Showing posts with label Raghavendra. Show all posts
Showing posts with label Raghavendra. Show all posts

Monday, February 9, 2026

ಅವರೇ ಆಗಬೇಕೆಂದಿಲ್ಲ!


ಎರಡು ತಿಂಗಳ ಹಿಂದೆ (ಡಿಸೆಂಬರ್ 2025) "ಅಂಥ ಇಂಥವರಲ್ಲ" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಅನಂತಾದ್ರೀಶ ಅಂಕಿತದ ಗೋಕಾವಿ ಅನಂತಾದ್ರೀಶ ದಾಸರ (ಗೋಕಾಕ್  ಅನಂತಾಚಾರ್ಯರು) ಕೃತಿಯೊಂದರಲ್ಲಿ ವಿವರಿಸಿರುವ ಶ್ರೀ ರಾಘವೇಂದ್ರ ರಾಯರ ಗ್ರಂಥಗಳ ಮತ್ತು ಅವರ ವ್ಯಕ್ತಿತ್ವದ ಒಂದು ಸಣ್ಣ ನೋಟ ಕಾಣುವ ಪ್ರಯತ್ನ ಮಾಡಿದ್ದೆವು. (ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು).

ಒಬ್ಬರ ಗುಣ ವಿಶೇಷಗಳನ್ನು ತಿಳಿದು ಅವುಗಳನ್ನು ಹೇಳುವುದು ಸ್ತೋತ್ರ ಎನಿಸಿಕೊಳ್ಳುತ್ತದೆ. ನಾವು ಅನೇಕರು ಪ್ರತಿದಿನ ನಮಗೆ ಅನುಕೂಲವಿರುವ ಸಮಯಗಳಲ್ಲಿ ನಮ್ಮ ನಮ್ಮ ಪದ್ದತಿಗಳಂತೆ ಸ್ತೋತ್ರಗಳನ್ನು ಹೇಳಿಕೊಳ್ಳುವ ಪರಿಪಾಠ ಇಟ್ಟುಕೊಂಡಿದ್ದೇವೆ. ಈ ರೀತಿಯ ಅನೇಕ ಸ್ತೋತ್ರಗಳು ಒಳ್ಳೆಯ ಕಾವ್ಯಗುಣಗಳನ್ನು ಹೊಂದಿವೆ. ಈ ಬಗೆಯ ಸ್ತೋತ್ರಗಳನ್ನು ಹೇಳಿಕೊಳ್ಳುವುದರಿಂದ ಪದಗಳ ಉಚ್ಚಾರಣೆ ಚೆನ್ನಾಗಿ ಆಗಿ ವಾಕ್ಶುದ್ಧಿಯೂ ಆಗುವುದು. ಸಾಮಾನ್ಯವಾಗಿ ಇಂತಹ ಸ್ತೋತ್ರಗಳು ಕಿವಿಗಳಿಗೆ ಇಂಪಾಗಿ, ಮನಸ್ಸಿಗೂ ಹಿತವಾಗಿ ಇರುತ್ತವೆ. ನೆನಪಿನ ಶಕ್ತಿ ವೃದ್ಧಿಯೂ ಆಗುವುದುಂಟು. ಒಟ್ಟಾರೆ ದಿನಚರಿ ಮತ್ತು ನಡವಳಿಕೆಯಲ್ಲಿ ಒಂದು ರೀತಿಯ ಶಿಸ್ತು ಸಹ ಬರುತ್ತದೆ.  

ಅನೇಕ ವೇಳೆ ಈ ಸ್ತೋತ್ರಗಳಲ್ಲಿ ಹೇಳಿರುವ ವಿಷಯಗಳು ನಮಗೆ ತಿಳಿದಿರುವುದಿಲ್ಲ. ಮನೆಯಲ್ಲಿ ಹಿರಿಯರು ಹೇಳಿಕೊಳ್ಳುತ್ತಿದ್ದಂತೆ, ಅಥವಾ ನಮ್ಮ ನಮ್ಮ ಗುರುಗಳು ಹೇಳಿಕೊಟ್ಟಿದ್ದಂತೆ ಈ ಸ್ತೋತ್ರಗಳನ್ನು ಹೇಳಿಕೊಳ್ಳುತ್ತೇವೆ. ಅಂದಿನ ಸಂದರ್ಭಗಳಿಂದಲೋ, ಅಥವಾ ಸಮಯದ ಅಭಾವದಿಂದಲೋ, ಅವುಗಳ ಪೂರ್ತಿ ಅರ್ಥ ವಿಶೇಷಗಳನ್ನು ಅವರು ಹೇಳಿರುವುದಿಲ್ಲ. ಚಿಕ್ಕ ವಯಸ್ಸಿನಲ್ಲಿ ಅದನ್ನು ಕೇಳಬೇಕೆಂದು ನಮಗೂ ತೋಚಿರುವುದಿಲ್ಲ. ಮುಂದೆಯೂ ನಾವು ತಿಳಿಯುವ ಪ್ರಯತ್ನ ಮಾಡಿರುವುದಿಲ್ಲ. ಕಾಲಕ್ರಮದಲ್ಲಿ ಅವುಗಳ ಅರ್ಥ ಹೇಗೋ ತಿಳಿದುಬಂದಾಗ "ಒಹೋ, ಇದರ ಅರ್ಥ ಹೀಗಿದೆಯೇ?" ಎಂದು ನಾವು ಆಶ್ಚರ್ಯಪಡುವಂತೆ ಆಗುತ್ತದೆ. 

*****

ನಮಗೆ ಯಾವುದೋ ಒಂದು ಸಂಸ್ಥೆಯಲ್ಲಿ ಒಂದು ಕೆಲಸ ಆಗಬೇಕು. ಅದನ್ನು ಮಾಡಿಸಿಕೊಳ್ಳುವುದಕ್ಕೆ ನಮಗೆ ಶಕ್ತಿಯಿಲ್ಲ. ಅಲ್ಲಿ ಯಾರನ್ನು ಕಾಣಬೇಕು ಎಂದು ತಿಳಿದಿಲ್ಲ. ಹೇಗೆ ಕೇಳಬೇಕು ಎಂದು ಗೊತ್ತಿಲ್ಲ. ಏನೇನು ದಸ್ತಾವೇಜು (ಡಾಕ್ಯುಮೆಂಟ್) ತೆಗೆದುಕೊಂಡು ಹೋಗಬೇಕು ಎಂದು ಅರಿವಿಲ್ಲ. ಆದರೂ ಆ ಕೆಲಸವಂತೂ ಆಗಬೇಕು. ಏನು ಮಾಡುವುದು? ಲೋಕಾರೂಢಿಯಲ್ಲಿ ಇಂತಹ ವಿಷಯ ತಿಳಿದ, ನಮಗೆ ಗೊತ್ತಿರುವ ಯಾರೋ ಒಬ್ಬರನ್ನು ಕೇಳುತ್ತೇವೆ. ಅವರು ಕೆಲವು ಸೂಚನೆಗಳನ್ನು ಕೊಡುತ್ತಾರೆ. ಅದರ ಪ್ರಕಾರ ದಸ್ತಾವೇಜು ಹೊಂದಿಸಿಕೊಳ್ಳುತ್ತೇವೆ. ಸಂಸ್ಥೆಯಲ್ಲಿ ಯಾರನ್ನು, ಯಾವಾಗ, ಹೇಗೆ ಕಾಣಬೇಕು ಎಂದು ಅವರು ಹೇಳಿಕೊಟ್ಟಂತೆ ಮಾಡುತ್ತೇವೆ. ಯಾವ ರೀತಿ ಕೇಳಬೇಕು ಎಂದು ಅವರು ಮಾರ್ಗದರ್ಶನ ಕೊಟ್ಟಂತೆ ನಡೆದುಕೊಳ್ಳುತ್ತೇವೆ. ಅನೇಕವೇಳೆ ಹೀಗೆ ಮಾಡುವುದರಿಂದ ನಮ್ಮ ಕೆಲಸ ಆಗುತ್ತದೆ. ಹೀಗಿದ್ದೂ, ಕೆಲವೊಮ್ಮೆ ಕೆಲಸ ಆಗದಿರುವುದೂ ಉಂಟು.  

ಕೆಲವು ಕೆಲಸಗಳು ಅವುಗಳ ಸೂಕ್ಷ್ಮತೆ ಗೊತ್ತಿರುವ ದೊಡ್ಡವರೊಬ್ಬರು ನಮ್ಮ ಜೊತೆ ಬಂದಾಗ ಬಹಳ ಸುಲಭವಾಗಿ ಆಗುತ್ತವೆ. ತುಂಬಾ ದೊಡ್ಡವರ ಬಳಿ ಹೀಗೆ ಸಹಾಯ ಕೇಳಿಕೊಂಡು ಹೋಗುವ ಜನರ ಸಂಖ್ಯೆಯೂ ದೊಡ್ಡದು. ಅವರು ಎಲ್ಲರ ಜೊತೆ ಹೋಗಿ ಕೆಲಸ ಮಾಡಿಸಿಕೊಡಲು ಆಗುವುದಿಲ್ಲ. ಆಗ ಅವರು ಒಂದು ಪತ್ರ (ಲೆಟರ್) ಬರೆದುಕೊಡುತ್ತಾರೆ. ಸಂಸ್ಥೆಯಲ್ಲಿ ಸರಿಯಾದವರ ಬಳಿ ಆ ಪತ್ರ ಕೊಟ್ಟರೆ ನಮ್ಮ ಕೆಲಸ ಸುಲಭವಾಗಿ ಆಗುತ್ತದೆ. ಆ ದೊಡ್ಡವರು ಕೊಟ್ಟ ಕಾಗದಕ್ಕೇ ಅಷ್ಟು ಶಕ್ತಿ ಉಂಟು! ಕೆಲವು ಕೆಲಸಗಳು ನಮಗೆ ಬಹಳ ಮುಖ್ಯ. ದೊಡ್ಡವರ ಬಳಿ ಹೋದಾಗ ಅವರು ನಮ್ಮ ಜೊತೆ ಬರುವುದಿಲ್ಲ. ಪತ್ರವನ್ನೂ ಕೊಡುವುದಿಲ್ಲ. ಯಾರೋ ಒಬ್ಬರ ಹೆಸರನ್ನು ಹೇಳಿ "ಅವರ ಬಳಿ ನಾನು ಕಳುಹಿಸಿದೆ ಎಂದು ಹೇಳು" ಅನ್ನುತ್ತಾರೆ. ಅಷ್ಟು ಮಾಡಿದರೆ ನಮ್ಮ ಕೆಲಸ ಆಗುತ್ತದೆ! 

