋಡಲು ಕಷ್ಟವಾದ ತೇಜೋಮೂರ್ತಿಗಳ ಸಂಗಮ. ಅತಿ ಉಗ್ರ ರೂಪ. ಬಾಲಕ ಪ್ರಹ್ಲಾದನು ಭಯವಿಲ್ಲದೆ ನೋಡಿದ ಮಹಾನುಭಾವ. ಅವನಿಗೆ ಈ ಉಗ್ರರೂಪಗಳ ಶ್ರೀಹರಿಯೂ, ಸೌಮ್ಯ ರೂಪಿ ಶ್ರೀಹರಿಯೂ ಒಂದೇ!

*****


ಪುರಾತನವಾದ ಈ ದೇವಸ್ಥಾನ ಕಾಡಿನಲ್ಲಿ ಮುಚ್ಚಿಹೋಗಿತ್ತಂತೆ. ಅದನ್ನು ಚಂದ್ರನ ಮೊಮ್ಮಗ, ಬುಧ-ಇಳಾ ದಂಪತಿಯರ ಮಗನಾದ ಪುರೂರವ ಮತ್ತು ಊರ್ವಶಿಯರು (ನಹುಷನ ತಂದೆ ಮತ್ತು ಯಯಾತಿಯ ತಾತ) ಪುನಃ ಜನರಿಗೆ ದರ್ಶನ ಸಿಗುವಂತೆ ಮಾಡಿದರು ಎಂದು ಸ್ಥಳ ಪುರಾಣ ಹೇಳುತ್ತದೆ. ಈ ದೇವಳದಲ್ಲಿ ಹದಿನಾರು ಕಂಭಗಳ ನಾಟ್ಯಮಂಟಪ ಮತ್ತು ತೊಂಬತ್ತಾರು ಕಂಭಗಳ ಕಲ್ಯಾಣ ಮಂಟಪ ಉಂಟು. 

ಉಗ್ರ ವರಾಹ-ಲಕ್ಷ್ಮೀನರಸಿಂಹ ವಿಗ್ರಹವನ್ನು ವರುಷದ ಒಂದು ದಿನ ಬಿಟ್ಟು, ಬಾಕಿ ಎಲ್ಲಾ ದಿನಗಳಲ್ಲೂ ಶ್ರೀಗಂಧ ಲೇಪನದಿಂದ ಮುಚ್ಚಿರುತ್ತಾರೆ. ಈ ಕಾರಣದಿಂದ ಅದು ಒಂದು ದೊಡ್ಡ ಶಿವಲಿಂಗ ಇರುವಂತೆ ಕಾಣುತ್ತದೆ. ಆ ಗಂಧದಿಂದ ತುಂಬಿದ ಮೂರ್ತಿಯ ಮೇಲೆ ನಾಮ, ಕಣ್ಣು, ಮೂಗು, ಮುಂತಾದುವನ್ನು ಅಂಟಿಸಿ ಅರ್ಚಿಸುತ್ತಾರೆ. ದರ್ಶನಕ್ಕೆ ಬಂದ ಭಕ್ತರಿಗೆ ಕಾಣುವ ಮೂರ್ತಿಯು ಮೇಲಿನ ಚಿತ್ರದಂತೆ ಇರುತ್ತದೆ. 

