Tuesday, July 1, 2025

ಏಕಾದಶಿಯ ದಿನ ಹಾಲು-ಹಣ್ಣು ಸೇವಿಸಿ


ಹಿಂದಿನ ಸಂಚಿಕೆಯಲ್ಲಿ, "ಮನವ ಕಬ್ಬಿಣ ಮಾಡು, ಹೇ ಮೃಡನೇ!" ಎಂಬ ಶೀರ್ಷಿಕೆಯ ಅಡಿಯಲ್ಲಿ, "ಸಂದರ್ಭ ನೋಡಿ ಮಾತುಗಳಿಗೆ ಅರ್ಥ ಮಾಡಬೇಕು" ಎನ್ನುವ ವಿಷಯವನ್ನು ಎರಡು ಬಾರಿ ನೋಡಿದ್ದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ಸಂದರ್ಭ ನೋಡಿ ಮಾತುಗಳಿಗೆ ಅರ್ಥ ಮಾಡಬೇಕು ಎನ್ನುವುದು ಎಲ್ಲ ಕಾಲಗಳಿಗೂ ಒಪ್ಪುವ, ತಪ್ಪಿಸಲಾಗದ, ತಪ್ಪಿಸಬಾರದಾದ ಅವಶ್ಯಕತೆ. ಯಾವುದೇ ಒಂದು ಸಂದರ್ಭದ ಅರ್ಥದ ತಿಳುವಳಿಕೆಗೆ ಆಯಾ ಗ್ರಂಥದ ಎಲ್ಲ ಭಾಗಗಳನ್ನೂ ಪೂರ್ತಿಯಾಗಿ ಓದಿ, ಹಿಂದು ಮುಂದಿನ ಭಾಗಗಳನ್ನು ಸಮನ್ವಯ ಮಾಡಿ, ನಂತರ ಅರ್ಥಗಳನ್ನು ಗ್ರಹಿಸಬೇಕು. ಯಾವುದೋ ಗ್ರಂಥದ ಒಂದು ಅಧ್ಯಾಯ ಓದಿ, ಅದರ ಹಿಂದೆ ಮುಂದೆ ತಿಳಿಯದೆ, ಸಂದರ್ಭಗಳ ಅರ್ಥ ತಿಳಿಯುವುದು ಬಹಳ ಅಪಾರ್ಥಕ್ಕೆ ದಾರಿ ಮಾಡುತ್ತದೆ. ಇದು ಕೃತಿಗಳನ್ನು ಓದದೇ ಇರುವುದಕ್ಕಿಂತಲೂ ಹೆಚ್ಚು ಅಪಾಯಕಾರಿ. ತುಂಬಾ ಆಳವಾದ ವಿಷಯಗಳಲ್ಲಂತೂ ಕೇವಲ ಆ ಒಂದು ಗ್ರಂತಹವನ್ನಲ್ಲ; ಅದಕ್ಕೆ ಸಂಬಂಧಿಸಿದಂತಹ ಇತರೆ ವಾಂಗ್ಮಯವನ್ನೂ ಅವಲೋಕಿಸಿ ಅರ್ಥಗಳನ್ನು ತಿಳಿಯುವ ಅವಶ್ಯಕತೆ ಇರುತ್ತದೆ. ಇಲ್ಲದಿದ್ದರೆ "ಎತ್ತು ಈಯಿತು ಅಂದರೆ ಕರು ಕೊಟ್ಟಿಗೆಯಲ್ಲಿ ಕಟ್ಟು" ಎನ್ನುವ ಗಾದೆಯಂತೆ ಅಪಾರ್ಥಕ್ಕೆ ಎಡೆಗೊಡುತ್ತದೆ. ಎತ್ತು ಕರು ಹಾಕುವುದಿಲ್ಲ ಎಂದು ತಿಳುವಳಿಕೆ ಇರುವವನು "ಎತ್ತು ಈಯಿತು" ಅಂದ ತಕ್ಷಣ ನಕ್ಕು ಸುಮ್ಮನಾಗುತ್ತಾನೆ. ಕರುವಿನ ಬಗ್ಗೆ ಯೋಚಿಸುವ ಪ್ರಸಂಗವೇ ಬರುವುದಿಲ್ಲ. 

