Monday, April 7, 2025

ತ್ರಿವಿಧ ಜೀವರು


ಜೀವನದ "ಸ್ಲೋ ಸೈಕಲ್ ರೇಸ್" ಎಂಬ ಶೀರ್ಷಿಕೆಯ ಹಿಂದಿನ ಒಂದು ಸಂಚಿಕೆಯಲ್ಲಿ ನಮ್ಮ ಭೌತಿಕ ದೇಹದ ಜೀವಿತದ ಕಾಲಮಿತಿ, ಹೊರಗಿನ ಕಾಲಮಾನದಲ್ಲಿ ಅದರ ಅಳತೆ, ನಮ್ಮ ದೇಹದ ಆಂತರಿಕ ಕಾಲಮಾಪನ ವ್ಯವಸ್ಥೆಯಲ್ಲಿ ಜೀವಿತ ಕಾಲದ ಅಳತೆ, ಇವನ್ನು ನೋಡಿದೆವು. ಸೃಷ್ಟಿಯಲ್ಲಿ ಈ ಹೊರಗಿನ ಕಾಲದ ಅಳತೆ ಮತ್ತು ದೇಹದ ಆಂತರಿಕ ಕಾಲದ ಲೆಕ್ಕಗಳು, ಇವುಗಳೆರಡರ ಸಮತೋಲನವನ್ನು ಹೇಗೆ ಮಾಡಲಾಗಿದೆ ಅನ್ನುವುದನ್ನೂ ಸ್ವಲ್ಪ ತಿಳಿದೆವು. ಪ್ರಾಣಾಯಾಮವೇ ಮೊದಲಾದ ಅಭ್ಯಾಸಗಳಿಂದ ಶ್ವಾಸದ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಯೋಗಿಗಳು ಇದೇ ಭೌತಿಕ ದೇಹದಲ್ಲಿ ಹೇಗೆ ನೂರು ವರುಷಗಳಿಗೂ ಹೆಚ್ಚು ಕಾಲ ಬದುಕುವುದು ಸಾಧ್ಯ ಎನ್ನುವುದನ್ನು ಮಾಡಿ ತೋರಿಸಿದ್ದಾರೆ ಅನ್ನುವುದನ್ನೂ ಸ್ವಲ್ಪಮಟ್ಟಿಗೆ ಚರ್ಚಿಸಿದೆವು. ಶ್ರೀ ಜಗನ್ನಾಥದಾಸರ ಮೇರು ಕೃತಿ "ಹರಿಕಥಾಮೃತಸಾರ" ಬಗ್ಗೆ ಸೂಚ್ಯವಾಗಿ ತಿಳಿದು ಅಲ್ಲಿ ಕೊಟ್ಟಿರುವ ಶ್ವಾಸದ ಲೆಕ್ಕದ ಸೂಕ್ಷ್ಮ ತಿಳುವಳಿಕೆ ಪಡೆದೆವು. (ಇದರ ಬಗ್ಗೆ ಹೆಚ್ಚಿನ ವಿವರ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ).  


"ಹಂಸ ಮಂತ್ರ" ಮತ್ತು "ಅಜಪಾಜಪ" ಎಂಬ ವಿಷಯಗಳ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ಕೆಲವು ವಿವರಗಳನ್ನು ನೋಡಿದೆವು. "ಹಂಸ" ಎಂದರೇನು, ಅದಕ್ಕೂ "ಸಚ್ಚಿದಾನಂದ" ಅನ್ನುವುದಕ್ಕೂ ಹೇಗೆ ಸಾಮ್ಯವಿದೆ, "ಅಜಪಾಜಪ" ಅಂದರೇನು, ಮುಖ್ಯಪ್ರಾಣ ದೇವರು ಹೇಗೆ ಅದನ್ನು ನಾವು ಹುಟ್ಟಿದಂದಿನಿಂದ ಕೊನೆಯ ಉಸಿರು ಇರುವವರೆಗೆ ನಡೆಸುತ್ತಿದ್ದಾರೆ ಎನ್ನುವುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದೆವು. ಮುಂದೆ ಕೊಟ್ಟಿರುವ ವಿಷಯಗಳ ಪೂರ್ಣ ತಿಳುವಳಿಕೆಗಳಿಗಾಗಿ ಇದನ್ನು ಮತ್ತೊಮ್ಮೆ ಮೆಲಕು ಹಾಕುವುದು ಅವಶ್ಯಕ. (ಇಲ್ಲಿ ಕ್ಲಿಕ್ ಮಾಡಿ ಅದನ್ನು ಓದಬಹುದು). 


