Round The Clock Stories
Thursday, January 16, 2025
Working Hours or Working Days?
Tuesday, January 14, 2025
ಪೂರ್ವ ಪುಣ್ಯಗಳು
Monday, January 13, 2025
Art Show By The Greatest Artist
Wednesday, December 18, 2024
ಪಠಣ - ಮನನ - ಮಂಥನ
Monday, December 16, 2024
ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು
ಪಾಂಡವರ ಮನೆಯಲ್ಲಿ ಕುದುರೆಗಳ ತಾ ತೊಳೆದುಪುಂಡರೀಕಾಕ್ಷ ತಾ ಹುಲ್ಲನೆ ತಿನಿಸಿದಅಂಡಜವಾಹನ ಶ್ರೀ ಪುರಂದರ ವಿಠಲನುತೊಂಡರಿಗೆ ತೊಂಡನಾಗಿ ಸಂಚರಿಸುತಿಹನು
ಪಾಂಡವರು ಎನ್ನುವ ಪದಕ್ಕೆ ಹೊಂದುವ ಪುಂಡರೀಕಾಕ್ಷ ಪದವನ್ನು ಶ್ರೀಕೃಷ್ಣನಿಗೆ ಉಪಯೋಗಿಸಿದ್ದಾರೆ. ಪರಮಾತ್ಮನು ವಿಶಾಲವಾದ ಕಣ್ಣುಳ್ಳವನು, ಅರಳಿದ ಕಮಲದಂತೆ ಕಣ್ಣುಳ್ಳವನು, ಅವನ ಕಣ್ಣು ಬಹಳ ವಿಶಾಲವಾಗಿವೆ. ಎಷ್ಟೆಂದು ನಮಗೆ ತಿಳಿಯದು. ನಮಗೆ ಗೊತ್ತಿರುವ ಪದಾರ್ಥಗಳಲ್ಲಿ ಕಮಲ ಅಥವಾ ತಾವರೆ ಹೂವು ಅರಳಿದಾಗ ಮಿಕ್ಕೆಲ್ಲ ಹೂವುಗಳಿಗಿಂತ ಅಗಲವಾಗಿ, ವಿಶಾಲವಾಗಿ ಕಾಣುತ್ತದೆ. ಅದಕ್ಕೆ ಅವನನ್ನು "ಕಮಲ ನಯನ", "ಪುಂಡರೀಕಾಕ್ಷ" ಮುಂತಾಗಿ ಹೇಳುತ್ತೇವೆ. ಅದೇ ಅವನ ಪಾದಗಳನ್ನು ಸೂಚಿಸುವಾಗ "ಪಾದ ಕಮಲಗಳು" ಎನ್ನುತ್ತೇವೆ. ಎರಡು ಪಾದಗಳನ್ನು ಹೇಳುವುದರಿಂದ ಕಮಲಗಳು. ಇಲ್ಲಿ ವಿಶಾಲತೆಗಿಂತ ಕೋಮಲತೆಗೆ ಹೆಚ್ಚು ಪ್ರಾಮುಖ್ಯತೆ. ಕಮಲದ ದಳಗಳಂತೆ ಕೋಮಲವಾದ ಪಾದಗಳು ಉಳ್ಳವನು ಎಂದು. ಕೈಗಳನ್ನು ಹೇಳುವಾಗ "ಕರ ಕಮಲಗಳು", ಅಂದರೆ ಮೃದುವಾದ ಕೈಗಳು ಎಂದು. ಹೀಗೆ ಒಂದೇ ವಿಶೇಷಣ ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಅರ್ಥದಲ್ಲಿ ಪ್ರಯೋಗಿಸುವುದು ರೂಢಿ,
