ತಿರುಪತಿಯಲ್ಲಿ ತಿಮ್ಮಪ್ಪ ಬಂದು ನಿಂತಿದ್ದಾನೆ. ಎಷ್ಟೋ ಕಾಲದಿಂದ ಅಲ್ಲಿದ್ದಾನೆ. ಅವನು ನಿಂತಿರುವ, ನೆಲೆಸಿರುವ ಬೆಟ್ಟಕ್ಕೇ ಅನೇಕ ಹೆಸರುಗಳು. ಶೇಷಾಚಲ ಅನ್ನುತ್ತಾರೆ. ವೃಷಭಾಚಲ ಅನ್ನುತ್ತಾರೆ. ಅಂಜನಾದ್ರಿ ಅನ್ನುತ್ತಾರೆ. ವೆಂಕಟಾಚಲ ಅನ್ನುತ್ತಾರೆ. ಏಳು ಬೆಟ್ಟಗಳ ಸಮೂಹ ಇರುವುದರಿಂದ ಏಳುಮಲೈ, ಏಡುಕುಂಡಲ, ಸಪ್ತಗಿರಿ ಅನ್ನುತ್ತಾರೆ. ಅವನ ಬೆಟ್ಟಕ್ಕೇ ಅನೇಕ ಹೆಸರುಗಳಾದಮೇಲೆ ಅವನಿಗೆಷ್ಟು ಹೆಸರಿರಬೇಕು? ನಮಗೆ ಗೊತ್ತಿಲ್ಲದಷ್ಟು. ತಿಮ್ಮಪ್ಪ, ಶ್ರೀನಿವಾಸ, ವೆಂಕಟೇಶ, ಏಡುಕುಂಡಲವಾಡ, ವೆಂಕಟಾಚಲಪತಿ, ಶೇಷಗಿರಿವಾಸ, ಸಪ್ತಗಿರೀಶ, ಬಾಲಾಜಿ, ಗೋವಿಂದ ಮುಂತಾದ ಅನೇಕ ಹೆಸರುಗಳು ಅವನಿಗೆ ಉಂಟು. ಯಾವ ಹೆಸರಿನಿಂದ ಕರೆದರೂ ಅವನು "ಓ" ಅನ್ನುತ್ತಾನಂತೆ.
ಅವನನ್ನು ನೋಡುವುದು ಅಷ್ಟು ಸುಲಭವಲ್ಲ. ಬೆಟ್ಟ ಏರಿ ಹೋಗಬೇಕು. ಅನೇಕರು ನಾಲ್ಕಾರು ಗಂಟೆಗಳ ಕಾಲ ನಡೆದು, ಬೆಟ್ಟಗಳನ್ನು ಕಾಲ್ನಡಿಗೆಯಲ್ಲಿ ಹತ್ತಿ, ಶ್ರಮಪಟ್ಟು ಅವನನ್ನು ನೋಡುತ್ತಾರೆ. ಮತ್ತೆ ಕೆಲವರು ಅವನ ದೇವಾಲಯದ ಹತ್ತಿರದವರೆಗೆ ಹೋಗುವ ವಾಹನಗಳಲ್ಲಿ ಹೋಗುತ್ತಾರೆ. ಲೌಕಿಕ ಅಧಿಕಾರಗಳಲ್ಲಿ ಇರುವವರಿಗೆ ದೇವಾಲಯದ ಮಹಾದ್ವಾರದವರೆಗೆ ವಾಹನಗಳಲ್ಲಿ ಹೋಗುವ ಅವಕಾಶವುಂಟು.
ಕಾಸು-ಕಾಸು ಗೋಲಕಗಳಲ್ಲಿ ಕೂಡಿಟ್ಟು ಅದರ ಹಣದಲ್ಲಿ ಯಾತ್ರೆ ಮಾಡುವವರುಂಟು. "ಕಳ್ಳ ಒಕ್ಕಲು" ಎಂದು ಹೇಳಿ ತಿರುಪತಿ ಯಾತ್ರೆ ಮಾಡುವ ಮತ್ತೊಬ್ಬರೊಡನೆ ಹೋಗುವವರುಂಟು. ಒಂದೇ ದಿನದಲ್ಲಿ ದರ್ಶನ ಮಾಡಿಸುವ ಲಕ್ಷುರಿ ಬಸ್ಸುಗಳಲ್ಲಿ ಬಂದುಹೋಗುವವರುಂಟು. ಅನೇಕ ದಿನ ಕಾಲ್ನಡಿಗೆಯಲ್ಲಿ ಹೋಗುತ್ತಾ, ದಾರಿಯಲ್ಲಿ ಸಿಗುವ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿ ದೊಡ್ಡ ಯಾತ್ರೆ ಮಾಡುವವರೂ ಉಂಟು.
