Thursday, March 20, 2025

"ಪ್ರಾಣಾಪಾಯ" ಇಲ್ಲ ತಾನೇ?


ಮನುಷ್ಯನ ಜೀವನ ಯಾತ್ರೆಯ ಸಮಯ ಅಳೆಯುವ "ಹೊರಗಿನ ಕಾಲ" ಮತ್ತು "ಆಂತರಿಕ ಕಾಲ" ಇವುಗಳ ಬಗ್ಗೆ ಜೀವನದ "ಸ್ಲೋ ಸೈಕಲ್ ರೇಸ್" ಎಂಬ ಶೀರ್ಷಿಕೆಯಡಿ ಹಿಂದಿನ ಸಂಚಿಕೆಯಲ್ಲಿ ಕೆಲ ವಿಷಯಗಳನ್ನು ನೋಡಿದೆವು. ಶ್ವಾಸದ ಮೇಲೆ ನಿಯಂತ್ರಣ ಸಾಧಿಸಿ ಹೇಗೆ ಬಾಹ್ಯ ಕಾಲಕ್ಕಿಂತ ಹೆಚ್ಚಿನ ಕಾಲ ಬದುಕಬಹುದು, ಒಂದು ನೂರು ವರ್ಷ ಬಾಹ್ಯ ಕಾಲಕ್ಕಿಂತ ಹೆಚ್ಚಿಗೆ ಸಮಯ ಬದುಕಲು ಸಾಧ್ಯವುಂಟೇ, ಮುಂತಾದ ಕೆಲವು ವಿಷಯಗಳನ್ನು ನೋಡಿಯಾಯಿತು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಜೀವನದಲ್ಲಿ ಶ್ವಾಸದ ಪಾತ್ರದ ಬಗ್ಗೆ  ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ. 

ಹಿಮಾಲಯ ಪರ್ವತ ಶ್ರೇಣಿಗಳಲ್ಲಿ, ವಿಶೇಷವಾಗಿ ಉತ್ತರ ಬದರಿಯಲ್ಲಿ, ನೂರು ವರುಷ ವಯಸ್ಸು ದಾಟಿದ ಅನೇಕ ಯೋಗಿಗಳು ಈಗಲೂ ಇರುತ್ತಾರೆ ಎಂದು ಕೇಳಿದ್ದೇವೆ. ಉತ್ತರ ಬದರಿ ಅಂದರೆ "ಚಾರ್ ಧಾಮ್ ಯಾತ್ರಾ" ಮಾಡುವಾಗ ಹೋಗುವ ಬದರಿನಾಥ್ ಕ್ಷೇತ್ರದಿಂದ ಉತ್ತರದಲ್ಲಿ ಪರ್ವತ ಶ್ರೇಣಿಗಳಲ್ಲಿ ಹರಡಿರುವ ಪ್ರದೇಶ. ಬದರಿನಾಥಕ್ಕೆ ಹೋಗುವುದೇ ಒಂದು ಪ್ರಯಾಸದ ವಿಷಯವಾಗಿತ್ತು. ಈಗ ಅನೇಕ ಅನುಕೂಲಗಳನ್ನು ಮಾಡಿದ್ದಾರೆ. ಆದರೂ ವರುಷದಲ್ಲಿ  ಆರು ತಿಂಗಳು ಮಾತ್ರ ಹೋಗಲು ಸಾಧ್ಯ. ಉತ್ತರ ಬದರಿ ಇನ್ನೂ ದುರ್ಗಮ ಪ್ರದೇಶ ಮತ್ತು ಬೇಸಗೆ ಕಾಲದಲ್ಲಿಯೇ ತಡೆಯಲಾಗದ ಚಳಿ. ಅಲ್ಲಿಂದ ಮೇಲೆ ಮೇಲೆ ಹೋದಂತೆ ಶೈತ್ಯ ಇನ್ನೂ ಹೆಚ್ಚಾಗುವುದು ಸಹಜ. ಇಂತಹ ವಾತಾವರಣದಲ್ಲಿ ವರ್ಷವಿಡೀ ವಾಸಿಸುವುದು ಅಂತಹ ಯೋಗಿಗಳಿಗೆ ಮಾತ್ರ ಸಾಧ್ಯವೆಂದು ತಿಳಿಯಬೇಕಷ್ಟೆ. 
*****

ನಮ್ಮ ಪುರಾತನ ವಾಂಗ್ಮಯ ಮತ್ತು ನಂಬಿಕೆಗಳ ಪ್ರಕಾರ ಜೀವಿಯು ತನ್ನ ಜನ್ಮದ ಆಯುಸ್ಸಿನ ಸಮಯ ಕಳೆದ ನಂತರ ಇದ್ದ ದೇಹದಿಂದ ಬಿಡುಗಡೆ ಹೊಂದಿ ಸೂಕ್ಷ್ಮರೂಪದಲ್ಲಿ ವಾತಾವರಣದಲ್ಲಿ ತೇಲುತ್ತಿರುತ್ತಾನೆ. ಮುಂದೆ ಬರುವ ಮಳೆಯ ಹನಿಯಲ್ಲಿ ಬೆರೆತು ಮತ್ತೆ ಭೂಮಿಗೆ ಹಿ೦ದಿರುಗುತ್ತಾನೆ. ಅಲ್ಲಿ ಬೆಳೆವ ಧಾನ್ಯವೋ, ಸೊಪ್ಪು-ಸದೆಯೋ, ಹಣ್ಣು-ಹಂಪಲೋ, ಗೆಡ್ಡೆ-ಗೇಣಸೋ ಸೇರಿ ಅದರ ಮೂಲಕ ಎಲ್ಲಿ ಹುಟ್ಟಬೇಕೋ ಅಲ್ಲಿ ತಲುಪುತ್ತಾನೆ. ಮನುಷ್ಯ ಜನ್ಮ ಬರಬೇಕಾದರೆ ಈ ರೀತಿ ಪದಾರ್ಥದಲ್ಲಿ ಸೇರಿ ತಂದೆಯ ಶರೀರವನ್ನು ಪ್ರವೇಶಿಸುತ್ತಾನೆ. ತಂದೆಯ ಶರೀರದಲ್ಲಿ ಮೂರು ತಿಂಗಳ ಕಾಲ ರೂಪಾಂತರವಾಗಿ ಮುಂದೆ ತಾಯಿಯ ಗರ್ಭವನ್ನು ಹೊಂದುತ್ತಾನೆ. ತಾಯಿಯ ಗರ್ಭದಲ್ಲಿರುವಾಗ ಆಕೆ ಸೇವಿಸಿದ ಆಹಾರ ಪದಾರ್ಥಗಳ ರಸವನ್ನು ಹೊಕ್ಕುಳ ಬಳ್ಳಿಯ ಮೂಲಕ ಸೇವಿಸಿ ಆಕೆಯ ಶ್ವಾಸದ ಗಾಳಿಯನ್ನೇ ಹಂಚಿಕೊಂಡು ಉಸಿರಾಡುತ್ತಾನೆ. ಈಗಿನ ವಿಜ್ಞಾನದ ಫಲವಾದ ಸ್ಕಾನಿಂಗ್ ಚಿತ್ರಗಳಿಂದ ಬೆಳವಣಿಗೆಯ ಹಂತಗಳನ್ನೂ, ಉಸಿರಾಟ ಮತ್ತು ಚಲನೆಯನ್ನೂ ನೋಡಬಹುದು. 

ಈ ಹೊಕ್ಕುಳ ಬಳ್ಳಿಯ ನಂಟಿನ ಕಾರಣಕ್ಕೇ ತಾಯಿ-ಮಗುವಿನ ವಿಶೇಷ ಸಂಬಂಧ ಉಂಟಾಗುವುದು. ಈ ರೀತಿಯ ಸಂಬಂಧವನ್ನು ಇನ್ನು ಯಾವುದೇ ರೀತಿಯ ಬಾಂಧವ್ಯದಲ್ಲಿ ಕಾಣಲಾಗದು. ತಂದೆಯಲ್ಲಿಯೂ ಕೂಡ. ಯಾವ ಮನುಷ್ಯನಿಗೇ ಆದರೂ ನೇರವಾಗಿ ದೇಹ ಸಂಬಂಧ ಇರುವುದು ತನ್ನ ತಾಯಿಯ ಜೊತೆಯೇ! ಅದು ಒಂದು ಎರಡಾದಂತೆ. ತಾಯಿ-ಮಕ್ಕಳ ಸಂಬಂಧದ ಬಗ್ಗೆ ಹೆಚ್ಚಿನ ವಿಷಯ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.  ಆದ್ದರಿಂದ ಮೊದಲು "ಮಾತೃದೇವೋ ಭವ". ನಂತರ "ಪಿತೃದೇವೋ ಭವ". ಸನ್ಯಾಸ ಸ್ವೀಕರಿಸಿ ಯಾರಿಗೂ (ತಮ್ಮ ಗುರುಗಳನ್ನು ಬಿಟ್ಟು) ನಮಸ್ಕರಿಸದ ಮಠಾಧಿಪತಿಗಳೂ ತಮ್ಮ ತಾಯಿಗೆ ನಮಸ್ಕರಿಸುವ ಪದ್ಧತಿಯೂ ಇದನ್ನೇ ಸೂಚಿಸುತ್ತದೆ. 

ತಾಯಿಯ ಗರ್ಭದಲ್ಲಿ ಒಂಭತ್ತು ತಿಂಗಳು ಕಳೆದ ಬಳಿಕ ಪೂರ್ಣ ಪ್ರಮಾಣದಲ್ಲಿ ಬೆಳೆದು ಶಿಶುವಿನ ರೂಪ ತಳೆದು ಜನಿಸುತ್ತಾನೆ. ತಾಯಿಯಿಂದ ಬೇರ್ಪಟ್ಟ ನಂತರ ಹೊರಗಿನ ವಾತಾವರಣದ ಗಾಳಿಯಿಂದ ಮೊದಲ ಶ್ವಾಸ ತೆಗೆದುಕೊಳ್ಳುತ್ತಾನೆ. ಮಗು ಹುಟ್ಟಿದ ತಕ್ಷಣ ಅಳುವುದೇ ಮೊದಲ ಶ್ವಾಸ ಪ್ರಾಂಭವಾದ ಗುರುತು. ಹುಟ್ಟಿದ ಮಗು ಶ್ವಾಸನಾಳದಲ್ಲಿ ಕಲ್ಮಶಗಳು ತುಂಬಿದ ಕಾರಣ ಅಳದಿದ್ದರೆ, ವೈದ್ಯರು ಅಥವಾ ದಾದಿ ಮಗುವನ್ನು ಕಾಲಲ್ಲಿ ಹಿಡಿದು ತಲೆ ಕೆಳಗೆಮಾಡಿ ಅಲ್ಲಾಡಿಸಿ ಶ್ವಾಸನಾಳ ಕಲ್ಮಶದಿಂದ ಬಿಡುಗಡೆ ಮಾಡಿ ಉಸಿರಾಟ ಶುರುವಾಗಲು ಸಹಾಯಮಾಡುತ್ತಾರೆ. 

ಅಂದು ಪ್ರಾರಂಭವಾದ ಉಸಿರಾಟ ಮತ್ತು ಹೃದಯ ಬಡಿತ ಒಂದು ಕ್ಷಣ ನಿಲ್ಲದೆ ಜೀವಿಯು ಬದುಕಿರುವವರೆಗೂ ನಡಿಯುತ್ತಲೇ ಇರುತ್ತದೆ! ವಿರಾಮವಿಲ್ಲದ ಕಮ್ಮಾರನ ತಿದಿಯಂತೆ ಒತ್ತುತ್ತಿರುವ ಎರಡು ಶ್ವಾಸಕೋಶ ಮತ್ತು ನಿಲ್ಲದೆ ಒತ್ತುತ್ತಿರುವ ಪಂಪಿನಂತಹ ಹೃದಯ ಸೃಷ್ಟಿಯ ವಿಸ್ಮಯವೇ ಸರಿ. (ತಿದಿಗೆ ಇಂಗ್ಲೀಷಿನಲ್ಲಿ ರೀಡ್ ಅನ್ನಬಹುದು. ಹಿಂದೆ ಕಂಪನಿ ನಾಟಕಗಳಲ್ಲಿ ಡಬಲ್ ರೀಡ್ ಹಾರ್ಮೋನಿಯಂ ಉಪಯೋಗಿಸುತ್ತಿದ್ದರು. ಅವೂ ತಿದಿಯಂತೆ ಕೆಲಸ ಮಾಡುತ್ತಿದ್ದವು. ವಾದ್ಯಗಾರ ತನ್ನ ಕಾಲುಗಳಿಂದ ಈ ರೀಡುಗಳನ್ನು  ಒತ್ತುತ್ತಿದ್ದುದು ಇಂತಹ ಹಾರ್ಮೋನಿಯಂ ವಾದನ ನೋಡಿದ್ದವರು ನೆನಪಿಸಿಕೊಳ್ಳಬಹುದು), 

ಹೀಗೆ ಪ್ರಾಂರಂಭವಾದ ಮೊದಲ ಶ್ವಾಸದಿಂದ ಹಿಂದಿನ ಸಂಚಿಕೆಯಲ್ಲಿ ಹೇಳಿದ ಎಪ್ಪತ್ತೇಳು ಕೋಟಿ ಎಪ್ಪತ್ತಾರು ಲಕ್ಷ ಸಂಖ್ಯೆಯ ಲೆಕ್ಕ ಶುರು. ಒಂದು ಓಟದ ಅಥವಾ ಸ್ಲೋ ಸೈಕಲ್ ರೇಸಿನ ಪಂದ್ಯಾಳುಗಳಂತೆ ಎಲ್ಲರೂ ಕಡೆಯ ಗೆರೆಯವರೆಗೆ ಓಡದೇ ಇರಬಹುದು. ಅನೇಕರು  ಮುಂಚೆಯೇ ಬೀಳಬಹುದು. ಕೆಲವರು ಐವತ್ತು ವರುಷ ತಲುಪುವುದೂ ಇಲ್ಲ. ನಿಜ ಜೀವನದಲ್ಲಿ ಹಾಗೆಯೇ ಆಗುತ್ತದೆ. ನೂರು ವರುಷ ತಲುಪುವವರು ಐದು ಸಾವಿರದಲ್ಲಿ ಒಬ್ಬರಂತೆ. ಆದ್ದರಿಂದಲೇ ಶತಮಾನ ಶಾಂತಿ ಅನ್ನುವುದು ಬಲು ಅಪರೂಪ. ಸ್ಲೋ ಸೈಕಲ್ ರೇಸ್ ನೋಡಿದವರು ಅದನ್ನು ನೆನೆಸಿಕೊಂಡರೆ ಜೀವನದ ಈ ರೇಸ್ ಸಾಮ್ಯ ಕಾಣುತ್ತದೆ. ಇಲ್ಲಿ ಹೇಳಿರುವುದರಲ್ಲಿ ಏನೂ ವಿಶೇಷವಿಲ್ಲ. ಇವು ಎಲ್ಲರಿಗೂ ಗೊತ್ತಿರುವ ವಿಷಯವೇ ಸರಿ. ಆದರೂ ಇವುಗಳ ಬಗ್ಗೆ ನಾವು ಚಿಂತಿಸುವುದು ಕಮ್ಮಿಯೇ. ಆದ್ದರಿಂದ ಪ್ರಾಸ್ತಾವಿಕವಾಗಿ ಈ ವಿವರಗಳನ್ನು ಕೊಡಬೇಕಾಯಿತು. 

*****

ಒಂದು ಭೀಕರ ಅಪಘಾತ ಆಗಿದೆ. ವಾಹನಗಳು ಚಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಮತ್ತು ರಸ್ತೆಯ ಪಕ್ಕ ಬಿದ್ದಿವೆ. ನೋಡುಗರು ಸುತ್ತ ನೆರೆದಿದ್ದಾರೆ. ಆ ದಾರಿಯಲ್ಲಿ ಹೋಗುವವರೆಲ್ಲರೂ ನೋಡುತ್ತಿದ್ದಾರೆ. ಕೆಲವರು ಸಹಾಯ ಮಾಡಲು ಯತ್ನಿಸುತ್ತಿದ್ದಾರೆ. ಆಂಬುಲೆನ್ಸ್  ಮತ್ತು ಟ್ರ್ಯಾಫಿಕ್ ಪೊಲೀಸರಿಗೆ ಫೋನ್ ಮಾಡಿಯಾಗಿದೆ. ಅಪಘಾತ ಹೇಗೆ ಆಯಿತು ಎಂದು ಎಲ್ಲರಿಗೆ ಕುತೂಹಲ, ಆತಂಕ.  ಯಾರಿಗೆ ಎಷ್ಟು ಪೆಟ್ಟಾಗಿದೆ ಅನ್ನುವ ಚಿಂತೆ. ಎಲ್ಲರದೂ ಒಂದೇ ಪ್ರಶ್ನೆ. "ಪ್ರಾಣಾಪಾಯ ಇಲ್ಲ ತಾನೇ?". ಬಾಕಿ ವಿಷಯಗಳು ಆಮೇಲೆ. ಬಹಳ ಬೆಲೆಬಾಳುವ ಕಾರು ಇರಬಹುದು. ಹೊಸ ಬಸ್ಸು ಇರಬಹುದು. ಮೂರ್ನಾಲ್ಕು ವಾಹನಗಳು ಒಟ್ಟಿಗೆ ಢಿಕ್ಕಿ ಆಗಿರಬಹುದು. ಸರಣಿ ಅಪಘಾತವೇ ಆಗಿರಬಹುದು. ಆದರೆ ಮೊದಲ ಪ್ರಶ್ನೆ "ಪ್ರಾಣಾಪಾಯವಿಲ್ಲ ತಾನೇ?" ಎಂದೇ. ರಕ್ತ ಹರಿದಿರುವುದು ಕಾಣುತ್ತಿದೆ. ಮೂಳೆ ಮುರಿದಿರುವುದು ಬಲು ಸಾಧ್ಯ. ಆದರೆ ಪ್ರಶ್ನೆ ಅದೇ: "ಪ್ರಾಣಾಪಾಯವಿಲ್ಲ ತಾನೇ?" 