"ತೊಂಡ" ಎನ್ನುವ ಪದ ಈಗಿನ ಕನ್ನಡದಲ್ಲಿ ಬಳಕೆಯಲ್ಲಿ ಸಾಮಾನ್ಯವಾಗಿ ಮರೆತೇ ಹೋಗಿದೆ. "ತನಿ" ಅನ್ನುವ ಪದದಂತೆ. ತನಿ ಅನ್ನುವ ಪದಕ್ಕೆ ಬಿಡಿ ಎನ್ನುವ ಅರ್ಥ. ಬಿಡಿ ಎಂದರೆ ಹಿಡಿದುಕೊಂಡಿರುವಾಗ ಬಿಡಿ ಎಂದಲ್ಲ. ಒಂಟಿಯಾದ, ಗುಂಪಿಲ್ಲದ ಬಿಡಿ ಎಂದು ಅರ್ಥ. ಬಿಡಿ ಹೂವು ಎಂದಂತೆ. ಹಾಗೆಯೇ ತೊಂಡ ಎಂದರೆ ಸೇವಕ, ಅನುಯಾಯಿ, ಹಿಂಬಾಲಕ, ಎಂದು ಅರ್ಥಗಳು. ಇಲ್ಲಿ ತೊಂಡ ಪದಕ್ಕೆ ಯಜಮಾನ-ಸೇವಕ, ಗುರು-ಶಿಷ್ಯ, ನಾಯಕ-ಹಿಂಬಾಲಕ ಮುಂತಾದ ಸಂಬಂಧಗಳು ಉಂಟು. ತೊಂಡ ಯಾವಾಗಲೂ ಹಿಂದೆ ಇರುವವನು. ಮುಂದೆ ಇರುವವನು ಯಜಮಾನ ಇರಬಹುದು. ತಂಡದ ನಾಯಕ ಇರಬಹುದು. ಅಥವಾ ಗುರುವೇ ಇರಬಹುದು. ಒಟ್ಟಿನಲ್ಲಿ ಮುಂದೆ ಹೋಗುವವನ ಹಿಂಬಾಲಕ ಮತ್ತು ಅವನ ಮಾತು ಕೇಳುತ್ತ ಮುನ್ನಡೆಯುವವನು ತೊಂಡ. ಇದು ನಮಗೆ ಚೆನ್ನಾಗಿ ಮನನವಾದರೆ ಈ ಶೀರ್ಷಿಕೆಯ ಅರ್ಧ ಅರ್ಥ ಗೊತ್ತಾದಂತೆ.
ದಾಸರು ಪುರಂದರ ವಿಠ್ಠಲನಿಗೆ ಒಂದು ವಿಶೇಷಣ ಕೊಟ್ಟಿದಾರೆ. ಅದು ಅವನ ಒಂದು ಗುರುತೂ ಹೌದು. ಶ್ರೀಹರಿ ಅಥವಾ ಶ್ರೀಕೃಷ್ಣನಿಗೆ ಶೇಷಶಯನ, ಗರುಡವಾಹನ, ಆಂಜನೇಯ ವರದ, ಕಮಲಾಪತಿ, ಮತ್ತು ಇವುಗಳ ಇತರ ಪರ್ಯಾಯ ಪದಗಳ ಉಪಯೋಗ ಸಾಮಾನ್ಯ. ಇಲ್ಲಿ ದಾಸರು ಪ್ರಯೋಗಿಸಿರುವ ವಿಶೇಷಣ "ಅಂಡಜಾ ವಾಹನ". ಅಂಡಜ ಅಂದರೆ ಮೊಟ್ಟೆಯಿಂದ ಹುಟ್ಟಿದವನು. ಗರುಡ ಪಕ್ಷಿ ಮೊಟ್ಟೆಯಿಂದ ಹುಟ್ಟುತ್ತದೆ. ಅ ಗರುಡನು ಶ್ರೀಹರಿಯ ವಾಹನ. ಆದ್ದರಿಂದ ಅಂಡಜ ವಾಹನ ಪ್ರಯೋಗ. ಇದಕ್ಕೆ ಇನ್ನೂ ವಿಶೇಷಾರ್ಥ ಉಂಟು.