ವರುಷದ ಒಂದು ದಿನ ಮಾತ್ರ, ಅಕ್ಷಯ ತೃತೀಯಾ ದಿನದಂದು, ಈ ಗಂಧ ಲೇಪನ ಎಲ್ಲವನ್ನೂ ತೆಗೆದು ಮೂಲ ವಿಗ್ರಹವನ್ನು ನೋಡಲು ಅವಕಾಶ ಮಾಡಿಕೊಡುತ್ತಾರೆ. ಆ ದಿನವೂ ವಿಗ್ರಹವನ್ನು ನೇರವಾಗಿ ನೋಡಿದರೆ ಕಣ್ಣುಗಳು ಉರಿಯುತ್ತವೆ ಮತ್ತು ರಕ್ತ ಬರುತ್ತದೆ ಎಂದು ನಂಬಿಕೆ. ಆದ ಕಾರಣ ಅಕ್ಷಯ ತೃತೀಯಾ ದಿನದಂದು ಮೂಲ ವಿಗ್ರಹದ ಮುಂದೆ ಒಂದು ಅತಿ ತೆಳುವಾದ ಪರದೆ ಇರುತ್ತದೆ. ಈ ಪರದೆಯ ಮೂಲಕ ವಿಗ್ರಹ ಚೆನ್ನಾಗಿ ಕಾಣುತ್ತದಂತೆ. ಅಂದು ದರ್ಶನ ಪಡೆಯಲು ಜನಜಂಗುಳಿ. ತಿರುಪತಿಯ ಶ್ರೀನಿವಾಸನ ದರ್ಶನದಂತೆ ದರ್ಶನ ಬಲು ಕಠಿಣವಂತೆ. ದರ್ಶನ ಸಿಕ್ಕರೆ ಸಿಗಬಹುದು. ಇಲ್ಲದಿದ್ದರೆ ಇಲ್ಲ. ಹೀಗೆಂದು ನೋಡಿ ಬಂದ  ಮಹಾನುಭಾವರು ಹೇಳುತ್ತಾರೆ. 

*****

ಪರಮಾತ್ಮನಿಗೆ ಅರ್ಪಿಸಿದ ಪ್ರತಿಯೊಂದು ಪದಾರ್ಥವೂ ಪೂಜ್ಯವೇ. ಪೂಜೆಯ ನಂತರ ಅವು ಪ್ರಸಾದವೇ. ಹೀಗಾಗಿ ಅವಕ್ಕೆ ಹೆಚ್ಚಿನ ಮಹತ್ವವುಂಟು. ನಾವು ಸಾಮಾನ್ಯವಾಗಿ ತಿಳಿದಂತೆ ಹಣ್ಣು-ಹಂಪಲು, ತಿಂಡಿ-ಆಹಾರ ಪದಾರ್ಥಗಳು ಮಾತ್ರ ಪ್ರಸಾದ ಅಲ್ಲ. ಹೂವು-ತುಲಸಿಗಳೂ ಪ್ರಸಾದವೇ. ಪೂಜೆಯ ವೇಳೆ ಕೊಟ್ಟ ವಸ್ತ್ರವೂ ಪ್ರಸಾದವಾಗಿ "ಶೇಷ ವಸ್ತ್ರ" ಎಂದು ಉಪಯೋಗ ಆಯಿತು. ಧೂಪಕ್ಕೆ ಉಪಯೋಗಿಸಿದ ಕೆಂಡವು ಆರಿದ ಬಳಿಕ ಇಜ್ಜಲಾಯಿತು. ಅದೂ ಪ್ರಸಾದ ಆದುದರಿಂದ ಹಣೆಯಲ್ಲಿ ಅಂಗಾರ ಆಗಿ ಸ್ವೀಕಾರ ಆಯಿತು. ತಿಂಡಿ-ತಿನಿಸುಗಳು, ಹಣ್ಣು-ಹಂಪಲುಗಳು ಸೇವನೆಗೆ ಯೋಗ್ಯ ಪರಮ ಪ್ರಸಾದ ಆಯಿತು. ಹೀಗೆ ಅವುಗಳ ಪೂಜ್ಯತೆ. 

ಪೂಜೆಗೆ ಗಂಧ ತೆಗೆದು ಅರ್ಪಿಸಿದ್ದಾಯಿತು. ಅದರಲ್ಲಿ ಮಿಕ್ಕಿದ್ದು ಹೀಗೆಯೇ ಪ್ರಸಾದ ಆಯಿತು. ನಮ್ಮ ದೇಹದ ಮೇಲೆ ಹಚ್ಚಿಕೊಳ್ಳುವುದಾಯಿತು. ಅದೇ ಪ್ರಸಾದ ಆದಮೇಲೆ ಅವನ ವಿಗ್ರಹದ ಮೇಲೆ ಏರಿಸಿದ ಗಂಧ ದೊಡ್ಡ ಪ್ರಸಾದ ಎಂದು ಬೇರೆ ಹೇಳಬೇಕಾಗಿಲ್ಲ. ಪ್ರಹ್ಲಾದರಾಜರು ಅವನ್ನು ಪ್ರಸಾದರೂಪದಲ್ಲಿ ಧರಿಸಿದರಂತೆ. 