ಈ ಸೂತ್ರವನ್ನು ಚೆನ್ನಾಗಿ ಅರಿಯಲು ಒಂದು ಉದಾಹರಣೆಯನ್ನು ನೋಡೋಣ. 

*****

ಸಾಮಾನ್ಯವಾಗಿ ನಮ್ಮ ಸಂಪ್ರದಾಯಗಳನ್ನು ಸ್ವಲ್ಪಮಟ್ಟಿಗೆ ತಿಳಿದ ಎಲ್ಲರಿಗೂ "ಏಕಾದಶಿ" ಅಂದ ತಕ್ಷಣ ನೆನಪಿಗೆ ಬರುವುದು "ಉಪವಾಸ". ಅನೇಕರು ಏಕಾದಶಿ ಉಪವಾಸ ಅಂದರೆ "ಪಕ್ಕದ್ಮನೆ ಸುಬ್ಬಮ್ಮನಿಗೆ ಇಂದು ಏಕಾದಶಿ ಉಪವಾಸ" ಹಾಡನ್ನು ಜ್ಞಾಪಿಸಿಕೊಂಡು, ಅಲ್ಲಿ ಬರುವ ತಿಂಡಿಗಳ ಪಟ್ಟಿಯನ್ನು ನೋಡಿ, ಪ್ರತಿದಿನ ಏಕಾದಶಿ ಯಾಕೆ ಆಗಬಾರದು ಎಂದು ಆತಂಕ ಪಡಬಹುದು. ಕೆಲವರು ಏಕಾದಶಿ ಉಪವಾಸ ಮಾಡುತ್ತಾರೆ. ಇನ್ನು ಕೆಲವರು ಆ ರೀತಿ ಉಪವಾಸ ಮಾಡುವವರನ್ನು ಅಪಹಾಸ್ಯ ಮಾಡುತ್ತಾರೆ. ತಮಾಷೆಯ ಸಂಗತಿಯೆಂದರೆ ಅನೇಕರಿಗೆ ಇದು ಒಂದು ವ್ರತ ಎಂದು ಗೊತ್ತಿಲ್ಲ. ಗೊತ್ತಿದ್ದವರಿಗೂ ಅದರ ಪೂರ್ತಿ ಆಚರಣೆ ಗೊತ್ತಿಲ್ಲ. 

ಯಾವುದಾದರೂ ರೆಸ್ಟೋರೆಂಟ್ ಬಳಿ ಸಂಜೆ ಎಂಟರ ನಂತರ ಹೋದವರಿಗೆ ಅಲ್ಲಿ ನಡೆಯುವ ಚಟುವಟಿಕೆಗಳ ಪರಿಚಯ ಇರುತ್ತದೆ. ಬೆಳಗ್ಗಿನಿಂದ ನಿಲ್ಲದ ಚಟುವಟಿಕೆ ಆದ ನಂತರ, ಗ್ರಾಹಕರ ಸೇವೆ ಮುಗಿದ ಮೇಲೆ, ಅಂದಿನ ದಿನ ಬಾಗಿಲು ಮುಚ್ಚುವ ಮುಂಚೆ ಕೆಲವು ದೈನಿಕ ಕೆಲಸಗಳಿರುತ್ತವೆ. ಅಡಿಗೆ ಮನೆಯವರಿಗೆ ಮಿಕ್ಕ ಪದಾರ್ಥಗಳನ್ನು ಕೆಡದಂತೆ ಎತ್ತಿಟ್ಟು, ಪಾತ್ರೆಗಳನ್ನು ಶುಚಿ ಮಾಡಿ ಒರೆಸಿಟ್ಟು, ಮಾರನೆಯ ದಿನದ ಅಡಿಗೆಗೆ ನೆನೆಹಾಕುವ ಪದಾರ್ಥಗಳ ಕೆಲಸ ಮುಗಿಸಿ, ಎಲ್ಲ ತಯಾರಿ  ಮಾಡಿದಮೇಲೆ ವಿಶ್ರಾಂತಿ. ಸರ್ವರ್ ಮತ್ತು ಕ್ಲೀನರುಗಳಿಗೆ ಮೇಜಿನ ಮೇಲೆ ಕುರ್ಚಿಗಳನ್ನು ಮಗುಚಿಹಾಕಿ, ಎಲ್ಲ ಸಂದಿಗಳನ್ನೂ ಗುಡಿಸಿ, ನೀರಿನಿಂದ ತೊಳೆದು, ಜಾಗ ಒಣಗಿಸಿ, ಮಾರನೆಯ ದಿನಕ್ಕೆ ಗ್ರಾಹಕರನ್ನು ಎದುರುಗೊಳ್ಳಲು ಸಿದ್ಧ ಮಾಡಿಡಬೇಕು. ಬೆಳಗ್ಗೆ ಆರು ಗಂಟೆಗೆ ಮೊದಲ ಗ್ರಾಹಕ ಬರುವ ವೇಳೆಗೆ ಎಲ್ಲಾ ತಯಾರಾಗಿರಬೇಕು. 