ದೊಡ್ಡವರ ಶಕ್ತಿ ಅಂತಹುದು. ಕೆಲವೊಮ್ಮೆ, ಬಹಳ ಗಹನವಾದ ಕೆಲಸವಾದರೆ, ಅವರೇ ಬರಬೇಕಾಗುತ್ತದೆ. ಮತ್ತೆ ಕೆಲವು ಸಂದರ್ಭದಲ್ಲಿ ಅವರು ಕೊಟ್ಟ ಕಾಗದವೇ ಸಾಕಾಗುತ್ತದೆ. ಇನ್ನೂ ಅನೇಕ ಸಲ ಅವರ ಹೆಸರಿನಿಂದಲೇ ನಮ್ಮ ಕೆಲಸಗಳು ಸುಸೂತ್ರವಾಗಿ ಆಗುವುದುಂಟು. "ಇವರು ಅವರ ಕಡೆಯವರಂತೆ. ಮಾಡಿ ಕೊಟ್ಟುಬಿಡು" ಎಂದು ಮೇಲಧಿಕಾರಿಗಳು ಕೈಕೆಳಗಿನವರಿಗೆ ಹೇಳುತ್ತಾರೆ. ಒಟ್ಟಿನಲ್ಲಿ ನಮ್ಮ ಗುರಿ ಸಾಧಿಸಿತು. ನಮಗೆ ಬೇಕಾದುದು ಆಯಿತು. ನಮಗೆ ಅದು ಮುಖ್ಯ. 
*****

ಮಂತ್ರಾಲಯ ಪ್ರಭುಗಳ ವಿಷಯದಲ್ಲಿ ಇದು ಹೇಗೆ ಕೆಲಸ ಮಾಡುತ್ತದೆ? "ಕರೆದಲ್ಲಿ ಬರುವ ರಾಯರು" ಎಂದೇ ಅವರಿಗೆ ವಿಶೇಷಣ. ದೊಡ್ಡವರ ಬಳಿ ನಾವು ಹೋಗುವುದು ಲೋಕಾರೂಢಿ. ಇವರು ಅತ್ಯಂತ ಕರುಣಾಶಾಲಿಗಳು. ಅದಕ್ಕೇ ಅವರಿಗೆ "ನಮೋ ಅತ್ಯಂತ ದಯಾಳವೇ" ಅನ್ನುವುದು. ಅವರು ಬರೀ ದಯಾಳುಗಳಲ್ಲ. ಅವರು ಅತಿ ದಯಾಳುಗಳೂ ಅಲ್ಲ. ಅವರು ಅತ್ಯಂತ ದಯಾಳುಗಳು! ಅವರಿಗಿಂತ ದಯಾಳುಗಳಾಗಿರುವವರು ಕಾಣಸಿಗರು! ಅವರೇ ನಮ್ಮ ಬಳಿ ಬರುತ್ತಾರೆ. ಸರಿಯಾಗಿ ಕರೆಯಬೇಕು. ಅಷ್ಟೇ. 

ಶ್ರೀ ರಾಘವೇಂದ್ರ ಸ್ತೋತ್ರದಲ್ಲಿ ಒಂದು ಶ್ಲೋಕ ಹೀಗಿದೆ:

ಯತ್ಪಾದ ಕಂಜ ರಜಸಾ ಪರಿಭೂಷಿತಾಂಗಾ 
ಯತ್ಪಾದಪದ್ಮ ಮಧುಪಾಯಿತ ಮಾನಸಾ ಯೇ
ಯತ್ಪಾದಪದ್ಮ ಪರಿಕೀರ್ತನ ಜೀರ್ಣವಾಚ:
ತದ್ದರ್ಶನಮ್ ದುರಿತಕಾನನ ದಾವಭೂತಮ್  

ಏನಿದರ ವಿಶೇಷ?  

ರಾಯರೇ ಬರಬೇಕೆಂದಿಲ್ಲ. ಅವರೇ ಆಗಬೇಕೆಂದಿಲ್ಲ. ಅವರನ್ನು ನೋಡಿ ಬಂದವರು (ಅವರ ಪಾದಧೂಳಿ ಸೋಕಿರುವವರು), ಅವರ ಸ್ತೋತ್ರಾದಿಗಳನ್ನು, ಗುಣಗಳನ್ನು, ಮಹಿಮೆಗಳನ್ನು  ಮನಸ್ಸಿನಲ್ಲಿ ನೆನೆಯುತ್ತಿರುವವರು, ಅವರ ಮಹಿಮೆ ಹೊಗಳುತ್ತಾ ಇರುವವರು (ಜೀರ್ಣವಾಚ: ಅಂದರೆ ಸ್ತೋತ್ರಾದಿಗಳನ್ನು ಹೇಳಿ ಹೇಳಿ, ಸುಸ್ತಾ,ಗಿ ಮಾತನಾಡಲು ಶಕ್ತಿ ಇಲ್ಲದವರು ಎಂದು),  ಇಂತಹವರನ್ನು ನೋಡಿದರೂ ಸಾಕು. ದಟ್ಟವಾದ ಕಾಡಿನಂತೆ ಬೆಳೆದು ನಿಂತಿರುವ ನಮ್ಮ ಪಾಪ ರಾಶಿಗಳು ಬೆಂಕಿಯಿಂದ ಸುಟ್ಟು ಬೂದಿ ಆಗುವಂತೆ ನಾಶವಾಗುತ್ತವೆ ಎಂದು ಇದರ ಭಾವ. 

ತಿರುಪತಿಗೆ ಹೋಗಿ ತಿಮ್ಮಪ್ಪನನ್ನು ನೋಡಿಬಂದವರನ್ನು ಕಂಡರೆ ನಮಗೂ ಸ್ವಲ್ಪ ಪುಣ್ಯ ಬರುತ್ತದೆ ಎಂದು ಹೇಳುವುದು ಇದೇ ಭಾವದಲ್ಲಿ. ಇತರೆ ಪುಣ್ಯ ಕ್ಷೇತ್ರಗಳ ದರ್ಶನ ಮಾಡಿ ಬಂದವರ ಬಗ್ಗೆಯೂ ಹೀಗೆ ಹೇಳುವುದು ಉಂಟು.

*****

ಈ ಶ್ಲೋಕದ ಹಿಂದಿನ ಶ್ಲೋಕದಲ್ಲಿ "ಮಹಾ ವಂಧ್ಯಾ ಸುಪುತ್ರಪ್ರದಃ" ಎಂದು ಒಂದುಂಟು. ಏನಿದರ ಅರ್ಥ? ಕೆಲವು ಸ್ತ್ರೀಯರಿಗೆ ಸಂತಾನವಾಗುವುದಿಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ವೈದ್ಯಕೀಯ ವಿಜ್ಞಾನ ಕಾರಣಗಳನ್ನು ಹೇಳುತ್ತದೆ. ಕೆಲವರ ತಡೆಗಳನ್ನು ನಿವಾರಿಸಿದರೆ ಸಂತಾನ ಆಗುತ್ತದೆ. ಕೆಲವು ರೀತಿಯ ಕಾರಣಗಳಿಗೆ ನಿವಾರಣೆಯೇ ಇಲ್ಲ. "ವಂಧ್ಯಾ" ಅಂದರೆ ನಿವಾರಿಸಬಹುದಾದ ತೊಂದರೆ ಇರುವವರು. "ಮಹಾವಂಧ್ಯಾ" ಅಂದರೆ ನಿವಾರಿಸಲಾಗದ, ಶಾಶ್ವತ ತಡೆ ಇರುವವರು. 

