ಈಗಿನ ದಿನಗಳಲ್ಲಿ "ಕರೆಂಟ್ ಹೋಯಿತು" ಅಥವಾ "ಪವರ್ ಫೇಲ್ಯೂರ್" ಆಯಿತು ಅನ್ನುವ ಮಾತುಗಳು ಕೇಳಿಬರುವುದು ಬಹಳ ಕಡಿಮೆ. ಅನೇಕರ ಮನೆಗಳಲ್ಲಿ "UPS" ಸೌಲಭ್ಯ ಇರುತ್ತದೆ. ಕಣ್ಣ ರೆಪ್ಪೆ ಅಲುಗಾಡುವ ಸಮಯದಲ್ಲಿ ಅದು ಕೆಲಸ ಮಾಡಲು ಪ್ರಾರಂಭಿಸುತ್ತದೆ. ಸ್ವಲ್ಪ ಮುಂದುವರಿದ ರೀತಿಯ ವ್ಯವಸ್ಥೆ ಇದ್ದರಂತೂ ವ್ಯತ್ಯಾಸ ಗೊತ್ತೇ ಆಗದಂತೆ ವಿದ್ಯುತ್ ಸರಬರಾಜು ಹಸ್ತಾಂತರವಾಗುತ್ತದೆ. ಇಂತಹ ಸೌಲಭ್ಯ ದುಬಾರಿ ಅನ್ನುವ ಸ್ಥಿತಿಯ ಮನೆಗಳಲ್ಲಿ ಈಗಲೂ "ಕರೆಂಟ್ ಹೋಯಿತು" ಅನ್ನುವುದು ಕೇಳಿ ಬರುತ್ತದೆ. ಅನೇಕ ದಿನಚರಿಯ ಕೆಲಸ-ಕಾರ್ಯಗಳು ಅಲ್ಲಲ್ಲೇ ನಿಲ್ಲುತ್ತವೆ. ಬಾವಿಯಲ್ಲಿ ಅಥವಾ ನೆಲದಡಿಯ ಸಂಪಿನಲ್ಲಿ ನೀರುಂಟು. ಆದರೆ ಸ್ನಾನವಿಲ್ಲ. ಅಡಿಗೆಗೆ ಬೇಕಾದ ಪದಾರ್ಥ ರುಬ್ಬುವಂತಿಲ್ಲ. ಹೊಲಗಳ ಪಂಪುಸೆಟ್ಟುಗಳು ಹಗಲೆಲ್ಲಾ ನಿದ್ರೆ ಮಾಡುತ್ತವೆ. ಹೀಗೆ ನಡೆಯುತ್ತದೆ.
ಒಮ್ಮೆ ಒಬ್ಬ ಸ್ನೇಹಿತರ ಮನೆಯಲ್ಲಿ ಕುಳಿತಿದ್ದಾಗ ಹೀಗೇ ವಿದ್ಯುತ್ ನಿಲುಗಡೆ ಆಯಿತು. ದೂರದರ್ಶನದಲ್ಲಿ ಬಹಳ ಮುಖ್ಯವಾದ ಕ್ರಿಕೆಟ್ ಪಂದ್ಯ ನೋಡುತ್ತಿದ್ದ ಮಗನಿಗೆ ಬಹಳ ಕೋಪ ಬಂತು. "ಹಾಳಾದ್ದು, ಯಾವಾಗಲೂ ನಮ್ಮ ರಸ್ತೆಯಲ್ಲಿಯೇ ಹೀಗಾಗುತ್ತೆ. ಹಿಂದಿನ ರಸ್ತೆಯಲ್ಲಿ ಯಾವಾಗಲೂ ವಿದ್ಯುತ್ ಇರುತ್ತೆ" ಎಂದು ಕೂಗಾಡಿದ. ಅಲ್ಲಿಯೇ ಇದ್ದ ತಂದೆ "ಹೌದೇ? ಅದು ಹೇಗೆ ಗೊತ್ತು?" ಎಂದು ಕೇಳಿದರು. "ನಮ್ಮ ಮನೆಯಲ್ಲಿ ಹೀಗಾದಾಗ ಹೊರಗೆ ಹೋಗಿ ನೋಡಿದರೆ ಹಿಂದಿನ ರಸ್ತೆಯಲ್ಲಿ ಯಾವಾಗಲೂ ವಿದ್ಯುತ್ ಇರುತ್ತೆ" ಅಂದ ಮಗ. "ಒಂದು ಕೆಲಸ ಮಾಡು. ನಮ್ಮ ಮನೆಯಲ್ಲಿ ವಿದ್ಯುತ್ ಇದ್ದಾಗ ಆಗಾಗ ಹೊರಗೆ ಹೋಗಿ ನೋಡು. ಆಗ ಗೊತ್ತಾಗುತ್ತೆ" ಅಂದರು ತಂದೆ.