ಪ್ರತಿ ಮನೆಯಲ್ಲಿಯೂ ಗೃಹಿಣಿ ಅಥವಾ ಅಡಿಗೆ ಮನೆ ನೋಡಿಕೊಳ್ಳುವವರು ಈ ಕೆಲಸ ಪ್ರತಿದಿನ ಮಾಡುತ್ತಾರೆ. ಸ್ವಲ್ಪ ಪಾಲುಮಾಲಿಕೆ ಪಟ್ಟರೂ (ಈ ಪದ ಈಗ ಮರೆತೇಹೋಗಿದೆ) ಸಹ ಮನೆಮಂದಿಯ ಆರೋಗ್ಯದ ಮೇಲೆ ನೇರ  ಪರಿಣಾಮ ಆಗುತ್ತದೆ. ಜೊತೆಗೆ ಅಡಿಗೆ ಪದಾರ್ಥಗಳ ಅಪವ್ಯಯವಾಗಿ ಮನೆಯ ಆಯ-ವ್ಯಯ ಏರುಪೇರಾಗುತ್ತದೆ. ಮಾರನೆಯ ದಿನ ಬೆಳಿಗ್ಗೆ ಕೆಲಸ ಮಾಡುವಾಗ ಎಡಚೆಡಚು (ತಾಳ-ಮೇಳ ತಪ್ಪುವುದು) ಆಗುತ್ತದೆ. 

ನಮ್ಮ ದೇಹದಲ್ಲೂ ಇದೇ ರೀತಿಯ ವ್ಯವಸ್ಥೆ ಉಂಟು. ಜಠರ, ಸಣ್ಣ ಕರುಳು, ದೊಡ್ಡ ಕರುಳು ಮೊದಲಾದ ಜೀರ್ಣಾಂಗಗಳಿಗೂ ಆಗಾಗ ಸ್ವಲ್ಪ ವಿಶ್ರಾಂತಿ ಬೇಕು. ಭಾನುವಾರ ದಣಿದ ದೇಹಕ್ಕೆ ವಿಶ್ರಾಂತಿ ಬೇಕು ಎಂದು ಜಗಳವಾಡುವವರೂ ಹೊಟ್ಟೆಗೆ ವಿಶ್ರಾಂತಿ ಕೊಡಲು ತಯಾರಿರುವುದಿಲ್ಲ. ಕ್ರಮವಾದ ಉಪವಾಸ ಜೇರ್ಣೇ೦ದ್ರಿಯಗಳಿಗೆ ಈ ರೀತಿಯ ವಿಶ್ರಾಂತಿ ಕೊಡುತ್ತದೆ. ಏಕಾದಶಿ ಉಪವಾಸ ಈ ಕೆಲಸ ಮಾಡುತ್ತದೆ. ಈಗಿನ ತಲೆಮಾರಿನವರು ಇದನ್ನು ಬಿಟ್ಟು "ಇಂಟರ್ಮಿಟೆಂಟ್ ಫಾಸ್ಟಿಂಗ್" ಮತ್ತು "ಡಬ್ಬಿಯ ಆಹಾರ" ಮೊರೆ ಹೋಗುತ್ತಿರುವುದು ಒಂದು ವಿಪರ್ಯಾಸ. 