ರಾಯರ ಮೊರೆ ಹೋದ ಇಂತಹವರಿಗೆ ಮಕ್ಕಳಾಗಿರುವುದು ಉಂಟು. ವೈದ್ಯರು ಸಾಧ್ಯವೇ ಇಲ್ಲ ಎಂದು ಹೇಳಿದ ಸಂದರ್ಭಗಳಲ್ಲೂ ಸಂತಾನ ಆಗಿರುವುದು ಉಂಟು. "ಮಹಾವಂಧ್ಯಾ ಸುಪುತ್ರಪ್ರದಃ". ಏನೋ ಒಂದು ಮಗು ಆಯಿತು ಎಂದಲ್ಲ. ಒಳ್ಳೆಯ, ಯೋಗ್ಯ ಮಗು. ಅನೇಕ ತಡೆಗಳೇ ಇಲ್ಲದ ಸ್ತ್ರೀಯರಿಗೂ ಒಳ್ಳೆಯ ಸಂತಾನ ಆಗುವುದಿಲ್ಲ. ಅಂತಹದರಲ್ಲಿ ರಾಯರ ಮೊರೆ ಹೋದ ನಿವಾರಿಸಲಾಗದ ತಡೆ ಇರುವವರಿಗೂ ಒಳ್ಳೆಯ ಸಂತಾನ ಆಗುತ್ತದೆ ಎಂದು ಇದರ ಅರ್ಥ. 

*****

ಗಂಗೆಯಲ್ಲಿ ಮಿಂದರೆ ಪುಣ್ಯ ಎಂದು ಅನೇಕರ ನಂಬಿಕೆ. ನಾವು ಕಾಶಿಗೆ ಹೋದೆವು. ಎಲ್ಲರೂ ಗಂಗಾಸ್ನಾನ ಮಾಡುತ್ತಿದ್ದಾರೆ. ಆದ್ದರಿಂದ ನಾವೂ ಮಾಡಿದೆವು. ಇದು ಒಂದು ಪಕ್ಷ. 

ಗಂಗೆಯಲ್ಲಿ ಮಿಂದರೆ ಪುಣ್ಯ ಎಂದು ನಾವು ನಂಬಿದ್ದೇವೆ. ಗಂಗೆಯ ಬಗ್ಗೆ ನಮಗೆ ಜ್ಞಾನ, ಗೌರವ ಇದೆ. ಗಂಗಾಸ್ನಾನ ಮಾಡಬೇಕೆಂಬ ಉತ್ಕಟ ಇಚ್ಛೆ ಇದೆ. ಪ್ರಯತ್ನ ಪಟ್ಟು ಹೋಗಿ ಮಾಡಿದೆವು. ಇದು ಇನ್ನೊಂದು ಪಕ್ಷ. 

ಎಲ್ಲರೂ ಸ್ತೋತ್ರ ಹೇಳುತ್ತಾರೆ. ನಾವೂ ಹೇಳಿದೆವು. ಹಾಗಲ್ಲ, ನಾವು ಆ ಸ್ತೋತ್ರದ ಅರ್ಥ ತಿಳಿದು ಹೇಳಿದೆವು. ಇವೆರಡರ ನಡುವಿನ ವ್ಯತ್ಯಾಸ ಮೇಲಿನ ಗಂಗಾಸ್ನಾನದ ವ್ಯತ್ಯಾಸದಂತೆ. ಅರ್ಥ ತಿಳಿಯುತ್ತಾ ಹೋದಂತೆ ಭಕ್ತಿ, ಗೌರವಗಳು ಹೆಚ್ಚಾಗಿ ಫಲವೂ ಹೆಚ್ಚು. ಜಾಮೂನನ್ನು ಸುಮ್ಮನೆ ನುಂಗಬಹುದು. ಜಗಿದೂ, ಜಗಿದೂ ನುಂಗಬಹುದು!

Saturday, October 4, 2025

ಹತ್ತು ರೀತಿಯ ಮಾತಿನ ದೋಷಗಳು


ಕೆಲವರು ಮಾತನಾಡಿದರೆ ಚೆನ್ನ. ಇನ್ನಷ್ಟು ಕೇಳಬೇಕು ಅನಿಸುವುದು. ಮತ್ತೆ ಕೆಲವರು ಸುಮ್ಮನಿದ್ದರೆ ಚೆನ್ನ. ಮಾತನಾಡುವುದು ಯಾವಾಗ ನಿಲ್ಲಿಸುತ್ತಾರೋ ಎಂದು ಕಾಯಬೇಕಾಗುವುದು. ಎಷ್ಟು ಬೇಕೋ ಅಷ್ಟು ಮಾತ್ರ ಮಾತಾಡಿದರೆ ಬಲು ಚೆನ್ನ. ಅತಿಯಾಗಿ ಮಾತಾಡಿದರೆ ಕಷ್ಟ. "ಒಡಕು ಮಡಕೆಗೆ ಕಲ್ಲು ಹಾಕಿದಂತೆ" ಆಗಬಾರದು. ಏನು ಹೇಳಬೇಕೆಂದಿದ್ದಾರೋ ಅದನ್ನು ಸರಿಯಾಗಿ, ಪೂರ್ತಿಯಾಗಿ ಹೇಳದೆ ಕಡಿಮೆ ಮಾತಾಡಿದರೆ ಇನ್ನೂ ಕಷ್ಟ. "ಮಾತೇ ಆಡದಿದ್ದರೆ ಅರ್ಥವಾಗುವುದಾದರೂ ಹೇಗೆ?" ಎಂದು ಉದ್ಗರಿಸುವುದು ಆಗಾಗ ಅಲ್ಲಲ್ಲಿ ಕೇಳಿ ಬರುವುದು. 

"ಮಾತು ಬೆಳ್ಳಿ; ಮೌನ ಬಂಗಾರ" ಎಂದೊಂದು ಗಾದೆ. ಆದರೆ "ಮೌನದಿಂದಲೇ ಕೊಲ್ಲುತ್ತಾಳೆ" ಎಂದು ಹೇಳುವುದು ಕೇಳಿದ್ದೇವೆ. "ಹರಿತದ ಮಾತಿನಿಂದ ಇರಿಯುತ್ತಾನೆ" ಎಂದು ಕೆಲ ಸಂದರ್ಭಗಳಲ್ಲಿ ಹೇಳುವುದೂ ಉಂಟು. ಆಗ ಮಾತು ಕತ್ತಿಗಿಂತಲೂ ಹರಿತ. ವೈಶಂಪಾಯನ ಸರೋವರದಲ್ಲಿ ಜಲಸ್ತ೦ಭನ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ದುರ್ಯೋಧನನಿಗೆ ಭೀಮಸೇನನ ಬಿರುಸು ಗದೆಯ ಹೊಡೆತಕ್ಕಿಂತ ಮಾತಿನ ಇರಿತ ತಾಳದಾಯಿತು. ದೊಡ್ಡವರ ಸಾಂತ್ವನದ ನುಡಿಗಳು ಅದಕ್ಕೆ ತದ್ವಿರುದ್ಧ. "ಅವರ ಮಾತಿನಿಂದ ಎಷ್ಟೋ ಸಮಾಧಾನವಾಯಿತು" ಎಂದು ಕೆಲವೊಮ್ಮೆ ಅನಿಸುವುದು. "ಅವನೊಡನೆ ಮಾತಾಡಿದ್ದೇ ತಪ್ಪಾಯಿತಲ್ಲ. ಮನಸ್ಸು ಇನ್ನೂ ಉದ್ವಿಗ್ನವಾಯಿತು" ಅನ್ನುವ ಪರಿಸ್ಥಿತಿಗಳೂ ಉಂಟು. ಮಾತಿಗೆ ತೂಕ ಇರಬೇಕು. ತೂಕದ ಮಾತು ಬೇಕು. ಕೆಲವೊಮ್ಮೆ ಮಾತು ಬೇಕು. ಮತ್ತೆ ಕೆಲವೊಮ್ಮೆ ಮಾತೇ ಬೇಡ. 

ಮನುಷ್ಯರಿಗೂ ಪ್ರಾಣಿಗಳಿಗೂ ಇರುವ ಅನೇಕ ಭೇದಗಳಲ್ಲಿ ಈ ಮಾತನಾಡುವ ಶಕ್ತಿಯೂ ಒಂದು. ಒಂದು ಮಗು ಹುಟ್ಟಿದ ತಕ್ಷಣ ಸಂಭ್ರಮ ಆವರಿಸುತ್ತದೆ. ಆ ಮಗು ತೊದಲು ನುಡಿಗಳನ್ನು ಆಡಲು ಆರಂಭಿಸಿದಾಗ ಇನ್ನೂ ಸಂಭ್ರಮ. ಅರ್ಥವಾಗುವಂತೆ ಮಾತಾಡಿದರೆ ಮತ್ತಷ್ಟು ಸಂತಸ. ಆದರೆ ಜೀವನ ಪೂರ್ತಿ ತೊದಲುತ್ತಾ ಮಾತನಾಡುತ್ತಿದ್ದರೆ ಅದು ಹೇಗೆ? ಅದನ್ನು ಹೆತ್ತ ತಂದೆ-ತಾಯಿಯರಿಗೆ ಅದೊಂದು ಘೋರ ಕಷ್ಟ. ಮಗು ದೊಡ್ಡದಾದರೂ ಮಾತೇ ಬರದಿದ್ದರೆ ಹೇಳಲಾಗದ ವೇದನೆ. ಕಂಡ ಕಂಡ ವೈದ್ಯರಿಗೆಲ್ಲಾ ತೋರಿಸುವುದು ನಡೆಯುತ್ತದೆ. 

