Monday, December 16, 2024

ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು


ಶ್ರೀ ಪುರಂದರದಾಸರ "ಹೂವ ತರುವರ ಮನೆಗೆ ಹುಲ್ಲ ತರುವ" ಪದದ ವಿಶೇಷಾರ್ಥಗಳ ವಿವರಗಳನ್ನು ನೋಡುತ್ತಾ ಕಳೆದ ಸಂಚಿಕೆಯಲ್ಲಿ "ಅರಮನೆಯ ಒಳಗೆ ಸರಿಭಾಗ" ಎನ್ನುವ ಶೀರ್ಷಿಕೆಯಡಿ ಪರಮಾತ್ಮನು ಸಾಧನೆಯ ಬಲದಿಂದ ಜೀವನ್ಮರಣ ಚಕ್ರವನ್ನು ದಾಟಿದ ಮುಮುಕ್ಷ ಜೀವರಿಗೆ ಹೇಗೆ ತನ್ನ ಅರಮನೆಗಳಲ್ಲಿ ಸಹಭಾಗ ಅಥವಾ ಸರಿಭಾಗ ಕೊಡುವನು ಎಂಬುದನ್ನು ನೋಡಿದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಈಗ ಮುಂದಿನ ಮತ್ತು ನಮ್ಮ ಚರ್ಚೆಯ ಕಡೆಯ ವಿಷಯವಾದ "ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು" ಎನ್ನುವ ಬಗ್ಗೆ ವಿಚಾರ ಮಾಡೋಣ. 

ಮೊದಲಿಗೆ ಈ ವಿಷಯದ ಹಿನ್ನೆಲೆಯಾಗಿ ಈ ಶೀರ್ಷಿಕೆಗೆ ಕಾರಣವಾದ ಪೂರ್ತಿ ನುಡಿಯನ್ನು ಜ್ಞಾಪಿಸಿಕೊಳ್ಳೋಣ. ಅದು ಹೀಗಿದೆ: 

ಪಾಂಡವರ ಮನೆಯಲ್ಲಿ ಕುದುರೆಗಳ ತಾ ತೊಳೆದು 
ಪುಂಡರೀಕಾಕ್ಷ ತಾ ಹುಲ್ಲನೆ ತಿನಿಸಿದ 
ಅಂಡಜವಾಹನ ಶ್ರೀ ಪುರಂದರ ವಿಠಲನು 
ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು 

ಪಾಂಡವರು ಎನ್ನುವ ಪದಕ್ಕೆ ಹೊಂದುವ ಪುಂಡರೀಕಾಕ್ಷ ಪದವನ್ನು ಶ್ರೀಕೃಷ್ಣನಿಗೆ ಉಪಯೋಗಿಸಿದ್ದಾರೆ. ಪರಮಾತ್ಮನು ವಿಶಾಲವಾದ ಕಣ್ಣುಳ್ಳವನು, ಅರಳಿದ ಕಮಲದಂತೆ ಕಣ್ಣುಳ್ಳವನು, ಅವನ ಕಣ್ಣು ಬಹಳ ವಿಶಾಲವಾಗಿವೆ. ಎಷ್ಟೆಂದು ನಮಗೆ ತಿಳಿಯದು. ನಮಗೆ ಗೊತ್ತಿರುವ ಪದಾರ್ಥಗಳಲ್ಲಿ ಕಮಲ ಅಥವಾ ತಾವರೆ ಹೂವು ಅರಳಿದಾಗ ಮಿಕ್ಕೆಲ್ಲ ಹೂವುಗಳಿಗಿಂತ ಅಗಲವಾಗಿ, ವಿಶಾಲವಾಗಿ ಕಾಣುತ್ತದೆ. ಅದಕ್ಕೆ ಅವನನ್ನು "ಕಮಲ ನಯನ", "ಪುಂಡರೀಕಾಕ್ಷ" ಮುಂತಾಗಿ ಹೇಳುತ್ತೇವೆ. ಅದೇ ಅವನ ಪಾದಗಳನ್ನು ಸೂಚಿಸುವಾಗ "ಪಾದ ಕಮಲಗಳು" ಎನ್ನುತ್ತೇವೆ. ಎರಡು ಪಾದಗಳನ್ನು ಹೇಳುವುದರಿಂದ ಕಮಲಗಳು. ಇಲ್ಲಿ ವಿಶಾಲತೆಗಿಂತ ಕೋಮಲತೆಗೆ ಹೆಚ್ಚು ಪ್ರಾಮುಖ್ಯತೆ. ಕಮಲದ ದಳಗಳಂತೆ ಕೋಮಲವಾದ ಪಾದಗಳು ಉಳ್ಳವನು ಎಂದು. ಕೈಗಳನ್ನು ಹೇಳುವಾಗ "ಕರ ಕಮಲಗಳು", ಅಂದರೆ ಮೃದುವಾದ ಕೈಗಳು ಎಂದು. ಹೀಗೆ ಒಂದೇ ವಿಶೇಷಣ ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಅರ್ಥದಲ್ಲಿ ಪ್ರಯೋಗಿಸುವುದು ರೂಢಿ, 

"ತೊಂಡ" ಎನ್ನುವ ಪದ ಈಗಿನ ಕನ್ನಡದಲ್ಲಿ ಬಳಕೆಯಲ್ಲಿ ಸಾಮಾನ್ಯವಾಗಿ ಮರೆತೇ ಹೋಗಿದೆ. "ತನಿ" ಅನ್ನುವ ಪದದಂತೆ. ತನಿ ಅನ್ನುವ ಪದಕ್ಕೆ ಬಿಡಿ ಎನ್ನುವ ಅರ್ಥ. ಬಿಡಿ ಎಂದರೆ ಹಿಡಿದುಕೊಂಡಿರುವಾಗ ಬಿಡಿ ಎಂದಲ್ಲ. ಒಂಟಿಯಾದ, ಗುಂಪಿಲ್ಲದ ಬಿಡಿ ಎಂದು ಅರ್ಥ. ಬಿಡಿ ಹೂವು ಎಂದಂತೆ. ಹಾಗೆಯೇ ತೊಂಡ ಎಂದರೆ ಸೇವಕ, ಅನುಯಾಯಿ, ಹಿಂಬಾಲಕ, ಎಂದು ಅರ್ಥಗಳು. ಇಲ್ಲಿ ತೊಂಡ ಪದಕ್ಕೆ ಯಜಮಾನ-ಸೇವಕ, ಗುರು-ಶಿಷ್ಯ, ನಾಯಕ-ಹಿಂಬಾಲಕ ಮುಂತಾದ ಸಂಬಂಧಗಳು ಉಂಟು. ತೊಂಡ ಯಾವಾಗಲೂ ಹಿಂದೆ ಇರುವವನು. ಮುಂದೆ ಇರುವವನು ಯಜಮಾನ ಇರಬಹುದು. ತಂಡದ ನಾಯಕ ಇರಬಹುದು. ಅಥವಾ ಗುರುವೇ ಇರಬಹುದು. ಒಟ್ಟಿನಲ್ಲಿ ಮುಂದೆ ಹೋಗುವವನ ಹಿಂಬಾಲಕ ಮತ್ತು ಅವನ ಮಾತು ಕೇಳುತ್ತ ಮುನ್ನಡೆಯುವವನು ತೊಂಡ. ಇದು ನಮಗೆ ಚೆನ್ನಾಗಿ ಮನನವಾದರೆ ಈ ಶೀರ್ಷಿಕೆಯ ಅರ್ಧ ಅರ್ಥ ಗೊತ್ತಾದಂತೆ. 

ದಾಸರು ಪುರಂದರ ವಿಠ್ಠಲನಿಗೆ ಒಂದು ವಿಶೇಷಣ ಕೊಟ್ಟಿದಾರೆ. ಅದು ಅವನ ಒಂದು ಗುರುತೂ ಹೌದು. ಶ್ರೀಹರಿ ಅಥವಾ ಶ್ರೀಕೃಷ್ಣನಿಗೆ ಶೇಷಶಯನ, ಗರುಡವಾಹನ, ಆಂಜನೇಯ ವರದ, ಕಮಲಾಪತಿ, ಮತ್ತು ಇವುಗಳ ಇತರ ಪರ್ಯಾಯ ಪದಗಳ ಉಪಯೋಗ ಸಾಮಾನ್ಯ. ಇಲ್ಲಿ ದಾಸರು ಪ್ರಯೋಗಿಸಿರುವ ವಿಶೇಷಣ "ಅಂಡಜಾ ವಾಹನ". ಅಂಡಜ ಅಂದರೆ ಮೊಟ್ಟೆಯಿಂದ ಹುಟ್ಟಿದವನು. ಗರುಡ ಪಕ್ಷಿ ಮೊಟ್ಟೆಯಿಂದ ಹುಟ್ಟುತ್ತದೆ. ಅ ಗರುಡನು ಶ್ರೀಹರಿಯ ವಾಹನ. ಆದ್ದರಿಂದ ಅಂಡಜ ವಾಹನ ಪ್ರಯೋಗ. ಇದಕ್ಕೆ ಇನ್ನೂ ವಿಶೇಷಾರ್ಥ ಉಂಟು. 

*****

ಎಲ್ಲ ದೇವತೆಗಳ ವಾಹನಗಳು ನೆಲದ ಮೇಲೆ ಸಂಚರಿಸುವ ಪ್ರಾಣಿಗಳು. ಶ್ರೀಹರಿಯ ವಾಹನವಾದ ಗರುಡನು ಆಕಾಶ ಮಾರ್ಗದಲ್ಲಿ ಸಂಚರಿಸುವ ಪಕ್ಷಿರಾಜನು. ಆಕಾಶಮಾರ್ಗದಲ್ಲಿ ಸಂಚರಿಸುವವನಾದದುರಿಂದ ಯಾವ ಅಡೆತಡೆಗಳಿಲ್ಲ. ಅಂತಹ ವಾಹನದ ಮೇಲೆ ಶೀಘ್ರವಾಗಿ ಸಂಚರಿಸುವವನು ಮಹಾವಿಷ್ಣು. ಗರುಡನು ಎಷ್ಟು ಬಲಶಾಲಿ ಎನ್ನುವುದು ಅವನು ಹುಟ್ಟಿದ ಸಮಾಚಾರದಲ್ಲಿಯೇ ಸೇರಿದೆ. ತನ್ನ ತಾಯಿ ವಿನುತೆಯ ದಾಸ್ಯ ಬಿಡುಗಡೆ ಮಾಡಲು ದೊಡ್ಡಮ್ಮ ಕದ್ರು ಅಮೃತ ಬೇಡಿದಳು. ಅಮೃತ ಇರುವುದು ದೇವೇಂದ್ರನ ಸುಪರ್ದಿನಲ್ಲಿ. ದೇವೇಂದ್ರನೊಡನೆ ಹೋರಾಡಿ, ವಜ್ರಾಯುಧದ ಏಟಿಗೆ ಅಲ್ಲಾಡದೆ ಅಮೃತ ತಂದು ತಾಯಿಯ ದಾಸ್ಯ ಬಿಡುಗಡೆ ಮಾಡಿದವನು ಗರುಡ. ಅಂತಹ ಗರುಡನು ವಿಷ್ಣುವಿನ ವಾಹನ. ಒಮ್ಮೆ ಗರುಡನಿಗೆ "ನನ್ನಿಂದಲೇ ವಿಷ್ಣುವು ಎಲ್ಲಕಡೆ ಸಂಚರಿಸುತ್ತಾನೆ. ಅವನನ್ನೂ ಹೊತ್ತು ತಿರುಗುವ ನಾನೇ ಎಷ್ಟು ಬಲಶಾಲಿ!" ಎಂದು ಜಂಬ ಬಂತಂತೆ. ಆಗ ವಿಷ್ಣು "ಹೌದು. ನೀನು ಬಹಳ ಬಲಶಾಲಿ. ನನ್ನ ಕಿರುಬೆರಳು ಹೊರು ನೋಡೋಣ" ಎಂದು ತನ್ನ ಕಿರುಬೆರಳಿನಲ್ಲಿ ಅದುಮಿದನಂತೆ. ಗರುಡನಿಗೆ ಬಿಡಿಸಿಕೊಳ್ಳಲಾರದೆ ತತ್ತರಿಸುವಾಗ ಜ್ಞಾನೋದಯ ಆಯಿತು. ಸ್ವಾಮಿಯು ನನಗೆ ಹೊರುವ ಬಲ ಕೊಟ್ಟು, ವಾಸ್ತವವಾಗಿ ನನ್ನನ್ನೂ ಹೊತ್ತುಕೊಂಡು ಓಡಾಡಿದರೂ, ನನಗೆ ಕೀರ್ತಿ ಬರಲೆಂದು ನನ್ನನ್ನು ವಾಹನವಾಗಿ ಉಪಯೋಗಿಸುತ್ತಿದ್ದಾನೆ ಎಂದು ತಿಳಿಯಿತು. ಹೀಗೆ "ಬ್ರಹ್ಮ ಪುರಾಣ"ದಲ್ಲಿ  ಉಲ್ಲೇಖವಿದೆ. ಇಂತಹ ಗರುಡ ವಾಹನನು ಶ್ರೀಕೃಷ್ಣನಾದಾಗ ತನ್ನ ಅನುಯಾಯಿಯಾದ ಪಾರ್ಥನಿಗೆ ಸಾರಥಿಯಾಗಿ ಕೆಲಸ ಮಾಡಿದನು. ಯಾರನ್ನು ಗರುಡನೇ ಹೊರುತ್ತಾನೋ, ಅಂತಹ ಸ್ವಾಮಿಯು ಅರ್ಜುನನ ಸಾರಥಿಯಾದನು. 

ಗರುಡ, ಶೇಷ, ಹನುಮಾದಿಗಳು ನಮಗೆ ಸ್ವಾಮಿಯನ್ನು ಹೊರುವ ಅವಕಾಶ ಸಿಕ್ಕೀತೇ ಎಂದು ಕಾಯ್ದು ನಿಂತಿರುತ್ತಾರಂತೆ. ಅಂತಹ ಸ್ವಾಮಿಯು ತಾನೇ ಮೀನ-ಮೇಷ ಎಣಿಸದೆ ಸಾರಥಿಯ ಕೆಲಸವನ್ನೂ ಒಪ್ಪಿಕೊಂಡ. ಒಪ್ಪಿಕೊಂಡದ್ದು ಮಾತ್ರವಲ್ಲ; ಒಪ್ಪವಾಗಿ ಮಾಡಿ ಮುಗಿಸಿದ. 

ಅರ್ಜುನನ ಜೊತೆ ಅಂತಿಮ ಯುದ್ಧ ಬಂದಾಗ ಕರ್ಣ ದುರ್ಯೋಧನನ ಬಳಿ ಕೊರಗುತ್ತಾನೆ. "ನೋಡು ದುರ್ಯೋಧನ, ಅರ್ಜುನನಿಗೆ ಕೃಷ್ಣನಂಥ ಸಾರಥಿ ಇದ್ದಾನೆ. ನನಗೆ ಸರಿಯಾದ ಸಾರಥಿಯೇ ಇಲ್ಲ. ಏನುಮಾಡಲಿ?" ಎಂದು. ದುರ್ಯೋಧನ ಶಲ್ಯ ಮಹಾರಾಜನನ್ನು ಕರ್ಣನ ಸಾರಥಿಯಾಗುವಂತೆ ಬೇಡುತ್ತಾನೆ. ಮೂರು ದಿನ ಸಾರಥಿಯಾಗಲು ಶಲ್ಯ ಎಷ್ಟು ಕೂಗಾಡುತ್ತಾನೆ! "ನಾನೊಬ್ಬ ರಾಜ. ಅವನೊಬ್ಬ ಸೂತಪುತ್ರ. ಮಹಾರಥಿಯಾದ ನಾನು ಅಂತಹವನಿಗೆ ಬಂಡಿ ಹೊಡೆಯುವ ದಾಸ ಆಗಬೇಕೇ? ನಿನಗೆ ಕೇಳುವ ಮನಸ್ಸಾದರೂ ಹೇಗೆ ಬಂತು?" ಎಂದು ಎಗರಾಡುತ್ತಾನೆ. ಕಡೆಗೆ ಒಪ್ಪಿದರೂ ಅರೆ ಮನಸ್ಸಿನಿಂದ ಕರ್ಣನಿಗೆ ನಿರುತ್ಸಾಹ ತುಂಬುವ ರೀತಿಯಲ್ಲಿಯೇ ನಡೆದುಕೊಳ್ಳುತ್ತಾನೆ. ಶಲ್ಯನೆಲ್ಲಿ? ಶ್ರೀಕೃಷ್ಣನೆಲ್ಲಿ? ಅಂತಹ ಗರುಡವಾಹನನಾದ ಶ್ರೀಕೃಷ್ಣ ತನ್ನ ಅನುಯಾಯಿ, ಹಿಂಬಾಲಕನಾದ ಅರ್ಜುನನಿಗೆ ಸಾರಥಿಯಾಗಲು ಸ್ವಲ್ಪವೂ ಹಿಂದೆ ಮುಂದೆ ನೋಡಲಿಲ್ಲ. ಶಲ್ಯನಂತೆ ರಥಿಕ-ಸಾರಥಿಯರ ಯೋಗ್ಯತೆ ಅಳೆಯಲಿಲ್ಲ. ತೊಂಡನಾದ ಪಾರ್ಥನಿಗೆ ತೊಂಡನಾದ ರಥ ಹೊಡೆಯುವ ಸಾರಥಿಯಾದ! ಯಜಮಾನನಾದವನು ತನ್ನ ತೊಂಡನಿಗೇ ತೊಂಡನಾಗಿ ವ್ಯವಹರಿಸಿದ. 

ಶಲ್ಯ ಹೆಜ್ಜೆ ಹೆಜ್ಜೆಗೂ ಕರ್ಣನಿಗೆ ಚುಚ್ಚುತ್ತಿದ್ದ. ಹೀಗಳೆಯುತ್ತಿದ್ದ. ಶ್ರೀಕೃಷ್ಣ ಪಾರ್ಥನಿಗೆ ಗೀತೋಪದೇಶದಿಂದ ಪ್ರಾರಂಭಿಸಿ, ಹೆಜ್ಜೆ ಹೆಜ್ಜೆಗೂ ತಲೆ ಕಾಯ್ದ. ಅನೇಕ ಸಾರಿ ಸಿದ್ಧವಾದ ಮರಣ ಮತ್ತು ಸೋಲು ತಪ್ಪಿಸಿದ. ಒಮ್ಮೆಯಾದರೂ ತನ್ನ-ಅವನ ಯೋಗ್ಯತೆಯ ಬಗ್ಗೆ ಮಾತನಾಡದೆ ಎಲ್ಲ ಸಾರಥಿಗಳಿಗೆ ಮಾದರಿಯಾದ ರೀತಿ ವರ್ತಿಸಿದ. ತೊಂಡನಿಗೆ ತೊಂಡನಾಗಿ ಮಾಡಿ ತೋರಿಸಿದ. 

*****

ಶ್ರೀಕೃಷ್ಣ ಸಾರಥಿಯಾಗಿ ಕೆಲಸ ಮಾಡಿದ. ಯುದ್ದದಿಂದ ದಿನದ ಕೊನೆಯಲ್ಲಿ ಪಾಳೆಯಕ್ಕೆ ಹಿಂದುರಿಗಿ ಬಂದ ತಕ್ಷಣ ಸೇವಕರಿಗೆ ರಥ ಒಪ್ಪಿಸಿ ತಾನು ಮತ್ತೆ ಮಾರನೆಯ ಬೆಳಗಿನವರೆಗೆ ಯಜಮಾನನಂತೆ ಇರಬಹುದಿತ್ತು. ಅವನನ್ನು ಯಾರೂ ಕೇಳುವವರಿಲ್ಲ. ಅವನು ಸಾರಥಿಯಾದದ್ದಕ್ಕೇ ಪಾಂಡವರಿಗೆ ಸಂಕೋಚವಾಗುತ್ತಿತ್ತು. ಅವನ ಯೋಗ್ಯತೆ ಎಲ್ಲರಿಗಿಂತ ಹೆಚ್ಚು ಚೆನ್ನಾಗಿ ಪಾಂಡವರಿಗೆ, ಭೀಷ್ಮ-ದ್ರೋಣ-ಕೃಪರಿಗೆ, ಕಡೆಗೆ ಕರ್ಣನಿಗೂ ಗೊತ್ತಿತ್ತು. ಆದರೆ ಶ್ರೀಕೃಷ್ಣನಾದರೋ ಒಬ್ಬ ಸಾರಥಿಯ ಪ್ರತಿ ಕರ್ತವ್ಯವನ್ನೂ ಮಾಡಿದ. ಕುದುರೆಗಳಿಗೆ ಮೈ ತೊಳೆದ. ಹುಲ್ಲು ತಂದು ತಿನ್ನಿಸಿದ. ಅವುಗಳ ಯೋಗಕ್ಷೇಮ ನೋಡಿದ ನಂತರ ತನ್ನ ಸ್ನಾನ, ಆಹ್ನಿಕ, ಊಟೋಪಚಾರಗಳ ಕಡೆಗೆ ಗಮನ ಕೊಟ್ಟ. ಮತ್ತೆ ಮಾರನೆಯ ದಿನ ಬೇಗ ಎದ್ದು ಕುದುರೆಗಳ ಯೋಗಕ್ಷೇಮ ನೋಡಿ, ಅವನ್ನು ತಯಾರುಮಾಡಿ ಅರ್ಜುನ ಯುದ್ಧಕ್ಕೆ ಶಿಬಿರದಿಂದ ಹೊರ ಬರುವ ಮುನ್ನ ರಥ ಸಿದ್ಧಪಡಿಸಿ ನಿಂತಿರುತ್ತಿದ್ದ. ಕುರುಕ್ಷೇತ್ರ ಮಹಾಯುದ್ಧದಲ್ಲಿ ಅಷ್ಟೂ ದಿನಗಳಲ್ಲಿ ಯಾರಿಗಾದರೂ ಒಮ್ಮೆಯಾದರೂ ಆಯಾಸ, ಸೋಮಾರಿತನ ಬಂದಿರಬಹುದು. ಶ್ರೀಕೃಷ್ಣನಿಗಲ್ಲ. 

ಅರ್ಜುನನಿಗೆ ಸಾರಥಿಯಾದದ್ದು ಸರಿ. ಅವನಿಗೆ ಸಾರಥಿಯಾಗಿ ಮಾಡಬೇಕಾದ ಕೆಲಸ ಮಾಡಿದ್ದು ಸರಿ. ಬೇರೆ ಪಾಂಡವರಿಗೂ ಆಯಾಯಾ ಸಮಯದಲ್ಲಿ ಸಲಹೆ, ಸೂಚನೆ, ಮಾರ್ಗದರ್ಶನ ಕೊಟ್ಟ. ಕಡೆಗೆ ಯುದ್ಧವನ್ನೇ ಗೆದ್ದು ಕೊಟ್ಟ. ಒಮ್ಮೆಯಾದರೂ ಅವರು ನನಗೆ ತೊಂಡರು, ನಾನು ಮೇಲೆ ಎನ್ನುವ ವ್ಯವಹಾರ ಮಾಡಲಿಲ್ಲ. ಕೊನೆಗೆ ಸತ್ತು ಹುಟ್ಟಿದ ಅರ್ಜುನನ ಮೊಮ್ಮಗ, ಅಭಿಮನ್ಯುವಿನ ಮಗ ಪರೀಕ್ಷಿತನನ್ನು ಬದುಕಿಸಿ ಮುಂದೊಂದು ದಿನ ಪಾಂಡವರ ವಾರಸುದಾರನಾಗಿ ಚಕ್ರವರ್ತಿಯಾಗುವಂತೆ ನೋಡಿಕೊಂಡ. 

ತನ್ನನ್ನು ನಂಬಿದವರಿಗೆ ಅವರು ತನ್ನ ಹಿಂಬಾಲಕರು, ಸೇವಕರು, ಶಿಷ್ಯರು ಎನ್ನುವುದನ್ನು ನೋಡದೆ ಅವರ ಚಾಕರಿಯನ್ನೂ ಮಾಡುತ್ತಾನೆ ಎನ್ನುವ ಶ್ರೀಕೃಷ್ಣನ ವಿಶೇಷ ಗುಣವನ್ನು ಹೇಳುವುದು ದಾಸರ "ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು" ಎಂದು ಹೇಳುವುದರ ಗುರಿ. ಇಡೀ ಪದದ ಹೃದಯ ಇಲ್ಲಿದೆ. ಇದರ ಜೊತೆಗೆ ಇನ್ನೊಂದು ಪದವನ್ನೂ ಸೇರಿಸಿಕೊಳ್ಳಬೇಕು. ಅದು ಪಲ್ಲವಿಯಲ್ಲಿ ಹೇಳಿರುವುದು. "ಅವ್ವ ಲಕುಮಿರಮಣ, ಇವಗಿಲ್ಲ ಗರುವ". "ಎಲ್ಲೋ ಸ್ವಲ್ಪ ಐಶ್ವರ್ಯ ಇದ್ದರೇ ಅಂತಹವರನ್ನು ಮಾತಾಡಿಸುವಹಾಗಿಲ್ಲ. ಅಷ್ಟು ಅಹಂಕಾರ ಇರುತ್ತದೆ. ಆದರೆ ಈ ಲಕ್ಷ್ಮೀರಮನಾದ ಶ್ರೀಕೃಷ್ಣನ ವ್ಯವಹಾರ ನೋಡಿ. ಗರ್ವದ ಲವಲೇಶವೂ ಇಲ್ಲದಂತೆ ವ್ಯವಹಾರ. ತನ್ನ ಆಜ್ಞಾಧಾರಕರಾದ ಪಾಂಡವರ ಚಾಕರಿಯನ್ನೂ ಮಾಡಿದ!" ಎಂದು ಹೇಳುವುದು ಶ್ರೀಪುರಂದರದಾಸರ ಉದ್ದೇಶ್ಯ. 

*****

ಇಲ್ಲಿಯವರೆಗೆ ಒಂಭತ್ತು ಸಂಚಿಕೆಗಳಲ್ಲಿ "ಹೂವ ತರುವರ ಮನೆಗೆ ಹುಲ್ಲ ತರುವ" ಎಂಬ ಶ್ರೀಪುರಂದರದಾಸರ ಕೃತಿಯ ಬಗ್ಗೆ ಯಥಾಶಕ್ತಿ ವಿಚಾರ ಮಾಡಿದೆವು. ಮುಂದಿನ ಸಂಚಿಕೆಯಲ್ಲಿ ಇದರ ಒಟ್ಟಾರೆ ಅಭಿಪ್ರಾಯ ಮತ್ತು ಇಷ್ಟು ಚರ್ಚೆ ಅವಶ್ಯಕವೇ? ಎನ್ನುವ ಪ್ರಶ್ನೆಗೆ ಉತ್ತರ ನೋಡೋಣ.

Sunday, December 15, 2024

ಅರಮನೆಯ ಒಳಗೆ ಸರಿಭಾಗ


ಶ್ರೀ ಪುರಂದರದಾಸರ "ಹೂವ ತರುವರ ಮನೆಗೆ ಹುಲ್ಲ ತರುವ" ಪದದ ವಿಶೇಷಾರ್ಥಗಳ ವಿವರಗಳನ್ನು ನೋಡುತ್ತಾ ಕಳೆದ ಸಂಚಿಕೆಯಲ್ಲಿ "ಸರಸಿಜಾಕ್ಷನ ಸಕಲ ಸ್ವಾತಂತ್ರ್ಯ" ಎನ್ನುವ ಶೀರ್ಷಿಕೆಯಡಿ ಪರಮಾತ್ಮನ ಪರಿಪೂರ್ಣತ್ವ ಮತ್ತು ಸಕಲ ಸ್ವಾತಂತ್ರ್ಯದ ವಿಶೇಷ ಗುಣಗಳನ್ನು ನೋಡಿದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಈಗ ಮುಂದಿನ ವಿಷಯವಾದ "ಸರಿಭಾಗ ಕೊಡುವನು ತನ್ನ ಅರಮನೆಯ ಒಳಗೆ" ಎನ್ನುವ ಬಗ್ಗೆ ವಿಚಾರ ಮಾಡೋಣ. 

ಬಹಳ ಶ್ರೀಮಂತನಾದ ಮತ್ತು ಅನೇಕ ಮನೆಗಳನ್ನು ಹೊಂದಿರುವ, ನಮಗೆ ತಿಳಿದಿರುವ ಒಬ್ಬ ವ್ಯಕ್ತಿಯ ಉದಾಹರಣೆ ತೆಗೆದುಕೊಳ್ಳೋಣ. ಆತನಿಗೆ ನಗರದಲ್ಲಿ ಅನೇಕ ಮನೆಗಳ ಮೇಲೆ ಅಧಿಕಾರ ಉಂಟು. ನಗರದ ಹೊರಗೂ ಅನೇಕ ಪ್ರದೇಶಗಳಲ್ಲಿಯೂ ತನ್ನದೇ ಆದ ಮನೆಗಳಿವೆ. ಇಷ್ಟೆಲ್ಲಾ ಇದ್ದರೂ ಎಲ್ಲೋ ಒಂದು ಕಡೆ ತನಗೇ ಎಂದುಕೊಂಡು ಒಂದು ಮನೆ ಇಟ್ಟುಕೊಂಡೇ ಇರುತ್ತಾನೆ. ಮಿಕ್ಕ ಮನೆಗಳೆಲ್ಲವೂ ಅವನ ಮನೇಗಳೇ ಆದರೂ ಅವನ ಮನೆಯ ವಿಳಾಸ ಕೇಳಿದರೆ ಈ ಮನೆಯ ವಿಳಾಸ ಕೊಡುತ್ತಾನೆ. ಎಲ್ಲಾ ಮನೆಗಳು ಅವನವೇ ಆದರೂ ವಾಸಸ್ಥಳದ ವಿಳಾಸಕ್ಕಾಗಿ ಒಂದು ಖಚಿತವಾದ ಮನೆಯ ವಿಳಾಸ ಕೊಡಲೇಬೇಕಲ್ಲವೇ? 

ಒಬ್ಬ ವ್ಯಕ್ತಿ ಒಂದು ಉದ್ಯೋಗದಲ್ಲಿದ್ದಾನೆ. ಆ ಉದ್ಯೋಗದ ನಿಮಿತ್ತ ಆತ ಹೆಚ್ಚು ಕಾಲ ಸಂಚಾರಿಯಾಗಿರುತ್ತಾನೆ. ಈ ರೀತಿಯಿದ್ದರೂ ಅವನಿಗೆ ಒಂದು ನಿಗದಿತ ಮುಖ್ಯ ಸ್ಥಾನ (ಹೆಡ್ ಕ್ವಾರ್ಟರ್ಸ್) ಎಂದು ಇರುತ್ತದೆ. ಇದು ಲೋಕಾರೂಢಿ. 

ಪರಮಾತ್ಮನಾದ ಶ್ರೀಹರಿಯು ಎಲ್ಲೆಡೆ ಇದ್ದಾನೆ. ಎಲ್ಲೆಡೆ ಇರುವುದೇನು? ಸಮಸ್ತ ವಿಶ್ವವೂ ಅವನ ಉದರದಲ್ಲಿ ಇದೆ. ಅದಕ್ಕೇ ಅವನನ್ನು "ಜಗದುದರ" ಎನ್ನುವುದು. ಅವನು ಇಡೀ ವಿಶ್ವದ ಹೊರಗೂ ವ್ಯಾಪಿಸಿ ನಿಂತಿದ್ದಾನೆ. ಹೀಗಿದ್ದರೂ ಮೇಲೆ ಹೇಳಿದ ವ್ಯಕ್ತಿಗಳಂತೆ ತನ್ನದು ಎನ್ನುವಂತೆ ಒಂದು ವಿಳಾಸವನ್ನು ಇಟ್ಟುಕೊಂಡಿದ್ದಾನೆ. ಅದಕ್ಕೆ "ವೈಕುಂಠ" ಎಂದು ಹೆಸರು. ಆದ ಕಾರಣ ಶ್ರೀ ಹರಿಯು ವೈಕುಂಠದಲ್ಲಿ ಇದ್ದಾನೆ ಎನ್ನುತ್ತಾರೆ. ಅಂದಮಾತ್ರಕ್ಕೆ ಅವನು ಕೇವಲ ವೈಕುಂಠದಲ್ಲಿ ಇದ್ದಾನೆ ಎಂದು ಭಾವಿಸಬಾರದು. ವೈಕುಂಠದ ಜೊತೆಗೆ ಇನ್ನೆರಡು ಮನೆಗಳನ್ನೂ ತನ್ನ ವಿಳಾಸದಲ್ಲಿ ಸೇರಿಸಿಕೊಂಡಿದ್ದಾನೆ. ಬೇಕಿದ್ದರೆ ಅವನ್ನು ಮೂರು ಮನೆಗಳುಳ್ಳ ಒಂದು ರೆಸಾರ್ಟ್ ಎನ್ನಬಹುದು. ಇನ್ನೆರಡು ಮನೆಗಳ ಹೆಸರು "ಶ್ವೇತದ್ವೀಪ" ಮತ್ತು "ಅನಂತಾಸನ" ಎಂಬ ಸ್ಥಳಗಳು. ಇವು ಮೂರೂ ಅವನ ಮನೆಗಳು ಎಂದು ತಿಳಿಯಬೇಕು. 

ಶ್ರೀ ಪುರಂದರದಾಸರು "ಹೂವ ತರುವರ ಮನೆಗೆ ಹುಲ್ಲ ತರುವ" ದೇವರನಾಮದಲ್ಲಿ "ಸರಿ ಭಾಗ ಕೊಡುವ ತನ್ನ ಅರಮನೆಯ ಒಳಗೆ" ಎಂದಾಗ ಈ ಮೂರು ಅರಮನೆಗಳಾದ "ಶ್ರೀ ವೈಕುಂಠ" "ಶ್ವೇತದ್ವೀಪ" ಮತ್ತು  "ಅನಂತಾಸನ" ಎಂದು ತಿಳಿಯಬೇಕು. ತಮ್ಮ ಅನೇಕ ಜನ್ಮಗಳ ಸಾಧನೆಯ ಫಲವಾಗಿ ಜೀವನ್ಮರಣ ಚಕ್ರದಿಂದ ಪಾರಾಗಿ ವಿಷವರ್ತುಲದಿಂದ ಹೊರಬಂದ ಜೀವರಿಗೆ "ಜೀವನ್ಮುಕ್ತರು" ಅಥವಾ "ಮುಮುಕ್ಷ ಜೀವರು" ಎನ್ನುತ್ತಾರೆ. ಪರಮಾತ್ಮನು ಈ ಜೀವನ್ಮುಕ್ತರಿಗೆ ತನ್ನ ಅರಮನೆಗಳಾದ ವೈಕುಂಠ, ಶ್ವೇತದ್ವೀಪ ಮತ್ತು ಅನಂತಾಸನಗಳಲ್ಲಿ ವಾಸ ಮಾಡಲು ಅವಕಾಶ ಮಾಡಿಕೊಡುತ್ತಾನೆ. 