*****

ಏಕಾದಶಿ ಉಪವಾಸ ಒಂದು ದಿನದ ಕಟ್ಟಲೆಯಲ್ಲ. ಅದು ಮೂರು ದಿನದ ಒಂದು ವ್ರತ. ನವಮಿ ಎರಡು ಹೊತ್ತು ಊಟ ಮಾಡಬಹುದು. ಏಕಾದಶಿಯ ಹಿಂದಿನ ದಿನ, ದಶಮಿಯಂದು ಒಂದೇ ಹೊತ್ತಿನ ಊಟ. ರಾತ್ರಿ ಏನೂ ತಿನ್ನುವ ಹಾಗಿಲ್ಲ. (ಇದಕ್ಕೆ "ದಶಮಿ ಏಕಭುಕ್ತ" ಅನ್ನುತ್ತಾರೆ). ಎರಡನೆಯ ದಿನ ಏಕಾದಶಿಯಂದು ಪೂರ್ತಿ ಉಪವಾಸ. ಉಪವಾಸ ಎಂದರೆ ಉಪವಾಸವೇ. ನೀರನ್ನೂ ಕುಡಿಯುವಹಾಗಿಲ್ಲ. (ಇದಕ್ಕೆ "ನಿರ್ಜಲ ಏಕಾದಶಿ" ಅನ್ನುತ್ತಾರೆ). ಮೂರ್ನಾಲ್ಕು ತರಹ ತಿಂಡಿಗಳನ್ನೋ, ಎರಡು-ಮೂರು ಲೀಟರು ಹಾಲನ್ನೋ, ಮೂರು-ನಾಲ್ಕು ಕೆಜಿ ಹಣ್ಣನ್ನೋ ಸೇವಿಸುವುದಲ್ಲ. (ಎಂದೋ ಮಾಡಿಟ್ಟ ಚಕ್ಕುಲಿ-ಕೋಡುಬಳೆ-ರವೆಉಂಡೆ ಮುಂತಾದುವನ್ನು ನೋಡಲೇಬಾರದು). ಮೂರನೆಯ ದಿನ ದ್ವಾದಶಿ ಬೆಳಿಗ್ಗೆ ಬೇಗನೆ ಗೊತ್ತಾದ ಹೊತ್ತಲ್ಲಿ (ಸೂರ್ಯೋದಯದ ವೇಳೆಯಲ್ಲಿ) ಊಟ ಮಾಡುವುದು. ಇದಕ್ಕೆ "ಪಾರಣೆ" ಎನ್ನುತ್ತರೆ. ಹೀಗೆ ದ್ವಾದಶಿ ಪಾರಣೆ ಮಾಡಿದಮೇಲೆ ರಾತ್ರಿ ಊಟವಿಲ್ಲ. ಮತ್ತೆ ಮಾರನೆಯ ದಿನ (ತ್ರಯೋದಶಿ) ಮಧ್ಯಾಹ್ನ ಮತ್ತು ರಾತ್ರಿ ಊಟ ಮಾಡಬಹುದು. 