ಇಷ್ಟೆಲ್ಲಾ ಪಾಡುಪಟ್ಟು ಅಲ್ಲಿಗೆ ಹೋಗಿ ಅವನನ್ನು ನೋಡುವುದು ಎಷ್ಟುಹೊತ್ತು? ನಮ್ಮ ಮುಂದೆ ನಿಂತವರು ಅದೆಷ್ಟೋ ಸಾವಿರ ಜನ. ನಮ್ಮ ಹಿಂದೆ ನಿಂತವರೂ ಅದೆಷ್ಟೋ ಸಾವಿರ ಮಂದಿ. ಬ್ರಹ್ಮೋತ್ಸವ, ವಿಶೇಷ ದಿನಗಳಲ್ಲಿ ಲಕ್ಷ ಲಕ್ಷ ಮಂದಿ. ಎಲ್ಲರೂ ಬಂದಿರುವುದು, ನಿಂದಿರುವುದು ಅವನನ್ನು ನೋಡಲೆಂದೇ. ಆದ ಕಾರಣ ಅವನನ್ನು ನೋಡಸಿಗುವುದು ಕೆಲವು ಸೆಕೆಂಡುಗಳು ಮಾತ್ರ. ದೂರದಿಂದ ಕತ್ತು ಕೊಂಕಿಸಿ ನೋಡುತ್ತಾ ಹೋಗಬೇಕು. ಅಲ್ಲಿ ಹೋಗುತ್ತಿದ್ದಂತೆಯೇ "ಜರಗಂಡಿ, ಜರಗಂಡಿ" ಎಂದು ಮುಂದೆ ತಳ್ಳುತ್ತಾರೆ. ಹಿಂದಿರುಗಿ ಬರುವಾಗಲೂ ಸಾಧ್ಯವಾದಷ್ಟು ಕತ್ತು ಹಿಂದೆ ತಿರುಗಿಸಿ ನೋಡುವ ಪ್ರಯತ್ನ. ಸಿಕ್ಕಿದಷ್ಟು, ಕಂಡಷ್ಟು ದರ್ಶನ. ಆದರೂ ಅದೊಂದು ಧನ್ಯಭಾವ ಸುತ್ತುವರೆಯುತ್ತದೆ. ಇಷ್ಟಾಯಿತಲ್ಲ ಅನ್ನುವ ಸಂತಸ. ಇದೂ ಇಲ್ಲದೆ ಹೋಗುವವರು ಎಷ್ಟೋ ಜನ ಎಂದು ನೆನೆದು ಅದೊಂದು ಸಾಂತ್ವನ!
*****
ಗರ್ಭಗುಡಿಯಿಂದ ಹೊರಗೆ ಬಂದು, ವಿಮಾನ ಶ್ರೀನಿವಾಸನ ದರ್ಶನ ಮಾಡಿ ತಿರುಗಿದರೆ ಕಾಣುವುದು ಮಡಕೆಗಳಲ್ಲಿ ಸಾಲಾಗಿ ಇಟ್ಟಿರುವ ಪ್ರಸಾದದ ದೊಡ್ಡ ಕೂಟ. ಒಂದರಲ್ಲಿ ಪುಳಿಯೋಗರೆ. ಇನ್ನೊಂದರಲ್ಲಿ ಸಿಹಿ ಪೊಂಗಲ್. ಅದರ ಪಕ್ಕ ಖಾರದ ಪೊಂಗಲ್. ಮೊಸರನ್ನವೂ ಉಂಟು. ಬೇರೆ ಇನ್ನೇನೋ ಇರಬಹುದು. ನಮಗೆ ಅವೆಲ್ಲಾ ಕಾಣುವುದಿಲ್ಲ. ಕೊಡುವವರ ಮುಂದೆ ಕೈ ಹಿಡಿದಾಗ ಅವರ ಮುಂದೆ ಇರುವ ಮಡಕೆಯಲ್ಲಿ ಏನಿದೆಯೋ ಅದು ಕೊಡುತ್ತಾರೆ. ಅದೇನೆಂದು ಅವರಿಗೂ ಗೊತ್ತಿಲ್ಲ. ಒಂದು ಬರಿದಾದ ನಂತರ ಮತ್ತೊಂದು ತೆಗೆಯುತ್ತಾರೆ. ಗಂಡ-ಹೆಂಡತಿ, ತಾಯಿ-ಮಗ ಜೊತೆಯಲ್ಲಿ ಹೋಗಿರಬಹುದು. ಒಬ್ಬರಿಗೆ ಪುಳಿಯೋಗರೆ, ಇನ್ನೊಬ್ಬರಿಗೆ ಮೊಸರನ್ನ ಸಿಗಬಹುದು. ಹೀಗೂ ಆಗಬಹುದು. ಒಟ್ಟಿನಲ್ಲಿ ಎಲ್ಲರಿಗೂ ಪ್ರಸಾದ ಸಿಕ್ಕಿತು. ಅವರವರ ಭಾಗ್ಯಕ್ಕೆ ಅನುಸಾರ ಸಿಕ್ಕಿತು.