***** 

ನಾವು ಧರಿಸುವ ಉಡುಪಿನಲ್ಲಿ ಅನೇಕ ಪದರಗಳಿರುತ್ತವೆ. ಮೊದಲಿಗೆ ಒಳ ಉಡುಪು. ಅದರಮೇಲೆ ಸಾಮಾನ್ಯ ಉಡುಪು. ಸುಂದರವಾಗಿ ಕಾಣಲೆಂದು ಹೊರ ಉಡುಪು ಬೇರೆ. ಚಳಿಗಾಲದಲ್ಲಿ ಅವುಗಳ ಮೇಲೆ ಉಣ್ಣೆಯ ಸ್ವೆಟರ್, ಇತ್ಯಾದಿ. ಜೀವನೂ ಹಾಗೆ. ಜೀವನು ಅತಿ ಸೂಕ್ಷ್ಮನಾಗಿದ್ದಾನೆ. ಅವನ ಮೇಲೆ "ಲಿಂಗದೇಹ" ಇದೆ. ಇದು ನಮ್ಮ ಚರ್ಮದ ಹೊದಿಕೆ ಇದ್ದಂತೆ. ಲಿಂಗ ದೇಹದ ಮೇಲೆ "ಅನಿರುದ್ಧ ದೇಹ" ಉಂಟು. ಅದರಮೇಲೆ ಎಲ್ಲರಿಗೂ ನಾವು ಕಾಣುವಂತೆ ಈ ಪಂಚಭೂತಗಳಿಂದ ಮಾಡಿದ ದೇಹ. ಈ ಪಂಚ ಭೂತಗಳ ದೇಹ ಆಗಾಗ, ಪ್ರತಿ ಜನ್ಮದ ಕೊನೆಗೆ, ಬಿದ್ದು ಹೋಗುತ್ತದೆ. ಮುಂದಿನ ಜನ್ಮದಲ್ಲಿ ಆ ಜನ್ಮಕ್ಕೆ ತಕ್ಕಂತೆ ಮತ್ತೊಂದು ಹೊಸ ದೇಹ ಬರುತ್ತದೆ. ಹೀಗೆ ಜೀವಿಯು ಪಂಚಭೂತದ ದೇಹಗಳನ್ನು ಬದಲಾಯಿಸುತ್ತ ಇರಬೇಕಾದ ಅನಿವಾರ್ಯತೆ ಇದೆ. ಭಗವದ್ಗೀತೆಯಲ್ಲಿ ಗೀತಾಚಾರ್ಯನು "ವಾಸಾಂಸಿ ಜೀರ್ಣಾನಿ ಯಥಾ ವಿಹಾಯ" ಎಂದು ಹೇಳಿದ್ದು ಇದನ್ನೇ. 

ಈ ಪಂಚಭೂತದ ದೇಹಕ್ಕೆ "ವರುಣ ಪಾಶ" ಮತ್ತು "ಯಮ ಪಾಶ" ಎನ್ನುವ ಎರಡು ಕಟ್ಟುಗಳು೦ಟು. ವರುಣಪಾಶದಿಂದ "ಜರಾ" (ಅಂದರೆ ಮುಪ್ಪು-ಖಾಯಿಲೆಗಳು) ಬರುತ್ತವೆ. ಈ ವರುಣಪಾಶದ ಬಲೆಯಿಂದ ತಪ್ಪಿಸಿಕೊಂಡರೆ, ಅಂದರೆ "ಜರಾ"ದಿಂದ ತಪ್ಪಿಸಿಕೊಂಡರೆ ಜೀವಿ "ಅಜರ" ಆಗುತ್ತಾನೆ. ಯಮಪಾಶದಿಂದ "ಮರಣ" ಬರುತ್ತದೆ. ಈ ಯಮಪಾಶದಿಂದ ತಪ್ಪಿಸಿಕೊಂಡರೆ, ಅಂದರೆ ಮರಣದಿಂದ ತಪ್ಪಿಸಿಕೊಂಡರೆ "ಅಮರ" ಆಗುತ್ತಾನೆ. ಇವೆರಡನ್ನು ಸೇರಿಸಿಯೇ "ಅಜರ-ಅಮರ" ಪದ ಹುಟ್ಟಿದೆ. ಅವರ ಹೆಸರು "ಅಜರಾಮರ"  ಆಯಿತು ಎನ್ನುತ್ತೇವೆ, ಅಂದರೆ ಅವರ ಹೆಸರು ಶಾಶ್ವತವಾಗಿ ಉಳಿಯಿತು ಎಂದು. 

ಸಾಧನೆಯ ತುಟ್ಟ ತುದಿ ತಲುಪಿದ ಜೀವಿಗೆ ಪರಮಾತ್ಮನು ಹುಟ್ಟು-ಸಾವಿನಿಂದ ಬಿಡುಗಗೆ ಕೊಡುತ್ತಾನೆ. ಇದನ್ನೇ "ಮೋಕ್ಷ" ಎನ್ನುತ್ತಾರೆ.  ಈಗ ಲಿಂಗದೇಹ, ಅನಿರುದ್ಧ ದೇಹ ಬೇಕಾಗಿಲ್ಲ. ಯಾಕೆಂದರೆ, ಇನ್ನು ಮುಂದೆ ದೇಹ ಬದಲಾಯಿಸುವ ಅವಶ್ಯಕತೆ ಇಲ್ಲ. ಅದಕ್ಕೆ ಲಕ್ಷ್ಮೀದೇವಿಯು ಈ ಮಟ್ಟ ತಲುಪಿದ ಜೀವರಿಗೆ ಲಿಂಗ ದೇಹ ಭಂಗ ಮಾಡಿಸಿ "ಮುಕ್ತಿ ಮಂಟಪ"ಕ್ಕೆ ಕರೆದೊಯ್ಯುತ್ತಾಳೆ. ಅಲ್ಲಿ ಪರಮಾತ್ಮನು ತನ್ನ ಸಕಲ ಸ್ವಾತಂತ್ರ್ಯದಲ್ಲಿ ಮುಕ್ತಿಯ, ಎಂದೂ ಕೊನೆಯಾಗದ ದಿವ್ಯಾನಂದವನ್ನು ಅನುಭವಿಸಲು ದಿವ್ಯವಾದ "ಸ್ವರೂಪ ದೇಹ" ಕೊಡುತ್ತಾನೆ. ಇದಕ್ಕೆ ಜರಾ-ಮರಣಗಳಿಲ್ಲ. ಕೊನೆಯಿಲ್ಲ. ಇದರಿಂದ ಜೀವನು ಹುಟ್ಟು-ಸಾವಿನ ಭಯವಿಲ್ಲದ, ಕೊನೆಯಿಲ್ಲದ, ಮುಕ್ತಿಯಲ್ಲಿನ ಆನಂದಗಳನ್ನು ಅನುಭವಿಸುತ್ತಾನೆ. 

*****

ಒಂದು ಮನೆ ಇದೆ. ನಲವತ್ತು ಅಡಿ ಅಗಲ, ಅರವತ್ತು ಅಡಿ ಉದ್ದದ ನಿವೇಶನದ ಮೇಲೆ ಕಟ್ಟಿದ್ದಾರೆ. ಹತ್ತು ಚದರ ಕಟ್ಟಿದ್ದಾರೆ ಅನ್ನಿ. ಇದು ಒಬ್ಬರಿಗೆ ಸೇರಿದ್ದು. ಒಬ್ಬರದ್ದೇ ಆದರೆ ಯೋಚನೆಯಿಲ್ಲ. ತಂದೆ ಇರುವವರೆಗೆ ಅವರದ್ದೇ ಅಧಿಕಾರ. ತಂದೆಯ ನಂತರ ಇಬ್ಬರು ಮಕ್ಕಳಿಗೆ ಮನೆ ಸೇರುತ್ತದೆ. ಇಬ್ಬರು ಮಕ್ಕಳಿಗೂ ಸಮಾನ ಅಧಿಕಾರ. ಈಗ ಮನೆ ಭಾಗ ಮಾಡಿ ಇಬ್ಬರಿಗೂ ಕೊಡಬೇಕು. ಉದ್ದುದ್ದ ಭಾಗ ಮಾಡಿದರೆ ಇಬ್ಬರಿಗೂ ಇಪ್ಪತ್ತುಅಡಿ ಅಗಲ, ಅರವತ್ತು ಅಡಿ ಉದ್ದದ ನಿವೇಶನ ಸಿಗುತ್ತದೆ. ಅಗಲದ ಮೇಲೆ ಭಾಗ ಮಾಡಿದರೆ ಇಬ್ಬರಿಗೂ ಮೂವತ್ತು ಅಡಿ ಉದ್ದ,  ನಲವತ್ತು ಅಡಿ ಅಗಲ ನಿವೇಶನ ಸಿಗುತ್ತದೆ. ಮನೆಯ ಐದು ಚದರ ಭಾಗ ಸಿಗುತ್ತದೆ. (ಹಿಂದಿನ ನಿವೇಶನ, ಅದಕ್ಕೆ ಲಗತ್ತಾದ ಭಾಗ ಯಾರಿಗೂ ಬೇಡ. ಅದು ಇರಲಿ). ಇದು ಸಮಭಾಗ ಅಥವಾ ಸರಿಭಾಗ. ಲೋಕಾರೂಢಿಯಲ್ಲಿ ಹೀಗೆಯೇ ಮಾಡುವುದು. ಮುಂದಿನ ತಲೆಮಾರಿನಲ್ಲಿ ಭಾಗ ಮಾಡಿದರೆ ಎಲ್ಲರಿಗೂ ಒಂದು ಲಂಗೋಟಿಯಂತಹ ಭೂಮಿ ಸಿಕ್ಕಬಹುದು! ಹೀಗೆ ಮಾಡುತ್ತಾ ಹೋದರೆ ಮುಂದೆ ಒಂದು ದಿನ ಭಾಗ ಮಾಡಿದ ಮನೆಗಳ ಗೋಡೆ ಕಟ್ಟಲೂ ಸ್ಥಳವಿಲ್ಲದ ಪರಿಸ್ಥಿತಿ ನಿರ್ಮಾಣ ಆಗುತ್ತದೆ!

ಪರಮಾತ್ಮನು ತನ್ನ ಮೂರು ಅರಮನೆಗಳಾದ ವೈಕುಂಠ, ಶ್ವೇತದ್ವೀಪ, ಅನಂತಾಸನ ಇವುಗಳಲ್ಲಿ ಸರಿಭಾಗ ಕೊಡುತ್ತಾನೆ ಎಂದು ದಾಸರು ಹೇಳಿದರು. ಅಲ್ಲಿಯೂ ಹೀಗೇ ಏನು? ಆಂತಹ ಮುಕ್ತಿಸ್ಥಾನ ಯಾರಿಗೆ ಬೇಕು? ಇದು ಒಳ್ಳೆಯ ಪ್ರಶ್ನೆ. 

ಪರಮಾತ್ಮನ ಸರಿಭಾಗಕ್ಕೆ ಈ ರೀತಿಯ ಕಟ್ಟುಪಾಡುಗಳಿಲ್ಲ. ಭಾಗ ಮಾಡಬೇಕಾಗಿ ಬಂದಾಗ ಆ ಅರಮನೆಗಳು ಆವಾಗಿಯೇ ಹಿಗ್ಗುತ್ತವೆ. ಅವನ ಸೃಷ್ಟಿಗೆ ನಮ್ಮ ಭಾಗ-ವಿಭಾಗದ ಭೌತಿಕ ಇತಿಮಿತಿಗಳಿಲ್ಲ. ಅರಮನೆಗಳು ಅವಾಗಿಯೇ ಹಿಗ್ಗಿ ಭಾಗ ಪಡೆದ ಎಲ್ಲರಿಗೂ ಹಿಂದಿದ್ದಷ್ಟೇ ಜಾಗ ಸಿಗುತ್ತದೆ. ಯಾವುದೇ ಸ್ಥಳಾಭಾವ ಇರುವುದಿಲ್ಲ. 

ಪರಮಾತ್ಮನ ಸರಿಭಾಗದ ನ್ಯಾಯ ಇದು. ದಾಸರು ಹೇಳಿದ "ಸರಿಭಾಗ ಕೊಡುವ ತನ್ನ ಅರಮನೆಯಲ್ಲಿ" ಎನ್ನುವುದಕ್ಕೆ ಈ ರೀತಿ ಅರ್ಥ. 

*****

ಬೆಂಗಳೂರಿನಿಂದ ನವದೆಹಲಿಗೆ ಕರ್ನಾಟಕ ಎಕ್ಸ್ ಪ್ರೆಸ್ ರೈಲು ಹೋರಡುತ್ತದೆ.  ನಾಲ್ವರು ಪ್ರಯಾಣಿಕರು ಟಿಕೆಟ್ ಕೊಂಡಿದ್ದಾರೆ. ಒಬ್ಬ ಒಂದು ಸಾವಿರ ರೂಪಾಯಿ ಕೊಟ್ಟು ಸ್ಲೀಪರ್ ಟಿಕೆಟ್ ಕೊಂಡಿದ್ದಾನೆ. ಎರಡನೆಯವನು ಎರಡು ಸಾವಿರ ರೂಪಾಯಿ ಕೊಟ್ಟು 3ಎಸಿ ಸ್ಲೀಪರ್ ಟಿಕೆಟ್ ಕೊಂಡಿದ್ದಾನೆ. ಮೂರನೆಯವನು ಮೂರು ಸಾವಿರ ರೂಪಾಯಿ ಕೊಟ್ಟು 2ಎಸಿ ಸ್ಲೀಪರ್ ಟಿಕೆಟ್ ಕೊಂಡಿದ್ದಾನೆ. ನಾಲ್ಕನೆಯವನು ನಾಲ್ಕು ಸಾವಿರ ರೂಪಾಯಿ ಕೊಟ್ಟು ಫಸ್ಟ್ ಕ್ಲಾಸ್ ಎಸಿ ಟಿಕೆಟ್ ಕೊಂಡಿದ್ದಾನೆ. ನಾಲ್ವರೂ ರೈಲು ಹತ್ತುತ್ತಾರೆ. ಎಲ್ಲರೂ ಹೊರಟಿದ್ದು ಬೆಂಗಳೂರಿನಿಂದಲೇ. ಎಲ್ಲರೂ ತಲುಪುವುದು ನವದೆಹಲಿಗೇ. ಒಂದೇ ವೇಳೆ ಹೊರಟು ಒಂದೇ ಸಮಯಕ್ಕೆ ತಲುಪುತ್ತಾರೆ. ಆದರೆ ಪ್ರಯಾಣದಲ್ಲಿ ಅವರ ಅನುಭವಗಳು ಬೇರೆ ಬೇರೆ. ಕೊಟ್ಟ ಹಣಕ್ಕೆ ಸರಿಯಾಗಿ ಅನುಭವ. ಇನ್ನೊಬ್ಬರಿಗೆ ಬೇರೆ ರೀತಿಯ ಅನುಭವ ಆಗಿದ್ದಕ್ಕೆ ಇವರಿಗೆ ಬೇಸರ ಇಲ್ಲ, ಏಕೆಂದರೆ ತಾವು ಕೊಟ್ಟ ಹಣದ ಬೆಲೆ ಮತ್ತು ಬೇರೆಯವರು ಕೊಟ್ಟ ಹಣದ ಬೆಲೆ ಅವರೆಲ್ಲರಿಗೂ ಗೊತ್ತು. ಎಲ್ಲರೂ ಪ್ರಯಾಣದ ಆನಂದ ಅನುಭವಿಸುತ್ತಾರೆ. 

ಮುಕ್ತಿ ಭವನದಲ್ಲೂ ಇದೇ ರೀತಿ. ನಾಲ್ಕು ರೀತಿಯ ಮುಕ್ತಿ ದರ್ಜೆ ಉಂಟು. ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯ ಎಂದು ನಾಲ್ಕು ವಿಧ. ಎಲ್ಲರೂ ಮುಕ್ತರೇ.  (ಇವುಗಳ ವಿವರಣೆ ತುಂಬಾ ದೀರ್ಘ. ಮತ್ತೆಂದಾದರೂ ಅವಕಾಶ ಆದರೆ ನೋಡಬಹುದು). ಆದರೆ ಅವರವರ ಸಾಧನೆಯ ಮಜಲಿಗೆ ತಕ್ಕಂತೆ ಅವರವರ ಆನಂದದ ಅನುಭವ. ಪರಮಾತ್ಮನ ಸರಿಭಾಗ ಇದನ್ನೂ ಒಳಗೊಂಡಿದೆ. ಕಾಸಿಗೆ ತಕ್ಕ ಕಜ್ಜಾಯ. ಸಾಧನೆಗೆ ತಕ್ಕಂತೆ ಆನಂದ. 

ಪರಮಾತ್ಮನು ತನ್ನ ಅರಮನೆಯಲ್ಲಿ ಸರೀಭಾಗ ಕೊಡುವನು ಎನ್ನುವುದಕ್ಕೆ ಇಷ್ಟೆಲ್ಲಾ ವಿಶಾಲಾರ್ಥ ಉಂಟು. 

*****

ಹಿಂದಿನ ಸಂಚಿಕೆಗಳಲ್ಲಿ ಹೇಳಿದಂತೆ ಶ್ರೀಪುರಂದರದಾಸರು ದ್ವೈತ ಸಿದ್ಧಾಂತ ಅನುಸರಿಸಿದವರು. ಅದು ಜೀವಾತ್ಮ-ಪರಮಾತ್ಮ ಭೇದ ಹೇಳುತ್ತದೆ. ಅದ್ವೈತದಲ್ಲಿ ಹಾಗಲ್ಲ. ಅಲ್ಲಿ ಮುಕ್ತಿಯಲ್ಲಿ ಜೀವಾತ್ಮ ಪರಮಾತ್ಮನನ್ನು ಸೇರಿ ಒಂದೇ ಆಗುತ್ತಾನೆ. ದ್ವೈತದಲ್ಲಿ ಎರಡೂ ಬೇರೆ ಬೇರೆ ಆದುದರಿಂದ ಮುಕ್ತರಲ್ಲೂ ತಾರತಮ್ಯ ಉಂಟು. 

"ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು" ಅನ್ನುವುದು ಉಳಿದಿದೆ. ಮುಂದಿನ ಸಂಚಿಕೆಯಲ್ಲಿ ಅದನ್ನು ನೋಡೋಣ.

Friday, December 13, 2024

ಸರಸಿಜಾಕ್ಷನ ಸಕಲ ಸ್ವಾತಂತ್ರ್ಯ


ಶ್ರೀ ಪುರಂದರದಾಸರ "ಹೂವ ತರುವರ ಮನೆಗೆ ಹುಲ್ಲ ತರುವ" ಪದದ ವಿಶೇಷಾರ್ಥಗಳ ನೋಟದಲ್ಲಿ ಕಳೆದ ಸಂಚಿಕೆಯಲ್ಲಿ "ಅಪೂರ್ಣ, ಪೂರ್ಣ ಮತ್ತು ಪರಿಪೂರ್ಣ" ಎನ್ನುವ ಶೀರ್ಷಿಕೆಯಡಿ "ಪರಿಪೂರ್ಣನೆಂದು ಪೂಜೆಯನ್ನು ಮಾಡೆ" ಎನ್ನುವವರೆಗೆ ಬಂದಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಈಗ ಮುಂದಿನ "ಸರಸಿಜಾಕ್ಷನು ತನ್ನ ಸಕಲ ಸ್ವಾತಂತ್ರ್ಯದಲಿ" ಎನ್ನುವ ಬಗ್ಗೆ ವಿಚಾರ ಮಾಡೋಣ. 

ನಮ್ಮ ಪಕ್ಕದ ಮನೆಯವರು ಡೈರಿ ಹಾಲನ್ನು ನಂಬುವುದಿಲ್ಲ. ಮನೆಯ ಮುಂದೆ ಹಸುವನ್ನು ತಂದು ಹಾಲು ಕರೆದು ಕೊಡಲು ಒಬ್ಬನನ್ನು ನೇಮಿಸಿದ್ದಾರೆ. ಅವನು ಹಸುವನ್ನು ಕರೆತಂದು ಅವರ ಮನೆಯ ಮುಂದೆ ಕಟ್ಟಿ, ಅದರ ಕೆಚ್ಚಲು ತೊಳೆದು, ಅವರೇ ಕೊಟ್ಟ ಪಾತ್ರೆಯಲ್ಲಿ ನೀರು ಸೇರಿಸದೆ ಹಾಲು ಕರೆದು ಕೊಡುತ್ತಾನೆ. ಅಳತೆಯಲ್ಲೂ ಮೋಸ ಆಗಬಾರದಲ್ಲ. ಸರಿಯಾಗಿ ಎರಡು ಲೀಟರಿನ ಹಾಲಿನ ಪಾತ್ರೆ ಅದಕ್ಕಾಗಿ ಕೊಂಡಿಟ್ಟಿದ್ದಾರೆ. ಹಾಲು ಕರೆಯುವಾಗ ಅವರ ಹದ್ದಿನ ಕಣ್ಣು ಆ ಕಾರ್ಯಕ್ರಮವನ್ನೇ ನೋಡುತ್ತಿರುತ್ತದೆ. ಈ ದಿನ ಅವರು ಬೆಳಿಗ್ಗೆ ಬೇಗ ಎಲ್ಲೋ ಹೋಬಬೇಕಾಗಿತ್ತು. ಪಾತ್ರೆ ನಮಗೆ ಕೊಟ್ಟು ಹಾಲು ಹಿಡಿದಿಡುವಂತೆ ಹೇಳಿ ಹೋಗಿದ್ದಾರೆ. ಎಂಟು ಗಂಟೆಗೆ ಬಂದು ತೆಗೆದುಕೊಂಡು ಹೋಗುತ್ತಾರೆ. "ಅಯ್ಯೋ, ಈ ಕೆಲಸ ನನಗೆ ಬೇಡ. ಡಿಶಂಬರ ಚಳಿಯಲ್ಲಿ ಯಾರು ಬೇಗ ಎದ್ದಾರು?" ಎಂದು ಹೇಳುವ ಹಾಗಿಲ್ಲ. ಏಕೆಂದರೆ ನಮ್ಮ ಮನೆಗೆ ಅವರು ಅನೇಕ ಸಹಾಯ ಮಾಡುತ್ತಾರೆ. ಹೀಗಾಗಿ ಆ ದಾಕ್ಷಿಣ್ಯದ ಕಾರಣ ಈ ಕೆಲಸ ಮಾಡುವುದಿಲ್ಲ ಎಂದು ಹೇಳುವ ಸ್ವಾತಂತ್ರ್ಯವೂ ನಮಗಿಲ್ಲ. ಅವರನ್ನು ನಮ್ಮ ಕೆಲಸಗಳಿಗೆ ಅವಲಂಬಿಸಿದರಿಂದ ಆಗುವುದಿಲ್ಲ ಎಂದು ಹೇಳುವ ಸ್ವಾತಂತ್ರ್ಯವನ್ನು ನಾವು ಕಳೆದುಕೊಂಡೆವು. 

ಆಯಿತು. ಹಾಲಿನವನು ಬಂದ. ಚಳಿಯಲ್ಲಿ ಎದ್ದು ಹಾಲು ಪಡೆದಿದ್ದಾಯಿತು. ಅವರು ಬರುವವೆರೆಗೂ ಅದರ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದು. ಬೆಕ್ಕು ಕುಡಿಯಬಾರದು. ಹಾಲು ನಮ್ಮ ಕಣ್ಣೆದುರು ಇದ್ದರೂ ನಾವು ಉಪಯೋಗಿಸಬಾರದು. ಆ ಸ್ವಾತಂತ್ರ್ಯ ನಮಗಿಲ್ಲ. ಅವರು ಒಂಭತ್ತು ಗಂಟೆಗೆ ಫೋನ್ ಮಾಡಿದರು. "ನಾವು ಇಂದು ಬರುವುದಿಲ್ಲ. ಹಾಲು ನೀವೇ ಉಪಯೋಗಿಸಿಕೊಳ್ಳಿ. ಪರವಾಗಿಲ್ಲ" ಎಂದರು. "ಸದ್ಯ, ಕಾಯುವುದು ತಪ್ಪಿತು. ಒಳ್ಳೆಯ ಹಾಲೂ ಸಿಕ್ಕಿತು" ಎಂದು ಸಂತೋಷವಾಯಿತು. ಈಗ ಹಾಲು ಕಾಯಿಸಬೇಕು. ಹಾಗೆಯೇ ಇಡುವ ಸ್ವಾತಂತ್ರ್ಯ ನಮಗಿಲ್ಲ. ಸರಿಯಾದ ಪಾತ್ರೆಯಲ್ಲಿ ಕಾಯಿಸಬೇಕು. ಇಲ್ಲದಿದ್ದರೆ ಹಾಲು ಒಡೆದು ಹೋಗುತ್ತದೆ. ಕಾಯಿಸುವಾಗ ಎದುರುಗಡೆ ನಿಂತಿರಬೇಕು. ಇಲ್ಲದಿದ್ದರೆ ಉಕ್ಕಿ ಹಾಳಾಗುತ್ತದೆ. ಆರಾಮವಾಗಿ ಪೇಪರ್ ಓದುವ ಸ್ವಾತಂತ್ರ್ಯಕ್ಕೂ ಸಂಚಕಾರ ಬಂತು. ಹಾಲು ಕಾಯಿಸಿದ್ದಾಯಿತು. 

ನಮ್ಮ ಮನೆಯ ಡೇರಿ ಹಾಲೂ ತಂದಿದ್ದೇವಲ್ಲ. ಇದನ್ನೇನು ಮಾಡುವುದು? ಸರಿ. ಹೆಪ್ಪು ಹಾಕಿ ಮೊಸರು ಮಾಡಿದ್ದಾಯಿತು. ಮಾರನೆಯ ದಿನ ಹಾಲು ಸಾಲದು. ಈ ಮೊಸರನ್ನೇ ಹಾಲು ಮಾಡಿಕೊಳ್ಳೋಣ ಅಂದರೆ ನಮಗೆ ಅದನ್ನು ಮಾಡಲಾಗದು. ಹಾಲು ಮೊಸರು ಮಾಡಬಹುದೇ ಹೊರತು ಅದು ಮೊಸರಾದಮೇಲೆ ಮತ್ತೆ ಹಿಂದಿರುಗಿಸಿ ಹಾಲು ಮಾಡಲಾಗದು. ನಮಗೆ ಆ ಶಕ್ತಿ, ಸ್ವಾತಂತ್ರ್ಯ ಇಲ್ಲ. ಮೊಸರಿನಿಂದ ಕಷ್ಟಪಟ್ಟು ಬೆಣ್ಣೆ ತೆಗೆಯಬಹುದು. ಬೆಣ್ಣೆಯಿಂದ ಪಾಡುಪಟ್ಟು ತುಪ್ಪ ಮಾಡಬಹುದು. ಮುಂದಿನ ಆ ದಾರಿಗಳು ಮಾತ್ರ ಇವೆ. ಅವೂ ಪ್ರಯಾಸದ ದಾರಿಗಳು. ಮೊಸರಿನಿಂದ ನೇರವಾಗಿ ತುಪ್ಪ ಮಾಡಲಾರೆವು. ಹಿಂದೆ ಹೋಗುವಂತಿಲ್ಲ. ಮುಂದೆ ಹೋಗಬೇಕಾದರೂ ಒಂದು ನಿಶ್ಚಿತ ಕ್ರಮದಲ್ಲೇ ಹೋಗಬೇಕು. ನಮಗೆ ಈ ಕ್ರಮಗಳನ್ನು ಮೀರುವ ಸ್ವಾತಂತ್ರ್ಯವಿಲ್ಲ. ಈ ಕ್ರಮಗಳ ಮಧ್ಯೆ ಕೈ ತಪ್ಪಿದರೆ, ಎಚ್ಚರ ತಪ್ಪಿದರೆ, ಪದಾರ್ಥ ಚೆಲ್ಲಿಯೋ, ಸೀದೋ, ಮತ್ತೇನೋ ಆಗಿ ಹಾಳಾಗುತ್ತದೆ. 

ಪರಮಾತ್ಮನ ವಿಷಯದಲ್ಲಿ ಹಾಗಿಲ್ಲ. ಅವನಿಗೆ "ಇದು ಕ್ರಮ. ಹೀಗೆ ಮಾಡು" ಎಂದು ಹೇಳುವವರಿಲ್ಲ. ಏನೂ ಇಲ್ಲದ ಜಾಗದಲ್ಲಿ ಹಾಲನ್ನು ಸೃಷ್ಟಿಸಬಲ್ಲ. ಹಾಲಿನಿಂದ ನೇರವಾಗಿ ತುಪ್ಪ ಮಾಡಬಲ್ಲ. ತುಪ್ಪದಿಂದ ಮತ್ತೆ ಹಾಲನ್ನೋ, ಮೊಸರನ್ನೋ ಮಾಡಬಲ್ಲ. ಅಷ್ಟೇ ಏಕೆ? ಹಾಲಿನಿಂದ, ಮೊಸರಿನಿಂದ, ಬೆಣ್ಣೆಯಿಂದ ಅಥವಾ ತುಪ್ಪದಿಂದ ಜೇನು ತುಪ್ಪವನ್ನೂ ಮಾಡಬಲ್ಲ. ಹೆಚ್ಚೇಕೆ? ಸುಣ್ಣದಿಂದ ಬೆಣ್ಣೆಯನ್ನೂ, ಮಣ್ಣಿನಿಂದ ಜೇನು ತುಪ್ಪವನ್ನೂ ಮಾಡಬಲ್ಲ! 

ಪರಮಾತ್ಮನ ಶಕ್ತಿಯನ್ನು ವರ್ಣಿಸುವಾಗ "ಕರ್ತು೦, ಅಕರ್ತು೦, ಅನ್ಯಥಾ ಕರ್ತು೦ ಶಕ್ತ:" ಎಂದು ಹೇಳಿದ್ದಾರೆ. ಅವನು ಏನನ್ನನಾದರೂ ಮಾಡಬಲ್ಲ. ಮಾಡಿದ್ದನ್ನು ರದ್ದುಮಾಡಿ ಹಿಂದಿನಂತೆ ಇರಿಸಬಲ್ಲ. ಅಥವಾ ಇವೆರಡಕ್ಕೂ ಸಂಬಂಧವಿಲ್ಲದ ಮತ್ತೇನನ್ನೋ ಸಹ ಮಾಡಬಲ್ಲ! ಅವನಿಗೆ ಈ ಎಲ್ಲ ಸ್ವಾತಂತ್ರ್ಯ ಇದೆ. ಅದಕ್ಕೇ "ಸಕಲ ಸ್ವಾತಂತ್ರ್ಯ" ಎನ್ನುವುದು. ಅದು ಯಾವುದೇ ಕಟ್ಟುಪಾಡುಗಳಿಲ್ಲದ ಸ್ವಾತಂತ್ರ್ಯ. "ಹೀಗೆ ಮಾಡು, ಹಾಗೆ ಮಾಡಬೇಡ" ಎಂದು ಹೇಳುವವರಿಲ್ಲದ ಸ್ವಾತಂತ್ರ್ಯ. ಯಾವುದೇ ಕ್ರಮದಲ್ಲೇ ಮಾಡಬೇಕೆನ್ನುವ ನಿಬಂಧನೆಗಳಿಲ್ಲದ ಸ್ವಾತಂತ್ರ್ಯ. ಒಟ್ಟಿನಲ್ಲಿ "ಸಕಲ ಸ್ವಾತಂತ್ರ್ಯ". 

***** 

ಯಾವುದೋ ಕೆಲಸಕ್ಕಾಗಿ ಸ್ವಲ್ಪ ಹಣ ಸಾಲದೇ ಬಂದಿದೆ. ಬ್ಯಾಂಕಿನಲ್ಲಿ ಸಾಲ ಮಾಡಬೇಕಾಗಿದೆ. ಬ್ಯಾಂಕಿಗೆ ಹೋದೆವು. ಅಲ್ಲಿ ಶಾಖಾ ಪ್ರಬಂಧಕ ಅಥವಾ ಬ್ರಾಂಚ್ ಮ್ಯಾನೇಜರ್ ನೋಡಿದ್ದಾಯಿತು. ಅವರು ಹೇಳಿದ ಸಕಲ ಕಾಗದ-ಪತ್ರಗಳನ್ನೂ ಕೊಟ್ಟಿದ್ದಾಯಿತು. ಅವರಿಗೆ ಇಪ್ಪತ್ತು ಲಕ್ಷ ರೂಪಾಯಿವರೆಗೆ ಸಾಲ ಕೊಡುವ ಅಧಿಕಾರ ಅಥವಾ ಸ್ವಾತಂತ್ರ್ಯ ಇದೆ. ನಮಗೆ ಹೆಚ್ಚು ಬೇಕು. "ನೋಡಿ, ಅಲ್ಲಿ ದೊಡ್ಡ ಬ್ರಾಂಚ್ ಇದೆ. ಅಲ್ಲಿ ದೊಡ್ಡ ಬ್ರಾಂಚ್ ಮ್ಯಾನೇಜರ್ ಒಂದು ಕೋಟಿ ರೂಪಾಯಿವರೆಗೂ ಸಾಲ ಕೊಡಬಲ್ಲರು. ಅಲ್ಲಿ ಹೋಗಿ" ಅನ್ನುತ್ತಾರೆ. ನಮಗೆ ಅದೂ ಸಾಲದು. "ಮೇಲಿನ ಆಫೀಸಿಗೆ ಕಳಿಸುತ್ತೇವೆ. ರೀಜಿನಲ್ ಮ್ಯಾನೇಜರ್ ಅವರಿಗೆ ಹತ್ತು ಕೋಟಿವರೆಗೂ ಅಧಿಕಾರ ಇದೆ" ಅನ್ನುತ್ತಾರೆ. ನಮಗೆ ಅದೂ ಸಾಲದು. "ಹೆಡ್ ಆಫೀಸಿಗೆ ಕಳಿಸುತ್ತೇವೆ. ಅಲ್ಲಿ ಜನರಲ್ ಮ್ಯಾನೇಜರ್ ಐವತ್ತು ಕೋಟಿ ರೂಪಾಯಿವರೆಗೂ ಸಾಲ ಮಂಜೂರು ಮಾಡಬಲ್ಲರು" ಎನ್ನುತ್ತಾರೆ. ಅದಕ್ಕಿಂತ ಹೆಚ್ಚು ಬೇಕಾದರೆ ಏನು ಮಾಡುವುದು? "ನಮ್ಮ ಸಿ. ಎಂ. ಡಿ. (ಅಥವಾ ಸಿ. ಇ. ಓ.) ಇದ್ದಾರೆ. ಅವರಿಗೆ ನೂರು ಕೋಟಿ  ರೂಪಾಯಿ ಕೊಡುವ ಅಧಿಕಾರವಿದೆ" ಅನ್ನುತ್ತಾರೆ. ಅದಕ್ಕಿಂತಲೂ ಹೆಚ್ಚಿಗೆ ಬೇಕು ನಮಗೆ. "ನಮ್ಮ ನಿರ್ದೇಶಕ ಮಂಡಳಿ ಇದೆ. ಬೋರ್ಡ್ ಆಫ್ ಡೈರೆಕ್ಟರ್ಸಗೆ ಮಿತಿಯಿಲ್ಲದ, ಅನ್ಲಿಮಿಟೆಡ್ ಅಥವಾ ಫುಲ್ ಪವರ್ ಇದೆ" ಅನ್ನುತ್ತಾರೆ. 