ಮನೆಯಲ್ಲಿ ಹಾಸಿಗೆ ಹಿಡಿದಿದ್ದ ವ್ಯಕ್ತಿ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾನೆ. ನೋಡುವವರಿಗೂ ಕಷ್ಟ. ನಿನ್ನೆ ತಾನೇ ವೈದ್ಯರು ಬಂದು ನೋಡಿದ್ದರು. ಈಗ ಮತ್ತೆ ಬರಲು ಕರೆ ಹೋಗಿದೆ. ವೈದ್ಯರು ಬಂದರು. ಅವರ ಪರೀಕ್ಷೆ ಹೇಗೆ? ಮೊದಲು ಮಾಡುವುದು ಮೂಗಿನ ಬಳಿ ಎರಡು ಬೆಟ್ಟು ಹಿಡಿದು ಮಾಡುವ ಪರೀಕ್ಷೆ,  ನಂತರ ನಾಡಿ ಬಡಿತ. ಉಸಿರಾಟ ನಡೆಯುತ್ತಿದ್ದರೆ ಮುಂದಿನ ಚಿಕಿತ್ಸೆ. ಉಸಿರಾಟವಿಲ್ಲ ಎಂದರೆ ಎಲ್ಲ ಮುಗಿಯಿತು. ಸಿನಿಮಾಗಳಲ್ಲಿ ತೋರಿಸುವಂತೆ ಹೊದ್ದಿಕೆಯಿಂದ ಮುಖ ಮುಚ್ಚುವುದು ಮತ್ತು ವೈದ್ಯರು ತಲೆ ಅಲ್ಲಾಡಿಸುವುದು. ಮುಂದೆ ಇನ್ನೇನೂ ಇಲ್ಲ. ಕ್ರಿಯಾಕರ್ಮಗಳ ವ್ಯವಸ್ಥೆಯ ಯೋಚನೆ ಬಿಟ್ಟು. 
*****

ಮನುಷ್ಯ ದೇಹಗಳಲ್ಲಿ ಇರುವ ಅಂಗಗಳಲ್ಲಿ ಅನೇಕ ದೇವತೆಗಳು ವಾಸಿಸಿತ್ತಾ ಇದ್ದು ಆಯಾ ಅಂಗಗಳು ಸರಿಯಾಗಿ ಕೆಲಸ ಮಾಡಲು ಅವಕಾಶ ಮಾಡಿ ಕೊಡುತ್ತಾರಂತೆ. ಅವರಿಗೆ ಅಭಿಮಾನಿ ದೇವತೆಗಳು ಎನ್ನುತ್ತಾರೆ. ಹಿಂದೊಂದು ಸಂಚಿಕೆಯಲ್ಲಿ ಲೇಖನಿಯ ವಿಷಯದಲ್ಲಿ ನೋಡಿದ್ದೇವೆ. ಲೇಖನಿ ಒಂದು ಜಡ ವಸ್ತು. ಅದಾಗಿಯೇ ಏನನ್ನೂ ಬರೆಯಲಾರದು. ಒಂದು ಕೈ ಆ ಲೇಖನಿ ಹಿಡಿದು ಚೈತನ್ಯ ಕೊಟ್ಟು ಬರೆಸಬೇಕು. ಹಾಗೆಯೇ ದೇಹದ ಅಂಗಗಲ್ಲಿರುವ ಅಭಿಮಾನಿ ದೇವತೆಗಳು ಚೈತನ್ಯ ಕೊಟ್ಟು ಕೆಲಸ ನಡೆಸಬೇಕು. ಈ ರೀತಿಯ ಕೆಲಸಗಳನ್ನು ಆ ದೇವತೆಗಳು ಮಾಡುವ ವ್ಯಾಪಾರ ಎನ್ನುತ್ತೇವೆ. ಇಲ್ಲಿ ವ್ಯಾಪಾರ ಎಂದರೆ ಸಾಮಾನ್ಯ ಅರ್ಥದ ಕೊಡು-ಕೊಳ್ಳುವಿಕೆ ಅಲ್ಲ. ಸೇಲ್ ಮತ್ತು ಪರ್ಚೆಸ್ ಅಂತಲ್ಲ. ಚೈತನ್ಯದಿಂದ ಮಾಡುವ ಕ್ರಿಯೆಗಳು. 

ಕಣ್ಣಿನಲ್ಲಿ ಅಭಿಮಾನಿ ದೇವತೆಯಾಗಿ ಸೂರ್ಯನಿದ್ದಾನೆ. ಅವನು ಚೈತನ್ಯ ಕೊಟ್ಟು ನೋಡಿಸಿದರೆ ದೃಷ್ಟಿ ಉಂಟು. ಎಲ್ಲವೂ ನಿಚ್ಚಳವಾಗಿ ಕಾಣುತ್ತದೆ. ಸ್ವಲ್ಪ ಕಡಿಮೆ ಚೈತನ್ಯ ಕೊಟ್ಟರೆ ಮಸಕು ಮಸಕಾಗಿ ಕಾಣುತ್ತದೆ. ಸೂರ್ಯನು ನಿರ್ಗಮಿಸಿದರೆ ಕಣ್ಣು ಚೆನ್ನಾಗಿದ್ದರೂ ದೃಷ್ಟಿ ಇಲ್ಲದ ಕುರುಡ. ಕಣ್ಣೆನೋ ನೋಡಲು ಚೆನ್ನಾಗಿ ಬಟ್ಟಲುಗಣ್ಣು, ಕಮಲದಂತೆ ಇದೆ ಅನ್ನುತ್ತಾರೆ. ಆದರೆ ನೋಟವಿಲ್ಲ. ಕಿವಿಯಲ್ಲಿ ಅಭಿಮಾನಿ ದೇವತೆಯಾಗಿ ಚಂದ್ರನಿದ್ದಾನೆ. ಅವನು ಚೈತನ್ಯ ಕೊಟ್ಟಾಗ ಕಿವಿ ಕೇಳಿಸುತ್ತದೆ. ಅವನು ನಿಷ್ಕ್ರಿಯನಾದರೆ ಕಿವಿ ಬೇರೆಯವರು ನೋಡಲು ಚೆನ್ನಾಗಿದ್ದರೂ ಕೇಳಿಸದು. ಒಳ್ಳೆಯ ವಜ್ರದ ವಾಲೆ ಹಾಕಬಹುದು. ಆದರೆ ಶಬ್ದಗ್ರಹಣವೇ ಇಲ್ಲ. ಕಾಲಿನಲ್ಲಿ ಇಂದ್ರನ ಮಗನಾದ ಜಯಂತ ಅಭಿಮಾನಿ ದೇವತೆ. ಅವನು ಶಕ್ತಿ ಕೊಟ್ಟರೆ ನಡೆದಾಟ. ಇಲದಿದ್ದರೆ ಕುಂಟ. ಹೀಗೆ ಎಲ್ಲ ಅಂಗಗಳೂ ಸಹ. 

ಒಮ್ಮೆ ಎಲ್ಲ ಅಭಿಮಾನಿ ದೇವತೆಗಳ ನಡುವೆ ಒಂದು ಜಗಳ ಆಯಿತಂತೆ. ನಾನು ಹೆಚ್ಚು, ನಾನು ಹೆಚ್ಚು ಅಂದು. ಯಾರು ದೊಡ್ಡವರು ಎಂದು ನಿರ್ಣಯಿಸಲು ಒಂದು ಪರೀಕ್ಷೆ ನಡೆಯಿತು. ಒಂದೊಂದು ದೇವತೆ ಆ ಅಂಗ ಬಿಟ್ಟು ಹೊರನಡೆಯುವಂತೆ ಏರ್ಪಟ್ಟಿತು. ಆಯಾಯಾ ದೇವತೆ ಹೊರಟರೆ ಕಿವುಡು, ಮೂಗು, ಕುಂಟು, ಇತ್ಯಾದಿ ಆಯಿತು. ಆದರೆ ಜೀವಿ ಇನ್ನೂ ಬದುಕಿಯೇ ಇತ್ತು. ಕಡೆಯಲ್ಲಿ ಉಸಿರು. ಮುಖ್ಯಪ್ರಾಣ ದೇವರು ಉಸಿರಿನ ನಿಯಮಕರು. ಅವರು ಹೊರಗೆ ಹೊರಟರು. ಬೇರೆ ದೇವತೆಗಳಿಗೆ ಆ ದೇಹದಲ್ಲಿ ಉಳಿಯಲೇ ಆಗಲಿಲ್ಲ. ಕಡೆಯ ಉಸಿರಿನ ಜೊತೆ ಎಲ್ಲ ಅಂಗಗಳೂ ಬಿದ್ದು ಹೋಗಿ ಆ ದೇಹ "ಶವ" ಅಂತಾಯಿತು. 

ಮುಖ್ಯ ಪ್ರಾಣ ದೇವರು ಉಸಿರಾಡುತ್ತಿರುವವರೆಗೇ ಬದುಕು. ಅವರು ಹೊರಟರೆ ಎಲ್ಲ ಮುಗಿಯಿತು. ಕನಕದಾಸರು ಹೇಳುವಂತೆ "ನೆಂಟ ನೀನಗಲಿದರೆ ಒಣ ಹೆಂಟೆಯಲಿ ಮುಚ್ಚುವರು". ಅಂತಹ ದೇಹವನ್ನು ಮನೆಯ ಒಳಗೆ ಇಟ್ಟುಕೊಳ್ಳುವುದೂ ಇಲ್ಲ. "ಹಿಡಿ, ಹಿಡಿ" ಎಂದು ಹೊರಗೆ ಹಾಕುತ್ತಾರೆ. "ಹಿತ್ತಲ ಕಸಕ್ಕಿಂತ ಕಡೆಯಾಯಿತೀ ದೇಹ". "ಎಷ್ಟು ಹೊತ್ತು ಇಟ್ಟುಕೊಳ್ಳುವುದು? ಮೊದಲು ಸಾಗಿಸಿರಿ" ಅನ್ನುತ್ತಾರೆ. ಅಷ್ಟೇ. 
*****

ನಮ್ಮಗಳ ಜೀವನದಲ್ಲಿ ಶ್ವಾಸದ ಪಾತ್ರವನ್ನು ಈ ಸಂಚಿಕೆಯಲ್ಲಿ ಸ್ವಲ್ಪ ವಿವರವಾಗಿ ನೋಡಿಯಾಯಿತು. ಈ ರೀತಿ ಉಸಿರು ಆಡುತ್ತಿರುವಾಗ ನಡೆಯುವ "ಶ್ವಾಸ ಜಪ" ಮತ್ತು "ಮೂರು ವಿಧ ಜೀವರು" ಎನ್ನುವುದರ ಬಗ್ಗೆ ಮುಂದಿನ ಸಂಚಿಕೆಯಲ್ಲಿ ನೋಡೋಣ. 

Sunday, March 16, 2025

ಜೀವನದ "ಸ್ಲೋ ಸೈಕಲ್ ರೇಸ್"


ಶಾಲಾ-ಕಾಲೇಜುಗಲ್ಲಿ, ವಾರ್ಷಿಕ ಸಮಾರಂಭಗಳ ಮುನ್ನಾದಿನಗಳಲ್ಲಿ, ಅನೇಕ ಸ್ಪರ್ಧೆಗಳನ್ನು ಏರ್ಪಡಿಸಿ, ಗೆದ್ದವರಿಗೆ ಬಹುಮಾನಗಳನ್ನು ಘೋಷಿಸಿ, ಸಮಾರಂಭದ ದಿನ ಮುಖ್ಯ ಅತಿಥಿಗಳಿಂದ ಅವರಿಗೆ ಬಹುಮಾನ ಕೊಡಿಸುವುದು ಬಹಳ ಹಿಂದಿನಿಂದಲೂ ಬಂದಿರುವ ಪದ್ದತಿ. ಅವು ಸಾಂಸ್ಕೃತಿಕ ಕಾರ್ಯಕ್ರಮ ಇರಬಹುದು ಅಥವಾ ಕ್ರೀಡಾಸ್ಪರ್ಧೆಗಳು ಕೂಡ ಆಗಿರಬಹುದು. ಈ ರೀತಿಯ ಸ್ಪರ್ಧೆ ಮತ್ತು ಬಹುಮಾನಗಳಿಲ್ಲದೆ ನಡೆಸುವ ಸಮಾರಂಭಗಳು ನೀರಸ ಅನಿಸುತ್ತವೆ. ಅನೇಕರು ಈ ರೀತಿಯ ಸ್ಪರ್ಧೆಗಳಿಗೆ ಕಾದಿರುತ್ತಾರಲ್ಲದೆ ಬಹಳ ತಯಾರಿ ಕೂಡ ನಡೆಸಿರುತ್ತಾರೆ. ಕೆಲವರಿಗೆ ಕೇವಲ ಸ್ಪರ್ಧಿಸುವುದು ಮುಖ್ಯವಾದರೆ ಮತ್ತೆ ಕೆಲವರಿಗೆ ಗೆಲ್ಲುವುದೂ ಅತಿ ಮುಖ್ಯ. ಅನೇಕ ಸ್ಪರ್ಧೆಗಳಲ್ಲಿ  ಕೆಲವರು ಮಾತ್ರ ಬಹುಮಾನ ಗಳಿಸಬಹುದು. ಆದರೆ ಕೆಲವು ರೀತಿಯ ಸ್ಪರ್ಧೆಗಳಲ್ಲಿ ಅನೇಕರು ಬಹುಮಾನ ಗಳಿಸಬಹುದು. 

ಕೆಲವು ಸ್ಪರ್ಧೆಗಳಲ್ಲಿ ಅನೇಕರು ಬಹುಮಾನ ಗಳಿಸಬಹುದು ಅನ್ನುವುದು ಸ್ವಲ್ಪ ಆಶ್ಚರ್ಯ ಹುಟ್ಟಿಸಬಹುದು. ಸಾಮಾನ್ಯವಾಗಿ ಮೊದಲ ಮೂರು ಸ್ಥಾನ ಗೆದ್ದವರಿಗೆ ಬಹುಮಾನಗಳನ್ನೂ, ತುಂಬಾ ಚೆನ್ನಾಗಿ ಪ್ರದರ್ಶನಗಳನ್ನು ನೀಡಿದ್ದರೂ ಕೂಡ ಬಹುಮಾನ ಗೆಲ್ಲಲಾಗದವರಿಗೆ ಸಮಾಧಾನಕರ ಬಹುಮಾನಗಳನ್ನೂ (ಕನ್ಸೋಲೇಷನ್ ಪ್ರೈಜ್) ಕೊಡುವುದು ಸಾಮಾನ್ಯ ರೀತಿ, ಕೆಲವು ಸ್ಪರ್ಧೆಗಳಲ್ಲಿ ಅನೇಕರು ನೂರಕ್ಕೆ ನೂರು ಅಂಕ ಪಡೆಯಬಹುದು. ಒಂದು ಪ್ರಶ್ನೋತ್ತರ ಪರೀಕ್ಷೆ ಅನ್ನೋಣ. ಹತ್ತು ಪ್ರಶ್ನೆ ಕೇಳಲಾಗುವುದು. ಅನೇಕರು ಹತ್ತಕ್ಕೆ ಹತ್ತು ಸರಿ ಉತ್ತರ ಕೊಡಬಹುದು. ಆಗ ಈ ರೀತಿ ಎಲ್ಲಕ್ಕೂ ಸರಿ ಉತ್ತರ ಕೊಟ್ಟವರು ಎಷ್ಟು ಮಂದಿಯಾದರೂ ಅವರೆಲ್ಲರೂ ಗೆದ್ದಂತೆ! 

ನಮ್ಮ ಚಿಕ್ಕ ವಯಸ್ಸಿನಲ್ಲಿ ಶಾಲೆಗಳಲ್ಲಿ ಓಟದ ಸ್ಪರ್ಧೆಗಳು ಇರುತ್ತಿದ್ದವು. ಬೇಗ ಓಡಿ ಮೊದಲು ಗುರಿ ಮುಟ್ಟಿದವರಿಗೆ ಬಹುಮಾನಗಳು ಸಿಗುತ್ತಿದ್ದವು. ಆದರೆ ನಿಧಾನವಾಗಿ ಸೈಕಲ್ ನಡೆಸುವ ಪಂದ್ಯ ಕೂಡ ಇರುತ್ತಿತ್ತು. ಇದಕ್ಕೆ ಸ್ಲೋ ಸೈಕಲ್ ರೇಸ್ ಅನ್ನುತ್ತಿದ್ದರು. (ಈಗಲೂ ಈ ರೀತಿ ಪಂದ್ಯಗಳಿರಬಹುದು) ಈ ಪಂದ್ಯದಲ್ಲಿ ಯಾರು ಅತಿ ನಿಧಾನವಾಗಿ ಸೈಕಲ್ ಚಲಿಸಿ ಕಡೆಯಲ್ಲಿ ಗೆರೆ ದಾಟುವರೋ ಅವರಿಗೆ ಬಹುಮಾನ! ಇಲ್ಲಿ ವೇಗಕ್ಕಿಂತ ಸಮತೋಲನ (ಬ್ಯಾಲನ್ಸ್) ಮತ್ತು ಸಹಿಷ್ಣುತೆ (ಎಂಡ್ಯೂರನ್ಸ್) ಮುಖ್ಯ. ಇದೇನು ಸುಲಭದ ಕೆಲಸವಲ್ಲ. ಈ ಪಂದ್ಯಕ್ಕೇ ತಯಾರಿ ನಡೆಸಿ ಬಹುಮಾನ ಗಿಟ್ಟಿಸುತ್ತಿದ್ದ ಸ್ಪರ್ಧಿಗಳೂ ಇರುತ್ತಿದ್ದರು.
*****

ಪಂದ್ಯಗಳಲ್ಲಿ ಹೀಗಿದ್ದರೆ ಜೀವನ ಯಾತ್ರೆಯಲ್ಲಿ ಹೇಗೆ? ಇದೇ ತತ್ವವನ್ನು ಜೀವನಕ್ಕೂ ವಿಸ್ತರಿಸಬಹುದೇ? ಅವಶ್ಯವಾಗಿ ವಿಸ್ತರಿಸಬಹುದು. ಜೀವನವೂ ಒಂದು ರೀತಿಯ ಓಟದ ಸ್ಪರ್ಧೆ ತಾನೆ? ಇಲ್ಲಿಯೂ ದೂರ ಮತ್ತು ಸಮಯದ ಎರಡು ಲೆಕ್ಕಗಳು. ಎಷ್ಟು ಸಮಯದಲ್ಲಿ ಕೊಟ್ಟ ದೂರ ಸಾಗುತ್ತಾರೆ ಎನ್ನುವುದು. ಹಾಗಿದ್ದರೆ, ಇದರ ವಿಚಾರ ಸ್ವಲ್ಪ ನೋಡೋಣ. 

ಯಾರಾದರೂ ದೊಡ್ಡವರಿಗೆ ನಮಸ್ಕಾರ ಮಾಡಿದರೆ ಆಶೀರ್ವಾದ ಮಾಡುತ್ತಾರೆ. "ಧೀರ್ಘಾಯುಷ್ಮಾನ್ ಭವ" ಅಂದರೆ "ದೀರ್ಘಾಯುಸ್ಸು ಹೊಂದು" ಎನ್ನುವುದು ಅನೇಕ ಬಾರಿ ಕೇಳುವ ಆಶೀರ್ವಾದ. ವೈದಿಕ ಸಂಪ್ರದಾಯದಲ್ಲಿ "ಶತಮಾನಂ ಭವತಿ ಪುರುಷಃ" ಎನ್ನುತ್ತಾರೆ. "ನೂರು ವರ್ಷ ಬಾಳು" ಎಂದು. ಯಾವ ನೂರು ವರ್ಷ? ಇದೇನು ಪ್ರಶ್ನೆ ಎನ್ನಬಹುದು. ನಾವು ಸಾಮಾನ್ಯವಾಗಿ ಲೆಕ್ಕಕ್ಕೆ ತೆಗೆದುಕೊಳ್ಳುವುದು ಒಂದೇ ಕಾಲ. ಅದು ಬಾಹ್ಯ ಅಂದರೆ ಹೊರಗಿನ ಕಾಲ. ಅದನ್ನು ಅಳೆಯುವುದು ಸೆಕೆಂಡು, ನಿಮಿಷ, ಗಂಟೆ, ದಿನ ಮತ್ತು ವರ್ಷಗಳ ಲೆಕ್ಕದಲ್ಲಿ. ಇದರ ಲೆಕ್ಕದಲ್ಲಿ ನೂರು ವರುಷ ಬಾಳು ಎಂದು. ನೂರೇ ಏಕೆ? ಸಾವಿರ ಏಕೆ ಆಗಬಾರದು? ಅದು ಸಾಧ್ಯವಿಲ್ಲ. ಭೌತಿಕ ದೇಹಕ್ಕೆ ಅದರದೇ ಆದ ಇತಿ-ಮಿತಿಗಳಿವೆ. ಸುಮ್ಮನೆ ಸಾವಿರ ವರುಷ ಬಾಳು ಎಂದರೆ ಅರ್ಥವಿಲ್ಲ. ಹೇಳಿದ ಮಾತಿಗೆ ಒಂದು ಬೆಲೆ, ತೂಕ ಬೇಕು. ಈ ದೇಹಕ್ಕೆ ನೂರು ವರುಷ ಬದುಕಲು ಸಾಧ್ಯ. ಆದ್ದರಿಂದ "ನೂರು ವರುಷ ಬಾಳು" ಎಂದು ಆಶೀರ್ವಾದ.