ಹೆಸರಾಂತ ನಟ, ನಿರ್ಮಾಪಕ, ನಿರ್ದೇಶಕ ಮನೋಜ ಕುಮಾರನ "ಶೋರ್" ಅನ್ನುವ ಹಿಂದಿ ಚಲನಚಿತ್ರದ ಕಥೆ ಅದೇ. ಅವನಿಗೆ ಹುಟ್ಟಿದ ತನ್ನ ಮಗ ಮಾತಾಡುವುದಿಲ್ಲ ಎಂದು ಆತಂಕ. ಪ್ರಪಂಚದ ಬೇರೆಲ್ಲಾ ಶಬ್ದಗಳೂ ಅವನನ್ನು ಹಿಂಸೆ ಮಾಡುತ್ತವೆ. ಅವನು ಕೇಳಬೇಕೆಂದಿರುವ ಒಂದೇ ಶಬ್ದವೆಂದರೆ ಮಗನ ಮಾತು. ಆದರೆ ಅವನು ಮಾತಾಡುವುದಿಲ್ಲ. ಕಡೆಗೊಂದು ದಿನ ಒಬ್ಬ ವೈದ್ಯರು ಮಗನಿಗೆ ಶಸ್ತ್ರ ಚಿಕಿತ್ಸೆ ಮಾಡಿ ಮಾತು ಬರಿಸುತ್ತಾರೆ. ಇನ್ನೇನು ಆಸ್ಪತ್ರೆಗೆ ಹೋಗಿ ಮಗನ ಮಾತು ಕೇಳಬೇಕು ಅನ್ನುವ ಸಮಯ. ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಅಪಘಾತ. ಅಪಘಾತದಲ್ಲಿ ತಂದೆಗೆ ಶ್ರವಣ ಶಕ್ತಿ ಹೋಗುತ್ತದೆ. ಅಪ್ಪ ಕಿವುಡನಾಗುತ್ತಾನೆ. ಈಗ ಮಗ ಮಾತಾಡುತ್ತಾನೆ. ಆದರೆ ತಂದೆ ಕೇಳಲಾರ. ಅದೊಂದು ವಿಪರ್ಯಾಸ. 

ಒಟ್ಟಿನಲ್ಲಿ ಮಾತು ಒಂದು ಪ್ರಶ್ನೆಯೇ!
*****

ಹುಟ್ಟಿದಂದಿನಿಂದ ಮಾತು ಹೊರಡದೇ ಇರುವುದು ಒಂದು ರೀತಿಯ ದೋಷ. ಅವರನ್ನು "ಮೂಕ' ಎನ್ನುತ್ತೇವೆ. ಕೆಲವರಿಗೆ ಕಿವಿ ಕೇಳದೆ, ಮಾತು ಬರೆದೇ ಇರುವುದು ಉಂಟು. ಇವರು "ಮೂಕ-ಬಧಿರರು" ಅಥವಾ "ಕಿವುಡು-ಮೂಗರು". ಇದೊಂದು ರೀತಿಯ ದೋಷ. ಹಾಗೆಯೇ ಮಾತನಾಡಬಲ್ಲ ಕೆಲವರಿಗೆ ಸರಿಯಾಗಿ ಮಾತನಾಡಲು ಆಗುವುದಿಲ್ಲ. ಕೆಲವರನ್ನು "ಮೂಗಿನಲ್ಲಿ ಮಾತಾಡುತ್ತಾನೆ" ಅನ್ನಬಹುದು. ಏನೋ ಒಂದು ವಿಕಾರ ಅಥವಾ ಕೊರತೆ. "ಎಲ್ಲರಂತೆ ನಾನಿಲ್ಲ" ಎಂದು ಅವರಿಗೆ ದುಃಖ. ಹೆತ್ತವರಿಗೆ "ಇದೇನು, ಹೀಗೆ ಆಯಿತಲ್ಲ?" ಎನ್ನುವ ಚಿಂತೆ. ಕೆಲವರಿಗೆ ಅವರನ್ನು ನೋಡಿ ಅಪಹಾಸ್ಯ ಮಾಡುವ ಗೀಳು. ಉಳಿದವರಿಗೆ ಅವರನ್ನು ಕಂಡಾಗ ಮರುಕ. ಒಟ್ಟಿನಲ್ಲಿ ಏನೋ ಒಂದು "ಸರಿಯಿಲ್ಲ" ಅನ್ನುವ ಸ್ಥಿತಿ. 

ಕೆಲವರಿಗೆ ಮಾತು ಬರದೇ ಪೂರ್ತಿ ಜೀವನ ಹಾಗೆಯೇ ನಡೆಯಬಹುದು. ಮತ್ತೆ  ಕೆಲವರಿಗೆ ಮೊದಲು ಮಾತು ಬರದಿದ್ದರೂ ಮುಂದೆಂದೋ, ಶಸ್ತ್ರ ಚಿಕಿತ್ಸೆಯಿಂದ ಅಥವಾ ಮತ್ತ್ಯಾವುದೋ ಕಾರಣದಿಂದ ಮಾತು ಬರಬಹುದು. ಚೆನ್ನಾಗಿ ಮಾತು ಬಂದು ಜೀವನ ನಡೆಸುತ್ತಿರುವವರಿಗೆ ಮುಂದೆಂದೋ ಮಾತಿನ ತೊಂದರೆ ಬರುವುದೂ ಇದೆ. ತೊದಲುವುದು, ಶಬ್ದ ಸರಿಯಾಗಿ ಹೊರಡದಿರುವುದು, ಆಗಾಗ ಮಾತು ನಿಲ್ಲುವುದು, ಮುಂತಾದುವು ಆಗುತ್ತವೆ. ಅನೇಕ ಕಾಯಿಲೆಗಳಿಂದ ಮಾತು ಹೆಚ್ಚು-ಕಡಿಮೆ ಆಗಬಹುದು. ಕೆಲವರಿಗೆ ಹಗಲೆಲ್ಲಾ ಮಾತು ಸರಿಯಿದ್ದು ಸಂಜೆ ಆಗುತ್ತಿದ್ದಂತೆ ಆಯಾಸದಿಂದ ಮಾತು ತೊದಲಬಹುದು. ಅಪಘಾತಗಳಿಂದ ಮಾತೇ ನಿಂತುಹೋಗಬಹುದು. ಹೀಗೆ ಹಲವು ರೀತಿ. ನಾವು ನಮ್ಮ ಸುತ್ತ-ಮುತ್ತ ಕಂಡಂತೆ. 

ಹೀಗೆ ಮಾತಿನಲ್ಲಿ ವ್ಯತ್ಯಾಸ ಆಗುವುದು ದೈಹಿಕ ಕಾರಣಗಳ ಜೊತೆ ಮಾನಸಿಕ ಮತ್ತು ಬೌದ್ಧಿಕ ಕಾರಣಗಳಿಂದಲೂ ಉಂಟು. ಕೆಲವು ಮಕ್ಕಳಿಗೆ ಹಿಂದೆ ತಮಗೆ ಹೊಡೆತ ಮೊದಲಾದ ಹಿಂಸೆ ಕೊಟ್ಟವರ ಮುಂದೆ ಮಾತು ಹೊರಡುವುದಿಲ್ಲ. ಚೆನ್ನಾಗಿ ತಯಾರಿ ಮಾಡಿಕೊಂಡು ಸಂದರ್ಶನಕ್ಕೆ (ಇಂಟರ್ವ್ಯೂ) ಹೋದವನಿಗೆ ಅಲ್ಲಿ ಕುಳಿತಾಗ ಆತಂಕದಿಂದ ಮಾತು ಹೊರಡದು. ಹೀಗೆ ಹಲವು ವಿಧ. 