ಶ್ವಾಸಜಪದ ವಿವರಣೆಯುಳ್ಳ ಹರಿಕಥಾಮೃತಸಾರದ ಪದ್ಯದಲ್ಲಿ ಮುಖ್ಯಪ್ರಾಣರು ಈ ಜಪಗಳನ್ನು ಮಾಡಿ ಅದರಿಂದ ಬಂದ ಪುಣ್ಯವನ್ನು ಪ್ರತಿ ಶ್ವಾಸದಲ್ಲಿಯೂ ನಮ್ಮ ಖಾತೆಗೆ ಜಮಾ ಮಾಡುವುದನ್ನೂ ಮತ್ತು ಅದರ ಅರಿವಿದ್ದು ಅವರಿಗೆ ಕೃತಜ್ಞತೆಗಳನ್ನು ತೋರಿಸುವುದರ ಮೂಲಕ ನಾವು ಹೇಗೆ  ಅಂತಹ ಪುಣ್ಯದ ಭಾಗಗಳನ್ನು ದಕ್ಕಿಸಿಕೊಳ್ಳಬಹುದು ಎನ್ನುವುದನ್ನು ನೋಡಿದೆವು. ಇದರ ಜೊತೆಗೆ ಮೂರು ವಿಧದ ಜೀವರಿಗೆ ಅವರ ಕರ್ಮಾನುಸಾರ ಕ್ರಮವಾಗಿ ಸುಖ, ಸಂಸಾರ ಮತ್ತು ಅಪಾರ ದುಃಖಗಳನ್ನು ಕೊಡುತ್ತಾರೆಂದು ಹೇಳಿತ್ತು. ಈ ತ್ರಿವಿಧ ಜೀವರು, ಅಂದರೆ ಮೂರು ವಿಧ ಜೀವರು ಯಾರು? ಅವರ ವರ್ಗೀಕರಣ ಹೇಗೆ ಎನ್ನುವುದನ್ನು ಇಲ್ಲಿ ಸ್ವಲ್ಪ ನೋಡೋಣ.  

*****

ಮೂವರು ಸಹಪಾಠಿಗಳಾದ, ಒಂದೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಗಮನಿಸೋಣ. ಈ ಮೂವರೂ ಒಂದೇ ಪಥ್ಯ ಕ್ರಮವನ್ನು ಆಧರಿಸಿ ನಡೆವ ತರಗತಿಯಲ್ಲಿ ಅಭ್ಯಾಸ ನಡೆಸಿದ್ದಾರೆ. ಪಥ್ಯ ಪುಸ್ತಕಗಳು ಒಂದೇ. ಪಾಠ ಹೇಳುವ ಅಧ್ಯಾಪಕರೂ ಒಬ್ಬರೇ. ಎಲ್ಲವೂ ಒಂದೇ ಸಾಮ್ಯ. ವರುಷದ ಕಡೆಯಲ್ಲಿ ಒಂದು ಪರೀಕ್ಷೆ ಇರಲೇಬೇಕಲ್ಲ. ಮೂವರೂ ಆ ಪರೀಕ್ಷೆ ಬರೆಯುತ್ತಾರೆ. ಮೂವರಿಗೂ ಕೊಟ್ಟ ಪ್ರಶ್ನಪತ್ರಿಕೆ ಒಂದೇ. ಅದರಲ್ಲಿ ಇರುವ ಪ್ರಶ್ನೆಗಳೂ ಅವಕ್ಕೆ ನಿಗದಿ ಪಡಿಸಿರುವ ಅಂಕಗಳೂ ಒಂದೇ. ಪರೀಕ್ಷೆ ಬರೆಯಲು ಕೊಟ್ಟಿರುವ ಸಮಯದ ಮಿತಿ ಮೂವರಿಗೂ ಸಮವೇ. ಪರೀಕ್ಷೆಯ ಸಮಯದಲ್ಲಿ ಅವರ ಬರೆಯುವ ರೀತಿಯನ್ನು ಗಮನಿಸುವ ಪರಿಶೀಲಕರೂ ಒಬ್ಬರೇ. 