ನಮ್ಮ ಕಷ್ಟಗಳು ನಮಗೆ ಗೊತ್ತಾಗುತ್ತವೆ. ಅಂತೆಯೇ ಬೇರೆಯವರ ಕಷ್ಟಗಳು ಅವರಿಗೆ ಗೊತ್ತಾಗುತ್ತವೆ. ಎದುರುಗಡೆಯವನಿಗೆ ಹೊಟ್ಟೆನೋವು. ನಮ್ಮ ಕಣ್ಣಿಗೆ ಅವನು ಸರಿಯಾಗಿಯೇ ಇದ್ದಾನೆ. ನಮಗೂ ಒಮ್ಮೊಮ್ಮೆ ಹೊಟ್ಟೆ ನೋವು ಬರುತ್ತದೆ. ಆಗ ಎದುರುಗಡೆಯವರಿಗೆ ನಾವೂ ಸರಿಯಾಗಿಯೇ ಕಾಣುತ್ತೇವೆ. ಇಷ್ಟು ಸಾಮಾನ್ಯ ಜ್ಞಾನ ಇದ್ದರೂ, "ನೋಡು, ಯಾವಾಗಲೂ ನನಗೇ ಹೀಗಾಗುತ್ತದೆ!" ಎಂದು ಪರಿತಪಿಸುವುದು ಮನುಷ್ಯನ ಅಭ್ಯಾಸ.
*****
ಹಿಂದಿನ ಸಂಚಿಕೆಯಲ್ಲಿ "ಪರಸ್ಪರ ಗುರು-ಶಿಷ್ಯರು" ಅನ್ನುವ ಶೀರ್ಷಿಕೆಯ ಅಡಿಯಲ್ಲಿ ಬೃಹದಶ್ವ ಮುನಿ ಪಾಂಡವಾಗ್ರಜ ಧರ್ಮರಾಯನಿಗೆ ನಳ ಮಹಾರಾಜನ ವೃತ್ತಾಂತ ಹೇಳಿದುದನ್ನು ನೋಡಿದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಯುಧಿಷ್ಠಿರನೂ ಹೀಗೆಯೇ "ನನಗೇ ಏಕೆ ಹೀಗಾಯಿತು?" ಅಂದುಕೊಂಡಿರಬೇಕು!
ನಳಮಹಾರಾಜನ ಕಥೆಯಲ್ಲಿ ಧರ್ಮಜನಿಗಾದದ್ದು ಎಲ್ಲವೂ ನಳನಿಗೂ ಆಗಿತ್ತು. ಅವನೂ ತಮ್ಮನಿಗೆ ಜೂಜಿನಲ್ಲಿ ಎಲ್ಲವನ್ನೂ ಸೋತನು. ಕಾಡು ಪಾಲಾದನು. ಧರ್ಮಜನಿಗೆ ಹೆಂಡತಿ ದೂರವಾಗಲಿಲ್ಲ. ನಳನು ಹೆಂಡತಿಯನ್ನೂ ಬಿಟ್ಟು ಹೋಗಬೇಕಾಯಿತು. ಧರ್ಮಜನು ಕಂಕಭಟ್ಟನಾಗಿ ವಿರಾಟ ಮಹಾರಾಜನ ಸೇವೆ ಮಾಡಿದನು. ನಳನೋ ಕಾರ್ಕೋಟಕನ ಕೈಲಿ ಕಚ್ಚಿಸಿಕೊಂಡು ವಿರೂಪ ಪಡೆದು, ಬಾಹುಕನಾಗಿ ಋತುಪರ್ಣ ಮಹಾರಾಜನ ಸಾರಥಿಯಾಗಿ ದುಡಿದನು. ಹೀಗೆ ಕೆಲವು ಸಂಗತಿಗಳಲ್ಲಿ ಅವನು ಧರ್ಮರಾಯನಿಗಿಂತ ಹೆಚ್ಚಿನ ದುಃಖ ಪಟ್ಟನು.