*****
ತಿಳಿದವರು "ಹತ್ತು ರೀತಿಯ ಮಾತಿನ ತೊಂದರೆ" ಇವೆ ಎಂದು ಹೇಳುತ್ತಾರೆ. ಇವು ದೈಹಿಕ, ಬೌದ್ಧಿಕ ಮತ್ತು ಮಾನಸಿಕ ಕಾರಣಗಳು ಒಂದೊಂದರಿಂದ ಅಥವಾ ಎರಡು, ಮೂರು ಸೇರುವುದರಿಂದ ಆಗಬಹುದು. ಇವುಗಳಲ್ಲಿ ಕೆಲವಕ್ಕೆ ಇರುವ ವ್ಯತ್ಯಾಸ ಬಹಳ ತೆಳುವಾದದು. ಒಂದನ್ನು ಇನ್ನೊಂದಕ್ಕೆ ತಪ್ಪಾಗಿ ತಿಳಿಯಬಹುದು.ಈ ಹತ್ತು  ದೋಷಗಳು ಯಾವುವು ಎಂದು ನೋಡೋಣ. 
  1. ಅಜ್ಞಾನ (ತಿಳಿಯದಿರುವುದು): ಏನು ಮಾತನಾಡಬೇಕೆಂದು ತಿಳಿಯದೇ ಮೂಕರಾಗುವುದು. "ಏನು ಹೇಳಬೇಕೆಂದು ಗೊತ್ತಾಗಲಿಲ್ಲ" ಎಂದು ನಂತರ ಅನ್ನಬಹುದು. ಹೀಗೆ ಮಾತನಾಡಿದರೆ ಸರಿಯೋ, ತಪ್ಪೋ ಎನ್ನುವ ಭೀತಿ ಇರಬಹುದು. ಹೇಗೆ ಪ್ರಾರಂಭಿಸಬೇಕು ಎಂದು ಗೊತ್ತಾಗದಿರಬಹುದು.  ವಿಷಯದ ಪರಿಚಯ ಇಲ್ಲದಿರುವುದರಿಂದ ಆಗಬಹುದು. 
  2. ವಿಸ್ಮೃತಿ (ಮರೆವು): ಮೊದಲು ವಿಷಯ ಚೆನ್ನಾಗಿ ತಿಳಿದಿದ್ದರೂ ಮಾತನಾಡಬೇಕಾದಾಗ ನೆನಪು ಕೈಕೊಡುವುದು. ಬಹಳ ತಯಾರಿ ನಡೆಸಿದ್ದರೂ ಬೇಕಿದ್ದಾಗ ಅದು ಹೊಳೆಯಲಿಲ್ಲ. ಒಂದೇ ವಿಷಯವನ್ನು ಹತ್ತಾರು ಬಾರಿ ಪಾಠ ಹೇಳಿದ್ದರೂ ಕೆಲವರಿಗೆ ಈ ಕಾರಣದಿಂದ ತೊಂದರೆ ಆಗುವುದು. ಪಾಠ ಮುಗಿಸಿ ಹೊರಬಂದ ನಂತರ ಅದೇ ವಿಷಯ ಮತ್ತೆ ನೆನಪಿಗೆ ಬರುವುದುಂಟು. 
  3. ಭ್ರಾಂತಿ (ಭ್ರಮೆ): ಕೆಲವು ಲಕ್ಷಣಗಳಿಂದ ಒಂದನ್ನು ಇನ್ನೊಂದಾಗಿ ತಿಳಿಯುವುದು. ಬೆಳ್ಳಗಿರುವುದರಿಂದ ಸುಣ್ಣದ ನೀರನ್ನು ಹಾಲೆಂದು ತಿಳಿಯುವುದು. ಹಗ್ಗವನ್ನು ಹಾವೆಂದು ಭ್ರಮಿಸುವುದು. ಈ ಕಾರಣದಿಂದ ಮಾತಿನಲ್ಲಿ ವ್ಯತ್ಯಾಸ. 
  4. ಸಂಶಯ (ಅನುಮಾನ): ಮಾತಾಡುತ್ತಿರುವ ವಿಷಯದಲ್ಲಿ ಅನೇಕ ಅನುಮಾನಗಳ ಕಾರಣ ಮಾತು ಸರಿಯಾಗಿ ಹೊರಡದಿರುವುದು. ತಲೆಯಲ್ಲಿ ವಿಷಯ ಕಲಸು-ಮೇಲೋಗರ. ಹೀಗೆ ಹೇಳಿದರೆ ಹೇಗೋ? ಹಾಗೆ ಹೇಳಿದರೆ ಹೇಗೋ? ಈ ರೀತಿಯ ಅಭಿವ್ಯಕ್ತಿಯಲ್ಲಿ ಅನುಮಾನ. 
  5. ಅಪಸ್ಮ್ರುತಿ (ತಪ್ಪು ತಿಳಿವಳಿಕೆ): ಭ್ರಾಂತಿಯ ಇನ್ನೊಂದು ರೂಪ. ಸ್ವಲ್ಪವೇ ವ್ಯತ್ಯಾಸ. ರಾಮಣ್ಣನವರ ವಿಷಯ ಗೊತ್ತು. ಭೀಮಣ್ಣನವರ ವಿಷಯವೂ ಗೊತ್ತು. ಆದರೆ ಮಾತಾಡುವಾಗ ಒಬ್ಬರ ಬದಲು ಇನ್ನೊಬರ ವಿಷಯ ಮಾತಾಡುತ್ತಾ ಹೋಗುವುದು. 
  6. ಕ್ಷಯ (ಕಡಿಮೆಯಾಗುವುದು): ಮೊದಲು ಮಾತು ಚೆನ್ನಾಗಿದ್ದರೂ ಮುಂದೆ ಅನೇಕ ಕಾರಣಗಳಿಂದ ಕ್ರಮೇಣ ಮಾತಿನ ಆಳ ಕಡಿಮೆ ಆಗುವುದು. ಶಬ್ದ ಸರಿಯಾಗಿ ಹೊರಡದಿರುವುದು. ಮಾತಾಡುವ ವಿಷಯಗಳು ಕಡಿಮೆಯಾಗುವುದು. ಹೇಳಿದ್ದೇ ಹೇಳುತ್ತಿರುವುದು. ಮುಂತಾದುವು. 
  7. ತಂದ್ರಾ (ಆಲಸ್ಯ): ತಂದ್ರಾ ಪದಕ್ಕೆ ತೂಕಡಿಕೆ ಎಂದು ಒಂದು ಅರ್ಥ. ಮಾತಿನಲ್ಲಿ ತೂಕಡಿಕೆ ಅಂದರೇನು? ಮಾತಿನ ಮಧ್ಯೆ ನಿಂತು ಹೋಗುವುದು. ಮಾತು ಆಡುತ್ತಿದ್ದಂತೆ ಸುಸ್ತಾಗುವುದು. ನಿದ್ದೆಯಲ್ಲಿ ಮಾತಾಡುತ್ತಿರುವಂತೆ ಅಸಂಗತವಾದ ಮಾತುಗಳು. ಹೀಗೆ. 
  8. ಕಂಪವಚ (ತೊದಲು ಮಾತು): ಉಗ್ಗುವುದು ಅನ್ನುತ್ತಾರೆ. ತೊದಲು ಮಾತು. ಮಾತಿನಲ್ಲಿ ಧೃಡತೆ ಇಲ್ಲ. ನಡುಗುವ ಧ್ವನಿ. ಕೇಳುವವರಿಗೆ ಹಿತವಿಲ್ಲ. ಕಂಪನದಿಂದ ಮಾತು ಹುಟ್ಟುವುದಾದರೂ ಇಲ್ಲಿ ಬೇಡವಾದ ಕಂಪನ. ಸಂಗೀತಗಾರರು ಹಾಡುವಾಗ ಬೇಕೆಂದು ಕಂಪಿಸುವ ಧ್ವನಿಯ ರೀತಿಯಲ್ಲ. ಅನವಶ್ಯಕ ಧ್ವನಿಯ ಅಲ್ಲಾಟ. 
  9. ಕೌ೦ಠ್ಯ (ಅಲ್ಲಲ್ಲಿ ನಿಂತುಹೋಗುವುದು): ನಿರರ್ಗಳ ಮಾತಿಲ್ಲ. ಮಾತಾಡುತ್ತಿದ್ದಾಗ ಅಲ್ಲಲ್ಲಿ ಬೇಡದ ಕಡೆ ಏನು ಹೇಳಬೇಕೆಂದು ತೋಚದಿರುವುದರಿಂದ ಮಾತು ನಿಂತುಹೋಗುವುದರಿಂದ ವಿಚಾರ ಸರಿಯಾಗಿ ಪ್ರಸ್ತುತವಾಗದು. ಕೇಳುಗರಿಗೆ ಹಿತದ ಅನುಭವವಿಲ್ಲ. ಪೂರ್ತಿ ಅರ್ಥವಾಗದೆ ಕೊರತೆಯ ಅನುಭವ. 
  10. ಇಂದ್ರಿಯೋದ್ಭವ (ಪಂಚೇಂದ್ರಿಯಗಳಿಂದ ಹುಟ್ಟಿದುದು): ಕಣ್ಣು, ಕಿವಿ, ನಾಲಿಗೆಗಳು ತಾಳ-ಮೇಳದಲ್ಲಿ  ಕೆಲಸ ಮಾಡಬೇಕು. ಹೀಗಾಗದೆ ಏರುಪೇರಾದರೆ ಮಾತಿನಲ್ಲಿ ವ್ಯತ್ಯಾಸ ಉಂಟಾಗುವುದು. ಇನ್ನೊಬ್ಬರು ಹೇಳಿದುದು ಕಿವಿಗೆ ಸರಿಯಾಗಿ ಕೇಳದಿದ್ದರೆ ಅವರು ಕೇಳಿದುದೊಂದು, ಇವರು ಹೇಳಿದುದೊಂದು. ನೋಡಿದುದು ಒಂದು. ಮಾತಾಡುತ್ತಿರುವುದು ಇನ್ನೊಂದರ ಬಗ್ಗೆ. ಹೀಗೆ. 
ಹೀಗೆ ಮಾತಿನಲ್ಲಿ ಹತ್ತು ವಿಧದ ದೋಷಗಳು. ಕೆಲವರಿಗೆ ಒಂದೊಂದೇ ದೋಷ ಕಾಡಬಹುದು. ಮತ್ತೆ ಕೆಲವರಿಗೆ ಒಂದಕ್ಕಿಂತ ಹೆಚ್ಚು ತೊಂದರೆ ಕೊಡಬಹುದು. ಕೆಲವರಿಗಂತೂ ಮಾತೇ ಬಾರದ ಮೂಗತನ. 

*****

ಹಿಂದೊಂದು ಸಂಚಿಕೆಯಲ್ಲಿ, "ಸರಸ್ವತಿದೇವಿಯ ರಂಗಮಂದಿರ" ಅನ್ನುವ ಶೀರ್ಷಿಕೆಯಡಿ ಶ್ರೀ ರಾಘವೇಂದ್ರ ಸ್ವಾಮಿಗಳ ಮೇಲೆ ತಾಯಿ ಶಾರದೆಯ ಕೃಪೆಯಾಗಿ "ಪರಿಮಳ" ಗ್ರಂಥ ಬಂತೆಂದು ಹೇಳಲಾದ ಸಂದರ್ಭ ನೋಡಿದ್ದೆವು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆ ಓದಬಹುದು. 