*****
ಎಲ್ಲ ದೇವತೆಗಳ ವಾಹನಗಳು ನೆಲದ ಮೇಲೆ ಸಂಚರಿಸುವ ಪ್ರಾಣಿಗಳು. ಶ್ರೀಹರಿಯ ವಾಹನವಾದ ಗರುಡನು ಆಕಾಶ ಮಾರ್ಗದಲ್ಲಿ ಸಂಚರಿಸುವ ಪಕ್ಷಿರಾಜನು. ಆಕಾಶಮಾರ್ಗದಲ್ಲಿ ಸಂಚರಿಸುವವನಾದದುರಿಂದ ಯಾವ ಅಡೆತಡೆಗಳಿಲ್ಲ. ಅಂತಹ ವಾಹನದ ಮೇಲೆ ಶೀಘ್ರವಾಗಿ ಸಂಚರಿಸುವವನು ಮಹಾವಿಷ್ಣು. ಗರುಡನು ಎಷ್ಟು ಬಲಶಾಲಿ ಎನ್ನುವುದು ಅವನು ಹುಟ್ಟಿದ ಸಮಾಚಾರದಲ್ಲಿಯೇ ಸೇರಿದೆ. ತನ್ನ ತಾಯಿ ವಿನುತೆಯ ದಾಸ್ಯ ಬಿಡುಗಡೆ ಮಾಡಲು ದೊಡ್ಡಮ್ಮ ಕದ್ರು ಅಮೃತ ಬೇಡಿದಳು. ಅಮೃತ ಇರುವುದು ದೇವೇಂದ್ರನ ಸುಪರ್ದಿನಲ್ಲಿ. ದೇವೇಂದ್ರನೊಡನೆ ಹೋರಾಡಿ, ವಜ್ರಾಯುಧದ ಏಟಿಗೆ ಅಲ್ಲಾಡದೆ ಅಮೃತ ತಂದು ತಾಯಿಯ ದಾಸ್ಯ ಬಿಡುಗಡೆ ಮಾಡಿದವನು ಗರುಡ. ಅಂತಹ ಗರುಡನು ವಿಷ್ಣುವಿನ ವಾಹನ. ಒಮ್ಮೆ ಗರುಡನಿಗೆ "ನನ್ನಿಂದಲೇ ವಿಷ್ಣುವು ಎಲ್ಲಕಡೆ ಸಂಚರಿಸುತ್ತಾನೆ. ಅವನನ್ನೂ ಹೊತ್ತು ತಿರುಗುವ ನಾನೇ ಎಷ್ಟು ಬಲಶಾಲಿ!" ಎಂದು ಜಂಬ ಬಂತಂತೆ. ಆಗ ವಿಷ್ಣು "ಹೌದು. ನೀನು ಬಹಳ ಬಲಶಾಲಿ. ನನ್ನ ಕಿರುಬೆರಳು ಹೊರು ನೋಡೋಣ" ಎಂದು ತನ್ನ ಕಿರುಬೆರಳಿನಲ್ಲಿ ಅದುಮಿದನಂತೆ. ಗರುಡನಿಗೆ ಬಿಡಿಸಿಕೊಳ್ಳಲಾರದೆ ತತ್ತರಿಸುವಾಗ ಜ್ಞಾನೋದಯ ಆಯಿತು. ಸ್ವಾಮಿಯು ನನಗೆ ಹೊರುವ ಬಲ ಕೊಟ್ಟು, ವಾಸ್ತವವಾಗಿ ನನ್ನನ್ನೂ ಹೊತ್ತುಕೊಂಡು ಓಡಾಡಿದರೂ, ನನಗೆ ಕೀರ್ತಿ ಬರಲೆಂದು ನನ್ನನ್ನು ವಾಹನವಾಗಿ ಉಪಯೋಗಿಸುತ್ತಿದ್ದಾನೆ ಎಂದು ತಿಳಿಯಿತು. ಹೀಗೆ "ಬ್ರಹ್ಮ ಪುರಾಣ"ದಲ್ಲಿ ಉಲ್ಲೇಖವಿದೆ. ಇಂತಹ ಗರುಡ ವಾಹನನು ಶ್ರೀಕೃಷ್ಣನಾದಾಗ ತನ್ನ ಅನುಯಾಯಿಯಾದ ಪಾರ್ಥನಿಗೆ ಸಾರಥಿಯಾಗಿ ಕೆಲಸ ಮಾಡಿದನು. ಯಾರನ್ನು ಗರುಡನೇ ಹೊರುತ್ತಾನೋ, ಅಂತಹ ಸ್ವಾಮಿಯು ಅರ್ಜುನನ ಸಾರಥಿಯಾದನು.