ಇದೇ ಪ್ರಹ್ಲಾದರಾಜರು ಈಗ ಶ್ರೀ ರಾಘವೇಂದ್ರ ರಾಯರಾಗಿ ಮಂತ್ರಾಲಯದಲ್ಲಿ ವೃಂದಾವನದಲ್ಲಿ ಕುಳಿತಿದ್ದಾರೆ ಎಂದು ನಂಬಿಕೆ. ಅದೇ ಭಾವ ಮೃತ್ತಿಕಾ ವೃಂದಾವನಗಳಲ್ಲಿಯೂ ಉಂಟು. "ಅಂಥ  ಇಂಥವರಲ್ಲ" ಅನ್ನುವ ಹಿಂದಿನ ಒಂದು ಸಂಚಿಕೆಯಲ್ಲಿ ಇದನ್ನು ನೋಡಿದ್ದೇವೆ. (ಇಲ್ಲಿ ಕ್ಲಿಕ್ ಮಾಡಿ ಅದನ್ನು ಓದಬಹುದು). ಈ ಕಾರಣ ಅಕ್ಷಯ ತೃತೀಯಾ ದಿನದಂದು ಸಿಂಹಾಚಲ ಶ್ರೀ ವರಾಹ-ಲಕ್ಷ್ಮಿ ನರಸಿಂಹನ ದೇವಾಲಯದಲ್ಲಿ ಮೂಲ ಮೂರ್ತಿಗೆ ಗಂಧವಿಲ್ಲದ ದಿನ ಇಲ್ಲಿ ಶ್ರೀ ರಾಯರ ವೃಂದಾವನಕ್ಕೆ ಅವನ ಪ್ರಸಾದ ರೂಪದ ಗಂಧ ಲೇಪನ. ವರುಷದ ಎಲ್ಲ ದಿನ ಅಲ್ಲಿ ಅವನಿಗೆ ಗಂಧ ಲೇಪನ ಮತ್ತು ಭಕ್ತರಿಗೆ ಹಾಗೆ ದರ್ಶನ. ಅವನಿಗೆ ಹೀಗೆ ಗಂಧವಿಲ್ಲದ ಒಂದು ದಿನ ಇಲ್ಲಿ ಶ್ರೀ ರಾಯರಿಗೆ ಅವನ ಪ್ರಸಾದರೂಪದ ಗಂಧ ಲೇಪನ ಮತ್ತು ಭಕ್ತರಿಗೆ ಹೀಗೆ ದರ್ಶನ. ಮಾರನೆಯ ದಿನ ವೃಂದಾವನದ ಮೇಲಿರುವ ಗಂಧ ಶ್ರೀ ರಾಯರ ಪ್ರಸಾದ. ಅದಕ್ಕೆ ಬಹಳ ಗೌರವ ಮತ್ತು ಬೆಲೆ. ಹೀಗೆ ನಡೆಯುತ್ತಿದೆ!

Saturday, June 21, 2025

ಅಷ್ಟ ಭೋಗಗಳು


ಹಿಂದಿನ ಸಂಚಿಕೆಯಲ್ಲಿ "ಕುಳಿತುಕೊಳ್ಳುವ ಆಸನಗಳು" ಎನ್ನುವ ಶೀರ್ಷಿಕೆಯಡಿ ಧ್ಯಾನ-ಜಪ ಮುಂತಾದುವುಗಳ ಅನುಷ್ಠಾನಕ್ಕೆ ಕುಳಿತುಕೊಳ್ಳುವಾಗ ಉಪಯೋಗಿಸುವ ಪೀಠಗಳು (ಆಸನಗಳು) ಮತ್ತು ಅವುಗಳಿಂದ ಬರಬಹುದಾದ ಶುಭ-ಅಶುಭ ಫಲಗಳನ್ನು ನೋಡಿದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ನಮ್ಮ ಆಚರಣೆಗಳಲ್ಲಿ ದೇವರು-ದೇವತೆಗಳನ್ನು ಪ್ರಾರ್ಥಿಸುವಾಗ  "ಸಕಲ ಭೋಗ-ಭಾಗ್ಯ ಸಿಧ್ಯರ್ಥಂ" ಎಂದು ಸಂಕಲ್ಪಿಸಿ ಬೇಡುವುದು ನಡೆದುಬಂದ ವಾಡಿಕೆ. ಗುರು-ಹಿರಿಯರ ಆಶೀರ್ವಾದ ಪಡೆಯುವಾಗ "ಸಕಲ ಭೋಗ-ಭಾಗ್ಯ ಸಿದ್ಧಿರಸ್ತು" ಎಂದು ಅವರು ಆಶೀರ್ವದಿಸುವೂ ಉಂಟು. 