ಶ್ರೀ ರಾಘವೇಂದ್ರ ಸ್ವಾಮಿಗಳ ಸಾಕ್ಷಾತ್ ಶಿಷ್ಯರಾದ ಶ್ರೀ ಅಪ್ಪಣ್ಣಾಚಾರ್ಯರು ಅವರ ಪ್ರೀತಿಯ ಗುರುಗಳಾದ ರಾಯರ ಬಗ್ಗೆ ರಚಿಸಿರುವ ಒಂದು ಸ್ತೋತ್ರದಲ್ಲಿ ಈ ಹತ್ತು ಮಾತಿನ ದೋಷಗಳ ಬಗ್ಗೆ ಸೂತ್ರ ರೂಪದಲ್ಲಿ ವಿವರಣೆ ಕೊಟ್ಟಿದ್ದಾರೆ. ಅಷ್ಟು ಮಾತ್ರವಲ್ಲ. ಶ್ರೀ ರಾಘವೇಂದ್ರ ರಾಯರ ಕರುಣೆಯಿಂದ ಈ ರೀತಿಯ ಹತ್ತೂ ವಿಧದ ಮಾತಿನ ದೋಷಗಳು ನಿವಾರಣೆ ಆಗುತ್ತವೆ ಎನ್ನುತ್ತಾರೆ. ಆ ಶ್ಲೋಕ ಹೀಗಿದೆ:

ಅಜ್ಞಾನವಿಸ್ಮೃತಿಭ್ರಾಂತಿ ಸಂಶಯಾಪಸ್ಮೃತಿಕ್ಷಯಾ 
ತಂದ್ರಾಕಂಪವಚ: ಕೌ೦ಠ್ಯಮುಖಾಯೇ ಚೇಂದ್ರಿಯೋದ್ಭವಾ:
ದೋಷಾಸ್ತೇ ನಾಶಮಾಯಾಂತಿ ರಾಘವೇಂದ್ರ ಪ್ರಸಾದತಃ 

ಅನೇಕ ನುರಿತ ವೈದ್ಯರಿಂದ ನಿವಾರಣೆ ಸಾಧ್ಯವಾಗದ ಮಾತಿನ ದೋಷಗಳು ಗುರುರಾಯರ ಕರುಣೆಯಿಂದ ಪರಿಹಾರವಾಗಿವೆ ಎಂದು ಹೇಳುತ್ತಾರೆ. ಇದನ್ನು ನಂಬಬೇಕೇ ಅಥವಾ ಬೇಡವೇ ಅನ್ನುವುದು ಅವರವರಿಗೆ ಬಿಟ್ಟ ವಿಚಾರ.  

Sunday, September 14, 2025

ಸರಸ್ವತಿ ದೇವಿಯ ರಂಗಮಂದಿರ


ಒಂದು ತಿಂಗಳ ಹಿಂದೆ, ಶ್ರೀ ರಾಘವೇಂದ್ರ ಸ್ವಾಮಿಗಳ 354ನೆಯ ವರುಷದ ಆರಾಧನೆಯ ಸಂದರ್ಭದಲ್ಲಿ, "ದೊಡ್ಡವರ ಶಾಪಗಳೆಂಬ ವರಗಳು" ಎನ್ನುವ ಶೀರ್ಷಿಕೆಯ ಸಂಚಿಕೆಯಲ್ಲಿ, ಶಂಕುಕರ್ಣ ಎಂಬ ಕರ್ಮಜದೇವತೆಗೆ ಚತುರ್ಮುಖ ಬ್ರಹ್ಮದೇವರು ಕೊಟ್ಟ ಶಾಪವು ಅನೇಕರಿಗೆ ಹೇಗೆ ವರವಾಗಿ ಪರಿಣಮಿಸಿತು ಎನ್ನುವುದನ್ನು ಸಂಕ್ಷೇಪವಾಗಿ ನೋಡಿದೆವು. (ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). ಇಂತಹ ವಿಷಯಗಳಲ್ಲಿ ಕೆಲವೊಂದು ಕಣ್ಣಿಗೆ ಕಾಣುವ, ಪಂಚೇಂದ್ರಿಯಗಳಿಂದ ತಿಳಿಯುವ ಸತ್ಯಗಳು. ಇನ್ನು ಅನೇಕವು ಅವರವರ ನಂಬಿಕೆಯಿಂದ ಒಪ್ಪುವ, ಸ್ವಾನುಭವ ಮತ್ತು ಪರಾನುಭವದಿಂದ ಅರಿಯುವ ಸಂಗತಿಗಳು.  

ಈ ಸಂಚಿಕೆಯ ಒಂದು ಭಾಗದಲ್ಲಿ ಶಂಕುಕರ್ಣನಿಗೆ ಸರಸ್ವತಿ ದೇವಿಯ ಅನುಗ್ರಹವಾಗಿ ಮುಂದೆ ಅದು ರೂಪತಾಳಿದ ಸೂಚನೆ ಇತ್ತು. ಅದರ ಸ್ವಲ್ಪ ವಿವರಗಳನ್ನು ಈಗ ನೋಡೋಣ. 

ಶ್ರೀ ರಾಘವೇಂದ್ರ ಸ್ವಾಮಿಗಳೆಂದರೆ "ಕಲಿಯುಗದ ಕಾಮಧೇನು", ಸೇವೆ ಮಾಡಿ ಬೇಡಿದರೆ ಕಷ್ಟಗಳನ್ನು ದೂರ ಮಾಡಿ ಇಷ್ಟಾರ್ಥಗಳನ್ನು ಕರುಣಿಸುವವರು ಎಂದು ಬಹಳ ಜನರಿಗೆ ಗೊತ್ತು. ಅವರನ್ನು "ಪರಿಮಳಾಚಾರ್ಯ" ಎಂದೂ ಕರೆಯುತ್ತರೆ ಎಂದು ಕೆಲವರಿಗೆ ಗೊತ್ತು. ಮಂತ್ರಾಲಯದ ಸಿಹಿ ಪ್ರಸಾದವನ್ನು "ಪರಿಮಳ ಪ್ರಸಾದ" ಎಂದು ಕರೆಯುತ್ತಾರೆ ಎನ್ನುವುದು ಅಲ್ಲಿಗೆ ಹೋದ ಅಥವಾ ಪ್ರಸಾದ ಪಡೆದ ಎಲ್ಲರಿಗೂ ಗೊತ್ತು. ಈ "ಪರಿಮಳ" ಅನ್ನುವ ಪದದ ವಿಶೇಷವೇನು?

*****



ಚೆನ್ನಾಗಿ ತಿಳಿದ ವಿದ್ಯಾವಂತರನ್ನು, ವಾಚಾಳಿಗಳನ್ನು "ಸರಸ್ವತಿ ಪುತ್ರ" ಎಂದು ಕರೆಯುವುದು ವಾಡಿಕೆ. "ಅವರ ನಾಲಿಗೆಯ ಮೇಲೆ ಸರಸ್ವತಿಯು ನಲಿಯುತ್ತಾಳೆ, ನಾಟ್ಯವಾಡುತ್ತಾಳೆ" ಎಂದು ಹೇಳುವುದು ಉಂಟು. ಚತುರ್ಮುಖ ಬ್ರಹ್ಮದೇವರ ದೇವತಾರ್ಚನೆಯ ಸಮಯದಲ್ಲಿ ಸರಸ್ವತಿ ದೇವಿಯು ನೃತ್ಯ ಸೇವೆ ಒಪ್ಪಿಸುತ್ತಾಳೆ.  ಹಾಗೆ ನೃತ್ಯ ಮಾಡಲು ಆಕೆಗೆ ಒಂದು ಸರಿಯಾದ "ರಂಗಸ್ಥಳ" ಬೇಕು ಅನ್ನಿಸಿತಂತೆ. ಯಾವುದು ಅಂತಹ ಸರಿಯಾದ ವೇದಿಕೆ ಎಂದು ಹುಡುಕಿದಳಂತೆ. ಮನುಷ್ಯನ ನಾಲಿಗೆ ಎಲ್ಲ ಅಂಗಗಳಲ್ಲಿಯೂ ಹೆಚ್ಚು ಕೆಟ್ಟದು! ಅದು ಸುಮ್ಮನಿರುವುದಿಲ್ಲ. ಯಾವಾಗಲೂ ಏನಾದರೂ ತಿನ್ನುತ್ತಿರಬೇಕು. ಇಲ್ಲದಿದ್ದರೆ ಏನಾದರೂ ಅನ್ನುತ್ತಿರಬೇಕು. ಆದರೆ, ಇಂತಹ ನಾಲಿಗೆಯನ್ನು ಇಟ್ಟುಕೊಂಡಿದ್ದೂ ತಿನ್ನಬಾರದ್ದನ್ನು ತಿನ್ನದೇ, ಅನ್ನಬಾರದ್ದನ್ನು ಅನ್ನದೆ ಇರುವವರು ಬಹಳ ಅಪರೂಪಕ್ಕೆ ಸಿಕ್ಕುತ್ತಾರೆ. ಸರಸ್ವತಿ ದೇವಿಯು ಹೀಗೆ ಒಂದು ಸರಿಯಾದ ನೃತ್ಯ ವೇದಿಕೆ ಹುಡುಕಿದಾಗ ಶ್ರೀ ರಾಘವೇಂದ್ರ ಸ್ವಾಮಿಗಳ ನಾಲಿಗೆ ಕಾಣಿಸಿತು. ಎಂದೂ ಯಾರನ್ನೂ ಕಟು ಮಾತಿನಿಂದ ನೋಯಿಸಿದವರಲ್ಲ. ಇನ್ನೊಬ್ಬರನ್ನು ಏನೂ ಬೇಡಿದವರಲ್ಲ. ಸದಾಚಾರ ಸಂಪನ್ನರು. ಸದಾಕಾಲ ಪಾಠ-ಪ್ರವಚನಗಳಲ್ಲೇ ತಮ್ಮ ಕಾಲ ಕಳೆಯುತ್ತಿರುವವರು. ಆದ್ದರಿಂದ ಇದೇ ಸರಿಯಾದ ರಂಗಸ್ಥಳ ಎಂದು ತೀರ್ಮಾನಿಸಿದಳಂತೆ. 

ನೃತ್ಯ ಪ್ರಾರಂಭವಾಯಿತು. ದೇವಲೋಕದ ಮಂದಾರ, ಪಾರಿಜಾತ ಮುಂತಾದ ದಿವ್ಯ ಪುಷ್ಪಗಳ ದಂಡೆಯನ್ನು ಸರಸ್ವತಿ ದೇವಿಯು ತನ್ನ ತುರುಬಿನಲ್ಲಿ ಮುಡಿದಿದ್ದಳು. ಆನಂದದಿಂದ ನರ್ತಿಸುವಾಗ ಆ ಹೂವಿನ ದಂಡೆಯಿಂದ ಅನೇಕ ಹೂವುಗಳು ಅದುರಿ ಉದುರಿದವಂತೆ. ನೃತ್ಯ ಮುಗಿದ ಮೇಲೆ ಆ ಹೂವುಗಳು ಶ್ರೀ ರಾಯರ ನಾಲಿಗೆಯ ಮೇಲೆ ಉಳಿದವು. ಅವರು ಅವನ್ನೆಲ್ಲ ಸೇರಿಸಿ, ಪೋಣಿಸಿ, ಅವುಗಳ ಸುಗಂಧದ ಕಾರಣ "ಪರಿಮಳ" ಎಂದು ಹೆಸರಿಟ್ಟು ಕೊಟ್ಟರಂತೆ. ಅದೇ "ಪರಿಮಳ" ಎಂಬ ಹೆಸರಿನ ಗ್ರಂಥವಾಯಿತಂತೆ!

ಮಂತ್ರಾಲಯಕ್ಕೆ ಹೋದವರು ಶ್ರೀ ರಾಯರ ವೃಂದಾವನದ ಪಕ್ಕದಲ್ಲಿಯೇ ಇರುವ ಇನ್ನೊಂದು ಭವ್ಯ ವೃಂದಾವನ ನೋಡಿರುತ್ತಾರೆ. ಇದು ಶ್ರೀ ರಾಘವೇಂದ್ರ ತೀರ್ಥರ ನಂತರ ಬಂದ ಐದನೆಯವರಾದ ಶ್ರೀ ವಾದೀಂದ್ರ ತೀರ್ಥರದ್ದು. ಈ ಶ್ರೀ ವಾದೀಂದ್ರ ತೀರ್ಥರು ಶ್ರೀ ರಾಘವೇಂದ್ರರ ಕುರಿತಾಗಿ "ಗುರುಗುಣಸ್ತವನ" ಎನ್ನುವ ಗ್ರಂಥವೊಂದನ್ನು ರಚಿಸಿದ್ದಾರೆ. ಅದರಲ್ಲಿ ಶ್ರೀ ರಾಯರ "ಪರಿಮಳ" ಎನ್ನುವ ಗ್ರಂಥದ ರಚನೆಯ ಕುರಿತಾಗಿ "ಧೀರಶ್ರೀ ರಾಘವೇಂದ್ರ ತ್ವದತುಲರಸನಾ ರಂಗನೃತ್ಯ ಸ್ವಯಂಭೂ...." ಎನ್ನುವ ಶ್ಲೋಕದಲ್ಲಿ ಮೇಲಿನಂತೆ ಚಮತ್ಕಾರಿಕವಾಗಿ ವರ್ಣಿಸಿದ್ದಾರೆ. 

ಮಧ್ವ ಸಂಪ್ರದಾಯದಲ್ಲಿ ಆಚಾರ್ಯ ಮಧ್ವರ ಕೃತಿಗಳಿಗೆ ಟೀಕಾಗ್ರಂಥಗಳನ್ನು ಬರೆದವರಲ್ಲಿ ಶ್ರೀ ಜಯತೀರ್ಥರು ಅಗ್ರಗಣ್ಯರು. ಅವರಿಗೆ "ಟೀಕಾಚಾರ್ಯರು" ಎಂದು ಕರೆಯುವುದು ವಾಡಿಕೆ. ಅವರ "ಶ್ರೀಮನ್ ನ್ಯಾಯಸುಧಾ" ಗ್ರಂಥವು ಬಲು ವಿಖ್ಯಾತ. ಮೂಲ ಗ್ರಂಥಗಳಲ್ಲಿ, ವಿಶೇಷವಾಗಿ ಶ್ರೀಮನ್ಯಾಯಸುಧಾ ಗ್ರಂಥದಲ್ಲಿ,  ಸುಲಭವಾಗಿ ಅರ್ಥ ಆಗದ ವಿಷಯಗಳನ್ನು ಶ್ರೀ ರಾಘವೇಂದ್ರರು ತಮ್ಮ ಪರಿಮಳ ಗ್ರಂಥದಲ್ಲಿ ವಿವರಿಸಿದ್ದಾರೆ. ಈ ಕಾರಣಕ್ಕೆ ಅವರನ್ನು "ಪರಿಮಳಾಚಾರ್ಯರು" ಎಂದು ಕರೆಯುವುದು. ಮುಂದೆ ಇದೇ ನಡೆದು ಬಂದು ಮಂತ್ರಾಲಯದ ಪ್ರಸಾದವೂ "ಪರಿಮಳ ಪ್ರಸಾದ" ಆಗಿದೆ. 

******


ದೇವರಪೂಜೆಯಲ್ಲಿ ದೀಪ, ಹೂವು, ಹೂವಿನ ಹಾರ, ತುಳಸಿ, ಮಂಗಳಾರತಿ, ನೈವೇದ್ಯಗಳ ಉಪಯೋಗ ಉಂಟು. ಇವುಗಳು ಸ್ವಲ್ಪ ಕಾಲ ಇರುವಂತಹವು. ಹೂವು, ತುಳಸಿ ಮಾರನೆಯ ದಿನ ಬಾಡಿರುತ್ತದೆ. ದೀಪ, ಮಂಗಳಾರತಿ ಸ್ವಲ್ಪ ಸಮಯದ ನಂತರ ಆರಿಹೋಗುತ್ತವೆ.  ಸದಾಕಾಲ ಇರಬೇಕಾದರೆ ಏನು ಮಾಡಬೇಕು? ಶ್ರೀ ರಾಘವೇಂದ್ರ ಸ್ವಾಮಿಗಳು ಇದಕ್ಕೆ ಉಪಾಯ ಹುಡುಕಿದರಂತೆ. 

ಎಡಗಡೆ ಮತ್ತು ಬಲಗಡೆ ಇಡಲು ಎರಡು ದೀಪಗಳಾಗಿ "ಭಾವದೀಪ" ಮತ್ತು "ನ್ಯಾಯದೀಪ" ಎಂದು ಎರಡು ಗ್ರಂಥಗಳನ್ನು ರಚಿಸಿದರಂತೆ. ತುಳಸಿಯ ತೆನೆ ಇರುವ ಕುಡಿಯು ಪೂಜೆಗೆ ವಿಶೇಷವಂತೆ. ಅದಕ್ಕೆ "ಮಂಜರಿ" ಅನ್ನುತ್ತಾರೆ. (ಮೇಲಿನ ಚಿತ್ರದಲ್ಲಿ ನೋಡಬಹುದು). ಒಣಗುವ ತುಳಸಿಯ ಬದಲಾಗಿ "ತತ್ತ್ವ ಮಂಜರಿ" ಎನ್ನುವ ಗ್ರಂಥ. ಪೂಜೆಯ ವೇಳೆ ಹೆಚ್ಚಿನ ಬೆಳಕು ಬರಲು "ಚಂದ್ರಿಕಾ ಪ್ರಕಾಶ" ಎನ್ನುವ ಗ್ರಂಥ. (ಶ್ರೀ ವ್ಯಾಸರಾಯರ "ತಾತ್ಪರ್ಯ ಚಂದ್ರಿಕಾ" ಗ್ರಂಥದ ವಿವರಣೆ). ಮತ್ತೆ ಹೂವು-ಗಂಧಗಳಿಗೆ "ಪರಿಮಳ" ಕೃತಿ. ಹಾರದ ಸ್ಥಳದಲ್ಲಿ "ನ್ಯಾಯ ಮುಕ್ತಾವಳಿ" ಎನ್ನುವ ಮುತ್ತಿನ ಹಾರದಂತಹ ಗ್ರಂಥ. ಮಂಗಳಾರತಿಯ ಸಲುವಾಗಿ "ತಂತ್ರದೀಪಿಕಾ". ನೈವೇದ್ಯದ ಹರಿವಾಣದಲ್ಲಿ ಬಗೆಬಗೆಯ ಇತರ ಅನೇಕ ಗ್ರಂಥಗಳು. 