ಪರೀಕ್ಷೆ ಮುಗಿದ ಮೇಲೆ ಮೂರು ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವವರೂ ಒಬ್ಬರೇ. ಮೌಲ್ಯಮಾಪನ ಮಾಡಿ ಅಂಕಗಳನ್ನು ಕೊಡುವ ರೀತಿಯೂ ಒಂದೇ. ಆ ಮೌಲ್ಯಮಾಪಕರಿಗೆ ಈ ವಿದ್ಯಾರ್ಥಿಗಳ ಹೆಸರೂ ಗೊತ್ತಿಲ್ಲ. ಹೆಸರು ಅಥವಾ ನಂಬರು ಇರುವ ಮೊದಲ ಪುಟವನ್ನು ತೆಗೆದಿಟ್ಟು ಉತ್ತರ ಪತ್ರಿಕೆ ಅವರಿಗೆ ಕೊಟ್ಟಿದ್ದಾರೆ. ಇಷ್ಟೆಲ್ಲಾ ಒಂದೇ ಇದ್ದರೂ ಮೂವರಿಗೆ ಬರುವ ಅಂಕಗಳು ಬೇರೆ ಬೇರೆಯೇ. ಅವರವ ಉತ್ತರದ ಆಧಾರದ ಮೇಲೆ ಅಂಕಗಳು ಸಿಗುತ್ತವೆ. ಪ್ರಶ್ನ ಪತ್ರಿಕೆಯಲ್ಲಿ ಹತ್ತು ಪ್ರಶ್ನೆಗಳಿವೆ. ಪ್ರತಿ ಪ್ರಶ್ನೆಯ ಉತ್ತರಗಳಿಗೂ ಹತ್ತು ಅಂಕಗಳು. ಉತ್ತರ ಪೂರ್ತಿ ಸರಿಯಾಗಿದ್ದರೆ ಹತ್ತು ಮಾರ್ಕ್ಸ್ ಸಿಗುತ್ತವೆ. ಸಂಬಂಧವಿಲ್ಲದ ಉತ್ತರ ಬರೆದರೆ ಸೊನ್ನೆ ಮಾರ್ಕ್ಸ್. ಅರ್ಧಂಬರ್ಧ ಉತ್ತರ ಬರೆದಿದ್ದರೆ ಅದಕ್ಕೆ ಅನುಗುಣವಾಗಿ ಅಂಕಗಳು. 

ಮೊದಲ ವಿದ್ಯಾರ್ಥಿ ಆರು ಪ್ರಶ್ನೆಗಳಿಗೆ ಪೂರ್ತಿ ಸರಿಯಾದ ಉತ್ತರ ಬರೆದಿದ್ದಾನೆ. ಮೂರಕ್ಕೆ ಅರ್ಧ ಸರಿ ಉತ್ತರ. ಒಂದಕ್ಕೆ ಕೇಳಿದ ಪ್ರಶ್ನೆಗೆ ಸಂಬಂಧವಿಲ್ಲದ ಉತ್ತರದ ಬರವಣಿಗೆ. ಪರೀಕ್ಷಕರು ಎಪ್ಪತ್ತೈದು ಅಂಕ ಕೊಟ್ಟಿದ್ದಾರೆ. ಆರು ಸರಿ ಉತ್ತರಕ್ಕೆ ಅರವತ್ತು ಅಂಕಗಳು. ಮೂರು ಅರ್ಧ ಉತ್ತರಕ್ಕೆ ಹದಿನೈದು ಅಂಕಗಳು. ಒಂದು ತಪ್ಪು ಉತ್ತರಕ್ಕೆ ಸೊನ್ನೆಯೇ. ಒಟ್ಟಿನಲ್ಲಿ ನೂರಕ್ಕೆ ಎಪ್ಪತ್ತೈದು ಮಾರ್ಕ್ಸ್. 