ಧರ್ಮರಾಯನ ಕಷ್ಟ ದೊಡ್ಡದೋ ಅಥವಾ ನಳ ಮಹಾರಾಜನ ಕಷ್ಟ ದೊಡ್ಡದೋ ಎಂದು ಚರ್ಚೆ ಮಾಡಬಹುದು. ಕೆಲವರು ಅದು ದೊಡ್ಡದು ಎನ್ನಬಹುದು. ಮತ್ತೆ ಕೆಲವರು ಇದು ದೊಡ್ಡದು ಅನ್ನಬಹುದು. ಬೃಹದಶ್ವ ಮುನಿ ಬಂದು ನಳನ ವಿಷಯ ಹೇಳುವವರೆಗೆ ಧರ್ಮರಾಯನಿಗೆ ತನ್ನ ವ್ಯಥೆಯೇ ದೊಡ್ಡದಾಗಿತ್ತು. ಇವರಿಬ್ಬರೂ ತಾವು ಸ್ವತಃ ಜೂಜಾಡಿ ರಾಜ್ಯ ಕಳೆದುಕೊಂಡವರು. ಶ್ರೀರಾಮಚಂದ್ರನು ಯಾವ ತಪ್ಪನ್ನೂ ಮಾಡದೆ, ತನಗೆ ನ್ಯಾಯವಾಗಿ ಬರಬೇಕಾಗಿದ್ದ ರಾಜ್ಯ ತಪ್ಪಿ, ಕಾಡುಪಾಲಾಗಿ, ಹೆಂಡತಿಯನ್ನು ಕಳೆದುಕೊಂಡು, ಏನೆಲ್ಲಾ ಕಷ್ಟಗಳನ್ನು ಅನುಭವಿಸಿದನು! ಯಾವ ರೀತಿಯಲ್ಲಿ ಕಂಡರೂ ಶ್ರೀರಾಮನ ಕಷ್ಟಗಳು ಇನ್ನೂ ದೊಡ್ಡವಲ್ಲವೇ?
ದ್ರೌಪದಿಗೆ ಬಂದ ಕಷ್ಟಗಳೇನು ಕಡಿಮೆಯೇ? ತುಂಬಿದ ಸಭೆಯಲ್ಲಿ ಚಕ್ರವರ್ತಿಯ ಧರ್ಮಪತ್ನಿ ಮಹಾರಾಣಿಯಾದವಳಿಗೆ ವಸ್ತ್ರಹರಣದ ಪ್ರಯತ್ನವಾಯಿತು. ಅದಕ್ಕಿಂತ ಕಷ್ಟ ಬೇರೆ ಇದೆಯೇ? ಕುಮಾರವ್ಯಾಸ ಹೇಳುವುದಿದು:
ಜನನವೇ ಪಾಂಚಾಲ ರಾಯನರಮನೆ ಮನೋವಲ್ಲಭರದಾರೆನೆಮನುಜಗಿನುಜರು ಗಣ್ಯವೇ ಗೀರ್ವಾಣರಿಂ ಮಿಗಿಲುಎನಗೆ ಬಂದೆಡರೀ ವಿರಾಟನವನಿತೆಯರ ಮುಡಿಯ ಕಟ್ಟುವತನುವ ತಿರುಗುವ ಕಾಲನೊತ್ತುವ ಕೆಲಸದುತ್ಸಾಹ