ಈ ಭೋಗಗಳು ಮತ್ತು ಭಾಗ್ಯಗಳು ಯಾವುವು? ಸಾಮಾನ್ಯವಾಗಿ "ಅಷ್ಟಭೋಗಗಳು" ಮತ್ತು "ಅಷ್ಟ ಭಾಗ್ಯಗಳು" ಎಂದು ಹೇಳುತ್ತಾರೆ. ಇವುಗಳ ವಿವರವೇನು ಎಂದು ಸ್ನೇಹಿತರೊಬ್ಬರು ಕೇಳಿದ್ದಾರೆ. 

ಈ ಅಷ್ಟ ಭಾಗ್ಯಗಳು ಯಾವವು ಎನ್ನುವುದನ್ನು ಈಗ ನೋಡೋಣ. 

*****

ಮನುಷ್ಯನು ಸುಖಜೀವನ ನಡೆಸುವುದಕ್ಕೆ ಕೆಲವು ರೀತಿಯ ಅನುಕೂಲಗಳು ಬೇಕೇ ಬೇಕು. ಸಮಾಜವನ್ನು ತೊರೆದು ಕಾಡು-ಮೇಡುಗಳಲ್ಲಿ ಸನ್ಯಾಸಿಯ ಜೀವನ ನಡೆಸುವುದು ಒಂದು ರೀತಿ. ಅಲ್ಲಿ ಯಾವುದೇ ಭೋಗಕ್ಕೆ ಸ್ಥಾನವಿಲ್ಲ. ಆದರೆ ಸಮಾಜದಲ್ಲಿ ಗೃಹಸ್ಥನಾಗಿ ಬದುಕುವ ವ್ಯಕ್ತಿಗೆ ಈ ರೀತಿಯ ಸನ್ಯಾಸಿ ಜೀವನ ಅಷ್ಟು ಹೊಂದುವುದಿಲ್ಲ. ಭೋಗ-ಭಾಗ್ಯಗಳ ಹಿಂದೆ ಬಿದ್ದು ಸಾಧನೆಯನ್ನು ಗೌಣವಾಗಿ ಕಾಣುವುದು ಮನುಷ್ಯ ಜೀವನದ ಉದ್ದೇಶವಲ್ಲ. ಆದರೆ, ಈ ಕಾರಣಕ್ಕಾಗಿ ಗೃಹಸ್ಥನು ಎಲ್ಲವನ್ನೂ ತ್ಯಜಿಸುವುದು ಸಾಧ್ಯವಿಲ್ಲ. ತನ್ನ ಸ್ವಂತ ಉಪಯೋಗಕ್ಕೆ, ಮತ್ತು ಅದಕ್ಕಿಂತ ಹೆಚ್ಚಾಗಿ ತನ್ನನ್ನು ನಂಬಿ ಜೊತೆಯಲ್ಲಿ ಬಾಳುವ ಕುಟುಂಬದ ಸದಸ್ಯರಿಗೆ ಸುಖ ಜೀವನ ನಡೆಸಲು ಈ ಭೋಗ-ಭಾಗ್ಯಗಳು ಬೇಕು. ಇವೆರಡಿಕ್ಕಿಂತ ಹೆಚ್ಚಾಗಿ ತನ್ನ ಮನೆಗೆ ಬಂದ ಅತಿಥಿ-ಅಭ್ಯಾಗತರ ಸೇವೆಗೆ ಈ ಭೋಗ ವಸ್ತುಗಳು ಬೇಕಾಗುತ್ತವೆ. 