ಹೋಗಲಿ, ನಮ್ಮ ಅರ್ಜಿ ಅಲ್ಲಿಗೇ ಹೋಗಲಿ ಅನ್ನುತ್ತೇವೆ. ಅವರಿಗೆ ಎಷ್ಟು ಬೇಕಾದರೂ ಸಾಲ ಮಂಜೂರು ಮಾಡುವ ಸ್ವಾತಂತ್ರ್ಯ ನಿಜವಾಗಿಯೂ ಇದೆಯೇ? ಇಲ್ಲ. ಬ್ಯಾಂಕಿನ ಒಟ್ಟು ಬಂಡವಾಳದ ಒಂದು ಮಿತಿಗಿಂತ ಹೆಚ್ಚು ಕೊಡಲು ಅವರಿಗೂ ಅಧಿಕಾರ ಇಲ್ಲ. ಹಾಗೆ ಮಾಡಬೇಕಾದರೆ ರಿಸರ್ವ್ ಬ್ಯಾಂಕಿನ ಪರವಾನಗಿ ಬೇಕು ಅನ್ನುತ್ತಾರೆ. ರಿಸರ್ವ್ ಬ್ಯಾಂಕಿನ ಕಥೆ ಏನು? ಅವರಿಗೆ ಪರೋಕ್ಷವಾಗಿ ಸರ್ಕಾರದ, ಬಹು ರಾಷ್ಟ್ರೀಯ ಸಂಸ್ಥೆಗಳ. ಮಾರುಕಟ್ಟೆಯ ಸೆಳೆತಗಳ ಅಂಕುಶ ಉಂಟು. ಒಟ್ಟಿನಲ್ಲಿ ಯಾರಿಗೂ ಪೂರ್ಣ ಸ್ವಾತಂತ್ರ್ಯ ಇಲ್ಲ. ಪರಮಾಧಿಕಾರ ಇರುವವರು ಕೊಟ್ಟಿರುವ ಅಧಿಕಾರವೂ (ಡೆಲಿಗೇಟೆಡ್ ಪವರ್ಸ್) ಅನೇಕ ನಿಬಂಧನೆಗೆ ಒಳಪಟ್ಟಿದೆ. ಪೂರ್ಣ ಸ್ವಾತಂತ್ಯ್ರ ಯಾರಿಗೂ ಇಲ್ಲ!

ಪರಮಾತ್ಮನಿಗೆ ಹಾಗಿಲ್ಲ. ಅವನಿಗೆ ಸಕಲ ಸ್ವಾತಂತ್ರ್ಯ ಉಂಟು. ಅವನೇ ಅನೇಕ ದೇವತೆಗಳಿಗೆ ತನ್ನ ಅನಂತ ಸ್ವಾತಂತ್ರ್ಯದಲ್ಲಿ ಸ್ವಲ್ಪ ಪಾಲು ಕೊಟ್ಟಿದ್ದಾನೆ. ಕೊಟ್ಟಿರುವುದಕ್ಕಿಂತ ಅನಂತ ಮಡಿ ಹೆಚ್ಚು ಸ್ವಾತಂತ್ರ್ಯ ಅವನ ಬಳಿ ಇದೆ. ಅವನು ಎಷ್ಟು ಕೊಡಬಲ್ಲ? ಮುಕುಂದಮಾಲಾ ಸ್ತೋತ್ರದಲ್ಲಿ ಶ್ರೀ ಕುಲಶೇಖರ ಅಲ್ವಾರ್ ಹೇಳುವಂತೆ ಅವನು ತನ್ನ ನಿಜ ಭಕ್ತರಿಗೆ ತನ್ನ ಸ್ಥಾನವನ್ನೇ ಕೊಡುವಷ್ಟು ಸ್ವಾತಂತ್ರ್ಯ ಹೊಂದಿದ್ದಾನೆ. (ಇದನ್ನು ವಿವರವಾಗಿ ನೋಡಲು ಇಲ್ಲಿ ಕ್ಲಿಕ್ ಮಾಡಿ}. 

ಯಾವುದೇ ಸಂಸ್ಥೆಯಲ್ಲಿ ಪರಮಾಧಿಕಾರ ಉಳ್ಳ ಅಧಿಕಾರಿಗಳು ತಮ್ಮ ಅಧಿಕಾರದಲ್ಲಿ ಸ್ವಲ್ಪ ಭಾಗ ತಮ್ಮ ಕೈಕೆಳಗಿನ ಅಧಿಕಾರಿಗಳಿಗೆ ಕೊಡಬಹುದು. ಸಂಸ್ಥೆಯ ಕೆಲಸಗಳು ಸುಲಭವಾಗಿ ನಡೆಯಲಿ. ಎಲ್ಲ ವಿಷಯಗಳೂ ತಮ್ಮವರೆಗೆ ಬರುವುದು ಬೇಡ. ಸಣ್ಣ ವಿಷಯಗಳು ಕೆಳಗಿನ ಹಂತದಲ್ಲೇ ತೀರ್ಮಾನವಾಗಲಿ ಎನ್ನುವ ದೃಷ್ಟಿಯಿಂದ ಹೀಗೆ ಅಧಿಕಾರದ ವಿಕೇಂದ್ರೀಕರಣ ಮಾಡುತ್ತಾರೆ. ಇದನ್ನು "ಅಧಿಕಾರ ವಿಕೇಂದ್ರೀಕರಣ ಅಥವಾ ಡೆಲಿಗೇಷನ್ ಆಫ್ ಪವರ್ಸ್" ಎನ್ನುತ್ತಾರೆ. ಹೀಗೆ ಮಾಡಿರುವ ಅಧಿಕೃತ ಕಡತಕ್ಕೆ "ಪವರ್ ಛಾರ್ಟ್" ಅನ್ನುತ್ತಾರೆ.  ಪರಮಾತ್ಮನು ತನ್ನ ಅನುಯಾಯಿ ದೇವತೆಗಳಿಗೆ ಹೀಗೆ ಪವರ್ ಚಾರ್ಟ್ ಕೊಟ್ಟಿದ್ದಾನೆ. ಶ್ರೀಜಗನ್ನಾಥ ದಾಸರು ತಮ್ಮ ಹರಿಕಥಾಮೃತಸಾರ ಗ್ರಂಥದಲ್ಲಿ ಒಂದು ಸಂಧಿಯನ್ನೇ ಇದಕ್ಕೆ ಮೀಸಲಿಟ್ಟಿದ್ದಾರೆ. ಈ ಗ್ರಂಥದ ಹದಿನಾರನೇ ಸಂಧಿಯ ಹೆಸರೇ "ದತ್ತ  ಸ್ವಾತಂತ್ರ್ಯ ಸಂಧಿ" ಎಂದು. ದತ್ತ ಸ್ವಾತಂತ್ರ್ಯ ಅಂದರೆ ಡೆಲಿಗೇಟೆಡ್ ಪವರ್ಸ್ ಎಂದೇ ಅರ್ಥ. ಆಸಕ್ತರು ಈ ಗ್ರಂಥ ನೋಡಿ ಹೆಚ್ಚಿನ ವಿಷಯ ತಿಳಿದುಕೊಳ್ಳಬಹುದು.  

*****

ಲಕ್ಷ್ಮೀದೇವಿಗೆ ಎಷ್ಟು ದೊಡ್ಡ ಮಟ್ಟದ ಅಧಿಕಾರ ಇದೆ ಎಂದು ಹಿಂದಿನ "ಇಂದಿರಾರಮಣನ ಮಂದಿರದ ಒಳಗೆ" ಎಂಬ ಸಂಚಿಕೆಯಲ್ಲಿ ನೋಡಿದೆವು. ಪರಮಾತ್ಮನ ಸ್ವಾತಂತ್ರ್ಯ ಎಷ್ಟಿದೆ ಎಂದರೆ ಅದರ ಅರಿವು ಸ್ವತಃ ಮಹಾಲಕ್ಷ್ಮೀದೇವಿಗೆ ಇಲ್ಲವಂತೆ. ಶ್ರೀ ಕನಕದಾಸರು ತಮ್ಮ ಹರಿಭಕ್ತಿಸಾರದಲ್ಲಿ ಹೇಳುತ್ತಾರೆ:

ಸಾಗರನಮಗಳರಿಯದಂತೆ ಸ 
ಸರಾಗದಲಿ ಸಂಚರಿಸುತಿಹ ವು 
ದ್ಯೋಗವೇನು ನಿಮಿತ್ತ ಕಾರಣವಿಲ್ಲ ಲೋಕದಲಿ 

ಪರಮಾತ್ಮನ ನಡೆಗಳನ್ನು ಸದಾ ಅವನ ಜೊತೆಯಲ್ಲಿರುವ ಸಾಗರನ ಮಗಳೇ (ಮಹಾಲಕ್ಷ್ಮಿಯೇ) ಅರಿಯಳು. (ಹೆಂಡತಿಗೇ ತಿಳಿಯದಂತೆ ಓಡಾಡುವ ಸ್ವಾತಂತ್ರ್ಯ ಅವನೊಬ್ಬನಿಗೇ ಉಂಟು ಅಂದರೆ ಹೆಚ್ಚು ಹೇಳಬೇಕಾಗಿಲ್ಲ!) ಪೂರ್ಣ ಸ್ವಾತಂತ್ರ್ಯಕ್ಕೆ ಮತ್ತೇನು ಸಾಕ್ಷಿ ಬೇಕು?

ಹೀಗೇ ಮಾಡಲೇಬೇಕೆಂಬ ವಿಧಿಯಿಲ್ಲ. ಹೀಗೆ ಮಾಡಬಾರದೆಂಬ ನಿಷೇಧವಿಲ್ಲ. ಇದೇ ಕ್ರಮದಲ್ಲಿ ಮಾಡಬೇಕೆಂಬ ರೀತಿಯಿಲ್ಲ. ಮಾಡಿದ್ದು ಬದಲಾಯಿಸುವಂತೆ ಇಲ್ಲ ಎನ್ನುವ ಕಟ್ಟಳೆಯಿಲ್ಲ. ಏನನ್ನಾದರೂ ಮಾಡುವಾಗ ಕಾದು ಕುಳಿತುಕೊಳ್ಳದಿದ್ದರೆ ಕೆಲಸ ಕೆಡುತ್ತದೆ ಎನ್ನುವ ಶಂಕೆಯೂ ಇಲ್ಲ. ಯಾರಿಗಾದರೂ ಹೇಳಿ ಮಾಡಬೇಕು ಎಂದಿಲ್ಲ. ಮಾಡಿದಮೇಲಾದರೂ ಯಾರಿಗಾದರೂ ಹೇಳಬೇಕು ಎಂದೂ ಇಲ್ಲ. ಅವನು ಮಾಡಿದ್ದು ಪರೀಕ್ಷಿಸುವ ಆಡಿಟರ್ ಯಾರಿಲ್ಲ. ಅವನು "ಸರ್ವಕಾರ್ತಾ, ನ ಕ್ರೀಯತೇ". "ಎಲ್ಲವನ್ನೂ ಮಾಡುವವನು. ಅವನನ್ನು ಮಾಡುವವರು ಯಾರೂ ಇಲ್ಲ."  ಅನನು ಮಾಡುವುದು ಯಾರಿಗೂ ಗೊತ್ತಾಗುವುದೂ ಇಲ್ಲ. ಒಟ್ಟಿನಲ್ಲಿ ಅವನಿಗೆ ಎಲ್ಲಿಯೂ, ಯಾರಿಗೂ ಇಲ್ಲದ ಅಖಂಡ ಮತ್ತು ಇತಿ-ಮಿತಿ ಇಲ್ಲದ ಸಕಲ ಸ್ವಾತಂತ್ರ್ಯ. ಶ್ರೀಪುರಂದರದಾಸರು ತಮ್ಮ ಕೃತಿಯಲ್ಲಿ ಹೇಳಿದ "ತನ್ನ ಸಕಲ ಸ್ವಾತಂತ್ರ್ಯದಲಿ" ಅಂದರೆ ಇದೇ.

ಕೆಲಸಕ್ಕೆ ತಕ್ಕ ಕೂಲಿ. ಸಾಧನೆಗೆ ತಕ್ಕ ಸತ್ಕಾರ. ಇದು ಸಾಮಾನ್ಯ ನಿಯಮ. ಆದರೆ ಅವನು ಈ ಯಾವ ನಿಯಮಗಳಿಗೂ ಮೀರಿದವನು. ಅವನು ಮನಸ್ಸು ಮಾಡಿದರೆ ಸಾಧನೆಯ ಯೋಗ್ಯತೆಯನ್ನೂ ಮೀರಿ ಫಲ ಕೊಡಬಲ್ಲನು. 

ಇದನ್ನೇ "ಸರಸಿಜಾಕ್ಷನು ತನ್ನ ಸಕಲ ಸ್ವಾತಂತ್ರ್ಯದಲಿ ಸರಿಭಾಗ ಕೊಡುವ ತನ್ನರಮನೆಯ ಒಳಗೆ" ಎಂದು ದಾಸರು ಹೇಳಿದ್ದಾರೆ. ಇದರ ವಿವರವನ್ನು ಮುಂದೆ ನೋಡೋಣ. 

*****

"ಆರಮಾನೆಯ ಒಳಗೆ ಸರಿಭಾಗ" ಮತ್ತು "ತೊಂಡರಿಗೆ ತೊಂಡನಾಗಿ" ಎನ್ನುವುವು ಇನ್ನೂ ಉಳಿದಿವೆ. ಇವನ್ನು ಮುಂದಿನ ಸಂಚಿಕೆಗಳಲ್ಲಿ ನೋಡೋಣ. 

Thursday, December 12, 2024

ಅಪೂರ್ಣ, ಪೂರ್ಣ ಮತ್ತು ಪರಿಪೂರ್ಣ


ಶ್ರೀ ಪುರಂದರದಾಸರ "ಹೂವ ತರುವರ ಮನೆಗೆ ಹುಲ್ಲ ತರುವ" ಪದದ ವಿಶೇಷಾರ್ಥಗಳ ಅವಲೋಕನದಲ್ಲಿ ಕಳೆದ ಸಂಚಿಕೆಯಲ್ಲಿ "ಇಂದಿರಾರಮಣನ ಮಂದಿರದ ಒಳಗೆ" ಎನ್ನುವ ಶೀರ್ಷಿಕೆಯಡಿ ಎರಡು ಪದಗುಚ್ಛಗಳಾದ "ಇಂದಿರಾರಮಣಗೆ" ಮತ್ತು "ಮಂದಿರದ ಒಳಗೆ" ಎನ್ನುವವರೆಗೆ ಬಂದಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಈಗ ಮುಂದಿನ "ಪರಿಪೂರ್ಣನೆಂದು ಪೂಜೆಯನ್ನು ಮಾಡೆ" ಎನ್ನುವ ಬಗ್ಗೆ ಸ್ವಲ್ಪ ನೋಡೋಣ. 

"ಮನ ಏವ ಮನುಷ್ಯಾಣಾ೦ ಕಾರಣಂ ಬಂಧ ಮೋಕ್ಷಯೋ:" ಅನ್ನುವುದು ಅಮೃತ ಬಿಂದು ಉಪನಿಷತ್ತಿನ ಒಂದು ಬಹುಪರಿಚಿತವಾದ ಉಕ್ತಿ. ಒಂದು ಬೀಗ ಇದೆ. ಅದರ ಜೊತೆ ಒಂದು ಬೀಗದಕೈ ಕೂಡ ಇದೆ.  ಬೀಗ ಹಾಕಲು ಮತ್ತು ತೆಗೆಯಲು ಎರಡು ಕೀಲಿಕೈಗಳಿಲ್ಲ. ಇರುವುದು ಒಂದೇ ಕೀಲಿಕೈ. ಈ ಬೀಗದಕೈ ಎರಡೂ ಕೆಲಸ ಮಾಡುತ್ತದೆ. ಎಡಕ್ಕೆ ತಿರುಗಿಸಿದರೆ ಬೀಗ ಹಾಕುತ್ತದೆ. ಬಲಕ್ಕೆ ತಿರುಗಿಸಿದರೆ ಬೀಗ ತೆಗೆಯುತ್ತದೆ. ಅದೇ ರೀತಿ ಮನುಷ್ಯನಿಗೆ ಒಂದು ಮನಸ್ಸಿದೆ. ಅವನ ಚಿಂತನೆ ಮತ್ತು ಕಾರ್ಯಶೈಲಿ ಮುಚ್ಚಿಕೊಳ್ಳಲು ಮತ್ತು ತೆರೆದುಕೊಳ್ಳಲು ಈ ಮನಸ್ಸೆಂಬ ಕೀಲಿಕೈ ನೆರವಾಗುತ್ತದೆ. ಮನಸ್ಸಿನ ಮೇಲೆ ಹಿಡಿತ ಇರುವ ವ್ಯಕ್ರಿ ಬೇಕಾದ ವಿಷಯಗಳಿಗೆ ತೆರೆದುಕೊಳ್ಳಲು ಈ ಕೀಲಿಕೈ ಉಪಯೋಗಿಸುತ್ತಾನೆ. ಹಾಗೆಯೇ ಬೇಡದ ವಿಷಯಗಳಿಗೆ ಮುಚ್ಚಿಕೊಳ್ಳಲೂ ಅದೇ ಮನಸ್ಸೆಂಬ ಕೀಲಿಕೈ ಬಳಸುತ್ತಾನೆ. ಗೀತಾಚಾರ್ಯನು "ಯದಾ ಸಂಹರತೇಚಾಯಂ ಕೂರ್ಮೋ೦ಗಾನೀವ ಸರ್ವಶಃ" ಎಂದು ಸ್ಥಿತಪ್ರಜ್ಞನ ಆಕ್ಷಣಗಳನ್ನು ಹೇಳುವಾಗ ಸೂಚಿಸುವುದು ಈ ಮನಸ್ಸೆಂಬ ಕೀಲಿಕೈ ಬಗ್ಗೆಯೇ. ಆದ್ದರಿಂದ ಪೂಜಾದಿಗಳ ಸಮಯದಲ್ಲಿ ಪರಮಾತ್ಮನನ್ನು "ಪರಿಪೂರ್ಣ" ಎಂದು ಚಿಂತಿಸಿ ಪೂಜೆಮಾಡಬೇಕು ಎಂದು ಶ್ರೀಪುರಂದರದಾಸರು ಈ ಕೃತಿಯಲ್ಲಿ ಹೇಳಿದ್ದಾರೆ. ಹೀಗೆ ಚಿಂತಿಸಿ ಪೂಜೆ ಮಾಡಲು ಅವನು ತನ್ನ ಸಕಲ ಸ್ವಾತಂತ್ರ್ಯದಲಿ ಅವನ ಅರಮನೆಯಲ್ಲಿ ಸರಿಭಾಗ ಕೊಡುವನು ಎನ್ನುತ್ತಾರೆ. 

ನಮ್ಮಲ್ಲಿ ಅನೇಕ ದೇವಿ, ದೇವತೆಗಳನ್ನು ಪೂಜಿಸುವ ಸಂಪ್ರದಾಯವಿದೆ. ಇದನ್ನು ಅನೇಕ ಪರ ಧರ್ಮದ ಜನರು ನಮ್ಮನ್ನು ಅಪಹಾಸ್ಯ ಮಾಡಲು ಬಳಸಿಕೊಳ್ಳುತ್ತಾರೆ. ಸರಿಯಾದ ಜ್ಞಾನವಿಲ್ಲದ ನಾವು ಅವರ ಮುಂದೆ ತಲೆ ಕೆಳಗೆ ಹಾಕುತ್ತೇವೆ. ನಮ್ಮ ಇಡೀ ವೈದಿಕ ವಾಗ್ಮಯದಲ್ಲಿ ಒಬ್ಬನೇ ಪರಮಾತ್ಮನೆಂದು ಮತ್ತೆ ಮತ್ತೆ ಹೇಳಿದೆ. ಮಹಾನಾರಾಯಣೋಪನಿಷತ್ತು ಇದನ್ನೇ ಕೂಗಿ ಕೂಗಿ ಹೇಳುತ್ತದೆ. ಪರಮಪುರುಷ ಒಬ್ಬನೇ. ಆದರೆ ಅನೇಕ ದೇವತೆಗಳು ಬೇರೆ ಬೇರೆ ಖಾತೆಗಳನ್ನು ಅವನ ಆಣತಿಯಂತೆ ನಿರ್ವಹಿಸುತ್ತಾರೆ. ಅವರೆಲ್ಲರೂ ದೇವರಲ್ಲ. ಇದು ಸ್ವಲ್ಪ "ಗಾಡ್ ಮತ್ತು ಏಂಜಲ್" ಎನ್ನುವ ಪದ್ದತಿಯಂತೆ. ಹಾಗಿದ್ದರೆ ಅಷ್ಟು ದೇವತೆಗಳನ್ನು ಏಕೆ ಆರಾಧಿಸಬೇಕು? ಒಬ್ಬನೇ ಪರಮಾತ್ಮನನ್ನು ಆರಾಧಿಸಿದರೆ ಸಾಲದೇ? ಇದು ಬಹಳ ಸಾಧುವಾದ ಪ್ರಶ್ನೆ. ಒಂದು ಸೂಪರ್ ಮಾರ್ಕೆಟ್ನಲ್ಲಿ ಎಲ್ಲ ಪದಾರ್ಥಗಳೂ ಸಿಗುತ್ತವೆ. ಆದರೆ ಆ ಸೂಪರ್ ಮಾರ್ಕೆಟ್ಟಿನಲ್ಲಿ ಪ್ರತಿಯೊಂದು ರೀತಿಯ ಪದಾರ್ಥಗಳಿಗೆ ಬೇರೆ ಬೇರೆ ಮಹಡಿಗಳಲ್ಲಿ ಹೋಗಿ ಪಡೆಯುವಂತೆ ಈ ವ್ಯವಸ್ಥೆ. ಪರಮಾತ್ಮನ ವ್ಯವಸ್ಥೆಯಲ್ಲಿ "ನಿಯಮನ" ಎಂದೊಂದಿದೆ ಎಂದು ಹಿಂದಿನ ಸಂಚಿಕೆಯಲ್ಲಿ ನೋಡಿದೆವು. ಸೃಷ್ಟಿಯ ಅನೇಕ ಕೆಲಸಗಳನ್ನು ಅವನು ತನ್ನ ಸಂವಿಧಾನದಂತೆ ದೇವತೆಗಳಿಗೆ ಹಂಚಿದ್ದಾನೆ. ಅವರೆಲ್ಲರ ಅಂತಃಶಕ್ತಿಯಾಗಿ, ಪ್ರೇರಕನಾಗಿ, ಕಾರಕನಾಗಿ ಅವನೇ ಎಲ್ಲವನ್ನೂ ನಡೆಸುತ್ತಾನೆ ಎನ್ನುವುದು ತಿಳಿದರೆ ಯಾವುದೂ ಗೋಜಲಿರುವುದಿಲ್ಲ. ಅನೇಕ ದೇವತೆಗಳ ಆರಾಧನೆಯೂ ಕೊನೆಗೆ "ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ" ಎಂದು ತಿಳುದು ಮಾಡುವುದು. ಇದೇ ಈ ವ್ಯವಸ್ಥೆಯ ತಿರುಳು. 

*****

ಆಯಿತು. ಈ ವ್ಯವಸ್ಥೆಯೇ ಸರಿ ಎಂದು ಒಪ್ಪೋಣ. ಪ್ರತಿ ದೇವಿ, ದೇವತೆಯರನ್ನು ಮತ್ತು ಪರಮಪುರುಷನನ್ನು ಆರಾಧಿಸುವಾಗ ನಮ್ಮ ಮನಸ್ಥಿತಿ ಹೇಗಿರಬೇಕು ಎನ್ನುವುದು ನಮ್ಮ ಪ್ರಶ್ನೆ. ಇದರ ಕೆಲವು ಭಾಗ "ಸಕಲ ಸ್ವಾತಂತ್ರ್ಯ" ಎನ್ನುವ ಮುಂದಿನ ಸಂಚಿಕೆಯಲ್ಲೂ ಬರುತ್ತ್ತದೆ. ನಮ್ಮ ಮನಸ್ಥಿತಿ ಹೇಗಿರಬೇಕು ಅನ್ನುವುದನ್ನು ತೀರ್ಮಾನಿಸಲು ಅಪೂರ್ಣ, ಪೂರ್ಣ ಮತ್ತು ಪರಿಪೂರ್ಣ ಎನ್ನುವ ಮೂರು ಶಬ್ದಗಳ ಖಚಿತವಾದ ಅರ್ಥ ಮತ್ತು ಅಭಿಪ್ರಾಯಗಳು ತಿಳಿಯಬೇಕು. ಅಪೂರ್ಣ ಅಂದರೇನು? ಪೂರ್ಣ ಅಂದರೇನು? ಪರಿಪೂರ್ಣ ಎಂದರೇನು? ಪರಿಪೂರ್ಣತ್ವದ ಕಲ್ಪನೆ ಪೂರ್ಣತ್ವಕ್ಕಿಂತ ಹೇಗೆ ಭಿನ್ನ? ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಕ್ಕಿದರೆ ಪರಿಪೂರ್ಣತ್ವದ ಕಲ್ಪನೆ ಸರಿಯಾಗಿ ಆಗುತ್ತದೆ. 

ಪೂರ್ಣ ಅನ್ನುವುದರ ಬಗ್ಗೆ ನಮಗೆ ಸುಮಾರಾಗಿ ಖಚಿತವಾಗಿ ಗೊತ್ತು. ನಮ್ಮ ಎದುರಿಗೆ ಪ್ರತಿದಿನ ಈ ತತ್ವವನ್ನು ಸಾಕ್ಷಾತ್ತಾಗಿ ತೋರಿಸುವ ಚಂದ್ರನನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಅಮಾವಾಸ್ಯೆಯಂದು ಚಂದ್ರನೇ ಕಾಣಿಸನು. ಆಗ ಅದೊಂದು ಶೂನ್ಯ. ಶೇಕಡಾವಾರು ಸೊನ್ನೆ. ಇಲ್ಲಿ ಏನೂ ಇಲ್ಲ. ಪ್ರತಿಪದೆಯಂದು ಚಂದ್ರನು ಎಲ್ಲಿಯೋ ಇದ್ದಾನೆ. ಆದರೆ ನಮ್ಮ ಕಣ್ಣಿಗೆ ಕಾಣಿಸದಷ್ಟು ಸಣ್ಣಗೆ ಇದ್ದಾನೆ. ವಾಸ್ತವವಾಗಿ ನೋಡಿದರೆ ಶುಕ್ಲ ಪಕ್ಷದ ಮೊದಲನೆಯ ದಿನ (ಪಾಡ್ಯ) ಅವನು ಕಾಣುವುದೇ ಇಲ್ಲ. ಬಿದಿಗೆಯಂದು ಒಂದು ಚಿಕ್ಕ ಬಿಂಬವಾಗಿ ಕಾಣುತ್ತಾನೆ. ಪಂಚಾಂಗದಲ್ಲಿ "ಚಂದ್ರ ದರ್ಶನ" ಎಂದು ಹಾಕುತ್ತಾರೆ. ಅಲ್ಲಿನಿಂದ ಅವನು ಪೂರ್ಣತ್ವದ ಕಡೆಗೆ ದಿನೇ  ದಿನೇ ಬೆಳೆಯುತ್ತಾನೆ. ಬೆಳವಣಿಗೆ ನಮಗೆ ಚೆನ್ನಾಗಿ ಕಾಣುತ್ತದೆ. ಶೂನ್ಯವಿದ್ದದ್ದು ಪ್ರತಿದಿನ ಸ್ವಲ್ಪ ಪ್ರತಿಶತ ಹೆಚ್ಚುತ್ತದೆ. ಹುಣ್ಣಿಮೆಯ ದಿನ ಪೂರ್ಣ ಚಂದ್ರನ ದರ್ಶನ ಆಗುತ್ತದೆ. ಪೂರ್ತಿ ಗೋಳಾಕಾರದ ಚಂದ್ರನನ್ನು ನೋಡಿ ನಾವು ಸಂಭ್ರಮಿಸುತ್ತೇವೆ. ಇಂದಿಗೆ ಹದಿನೈದು ದಿನದ ಹಿಂದೆ ಶೂನ್ಯವಿದ್ದದ್ದು ಶೇಕಡಾ ನೂರು ಆಯಿತು. ಸೊನ್ನೆಯಿದ್ದದ್ದು ಪೂರ್ಣ ಆಯಿತು! ಹಿಂದಿನ ಹದಿನಾಲ್ಕು ದಿನ ಅಪೂರ್ಣವಾಗಿತ್ತು. ಇಂದು ಪೂರ್ಣವಾಯಿತು. 

ಮುಂದಿನ ಹದಿನೈದು ದಿನ ಈ ಕ್ರಿಯೆಯ ಹಿಮ್ಮುಖ ಬೆಳವಣಿಗೆ. ಮತ್ತೆ ಕಡಿಮೆಯಾಗುತ್ತದೆ. ಬಹುಳ ಪಾಡ್ಯದ ದಿನ ಪೂರ್ಣಚಂದ್ರನಿಗಿಂತ ಸ್ವಲ್ಪ ಕಡಿಮೆ. ಸುಮಾರು ೯೪ ಪ್ರತಿಶತ. ಈಗ ಚಂದ್ರ ಪೂರ್ಣನಲ್ಲ. ಬಿದಿಗೆ ಮತ್ತೊ ಕಡಿಮೆ. ಸುಮಾರು ಶೇಕಡಾ ೮೭. ಹೀಗೆ ಆಗುತ್ತಾ ಮತ್ತೆ ಮುಂದಿನ ಅಮಾವಾಸ್ಯೆಗೆ ಸೊನ್ನೆ ಪ್ರತಿಶತ ಆಗಿ ಕಾಣೆಯಾಗುತ್ತಾನೆ. ಚಂದ್ರನಿಗೆ ವೃದ್ಧಿ (ಹೆಚ್ಚಾಗುವುದು) ಮತ್ತು ಕ್ಷಯ (ಕಡಿಮೆಯಾಗುವುದು) ಉಂಟು. ಪೂರ್ಣನಾಗಿರುವುದು ತಿಂಗಳಿಗೆ ಒಂದೇ ದಿನ. ಮತ್ತೆಲ್ಲ ದಿನ ಅಪೂರ್ಣವೇ. 

*****

ಪೂರ್ತಿ ಇಲ್ಲದ, ಏನೋ ಕಡಿಮೆಯಾದದ್ದು ಅಪೂರ್ಣ. ಅದು ಸ್ವಲ್ಪ ಕಡಿಮೆ ಇರಬಹುದು. ಶುಕ್ಲ ಪಕ್ಷದ ಚತುರ್ದಶಿಯ ಚಂದ್ರನಿದ್ದಂತೆ. ಹೆಚ್ಚು ಕಡಿಮೆ ಪೂರ್ಣ ಅನ್ನಬಹುದು, ಆದರೆ ಅಲ್ಲ. ಅಥವಾ ತುಂಬಾ ಕಡಿಮೆ ಇರಬಹುದು. ಶುಕ್ಲಪಕ್ಷದ ಬಿದಿಗೆಯ ಚಂದ್ರನಂತೆ. ಪೂರ್ಣ ಆಗಲು ಬಹಳ ಕೊರತೆ ಇದೆ. ಪೂರ್ಣವಾದರೂ ಬಹಳ ಕಾಲ ಉಳಿಯುವುದಿಲ್ಲ. ಎಲ್ಲೋ ಮಿಂಚಿ ಮಾಯವಾದ ಹಾಗೆ. ಇಪ್ಪತ್ತೆಂಟು ದಿನದಲ್ಲಿ ಒಂದು ದಿನ ಮಾತ್ರ ಪೂರ್ಣ. ಬಾಕಿ ಎಲ್ಲ ದಿನವೂ ಅಪೂರ್ಣ. 

ಒಬ್ಬರಿಗೆ ಒಂದು ತಂಬಿಗೆ ತುಂಬಾ ನೀರು ತನ್ನಿ ಎಂದು ಹೇಳುತ್ತೇವೆ ಅನ್ನೋಣ. ಅವರು ತಂಬಿಗೆಯ ತುಂಬಾ ನೀರು ತಂದರು. ತಂಬಿಗೆಯ ತುಂಬಾ ನೀರಿದೆ ಎಂದು ಎಲ್ಲರೂ ಅದನ್ನು ನೋಡಿ ಒಪ್ಪಬಹುದು. ಆದರೆ ನಿಜವಾಗಿ ಅದು ಪೂರ್ಣ ನೀರಿನಿಂದ ತುಂಬಿದೆಯೇ? ಇದು ಪ್ರಶ್ನೆ. 

ನಮ್ಮ ರಾಜಕಾರಣಿಗಳು ಬಡವರ ಉದ್ಧಾರ ಮಾಡುತ್ತೇವೆ ಅನ್ನುತ್ತಾರೆ. ಹಾಗಂದರೆ ಏನು? ಬಡವರು ಕೆಳಗೆ ಇದ್ದಾರೆ. ಯಾವುದರಲ್ಲಿ? ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ. ಅವರ ಉದ್ಧಾರ ಹೇಗೆ? ಕೆಳಗೆ ಇರುವವರನ್ನು ಮೇಲೆ ಎತ್ತುವುದು. "ಉದ್ಧರ" ಅನ್ನುವ ಪದಕ್ಕೆ ಮೇಲೆ ಎತ್ತುವುದು ಅಂದು ಅರ್ಥ. ಅದೇ ಕನ್ನಡಲ್ಲಿ "ಉದ್ಧಾರ" ಆಯಿತು. ಪಂಚಪಾತ್ರೆ-ಉದ್ಧರಣೆ ಅನ್ನುತ್ತೇವೆ. ಏಕೆ? ಪಂಚಪಾತ್ರೆಯಲ್ಲಿ ನೀರಿದೆ. ನಮ್ಮ ಕೆಲಸಕ್ಕೆ ಅದು ಪಾತ್ರೆಯಿಂದ ಮೇಲೆ ಬಂದು ನಮ್ಮ ಕೈಯಲ್ಲಿ ಬೀಳಬೇಕು. ಪಂಚಪಾತ್ರೆ ತೆಗೆದು ಸುರಿದುಕೊಂಡರೆ ಹೆಚ್ಚಾಗಿ ಬೀಳಬಹುದು. ಅದು ನಮಗೆ ಬೇಡವಾದದ್ದು. ಪಾತ್ರೆಯಿಂದ ಸುರಿದುಕೊಳ್ಳುವುದೂ ಕಷ್ಟ. ನೀರಿನಿಂದ ತುಂಬಿರುವುದರಿಂದ ಅದು ಬಹಳ ಭಾರ. ಸ್ವಲ್ಪವೇ ನೀರು ಬೇಕು. ಅದಕ್ಕೆ ಒಂದು ಉಪಕರಣ ಉಪಯೋಗಿಸುತ್ತೇವೆ. ಕೆಳಗಿರುವ ನೀರು ಮೇಲೆ ಎತ್ತುವ ಉಪಕರಣ ಆದದ್ದರಿಂದ ಅದು "ಉದ್ಧರಣೆ" ಆಯಿತು. ಕೆಲವು ಕಡೆ ಅದನ್ನು "ಸೌಟು" ಅನ್ನುತ್ತಾರೆ. ನಮಗೆ ಸಾರು. ಹುಳಿ, ಪಾಯಸ ಬಡಿಸುವ ದೊಡ್ಡ ಉದ್ಧರಣೆ ಸೌಟು ಎಂದರೆ ಚಂದ. ಈಗಿನವರು ಅಚ್ಚ ಕನ್ನಡದಲ್ಲಿ "ಸ್ಪೂನ್" ಅನ್ನಬಹುದು. ಇರಲಿ. 