ಮಹಾರಾಜ ದ್ರುಪದನ ಪ್ರೀತಿಯ ಮಗಳು. ಬೆಂಕಿಯಲ್ಲಿ ಹುಟ್ಟಿದವಳು. ಅವಳ ಕಾಲದ ಅಪ್ರತಿಮ ಸುಂದರಿ. ದೇವತೆಗಳನ್ನು ಮೀರಿಸಿದ ಐವರು ಗಂಡಂದಿರು. ರಾಜಸೂಯ ಯಾಗದಲ್ಲಿ ಧರ್ಮರಾಯನ ಜೊತೆಗೆ ಕುಳಿತಾಗ ಬಾಗಿ ವಂದಿಸಿದ ರಾಜಕುಲಸ್ತೋಮ. ಹುಟ್ಟಿದಂದಿನಿಂದ ಕೈಗೊಂದು, ಕಾಲ್ಗೊಂದು ಸೇವಕರು. "ಯಾರಲ್ಲಿ?" ಎಂದರೆ ನಾಲ್ಕು ಜನ ಓಡಿ ಬರುತ್ತಿದ್ದರು. ಈಗ ವಿರಾಟ ಮಹಾರಾಜನ ಅಂತಃಪುರದಲ್ಲಿ ಯಾವ ಹೆಂಗಸು ಕರೆದರೂ ಓಡೋಡಿ ಹೋಗಬೇಕು. ಅವರ ತಲೆ ಬಾಚಿ ಹೆರಳು ಕಟ್ಟಬೇಕು. ಅವರ ಹಿಂದೆ ತಿರುಗಬೇಕು. ಅವರು ಕಾಲು ನೀಡಿದರೆ ಕಾಲೊತ್ತಬೇಕು! ಹುಟ್ಟಿದಂದಿನಿಂದ ಬಡತನವಿತ್ತಪ್ಪ. ಇದೇ ಜೀವನದ ಕೆಲಸ ಅಂದರೆ ಅದೊಂದು ತರಹ. ಇಲ್ಲಿ ಹಾಗಲ್ಲ. ಅವಳ ಕಷ್ಟವೇನು ಎಂದು ಅವಳೇ ಹೇಳಿಕೊಳ್ಳಬೇಕಾದ ಪರಿಸ್ಥಿತಿ! ಇದು ತನ್ನ ತಪ್ಪಿನಿಂದ ಬಂದದ್ದಲ್ಲ. ಈ ಕಷ್ಟಗಳು ಎದುರು ಬಂದು ನಿಲ್ಲುವವರೆಗೂ ಹೀಗಾಗಿದೆ ಅಥವಾ ಹೀಗಾಗಬಹುದು ಎಂದು ಗೊತ್ತೂ ಇಲ್ಲ.
ಅದೆಲ್ಲಾ ಹೋಗಲಿ ಎಂದು ಬಿಟ್ಟರೂ, ಸಭೆಯಲ್ಲಿ ದುಃಶಾಸನನ ಕೋಟಲೆ. ದುರ್ಯೋಧನ, ಕರ್ಣ, ಶಕುನಿಯರ ಚುಚ್ಚುಮಾತು. ಕಾಡಿನಲ್ಲೂ ನೆಮ್ಮದಿಯಿಲ್ಲ. ಅಲ್ಲಿಗೂ ಬಂದ ಮೈದುನನಾದ ಸೈ೦ಧವ. ಮತ್ತೆ ವಿರಾಟನ ಮನೆಯಲ್ಲಿ ಕೀಚಕ. ದಿನವೆಲ್ಲ ಮೈಮುರಿದು ದುಡಿದೆ ಎಂದರೂ ನೆಮ್ಮದಿಯ ಬದುಕಿಲ್ಲ.
*****
ಮಹಾರಾಣಿಯಾಗಿದ್ದವಳು ಸೈರಂಧ್ರಿ ಆದದ್ದು ದ್ರೌಪದಿ ಒಬ್ಬಳೇ ಏನು? ಹಿಂದೆ ಹೀಗಾಗಿದ್ದು ಉಂಟೋ? ಅವಳಂತೆ, ಅವಳಷ್ಟು ಕಷ್ಟ ಪಟ್ಟವರು ಮತ್ಯಾರಾದರೂ ಇದ್ದಾರೋ?