ಇದಲ್ಲದೆ, ದೇವರ ನೈವೇದ್ಯವಲ್ಲದ ಯಾವ ಪದಾರ್ಥವನ್ನೂ ತಿನ್ನುವಹಾಗಿಲ್ಲ. ಊಟಗಳ ಮಧ್ಯೆ (ಮಧ್ಯೇ ಮಧ್ಯೇ ಪಾನೀಯಂ ಸಮರ್ಪಯಾಮಿ ಅನ್ನುವಂತೆ) ಸ್ವಲ್ಪ ಸ್ವಲ್ಪ ಅದು-ಇದು ಎಂದು ತಿನ್ನುವ-ಕುಡಿಯುವ ಹಾಗಿಲ್ಲ. ಪಾರಣೆಯಂದು (ಪೂರ್ತಿ ಏಕಾದಶಿ ವ್ರತ ಕಾಲದಲ್ಲಿಯೂ) ಈರುಳ್ಳಿ-ಆಲೂಗಡ್ಡೆ-ಬದನೇಕಾಯಿ, ಜೊತೆಗೆ ಒಂದಷ್ಟು ಹಲಸಂದೆಕಾಳು ಸೇರಿಸಿ, ಹುಳಿ ಮಾಡಿಸಿ ಹೊಡೆಯುವಹಾಗಿಲ್ಲ. ವರುಷಕ್ಕೆ ನಾಲ್ಕು ತಿಂಗಳು "ಚಾತುರ್ಮಾಸ" ಕಾಲದಲ್ಲಿ ಆ ವ್ರತದ ನಿಯಮ ಕೂಡ ಪಾಲಿಸಬೇಕು. ಒಂದು ತಿಂಗಳು ಹಾಲು ಏಪಯೋಗಿಸಬಾರದು. ಒಂದು ತಿಂಗಳು ಮೊಸರಿಲ್ಲ. (ಮಜ್ಜಿಗೆ ಆಗಬಹುದು!). ಒಂದು ತಿಂಗಳು ತರಕಾರಿಗಳಿಲ್ಲ. (ತರಕಾರಿ ಇಲ್ಲದ ತಿಂಗಳಲ್ಲಿ ಮೆಣಸಿನಕಾಯಿ ಉಪಯೋಗ ಇಲ್ಲ. ಖಾರಕ್ಕೆ ಬರೀ ಮೆಣಸು).  ಒಂದು ತಿಂಗಳು ಬೇಳೆ-ಕಾಳು ಇಲ್ಲ. (ವಡೆ-ಆಂಬೊಡೆ ಮಾಡುವಂತಿಲ್ಲ. ಮಾಡಲೇಬೇಕಾದರೆ ಅಕ್ಕಿ ವಡೆ ಮಾಡಬಹುದು). ಏಕಾದಶಿ ವ್ರತದ ಕ್ರಮ ಹೀಗೆ. ಕೆಲವೊಮ್ಮೆ ಎರಡೆರಡು ಏಕಾದಶಿ ಬರುವುದುಂಟು. ಹೆದರಬೇಕಿಲ್ಲ. ಇದು ಸುಮಾರು ಮೂರು ವರುಷಗಳಿಗೆ ಒಂದು ಬಾರಿ ಮಾತ್ರ. 

"ಏಕಾದಶಿ ಮನೆಗೆ ಶಿವರಾತ್ರಿ ಬಂದಂತೆ" ಎಂದು ಒಂದು ಗಾದೆ. "ದುರ್ಭಿಕ್ಷದಲ್ಲಿ ಅಧಿಕ ಮಾಸ ಬಂದಂತೆ" ಎಂದು ಮತ್ತೊಂದು ಗಾದೆ. ಮೊದಲೇ ಖರ್ಚಿಗೆ ಕಾಸಿಲ್ಲದಿದ್ದಾಗ ಹೆಚ್ಚಿನ ವೆಚ್ಚದ ಬಾಬ್ತು ಬಂದಾಗ ಈ ಗಾದೆಗಳನ್ನು ಹೇಳುತ್ತಾರೆ. "ದುರ್ಭಿಕ್ಷದ ಅಧಿಕ ಮಾಸದ ಎರಡು ಏಕಾದಶಿಯಲ್ಲಿ ಶಿವರಾತ್ರಿ ಬಂದಂತೆ" ಎಂದು ಸದ್ಯ ಗಾದೆಯಿಲ್ಲ. (ಶಿವರಾತ್ರಿ ಏಕಾದಶಿಯಂದು ಬರುವುದು ಗಾದೆಯಲ್ಲಿ ಮಾತ್ರ. ನಿಜ ಜೀವನದಲ್ಲಿ ಇದು ಆಗುವುದಿಲ್ಲ). 
*****