ನಮ್ಮ ಮುಂದೆ ತಂದಿಟ್ಟಿರುವ ನೀರು ತುಂಬಿದ ತಂಬಿಗೆಯನ್ನು ನೋಡೋಣ. ಅದು ನೀರಿನಿಂದ ತುಂಬಿದೆ. ಅದು ನೀರಿನಿಂದ ಪೂರ್ಣವಾಗಿದೆ ಎನ್ನಬಹುದು. ಅದಕ್ಕೆ ಒಂದು ಉದ್ಧರಣೆ ನೀರು ಮತ್ತೆ ಹಾಕಬಹುದೋ? ಹಾಕಬಹುದು. ಇನ್ನೊಂದು ಉದ್ಧರಣೆ ನೀರು ಹಾಕಬಹುದೋ? ಪ್ರಾಯಶಃ ಹಾಕಬಹುದು. ಅದು ಹೇಗೆ? ಈಗ ಸ್ವಲ್ಪ ಮುಂಚೆ ತಂಬಿಗೆ ತುಂಬಾ ನೀರು ಇದೆ ಅಂದೆವು. ಈಗ ಮತ್ತೆ ಅದರಲ್ಲಿ ಸ್ವಲ್ಪ ಹಾಕಿದೆವು. ಅಂದರೆ ಆಗ ಅದು ಪೂರ್ಣವಾಗಿರಲಿಲ್ಲ. ಅಂದರೆ ನಾವೆಲ್ಲರೂ ಯಾವುದನ್ನು ಪೂರ್ಣ ಎಂದು ನಂಬಿದ್ದೆವೋ, ಅದು ವಾಸ್ತವವಾಗಿ ಪೂರ್ಣವಾಗಿರಲಿಲ್ಲ. ಲೋಕಾರೂಢಿಯಲ್ಲಿ "ಹೆಚ್ಚು ಕಡಿಮೆ ತುಂಬಿದೆ" ಎಂದು ನಾವು ಹೇಳುವುದನ್ನೂ ಪೂರ್ಣ ಎಂದು ವ್ಯವಹರಿಸುತ್ತೇವೆ. ಶೇಕಡಾ 99 ಅಂಕ ಬಂದರೆ ಆಲ್ಮೋಸ್ಟ್  ನೂರಕ್ಕೆ ನೂರು ಎಂದಂತೆ. ಶುಕ್ಲ ಪಕ್ಷದ ಚತುರ್ದಶಿಯ ಚಂದ್ರನನ್ನು ಪೂರ್ಣ ಚಂದ್ರ ಎಂದಂತೆ. ಅಂದರೆ ಒಟ್ಟಾರೆ ನಾವು "ಪೂರ್ಣ" ಎಂದು ತಿಳಿದಿರುವ ಅನೇಕ ವಿಷಯಗಳು ಅಪೂರ್ಣವೇ!

ತಂಬಿಗೆಯ ನೀರಿನ ಬಳಿ ಮತ್ತೆ ಹೋಗೋಣ. ನೀರಿನಿಂದ ತುಂಬಿದ ತಂಬಿಗೆಗೆ ಎರಡು ಉದ್ಧರಣೆ ನೀರು ಹಾಕಿಯಾಯಿತು. ಇನ್ನು ಹಾಕಲಾಗುವುದಿಲ್ಲ. ಇನ್ನೊಂದು ಉದ್ಧರಣೆ ಹಾಕಿದರೆ ಅದು ಚೆಲ್ಲುತ್ತದೆ. 

ಈಗ ಆ ತಂಬಿಗೆಯಿಂದ ಒಂದು ಉದ್ಧರಣೆ ನೀರು ಹೊರತೆಗೆಯೋಣ. ತಂಬಿಗೆಯ ನೀರು ಅಪೂರ್ಣವಾಯಿತು. 

*****

ಶ್ರೀಪುರಂದರದಾಸರು "ಪರಿಪೂರ್ಣನೆಂದು ಪೂಜೆಯನು ಮಾಡೆ" ಎನ್ನುವುದನ್ನು ನೋಡೋಣ. ಪರಮಾತ್ಮನ ಪರಿಪೂರ್ಣತ್ವ ಹೇಗೆ? ಅದು ಪೂರ್ಣತ್ವಕ್ಕಿಂತ ಹೇಗೆ ಭಿನ್ನ? ಪೂರ್ಣತ್ವದಲ್ಲಿ ಸ್ವಲ್ಪ ಕಡಿಮೆ ಮಾಡಿದರೆ ಅಥವಾ ಹೊರತೆಗೆದರೆ ಅದು ತಕ್ಷಣ ಅಪೂರ್ಣವಾಗುತ್ತದೆ. ಪರಮಾತ್ಮ ಹಾಗಲ್ಲ. ಅವನು ಜ್ಞಾನ-ಆನಂದಾದಿ ಸದ್ಗುಣಗಳಿಂದ ತುಂಬಿದ್ದಾನೆ. ಪರಿಪೂರ್ಣ ಆಗಿದ್ದಾನೆ. ಇನ್ನು ಒಂದು ಗುಣವನ್ನೂ ಸೇರಿಸುವಹಾಗಿಲ್ಲ. ಅಷ್ಟೇ ಅಲ್ಲ; ಸ್ವಲ್ಪ ಹೊರತೆಗೆದರೂ ಮೊದಲಿನಷ್ಟೇ ಇರುತ್ತಾನೆ. ಎಷ್ಟು ತೆಗೆದರೂ ಮೊದಲಿನಷ್ಟೇ ಪರಿಪೂರ್ಣನಾಗಿರುತ್ತಾನೆ. 

"ಓಂ ಪೂರ್ಣಮದಃ, ಪೂರ್ಣಮಿದಂ, ಪೂರ್ಣಾತ್ಪೂರ್ಣಮದಚ್ಯತೇ ಪೂರ್ಣಸ್ಯ ಪೂರ್ಣಮಾಡಯ ಪೂರ್ಣಮೇವಾವಶಿಷ್ಯತೇ" ಎನ್ನುವ ಉಪನಿಷದ್ ವಾಕ್ಯ ಇದನ್ನೇ ಹೇಳುತ್ತದೆ. ಪರಮಾತ್ಮ ಪರಿಪೂರ್ಣ. ಅವನು ಅನಂತ. ಅನಂತಕ್ಕೆ ಅನಂತವನ್ನು ಸೇರಿಸಿದರೂ ಅನಂತವೇ! ಅನಂತದಿಂದ ಅನಂತವನ್ನು ಕಳೆದರೂ ಉಳಿಯುವುದು ಅನಂತವೇ! 

ಇದೇ ಪರಮಾತ್ಮನ ಪರಿಪೂರ್ಣತ್ವ. ಅವನ ಆರಾಧನೆ, ಧ್ಯಾನ ಮಾಡುವಾಗ ಅವನು ಈ ರೀತಿ ಪರಿಪೂರ್ಣ ಎನ್ನುವ ಪ್ರಜ್ಞೆ ಇರಬೇಕು. ಹಿಂದಿನ ಸಂಚಿಕೆಗಳಲ್ಲಿ ಹೇಳಿದ ಅರ್ಪಣೆಗಳನ್ನು ಮಾಡಿ ಪೂಜೆಯನ್ನು ಮಾಡುವಾಗ ಆ ಪರಿಪೂರ್ಣನಾದ ಪರಮಾತ್ಮನಿಗೆ ಅರ್ಪಿಸುತ್ತಿದ್ದೇವೆ ಎನ್ನುವ ಅನುಸಂಧಾನ ಇರಬೇಕು. ಆಗ ಅವನು ತನ್ನ ಸಕಲ ಸ್ವಾತಂತ್ರದಲಿ ತನ್ನ ಅರಮನೆಯಲ್ಲಿ ಸರಿಭಾಗ ಕೊಡುತ್ತಾನೆ. ಇದು ಶ್ರೀಪುರಂದರದಾಸರು ಹೇಳುವ ರಹಸ್ಯ. 

ಗಂಗಾನದಿಯಲ್ಲಿ ಇರುವ ಮೀನು, ಕಪ್ಪೆಗಳು ಪ್ರತಿ ಕ್ಷಣ ಗಂಗಾಸ್ನಾನ ಮಾಡುತ್ತಿವೆ. ಆದರೆ ಅವುಗಳಿಗೆ ಗಂಗೆಯಲ್ಲಿ ಇದ್ದೇವೆ ಅನ್ನುವ ಜ್ಞಾನವೇ ಇಲ್ಲ. ಅವುಗಳಿಗೆ ಗಂಗಾಸ್ನಾನದ ಫಲವಿಲ್ಲ. ಅಂತೆಯೇ "ಪರಮಾತ್ಮನು ಪರಿಪೂರ್ಣ. ಅವನಿಗೆ ಈ ಪೂಜೆ ಅರ್ಪಿಸುತ್ತಿದ್ದೇವೆ" ಎನ್ನುವ ಅನುಸಂಧಾನ ಇಲ್ಲದಿದ್ದರೆ ಆ ಪೂಜೆಗೂ ಪೂರ್ಣ ಫಲವಿಲ್ಲ. 

*****

"ಸಕಲ ಸ್ವಾತಂತ್ರ್ಯ", "ಅರಮನೆಯ ಒಳಗೆ ಸರಿಭಾಗ" ಮತ್ತು "ತೊಂಡರಿಗೆ ತೊಂಡನಾಗಿ" ಎನ್ನುವುದನ್ನು ಮುಂದಿನ ಸಂಚಿಕೆಗಳಲ್ಲಿ ನೋಡೋಣ. 

Wednesday, December 11, 2024

ಇಂದಿರಾರಮಣನ ಮಂದಿರದ ಒಳಗೆ


ಶ್ರೀ ಪುರಂದರದಾಸರ "ಹೂವ ತರುವರ ಮನೆಗೆ ಹುಲ್ಲ ತರುವ" ಪದದ ವಿಶೇಷಾರ್ಥಗಳ ಹಿಂದೆ ಬಿದ್ದು ಕಳೆದ ಸಂಚಿಕೆಯಲ್ಲಿ "ಪರಿಪರಿಯ ಪುಷ್ಪಗಳು" ಎನ್ನುವವರೆಗೆ ಬಂದಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಈಗ ಮುಂದಿನ ಎರಡು ಪದಗುಚ್ಛಗಳಾದ "ಇಂದಿರಾರಮಣಗೆ" ಮತ್ತು "ಮಂದಿರದ ಒಳಗೆ" ಎನ್ನುವ ಬಗ್ಗೆ ನೋಡೋಣ. 

ದಾಸರ ಪದದ ಉದ್ದೇಶ್ಯ ಹೂವು ತರುವರ ಮನೆಗೆ ಹುಲ್ಲ ತರುವವನ ಬಗ್ಗೆ ಹೇಳುವುದು. ಇಲ್ಲಿ "ಇಂದಿರಾರಮಣ" ಎಂದು ಸಂಬೋಧಿಸುವ ಅಗತ್ಯವೇನು? ಶ್ರೀಹರಿಯ ಅನಂತ ಹೆಸರುಗಳಲ್ಲಿ ಬೇರೆ ಯಾವುದಾದರೂ ಉಪಯೋಗಿಸಬಹುದಿತ್ತಲ್ಲ? ಒಂದು ಸರ್ಕಾರೀ ಕೆಲಸಕ್ಕೆ ಅರ್ಜಿ ಹಾಕಿದರೆ ಅರ್ಜಿ ಪತ್ರದಲ್ಲಿ "ಎರಡು ಗುರುತಿನ ಚಿಹ್ನೆಗಳು" ಎಂದು ಒಂದು ಕಾಲಂ ಇರುತ್ತದೆ. ಅಲ್ಲಿ "ಎಡಗೆನ್ನೆಯ ಮೇಲೆ ಒಂದು ಕಪ್ಪು ಚುಕ್ಕೆ" ಮತ್ತು "ಬಲಗಾಲಿನ ಮೇಲೆ ಒಂದು ಗಾಯದ ಮಚ್ಚೆ", ಅಥವಾ ಈ ರೀತಿಯ ಗುರುತುಗಳನ್ನು ಬರೆಯಬಹುದು. ಇದು ಒಂದು ಉದಾಹರಣೆ. ಹಾಗೆ ಶ್ರೀಹರಿ ಏನಾದರೂ ಕೆಲಸಕ್ಕೆ ಅರ್ಜಿ ಹಾಕಿದರೆ ಏನು ಬರೆಯಬಹುದು ಎಂದು ಯೋಚಿಸಿದರೆ ಅವನ ಅನೇಕ ಪರಿಚಯದ ನಡುವೆ ಅತ್ಯಂತ ಸುಲಭದ ಗುರುತುಗಳು ಅವನ ಹೆಂಡತಿ ಮತ್ತು ಅವನ ಭಂಟ. ಇವರಿಲ್ಲದೆ ಅವನಿಲ್ಲ. ಅಥವಾ ಅವನಿರುವೆಡೆಯೆಲ್ಲಾ ಇವರಿಬ್ಬರಿದ್ದಾರೆ! ಅದಕ್ಕೆ ಅವನನ್ನು ನೆನಸುವವಕ್ಕೆ ಇವರಿಬ್ಬರ ಮೊರೆ ಹೋಗುತ್ತಾರೆ. ಯಾವುದಾದರೂ ಗುಂಪಿನಲ್ಲಿ (ತಿರುಪತಿ ಬೆಟ್ಟದ ಮೇಲೆ ಮಾತ್ರವಲ್ಲ) "ಇಂದಿರಾರಮಣ" ಅಥವಾ "ಆಂಜನೇಯವರದ" ಎನ್ನಿ. ಹಲವಾರು ಮಂದಿ ಎಲ್ಲೆಲ್ಲಿಂದಲೋ "ಗೋವಿಂದಾ " ಎನ್ನುತ್ತಾರೆ. (ಇದರ ಬಗ್ಗೆ ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ). ಪರಮಾತ್ಮನ ಅತಿ ಸುಲಭ ಗುರುತುಗಳಲ್ಲಿ ಇವು ಅತಿ ಮುಖ್ಯ. ಅದರಲ್ಲೂ ಈ "ಇಂದಿರಾರಮಣ" ಎನ್ನುವುದು. ಇದರ ವಿಶೇಷವೇನು?

ಶ್ರೀಪುರಂದರದಾಸರು ಮಾಧ್ವ ಸಂಪ್ರದಾಯದ ಪರಂಪರೆಗೆ ಸೇರಿದವರು. ಈ ಪರಂಪರೆಯಲ್ಲಿ ಶ್ರೀಮನ್ನಾರಾಯಣನ ನಂತರದ ಸ್ಥಾನ ಮಹಾಲಕ್ಷ್ಮಿ ದೇವಿಗೆ. ಮತ್ತೆಲ್ಲ ಜೀವರು ಮಹಾಪ್ರಳಯ ಕಾಲದಲ್ಲಿ ಪರಮಾತ್ಮನ ಉದರದಲ್ಲಿ ಗಾಢ ನಿದ್ರೆಯಲ್ಲಿದ್ದರೂ  ಮಹಾಲಕ್ಷ್ಮಿ ಮಾತ್ರ ಜೊತೆಗೆ ಇರುತ್ತಾಳೆ. "ಮರುಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ" ಎನ್ನುವ ಕೃತಿಯಲ್ಲಿ "ಪ್ರಳಯಕಾಲದಲ್ಲಿ ಆಲದೆಲೆಯ ಮೇಲೆ ಮಲಗಿದಾಗ ಹಲವು ಆಭರಣಗಳು ಜಲವು ಆಗಿ ಜಾಣತನದಿ, ಇರಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿರ್ಪ೦ತೆ" ಎಂದು ಸೂಚಿಸಿದ್ದಾರೆ. (ಶ್ರೀಹರಿಯ ಪ್ರತಿ ರೂಪಕ್ಕೂ ಅದಕ್ಕೆ ಹೊಂದುವ ಮಹಾಲಕ್ಷ್ಮೀದೇವಿಯ ಸ್ತ್ರೀ ರೂಪ ಉಂಟು. ವಾಸುದೇವ ರೂಪದಲ್ಲಿ ಪರಮಾತ್ಮನಿದ್ದರೆ ಆಗ ಮಾಯಾದೇವಿಯ ರೂಪದಲ್ಲಿ ಲಕ್ಷ್ಮಿ ಇದ್ದಾಳೆ. ಅದಕ್ಕೆ ಮಾಯಾದೇವಿ ಎಂದಿದ್ದಾರೆ).  "ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ" ಎಂಬ ಕೃತಿಯಲ್ಲಿ "ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರ ರೂಪದಲ್ಲಿ ಹರಿಯ ನಿತ್ಯ ಸೇವೆ ಮಾಡುವಂಥ" ಎಂದು ಬಣ್ಣಿಸಿದ್ದಾರೆ. ಪ್ರತಿಯೊಂದು ಪಾತ್ರೆ, ಉಪಕರಣ, ಮತ್ತು ಪ್ರಳಯದ ನೀರಿನ ರೂಪದಲ್ಲಿ ಕೂಡ ತಾನೇ ನಿಂತು ಅವನ ಸೇವೆ ಮಾಡುತ್ತಾಳೆ. 

"ಶ್ರೀ ಸೂಕ್ತ" ಈ ತಾಯಿಯ ಆರಾಧನೆಗೇ ಮೀಸಲಾದ ಸ್ತುತಿ. ಪೂಜಾದಿಗಳಲ್ಲಿ ಪ್ರತಿನಿತ್ಯ ಇದರ ಪಾರಾಯಣ ನಡೆಯುತ್ತದೆ. ಋಗ್ವೇದದ ಹತ್ತನೆಯ ಮಂಡಲದ ೧೨೫ನೆಯ ಸೂಕ್ತ "ಅಂಭ್ರಣೀ ಸೂಕ್ತ" ಎಂದು ಹೆಸರುವಾಸಿಯಾಗಿದೆ. ಇದರಲ್ಲಿ ಮಹಾಲಕ್ಷ್ಮಿ ದೇವಿಯ ಅಗಾಧವಾದ ಶಕ್ತಿಗಳ ಬಗ್ಗೆ ವಿವರಿಸಿದ್ದಾರೆ. ಅವಳು ಅನೇಕ ತತ್ವಗಳು, ಸಮಸ್ತ ವೇದ ವೇದಾಂಗಗಳು, ಮೂರು ಗುಣಗಳು (ಸತ್ವ, ರಾಜಸ ಹಾಗೂ ತಮೋಗುಣಗಳು) ಮುಂತಾದವುಗಳಿಗೆ ಅಭಿಮಾನಿ ದೇವತೆ. ಬ್ರಹ್ಮಾದಿ ಸಕಲ ದೇವತೆಗಳಿಗೂ ಅವಳು ನಿಯಾಮಕಳು. ಕೇವಲ ಕುಡಿಗಣ್ಣ ನೋಟದಿಂದ ಸೃಷ್ಟಿ, ಸ್ಥಿತಿ, ಲಯಾದಿ ಕೆಲಸಗಳನ್ನು ಮಾಡುವವಳು ಮತ್ತು ಮಾಡಿಸುವವಳು (ದ್ವಾದಶ ಸ್ತ್ರೋತ್ರದಲ್ಲಿ ಯಸ್ಯ ಅಪಾಂಗಲವಮಾತ್ರಸ ಊರ್ಜಿತಾ ಸಾ ಮುಂತಾದ ವಿವರಣೆಗಳಿವೆ), ಶ್ರೀಹರಿಯು ವಾಮಾನನಾದಾಗ ಬ್ರಹ್ಮಚಾರಿ. ಬೌದ್ಧಾವತಾರದಲ್ಲಿ ಸನ್ಯಾಸಿ. ಆಗಲೂ ಮಹಾಲಕ್ಷ್ಮಿ ಅವನ ಜೊತೆಯಲ್ಲಿಯೇ ಇದ್ದಳು. (ಅದಕ್ಕೇ ಯಾರನ್ನಾದರೂ "ಹೆಂಡತಿಯನ್ನು ತಲೆಯಮೇಲೆ ಕೂಡಿಸಿಕೊಂಡಿದ್ದಾನೆ'" ಎಂದು ಹಾಸ್ಯ ಮಾಡಬಾರದು. ಅಂತಹವರು ಶ್ರೀಹರಿಯ ಮಾದರಿ ಅನುಸರಿಸಿದ್ದಾರೆ ಎಂದು ಗೌರವಿಸಬೇಕು!) ಈ ಅಂಭ್ರಣೀ ಸೂಕ್ತದಲ್ಲಿ ಮಹಾಲಕ್ಷ್ಮಿಯು "ನಾನು ಯಾರನ್ನು ಬೇಕೋ ಅವರನ್ನು ರುದ್ರನನ್ನಾಗಿ, ಬ್ರಹ್ಮನನ್ನಾಗಿಸುವೆ. ಋಷಿಯನ್ನಾಗಿಸುವೆ. ಬುದ್ಧಿಶಾಲಿಯನ್ನಾಗಿಸುವೆ." ಎನ್ನುತ್ತಾಳೆ.  ಅಂದರೆ ಹಾಗೆ ಮಾಡುವ ಶಕ್ತಿ ನನ್ನಲ್ಲಿದೆ ಎಂದು ಅರ್ಥ. "ವರಮಹಾಲಕ್ಷ್ಮಿ ವ್ರತ" ಮಾಡುವಾಗ ಇಷ್ಟೆಲ್ಲಾ ಅನುಸಂಧಾನವಿರಬೇಕು. ಬಹಳ ಚೆನ್ನಾಗಿ ಅಲಂಕಾರ ಮಾಡಿ ಮೊಬೈಲ್ನಲ್ಲಿ ಚಿತ್ರ ತೆಗೆದು ಫೇಸ್ ಬುಕ್ ನಲ್ಲಿ ಹಾಕಿದರೆ ಕೇವಲ ಪಾಸ್ ಮಾರ್ಕ್ಸ್ ಸಿಗಬಹುದಷ್ಟೇ.  

ಶ್ರೀಪುರಂದರದಾಸರ ಪರಂಪರೆಯಲ್ಲಿ ಮುಂದೆ ಬಂದ ಶ್ರೀ ಜಗನ್ನಾಥ ದಾಸರು ತಮ್ಮ "ಹರಿಕಥಾಮೃತಸಾರ" ಎಂಬ ಮೇರು ಕೃತಿಯಲ್ಲಿ ಮಹಾಲಕ್ಷ್ಮಿ ದೇವಿಯ ಬಗ್ಗೆ ಹೀಗೆ ಹೇಳುತ್ತಾರೆ:

ಜಗದುದರನತಿ ವಿಮಲ ಗುಣ 
ರೂಪಗಳನಾಲೋಚನದಿ ಭಾರತ 
ನಿಗಮತತಿಗಳತಿಕ್ರಮಿಸಿ ಕ್ರಿಯಾವಿಶೇಷಗಳ 
ಬಗೆಬಗೆಯ ನೂತನವ ಕಾಣುತ 
ಮಿಗೆ ಹರುಷದಿಂ ಪೊಗಳಿ ಹಿಗ್ಗುವ 
ತ್ರಿಗುಣಮಾನಿ ಮಹಾಲಕುಮಿ ಸಂತೈಸಲನುದಿನವು 

ಮಹಾಲಕ್ಷ್ಮೀದೇವಿಯು ನಮಗೆ ಬಹಳ ಹತ್ತಿರದವಳು. ನಮ್ಮ ಕೈಗಳ ಮುಂದೆಯೇ ಇದ್ದಾಳೆ. ಅದಕ್ಕೆ ಬೆಳಿಗ್ಗೆ ಎದ್ದ ತಕ್ಷಣ ಕೈಗಳನ್ನು ನೋಡಿಕೊಂಡು "ಕರಾಗ್ರೇ ವಸತೇ ಲಕ್ಷ್ಮೀ" ಎನ್ನುತ್ತೇವೆ. ನಾವು ಮಾಡುವ ಪೂಜೆ ಪುನಸ್ಕಾರಗಳೆಲ್ಲ ಅವಳ ಮೂಲಕವೇ ಮುಂದೆ ಹೋಗಬೇಕು. ಏನನ್ನು ಕೊಡಬೇಕಾದರೂ ಕೈಮೂಲಕವೇ ಕೊಡಬೇಕು ತಾನೇ?

ಮಹಾಲಕ್ಷ್ಮಿ ದೇವಿಯಿಲ್ಲದೆ ಶ್ರೀಹರಿಯಿಲ್ಲ. ಶ್ರೀಹರಿಯಿಲ್ಲದೇ ಮಹಾಲಕ್ಷ್ಮಿಯಿಲ್ಲ. ಎಲ್ಲರಿಗೂ ಎಲ್ಲ ಸಂಪತ್ತುಗಳನ್ನೂ ಕೊಡುವವಳು ಅವಳು. ಅವಳು ಕೊಟ್ಟರೆ ಉಂಟು. ಇಲ್ಲದಿದ್ದರೆ ಇಲ್ಲ. ಕಟ್ಟ ಕಡೆಗೆ ಜೀವನಿಗೆ ವಿರಿಜಾ ನದಿಯಲ್ಲಿ ಮುಳುಗಿಸಿ ಮುಕ್ತಿಗೆ ಕೊಂಡೊಯ್ಯುವವಳೂ ಅವಳೇ. ಆದ್ದರಿಂದ "ಇಂದಿರಾರಾಮಣ" ಎಂದು ಸೂಚಿಸಿದ್ದಾರೆ. ಸದ್ಯಕ್ಕೆ ಇಷ್ಟು ಸಾಕು. 

*****

"ಎಂದೆಂದೂ ವಾಸಿಪನು ಮಂದಿರದ ಒಳಗೆ" ಎನ್ನುವುದು ಮುಂದಿನದು. ಮಂದಿರ ಅಂದರೆ ದೇವಸ್ಥಾನ ಎಂದು ಎಲ್ಲರಿಗೂ ಗೊತ್ತು. ಈಚೆಗೆ "ರಾಮಮಂದಿರ" ಅಯೋಧ್ಯೆಯಲ್ಲಿ ನಿರ್ಮಾಣ ಆಯಿತು. ದರ್ಶನಕ್ಕೆ ಅನೇಕ ಮಂದಿರಗಳಿಗೆ ಹೋಗುತ್ತೇವೆ. ಮಂದಿರ ಅಂದರೆ ಮನೆ ಎನ್ನುವುದು ಸಾಮಾನ್ಯ ಅರ್ಥ. ಅದನ್ನೇ ಗೌರವಯುತವಾಗಿ ಹೇಳಿದಾಗ ಮಂದಿರ ಆಗುತ್ತದೆ. "ಹೂವ ತರುವರ ಮನೆಗೆ ಹುಲ್ಲ ತರುವ ಶ್ರೀಕೃಷ್ಣನು ಮಂದರದ ಒಳಗೆ ಎಂದೆಂದೂ ವಾಸಿಸುತ್ತಾನೆ" ಎಂದು ಹೇಳುವುದರಲ್ಲಿ ಏನು ವಿಶೇಷ? ಒಮ್ಮೆ ಪ್ರಾಣ ಪ್ರತಿಷ್ಠಾಪನೆ ಆದಮೇಲೆ ಆ ಮಂದಿರಗಳ ಒಳಗೆ ಎಂದೆಂದೂ ಇರಲೇಬೇಕಲ್ಲ! ಇಷ್ಟು ಮಾಡಲು ಹಿಂದಿನ ಸಂಚಿಕೆಯಲ್ಲಿ ಹೇಳಿದಂತೆ ಪರೀಕ್ಷೆಯಲ್ಲಿ ರಾಂಕ್ ಪಡೆಯಬೇಕೆ? ಇದು ಒಂದು ಮುಖ್ಯವಾದ ಪ್ರಶ್ನೆ. 

ಸರಿಯಾದ ರೀತಿಯಲ್ಲಿ ಗುಡಿ ಕಟ್ಟಿ, ಮೂರ್ತಿ ಸ್ಥಾಪಿಸಿ ಪ್ರಾಣಪ್ರತಿಷ್ಠೆ ಮಾಡಿದರೆ ಅಲ್ಲಿ ಆ ದೇವತೆ ಅಥವಾ ದೇವರು ವಾಸಿಸುವದರಲ್ಲಿ ಹೆಚ್ಚಿನದೇನೂ ಇಲ್ಲ. ವೈಯುಕ್ತಿಕವಾಗಿ ನಾವು ಯಾರಾದರೂ ಹೋದರೂ, ಹೋಗದಿದ್ದರೂ ಆ ಕೆಲಸ ಆಗಿಯೇಹೋಗುತ್ತದೆ. ಇಲ್ಲಿ ಮಂದಿರದ ಒಳಗೆ ಎಂದರೆ "ನಮ್ಮ ಹೃದಯ ಮಂದಿರ" ಎಂದು ತಿಳಿಯಬೇಕು. ಸಾರ್ವಜನಿಕವಾದ ಮಂದಿರದಲ್ಲಿ ಅವನು ವಾಸಿಸುವ ಕೆಲಸವನ್ನು ಯಾರೋ ಅಥವಾ ಎಲ್ಲರೂ ಸೇರಿ ಮಾಡುತ್ತಾರೆ. ಆದರೆ ನಮ್ಮ ಹೃದಯ ಮಂದಿರದಲ್ಲಿ ಅವನು ವಾಸಿಸಬೇಕಾದರೆ ಮತ್ಯಾರೋ ಏನು ಮಾಡಿದರೂ ಆಗುವುದಿಲ್ಲ. ನಮ್ಮ ಹೊಟ್ಟೆ ತುಂಬಬೇಕಾದರೆ  ನಾವೇ ಊಟ ಮಾಡಬೇಕು. "ಪವರ್ ಆಫ್ ಅಟಾರ್ನಿ" ಕೊಟ್ಟು ಮಾಡಿಸುವಂತಿಲ್ಲ. ಶ್ರೀಕೃಷ್ಹ್ನನು ನಮ್ಮ ಹೃದಯ ಮಂದಿರದಲ್ಲಿ ವಾಸಿಸಬೇಕಾದರೆ ಹಿಂದಿನ ಸಂಚಿಕೆಯಲ್ಲಿ ಹೇಳಿದ ಎಲ್ಲ ಕೆಲಸ ನಾವೇ ಮಾಡಬೇಕು. ಕೆಲವು ಕಡೆಗಳಲ್ಲಿ ಪರಿಕ್ಷೆಗಳಲ್ಲಿ ವಿದ್ಯಾರ್ಥಿಯ ಬದಲು ಮತ್ಯಾರೋ ಪರೀಕ್ಷೆ ಬರೆದರು ಎಂದು ಕೇಳುತ್ತೇವೆ. ಇಲ್ಲಿ ಆ ರೀತಿ ಮಾಡಲು ಸಾಧ್ಯವಿಲ್ಲ. ಇದನ್ನೇ "ವಾಸಿಪನು ಮಂದಿರದ ಒಳಗೆ" ಎಂದರೆ ನಮ್ಮ ಹೃದಯ ಮಂದಿರದಲ್ಲಿ ಬಂದು, ನಿಂತು, ವಾಸಿಸುತ್ತಾನೆ" ಎಂದು ಸೂಚಿಸಿದ್ದಾರೆ. 

ಆಯಿತು. ಒಪ್ಪಿಕೊಳ್ಳೋಣ. "ವಾಸಿಪನು ಮಂದಿರದ ಒಳಗೆ" ಎನ್ನುವುದರ ಒಳಗೆ "ಎಂದೆಂದೂ" ಎಂದೇಕೆ ಹೇಳಿದ್ದಾರೆ? ಅನೇಕ ಡಿಗ್ರಿ ಪರೀಕ್ಷೆಗಳಲ್ಲಿ ಪಾಸ್ ಮಾಡಿದ ನಂತರ ಯಾವುದೂ ಒಂದು ಸಂಸ್ಥೆಯ ಸದಸ್ಯತ್ವ ಪಡೆದ ಮೇಲೆ ಅವಧಿಯಂತೆ, ಸಾಮಾನ್ಯವಾಗಿ ಪ್ರತಿ ವರುಷ, ಆ ಸದಸ್ಯತ್ವವನ್ನು ನವೀಕರಿಸಬೇಕು. "ಡ್ರೈವಿಂಗ್ ಲೈಸನ್ಸ್" ಉದಾಹರಣೆ ತೆಗೆದುಕೊಳ್ಳಬಹುದು. ಡ್ರೈವಿಂಗ್ ಪರೀಕ್ಷೆ ಪಾಸ್ ಮಾಡಿ ಲೈಸನ್ಸ್  ಪಡೆದಿದ್ದಾಯಿತು. ಅದರ ಅವಧಿ ಮುಗಿಯುವ ಒಳಗೆ ಮತ್ತೆ ನವೀಕರಿಸಬೇಕು. ಇಲ್ಲದಿದ್ದರೆ ಅದು "ಲ್ಯಾಪ್ಸ್"" ಆಯಿತು ಅನ್ನುತ್ತೇವೆ. ಹೃದಯ ಮಂದಿರದ ಒಳಗೆ ಬಂದು ನೆಲಿಸಿದ ಪರಮಾತ್ಮನು ಮತ್ತೆ ಹೊರಟುಹೋಗಬಾರದು. ಅದಕ್ಕೆ ಎಂದೆಂದೂ ನೆಲೆಸುವನು ಎನ್ನುವುದು. 

ಇಷ್ಟೆಲ್ಲಾ ಕಸರತ್ತು ಮಾಡಿದರೆ ಮಾತ್ರ ಅವನು ನಮ್ಮ ಹೃದಯ ಮಂದಿರದಲ್ಲಿ ನೆಲೆಸುವನೇ? ಇಲ್ಲದಿದ್ದರೆ ಇಲ್ಲವೇ? ಈ ಪ್ರಶ್ನೆ ಸಹಜ. ಪ್ರತಿ ಜೀವಿಯು ಹುಟ್ಟುವಾಗಲೇ ಆ ಜೀವಿಯಜೊತೆಗೆ ಅವನೂ ಹುಟ್ಟುತ್ತಾನೆ. ಮೊದಲೆನೆಯ ಶ್ವಾಸದೊಂದಿಗೆ ಪ್ರಾಣವಾಯುವೂ ಮತ್ತು ಪರಮಾತ್ಮನೂ ಜೀವಿಯ ದೇಹವನ್ನು ಪ್ರವೇಶಿಸುತ್ತಾರೆ. ಅವರಿರುವವರೆಗೆ ಜೀವಿಯ ಜೀವನ. ಅವರು ಹೊರೆಟ ಒಡನೆ ಆ ದೇಹ ನಿರ್ಜೀವ. "ನೆಂಟನಗಲಿದ ಬಳಿಕ ಒಣಹೆಂಟೆಯಲಿ ಮುಚ್ಚುವರು" ಎಂದು ಇದನ್ನೇ ಶ್ರೀಕನಕದಾಸರು "ಶ್ರೀ ಹರಿಭಕ್ತಿಸಾರ"ದಲ್ಲಿ ಹೇಳಿರುವುದು. ಶ್ರೀ ಪುರಂದರದಾಸರೇ "ಆರು ಹಿತವರು ನಿನಗೆ ಈ ಮೂವರೊಳಗೆ" ಕೃತಿಯಲ್ಲಿ ಹೇಳುತ್ತಾರೆ:

ಮುನ್ನ ಶತಕೋಟಿ ರಾಯರುಗಳಾಳಿದಾ ನೆಲವ 
ತನ್ನದೆಂದೆನುತ ಶಾಸನವ ಬರೆಸಿ 
ಬಿನ್ನಣದ ಮನೆ ಕಟ್ಟಿ ಕೋಟೆ ಕೊತ್ತಳವಿಕ್ಕಿ
ಚೆನ್ನಿಗನ ಅಸುವಳಿಯೆ ಹೊರಗೆ ಹಾಕುವರು 

ಹಾಗಿದ್ದರೆ ಅವನು ಹೇಗೂ ಹೃದಯಮಂದಿರದ ಒಳಗಿದ್ದೇಯಿದ್ದಾನೆ! ಮತ್ತೇಕೆ ಚಿಂತೆ? ಹಾಗಲ್ಲ. ನಮ್ಮ ಬಳಿ ಒಂದು ಅಮೂಲ್ಯ ರತ್ನಾಭರಣವಿದೆ. ಅದು ನಮ್ಮದೇ ಪೆಟ್ಟಿಗೆಯಲ್ಲಿದೆ. ಪೆಟ್ಟಿಗೆ ಯಾವಾಗಲೂ ನಮ್ಮ ಬಳಿಯೇ ಇದೆ. ಆದರೆ ಅದಕ್ಕೆ ಬೀಗ ಹಾಕಿದೆ. ಸುತ್ತ ಕತ್ತಲು ಕವಿದಿದೆ. ಅದನ್ನು ನೋಡಲು, ಸಂತೋಷಪಡಲು, ಉಪಯೋಗಿಸಲು ಬೀಗದಕೈ ಬೇಕು. ಬೆಳಕು ಬೇಕು.  ಅದಕ್ಕೇ ಈ ಎಲ್ಲ ಕಸರತ್ತು. ಇಲ್ಲದಿದ್ದರೆ ಆ ಬಹು ಬೆಲೆಬಾಳುವ ಆದರೆ ಅತಿ ಭಾರದ ಪೆಟ್ಟಿಗೆ ಹೊತ್ತುಕೊಂಡು ತಿರುಗುತ್ತ, ಅಂತಹ ಶ್ರೀಮಂತಿಕೆ ಇದ್ದರೂ ಅದರ ಇರುವಿಕೆ ಗೊತ್ತಿಲ್ಲದೇ ಭಿಕ್ಷೆ ಬೇಡಿದಂತೆ ನಮ್ಮ ಪಾಡು. ಹಾಗಾಗಬಾರದು. ಎಂದೆಂದೂ ಹೃದಯ ಮಂದಿರದಲ್ಲಿ ಇರುವ ಅವನು ನಮಗೆ ಪ್ರತಿಕ್ಷಣವೂ ಕಾಣುತ್ತಿರಬೇಕು. ಇದನ್ನೇ "ಎಂದೆಂದೂ ವಾಸಿಪನು ಹೃದಯ ಮಂದಿರದ ಒಳಗೆ" ಎನ್ನುವುದು ಸೂಚಿಸುತ್ತದೆ. 