ಈ ದೇಹಕ್ಕೆ ಹೊರಗಿನ ಕಾಲದಂತೆ ಒಂದು ಒಳಗಿನ ಕಾಲವೂ ಇದೆ! ಅದು ಹೇಗೆ? ಕೆಲವರು ಚಿಕ್ಕ ವಯಸ್ಸಿಗೇ ಮುದುಕರಂತೆ ಕಾಣುತ್ತಾರೆ. ಇನ್ನು ಕೆಲವರು ತುಂಬಾ ವಯಸ್ಸಾದರೂ ಯುವಕರಂತೆ ಕಾಣುತ್ತಾರೆ. ಅದು ಹೇಗೆ? ಇಬ್ಬರು ಒಂದೇ ದಿನ, ಐವತ್ತು ವರುಷದ ಹಿಂದೆ ಹುಟ್ಟಿದವರು. ಇಬ್ಬರಿಗೂ ಹೊರಗಿನ ಕಾಲದಲ್ಲಿ ಈಗ ಐವತ್ತು ವರುಷ ವಯಸ್ಸು. ಆದರೆ ಒಬ್ಬ ಅರವತ್ತೈದು ವಯಸ್ಸಿನವನಂತೆ ಕಾಣುತ್ತಾನೆ. ಇನ್ನೊಬ್ಬ ಮೂವತ್ತೈದು ವಯಸ್ಸಿನವಂತಿದ್ದಾನೆ. ಇದಕ್ಕೆ ಕಾರಣ ದೇಹದ ಒಳಗಿನ ವಯಸ್ಸು. ಮಕ್ಕಳಲ್ಲಿ "ಬೆಳವಣಿಗೆಯ ಬಿರುಸು" (ಗ್ರೋತ್ ಸ್ಪರ್ಟ್) ಇದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. "ಎಲಾ ಇವನೇ! ಒಂದು ವರುಷದಲ್ಲಿ ಎಷ್ಟು ಬೆಳೆದಿದ್ದಾನೆ!" ಎನ್ನುತ್ತೇವೆ. ಹಾಗೆಯೇ ವಯಸ್ಕರಲ್ಲಿ "ವೃದ್ಧಾಪ್ಯದ ಬಿರುಸು" ಉಂಟಂತೆ. (ಇದರ ಬಗ್ಗೆ ಇನ್ನೊಂದು ಸಂಚಿಕೆಯಲ್ಲಿ ನೋಡೋಣ). "ಏನಿದು? ಒಂದು ವರುಷದಲ್ಲಿ ಎಷ್ಟು ಕುಗ್ಗಿಹೋಗಿದ್ಧಾರೆ!" ಅನ್ನುತ್ತೇವೆ. ಅಂದರೆ ಹೊರಗಿನ ವಯಸ್ಸಿನ ಹಾಗೆ (ಬಾಹ್ಯ ವಯಸ್ಸು) ದೇಹದಲ್ಲಿ ಸಹ (ಆಂತರಿಕ ವಯಸ್ಸು) ಒಂದು ಗಡಿಯಾರ ಇದೆ ಎಂದಾಯಿತು.   

ಹಾಗಿದ್ದಲ್ಲಿ ಈ ಬಾಹ್ಯ ವಯಸ್ಸು ಮತ್ತು ಆಂತರಿಕ ವಯಸ್ಸಿನ ಸಮನ್ವಯ ಅಥವಾ ಹೊಂದಾಣಿಕೆ ಹೇಗೆ? ಇದಕ್ಕೆ ನಮ್ಮ ಹಿರಿಯರು ಸೊಗಸಾಗಿ ತಾಳೆ (ಮ್ಯಾಚಿಂಗ್) ಹಾಕುವ ವಿಧಿ ಹೇಳಿಕೊಟ್ಟಿದ್ದಾರೆ. 

*****

ಏನೂ ಕೆಲಸ ಮಾಡದೇ ಒಂದು ಕಡೆ ಸುಮ್ಮನೆ ಕುಳಿತುಕೊಳ್ಳಿ. ನಿಮ್ಮ ಉಸಿರಾಟದ ಮೇಲೆ ಗಮನವಿಡಿ. ಒಂದು ಸಲ ಶ್ವಾಸದಲ್ಲಿ ಗಾಳಿ ಒಳಗೆ ತಗೆದುಕೊಂಡು ಹೊರಗೆ ಬಿಡಿ. ಸಮಯ ನೋಡಿ. ಸರಿಯಾಗಿ ಉಸಿರು ತೆಗೆದುಕೊಳ್ಳಲು ಎರಡು ಸೆಕೆಂಡ್ ಸಮಯ ಬೇಕು. ಹಾಗೆ, ಪೂರ್ತಿ ಗಾಳಿ ಹೊರಬಿಡಲು ಮತ್ತೆರಡು ಸೆಕೆಂಡ್ ಬೇಕು. ಅಂದರೆ ಒಂದು ಸಾರಿ ಉಸಿರಾಡಲು ನಾಲ್ಕು ಸೆಕೆಂಡ್ ಬೇಕು. 

  • ಉಸಿರು ಒಳಗಡೆ ತೆಗೆದುಕೊಳ್ಳಲು ಎರಡು ಸೆಕೆಂಡುಗಳು. 
  • ಉಸಿರು ಬಿಡಲು ಎರಡು ಸೆಕೆಂಡುಗಳು. 
  • ಒಂದು ಸಲ ಉಸಿರಾಡಲು (ಒಂದು ಶ್ವಾಸ) ನಾಲ್ಕು (4) ಸೆಕೆಂಡುಗಳು. 
  • ಅಂದರೆ, ಒಂದು ನಿಮಿಷಕ್ಕೆ (ಅರವತ್ತು ಸೆಕೆಂಡುಗಳು) ಹದಿನೈದು (15) ಶ್ವಾಸಗಳು. 
  • ಒಂದು ಗಂಟೆಗೆ (60x15) 900 ಶ್ವಾಸಗಳು. 
  • ಒಂದು ದಿನಕ್ಕೆ (24 ಗಂಟೆಗಳು) (900x24) 21,600 ಶ್ವಾಸಗಳು. 
  • ಒಂದು ವರುಷಕ್ಕೆ (360 ದಿನ ಸರಾಸರಿ) (21,600 x 360) 77, 76,000 ಶ್ವಾಸಗಳು. 
  • ನೂರು ವರುಷಕ್ಕೆ (77,76,000 x 100) 77,76,00,000 ಶ್ವಾಸಗಳು! 

ವೈದಿಕ ಕಾಲದಲ್ಲಿ ಲೆಕ್ಕ ಹಾಕುವಾಗ ಚಾಂದ್ರಮಾನ, ಸೌರಮಾನ ವರುಷಗಳ ಪದ್ಧತಿ ಇದೆ. ಎರಡರಲ್ಲಿ ಸ್ವಲ್ಪ ವ್ಯತ್ಯಾಸ  ಉಂಟು. ಆದ ಕಾರಣ ಒಂದು ಸ್ಥೂಲ ಲೆಕ್ಕವಾಗಿ 360 ದಿನಕ್ಕೆ ಒಂದು ವರುಷ. (ಈಗಲೂ ಕೆಲವು ಅನಿವಾಸಿ ಠೇವಣಿಗಳಿಗೆ ಬ್ಯಾಂಕಿನವರು ಬಡ್ಡಿ ಕೊಡುವಾಗ ವರುಷಕ್ಕೆ 360 ದಿನವೆಂದೇ ಲೆಕ್ಕಹಾಕುತ್ತಾರೆ!). 

ಮೇಲಿನ ಸೂತ್ರದಂತೆ ದೇಹದ ಒಳಗಿನ ಲೆಕ್ಕದ ಎಪ್ಪತ್ತೇಳು ಕೋಟಿ ಎಪ್ಪತ್ತಾರು ಲಕ್ಷ ಸಂಖ್ಯೆಯ ಶ್ವಾಸದ ಸಮಯ ಹೊರಗಿನ ಒಂದು ನೂರು ವರುಷಕ್ಕೆ ಸಮವಾಯಿತು. "ನೂರು ವರುಷ ಬಾಳು ಅಂದರೆ ಎಪ್ಪತ್ತೇಳು ಕೋಟಿ ಎಪ್ಪತ್ತಾರು ಲಕ್ಷ ಸಲ ಶ್ವಾಸ ತೆಗೆದು ಕೊಳ್ಳುವ ಕಾಲದವರೆಗೆ ಬದುಕು" ಎಂದ ಹಾಗೆ. 

*****

ಮಹಾಪಂಡಿತ ಕವಿಗಳಾದ ಶ್ರೀನಿವಾಸಾಚಾರ್ಯರು (ಶ್ರೀ ಜಗನ್ನಾಥ ದಾಸರೆಂದು ಪ್ರಸಿದ್ದರಾದವರು) ತಮ್ಮ "ಹರಿಕಥಾಮೃತಸಾರ" ಎಂಬ ಮೇರು ಕೃತಿಯಲ್ಲಿ "ಮಂಗಳಾಚರಣ ಸಂಧಿ" ನಾಲ್ಕನೆಯ ಪದ್ಯದಲ್ಲಿ ಶ್ವಾಸಕ್ರಿಯೆಯ ಮೂಲ ದೇವತೆಯಾದ ಮುಖ್ಯಪ್ರಾಣ ದೇವರನ್ನು ಕುರಿತಾಗಿ ಪ್ರಾರ್ಥಿಸುವಾಗ ಈ ಮೇಲಿನ ಲೆಕ್ಕವನ್ನು ಸೂತ್ರ ರೂಪದಲ್ಲಿ ಹೀಗೆ ಕೊಟ್ಟಿದ್ದಾರೆ: 

ಆರು ಮೂರೆರಡೊಂದು ಸಾವಿರ 
ಮೂರೆರಡು ಶತ ಶ್ವಾಸಜಪಗಳ 
ಮೂರುವಿಧ ಜೀವರೊಳಗಬ್ಜಜಕಲ್ಪ ಪರ್ಯಂತ 
ತಾರಚಿಸಿ ಸಾತ್ವರಿಗೆ ಸುಖ ಸಂಸಾರ
ಮಿಶ್ರರಿಗೆ ಅಧಮ ಜನರಿಗಪಾರ 
ದುಃಖಗಳೀವ ಗುರು ಪವಮಾನ ಸಲಹೆಮ್ಮ 

ಈ ಸೂತ್ರದಲ್ಲಿ ಸ್ವಲ್ಪ ಒಗಟಿದೆ. ಮೊದಲ ಸಾಲಿನಲ್ಲಿ ಆರು ಮೂರು ಎನ್ನುವುದನ್ನು ಗುಣಿಸಬೇಕು. ಆಗ ಹದಿನೆಂಟು ಬರುತ್ತದೆ. ಎರಡೊಂದು ಎನ್ನುವುದನ್ನು ಕೂಡಬೇಕು. ಆಗ ಮೂರು ಸಿಗುತ್ತದೆ. ಹದಿನೆಂಟು + ಮೂರು = ಇಪ್ಪತ್ತೊಂದು ಸಾವಿರ ಆಯಿತು. ಎರಡನೆಯ ಸಾಲಿನ ಮೂರೆರಡು ಅನ್ನುವಲ್ಲಿ ಮೂರನ್ನು ಎರಡರಿಂದ ಗುಣಿಸಬೇಕು. ಆಗ ಆರು ನೂರು ಬಂತು. ಒಟ್ಟು ಇಪ್ಪತ್ತೊಂದು ಸಾವಿರದ ಆರು ನೂರು ಆಯಿತು!

ಈ ಪದ್ಯದಲ್ಲಿ ಇನ್ನೊಂದು ವಿಶೇಷವಿದೆ. ಇದು "ಭಾಮಿನಿ ಷಟ್ಪದಿ" ಪದ್ಯ. ಭಾಮಿನಿ ಷಟ್ಪದಿಯಲ್ಲಿ ಒಟ್ಟು ಆರು ಸಾಲುಗಳು. ಮೊದಲ ಸಾಲಿನಲ್ಲಿ ಏಳು ಮತ್ತು ಏಳು ಒಟ್ಟು ಹದಿನಾಲ್ಕು ಮಾತ್ರೆಗಳು. ಎರಡನೆಯ ಸಾಲಿನಲ್ಲಿಯೂ ಹೀಗೆ ಹದಿನಾಲ್ಕು ಮಾತ್ರೆಗಳು. ಮೂರನೆಯ ಸಾಲಿನಲ್ಲಿ ಏಳು, ಏಳು ಮತ್ತು ಎಂಟು ಮಾತ್ರೆಗಳು. ಅಂದರೆ ಇಪ್ಪತ್ತೆರಡು ಮಾತ್ರೆಗಳು. ಮೂರು ಸಾಲು ಸೇರಿದರೆ ಐವತ್ತು ಮಾತ್ರೆಗಳು. ನಾಲ್ಕು, ಐದು ಮತ್ತು ಆರನೆಯ ಸಾಲಿನಲ್ಲಿ ಹೀಗೆಯೇ ಮತ್ತೆ ಐವತ್ತು ಮಾತ್ರೆಗಳು. ಒಟ್ಟಿನಲ್ಲಿ ಎಲ್ಲ ಸೇರಿ ನೂರು ಮಾತ್ರೆಗಳು! ನೂರು ವರುಷದ ಲೆಕ್ಕಕ್ಕೆ ನೂರು ಮಾತ್ರೆಗಳ ಛಂದಸ್ಸು! ಆದಕಾರಣ ಹೀಗೆ ಗುಣಿಸುವ ಮತ್ತು ಕೂಡುವ ಲೆಕ್ಕದ ಒಗಟಿನ ಸೂತ್ರ ಕೊಟ್ಟಿದ್ದಾರೆ.

ಭಾರತೀಯ ತತ್ವಶಾಸ್ತ್ರದಲ್ಲಿ "ಸಂಖ್ಯಾ ಶಾಸ್ತ್ರ" ಬಹಳ ಮಹತ್ವದ್ದು. ಕೆಲವು ವಿಷಯಗಳು ಸುಲಭವಾಗಿ ಅರ್ಥ ಆಗುವುದಿಲ್ಲ. ಬಹುಶ್ರುತ ವಿದ್ವಾಂಸರಾದ ಕೀರ್ತಿಶೇಷ ಬನ್ನಂಜೆ ಗೋವಿಂದಾಚಾರ್ಯರು ಇಂತಹ ವಿಷಯಗಳನ್ನು ವಿವರಿಸುವುದರಲ್ಲಿ ಎತ್ತಿದ ಕೈ ಆಗಿದ್ದರು. ಅವರನ್ನು ಇಂತಹ ಸಂದರ್ಭಗಳಲ್ಲಿ ಖಂಡಿತ ನೆನೆಯಬೇಕು. 

***** 

ಮನುಷ್ಯನು ದೇಹದ ಒಳಗಿನ ಲೆಕ್ಕದಲ್ಲಿ ಒಟ್ಟು 77,76,00,000 ಬಾರಿ ಉಸಿರಾಡಿದರೆ ನೂರು ವರುಷ ಆಗುತ್ತದೆ. ಪ್ರಾಣಾಯಾಮಾದಿಗಳನ್ನು ಅಭ್ಯಾಸ ಮಾಡಿ ಶ್ವಾಸದ ಮೇಲೆ ಹಿಡಿತ ಸಾಧಿಸಿದರೆ, ಉಸಿರು ಬಿಗಿ ಹಿಡಿದು ಎಂಟು ಸೆಕೆಂಡಿಗೆ ಒಂದರಂತೆ ಉಸಿರಾಡಿದರೆ ಹೊರಗಿನ ಕಾಲ ಎರಡು ನೂರು ವರುಷ ಬದುಕಬಹುದು! ಸ್ಲೋ ಸೈಕಲ್ ರೇಸಿನಂತೆ.  ಅದೇ ರೀತಿ ಆರು ಸೆಕೆಂಡಿಗೆ ಒಮ್ಮೆ ಉಸಿರಾಡಿದರೆ ನೂರೈವತ್ತು ವರ್ಷ. ಮೂರು ಸೆಕೆಂಡಿಗೊಮ್ಮೆ ಆದರೆ, ಏದುಸಿರು ಬಿಟ್ಟರೆ ಎಪ್ಪತ್ತೈದೇ ವರ್ಷ. ಹೀಗೆಯೇ ಲೆಕ್ಕ. 

ಮೇಲಿನ ಪದ್ಯದಲ್ಲಿ ಶ್ವಾಸಜಪದ ಬಗ್ಗೆ ಹೇಳಿದ್ದಾರೆ. ಮೂರುವಿಧ ಜೀವರು ಎಂದಿದ್ದಾರೆ. 

ಇವುಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ ವಿವರವಾಗಿ ನೋಡೋಣ.  

Tuesday, March 11, 2025

ದ್ವಿತೀಯ ವಿವಾಹ ಮತ್ತು ಮರು ಮದುವೆಗಳು


ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡಲು ಮಳೆಯ ಬರುವಿಕೆಯನ್ನು ಖಚಿತವಾಗಿ ತಿಳಿಯಲು ವಾದ್ಯಾರ್ ಬಳಿ ಬಂದ ರೈತ ಪ್ರತಿನಿಧಿ ಮತ್ತು ವಾದ್ಯಾರ್ ನಡುವೆ ನಡೆದ ಸಂಭಾಷಣೆ ಮತ್ತು ಅದರಿಂದ ನಾವು ತಿಳಿಯಬೇಕಾದ ಪಾಠಗಳನ್ನೊಳಗೊಂಡ "ಶ್ರದ್ದೆ ಮತ್ತು ನಂಬಿಕೆ" ಎನ್ನುವ ಶೀರ್ಷಿಕೆಯ ಸಂಚಿಕೆಯು ಓದುಗರ ಬಹಳ ಆಸಕ್ತಿಯ ಪ್ರತಿಕ್ರಿಯೆಗಳನ್ನು ತಂದಿತು. (ಇದನ್ನು ಓದಲು  ಇಲ್ಲಿ ಕ್ಲಿಕ್ ಮಾಡಿ.)