ಗರುಡ, ಶೇಷ, ಹನುಮಾದಿಗಳು ನಮಗೆ ಸ್ವಾಮಿಯನ್ನು ಹೊರುವ ಅವಕಾಶ ಸಿಕ್ಕೀತೇ ಎಂದು ಕಾಯ್ದು ನಿಂತಿರುತ್ತಾರಂತೆ. ಅಂತಹ ಸ್ವಾಮಿಯು ತಾನೇ ಮೀನ-ಮೇಷ ಎಣಿಸದೆ ಸಾರಥಿಯ ಕೆಲಸವನ್ನೂ ಒಪ್ಪಿಕೊಂಡ. ಒಪ್ಪಿಕೊಂಡದ್ದು ಮಾತ್ರವಲ್ಲ; ಒಪ್ಪವಾಗಿ ಮಾಡಿ ಮುಗಿಸಿದ.
ಅರ್ಜುನನ ಜೊತೆ ಅಂತಿಮ ಯುದ್ಧ ಬಂದಾಗ ಕರ್ಣ ದುರ್ಯೋಧನನ ಬಳಿ ಕೊರಗುತ್ತಾನೆ. "ನೋಡು ದುರ್ಯೋಧನ, ಅರ್ಜುನನಿಗೆ ಕೃಷ್ಣನಂಥ ಸಾರಥಿ ಇದ್ದಾನೆ. ನನಗೆ ಸರಿಯಾದ ಸಾರಥಿಯೇ ಇಲ್ಲ. ಏನುಮಾಡಲಿ?" ಎಂದು. ದುರ್ಯೋಧನ ಶಲ್ಯ ಮಹಾರಾಜನನ್ನು ಕರ್ಣನ ಸಾರಥಿಯಾಗುವಂತೆ ಬೇಡುತ್ತಾನೆ. ಮೂರು ದಿನ ಸಾರಥಿಯಾಗಲು ಶಲ್ಯ ಎಷ್ಟು ಕೂಗಾಡುತ್ತಾನೆ! "ನಾನೊಬ್ಬ ರಾಜ. ಅವನೊಬ್ಬ ಸೂತಪುತ್ರ. ಮಹಾರಥಿಯಾದ ನಾನು ಅಂತಹವನಿಗೆ ಬಂಡಿ ಹೊಡೆಯುವ ದಾಸ ಆಗಬೇಕೇ? ನಿನಗೆ ಕೇಳುವ ಮನಸ್ಸಾದರೂ ಹೇಗೆ ಬಂತು?" ಎಂದು ಎಗರಾಡುತ್ತಾನೆ. ಕಡೆಗೆ ಒಪ್ಪಿದರೂ ಅರೆ ಮನಸ್ಸಿನಿಂದ ಕರ್ಣನಿಗೆ ನಿರುತ್ಸಾಹ ತುಂಬುವ ರೀತಿಯಲ್ಲಿಯೇ ನಡೆದುಕೊಳ್ಳುತ್ತಾನೆ. ಶಲ್ಯನೆಲ್ಲಿ? ಶ್ರೀಕೃಷ್ಣನೆಲ್ಲಿ? ಅಂತಹ ಗರುಡವಾಹನನಾದ ಶ್ರೀಕೃಷ್ಣ ತನ್ನ ಅನುಯಾಯಿ, ಹಿಂಬಾಲಕನಾದ ಅರ್ಜುನನಿಗೆ ಸಾರಥಿಯಾಗಲು ಸ್ವಲ್ಪವೂ ಹಿಂದೆ ಮುಂದೆ ನೋಡಲಿಲ್ಲ. ಶಲ್ಯನಂತೆ ರಥಿಕ-ಸಾರಥಿಯರ ಯೋಗ್ಯತೆ ಅಳೆಯಲಿಲ್ಲ. ತೊಂಡನಾದ ಪಾರ್ಥನಿಗೆ ತೊಂಡನಾದ ರಥ ಹೊಡೆಯುವ ಸಾರಥಿಯಾದ! ಯಜಮಾನನಾದವನು ತನ್ನ ತೊಂಡನಿಗೇ ತೊಂಡನಾಗಿ ವ್ಯವಹರಿಸಿದ.