ದಮಯಂತಿಯೂ ದ್ರೌಪದಿಯಂತೆ ರಾಜಪುತ್ರಿ. ವಿದರ್ಭ ರಾಜನ ಮಗಳು. ಮಕ್ಕಳಿಲ್ಲದ ಭೀಮರಾಜ ದಮ ಎಂಬ ಋಷಿಯನ್ನು ಆಶ್ರಯಿಸಿ, ಅವರ ಸಲಹೆಯಂತೆ ಪುತ್ರಕಾಮೇಷ್ಟಿ ಯಾಗಮಾಡಿ ಪಡೆದ ಮಗಳಿಗೆ ದಮಯಂತಿ ಎಂದು ಹೆಸರಿಟ್ಟ. ಅವಳೂ ದ್ರೌಪದಿಯಂತೆ ವರ ಪ್ರಸಾದವೇ. ಅವಳೂ ಅವಳ ಕಾಲದ ಅಪ್ರತಿಮ ಸುಂದರಿ. ಗುಣದಲ್ಲಿ, ನಯ-ವಿನಯದಲ್ಲಿ ಎಲ್ಲ ಕಾಲದ ಶ್ರೇಷ್ಠರ ಸಾಲಿನಲ್ಲಿ ಎದ್ದು ಕಾಣುವವಳು. ದೇವತೆಗಳೂ ಅವಳನ್ನು ವಿವಾಹವಾಗಲು ಬಯಸಿ ಸ್ವಯಂವರಕ್ಕೆ ಬಂದಿದ್ದರು. ದ್ರೌಪದಿಯಂತೆಯೇ ಅವಳ ಬಾಲ್ಯ ಕಳೆದಿತ್ತು. ಗಂಡನಾದವನು ನಳ ಚಕ್ರವರ್ತಿ. ದ್ರೌಪದಿಯಂತೆಯೇ ಸುತ್ತ ಮುತ್ತ ನೌಕರ-ಚಾಕರರು. ಜೂಜಿನಲ್ಲಿ ರಾಜ್ಯ ಕಳೆದುಕೊಂಡ ಗಂಡನ ಜೊತೆ ಕಾಡು ಸೇರಿದಳು. ಹಕ್ಕಿಗಳನ್ನು ಹಿಡಿಯಲು ಗಂಡ ತನ್ನ ಬಟ್ಟೆಯನ್ನೇ ಬಲೆಯಾಗಿ ಎಸೆದ. ಆ ಹಕ್ಕಿಗಳೋ ಆ ಬಟ್ಟೆಯನ್ನೇ ಎತ್ತಿಕೊಂಡು ಹಾರಿಹೋದವು. ತಾನು ಉಟ್ಟ ಸೀರೆಯನ್ನು ಹರಿದು ಅರ್ಧ ಗಂಡನಿಗೆ ಕೊಟ್ಟಳು. (ದ್ರೌಪದಿಯಂತೆ ಮತ್ತೊಬ್ಬ ವಸ್ತ್ರಹರಣ ಮಾಡಲಿಲ್ಲ ಅನ್ನುವುದು ಮಾತ್ರ ವ್ಯತ್ಯಾಸ.) ಗಂಡ ಮಧ್ಯರಾತ್ರಿಯಲ್ಲಿ ಅವಳನ್ನು ಬಿಟ್ಟು ಹೊರಟುಹೋದ. (ದ್ರೌಪದಿಗೆ ಈ ಕಷ್ಟ ಇರಲಿಲ್ಲ).