ಮುಕುಂದರಾಯರು ದೊಡ್ಡ ಅಧಿಕಾರದ ಹುದ್ದೆಯಲ್ಲಿದ್ದು ನಿವೃತ್ತರಾದರು. ಬಹಳ ಪ್ರಯತ್ನ ಪಟ್ಟರೂ ಎಲ್ಲಿಯೂ ಎರಡನೇ ಕೆಲಸ ಸಿಗಲಿಲ್ಲ. ವಿಧಿಯಿಲ್ಲದೇ ದೇವರ ಬೆನ್ನುಹತ್ತಿದರು. ಯಾರೋ ಬಂಧುಗಳು ಸಂಜೆ ದೇವಸ್ಥಾನದಲ್ಲಿ ಏಳು ಗಂಟೆಯಿಂದ ಎಂಟು ಗಂಟೆವರೆಗೆ ನಡೆಯುವ "ಪುರಾಣ" ಬಹಳ ಒಳ್ಳೆಯದು ಎಂದು ಹೇಳಿದರು. ಮುಕುಂದರಾಯರು ಹೊರಡಲು ತಯಾರಾದರು. ಕೆಲಸದಲ್ಲಿದ್ದಾಗ ಕಾರಿತ್ತು. ಈಗ ಸಿಟಿ ಬಸ್ಸಿನಲ್ಲಿ ಹೋಗಬೇಕು. ಮೊದಲ ದಿನ ಪುರಾಣಕ್ಕೆ ಹೊರಟು ಬಸ್ಸು ಹಿಡಿದು ದೇವಸ್ಥಾನ ತಲುಪುವುದರಲ್ಲಿ ಏಳು ಮುಕ್ಕಾಲು ಗಂಟೆ ಆಯಿತು. ಕಡೆಗೆ ಕೂಡಲು ಜಾಗ ಸಿಗದೇ ಒಂದೆಡೆ ನಿಂತುಕೊಂಡೇ ಕಡೆಯ ಹದಿನೈದು ನಿಮಿಷದ ಪುರಾಣ ಕೇಳಿದರು. 

ಪುರಾಣೀಕರು ಮಾರನೆಯ ದಿನ ವೈಕುಂಠ ಏಕಾದಶಿಯ ಕಾರಣ ಏನು ಮಾಡಬೇಕೆಂದು ವಿವರಿಸುತ್ತಿದ್ದರು. "ನಾಳೆ ವೈಕುಂಠ ಏಕಾದಶಿ ಒಂದು ಪರ್ವಕಾಲ. ನಾನು ವಿವರಿಸಿದಂತೆ ಉಪವಾಸವಿದ್ದು, ಹಾಲು-ಹಣ್ಣು ಚೆನ್ನಾಗಿ ಸೇವಿಸಿ, ದೇವರನಾಮ-ಸ್ತೋತ್ರಾದಿಗಳನ್ನು ಹೇಳಿಕೊಂಡು ಕಾಲ ಕಳೆಯಬೇಕು. ಭೋಜನ ಮಾಡಬಾರದು ಎಂದು ಬೇರೆ ಹೇಳಬೇಕಿಲ್ಲ. ಅವಕಾಶವಿದ್ದವರು ದೇವಾಲಯಗಳಿಗೆ ಅವಶ್ಯ ಹೋಗಿ ದೇವರ ದರ್ಶನ ಪಡೆಯಬೇಕು. ನಾಳೆ ಎಂದಿನಂತೆ ಏಳು ಘಂಟೆಯಿಂದ ಎಂಟು ಘಂಟೆವರೆಗೆ ಇಲ್ಲಿಯೂ ಹಾಲು-ಹಣ್ಣಿಗೆ ವ್ಯವಸ್ಥೆ ಮಾಡಿದೆ. ತಪ್ಪದೇ ಬಂದು ಭಾಗವಹಿಸಿ" ಎಂದು ಹೇಳಿ ಅಂದಿನ ಪ್ರವಚನ ಮುಗಿಸಿದರು. ರಾಯರು ಮನೆಗೆ ಬಂದರು. 