ಶಲ್ಯ ಹೆಜ್ಜೆ ಹೆಜ್ಜೆಗೂ ಕರ್ಣನಿಗೆ ಚುಚ್ಚುತ್ತಿದ್ದ. ಹೀಗಳೆಯುತ್ತಿದ್ದ. ಶ್ರೀಕೃಷ್ಣ ಪಾರ್ಥನಿಗೆ ಗೀತೋಪದೇಶದಿಂದ ಪ್ರಾರಂಭಿಸಿ, ಹೆಜ್ಜೆ ಹೆಜ್ಜೆಗೂ ತಲೆ ಕಾಯ್ದ. ಅನೇಕ ಸಾರಿ ಸಿದ್ಧವಾದ ಮರಣ ಮತ್ತು ಸೋಲು ತಪ್ಪಿಸಿದ. ಒಮ್ಮೆಯಾದರೂ ತನ್ನ-ಅವನ ಯೋಗ್ಯತೆಯ ಬಗ್ಗೆ ಮಾತನಾಡದೆ ಎಲ್ಲ ಸಾರಥಿಗಳಿಗೆ ಮಾದರಿಯಾದ ರೀತಿ ವರ್ತಿಸಿದ. ತೊಂಡನಿಗೆ ತೊಂಡನಾಗಿ ಮಾಡಿ ತೋರಿಸಿದ.
*****
ಶ್ರೀಕೃಷ್ಣ ಸಾರಥಿಯಾಗಿ ಕೆಲಸ ಮಾಡಿದ. ಯುದ್ದದಿಂದ ದಿನದ ಕೊನೆಯಲ್ಲಿ ಪಾಳೆಯಕ್ಕೆ ಹಿಂದುರಿಗಿ ಬಂದ ತಕ್ಷಣ ಸೇವಕರಿಗೆ ರಥ ಒಪ್ಪಿಸಿ ತಾನು ಮತ್ತೆ ಮಾರನೆಯ ಬೆಳಗಿನವರೆಗೆ ಯಜಮಾನನಂತೆ ಇರಬಹುದಿತ್ತು. ಅವನನ್ನು ಯಾರೂ ಕೇಳುವವರಿಲ್ಲ. ಅವನು ಸಾರಥಿಯಾದದ್ದಕ್ಕೇ ಪಾಂಡವರಿಗೆ ಸಂಕೋಚವಾಗುತ್ತಿತ್ತು. ಅವನ ಯೋಗ್ಯತೆ ಎಲ್ಲರಿಗಿಂತ ಹೆಚ್ಚು ಚೆನ್ನಾಗಿ ಪಾಂಡವರಿಗೆ, ಭೀಷ್ಮ-ದ್ರೋಣ-ಕೃಪರಿಗೆ, ಕಡೆಗೆ ಕರ್ಣನಿಗೂ ಗೊತ್ತಿತ್ತು. ಆದರೆ ಶ್ರೀಕೃಷ್ಣನಾದರೋ ಒಬ್ಬ ಸಾರಥಿಯ ಪ್ರತಿ ಕರ್ತವ್ಯವನ್ನೂ ಮಾಡಿದ. ಕುದುರೆಗಳಿಗೆ ಮೈ ತೊಳೆದ. ಹುಲ್ಲು ತಂದು ತಿನ್ನಿಸಿದ. ಅವುಗಳ ಯೋಗಕ್ಷೇಮ ನೋಡಿದ ನಂತರ ತನ್ನ ಸ್ನಾನ, ಆಹ್ನಿಕ, ಊಟೋಪಚಾರಗಳ ಕಡೆಗೆ ಗಮನ ಕೊಟ್ಟ. ಮತ್ತೆ ಮಾರನೆಯ ದಿನ ಬೇಗ ಎದ್ದು ಕುದುರೆಗಳ ಯೋಗಕ್ಷೇಮ ನೋಡಿ, ಅವನ್ನು ತಯಾರುಮಾಡಿ ಅರ್ಜುನ ಯುದ್ಧಕ್ಕೆ ಶಿಬಿರದಿಂದ ಹೊರ ಬರುವ ಮುನ್ನ ರಥ ಸಿದ್ಧಪಡಿಸಿ ನಿಂತಿರುತ್ತಿದ್ದ. ಕುರುಕ್ಷೇತ್ರ ಮಹಾಯುದ್ಧದಲ್ಲಿ ಅಷ್ಟೂ ದಿನಗಳಲ್ಲಿ ಯಾರಿಗಾದರೂ ಒಮ್ಮೆಯಾದರೂ ಆಯಾಸ, ಸೋಮಾರಿತನ ಬಂದಿರಬಹುದು. ಶ್ರೀಕೃಷ್ಣನಿಗಲ್ಲ.
ಅರ್ಜುನನಿಗೆ ಸಾರಥಿಯಾದದ್ದು ಸರಿ. ಅವನಿಗೆ ಸಾರಥಿಯಾಗಿ ಮಾಡಬೇಕಾದ ಕೆಲಸ ಮಾಡಿದ್ದು ಸರಿ. ಬೇರೆ ಪಾಂಡವರಿಗೂ ಆಯಾಯಾ ಸಮಯದಲ್ಲಿ ಸಲಹೆ, ಸೂಚನೆ, ಮಾರ್ಗದರ್ಶನ ಕೊಟ್ಟ. ಕಡೆಗೆ ಯುದ್ಧವನ್ನೇ ಗೆದ್ದು ಕೊಟ್ಟ. ಒಮ್ಮೆಯಾದರೂ ಅವರು ನನಗೆ ತೊಂಡರು, ನಾನು ಮೇಲೆ ಎನ್ನುವ ವ್ಯವಹಾರ ಮಾಡಲಿಲ್ಲ. ಕೊನೆಗೆ ಸತ್ತು ಹುಟ್ಟಿದ ಅರ್ಜುನನ ಮೊಮ್ಮಗ, ಅಭಿಮನ್ಯುವಿನ ಮಗ ಪರೀಕ್ಷಿತನನ್ನು ಬದುಕಿಸಿ ಮುಂದೊಂದು ದಿನ ಪಾಂಡವರ ವಾರಸುದಾರನಾಗಿ ಚಕ್ರವರ್ತಿಯಾಗುವಂತೆ ನೋಡಿಕೊಂಡ.