ಕಾಡಿನಲ್ಲಿ ಒಂದು ಹೆಬ್ಬಾವು ಅವಳನ್ನು ನುಂಗಲು ಪ್ರಾರಂಭಿಸಿತು. ಅವಳ ಕೂಗು ಕೇಳಿ ಬಂದ ಬೇಡನೊಬ್ಬ ಅವಳನ್ನು ಉಳಿಸಿದ. ಆದರೆ ಅವಳನ್ನು ಕಾಡಲು ತಯಾರಾದ. ಧೈರ್ಯದಿಂದ ಅವನನ್ನು ಹೆದರಿಸಿ ಓಡಿಸಿದಳು. ಯಾರೋ ವ್ಯಾಪಾರಿಗಳ ಗುಂಪಿನ ಜೊತೆ ಪ್ರಯಾಣ ಮುಂದುವರೆಸಿದಳು. ಕಾಡಾನೆಗಳು ಬಂದು ಅವರನ್ನೆಲ್ಲಾ ಮುತ್ತಿದ್ದವು. ಹೇಗೋ ಪಾರಾಗಿ ಚೈದ್ಯ ರಾಜನ ಅರಮನೆ ತಲುಪಿದಳು. ಅಲ್ಲಿಯಾದರೋ, ತನ್ನ ತಾಯಿಯ ತಂಗಿಯ ಮನೆ ಎಂದು ಗೊತ್ತಿಲ್ಲ. ಆ ಚಿಕ್ಕಮ್ಮನು ದಮಯಂತಿಯನ್ನು ತನ್ನ ಮಗಳ ಸೈರ೦ಧ್ರಿಯನ್ನಾಗಿ ನೇಮಿಸಿದಳು. ಮುಂದೆ ಅನೇಕ ಬೆಳವಣಿಗೆಗಳು ನಡೆದು, ತಂದೆಯ ಮನೆ ಸೇರಿ, ಇನ್ನೊಂದು ಸ್ವಯಂವರದ ನೆಪ ಹೂಡಿ, ಕಡೆಗೆ ಗಂಡನ ಜೊತೆ ಸೇರಿದಳು. ನಳನು ಪುಷ್ಕರನೊಡನೆ ಮತ್ತೆ ಜೂಜಿಗೆ ಕುಳಿತಾಗ ಪುಷ್ಕರನು ಕೇಳಿದ್ದೇನು? ನಳನು ಗೆದ್ದರೆ ರಾಜ್ಯ ನಳನಿಗೆ. ಪುಷ್ಕರನು ಗೆದ್ದರೆ? ನಳನ ಬಳಿ ಪಂಥವಿಡಲು ರಾಜ್ಯವಿಲ್ಲ. ದಮಯಂತಿಯನ್ನು ನಳ ಪುಷ್ಕರನಿಗೆ ಒಪ್ಪಿಸಬೇಕು! ನಳನು ಪುಣ್ಯಕ್ಕೆ ಗೆದ್ದ. ನಳನು ಮತ್ತೆ ರಾಜ್ಯ-ಕೋಶಗಳನ್ನು ಪಡೆದ ನಂತರ ದಮಯಂತಿ ಮತ್ತೆ ರಾಣಿಯಾಗಿ ಬದುಕಿದಳು.
ದ್ರೌಪದಿಗಿಂತ ಎಷ್ಟೋ ಮುಂಚೆ, ಅವಳಂತೆ ಕಷ್ಟಪಟ್ಟು, ಕಾಡುಪಾಲಾಗಿ, ಸೈರ೦ಧ್ರಿಯಾಗಿ, ಅದೇ ರೀತಿ ಪಾಡುಪಟ್ಟವಳು ದಮಯಂತಿ.