*****

ದ್ರಾಕ್ಷಿಯ ಗೊಂಚಲಿನ ಪ್ರತಿ ದ್ರಾಕ್ಷಿಯಲ್ಲಿ ಸಿಹಿ ರಸ ತುಂಬಿದೆ. ರಸ ಸಿಗಬೇಕಾದರೆ ಪ್ರತಿ ದ್ರಾಕ್ಷಿಯನ್ನೂ  ಜಗಿದು ನುಂಗಬೇಕು. ಆಗ ರಸದ ಪರಮಾವಧಿ ನಮಗೆ ಸಿಗುತ್ತದೆ. "ಅಯ್ಯೋ, ಎಷ್ಟು ಜಗಿಯುವುದು? ಬೇಜಾರು." ಎಂದು ನುಂಗುತ್ತಾ ಹೋದರೆ ನಷ್ಟ ನಮಗೇ.  ದ್ರಾಕ್ಷಿ ಬೆಳೆದ ರೈತನಿಗಲ್ಲ. ನಮ್ಮವರೆಗೂ ತಂದುಕೊಟ್ಟವರಿಗೂ ಅಲ್ಲ. 

ಸರಣಿ ದೀರ್ಘವಾಯಿತು. ಇನ್ನೂ "ಪರಿಪೂರ್ಣ", "ಸಕಲ ಸ್ವಾತಂತ್ರ್ಯ", "ಅರಮನೆಯಒಳಗೆ ಸರೀಭಾಗ" ಮತ್ತು ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು" ಉಳಿದಿದೆ. ಇವನ್ನು ಮುಂದೆ ನೋಡೋಣ. 

Monday, December 9, 2024

ಪರಿಪರಿಯ ಪುಷ್ಪಗಳು


ಶ್ರೀ ಪುರಂದರದಾಸರ ಬಹು ಜನಪ್ರಿಯ ಕೃತಿ "ಹೂವ ತರುವರ ಮನೆಗೆ ಹುಲ್ಲ ತರುವ, ಅವ್ವ ಲಕುಮಿರಮಣ ಇವಗಿಲ್ಲ ಗರುವ" ಕೃತಿಯ ವಿಶೇಷಾರ್ಥಗಳು ಹಾಗೂ ಗೂಡಾರ್ಥಗಳ ತಿಳಿಯುವ ಪ್ರಯತ್ನದಲ್ಲಿ ಹಿಂದಿನ ಸಂಚಿಕೆಯಲ್ಲಿ "ಬಿಂದು ಗಂಗೋದಕ" ಎನ್ನುವ ಬಗ್ಗೆ ನೋಡಿದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ)

"ಒಂದು ದಳ ಶ್ರೀ ತುಳಸಿ" "ಬಿಂದು ಗಂಗೋದಕ" "ಪರಿಪರಿಯ ಪುಷ್ಪಗಳ" "ಒಂದೇ ಮನದಲಿ" ಎನ್ನುವ ಈ ನಾಲ್ಕು ವಿಷಯಗಳ ಪರಿಶೀಲನೆಯನ್ನು ಈಗ ಒಟ್ಟಿಗೆ ಮಾಡೋಣ. 

ಶ್ರೀಪುರಂದರದಾಸರ ಕೃತಿಗಳು ರಾಮಾಯಣ, ಮಹಾಭಾರತ, ಭಾಗವತ ಸೇರಿದಂತೆ ಹದಿನೆಂಟು ಪುರಾಣಗಳು ಮತ್ತು ಉಪನಿಷತ್ತುಗಳ ಸಾರಗಳನ್ನು ಹೊತ್ತುಕೊಂಡಿರುವ ಕಲ್ಪವೃಕ್ಷದ ಫಲಗಳು. ಅವುಗಳನ್ನು ಸುಮ್ಮನೆ ಓದುವುದರಿಂದ ಅಥವಾ ಹಾಡುವುದರಿಂದ ಬಾಹ್ಯಾರ್ಥ ಅಥವಾ ಹೊರ ಅರ್ಥ ಮಾತ್ರ ಗೊತ್ತಾಗುತ್ತದೆ. ಆ ಕೃತಿಗಳ ಒಳ ಅರ್ಥ ಮತ್ತು ಗೂಡಾರ್ಥಗಳು ತಿಳಿಯಬೇಕಾದರೆ ಹೆಚ್ಚಿನ ಪರಿಶ್ರಮ ಅಗತ್ಯ. 

*****

ವಿದ್ಯಾಭ್ಯಾಸದ ಕ್ರಮದಲ್ಲಿ ಪ್ರತಿ ಹಂತದಲ್ಲಿ (ತರಗತಿಗಳು ಎನ್ನಬಹುದು) ವಾರ್ಷಿಕ ಪರೀಕ್ಷೆಗಳು ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ. ವಿದ್ಯಾಭ್ಯಾಸ ಮಾಡುವ ಎಲ್ಲ ವಿದ್ಯಾರ್ಥಿಗಳೂ ಈ ಪರೀಕ್ಷೆಗಳಿಗೆ ಕೂಡುತ್ತಾರೆ. ಪರೀಕ್ಷೆಯ ನಂತರ ಪರೀಕ್ಷಕರು ಪ್ರತಿ ವಿದ್ಯಾರ್ಥಿಯ ಪರಿಶ್ರಮವನ್ನು ಅವರ ಉತ್ತರ ಪತ್ರಿಕೆಯ ಮೂಲಕ ಅಳೆದು ಮೌಲ್ಯಾ೦ಕನ ಮಾಡಿ ಅವರನ್ನು ಉತ್ತೀರ್ಣ ಅಥವಾ ಅನುತ್ತೀರ್ಣ (ಪಾಸ್ ಅಥವಾ ಫೇಲ್) ಎಂದು ಘೋಷಿಸುತ್ತಾರೆ. ಇಷ್ಟು ಮಾತ್ರವಲ್ಲ, ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಮೊದಲ, ಎರಡನೆಯ ಅಥವಾ ಮೂರನೆಯ ದರ್ಜೆ ಎಂದೂ ಸಹ ವರ್ಗೀಕರಿಸುತ್ತಾರೆ. ಕೆಲವರಿಗೆ, ಅಂದರೆ ಅತಿ ಹೆಚ್ಚು ಅಂಕಗಳನ್ನು ಪಡೆದವರಿಗೆ ಶ್ರೇಣಿಗಳನ್ನೂ (rankings) ಕೊಡುತ್ತಾರೆ. ಅವರವರ ಶ್ರಮಕ್ಕೆ, ಸಾಧನೆಗೆ ತಕ್ಕ ಫಲ ಅವರವರಿಗೆ. 

ಪರೀಕ್ಷೆ ಅಂದರೆ ಒಂದು ಮಾನದಂಡ ಬೇಕಲ್ಲ. ಇದು ಪರೀಕ್ಷೆಗೆ ಉತ್ತರ ಬರೆಯುವುದಕ್ಕೆ ಮೊದಲೇ ಎಲ್ಲರಿಗೂ ಗೊತ್ತು. ಉತ್ತರ ಬರೆದ ಮೇಲೆ ಮಾನದಂಡ ಹೇಳುವುದಲ್ಲ. 100ಕ್ಕೆ  30 ಅಂಕ ಪಡೆದರೆ ಮಾತ್ರ ಪಾಸ್ ಎನ್ನೋಣ. 30ಕ್ಕೆ ಕಡಿಮೆ ಬಂದರೆ ಫೇಲ್ ಅನ್ನೋಣ. 30 ರಿಂದ 50 ಅಂಕ ಪಡೆದರೆ ಮೂರನೆಯ ದರ್ಜೆ ಅನ್ನೋಣ. 50 ರಿಂದ 60 ಅಂಕ ಬಂದರೆ ಎರಡನೇ ದರ್ಜೆ. 60ಕ್ಕಿಂತ ಹೆಚ್ಚು ಬಂದರೆ ಮೊದಲ ದರ್ಜೆ. 80ಕ್ಕಿಂತ ಹೆಚ್ಚು ಬಂದರೆ ಉತ್ತಮ ಶ್ರೇಣಿ ಎನ್ನೋಣ. ಇದು ಸಾಮಾನ್ಯವಾಗಿ ನಮ್ಮ ಪ್ರಪಂಚದಲ್ಲಿ ಇರುವುದೇ. ಪರಮಾತ್ಮನ ಸೃಷ್ಟಿಯಲ್ಲೂ ಹಾಗೆ. ಸಾಧನೆಯ ಮೇಲೆ ಮಣೆ ಹಾಕುವುದು. ವರ್ಷವೆಲ್ಲ ಸೋಮಾರಿಯಾಗಿ ಬದುಕಿದವನೂ ಶ್ರಮಪಟ್ಟು ಸಾಧನೆ ಮಾಡಿದವನೂ ಒಂದೇ ಹೇಗಾದೀತು? ಇಬ್ಬರಿಗೆ ಬೇರೆ ಬೇರೆ ಅಂಕ ಬಂದರೆ ಅದು ಪರೀಕ್ಷಕನ ತಪ್ಪೋ ಅಥವಾ ವಿದ್ಯಾರ್ಥಿಯ ತಪ್ಪೋ? 

ಪಠ್ಯಕ್ರಮದಲ್ಲಿ ಹೇಳಿದಂತೆ ಎಲ್ಲವನ್ನೂ ಮೊದಲಿಂದ ಕೊನೆಯವರೆಗೆ ಓದಿ ಮನನ ಮಾಡಿ ಉತ್ತರ ಬರೆದ ವಿದ್ಯಾರ್ಥಿಯೂ, ಅಲ್ಲೊಂದು ಇಲ್ಲೊಂದು ಪುಟ ಓದಿ ಉತ್ತರ ಬರೆದ ವಿದ್ಯಾರ್ಥಿಯೂ ಒಂದೇ ಆಗಬಹುದೇ? ಪಠ್ಯಪುಸ್ತಕವನ್ನು ನೋಡದೇ ಕೇವಲ ಗೈಡುಗಳ ಸಹಾಯದಿಂದ ಉತ್ತರ ಬರೆದ ವಿದ್ಯಾರ್ಥಿಗೂ ಪ್ರಥಮಶ್ರೇಣಿ ಸಿಗಬೇಕೇ? ತನ್ನ ಶ್ರಮದ ಮೇಲೆ ತಯಾರಾದ ವಿದ್ಯಾರ್ಥಿಗೂ ಯಾರದೋ ಉತ್ತರ ನಕಲು ಮಾಡಿ ಉತ್ತರ ಬರೆದ ವಿದ್ಯಾರ್ಥಿಗೂ ಒಂದೇ ಅಂಕ ಕೊಡಬಹುದೇ? 

ಪರಮಾತ್ಮನ ಸೃಷ್ಟಿಯಲ್ಲಿ ಸಮಾನತೆ ಇದೆ. ಆದರೆ ಸಮಾನತೆ ಅಂದರೆ ಎಲ್ಲರಿಗೂ ಒಂದೇ ಎಂದಲ್ಲ. ಸಮಾನತೆ ಅಂದರೆ ಸಮಾನ ಅವಕಾಶ ಕೊಡುವುದು. ಒಮ್ಮೆ ಅವಕಾಶ ಸಿಕ್ಕ ಮೇಲೆ ಅವರವ ಸಾಧನೆಗೆ ತಕ್ಕಂತೆ ಪ್ರತಿಫಲ. ಸಮಾನತೆ ಅಂದರೆ ಕತ್ತೆಯೂ ಒಂದೇ, ಕುದುರೆಯೂ ಒಂದೇ ಎಂದಲ್ಲ. ಕುದುರೆ ದೊಡ್ಡದು ಅಥವಾ ಕತ್ತೆ ಚಿಕ್ಕದು ಎಂದೂ ಅಲ್ಲ. ಎಲ್ಲರಿಗೂ ಒಂದೇ ಪ್ರತಿಫಲ ಮಾಡಿ ಹೆಚ್ಚು ಸಾಧನೆ ಮಾಡುವರನ್ನು ತಡೆಯುವುದೂ ಇಲ್ಲ. 

ಒಂದು ತಾಯಿಗೆ ಮೂರು ಮಕ್ಕಳು. ಮೊದಲನೆಯವನು ಹದಿನೆಂಟು ವರುಷದ ಯುವಕ. ಎರಡನೆಯವನು ಆರು ವರುಷದ ಬಾಲಕ. ಮೂರನೆಯವನು ಆರು ತಿಂಗಳ ಕೂಸು. ತಾಯಿಗೆ ಮೂವರೂ ಮಕ್ಕಳೇ. ಮೂವರ ಮೇಲೂ ಸಮಾನ ಪ್ರೀತಿಯೇ. ದೊಡ್ಡವನಿಗೆ ಮೂರು ರೊಟ್ಟಿ ಕೊಡುತ್ತಾಳೆ. ಮಧ್ಯದವನಿಗೆ ಒಂದೇ ರೊಟ್ಟಿ ಕೊಡುತ್ತಾಳೆ. ಮೂರನೆಯ ಮಗನಿಗೆ ರೊಟ್ಟಿ ಕೊಡುವುದೇ ಇಲ್ಲ. ಒಂದು ಲೋಟ ಹಾಲು ಮಾತ್ರ. ತಾಯಿ ಭೇದಭಾವ ಮಾಡುತ್ತಿದ್ದಾಳೆ ಎಂದು ಹೇಳಬಹುದೇ? ಮೂರನೆಯ ಮಗನ ಬಾಯಿಗೆ ಮೂರು ರೊಟ್ಟಿ ತುರುಕಿದರೆ ಹೇಗೆ? ಮೊದಲನಿಯವನಿಗೆ ಒಂದೇ ರೊಟ್ಟಿ ಕೊಟ್ಟರೆ ಹೇಗೆ? ಸಮಾನತೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಪರಮಾತ್ಮನ ಸೃಷ್ಟಿಯಲ್ಲಿ "ನಿಯಮನ" ಎಂದೊಂದು ಇದೆ. ಈ ನಿಯಮನವೇ ಅವನ ಸಂವಿಧಾನ. ಸಮಾನ ಅವಕಾಶ ಎಲ್ಲರಿಗೂ ಉಂಟು. ಆದರೆ ಪ್ರತಿಫಲ ಮಾತ್ರ ಶ್ರಮದ ಅಆಧಾರದ ಮೇಲೆಯೇ. 

ಪರಮಾತ್ಮನ ಪರೀಕ್ಷೆಯಲ್ಲಿ ಪರೀಕ್ಷೆಯ ಉಸ್ತುವಾರಿ ಅವನದೇ. ಅವನ ಪರೀಕ್ಷೆಯಲ್ಲಿ ಅವನ ಕಣ್ಣು ತಪ್ಪಿಸಿ ಪರೀಕ್ಷೆಯಲ್ಲಿ ಕಾಪಿ ಹೊಡೆಯುವಹಾಗಿಲ್ಲ. ಅವನು ಎಲ್ಲ ನೋಡುತ್ತಿರುತ್ತಾನೆ! (ಈ ವಿಷಯದಲ್ಲಿ ಹೆಚ್ಚು ತಿಳಿಯಬೇಕಾದರೆ ಇಲ್ಲಿ ಕ್ಲಿಕ್ ಮಾಡಿ).  ಯಾವ ದಾರಿ ಬೇಕಾದರೂ ಆರಿಸಿಕೊಂಡು ಪರೀಕ್ಷೆ ಬರೆಯಬಹುದು. ಆದರೆ ತಯಾರಿ ನೋಡಿ ಅಂಕ ಕೊಡುತ್ತಾನೆ. ಸರಿಯಾದ ತಯಾರಿ ಇಲ್ಲದಿದ್ದರೆ "ನೀನು ಅನುತ್ತೀರ್ಣ" ಎನ್ನುತ್ತಾನೆ. "ಮತ್ತೊಮ್ಮೆ ಪರೀಕ್ಷೆ ಬರಿ"  ಅನ್ನುತ್ತಾನೆ. ಅವನನ್ನು ಯಾಮಾರಿಸುವಹಾಗಿಲ್ಲ. 

ಈ ಮೇಲೆ ಹೇಳಿದ ಅಂಶಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ "ಪತ್ರಂ ಪುಷ್ಪ೦ ಫಲಂ ತೋಯಂ" ಎನ್ನುವ ಭಗವದ್ಗೀತೆಯ ಶ್ಲೋಕದ ನಿಜವಾದ ಅರ್ಥ ಸಿಗುತ್ತದೆ. ಇಲ್ಲದಿದ್ದರೆ ಅಂಗಡಿಯಲ್ಲಿ ಸಿಗುವ ಗೈಡುಗಳ ಸಹಾಯದಿಂದ ಪರೀಕ್ಷೆ ಬರೆದಂತೆ ಆಗುತ್ತದೆ. 
*****

ಶ್ರೀ ಪುರಂದರದಾಸರು "ಹೂವ ತರುವರ ಮನೆಗೆ ಹುಲ್ಲ ತರುವ" ಕೃತಿಯಲ್ಲಿ "ಒಂದು ದಳ ಶ್ರೀತುಳಸಿ", "ಬಿಂದು ಗಂಗೋದಕ", ಮತ್ತು "ಪರಿಪರಿಯ ಪುಷ್ಪಗಳ" ಎನ್ನುವ ಮೂರು ಪದಗಳನ್ನು ಪತ್ರ೦, ತೋಯಂ, ಮತ್ತು ಪುಷ್ಪ೦ ಎಂಬುದರ ಸೂಚಕವಾಗಿ ಬಳಸಿದ್ದಾರೆ. ಇಲ್ಲಿ ಫಲದ ಬಗ್ಗೆ ನೇರವಾಗಿ ಹೇಳಿಲ್ಲ. ಆದರೆ ಸೂಚ್ಯವಾಗಿ ಈ ಫಲದ ಬಗ್ಗೆ ಮುಂದಿನ ನುಡಿಗಳಲ್ಲಿ ಹೇಳಿದ್ದಾರೆ. ಹೇಗೆ ಎನ್ನುವುದನ್ನು ಮುಂದೆ ನೋಡೋಣ. 

ಮೊದಲಿಗೆ ಪತ್ರಂ ಅಥವಾ ಎಲೆಯನ್ನು ನೋಡಬೇಕು. ಅವನಿಗೆ ಒಂದು ಎಲೆ ಸಾಕು ಎನ್ನುತ್ತಾನೆ. ಸರಿ ಮನೆಯ ಹೊರಗಡೆ ಮೊದಲು ಕಂಡ ಗಿಡದ ಎಲೆ ಆಗಬಹುದೇ? ಸೃಷ್ಟಿಯಲ್ಲಿ ಕೆಲವು ಗಿಡ ಇವೆ. ಅವುಗಳ ಎಲೆ ತಾಗಿದೊಡನೆ ನಮಗೆ ತುರಿಕೆ ಆಗುತ್ತದೆ. ಆ ಗಿಡದ ಎಲೆಯೂ ಆಗಬಹುದೇ? ನಾವು ವೀಳೆಯದೆಲೆ ಹಾಕಿಕೊಳ್ಳುವಾಗ ಕೆಲವು ಎಲೆಗಳನ್ನು ಪಕ್ಕಕೆ ಎಸೆಯುತ್ತೇವೆ. ಚೆನ್ನಾಗಿರುವುದನ್ನು ಮಾತ್ರ ತೆಗೆದುಕೊಳ್ಳುತ್ತೇವೆ. ಅದನ್ನು ಬಟ್ಟೆಯಿಂದ ಒರೆಸುತ್ತೇವೆ. ನಮ್ಮ ಮನಸ್ಸಿಗೆ ಸರಿ ಎನ್ನಿಸಿದ ಮೇಲೆ ಮುಂದಿನ ಮಾತು. ಪರಮಾತ್ಮನಿಗೆ ಅರ್ಪಿಸುವ ವೇಳೆ ಯಾವ ಮಟ್ಟದ ಆರಿಸುವುಕೆ ಮತ್ತು ಶ್ರದ್ದೆ ಇರಬೇಕು?

ಪರೀಕ್ಷೆಯಲ್ಲಿ ಪಾಸಾದರೆ ಸಾಕು ಎನ್ನುವ ವಿದ್ಯಾರ್ಥಿಗೆ ಯಾವುದೋ ಎಲೆ. ಎರಡನೇ ಶ್ರೇಣಿ ಬೇಕಿದ್ದರೆ ಸರಿಯಾದ ಒಳ್ಳೆ ಎಲೆ. ಮೊದಲ ಶ್ರೇಣಿ ಬೇಕಿದ್ದರೆ ಶ್ರೀ ತುಳಸಿ, ಬಿಲ್ವಪತ್ರೆ ಮುಂತಾದ ಎಲೆಗಳು. ಉತ್ತಮ ಶ್ರೇಣಿ ಬರಬೇಕಾದರೆ? ಪೂರ್ತಿ ಸಿಲಬಸ್ ಓದಿದ ವಿದ್ಯಾರ್ಥಿಗೆ ಅದೇ ಭಗವದ್ಗೀತೆಯ ಮತ್ತೊಂದು ಶ್ಲೋಕ ಗೊತ್ತು. ಯಾವುದು? "ಊರ್ಧ್ವಮೂಲ ಅಧಃಶಾಖಾ ಅಶ್ವಥಮ್ ಪ್ರಾಹುರವ್ಯಮ್, ಛಂದಾಂಸಿ ಯಸ್ಯ ಪರ್ಣಾನಿ ....." ಎಂದು. ಹೆಚ್ಚಿನ ವಿವರಗಳಿಗೆ ಇದು ಸ್ಥಳವಲ್ಲ. ಆ ವಿಶಾಲವಾದ ವೇದಗಳೆಂಬ ಎಲೆಗಳು. ಕ್ರಮವಾಗಿ ಅಧ್ಯನಮಾಡಿದ ಜ್ಞಾನದ ಎಲೆಗಳನ್ನು ಅರ್ಪಿಸಬೇಕು. ಇದೇ ಗುಹ್ಯಾರ್ಥ.   

ಎರಡನೆಯದು ಪುಷ್ಪಮ್ ಅಥವಾ ಹೂವು. ಯಾವ ಹೂವು? ಕಾಗದದ ಹೂವು ಆಗಬಹುದೇ? ಕಾಗದದಂತೆ ಇರುವ, ಗಂಧವಿಲ್ಲದ ಕಾಕಡ ಅಥವಾ ಕನಕಾಂಬರ ಹೂವು ಆಗಬಹುದೇ? ಬಹು ಸುವಾಸನೆಯ ಮಲ್ಲಿಗೆ, ಜಾಜಿ, ಸಂಪಿಗೆಗೂ ಒಂದೇ ಅಂಕವೇ? ಒಂದು ರೀತಿಯ ಹೂವು ಸಾಕೆ? ನಾಲ್ಕು ರೀತಿಯ ಹೂವುಗಳು ಇನ್ನೂ ಉತ್ತಮವಲ್ಲವೇ? ಬೆಳಗ್ಗೆ ಒಂದು ಕೈಯಲ್ಲಿ ಒಂದು ಬುಟ್ಟಿ, ಮತ್ತೊಂದು ಕೈಲಿ ಕಬ್ಬಿಣದ ಕೊಕ್ಕೆ ಹಿಡಿದು ಅವರಿವರ ಮನೆಯ ಗಿಡಗಳ ಹೂವು ಸಂಪಾದಿಸಿದರೆ ಹೇಗೆ?  ದಾಸರು ಪರಿಪರಿಯ ಹೂವುಗಳು ಎಂದಿದ್ದು ಏನನ್ನು? ಪರಮಾತ್ಮನು ಹೇಳಿದ ನಿಜವಾದ ಹೂವು ಯಾವುವು? ಪೂರ್ತಿ ಸಿಲಬಸ್ ಓದಿದ ವಿದ್ಯಾರ್ಥಿಗೆ ಗೊತ್ತು. "ಅಹಿಂಸಾ ಪ್ರಥಮಂ ಪುಷ್ಪಮ್, ಪುಷ್ಪಮಿಂದ್ರಿಯ ನಿಗ್ರಹಃ, ಸರ್ವಭೂತ ದಯಪುಷ್ಪಮ್, ಕ್ಷಮಾಪುಷ್ಪಮ್ ವಿಶೇಷತಃ,  ಜ್ಞಾನ ಪುಷ್ಪಮ್, ತಪಃ ಪುಷ್ಪಮ್, ಶಾಂತಿ ಪುಷ್ಪಮ್, ಸತ್ಯಂ ಪುಷ್ಪಮ್, ಏವಂ ಅಷ್ಟ ವಿಧಂ ಪುಷ್ಪಮ್". ಉತ್ತಮ ಶ್ರೇಣಿ ಬೇಕಾದ ವಿದ್ಯಾರ್ಥಿ ಈ ಎಂಟು ಹೂವುಗಳನ್ನು ತರುತ್ತಾನೆ, ಬೆಳಗ್ಗೆ ಅರಳಿ ಸಂಜೆ ಮುದುಡುವ ಹೂವುಗಳನ್ನಲ್ಲ. ಇದು ಗುಹ್ಯಾರ್ಥ. 

ಇನ್ನು ಒಂದು ತೊಟ್ಟು ನೀರಿನ ವಿಷಯ ನೋಡೋಣ. ಯಾರೋ ತಂದಿಟ್ಟ ನೀರಿನಲ್ಲಿ ಒಂದು ತೊಟ್ಟು ನೀರು ಕೊಡಬಹುದೇ? ಕೊಳಕು ಪಾತ್ರೆಯಲ್ಲಿರುವ ನೀರೂ ಕೊಡಬಹುದೇ? ಅದನ್ನು ನಾವೇ ಕುಡಿಯುವುದಿಲ್ಲ. ಹಿಂದಿನ ಸಂಚಿಕೆಯಲ್ಲಿ ನೋಡಿದಂತೆ ಕಾಶಿ ಯಾತ್ರೆ ಮಾಡಿ, ಬಿಂದುಮಾಧವನ ದರ್ಶನ ಮಾಡಿ, ಬಿಂದುಮಾಧವನ ಘಟ್ಟದಲ್ಲಿ ಭಯ-ಭಕ್ತಿಯಿಂದ ಹಿಡಿದು ತಂದ ಗಂಗೆಯ ಥಾಲಿಯ ನೀರಿಗೂ ಯಾರೋ ತಂದಿಟ್ಟ ನೀರಿನಲ್ಲಿ ಕದ್ದು ತೆಗೆದ ಒಂದು ತೊಟ್ಟು ನೀರಿಗೂ ಒಂದೇ ಬೆಲೆಯೇ? ಎಷ್ಟು ಅಂಕ ಬೇಕೋ ತೀರ್ಮಾನಿಸಿ ಅಂತಹ ನೀರು ಆರಿಸುವುದು ನಮಗೆ ಬಿಟ್ಟಿದ್ದು!  ವಾಸ್ತವವಾಗಿ ಆ ಹನಿ ನೀರಿನ ನಿಜವಾದ ಅರ್ಥ ಬೇರೆಯೇ ಇದೆ, ಸರಿಯಾದ ಕ್ರಮದಲ್ಲಿ ಜೀವನ ಮಾಡಿ, ಸಮಾಜಕ್ಕೆ ಉಪಕಾರಿಯಾಗಿ, ಜೀವನದ ಕೊನೆ ಗಳಿಗೆಯಲ್ಲಿ ಕರ್ತನ ನೆನೆಯುತ್ತ ಕಣ್ಣಿನಲ್ಲಿ ತುಂಬಿದ ಆನಂದಾಶ್ರುವೇ ಅವನಿಗೆ ಬೇಕಾದ ನೀರಿನ ಹನಿ. ಬಿಸಿಯಾದಾಗ ಆವಿಯಾಗುವ ಈ ನೀರ ಹನಿ ಅಲ್ಲ. ಒಂದು ತೊಟ್ಟು ನೀರಿನ ಗುಹ್ಯಾರ್ಥ ಇದೇ.

ಇನ್ನುಳಿದಿದ್ದು ಫಲ ಅಂದರೆ ಹಣ್ಣು. ಯಾವ ಹಣ್ಣು? ಬೇಲಿಯಲ್ಲಿ ಬೆಳೆಯುವ ಪೀನಾಸಿ (ಲಂಟಾನಾ) ಗಿಡದ ಹಣ್ಣೂ ಹಣ್ಣೇ. ಹಿಪ್ಪುನೇರಳೆ ಗಿಡದ ಹಣ್ಣೂ ಹಣ್ಣೇ. ಸೀಬೆ (ಬಹುಬೀಜ ಫಲ), ಸೇಬು (ಕಾಶ್ಮೀರ ಫಲ), ದ್ರಾಕ್ಷಿಯೂ ಫಲಗಳೇ. ಯೋಗ್ಯವಾದ ಫಲ ತಂದರೆ ಹೆಚ್ಚು ಅಂಕಗಳು; ಉತ್ತಮ ಶ್ರೇಣಿ. ಇವೆಲ್ಲಾ ಪಾಸಾದರೆ ಸಾಕು ಎನ್ನುವ ವಿದ್ಯಾರ್ಥಿಗೆ. ಉತ್ತಮ ಶ್ರೇಣಿ ಬೇಕು ಎನ್ನುವ ವಿದ್ಯಾಥಿ ಪೂರಾ ಸಿಲಬಸ್ ಓದಿದ್ದಾನೆ, ಅವನಿಗೆ ಪರಮಾತ್ಮ ಹೇಳಿದ ನಿಜವಾದ ಫಲ ಯಾವುದು ಎಂದು ಗೊತ್ತು. ಅದು ಸರಿಯಾಗಿ ಜೀವನ ಮಾಡಿದ ಆವ್ಯಕ್ತಿ ಜೀವನದ ಕೊನೆಗೆ ಸಂಪಾದಿಸಿದ "ನಿಷ್ಕಾಮ ಕರ್ಮದಿಂದ ಬಂದ ಕರ್ಮಫಲ". ಗೀತಾಚಾರ್ಯ ಮತ್ತೆ ಮತ್ತೆ ಹೇಳಿದ್ದಾನೆ. ನೀನು ಕರ್ಮ ಮಾಡು. ಆದರೆ ಕರ್ಮಫಲ ನನಗೆ ಬಿಡು. ಇದೇ ಪರೀಕ್ಷೆಗೆ ತರಬೇಕಾದ ನಿಜವಾದ ಫಲ. ಎರಡು ದಿನದಲ್ಲಿ ಒಣಗಿ ಗೊಬ್ಬರವಾಗುವ ಫಲವಲ್ಲ. ಇದು ಗೂಡಾರ್ಥ. 

ಇವುಗಳ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. 

*****

ಒಂದು ಎಲೆ, ಒಂದು ಹೂವು, ಒಂದು ಹಣ್ಣು, ಒಂದು ತೊಟ್ಟು ನೀರು, ಇವು ಕೊಟ್ಟರೆ ಸಾಕು ಎಂದು ಹೇಳುವುದು ಗೈಡುಗಳಲ್ಲಿ ಹೇಳಿಕೊಡುವ ಪಾಠ. ಅದರಿಂದ ತಯಾರಾಗಿ ಪರೀಕ್ಷೆ ಬರೆದರೆ ಅದಕ್ಕೆ ತಕ್ಕ ಅಂಕಗಳು, ಶ್ರೇಣಿ ಸಿಗುತ್ತದೆ. ಪೂರ್ತಿ ಸಿಲಬಸ್ ಓದಿ ಮೇಲೆ ಹೇಳಿದ ರೀತಿ ಸಮರ್ಪಣೆ ಮಾಡಿದರೆ ಅತ್ಯುನ್ನತ ಶ್ರೇಣಿ ಸಿಗುತ್ತದೆ. ಪರಮಾತ್ಮನ ಪರೀಕ್ಷೆಯಲ್ಲಿ ಯಾವುದೂ ವ್ಯರ್ಥವಲ್ಲ. ಆದರೆ ಅಂತಿಮ ಪರೀಕ್ಷೆಯಲ್ಲಿ ಕೊಟ್ಟ ಉತ್ತರಗಳಿಗೆ ತಕ್ಕ ಅಂಕಗಳು; ಶ್ರೇಣಿ! ಪರೀಕ್ಷೆಗೆ ತಯಾರಿ ಮಾಡುವ ಈ ಶ್ರಮವನ್ನೇ ಶ್ರೀಪುರಂದರದಾಸರು "ಒಂದೇ ಮನದಲಿ" ಎನ್ನುವ ಪದದ ಮೂಲಕ ಸೂಚಿಸಿದ್ದಾರೆ.. ಇದು ಅದರ ಗೂಡಾರ್ಥ. 

ಒಂದು ಲಕೋಟೆಯಲ್ಲಿ ಪತ್ರವಿಟ್ಟು ಕೊಟ್ಟಂತೆ ಪರೀಕ್ಷೆಯಲ್ಲಿ ಮೇಲೆ ಹೇಳಿದಂತೆ ಕೊಟ್ಟ ಉತ್ತರಪತ್ರ. ಲೌಕಿಕದ ಎಲ್ಲ ವಿಷಯಗಲ್ಲಿ ಲಕೋಟೆ ಹರಿದು ಬಿಸಾಡಿ ಒಳಗಿನ ಪತ್ರಕ್ಕೆ ಬೆಲೆ ಕೊಡುತ್ತಾರೆ. ಆದರೆ ಪರಮಾತ್ಮನಿಗೆ ಲಕೋಟೆಯ ಒಳಗಿನ ಪತ್ರದಂತೆ  ಲಕೋಟೆಯೂ ಅಷ್ಟೇ ಮುಖ್ಯ. "ಒಂದೇ ಮನದಲಿ" ಅನ್ನುವುದು ಇದನ್ನೇ ಸೂಚಿಸುತ್ತದೆ. ಪರೀಕ್ಷೆಗೆ ತಯಾರಾದ ಪ್ರತಿ ಹಂತದಲ್ಲೂ ಶ್ರದ್ದೆ ಬಹಳ ಮುಖ್ಯ ಅನ್ನುವುದು ಇದರ ಭಾವ. 