ಆ ಸಂಚಿಕೆಯ ಪ್ರತಿಕ್ರಿಯೆಗಳಲ್ಲಿ "ಜನಿವಾರ ಮತ್ತು ನೀರು ಸೇದುವ ಹಗ್ಗ" ಇವುಗಳ ಹೋಲಿಕೆ ಬಗ್ಗೆ ಹೆಚ್ಚಿನ ವಿವರಣೆ ಕೊಟ್ಟ "ಬ್ರಹ್ಮಚಾರಿ, ಗೃಹಸ್ಥ ಮತ್ತು ಸನ್ಯಾಸಿ" ಎಂಬ ಶೀರ್ಷಿಕೆಯ ಸಂಚಿಕೆ ಮತ್ತೂ ಹೆಚ್ಚಿನ ಪ್ರತಿಕ್ರಿಯೆಗಳನ್ನು ತಂದಿತು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.) 

ಎರಡನೇ ಮದುವೆಯಲ್ಲಿ "ಕಾಶಿಯಾತ್ರೆ" ಇರುವುದಿಲ್ಲ ಎನ್ನುವ ವಿಷಯದಲ್ಲಿ ಅನೇಕ ಓದುಗರಿಂದ ಪ್ರಶ್ನೆಗಳು ಮತ್ತು ಹೆಚ್ಚಿನ ವಿವರಣೆಗೆ ಬೇಡಿಕೆ ಬಂದಿದೆ. ಈ ಹಿನ್ನೆಲಿಯಲ್ಲಿ ಎರಡನೆಯ ವಿವಾಹ, ಮರು ಮದುವೆಗಳು ಮತ್ತು ಇವಕ್ಕೆ ಸಂಬಂಧಿಸಿದಂತಹ ವಿಷಯಗಳ ಬಗ್ಗೆ ಸ್ವಲ್ಪ ಚರ್ಚೆ ಮಾಡೋಣ. 

*****

ಎರಡನೇ ವಿವಾಹ ಮತ್ತು ಮರು ಮದುವೆಗಳ ಕುರಿತು ವಿಚಾರ ಮಾಡುವ ಮೊದಲು "ವಿವಾಹದ ಅವಶ್ಯಕತೆ" ಬಗ್ಗೆ ಮೊದಲು ಯೋಚಿಸಬೇಕು. ವಿವಾಹ ಏಕೆ? ಈ ವ್ಯವಸ್ಥೆ ಇಲ್ಲದಿದ್ದರೆ ಸಮಾಜದಲ್ಲಿ ಹೇಗೆ ಅವ್ಯವಸ್ಥೆ ಇರುತ್ತಿತ್ತು ಎನ್ನುವುದು ಬಹಳ ಕುತೂಹಲಕಾರಿ ವಿಷಯ. ವಿವಾಹ ಒಂದು ಸಾಮಾಜಿಕ ವ್ಯವಸ್ಥೆಯ ಕೂಸು. ಸೃಷ್ಟಿಯ ಒಡಲಿನಲ್ಲಿ ಗಂಡು ಹೆಣ್ಣು ಎಂಬ ಭೇದ ಹುಟ್ಟಿತು. ಏಕಕೋಶ ಜೀವಿಗಳಲ್ಲಿ (ಅಮೀಬಾ ಮುಂತಾದುವು) ಕೋಶಗಳೇ ವಿಭಜನೆಗೊಂಡು ಸೃಷ್ಟಿಯ ಸರಪಳಿ ಮುಂದುವರೆಯುತ್ತಿದೆ. ಪ್ರಾಣಿಗಳಲ್ಲಿ ವಿವಾಹ ಅನ್ನುವ ವ್ಯವಸ್ಥೆ ಇಲ್ಲ. ಸಂತಾನ ಉತ್ಪತ್ತಿ ಕಾಲದಲ್ಲಿ ಗಂಡು ಪ್ರಾಣಿ ಮತ್ತು ಹೆಣ್ಣು ಪ್ರಾಣಿ ಕೂಡಿಕೊಂಡು ಸೃಷ್ಟಿ ಮುಂದುವರೆಯುತ್ತದೆ. ಹುಟ್ಟಿದ ಮರಿಗಳು ತಕ್ಷಣ ತಮ್ಮ ತಮ್ಮ ಪಾಡಿಗೆ ಜೀವನ ನಡೆಸಲು ಶುರುಮಾಡುತ್ತವೆ. ಹಸು, ಕುದುರೆ, ಆನೆ ಮೊದಲಾದ ಪ್ರಾಣಿಗಳ ಕರುಗಳೂ ಹುಟ್ಟಿದ ಕೆಲವೇ ನಿಮಿಷಗಳಲ್ಲಿ ತಮ್ಮ ಕಾಲ ಮೇಲೆ ತಾವು ನಿಲ್ಲುತ್ತವೆ. ಮುಂದೆ ಸ್ವಲ್ಪ ದಿನ ತಾಯಿಯ ಜೊತೆ ಮರಿಗಳಿದ್ದರೂ ಮನುಷ್ಯರಂತೆ ಹುಟ್ಟಿದ ಮಕ್ಕಳ ಲಾಲನೆ-ಪಾಲನೆ ಅನೇಕ ವರುಷ ನಡೆಯಬೇಕಾದ್ದಿಲ್ಲ. ಪ್ರಾಣಿಗಳಲ್ಲಿ ತಂದೆಯ ಪಾತ್ರ ಮಹತ್ವದ್ದಿಲ್ಲ. 

ಮನುಷ್ಯರಲ್ಲಿ ಹಾಗಿಲ್ಲ. ಹುಟ್ಟಿದ ಕೂಸು ತನ್ನನ್ನು ತಾನು ನೋಡಿಕೊಳ್ಳಬೇಕಾದರೆ ಕೆಲವು ವರ್ಷಗಳೇ ಬೇಕು. ಮಾನಸಿಕ ಮತ್ತು ಬೌದ್ಧಿಕ ವಿಕಾಸ ಬೇರೆ ಪ್ರಾಣಿಗಳಿಗಿಂತ ಹೆಚ್ಚಾಗಿ ಆಗಬೇಕಾದುದರಿಂದ ತಾಯಿಯ ಪಾತ್ರ ದೊಡ್ಡದು. ಸಮಾಜ ವಿಕಸಿತವಾದಂತೆ ಒಂದು ಗಂಡು ಮತ್ತು ಒಂದು ಹೆಣ್ಣು ನಿರ್ದಿಷ್ಟವಾಗಿ ಜೊತೆಯಾಗಿ ಬದುಕುವ ವ್ಯವಸ್ಥೆ ಬಂತು. ಇಂತಹ ವ್ಯವಸ್ಥೆ ಇಲ್ಲದಿದ್ದರೆ ಸಾಮಾಜಿಕ ವಿಪ್ಲವ, ಅಶಾಂತಿ ಆಗುತ್ತದೆ. ಆದ್ದರಿಂದ ವಿವಾಹವು ಕ್ರಮವಾದ ಸಂತಾನೋತ್ಪತ್ತಿ ಮತ್ತು ನಿಖರವಾದ ಸಾಮಾಜಿಕ ವ್ಯವಸ್ಥೆಗೆ ಒಂದು ಭದ್ರವಾದ ತಳಹದಿ ಕೊಟ್ಟಿದೆ. ಬೇರೆ ಪ್ರಾಣಿಗಳಲ್ಲಿ ನನ್ನದು, ನನ್ನ ಅಸ್ತಿ, ನನ್ನ ಕುಟುಂಬ ಇತ್ಯಾದಿ ಸಂಬಂಧಗಳೇ ಇಲ್ಲ. ಮನುಷ್ಯರಲ್ಲಿ ಇವೆಲ್ಲವೂ ಇರುವುದರಿಂದ ಮೊದಲು ಸಮಾಜದಲ್ಲಿ ವ್ಯವಸ್ಥಿತವಾದ ಬದುಕು, ನಂತರ ಸಂತಾನೋತ್ಪತ್ತಿ, ಮುಂದೆ ಸಂಪತ್ತಿನ ಬೆಳವಣಿಗೆ-ರಕ್ಷಣೆ ಇತ್ಯಾದಿ ಕಾರಣಗಳಿಂದ ಮದುವೆ ಮುಖ್ಯವಾಗುತ್ತದೆ. ಸಮಾಜದಲ್ಲಿ ಕಾನೂನು-ಸುವ್ಯವಸ್ಥೆ ಕಟ್ಟುಪಾಡುಗಳು ಬೆಳೆದಂತೆ ಮತ್ತು ಬಿಗಿಯಾದಂತೆ ಮದುವೆಯು ಇನ್ನೂ ಪ್ರಾಮುಖ್ಯತೆ ಪಡೆಯುತ್ತಾ ಹೋಯಿತು. 

ಕಳೆದ ಒಂದೆರಡು ದಶಕಗಲ್ಲಿ ವಿವಾಹೇತರ ಸಹಜೀವನ (ಲಿವಿಂಗ್ ಟುಗೆದರ್) ಯುವಜನಾಂಗಕ್ಕೆ ಹೆಚ್ಚು ಹೆಚ್ಚು ಪ್ರಿಯವಾಗಿದೆ. ಡಜನ್ ಲೆಕ್ಕದಲ್ಲಿ ಮಕ್ಕಳು ಪಡೆಯುವುದು ಬದಲಾಗಿ, "ಎರಡು ಬೇಕು, ಮೂರು ಸಾಕು"  ದಾಟಿ, "ಆರತಿಗೊಂದು, ಕೀರುತಿಗೊಂದು" ಹಾದು, "ಒಂದೇ ಮುತ್ತು ಸಾಕು" ಕೂಡ ಬಿಟ್ಟು ಈಗ ಮಕ್ಕಳೇ ಬೇಡ ಅನ್ನುವ ಪರಿಸ್ಥಿತಿ ಬಂದಿದೆ. ಕೆಲವೆಡೆ ಇದನ್ನೂ ದಾಟಿ "ಮದುವೆಯೇ ಬೇಡ" ಅನ್ನುವುದೂ ಬಂದಿದೆ. ಇದು ಸರಿ ಅಥವಾ ತಪ್ಪಿನ ಪ್ರಶ್ನೆ ಅಲ್ಲ. "ಅವರವ ಜೀವನ ಅವರವರಿಗೆ" ಎಂದು ಸಮಾಜ ಒಪ್ಪಿಕೊಂಡ ಮೇಲೆ ಮುಗಿಯಿತು. ಸಂಬಂಧಪಟ್ಟವರ ಇಷ್ಟ. ಆದರೆ ಈ ವ್ಯವಸ್ಥೆಯಲ್ಲೂ ಹೊಸ ಹೊಸ ಸಮಸ್ಯೆಗಳು ಬರುತ್ತಿವೆ. ಹಿಂದೆ ಹಂತ ಹಂತವಾಗಿ ಆದಂತೆ ಈಗಲೂ ಒಂದು ಹೊಸ ಸಮತೋಲನ ಸ್ಥಿತಿಗೆ ಸಮಾಜ ಕಾಲಕ್ರಮದಲ್ಲಿ ತಲುಪುತ್ತದೆ. 

*****

ಬ್ರಹ್ಮಚರ್ಯ ಅಂದರೆ ಏನು? ಸಾಮಾನ್ಯವಾದ ಅಭಿಪ್ರಾಯದಲ್ಲಿರುವಂತೆ ಗಂಡು-ಹೆಣ್ಣು ಪರಸ್ಪರ ಕೊಡದೇ ಇರುವುದು ಮಾತ್ರವಲ್ಲ. ಪತಿ-ಪತ್ನಿಯರು ಅತಿಯಾದ ಭೋಗಲಾಲಸೆ ಇಲ್ಲದೆ ಕೇವಲ ಸತ್ಸಂತಾನ ಪಡೆಯುವ ಸಲುವಾಗಿ ದಾಂಪತ್ಯದಲ್ಲಿದ್ದರೆ ಅದೂ ಸಹ ಬ್ರಹ್ಮಚರ್ಯವೇ. ಇದು ಅನೇಕರಿಗೆ ಆಶ್ಚರ್ಯವಾಗುವ ಸಂದರ್ಭ ಉಂಟು. ಮಹಾಭಾರತದ ಪ್ರಸಂಗ ನೆನಪಿಸಿಕೊಳ್ಳಿ. ಅಶ್ವತ್ತಾಮರು ಬ್ರಹ್ಮಾಸ್ತ್ರ ಪ್ರಯೋಗಿಸಿದರು. ವಿಧಿಯಿಲ್ಲದೇ ಅರ್ಜುನನೂ ಬ್ರಹ್ಮಾಸ್ತ್ರ ಪ್ರಯೋಗಿಸಿದನು. ಎರಡು ಬ್ರಹ್ಮಾಸ್ತ್ರಗಳು ಸೃಷ್ಟಿಯನ್ನೇ ನುಂಗಲು ಹೋರಟವು. ಆಗ ಭಗವಾನ್ ವೇದವ್ಯಾಸರು ಮಧ್ಯೆ ನಿಂತು ಇಬ್ಬರಿಗೂ ಅಸ್ತ್ರವನ್ನು ಉಪಸಂಹಾರ (ಹಿಂಪಡೆಯುವುದು) ಮಾಡಲು ಹೇಳಿದರು. "ನಾನು ಬ್ರಹ್ಮಚರ್ಯ ಪಾಲನೆ ಮಾಡಿದ್ದರೆ ಅಸ್ತ್ರ ಶಾಂತವಾಗಲಿ" ಎಂದು ಹೇಳಿ ಅರ್ಜುನನು ಬ್ರಹ್ಮಾಸ್ತ್ರ ಹಿಂಪಡೆದನು. ಅಶ್ವತ್ತಾಮರಿಗೆ ಅಸ್ತ್ರ ಹಿಂಪಡೆಯಲು ಆಗಲಿಲ್ಲ. ವ್ಯಾಸರ ಆಣತಿಯಂತೆ ಆ ಅಸ್ತ್ರವನ್ನೂ ಅರ್ಜುನನೇ ಹಿಂಪಡೆದನು!

ದ್ರೌಪದಿಯಲ್ಲದೆ ಸುಭದ್ರೆ, ಉಲೂಪಿ, ಚಿತ್ರಾಂಗದೆ ಮುಂತಾದ ಪತ್ನಿಯರಿದ್ದರೂ ಅರ್ಜುನನು ಬ್ರಹ್ಮಚಾರಿ ಎನಿಸಿದನು. ವಿವಾಹವೇ ಇಲ್ಲದ ಅಶ್ವತ್ತಾಮಚಾರ್ಯರು "ದುರ್ಯೋಧನನ ಪತ್ನಿಯಲ್ಲಿ ಮಗನನ್ನು ಪಡೆದು ರಾಜ್ಯಕ್ಕೆ ವಾರಸುದಾರನನ್ನು ಕೊಡುತ್ತೇನೆ" ಎಂದು ದುರ್ಯೋಧನನಿಗೆ ಮಾತು ಕೊಟ್ಟು ಬ್ರಹ್ಮಚರ್ಯ ಕಳೆದುಕೊಂಡರು. ಊರ್ವಶಿಯಂತಹ ಅಪ್ಸರೆ ಎದುರು ನಿಂತರೂ ಅವಳಲ್ಲಿ ತಾಯಿಯನ್ನು ಕಂಡು ಅರ್ಜುನನು ಬ್ರಹ್ಮಚರ್ಯ ಉಳಿಸಿಕೊಂಡನು. ಹೀಗೆ ಬ್ರಹ್ಮಚರ್ಯದ ಅರ್ಥ ಬಹು ವಿಶಾಲವಾದದ್ದು. 

*****

ಮದುವೆಯಾದರೂ ಸತಿ-ಪತಿಯರು ಇಬ್ಬರು ವ್ಯಕ್ತಿಗಳೇ. ಅವರವರ ಆಯಸ್ಸು ಅವರವರಿಗೆ. ಒಬ್ಬರು ಇನ್ನೊಬ್ಬರ ಮುಂದೆ ಹೋಗಲೇಬೇಕಲ್ಲ. ಈ ಕಾರಣದಿಂದ ವಿಧವೆ ಮತ್ತು ವಿಧುರ ಎಂಬ ಪದಗಳು ಹುಟ್ಟಿದವು. ಪುರುಷಪ್ರಧಾನ ಸಮಾಜದಲ್ಲಿ ವಿಧವೆಯರಿಗೆ ಹೆಚ್ಚಿನ ಕಷ್ಟ ಬಂದಿತು. "ಸತಿ ಪದ್ಧತಿ" ಚಾಲ್ತಿಯಲ್ಲಿದ್ದಾಗ ಅನೇಕ ಹೆಣ್ಣು ಮಕ್ಕಳನ್ನು ಜೀವಂತ ಸುಡಲಾಯಿತು. ಒಂದು ಹಂತದಲ್ಲಿ ವಿಧವೆಯರಿಗೆ ತಲೆ ಬೋಳಿಸಿ, ತಣ್ಣೀರ ಸ್ನಾನ, ಒಂದು ಹೊತ್ತಿನ ಊಟ ಇತ್ಯಾದಿ ಕಟ್ಟುಪಾಡು ವಿಧಿಸಿದರು. ಈಗ ಈ ಪದ್ಧತಿಗಳಿಲ್ಲದಿದ್ದರೂ ವಿಧವೆಯರ ಜೀವನ ಕಷ್ಟವೇ. ಪುನರ್ವಿವಾಹಗಳು ಹೆಚ್ಚು ಚಾಲ್ತಿಯಲ್ಲಿ ಬಂದಿದ್ದರಿಂದ ಕಳೆದ ಎರಡು-ಮೂರು ದಶಕಗಳಿಂದ ಕೆಲಮಟ್ಟಿಗೆ ಈ ಸಮಸ್ಯೆಗೆ ಪರಿಹಾರ ಒದಗಿದೆ. 

ವಿಧುರರಿಗೆ ಯಾವುದೇ ಕಟ್ಟುಪಾಡುಗಳಿಲ್ಲ ಎಂದು ಬಹಳ ಮಂದಿ ನಂಬಿದ್ದಾರೆ. ವಾಸ್ತವವಾಗಿ ಅವರಿಗೂ ಕಟ್ಟುಪಾಡುಗಳಿದ್ದವು. ಹವನ-ಹೋಮ-ಯಾಗಾದಿಗಳು ಹೆಂಡತಿಯಿಲ್ಲದವರು ಮಾಡುವಂತಿಲ್ಲ. ಶ್ರೀರಾಮನು ಅಶ್ವಮೇಧ ಮಾಡುವಾಗ ಹೆಂಡತಿ ಹತ್ತಿರದಲ್ಲಿ ಇಲ್ಲದ್ದರಿಂದ ಸೀತಾದೇವಿಯ ಮೂರ್ತಿ ಪಕ್ಕದಲ್ಲಿಟ್ಟು ಯಾಗ ಮಾಡಿಸಿದರು ಎಂದು ಉತ್ತರ ರಾಮಾಯಣದಲ್ಲಿ ನೋಡಿದ್ದೇವೆ. ತಮ್ಮ ಸಾಧನೆಗಾಗಿ ದೇವತಾರ್ಚನೆ, ತಪ-ಜಪ ಮಾತ್ರ ಮಾಡಲು ಅವರಿಗೆ ಅಧಿಕಾರವಿರುತ್ತದೆ. ಹಿಂದೆ ಅನೇಕರು "ಸ್ತ್ರೀಪಾಕ ನೇಮ", "ಸ್ವಪಾಕ ನೇಮ" ಇತ್ಯಾದಿ ವ್ರತಗಳನ್ನು ಹಿಡಿದು ತಾವೇ ಅಡಿಗೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ವಿಧುರರಿಗೆ ಶ್ರಾದ್ಧಾದಿಗಳಿಗೆ ಆಹ್ವಾನ ಇರುತ್ತಿರಲಿಲ್ಲ. ಸಮಾರಂಭಗಳಲ್ಲಿ ಅವರಿಗೆ ಪಾದಪೂಜೆ ಮಾಡಬೇಕಾದರೂ, ಅವರು ಎಷ್ಟೇ ಹಿರಿಯರಿದ್ದಾಗಲೂ, ಮೊದಲು ಬೇರೊಂದು ದಂಪತಿ ಪೂಜೆ ಮಾಡಿ ನಂತರ ಅವರಿಗೆ ಪಾದಪೂಜೆ ಮಾಡುತ್ತಿದ್ದರು. ಇದು ಸಾಮಾನ್ಯವಾಗಿ ಇಂದಿಗೂ ಮುಂದುವರಿದಿದೆ. ಆದರೂ ವಿಧವೆಯರಷ್ಟು ಕಷ್ಟ ಜೀವನ ಸಮಾಜ ವಿಧುರರಿಗೆ ಕೊಟ್ಟಿರಲಿಲ್ಲ. 