"ಪ್ರಾತಃ ಸಂಕಲ್ಪ ಗದ್ಯ"  ಎನ್ನುವುದು ಅವರು ಪ್ರತಿದಿನ ಬೆಳಿಗ್ಗೆ ಮಾಡುತ್ತಿದ್ದ "ಟು ಡು ಲಿಸ್ಟ್". "ಸರ್ವ ಸಮರ್ಪಣ" ಎನ್ನುವುದು ಅವರು ದಿನದ ಕೊನೆಯಲ್ಲಿ ಅಂದು ಮಾಡಿದುದನ್ನೆಲ್ಲ ಪರಮಾತ್ಮನಿಗೆ ಒಪ್ಪಿಸುತ್ತಿದ್ದ ರೀತಿ. ದಿನಕ್ಕೆ ಹದಿನೆಂಟು ಗಂಟೆಗಳ ಅಧ್ಯಯನ-ಅಧ್ಯಾಪನ; ಪೂಜೆ-ಅತಿಥಿಸೇವೆ. 

ಹೀಗೆ ಒಂದು ದಿನ ಇದ್ದು ಕೆಡುವ-ಬಾಡುವ ಪದಾರ್ಥಗಳ ಬದಲು ಚಿರಕಾಲ ಉಳಿಯುವ ಗ್ರಂಥಗಳನ್ನು ದೇವರಪೂಜೆಗೆ ಮಾಡಿಟ್ಟದ್ದು ಶ್ರೀ ರಾಘವೇಂದ್ರಸ್ವಾಮಿಗಳ ವಿಶೇಷತೆ ಎಂದು ತಿಳಿದವರು ಹೇಳುತ್ತಾರೆ. 


*****

ಶ್ರೀ ರಾಯರ ಅನೇಕ ಪವಾಡಗಳನ್ನು ಹೇಳುತ್ತಾರೆ. ಈ ಎಲ್ಲ ಪವಾಡಗಳಿಗಿಂತ ಹೆಚ್ಚಿನದು ಅವರ ನಲವತ್ತೈದು ಗ್ರಂಥಗಳ ಭಂಡಾರ. ಇವುಗಳಲ್ಲಿ ಅನೇಕವು ಅವರು "ಶ್ರೀ ರಾಘವೇಂದ್ರ ತೀರ್ಥ" ಎಂದು ಪೀಠ ಸ್ವೀಕರಿಸುವ ಮುಂಚೆ, ವೆಂಕಟನಾಥ ಎಂದು ಹೆಸರಿನ ವಟು ಮತ್ತು ಗೃಹಸ್ಥ ಆಗಿದ್ದಾಗ ರಚಿಸಿದ್ದು. 

ವಿಜಯನಗರದ ಅರಸರ ಆಸ್ಥಾನ ವಿದ್ವಾಂಸರಾಗಿ ಅವರಿಗೆ ವೀಣಾ ಗುರುಗಳಾಗಿದ್ದ ವಿದ್ವಾಂಸರ ವಂಶದಲ್ಲಿ ಜನಿಸಿದ್ದು. ಸಿರಿ-ಸಂಪತ್ತಿನಲ್ಲಿ ನಡೆದುಬಂದ ಕುಟುಂಬವಾದರೂ ಇವರ ಕಾಲಕ್ಕೆ ವಿಜಯನಗರ ಸಾಮ್ರಾಜ್ಯ ಹರಿದು-ಹಂಚಿಹೋಗಿ ಇವರಿಗೆ ಹೇಳತೀರದ ದಾರಿದ್ರ್ಯ. ಅಂತಹ ಸಂದರ್ಭಗಳಲ್ಲಿ ಈ ಗ್ರಂಥಗಳ ರಚನೆ. 

ಭಗವದ್ಗೀತೆಗೆ ಹೊಂದಿದ "ಗೀತಾ ವಿವೃತ್ತಿ", ಬ್ರಹ್ಮಸೂತ್ರ ಭಾಷ್ಯಗಳಿಗೆ ಸಂಬಂಧಿಸಿದಂತೆ "ತಂತ್ರದೀಪಿಕಾ", ಋಗ್ವೇದ ಮಂತ್ರಗಳಿಗೆ "ಮಂತ್ರಾರ್ಥ ಮಂಜರಿ", ಹತ್ತು ಪ್ರಮುಖ ಉಪನಿಷತ್ತುಗಳಿಗೆ ಭಾಷ್ಯಗಳು, ಮತ್ತನೇಕ ಗ್ರಂಥಗಳು. ಹಿಂದಿದ್ದ ಗ್ರಂಥಗಳಿಗೆ ಬಂದಿದ್ದ ಟೀಕಾಗ್ರಂಥಗಳಿಗೆ ಟಿಪ್ಪಣಿಗಳು. ಹಿಂದಿದ್ದ ಗ್ರಂಥಗಳಿಗೆ ಟೀಕೆಗಳು. ಜೊತೆಗೆ ಸ್ವತಂತ್ರ ಗ್ರಂಥಗಳು. ದೊಡ್ಡ ಗ್ರಂಥಗಳನ್ನು ಸಂಗ್ರಹ ಮಾಡಿ ಚಿಕ್ಕದಾಗಿಸಿ ಪ್ರತಿನಿತ್ಯ ಪಾರಾಯಣಕ್ಕೆ ಕೊಟ್ಟರು. ಚಿಕ್ಕದಾದ ಗ್ರಂಥಗಳನ್ನು ವಿವರಿಸಿ ದೊಡ್ಡದು ಮಾಡಿ ಕೊಟ್ಟರು. ಹೀಗೂ ಸರಿ. ಹಾಗೂ ಸರಿ.  ಎಲ್ಲದರಲ್ಲೂ ಪ್ರಚಂಡ ವಿದ್ವತ್ ದರ್ಶನ. 

ಕನ್ನಡದಲ್ಲಿ ರಚಿಸಿದ ರಚನೆಗಳು ಸಿಕ್ಕಿಲ್ಲ. ಸಿಕ್ಕಿರುವ ಒಂದೇ "ಇಂದು ಎನಗೆ ಗೋವಿಂದ" ದೇವರನಾಮ ಎಲ್ಲರ ಬಾಯಲ್ಲಿ. 

ಭಜಿಸಿ ಬೇಡಿದ ಭಕ್ತರಿಗೆ ಕೇಳಿದ್ದು ಕೊಟ್ಟಂತೆ, ವಾಂಗ್ಮಯ ವಿಸ್ತಾರದಲ್ಲೂ ಯಾರಿಗೆ ಏನು ಬೇಕೋ ಅದುಂಟು. 

*****

ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯರ ಅಗಲಿಕೆ. ಅಕ್ಕ-ಭಾವ ಮತ್ತು ಅಣ್ಣನ ನೆರಳಿನಲ್ಲಿ ಬಾಲ್ಯ. ಏಳು ವರುಷಕ್ಕೆ ಅಣ್ಣನಿಂದ ಉಪನಯನ. ಹದಿನೆಂಟು ವರುಷಕ್ಕೆ ವಿವಾಹ. ಇಪ್ಪತ್ತಾರು ವರುಷಕ್ಕೆ ಸನ್ಯಾಸ. ಚಿಕ್ಕ ವಯಸ್ಸಿನ ಹೆಂಡತಿ ಮತ್ತು ಏಳು ವರುಷದ ಮಗನನ್ನು ತೊರೆದು ಯತಿಯಾದದ್ದು. ಕಡು ಬಡತನದ ಜೀವನ. ಈ ಹಿನ್ನೆಲೆಯಲ್ಲಿ ಸಂಪಪಾದಿಸಿದ ಪ್ರಚಂಡ ಪಾಂಡಿತ್ಯ. ರಚಿಸಿದ ಗ್ರಂಥ ರಾಶಿ. ಪೀಠ ಸ್ವೀಕರಿಸಿದ ಮೇಲೆ ಐವತ್ತು ವರುಷ ಪೀಠಾಧಿಪತಿಯಾಗಿ ಸಮಾಜದ ಸೇವೆ. ನಂತರ ಜೀವಂತವಾಗಿದ್ದಾಗಲೇ ವೃಂದಾವನ ಪ್ರವೇಶ.  

ವೇದ-ಉಪನಿಷತ್ತುಗಳು, ತರ್ಕ, ವ್ಯಾಕರಣ, ಅಲಂಕಾರ ಶಾಸ್ತ, ಕಾವ್ಯ-ನಾಟಕ, ಮಹಾಭಾಷ್ಯ, ಪೂರ್ವ ಮೀಮಾಂಸಾ, ಜ್ಯೋತಿಷ್ಯ, ಸಂಗೀತ, ವೀಣಾವಾದನ ಮುಂತಾದ ಅನೇಕ ವಿಷಯಗಳಲ್ಲಿ ಪೂರ್ಣ ಪ್ರಭುತ್ವ. ಅನೇಕ ಕಲೆಗಳಲ್ಲಿ ಪರಿಣತಿ. ಒಂದೊಂದರಲ್ಲಿ ಸಾಧನೆ ಮಾಡಲು ಅನೇಕರಿಗೆ ಕಷ್ಟಸಾಧ್ಯ. ಇವರಿಗೆ ಎಲ್ಲವೂ ಸಲೀಸು. 

ರಾಯರ ಬೇರೆ ಪವಾಡಗಳು ಒತ್ತಟ್ಟಿಗಿರಲಿ. ಇವೆಲ್ಲದರ ಹಿನ್ನೆಲೆಯಲ್ಲಿ ಅವರನ್ನು ನೆನೆದಾಗ, ನೋಡಿದಾಗ ಅವರ ಬದುಕೇ ಒಂದು ದೊಡ್ಡ ಪವಾಡ.