*****
ಕರ್ಣನು ಒಮ್ಮೆ ತನ್ನ ಹೆತ್ತ ತಾಯಿ ಆಗತಾನೇ ಹುಟ್ಟಿದ ತನ್ನನ್ನು ನದಿಯಲ್ಲಿ ತೇಲಿಬಿಟ್ಟು, ತಾನು ಸೂತಪುತ್ರನೆಂದು ಬದುಕಬೇಕಾಯಿತು ಎಂದು ಕೃಷ್ಣನ ಬಳಿ ಹೇಳಿಕೊಂಡು ಕೊರಗುತ್ತಾನೆ. ಕೃಷ್ಣ ಹೇಳುತ್ತಾನೆ: "ನಿನ್ನದು ಅಷ್ಟೇ ಕಥೆ. ನನ್ನನ್ನು ನೋಡು. ನಾನು ಹುಟ್ಟಿದ್ದೇ ಸೆರೆಮನೆಯಲ್ಲಿ. ಹುಟ್ಟುವ ಮೊದಲೇ ನನ್ನನ್ನು ಕೊಲ್ಲಲು ಸೋದರಮಾವನೇ ಹೊರಗಡೆ ಕಾದಿದ್ದ. ಹುಟ್ಟಿದ ತಕ್ಷಣ ನನ್ನ ತಂದೆಯೇ ನನ್ನನ್ನು ಬೇರೆಲ್ಲೋ ಕೊಂಡೊಯ್ದ. ಮಹಾರಾಜ ಉಗ್ರಸೇನನ ಮೊಮ್ಮಗನಾದ ನಾನು ಹಸುಕಾಯುವ ಗೊಲ್ಲನಾಗಿ ಬೆಳೆದೆ. ಹಾಲು ಕುಡಿಯುವ ಕಂದನಿಗೆ ಹಾಲಿನಲ್ಲೇ ವಿಷವುಣಿಸಲು ಒಬ್ಬಳು ರಕ್ಕಸಿ ಬಂದಳು. ಮಗುವಾಗಿದ್ದಾಗ ನನ್ನನ್ನು ಮುಗಿಸಲು ಸರತಿಯಮೇಲೆ ರಕ್ಕಸರ ಗುಂಪೇ ಬಂತು. ನಂತರ ಜರಾಸಂಧನ ಕಾಟ. ಯುದ್ಧಗಳ ಮೇಲೆ ಯುದ್ಧ. ಗೋಕುಲದಿಂದ ಮಧುರೆಗೆ. ಮಧುರೆಯಿಂದ ದ್ವಾರಕೆಗೆ. ನಿನಗಾದರೆ ಒಬ್ಬರು ಸಾಕುವ ದಂಪತಿಗಳು ಸಿಕ್ಕಿದರು. ನಂತರ ಅಂಗರಾಜನಾದೆ. ಈಗ ಹೇಳು. ನಿನ್ನ ಕಷ್ಟ ಹೆಚ್ಚೋ, ನನ್ನ ಕಷ್ಟ ಹೆಚ್ಚೋ?".
ಕರ್ಣ ಏನು ಹೇಳಬೇಕು?
*****
ಒಳ್ಳೆಯ ಆರೋಗ್ಯದಲ್ಲಿದ್ದ ಸ್ನೇಹಿತರೊಬ್ಬರು ಕರೋನ ಸಮಯದಲ್ಲಿ ವಿಚಿತ್ರ ಖಾಯಿಲೆಗೆ ತುತ್ತಾದರು. ಎರಡು ತಿಂಗಳು ಆಸ್ಪತ್ರೆ ವಾಸದ ನಂತರ ಇಪ್ಪತ್ತೈದು ಕೆಜಿ ತೂಕ ಕಳೆದುಕೊಂಡು ಕುಂಬಳಕಾಯಿಯಂತೆ ಇದ್ದವರು ನುಗ್ಗೆಕಾಯಿಯಂತೆ ಆದರು. ನಡೆದಾಡಲೂ ಆಗದು. ಭೋಕ್ತಾಪುರುಷ ಆಗಿದ್ದವರಿಗೆ ಎರಡು ಚಮಚ ಆಹಾರ ತಿನ್ನಲೂ ಕಷ್ಟ. ಆಸ್ಪತ್ರೆಯಿಂದ ವೈದ್ಯರು ಅವರನ್ನು ಪುನರ್ವಸತಿ ಕೇಂದ್ರಕ್ಕೆ (ರಿಹ್ಯಾಬಿಲಿಟೇಷನ್ ಸೆಂಟರ್) ಕಳಿಸಿದರು.