*****

ಹಿಂದಿನ ಶತಮಾನದಲ್ಲಿ ಅನೇಕ ವಿವಾಹಿತ ಸ್ತ್ರೀಯರು ಶಿಶು ಜನನ ಕಾಲದಲ್ಲಿ ಸಾವಿಗೀಡಾಗುತ್ತಿದ್ದರು. ಈಗಿನಂತೆ "ಸಿಸೇರಿಯನ್" ಹೆರಿಗೆಗಳು ಇರಲಿಲ್ಲವಾಗಿ ಗರ್ಭಕೋಶದಲ್ಲಿ ಮಗು ಅಡ್ಡಡ್ಡವಾದಾಗ ಹೆರಿಗೆ ಕಷ್ಟವಾಗಿ ಸಾವು ಸಂಭವಿಸುತ್ತಿತ್ತು. ಇಂತಹ ಸಂದರ್ಭಗಳಲ್ಲಿ ಅನೇಕ ಕುಟಿಂಬಗಳಲ್ಲಿ ಆಕೆಯ ತಂಗಿಯನ್ನೇ ಅಳಿಯನಿಗೆ ಕೊಟ್ಟು ಮದುವೆ ಮಾಡುವ ಪದ್ಧತಿ ನಡೆಯುತ್ತಿತ್ತು. ಆಗ ತಂದೆ-ತಾಯಿ ಹೇಳಿದಂತೆ ತಂಗಿಯರು ಭಾವನನ್ನೇ ಮಾಡುವೆ ಆಗುತ್ತಿದ್ದರು. ಬಹಳ ಚಿಕ್ಕ ವಯಸ್ಸಿನಲ್ಲಿ ಈರೀತಿ ಮದುವೆಗಳು ನಡೆಯುತ್ತಿದ್ದುದರಿಂದ ಅವರ ಇಷ್ಟಾನಿಷ್ಟಗಳಿಗೆ ಬೆಲೆಯಿರಲಿಲ್ಲ. ಪುರುಷರಿಗೆ ಸುಲಭವಾಗಿ ಮರು ಮದುವೆ ನಡೆಯುತ್ತಿತ್ತು. ಅಲ್ಲೊಂದು ಇಲ್ಲೊಂದು ವಿಧವಾವಿವಾಹ ನಡೆದರೂ ಅವು ಅತಿ ವಿರಳವಾಗಿದ್ದವು. ಈಗಿನಂತೆ ಕಾನೂನಿನ ಪ್ರಕಾರ ವಿಧವಾವಿವಾಹ ಸರಳವಾಗಿರಲಿಲ್ಲ. 

"ಸಮಾವರ್ತನ ಹೋಮ" ಮಾಡುವಾಗ ಜನಿವಾರ ಧರಿಸುವ ಪದ್ಧತಿ ಇದ್ದ ಕುಟುಂಬಗಳಲ್ಲಿ ಎರಡನೆಯ ಜನಿವಾರ ಹಾಕುತ್ತಿದ್ದರು. ಈಗ ಗುರುಕುಲ ಪದ್ಧತಿ ಇಲ್ಲದಿದ್ದುದರಿಂದ ಮದುವೆಯ ದಿನವೇ ಸಮಾವರ್ತನ ಮಾಡಿ ಎರಡನೆಯ ಜನಿವಾರ ಹಾಕುತ್ತಾರೆ. ಹೋಮ ಮಾಡಿ, ವಿದ್ಯೆ ಪೂರ್ತಿ ಆಗಿ, ಕಾಶಿಗೆ ಹೋಗುವ ದಾರಿಯಲ್ಲಿ ಮದುವೆ ಆಗುತ್ತಿದ್ದರು. ಡಿಗ್ರಿ ಪಡೆದವರೆಲ್ಲಾ ಕೆಲಸಕ್ಕೆ ಸೇರಬೇಕಾಗಿಲ್ಲ. ಸಮಾವರ್ತನ ಆದವರೆಲ್ಲ ವಿವಾಹವಾಗಬೇಕಿಲ್ಲ ಎಂದು ತಮಾಷೆಯಾಗಿ ಹೇಳಬಹುದು. ಒಟ್ಟಿನಲ್ಲಿ ಎರಡನೇ ಜನಿವಾರ ಗೃಹಸ್ಥಾಶ್ರಮ ಯೋಗ್ಯತೆ ಬರಲು ಎಂದು ಉಂಟು. 

*****

ಹಿಂದಿನ ಇತಿಹಾಸಗಳಲ್ಲಿ ರಾಜ-ಮಹಾರಾಜರು ಅನೇಕ ಮದುವೆಗಳಾಗುವುದು ಸರ್ವೇ ಸಾಮಾನ್ಯವಾಗಿತ್ತು. ಸಾಮ್ರಾಜ್ಯ ವಿಸ್ತಾರ ಮಾಡಲು, ಸಂಧಿಯ ಕರಾರಿನಂತೆ ಮತ್ತು ಸ್ನೇಹ ಹಸ್ತ ಚಾಚಲು ವಿವಾಹಗಳು ಒಂದು ರೀತಿಯ ಆಯುಧಗಳಾಗಿದ್ದುವು. ಪುರಾಣ-ಪುಣ್ಯಕಥೆಗಲ್ಲಿಯೂ ಅನೇಕ ಮರು ವಿವಾಹಗಳು ಕಂಡುಬಂದರೂ, ಸ್ತ್ರೀ ಮರು ವಿವಾಹ ಸಂದರ್ಭಗಳು ಅತಿ ವಿರಳ. ಮಲತಾಯಿ ಹಿಂಸಿಸಿದಳು ಎನ್ನುವುದು ಕೇಳಿ ಬರುತ್ತದೆಯೇ ವಿನಃ ಮಲ ತಂದೆ ಹಿಂಸಿಸಿದ ಎನ್ನುವುದು ಕಾಣದು. ಈಗಲೂ ಕೆಲವು ಬುಡಕಟ್ಟು ಜನಾಂಗಗಳಲ್ಲಿ ಬಹುಪತಿತ್ವ (ಒಂದೇ ಹೆಣ್ಣು ಒಂದಕ್ಕಿಂತ ಹೆಚ್ಚು ಗಂಡುಗಳನ್ನು ಮದುವೆಯಾಗುವುದು, ಸಾಮಾನ್ಯವಾಗಿ ಅಣ್ಣ-ತಮ್ಮಂದಿರು) ಮತ್ತು ಚಿಕ್ಕ ವಯಸ್ಸಿನಲ್ಲಿ ಅಣ್ಣ ಸತ್ತ ಮೇಲೆ ಅತ್ತಿಗೆಯನ್ನು ತಮ್ಮ ಮದುವೆಯಾಗುವುದೂ ಉಂಟೆಂದು ಕೇಳಿಬರುತ್ತದೆ. 

ಎರಡನೆಯ ಮದುವೆಯಲ್ಲಿ ಕಾಶಿಯಾತ್ರೆ ಇಲ್ಲ ಎನ್ನುವುದು ಬಹಳ ಆಶ್ಚರ್ಯಕ್ಕೆ ಎಡೆ ಮಾಡಿಕೊಟ್ಟಿದೆ. ಸ್ನಾತಕನು ಕಾಶೀಯಾತ್ರೆಗೆ ಹೋಗುವಾಗ ಮದುವೆ ಆಗುವುದು ಸರಿ. ಒಮ್ಮೆ ಮದುವೆ ಆದಮೇಲೆ ಅವನು ಸ್ನಾತಕನಲ್ಲ. ವಿಧುರ. ಆದ್ದರಿಂದ ಮತ್ತೆ ಕಾಶಿಯಾತ್ರೆ ಇಲ್ಲ. ಅಷ್ಟೇ ಅಲ್ಲ. ಸಾಮಾನ್ಯವಾಗಿ ಇಂತಹ ವಿವಾಹಗಳಲ್ಲಿ ಮೊದಲ ಮದುವೆಯ ಆಡಂಬರ, ಸಂಭ್ರಮ, ಉತ್ಸಾಹಗಳೂ ಇರುವುದಿಲ್ಲ. ಹಿಂದೆಲ್ಲ ಎರಡನೇ ಮದುವೆಗೆ ಸಾಮಾನ್ಯವಾಗಿ ಬಡ ಹೆಣ್ಣುಮಕ್ಕಳು ಅಥವಾ ಮದುವೆ ವಯಸ್ಸು ದಾಟಿದ/ದಾಟುತ್ತಿರುವ (ಸಮಾಜದ ದೃಷ್ಟಿಯಲ್ಲಿ) ಹೆಣ್ಣುಮಕ್ಕಳು ಸಿಕ್ಕಿ ಬೀಳುತ್ತಿದ್ದರು. ಈಗ ಹಾಗೆ ಹೇಳುವಂತಿಲ್ಲ. ಪರಸ್ಪರ ಒಪ್ಪಿ ಇಂತಹ ವಿವಾಹ ನಡೆಯುವುದು ನಾವು ಕಾಣಬಹುದು. 

ಇಂದಿನ ಸಮಾಜದಲ್ಲಿ ವಿವಾಹದಿಂದ ವಿಚ್ಛೇದನ ಪಡೆದ ಗಂಡು ಹೆಣ್ಣುಗಳು ಮದುವೆ ಆಗುವುದು ನೋಡಬಹುದು. ಹಿಂದೆಲ್ಲ ವಿಚ್ಛೇದನ ಅನ್ನುವುದು ಅಷ್ಟಾಗಿ ಇರಲಿಲ್ಲ. ಸಮಾಜ ಬದಲಾದಂತೆ ಹಾಗೂ ಲಿಖಿತ ಕಾನೂನಿನಂತೆ ನಡೆಯುವ ಮದುವೆಗಳು ಎಲ್ಲ ರೀತಿಯ ಗಂಡು ಹೆಣ್ಣುಗಳಿಗೂ ಅನ್ವಯ. ಇವೆಲ್ಲವೂ ಕಾನೂನಿನ ಚೌಕಟ್ಟಿನಲ್ಲಿ ನಡೆಯುವುವು. ಈಗ ಗಂಡು ಮೊದಲ ಮದುವೆಯವನಿರಬಹುದು, ಎರಡನೆಯ ಅಥವಾ ನಂತರದವನಿರಬಹುದು ಅಥವಾ ವಿಧುರನೂ. ವಿಚ್ಛೇದಿತನೂ ಇರಬಹುದು. ಹಾಗೆಯೇ ಸ್ತ್ರೀಸಹ ಮೊದಲ, ನಂತರದ, ವಿಧವೆ ಅಥವಾ ವಿಚ್ಛೇದಿತೆ ಇರಬಹುದು. ಒಟ್ಟಿನಲ್ಲಿ ಕಾನೂನಿನ ಪ್ರಕಾರ ಪ್ರಾಪ್ತ ವಯಸ್ಕರಿರಬೇಕು ಮತ್ತು ಇನ್ಯಾವುದೇ ವಿವಾಹಕ್ಕೆ ಅಡ್ಡ ಬರುವ (ಕಾನೂನಿನಂತೆ) ಕಾರಣಗಳಿರಬಾರದು. ಅಷ್ಟೇ. ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ವಿಷಮ ವಿವಾಹಗಳು ನಡೆಯುವುದು ಕಾಣಬರುತ್ತಿದೆ. 

ಈಗಿನ ಮೀಡಿಯಾದಲ್ಲಿ ಆಗಿಂದಾಗ್ಗೆ ಕೆಲವು ರೋಚಕ ಪ್ರಕರಣಗಳು ವರದಿ ಆಗುವುದನ್ನು ನೋಡುತ್ತೇವೆ. "ಮೂರನೆಯ ಹೆಂಡತಿಯ ಎರಡನೇ ಗಂಡನ ಮೊದಲ ಮಗಳನ್ನು ಮೊದಲ ಗಂಡನ ಎರಡನೇ ಹೆಂಡತಿಯ ಮೂರನೆಯ ಮಗನು ಕೊಲೆ ಮಾಡಿದ" ಎಂದು ವಿವರಿಸುವಾಗ ಏನೂ ಅರ್ಥವಾಗುವುದಿಲ್ಲ. ಹಾಗೆ ಅರ್ಥ ಆಗಲಿಲ್ಲ ಎಂದು ವ್ಯಥೆ ಪಡಬೇಕಾದುದೂ ಇಲ್ಲ. 

*****

ಇಂದಿನ ಪ್ರಪಂಚದಲ್ಲಿ ನಡೆಯುವ ವಿವಾಹಗಳನ್ನು ಹಿಂದಿನ ಕಾಲದ ಭೂತಗನ್ನಡಿಯಲ್ಲಿ ನೋಡುವುದು ಅರ್ಥವಿಲ್ಲದ ಮಾತು. (ಇಬ್ಬರು ಗಂಡಸರು ಅಥವಾ ಇಬ್ಬರು ಹೆಂಗಸರು ಪರಸ್ಪರ ಮದುವೆಯಾಗುವುದೂ ಈಗ ಉಂಟು, ತನ್ನನ್ನು ತಾನೇ ಮದುವೆ ಆದ ಪ್ರಕರಣವೂ ನಡೆದಿದೆ. ಕುಬ್ರಾ ಆಯುಕುಟ್ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ,)  ಒಟ್ಟಿನಲ್ಲಿ ಜೊತೆಯಲ್ಲಿ ಬಾಳು ಸಾಗಿಸಲು ಸೇರುವ ಇಬ್ಬರು ತಮ್ಮ ಹಿಂದಿನ ಬಾಳಿನಲ್ಲಿ ನಡೆದ ಘಟನೆಗಳನ್ನು ಪಕ್ಕಕ್ಕಿಟ್ಟು, ಪರಸ್ಪರ ಪ್ರೀತಿ-ಗೌರವಗಳಿಂದ ಬಾಳಿದರೆ ಮದುವೆಯ ಒಟ್ಟಾರೆ ಉದ್ದೇಶ ಈಡೇರಿದಂತೆ ಆಗಿ ಇಹದಲ್ಲಾದರೂ ಸುಖ ಸಿಗಬಹುದು. ಪರದ (ಪರಲೋಕದ) ವಿಚಾರ ಅಲ್ಲಿ ಹೋದ ಮೇಲೆ ವಿರಾಮವಾಗಿ ಯೋಚಿಸಬಹುದು. 

Sunday, March 9, 2025

ಬ್ರಹ್ಮಚಾರಿ, ಗೃಹಸ್ಥ ಮತ್ತು ಸನ್ಯಾಸಿ


ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡಲು ಮಳೆಯ ಬರುವಿಕೆಯನ್ನು ಖಚಿತವಾಗಿ ತಿಳಿಯಲು ವಾದ್ಯಾರ್ ಬಳಿ ಬಂದ ರೈತ ಪ್ರತಿನಿಧಿ ಮತ್ತು ವಾದ್ಯಾರ್ ಅವರ ಸಂಭಾಷಣೆ ಉಳ್ಳ ವಿಷಯಗಳನ್ನು "ಶ್ರದ್ದೆ ಮತ್ತು ನಂಬಿಕೆ" ಎಂಬ ಶೀರ್ಷಿಕೆಯ ಹಿಂದಿನ ಸಂಚಿಕೆಯಲ್ಲಿ ನೋಡಿದೆವು. ಮಳೆಯ ಬರುವಿಕೆಯ ದಿನವನ್ನು ವಾದ್ಯಾರ್ ಹೇಳಿದಾಗ ಅನುಮಾನಿಸಿದ ರೈತ, ಕೋಪದಿಂದ ತಮ್ಮ ಜನಿವಾರವನ್ನು ತೋರಿಸಿ ವಾದ್ಯಾರ್ "ಇದೇನು ನೀರು ಸೇದುವ ಹಗ್ಗ ಎಂದು ತಿಳಿದೆಯಾ?" ಎಂದು ಕೇಳಿದ ಪ್ರಸಂಗವನ್ನು ಅಲ್ಲಿ ಕಂಡೆವು. ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಇದನ್ನು ಓದಿದ ಕೆಲ ಯುವ ಮಿತ್ರರು "ಜನಿವಾರಕ್ಕೂ ಮತ್ತು ನೀರು ಸೇದುವ ಹಗ್ಗಕ್ಕೂ ಸಂಬಂಧ ಕಲ್ಪಿಸುವುದು ಎಷ್ಟು ಸರಿ?" ಎಂದು ಸಂದೇಹ ವ್ಯಕ್ತ ಪಡಿಸಿದ್ದಾರೆ. ಈ ಸಂದೇಹ ನಿವಾರಣೆಗೆ ಸ್ವಲ್ಪ ಪ್ರಯತ್ನಿಸೋಣ. ಇವೆರಡರ ಸಂಬಂಧ ಸ್ವಲ್ಪ ಉತ್ಪ್ರೇಕ್ಷೆ ಅನ್ನುವುದರಲ್ಲಿ ಸಂದೇಹವಿಲ್ಲ. ಪರಸ್ಪರ ಸಂಭಾಷಣೆಯಲ್ಲಿ ಇಂತಹ ಉತ್ಪ್ರೇಕ್ಷೆಗೆ ಎಂದೂ ಅವಕಾಶ ಉಂಟು. ಆದರೆ ಈ ವಿಷಯವನ್ನು ಸರಿಯಾದ ಹಿನ್ನೆಲೆಯಲ್ಲಿ ತಿಳಿಯಬೇಕಾದರೆ ಅನಿವಾರ್ಯವಾಗಿ ಜನಿವಾರದ ಬಗ್ಗೆ ಕೆಲವು ಮೂಲ ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. 
*****

ಈಗಿನ ಕಾಲದಂತೆ ಹಿಂದೆ ಜನಿವಾರಗಳನ್ನು ಅಂಗಡಿಗಳಲ್ಲಿ ಮಾರಾಟ ಮಾಡುತ್ತಿರಲಿಲ್ಲ. ಉಪಯೋಗಿಸುವ ಜನರು ಅವನ್ನು ಕೊಳ್ಳುತ್ತಲೂ ಇರಲಿಲ್ಲ. ಸಣ್ಣ ಊರುಗಳಲ್ಲಿ ಅಂಗಡಿಗಳೂ ಇರಲಿಲ್ಲ. ಮನೆಗೆ ಯಾರಾದರೂ ಬಂದರೆ, ವಿಶೇಷವಾಗಿ ಶ್ರಾದ್ಧಾದಿ ಕಾರ್ಯಕ್ರಮಗಳಲ್ಲಿ, ಅಂತಹ ಅತಿಥಿಗಳಿಗೆ ಆತಿಥೇಯರೇ ಜನಿವಾರಗಳನ್ನು ಕೊಡುತ್ತಿದ್ದರು. ಪ್ರವಾಸ ಅಥವಾ ಪರಸ್ಥಳಗಳಿಗೆ ಹೋಗುವಾಗ ತಮ್ಮ ವಿಭೂತಿ, ಗೋಪಿಚಂದನ ಅಥವಾ ನಾಮದ ಪೆಟ್ಟಿಗೆಗಳಲ್ಲಿ ಒಂದೆರಡು ಜನಿವಾರಗಳನ್ನೂ ತೆಗೆದುಕೊಂಡು ಹೋಗುತ್ತಿದ್ದರು. 