ಒಂದು ದಳ ಶ್ರೀತುಳಸಿ, ಬಿಂದು ಗಂಗೋದಕ, ಪರಿಪರಿಯ ಪುಷ್ಪಗಳ ಮತ್ತು ಒಂದೇ ಮನದಲಿ ಎನ್ನುವ ಪದಪುಂಜಗಳು ಮತ್ತು ಸೂಚ್ಯವಾಗಿ ಹೇಳಿದ ಕರ್ಮಫಲ, ಇವುಗಳ ಬಗ್ಗೆ ಸ್ವಲ್ಪ ವಿಚಾರ ಮಾಡಿದ್ದಾಯಿತು. 

ಇನ್ನುಳಿದುದು "ಇಂದಿರಾರಾಮಣ", "ಮಂದಿರದ ಒಳಗೆ", "ಪರಿಪೂರ್ಣ", "ಸಕಲ ಸ್ವಾತಂತ್ರ್ಯದಲಿ", "ಅರಮನೆಯಒಳಗೆ ಸರಿ ಭಾಗ", ಮತ್ತು "ತೊಂಡರಿಗೆ ತೊಂಡನಾಗಿ" ಎನ್ನುವುವು. ಇವುಗಳನ್ನು ಮುಂದೆ ನೋಡೋಣ. 

Sunday, December 8, 2024

ಬಿಂದು ಗಂಗೋದಕ

ನಾವು ಅರವತ್ತು-ಅರವತ್ತೈದು ವರುಷಗಳ ಹಿಂದೆ ಶಾಲೆಗಳಲ್ಲಿ ಓದುತ್ತಿದ್ದಾಗ ಕೆಲವು ಕವನಗಳನ್ನೂ ಮತ್ತು ಗದ್ಯಕಾವ್ಯ ಅಥವಾ ಚಂಪೂ ಕಾವ್ಯಗಳ ಭಾಗಗಳನ್ನು ಕನ್ನಡ ಪಠ್ಯ ಪುಸ್ತಕಗಳಲ್ಲಿ ಸೇರಿಸಿರುತ್ತಿದ್ದರು. ಪಠ್ಯ ಪುಸ್ತಕಗಳಲ್ಲಿ ಈ ಭಾಗದ ನಂತರ "ಕವಿ-ಕಾವ್ಯ ವಿಚಾರ" ಎನ್ನುವ ಶೀರ್ಷಿಕೆಯಡಿ ಕೆಲವು ಸಾಲು ಕವಿಯ ಮತ್ತು ಆ ಕಾವ್ಯದ ಹಿನ್ನೆಲೆಯ ಬಗ್ಗೆ ಕೊಟ್ಟಿರುತ್ತಿದ್ದರು. ಯಾವುದೇ ಸಾಹಿತ್ಯದ ಭಾಗ ಅರ್ಥವಾಗಬೇಕಿದ್ದರೆ ಆ ಕೃತಿಯ ಕರ್ತೃ (ಕೃತಿ ರಚನೆ ಮಾಡಿವರು), ಅವರ ಕಾಲ (ಜೀವಿಸಿದ್ದ ಸಮಯ) ಮತ್ತು ದೇಶ (ಬದುಕಿದ್ದ ಪರಿಸರ) ಇವುಗಳ ಬಗ್ಗೆ ಸ್ವಲ್ಪವಾದರೂ ತಿಳುವಳಿಕೆ ಇರಬೇಕು. ಇಲ್ಲದೆ ಹೋದರೆ ಆ ಕೃತಿಯ ಪೂರ್ಣ ಪರಿಚಯ ಆಗುವುದಿಲ್ಲ. ನಾವು ಕೃತಿಗಳನ್ನು ಅವಲೋಕಿಸುವುದು ಇಂದಿನ ಕಾಲದಲ್ಲಿ. ನಾವು ಬದುಕುವುದು ನಮ್ಮ ಪರಿಸರದಲ್ಲಿ. ಓದುವ ಕೃತಿಯಾದರೋ ಎಂದೋ ರಚನೆಯಾದದ್ದಿರಬಹುದು. ಕೃತಿಯಲ್ಲಿ ಕವಿ ಅಂದು ಕಂಡ ಪರಿಸರ ಮತ್ತು ಸಮಾಜದ ಪ್ರತಿಬಿಂಬ ಕೊಟ್ಟಿರುತ್ತಾನೆ. ಕೊಂಚವಾದರೂ ಇವುಗಳ ಪರಿಚಯ ಇಲ್ಲದಿದ್ದರೆ ಅದನ್ನು ತಿಳಿಯುವುದು ಹೇಗೆ? ಈ ವಿಷಯದ ಬಗ್ಗೆ ಹೆಚ್ಚು ತಿಳಿಯಲು "ಕಾರಿಹೆಗ್ಗಡೆಯ ಮಗಳು" ಎನ್ನುವ ಸಂಚಿಕೆಯಲ್ಲಿ ಈ ವಿಷಯದ ಬಗ್ಗೆ ಕೊಟ್ಟಿರುವ ವಿವರಣೆಯನ್ನು ನೋಡಬಹುದು. ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಕಾಶಿ ನಮ್ಮ ದೇಶದ ಅತ್ಯಂತ ಪ್ರಮುಖ ಕ್ಷೇತ್ರಗಲ್ಲಿ ಒಂದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಪಟ್ಟಣಕ್ಕೆ ವಾರಾಣಸಿ ಮತ್ತು ಬನಾರಸ್ ಎಂದೂ ಹೆಸರುಂಟು. ಈ ಹೆಸರುಗಳು ಹೇಗೆ ಬಂದವು, ಅವುಗಳ ವಿಶೇಷಗಳು ಏನು ಎನ್ನುವುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ಈ ಕಾಶಿ ಕ್ಷೇತ್ರ ಸಂದರ್ಶಿಸಲು  ಹೋಗುವ ಶ್ರದ್ದಾಳು ಜನಗಳು ವಿಶ್ವನಾಥನ ದೇವಾಲಯವನ್ನು ನೋಡಿ ಹಿಂದಿರುಗುತ್ತಾರೆ. ಆದರೆ ಕಾಶಿ ಕ್ಷೇತ್ರಕ್ಕೆ ಮೂವರು ಮುಖ್ಯ ಅಧಿದೇವತೆಗಳಿದ್ದಾರೆ ಎಂದು ಹೇಳುತ್ತಾರೆ. ಅವರುಗಳು ವಿಶ್ವನಾಥ, ಕಾಲಭೈರವ ಮತ್ತು ಬಿಂದು ಮಾಧವ. ವಾರಾಣಸಿ ಅಥವಾ ಕಾಶಿ ನಗರ ಇರುವ ಪ್ರದೇಶದ ಗಂಗಾನದಿಯ ದಡವನ್ನು ಅನೇಕ ಘಟ್ಟಗಳೆಂದು (ಘಾಟ್ ಎಂದು ಪ್ರಸಿದ್ಧ) ವಿಂಗಡಿಸಿದ್ದಾರೆ. ಈ ಘಟ್ಟಗಳಿಗೆ ಆಯಾಯಾ ಹೆಸರುಗಳು ಬರಲು ಅನೇಕ ಕಾರಣಗಳಿವೆ. ಇದರಲ್ಲಿ ಮಣಿಕರ್ಣಿಕಾ ಘಾಟ್ ಬಹಳ ಪ್ರಸಿದ್ಧ. ಇಲ್ಲಿ ದಿನದ ಇಪ್ಪತ್ತನಾಲ್ಕು ಘಂಟೆಗಳೂ ಅನೇಕ ಚಿತೆಗಳು ಉರಿಯುತ್ತಿರುವುದನ್ನು ಕಾಣಬಹುದು. ಮೃತರ ದೇಹಗಳಿಗೆ ಇಲ್ಲಿ ಅಂತ್ಯ ಸಂಸ್ಕಾರ ಮಾಡಿದರೆ ಉನ್ನತ ಲೋಕಗಳು ಮೃತರಿಗೆ ಸಿಗುತ್ತವೆ ಎಂದು ಪ್ರಬಲವಾದ ನಂಬಿಕೆ. 

ಮಣಿಕರ್ಣಿಕಾ ಘಾಟ್ ಪ್ರದೇಶವನ್ನು ಮೊದಲು ಮಾಡಿಕೊಂಡು ಅಸ್ಸಿ ಘಾಟ್ ವರೆಗೆ (ಅಸ್ಸಿ ನದಿ ಗಂಗೆ ಸೇರುವ ಸ್ಥಳ) ಶಿವಕಾಶಿ ಎಂದೂ, ಮಣಿಕರ್ಣಿಕಾ ಘಾಟ್ ನಿಂದ ಆದಿಕೇಶವ ಘಾಟ್ ವರೆಗೆ ವಿಷ್ಣು ಕಾಶಿ ಎಂದೂ ಕರೆಯುತ್ತಾರೆ. ಈ ಘಟ್ಟಗಳಲ್ಲಿ ಪಂಚಗಂಗಾ ಘಟ್ಟವೂ ಒಂದು. ಇದರ ಬಳಿಯಲ್ಲಿ ಈಗ ಇರುವ ಸಣ್ಣ ದೇವಸ್ಥಾನವೊಂದು "ಬಿಂದುಮಾಧವ ದೇವಸ್ಥಾನ" ಎಂದು ಹೆಸರಾಗಿದೆ. ಅನೇಕ ಜನ ಶ್ರದ್ಧಾಳುಗಳು ಕಾಶಿಯಾತ್ರೆ ಈ ಬಿಂದು ಮಾಧವನ ದರ್ಶನವಿಲ್ಲದೆ ಪೂರ್ತಿಯಾಗದು ಎಂದು ನಂಬುತ್ತಾರೆ. 

*****

ಶ್ರೀ ಪುರಂದರದಾಸರು ವಿಜಯನಗರದ ಕರ್ನಾಟಕ ಸಾಮ್ರಾಜ್ಯ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದ ಕಾಲದಲ್ಲಿ ಜೀವಿಸಿದ್ದರು ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಶ್ರೀ ಕೃಷ್ಣದೇವರಾಯನ ರಾಜಗುರುಗಳಾಗಿದ್ದ ಶ್ರೀ ವ್ಯಾಸರಾಜರು, ಶ್ರೀ ಪುರಂದರದಾಸರು ಮತ್ತು ಶ್ರೀ ಕನಕದಾಸರು ಸಮಕಾಲೀನರು. ಅವರುಗಳ ವಯಸ್ಸಿನಲ್ಲಿ ಸ್ವಲ್ಪ ಅಂತರ ಇದ್ದರೂ ಅವರ ಜೀವಿತದ ಬಹಳ ಕಾಲ ಈ ಮೂವರೂ ವಿಜಯನಗರದಲ್ಲಿ ಬದುಕಿ ಬಾಳಿದವರು. ಶ್ರೀ ಪುರಂದರದಾಸರ ಕಾಲ ಸುಮಾರಾಗಿ 1485 ರಿಂದ 1564 ಎಂದು ನಂಬಲಾಗಿದೆ. 1564ರ ಪುಷ್ಯ ಬಹುಳ ಅಮಾವಾಸ್ಯೆಯಂದು ಅವರು ದೇಹತ್ಯಾಗ ಮಾಡಿದರೆಂದು ಈಗಲೂ ಪುಷ್ಯ ಬಹುಳ ಅಮಾವಾಸ್ಯೆಯಂದು ಅವರ ಆರಾಧನೆಯನ್ನು ನಡೆಸುತ್ತಾರೆ. ಪುರಂದರದಾಸರ ಕಾಲದಲ್ಲಿ ಅವರು ಅನೇಕ ಬಾರಿ ಕಾಶಿ ಕ್ಷೇತ್ರಕ್ಕೆ ಯಾತ್ರೆ ಮಾಡಿದ್ದರು. ಆಗಿನ ದಿನಗಳಲ್ಲಿ ಕಾಶಿ ವಿಶ್ವನಾಥ ಮತ್ತು ಕಾಶಿ ಬಿಂದುಮಾಧವ ಎನ್ನುವ ಎರಡು ವೈಭವೋಪೇತ ದೇವಸ್ಥಾನಗಳು ಇದ್ದವು. ಆದ್ದರಿಂದ ಅವರು ಈ ಎರಡು ದೇವಸ್ಥಾನಗಳನ್ನೂ ನೋಡಿ ದೇವರನಾಮಗಳನ್ನು ರಚಿಸಿದರು. ಇವುಗಳಲ್ಲಿ ಕೆಲವು ಸಿಕ್ಕಿವೆ ಮತ್ತು ಅನೇಕವು ಈಗ ಲಬ್ಧವಿಲ್ಲ. 

1669ರಲ್ಲಿ ಔರಂಗಝೇಬನ ಆಳ್ವಿಕೆಯಲ್ಲಿ ಈ ಸುಂದರವಾದ ಬಿಂದುಮಾಧವ ದೇವಸ್ಥಾನವನ್ನು ಒಡೆದು ಅದರ ಪಕ್ಕ ಮಸೀದಿ ನಿರ್ಮಿಸಿದರು. ದೇವಸ್ಥಾನ ಒಡೆಯುವ ಸುದ್ದಿ ಬಂದಾಗ ದೇವಾಲಯದ ಅರ್ಚಕರು ಮೂಲ ಬಿಂದುಮಾಧವ ಮೂರ್ತಿಯನ್ನು ಗಂಗಾನದಿಯ ನೀರಿನಲ್ಲಿ ಮುಳುಗಿಸಿಟ್ಟಿದ್ದರಂತೆ. ಕೆಲವು ವರುಷಗಳ ನಂತರ ಶಿವಾಜಿ ಮಹಾರಾಜರ ಆಡಳಿತ ಬಂದ ಸಂದರ್ಭದಲ್ಲಿ ಆ ಮೂಲ ವಿಗ್ರಹವನ್ನು ಹೊರತಂದು ಮತ್ತೆ ಪ್ರತಿಷ್ಠಾಪಿಸಿದರಂತೆ. ಇದೆಲ್ಲ ಅಂತೇ ಕಂತೆ ಪುರಾಣವಲ್ಲ. ಬಿಂದು ಮಾಧವ ದೇವಸ್ಥಾನದ ಸೊಗಸನ್ನು ಆ ಕಾಲದಲ್ಲಿ ನಮ್ಮ ದೇಶ ನೋಡಲು ಬಂದ ಹೊರ ದೇಶದ ಯಾತ್ರಿಕರು ತಮ್ಮ ಲೇಖನಗಲ್ಲಿ ಬರೆದಿಟ್ಟಿರುವ ದಾಖಲೆಗಳಿವೆ. ಇದೆ ರೀತಿ ಮಲ್ಲಿಕಾಫರ್ ಶ್ರೀರಂಗದ ದೇವಾಲಯವನ್ನು ಲೂಟಿ ಮಾಡಿದಾಗ ಅನೇಕರು ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದರಿಂದ ಇಂದು ನಾವು ಶ್ರೀರಂಗದ ದೇವಾಲಯ ನೋಡುತ್ತಿದ್ದೇವೆ, 

ಶ್ರೀ ಪುರಂದರದಾಸರು ಈ ಬಿಂದು ಮಾಧವನ ದರ್ಶನ ಮಾಡಿದ್ದರಿಂದ ತಮ್ಮ ಕೃತಿಗಳಲ್ಲಿ "ಬಿಂದು ಮಾಧವ" ಮೂರ್ತಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವನ ಸ್ಮರಣೆಯನ್ನು ತಮ್ಮ ಕೃತಿಗಳಲ್ಲಿ ಬಳಸಿದ್ದಾರೆ. ಅವರ ಹೆಚ್ಚು ಜನಪ್ರಿಯ ಕೃತಿಗಳಲ್ಲಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ, ತಾರೆ ಬಿಂದಿಗೆಯ" ಎನ್ನುವುದೂ ಒಂದು. ಈ ಕೃತಿಯಲ್ಲಿ "ಬಿಂದು ಮಾಧವನ ಘಟ್ಟಕೆ ಹೋಗುವೆ ತಾರೆ ಬಿಂದಿಗೆಯ" ಎನ್ನುವ ಸಾಲು ಇದೆ. ನಾನು ಮೊದಲು ಈ ಕೃತಿ ಕೇಳಿದ್ದು ಸುಮಾರು ಐದು ವರುಷಗಳವನಿದ್ದಾಗ, ನನ್ನ ತಾಯಿ ಹಾಡಿದ್ದು. ಬಿಂದು ಮಾಧವನ ಘಟ್ಟ ಎಂದರೆ ಏನು ಎಂದು ಕೇಳಿ ಸರಿಯಾಗಿ ಉತ್ತರ ಸಿಗದೇ ಮನಸ್ಸಿನಲ್ಲಿ ಕುಳಿತಿತ್ತು. ನಂತರ ಅದರ ಹಿಂದೆ ಹೋಗಿ ಸಂಗ್ರಹಿಸಿದ ವಿವರಗಳು ಈಗ ಈ ಸಂಚಿಕೆಯ ಮೂಲಕ ಹೊರಬಂದಿರುವುದು ಒಂದು ವಿಶೇಷವೇ ಸರಿ! 

*****

ನಮ್ಮ ದೇಶದಲ್ಲಿ ಮುಖ್ಯವಾಗಿ ಐದು ಮಾಧವನ ದೇವಸ್ಥಾನಗಳು ಇವೆ. ಅವು ಯಾವುವೆಂದರೆ:
  1. ಕಾಶಿಯ ಬಿಂದು ಮಾಧವ 
  2. ಪ್ರಯಾಗದ ವೇಣಿ ಮಾಧವ 
  3. ರಾಮೇಶ್ವರದ ಸೇತು ಮಾಧವ 
  4. ತಿರುವನಂತಪುರದ ಸುಂದರ ಮಾಧವ 
  5. ಪೀಠಾಪುರಂನ ಕುಂತೀ ಮಾಧವ 
ಮೊದಲ ಮೂರು ಹೆಸರು ಕೆಲವು ವರುಷಗಳ ಹಿಂದಿನವರೆಗೂ ಚಾಲ್ತಿಯಲ್ಲಿದ್ದವು. ಅನೇಕರು ತಮ್ಮ ಮಕ್ಕಳಿಗೆ ಬಿಂದುಮಾಧವ, ಸೇತುಮಾಧವ ಮತ್ತು ವೇಣಿಮಾಧವ ಎಂದು ಹೆಸರಿಡುತ್ತಿದ್ದರು. ನಾನು ಶಾಲೆಯಲ್ಲಿದ್ದ ಕಾಲದಲ್ಲಿ ಈ ಹೆಸರಿನ ಹುಡುಗರು ನಮ್ಮ ಶಾಲೆಗಲ್ಲಿ ಓದುತ್ತಿದ್ದರು. ಈಗ ನವೀನ ಹೆಸರುಗಳ ಭರಾಟೆಯಲ್ಲಿ ಇದೆಲ್ಲ ಮರೆತುಹೋಗಿದೆ. 

ಮೊದಲ ನಾಲ್ಕು ನಗರಗಳಾದ ಕಾಶಿ, ಪ್ರಯಾಗ (ಅಲಹಾಬಾದ್), ರಾಮೇಶ್ವರ ಮತ್ತು ತಿರುವನಂತಪುರ ಎಲ್ಲರಿಗೂ ಚಿರಪರಿಚಿತ. ಐದನೆಯದಾದ ಪೀಠಾಪುರಂ ಆಂಧ್ರ ರಾಜ್ಯದ ಕಾಕಿನಾಡದ ಬಳಿ ಇರುವ ಪಟ್ಟಣ. ದತ್ತಾತ್ರೇಯನ ಅವತಾರಯೆಂದು ನಂಬಿರುವ ಶ್ರೀಪಾದ ಶ್ರೀವಲ್ಲಭರು ಬಹಳ ದಿನ ಬದುಕಿ ಬಾಳಿದ ಸ್ಥಳ. ಕನ್ನಡದ ಹೆಮ್ಮೆಯ ಚಲನ ಚಿತ್ರ "ಶ್ರೀ ಕೃಷ್ಣದೇವರಾಯ" ದಲ್ಲಿ ಬಂದಿರುವ "ಬಾ ವೀರ ಕನ್ನಡಿಗ" ಮತ್ತು "ಬೆಳಗಲಿ ಬೆಳಗಲಿ ವಿಜಯನಗರ ಸಾಮ್ರಾಜ್ಯ ಬೆಳಗಲಿ" ಎನ್ನುವ ವೀರಗೀತೆಗಳನ್ನು ಹಾಡಿರುವ ನಾಗೇಶ್ವರ ರಾವ್ ಈ ಪೀಠಾಪುರಂನವರು. ಅವರು ಪೀಠಾಪುರಂ ನಾಗೇಶ್ವರ ರಾವ್ ಎಂದೇ ಪರಿಚಿತರು. 

*****

ಇಷ್ಟಕ್ಕೂ ಈ ಮಾಧವ ಯಾರು? ಕೇಶವ ಮತ್ತು ಮಾಧವ ಎನ್ನುವ ಪದಗಳನ್ನು ಜೊತೆಯಾಗಿ ಉಪಯೋಗಿಸುತ್ತಾರೆ. ಇದಕ್ಕೆ ಏನಾದರೂ ಸಂಬಂಧವಿದೆಯೇ? ಇವು ಸಹಜವಾದ ಪ್ರಶ್ನೆಗಳು. ಶ್ರೀ ಮಹಾವಿಷ್ಣುವಿನ 24 ಹೆಸರುಗಳು ಕೇಶವಾದಿ ಚತುರ್ವಿಂಶತಿ ನಾಮಗಳು ಎಂದು ಪ್ರಸಿದ್ಧವಾಗಿವೆ. ಶ್ರೀ ಕನಕದಾಸರ "ಈಶ ನಿನ್ನ ಪಾದ ಭಜನೆ ಆಸೆಯಿಂದ ಮಾಡುವೆನು..." ಎನ್ನುವ ಕೃತಿ ಕೇಶವನಾಮವೆಂದೇ ಪ್ರಸಿದ್ಧವಾಗಿದೆ. ಮಹಾವಿಷ್ಣುವಿನ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಪದ್ಮಗಳು ಹಿಡಿದಿದ್ದಾನೆ ಎಂದು ವರ್ಣಿತವಾಗಿವೆ. ಈ ನಾಲ್ಕು ವಸ್ತುಗಳನ್ನು ಬೇರೆ ಬೇರೆ ರೀತಿಯಲ್ಲಿ ಹಿಡಿದರೆ ಒಟ್ಟು 24 ರೂಪಗಳಾಗುತ್ತವೆ. ಶಂಖ. ಚಕ್ರ, ಗದ, ಪದ್ಮಗಳನ್ನು ಹಿಡಿರುವ ರೂಪ ಕೇಶವ ರೂಪ. ಬೇಲೂರು ಮುಂತಾದ ಚನ್ನಕೇಶವ ಮಂದಿರಗಳಲ್ಲಿ ಇವನ್ನು ಕಾಣಬಹುದು. ಚಕ್ರ, ಶಂಖ, ಪದ್ಮ, ಗದೆ ಹಿಡಿದಿರುವ ರೂಪವೇ ಮಾಧವ ರೂಪ. ಈ ಸಂಚಿಕೆಯ ಮೇಲೆ ಕೊಟ್ಟಿರುವ ಬಿಂದು ಮಾಧವ ವಿಗ್ರಹದಲ್ಲಿ  ಇದನ್ನು ಕಾಣಬಹುದು. ಈ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ  Keshava to Krishna ಎಂಬ ಸಂಚಿಕೆಗೆ  ಇಲ್ಲಿ ಕ್ಲಿಕ್ ಮಾಡಿ

ನೇಪಾಳ ದೇಶದ ಗಂಡಕಿ ನದಿ ಸಾಲಿಗ್ರಾಮ ಶಿಲೆಗಳಿಗೆ ಹೆಸರುವಾಸಿ. ಈಗಲೂ ಜನರು ಸಾಲಿಗ್ರಾಮಗಳನ್ನು ಪಡೆಯಲು ಅಲ್ಲಿಗೆ ಹೋಗುತ್ತಾರೆ. ಆ ಪ್ರದೇಶದಲ್ಲಿ ಬಹಳ ಹಿಂದೆ ಅಗ್ನಿ ಬಿಂದು ಎನ್ನುವ ಋಷಿ ತಪಸ್ಸು ಮಾಡುತ್ತಿದ್ದನಂತೆ. ಅವನ ತಪಸ್ಸಿಗೆ ಮೆಚ್ಚಿ ಮಹಾವಿಷ್ಣುವು ಮಾಧವ ರೂಪದಲ್ಲಿ ಅವನಿಗೆ ದರ್ಶನ ಕೊಟ್ಟು ಕಾಶಿಯಲ್ಲಿ ಮಾಧವನ ಮಂದಿರವನ್ನು ನಿರ್ಮಾಣ ಮಾಡಿ ಅದಕ್ಕೆ "ಬಿಂದು ಮಾಧವ" ಎಂದು ಹೆಸರಿಡಬೇಕೆಂದು ನಿರ್ದೇಶಿಸಿದನಂತೆ. ಆದ ಕಾರಣ ಬಿಂದು ಮಾಧವನ ದೇವಾಲಯ ಬಂತು!

*****

ಈಗಾಗಲೇ ಈ ಸಂಚಿಕೆ ಬಹಳ ದೀರ್ಘವಾಯಿತು. ನಾವು ಹೊರಟಿದ್ದು "ಹೂವ ತರುವರ ಮನೆಗೆ ಹುಲ್ಲ ತರುವ" ಪದದ ವಿಶೇಷಾರ್ಥ ಮತ್ತು ಗುಹ್ಯರ್ಥ ಹುಡುಕಲು. ಅಲ್ಲಿ ಇರುವ ಅನೇಕ ಪದಗಳಲ್ಲಿ ನಾವು ಗಮನಿಸಿದ್ದು ಹತ್ತು ಪದ ಪುಂಜಗಳನ್ನು. ಅದರಲ್ಲಿ ಒಂದೇ ಇಷ್ಟು ದೀರ್ಘವಾಯಿತು. 

ಹೂವ ತರುವರ ಮನೆಗೆ ಎಂಬ ಕೃತಿಯಲ್ಲಿ ಶ್ರೀ ಪುರಂದರದಾಸರು "ಬಿಂದು ಗಂಗೋದಕ" ಎಂದು ಪ್ರಯೋಗಿಸಿದ್ದಾರೆ. ಬಿಂದು ಎನ್ನುವ ಪದಕ್ಕೆ ಕನ್ನಡ, ಸಂಸ್ಕೃತ ಮತ್ತನೇಕ ಭಾರತೀಯ ಭಾಷೆಗಳಲ್ಲಿ ಚುಕ್ಕೆ, ಸೊನ್ನೆ ಮತ್ತು ಒಂದು ನೀರಿನ ಹನಿ ಎನ್ನುವ ಅರ್ಥಗಳಿವೆ. ಸಾಮಾನ್ಯವಾಗಿ ಈ ಪದ ಹಾಡುವಾಗ ಅಥವಾ ಕೇಳುವಾಗ ಈ ಪದಕ್ಕೆ ಒಂದು ತೊಟ್ಟು ನೀರು ಎಂದು ಅರ್ಥ ಮಾಡುತ್ತೇವೆ. ಪುರಂದರದಾಸರು ಉಪಯೋಗಿಸುವ ವಿಶೇಷಾರ್ಥ ಅಥವಾ ಇದರಲ್ಲಿ ಹುದುಗಿರುವ ಗುಹ್ಯಾರ್ಥ ಕೇವಲ ಒಂದು ತೊಟ್ಟು ನೀರಲ್ಲ. ಕಾಶಿ ಯಾತ್ರೆಯಲ್ಲಿ ಬಿಂದು ಮಾಧವನ ದರ್ಶನ ಮಾಡಿ, ಬಿಂದು ಮಾಧವನ ಘಟ್ಟಕ್ಕೆ ಹೋಗಿ ಪ್ರಯಾಸದಿಂದ ತಂದ  ಗಂಗೋದಕ. ಯಾವುದೋ ಒಂದು ತೊಟ್ಟು ನೀರಲ್ಲ!

ಎಲ್ಲರಿಗೂ ಕಾಶಿಯಾತ್ರೆ ಮಾಡಿ ಬಿಂದು ಮಾಧವನ ಘಟ್ಟದ ಗಂಗೋದಕ ತರಲು ಆಗುವುದಿಲ್ಲ. ಹಾಗಾದರೆ ಏನು ಮಾಡಬೇಕು? ಅದಕ್ಕೊಂದು ಸುಲಭೋಪಾಯವಿದೆ. ನೀರನ್ನು ಅರ್ಪಿಸುವಾಗ ಒಂದೇ ಮನಸ್ಸಿನಿಂದ "ನಾನು ತಂದಿರುವ ಈ ನೀರನ್ನೇ ನೀನು ಕೃಪೆಮಾಡಿ ಬಿಂದು ಮಾಧವನ ಘಟ್ಟದ ಗಂಗೋದಕ ಎಂದು ಸ್ವೀಕರಿಸು" ಎಂದು ಕೇಳಿಕೊಂಡರೆ ಆ ಮಹಾಮಹಿಮ ಹಾಗೆಯೇ ಸ್ವೀಕರಿಸುತ್ತಾನಂತೆ. ಅದರಲ್ಲಿ ನಮಗೆ ಅಲ್ಲಾಡದ ವಿಶ್ವಾಸ ಬೇಕು. ಗಟ್ಟಿ ನಂಬಿಕೆ ಬಕು. "ಗಂಗೇಚ ಯಮುನೇಚೈವ" ಎಂಬ ಮಂತ್ರ ಹೇಳುವಾಗ ಇದು ನಿಜವಾಗಿ ಆಗುತ್ತದೆ, ಕೇವಲ ಶಬ್ದಗಳಲ್ಲ ಎನ್ನುವ ಧೃಡ ಭರವಸೆ, ಶ್ರದ್ಧೆಗಳು ಬೇಕು. 

*****

ಒಂದು ಶಬ್ದದ ಗೂಡಾರ್ಥಕ್ಕೇ ಇಷ್ಟಾಯಿತು. ಮಿಕ್ಕವುಗಳ ವಿಶೇಷತೆಯನ್ನು ಮುಂದೆ ಆದಾಗ ಆದಾಗ ನೋಡೋಣ! 

Saturday, December 7, 2024

ಬಾಹ್ಯಾರ್ಥ - ಅಂತರಾರ್ಥ - ಗೂಡಾರ್ಥ


ಒಂದು ಕೃತಿಯನ್ನು ಓದಿದಾಗ, ಅದು ಸಾಹಿತ್ಯ ಕೃತಿ ಇರಬಹುದು, ವೈದಿಕ ಗ್ರಂಥವಿರಬಹುದು, ಅಥವಾ ಒಂದು ಸಾಮಾನ್ಯ ಪತ್ರವೇ ಇರಬಹುದು, ಓದುಗನಿಗೆ ಅದರ ಅರ್ಥ ಹೊಳೆಯುವುದು ಆ ಕೃತಿಯಲ್ಲಿರುವ ಪದಪುಂಜಗಳ ಜೊತೆಗೆ ಅವನ ವೈಯುಕ್ತಿಕ ಸಿದ್ಧತೆ, ಸಾಧನೆಗಳನ್ನೂ ಅವಲಂಬಿಸುತ್ತದೆ. ಒಂದು ಉದಾಹರಣೆ ತೆಗೆದುಕೊಳ್ಳಬಹುದು. ಆದಿಕವಿ ವಾಲ್ಮೀಕಿಗಳ ರಾಮಾಯಣವನ್ನೇ ತೆಗೆದುಕೊಳ್ಳೋಣ. ಒಂದು ಶಾಲೆಯಲ್ಲಿ ಕಲಿಯುವ ಕಿರಿಯ ವಿದ್ಯಾರ್ಥಿಯು ಆ ರಾಮಾಯಣವನ್ನು ಓದುತ್ತಾನೆ. ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯಲು ಅಭ್ಯಸಿಸುವ ಯುವಕ ಹಿರಿಯ ವಿದ್ಯಾರ್ಥಿಯೂ ಅದನ್ನೇ ಓದುತ್ತಾನೆ. ಅದೇ ವಿಶ್ವವಿದ್ಯಾಲಯದಲ್ಲಿ ಅಂತಹ ಅನೇಕ ಯುವಕರಿಗೆ ಕೆಲ ವರ್ಷಗಳು ಪಾಠ  ಹೇಳಿದ ಪ್ರಾಧ್ಯಾಪಕನೂ ಅದೇ ಕೃತಿಯನ್ನು ಓದುತ್ತಾನೆ. ಜಗತ್ತಿನ ಅನೇಕ ಭಾಷೆಗಳ ಜ್ಞಾನ ಸಂಪತ್ತನ್ನು ಓದಿ, ತಾನೇ ಸ್ವತಃ ಕೃತಿ ರಚನೆ ಮಾಡಿ, ಪ್ರವಚನಾದಿಗಳನ್ನು ಮಾಡುವ ಉದ್ದಾಮ ಪಂಡಿತನೂ ಓದುವುದು ಅದನ್ನೇ. ಈ ನಾಲ್ವರಿಗೂ ಆ ಕೃತಿಯಲ್ಲಿ ಕಂಡುಬರುವ ಸೊಗಸು, ಅರ್ಥ, ಸಂದೇಶ ಒಂದೇ ಆಗುತ್ತದೆಯೇ? ಹಾಗಿರುವುದಿಲ್ಲ. ಮೊದಲಿನವನಿಗೆ ಕಥೆ ಅರ್ಥವಾದರೆ ದೊಡ್ಡದು. ಎರಡನೆಯವನಿಗೆ ಮತ್ತಷ್ಟು ಆಳವಾಗಿ ತಿಳಿಯುತ್ತದೆ. ಮೂರನೆಯವನು ತನ್ನ ಇತರ ಕೃತಿಗಳ ಅಧ್ಯಯನದ ಜ್ಞಾನದಿಂದ ಇನ್ನೂ ಆಳವಾದ, ವಿಶಾಲವಾದ ಅರ್ಥಗಳನ್ನು ಅದೇ ಕೃತಿಯಲ್ಲಿ ಕಾಣುತ್ತಾನೆ. ಕಡೆಯವನು ತನ್ನ ಅಪಾರ ಜ್ಞಾನದಿಂದ ಮತ್ತು ಅನೇಕ ಕೃತಿಗಳ ಓದುವಿಕೆಯಿಂದ ಬಂದಿರುವ ತಿಳುವಳಿಕೆಯಿಂದ ಒಂದು ರೀತಿಯ ತೌಲನಿಕ ಅಧ್ಯಯನದಿಂದ ವಿಮರ್ಶಾತ್ಮಕ ಕೃತಿಯನ್ನೇ ಬರೆಯಬಹುದು. ಇವೆಲ್ಲದರ ಜೊತೆಗೆ ಬಹಳ ಸತ್ವಯುತವಾದ ಗ್ರಂಥಗಳಲ್ಲಿ ಅಂತಹ ವ್ಯಕ್ತಿ ಪ್ರತಿ ಸಲ ಓದಿದಾಗ ಹೊಸ ಹೊಸ ಅರ್ಥಗಳನ್ನು ಕಾಣುತ್ತಾನೆ. ಇಂತಹ ಹೆಚ್ಚು ತಿಳಿದವರು ಕೆಲವರು ಒಂದು ಕಡೆ ಸೇರಿ ವಿಚಾರ ವಿಮರ್ಶೆ ಮಾಡಿದಾಗ ಅವರೆಂದೂ ತನಿಯಾಗಿ ಕಾಣದ ಹೊಳಹು ಸ್ಫುಟವಾಗಿ ಕಾಣುತ್ತದೆ!