ಕಾಳಿದಾಸ ಮಹಾಕವಿಯ "ರಘುವಂಶ" ಮಹಾಕಾವ್ಯದಲ್ಲಿ ವರತಂತು ಮಹರ್ಷಿಗಳ ಶಿಷ್ಯನಾದ ಕೌತ್ಸ ಎಂಬ ಋಷಿಯು ಗುರುಕುಲದಲ್ಲಿ ವಿದ್ಯಾಭ್ಯಾಸ ಮುಗಿಸಿ ತನ್ನ ಗುರುಗಳಾದ ವರತಂತುಗಳಿಗೆ ಗುರುದಕ್ಷಿಣೆ ಕೊಡಲು ರಘು ಮಹಾರಾಜನ ಬಳಿ ಸಹಾಯಕ್ಕಾಗಿ ಬರುವ ಪ್ರಸಂಗವಿದೆ. ಅಲ್ಲಿ ತನ್ನನ್ನು ಎದುರುಗೊಂಡು, ಸ್ವಾಗತಿಸಿ ಕುಶಲ ಪ್ರಶ್ನೆಗಳನ್ನು ಮಾಡಿದ ಮಹಾರಾಜನಿಗೆ ಕೌತ್ಸನು ಉತ್ತರ ಕೊಡುವಾಗ "ಸರ್ವೋಪಕಾರಕ್ಷಮಮಾಶ್ರಮಂ ತೇ" ಎಂದು ಹೇಳುತ್ತಾನೆ. ನಾಲ್ಕು ವರ್ಣಾಶ್ರಮಗಳಲ್ಲಿ ಗೃಹಸ್ಥಾಶ್ರಮ ಬಹಳ ಮುಖ್ಯವಾದವನು. ಉಳಿದ ಮೂರು ಆಶ್ರಮ ಜೀವಿಗಳಾದ ಬ್ರಹ್ಮಚಾರಿ, ಸನ್ಯಾಸಿ ಮತ್ತು ವಾನಪ್ರಸ್ಥರು ಗೃಹಸ್ಥರನ್ನೇ ಅನೇಕ ವಿಷಯಗಳಿಗೆ ಆಶ್ರಯಿಸಬೇಕಾಗುತ್ತದೆ. ಬ್ರಹ್ಮಚಾರಿಗಳ ಮತ್ತು ಸನ್ಯಾಸಿಗಳ ಜೀವನಕ್ಕೆ ಗೃಹಸ್ಥರೇ ಆಧಾರ. 

ಸ್ವಂತ ಸಂಪಾದನೆಯಲ್ಲದ ವಿದ್ಯಾರ್ಥಿಗಳು ಮತ್ತು ಸಂಪಾದನೆ ಮಾಡಬಾರದ ಸನ್ಯಾಸಿಗಳ ಜೀವನ ಸಮಾಜದಲ್ಲಿರುವ ಗೃಹಸ್ಥರ ಸಹಾಯದಿಂದಲೇ ನಡೆಯುತ್ತದೆ. ಹೀಗಿರುವಾಗ ಗೃಹಸ್ಥರು ಈ ಭೋಗ-ಭಾಗ್ಯಗಳ ವಿಷಯದಲ್ಲಿ ಅತಿಯಾದ ಆಸಕ್ತಿ ತಾಳದಿದ್ದರೂ ಪೂರ್ಣವಾಗಿ ನಿರಾಸಕ್ತರಾಗಲು ಸಾಧ್ಯವಿಲ್ಲ. 
*****  