ಹೆಣ್ಣು ಮಕ್ಕಳು ಹತ್ತಿಯಿಂದ ಸಂಜೆಯ ಹೊತ್ತು ದೀಪದ ಬತ್ತಿ, ಮಂಗಳಾರತಿ ಬತ್ತಿ ಮತ್ತು ಗೆಜ್ಜೆ-ವಸ್ತ್ರಗಳನ್ನು ಮಾಡಿಕೊಳ್ಳುತ್ತಿದ್ದರು. ಅದರಂತೆ ಗಂಡಸರು ತಕಲಿಗಳನ್ನು ಇಟ್ಟುಕೊಂಡು ಹತ್ತಿಯಿಂದ ತಾವೇ ನೂಲು ದಾರಗಳನ್ನು ತೆಗೆಯುತ್ತಿದ್ದರು. ಬಾಲ್ಯದಲ್ಲಿ ನಾವೂ ಈ ರೀತಿ ಮಾಡಿದ್ದೇವೆ. ಈಗ ತಕಲಿಗಳನ್ನು ನೋಡಬೇಕಾದರೆ ಮ್ಯೂಸಿಯಂಗಳಿಗೆ ಹೋಗಬೇಕಷ್ಟೆ! ಸ್ವಾತಂತ್ರ್ಯ ಚಳುವಳಿಗಳ ಕಾಲದಲ್ಲಿ ಮನೆ ಮನೆಗಳಲ್ಲಿ ಚರಕಗಳು ಇರುತ್ತಿದ್ದವು. ನೂಲು ತೆಗೆದು ಬಟ್ಟೆ ನೇಯುವುದು ಕೆಲವರ ಕಸಬು ಮತ್ತು ಜೀವನೋಪಾಯ ಆಗಿತ್ತು. ತಕಲಿಗಳಿಂದ ನೂತ ದಾರದಿಂದ ಮನೆಗಳಿಲ್ಲಿಯೇ ಜನಿವಾರ ಮಾಡಿಕೊಳ್ಳುತ್ತಿದ್ದರು. 

ಒಂದು ಜನಿವಾರಕ್ಕೆ ಇಷ್ಟು ಉದ್ದದ ದಾರ ಇರಬೇಕು ಎಂದು ನಿಯಮಗಳಿದ್ದವು. (144 ಮೊಳ ಉದ್ದ ಎಂದು ನೆನಪು). ತಕಲಿಯ ದಾರ ಆದ್ದರಿಂದ ಮತ್ತು ಇಷ್ಟು ಉದ್ದದ ದಾರ ಆದದ್ದರಿಂದ ಅವು ದಪ್ಪ ಇರುತ್ತಿದ್ದವು. ಈ ರೀತಿ ತಯಾರಿಸಿದ ದಾರವನ್ನು ಮತ್ತೆ ಹುರಿ ಮಾಡಿ ಮೂರು ಎಳೆ ಮಾಡಿ ಒಂದು ಜನಿವಾರ ಮಾಡುತ್ತಿದ್ದರು. ಆಗ ಮೂರು ಎಳೆ ಸೇರುವಕಡೆ ಗಂಟು ಹಾಕಿ ಅದನ್ನು "ಬ್ರಹ್ಮಗಂಟು" ಎಂದು ಕರೆಯುತ್ತಿದ್ದರು. ಹೀಗೆ ಮೂರು ಎಳೆ ಮಾಡಿ ಒಂದು ಗಂಟು ಹಾಕಿ ತಯಾರಿಸಿದ ಜನಿವಾರ. "ಒಂಟಿ ಜನಿವಾರ". ಎರಡು ಒಂಟಿ ಜನಿವಾರ ಜೋಡಿಸಿ ಸುತ್ತಿ "ಜೋಡಿ ಜನಿವಾರ" ಮಾಡಿ ಇಡುತ್ತಿದ್ದರು. ಈಗ ಅಂಗಡಿಗಳಲ್ಲಿ ಸಿಗುವ ಜನಿವಾರಗಳನ್ನೂ ಈ ರೀತಿ ಜೋಡಿ ಮಾಡಿ ಇಟ್ಟಿರುತ್ತಾರೆ. 

*****

ಮುಂಜಿ (ಉಪನಯನ) ಮಾಡುವ ಪದ್ಧತಿ ಇರುವ ಕುಟುಂಬಗಳಲ್ಲಿ ಬಾಲಕರಿಗೆ ಏಳು ವರುಷಗಳು ಆಗಿರುವಾಗ ಮುಂಜಿ ಮಾಡುತ್ತಿದ್ದರು. "ಗರ್ಭಾಷ್ಟಮ" ಎನ್ನುವುದು ಮುಂಜಿ ಮಾಡುವುದಕ್ಕೆ ಸರಿಯಾದ ವಯಸ್ಸು ಎಂದು ಹೇಳುತ್ತಿದ್ದರು. ಗರ್ಭಾಷ್ಟಮ ಎಂದರೆ ತಾಯಿಯ ಗರ್ಭದಲ್ಲಿ ಇದ್ದ ಸಮಯವನ್ನೂ ಲೆಕ್ಕ ಹಿಡಿದು ಎಂಟನೆಯ ವರುಷ ಎಂದು ನಂಬಿಕೆ. ಅಂದರೆ, ಏಳು ವರುಷಗಳು ತುಂಬಿದ ನಂತರದಲ್ಲಿ. ಈ ಸಂಸ್ಕಾರ ಮಾಡುವಾಗ ಬಾಲಕನನ್ನು ವಟು ಎಂದು ಕರೆಯುತ್ತಾರೆ. ವಟುವಿಗೆ ಸೊಂಟದಲ್ಲಿ ದರ್ಭೆಯ ಹುಲ್ಲಿನಲ್ಲಿ ಒಂದು ಹಗ್ಗದ ರೀತಿ ಮಾಡಿ ಕಟ್ಟುತ್ತಾರೆ, ಅದಕ್ಕೆ "ಮೌ೦ಜಿ" ಅನ್ನುತ್ತಾರೆ. ಅದರಿಂದ "ಮುಂಜಿ ಮಾಡುವುದು" ಎಂದು ಬಂದಿದೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ವಟುವಿನ ತಂದೆ, ತಂದೆ ಇಲ್ಲದಿದ್ದ ಪಕ್ಷದಲ್ಲಿ  ಇನ್ನು ಯಾರಾದರೂ ಹಿರಿಯರು, ಮಂತ್ರೋಪದೇಶ ಮಾಡುತ್ತಾರೆ. 

ಈ ಕಾರ್ಯಕ್ರಮದ ಸಂದರ್ಭದಲ್ಲಿ ಆ ವಟುವಿಗೆ "ಒಂಟಿ" ಜನಿವಾರ ಹಾಕುತ್ತಾರೆ. ಅಂದಿನಿಂದ ಅವನು ಬ್ರಹ್ಮಚಾರಿಯಾಗಿ ಅವನ ವಿದ್ಯಾಭ್ಯಾಸ ಪ್ರಾರಂಭ ಮಾಡುತ್ತಿದ್ದರು. ಗುರುಕುಲಗಳು ಇದ್ದ ಕಾಲದಲ್ಲಿ ವಿದ್ಯಾಭ್ಯಾಸಕ್ಕೆ ಗುರುಕುಲಗಳಿಗೆ ಕಳುಹಿಸುತ್ತಿದ್ದರು. ಗುರುಕುಲಗಳಲ್ಲಿ ಸಾಮಾನ್ಯವಾಗಿ ಹನ್ನೆರಡು ವರುಷ ವಿದ್ಯಾಭ್ಯಾಸ ನಡೆಯುತ್ತಿತ್ತು. ಈ ರೀತಿ ವಿದ್ಯಾಭ್ಯಾಸ ಮುಗಿದ ನಂತರ "ಸಮಾವರ್ತನ" ಎನ್ನುವ ಸಂಸ್ಕಾರ ಮಾಡುತ್ತಿದ್ದರು. ಇದು ಈಗಿನ "ಪದವಿ ಪ್ರದಾನ ಸಮಾರಂಭ" ಅಥವಾ "ಕಾನ್ವೊಕೇಶನ್" ಇದ್ದಂತೆ. ಅಲ್ಲಿಗೆ ವಿದ್ಯಾಭ್ಯಾಸ ಮುಗಿದು ಗೃಹಸ್ಥಾಶ್ರಮ ಪಡೆಯಲು ಯೋಗ್ಯನಾದ ಎಂದು. ಈ ಸಮಾವರ್ತನ ಹೋಮ ಮಾಡಿದ ಸಂದರ್ಭದಲ್ಲಿ ಎರಡನೆಯ ಜನಿವಾರ ತೊಡಿಸುತ್ತಿದ್ದರು. ಬ್ರಹ್ಮಚಾರಿಯ ಒಂಟಿ ಜನಿವಾರ ದಾಟಿ ಈಗ ಗೃಹಸ್ಥಾಶ್ರಮದ ಎರಡು ಜನಿವಾರಗಳು ಬಂದಂತಾಯಿತು. 

ಇಂತಹ ಸ್ನಾತಕನು ಮುಂದಿನ ತಿಳುವಳಿಕೆಗಾಗಿ ಆಗ ಬಹುದೊಡ್ಡ ವಿದ್ಯಾಕೇಂದ್ರವಾಗಿದ್ದ ಕಾಶಿ ಕ್ಷೇತ್ರಕ್ಕೆ ಹೋರಡುತ್ತಿದ್ದನು. ಮಾರ್ಗಮಧ್ಯದಲ್ಲಿ ಯಾರಾದರೂ ಗೃಹಸ್ಥರು ಅವನಿಗೆ ತಮ್ಮ ಮಗಳನ್ನು ಕೊಟ್ಟು ಮಾಡುವೆ ಮಾಡುತ್ತಿದ್ದರು. ಇದೇ ಈಗಿನ ಮದುವೆಗಳಲ್ಲಿ "ಕಾಶಿಯಾತ್ರೆ" ಶಾಸ್ತ್ರವಾಗಿ ಉಳಿದಿದೆ. (ಇದೇ ಕಾರಣಕ್ಕೆ, ಗಂಡಿಗೆ ಎರಡನೇ ಮದುವೆ ಮಾಡುವ ಸಂದರ್ಭ ಬಂದರೆ ಆಗ ಕಾಶಿಯಾತ್ರೆ ಇರುವುದಿಲ್ಲ.)  ವಿವಾಹದ ನಂತರ ಗೃಹಸ್ಥನಾಗಿ ಇರುವವರೆಗೂ ಜೋಡಿ ಜನಿವಾರ ಹಾಕಿಕೊಳ್ಳುವುದು ರೀತಿ. 

ಯಾವುದೇ ಪೂಜೆ-ಪುನಸ್ಕಾರಾದಿ ಕೆಲಸಗಳು ಮಾಡುವುದಕ್ಕೆ ಉಟ್ಟಿರುವ ಧೋತ್ರದ (ಪಂಚೆಯ) ಜೊತೆಗೆ ಒಂದು ವಸ್ತ್ರ ಹೊದ್ದಿರಲೇ ಬೇಕು (ಉತ್ತರೀಯ) ಎಂದು ನಿಯಮ. (ಶವ ಸಂಸ್ಕಾರ ಮಾಡುವ ಕಾಲದಲ್ಲಿ ಅಂಚು (ಬಾರ್ಡರ್) ಇಲ್ಲದ ಹೊಸ ಒಂಟಿ ಬಟ್ಟೆ ಉಟ್ಟುಕೊಂಡು ಮಾಡುತ್ತಾರೆ. ಅವಾಗ ಮಾತ್ರ ಮೈಮೇಲೆ ಹೊದ್ದುಕೊಳ್ಳುವುದಿಲ್ಲ. ಇದು "ಸಪಿಂಡೀಕರಣ" ಮಾಡುವವರೆಗೆ. ಇದೇ ಕಾರಣಕ್ಕೆ  ಅಂಚು ಇಲ್ಲದ ಬಟ್ಟೆಗಳನ್ನು ಬೇರೆ ಸಂದರ್ಭಗಳಲ್ಲಿ ಉಪಯೋಗಿಸುವುದಿಲ್ಲ. ಯಾರಿಗಾದರೂ ಬಟ್ಟೆಗಳನ್ನು ಕೊಡಬೇಕಾದರೆ ಜೊತೆ ಬಟ್ಟೆ ಕೊಡಬೇಕು, ಒಂಟಿ ಕೊಡಬಾರದು ಎನ್ನುವುದು, ಅದಲ್ಲದೆ ಹೊಸ ಬಟ್ಟೆಗೆ ಅಂಚಿನಲ್ಲಿ ಅರಿಸಿನ ಹಚ್ಚುವುದು ಇವೇ ಕಾರಣಕ್ಕೆ). ವಯಸ್ಸಾದ ಕಾಲದಲ್ಲಿ ತುಂಬಾ ಹಿರಿಯರಾದವರಿಗೆ ಕೆಲವು ವೇಳೆ ಜಾರಿಹೋದ ಬಟ್ಟೆಗಳನ್ನು ಮತ್ತೆ ಮತ್ತೆ ಹಾಕಿಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ ಅಂತಹ ಹಿರಿಯರು ಉತ್ತರೀಯರದಂತೆ ಇರಲಿ ಎಂದು (ಉತ್ತರೀಯಾರ್ಥೇ ತೃತೀಯ ಯಗ್ನೋಪವೀತಂ) ಎಂದು ಮೂರನೆಯ ಜನಿವಾರ ಧರಿಸುತ್ತಾರೆ. ಅಂದರೆ ಮೂರು ಒಂಟಿ ಜನಿವಾರಗಳು. ಸಾಮಾನ್ಯವಾಗಿ ಎಪ್ಪತ್ತು ವರುಷ ದಾಟಿದ ಹಿರಿಯರು ಹೀಗೆ ಮೂರನೆಯ ಜನಿವಾರ ಧರಿಸುತ್ತಾರೆ. 

ಸನ್ಯಾಸ ಸ್ವೀಕಾರ ಮಾಡುವ ಮುನ್ನ ತನಗೆ ತಾನೇ ಶ್ರಾದ್ಧ ಮಾಡಿಕೊಂಡು (ಆತ್ಮಶ್ರಾದ್ಧ ಅನ್ನುತ್ತಾರೆ) ಶಿಖೆ (ತಲೆಯಲ್ಲಿ ಬಿಟ್ಟುಕೊಂಡಿರುವ ಜುಟ್ಟು) ಮತ್ತು ಜನಿವಾರ ವಿಸರ್ಜಿಸುತ್ತಾರೆ (ತೆಗೆದು ಹಾಕುತ್ತಾರೆ). ಅಲ್ಲಿಂದ ಮುಂದೆ ಅವರು ಜನಿವಾರ ಧರಿಸುವುದಿಲ್ಲ. ಆದ್ದರಿಂದ ಸನ್ಯಾಸಿಗಳಿಗೆ ಜುಟ್ಟು-ಜನಿವಾರ ಇಲ್ಲ ಅನ್ನುವುದು. 

ಹೀಗೆ ಬ್ರಹ್ಮಚಾರಿಗಳಿಗೆ ಒಂಟಿ ಜನಿವಾರ, ಗೃಹಸ್ಥರಿಗೆ ಎರಡು ಒಂಟಿ (ಅಥವಾ ಒಂದು ಜೊತೆ) ಜನಿವಾರ, ಮತ್ತು ಹಿರಿಯರಿಗೆ ಮೂರು ಒಂಟಿ ಜನಿವಾರ (ಉತ್ತರೀಯವಾಅಗಿ ಮೂರನೆಯದು) ಧರಿಸುವ ಸಂಪ್ರದಾಯ.
*****

ಮೇಲೆ ವಿವರಿಸಿದಂತೆ ತಕಲಿಯಲ್ಲಿ ತೆಗೆದ ನೂಲಿನಿಂದ ಮತ್ತು ನಿಯಮದಂತೆ ಉದ್ದವಾದ ದಾರವನ್ನು ಹುರಿ ಮಾಡಿ ಮಾಡಿದ ಜನಿವಾರ ದಪ್ಪಗಿರುತ್ತದೆ. ಇಂತಹ ಮೂರು ಜನಿವಾರಗಳು ಸೇರಿದರೆ ಅದು ಮತ್ತಷ್ಟು ದಪ್ಪಗೂ ಕಾಣುತ್ತದೆ. ಆದ ಕಾರಣ ವಾದ್ಯಾರ್ "ಇದು ನೀರು ಸೇದುವ ಹಗ್ಗ ಎಂದು ತಿಳಿದೆಯಾ?" ಎಂದು ಕೇಳಿದ್ದು. ತಿರುಪತಿ, ಮೇಲುಕೋಟೆ ಇತ್ಯಾದಿ ಕ್ಷೇತ್ರಗಳಲ್ಲಿ ನಡೆಯುವ ಉತ್ಸವದ ವಿಡಿಯೋ ನೋಡಿದರೆ ಅಲ್ಲಿ ಕಾಣುವ ಅರ್ಚಕರ ಜನಿವಾರಗಳನ್ನು ಗಮನಿಸಿದರೆ ಇದು ಇನ್ನೂ ವಿಶದವಾಗಿ ಗೊತ್ತಾಗಬಹುದು! 

ಈಗಿನ ಸಮಾಜದಲ್ಲಿ ಮುಂಜಿ, ಸಮಾವರ್ತನ ಕಾರ್ಯಗಳಿಗೆ ಹೆಚ್ಚು ಮಹತ್ವವಿಲ್ಲ. ಅನೇಕ ವೇಳೆ ನಲವತ್ತು ವಯಸ್ಸಿನ ಹತ್ತಿರದ ಹುಡುಗನಿಗೆ ಮದುವೆಯ ಹಿಂದಿನ ದಿನ ಮುಂಜಿ, ಮದುವೆಯ ದಿನ ಸಮಾವರ್ತನ ಹೋಮ, ಅದಾದ ಕಾಲು ಗಂಟೆಯಲ್ಲಿ ಕಾಶಿಯಾತ್ರೆ, ಅರ್ಧ ಗಂಟೆಯಲ್ಲಿ ವಿವಾಹ ನಡೆಯುವುದು ಸಾಮಾನ್ಯ. ಬಟ್ಟೆಗಳನ್ನು ಕೊಳ್ಳುವ, ಕೊಡುವ, ತೊಡುವ ರೀತಿಗಳೂ ಬದಲಾಗಿವೆ. ಕಾಲ ಕಾಲಕ್ಕೆ ಸಮಾಜ ಬದಲಾವಣೆ ಆಗುವುದಕ್ಕೆ ಇದು ಒಂದು ಉದಾಹರಣೆ. 

Friday, March 7, 2025

ಶ್ರದ್ದೆ ಮತ್ತು ನಂಬಿಕೆ


ಹವಾಮಾನ ಮುನ್ಸೂಚನೆ ಕೊಡುವ ವಿಷಯದಲ್ಲಿ ಇಂದು ಬಹಳ ಪ್ರಗತಿ ಸಾಧಿಸಲಾಗಿದೆ. ಚಂಡಮಾರುತಗಳ ಉಗಮ, ಅವು ಮುಂದುವರೆಯುವ ಮಾರ್ಗ, ಮಹಾಸಾಗರಗಳ ಮಧ್ಯದಲ್ಲಿ ಮೈತಳೆದ ಅವು ಯಾವಾಗ ಸಮುದ್ರ ತೀರವನ್ನು ದಾಟಿ ಭೂಪ್ರವೇಶ ಮಾಡುತ್ತವೆ, ಅವುಗಳ ತೀವ್ರತೆ ಎಷ್ಟು, ಅವುಗಳ ಜೊತೆ ಬರುವ ಗಾಳಿಗಳ ವೇಗವೇನು, ಇನ್ನೂ ಮುಂತಾದ ವಿವರಗಳನ್ನು ಎಷ್ಟೋ ದಿನ ಮುಂಚೆ ಕೊಡುವಷ್ಟರ ಮಟ್ಟಿಗೆ ಮುನ್ಸೂಚನೆ ನೀಡಲು ಇಂದು ಸಾಧ್ಯವಾಗಿದೆ. ಮಧ್ಯಾಹ್ನ ಎರಡು ಗಂಟೆಗೆ ಹಿಮಪಾತ ಪ್ರಾರಂಭವಾಗುತ್ತದೆ ಎಂದು ಸೂಚನೆ ಕೊಟ್ಟರೆ ಸರಿಯಾಗಿ ಎರಡು ಗಂಟೆಗೆ ಹಿಮ ಬೀಳಲು ಪ್ರಾಂಭವಾಗುವದನ್ನು ನೋಡಬಹುದು. ನಾಗರಿಕ ವಿಮಾನಯಾನದಲ್ಲಿ ಚಾಲನೆಯ ಹೊಣೆ ಹೊತ್ತವರಿಗೆ ವಿಮಾನ ಸಾಗಬೇಕಾದ ದಾರಿ ನಿಖರವವಾಗಿ ತಿಳಿಸುವ ವ್ಯವಸ್ಥೆಗಳಿವೆ. 

ಐವತ್ತು ವರುಷಗಳ ಹಿಂದೆ ಹವಾಮಾನ ಇಲಾಖೆಯ ಮುನ್ಸೂಚನೆಗಳು ಆಕಾಶವಾಣಿಯಲ್ಲಿ (ಆಲ್ ಇಂಡಿಯಾ ರೇಡಿಯೋ) ಬಂದರೆ ಅದೊಂದು ನಗೆಪಾಟಿಲಿನ ವಿಷಯ ಆಗಿತ್ತು. ಮಳೆಗಾಲದಲ್ಲಿ ಯಾರಾದರೂ ಛತ್ರಿ ಹಿಡಿದು ಹೊರಗಡೆ ಹೋಗಲು ತಯಾರಾದರೆ "ಯಾಕೆ? ಇಂದು ಮಳೆ ಬರುತ್ತದೆ ಎಂದು ರೇಡಿಯೋದಲ್ಲಿ ಹೇಳಿದ್ದು ಕೇಳಲಿಲ್ಲವೇ? ಕೊಡೆ ಹಿಡಿದು ಹೊರಟಿದ್ದೀಯಲ್ಲ? ಖಂಡಿತ ಮಳೆ ಬರುವುದಿಲ್ಲ!" ಎಂದು ಹೇಳುತ್ತಿದ್ದ ದಿನಗಳು ಅವು. ಮಳೆ ಆಧಾರಿತ ಬೆಳೆ ತೆಗೆಯುವ ರೈತರು ಆಕಾಶ ನೋಡುತ್ತಿರುವ ಚಿತ್ರಗಳು ಸರ್ವೇಸಾಮಾನ್ಯವಾಗಿದ್ದವು. ಮೊದಲು ಹೊಲ ಉಳಲು ಮಳೆಗಾಗಿ ಕಾಯುವುದು. ನಂತರ ಬಿತ್ತನೆ ಮಾಡಲು ಕಾಯುವುದು. ಅದಾದಮೇಲೆ ತೆನೆಗಳು ಕಾಳು ತುಂಬುವ ಕಾಲದಲ್ಲಿ ಮತ್ತೆ ಮತ್ತೆ ಆಕಾಶ ನೋಡುವುದು. ಇವೆಲ್ಲವೂ ಒಂದು ರೀತಿಯ ದಿನಚರಿಯೇ ಆಗಿದ್ದವು ಆ ದಿನಗಳಲ್ಲಿ. 
*****

ಖ್ಯಾತ ಸಾಹಿತಿ ತರಾಸು. (ತ. ರಾ. ಸುಬ್ಬರಾವ್)  ಅವರ ಕಾದಂಬರಿ ಆಧಾರಿತ "ಚಂದವಳ್ಳಿಯ ತೋಟ" ಅರವತ್ತರ ದಶಕದಲ್ಲಿ ತೆರೆಕಂಡ ಒಂದು ಸದಭಿರುಚಿಯ ಚಿತ್ರ. ಹನುಮ ಎಂಬ ಪಾತ್ರದ (ರಾಜಕುಮಾರ್) ತಂದೆ ಮತ್ತು ಊರಿನ ಹಿರಿಯ ಶಿವನಂಜೇಗೌಡ ಪಾತ್ರದಲ್ಲಿ ಉದಯ ಕುಮಾರ್ ಅಭಿನಯ ಅವರಿಗೆ ಬಹಳ ಒಳ್ಳೆಯ ಹೆಸರು ತಂದಿತು. ಆ ಚಿತ್ರದಲ್ಲಿ ಮಳೆ ಕಾಣದೆ ಉರಿಬಿಸಿಲಿನಲ್ಲಿ ಇಡೀ ಹಳ್ಳಿಗಳು ಬೆಂದು ಜನ ನರಳುವ ದೃಶ್ಯಗಳಿವೆ.  ಕೋಪದ ಭರದಲ್ಲಿ ಶಿವನಂಜೇಗೌಡ ಊರ ಮುಂದಿನ ಹನುಮನ ಮೂರ್ತಿಗೆ ಅರೆದ ಮೆಣಸಿನಕಾಯಿ ಹಚ್ಚುತ್ತಾನೆ! ನಂತರ ಮಳೆ ಬಂದ ಮೇಲೆ ತಪ್ಪು ಕಾಣಿಕೆ ಕೊಟ್ಟು ಹಾಲಿನಿಂದ ಅಭಿಷೇಕ ಮಾಡಿಸುತ್ತಾನೆ. ಮಳೆಯಿಲ್ಲದೆ ಪರದಾಡುವ ಜನ ಅನುಭವಿಸುವ ದುಃಖದ ಒಂದು ಚಿತ್ರಣ ಇದು. 

ಮಳೆ ಬರುತ್ತದೆ ಎಂದು ಕಾದು ಕಾದು ಸುಣ್ಣವಾಗಿ ಕಡೆಗೆ ಹಳ್ಳಿಯ ಜನ "ಮಳೆರಾಯನ ಉತ್ಸವ" ಮಾಡುತ್ತಿದ್ದರು. ಒಂದು ಮರದ ಮಣೆಯ ಮೇಲೆ ಜೇಡಿ ಮಣ್ಣಿನಿಂದ ಮಳೆರಾಯನ ಮೂರ್ತಿಯನ್ನು ಮಾಡಿ, ಹುಡುಗನೊಬ್ಬನ ತಲೆಯ ಮೇಲೆ ಹೊರಿಸಿ, ಅವನ ಹಿಂದೆ ಸೇರಿ ಹಳ್ಳಿಯ ಮನೆ ಮನೆಗಳಿಗೆ ಹೋಗುತ್ತಿದ್ದರು. ಮನೆಗಳ ಮುಂದೆ ನಿಂತು "ಹುಯ್ಯೋ, ಹುಯ್ಯೋ, ಮಳೆರಾಯ! ಹೂವಿನ ತೋಟಕ್ಕೆ ನೀರಿಲ್ಲ", "ಹುಯ್ಯೋ, ಹುಯ್ಯೋ, ಮಳೆರಾಯ! ತೆಂಗಿನ ತೋಟಕ್ಕೆ ನೀರಿಲ್ಲ" ಮುಂತಾಗಿ ಕೂಗುತ್ತಿದ್ದರು. ಮನೆಯವರು ಒಂದು ಬಿಂದಿಗೆ ನೀರು ತಂದು ಮಳೆರಾಯನ ಮೇಲೆ ಸುರಿಸುತ್ತಿದ್ದರು. ಊರಿನ ಎಲ್ಲಾ ಮನೆಗಳ ಮುಂದೆ ಹೀಗೆ ಮಾಡಿದ ಮೇಲೆ ಊರ ಮುಂದಿನ ಅಶ್ವತ್ಥ ಕಟ್ಟೆಯಲ್ಲಿ ಅದನ್ನು ಇಟ್ಟು ಪೂಜೆ ಮಾಡುತ್ತಿದ್ದರು. "ಪರ್ಜನ್ಯ ಹೋಮ-ಜಪಗಳು" ಮುಂತಾದುವನ್ನು ನಡೆಸುತ್ತಿದ್ದರು. 

*****

ಸುಮಾರು ಎಂಭತ್ತು ವರುಷಗಳ ಹಿಂದಿನ ಮಾತು. ಈಗಿನ ಕನಕಪುರ ಆಗ "ಕಾನ ಕಾನ್ ಹಳ್ಳಿ" ಎಂದು ಕರೆಸಿಕೊಳ್ಳುತ್ತಿತ್ತು. ಆಗ ಅದು ಬೆಂಗಳೂರಿಂದ ಮೂವತ್ತೈದು ಮೈಲಿ ದೂರದ ಒಂದು ದೊಡ್ಡ ಹಳ್ಳಿ. ಅರ್ಕಾವತಿ ನದಿ ದಡದಲ್ಲಿ ಇದ್ದ ದೊಡ್ಡ ಹಳ್ಳಿಗಳಲ್ಲಿ ಅದೂ ಒಂದು. (ಈಗಿನ ರಾಮನಗರ ಆಗ "ಕ್ಲೋಸ್ ಪೇಟೆ" ಎಂದು ಕರೆಸಿಕೊಳ್ಳುತ್ತಿತ್ತು). ಸುತ್ತಮುತ್ತಲಿನ ಹಳ್ಳಿಗಳಾದ ಕಲ್ಲಹಳ್ಳಿ, ಮಳಗಾಳು, ಚೀರಣಕುಪ್ಪೆ, ಅರಳಾಳು ಮುಂತಾದ ಗ್ರಾಮಗಳ ಜನರು ವಾರಕ್ಕೊಮ್ಮೆ  ಕಾನ ಕಾನ್ ಹಳ್ಳಿಯಲ್ಲಿ ನಡೆಯುವ ಸಂತೆಗೆ ತಮ್ಮ ತರಕಾರಿ, ಬೆಲ್ಲ, ತುಪ್ಪ ಮೊದಲಾದ ಪದಾರ್ಥಗಳನ್ನು ತಂದು ಮಾರಿ, ತಮಗೆ ಬೇಕಾದ ವಸ್ತುಗಳನ್ನು ಕೊಂಡು ಹೋಗುತ್ತಿದ್ದರು. 

ಕಾನ್ ಕಾನ್ ಹಳ್ಳಿಯಲ್ಲಿ ಒಂದು ಪುರಾತನ ಕೋಟೆಯಿದೆ. ಅದರ ಅವಶೇಷಗಳನ್ನು ಈಗಲೂ ಕಾಣಬಹುದು. ಕೋಟೆಯ ಒಳಭಾಗದಲ್ಲಿ ಹಳೆಯ ಊರಿದೆ. ಕೋಟೆಯ ಹೊರಗಡೆ ಭಾಗದಲ್ಲಿ ಪೇಟೆ ಎಂದು ಹೊಸ ಊರಿದೆ. ಈಗ ಎಲ್ಲ ಬೆರೆತುಹೋಗಿದ್ದರೂ ಕೋಟೆ ಮತ್ತು ಪೇಟೆ ಎನ್ನುವ ಪದಗಳ ಬಳಕೆ ಇನ್ನೂ ಇದೆ. ಊರಿನ ಪೂರ್ವ ಭಾಗದಲ್ಲಿ ಅರ್ಕಾವತಿ ನದಿ ಹರಿಯುತ್ತದೆ. ದಕ್ಷಿಣ ಭಾಗದಲ್ಲಿ ಕೋಟೆ ಪ್ರದೇಶ. ಉತ್ತರದಲ್ಲಿ ಪೇಟೆಯ ಭಾಗ. ಕೋಟೆ ಪ್ರದೇಶದಲ್ಲಿ ಕೆಳಗಿನ ಕೋಟೆ ಮತ್ತು ಮೇಲಿನ ಕೋಟೆ ಎಂಬ ವಿಭಾಗವಿತ್ತು. ಐವತ್ತು ವರುಷಗಳ ಹಿಂದೆ ಉತ್ತರ ಭಾಗದಲ್ಲಿ ಎಕ್ಸಟೆನ್ಶನ್ ಎಂದು ಇನ್ನೊಂದು ಬಡಾವಣೆ ಆಯಿತು. ಈಗ ಇನ್ನೂ ಬೇರೆ ಬೇರೆ ಬೆಳವಣಿಗೆಗಳು ಆಗಿವೆ. 

ಆಗ ರೇಡಿಯೋ ಕೂಡ ಇರಲಿಲ್ಲ. ಸುತ್ತ ಮುತ್ತಲಿನ ಹಳ್ಳಿಯ ಜನರು ತಮಗೆ ಬೇಕಾದ ಅನೇಕ ಕೆಲಸಗಳಿಗೆ, ಸರ್ಕಾರೀ ಕಚೇರಿಗಳಿಗೆ, ಹಾಲು-ಮೊಸರು ಮುಂತಾದುವನ್ನು ಮಾರಲು ಕಾನ ಕಾನ್ ಹಳ್ಳಿಗೆ ಬರಬೇಕಾಗಿತ್ತು. ಎಲ್ಲರೂ ಕಾಲ್ನಡಿಗೆಯಲ್ಲೇ ಬಂದುಹೋಗುತ್ತಿದ್ದರು. ಎಲ್ಲೋ ಒಬ್ಬಿಬ್ಬರು ಸೈಕಲ್ ಇದ್ದವರು ದೊಡ್ಡ ಕುಳ! ರೈತಾಪಿ ಜನರು ತಮಗೆ ಪರಿಚಯವಿದ್ದ ಜೋಯಿಸರು, ಪಂಡಿತರು, ಶಾಸ್ತ್ರಿಗಳು, ವಾದ್ಯಾರ್, ಬುದ್ಯೋರು ಇವರ ಬಳಿ ಮಳೆ ಬರುವ ದಿನಗಳನ್ನು ಜ್ಯೋತಿಷ್ಯ ಕೇಳಿ ತಿಳಿದುಕೊಳ್ಳುತ್ತಿದ್ದರು. ಮಳೆಯ ನಕ್ಷತ್ರ, ಗ್ರಹಗಳ ಬಲಾಬಲ ನೋಡಿ ಅವರುಗಳು ಮಳೆ ಬರಬಹುದಾದ ದಿನಗಳನ್ನು ಹೇಳುತ್ತಿದ್ದರು. ಸಾಮಾನ್ಯವಾಗಿ ಅದರಂತೆ ರೈತರು ಉಳುಮೆ, ಬಿತ್ತನೆ ಮುಂತಾದ ವ್ಯವಸಾಯ ಸಂಬಂಧದ ಕೆಲಸಗಳನ್ನು ಮಾಡುತ್ತಿದ್ದರು.

***** 

ಇದೇ ಸಮಯದ ಘಟನೆಯ ವಿಷಯ. ಬೆಳಗಿನ ಸುಮಾರು ಹನ್ನೊಂದು ಘಂಟೆಯ ಸಮಯ. ವಾದ್ಯಾರ್ ಶ್ರೀನಿವಾಸ ದೀಕ್ಷಿತಾಚಾರ್ಯರು ಕೆಳಗಿನ ಕೋಟೆಯ ತಮ್ಮ ಮನೆಯ ಮುಂದಿನ ಜಗುಲಿಯಲ್ಲಿ ಕುಳಿತು ಯಾವುದೋ ಗ್ರಂಥವನ್ನು ನೋಡುತ್ತಿದ್ದರು. ಅವರಿದ್ದ ಮನೆಗೆ "ವಾದ್ಯಾರ್ ಮನೆ" ಎಂದೇ ಹೆಸರು. ಪರಂಪರೆಯಿಂದ ವಿಶಿಷ್ಟಾದ್ವೈತ ಸಂಪ್ರದಾಯದ ಘನ ಪಂಡಿತರ ವಂಶಾವಳಿ. ಮುಂದಿನ  ತಲೆಮಾರಿನಲ್ಲಿ ಇವರ ಮಗ "ರಾಮಾಯಣಾಚಾರ್ಯ" ಎಂದು ಎಲ್ಲರ ಪ್ರಶಂಸೆಗೆ ಪಾತ್ರರಾದ ಮಹಾ ವಿದ್ವಾಂಸ ಪ್ರೊಫೆಸರ್ ಕೆ. ಎಸ. ನಾರಾಯಣಾಚಾರ್ಯರು. ಅನೇಕ ಪ್ರವಚನಗಳನ್ನು ನೀಡಿ, ಗಾತ್ರದಲ್ಲೂ, ಸತ್ವದಲ್ಲೂ ಬಹು ದೊಡ್ಡದಾದ ಜ್ಞಾನ ಭಂಡಾರವನ್ನು ಅನೇಕ ಪುಸ್ತಕಗಳ ರೂಪದಲ್ಲಿ ಕೊಟ್ಟವರು. 

ನದಿಯ ಆಚೆ ದಡದ ಬದಿಯ ಹಳ್ಳಿಯ ರೈತನೊಬ್ಬ ವಾದ್ಯಾರ್ ಮನೆಯ ಮುಂದೆ ಬಂದು ನಿಂತ. 