ದರ್ಶನ ಹೇಗಾಯಿತು ಎಂದು ಪ್ರಸಾದ ಕೈಯಲ್ಲಿ ಹಿಡಿದು ಹೊರಗೆ ಬಂದವರನ್ನು ಕೇಳಿ. "ದಿವ್ಯ ದರ್ಶನ" ಅನ್ನುವರು ಕೆಲವರು. "ಬಹಳ ಚೆನ್ನಾಗಿ ಆಯಿತು" ಅನ್ನುವವರು ಕೆಲವರು. ಎಲ್ಲರಿಗೂ ಬಹಳ ತೃಪ್ತಿಯ ದರ್ಶನ. ಇನ್ನೊಮ್ಮೆ ನೋಡಬೇಕು ಅನ್ನಿಸುವುದು. ಆದರೆ ಈಗ ಇಷ್ಟಾಯಿತು. ಅದೇ ದೊಡ್ಡದು. ನೋಡಿದ್ದು ಕೆಲವು ಸೆಕೆಂಡುಗಳು. ಅಥವಾ ಒಂದೆರಡು ನಿಮಿಷಗಳು. ಮುಖ ಕಂಡರೆ ಕಾಲು ಕಾಣಲಿಲ್ಲ. ಶಂಖ ಕಂಡರೆ ಚಕ್ರ ಕಾಣಲಿಲ್ಲ. ಹೆಚ್ಚು ಜನರಿಗೆ ಕಂಡದ್ದು ದೊಡ್ಡ ನಾಮವೇ!
ಅದೊಂದು ಸಾಲಿಗ್ರಾಮ ಶಿಲೆಯ ದಿವ್ಯ ಮೂರ್ತಿ. ಅವನ ತುಟಿಯ ಮೇಲಿನ ಕಿರುನಗೆ ಒಂದು ವಿಶೇಷ. "ಪೂರ್ಣಾನಾನ್ಯ ಸುಖೋಧ್ಭಾಸಿ ಮಂದಸ್ಮಿತಮ್ ಆಧೀಶಿತು:" ಅನ್ನುತ್ತಾರೆ. ಅವನ ಮುಗುಳ್ನಗೆಯನ್ನು ನೋಡಿದರೇ ಅದೊಂದು ಪರಮ ಸುಖ ಕೊಡುತ್ತದೆ ಎಂದು ಅದರ ಅರ್ಥ. ಅಂತಹ ಮುಗುಳ್ನಗೆ ಇನ್ನೆಲ್ಲೂ ಕಾಣಸಿಗದು. "ನಗೆ ಮೊಗದಲಿ ಚೆನ್ನಿಗ ನಿಂತಿಹನು" ಎಂದು ಅದನ್ನು ಕಂಡ ಶ್ರೀ ವಿಜಯದಾಸರು ಹಾಡಿದರು. ಅಂತಹ ಮುಗುಳ್ನಗೆಯನ್ನು ನೋಡಿದವರೆಷ್ಟು ಮಂದಿ?