ಒಬ್ಬ ಶಾಲಾ ಮಾಸ್ತರನಿದ್ದನಂತೆ. ಅವನಿಗೆ ಸರಿಯಾಗಿ ಇಂಗ್ಲಿಷ್ ಭಾಷೆ ಬರದು. ಎಲ್ಲಿಂದಲೋ ಒಂದು ಇಂಗ್ಲಿಷ್-ಕನ್ನಡ ನಿಘಂಟು ಸಂಪಾದಿಸಿದ್ದ. ಗೊತ್ತಿಲ್ಲದಿದ್ದ ಪದಗಳಿಗೆ ಅದರಲ್ಲಿ ಅರ್ಥ ಹುಡುಕಿಕೊಂಡು ತಿಳಿಯುವ ಪ್ರಯತ್ನ ಮಾಡುತ್ತಿದ್ದ. ಆಗ ತಾನೇ ಬ್ರಿಟಿಷರ ಆಡಳಿತದಿಂದ ಸ್ವಾತಂತ್ರ್ಯ ಸಿಕ್ಕ ಸಮಯ. ಮೇಲಧಿಕಾರಿಗಳಿಂದ ಬರುವ ಪತ್ರಗಳು ಇಂಗ್ಲೀಷಿನಲ್ಲಿರುತ್ತಿದ್ದವು. ಒಮ್ಮೆ ಅವನು ಶಾಲೆಯನ್ನು ಸರಿಯಾಗಿ ನಡೆಸುತ್ತಿಲ್ಲ ಎಂಬುದಾಗಿ ಊರಿನ ಮುಖಂಡರು ಮೇಲಧಿಕಾರಿಗಳಿಗೆ ದೂರು ಕೊಟ್ಟರಂತೆ. ಮೇಲಧಿಕಾರಿಗಳು ಶಾಲೆಯನ್ನು ಸರಿಯಾಗಿ ನಡೆಸುವಂತೆಯೂ, ಈ ರೀತಿ ದೂರು ಬರಲು ಅವಕಾಶ ಕೊಡದಂತೆಯೂ ಸಲಹೆ ನೀಡಿ ಪತ್ರ ಕಳಿಸಿದರು. ಪತ್ರದ ಕಡೆಯ ಸಾಲಿನಲ್ಲಿ "Don't give room for such complaints" ಎಂದು ಎಚ್ಚರಿಕೆ ಇತ್ತು. ಮಾಸ್ತರನಿಗೆ ಈ ವಾಕ್ಯ ಸರಿಯಾಗಿ ಅರ್ಥ ಆಗಲಿಲ್ಲ. ನಿಘಂಟು ತೆಗೆದು room ಪದಕ್ಕೆ ಅರ್ಥ ನೋಡಿದ. ಆ ಪದಕ್ಕೆ ಕೋಣೆ ಎಂದು ಅರ್ಥ ಇತ್ತು. "ನಮ್ಮ ಶಾಲೆಯ ಕಟ್ಟಡದಲ್ಲಿ ಕೇವಲ ಮೂರು ಕೋಣೆಗಳು ಮಾತ್ರ ಇವೆ. ಎರಡರಲ್ಲಿ ತರಗತಿಗಳನ್ನು ನಡೆಸುತ್ತೇವೆ. ಮೂರನೆಯದು ಶಾಲೆಯ ಕಚೇರಿಯಾಗಿದೆ. "ನಾವು ಯಾರಿಗೂ room ಕೊಟ್ಟಿಲ್ಲ; ಕೊಡುವುದೂ ಇಲ್ಲ" ಎಂದು ಉತ್ತರ ಬರೆದ. ಅನೇಕ ವೇಳೆ ಈ ರೀತಿ ಪದಕ್ಕೆ ಪದ ಸೇರಿಸಿ ಅರ್ಥ ಮಾಡಿಕೊಂಡು ಫಜೀತಿ ಆಗುವುದೂ ಉಂಟು. 

*****

ಒಂದು ಸರೋವರ ಎಲ್ಲರ ಮುಂದಿದೆ. ಅದರಲ್ಲಿರುವ ಜಲರಾಶಿ ಅದನ್ನು ನೋಡಿದ ಎಲ್ಲರಿಗೂ ಕಾಣುತ್ತದೆ. ಹೊರಗಡೆಯಿಂದ ನೋಡಿದಾಗ ಸಿಗುವುದು ಇಷ್ಟೇ. ಈಜು ಬರುವ, ಮುಳುಗು ಹಾಕುವ ವ್ಯಕ್ತಿಗೆ ಆ ಸರೋವರದ ನೀರಿನ ಪರಿಚಯ ಆಗುತ್ತದೆ. ನೀರಿನ ಉಷ್ಣತೆ, ಸುಮಾರು ಆಳ ಮತ್ತು ಇತರ ಭೌತಿಕ ಗುಣಗಳು, ಹೆಚ್ಚು ವಿವರಗಳು ಗೊತ್ತಾಗುತ್ತವೆ. ನುರಿತ ಈಜುಗಾರನು ಮತ್ತು ಬಹಳ ಹೊತ್ತು ಸರೋವರದ ನೀರಿನಲ್ಲಿ ಮುಳುಗಿ ವಿಹರಿಸಬಲ್ಲ ವ್ಯಕ್ತಿಗೆ ಅದರಲ್ಲಿರುವ ಅನೇಕ ವಸ್ತುಗಳು, ವರ್ಣಗಳು, ಅವುಗಳ ಸೊಗಸೂ ತಿಳಿಯುತ್ತದೆ. ಸರೋವರ ಒಂದೇ. ಆದರೆ ಏಕೆ ಈ ರೀತಿಯ ವ್ಯತ್ಯಾಸ? ಇವಕ್ಕೆ ಮೂಲ ಕಾರಣ ಅವರ ಸಿದ್ಧತೆ, ಯೋಗ್ಯತೆ ಮತ್ತು ಅವರವರ ಜ್ಞಾನದಾಹದ ನಿರೀಕ್ಷೆ. 

ಬಹುಶ್ರುತ ವಿದ್ವಾಂಸರು ಪ್ರತಿ ಕೃತಿಯಲ್ಲೂ, ಅದರ ಪದರ ಪದರಗಳಲ್ಲೂ ಮೂರು ರೀತಿಯ ಅರ್ಥಗಳು ಇವೆ ಎಂದು ಹೇಳುತ್ತಾರೆ. ಮೊದಲನೆಯದು ಎಲ್ಲರಿಗೂ ಕಾಣುವ ಮೇಲ್ನೋಟದ ಅರ್ಥ. ಇದರಲ್ಲಿ ಓದುಗನಿಗೆ ಇರುವುದು ಸಾಮಾನ್ಯ ಭಾಷಾ ಜ್ಞಾನ. ಇದನ್ನು ಬಾಹ್ಯಾರ್ಥ (ಹೊರಗಡೆಯ ಅರ್ಥ) ಎನ್ನುತ್ತಾರೆ. ಹೆಚ್ಚಿನ ಸಿದ್ಧತೆ, ಸಾಧನೆಗಳನ್ನು ಮಾಡಿರುವ ಓದುಗನಿಗೆ ಇನ್ನೂ ಹೆಚ್ಚಿನ ಅರ್ಥಗಳು ಕಾಣುತ್ತವೆ. ಇದನ್ನು ಅಂತರಾರ್ಥ (ಒಳಗಡೆಯ ಅರ್ಥ) ಎನ್ನುತ್ತಾರೆ. ಬಹಳ ಸಿದ್ಧತೆಗಳಿಂದ ಮತ್ತು ಜ್ಞಾನದಾಹದಿಂದ ಕೃತಿಯನ್ನು ಅಭ್ಯಸಿಸುವ ವ್ಯಕ್ತಿಗೆ ಆಗುವ ಅರ್ಥಗಳೇ ಬೇರೆ. ಇಂತಹ ಓದುಗ ಕೃತಿಯ ಸತ್ವವನ್ನು ತಿಳಿದು ಅದರ ಪದರಗಳನ್ನು ಮತ್ತೆ ಮತ್ತೆ ವೀಕ್ಷಿಸುತ್ತಾನೆ. ತನಗಿಂತ ಹೆಚ್ಚು ತಿಳಿದವರ ಜೊತೆ ಜಿಜ್ಞಾಸೆ ಮಾಡುತ್ತಾನೆ. ಹೆಚ್ಚು ಹೆಚ್ಚಿನ ತಿಳುವಳಿಕೆಗೆ ಹಾತೊರೆಯುತ್ತಾನೆ. ಇಂತಹ ವಿಷಯ ಸಂಪಾದನೆಗೆ ದುಡಿಯುತ್ತಾನೆ. ಅವನಿಗೆ ಕೃತಿಯ ಗುಹ್ಯಾರ್ಥ (ಒಳಗಿನ ವಿಶೇಷವಾದ ಅರ್ಥ) ತೆರೆದುಕೊಳ್ಳುತ್ತದೆ. 

ಎಲ್ಲ ಕೃತಿಗಳಲ್ಲೂ ಈ ರೀತಿಯ ಮೂರೂ ಅರ್ಥಗಳೂ ಇರಲೇಬೇಕು ಎಂಬ ನಿಯಮವೇನೂ ಇಲ್ಲ. ಕೆಲವು ಕೇವಲ ಮೊದಲನೆಯ ಅರ್ಥದಲ್ಲಿಯೇ ಮುಗಿಯಬಹುದು. ಅವು ರಸವೇ ಇಲ್ಲದ ಕಬ್ಬಿನ ಜಲ್ಲೆಯಂತೆ. ಮತ್ತೆ ಕೆಲವು ಸ್ವಲ್ಪ ರಸ ಸೇರಿರುವ, ಆದರೆ ಇನ್ನೂ ಪೂರ್ಣವಾಗಿ ರಸ ತುಂಬದ ಕಬ್ಬಿನ ಜಲ್ಲೆಯಂತೆ. ತಿನ್ನುವನ ಅಥವಾ ಹೀರುವವನ ನಾಲಿಗೆಗೆ ಅಷ್ಟೋ ಇಷ್ಟೋ ಸಿಹಿ ಸಿಗುತ್ತದೆ. ತುಂಬಾ ರಸ ತುಂಬಿದ ರಸದಾಳೆ ಕಬ್ಬನ ಜಲ್ಲೆಯಲ್ಲಿ ಹೀರಿದಷ್ಟೂ ಸ್ವಾದ ಸಿಗುತ್ತದೆ. ಕೃತಿಯಲ್ಲಿ ಅಂತರಾರ್ಥ, ಗುಹ್ಯಾರ್ಥಗಳು ತುಂಬಿರುವಾಗ ಈ ರೀತಿಯ ರಸದಾಳೆ ಕಬ್ಬಿನ ನಿಜವಾದ ರುಚಿ ಹತ್ತುತ್ತದೆ. ಅಂತಹ ಕಬ್ಬಿನಲ್ಲಿ ಬೆಲ್ಲವೋ, ಸಕ್ಕರೆಯೋ ಮಾಡಿಟ್ಟುಕೊಂಡರೆ ಬಹಳ ಕಾಲ ಕೃತಿಯ ಆನಂದ ಅನುಭವಿಸಬಹುದು! ಇಂತಹ ಬೆಲ್ಲ, ಸಕ್ಕರೆ ಮಾಡಬಹುದಾದ ಕೃತಿಗಳು ತಮ್ಮ ಸತ್ವಗಳ ಪ್ರಭಾವದಿಂದ ಬಹಳ ಕಾಲ ನಿಲ್ಲುತ್ತವೆ. ಸಾರ್ವಕಾಲಿಕ ಶ್ರೇಷ್ಠ ಕೃತಿಗಳು ಎಂದು ಗುರುತಿಸಲ್ಪಡುತ್ತವೆ. ಶತಶತಮಾನಗಳ ಕಾಲ ಕಳೆದರೂ ಅವನ್ನು ಅಭ್ಯಸಿಸುಸುವ ಪರಂಪರೆ ನಿರ್ಮಾಣವಾಗುತ್ತದೆ. 

ಈ ರೀತಿ ಶ್ರೇಷ್ಠ ಕೃತಿಗಳನ್ನು ಅಭ್ಯಸಿಸಿ ಬೆಲ್ಲವನ್ನೋ ಸಕ್ಕರೆಯನ್ನೋ ನಮ್ಮ ಮನಸ್ಸಿನಲ್ಲಿ ಮಾಡಿಟ್ಟುಕೊಳ್ಳುತ್ತಿದ್ದರೆ ನಮ್ಮ ವೈಯುಕ್ತಿಕ ಭಂಡಾರ ಬೆಳೆಯುತ್ತ ಹೋಗುತ್ತದೆ. ಮತ್ತೆ ಎಂದೋ ಇನ್ನೊಂದು ಗಟ್ಟಿ ಕೃತಿ ಓದುವಾಗ ಮತ್ತು ಮೆಲಕು ಹಾಕುವಾಗ ಈ ಸಕ್ಕರೆ ಆ ಹೋಳಿಗೆಗೆ ಸೇರಿಸಿಕೊಂಡು ಮತ್ತೂ ಹೆಚ್ಚಿನ ರುಚಿ ಪಡೆಯಲು ನೆರವಾಗುತ್ತದೆ!

*****

"ಹೂವು - ಹುಲ್ಲು ಮತ್ತು ಶ್ರೀಕೃಷ್ಣ" ಎಂಬ ಶೀರ್ಷಿಕೆಯ ಹಿಂದಿನ ಸಂಚಿಕೆಯಲ್ಲಿ (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಶ್ರೀ ಪುರಂದರ ದಾಸರ "ಹೂವ ತರುವರ ಮನೆಗೆ ಹುಲ್ಲ ತರುವ" ಕೃತಿಯಲ್ಲಿರುವ ಅನೇಕ ವಿಶೇಷಾರ್ಥ ಮತ್ತು ಗೂಡಾರ್ಥಗಳನ್ನು ನೋಡುವ ಪ್ರಯತ್ನ ಮಾಡೋಣ ಎಂದಿದ್ದೆವು. ಮೇಲಿನ ಬಾಹ್ಯಾರ್ಥ, ಅಂತರಾರ್ಥ, ಗೂಡಾರ್ಥಗಳ ಹಿನ್ನೆಲಿಯಲ್ಲಿ ಈ ಕೃತಿಯಲ್ಲಿರುವ ಕೆಲವು ವಿಶೇಷ ಅರ್ಥಗಳುಳ್ಳ ಪದಗಳನ್ನು ಗಮನಿಸುವ ಪ್ರಯತ್ನವನ್ನು ಯಥಾಶಕ್ತಿ ಮಾಡೋಣ. 


ಒಂದು ದಳ ಶ್ರೀತುಳಸಿ, ಬಿಂದು ಗಂಗೋದಕ, ಒಂದೇ ಮನದಲಿ, ಇಂದಿರಾರಮಣ, ಮಂದಿರದ ಒಳಗೆ, ಪರಿಪರಿಯ ಪುಷ್ಪಗಳ, ಪರಿಪೂರ್ಣ, ಸಕಲ ಸ್ವಾತಂತ್ರ್ಯ, ಅರಮನೆಯ ಒಳಗೆ ಸರಿಭಾಗ, ತೊಂಡರಿಗೆ ತೊಂಡನಾಗಿ ಎನ್ನುವ ಪದಗಳಲ್ಲಿ ವಿಶೇಷ ಮತ್ತು ಗೂಡಾರ್ಥಗಳಿವೆ. 

ಮುಂದಿನ ಸಂಚಿಕೆಗಳಲ್ಲಿ ಇವನ್ನು ಒಂದೊಂದಾಗಿ ನೋಡುವ ಪ್ರಯತ್ನ ಮಾಡೋಣ. 

Thursday, December 5, 2024

ಹೂವು - ಹುಲ್ಲು ಮತ್ತು ಶ್ರೀಕೃಷ್ಣ


ಶ್ರೀಕೃಷ್ಣನ ಶಾಂತಿ ದೂತ ಪ್ರಯತ್ನ ದುರ್ಯೋಧನನ ಮೊಂಡುತನದ ಕಾರಣ ವಿಫಲವಾಗಿದೆ. "ಇಡೀ ಸಾಮ್ರಾಜ್ಯ ನನ್ನದು. ಪಾಂಡವರಿಗೆ ಕೊಡಲು ಏನೂ ಇಲ್ಲ. ಅವರು ಮತ್ತೆ ವನವಾಸ, ಅಜ್ಞಾತವಾಸಗಳಿಗೆ ಮಾತ್ರ ಅಧಿಕಾರಿಗಳು. ಅವರಿಗೆ ಸೂಜಿಮೊನೆಯ ಜಾಗವೂ ಇಲ್ಲ" ಎಂದು ಅವನು ಘೋಷಿಸಿ ಶ್ರೀಕೃಷ್ಣನನ್ನು ಬಂಧಿಸಲು ಆಗದ ಪ್ರಯತ್ನ ನಡೆಸಿಯೂ ಆಯಿತು. ಇನ್ನು ಉಳಿದದ್ದು ಒಂದೇ ದಾರಿ. ಅದು ಧರ್ಮಕ್ಷೇತ್ರ ಕುರುಕ್ಷೇತ್ರದ ಹಾದಿ. ಒಂದು ಕಡೆ ಹನ್ನೊಂದು ಅಕ್ಷೋಹಿಣಿ ಸೈನ್ಯ. ಮತ್ತೊಂದು ಕಡೆ ಏಳು ಅಕ್ಷೋಹಿಣಿ ಸೈನ್ಯ. ಎರಡು ಸೈನ್ಯಗಳ ಮಧ್ಯೆ ನಿಂತು ಅರ್ಜುನ ಗಾಡೀವ ಬಿಸಾಡಿ ಮಂಕನಾಗಿ ನಿಂತೂ ಆಯಿತು. ಗೀತೋಪದೇಶ ನಡೆದು ಮೊದಲ ದಿನದ ಯುದ್ಧ ಪ್ರಾರಂಭವಾಯಿತು. ಮೊದಲ ದಿನದ ಸಂಗ್ರಾಮದಲ್ಲಿ ಎರಡೂ ಕಡೆ ಅನೇಕ ಸಾವು-ನೋವು ಉಂಟಾಗಿ ಸೂರ್ಯಾಸ್ತದಲ್ಲಿ ಕಾಳಗ ನಿಂತಿದೆ. ಯುದ್ಧದಲ್ಲಿ ದಣಿದ, ಆದರೆ ಬದುಕುಳಿದ ವೀರ ಸೈನಿಕರೆಲ್ಲ ತಮ್ಮ ತಮ್ಮ ಬಿಡಾರಗಳ ಕಡೆ ಹೊರಟಿದ್ದಾರೆ. 

ಡೇರೆಗಳನ್ನು ತಲುಪಿದ ನಂತರ ಅವರೆಲ್ಲರ ಮೊದಲ ಕೆಲಸ ತಮ್ಮ ತಮ್ಮ ಶಸ್ತ್ರಗಳನ್ನು ಪಕ್ಕಕ್ಕಿಟ್ಟು, ಭಾರವಾದ ಪೋಷಾಕುಗಳನ್ನು ಕಳಚಿ, ಒಣಗಿದ ಬಾಯಿಗಳಿಗೆ ಸ್ವಲ್ಪ ನೀರು ಕುಡಿಸಿ, ಸಿಕ್ಕಿದ ಆಸನಗಳಿಗೆ ಕುಸಿಯುವುದು. ಈಗ ಸೈನ್ಯದ ಜೊತೆಯಲ್ಲಿ ಬಂದಿದ್ದ ವೈದ್ಯರು ಮತ್ತು ಅವರ ಸಹಾಯಕರಿಗೆ ದಣಿದು ಕುಳಿತ ಈ ವೀರರಿಗೆ ಆಗಿರುವ ಗಾಯಗಳ ರಕ್ತ ಒರೆಸಿ, ಮುಲಾಮು ಹಚ್ಚಿ, ಪಟ್ಟಿ ಕಟ್ಟುವುದು. ಇದಾದ ನಂತರ ಎರಡನೆಯ ಕೆಲಸ ಸುಖೋಷ್ಣವಾದ ನೀರಿನಲ್ಲಿ ಸ್ನಾನಾದಿಗಳು. ಅದೂ ಆದ ಮೇಲೆ ಅವರವರ ಪದ್ಧತಿಯಂತೆ ಅಹ್ನಿಕಾದಿಗಳು. ಹಾಸಿಗೆ ಕಂಡರೆ ಸಾಕೆನಿಸಿದ ವಿಪರೀತ ದಣಿದ ದೇಹಗಳು. ಆದರೆ ಪವಡಿಸುವ ಮುಂಚೆ ಹೊಟ್ಟೆಗೆ ಆಹಾರ ಬೇಕಲ್ಲ. ಸೇನೆಯ ಕ್ರಮಕ್ಕೆ ತಕ್ಕಂತೆ ಆರೋಗಣೆಗೆ ವ್ಯವಸ್ಥೆಗಳು ಆಗಿವೆ. ಬಾಣಸಿಗರು ಅಡುಗೆ ಸಿದ್ಧಪಡಿಸಿದ್ದಾರೆ. ಪರಿಚಾರಿಕರು ಬಡಿಸಲು ತಯಾರಿದ್ದಾರೆ. ಭೋಜನಕ್ಕೆ ಕುಳಿತಿದ್ದರೂ ಎಲ್ಲರ ಮನಸ್ಸು ಅಂದಿನ ಯುದ್ಧದ ಸೋಲು-ಗೆಲವು ಮತ್ತು ಸಾವು-ನೋವುಗಳ ಚಿಂತನೆಯಲ್ಲಿ ತೊಡಗಿವೆ. 

ಪಾಂಡವರ ಬಿಡಾರದಲ್ಲಿ ಐವರು ಅಣ್ಣ-ತಮ್ಮಂದಿರು ಸಾಲಾಗಿ ಊಟಕ್ಕೆ ಕುಳಿತಿದ್ದಾರೆ. ಆರು ಎಲೆಗಳಿಗೆ ಬಡಿಸಿ ಆಗಿದೆ. ಆದರೆ ನಾಲ್ವರು ಸಹೋದರರು ಮತ್ತು ಪಾರ್ಥ ಬಂದಿದ್ದರೂ ಊಟ ಮಾಡುವಹಾಗಿಲ್ಲ. ಆರನೆಯವನಾದ ಪಾರ್ಥಸಾರಥಿ ಏಕೋ ಇನ್ನೂ ಬಂದಿಲ್ಲ. ಕೇಶವನಿಲ್ಲದೆ ಭೋಜನವೆಲ್ಲಿ? ಮಾಧವನನ್ನು ಕರೆತರಲು ದೂತರನ್ನು ಕಳಿಸಿದ್ದಾಯಿತು. ಅವನೇನು ಮಾಡುತ್ತಿದ್ದಾನೆ? ಏಕೆ ತಡವಾಯಿತು? ಅವನು ಎಂದೂ ಸಮಯ ಮೀರುವವನಲ್ಲವಲ್ಲ!

****

ಪಾಂಡವರ ಬಿಡಾರ ತಲುಪಿದ ನಂತರ ಪಾರ್ಥಸಾರಥಿ ಅರ್ಜುನನ ಡೇರೆಯ ಮುಂದೆ ರಥ ನಿಲ್ಲಿಸಿ, ಕ್ರಮದಂತೆ ರಥದಿಂದ ಕೆಳಗಡೆ ಇಳಿದು, ಬಲಗೈ ನೀಡಿ ಪಾರ್ಥನನ್ನು ಕೆಳಗಿಳಿಯಲು ಸಹಾಯ ಮಾಡಿದ್ದಾನೆ. ಪಾರ್ಥ ತನ್ನ ಬಿಡಾರದ ಒಳಗೆ ಹೊರಟ ನಂತರ ತಾನು ಮತ್ತೆ ರಥವೇರಿ ಕುದುರೆಗಳ ಲಾಯದ ಬಳಿ ಬಂದಿದ್ದಾನೆ. ರಥ ನಿಲ್ಲಿಸಿ, ನಾಲ್ಕು ಕುದುರೆಗಳನ್ನು ಅವುಗಳ ಬಂಧನದಿಂದ ಬಿಡುಗಡೆ ಮಾಡಿ, ಲಾಯದ ಒಳಗಡೆ ತಂದಿದ್ದಾನೆ. ಅವುಗಳ ನಿಗದಿತ ಸ್ಥಾನದಲ್ಲಿ ಕಟ್ಟಿ ಒಂದೊಂದಾಗಿ ಅವುಗಳ ಸಣ್ಣ ಗಾಯಗಳಿಗೆ ಮುಲಾಮು ಹಚ್ಚಿ ಮೈದಡವಿದ್ದಾನೆ. ಶ್ರೀಕೃಷ್ಣನ ಚಾಕಚಕ್ಯತೆ ಮತ್ತು ಪಾರ್ಥನ ಗಾಂಡೀವದ ಕಾರಣ ಹೆಚ್ಚು ಗಾಯಗಳಾಗಿಲ್ಲ. ಆದರೂ ಭೀಷ್ಮ, ದ್ರೋಣ, ಅಶ್ವತ್ಥಾಮ ಮತ್ತಿತರ ಕೌರವ ವೀರರ ಸೈನ್ಯ ಸಾಮಾನ್ಯವೇ? "ದಂಡಿನಲ್ಲಿ ಸೋದರಮಾವನೇ?" ಎಂದು ಗಾದೆಯೇ ಇದೆಯಲ್ಲ! ಸಣ್ಣ-ಪಣ್ಣ ಆದರೂ ಗಾಯಗಳು ಗಾಯಗಳು ತಾನೇ? ಕುದುರೆಗಳ ಮುಂದೆ ನೀರಿನ ವ್ಯವಸ್ಥೆ ಮಾಡಿದ್ದಾನೆ. ನೀರು ತಂದು ಅವುಗಳ ಮೈ ತೊಳೆದಿದ್ದಾನೆ. ಅವನನ್ನು ಹುಡುಕಿಕೊಂಡು ಬಂದ ಪಾಂಡವರ ದೂತರು ಅವನ ಕೆಲಸದ ಮಧ್ಯೆ ಮಾತನಾಡಲು ಧೈರ್ಯವಿಲ್ಲದೆ ಸ್ವಲ್ಪ ದೂರದಲ್ಲಿ ಭಯ-ಭಕ್ತಿಯಿಂದ ನಿಂತಿದ್ದಾರೆ. ಮುಂದೇನು?


ಇದೇನು? ಅಷ್ಟೊಂದು ಮಂದಿ ಆಳು-ಕಾಳುಗಳಿದ್ದರೂ ಕೇಶವನು ತಾನೇ ಹುಲ್ಲು ಹೊತ್ತು ತರುತ್ತಿದ್ದಾನೆ! ಎಲ್ಲ ಕುದುರೆಗಳ ಮುಂದೆ ಅಷ್ಟಷ್ಟು ಹಾಕುತ್ತಿದ್ದಾನೆ. ಅವುಗಳು ಹುಲ್ಲು ತಿನ್ನುವಾಗ ಸರದಿಯಂತೆ ಅವುಗಳ ಮೈದಡವುತ್ತಿದ್ದಾನೆ. ಆ ಕುದುರೆಗಳಾದರೋ ಶ್ರೀಕೃಷ್ಣನ ಕೈ ನೆಕ್ಕಿ ತಮ್ಮ ಪ್ರೀತಿ ತೋರಿಸುತ್ತಿವೆ. ಆ ಎಲ್ಲ ಕುದುರೆಗಳು ಸ್ವಲ್ಪ ಹುಲ್ಲು ತಿಂದು, ನೀರು ಕುಡಿದ ನಂತರ ತೃಪ್ತಿಯಿಂದ ಪಾಂಡವರ ಡೇರೆಯ ಕಡೆ ಹೊರಟಿದ್ದಾನೆ. ನೋಡುತ್ತಿದ್ದ ದೂತರು ಮುಂದೆ ಹೋಗಿ ಧರ್ಮರಾಯನಿಗೆ ಎಲ್ಲಾ ವಿಷಯ ತಿಳಿಸಿದ್ದಾರೆ. 

ಡೇರೆಯ ಒಳಗೆ ಬಂದ ಶ್ರೀಕೃಷ್ಣ ಈಗ ತನ್ನ ಸ್ನಾನ-ಆಹ್ನಿಕಗಳನ್ನು ಮುಗಿಸಿ ಭೋಜನಕ್ಕೆ ಒಳಗೆ ಬಂದ. ಶ್ರೀಕೃಷ್ಣನಿಗೆ ಐವರು ಸಹೋದರರು ಎದ್ದು ಗೌರವ ಸೂಚಿಸಿ ಅವನ ಜೊತೆ ಊಟಕ್ಕೆ ಕೂಡುತ್ತಾರೆ. ಯುಧಿಷ್ಠಿರ ಹೇಳುತ್ತಾನೆ:

"ಕುದುರೆಗಳ ಯೋಗಕ್ಷೇಮಕ್ಕೆ ಲಾಯದಲ್ಲಿ ಸೇವಕರಿದ್ದರಲ್ಲ, ಕೃಷ್ಣ. ಅವರು ಮುಂದಿನ ಕೆಲಸ ನೋಡುತ್ತಿದ್ದರು. ಕುದುರೆಗಳಿಗೆ ಹುಲ್ಲು-ಹುರಳಿ-ನೀರು ಕೊಡುವುದು ಅವರ ಕೆಲಸ. ಗಾಯಗಳಿಗೆ ಶುಶ್ರೂಷೆ ಮಾಡಲು ಪಶುವೈದ್ಯರಿದ್ದಾರೆ. ನೀನೇಕೆ ಅದೆಲ್ಲಾ ಮಾಡಿದೆ? ಇಲ್ಲಿ ಬಂದು ನಮ್ಮ ಜೊತೆ ಭೋಜನ ಮಾಡಬಾರದೇ?"

ತನ್ನ ಎಂದಿನ ಮುಗುಳ್ನಗೆಯ ಮಾತಿನಿಂದ ಶ್ರೀಕೃಷ್ಣ ಹೇಳುತ್ತಾನೆ:

"ಬೆಳಗ್ಗಿನಿಂದ ಇಲ್ಲಿವರೆಗೆ ಯುದ್ಧದಲ್ಲಿ ನಮಗೆ ಸಹಾಯ ಮಾಡಲು ಕುದುರುಗಳು ಬೇಕು. ಈಗ ಕುದುರೆಗಳ ಕ್ಷೇಮ ನೋಡಲು ನಮಗೆ ಐದು ನಿಮಿಷ ಪುರಸೊತ್ತಿಲ್ಲವೆಂದರೆ ಹೇಗೆ? ಇದು ಸಾರಥಿಯ ಕರ್ತವ್ಯ. ಕುದುರೆಗಳು ಮೂಕ ಪ್ರಾಣಿಗಳಾದರೂ ಅವಕ್ಕೆ ಎಲ್ಲ ಅರ್ಥವಾಗುತ್ತದೆ. ಸಾರಥಿಯ ಜೊತೆ ಕುದುರೆಗಳ ಬಾಂಧವ್ಯ ಚಕ್ರವತಿಯಾದ ನಿನಗೆ ಗೊತ್ತಾಗುವುಲ್ಲ. ಆಳುಗಳನ್ನು ನಂಬಿ ನನ್ನ ಕರ್ತವ್ಯ ನಾನು ಬಿಡಲಾರೆ. ನಾಳಿನಿಂದ ನೀವು ನನಗೆ ಕಾಯಬೇಡಿ. ನಾನು ಬರುವುದು ತಡವಾಗುತ್ತದೆ. ನಿಮ್ಮ ಪಾಡಿಗೆ ನೀವು ಭೋಜನ ಮುಗಿಸಿ. ನನ್ನ ಸಮಯದಲ್ಲಿ ನಾನು ಬಂದು ಭೋಜನ ಮಾಡುತ್ತೇನೆ. ಚಿಂತೆ ಬೇಡ. "

ಶ್ರೀಕೃಷ್ಣನ ಕಾರ್ಯನಿಷ್ಠೆಗೆ ತಲೆದೂಗುತ್ತಾ ಧರ್ಮಜ ಹೇಳುತ್ತಾನೆ:

"ಶ್ರೀಕೃಷ್ಣನಿಲ್ಲದೆ ಪಾಂಡವರು ಊಟ ಮಾಡುವುದು ಹೇಗೆ? ಅದು ಸಾಧ್ಯವೇಇಲ್ಲ. ನಾಳಿನಿಂದ ನೀನು ಬರುವವರೆಗೆ ನಾವೂ ಬಿಡಾರ ಸುತ್ತಿ ಸೈನಿಕರ ಯೋಗಕ್ಷೇಮ ವಿಚಾರಿಸುತ್ತೇವೆ. ನಂತರ ಆರು ಜನವೂ ಒಟ್ಟಿಗೆ ಭೋಜನ ಮಾಡೋಣ."

ಈಗ ಎಲ್ಲರ ಊಟ ಪ್ರಾರಂಭವಾಗುತ್ತದೆ. 
*****

ಶ್ರೀಕೃಷ್ಣನಲ್ಲಿ ಪಾಂಡವರಿಗೆ, ಪಾಂಚಾಲಿಗೆ ಅಚಲವಾದ ಶ್ರದ್ದೆ-ಭಕ್ತಿ. ಶ್ರೀಕೃಷ್ಣನಿಗೆ ಪಾಂಡವ-ದ್ರೌಪದಿಯರಲ್ಲಿ ಎಲ್ಲಿಲ್ಲದ ಪ್ರೀತಿ-ಗೌರವ. ಪಾಂಡವರು ಶ್ರೀಕೃಷ್ಣನನ್ನು ಅವನು ಬಂದಾಗಲೆಲ್ಲ ಹೂವುಗಳಿಂದ ಸ್ವಾಗತಿಸಿದರು. ಅರಣ್ಯವಾಸದಲ್ಲಿದ್ದಾಗ ಅವನಿಗಾಗಿ ಕಾಡೆಲ್ಲಾ ಹುಡುಕಿ ಸೊಗಸಾದ ಹೂವುಗಳನ್ನು ತಂದರು. ಈಗ ಸಮಯ ಬಂದಾಗ ಶ್ರೀಕೃಷ್ಣನು ಅವರ ಕುದುರೆಗಳಿಗೆ ಹುಲ್ಲನ್ನು ತಂದಿದ್ದಾನೆ. ಅವನಿಗೆ ಚಿಕ್ಕ ಕೆಲಸ, ದೊಡ್ಡ ಕೆಲಸ ಎನ್ನುವ ಭೇದವಿಲ್ಲ. ಹೂವು ತಂದವರ ಮನೆಗೆ ಹುಲ್ಲು ತಂದ, ಶ್ರೀಕೃಷ್ಣ!