ಎರಡನೆಯ ವಿದ್ಯಾರ್ಥಿ ಎರಡು ಪ್ರಶ್ನೆಗೆ ಸರಿಯಾದ ಉತ್ತರ ಬರೆದಿದ್ದಾನೆ. ಇನ್ನು ಆರು ಪ್ರಶ್ನೆಗಳಿಗೆ ಅರ್ಧ ಸರಿ ಉತ್ತರ. ಮತ್ತೆರಡು ಪ್ರಶ್ನೆಗಳಿಗೆ ತಪ್ಪು ಉತ್ತರಗಳು. ಎರಡು ಸರಿ ಉತ್ತರಗಳಿಗೆ ಇಪ್ಪತ್ತು ಅಂಕ. ಆರು ಅರ್ಧ ಸರಿ ಉತ್ತರಗಳಿಗೆ ಮೂವತ್ತು ಮಾರ್ಕ್ಸ್. ಮತ್ತೆರಡು ತಪ್ಪು ಉತ್ತರಗಳಿಗೆ ಎರಡು ದೊಡ್ಡ ಸೊನ್ನೆಗಳು. ಎಲ್ಲ ಕೂಡಿಸಿದಾಗ ಐವತ್ತು ಅಂಕ ಬಂದಿತು. 

ಮೂರನೆಯ ವಿದ್ಯಾರ್ಥಿ ಒಂದು ಪ್ರಶ್ನೆಗೆ ಸರಿಯಾದ ಉತ್ತರ ಬರೆದಿದ್ದಾನೆ. ಮತ್ತೆ ಮೂರು ಪ್ರಶ್ನೆಗಳಿಗೆ ಅರ್ಧ ಸರಿ ಉತ್ತರ. ಇನ್ನುಳಿದ ಆರು ಪ್ರಶ್ನೆಗಳಿಗೆ ಬರೆದಿರುವ ಉತ್ತರಗಳಿಗೂ ಕೇಳಿರುವ ಪ್ರಶ್ನೆಗಳಿಗೂ ಅರ್ಥಾತ್ ಸಂಬಂಧವಿಲ್ಲ. ಪೇಪರು ತುಂಬಿಸಲು ಏನನ್ನೋ ಬರೆದಿದ್ದಾನೆ. ಸರಿ ಉತ್ತರಕ್ಕೆ ಹತ್ತು ಮಾರ್ಕ್ಸ್. ಮೂರು ಅರ್ಧ ಉತ್ತರಕ್ಕೆ ಹದಿನೈದು ಅಂಕಗಳು. ಮತ್ತೆ ಆರು ತಪ್ಪು ಉತ್ತರಗಳಿಗೆ ಆರು ದೊಡ್ಡ ಸೊನ್ನೆಗಳು. ಒಟ್ಟಿನಲ್ಲಿ ಕಡೆಗೆ ಸಿಕ್ಕಿರುವುದು ಇಪ್ಪತ್ತೈದು ಅಂಕಗಳು. 

*****


ಪರೀಕ್ಷೆ ದಾಟಿ, ಮೌಲ್ಯಮಾಪನ ನಡೆದು ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಯ ನಿಯಮಗಳಿಗೆ ಅನುಸಾರವಾಗಿ ವಿದ್ಯಾರ್ಥಿಗಳಿಗೆ "ದರ್ಜೆ" ಘೋಷಿಸಲಾಗಿದೆ. ಮೊದಲನೆಯವನು ಪ್ರಥಮ ಶ್ರೇಣಿ. ಎರಡನೆಯವನು ಉತ್ತೀರ್ಣನಾಗಿದ್ದಾನೆ. ಅವನು ಪಾಸಾಗಿದ್ದಾನೆ. ಮೂರನೆಯವನು ಅನುತ್ತೀರ್ಣ. ಅವನು ಫೇಲ್ ಅನ್ನುತ್ತಾರೆ. 