ಇನ್ನೊಬ್ಬ ಸ್ನೇಹಿತರು ಅವರನ್ನು ನೋಡಲು ಪುನರ್ವಸತಿ ಕೇಂದ್ರಕ್ಕೆ ಹೋದರು. ಅವರ ಪರಿಸ್ಥಿತಿ ನೋಡಿ ಇವರಿಗೆ ಕಣ್ಣೀರು. "ಇದೇನು? ಹೀಗಾಯಿತು!" ಎಂದರು. ಅವರು ಹೇಳಿದರು: "ಆಂಬ್ಯುಲೆನ್ಸ್ ವಾಹನದಲ್ಲಿ ಮಲಗಿ ಆಸ್ಪತ್ರೆಯಿಂದ ಇಲ್ಲಿಗೆ ಬರುವ ದಾರಿಯಲ್ಲಿ ನಾನೂ ಹಾಗೆ ಯೋಚಿಸುತ್ತಿದ್ದೆ. ನನಗೇ ಏಕೆ ಹೀಗಾಯಿತು? ಎಂದು. ಇಲ್ಲಿ ಬಂದ ಮೇಲೆ, ಇಲ್ಲಿರುವ ಇತರರನ್ನು ನೋಡಿದ ಮೇಲೆ, ನಾನೇ ಭಾಗ್ಯವಂತ ಅನ್ನಿಸುತ್ತಿದೆ. ಸುತ್ತ ನೋಡಿ. ಮಧುಮೇಹದಿಂದ ಕಾಲು ಕತ್ತರಿಸಿ ಕಳೆದುಕೊಂಡಿರುವವರು ಕೆಲವರು. ಅಪಘಾತದಲ್ಲಿ ಕೈ ಹೋದವರು ಕೆಲವರು. ಬೆನ್ನು ಮೂಳೆ ಮುರಿದಿರುವವರು ಇಲ್ಲುಂಟು. ಹೀಗೆ ನಾನಾ ರೀತಿ ಕಷ್ಟಪಡುತ್ತಿರುವವರು ಅನೇಕರು. ನಾನಾದರೋ, ಕಷ್ಟವಾದರೂ ನಿಧಾನವಾಗಿ ಓಡಾಡಬಲ್ಲೆ. ಸ್ವಲ್ಪವಾದರೂ ಮೊದಲಿನಂತೆ ಆಗಬಲ್ಲೆ ಅನ್ನುವ ಅವಕಾಶ ಇದೆ. ಇಲ್ಲಿರುವ ಕೆಲವರಿಗೆ ಅದೂ ಕಷ್ಟ ಅನಿಸುವುದಿಲ್ಲವೇ?"
ಇವರು ಸುತ್ತ ಕಣ್ಣಾಡಿಸಿದರು. ಅವರು ಹೇಳಿದುದರಲ್ಲಿ ಸ್ವಲ್ಪವೂ ಉತ್ಪ್ರೇಕ್ಷೆ ಇರಲಿಲ್ಲ.
*****
ಕೇವಲ ನಮ್ಮ ಕಷ್ಟಗಳನ್ನೇ ನೋಡಿಕೊಳ್ಳುತ್ತಾ, ನಮ್ಮ ಹಣೆಬರಹ ಎಂದು ಪರಿತಪಿಸುತ್ತಾ, "ನನಗೇ ಏಕೆ ಹೀಗಾಗುತ್ತದೆ?" ಎಂದು ಹೇಳಿಕೊಳ್ಳುತ್ತಾ ಇದ್ದರೆ ಕಷ್ಟಗಳ ತೀವ್ರತೆ ಇನ್ನೂ ಹೆಚ್ಚಾಗುವುದು. (ಅದು ಹೇಗೆ ಸಾಧ್ಯ ಎಂದು ಕೇಳಬಹುದು. ಕಷ್ಟಗಳು ಹೆಚ್ಚಾಗುವುದಿಲ್ಲ. ಇರುವ ಕಷ್ಟಗಳ ಅನುಭವ ಮಾನಸಿಕವಾಗಿ ಮತ್ತಷ್ಟು ಹೆಚ್ಚಾಗುತ್ತದೆ.) ನಮಗಿಂತಲೂ ಹೆಚ್ಚು ಕಷ್ಟ ಪಟ್ಟವರು, ಪಡುತ್ತಿರುವವರು ಅನೇಕರಿದ್ದಾರೆ. ಇದು ಕೇವಲ ನಮ್ಮ ಕಥೆಗಳಲ್ಲ. ಅಥವಾ ಕೇವಲ ಇಂದಿನ ಕಥೆಯಲ್ಲ!