ಪ್ರಸಾದ ಹೇಗಿದೆ ಎಂದು ಕೇಳಿ. "ಪ್ರಸಾದ ಪ್ರಸಾದವೇ. ಹಾಗೆ ಕೇಳಬಾರದು" ಎಂದು ಕೆಲವರು ಹೇಳಬಹುದು. ಆದರೆ ಹೆಚ್ಚು ಜನ "ತುಂಬಾ ಚೆನ್ನಾಗಿದೆ" ಅನ್ನುತ್ತಾರೆ. ಮೊಸರನ್ನ ಸಿಕ್ಕವರು ಹಾಗೆ ಹೇಳುತ್ತಾರೆ. ಪೊಂಗಲ್ ಸಿಕ್ಕವರೂ ಹಾಗೆಯೇ ಹೇಳುತ್ತಾರೆ. ಪುಳಿಯೋಗರೆ ಸಿಕ್ಕವರೂ ಹಾಗೆಯೇ ಹೇಳುತ್ತಾರೆ. ನಮಗೆ ಗೊತ್ತಿಲ್ಲದ ಇನ್ನೊಂದು ಸಿಕ್ಕಿದವರೂ ಅದೇ ಹೇಳುತ್ತಾರೆ!
ಈ ದರ್ಶನ, ಪ್ರಸಾದಗಳ ಅನುಭವ ಶ್ರೀನಿವಾಸನ ವಿಶೇಷ.
*****
ಒಂದು ಸತ್ವಯುತ ಗ್ರಂಥ ಅಥವಾ ಕೃತಿಯನ್ನು ಓದಿದ ಅನುಭವವೂ ಹೀಗೆಯೇ. ಆ ಗ್ರಂಥಕರ್ತೃವಿನ ಎಲ್ಲ ಕೃತಿಗಳನ್ನೂ ಓದಿದವರೂ ಉಂಟು. ಅದನ್ನು ಓದಲೇಬೇಕು ಎಂದು ತೀರ್ಮಾನಿಸಿ, ಶ್ರಮಪಟ್ಟು ಒಂದು ಗ್ರಂಥ ಸಂಪಾದಿಸಿ, ಗಮನವಿಟ್ಟು ಓದಿ, ಮನನ ಮಾಡುವವರು ಕೆಲವರು. ಯಾರೋ ಓದುತ್ತಿದ್ದಾಗ, ಅವರು ಪುಸ್ತಕ ಕೆಳಗಿಟ್ಟು ಮತ್ತೇನೋ ಮಾಡಲು ಹೋದಾಗ, ನಾಲ್ಕು ಪುಟ ಓದಿದವರು ಕೆಲವರು. ಮೊದಲು ಕೆಲವು ಪುಟ, ಮಧ್ಯೆ ಅಲ್ಲೊಂದು-ಇಲ್ಲೊಂದು ಪುಟ ಮತ್ತು ಕೊನೆಯ ಎರಡು ಪುಟ ಓದಿ "ಪುಸ್ತಕ ಓದಿದ್ದೇನೆ" ಅನ್ನುವವರು ಕೆಲವರು. "ಅಂತಹ ಕೃತಿ ಓದಿಲ್ಲವೇ?" ಎಂದು ಯಾರಾದರೂ ಮೂಗು ಮುರಿದಾರು ಎಂದು ಓದುವವರೂ ಉಂಟು. ಒಟ್ಟಿನಲ್ಲಿ ಎಲ್ಲರೂ ಓದಿದ್ದಾರೆ ಎಂದು ಹೇಳಿಸಿಕೊಳ್ಳಬಹುದು.
ಓದಿದವರಿಗೆ ಎಷ್ಟು ಅರ್ಥವಾಯಿತು? ಅವರ ಸಿದ್ಧತೆಯಂತೆ, ಅನುಭವದಂತೆ, ಅರಗಿಸಿಕೊಳ್ಳುವ ಶಕ್ತಿಯಂತೆ ಅರ್ಥವಾಯಿತು. ಹಿನ್ನೆಲೆ ತಿಳಿದು, ಸಮಾನ ಗ್ರಂಥಗಳನ್ನು ಓದಿ, ಸಾಮ್ಯ-ವೈರುಧ್ಯಗಳನ್ನು ತೂಕ ಮಾಡಿ, ಓದಿದವರಿಗೆ ಒಂದು ಮಟ್ಟದ ಅರ್ಥ ತಿಳಿಯಿತು. ಒಂದೇ ಗ್ರಂಥವನ್ನು ಓದಿದವರಿಗೆ ಅಷ್ಟು ತಿಳಿಯಿತು. ಮತ್ತೆ-ಮತ್ತೆ ಓದಿ ಮೆಲಕು ಹಾಕಿದವರಿಗೆ ಒಂದು ರೀತಿ ತಿಳಿಯಿತು. ಗ್ರಂಥ ಹತ್ತಿರವಿಟ್ಟುಕೊಂಡು ಆಗಾಗ ಓದಿದವರಿಗೆ ಮತ್ತಷ್ಟು ತಿಳಿಯಿತು. ಹೀಗೆ ಓದಿದವರೆಲ್ಲರಿಗೂ ತಿಳಿಯಿತು. ಆದರೆ ಆ ತಿಳಿವಿನ ಆಳ-ಅಗಲಗಳು ಬೇರೆ ಬೇರೆ.