ತನ್ನನ್ನು ನಂಬಿದವರಿಗೆ ಅವರು ತನ್ನ ಹಿಂಬಾಲಕರು, ಸೇವಕರು, ಶಿಷ್ಯರು ಎನ್ನುವುದನ್ನು ನೋಡದೆ ಅವರ ಚಾಕರಿಯನ್ನೂ ಮಾಡುತ್ತಾನೆ ಎನ್ನುವ ಶ್ರೀಕೃಷ್ಣನ ವಿಶೇಷ ಗುಣವನ್ನು ಹೇಳುವುದು ದಾಸರ "ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು" ಎಂದು ಹೇಳುವುದರ ಗುರಿ. ಇಡೀ ಪದದ ಹೃದಯ ಇಲ್ಲಿದೆ. ಇದರ ಜೊತೆಗೆ ಇನ್ನೊಂದು ಪದವನ್ನೂ ಸೇರಿಸಿಕೊಳ್ಳಬೇಕು. ಅದು ಪಲ್ಲವಿಯಲ್ಲಿ ಹೇಳಿರುವುದು. "ಅವ್ವ ಲಕುಮಿರಮಣ, ಇವಗಿಲ್ಲ ಗರುವ". "ಎಲ್ಲೋ ಸ್ವಲ್ಪ ಐಶ್ವರ್ಯ ಇದ್ದರೇ ಅಂತಹವರನ್ನು ಮಾತಾಡಿಸುವಹಾಗಿಲ್ಲ. ಅಷ್ಟು ಅಹಂಕಾರ ಇರುತ್ತದೆ. ಆದರೆ ಈ ಲಕ್ಷ್ಮೀರಮನಾದ ಶ್ರೀಕೃಷ್ಣನ ವ್ಯವಹಾರ ನೋಡಿ. ಗರ್ವದ ಲವಲೇಶವೂ ಇಲ್ಲದಂತೆ ವ್ಯವಹಾರ. ತನ್ನ ಆಜ್ಞಾಧಾರಕರಾದ ಪಾಂಡವರ ಚಾಕರಿಯನ್ನೂ ಮಾಡಿದ!" ಎಂದು ಹೇಳುವುದು ಶ್ರೀಪುರಂದರದಾಸರ ಉದ್ದೇಶ್ಯ.
*****
ಇಲ್ಲಿಯವರೆಗೆ ಒಂಭತ್ತು ಸಂಚಿಕೆಗಳಲ್ಲಿ "ಹೂವ ತರುವರ ಮನೆಗೆ ಹುಲ್ಲ ತರುವ" ಎಂಬ ಶ್ರೀಪುರಂದರದಾಸರ ಕೃತಿಯ ಬಗ್ಗೆ ಯಥಾಶಕ್ತಿ ವಿಚಾರ ಮಾಡಿದೆವು. ಮುಂದಿನ ಸಂಚಿಕೆಯಲ್ಲಿ ಇದರ ಒಟ್ಟಾರೆ ಅಭಿಪ್ರಾಯ ಮತ್ತು ಇಷ್ಟು ಚರ್ಚೆ ಅವಶ್ಯಕವೇ? ಎನ್ನುವ ಪ್ರಶ್ನೆಗೆ ಉತ್ತರ ನೋಡೋಣ.
Sunday, December 15, 2024
ಅರಮನೆಯ ಒಳಗೆ ಸರಿಭಾಗ
Friday, December 13, 2024
ಸರಸಿಜಾಕ್ಷನ ಸಕಲ ಸ್ವಾತಂತ್ರ್ಯ
ಸಾಗರನಮಗಳರಿಯದಂತೆ ಸಸರಾಗದಲಿ ಸಂಚರಿಸುತಿಹ ವುದ್ಯೋಗವೇನು ನಿಮಿತ್ತ ಕಾರಣವಿಲ್ಲ ಲೋಕದಲಿ
ಪರಮಾತ್ಮನ ನಡೆಗಳನ್ನು ಸದಾ ಅವನ ಜೊತೆಯಲ್ಲಿರುವ ಸಾಗರನ ಮಗಳೇ (ಮಹಾಲಕ್ಷ್ಮಿಯೇ) ಅರಿಯಳು. (ಹೆಂಡತಿಗೇ ತಿಳಿಯದಂತೆ ಓಡಾಡುವ ಸ್ವಾತಂತ್ರ್ಯ ಅವನೊಬ್ಬನಿಗೇ ಉಂಟು ಅಂದರೆ ಹೆಚ್ಚು ಹೇಳಬೇಕಾಗಿಲ್ಲ!) ಪೂರ್ಣ ಸ್ವಾತಂತ್ರ್ಯಕ್ಕೆ ಮತ್ತೇನು ಸಾಕ್ಷಿ ಬೇಕು?