ಮೊದಲನೆಯವನಿಗೆ ವೈದ್ಯಕೀಯ ವಿದ್ಯಾಲಯದಲ್ಲಿಯೋ ಅಥವಾ ತಾಂತ್ರಿಕ ಶಾಲೆಯಲ್ಲಿಯೋ ಪ್ರವೇಶ ಸಿಕ್ಕಿ ಡಾಕ್ಟರೋ ಎಂಜಿನಿಯರೋ ಆಗಬಹುದು. ಎರಡನೆಯವನು ಅಂಥದನ್ನು ಪಡೆಯಲಾರ. ಅವನಿಗೆ ಅವನ ಯೋಗ್ಯತೆಗೆ ತಕ್ಕಂತೆ ಮತ್ತೇನೋ ಸಿಗುತ್ತದೆ. ಮೂರನೆಯವನು ಅದೇ ತರಗತಿಯಲ್ಲಿ ಮತ್ತೆ ಓದಬೇಕು. ಮೊದಲನೆಯವನಿಗೆ ಅವನ ಶ್ರಮಕ್ಕೆ ಸರಿಯಾಗಿ ಸುಖದ ದಾರಿ. ಎರಡನೇಯವನಿಗೆ ಸುಖ-ದುಃಖ ಮಿಶ್ರಿತ ದಾರಿ. ಮೂರನೆಯವನಿಗೆ ದುಃಖದ ದಾರಿ. 

ಮೊದಲನೆಯವನು ಎಲ್ಲ ಸರಿ ಉತ್ತರ ಬರೆದಿರಲಿಲ್ಲ. ಹೆಚ್ಚು ಉತ್ತರಗಳು ಸರಿ ಇದ್ದವು. ಒಂದು ಉತ್ತರ ಪೂರ್ತಿ ತಪ್ಪೂ ಇತ್ತು. ಎರಡನೆಯವನು ಕಡಿಮೆ ಪ್ರಶ್ನೆಗಳಿಗೆ ಸರಿ ಉತ್ತರವನ್ನೂ ಬರೆದಿದ್ದ. ಹೆಚ್ಚಿನ ಪ್ರಶ್ನೆಗಳಿಗೆ ಅರ್ಧಂಬರ್ಧ ಉತ್ತರಗಳು. ಕೆಲವು ಉತ್ತರಗಳು ತಪ್ಪೂ ಇತ್ತು. ಮೂರನೆಯವನು ಒಂದು ಸರಿ ಉತ್ತರವನ್ನೂ, ಸ್ವಲ್ಪ ಅರ್ಧಂಬರ್ಧ ರೀತಿಯಲ್ಲೂ ಉತ್ತರ ಬರೆದಿದ್ದರೂ ಹೆಚ್ಚಿನವು ತಪ್ಪು ಉತ್ತರಗಳು. ಆದ್ದರಿಂದ ಫೇಲ್ ದರ್ಜೆ. 

*****

ಪರಮಾತ್ಮನ ಪರೀಕ್ಷೆಯಲೂ ಹೀಗೆಯೇ. ಜೀವಿಗಳು ಬದುಕಿ ಬಾಳಿದ ರೀತಿ ಮತ್ತು ಅವರ ಸ್ವಭಾವಗಳಿಗೆ ತಕ್ಕಂತೆ ವರ್ಗೀಕರಣ. ಅದಕ್ಕೆ ತ್ರಿವಿಧ ಅಥವಾ ಮೂರು ವಿಧದ ಜೇವರುಗಳು. ಮೊದಲ ಗುಂಪು ಸಾತ್ವಿಕರು. ಎರಡನೆಯ ಗುಂಪು ರಾಜಸರು. ಮೂರನೆಯವರು ತಾಮಸರು. 

ಮೇಲಿನ ಉದಾಹರಣೆಯಂತೆ ಮೂವರಲ್ಲೂ ಮೂರು ರೀತಿಯ ಗುಣಗಳೂ ಇವೆ. ಸತ್ವ ಗುಣ ಹೆಚ್ಚಿರುವವರಿಗೆ ಸಾತ್ವಿಕರು ಅನ್ನುತ್ತಾರೆ. ಅವರಲ್ಲೂ ರಾಜಸ ಮತ್ತು ತಾಮಸ ಗುಣಗಳು ಇದ್ದೇ ಇವೆ. ಆದರೆ ಅವುಗಳ ಪ್ರಮಾಣ ಕಡಿಮೆ. ಎಂದೋ ಒಮ್ಮೆ ಉದಾಸೀನದ ರಾಜಸ ಭಾವ ಅಥವಾ ಕೋಪಿಷ್ಠ ತಾಮಸ ಭಾವ ಕಾಣಿಸಿಕೊಳ್ಳುತ್ತದೆ. ತಾಮಸರಿಗೆ ಬಹಳವಾಗಿ ತಾಮಸ ಗುಣದ ಮೆರೆದಾಟ. ಅವರಲ್ಲೂ ಒಮ್ಮೆ ಸತ್ವ ಗುಣ ಮಿಂಚಿ ಮಾಯವಾಗಬಹುದು. ರಾಜಸರು ಅಲ್ಲೂ ಇಲ್ಲ, ಇಲ್ಲೂ ಇಲ್ಲ ಅನ್ನುವಂತೆ. ತಟಸ್ಥರು. 