  1. "ಅಷ್ಟ ಭಾಗ್ಯಗಳು" ಎಂದು ಪರಿಗಣಿತವಾದ ಎಂಟರಲ್ಲಿ ಮೊದಲನೆಯದು "ಅನ್ನ". ಯಾವ ಪ್ರಾಣಿಯ ಜೀವನ ನಡೆಯಬೇಕಾದರೂ ಮೊದಲನೆಯ ಅವಶ್ಯಕತೆ ಆಹಾರ. ಇಲ್ಲಿ ಅನ್ನ ಎಂದರೆ, ಹಿಂದೊಮ್ಮೆ ಬೇರೆ ಸಂಚಿಕೆಯಲ್ಲಿ ಚರ್ಚಿಸಿದಂತೆ, ಅಕ್ಕಿಯನ್ನು ಬೇಯಿಸಿ ಮಾಡಿದ ಪದಾರ್ಥ ಮಾತ್ರವಲ್ಲ. ದೇಹದ ಬೆಳವಣಿಗೆ ಮತ್ತು ಬೆಳೆದ ದೇಹವನ್ನು ಸುಸ್ಥಿತಿಯಲ್ಲಿ ಕಾಪಾಡಲು ಬೇಕಾಗುವ ಎಲ್ಲ ಖಾದ್ಯಗಳಿಗೂ "ಅನ್ನ" ಎಂದು ನಿರ್ದೇಶಿಸಿ "ಬೃಹದಾರಣ್ಯಕ ಉಪನಿಷತ್" ಹೇಳುವ "ಸಪ್ತಾನ್ನ ಪ್ರಕರಣ" ತಿಳಿಸಿಕೊಡುತ್ತದೆ. ಅನ್ನವಿಲ್ಲದೇ ಜೀವನವಿಲ್ಲ. ಆದ್ದರಿಂದ ಎಂಟು ಭಾಗ್ಯಗಳಲ್ಲಿ ಮೊದಲೆನೆಯದು ಅನ್ನ. 
  2. ಎರಡನೆಯ ಭಾಗ್ಯ "ಉದಕ". ನೀರಿಲ್ಲದೆ ಬದುಕುವುದು ಸಾಧ್ಯವಿಲ್ಲ. ಉಸಿರಾಡುವ ಎಲ್ಲಾ ಪ್ರಾಣಿಗಳಿಗೂ ಗಾಳಿಯ ನಂತರ ನೀರು ಅತಿ ಮುಖ್ಯ. ವಾಸ್ತವಾಗಿ ಅನ್ನಕ್ಕಿಂತ ಮೊದಲು ನೀರು ಬೇಕು. ಆದರೆ ಕುಡಿಯುವ ನೀರು ಸೃಷ್ಟಿಯಲ್ಲಿ ಸುಲಭವಾಗಿ ಸಿಗುವುದು. ಆದ್ದರಿಂದ ಇಲ್ಲಿ ಅನ್ನ  ಎರಡನೆಯದು ಎಂದು ಗಣಿತವಾಗಿದೆ. (ಮುಂದಿನ ಸಂಚಿಕೆಯಲ್ಲಿ ಚರ್ಚಿಸುವ "ಅಷ್ಟ ಭಾಗ್ಯಗಳು" ಎಂದು ನಿರ್ದೇಶಿಸುವ ಎಂಟು ಭಾಗ್ಯಗಳಲ್ಲಿ ನೀರೇ ಮೊದಲನೆಯದು. ಅದರಲ್ಲಿ ಅನ್ನ ಎಂಟರ ಲೆಕ್ಕದಲ್ಲಿ ಸೇರುವುದಿಲ್ಲ. ಮನುಷ್ಯನ ಅನ್ಯಾಯ ಜೀವನ ಕ್ರಮಗಳಿಂದ ಈಚಿನ ದಿನಗಳಲ್ಲಿ ನೀರು ಸಿಗುವುದು ಕಷ್ಟವಾಗಿದೆ).
  3. ಮೂರನೆಯ ಭಾಗ್ಯ "ತಾಂಬೂಲ". ತಾಂಬೂಲ ಎಂದರೆ ಕೇವಲ ಎಲೆ-ಅಡಿಕೆ-ಸುಣ್ಣ ಮಾತ್ರವಲ್ಲ. ತಾಂಬೂಲ ಸೇವನೆ ಊಟದ ಕೊನೆಯ ಅಧ್ಯಾಯ. ಅವುಗಳಲ್ಲಿ ಅವರವರ ಅಂತಸ್ತಿಗೆ ತಕ್ಕಂತೆ ಅಂತರವೂ ಉಂಟು. ಅದು ಕೇವಲ ಗೋಟು ಅಡಿಕೆ ಇರಬಹುದು ಅಥವಾ ಬಣ್ಣ ಕಟ್ಟಿದ, ಕಾಚು, ಸಕ್ಕರೆ, ಸುಗಂಧ ಮಿಶ್ರಿತವಾದ ಪುಡಿಯಡಕೆ ಇರಬಹುದು. ತಾಂಬೂಲ ಸೇವನೆ ಇದೆ ಅಂದರೆ ಊಟದ ನಂತರ ಸ್ವಲ್ಪ ವಿಶ್ರಾಂತಿಗೂ ಅವಕಾಶ ಇದೆ ಎಂದು ಅರ್ಥ. ಜೀವನದ ಇತರ ಚಟುವಟಿಕೆಗಳಿಗೆ ತಕ್ಷಣ ಓಡಬೇಕಾಗಿಲ್ಲ. ಕುಟುಂಬದ ಇತರ  ಸದಸ್ಯರ, ಬಂಧು-ಬಾಂಧವರ, ಸ್ನೇಹಿತರ ಕೂಡ ಸ್ವಲ್ಪ ವಿನೋದದ ಕ್ಷಣಗಳನ್ನೂ ಕಳೆಯುವ ಅವಕಾಶವೂ ಒಂದು ಭೋಗವೇ. 
  4. ನಾಲ್ಕನೆಯದು "ಪುಷ್ಪ". ಈಗ ಗಂಡಸರು ಹೂವಿನ ಹಾರಗಳನ್ನು ಧರಿಸುವುದು ತಪ್ಪಿಹೋಗಿದೆ. ಸ್ತ್ರೀಯರು ಕೂಡ  ಮರೆತಿದ್ದಾರೆ. ಸುಗಂಧಭರಿತ ಹೂವುಗಳು ಮತ್ತು ಹೂವಿನ ಹಾರಗಳನ್ನು ಉಪಯೋಗಿಸುವುದು ಒಂದು ಭೋಗದ ರೀತಿ. ಅನೇಕ ಬಣ್ಣದ, ಸುವಾಸನೆಯ, ಗಾತ್ರದ ಹೂವುಗಳು ಸೊಗಸನ್ನು ಹೆಚ್ಚಿಸುವುದರ ಜೊತೆಗೆ ವಾತಾವರಣವನ್ನೂ ರಂಗೇರಿಸಬಲ್ಲುದು. 
  5. ಐದನೆಯದು "ಚಂದನ". ಗಂಧದ ಮರಗಳು ಹೇರಳವಾಗಿ ಇದ್ದಾಗಿನ ಮಾತು. ಗಂಧ ತಂದು ತೇಯ್ದು ಸುಗಂಧ ಪೂಸಿಕೊಳ್ಳುತ್ತಿದ್ದ ಕಾಲದ ಮಾತು ಇದು. ಪುಟ್ಟಕೃಷ್ಣನ ದಾಸರು ವರ್ಣಿಸುವುದು "ಪೂಸಿದ ಶ್ರೀಗಂಧ ಮಯ್ಯೊಳಗಮ್ಮ" ಎಂದು. (ಈಗ ಅದು ಕೇವಲ ರಾಸಾಯನಿಕ ಗಂಧ ಸಿಂಪಡಣೆಗೆ ಸೀಮಿತವಾಗಿದೆ. ಕೆಲವುಕಡೆಯಂತೂ ದೊಡ್ಡ ಫ್ಯಾನುಗಳು ಈ ಕೆಲವನ್ನು ಬೇಜಾರಿಲ್ಲದೆ ಮಾಡುತ್ತವೆ). 
  6. ಆರನೆಯ ಭೋಗ "ವಸನ". ಮಾನ ಮುಚ್ಚಲು ಬಟ್ಟೆ ಅನ್ನ-ನೀರಿನ ನಂತರದ ಸ್ಥಾನ ಪಡೆಯುತ್ತದೆ. ಅದು ಭೋಗದ ವಸ್ತುವೂ ಆಗಬಹುದು. ಬರಿಯ ಶುಭ್ರ ಬಟ್ಟೆಯಿಂದ ಜರತಾರಿ ಸೀರೆ-ಪಂಚೆ-ದಿರಿಸು, ಮುಂಡಾಸು, ಮೇಲು ಹೊದಿಕೆ, ಮುಂತಾದ ಅನೇಕ ರೀತಿಯಲ್ಲಿ ಜೀವನಕ್ಕೆ ಸೊಗಸನ್ನು ತಂದುಕೊಡುವ ಭೋಗ ಈ ವಸನದ್ದು. 