*****
ಕನ್ನಡಕ್ಕೆ ಇಬ್ಬರು "ವರ" ಆಗಿ ಬಂದವರು. ಒಬ್ಬರು "ವರಕವಿ" ಬೇಂದ್ರೆಯವರು. ಮತ್ತೊಬ್ಬರು "ವರನಟ" ರಾಜಕುಮಾರ್. ವರಕವಿ ಬೇಂದ್ರೆ ಅವರ ಹೆಸರು "ದತ್ತಾತ್ರೇಯ ರಾಮಚಂದ್ರ ಬೇಂದ್ರೆ". ಅವರ ಕಾವ್ಯನಾಮ "ಅಂಬಿಕಾತನಯದತ್ತ". ಇದು ಎಲ್ಲರಿಗೂ ಗೊತ್ತಿರುವುದೇ. ಎಲ್ಲರಿಗೂ ಅಂದರೆ ಕನ್ನಡ ಗೊತ್ತಿರುವ ಕನ್ನಡಿಗರಿಗೆ. ಕನ್ನಡ ಗೊತ್ತಿಲ್ಲದ ಅನೇಕ ಸಾಹಿತ್ಯಾಸಕ್ತರಿಗೂ ಇದು ಗೊತ್ತು.
ಬೇಂದ್ರೆಯವರು ಒಬ್ಬ ವರಕವಿ ಆಗಿದ್ದರು ಅನ್ನುವ ಜೊತೆಗೆ ಒಬ್ಬ ದಾರ್ಶನಿಕರು ಕೂಡ ಹೌದು. ಜೀವನದ ಹೊರಗೆ ನಿಂತು ಜೀವನದ ಪದರಗಳನ್ನು ನೋಡುವ, ವಿಶ್ಲೇಷಿಸುವ, ದಾಖಲಿಸುವ ಕೌಶಲ್ಯ ಅವರಿಗೆ ಕರಗತವಾಗಿತ್ತು. ಅವರ ಕೃತಿಗಳನ್ನು ಓದಿದವರಿಗೆ ಒಂದಷ್ಟು ಅರ್ಥವಾಯಿತು. ಅವರ ಗೀತೆಗಳನ್ನು ಕೇಳಿದವರಿಗೆ ಒಂದಷ್ಟು ಅರ್ಥವಾಯಿತು. ಹತ್ತಿರದಿಂದ ನೋಡಿ, ಅವರೊಡನಾಟ ಪಡೆದವರಿಗೆ ಇನ್ನಷ್ಟು ಅರ್ಥವಾಯಿತು.
ಅವರ "ನಾಕು ತಂತಿ" 1964 ಇಸವಿಯಲ್ಲಿ ಹೊರಬಂದಿತು. 1973 ಇಸವಿಯಲ್ಲಿ ಅದಕ್ಕೆ "ಜ್ಞಾನಪೀಠ" ಪ್ರಶಸ್ತಿ ಬಂದಿತು. ಬಹಳ ಜನಪ್ರಿಯವಾದ ಈ ಕೃತಿಯ ಗೀತೆಗಳು ಈಗಲೂ ಹಾಡಲ್ಪಡುತ್ತವೆ. "ನಾನು, ನೀನು, ಆನು, ತಾನು" ಅನ್ನುವ ನಾಲ್ಕು ತಂತಿಗಳು ಮತ್ತು ಇವುಗಳ ಸುತ್ತ ಇರುವ ಸಂಬಂಧಗಳ ವಿವರಣೆ. ಕೆಲವರು ಇದನ್ನು ಗಂಡು-ಹೆಣ್ಣಿನ ಸಂಬಂಧದ ಸುತ್ತ ಇದೆ ಎಂದು ವಿವರಿಸಿದರು. ಮತ್ತೆ ಕೆಲವರು ಇದು ಪಾರಮಾರ್ಥಿಕ ಎಂದರು. ಅದ್ವೈತದ ಪರವಾಗಿ ಕೆಲವರು ಅರ್ಥ ಮಾಡಿದರು. ಮತ್ತೆ ಕೆಲವರು ದ್ವೈತದ ಅರ್ಥ ಕೊಟ್ಟರು. ಎಲ್ಲರೂ ಓದಿದ್ದು, ಹಾಡಿದ್ದು ಒಂದೇ ಕೃತಿಯನ್ನು. ಅವರವರ ಮನೋಧರ್ಮದಂತೆ ಅವರವರ ಅರ್ಥ ಕೂಡಿಕೊಂಡಿತು.