ಜೀವಿಗಳಿಗೆ ಕಡೆಗೆ ಸಿಗುವ ಸುಖ, ಸಂಸಾರ ಅಥವಾ ಅಪಾರ ದುಃಖಗಳಿಗೆ ಅವರು ಬದುಕಿ ಬಾಳಿದ ರೀತಿಯೇ ಕಾರಣ. ಇದನ್ನೇ "ಸಾತ್ವರಿಗೆ ಸುಖ, ಸಂಸಾರ ಮಿಶ್ರರಿಗೆ, ಅಧಮ ಜನರಿಗಪಾರ ದುಃಖಗಳೀವ ಗುರು ಪವಮಾನ ಸಲಹೆಮ್ಮ" ಎಂದು ಸೂಚಿಸಿದ್ದಾರೆ. 

ಕ್ರಮವಾಗಿ ಸಾಧನೆ ಮಾಡಿದಂತೆಲ್ಲ ಸತ್ವ ಗುಣ ಪ್ರಧಾನವಾಗುತ್ತ ಹೋಗುತ್ತದೆ. ತಮೋಗುಣವು ಕ್ಷೀಣಿಸುತ್ತಾ ಬರುತ್ತದೆ. 
*****


ಎಲ್ಲ ಪ್ರಶ್ನೆಗಳಿಗೂ ಪೂರ್ತಿ ಸರಿ ಉತ್ತರ ಬರೆದವರು ಇರಬೇಕಲ್ಲವೇ? ಅವರ ಕಥೆಯೇನು ಅನ್ನುವ ಪ್ರಶ್ನೆ ಬರಬಹುದು. ಅಂಥವರು ಕೇವಲ ಬೆರಳೆಣಿಕೆಯಷ್ಟು ಮಾತ್ರ. ಅವರು ಪೂರ್ಣ ಸತ್ವ ಗುಣವುಳ್ಳವರು. ಅವರನ್ನು "ಋಜುಗಳು" ಎನ್ನುತ್ತಾರೆ. ಅವರ ಸಮೂಹಕ್ಕೆ "ಋಜುಗಣ" ಎಂದು ಸಂಬೋಧಿಸುತ್ತಾರೆ. 


ಅದೇ ರೀತಿ ಪೂರ್ಣ ತಮೋಗುಣವುಳ್ಳ ಜೀವಿಗಳೂ ಉಂಟು. ಸಮಾಜ ಕಂಟಕರಾಗಿ, ಯಾರಿಗೂ ಬೇಡವಾಗಿ, ಪರರಿಗೆ ತೊಂದರೆ ಕೊಡುವುದೇ ಮಾಡಿಕೊಂಡು ಜೀವನ ನಡೆಸುವವರು ಅವರು.  


ಮೇಲೆ ಕೊಟ್ಟಿರುವ ಉದಾಹರಣೆಗಳು ಮೂರು ವಿಧ ಜೀವಿಗಳ ವರ್ಗೀಕರಣ ವಿವರಿಸುವ ಸಲುವಾಗಿ ಮಾತ್ರ. ನಮ್ಮ ವಿದ್ಯಾಸಂಸ್ಥೆಗಳ ಪರೀಕ್ಷೆಗಳು, ಅವುಗಳ ಗ್ರೇಡುಗಳು, ಮತ್ತು ಬೇರೆ ಲೌಕಿಕ ಸುಖ-ದುಃಖಗಳನ್ನು, ಫಲಾಫಲ ಮತ್ತು ನಿರೀಕ್ಷೆಗಳನ್ನು ಇವಕ್ಕೆ ಬೆರೆಸಿಕೊಂಡು ಗೋಜಲು ಮಾಡಿಕೊಳ್ಳಬಾರದು!

1 comment:

  1. Nicely explained three gunas with good example. Excellent.

    ReplyDelete