  7. ಭೋಗಗಳಲ್ಲಿ ಏಳನೆಯದು "ಶಯ್ಯಾ". ಊಟವಾಗಿ ಹೊಟ್ಟೆ ತುಂಬಿತು. ಬಟ್ಟೆ ಸಿಕ್ಕಿತು. ನಂತರದ ಸ್ಥಾನ ದಣಿದ ದೇಹಕ್ಕೆ ನಿದ್ರೆ ಕೊಡುವುದು. ನೆಲದ ಮೇಲೆ ತೋಳನ್ನೇ ತಲೆದಿಂಬಾಗಿ ಇಟ್ಟುಕೊಂಡು ಮಲಗಬಹುದು. ಅದನ್ನು ಯಾರೂ ಭೋಗ ಅನ್ನುವುದಿಲ್ಲ. ಅದೇ ಸೊಗಸಾದ ಮೆತ್ತನೆಯ ಹಾಸಿಗೆಯ ಮೇಲೆ ಆಗಬಹುದು. ಸುಪ್ಪತ್ತಿಗೆಯೂ ಆಗಬಹುದು. ಇವು ನೆಲದ ಬದಲು ಸುಂದರ ಮಂಚದ ಮೇಲೂ ಇರಬಹುದು. ಸೊಳ್ಳೆಪರದೆ ಸೇರಿರಬಹುದು. ಹೊದೆಯಲು ಒಳ್ಳೆಯ ಪದರಗಳ ಹೊದಿಕೆ ಇರಬಹುದು. ಚಳಿಗಾಲದಲ್ಲಿ ಉಣ್ಣೆಯದು ಇರಬಹುದು. ಹೀಗೆ ಭೋಗದ ವಿವಿಧ ಮಜಲುಗಳು. ಜೊತೆಗೆ ತನ್ನದೇ ಮನೆಯಲ್ಲಿಯೂ ಇರಬಹುದು. 
  8. ಎಂಟನೆಯ ಭೋಗವೆಂದರೆ "ಅಲಂಕಾರ". ಬರೀ ಬಟ್ಟೆ ಉಟ್ಟರೆ ಸಾಕೆ? ಆಭರಣಗಳು ಬೇಡವೇ? ಚಿನ್ನ, ವಜ್ರ ಮುಂತಾದವು. ಕುಂಕುಮ ಮುಂತಾದ ಬಣ್ಣ-ಬಣ್ಣದ ದ್ರವ್ಯಗಳು. ಸುಂದರವಾದ ಕೈಚೀಲ. ಕೈಗೆ ಕಸೂತಿ ಹಾಕಿದ ಕರ್ಚೀಫು. ಸ್ವಲ್ಪ ವಯಸ್ಸಾದ ಮೇಲೆ ಕೈಗೊಂಡು ಕೊರೆದ ಬೆತ್ತದ ಕೋಲು. ಹೀಗೆ. ಅವರವರ ಯೋಗ್ಯತೆ-ಅಭಿರುಚಿಗಳಿಗೆ ತಕ್ಕಂತೆ ಇವುಗಳ ಪಟ್ಟಿಯನ್ನು ಪಸರಿಸಬಹುದು. 
ಇಲ್ಲಿಗೆ ಎಂಟು ರೀತಿಯ "ಅಷ್ಟ ಭೋಗ" ವಿಷಯದ ವಿವರಣೆ ಸಾಕು. ಮುಂದೆ ಇವನ್ನು ವಿಸ್ತರಿಸುವುದು ಅವರವರ ಮನಸ್ಸಿಗೆ ಬಿಡುವುದು ಒಳ್ಳೆಯದು. 

*****

ಅಷ್ಟ ಭೋಗಗಳ ವಿಷಯಗಳನ್ನು ಇಬ್ಬರು ಬಲ್ಲರು. ಇವು ಇಲ್ಲದವರು. ಇವು ಚೆನ್ನಾಗಿ ಇದ್ದು ಅನುಭವಿಸುವವರು. ಎಲ್ಲ ಭೋಗಗಳ ಸವಲತ್ತಿದ್ದರೂ ಅನುಭವಿಸಲು ಸಾಧ್ಯವಿಲ್ಲದವರ ವಿಷಯ ಚಿಂತಿಸುವುದು ಬೇಡ. 

"ಅಷ್ಟ ಭಾಗ್ಯಗಳು" ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.