ರಾಯರಿಗೆ ಹಾಲು-ಹಣ್ಣಿನಲ್ಲಿ ದಿನ ಕಳೆದು ಗೊತ್ತಿಲ್ಲ. ಆದರೂ ಅದನ್ನು ಪಾಲಿಸಬೇಕೆಂದು ತೀರ್ಮಾನಿಸಿದರು. ಮನೆಯಲ್ಲಿ ಎಲ್ಲರೂ ಪರ ಊರಿಗೆ ಹೋಗಿ ಅವರು ಒಬ್ಬರೇ ಉಳಿದಿದ್ದರು. ಬೆಳಗ್ಗೆ ಹಾಲಿನಂಗಡಿಗೆ ಹೋದಾಗ ಅಂಗಡಿಯವನು "ಸ್ವಾಮಿ, ಇಂದು ಹಾಲಿಗೆ ಬಹಳ ಬೇಡಿಕೆ. ಎಲ್ಲಾ ಖರ್ಚಾಗಿದೆ. ಐದು ಲೀಟರಿನ ಒಂದು ಪ್ಯಾಕೆಟ್ ಮಾತ್ರ ಇದೆ" ಅಂದ. ರಾಯರು ಅದನ್ನು ಕೊಂಡರು. ಹಣ್ಣಿನ ಅಂಗಡಿಯಲ್ಲಿಯೂ ಎಲ್ಲಾ ಖಾಲಿ ಖಾಲಿ. ಕಡೆಗೆ ಒಂದು ಹಲಸಿನ ಹಣ್ಣು, ಒಂದು ಕಲ್ಲಂಗರೇ ಹಣ್ಣು, ಸ್ವಲ್ಪ  ಮೂಸಂಬಿ, ಬಾಳೆಹಣ್ಣು ಸಿಕ್ಕಿತು. ಅವರ ಹೆಂಡತಿ ಯಾವಾಗಲೋ "ಐದು ತರಹದ ಹಣ್ಣು" ಎಂದು ಹೇಳಿದ್ದುದು ನೆನಪಿಗೆ ಬಂತು. ಕಷ್ಟಪಟ್ಟು ಇನ್ನೊಂದು ಅಂಗಡಿಯಲ್ಲಿ ಒಂದು ಚಕ್ಕೋತ ಕೊಂಡರು. ಇವುಗಳ ಭಾರವನ್ನು ಹೊತ್ತು ಮನೆಗೆ ಬಂದರು.

ಸ್ನಾನ ಮಾಡಿ ಹಲಸಿನ ಹಣ್ಣು ಹೆಚ್ಚಿದರು. ಹಾಲು ದೊಡ್ಡ ಪಾತ್ರೆಯಲ್ಲಿ ಜಾಗರೂಕರಾಗಿ ಉಕ್ಕದಂತೆ  ಕಾಯಿಸಿದರು. ಬಾಳೆಯ ಹಣ್ಣಿನ ಜೊತೆ ಹಲಸಿನ ಹಣ್ಣು ಸೇರಿಸಿ ತಿಂದರು. ಸ್ವಲ್ಪ ಹಾಲೂ ಸೇರಿತು. ವಿಶ್ರಾಂತಿಯ ನಂತರ ಚಕ್ಕೋತ ಹಣ್ಣು ಮತ್ತು ಹಾಲು ನಡೆಯಿತು. ಸಂಜೆಯ ವೇಳೆ ಬೇರೆ ಹಣ್ಣುಗಳು ಮತ್ತು ಮತ್ತಷ್ಟು ಹಾಲು ಹೊಟ್ಟೆ ಸೇರಿತು. ದೇವಸ್ಥಾನದಲ್ಲಿ ಪುರಾಣೀಕರು ಹೇಳಿದ್ದು ನೆನಪಿಗೆ ಬಂತು. "ಅಲ್ಲಿ ಹಣ್ಣು-ಹಾಲಿನ ವಿತರಣೆ ವ್ಯವಸ್ಥೆ ಇದೆ. ಹೋಗಬೇಕು" ಎಂದು ನೆನಪಾಯಿತು. ಬೇಗ ಹೊರಟು ಏಳು ಗಂಟೆಯ ಮುಂಚೆ ಅಲ್ಲಿ ಸೇರಿದರು. 

ಏಳಕ್ಕೆ ಪ್ರಾಂಭವಾದ ಪುರಾಣದಲ್ಲಿ ಭಗವದ್ಗೀತೆ ಮತ್ತು ಭಾಗವತದ ಕೆಲವು ಭಾಗಗಳ ಶ್ಲೋಕಗಳು ಮತ್ತು ಅವುಗಳ ವಿವರಣೆ ನಡೆಯಿತು. ಹಾಲು ಮತ್ತು ಹಣ್ಣುಗಳ ಸುಳಿವೇ ಇಲ್ಲ. ಇರಲಿ, ಪುರಾಣದ ನಂತರ ವಿತರಣೆ ಆಗಬಹುದು ಎಂದು ರಾಯರು ಕಾದರು. ಎಂಟು ಗಂಟೆಗೆ ಪುರಾಣ ಮುಗಿಯುತ್ತಿದ್ದಂತೆಯೇ ಎಲ್ಲರೂ ಅವಸರವಸರವಾಗಿ ಅವರವ ಮನೆಗೆ ಹೊರಟರು. ಒಬ್ಬರು ವಯಸ್ಸಾದ ಯಜಮಾನರು ಮಾತ್ರ ನಿಧಾನವಾಗಿ ಹೋಗುತ್ತಿದ್ದರು. ಮಕುಂದರಾಯರು  ಅವರ ಜೊತೆ ಹೆಜ್ಜೆ ಹಾಕುತ್ತ ಹಾಲು-ಹಣ್ಣಿನ ಬಗ್ಗೆ ಕೇಳಿದರು. 