"ಅಡ್ಡ ಬಿದ್ದೆ, ಸ್ವಾಮಿ"
"ಏನು ಸೀನಪ್ಪ? ಸಂತೆಗೆ ಬಂದಿದ್ಯಾ?  ಸಂತೆ ವ್ಯವಹಾರ ಆಯಿತೇನು?'
"ಸಂತೆಗೇ ಬಂದಿದ್ದೆ ಬುದ್ಧಿ. ಆದರೆ ಅದಕ್ಕಿಂತ ಹೆಚ್ಚಾಗಿ ನಿಮ್ಮನ್ನೇ ನೋಡಲು ಬಂದಿದ್ದೆ"
"ಏನು ಅಂತಹ ವಿಷಯ. ನನ್ನನ್ನು ನೋಡುವುದು?"
"ಊರಲ್ಲಿ ಎಲ್ಲ ರೈತರೂ ಹೊಲ ಉತ್ತವ್ರೆ. ಬಿತ್ತನೆ ಬೀಜ ತಯಾರು ಮಡಿಕೊಂಡು ಕುಂತವ್ರೆ"
"ಸರಿ ಮತ್ತೆ. ಬಿತ್ತನೆ ಕಾಲ ಬಂತಲ್ಲ. ಬಿತ್ತನೆ ಮಾಡೋದು ತಾನೇ?"
"ಅದೇ ಮಳೆ ವಿಷಯ ಬುದ್ದಿ. ಮಳೆ ಹೆಂಗೈತೆ? ಎಂದು ಬರತೈತೆ? ನಿಮ್ಮನ್ನು ಕೇಳೋಣ ಅಂತ"
"ತಡಿ ನೋಡೋಣ"
ವಾದ್ಯಾರ್ ಒಂದೆರಡು ನಿಮಿಷ ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿದರು. 

"ಭಾನುವಾರ ಬಿತ್ತನೆ ಮಾಡಿ. ಸೋಮವಾರ ಚೆನ್ನಾಗಿ ಮಳೆ ಬರುತ್ತದೆ"
"ಸೋಮವಾರ ಬಂದೇ ಬರುತ್ತದ, ಬುದ್ಧಿ?'
"ಹೇಳಿದಿನಲ್ಲಯ್ಯ. ಚೆನ್ನಾಗಿ ಮಳೆ ಬರುತ್ತದೆ"
"ಕಷ್ಟ ಪಟ್ಟು ದುಡ್ಡು ಹೊಂದಿಸಿ ಬಿತ್ತನೆ ಬೀಜ ತಂದೀವಿ ಸ್ವಾಮಿ"
"ಅದು ನನಗೂ ಗೊತ್ತು, ಸೀನಪ್ಪ"
"ಬಿತ್ತನೆ ಮಾಡಿದ ತಕ್ಷಣ ಮಳೆ ಬರದಿದ್ದರೆ ಬೀಜವೆಲ್ಲ ಭೂಮಿಯಲ್ಲಿ ಸುಟ್ಟು ಹೋಗುತ್ತೆ ಸ್ವಾಮಿ"
"ಅದು ನನಗೆ ಗೊತ್ತಿಲ್ಲವೇ?"
"ಅದಕ್ಕೆ ಸ್ವಾಮಿ ಭಯ. ಮಳೆ ಖಂಡಿತ ಬರುತ್ತೆ ಅಂತೀರಾ?'

ವಾದ್ಯಾರ್ ಅವರಿಗೆ ಕೋಪ ಬಂದಿರಬೇಕು. ಜನಿವಾರ ಕೈಲಿ ಹಿಡಿದರು ಕೇಳಿದರು. 
"ಏನು ಇದು, ಗೊತ್ತೇ?"
"ಜನಿವಾರ ಅಲ್ಲವೇ ಬುದ್ದಿ"
" ನೀರು ಸೇದೋ  ಹಗ್ಗ ಹೆಗಲ ಮೇಲೆ ಹಾಕಿಕೊಂಡಿದ್ದೇನೆ ಅಂದುಕೊಂಡ್ಯಾ"
"ಯಾಕೆ ಹಾಗೆ ಹೇಳ್ತೀರಿ ಸ್ವಾಮಿ?"
"ಮತ್ತೆ? ಮಳೆ ಬರಲೇಬೇಕು. ಬರದಿದ್ದರೆ ದೇವೇಂದ್ರನ ಸುಟ್ಟುಬಿಡ್ತೀನಿ!" 

ಸೀನಪ್ಪ ಇದನ್ನು ನಿರೀಕ್ಷಿಸಿರಲಿಲ್ಲ. 
"ಸ್ವಾಮಿ, ಊರಲ್ಲಿ ಎಲ್ಲರಿಗೂ ಭಾನುವಾರ ಬಿತ್ತನೆ ಮಾಡಕ್ಕೆ ಹೇಳ್ತಿನಿ. ನಿಮ್ಮನ್ನ ಮತ್ತೆ ಬಂದು ಕಾಣ್ತೀನಿ"

ಇಷ್ಟು ಹೇಳಿ ಸೀನಪ್ಪ ನಮಸ್ಕಾರ ಮಾಡಿ ಹೊರಟುಹೋದ. ಊಟ ತಯಾರಾಗಿದೆ ಎಂದು ವಾದ್ಯಾರ್ ಗೆ ಮನೆ ಒಳಗಿನಿಂದ ಸೂಚನೆ ಬಂತು. ಭೋಜನಕ್ಕೆ ಒಳಗೆ ಹೋದರು. 

ಸೋಮವಾರ ಚೆನ್ನಾಗಿಯೇ ಮಳೆ ಬಂತಂತೆ. ಆ ವರ್ಷ ಬೆಳೆ  ಚೆನ್ನಾಗಿ  ಆಯ್ತ೦ತೆ . (ಅದೊಂದು ಕಾಕತಾಳೀಯ ಅಂದವರೂ ಇದ್ದರು)

ಈ ವೃತ್ತಾಂತ ಒಬ್ಬರಿಂದ ಒಬ್ಬರಿಗೆ ಹರಡಿತಂತೆ. 

*****

ಈ ಘಟನೆ ಕಳೆದು ಕೆಲವು ವರ್ಷಗಳೇ ಕಳೆದಿದ್ದವು. ನಾನು ಕೇಳಿದಾಗ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆ. ಕೇಳಿದಾಗ ಕೆಲವು ಅನುಮಾನಗಳು ಬಂದವು. ನಮಗೆ ಮಾತಾಡಲು ಎಲ್ಲರಂತೆ ಸುಲಭವಾಗಿ ಸಿಗುತ್ತಿದ್ದುದು ತಾಯಿಯೇ. ಅಡಿಗೆ ಕೆಲಸ, ಊಟ ಮುಗಿಸಿ ಮಧ್ಯಾಹ್ನ ಅವಳು ವಿಶ್ರಾಂತಿಯಲ್ಲಿ ಇದ್ದಾಗ ಹತ್ತಿರ ಹೋದೆ.

"ಅಮ್ಮ, ಇವತ್ತು ಒಂದು ವಿಷಯ ಕೇಳಿದೆ"
"ಏನದು?"
"ವಾದ್ಯಾರ್ ಮತ್ತು ಮಳೆ ವಿಷಯ" 
"ದೇವೇಂದ್ರನ್ನ ಸುಟ್ಟುಬಿಡುತ್ತೇನೆ ಅಂತ ಹೇಳಿದ್ದು ತಾನೇ?"
" ಹೌದು. ಅದರಲ್ಲಿ ಒಂದು ಅನುಮಾನ ಬಂತು"
"ಏನು ಅನುಮಾನ?"
"ದೇವೇಂದ್ರ ದೇವತೆಗಳ ರಾಜ. ಅವನನ್ನು ಸುಟ್ಟುಬಿಡುತ್ತೇನೆ, ಅನ್ನಬಹುದೇ?"
"ವಾದ್ಯಾರ್ ಮತ್ತು ದೇವೇಂದ್ರನ ಸಂಬಂಧ ನಮಗೇನು ಗೊತ್ತು?"
"ಅಂದರೆ?"
"ಮಳೆಯ ಬಗ್ಗೆ ಪ್ರಶ್ನೆ ಕೇಳಿದವನು ಉತ್ತರ ಹೇಳಿದರೂ ಅನುಮಾನ ಪಟ್ಟ. ಆಗ ಅವರು ಏನು ಮಾಡಬೇಕು? ಮಳೆ ಬಂದರೂ ಬರಬಹುದು. ಇಲ್ಲದಿದ್ದರೂ ಇರಬಹುದು, ಎಂದು ಹೇಳಬೇಕೇ? ಅದು ಅವನಿಗೂ ಗೊತ್ತು. ಇವರೇನು ಹೇಳುವುದು? ಅವನಿಗೆ ಖಚಿತವಾಗಲಿ ಎಂದು ಅವರು ಹಾಗೆ ಹೇಳಿರಬಹುದು. ಉತ್ತರ ಹೇಳುವವರಿಗೇ ಅದರಲ್ಲಿ ನಂಬಿಕೆ ಇಲ್ಲದಿದ್ದರೆ ಪ್ರಶ್ನೆ ಕೇಳುವವರಿಗೆ ಉತ್ತರದಲ್ಲಿ ನಂಬಿಕೆ ಹೇಗೆ ಬರುತ್ತದೆ?"

"ಅವನಿಗೇನೋ ನಂಬಿಕೆ ಬಂದು ಹೊರಟುಹೋದ. ಆದರೆ ಹಾಗೆ  ಹೇಳಿದ್ದು ತಪ್ಪಲ್ಲವೇ?"
"ಅವರು ಹೇಳಿದ್ದು ತಪ್ಪು ಸರಿ ಎಂದು ತೀರ್ಮಾನಿಸಲು ನಾವು ಯಾರು? ದೊಡ್ಡವರ ವಿಷಯ ಕೆಲವು ನಮಗೆ ಅರ್ಥ ಆಗುವುದಿಲ್ಲ. ನೀನು ವಿಶ್ವಾಮಿತ್ರರ ಕಥೆ ಕೇಳಿದ್ದೀಯಲ್ಲ"
"ಯಾವುದು? ತ್ರಿಶಂಕು ಪ್ರಸಂಗವೇ?"
"ಹೌದು. ತನ್ನ ಮಾತು ಕೇಳದ್ದಕ್ಕಾಗಿ ಇನ್ನೊಂದು ಇಂದ್ರನನ್ನು, ಮತ್ತೊಂದು ಸ್ವರ್ಗವನ್ನು ಮಾಡಲು ಅವರು ಹೋಗಲಿಲ್ಲವೇ? 
"ಅದು ಸರಿ"

"ವಾದ್ಯಾರ್ ತಮ್ಮ ಉಪಾಸನೆಯಲ್ಲಿ ಶ್ರದ್ದೆ ಇದ್ದವರು. ತಮ್ಮ ಲೆಕ್ಕಾಚಾರ ಸರಿ ಎಂದು ನಂಬಿದವರು. ಅದಕ್ಕೇ ಹಾಗೆ ಹೇಳಿರಬಹುದು. ನಂತರ ಅವರ, ದೇವೇಂದ್ರನ ನಡುವೆ ಏನಾಯಿತು? ನಮಗೆ ಗೊತ್ತಿಲ್ಲ. ನಮಗೆ ಸಂಬಂಧಿಸದ ವಿಷಯದಲ್ಲಿ ನಾವು ಯಾಕೆ ತಲೆ ಕೆಡಿಸಿಕೊಳ್ಳಬೇಕ? ಈ ಪ್ರಸಂಗದಲ್ಲಿ ನಾವು ಕಲಿಯುವುದೇನು? ಅದು ನಮಗೆ ಮುಖ್ಯ."
"ಏನದು, ನಾವು ಕಲಿಯಬೇಕಾದದ್ದು?"

"ನಾವು ಮಾಡುವ ಕೆಲಸದಲ್ಲಿ ನಮಗೆ ಪೂರ್ಣ ಶ್ರದ್ದೆ ಇರಬೇಕು. ಕಾಟಾಚಾರಕ್ಕೆ,  ತೋರಿಕೆಗೆ, ಅರ್ಧ ಮನಸ್ಸಿನಲ್ಲಿ ಮಾಡುವ ಕೆಲಸಗಳು ಎಂದೂ ಪೂರ್ಣ ಫಲ ಕೊಡುವುದಿಲ್ಲ. ಅನೇಕ ವಿಷಯಗಳಲ್ಲಿ ನಂಬಿಕೆ ಮುಖ್ಯ. ಎಲ್ಲ ವಿಷಯಗಳಲ್ಲೂ ನಂಬಿಕೆ ಪ್ರಶ್ನಿಸುತ್ತ ಹೊರಟರೆ ಏನೂ ಕೆಲಸವಾಗುವುದಿಲ್ಲ. ಎಲ್ಲವನ್ನೂ, ಎಲ್ಲರನ್ನೂ ನಂಬಿದವರು ಹಾಳಾಗುವಂತೆ, ಏನನ್ನೂ, ಯಾರನ್ನೂ ನಂಬದವರೂ ಹಾಳಾಗುತ್ತಾರೆ! ಜೀವನದಲ್ಲಿ ಒಂದು ಸಮತೋಲನ ಇರಬೇಕು. ಶ್ರದ್ದೆ ಮತ್ತು ನಂಬಿಕೆ. ಇವು ಬಹಳ ಮುಖ್ಯ. ಆದರೆ ಅಂಧ ಶ್ರದ್ದೆ, ಕುರುಡು ನಂಬಿಕೆ ಕೂಡದು. "

*****

ಹಳ್ಳಿಯಲ್ಲಿ ಹುಟ್ಟಿದವಳು; ಬೆಳೆದವಳು. ಏಳನೆಯ ವಯಸ್ಸಿನಲ್ಲಿ ತಂದೆ ತೀರಿಕೊಂಡರು. ಪ್ರೈಮರಿ ನಾಲ್ಕನೇ ತರಗತಿಗೆ ವಿದ್ಯಾಭ್ಯಾಸ ಮುಗಿಯಿತು. ಹದಿನಾಲ್ಕು ವರುಷಕ್ಕೆ ಮದುವೆ. ನಂತರ ಹನ್ನೆರಡು ಮಕ್ಕಳು. ಆದರೆ ಸಂಸಾರವೇ ಅವಳ ವಿಶ್ವವಿದ್ಯಾಲಯ. 

 ಮನೆಯೆ ಮೊದಲ ಪಾಠಶಾಲೆ 
ಜನನಿ ತಾನೇ ಮೊದಲ ಗುರುವು 
ಜನನಿಯಿಂದ ಪಾಠ ಕಲಿತ ಜನರು ಧನ್ಯರು!

Monday, March 3, 2025

People Around Us


The Creator apparently believes in variety. He has filled the universe with a lot of variety. Variety in anything and everything. No two things are the same or alike. We say they are alike or similar. But on closer scrutiny it will be found that no two things are alike. It can never be. It is his will.

Is the above statement really true? Let us take the simplest of things. Leaves for example. Leaves of any particular plant or tree. There may be millions of leaves on a mango tree. There are some huge mango trees that yield more than a truck load of fruits every year. Even then, no two leaves are alike. Try your best and make an effort. If the shape is same, there is some difference in colour. If shape and colour are same, there is some spot on one which is not there in another. Even if the shape, colour and spots are the same, the spots are not in the same place. Go on trying till you get tired. At some stage you will accept that the above statement as true!
*****

Let us take fruits for another example. There are so many varieties of fruits. They come in all shapes, colours, sizes and flavours. There is a wide variety in their tastes as well. Some fruits are available allover the globe. Some are available only in some countries or continents. Some are available throughout the year, but many are seasonal. Consider the banana bunches. The number of fruits in a bunch differs from others. With great difficulty we may find two bunches with the same number of fruits. Even there, the shape of the fruits is not the same! Weights also differ, may be even in micrograms. 

Some fruits are so simple that you can directly pluck from the plants or trees and straightaway eat them. One may have to wash them for reasons of health and hygiene. That's all. Some fruits like Jack Fruit are even difficult to touch. Some can be handled in one hand and some, like watermelon, take both hands as well some extra effort to even lift them. Some others, like pineapple, need extra care while cutting them to bring them to an edible level. Fruits are indeed a very interesting part of our lives.

*****

While comparing the creative styles of various poets and their works in Sanskrit literature, the concept of "PAka" is often used. PAka means something that is cooked or more accurately, a "Syrup". Mentions are made of different types of PAka for easy understanding of the comparative styles used by different poets. The following PAka are the most commonly used ones, and in the order of relative ease of understanding the works by the reader:
  • Ksheerapaka (Milk): Reading and understanding is just like consuming milk. Easy to drink and digest. Even infants and toddlers can comfortably consume and assimilate. 
  • Drakshapaka (Grapes): Similar to the comfort of just picking and eating grapes. Easiest of styles and not much efforts are required to understand the contents of the works.
  • Sharkarapaka (Sugar): Very similar to consuming sugar syrup. Easy to understand, but a little more effort required than the earlier one (May be to avoid getting messy!)
  • Kadalipaka (Banana): Like eating a banana. Some effort is required, like peeling a banana. Even then it is relatively easier.
  • Ikshupaka (Sugarcane): Like tasting Sugarcane. Much effort is required to remove the outer covering and requires crushing with teeth, but once that it is done it is all sugary.  
  • Narikelapaka (Coconut): Toughest one to understand due to thick outer fibre, followed by the hard shell. Once these are removed, you get the sweet real coconut as well as the sweetest and purest water on earth.
*****

Poet and critic Kolachala Mallinatha Suri, usually referred as "Mallinatha", lived in the 14th-15th century period. He was a "Asthana Vidwan" of the Rachakonda Kings of Kolichelama (present Kolcharam in Medak district of Telangana) first and later during King Deva Raya of the Vijayanagar period. He was conferred with the titles of "Mahamahopadhyaya" and "Vyakhyana Chakravarty" or "Emperor among commentators". The title Vyakhyana Chakravarty was in recognition of his voluminous commentaries on various "Mahakavyas" in Sanskrit literature. 

He has discussed in his commentaries about the writing styles of major poets in their works. He has compared these works in terms of the above Paakas. He mentions that poet Bharavi's "Kiratarjuneeyam" is a classic example of NArikela Paaka. 

*****

That's about the works created by the poets. What about the human beings themselves, those who are recognised as poets as well as those who are not poets but normal human beings? (It is not to suggest that poets are not normal human beings!). Can we apply the same Paaka system to understand the people around us? It is quite possible.

Human beings are also different from each other. They differ in height, weight, colour, completion etc. Take the case of an identical twins. They are identical twins alright, but their mother can show you ten differences between them very easily. There is even more diversity in human behaviour. What is most perplexing is that the same person behaves differently, when the circumstances change. We can also see that the same person behaves differently on different days, even when all other circumstances are the same. We say "it depends on the person's moods". 

Given all the above differences between persons around us, it is possible to broadly  classify all of them into groups using the same Paaka system used for identifying styles of writing in literature? Some people are very easy to interact with. "He is a very friendly person", we say. Some others are "uncomplicated and easy to deal with" while it is said some others are very reserved and do not open up easily. "Oh, No. I don't want anything to do with him!" one may exclaim, when required to interact with some others.

The most interesting set of people are those who are classified as "Narikela type" or "Coconut type". They are also the misunderstood. They may appear very difficult to deal with. But once you gain their confidence or they gain confidence in you, they open up. Many consider such people are  most dependable and trustworthy. 

Which category do you belong to?