ಇಷ್ಟು ಅರ್ಥಗಳಲ್ಲಿ ಯಾವುದು ಸರಿ? ಅವರ ಸ್ನೇಹಿತರೊಬ್ಬರಿಗೆ ಈ ಪ್ರಶ್ನೆ ಕಾಡಿತು. ಪ್ರಶ್ನೆಗೆ ಯಾರು ಉತ್ತರ ಹೇಳಬೇಕು? ಬರೆದವರನ್ನೇ ಕೇಳೋಣ ಎಂದು ಅವರು ಬೇಂದ್ರೆಯವರನ್ನೇ ಕೇಳಿದರು. "ಅದು ನಾನು ಬರೆದದ್ದಲ್ಲವಪ್ಪ. ಅದು ಬರೆದದ್ದು ಅಂಬಿಕಾತನಯದತ್ತ. ಅವನು ಬರೆದ. ಹೋದ. ಈಗ ನಾನು ಅದನ್ನು ಓದಿದರೆ ನಿಮ್ಮಂತೆ ಒಬ್ಬ ಓದುವಂತೆ. ಅಷ್ಟೇ. ನನಗೂ ಒಂದು ಅರ್ಥ ಹೊಳೆಯಬಹುದು. ಅದೇ ಸರಿಯೆಂದು ಹೇಗೆ ಹೇಳುವುದು? ನಿಮ್ಮ ಅರ್ಥವೂ ಸರಿಯಿರಬಹುದು" ಅಂದರಂತೆ. ಅವರೊಡನೆ ಚೆನ್ನಾದ ಒಡನಾಟ ಇದ್ದ "ವಿದ್ಯಾವಾಚಸ್ಪತಿ" ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಉಪನ್ಯಾಸ ಕಾಲದಲ್ಲಿ ಕೆಲವೊಮ್ಮೆ ಇದನ್ನು ನೆನೆಸಿಕೊಳ್ಳುತ್ತಿದ್ದರು.
*****
ನಾಕು ತಂತಿಯ ಅನೇಕ ಅರ್ಥಗಳಲ್ಲಿ ನಾನು-ನೀನು ಅನ್ನುವುವು ಹೊರಗೆ ಕಾಣುವ ಬಾಹ್ಯ ರೂಪಗಳು, ಆನು ಮತ್ತು ತಾನು ಅನ್ನುವವು ಸ್ವಯಂ ಮತ್ತು ಬ್ರಹ್ಮ, ಅಥವಾ ಜೀವ ಮತ್ತು ಬ್ರಹ್ಮ ಎಂದು ಕೆಲವರು ಅರ್ಥ ಮಾಡುತ್ತಾರೆ. ಮನಸ್ಸು, ಬುದ್ಧಿ, ಅಹಂಕಾರ ಮತ್ತು ಚಿತ್ತ ಎನ್ನುತ್ತಾರೆ. (ಇಲ್ಲಿ ಅಹಂಕಾರ ಎಂದರೆ ನಾನು ಎನ್ನುವ ಅರಿವು ಎಂದು ಅರ್ಥ. ದುರಹಂಕಾರ ಎಂದಾಗ ಬರುವ ಅಹಂಕಾರ ಎಂದರ್ಥವಲ್ಲ). ಇನ್ನೂ ಮುಂದೆ ಹೋಗಿ ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ ಮತ್ತು ವಿಜ್ಞಾನಮಯ ಕೋಶ ಅನ್ನುತ್ತಾರೆ. ಅವರವರ ಅನುಭವ ಮತ್ತು ಸಾಧನೆಯ ಆಳದ ಮೇಲೆ ಅರ್ಥಗಳು ತೆರೆದುಕೊಳ್ಳುವಂತಹ ಒಂದು ಕೃತಿ ಅದು.