ಮಹಾನುಭಾವರಾದ ಶ್ರೀ ಪುರಂದರ ದಾಸರು ಈ ಪ್ರಸಂಗವನ್ನು ವರ್ಣಿಸುವ ರೀತಿ:

ಒಂದುದಳ ಶ್ರೀತುಳಸಿ ಬಿಂದು ಗಂಗೋದಕ 
ಇಂದಿರಾರಮಣನಿಗೆ ಅರ್ಪಿತವೆನುತ 
ಒಂದೇಮನದಲಿ ಸಿಂಧುಶಯನ ಮುಕುಂದಾ ಎನೆ 
ಎಂದೆಂದೂ ವಾಸಿಪನು ಮಂದಿರದ ಒಳಗೆ 

ಪರಿಪರಿಯ ಪುಷ್ಪಗಳ ಪರಮಾತ್ಮಗರ್ಪಿಸಿ 
ಪರಿಪೂರ್ಣನೆಂದು ಪೂಜೆಯನು ಮಾಡೆ 
ಸರಸಿಜಾಕ್ಷನು ತನ್ನ ಸಕಲ ಸ್ವಾತಂತ್ರ್ಯದಲಿ 
ಸರೀಭಾಗ ಕೊಡುವ ತನ್ನ ಅರಮನೆಯ ಒಳಗೆ 

ಪಾಂಡವರ ಮನೆಯಲ್ಲಿ ಕುದುರೆಗಳ ತಾ ತೊಳೆದು 
ಪುಂಡರೀಕಾಕ್ಷ ತಾ ಹುಲ್ಲನು ತಿನಿಸಿದ 
ಅಂಡಜಾವಾಹನ ಶ್ರೀ ಪುರಂದರ ವಿಠಲನು 
ತೊಂಡರಿಗೆ ತೊಂಡನಾಗಿ  ಸಂಚರಿಸುತಿಹನು 

ಹೂವ ತರುವರ ಮನೆಗೆ ಹುಲ್ಲ ತರುವ 
ಅವ್ವ ಲಕುಮಿರಮಣ ಇವಗಿಲ್ಲ ಗರುವ 

ಎಷ್ಟು ಸೊಗಸಾಗಿ ಹೂವಿಗೂ, ಹುಲ್ಲಿಗೂ ಇರುವ ಸಂಬಂಧ ಹೇಳಿದ್ದಾರೆ! 

*****

ದೊಡ್ಡವರ ಕೃತಿಗಳಲ್ಲಿ, ವೇದ-ಪುರಾಣ-ಕಾವ್ಯಗಳಲ್ಲಿ ಪ್ರತಿ ಪದಕ್ಕೂ ಅನೇಕ ಅರ್ಥಗಳಿರುತ್ತವೆ. ಕೇವಲ ಭಾಷೆ ಬರುತ್ತದೆ ಎನ್ನುವ ಕಾರಣದಿಂದ ಓದಿದರೆ ಮೇಲ್ನೋಟದ ಅರ್ಥ ಮಾತ್ರ ತಿಳಿಯುತ್ತದೆ. ಮತ್ತೆ ಮತ್ತೆ ಓದಿ ಮನನ ಮಾಡಿದರೆ ವಿಶೇಷ ಅರ್ಥಗಳು ಹೊಳೆಯುತ್ತವೆ. ತಿಳಿದವರ ಒಡನಾಟದಿಂದ ಗುಹ್ಯಾರ್ಥಗಳು (ಶಬ್ದಗಳಲ್ಲಿ ಕಾಣದಂತೆ ಹುದುಗಿರುವ ಅತಿ ವಿಶೇಷಾರ್ಥಗಳು) ತಿಳಿಯಬಹುದು. ಅದಕ್ಕೆ ಹೆಚ್ಚಿನ ಆಸಕ್ತಿ ಮತ್ತು ಶ್ರಮ ಬೇಕು. ತಿಳಿಯಲೇಬೇಕೆನ್ನುವ ಹಠ ಬೇಕು. ತಿಳಿದವರನ್ನು ಹುಡುಕಿ, ಹಿಡಿದು, ಕಾಡಿ, ಬೇಡಿ ತಿಳಿಯಬೇಕು. 

ಮೇಲಿನ ಪದದಲ್ಲಿ ದಾಸರು ಉಪಯೋಗಿಸಿರುವ ಅನೇಕ ಪದಗಳಿಗೆ, ಸಂದರ್ಭಗಳಿಗೆ ವಿಶೇಷ ಅರ್ಥ, ಗೂಡಾರ್ಥಗಳಿವೆ. ಮುಂದಿನ ಎರಡು-ಮೂರು ಅಥವಾ ನಾಲ್ಕು ಸಂಚಿಕೆಗಳಲ್ಲಿ ಈ ಅರ್ಥಗಳನ್ನು ತಿಳಿಯುವ ಪ್ರಯತ್ನ ಯಥಾಶಕ್ತಿ ಮಾಡೋಣ. 

Wednesday, December 4, 2024

ರಾಜಸೂಯದಲ್ಲಿ ಶ್ರೀಕೃಷ್ಣ ಮಾಡಿದ್ದೇನೇನು?


ರಾಜಸೂಯ ಯಾಗದಲ್ಲಿ ತುಂಬಾ ಕೆಲಸಗಳಿದ್ದವು. ತುಂಬಾ ಕೆಲಸ ಎಂದ ಮೇಲೆ ಮಾಡಲು ಅನೇಕ ಜನ ಕೆಲಸ ಮಾಡುವವರೂ ಬೇಕಾಗಿದ್ದರು. ಕೆಲಸ ಮಾಡುವವರು ಯಾರು? ಹೊರಗಡೆಯಿಂದ ಬಂದ ಆಮಂತ್ರಿತರ ಕೈಲಿ ಕೆಲಸ ಮಾಡಿಸುವಹಾಗಿಲ್ಲ. ಎಲ್ಲ ಕೆಲಸ ಮಾಡುವವರೂ ಮನೆಯವರೇ ಆಗಬೇಕಿತ್ತು. ಹಾಗಾಗಿ ಶ್ರೀಕೃಷ್ಣನ ಸೂಚನೆಯಂತೆ ಧರ್ಮರಾಯನು ತನ್ನ ಮನೆಯ ಎಲ್ಲ ಮಂದಿಗೆ ಬೇರೆ ಬೇರೆ ಕೆಲಸಗಳನ್ನು ಹಂಚಿದ. ಅಲ್ಲಿ ಮನೆಯವರೆಂದರೆ ಯಾರು ಯಾರು? ಪಾಂಡವರು ಯಾಗ ಮಾಡುವವರು. ಅಂದರೆ ಆತಿಥೇಯರು. ಅವರು ಮಿಕ್ಕೆಲ್ಲರಿಗಿಂತ ಹೆಚ್ಚಾಗಿ ಕೆಲಸ ಮಾಡಲೇಬೇಕು. ಯಾದವರು ಕುಂತಿದೇವಿಯ ತವರು ಮನೆಯವರು. ಅವರಿಗೂ ಕೆಲಸ ಹೇಳಬಹುದು. ದ್ರುಪದನ ಮನೆಯವರೂ ಇಲ್ಲಿ ಮನೆಯವರೇ. ಬೀಗರೆಂದು ಸುಮ್ಮನೆ ಕೂಡುವಹಾಗಿಲ್ಲ. ಅವರಿಗೂ ಕೆಲಸ ಹಂಚಿದರು. ಇನ್ನು ಕೌರವರು. ಇಷ್ಟವಿದ್ದರೂ ಬಿಟ್ಟರೂ ಅವರೂ ಇಲ್ಲಿ ಪಾಂಚಾಲರು, ಯಾದವರಿಗಿಂತ ಹೆಚ್ಚಾಗಿ ಮನೆಯವರು. ದುರ್ಯೋಧನನಿಗೆ ಶ್ರೀಕೃಷ್ಣನ ಸಲಹೆಯಂತೆ ಹಣಕಾಸಿನ ವ್ಯವಹಾರ ನೋಡಲು ಬಿಟ್ಟರಂತೆ. ದೊಡ್ಡ ಖಾತೆ ತನಗೆ ಸಿಕ್ಕಿದ ಸಂತೋಷದಿಂದ ಅವನು ಬಹಳ ಹುಮ್ಮಸ್ಸಿನಿಂದ ಮನಸ್ಸಿಟ್ಟು, ಕಷ್ಟಪಟ್ಟು ಕೆಲಸ ಮಾಡಿದನಂತೆ. ಅವನ ಕೈಯಲ್ಲಿ ಧನವೃದ್ಧಿ ರೇಖೆ ಇತ್ತಂತೆ. ಅದಕ್ಕೇ ಶ್ರೀಕೃಷ್ಣ ಆ ಖಾತೆ ಕೊಡಲು ಸೂಚಿಸಿದನಂತೆ. ಕರ್ಣ ಕೌಂತೇಯ ಎಂದು ಗೊತ್ತಿಲ್ಲದಿದ್ದರೂ ದುರ್ಯೋಧನನ ಜೊತೆಯಲ್ಲಿ ಬಂದಿದ್ದರಿಂದ ಅವನೂ ಮನೆಯವನೇ ಆದ. ಕರ್ಣನಿಗೆ ದಾನಗಳನ್ನು ಕೊಡುವ ಕೆಲಸ ಕೊಟ್ಟರಂತೆ. ಅವನು ದಾನಶೂರ. ಆ ಕೆಲಸ ಮಾಡಲು ಬಹಳ ಸಂತೋಷ ಪಟ್ಟನಂತೆ. ಹೀಗೆ ಎಲ್ಲರಿಗೂ, ಅಂದರೆ ಕೆಲಸ ಹಂಚಬಹುದಾದ ಎಲ್ಲರಿಗೂ ಕೆಲಸ ಕೊಟ್ಟರು. ಜವಾಬ್ದಾರಿ ಕೊಟ್ಟವನು ಯುಧಿಷ್ಠಿರ. ಸೂಚಿಸಿದವನು ಶ್ರೀಕೃಷ್ಣ. ಶ್ರೀಕೃಷ್ಣನಿಗೆ ಕೇವಲ "ಹೀಗೆ ಹೀಗೆ ಮಾಡು" ಎಂದು ಹೇಳಿದ್ದಷ್ಟೇ ಕೆಲಸವೇ? 

ಯಾರಿಗೂ ಹೇಳದೆ ಶ್ರೀಕೃಷ್ಣ ತನಗೆ ಕೆಲಸವೊಂದು ಕೊಟ್ಟುಕೊಂಡ. ಅವನು ಆ ಕೆಲಸ ಮಾಡುವವರೆಗೂ ಅದೊಂದು ಕೆಲಸ ಎಂದು ಯಾರಿಗೂ ಹೊಳದೇಇರಲಿಲ್ಲ.  ಅದೇನು ಅಂತಹ ಘನಂದಾರಿ ಕೆಲಸ?

*****

ಐದು, ಆರು ದಶಕಗಳ ಹಿಂದೆ, ನಾವು ಶಾಲೆಯಲ್ಲಿ ಓದುತ್ತಿದ್ದಾಗ, ಸಮಾಜದ ವ್ಯವಸ್ಥೆ ಬೇರೆ ರೀತಿಯದೇ ಇತ್ತು. ಈಗಿನಂತೆ "ಇವೆಂಟ್ ಮ್ಯಾನೇಜಮೆಂಟ್"ತಂಡಗಳು ಇರಲಿಲ್ಲ. ಅವರಿಗೆ ಕೇಳಿದಷ್ಟು ಹಣ ಕೊಡಲು ಶಕ್ತಿಯಂತೂ ಮೊದಲೇ ಇರಲಿಲ್ಲ. ಮದುವೆ-ಮುಂಜಿ ಮುಂತಾದ ಸಮಾರಂಭಗಳಿಗೆ ಬಂದ ಜನರು ತಾವಾಗಿಯೇ ಎಲ್ಲ ಕೆಲಸಗಳಲ್ಲಿಯೂ ತಮ್ಮನ್ನು ತಾವೇ ತೊಡಗಿಸಿಕೊಳ್ಳುತ್ತಿದ್ದರು. ಹೆಣ್ಣುಮಕ್ಕಳು ಸಮಾರಂಭದ ಸ್ಥಳವನ್ನು ಸಿಂಗರಿಸುವುದು, ತರಕಾರಿ ಹೆಚ್ಚುವುದು, ತೇಂಗಿನಕಾಯಿ ತುರಿಯುವುದು, ಹಾಡು-ಹಸೆ ಹೇಳುವುದು, ಇತ್ಯಾದಿ ಕೆಲಸ ಸ್ವತಃ ಹುಡುಕಿಕೊಂಡು ಮಾಡುತ್ತಿದ್ದರು. ಗಂಡು ಮಕ್ಕಳು ನೀರು ತುಂಬುವುದು, ಸಾಮಾನು-ಸರಂಜಾಮು ತರುವುದು-ಹೊರುವುದು, ಮಂಟಪ ಕಟ್ಟುವುದು ಇತ್ಯಾದಿ ಕೆಲಸ ಮಾಡುತ್ತಿದ್ದರು. ನಮ್ಮಂತಹ ಹುಡುಗರು ಮೊದಲ ಪಂಕ್ತಿ ಊಟಕ್ಕೆ ಕುಳಿತರೆ ಹಿರಿಯರು "ನಿಮಗೇನೋ ಆತುರ? ಒಂದೆರಡು ಪಂಕ್ತಿ ಬಡಿಸಿ ಆಮೇಲೆ ಕೂಡಿ" ಎನ್ನುತ್ತಿದ್ದರು. ಬಿಸಿ ಪದಾರ್ಥಗಳ ಪಾತ್ರೆ ಹಿಡಿಯುವ, ಬಡಿಸುವ ವಯಸ್ಸು ಇನ್ನೂ ಬಂದಿಲ್ಲದಿದ್ದ ಬಾಲಕರಿಗೆ ನೀರು ಬಡಿಸುವ ಕೆಲಸ ಇರುತ್ತಿತ್ತು. ಒಟ್ಟಿನಲ್ಲಿ "ದುಡಿದು ತಿನ್ನು" ಎನ್ನುವ ವಾಕ್ಯದಂತೆ ಏನಾದರೂ ಕೆಲಸ ಮಾಡಿಯೇ ಮುಂದಿನ ಮಾತು. 

ಈಗಿನಂತೆ ಊಟದ ಮೇಜುಗಳ ಮೇಲೆ ಊಟ ಬಡಿಸುವಂತಿರಲಿಲ್ಲ. ಮೇಜು-ಕುರ್ಚಿ ಇದ್ದ ಮನೆಗಳೇ ಕಮ್ಮಿ. ಮನೆಗೆ ಯಾರಾದರೂ ಬಂದರೆ ಮೊದಲು ಮಾಡುತ್ತಿದ್ದ ಕೆಲಸ ಬಂದವರು ಕೂಡಲು ಚಾಪೆ ಹಾಸುವುದು. ಸ್ವಲ್ಪ ಅನುಕೂಲಸ್ಥರ ಮನೆಯಲ್ಲಿ ಚಾಪೆಯ ಬದಲು ಜಮಖಾನ ಇದ್ದವು. ಇನ್ನು ಊಟದ ಮೇಜುಗಳು ಎಲ್ಲಿಂದ ಬರಬೇಕು? ನೆಲ ಸಾರಿಸಿ, ಶುದ್ಧ ಮಾಡಿ, ಬಾಳೆಲೆ ಹರಡಿ ಊಟ ಬಡಿಸಬೇಕು. ತಂದಿದ್ದ ಬಾಳೆ ಎಲೆ ಮುಗಿದು ಇನ್ನೂ ಊಟಕ್ಕೆ ಜನ ಉಳಿದರೆ ಕಡೆಯ ಪಂಕ್ತಿಗಳಿಗೆ ಮುತ್ತುಗದ ಎಲೆ. ಸಂಜೆಯ ವೇಳೆ ಇನ್ನೂ ಸುಲಭವಾದ ಕೈತುತ್ತಿನ ಊಟ. ಕೈತುತ್ತಿನ ಊಟದಲ್ಲಿ ಎರಡು ಬಲವಾದ ಕಾರಣಗಳಿದ್ದವು. ಬೆಳಗ್ಗೆ ಮಾಡಿ ಮಿಕ್ಕಿದ್ದ ಅಡಿಗೆ ಖರ್ಚಾಗಲೇಬೇಕಿತ್ತು. ಏಕೆಂದರೆ ಆಗ ತಂಗಳು ಪೆಟ್ಟಿಗೆ ಅಥವಾ ರೆಫ್ರಿಜಿರೇಟರ್ ಇರಲಿಲ್ಲ. ಸಾಲ-ಸೋಲ ಮಾಡಿ ತಂದ ಪದಾರ್ಥಗಳ ಅಡಿಗೆ ಬಿಸಾಡುವಂತೆಯೂ ಇರಲಿಲ್ಲ. ಸ್ವಲ್ಪವೇ ಉಳಿದ ಪದಾರ್ಥಗಳು ಎಲೆ ಹಾಕಿ ಬಡಿಸಿದರೆ ಎಲ್ಲರಿಗೂ ಸಾಲುವುದಿಲ್ಲ. ಕೈತುತ್ತಿನಲ್ಲಾದರೆ ತುತ್ತು ಸಣ್ಣ ಮಾಡಿದರೆ ಎಲ್ಲರಿಗೂ ಒಂದು ತುತ್ತು ಬರುತ್ತದೆ! ಹೀಗೆ ಪದಾರ್ಥವೂ ಖರ್ಚಾಯಿತು ಮತ್ತು ಎಲ್ಲರಿಗೂ ಸಿಕ್ಕಿತು! ಇದು ಮೊದಲನೇ ಕಾರಣ. ಕೈತುತ್ತು ಮಾಡಿದ ಮೇಲೆ ಎಲೆ ಎತ್ತುವ ಕೆಲಸವಿಲ್ಲ. ಎಲ್ಲರೂ ಅವರ ಕೈ ತೊಳೆದುಕೊಂಡೇ ತೊಳೆದುಕೊಳ್ಳುತ್ತಾರೆ. ಕೈತುತ್ತು ಹಾಕಿದ ಜಾಗ ಸ್ವಲ್ಪ ಸ್ವಚ್ಛ ಮಾಡಿದರೆ ಆಯಿತು. ಬೆಳಗಿನಿಂದ ದುಡಿದವರಿಗೆ ಮತ್ತು ಮಾರನೆಯ ದಿನ ಬೇಗ ಏಳಬೇಕಾದವರಿಗೆ ಸುಸ್ತಾದ ಸಂಜೆಯಲ್ಲಿ ಒಂದು ಕೆಲಸ ಕಡಿಮೆಯಾಯಿತು. ಇದರ ಜೊತೆಗೆ ಉಳಿಸಿದ ಬಾಳೆ ಎಲೆ ಅಥವಾ ಮುತ್ತಗದ ಎಲೆ ಮಾರನೆಯ ದಿನಕ್ಕೆ ಉಪಯೋಗಕ್ಕೂ ಬಂತು!

"ಸಿಹಿ ತಿಂದ ಕೈಲಿ ಊಟ ಮಾಡಿದ ಎಲೆ ಎತ್ತಬಾರದು" ಎಂದು ಒಂದು ಶಾಸ್ತ್ರವಿತ್ತು. ಈ ಶಾಸ್ತ್ರವೇಕೆ? ಸಾಮಾನ್ಯವಾಗಿ ಮನೆಗೆ ಬಂದ  ಅತಿಥಿಗಳು ಮೊದಲನೇ ಪಂಕ್ತಿಯಲ್ಲಿ ಊಟಕ್ಕೆ ಕೂಡುವರು. ಅವರ ಕೈಯಲ್ಲಿ ಎಲೆ ಎತ್ತಿಸುವುದು ಚೆನ್ನಲ್ಲ. ಈ ಶಾಸ್ತ್ರ ಹೇಳಿದರೆ ಅವರು ಎಲೆ ಎತ್ತದೆ ಎದ್ದು ಕೈ ತೊಳೆಯಲು ಹೋಗುವರು. ಅವರು ಕೈ ತೊಳೆದು ಬರುವುದರ ಒಳಗೆ ಅವರು ಊಟಮಾಡಿದ ಎಲೆಗಳೇ ಮಾಯ. ಮನೆಯ ಮಕ್ಕಳು ಕಾದಿದ್ದು ಅವರು ಎದ್ದ ತಕ್ಷಣ ಆ ಕೆಲಸ ಮುಗಿಸುತ್ತಿದ್ದರು. 

"ಹಬ್ಬದ ದಿನ ರಾತ್ರಿ ಊಟ ಮಾಡದೆ ಮಲಗಬಾರದು" ಎಳ್ಳುವುದು ಇನ್ನೊಂದು ಶಾಸ್ತ್ರ. ಇದು ಯಾವ ಶಾಸ್ತ್ರದಲ್ಲೂ ಇಲ್ಲದ, ಯಾವ ಶಾಸ್ತ್ರಿಯೂ ಹೇಳದ ಶಾಸ್ತ್ರ. ಬೆಳಗ್ಗೆ ಮಾಡಿ ಮಿಕ್ಕಿದ ಅಡಿಗೆ ಏನು ಮಾಡಬೇಕು? ಈ ಶಾಸ್ತ್ರ ಪಾಲಿಸಿದರೆ ಎಲ್ಲರೂ ಕೆಲವು ತುತ್ತು ಉಂಡು ಮಿಕ್ಕಿದ ಅಡಿಗೆಯೆಲ್ಲ ಖರ್ಚಾಗುವುದು!

ಈಗಿನಂತೆ ಆಗಿನ ಸಮಯದಲ್ಲಿ ದೊಡ್ಡ ದೊಡ್ಡ ಸಮಾರಂಭ ಭವನಗಳು ಇರಲಿಲ್ಲ. ಹಳ್ಳಿಗಳಲ್ಲಿ ದೇವಸ್ಥಾನದ  ಮುಂದೆ ಅಥವಾ ಅರಳಿ ಕಟ್ಟೆ ಮುಂದೆ ಚಪ್ಪರ ಹಾಕಿ ಊಟ ಬಡಿಸುತ್ತಿದ್ದರು. ಸ್ವಲ್ಪ ದೊಡ್ಡ ಊರುಗಳಲ್ಲಿ ದೊಡ್ಡ ಮನೆಗಳಲ್ಲಿ ನಡೆಸುತ್ತಿದ್ದರು. ಎಲ್ಲರಿಗೂ ಒಟ್ಟಿಗೆ ಊಟ ಬಡಿಸುವಹಾಗಿರಲಿಲ್ಲ. ಅದಕ್ಕೆ ಸರತಿಯ ಮೇಲೆ ಎರಡೂ, ಮೂರೋ, ನಾಲ್ಕೋ ಅಥವಾ ಇನ್ನೂ ಹೆಚ್ಚಿನ ಪಾಳಿಯಲ್ಲಿ ಊಟ ಬಡಿಸುತ್ತಿದ್ದರು. ಜಾಗದ ಜೊತೆಗೆ ಬಡಿಸುವ ಸಲಕರಣೆ (ಪಾತ್ರೆ, ಸೌಟು, ಲೋಟ ಇತ್ಯಾದಿ) ಮತ್ತು ಬಡಿಸುವವರು ಇವುಗಳ ಕೊರತೆ. (ಜಾತ್ರೆ, ಧಾತ್ರಿ ಹವನ, ನರಸಿಂಹ ಜಯಂತಿ ಇಂತಹ ಸಮಾರಂಭಗಳಲ್ಲಿ ನಾವು ಊಟಕ್ಕೆ ಹೋಗುವಾಗ ನಮ್ಮ ನಮ್ಮ ಮನೆಗಳಿಂದಲೇ ಲೋಟ ತೆಗೆದುಕೊಂಡು ಹೋಗಬೇಕಾಗಿತ್ತು). ಈ ಪಾಳಿಗಳಲ್ಲಿ ಊಟ ಬಡಿಸುವುದಕ್ಕೆ ಪಂಕ್ತಿ ಎಂದು ಕರೆಯುತ್ತಿದ್ದರು. ಈಗ ಈ ಪದ ಮರೆತೇ ಹೋಗಿ ಅಚ್ಚ ಕನ್ನಡ ಪದವಾದ "ಬ್ಯಾಚ್" ಎನ್ನುತ್ತಾರೆ. ಪಂಕ್ತಿಗಳಲ್ಲಿ ಬಡಿಸುವಾಗ ಮೊದಲ ಪಂಕ್ತಿಯವರು ಉಂಡ ಸ್ಥಳಗಳನ್ನು ಚೆನ್ನಾಗಿ ಸಾರಿಸಿ, ಗೋಮಯದಿಂದ ಶುದ್ಧ ಮಾಡಿ ಮತ್ತೆ ಎಲೆ ಹಾಕುತ್ತಿದ್ದರು. ಅಂದವಾಗಿ ಕಾಣಲಿ ಎಂದು ರಂಗೋಲಿ ಹಾಕುತ್ತಿದ್ದರು. ವಿದ್ಯುತ್ ಇಲ್ಲದ ಕಾರಣದಿಂದ ಪ್ರತಿ ಎಲೆಯ ಮುಂದೆ  ದೀಪಗಳಿಡುತ್ತಿದ್ದರು. ಇಷ್ಟಾದ ಮೇಲೆ ಮುಂದಿನ ಪಂಕ್ತಿಯಲ್ಲಿ ಮತ್ತೆ ಊಟ. ಆದ ಕಾರಣ ಎಲೆ ಎತ್ತುವುದು ಮತ್ತು ಸ್ಥಳ ಶುದ್ದಿ ಮಾಡುವುದು ಬಹಳ ಮುಖ್ಯ ಕೆಲಸವಾಗಿತ್ತು. ಆದರೆ ಎಂಜಲೆಲೆ ಎತ್ತುವುದು ಮತ್ತು ಸಗಣಿ ಮುಟ್ಟುವುದು ಬಹಳ ಜನರಿಗೆ ಬೇಡವಾದ ಕೆಲಸ. ಅದೇನು ಗಂಧ ಹಂಚುವ ಕೆಲಸವಲ್ಲ. ಒಡವೆ, ವಸ್ತ್ರ ಹೊತ್ತು ಓಡಾಡುವ ಕೆಲಸವಲ್ಲ. ತಾವು ತೊಟ್ಟ ಒಳ್ಳೆಯ ಬಟ್ಟೆ ಕೊಳಕು ಮಾಡುವ ಕೆಲಸ. ಎಲೆ ತೆಗೆಯುವಾಗ ಹಾಕಿದ ಸರ ಒಡವೆಗಳು ಸಗಣಿಯಲ್ಲಿ ಹೊರಳಾಡುವ ಕೆಲಸ. ನಡು ಬಗ್ಗಿಸಿ, ಮತ್ತೆ ಎದ್ದು, ಮತ್ತೆ ಬಗ್ಗಿ, ಮತ್ತೆ ಎದ್ದು, ಹೀಗೆ ಮಾಡಿ ಮಾಡಿ ಬೆನ್ನು ನೋಯುವ ಕೆಲಸ. ಸಗಣಿ ಮತ್ತು ಪೊರಕೆಯ ಆಟದ ಕೆಲಸ. ಯಾರಿಗೂ ಬೇಡವಾದ, ಆದರೆ ಯಾರಾದರೂ ವಿಧಿಯಿಲ್ಲದೇ ಮಾಡಲೇಬೇಕಾದ ಕೆಲಸ!

*****

ಯಾವುದೇ ಸಮಾರಂಭವಾದರೂ "ಆಹಾ! ಬಹಳ ಚೆನ್ನಾಗಿ ಆಯಿತು" ಎಂದು ಹೇಳಬೇಕಾದರೆ ಊಟ ಚೆನ್ನಾಗಿರಬೇಕು. "ದೇರ್ ಈಸ್ ನೋ ಮೀಟಿಂಗ್ ವಿತೌಟ್ ಈಟಿಂಗ್" ಎಂದು ಈಗಲೂ ಎಲ್ಲರೂ ಹೇಳುತ್ತಾರೆ. "ರಥೋತ್ಸವ ಎಷ್ಟು ಚೆನ್ನಾಗಿ ಆಯಿತು ಅಂತೀರಿ, ಐದು ನೂರು ಜನರ ಊಟ!" ಅನ್ನುತ್ತಾರೆ. "ಫೇಸ್ ಐಸ್ ದಿ ಇಂಡೆಕ್ಸ್  ಆಫ್ ಮೈಂಡ್" ಅನ್ನುವಂತೆ "ಊಟ ಐಸ್ ದಿ ಇಂಡೆಕ್ಸ್  ಆಫ್ ಸಕ್ಸಸ್ ಆಫ್ ಎ ಸಮಾರಂಭ".  ಊಟ ಇರುವ ವಿಷಯ ಹಾಗಿರಲಿ. ಸಾರಿಗೆ ಸ್ವಲ್ಪ ಉಪ್ಪು ಕಡಿಮೆಯಾದರೇ ಕಷ್ಟ. ಸಮಾರಂಭದ ನಂತರ ಆ ಕಡಿಮೆಯಾದ ಉಪ್ಪಿನ ಚರ್ಚೆಯಲ್ಲಿ ಸಮಾರಂಭದ ಇತರ ಶ್ರೇಯಸ್ಸೇ ಕೊಚ್ಚಿ ಹೋಗುವ ಭಯವುಂಟು. 

ರಾಜಸೂಯ ಯಾಗದಲ್ಲಿ ಶ್ರೀಕೃಷ್ಣ ಎಲ್ಲರಿಗೂ ಕೆಲಸ ಹಂಚಲು ಸೂಚಿಸಿ ಈ ಎಂಜಲೆಲೆ ಎತ್ತುವುದು ಮತ್ತು ಊಟ ಮಾಡಿದ ಸ್ಥಳವನ್ನು ಶುದ್ದಿ ಮಾಡುವುದನ್ನು ಯಾರಿಗೂ ಹಂಚದೆ ತಾನೇ ಉಳಿಸಿಕೊಂಡ. ಮೊದಲ ಪಂಕ್ತಿ ಊಟ ಆದ ನಂತರ ತಾನೇ ಮುಂದೆ ನಿಂತು ಈ ಕೆಲಸ ಮಾಡಿದ. ಈ ಕೆಲಸ ಯಾರಿಗಾದರೂ ಕೊಟ್ಟಿದ್ದರೆ ಅವರು ಜಗಳಕ್ಕೆ ಬರಬಹುದಿತ್ತು. ಇಲ್ಲವೇ ಮುಖ ಮುದುರಿಕೊಳ್ಳಬಹುದಿತ್ತು. ತಾನೇ ಮಾಡಿದರೆ? ಈ ಸಮಸ್ಯೆಯೇ ಇಲ್ಲ! ಅದಕ್ಕಿಂತ ಹೆಚ್ಚಾಗಿ ಈ ನೆಪದಿಂದ ಇಡೀ ಬಂದವರ ಊಟದ ವ್ಯವಸ್ಥೆಯ ಮತ್ತು ಸರಿಯಾದ ರೀತಿಯ ವಿತರಣೆಯ ಜವಾಬ್ದಾರಿಯನ್ನು ತಾನೇ ಹೊತ್ತುಕೊಂಡ. 

ಶ್ರೀಕೃಷ್ಣನು ಎಂಜಲೆಲೆ ಎತ್ತಿ, ಸ್ಥಳ ಶುದ್ದಿ ಮಾಡಿ ಮುಂದಿನ ಪಂಕ್ತಿಗಳಿಗೆ ತಯಾರು ಮಾಡಿದ  ರೀತಿಯನ್ನು ಶ್ರೀ ಪುರಂದರ ದಾಸರು ಹೀಗೆ ವರ್ಣಿಸುತ್ತಾರೆ:

ರಾಜಿಸುವ ರಂಜಿಸುವ ರಾಜಸೂಯ ಯಾಗದಲ್ಲಿ 
ಎಂಜಲವನೇ ಬಳಿದ, ಶ್ರೀಹರಿ ಎಂಜಲವನೆ ಬಳಿದ 

ಉಟ್ಟ ಪೀತಾಂಬರ ಟೊಂಕಕೆ ಕಟ್ಟಿ 
ಕಟ್ಟಿದ ಸರಗಳ ಹಿಂದಕೆ ಸರಿಸಿ
ಸರಸರ ಎಲೆಗಳ ತೆಗೆದು ಬಿಸಾಡಿ 
ಕಟ್ಟ ಕಡೆಗೆ ತಾ ಬಳಿದು ನಿಂತ 

ಪೊರಕೆಯ ಪಿಡಿದು ಕಸವನೆ ಗುಡಿಸಿ
ಸಗಣಿಯ ನೀರೊಳು ಕಲೆಸಿ ಥಳಿಯ ಹಾಕಿ
ಸಾಲು ಸಾಲಾಗಿ ಮಣೆಯಿಟ್ಟು ಎಲೆ ಹಾಕಿ 
ರಂಗೋಲಿ ಕೊಳವಿಯ ಎಳೆದು ತಾ ನಿಂತ 

ತನ್ನ ಕೆಲಸಾಯ್ತೆಂದ ಇನ್ನೇಕೆ ತಡವೆಂದ 
ಇನ್ನೊಂದು ಪಂಕ್ತಿಯ ಕೂಡ ಹೇಳೆಂದ 
ಘನ್ನ ಮಹಿಮ ಶ್ರೀ ಪುರಂದರ ವಿಠಲ 
ಪುಣ್ಯಾತ್ಮರುಂಡೆಲೆಗಳನು ತೆಗೆದು ನಿಂತ   

ಶ್ರೀಕೃಷ್ಣ ಹೀಗೆ ಮಾಡಿದ್ದರಿಂದ ಇನ್ನೊಂದು ಕೆಲಸವಾಯ್ತು. ಅವನೇ ಈ ಕೆಲಸ ಮಾಡಿದ್ದರಿಂದ ಮಿಕ್ಕವರು ಹಿಂದೆ-ಮುಂದೆ ನೋಡದೆ ತಾವೂ ಕೈ ಜೋಡಿಸಿದರು. ಕ್ಷಣಾರ್ಧದಲ್ಲಿ ಸ್ಥಳ ಸ್ವಚ್ಛ ಆಯಿತು. ಯಾರಿಂಗೂ ಬೇಡದ ಕೆಲಸ, ಎಲ್ಲರೂ ಬೇಸರಿಸುವ ಕೆಲಸ, ಕಸದ ಕೆಲಸ ಸಾಮೂಹಿಕ ಕೆಲಸವಾಯಿತು. ಯಾರಿಗೂ ವಹಿಸದೆ ಇದ್ದ ಕೆಲಸ ಎಲ್ಲರದಾಯಿತು. 

*****

"ಆಳಾಗಬಲ್ಲವ ಅರಸಾಗಬಲ್ಲ" ಎಂಬ ನುಡಿಗೆ ಇದು ಸಾಕ್ಷಿಯಾಯಿತು. ರಾಜಸೂಯದಲ್ಲಿ ಎಂಜಲೆಲೆ ಬಳಿದವನೇ ಕಡೆಯಲ್ಲಿ ಆಗ್ರ ಪೂಜೆಗೂ ಅರ್ಹನಾದ. "ಕಾಯಕವೇ ಕೈಲಾಸ" ಎನ್ನುವುದನ್ನು ಶ್ರೀಕೃಷ್ಣ ಅನೇಕ ರೀತಿಯಲ್ಲಿ ಮಾಡಿ ತೋರಿಸಿದ ಎನ್ನುವುದಕ್ಕೆ ಈ ಪ್ರಸಂಗ ಸಾಕ್ಷಿಯಾಗಿ ನಿಂತಿತು. 

ತಮ್ಮ ಸುತ್ತ ಮುತ್ತ ನಡೆಯುವುದನ್ನು ಸೂಕ್ಷ್ಮವಾಗಿ ಗಮನಿಸುವ ಕವಿ ಹೃದಯ ಮತ್ತು ಎಲ್ಲೆಲ್ಲೂ ಶ್ರೀಹರಿಯನ್ನು ಕಾಣುವ ಶ್ರೀ ಪುರಂದರ ದಾಸರ ರೀತಿಗೂ ಈ ಪದ ಗುರುತಾಗಿ ಉಳಿಯಿತು.   

ಶ್ರೀಕೃಷ್ಣನ ನಡತೆ ಮತ್ತು ಶ್ರೀ ಪುರಂದರದಾಸರ ಕುಶಲತೆಯ ಮತ್ತೊಂದು ಉದಾಹರಣೆ  ಮುಂದಿನ ಸಂಚಿಕೆಯಲ್ಲಿ ನೋಡೋಣ.