"ಇದೇನು, ಹೀಗೆ ಕೇಳುತ್ತೀರಿ. ಒಂದು ಗಂಟೆ ಹಾಲು-ಹಣ್ಣೇ ಆಯಿತಲ್ಲ?" ಅಂದರು ಆ ಹಿರಿಯರು. "ಎಲ್ಲಿ ಆಯಿತು? ಬರೀ ಭಗವದ್ಗೀತೆ ಮತ್ತು ಭಾಗವತದ ಕೆಲವು ಭಾಗ ಹೇಳಿದರು, ಅಷ್ಟೇ" ಅಂದರು ರಾಯರು. "ಅದೇ ಸ್ವಾಮಿ. ಹಾಲು ಅಂದರೆ ಭಗವದ್ಗೀತೆ. ಹಣ್ಣು ಅಂದರೆ ಭಾಗವತ" ಅಂದರು ಯಜಮಾನರು. "ಅದು ಹೇಗೆ?" ಎಂದು ರಾಯರು ಕೇಳಿದರು. "ನಿನ್ನೆ ಪುರಾಣದಲ್ಲಿ ಹೇಳಿದ್ದು ನೀವು ಕೇಳಲಿಲ್ಲವೇ? "ದುಗ್ಧಮ್ ಗೀತಾಮೃತಮ್ ಮಹತ್".  ಭಗವದ್ಗೀತೆ ಎಂಬುದೇ ಹಾಲು. ಮತ್ತೆ  "ನಿಗಮಕಲ್ಪ ತರೋರ್ಗಲಿತಂ ಫಲಂ".  ಶ್ರೀಮದ್ಭಾಗವತವೇ ಹಣ್ಣು. ಏಕಾದಶಿಯ ದಿನ ಈ ಹಾಲು-ಹಣ್ಣು ಸೇವಿಸಿ ಎಂದೇ ಪುರಾಣೀಕರು ನಿನ್ನೆ ಹೇಳಿದ್ದು. ಇವತ್ತು ಅದೇ ವಿತರಣೆ ಆಯಿತಲ್ಲ. ಏಕಾದಶಿಯಂದು ಬೇರೆ ಹಣ್ಣು-ಹಾಲು ಯಾರು ಸೇವಿಸುತ್ತಾರೆ?" ಎಂದರು ಆ ಹಿರಿಯರು. 

*****

ಹಲಸಿನ ಹಣ್ಣು, ಕಲ್ಲಂಗಡಿ ಹಣ್ಣು, ಮೂಸಂಬಿ, ಚಕ್ಕೋತ, ಬಾಳೆಹಣ್ಣು ಮತ್ತು ಹಾಲಿನ ಕೊಳಗ ರಾಯರ  ತಲೆಯಸುತ್ತ ಸುತ್ತುವಂತೆ ಅವರಿಗೆ ಭಾಸವಾಯಿತು.  ಹಿರಿಯರು ಅವರ  ಮುಖ ನೋಡಿದರು. ಅವರಿಗೆ ಅರ್ಥ ಆಯಿತು. "ನಾಳೆ ಸ್ವಲ್ಪ ಬೇಗ ಬನ್ನಿ. ಪುರಾಣ ಪ್ರಾರಂಭವಾಗುವುದರ ಮುಂಚೆ ಇದನ್ನು ವಿವರಿಸುತ್ತೇನೆ" ಎಂದು ಹೇಳಿ ಅವರ ಮನೆ ಗಲ್ಲಿಯಲ್ಲಿ ತಿರುಗಿದರು ಆ ವೃದ್ಧರು.