ಹೀಗೇ ಮಾಡಲೇಬೇಕೆಂಬ ವಿಧಿಯಿಲ್ಲ. ಹೀಗೆ ಮಾಡಬಾರದೆಂಬ ನಿಷೇಧವಿಲ್ಲ. ಇದೇ ಕ್ರಮದಲ್ಲಿ ಮಾಡಬೇಕೆಂಬ ರೀತಿಯಿಲ್ಲ. ಮಾಡಿದ್ದು ಬದಲಾಯಿಸುವಂತೆ ಇಲ್ಲ ಎನ್ನುವ ಕಟ್ಟಳೆಯಿಲ್ಲ. ಏನನ್ನಾದರೂ ಮಾಡುವಾಗ ಕಾದು ಕುಳಿತುಕೊಳ್ಳದಿದ್ದರೆ ಕೆಲಸ ಕೆಡುತ್ತದೆ ಎನ್ನುವ ಶಂಕೆಯೂ ಇಲ್ಲ. ಯಾರಿಗಾದರೂ ಹೇಳಿ ಮಾಡಬೇಕು ಎಂದಿಲ್ಲ. ಮಾಡಿದಮೇಲಾದರೂ ಯಾರಿಗಾದರೂ ಹೇಳಬೇಕು ಎಂದೂ ಇಲ್ಲ. ಅವನು ಮಾಡಿದ್ದು ಪರೀಕ್ಷಿಸುವ ಆಡಿಟರ್ ಯಾರಿಲ್ಲ. ಅವನು "ಸರ್ವಕಾರ್ತಾ, ನ ಕ್ರೀಯತೇ". "ಎಲ್ಲವನ್ನೂ ಮಾಡುವವನು. ಅವನನ್ನು ಮಾಡುವವರು ಯಾರೂ ಇಲ್ಲ." ಅನನು ಮಾಡುವುದು ಯಾರಿಗೂ ಗೊತ್ತಾಗುವುದೂ ಇಲ್ಲ. ಒಟ್ಟಿನಲ್ಲಿ ಅವನಿಗೆ ಎಲ್ಲಿಯೂ, ಯಾರಿಗೂ ಇಲ್ಲದ ಅಖಂಡ ಮತ್ತು ಇತಿ-ಮಿತಿ ಇಲ್ಲದ ಸಕಲ ಸ್ವಾತಂತ್ರ್ಯ. ಶ್ರೀಪುರಂದರದಾಸರು ತಮ್ಮ ಕೃತಿಯಲ್ಲಿ ಹೇಳಿದ "ತನ್ನ ಸಕಲ ಸ್ವಾತಂತ್ರ್ಯದಲಿ" ಅಂದರೆ ಇದೇ.
ಕೆಲಸಕ್ಕೆ ತಕ್ಕ ಕೂಲಿ. ಸಾಧನೆಗೆ ತಕ್ಕ ಸತ್ಕಾರ. ಇದು ಸಾಮಾನ್ಯ ನಿಯಮ. ಆದರೆ ಅವನು ಈ ಯಾವ ನಿಯಮಗಳಿಗೂ ಮೀರಿದವನು. ಅವನು ಮನಸ್ಸು ಮಾಡಿದರೆ ಸಾಧನೆಯ ಯೋಗ್ಯತೆಯನ್ನೂ ಮೀರಿ ಫಲ ಕೊಡಬಲ್ಲನು.
ಇದನ್ನೇ "ಸರಸಿಜಾಕ್ಷನು ತನ್ನ ಸಕಲ ಸ್ವಾತಂತ್ರ್ಯದಲಿ ಸರಿಭಾಗ ಕೊಡುವ ತನ್ನರಮನೆಯ ಒಳಗೆ" ಎಂದು ದಾಸರು ಹೇಳಿದ್ದಾರೆ. ಇದರ ವಿವರವನ್ನು ಮುಂದೆ ನೋಡೋಣ.
*****
"ಆರಮಾನೆಯ ಒಳಗೆ ಸರಿಭಾಗ" ಮತ್ತು "ತೊಂಡರಿಗೆ ತೊಂಡನಾಗಿ" ಎನ್ನುವುವು ಇನ್ನೂ ಉಳಿದಿವೆ. ಇವನ್ನು ಮುಂದಿನ ಸಂಚಿಕೆಗಳಲ್ಲಿ ನೋಡೋಣ.